ಸೋಮವಾರ, ಮಾರ್ಚ್ 30, 2009

ತಾವೇ ತೋಡಿದ ಹಳ್ಳದಲ್ಲಿ ಹಳ್ಳಿಗರು....
ಗೆಳೆಯ ಜಿತು ಇತ್ತೀಚೆಗೆ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದರು, ರಾಮನವಮಿಯ ೯ ದಿನಗಳು ದೇವರ ಪ್ರತಿಮೆಯನ್ನು ಪಲ್ಲಕ್ಕಿಯಲ್ಲಿ ಇರಿಸಿ ಊರಿನವರೆಲ್ಲ ಸೇರಿ ದೇವರ ಭಜನೆ ಮಾಡುತ್ತ, ಊರಿನ ಪ್ರತಿ ಮನೆ, ಮನೆಗೆ ಹೋಗಿ ಅಲ್ಲಿ ಪ್ರತಿ ಮನೆಯಲ್ಲಿ ಪೂಜೆ, ಮಂಗಳಾರತಿ ಮಾಡಿ, ಭಜನೆ ಮಾಡಿ ಪ್ರಸಾದ ಸೇವಿಸಿ ಹಿಂತಿರುಗುವುದು ವಾಡಿಕೆ ಆಗಿದೆ.
ಆದರೆ ಇತ್ತಿಚಿನ ವರುಷಗಳಲ್ಲಿ ಮನೆ ಮಕ್ಕಳೆಲ್ಲ ಙದು ಹಾಗು ಕೆಲಸ ಅರಸಿ ಹೊರಗಡೆ ಇರುವದರಿಂದಾಗಿ ಊರಲ್ಲಿರುವ ಕೆಲವೇ ಜನರು ಉತ್ಸವ ನೆಡೆಸುವುದು ತುಂಬಾ ದುಸ್ತರವಾಗುತ್ತಿದೆ..(ವಿವರಗಳಿಗೆ ನೋಡಿ.. http://hindumane.blogspot.com/) ಓದಿದ ತಕ್ಷಣ ಆ ಕ್ಷಣಕ್ಕೆ ತೋಚಿದಂತೆ ಪ್ರತಿಕ್ರಿಯಿಸಿದ್ದೆ.  "ಊರ ಬಿಟ್ಟರು ಕ್ರಿಯಾಶೀಲರು. ಇಲ್ಲಿ ಉಳಿದರು ಸತ್ತಂತೆ ಬದುಕಿರುವವರು! ಕಾಲ ಉತ್ತರಿಸದು. ಇಲ್ಲ್ಲಿರುವ ಕೆಲವೇ ಮಂದಿ ಮುನ್ನುಗ್ಗಬೇಕು. ರಜೆ ಹಾಕಿ ಆ ಜನರೂ ಬಂದರೆ ಜೈ! ಚೆಂಡು ನಮ್ಮ ಮನೆ ಅಂಗಳದಲ್ಲಿಯೇ ಇದೆ....."   ಯಾಕೋ ಗೊತ್ತಿಲ್ಲ, ಎರಡು ಮೂರು ದಿನದಿಂದ ಅದೇ ವಿಚಾರ ತಲೆಯಲ್ಲಿ ತಾಕಲಾಡುತ್ತಿದೆ. 
ವಿಚಾರ ಹಳತು ಮಾಡಿ ಹಾಗೆಯೇ ಮರೆತು ಬಿಡುತ್ತಿದ್ದೆನೇನೋ. ಆದರೆ ಆರ್ಕುಟ್ ಬಳಗದ ಸ್ನೇಹಿತರಾದ ಸಹನಾರ ಒಂದು ಅಭಿಪ್ರಾಯವೂ ಮನಸ್ಸಿನ ಮೂಲೆಯಲ್ಲಿ ತಿವಿಯುತ್ತಿತ್ತು. ಅದಕ್ಕೆ ಪುಟ್ಟ ಹಿನ್ನೆಲೆಯೂ ಇದೆ. ನಾನು ಆರ್ಕುಟ್‌ನಲ್ಲಿ ‘ಹಳ್ಳಿ ಹುಡುಗ್ರು’ ಎಂಬ ಕಮ್ಯುನಿಟಿಯನ್ನು ಆರಂಭಿಸಿದ್ದೆ. ಹಳ್ಳಿಯಲ್ಲಿರುವವರು ಹಾಗೂ ಹಳ್ಳಿಗಳನ್ನು ಪ್ರೀತಿಸುವವರನ್ನು ಒಗ್ಗೂಡಿಸುವ ಪ್ರಯತ್ನ ಅದಾಗಿದೆ. ಅದರಲ್ಲಿ ತಾವೂ ಪಾಲ್ಗೊಂಡ ಸಹನಾ ಒಂದು ಮಾತು ಹೇಳಿದ್ದರು, ಈ ಕಮ್ಯುನಿಟಿಯಲ್ಲಿ ಹಳ್ಳಿಗರ ವಿಚಾರಗಳ ಚರ್ಚೆಯಾಗಲಿ ಈಗ ಅದೂ ಆರಂಭವಾಗಿದೆ ಎಂದುಕೊಳ್ಳೋಣ.
ಮುಖ್ಯವಾಗಿ ನನಗಂತೂ ಸುತ್ತಮುತ್ತಲಿನ ಹಳ್ಳಿಹುಡುಗರನ್ನು ನೋಡಿದರೆ ರೇಜಿಗೆ ಹುಟ್ಟುತ್ತದೆ. ಅವರಲ್ಲಿ ನಕಾರಾತ್ಮಕ ಧೋರಣೆ ತುಂಬಿ ತುಳುಕುತ್ತಿದೆ. ಒಂದೆಡೆ ಹಳ್ಳಿಗಳಲ್ಲಿ ಅದೆಂತದೋ ಸೋಮಾರಿತನ. ಸ್ವಂತದ ಜಮೀನಿನತ್ತ ಕಾಲು ಹಾಕಲೂ ಹಿಂಜರಿಕೆ. ಕಟ್ಟೆ ಪಂಚಾಯ್ತಿ, ಊರ ರಾಜಕೀಯಗಳು ಅವರ ಸಮಯ ಕೊಲ್ಲುವ ಸಾಧನ. ನೆನಪಾಗುತ್ತದೆ ಒಂದು ಘಟನೆ. ಆಗ ಸಕ್ಕರೆ ಓಪನ್ ಮಾರ್ಕೆಟ್‌ನಲ್ಲಿ ಲಭ್ಯವಿರಲಿಲ್ಲ. ಒಂದು ರೇಷನ್ ಕಾರ್ಡ್‌ಗೆ ಬರೀ ೨ ಕೆ.ಜಿ. ಸಕ್ಕರೆ ಕೊಡುತ್ತಿದ್ದರು. ನಮ್ಮಲ್ಲಿಂದ ರೇಷನ್ ಕೊಡುವ ಸೊಸೈಟಿಗೆ ಮೂರು ಕಿ.ಮೀ. ಅಂತರ. ಅಲ್ಲಿಗೆ ಹೋಗಲು ನಿರಾಕರಿಸುವವರು ಹೇಳುತ್ತಿದ್ದರು, ‘ಎರಡು ಕೆ.ಜಿ.ಗೆಂದು ಅಷ್ಟು ದೂರ ಹೋಗುವುದೆಂದರೆ ಆಳುಲೆಕ್ಕ ವ್ಯರ್ಥ!’ ಆಗ ಆ ಸೊಸೈಟಿಯ ಮ್ಯಾನೇಜರ್ ಭೀಮಣ್ಣ ಕೇಳುತ್ತಿದ್ದರು,  ಅದೆಲ್ಲಾ ಸರಿ. ಒಂದು ಮಧ್ಯಾಹ್ನದ ಆಳು ಲೆಕ್ಕ ನಷ್ಟ ಎನ್ನುವವರು ಆ ಮಧ್ಯಾಹ್ನ ಮಾಡುವುದೇನು? ಒಂದೋ ಹರಟೆ, ಕಟ್ಟೆ ಪಂಚಾಯ್ತಿ ಇಲ್ಲವೇ ನಿದ್ದೆ ಅಷ್ಟೇ ತಾನೇ?!
ನಿಜ ಅದೇ. ಏನೋ ಮಾಡುತ್ತೀವೆನ್ನುವ ಇವರು ಶೂನ್ಯದಿಂದ ಮೇಲೆದ್ದೇ ಇರುವುದಿಲ್ಲ. ಬಹುಷಃ ಅದ್ಭುತ ತಾಕತ್ತು ಇದ್ದೂ ಹೀಗೆ ವ್ಯರ್ಥವಾಗುತ್ತಿರುವ ಬ್ರಾಹ್ಮಣ-ಹವ್ಯಕ ಹುಡುಗರ ಬಗ್ಗೆ ಜಾಸ್ತಿ ಅನುಕಂಪ ತೋರಬೇಕು! ಇಂದು ಸಮಾಜದಲ್ಲಿ ಸರಿಯಾದ ಸಮಯಕ್ಕೆ ಮದುವೆಯಾಗಲು ಹುಡುಗಿಯರು ಲಭ್ಯರಾಗದೇ ಇರುವುದು ಅವರ ಈ ನಕಾರಾತ್ಮಕ ವರ್ತನೆಗಳಿಗೆ ಕಾರಣವಿರಬಹುದೇ?
