ಗುರುವಾರ, ನವೆಂಬರ್ 27, 2008

ದಶಕದ ದಾರಿ ದಾಟಿದ ಟ್ರಾಯ್ನಂಬಿ,ಭಾರತದ ಕೆಲವು ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಕೇಂದ್ರ ವಿದ್ಯುತ್ ಕಾಯ್ದೆಯಡಿ ಜಾರಿಗೆ ಬಂದಿರುವ ವಿದ್ಯುತ್ ನಿಯಂತ್ರಣ ಆಯೋಗವೆಂಬ ಸ್ವಾಯತ್ತ ವ್ಯವಸ್ಥೆಯನ್ನು ಹೆಸರಿಸಬಹುದು. ಕರ್ನಾಟಕದಲ್ಲಿಯೇ ಕೆಇಆರ್‌ಸಿ ತನ್ನ     ನಿಷ್ಪಕ್ಷಪಾತ ವರ್ತನೆಯಿಂದ ದೇಶದಲ್ಲಿ ಹೆಸರುವಾಸಿ. ಎಸ್ಕಾಂ, ಕೆಪಿಟಿಸಿಎಲ್‌ನ ಅಂಧಾದುಂಧಿಗೆ ಕಡಿವಾಣ ಹಾಕಿ, ಬಳಕೆದಾರರ ಪರ ನಿಂತಿರುವುದರಿಂದ ಕೆಇಆರ್‌ಸಿ ಎಲ್ಲರಿಗೂ ತಿಳಿದಿದೆ. ಇದೇ ರಿತಿ ದೂರವಾಣಿ ಕ್ಷೇತ್ರದಲ್ಲಿ ನಿಯಮಗಳನ್ನು ರೂಪಿಸುವ ಜವಾಬ್ದಾರಿ ಭಾರತೀಯ ಟೆಲಿಕಾಂ ನಿಯಂತ್ರಣ ಆಯೋಗದ್ದು. ಪುಟ್ಟದಾಗಿ ಕರೆಯುವುದಾದರೆ, ಟ್ರಾಯ್.

ಇದೀಗ ಟ್ರಾಯ್ ಅಸ್ಥಿತ್ವಕ್ಕೆ ಬಂದು ಒಂದು ದಶಕ ಸಂದಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಆಕ್ಟ್‌ನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು ೧೯೯೭ರಲ್ಲಿ. ಅದೇ ವರ್ಷ ನೀತಿ ನಿರೂಪಕ ಸಂಸ್ಥೆಯಾಗಿ ಟ್ರಾಯ್‌ನ್ನು ಸ್ಥಾಪಿಸಲಾಯಿತು. ದೂರವಾಣಿ ಕ್ಷೇತ್ರದ ಮೇಲ್ವಿಚಾರಣೆ ಜವಾಬ್ದಾರಿ ಹೊತ್ತ ಟ್ರಾಯ್ ೨೦೦೪ರ ಜನವರಿ ಒಂಭತ್ತರಲ್ಲಿ ಸರ್ಕಾರ ತಂದ ಇನ್ನೊಂದು  ಪ್ರಕಟನೆಯ ಮೂಲಕ ಕೇಬಲ್ ಟೆಲಿವಿಷನ್ ಕ್ಷೇತ್ರವನ್ನು ನಿರ್ವಹಿಸುವ ಹೆಚ್ಚುವರಿ ಕೆಲಸ ಪಡೆಯಿತು.

೧೯೯೭ರ ಅವಧಿ ಒಂದು ಪರ್ವ ಕಾಲ. ಸರ್ಕಾರ ದೂರವಾಣಿ ಕ್ಷೇತ್ರವನ್ನು ಖಾಸಗಿಯವರಿಗೆ ತೆರೆದಿತ್ತು. ಸರ್ಕಾರದ ಮೇಲೆ ಖಾಸಗಿ ಲಾಬಿ ಚಾಲೂವಿದ್ದುದರಿಂದ ಬಳಕೆದಾರರಿಗೆ ಅನ್ಯಾಯವಾಗುತ್ತಿತ್ತು. ಸಕಾರ ಜಾಣ್ಮೆಯಿಂದ ಜವಾಬ್ದಾರಿಗಳನ್ನು ಟ್ರಾಯ್‌ಗೆ        ವಹಿಸಿದ್ದುದರಿಂದ ಬೇಕಾಬಿಟ್ಟಿ ವರ್ತನೆಗಳಿಗೆ ಕಡಿವಾಣ ಹಾಕಿದಂತಾಯಿತು. ಟ್ರಾಯ್ ಕ್ರಮಗಳಿಂದ ಬಳಕೆದಾರರಿಗೆ ವೆಚ್ಚ ತಗ್ಗಿತು ಮತ್ತು ಟೆಲಿಕಾಂ ಕ್ಷೇತ್ರ ಅಬ್ಬಾ ಎನ್ನುವಂತೆ ಬೆಳೆಯಿತು.

ಬೇಕಿದ್ದರೆ ಅಂಕಿಅಂಶಗಳನ್ನು ಗಮನಿಸಿ. ೧೯೯೭ರಲ್ಲಿ ೧೪.೫೪ ಮಿಲಿಯನ್ ಸ್ಥಿರ ದೂರವಾಣಿ ಗ್ರಾಹಕರಿದ್ದರೆ, ಈಗ ೪೦.೭೫    ಮಿಲಿಯನ್. ಮೊಬೈಲ್ ಕ್ಷೇತ್ರ ೦.೩೪ ಮಿಲಿಯನ್‌ನಿಂದ ೨೦೫.೮೬ ಮಿಲಿಯನ್‌ಗೆ ಚಂದಾದಾರರನ್ನು ಹೆಚ್ಚಿಸಿಕೊಂಡಿದೆ. ಇಂಟರ್ನೆಟ್ ಬಳಕೆದಾರರೂ ಅಷ್ಟೇ, ೦.೦೯ ಮಿಲಿಯನ್‌ನಿಂದ ೪೦.೫೭ ಮಿಲಿಯನ್‌ಗೆ ಹೆಚ್ಚಿದ್ದಾರೆ.

ಸ್ವಾರಸ್ಯವೆಂದರೆ, ದೂರವಾಣಿ ಕರೆ ದರಗಳು ತೀವ್ರವಾಗಿ ಇಳಿದಿವೆ. ದಶಕದ ಹಿಂದೆ ಒಳಬರುವ ಕರೆಗೂ ವೆಚ್ಚವಿತ್ತು. ಆ ಲೆಕ್ಕದಲ್ಲಿ ಒಂದು ನಿಮಿಷದ ಸ್ಥಳೀಯ ಕರೆಗೆ ೧೬.೮೦ ರೂ. ಖರ್ಚು. ಈಗ ಸರಾಸರಿ ಒಂದು ರೂಪಾಯಿ! ಹಾಗೆಯೇ ಎಸ್‌ಟಿಡಿ ೩೦ ರೂ.ನಿಂದ ೨.೪ ರೂ.ಗೆ, ಐಎಸ್‌ಡಿ ೭೫ ರೂ.ನಿಂದ ೬.೪೦ ರೂ.ಗೆ ಇಳಿದಿದೆ. ಟೆಲಿಕಾಂ ಕ್ಷೇತ್ರದ ಬೆಳವಣಿಗೆಯನ್ನು ಇಂತಹ ಹಲವು ಅಂಕಿಅಂಶಗಳಿಂದ ಸಾಕ್ಷೀಕರಿಸಬಹುದು. ಮುಖ್ಯವಾಗಿ, ದೇಶದ ಟೆಲಿ ಡೆನ್ಸಿಟಿ ೧೯೯೭ರಲ್ಲಿ ಕೇವಲ ೧.೫೬ ಶೇ.ಇದ್ದರೆ ಈಗ ೪೦.೫೭ ಶೇ.ಕ್ಕೆ ಏರಿದೆ. ಅಂದರೆ ಇನ್ನೂ ೫೯ ಶೇ.ದಷ್ಟು ವ್ಯಾಪಿಸಬೇಕಾಗಿರುವ ಅಂಶವೂ ಟ್ರಾಯ್‌ನ ಅಗತ್ಯವನ್ನು ಇನ್ನಷ್ಟು ದಟ್ಟಗೊಳಿಸುತ್ತದೆ.

