ಸೋಮವಾರ, ಮೇ 4, 2009

ಬಿಸಿಸಿಐನ ಧೃತರಾಷ್ಟ್ರ ಆಲಿಂಗನ!


ಐಸಿಎಲ್ ನಾಶಕ್ಕೆ ಹೊಸ ಆಟ

ಇಂಡಿಯನ್ ಕ್ರಿಕೆಟ್ ಲೀಗ್ - ಐಸಿಎಲ್ ಆಟಗಾರರ ಶಾಪ ವಿಮೋಚನೆಯಾಗಿದೆ. ಭಾರತೀಯ ಕ್ರಿಕೆಟ್ ಮಂಡಳಿ ಬಿಸಿಸಿಐ ಈವರೆಗೆ ತಾನು ಹೇರಿದ್ದ ಐಸಿಎಲ್ ಆಟಗಾರರ ಮೇಲಿನ ನಿಷೇಧವನ್ನು ಏಕಾಏಕಿ ಹಿಂಪಡೆದಿದೆ. ಎರಡು ವರ್ಷದ ಕೆಳಗೆ ವರ್ಣರಂಜಿತ ಕನಸುಗಳೊಂದಿಗೆ ಐಸಿಎಲ್ ಸೇರಿದ್ದ ಯುವ ಆಟಗಾರರು ಖಂಡಿತವಾಗಿಯೂ ನಿಟ್ಟಿಸಿರು ಬಿಟ್ಟಿರುತ್ತಾರೆ!
ಇಂದಿನ ಅಬ್ಬರದ ಇಂಡಿಯನ್ ಪ್ರೀಮಿಯರ್ ಲೀಗ್ ಹುಟ್ಟಲು ಕಾರಣ ಐಸಿಎಲ್. ರಣಜಿ ಸೇರಿದಂತೆ ಪ್ರಥಮ ದರ್ಜೆ ಪಂದ್ಯದ ಆಟಗಾರರ ಶುಲ್ಕಗಳನ್ನು ಬರೋಬ್ಬರಿಯಾಗಿ ಬಿಸಿಸಿಐ ಏರಿಸಿರುವುದರ ಹಿಂದೆ ಐಸಿಎಲ್ ಬೆದರಿಕೆಯಿದ್ದುದು ನಿಜ. ದುರಂತವೆಂದರೆ, ಕಪಿಲ್‌ದೇವ್ ಸಹ ಗುರ್ತಿಸಿಕೊಂಡಿರುವ ಐಸಿಎಲ್‌ನ ಸಾಧನೆ ಇಲ್ಲಿಗೇ ಅಂತ್ಯವಾಗುತ್ತದೆ!
ಒಂದು ಮಟ್ಟಿಗೆ ಬಿಸಿಸಿಐ ಹೆದರಿದ್ದಂತೂ ಸತ್ಯ. ವಿದೇಶೀ ಆಟಗಾರರಿಗೆ, ಭಾರತದಲ್ಲೂ ರೋಹನ್ ಗವಾಸ್ಕರ್, ಹೇಮಂಗ್ ಬದಾನಿ, ಸೋಧಿ, ಸ್ಟುವರ್ಟ್ ಬಿನ್ನಿ ಮುಂತಾದ ಹಲವಾರು ಯುವ ಪ್ರತಿಭೆಗಳಿಗೆ ಐಸಿಎಲ್ ಒಡೆಯ ಜಿ ಟೆಲಿಫಿಲ್ಮ್ಸ್ ಸಮುದಾಯ ಗಾಳ ಹಾಕಲಾರಂಭಿಸಿದಾಗ ಬಿಸಿಸಿಐ ಮುಂದೆ ಅಪಾಯದ ವಾಸನೆ ಬಡಿದಿತ್ತು. ತಕ್ಷಣಕ್ಕೇ ಅವರು ಇತರ ದೇಶಗಳ ಕ್ರಿಕೆಟ್ ಮಂಡಳಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ಯಾವುದೇ ದೇಶದ ಹಾಲಿ ಆಟಗಾರರನ್ನು ಐಸಿಎಲ್ ಸೆಳೆಯುವ ಕ್ರಮ ವಿಫಲವಾದದ್ದು ಹಾಗೆ. ಶೇನ್ ವಾರ್ನ್ ಒಂದು ಹೆಜ್ಜೆ ಅತ್ತ ಇಟ್ಟಿದ್ದವರು ಹಿಂದೆ ಸರಿದರು. ಕಪಿಲ್‌ರ ತಾಕತ್ತನ್ನು ಬಿಸಿಸಿಐನ ಹಣ - ಅಧಿಕಾರಗಳು ಕುಂದಿಸಿದವು. ಐಸಿಎಲ್‌ಗೆ ಕೊನೆಗೂ ಬಂದಿದ್ದು ನಿವೃತ್ತಿ ಅಂಚಿನಲ್ಲಿದ್ದ ಕ್ರಿಸ್ ಕ್ರೇನ್ಸ್, ಮ್ಯಾಕ್‌ಮಿಲನ್, ಡೇನಿಯಲ್ ಮಾರ್ಟಿನ್, ಇಂಜಮಾಮ್ ತರದವರು. ಬ್ರಿಯಾನ್ ಲಾರಾರಂತವರು ದಕ್ಕಲಿಲ್ಲ. ಅಲ್ಲಿಗೆ ಐಸಿಎಲ್ ಆಕರ್ಷಣೆ ಸೀಮಿತವಾಯಿತು.