ಹಳ್ಳಿಯ ಹುಡುಗರು ಒಂದಲ್ಲಾ ಒಂದು ಚಟುವಟಿಕೆಯಲ್ಲಿ ತೊಡಗಿಕೊಂಡದ್ದೇ ಆದರೆ ಮನಸ್ಥಿತಿ ಬದಲಾಗಲೇಬೇಕು. ಕಿತಬಿ ರಾಜಕೀಯ ಮಾಡಲು ಸಮಯ ಸಿಕ್ಕುವುದಿಲ್ಲ. ಮುಖ್ಯವಾಗಿ, ಸಮಾಜಕ್ಕೆ ತೆರೆದುಕೊಳ್ಳುವುದರಿಂದ ಹೊಂದಾಣಿಕೆ ಮನೋಭಾವ ಬೆಳೆಯುತ್ತದೆ.
ಪುಟ್ಟ ಉದಾಹರಣೆ. ಜೋಗದ ಹತ್ತಿರದ ತಲವಾಟದಂತ ಊರುಗಳಲ್ಲಿ ಯುವ ಪಾಳ್ಯವೇ ಇದೆ. ಕ್ರಿಯಾಶೀಲರೇ ಇದ್ದಾರೆ. ಕೊನೆಪಕ್ಷ ಅವರ ಚಟುವಟಿಕೆಗಳ ಕುರಿತು ಅಸಮಾಧಾನ ಇರುವವರು ಸುಮ್ಮನಿದ್ದರೂ ಸಾಕಿತ್ತು. ಇವರ ಪಾಡಿಗೆ ಸಾಧನೆ ಮಾಡುತ್ತಿದ್ದರೇನೋ. ಈಗ ನೋಡಿದರೆ ಕಾಲೆಳೆಯುವುದನ್ನು ಬಿಟ್ಟಂತಿಲ್ಲ. ಹಾಗಾಗಿ ಅವರು ಹುಟ್ಟುಹಾಕಿದ್ದ ‘ಕಟ್ಟೆ’ ಎಂಬ ವಿನೂತನ ಪತ್ರಿಕಾ ಪ್ರಯತ್ನ ಕೊನೆ ಉಸಿರೆಳೆದಂತಿದೆ. ತಿಂಗಳಿಗೆ ಬರೀ ೧೦ ರೂ. ಕೊಟ್ಟು ಪ್ರೋತ್ಸಾಹಿಸಿದ್ದರೂ ಅದೊಂದು ಮೈಲುಗಲ್ಲಿನಂತ ಸಾಧನೆ ಆಗುತ್ತಿತ್ತೇನೋ. ಹಳ್ಳಿಗರು ತಾವು ಸೋತು ನೆರೆಹೊರೆಯವರ ಪ್ರಯತ್ನಗಳನ್ನು ಕೊಲ್ಲುವ ಸ್ಯಾಡಿಸ್ಟ್‌ಗಳಾಗುತ್ತಿರುವುದು ಏಕೆ? ಒಬ್ಬ ಸುಬ್ಬಣ್ಣ ನಿನಾಸಂನಂತ ವಿಶಿಷ್ಟ ಪ್ರಯೋಗ ಮಾಡಿ ಗೆದ್ದಿರುವುದು ಕಣ್ಣೆದುರಿಗಿದೆ. ಅಂತಹುದಕ್ಕೆ ಅವಕಾಶ ಕೊಡುವುದು ನಮ್ಮ ಹೆಮ್ಮೆ ಆಗಬೇಕಿತ್ತು.
ನಮ್ಮೂರಿನಲ್ಲೂ ಅಂತದೊಂದು ಚಟುವಟಿಕೆಗೆ ನಾನೂ ಶ್ರೀಕಾರ ಹಾಕಿದ್ದುಂಟು. ರಾಜ್ಯದ ಬಹುಪಾಲು ಎಲ್ಲ ಅಂದರೆ ೬೦ ನಿಯತಕಾಲಿಕಗಳು ಓದಲು ಸಿಗುತ್ತಿರುವ ರಾಜ್ಯದ ಅಪರೂಪದ ಗ್ರಾಮೀಣ ವಾಚನಾಲಯವಿದು. ಊರಿನ ‘ಹಿತೈಷಿ’ಗಳು ತಟಸ್ಥರಾಗಿದ್ದರೂ ನನ್ನ ಕೆಲಸ ಅಷ್ಟರಮಟ್ಟಿಗೆ ಸಲೀಸಾಗಿ ಸಾಗುತ್ತಿತ್ತು. ಆದರೆ....? (ವಾಚನಾಲಯದ ಪರಿಚಯ ಇನ್ನೊಮ್ಮೆ)
ಸ್ವಾರಸ್ಯವೆಂದರೆ, ಹಳ್ಳಿಯಿಂದ ನಗರಕ್ಕೆ ವಲಸೆ ಹೋದವರಲ್ಲೂ ತೌರು ನೆಲದತ್ತ ದಿವ್ಯ ನಿರ್ಲಕ್ಷ್ಯ. ಇತ್ತೀಚೆಗೆ ನಮ್ಮೂರಿನಲ್ಲಿ ಬೆಂಗಳೂರಿನಲ್ಲಿರುವವನ ಮಗನ ಮದುವೆ ನಡೆಯಿತು. ಮದುವೆಗೆ ಮುಂಚಿನ ಕೆಲಸ, ಮದ್ವೆ ದಿನ ಊಟ ಹಾಕಿದ್ದು ಹೀಗೆ (ದೊನ್ನೆ ಬಾಳೆ, ನಾಂದಿ, ವಧೂಪ್ರವೇಶ....) ನಮ್ಮದು. ನಾವು ಗೇಯ್ದದ್ದೇ ಬಂತು. ಊರಿನ ಜನರ ಪರಿಚಯವನ್ನು ಮಾಡಿಕೊಳ್ಳುವ ಕನಿಷ್ಟ ತ್ರಾಸನ್ನು ಕೂಡ ಆ ಮಧುಮಗ ತೆಗೆದುಕೊಳ್ಳಲಿಲ್ಲ. ಎಜುಕೇಟೆಡ್!? ಆತನ ಮಟ್ಟಿಗೆ ಹಳ್ಳಿಯ ಹಿನ್ನೆಲೆ ಬಿಟ್ಟಿಯಾಗಿ ಅಥವಾ ಕಡಿಮೆ ಖರ್ಚಿನಲ್ಲಿ ಮದುವೆ ಕಾರ್ಯ ಮುಗಿಸಿಕೊಳ್ಳುವ ಅವಕಾಶವಾಗಿತ್ತಷ್ಟೇ. ಇಂತಹ ಮನೋಭಾವವೇ ಈ ಎಲ್ಲ ವಲಸಿಗರನ್ನು ತುಂಬುತ್ತಿದೆ. ಇಂದು ನಮ್ಮ ವಾಚನಾಲಯಕ್ಕೆ ಪರಸ್ಥಳದವರು, ಸ್ನೇಹಿತರು ಪ್ರಯೋಜಕರಾಗಿದ್ದಾರೆ. ಅದೇ ಊರಿನಿಂದ ಹೊರಗೆ ಹೋದ ಒಬ್ಬಾನೊಬ್ಬ ಸಾಫ್ಟ್‌ವೇರಿ ನಯಾ ಪೈಸೆ ಇತ್ತಿಲ್ಲ. ಅದೃಷ್ಟಕ್ಕೆ ಹಳ್ಳಿಯಿಂದ ನಗರಗಳಿಗೆ ಚಲಿಸಿದ ಹುಡುಗಿಯರಲ್ಲಿ ಈ ಸ್ವಭಾವ ಕಡಿಮೆಯೇನೋ.
ಊಹ್. ಹೇಳುವುದು ಇನ್ನಷ್ಟಿದೆ. ಅದನ್ನು ಮುಂದಿನ ಭಾಗವಾಗಿ ಬರೆಯುವೆ. ಅದಕ್ಕೂ ಮುನ್ನ ಒಂದಷ್ಟು ಚರ್ಚೆಯಾದರೆ ಚೆನ್ನ. ಪಾಲ್ಗೊಳ್ಳಿ. ನನ್ನ ಅಭಿಪ್ರಾಯವೇ ಅಂತಿಮವೇನಲ್ಲ. ಭಿನ್ನ ವಿಚಾರಧಾರೆ ಸ್ವಾಗತಾರ್ಹ.
ಆರ್ಕುಟ್‌ನ ‘ಹಳ್ಳಿ ಹುಡುಗ್ರು’ ಕಮ್ಯುನಿಟಿಯಲ್ಲಿ ಸೇರಲು ಆಶಿಸುವವರು ಇಲ್ಲಿ ಕ್ಲಿಕ್ಕಿಸಿ, http://www.orkut.co.in/Main#Community.aspx?cmm=50031568
-ಮಾವೆಂಸ 