ಟ್ರಾಯ್ ಯಾವುದೇ ನಿಯಮವನ್ನು ಏಕಾಏಕಿ ಜಾರಿಗೆ ತರುತ್ತಿಲ್ಲ. ತನ್ನ ಬೌದ್ಧಿಕ ಹಾಗೂ ಕಾನೂನು ಸಂಪನ್ಮೂಲಗಳಿಂದ ಕರಡು ನಿಯಮಾವಳಿಗಳನ್ನು ರೂಪಿಸುತ್ತದೆ. ಅದನ್ನು ಸಂಬಂಧಿಸಿದ ಎಲ್ಲರಿಗೂ ಕಳಿಸಿ ಅವರ ಅಭಿಪ್ರಾಯ ಕೇಳುತ್ತದೆ. ಅವರಲ್ಲಿ ಸೇವಾದಾತರಿಂದ ಹಿಡಿದು ಪ್ರಾತಿನಿಧಿಕ ಗ್ರಾಹಕ ಸಂಘಟನೆಗಳವರೆಗೆ ಎಲ್ಲರೂ ಇರುತ್ತಾರೆ. ಇವರ ಪ್ರತಿಕ್ರಿಯೆಗಳನ್ನು ಆಧರಿಸಿ ಅಂತಿಮ ನಿಯಮ ರೂಪಿಸುವುದರಿಂದ ಪರಿಣಾಮಕಾರಿ ಫಲಿತಾಂಶ ಸಾಧ್ಯವಾಗಿದೆ. ಕೇವಲ ೧೬೦ ಸಿಬ್ಬಂದಿಯೊಂದಿಗೆ ಕೆಲಸ ಮಾಡುವ ಟ್ರಾಯ್‌ನ ಗುಣಮಟ್ಟಕ್ಕೆ ನಮ್ಮ ದೇಶದ ಬಿಐಎಸ್ ೨೦೦೪ರ ಡಿಸೆಂಬರ್‌ನಲ್ಲಿಯೇ ಐಎಸ್‌ಓ ೯೦೦೧ : ೨೦೦೦ ಎಂಬ ಗುಣಮಟ್ಟದ ಪ್ರಶಸ್ತಿ ನೀಡಿದೆ!

ಸೇವಾದಾತರ ಕಾರ್ಯಕ್ಷಮತೆ ಹೆಚ್ಚಿಸುವುದು, ಚಂದಾ ದರ ನಿಗದಿಪಡಿಸುವುದು, ಸೇವಾ ಗುಣಮಟ್ಟವನ್ನು ನಿಗದಿಪಡಿಸುವುದು, ಟೆಲಿ ಸಂಪರ್ಕವನ್ನು ಉತ್ತೇಜಿಸುವುದು, ಗ್ರಾಮೀಣ ಭಾರತವನ್ನು ಟೆಲಿಕಾಂ ವ್ಯಾಪ್ತಿಗೆ ತರುವ ನೀತಿ, ಕೇಬಲ್ - ಇಂಟರ್ನೆಟ್- ಡಿಟಿಹೆಚ್ ಸೇವೆಗಳನ್ನು ನೇರ್ಪುಗೊಳಿಸುವುದು ಮುಂತಾದ ಟೆಲಿಕಾಂ ವಲಯದ ಎಲ್ಲ ಕ್ಷೇತ್ರಗಳು ಟ್ರಾಯ್ ಕೆಲಸದ ವ್ಯಾಪ್ತಿಗೆ ಸೇರುತ್ತವೆ.

ಈ ಹತ್ತು ವರ್ಷಗಳಲ್ಲಿ ಟ್ರಾಯ್ ಇಟ್ಟ ಹೆಜ್ಜೆ ನೂರಾರು. ಟ್ರಾಯ್ ರೂಪಿಸಿದ ಮೊಬೈಲ್ ನಂಬರ್ ಪೋರ್ಟಬಿಲಿಟಿ (ಎಂಎನ್‌ಪಿ) ಸದ್ಯದಲ್ಲಿಯೇ ಜಾರಿಗೊಳ್ಳಲಿದೆ. ಅದರ ಪ್ರಕಾರ, ನಾವು ಹಳೆಯ ಮೊಬೈಲ್ ನಂಬರ್‌ನ್ನು ಉಳಿಸಿಕೊಂಡೇ ಬೇರೆ ಸೇವಾದಾತರ ಹೊಸ ಸಿಮ್ ಬಳಸಬಹುದು. ಇದು ಟೆಲಿಕಾಂ ಕ್ಷೇತ್ರದ ಕ್ರಾಂತಿಕಾರಕ ಬದಲಾವಣೆಗೆ ಹರಿಕಾರವಾದೀತು. ಗ್ರಾಹಕರಿಗೆ ಕಿರಿಕಿರಿಯೆನ್ನಿಸುವ ಟೆಲಿ ಮಾರ್ಕೆಟಿಂಗ್ ಕರೆಗಳಿಂದ ರಕ್ಷಿಸಲು ಟ್ರಾಯ್ ‘ನ್ಯಾಷನಲ್ ಡು ನಾಟ್ ಕಾಲ್’ ನೊಂದಣಿಯನ್ನು ಜಾರಿಗೆ ತಂದಿರುವುದು ಸ್ವಾಗತಾರ್ಹ ಕ್ರಮ. ನೊಂದಾಯಿತ ಚಂದಾದಾರನಿಗೆ ಅಪ್ಪಿತಪ್ಪಿಯೂ ಟೆಲಿ ಮಾರ್ಕೆಟಿಂಗ್ ಕರೆ, ಸಂದೇಶ ಬರುವುದಿಲ್ಲ. ಬಂದಲ್ಲಿ ಪ್ರತಿ ಕರೆಗೆ ೫೦೦ ರೂ. ದಂಡದ ದುಬಾರಿ ಶಿಕ್ಷೆ ಇಟ್ಟಿರುವುದು ಟ್ರಾಯ್ ಜಾಣ್ಮೆಗೆ ಸಾಕ್ಷಿ. ಹಾಗೆಯೇ ವ್ಯಾಲಿಡಿಟಿ ಮೀರಿ ವ್ಯರ್ಥವಾಗುವ ಬಳಕೆದಾರನ ಟಾಕ್‌ಟೈಮ್, ಚಂದಾದಾರ ಹಿಂಪಡೆಯದ ಹಣ ಈ  ಮುನ್ನ ಮೊಬೈಲ್ ಕಂಪನಿಗಳಿಗೇ ಲಾಭವಾಗುತ್ತಿತ್ತು. ಈ    ನಿಟ್ಟಿನಲ್ಲಿಯೂ ಯೋಚಿಸಿರುವ ಟ್ರಾಯ್ ‘ಟೆಲಿಕಮ್ಯುನಿಕೇಷನ್ ಕನ್ಸೂಮರ್ ಎಜುಕೇಷನ್ ಅಂಡ್ ಪ್ರೊಟೆಕ್ಷನ್ ಫಂಡ್’ನ್ನು ಇದೇ ಜೂನ್‌ನಲ್ಲಿ ಜಾರಿಗೆ ತಂದಿದೆ. ಮೇಲಿನ ಮಾದರಿಯ ಹಣವೆಲ್ಲ ಈ ನಿಧಿಗೆ ಸೇರ್ಪಡೆಯಾಗುತ್ತದೆ ಮತ್ತು ಈ ಆದಾಯದಿಂದ ಟ್ರಾಯ್ ಗ್ರಾಹಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ.

ಅತ್ಯಂತ ಕಡಿಮೆ ದರದಲ್ಲಿ ಕೇಬಲ್ ಸಂಪರ್ಕ ಕಲ್ಪಿಸುವ ಯೋಜನೆ ‘ಕ್ಯಾಸ್’ ಟ್ರಾಯ್‌ನ ಇನ್ನೊಂದು ಗುರುತರ ಹೆಜ್ಜೆ. ಪುಟ್ಟ ಡಿಜಿಟಲ್ ಸೆಟ್‌ಟಾಪ್ ಬಾಕ್ಸ್ ಮೂಲಕ ವೀಕ್ಷಕ ತನಗೆ ಬೇಕಾದ ಚಾನೆಲ್ ನೋಡುವ ಈ ವ್ಯವಸ್ಥೆ ಭವಿಷ್ಯದಲ್ಲಿ ಆಕರ್ಷಣೀಯ. ಮುಖ್ಯವಾಗಿ, ದೇಶದಲ್ಲಿ ವ್ಯಾಪಕವಾಗುತ್ತಿರುವ ಕೇಬಲ್ ಮಾಫಿಯಾಗೆ ಇದು ಸಮರ್ಥ ಉತ್ತರವೂ ಹೌದು.

ಗ್ರಾಹಕರ ದೂರು ನಿರ್ವಹಣೆಗೆ ಸ್ಪಷ್ಟ ನಿಯಮಗಳನ್ನು ಟ್ರಾಯ್ ರೂಪಿಸಿದೆ. ಉಚಿತ ಕಾಲ್‌ಸೆಂಟರ್, ನೋಡಲ್ ಆಫೀಸರ್,     ಅಪಲೇಟ್ ಅಥಾರಿಟಿಗಳ ಈ ನಿರೂಪಣೆ ಜನಪರವಾಗಿದೆ. ದೇಶದ ಹೆಚ್ಚು ಮಂದಿ ಮೊಬೈಲ್ ಗ್ರಾಹಕರು ಅನಕ್ಷರಸ್ಥರೂ, ಕೂಲಿ      ಕಾರ್ಮಿಕರೂ ಆಗಿರುವುದರಿಂದ ಟ್ರಾಯ್ ಅವರ ಪರ ನಿಲ್ಲದಿದ್ದರೆ ಅನಾಹುತವೇ ಆದೀತು. ಖಾಸಗಿ ಮೊಬೈಲ್ ಸೇವಾದಾತರ ಲಾಭಕೋರತನಕ್ಕೆ ಕಡಿವಾಣ ಹಾಕಲೆಂದೇ ಟ್ರಾಯ್ ಕಾಲಕಾಲಕ್ಕೆ ನಿರ್ದೇಶನಗಳನ್ನು ಜಾರಿಗೆ ತಂದಿದೆ. ಕೆಲವನ್ನು                ನೆನಪಿಸುವುದಾದರೆ, ಬಾಕಿ ಉಳಿದಿರುವ ಟಾಕ್‌ಟೈಮ್ ಗ್ರೇಸ್ ಅವಧಿಯವರೆಗೆ ಮರುಭರ್ತಿಗೆ ಇರುವುದು, ಮೌಲ್ಯವರ್ಧಿತ ಸೇವೆಗೆ ಮುಂಚಿತ ಗ್ರಾಹಕ ಒಪ್ಪಿಗೆ ಅತ್ಯಗತ್ಯ, ಪ್ಲಾನ್ ಬದಲಾವಣೆಗೆ ಶುಲ್ಕ ವಿಧಿಸುವಂತಿಲ್ಲ, ಆರು ತಿಂಗಳವರೆಗೆ ಟ್ಯಾರಿಫ್ ದರ ಏರಿಸಲಾಗದು, ಗುಪ್ತ ಶುಲ್ಕ ಹೇರುವಂತಿಲ್ಲ ಎಂಬಿತ್ಯಾದಿ ನಿರ್ದೇಶನಗಳು ಪ್ರಭಾವಯುತ.