ಮೊದಲ ವರ್ಷ (೨೦೦೭-೦೮)ರಲ್ಲಿ ಐಸಿಎಲ್ ಭರ್ಜರಿಯಾಗಿಯೇ ಆರಂಭವಾಯಿತು. ಪಾಕ್‌ನ ಬಹುಪಾಲು ರಾಷ್ಟ್ರೀಯ ಆಟಗಾರರು ಇದ್ದ ಲಾಹೊರ್ ಬಾದ್‌ಶಾಹ್‌ಗಳು ಜನಾಕರ್ಷಣೆ ಉಂಟುಮಾಡಿದರು. ಹೆಚ್ಚು ಆಟಗಾರರ ಬಲ ಇಲ್ಲದಿರುವುದರಿಂದ ಮತ್ತೆ ಮತ್ತೆ ಆಟಗಾರರಲ್ಲೇ ವಿವಿಧ ತಂಡ ಮಾಡಿ ಲೀಗ್‌ಗಳನ್ನು ರೂಪಿಸಿ ಪಂದ್ಯಗಳನ್ನಾಡಿಸಿತು. ಬಹುಷಃ ಜಿ ಟೆಲಿಫಿಲ್ಮ್‌ಗೆ ಆಗಲೇ ಸಣ್ಣಗೆ ಸುಸ್ತು ಕಾಣಿಸಿರಬೇಕು!
ಮಹಾಭಾರತದ ಯುದ್ಧದಲ್ಲಿ ಗೆದ್ದು ಪಾಂಡವರು ಧೃತರಾಷ್ಟ್ರನನ್ನು ಕಾಣಲು ಬರುತ್ತಾರೆ. ಧೃತರಾಷ್ಟ್ರ ಭೀಮನನ್ನು ಆಲಂಗಿಸಿಕೊಳ್ಳಲು ಬಯಸುತ್ತಾನೆ. ಹೆಜ್ಜೆ ಮುಂದಿಟ್ಟ ಭೀಮನನ್ನು ತಡೆಯುವ ಕೃಷ್ಣ ಭೀಮನ ವಿಗ್ರಹವನ್ನು ಮುಂದೂಡುತ್ತಾನೆ. ಧೃತರಾಷ್ಟ್ರನ ಅಪ್ಪುಗೆಗೆ ನಲುಗಿ ವಿಗ್ರಹ ಪುಡಿಪುಡಿಯಾಗುತ್ತದೆ! ಬಿಸಿಸಿಐಗೆ ಐಪಿಎಲ್‌ನ್ನು ಪರಿಪೂರ್ಣವಾಗಿ ನಾಶಪಡಿಸಲು ಕಂಡ ಉಪಾಯವೂ ಅದೇ.
ಅದು ಸ್ಪಷ್ಟವಾಗಿ ಘೋಷಿಸಿದೆ, ಇನ್ನು ಮುಂದೆ ಐಸಿಎಲ್‌ನಲ್ಲಿ ಆಡಿದ ಆಟಗಾರರಿಗೆ ನಾವು ನಿಷೇಧ ಹೇರುವುದಿಲ್ಲ. ಅವರು ಮರಳಿ ಇತ್ತ ಬರಬಹುದು. ಆದರೆ ಷರತ್ತುಗಳಿವೆ. ಮೇ ೩೧ರೊಳಗೆ ಐಸಿಎಲ್ ಜೊತೆಗಿನ ಎಲ್ಲ ವ್ಯವಹಾರಗಳನ್ನು ಕೊನೆಗೊಳಿಸಿ ಬಂದರೆ ಈ ವರ್ಷ ಆಟಗಾರರು ಪ್ರಥಮ ದರ್ಜೆ ಋತುವಿನಲ್ಲಿ ಆಡಬಹುದು. ಒಂದು ವರ್ಷದ ನಂತರವಷ್ಟೇ ಅಂತರ್ರಾಷ್ಟ್ರೀಯ ಕ್ರಿಕೆಟ್‌ಗೆ ಅರ್ಹತೆ. ನೆನಪಿಡಿ, ಈ ಪ್ರಥಮ ದರ್ಜೆ ಜೂನ್ ಒಂದರಿಂದ ಆರಂಭವಾಗುತ್ತದೆ ಮತ್ತು ಇದರ ಕೆಳಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನ ಆಕರ್ಷಕ ಅವಕಾಶವೂ ಲಭ್ಯ!