ಶನಿವಾರ, ಮಾರ್ಚ್ 28, 2009

ಯಶಸ್ಸಿನ ಅಭಿಯಾನ ಮತ್ತೆ ಆರಂಭ?


ಬಹಳ ವರ್ಷಗಳಿಂದ ಕ್ರಿಕೆಟ್‌ನ್ನು ಅನುಸರಿಸುತ್ತಾ ಬಂದಿರುವ ಅಭಿಮಾನಿಗಳಿಗೆ ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡದ ಕುರಿತು ವಿವರಿಸಲಾಗದ ಪ್ರೀತಿ. ಮೊದಲ ಎರಡು ವಿಶ್ವಕಪ್ ಗೆದ್ದ ಸಾಧನೆ, ಹಲವು ದ್ವೀಪಗಳ ವಿಭಿನ್ನ ಸಂಸ್ಕೃತಿಯ ಆಟಗಾರರ ಸಂಗಮವಾದ ತಂಡವಾಗಿರುವುದೋ ಅಥವಾ ಕ್ಲೈವ್ ಲಾಯ್ಡ್, ರಿಚರ್ಡ್ಸ್, ಅಂಬ್ರೋಸ್, ವಾಲ್ಶ್, ಲಾರಾರವರೆಗೆ ಅದ್ಭುತ ಆಟಗಾರರು ಈ ತಂಡದಲ್ಲಿದ್ದುದು ಈ ಅಭಿಮಾನಕ್ಕೆ ಕಾರಣ ಎನ್ನುವುದೇ ಸಿನಿಕತನ. ನಿಜಕ್ಕೂ ವಿಂಡೀಸ್ ಇತಿಹಾಸ ಬಲ್ಲವರಿಗೆ ಇಂತಹ ನೂರು ದೃಷ್ಟಾಂತ ನೆನಪಾಗಬಹುದು. ಇದೀಗ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಂಡಿರುವ ವಿಂಡೀಸ್ ಅಭಿಮಾನಿಗಳ 
ಗಮನ ಸೆಳೆದಿದೆ.
ವಿವಿಯನ್ ರಿಚರ್ಡ್ಸ್‌ರ ನಿವೃತ್ತಿಯ ನಂತರದ ದಿನಗಳಲ್ಲಿ ವಿಂಡೀಸ್ ಕಳಪೆಯಿಂದ ಕಳಪೆಯತ್ತಲೇ ಚಲಿಸಿತ್ತು. ಕೋಟ್ನಿ ವಾಲ್ಶ್‌ರ ನಾಯಕತ್ವದಲ್ಲಿಯೇ ಅದರ ಲಕ್ಷಣ ಕಾಣಿಸಿತ್ತು. ಒಂದು ಚಾಂಪಿಯನ್ಸ್  ಟ್ರೋಫಿಯ ಜಯಭೇರಿ ಮತ್ತು ಬ್ರಿಯಾನ್ ಲಾರಾರ ವೈಯುಕ್ತಿಕ ವಿಶ್ವದಾಖಲೆಗಳ ಹೊರತಾಗಿ ವಿಂಡೀಸ್ ಅಶಿಸ್ತಿನ ಆಟಗಾರರ ಬೇಜವಾಬ್ದಾರಿಯ ಪ್ರದರ್ಶನವಾಗಿತ್ತು. ಒಮ್ಮೆ ಇಂಗ್ಲೆಂಡ್ ಎದುರು ಟೆಸ್ಟ್‌ನ್ನು ಹೀನಾಯವಾಗಿ ಸೋತ ಅರ್ಧ ಘಂಟೆಯಲ್ಲಿ ಆಟಗಾರರು ಪಬ್‌ನಲ್ಲಿ ಮದಿರೆಯ ಮಬ್ಬಲ್ಲಿ ನರ್ತಿಸಿದ್ದುಂಟು!
ಎಲ್ಲರಿಗೂ ಆಸೆ, ವಿಂಡೀಸ್ - ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಭಾರತಗಳ ಮಟ್ಟದಲ್ಲಿ ಸವಾಲಾಗಲಿ ಎಂದು. ಭಾರತೀಯರಿಗೆ ಒಂದು ತೊಲದ ಅಭಿಮಾನ ಹೆಚ್ಚು. ಎಷ್ಟೆಂದರೂ ಭಾರತದ ಪತ್ತೆಗೆ ಹೊರಟವರಿಗೆ ಸಿಕ್ಕಿದ್ದು ವೆಸ್ಟ್ ಇಂಡೀಸ್ ಆಗಿ, ಅದರ ಹೆಸರಲ್ಲಿ ಭಾರತದ ನೆನಪು ಸೇರಿದೆಯಲ್ಲವೇ? ಅಲ್ಲದೆ ವಿಂಡೀಸ್ ಆಟಗಾರರು ಜನ್ಮದತ್ತ ಪ್ರತಿಭೆಗಳು. ಆಟಕ್ಕೆ ಕುದುರಿಕೊಂಡರೆ ನೋಡಲು ಚೆಂದ ಚೆಂದ. ಅಂತವರು ಐದು ಟೆಸ್ಟ್‌ಗಳ ಸರಣಿಯಲ್ಲಿ ಗೆದ್ದಿರುವುದು ತಾಕತ್ತು. ಅಂದರೆ ವಿಂಡೀಸ್ ಮತ್ತೆ ಯಶಸ್ಸಿಗೆ!!
ಸಾಮಾನ್ಯವಾಗಿ, ಎರಡು - ಮೂರು ಟೆಸ್ಟ್‌ಗಳ ಸರಣಿಗಳಲ್ಲಿ ಇದ್ದಕ್ಕಿದ್ದಂತೆ ಪ್ರದರ್ಶನ ಮಟ್ಟ ಏರಿಸಿಕೊಂಡು ಸರಣಿ ಗೆದ್ದುಬಿಡಬಹುದು. ವಿಂಡೀಸ್ ಇಂಗ್ಲೆಂಡ್ ವಿರುದ್ಧ ಆಡಿದ್ದು ಬರೋಬ್ಬರಿ ಐದು ಟೆಸ್ಟ್‌ಗಳ ಸರಣಿ. ಅದರಲ್ಲೂ ಜಮೈಕಾದ ಮೊದಲ ಟೆಸ್ಟ್‌ನ ಎರಡನೇ ಸರದಿಯಲ್ಲಿ ವಿಂಡೀಸ್ ಬೌಲರ್‌ಗಳು ಇಂಗ್ಲೆಂಡಿಗರನ್ನು ಕೇವಲ ೫೧ ರನ್‌ಗೆ ಆಲ್‌ಔಟ್ ಮಾಡಿದ್ದು ಮೇಲುಗೈಯ ಸ್ಪಷ್ಟ ಸಾಕ್ಷ್ಯ.
ಹಾಗೆಂದುಕೊಳ್ಳುವವರು ತುಸು ಸೂಕ್ಷ್ಮವಾಗಿ ಇಡೀ ಸರಣಿಯನ್ನು ನಿರುಕಿಸಬೇಕಾಗುತ್ತದೆ. ಸರಣಿ ಐದು ಪಂದ್ಯಗಳದ್ದಾದರೂ ಆಟ ಸಾಧ್ಯವಾದ ಉಳಿದ ಮೂರು ಟೆಸ್ಟ್‌ಗಳದು ನೀರಸ ಡ್ರಾ. ಪಿಚ್ ಬೌಲರ್‌ಗಳ ಪಾಲಿಗೆ ರೌರವ ನರಕವಾಗಿತ್ತು. ಮೂರನೇ ಟೆಸ್ಟ್‌ನಿಂದ ಸರಣಿಯಲ್ಲಿ ದಾಖಲಾದ ಇನ್ನಿಂಗ್ಸ್ ಸ್ಕೋರ್‌ಗಳಲ್ಲಿ ಐದು ಬಾರಿ ೫೦೦ ಪ್ಲಸ್, ಕನಿಷ್ಟ ಮೊತ್ತ ೨೨೧ - ಡಿಕ್ಲೇರ್! ತೃತೀಯ ಟೆಸ್ಟ್‌ನಲ್ಲಿ ಸೋಲಿನಂಚಿನಿಂದ ವಿಂಡೀಸ್ ಪಾರಾಗಿದ್ದು ಹೌದಾದರೂ ಶುದ್ಧ ಬ್ಯಾಟಿಂಗ್ ಪಿಚ್‌ನಲ್ಲಿ ವಿಂಡೀಸ್ ಬಾಲಂಗೋಚಿಗಳೂ ಮಿಂಚಿದ್ದು ಅಸಹಜವೇನೂ ಆಗಿರಲಿಲ್ಲ.