ಟ್ರಾಯ್‌ಗೆ ಆಕ್ಷೇಪಗಳೂ ಇಲ್ಲದಿಲ್ಲ. ಟ್ರಾಯ್ ಕಾಯ್ದೆ ೧೯೯೭ ಮತ್ತು ಅದರ ೨೦೦೦ದ ತಿದ್ದುಪಡಿ ಕಾಯ್ದೆಗಳ ಸೆಕ್ಷನ್ ೧೩ ಟ್ರಾಯ್‌ಗೆ ಅತಿ ವಿಸ್ತಾರದ ಅಧಿಕಾರವನ್ನು ನೀಡಿದೆ. ಟ್ರಾಯ್ ಅದನ್ನು ಸಮರ್ಥವಾಗಿ ಬಳಸಿಲ್ಲ ಎಂಬುದು ಒಂದು ವಲಯದ ದೂರು. ಟ್ರಾಯ್ ನೀತಿ- ನಿರ್ದೇಶನಗಳನ್ನು ಹೊರಡಿಸಿದೆಯಾದರೂ ಅದರ ಜಾರಿಗೆ ಅಷ್ಟೇ ಪ್ರಮಾಣದ ಗಮನ ಕೊಟ್ಟಿಲ್ಲ. ಹಾಗಾಗಿ ಅದರ ಲಾಭ ಬಳಕೆದಾರರನ್ನು ತಲುಪಿಲ್ಲ ಎನ್ನಲಾಗುತ್ತಿದೆ. ಬಿಎಸ್‌ಎನ್‌ಎಲ್ ಈಗಲೂ ಎರಡು ತಿಂಗಳಿಗೆ ಬಿಲ್ ನೀಡುವುದು, ಸಿಮ್ ಆಕ್ಟಿವೇಟ್ ಆದ ನಂತರದ ವಾರದಲ್ಲಿ ಟ್ಯಾರಿಫ್ ವಿವರದ ಪ್ರತಿ ಬಳಕೆದಾರನಿಗೆ ಲಬಿಸದಿರುವುದು, ಇವತ್ತಿಗೂ ಸೇವಾ ಗುಣಮಟ್ಟದ ಮಾನದಂಡ ಜಾರಿ ಆಗದ್ದು, ಡಿಟಿಎಚ್ ಸೇವೆಗೆ ಟ್ಯಾರಿಫ್ ನಿಗದಿ ಪಡಿಸದಿರುವುದು, ಈ ಕ್ಷೇತ್ರಗಳಲ್ಲಿ ದೂರು ನಿರ್ವಹಣಾ    ವ್ಯವಸ್ಥೆಯನ್ನು ಸೂಚಿಸದಿರುವುದು....  ಇವನ್ನು ಟೆಲಿಕಾಂ ತಜ್ಞರು ಉದಾಹರಿಸುತ್ತಾರೆ.

ನಿಜಕ್ಕೂ ಟ್ರಾಯ್ ತನ್ನ ನಿರ್ದೇಶನಗಳ ಜಾರಿಯತ್ತ ಒಂದು ನೋಟ ಹರಿಸಬೇಕಾಗಿದೆ. ಇಂದು ಟ್ರಾಯ್‌ನಲ್ಲಿ ಬಳಕೆದಾರನ ವೈಯುಕ್ತಿಕ ದೂರಿಗೆ ಪರಿಹಾರದ ವ್ಯವಸ್ಥೆ ಇಲ್ಲ. ಟೆಲಿಕಾಂ ಕಂಪನಿಗಳು ನಾಮಕೇವಾಸ್ತೆ ಕಾಲ್‌ಸೆಂಟರ್ ಹೊಂದಿರುವವೇ ವಿನಃ ದೂರು ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ. ಕೇವಲ ಇಂಗ್ಲೀಷ್‌ನಲ್ಲಿ ಮುಂದಿನ ಹಂತಗಳಲ್ಲಿ ವ್ಯವಹರಿಸಬೇಕಾದ ಪದ್ಧತಿ        ಸಾಮಾನ್ಯರನ್ನು ದೂರು ಪರಿಹಾರದಿಂದ ವಂಚಿತಗೊಳಿಸಿದೆ.

ಈ ನಿಟ್ಟಿನಲ್ಲಿ ಟ್ರಾಯ್ ‘ಟೆಲಿಕಾಂ ಒಂಬುಡ್ಸ್‌ಮನ್’ನ ನೀತಿ- ನಿಯಮ ನಿರೂಪಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಅದರ ಜಾರಿಯಿಂದ ಟ್ರಾಯ್‌ನ ಕೆಲಸಗಳ ಲಾಭ ಸುಲಭದಲ್ಲಿ ಗ್ರಾಹಕರಿಗೆ ಲಭಿಸಬಹುದಿತ್ತು. ಆದರೆ ಕೇಂದ್ರದ ಮೇಲೆ ಖಾಸಗಿ ಮೊಬೈಲ್ ಲಾಬಿಯಿಂದಾಗಿ ಅದು ಜಾರಿಗೆ ಬಂದೇ ಇಲ್ಲ. ಟ್ರಾಯ್‌ಗೆ ಜಾರಿಗೆ ಒತ್ತಾಯಿಸುವ ಅಧಿಕಾರ ಇಲ್ಲದಿರುವುದು ದೊಡ್ಡ ಕೊರತೆ.

ಗ್ರಾಮೀಣ ಭಾಗದಲ್ಲಿ ಟೆಲಿಕಾಂ ಸೇವೆ ವಿಸ್ತರಿಸಲು ಟ್ರಾಯ್ ಉತ್ತೇಜಿಸದಿರುವುದು ಎದ್ದು ಕಾಣುತ್ತದೆ. ಹಾಗಾಗೇ ನಗರಗಳಲ್ಲಿ ಶೇ. ೫೦ರ ಟೆಲಿ ಡೆನ್ಸಿಟಿ ಇದ್ದರೆ, ಹಳ್ಳಿಗಳ ಶೇ. ೫ರಷ್ಟು ಜನರನ್ನು ಮಾತ್ರ ಫೋನ್ ತಲುಪಿದೆ. ಈ ಮಧ್ಯೆ ಟ್ರಾಯ್ ಎಡಿಸಿ ಶುಲ್ಕವನ್ನು ಕಡಿತಗೊಳಿಸಿರುವುದು ಅಷ್ಟರಮಟ್ಟಿಗೆ ಗ್ರಾಮ್ಯ ಪ್ರದೇಶಕ್ಕೆ ದೂರವಾಣಿ ನೀಡಿಕೆಗೆ ಭಂಗ ತಂದಿದೆ. ಯುಎಸ್‌ಓ ನಿಧಿಯ ಸಬ್ಸಿಡಿಯಿಂದ ಗ್ರಾಮ ಭಾಗದಲ್ಲಿ ಮೊಬೈಲ್ ಟವರ್‌ಗಳನ್ನು ನಿರ್ಮಿಸಬಹುದಾಗಿದ್ದು, ಇದರಿಂದ ಬದಲಾವಣೆ ಸಾಧ್ಯ ಎಂಬುದು ಟ್ರಾಯ್ ಉತ್ಸಾಹ.

ಕಳೆದ ದಶಕವನ್ನು ಟ್ರಾಯ್ ತನ್ನ ಪ್ರಾಥಮಿಕ ಹೆಜ್ಜೆ ಎಂದುಕೊಂಡರೆ ಸರಿಹೋದೀತು. ಬರುವ ದಿನಗಳಲ್ಲಿ ಪ್ರಾಯೋಗಿಕ       ಫಲಿತಾಂಶಕ್ಕೆ ಆದ್ಯತೆ ನೀಡಬೇಕು. ಅದರ ಗುರಿಗಳಲ್ಲಿ, ೨೦೧೦ರ ವೇಳೆಗೆ ೫೦೦ ಮಿಲಿಯನ್ ಗ್ರಾಹಕರನ್ನು ಸೃಷ್ಟಿಸುವುದು ಸೇರಿದೆ. ಸೇವಾದಾತರು ತಮ್ಮ ಚಂದಾದಾರರನ್ನು ಹೆಚ್ಚಿಸಲು ಹಿಂದೆ ಮುಂದೆ ನೋಡರು. ಆ ಮಟ್ಟಕ್ಕೆ ತಕ್ಕದಾದ ತಾಂತ್ರಿಕತೆ, ಸೇವಾ ಗುಣಮಟ್ಟದ ಪಾಲನೆಗೆ ಟ್ರಾಯ್ ಕಟಿಬದ್ಧವಾದರೆ ಮಾತ್ರ ಸಾರ್ಥಕತೆ.