ಇದರ ಹಿಂದೆ ಐಸಿಸಿಯ ಕೃಪಾಶೀರ್ವಾದ ಬಿಸಿಸಿಐಗೆ ಇದೆ. ಅಧಿಕೃತ ಲೀಗ್‌ಗಳ ಬಗೆಗಿನ ಹೊಸ ಐಸಿಸಿ ಕಾಯ್ದೆ ಜೂನ್ ಒಂದರಿಂದ ಜಾರಿಗೆ ಬರಲಿದೆ. ಆದರೆ ಇದನ್ನು ಪೂರ್ವಾನ್ವಯವಾಗಿ ಹೇರುವಂತಿಲ್ಲ. ಈಗಾಗಲೇ ತನಗೆ ಮಾನ್ಯತೆ ನೀಡುವ ಕುರಿತು ಹಾಗೂ ತನ್ನ ಆಟಗಾರರ ಮೇಲೆ ಕ್ರಿಕೆಟ್ ಮಂಡಳಿಗಳು ನಿಷೇಧ ಹಾಕುವ ವಿರುದ್ಧ ಜಿ ಸಂಸ್ಥೆಯ ಕಾನೂನು ಹೋರಾಟ ಸಫಲತೆಯ ಕಡೆಗೆ ನಡೆದಿದೆ. ಈಗ ಬಿಸಿಸಿಐ-ಐಸಿಸಿ ಹೂಡಿದ ಆಟ ಹೇಗಿದೆಯೆಂದರೆ, ಒಂದೊಮ್ಮೆ ಐಸಿಎಲ್ ಪರವೇ ತೀರ್ಪು ಬಂದರೂ ಆ ವೇಳೆಗೆ ಆಟಗಾರರೇ ಅವರ ಬಳಿ ಇರಬಾರದು!
ಈ ಹಂತದಲ್ಲಿ ಜಿ ಹೆಜ್ಜೆಗಳು ಕುತೂಹಲಕಾರಿ. ಆರ್ಥಿಕ ಹೊಡೆತಕ್ಕೆ ಸಿಕ್ಕಿರುವ ಅದು ಅನಿವಾರ್ಯವಾಗಿ ಮಾರ್ಚ್ ಟೂರ್ನಿಯನ್ನು ರದ್ದುಗೊಳಿಸಿದೆ. ಇಂಜಿ, ಮುಷ್ತಾಕ್ ಸೇರಿದಂತೆ ಎಲ್ಲ ಪಾಕ್ ಆಟಗಾರರು ಅಲಭ್ಯ ಎನ್ನುವುದು ಸರಣಿಯ ಆಕರ್ಷಣೆಗೇ ಕುತ್ತು ತಂದಿದೆ. ಒಂದೆಡೆ ಆಟಗಾರರಿಗೆ ಪೂರ್ತಿ ಪಾವತಿ ಆಗಿಲ್ಲ, ಅವರಿಗೆ ಎಲ್ಲೂ ಆಡುವಂತೆಯೂ ಇಲ್ಲ. ಹಾಗೆಂದು ಅವರು ಏಕಾಏಕಿ ಬಿಸಿಸಿಐ ಕಡೆಗೆ ಬರುವಂತಿಲ್ಲ. ಇನ್ನೂ ಒಪ್ಪಂದದ ಅವಧಿ ಚಾಲ್ತಿಯಲ್ಲಿರುವವರು ತಮ್ಮ ನಿರ್ಗಮನದ ಕುರಿತು ನಿಶ್ಚಿತ ಅವಧಿಗೆ ಮುನ್ನ ನೋಟೀಸ್ ಕೊಡಬೇಕು. ನೋಟೀಸ್ ಟೈಮ್ ಪಾಲಿಸಬೇಕು. ನಂತರದಲ್ಲಿ ಜಿಯಿಂದ ನೋ ಅಬ್ಜೆಕ್ಷನ್ ಪರವಾನಗಿ ಪತ್ರವನ್ನು ಪಡೆಯಬೇಕು. ಜಿ ಒಪ್ಪದಿದ್ದರೆ ಅವರ ಪಕ್ಷಾಂತರ ಕಷ್ಟ ಕಷ್ಟ. ಜಿ ವ್ಯವಹಾರ ಮುಖ್ಯಸ್ಥ ಹಿಮಾಂಶು ಮೂಡಿಯವರ ಪ್ರಕಾರ, ಅಕ್ಟೋಬರ್‌ನಲ್ಲಿ ಹೊಸ ಸರಣಿ ಯೋಜಿಸಲಾಗಿದ್ದು ಈ ಘಟ್ಟದಲ್ಲಿ ಐಸಿಎಲ್ ಹೋರಾಟದಿಂದ ಹಿಂಸರಿಯುವುದಿಲ್ಲ!