ಸರಣಿಯಲ್ಲಿ ವಿಂಡೀಸ್ ರಾಮ್‌ನರೇಶ್ ಸರ್ವಾಣ್ ಸುತ್ತ ಬ್ಯಾಟಿಂಗ್ ಶಕ್ತಿ ಪ್ರದರ್ಶಿಸಿತು ಎನ್ನುವುದನ್ನು ಬಿಟ್ಟರೆ ಇಂಗ್ಲೆಂಡ್ ಕೂಡ ಸರಿಸಮಾನವಾಗಿಯೇ ಬ್ಯಾಟ್ ಬೀಸಿತ್ತು. ಒಂದು ಕಳಪೆ ಇನ್ನಿಂಗ್ಸ್ ಅದರ ಸರಣಿ ಪರಾಜಯಕ್ಕೆ ಕಾರಣೀಭೂತವಾದದ್ದು ಹೀನಾಯ. ವಾಸ್ತವವಾಗಿ, ಕ್ರ್ರಿಕೆಟ್ ಆಡಳಿತಗಳು ಗಂಭೀರವಾಗಿ ಯೋಚಿಸಬೇಕಾದ ಕಾಲವಿದು. ಏಕದಿನ, ಟ್ವೆಂಟಿ ೨೦ ಕ್ರ್ರಿಕೆಟ್ ಆವಿಷ್ಕಾರದ ನಂತರ ತೀರಾ ಬ್ಯಾಟಿಂಗ್ ಪಿಚ್‌ಗಳನ್ನು ರೂಪಿಸುತ್ತಿರುವುದು ಕಾಣುತ್ತಿದೆ. ಇದು ರಸಮಯ ಕ್ರಿಕೆಟ್‌ನ್ನು ಕೊಲ್ಲುತ್ತಿರುವುದು ಸ್ಪಷ್ಟ. ಇದೇ ವಿಂಡೀಸ್ - ಇಂಗ್ಲೆಂಡ್ ಶೃಂಖಲೆಯಲ್ಲಿ ನಾವು ರನ್ ಹೊಳೆ ಕಂಡೆವು. ರೋಚಕತೆಯ ಎಲಿಮೆಂಟ್ ಮಾಯವಾಗಿತ್ತು. ಟೆಸ್ಟ್ ಎಂದರೆ ಭಯಾನಕ, ಮನಮೋಹಕ ಬೌಲಿಂಗ್ ಕಾಣಬೇಕಿತ್ತು. ಅದೆಲ್ಲಿತ್ತು?
ವೆಸ್ಟ್ ಇಂಡೀಸ್ ಸರಣಿ ಗೆದ್ದಿದೆ. ಅಷ್ಟರಮಟ್ಟಿಗೆ ಇದು ಒಳ್ಳೆಯ ಫಲಿತಾಂಶವೇ. ಅಲ್ಲಿನ ಆಟಗಾರರಲ್ಲಿ ಸರಣಿಯುದ್ದಕ್ಕೂ ಶಿಸ್ತು ಕಾಣಿಸಿದೆ. ಗೆಲುವು ಟಾನಿಕ್‌ನಂತೆ ವರ್ತಿಸಬಲ್ಲದು. ಶಿವನಾರಾಯಣ್ ಚಂದ್ರಪೌಲ್‌ರಂತ ಅನುಭವಿಕರ ಮಾರ್ಗದರ್ಶನದಲ್ಲಿ ಕ್ರಿಸ್ ಗೇಲ್ ತಂಡ ವಿವ್ ರಿಚರ್ಡ್ಸರ ಜಮಾನಾವನ್ನು ಮರಳಿ ತರುತ್ತದೆಯೇ, ಗೊತ್ತಿಲ್ಲ. ಅಂತಹ ಸಾಧ್ಯತೆಗಳಂತೂ ಇವೆ. ವಿಂಡೀಸ್ ಟ್ವೆಂಟಿ ೨೦ ಪಂದ್ಯದಲ್ಲೂ ಇಂಗ್ಲೆಂಡ್ ಮೇಲೆ ಜಯ ಸಾಧಿಸಿದ್ದು ಕಾಣುತ್ತಿದೆ.
ಒಂದರ್ಥದಲ್ಲಿ, ವಿಂಡೀಸ್ ಆಡಳಿತ ಸೋತಿದೆ! ಸದರಿ ಪ್ರವಾಸದ ಎರಡನೇ ಟೆಸ್ಟ್ ಆಯೋಜಿತವಾದದ್ದು ಆಂಟಿಗುವಾದಲ್ಲಿ. ಕೇವಲ ೧.೪ ಓವರ್‌ಗಳ ಬೌಲಿಂಗ್ ನಂತರ ಪಂದ್ಯ ರದ್ದಾಯಿತು. ಪಿಚ್ ಸರಿಯಿತ್ತು. ಆದರೆ ಇಡೀ ಕ್ರೀಡಾಂಗಣದ ಔಟ್‌ಫೀಲ್ಡ್ ಗುಣಮಟ್ಟ ತೀರಾ ತೀರಾ ಕಳಪೆಯಾಗಿತ್ತು. ಮರಳುಮಯವಾಗಿತ್ತು. ಜರ್ಮಿ ಟೈಲರ್ ಹಾಗೂ ಜೆರೋಮಿ ಎಡ್ವರ್ಡ್‌ರಿಗೆ ಬೌಲಿಂಗ್ ರನ್‌ಅಪ್‌ನಲ್ಲಿ ಓಡಿಬರುವುದೇ ತ್ರಾಸವಾಗಿತ್ತು. ಹತ್ತು ನಿಮಿಷದೊಳಗೆ ಟೆಸ್ಟ್ ರದ್ದು! ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಬದಲಾಗಿಲ್ಲ. ೧೯೯೮ರಲ್ಲಿ ಇದೇ ವಿಂಡೀಸ್‌ನ ಜಮೈಕಾದಲ್ಲಿ ೧೦.೧ ಓವರ ನಂತರ ಅಪಾಯಕಾರಿ ಪಿಚ್ - ಬ್ಯಾಟ್ಸ್‌ಮನ್‌ರ ಜೀವ ತೆಗೆಯುವಂತದ್ದು - ಕಾರಣದಿಂದ ಟೆಸ್ಟ್ ರದ್ದಾಗಿತ್ತು. ಅದೂ ಇಂಗ್ಲೆಂಡ್ ವಿರುದ್ಧ!
ಬೇಜಾರಾಗುವುದು ಇಷ್ಟೇ ವಿಚಾರಕ್ಕಲ್ಲ. ವಿಂಡೀಸ್ ಕ್ರಿಕೆಟ್ ಬೋರ್ಡ್ ಆಂಟಿಗುವಾದ ಸ್ಟೇಡಿಯಂಗೆ ಸರ್ ವಿವಿಯನ್ ರಿಚರ್ಡ್ಸ್‌ರ ಹೆಸರನ್ನು ನಾಮಕರಣ ಮಾಡಿ ತನ್ನನ್ನು ಗೌರವಿಸಿಕೊಂಡಿದೆ. ಇಲ್ಲಿಯ ಟೆಸ್ಟ್ ಅಂತರ್ರಾಷ್ಟ್ರೀಯ ಮಟ್ಟದ ಮೈದಾನ ಒದಗಿಸದ ಹಿನ್ನೆಲೆಯಲ್ಲಿ ರದ್ದಾಗಿರುವುದು ವಿವ್‌ರ ಮುಖಕ್ಕೆ ಮಸಿಯೇ ಸರಿ. ಸ್ವತಃ ವಿವ್ ‘ಇದು ಎದೆಗೆ ತಾಕಿದ ಬಾಣ’ ಎಂದಿದ್ದಾರೆ. ಇದೀಗ ಐಸಿಸಿ ಈ ಕ್ರೀಡಾಂಗಣದಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟ್‌ಗೆ ನಿಷೇಧ ಹೇರಿದೆ. ಅಕ್ಷರಶಃ ಇದು ಸೋಲು!
ವೆಸ್ಟ್ ಇಂಡೀಸ್‌ರ ಟೆಸ್ಟ್ ಸರಣಿ ಜಯದಲ್ಲಿ ನಾವು ವಿಶೇಷ ಅರ್ಥ ಹುಡುಕಬೇಕಾದುದಿಲ್ಲ. ಆದರೆ ವಿಂಡೀಸ್ ಕ್ರಿಕೆಟ್‌ನ ಪುನರುತ್ಥಾನದ ಶಕೆಯ ಆರಂಭಕ್ಕೆ ಇದೇ ಮುನ್ನುಡಿಯಾದರೆ ಚೆನ್ನ! 
-ಮಾವೆಂಸ
 