 ಒಂದಂತೂ ನಿಜ, ಟ್ರಾಯ್‌ನ ಕ್ರಮಗಳಿಂದ ಮೊಬೈಲ್ ದರಗಳಲ್ಲಿ ದಿನೇದಿನೆ ಇಳಿಕೆ ಕಾಣುತ್ತಿದೆ. ಟ್ರಾಯ್‌ನ ಅಧ್ಯಕ್ಷ ಸೃಪೇಂದ್ರ ಮಿಶ್ರಾ ಒಂದೇ ಮಾತು ಹೇಳುತ್ತಾರೆ, "ಖಾಸಗೀಕರಣದ ದಿನಗಳಲ್ಲಿ ಸರ್ಕಾರದ ಆರೋಗ್ಯಕರ ನೀತಿ ಇರುವುದರಿಂದ ಟ್ರಾಯ್      ಜನಪರವಾಗಿ ಕೆಲಸ ಮಾಡಲು, ಖಾಸಗೀಕರನದ ಲಾಭವನ್ನು ಜನರಿಗೆ ತಲುಪಿಸಲು ಸಾಧ್ಯವಾಗಿದೆ." ಟ್ರಾಯ್‌ನ ಕಳೆದ ದಶಕದ   ಅನುಭವ ಬರುವ ದಿನಗಳನ್ನು ಕುತೂಹಲದಿಂದ ಕಾಯುವಂತೆ ಮಾಡಿದೆ. ಹೆಚ್ಚಿನ ವಿವರಗಳಿಗೆ www.trai.gov.in  ವೆಬ್‌ಸೈಟ್‌ನಲ್ಲಿ ಇಣುಕಬಹುದು. 

-ಮಾವೆಂಸ

ಮಂಗಳವಾರ, ನವೆಂಬರ್ 25, 2008

ಇದು ನಾಯಿ ಸ್ಪೆಷಲ್!!!!


ಗೆಳೆಯ ಶ್ರೀಪಾದ್‌ರಾವ್ ನಂದೀತಳೆ ವೃತ್ತಿಯಲ್ಲಿ ಪಶುವೈದ್ಯರು. ಸಹಜವಾಗಿ ಅವರಲ್ಲಿ ಪ್ರಾಣಿಗಳ ಕುರಿತು ಹಲವು ಹತ್ತು ಮಾಹಿತಿಗಳ ಸಂಗ್ರಹವಿದೆ. ಮುಖ್ಯವಾಗಿ ನಾಯಿಗಳ ಕುರಿತ ಅವರ ಪ್ರೀತಿ, ಅಧ್ಯಯನ, ಚಿಕಿತ್ಸೆ ಪರಿಣತಿ ಹೆಸರು ವಾಸಿ. ಅವರು ಸಂಗ್ರಹಿಸಿದ ಒಂದು ಸ್ವಾರಸ್ಯಕರ ಮಾಹಿತಿ ಗುಚ್ಛ ನಿಮ್ಮೆದುರಿಗಿದೆ. ಸಕಾರಾತ್ಮಕ ಪ್ರತಿಕ್ರಿಯೆ ನಿಮ್ಮಿಂದ ಬಂದದ್ದೇ ಆದರೆ ಇನ್ನಷ್ಟು ಬರೆದಾರು!
 
ನಿಮಗಿದು ಗೊತ್ತೇ?

ಎಲ್ಲಾ ನಾಯಿಗಳಿಗೂ muuಲ ಕಾಡು ತೋಳ. ಇದನ್ನು ಪಳಗಿಸಿ ಸಾಕು ನಾಯಿ ಸಂತತಿ ಬೆಳೆಸಲಾಗಿದೆ.
ನಾಯಿಗಳಲ್ಲಿ ೪೦೦ಕ್ಕೂ ಹೆಚ್ಚು ವಿವಿಧ ಜಾತಿಗಳಿವೆ.
ನಾಯಿಯ ಮಾಂಸವು ಹಲವು ದೇಶಗಳಲ್ಲಿ ಜನಪ್ರಿಯ ಆಹಾರ.
ಮಧುಮೇಹ ರೋಗಕ್ಕೆ ಚಿಕಿತ್ಸೆಯನ್ನು ಮೊದಲು ನಾಯಿಯ ಮೇಲೆ ಪ್ರಯೋಗಿಸಲಾಯಿತು.
ಧುವ ಪ್ರದೇಶದ ಎಸ್ಕಿಮೋ ಜನರ ಸಾರಿಗೆ ಸಾಧನ - ನಾಯಿ ಬಂಡಿ, ಸಂಪರ್ಕ ನಾಯಿಗಳ ಮೂಲಕ;
ಡೆನ್ಮಾರ್ಕ ದೇಶದಲ್ಲಿ ಹಾಲು ಸಾಗಣಿಕೆಗೆ ಈಗಲೂ ನಾಯಿ ಬಂಡಿಗಳನ್ನೇ ಬಳಸಲಾಗುತ್ತದೆ.
ಭಕ್ತ ಕನಕದಾಸರು ನಾಯಿಯಲ್ಲಿ ಭಗವಂತನನ್ನು ಕಂಡರು.
ನಾಯಿಗಳ ಮ್ಯೂಸಿಯಂ ಅಮೇರಿಕಾದಲ್ಲಿದೆ.
ನೇಪಾಳದಲ್ಲಿ ನಾಯಿಗೆ ಹೂವಿನ ಹಾರ ಹಾಕಿ ಪೂಜಿಸುತ್ತಾರೆ.
ವಿಧೇಯತೆ ಮತ್ತು ನಂಬಿಕೆಯಲ್ಲಿ ಹೆಣ್ಣುನಾಯಿಯೇ ಮೇಲು.
ಧರ್ಮರಾಯ ಸ್ವರ್ಗಕ್ಕೆ ಹೋಗುವಾಗ ಕಡೆಯವರೆಗೂ ಆತನನ್ನು ಹಿಂಬಾಲಿಸಿದ್ದು ಒಂದು ಕಪ್ಪು ನಾಯಿ.

ರಷ್ಯಾದ ಹೆಣ್ಣುನಾಯಿ ‘ಲೈಕಾ’ ೦೩.೦೧.೧೯೫೭ರಲ್ಲಿ ಸ್ಪುಟ್ನಿಕ್-೨ ರಲ್ಲಿ ಪ್ರಥಮವಾಗಿ ಬಾಹ್ಯಾಕಾಶಕ್ಕೆ ತೆರಳಿತು. ವಯಸ್ಕ ನಾಯಿಗಳಲ್ಲಿ ೪೨ ಹಲ್ಲುಗಳಿರುತ್ತವೆ.
ನಾಯಿಗಳು ಬಣ್ಣಗಳಲ್ಲಿನ ವ್ಯತ್ಯಾಸವನ್ನು ಗುರುತಿಸಲಾರವು.
ಎರಡನೇ ಮಹಾಯುದ್ಧದಲ್ಲಿ ಮಿತ್ರಸೇನೆ ಸುಮಾರು ೨ ಲಕ್ಷ ನಾಯಿಗಳನ್ನು ಬಳಸಿತ್ತು.
ಗ್ರೇಹೌಂಡ್ ನಾಯಿ ಗಂಟೆಗೆ ೭೦ ಕಿ.ಮೀ. ವೇಗದಲ್ಲಿ ಓಡಬಲ್ಲದು. ಹಾಗೆಯೇ ಕರ್ನಾಟಕದ ಮುಧೋಳ್ ಹೌಂಡ್ ಕೂಡ. ನಾಯಿಯ ವಾಸನಾ ಶಕ್ತಿ ಮನುಷ್ಯನ ೪೦ ಪಟ್ಟು.ಕೇಳುವ ಶಕ್ತಿ ಮನುಷ್ಯನ ೪ ಪಟ್ಟು.
’ಬಾಸೆಂಜಿ’ ಜಾತಿಯ ನಾಯಿಗಳು ಬೊಗಳುವುದೇ ಇಲ್ಲ.

o ಜಗತ್ತಿನ ಅತಿ ಚಿಕ್ಕ ನಾಯಿ ‘ಯಾರ್ಕ್‌ಶೈರ್ ಟೆರ್ರಿಯರ್’ ಕೇವಲ ೨.೫ ಇಂಚು ಎತ್ತರ, ತೂಕ ೧೩ ಗ್ರಾಂ ಇತ್ತು.
o ಬ್ಯಾಂಗ್-ಗ್ರೇಹೌಂಡ್ ನಾಯಿ ೩೦ ಅಡಿ ಜಿಗಿದು  ವಿಶ್ವದಾಖಲೆ ಮಾಡಿದೆ.
o ಅಮೇರಿಕಾದ ಅಧ್ಯಕ್ಷ ಜಾರ್ಜ್ ಬುಷ್ ನಾಯಿಯ ಹೆಸರು ‘ಇಂಡಿಯಾ’

ನಾಯಿಯ ಉಪಯೋಗ;
ಬೇಟೆ, ನಿಯತ್ತು, ಕಾವಲು, ಕುರಿ ಕಾಯಲು, ಕುರುಡsರಿಗೆ ಕಣ್ಣಾಗಿ, ರಹಸ್ಯ ತಾಣ ಪತ್ತೆ, ಮುದ್ದಿಗಾಗಿ, ಸ್ಫೋಟಕ ಪತ್ತೆಗಾಗಿ, ಸಿನಿಮಾ, ಸರ್ಕಸ್, ಅಪರಾಧ ಪತ್ತೆ, ಮುದುಕರಿಗೆ ಜೀವನ ಸಂಗಾತಿಯಾಗಿ.