ಅಂದರೆ ರೋಹನ್ ಗವಾಸ್ಕರ್, ದಿನೇಶ್ ಮೊಂಗಿಯಾ, ಬದಾನಿಯಂತವರದು ಇಕ್ಕಳದಲ್ಲಿ ಸಿಲುಕಿದ ಸ್ಥಿತಿಯಾದೀತು. ಅಷ್ಟಕ್ಕೂ ನ್ಯಾಯಾಲಯವೇನಾದರೂ ಬಿಸಿಸಿಐ-ಐಸಿಸಿಯ ನಿಷೇಧದ ಆದೇಶವನ್ನು ರದ್ದುಗೊಳಿಸಿದರೆ ಬಿಸಿಸಿಐನ ಕಡೆಯಿಂದಲೂ ಅವಕಾಶ ಗಿಟ್ಟದ ಆಟಗಾರರು ಇತ್ತ ಬರಲಾರಂಭಿಸುತ್ತಾರೆ. ಈಗಾಗಲೆ ೮೫ ಭಾರತೀಯ ಹಾಗೂ ೬೦ ವಿದೇಶೀ ಆಟಗಾರರನ್ನು ತನ್ನ ಸುಪದಿಯಲ್ಲಿಟ್ಟುಕೊಂಡಿರುವ ಐಸಿಎಲ್ ಕೂಡ ‘ಹೊಸ ಆಟ’ ಆರಂಭಿಸುತ್ತದೆ!! ಮುಖ್ಯವಾಗಿ, ನಮ್ಮ ದೇಶದಲ್ಲಿ ಎರಡೆರಡು ಟ್ವೆಂಟಿ ೨೦ ಕ್ರಿಕೆಟ್ ಟೂರ್ನಿ ನಡೆಯುವುದನ್ನು ನೋಡಲು ಜನರಂತೂ ಇದ್ದಾರೆ. ಸಾಕಲ್ಲ?
ಎಲ್ಲೆಡೆಯೂ ಸಲ್ಲುವ ಪ್ರಕ್ರಿಯೆ ಶುರುವಾಗಿದೆ. ಅದಾಗಲೇ ಪಾಕ್ ಆಟಗಾರರಿಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಲು ಅವಕಾಶ ಸಿಕ್ಕಿದೆ. ಶ್ರೀಲಂಕಾದಲ್ಲಿಯೂ ಆ ಅನುಮತಿ ಕೊಟ್ಟುದುದಕ್ಕೆ ಅರ್ಜುನ ರಣತುಂಗ ತಮ್ಮ ಅಧ್ಯಕ್ಷ ಸ್ಥಾನವನ್ನೇ ಕಳೆದುಕೊಂಡಿದ್ದಾರೆ. ಅತ್ತ ಶೇನ್ ಬಾಂಡ್ ಐಸಿಎಲ್ ಬಿಟ್ಟು ರಾಷ್ಟ್ರೀಯ ತಂಡಕ್ಕೆ ಮರಳಲು ಯೋಚಿಸಿದ್ದಾರೆ. ಬಾಂಗ್ಲಾದ ಇಡೀ ತಂಡವನ್ನು ಖರೀದಿಸಿದ್ದ ಐಸಿಎಲ್ ಕುರಿತ ನಿಷೇಧವನ್ನು ತೆಗೆದು ಹಾಕುವುದು ಅಲ್ಲಿನ ಕ್ರಿಕೆಟ್ ಮಂಡಳಿಗೆ ಬಹುಪಾಲು ಅನಿವಾರ್ಯ. ಈ ಕಾಲಘಟ್ಟದಲ್ಲಿ ಉಳಿದಿರುವ ಒಂದೇ ಒಂದು ಕುತೂಹಲವೆಂದರೆ, ಎರಡು ವರ್ಷ ಪಟ್ಟಭದ್ರರ ಸವಾಲನ್ನು ತಾಳೀಕೊಂಡ ಇಂಡಿಯನ್ ಕ್ರಿಕೆಟ್ ಲೀಗ್ ಇದೀಗ ತನ್ನ ಶ್ರಮದ ಫಲ ಸಿಗುವ ಸಂದರ್ಭದಲ್ಲಿ ಸ್ಪರ್ಧೆಯಿಂದ ಹಿಂಸರಿದುಬಿಡುತ್ತದೆಯೇ?
-ಮಾವೆಂಸ

 
200812023996