ಮಂಗಳವಾರ, ಮಾರ್ಚ್ 17, 2009

ಊರುಗೋಲು ಅಂಕಣ ಬರಹ ಪುಸ್ತಕ ರೂಪದಲ್ಲಿ ಬಳಕೆ ತಿಳುವಳಿಕೆಯ ಸಹ ಸಂಪಾದಕ ಹಾಗೂ ಹಾಗೂ ಸಾಗರ ಬಳಕೆದಾರರ ವೇದಿಕೆಯು ಜಂಟಿಕಾರ್ಯದರ್ಶಿಯಾದ ನಾನು ಈ ಹಿಂದೆ ‘ ವಿಜಯ ಕರ್ನಾಟಕ’ ದೈನಿಕದಲ್ಲಿ 32ವಾರಗಳ ಕಾಲ ಊರುಗೋಲು ಎಂಬ ಅಂಕಣ ಬರೆದಿದ್ದ್ರು   ಇದೀಗ ಆ ಅಂಕಣ ಬರಹಗಳ ಸಂಗ್ರಹ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ. ಪುಸ್ತಕದ ಶೀರ್ಷಿಕೆಯೂ ಅದೇ, ಊರುಗೋಲು!
90 ಪುಟಗಳ ಈ ಪುಸ್ತಕದಲ್ಲಿ ಒಟ್ಟು 68 ವಿಚಾರಗಳ ಮಾರ್ಗದರ್ಶಿ ಮಾಹಿತಿಗಳಿವೆ. ಪ್ರಜ್ಞಾವಂತರು ಅಸಡ್ಡೆಯಿಂದ, ಬಡವರ್ಗದವರೂ ಅಜ್ಞಾನದಿಂದ ಸಾಕಷ್ಟು ನಷ್ಟಗೊಳಗಾಗುತ್ತಲೇ, ಬಂದಿರುವ ಹಿನೆಲೆಯಲ್ಲಿ, ನಿತ್ಯಬದುಕಿಗೆ ಬೆಂಬಲವಾಗುವ ಮಾಹಿತಿಗಳನ್ನು ಸಂಗ್ರಹಿಸಿಕೊಡುವ ಪ್ರಯತ್ನವಿದು.  ಬದುಕಿನ ದಾರಿಯಲ್ಲಿ ಕಾನೂನುಗಳ ಅರಿವು, ಮಾಹಿತಿಗಳ ಅಗತ್ಯಗಳನ್ನು ತಕ್ಕಮಟ್ಟಿಗಾದರೂ ಈ ಪುಸ್ತಕ ಪೂರೈಸಬಲ್ಲುದು. ಯಾಕೆ ಈ ಪುಸ್ತಕಕ್ಕೆ ‘ ಊರುಗೋಲು’ ಎಂಬ ಹೆಸರು? 
ಪುಸ್ತಕದ ಪ್ರಸ್ತಾವನೆ ಹೇಳುತ್ತದೆ, ಕಾನೂನು ಜ್ಞಾನವಿಲ್ಲದೆ ನಾವು ಅಕಾಲಿಕ ವೃದ್ದರಾಗಿಬಿಟ್ಟಿದ್ದೇವೆ. ನಮ್ಮ ಜೀವನಕ್ಕೀಗ ನಡೆಯಲು ಏನಾದರೊಂದು ಆಸರೆ ಇದ್ದರೆ ಕ್ಷೇಮ. ಅಷ್ಟರಮಟ್ಟಿಗೆ ಎಡವಿ ಬೀಳುವುದು ತಪ್ಪೀತು. ಆ ಅರ್ಥದಲ್ಲಿಯೇ ಈ ಹಿಂದೆ ಅಂಕಣಕ್ಕೆ ಮತ್ತು ಈಗ ಪುಸ್ತಕಕ್ಕೆ ‘ ಊರುಗೋಲು’ ಎಂದೇ ಹೆಸರಿಡಲಾಗಿದೆ.
48ರೂ.ಗಳ ಈ ಪುಸ್ತಕದ ಪ್ರಕಾಶಕರು ಹರೀಶ್ ಎಂಟರಪ್ರೈಸಸ್, ಆಸಕ್ತರು ಇನ್ಫೋ ಮೋಹನ್‌ರವರನ್ನು ಸಂಪರ್ಕಿಸಬಹುದು.ಇವರ ಮೊಬೈಲ್ ಸಂಖ್ಯೆ: 9844104958

ಭಾನುವಾರ, ಮಾರ್ಚ್ 15, 2009

ದೂರವಾಣಿಯನ್ನು ದುಬಾರಿ ಏಕೆ ಮಾಡಿಕೊಳ್ಳುವಿರಿ?