$ಚಂಡಮಾರುತ,ಭೂಕಂಪ,ಸುನಾಮಿ ಮುಂತಾದ ಪ್ರಕೃತಿ ವಿಕೋಪ ನಾಯಿಗಳಿಗೆ ಮೊದಲೇ ತಿಳಿದಿರುತ್ತದೆ.
ಹಿಮಪ್ರದೇಶದಲ್ಲಿ ಹಿಮಪಾತವಾಗುವ ಮೊದಲೇ ವಿಕಾರವಾಗಿ ಕೂಗುತ್ತವೆ.

$‘ಟಮ್ಮಿ’ ಎಂಬ ಗಂಡು ಗ್ರೇ ಹೌಂಡ್ ನಾಯಿ ೩೦೦ಕ್ಕೂ ಹೆಚ್ಚು ಮರಿಗಳಿಗೆ ತಂದೆಯಾಗಿದೆ.

ಅಮೇರಿಕಾದ ಫಾಕ್ಸ ಹೌಂಡ್ ಲೀನಾ ಒಂದೇ ಬಾರಿಗೆ ೨೩ ಮರಿಗಳಿಗೆ ಜನ್ಮ ನೀಡಿ ದಾಖಲೆ ನಿರ್ಮಿಸಿದೆ.
ಬಿಲ್ಲಿ ಎಂಬ ಬುಲ್ ಟೆರ್ರಿಯರ್ ನಾಯಿ ೫.೫ ನಿಮಿಷಗಳಲ್ಲಿ ೧೦೦ ಇಲಿಗಳನ್ನು ಹಿಡಿದು ದಾಖಲೆ ನಿರ್ಮಿಸಿದೆ.

    ಜರ್ಮನ್ ಶೆಫರ್ಡ/ಆಲ್ಸೇಷಿಯನ್ ನಾಯಿ;
ಮೂಲ: ಜರ್ಮನಿ,
ಉದ್ದೇಶ : ಉತ್ತಮ ಕಾವಲುಗಾರ, ಸಂಗಾತಿ,
ಗುಣಗಳು: ನಂಬಿಕಸ್ಥ, ಚುರುಕು,ರಾಜ ಗಾಂಭೀರ್ಯ, ಆಕರ್ಷಕ ಮೈಕಟ್ಟು,                
ಬಣ್ಣ  :   ಕಪ್ಪು,ಬೂದು,ಕಿತ್ತಲೆ,ಕಂದು.
ಎತ್ತರ  :   ೧೯-೨೫
ತೂಕ  : ೨೮-೪೦ ಕೆ.ಜಿ.
ಕಾಳಜಿ : ಕೂದಲು, ಕಿವಿಗಳ ಬಗೆ ನಿಗಾ.
ಆಯಸ್ಸು :  ೧೨-೧೩ ವರ್ಷಗಳು.
ವಿಶೇಷತೆ: ಮಿಲಿಟರಿ, ಪೋಲೀಸ್ ಹಾಗೂ ಅಪರಾಧ ಪತ್ತೆ(ಸಿ.ಓ.ಡಿ) ಇಲಾಖೆಗಳಲ್ಲಿ ಬಳಕೆ. ಕುರುಡರ ಸಂಗಾತಿ

      ಗೋಲ್ಡನ್ ರಿಟ್ರೀವರ್:
ಮೂಲ:        ಗ್ರೇಟ್ ಬ್ರಿಟನ್
ಉದ್ದೇಶ : ಬೇಟೆ, ಸಂಗಾತಿ ಶೋಧಕ
ಗುಣಗಳು : ಮೋಹಕ, ಬುದ್ಧಿಶಾಲಿ, ಸ್ನೇಹಜೀವಿ,
ಬಣ್ಣ    : ಚಿನ್ನದ ಬಣ್ಣ,ಹಾಲಿನ ಕೆನೆ
ಎತ್ತರ   :  ೨೦-೨೪
ತೂಕ   :  ೨೭-೩೬ ಕೆ.ಜಿ.
ಆಯಸ್ಸು :  ೧೩-೧೫ ವರ್ಷಗಳು
ಕಾಳಜಿ   : ಕೂದಲಿನ ಆರೋಗ್ಯ

    ಪೊಮೊರೇನಿಯನ್:
ಮೂಲ :  ಜರ್ಮನಿ
ಉದ್ದೇಶ :  ಮುದ್ದಿಗಾಗಿ, ಮಕ್ಕಳ ಸಂಗಾತಿ
ಗುಣಗಳು: ಮುಂಗೋಪಿ, ಚುರುಕು ಬುದ್ಧಿವಂತ, ಹೆಚ್ಚು ಬೊಗಳುತ್ತವೆ.
ಬಣ್ಣ   :  ಕಪ್ಪು, ಕಂದು ಬಿಳಿ ಮಿಶ್ರಣ
ಎತ್ತರ  :  ೯-೧೧
ತೂಕ  :  ೧.೫-೩.೫ ಕೆಜಿ
ಆಯಸ್ಸು : ೧೫ ವರ್ಷಗಳು
ವಿಶೇಷತೆ : ಸರ್ಕಸ್‌ಗಳಲ್ಲಿ ವಿಶ್ವದಾದ್ಯಂತ ಬಳಕೆ.
ಕಾಳಜಿ   : ಕೂದಲು, ಹಲ್ಲು ಹಾಗೂ ಕಣ್ಣುಗಳ ನಿರ್ವಹಣೆ

       ಡಾಲ್‌ಮೇಷಿಯನ್:
ಮೂಲ :  ಭಾರತ, ಯುಗೊಸ್ಲಾವಿಯಾ
ಉದ್ದೇಶ :  ಕಾವಲುಗಾರ, ಸಂಗಾತಿ
ಗುಣಗಳು: ನವಿರಾದ ಮೈಕಟ್ಟು, ಸಂಯಮಿ, ಬುದ್ಧಿವಂತ
ಬಣ್ಣ    :   ಬಿಳಿ, ಕಂದು/ ಕಪ್ಪು ಚುಕ್ಕೆಗಳು
ಎತ್ತರ   :   ೨೧-೨೪
ತೂಕ  ;    ೨೨-೨೫ ಕೆಜಿ
ಆಯಸ್ಸು :   ೧೨-೧೪ ವರ್ಷಗಳು
ವಿಶೇಷತೆ :  ಸರ್ಕಸ್‌ಗಳಲ್ಲಿ ವಿಶ್ವದಾದ್ಯಂತ ಬಳಕೆ.
ಕಾಳಜಿ  :   Zರ್ಮ, ಕಿವಿಗಳ ನಿರ್ವಹಣೆ

       ಡ್ಯಾಕ್ಷ್‌ಹೌಂಡ್:
ಮೂಲ   :  ಈಜಿಪ್ಟ್
ಉದ್ದೇಶ   : ಮನೆ ಕಾವಲುಗಾರ, ಮಕ್ಕಳ ಸಂಗಾತಿ, ಬೇಟೆನಾಯಿ.
ಗುಣಗಳು :  ಅತಿ ಹೆಚ್ಚು ರೋಗ ನಿರೋಧಕ ಶಕ್ತಿ,ಇಲಿ,ಹೆಗ್ಗಣ, ಹಂದಿಗಳ ಬೇಟೆಗೆ ಹೆಸರುವಾಸಿ.
ಬಣ್ಣ     :   ಕಪ್ಪು, ಕಂದು, ಕೆಂಪು ಮಿಶ್ರಣ
ಎತ್ತರ    :   ೮-೧೧”
ತೂಕ   :    ೫-೧೧ ಕೆಜಿ
ಆಯಸ್ಸು  :   ೧೫ ವರ್ಷಗಳು
ವಿಶೇಷತೆ  :  ಮುದುಕರ ಸಂಗಾತಿ.
ಕಾಳಜಿ   :   ಚುರ್ಮ, ಕಿವಿಗಳ ನಿರ್ವಹಣೆ
     ಲ್ಯಾಬ್ರಾಡಾರ್ ರಿಟ್ರೇವರ್:
ಮೂಲ   :  ಗ್ರೇಟ್ ಬ್ರಿಟನ್
ಉದ್ದೇಶ   :  ಶೋಧಕ, ಸಂಗಾತಿ ಬೇಟೆನಾಯಿ.
ಗುಣಗಳು :  ಬುದ್ಧಿವಂತ, ಸಹನಾಶೀಲ, ಅತ್ಯುತ್ತಮ ಘ್ರಾಣಶಕ್ತಿ,
ಬಣ್ಣ     :   ಕಪ್ಪು, ಹಳದಿ ಮಿಶ್ರ ಕಂದು
ಎತ್ತರ    :   ೨೧-೨೨”
ತೂಕ    :   ೨೭-೩೪ ಕೆಜಿ
ಆಯಸ್ಸು  :   ೧೨-೧೪ ವರ್ಷಗಳು
ವಿಶೇಷತೆ  :  ಕುರುಡರ ಸಂಗಾತಿ.ಅಪರಾಧ, ಸ್ಫೋಟಕ ಪತ್ತೆಗೆ ಹೆಸರುವಾಸಿ
ಕಾಳಜಿ   :   ತರಬೇತಿ,ವ್ಯಾಯಾಮ

     ಮುದ್ಹೋಳ ಹೌಂಡ್
ಮೂಲ   : ಬಿಜಾಪುರದ ಮುದ್ಹೋಳ
ಉದ್ದೇಶ   :  ಕಾವಲುಗಾರ, ಅತ್ಯುತ್ತಮ ಬೇಟೆನಾಯಿ.
ಗುಣಗಳು :  ಬುದ್ಧಿವಂತ, ಸಹನಾಶೀಲ, ಅತ್ಯುತ್ತಮ ಘ್ರಾಣಶಕ್ತಿ,
ಬಣ್ಣ     :   ಬಿಳಿ, ಹಳದಿ, ಕಂದು ಕಪ್ಪು ಮಿಶ್ರ.
ಎತ್ತರ    :   ೨೩-೨೮”
ತೂಕ    :    ೨೨-೨೮ ಕೆಜಿ
ಆಯಸ್ಸು  :   ೧೪-೧೫ ವರ್ಷಗಳು
ವಿಶೇಷತೆ  :  ಹೆಸರುವಾಸಿ ಬೇಟೆನಾಯಿ
ಕಾಳಜಿ    :   ತರಬೇತಿ, ಶಾರೀರಿಕ ವ್ಯಾಯಾಮ

   - ಶ್ರೀಪಾದ್‌ರಾವ್ ನಂದೀತಳೆ,

sripad.vet@gmail.com

ಭಾನುವಾರ, ನವೆಂಬರ್ 23, 2008

ಸ್ವಾಮಿ, ಈ ಕಸುಬು ಸಾಕು.....ಅಡಿಕೆ ಮರದಿಂದ ಆ ಮರಕೆ
ಹಾರುವ ಕೊನೆಗೌಡ
ಬಡಿ ಕಾಗೆ ಹಾರಾಡುವ ಹಾಗೆ
ಭಯ-ಆ ಹಕ್ಕಿಗಿಲ್ಲ.

ಮರದ ಕೊನೆಯಲ್ಲಿ ಗೊನೆ
ಮಾಗುವ ಮುನ್ನ ಅರ್ಧಚಂದ್ರ-ಕನ್ನ
ಪಾಪ, ಆ ಮರಕೆ ಗರ್ಭಪಾತ
ಗೌಡನ ಬದುಕು!

ಮರ ದಾಟುವವನ ಕಣ್ಣು ಕೈ
ನೆರೆಯ ಫಸಲಿನ ಲೆಕ್ಕಕೆ
ಸಂಜೆಯೊಳಗೆ ಗೊನೆ-ಆರು ನೂರು
ದಿನ ಹೀಗೆ, ವರ್ಷಕ್ಕೆಷ್ಟಾದೀತು?

ಉದುರು ಆರಿಸುವ ಚಿಕ್ಕಿ,
ಶಾಲೆಗೆ ಗಿಟ್ಟದ, ಮನೆಯೊಳಗೆ ಸಲ್ಲದ
ಮಗು, ಕೆಳಗೆ ನೋಡಿದರೆ ಚುಕ್ಕೆ!
ಹೇ, ಈಗ ಕೈ ಜಾರಿದರೆ....

ಸೂರ್ಯನೆತ್ತರಕೇನು ಇಲ್ಲ ಸ್ವರ್ಗ
ನಾಳೆಗಾಗಿ ಗುರುತ್ವಾಕರ್ಷಣೆ ಮೀರಲು
ಬದುಕಿರುವುದು ನೆಲದಲ್ಲಿ ಚಿಕ್ಕಿ, ಮಗು
ಇರುವುದಲ್ಲಿ, ನೆಲಗೆಲಸ ಸಾಕು

ಒತ್ತಾಯಿಸದಿರಿ, ನನ್ನ ಮನದ
ಮೆರವಣಿಗೆ ಭಯ-
ಬದುಕ ಸಂಗಾತಿಗೆ ಕೊನೆ
ಕಸುಬು ಸಾಕು, ಹೆಗಡೇರೆ....

-ಮಾವೆಂಸ

ಸೋಮವಾರ, ನವೆಂಬರ್ 17, 2008

ಚಿಟಿ ಪಿಟಿ ಹನಿಗಳು!!!!!


೧.ಅಂತರ

ಭವಿಷ್ಯ-
ಮುಂದೆ 
ಆಗುವಂತದ್ದು

ಜ್ಯೋತಿಷ್ಯ-
ಮುಂದೆ 
ಆಗಬಹುದೆಂದು 
ನಂಬಿಕೊಂಡದ್ದು!


೨.ಹೆಸರಲ್ಲೇನಿದೆ?

ನಮ್ಮ
ಕಾವೇರತ್ತೆ
ಗೆ
ಅವರ
ಸೊಸೆ ಸುದ್ದಿ
ಬಂದಾಗೆಲ್ಲ
ಕಾವೇರತ್ತೆ!

೩.ಪ್ರಣಯಗೀತೆ!

ಕಣ್ಣೂ....
ಕಣ್ಣೂ....
ಕಲೆತಾಗ
ಬರುವುದು
ಕಣ್ಣು ಬೇನೆ!!

೪. ಶುದ್ಧಾಂಗ ತಪ್ಪು!

ಶುದ್ಧಾಂಗ
ತಪ್ಪನ್ನು ಮಾಡಿದಳು ನಮ್ಮಮ್ಮ
ಗೊತ್ತೇನು
ನಿಮಗೆ?

ಒಂಬತ್ತು
ತಿಂಗಳು
ಹೊತ್ತು ಜನ್ಮ
ಕೊಟ್ಟದ್ದು
ನನಗೆ!!

೫. ಒಡೆದ ಒಗಟು

ಬಂಡೆ
ಒಡೆದು
ಒಡೆದು ಹಾಕಿದರೆ
ಕಲ್ಲು ಚೂರು!

ಶಬ್ಧ
ಒಡೆದು
ಒಡೆದು ಬರೆದ
ಹನಿಗವನ ಜೋರು!!

೬. ತಿರುಗುಬಾಣ!

ಮಿತ್ರ ಕೆಣಕಿದ್ದ,
ನನಗಾಸೆಯಾಗಿದೆ,
ನಿಮ್ಮೂರ
ಅನಾಗರಿಕರ
ನೋಡಲು ಬರುವಾ ಅಂತ!

ನಾನು ತಿವಿದಿದ್ದೆ,
ನಿಮ್ಮೂರಲ್ಲೇನು
ಅನಾಗರಿಕರಿಗೆ
ಬರವಾ ಅಂತ!!

೭. ತಪ್ಪಿದ ಲೆಕ್ಕ!

ಹುಟ್ಟಿನಿಂದಲೇ
ಗಣಿತದಲ್ಲಿ
ಪ್ರತಿಭಾವಂತೆಯಾದ
ನನ್ನಾಕೆ
ಲೆಕ್ಕ ತಪ್ಪಿದ್ದು
ನನ್ನನ್ನು 
ಮದುವೆಯಾದಾಗಲೇ!!

೮. ಸರಕಾರಿ ದಾಖಲೆ!

ಅಕ್ಷರಸ್ಥರೆಂದು
ಕರೆಸಿಕೊಳ್ಳಬೇಕಿದ್ದಲ್ಲಿ
ಅಕ್ಷರ ಕಲಿಯಬೇಕಾಗಿಲ್ಲ.
ಓದುವ ಅಗತ್ಯವಿಲ್ಲ.
ಬರೀ
ಸಹಿ ಮಾಡಲು
ಕಲಿತರೆ ಸಾಕು!!


೯. ಪದ ವೈಭವ!

ಅಂತರ್ಜಾತೀಯ ವಿವಾಹ
ಏನಿದರ ಅರ್ಥ?
ಇಲ್ಲಿ ನಡೆಯುವುದು
ಬೇರೆ ಬೇರೆ
ಜಾತಿಗಳ ಮದುವೆಯೇ?
ಅಥವಾ ಇಲ್ಲೂ
ನಡೆಯುವುದು
ಗಂಡು ಹೆಣ್ಣಿನ ಮದುವೆಯೇ??

೧೦. ಅರಿವಿನ ಮಟ್ಟ

ಪ್ರತಿಯೊಬ್ಬನೂ
ಜನರು ಬದಲಾಗ
ಬೇಕೆಂದು ಹೇಳುತ್ತಾನೆ.
ಆದರೆ
ಜನರಲ್ಲಿ ತಾನೊಬ್ಬ
ಎನ್ನುವುದನ್ನು
ಮರೆಯುತ್ತಾನೆ!!

೧೧. ಚಕೋರಿ!!

ನನಗೆ
ನನ್ನ ಕಾಫಿಗೆ
ಬೇಕೇ ಬೇಕು
ಈ- ಸುಂದರ
ಚಕೋರಿ!

೧೨. ವಾಸ್ತವ

ಹುಶ್........!!!
ಗಟ್ಟಿಯಾಗಿ ಉಸಿರು
ಬಿಟ್ಟೀರಿ....!

ಕಾರಣ -
ಈ ದೇಶದಲ್ಲಿದೆ
ಪ್ರಜಾಪ್ರಭುತ್ವ!!