ಮೊಬೈಲ್ ಟಾಕ್ -6


ರೈತ ಪರ ಪತ್ರಿಕೆಗಳಿಗೆ, ಪುರವಣಿಗಳಿಗೆ ಒಂದು ಸಮಸ್ಯೆಯಿದೆ. ಅವು ರೈತರಿಗೆ ಅನ್ವಯಿಸುವ ಕೃಷಿ ಪದ್ಧತಿ, ಔಷಧ, ಸಾವಯವ-ಶೂನ್ಯ, ಬೀಜ.... ಇಷ್ಟಕ್ಕೇ. ಈ ಮಾಹಿತಿಗಳಿಂದ ಉಪಯೋಗವಿಲ್ಲವೆಂದಲ್ಲ. ಆದರೆ ಬಹುಪಾಲು ಸಂದರ್ಭಗಳಲ್ಲಿ ರೈತ ಸೋಲುವುದು ಸಮೃದ್ಧ ಇಳುವರಿ ತೆಗೆದೂ ಅದನ್ನು ಮಾರಾಟ ಮಾಡುವ ಪ್ರಕ್ರಿಯೆಯಲ್ಲಿ. ಬಂದ ಹಣವನ್ನು ಪೂರ್ವಯೋಜಿತವಾಗಿ ನಿರ್ಧರಿಸಿ ವಿನಿಯೋಗಿಸಲು ಸೋಲುತ್ತಾನೆ. ಬದುಕಿನ ಸರ್ಕಸ್‌ನಲ್ಲಿ ನಷ್ಟಕ್ಕೊಳಗಾಗುತ್ತಾನೆ. ಅಂದರೆ ಹಣಕಾಸಿನ ನಿರ್ವಹಣಾ ಜಾಣ್ಮೆಯ ಕುರಿತು ರೈತರಿಗೆ ಪ್ರತ್ಯೇಕ ಪಾಠ ಬೇಕು. ದುರಂತವೆಂದರೆ, ಕೃಷಿ ಪತ್ರಿಕೆಗಳು, ಪುಟಗಳು ಅತ್ತ ಗಮನಹರಿಸುವುದೇ ಇಲ್ಲ.
  ರೈತರು ಎಂದಮೇಲೆ ಅವರು ಗ್ರಾಮೀಣ ಪ್ರದೇಶದವರು ಎನ್ನುವುದು ಖಚಿತ. ಈ ಹಿನ್ನೆಲೆಯಲ್ಲಿ ಹಳ್ಳಿಗರಿಗೆ ಸಿಗುವ ಸವಲತ್ತುಗಳನ್ನು ರೈತರು ಸಮರ್ಥವಾಗಿ ಬಳಸಿಕೊಂಡರೆ ಅಷ್ಟರಮಟ್ಟಿಗೆ ಕಷ್ಟದ ಭಾರ ಕಡಿಮೆಯಾದೀತು ಅಥವಾ ಅನುಕೂಲ ಹೆಚ್ಚೀತು. ಈ ಕಂತಿನಲ್ಲಿ ಆ ನಿಟ್ಟಿನಲ್ಲಿ ಯೋಚನೆಗಳಿವೆ.
ಗ್ರಾಮೀಣ ಭಾಗದ ರೈತರಿಗೆ ಬಿಎಸ್‌ಎನ್‌ಎಲ್ ಸ್ಥಿರ ಅಥವಾ ವಿಲ್ ದೂರವಾಣಿ ಲಾಭಕರ. ಕೇವಲ 50 ರೂ. ತಿಂಗಳ ಬಾಡಿಗೆಗೆ 75 ಉಚಿತ ಕರೆ ಲಭ್ಯ. ಆ ಲೆಕ್ಕದಲ್ಲಿ 75 ಪೈಸೆಗೆ ಒಂದು ಕರೆ. ಇಂದು ಅಷ್ಟೂ ಮೊಬೈಲ್ ಕಂಪನಿಗಳು 50 ಪೈಸೆಗೇ ಕರೆ ಸೌಲಭ್ಯ ಒದಗಿಸುವಾಗ ಬಿಎಸ್‌ಎನ್‌ಎಲ್ ಫೋನ್ ನಷ್ಟ ಎನ್ನುವ ಮಾತಿದೆ. ನಿಜಕ್ಕೂ ಅದು ತಪ್ಪು. ಮೊಬೈಲ್‌ನಲ್ಲಿ ನಿಮಿಷಕ್ಕೊಂದು ಕರೆ ಲೆಕ್ಕ. ಸ್ಥಿರ ದೂರವಾಣಿಯಲ್ಲಿ ಒಂದು ಸ್ಥಳೀಯ ಕರೆಗೆ ಮೂರು ನಿಮಿಷದ ಅವಕಾಶ. ಅಷ್ಟೇಕೆ, ರಾಜ್ಯದ ಯಾವುದೇ ಸ್ಥಿರ ದೂರವಾಣಿ ಮತ್ತು ಬಿಎಸ್‌ಎನ್‌ಎಲ್ ಮೊಬೈಲ್‌ಗೆ  ಕರೆ ಮಾಡಿದರೂ ಎರಡು ನಿಮಿಷಕ್ಕೆ ಒಂದು ಕರೆ. ಯಾವುದೇ ನಿಟ್ಟಿನಿಂದ ನೋಡಿದರೂ ನಮ್ಮದೇ ಜವಾಬ್ದಾರಿಯಾಗಿರುವ, ಕಣ್ಣಿಗೆ ಕಾಣದೆ ಕರಗುವ ಕರೆನ್ಸಿಗಳ ಮೊಬೈಲ್‌ಗಿಂತ ಸ್ಥಿರ ಫೋನ್ ಅನುಕೂಲ.
ಹಲವೆಡೆ ಸಾವಿರ ಲೈನ್ ದಾಟಿದ ಎಕ್ಸ್‌ಚೇಂಜ್ ಎಂಬ ಕಾರಣಕ್ಕೆ ಈ ದೂರವಾಣಿ ಗ್ರಾಹಕರಿಗೆ 100ರೂ.ಗಳ ದುಬಾರಿ ಬಾಡಿಗೆ ವಿಧಿಸಲಾಗುತ್ತದೆ. ಅಂತಹ ಗ್ರಾಹಕ ರೈತರಿಗೂ ಕೂಡ ಒಂದು ವಿಶೇಚ ಅವಕಾಶವಿದೆ. ಅವರು ಲಿಖಿತ ಅರ್ಜಿ ಸಲ್ಲಿಸಿ ‘ಗ್ರಾಮೀಣ - 75’ನ್ನು ಆಯ್ದುಕೊಂಡರೆ ಬಾಡಿಗೆ ದರ 75ಕ್ಕೆ ಇಳಿಯಲಿದೆ. ಉಚಿತ ಕರೆಗಳ ಆಜುಬಾಜಿಂದ ತಿಂಗಳಿಗೆ 300 ಕರೆ ಮಾಡುವವರಿಗಂತೂ ಗ್ರಾಮೀಣ - 75 ಲಾಭದಾಯಕವೇ.
ಬಿಎಸ್‌ಎನ್‌ಎಲ್ ಈ ವರ್ಷದುದ್ದಕ್ಕೂ ಯುಎಸ್‌ಓ ಎಂಬ ಕೇಂದ್ರ ಸರ್ಕಾರದ ಸಹಾಯ ನಿಧಿಯನ್ನು ಬಳಸಿ ಹಲವು ಯೋಜನೆಗಳನ್ನು ಪ್ರಕಟಿಸುತ್ತದೆ. ಅದರಲ್ಲಿ, ಹತ್ತು ತಿಂಗಳ ಬಾಡಿಗೆಯನ್ನು ಒಮ್ಮೆಗೇ ಪಾವತಿಸಿದರೆ ಎರಡು ತಿಂಗಳ ಬಾಡಿಗೆಯಿಂದ ವಿನಾಯ್ತಿ ಸಿಗುತ್ತದೆ. ಮುಖ್ಯವಾಗಿ, ಒಂದು ವರ್ಷದ ಕಾಲದವರೆಗೆ ಯಾವುದೇ ಬಾಡಿಗೆ ಏರಿಕೆಗೆ ಸಂಭಾವ್ಯ  ಬಿಸಿ ಈ ಚಂದಾದಾರರನ್ನು ತಟ್ಟುವುದಿಲ್ಲ. ಈ ದಿನಗಳಲ್ಲಿ ರೈತರು ಕೇಳಿದ್ದಕ್ಕೂ , ಬಿಟ್ಟಿದ್ದಕ್ಕೂ ಬಡ್ಡಿ ಲೆಕ್ಕಾಚಾರ ಹಾಕುತ್ತಾರೆ. ಆ ನಿಟ್ಟಿನಲ್ಲಿ ಯೋಚಿಸಿದರೂ ಈ ಮುಂಗಡ ಬಾಡಿಗೆ ಪಾವತಿಯ ಮೊತ್ತಕ್ಕೆ ಶೇ.೨೦ರ ದರದಲ್ಲಿ ಬಡ್ಡಿ ಕೊಟ್ಟಂತಾಗುತ್ತದೆ! 