-ಮಾವೆಂಸ, mavemsa@gmail.com ಶನಿವಾರ, ನವೆಂಬರ್ 15, 2008

ಆಲೂ ವರ್ಷ- ಆರಕ್ಕೇರದ ಇಳುವರಿ, ಹರ್ಷವಾಗದ ಆಚರಣೆ
 ಡಿಸೆಂಬರ್ -  ಕಳೆದುಹೋದರೆ ೨೦೦೮ರ ಕ್ಯಾಲೆಂಡರ್ ರದ್ದಿ. ಇಂತಹ ವರ್ಷಗಳನ್ನು ಒಂದು ವಿಷಯಕ್ಕೆ ಸಂಬಂಧ ಕಲ್ಪಿಸಿ ವರ್ಷಾಚರಣೆ ಮಾಡುವುದರ ಹಿಂದಿನ ಉದ್ದೇಶ ನೇರ. ಆ ನಿಟ್ಟಿನಲ್ಲಿ ಸದರಿ ವರ್ಷ ಹೆಚ್ಚು ಕೆಲಸ ಆಗಲಿ ಎಂದು. ಮತ್ತೊಮ್ಮೆ ನೆನಪಿಸಬೇಕಾಗುತ್ತದೆ, ೨೦೦೮ ಅಂತರ್ರಾಷ್ಟ್ರೀಯ ಆಲೂ ವರ್ಷ. ಆಲೂಗಡ್ಡೆ ಎಂಬ ವೈವಿಧ್ಯಮಯ ಆಹಾರ ಪದಾರ್ಥಕ್ಕೆ ಉತ್ತೇಜನ ಈ ಬಾರಿ ಸಿಕ್ಕೀತೇ? ವರ್ಷಾಚರಣೆಯ ಘೋಷಣೆ ನಿರಾಶೆ ತರಲಿಲ್ಲವಾದರೂ ಆಲೂ ಅವಗಣನೆ ಹತಾಶೆ ತರಲಿಕ್ಕೆ ಸಾಕು!
ಭಾರತೀಯರಾಗಿ ನಾವು ಆಲೂ ವರ್ಷವನ್ನು ಪರಾಮರ್ಶಿಸಬೇಕು. ನಮ್ಮ ದೇಶದ ವಾರ್ಷಿಕ ಆಲೂ ಉತ್ಪಾದನೆ ಸರಿಸುಮಾರು ೨೪ ಮಿಲಿಯನ್ ಟನ್. ಈ ಮೂಲಕ ವಿಶ್ವದಲ್ಲಿ ಭಾರತ ಆಲೂ ಉತ್ಪಾದನೆಯಲ್ಲಿ ಮೂರನೇ ಸ್ಥಾನ ಪಡೆದಿದೆ. ದೇಶದ, ರೈತರ ಆರ್ಥಿಕ ಸ್ಥಿತಿಗತಿಗೆ ಆಲೂವಿನದ್ದೂ ಪಾತ್ರವಿದೆ. ಭಾರತ ಹಾಗೂ ಚೀನಾದ ಒಟ್ಟು ಆಲೂ ಬೆಳೆ ಪ್ರಪಂಚದ ಬೇಡಿಕೆಯ ಮೂರನೇ ಒಂದು ಭಾಗವನ್ನು ಪೂರೈಸುತ್ತದೆ. 
ನಿಜ, ಆಲೂ ಆಹಾರ ಬೆಳೆಗಿಂತ ಕುರುಕಲು ತಿನಿಸಾಗಿಯೇ ಹೆಚ್ಚು ಪ್ರಸಿದ್ಧ. ಸ್ವಾರಸ್ಯವೆಂದರೆ, ಇಂದು ಏಷ್ಯಾ ಮತ್ತು ಅಭಿವೃದ್ಧಿಶೀಲ ದೇಶಗಳಲ್ಲಿಯೇ ಹೆಚ್ಚಿನ ಆಲೂ ಇಳುವರಿ ಬಳಕೆಯಾಗುತ್ತಿದೆ. ಇದು ಈವರೆಗೆ ನಂಬಿದ ಜಂಕ್‌ಫುಡ್ ಪ್ರೇಮಿ ವಿದೇಶಿಯರಿಗೆ ಆಘಾತ ನೀಡುವಂತದು. ಆದರೂ ಪ್ರತಿ ವರ್ಷ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಫ್ರೆಂಚ್‌ಫ್ರೈ ರೂಪದಲ್ಲಿ ೧೧ ಮಿಲಿಯನ್ ಟನ್ ಆಲೂ ‘ಕಾರ್ಖಾನೆ’ ತಿನಿಸನ್ನು ಮೆಲ್ಲಲಾಗುತ್ತಿದೆ!
ಒಂದರ್ಥದಲ್ಲಿ ಆಲೂ ವಿಶ್ವರೂಪಿ. ಇದರ ಕೊಬ್ಬಿನಂಶವನ್ನು ಔಷಧಗಳಲ್ಲಿ, ಬಟ್ಟೆ, ಮರ, ಪೇಪರ್ ಉದ್ಯಮದಲ್ಲಿ ಗೋಂದಾಗಿ, ಇನ್ನಿತರ ಸುರಕ್ಷಕ, ಟೆಕ್ಸ್‌ಚರ್ ಏಜೆಂಟ್ ಮಾದರಿಯಲ್ಲಿ ಬಳಸಲಾಗುತ್ತಿದೆ. ಅಷ್ಟೇಕೆ, ಎಣ್ಣೆ ಉತ್ಪಾದನಾ ಘಟಕಗಳ ‘ಬೋರ್ ಹೋಲ್’ಗಳನ್ನು ಸ್ವಚ್ಛಗೊಳಿಸಲೂ ಆಲೂ ಬೇಕು. 
ಪೆಟ್ರೋಲಿಯಂ ಉತ್ಪನ್ನಗಳ ಸ್ವಚ್ಛತೆಗೆ ಬಳಸುವ ಆಲೂ ಒಂದೆಡೆಯಾದರೆ, ಇದೇ ಆಲೂವಿನಿಂದ ಸಂಗ್ರಹವಾಗುವ ೪೪ ಸಾವಿರ ಟನ್ ತ್ರಾಜ್ಯ ಪರಿಷ್ಕರಣೆ ಮೂಲಕ ನಾಲ್ಕರಿಂದ ಐದು ಟನ್ ಎಥೆನಾಲ್ ಇಂಧನ ತಯಾರಿಸಬಹುದಾದದ್ದು ಶುದ್ಧ ಚೋದ್ಯ!
ಆಲೂ ವಿಶ್ವ ಬೆಳೆ. ಎಂಟು ಸಾವಿರ ವರ್ಷಗಳಿಂದ ಆಲೂ ಬೆಳೆಯಲಾಗುತ್ತಿತ್ತೆಂದು ಇತಿಹಾಸ ಹೇಳುತ್ತದೆ. ೧೬ನೇ ಶತಮಾನದಲ್ಲಿ ಸ್ಪೇನ್‌ನಿಂದ ಯುರೋಪ್‌ಗೆ ಈ ಬೆಳೆ ಧಾಳಿಯಿಟ್ಟಿತು ಎನ್ನುವ ಮಾತಿದೆ. ಅದೇನೇ ಇರಲಿ, ಈಗ ಅಂದಾಜು ೭೪ ಸಾವಿರ ಚದರ ಮೈಲು ಪ್ರದೇಶದಲ್ಲಿ ಆಲೂ ಕೃಷಿ ನಡೆಯುತ್ತಿದೆ. ಕಿ.ಮೀ. ಲೆಕ್ಕದಲ್ಲಾದರೆ, ೧೯.೨ಲಕ್ಷ ಕಿ.ಮೀ. ವ್ಯಾಪ್ತಿಯಲ್ಲಿ ಆಲೂಗಡ್ಡೆ ನಾಟಿಯಾಗುತ್ತಿದೆ. ಇದು ಚೀನಾದಿಂದ ಆರಂಭಿಸಿ ಜಾವಾದ ಎತ್ತರ ಪ್ರದೇಶ, ಯುಕ್ರೇನ್‌ನ ಮೈದಾನಗಳವರೆಗೂ ಆಲೂ ಬೆಳೆಯಲಾಗುತ್ತಿದೆ. ಆಹಾರ ಧಾನ್ಯಗಳ ಹೊರತಾಗಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಖಾದ್ಯವಾಗುವ ಆಹಾರ ಪದಾರ್ಥವಿದು. ಅಂಕಿಅಂಶ ಪ್ರಿಯರಿಗಾಗಿ ಹೇಳುವುದಾದರೆ, ಕಳೆದ ವರ್ಷ ದಾಖಲೆಯ ೩೫೦ ಮಿಲಿಯನ್ ಟನ್ ಆಲೂಗಡ್ಡೆ ಉತ್ಪಾದನೆಯಾಗಿತ್ತು.