ಸ್ವಾರಸ್ಯವೆಂದರೆ, ತಿಂಗಳಿಗೆ150ಕ್ಕಿಂತ ಹೆಚ್ಚು ಕರೆ ಮಾಡುವ ಅಥವಾ 200 ರೂ.ಗಿಂತ ಹೆಚ್ಚಿನ ಬಿಲ್ ಪಡೆಯುವ ಗ್ರಾಮೀಣ ಚಂದಾದಾರ ಎರಡೆರಡು ಸ್ಥರ ದೂರವಾಣಿ ಅಳವಡಿಸಿಕೊಂಡರೇ ಆತನ ಬಿಲ್‌ನಲ್ಲಿ ಉಳಿತಾಯವಾಗುತ್ತದೆ! ಉಚಿತ ಕರೆ ನಂತರದ 50 ಕರೆಗಳ ದರ 80 ಪೈಸೆ ಮತ್ತು ಆನಂತರ ಒಂದು ರೂಪಾಯಿ. ಅಂದರೆ ತೆರಿಗೆ ಸೇರಿದ ಮೇಲೆ 86ಪೈಸೆಗಿಂತ ಕಡಿಮೆಗೆ ಕರೆ ಮಾಡಲಾಗದು. ಅದೇ ಎರಡು ಪ್ರತ್ಯೇಕ ಗ್ರಾಮೀಣ ದೂರವಾಣಿ ಸಂಪರ್ಕದಿಂದ ತಿಂಗಳಿಗೆ ತಲಾ 75ಕರೆಯಂತೆ ಖರ್ಚು ಮಾಡಿದರೂ ಒಂದು ಕರೆಗೆ ವೆಚ್ಚವಾಗುವುದು 74 ಪೈಸೆ. ಲಘುವಾಗಿ ಇದೊಂದು ಸರಳ ಲೆಕ್ಕಾಚಾರ, ಏನುಳಿದೀತು ಮಹಾ ಎನ್ನದಿರಿ. ಪ್ರತಿತಿಂಗಳುಉಳಿಯುವ 15-20 ರೂ. ಪರಿಣಾಮ ನಗಣ್ಯವಂತೂ ಅಲ್ಲ. ಒಂದಲ್ಲ ಒಂದು ಫೋನ್ ಕೆಟ್ಟರೂ ಪರ್ಯಾಯವಿರುವ ನಿಶ್ಚಿಂತೆ ಬೇರೆ. ಸ್ವತಃ ನಾನು ಈ ಸೂತ್ರವನ್ನು ಅನುಸರಿಸುತ್ತಿರುವುದರಿಂದಲೇ ಖಚಿತವಾಗಿ ಹೇಳಲು ಸಾಧ್ಯವಾಗಿದೆ.
ಇದರ ಹೊರತಾಗಿಯೂ ಹಲವು ಯೋಜನೆಗಳನ್ನು ಆಗಾಗ್ಗೆ ಬಿಎಸ್‌ಎನ್‌ಎಲ್ ಪ್ರಕಟಿಸುತ್ತಿರುತ್ತದೆ. ಆ ಸುದ್ದಿ ತಿಳಿಯಬೇಕೆಂಬ ಕುತೂಹಲ, ಆಯ್ದುಕೊಳ್ಳುವ ಚಾಕಚಕ್ಯತೆ ನಮ್ಮದಾಗಬೇಕು. ಕೆಲದಿನಗಳ ಹಿಂದೆ ಮಹಿಳೆಯರಿಗೆ ಶೇ.25 ರಿಯಾಯ್ತಿಯಲ್ಲಿ , ಠೇವಣಿ - ಸ್ಥಾಪನಾ ವೆಚ್ಚ ಕೂಡ ಇಲ್ಲದೆ ಹೊಸ ಫೋನ್ ಸಂಪರ್ಕ ನೀಡಲಾಗಿತ್ತು. ಅಂತೆಯೇ ಈಗ ರಾಜ್ಯದ ಹಲವಡೆ ಹಳ್ಳಿ ಗ್ರಾಹಕರಿಗಾಗಿ ಪ್ರಕಟಗೊಂಡಿರುವ ಹೊಸ ಯೋಜನೆಯ ಪ್ರಕಾರ, 250ರೂ. ಕಟ್ಟಿದರೆ ಎರಡು ವರ್ಷ ಯಾವುದೇ ಬಾಡಿಗೆ ಇಲ್ಲದೆ, ಆರಂಭೀ ಠೇವಣಿ, ಸ್ಥಾಪನಾ ವೆಚ್ಚ ಇಲ್ಲದ ಹೊಸ ಫೋನ್‌ನ್ನು ಬಿಎಸ್‌ಎನ್‌ಎಲ್ ನೀಡುತ್ತಿದೆ. ಯೋಜನೆ ಮಾರ್ಚ್ 15ಕ್ಕೆ ಕೊನೆಗೊಳ್ಳಲಿದೆ. ಗಮನಿಸಬೇಕಾದುದೆಂದರೆ, ಇಂತಹ ಹಳ್ಳಿಗರಿಗೆ ಲಾಭದಾಯಕ ಯೋಜನೆಗಳು 2009ರ ತುದಿಯವರೆಗೂ ಒಂದಲ್ಲಾ ಒಂದು ಚಾಲ್ತಿಗೆ ಬರುತ್ತವೆ. ನಾವು, ಹಳ್ಳಿಗರು ಹತ್ತಿರದ ಬಿಎಸ್‌ಎನ್‌ಎಲ್ ಕಛೇರಿಯನ್ನು ಸಂಪರ್ಕಿಸುತ್ತಿರಬೇಕು ಅಥವಾ ಇಂಟರ್‌ನೆಟ್‌ನಲ್ಲಿ ಬಿಎಸ್‌ಎನ್‌ಎಲ್ ವೆಬ್‌ಸೈಟ್‌ನಲ್ಲಿ ಮಾಹಿತಿ ಪಡೆಯಬಹುದು. ಇನ್ನೂ ಸರಳ ವಿಧಾನವೆಂದರೆ, 1500 ಎಂಬ ದೂರವಾಣಿಗೆ ಕರೆ ಮಾಡಿ ವಿಚಾರಿಸಬಹುದು. ಈ ಸಂಖ್ಯೆಗೆ ಯಾವುದೇ ಕರೆ ವೆಚ್ಚ ಇಲ್ಲ.
ಈ ಕರೆ, ಕರೆ ವೆಚ್ಚ, ಪಲ್ಸ್ ದರ ಇಂತಹ ಮೂಲಭೂತ ಮಾಹಿತಿಗಳನ್ನು ನಾವು ಅರಿತುಕೊಳ್ಳಬೇಕು. ಎಲ್ಲಿಗೆ ಕರೆ ಮಾಡಿದರೆ ಎಷ್ಟು ದರ ಬಿದ್ದೀತು ಎಂಬ ಅರಿವಾದರೂ ನಮ್ಮಲ್ಲಿರಬೇಕು. ಒಟ್ಟಾರೆ ಕರೆ ಮಾಡುತ್ತ ಹೋಗುವ ಬದಲು, ಬಿಎಸ್‌ಎನ್‌ಎಲ್‌ನ 1962ಗೆ ಡಯಲ್ ಮಾಡಿ ನಮ್ಮ ಬಿಲ್ ಮೀಟರ್ ಎಷ್ಟಾಗಿದೆ ಎಂಬ ದಾಖಲೆಯನ್ನು ಪಡೆಯಬಹುದು. ಇದೂ ಉಚಿತ ದೂರವಾಣಿ.
ರೈತನ ಬದುಕಿನಲ್ಲಿ ಇಂತಹ ಅರಿವು, ಉಳಿತಾಯಗಳು ಅವನ ಅಭಿವೃದ್ಧಿಗೆ ಪೂರಕವಾಗಬಹುದೇ? ಚರ್ಚೆಯಾಗಲಿ.

-ಮಾವೆಂಸ 
ಇಲ್ಲಿನ ಮಾಹಿತಿಗಳ ಬಗ್ಗೆ  ವಿವರ ಬೇಕಿದ್ದರೆ ಸಂಜೆ 8ರ ನಂತರ ಸಂಪರ್ಕಿಸಬಹುದು. ಫೋನ್-08183 236068, 296543, 9886407592  ಇ ಮೇಲ್- mavemsa@gmail.com 

ಸೋಮವಾರ, ಮಾರ್ಚ್ 9, 2009

ಕಿರಿಕಿರಿ ಕರೆ, ಎಸ್‌ಎಂಎಸ್ ಟ್ರಾಯ್ ನಿಯಮಕ್ಕೆ ತಿದ್ದುಪಡಿ

ಮೊಬೈಲ್ ಟಾಕ್ -5
 
ಟೆಲಿಕಾಂ ರೆಗ್ಯೂಲೇಟರಿ ಅಥಾರಿಟಿ - ಟ್ರಾಯ್ ಕಳೆದ ವರ್ಷ ‘ಡು ನಾಟ್ ಡಿಸ್ಟರ್ಬ್’ ಎಂಬ ವಿಶಿಷ್ಟ ಸೌಲಭ್ಯವನ್ನು ಜಾರಿಗೊಳಿಸಿ ಮೊಬೈಲ್ ಕಂಪನಿಗಳಿಗೆ ಆದೇಶಿಸಿತ್ತು. ಅಗತ್ಯವಿರುವ ಚಂದಾದಾರರು ಈ ಸೌಲಭ್ಯವನ್ನು ಬಳಸಿಕೊಂಡು ಎನ್.ಡಿ.ಎನ್.ಸಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡರೆ, ನಂತರ ಆ ಚಂದಾದಾರರಿಗೆ ಯಾವುದೇ ವ್ಯಾಪಾರಿ, ಜಾಹೀರಾತು ಕರೆ ಅಥವಾ ಎಸ್.ಎಂ.ಎಸ್. ಮಾಡುವಂತಿಲ್ಲ. ಈ ಯೋಜನೆ ಮೇಲ್ನೋಟಕ್ಕೆ ಚಂದ ಎನ್ನಿಸಿತ್ತಾದರೂ ಹಲವು ಗ್ರಾಹಕರಿಗೆ ಅನಗತ್ಯ ಜಾಹೀರಾತು ಕರೆ, ಮುಖ್ಯವಾಗಿ ಕಿರಿಕಿರಿಯ ಎಸ್‌ಎಂಎಸ್ ನಿಲ್ಲದ ಉದಾಹರಣೆಗಳಿವೆ. 
ಈ ರೀತಿಯ ಪ್ರಕರಣಗಳಲ್ಲಿ ಇನ್ನೊಂದು ರೀತಿಯ ಸಮಸ್ಯೆಯನ್ನು ಟ್ರಾಯ್ ಗಮನಿಸಿದೆ. ಚಂದಾದಾರ ಎನ್‌ಡಿಎನ್‌ಸಿ ನೋಂದಣಿಯ ನಂತರವೂ ಅನಗತ್ಯ ಕರೆ ಬಂದಲ್ಲಿ ಗ್ರಾಹಕ ಸೇವಾದಾತರಲ್ಲಿ ದೂರು ಸಲ್ಲಿಸುತ್ತಾನೆ ಎಂದುಕೊಂಡರೆ ಮೊಬೈಲ್ ಕಂಪನಿ ಎಷ್ಟು ದಿನ ಕಳೆದರೂ ಇತ್ಯರ್ಥಗೊಳಿಸದೆ ‘ನ್ಯಾಯ’ವನ್ನು ಕೊಲ್ಲುವ ಬುದ್ಧಿವಂತಿಕೆ ತೋರಿಸುತ್ತಿದ್ದವು. 
ಇದೀಗ ಟ್ರಾಯ್ ‘ಟೆಲಿಕಾಂ ಅನ್‌ಸಾಲಿಸಿಟೆಡ್ ಕಮರ್ಷಿಯಲ್ ಕಮ್ಯುನಿಕೇಷನ್(ಯುಸಿಸಿ) ಎರಡನೇ ತಿದ್ದುಪಡಿ - ೨೦೦೮’ ನಿಯಮಗಳನ್ನು ಜಾರಿಗೊಳಿಸಿದೆ. ಇನ್ನು ಮುಂದೆ ಮೊಬೈಲ್ ಕಂಪನಿ ದೂರು ಸ್ವೀಕರಿಸಿದ ೨೮ ದಿನಗಳಲ್ಲಿ ತನ್ನ ತನಿಖೆಯನ್ನು ಪೂರ್ಣಗೊಳಿಸಲೇಬೇಕು. 
ಒಂದೊಮ್ಮೆ ಈ ಗಡುವಿನಲ್ಲಿ ದೂರನ್ನು ನಿರ್ವಹಿಸದಿದ್ದರೆ, ಮೊದಲ ಸಂದರ್ಭದಲ್ಲಿ ಗರಿಷ್ಟ ೫ ಸಾವಿರ ರೂ. ದಂಡವನ್ನು ಸೇವಾದಾತ ಅರ್ಜಿದಾರನಿಗೆ ಕೊಡಬೇಕಾಗುತ್ತದೆ. ನಿರ್ಲಕ್ಷ್ಯ ಮುಂದುವರಿದಲ್ಲಿ ದಂಡದ ಮೊತ್ತ ೨೦ ಸಾವರದವರೆಗೆ ಹೆಚ್ಚಬಹುದು. 
ಅಷ್ಟೇ ಅಲ್ಲ, ಇನ್ನು ಮುಂದೆ ಪ್ರತಿ ಹೊಸ ಚಂದಾದಾರನಿಗೆ ಆಕ್ಟಿವೇಷನ್ ವೇಳೆಯಲ್ಲಿಯೇ ‘ಡು ನಾಟ್ ಕಾಲ್ ರಿಜಿಸ್ಟ್ರಿ’ಗೆ ನೋಂದಣಿ ಆಗಬೇಕೆ ಎಂಬ ವಿಚಾರಣೆಯನ್ನು ಸಿಮ್‌ದಾತರು ಮಾಡಲೇಬೇಕು. ಇನ್ನಷ್ಟು ವಿವರ ಬೇಕೆನಿಸಿದರೆ trai.gov.inವೆಬ್‌ಸೈಟ್‌ನಲ್ಲಿ ಇಣುಕಬಹುದು.
ಕುತೂಹಲವಿದೆ, ಮೊಬೈಲ್ ಕಂಪನಿಗಳು ಈ ತಿದ್ದುಪಡಿಗಳನ್ನು ಮೀರಲು ಯಾವ ರಂಗೋಲಿ ಕೆಳಗೆ ನುಸುಳುತ್ತವೆ?

ಮಾವೆಂಸ

mavemsa@gmail.com

 
200812023996