ಈ ಪರಿ ಜನಪ್ರಿಯತೆ ಪಡೆದ ನಂತರವೂ ವಿಶ್ವಸಂಸ್ಥೆ ೨೦೦೮ನ್ನು ಆಲೂ ವರ್ಷ ಎಂದು ಕರೆದಿದ್ದುದರಲ್ಲಿ ಅರ್ಥವಿದೆ. ಮತ್ತೊಮ್ಮೆ ವಿಶ್ವ ಆಹಾರ ಸಮಸ್ಯೆಯತ್ತ ವಾಲುತ್ತಿರುವ ದಿನಗಳಿವು. ಹಸಿರು ಕ್ರಾಂತಿಯ ಅಡ್ಡ ಪರಿಣಾಮಗಳನ್ನು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ಧಾನ್ಯ ಉತ್ಪಾದನೆಯಲ್ಲಿ ಕುಸಿತವಾಗಿದೆ. ಆಲೂ ಇದಕ್ಕೆ ಉತ್ತರವಾಗಬಲ್ಲದು. ಅಷ್ಟೇ ಅಲ್ಲ, ಆಲೂ ಉತ್ಪಾದನೆ ಆರ್ಥಿಕ ಸ್ಥಿರತೆಗೆ, ಕೈಗಾರಿಕೆಗಳ ಉತ್ತೇಜನಕ್ಕೂ ಕಾರಣವಾಗುವ ವೈಶಿಷ್ಟ್ಯವೇ ಅದರ ವರ್ಷಾಚರಣೆಯನ್ನು ಸಮರ್ಥಿಸುತ್ತದೆ.
ಮುಂದಿನ ಎರಡು ದಶಕಗಳಲ್ಲಿ, ವಿಶ್ವ ಜನಸಂಖ್ಯೆ ವರ್ಷಕ್ಕೆ ೧೦೦ ಮಿಲಿಯನ್ ಸರಾಸರಿಯಲ್ಲಿ ಏರಲಿದೆಯೆಂಬುದು ಒಂದು ಅಂದಾಜು. ಈ ಏರಿಕೆಯ ಬಹುಪಾಲು ಮಕ್ಕಳು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಜನ್ಮಿಸಲಿದ್ದಾರಂತೆ. ಈಗಾಗಲೇ ಭೂಮಿ, ನೀರಿನ ಕೊರತೆಯಲ್ಲಿರುವ ಈ ದೇಶಗಳಲ್ಲಿ ಆಹಾರ ಸುರಕ್ಷತೆ ಭವಿಷ್ಯದಲ್ಲಿ ಆತಂಕಕ್ಕೀಡಾಗುವುದು ನಿಸ್ಸಂಶಯ. ಆ ಲೆಕ್ಕದಲ್ಲೂ ಆಲೂಗಡ್ಡೆಯ ಒಟ್ಟು ಇಳುವರಿಯನ್ನು ಹೆಚ್ಚಿಸಿಕೊಳ್ಳಬೇಕಾದ ಅಗತ್ಯ ನಮ್ಮಂತ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕಿದೆ. ಎಲ್ಲ ವಾತಾವರಣಗಳಲ್ಲಿ ಬೆಳೆಯುವ ಆಲೂವಿನ ಶೇ.೮೫ ಭಾಗ ಆಹಾರವಾಗಿ ಬಳಸಬಹುದಾಗಿರುವುದು ಇನ್ನೊಂದು ಧನಾತ್ಮಕ ಅಂಶ. 
 ನಮ್ಮಲ್ಲಿ ಆಲೂವನ್ನು ಉತ್ತೇಜಿಸಬೇಕು ಎಂಬುದನ್ನು ಸ್ಪಷ್ಟಪಡಿಸಲು ಅಂಕಿಅಂಶವೊಂದು ನೆರವಾಗುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಆಲೂ ಉತ್ಪಾದನೆ ವಾರ್ಷಿಕ  ಶೇಕಡಾ ೪.೫ರ ವೇಗದಲ್ಲಿ ವೃದ್ಧಿಯಾಗುತ್ತಿದೆ. ಏಷ್ಯಾದಲ್ಲಿ, ೧೯೬೧-೬೩ರ ವೇಳೆಯಲ್ಲಿ ಪ್ರತಿ ತಲೆಗೆ ಬರೀ ೧೦ ಕೆ.ಜಿ. ಲೆಕ್ಕದಲ್ಲಿ ಬಳಕೆಯಾಗುತ್ತಿದ್ದರೆ, ೨೦೦೩ರಲ್ಲಿ ಅದು ೨೨ ಕೆ.ಜಿ.ಗೆ ಏರಿದೆ. ಸ್ವಾರಸ್ಯವೆಂದರೆ, ಈಗಲೂ ಇದು ಯುರೋಪ್‌ನ ಪ್ರತಿ ವ್ಯಕ್ತಿ ಸರಾಸರಿಗಿಂತ ಕಡಿಮೆ! ಅಭಿವೃದ್ಧಿಶೀಲ ದೇಶಗಳಲ್ಲಿ ಕಳೆದ ೧೫ ವರ್ಷಕ್ಕೆ ಹೋಲಿಸಿದರೆ ದುಪ್ಪಟ ಆಲುವಿನ ಬಳಕೆಯಾಗುತ್ತಿದ್ದರೂ ಅದು ಮುಂದುವರಿದ ದೇಶಗಳ ಬಳಕೆಗೆ ಇದೀಗ ಸರಿಸಮ(ಶೇ.೫೦)ವಾಗುತ್ತಿದೆ.
 ಅಂತರ್ರಾಷ್ಟ್ರೀಯ ವರ್ಷ ಆಚರಣೆಯ ಹಿನ್ನೆಲೆಯಲ್ಲಿ, ಬೆಳೆ ಬೆಳೆಯಲು ತಾಂತ್ರಿಕ ಸಹಾಯ, ವೈಜ್ಞಾನಿಕ ಸಹಾಯ ನೀಡುವುದು ಮತ್ತು ಒಟ್ಟಾರೆ ಬೆಳೆ ಪ್ರಮಾಣವನ್ನು ಉತ್ತೇಜಿಸುವುದು ಮುಖ್ಯ ಅಂಶ. ಕೊಯ್ಲು ತಾಂತ್ರಿಕತೆಯೂ ಇದರಲ್ಲಿ ಸೇರಿತ್ತು. ಬಹುಷಃ ಪೆರು ರಾಷ್ಟ್ರ ಇದನ್ನು ಸಮರ್ಪಕವಾಗಿ ಬಳಸಿಕೊಂಡಿದೆ. ಅಲ್ಲಿನ ಆರು ಲಕ್ಷ ಕೃಷಿ ಕುಟುಂಬಗಳು ಆಲೂ ಬೆಳೆಯನ್ನೇ ನಂಬಿ ಜೀವನ ಸಾಗಿಸುತ್ತವೆ. ೩.೩ ಮಿಲಿಯನ್ ಟನ್ ಆಲೂ ಅಲ್ಲಿ ಉತ್ಪತ್ತಿಯಾಗುತ್ತಿದೆ. ಅಲ್ಲಿನ ಸರ್ಕಾರ ಇನ್ನೊಂದು ಆಹಾರ ಬೆಳೆಯಾದ ಗೋಧಿಯನ್ನು ಆಮದು ಮಾಡಿಕೊಂಡು ಸಬ್ಸಿಡಿ ದರದಲ್ಲಿ ಜನರಿಗೆ ಒದಗಿಸುತ್ತಿದೆ. ಹೀಗಾಗಿ ಅಲ್ಲಿ ಸಾರ್ಥಕವಾಗಿ ಆಲೂ ವರ್ಷ ಆಚರಿಸಿದಂತಾಗಿದೆ.
ಭಾರತದಲ್ಲಿ ಅಗಾಧ ಕೃಷಿ ಭೂಮಿ, ಕಾರ್ಮಿಕ ಶಕ್ತಿಯಿದ್ದೂ ಆಲೂ ವರ್ಷ ಅಕ್ಷರಶಃ ಜಾರಿಗೊಂಡೇ ಇಲ್ಲ. ಮೊನ್ನೆ ಮೊನ್ನೆ ಕರ್ನಾಟಕದಲ್ಲಿ ನಾಟಿ ಮಾಡಿದ ಆಲೂ ಬೀಜ ಕೊಳೆತು, ಕೃಷಿಕರ ಜೀವನ ಬಳಲಿದ್ದು ಮಾತ್ರ ಸುದ್ದಿಯಾಗಿತ್ತು. ಆ ಲೆಕ್ಕದಲ್ಲಿ, ೨೦೦೮ಕ್ಕೆ ಮಾತ್ರ ಸೀಮಿತವಾಗಿ ಆಲೂ ಬೆಳೆಯನ್ನು ಉತ್ತೇಜಿಸಬೇಕು ಎಂದೇನಿಲ್ಲ. ಇದು ‘ಕೃಷಿಕರ ಪರ’ ಘೋಷಣೆಯ ಸರ್ಕಾರಗಳಿಗೆ ಅರ್ಥವಾದರೆ ಚೆನ್ನ.

-ಮಾವೆಂಸ
ಮಂಗಳವಾರ, ನವೆಂಬರ್ 11, 2008

‘ಕನ್ನಡಕ’ ಹಾಕಿ ಹುಡುಕಿದರೂ ಸಿಗರು ಮತ್ತೊಬ್ಬ ಕುಂಬ್ಳೆ!
                                                     
ಕುಂಬ್ಳೆ ಟೆಸ್ಟ್‌ರಂಗದಿಂದಲೂ ನಿವೃತ್ತರಾಗಿದ್ದಾರೆ. ಹಾಗೆಂದಾಕ್ಷಣ ಪತ್ರಿಕೆಗಳಲ್ಲಿ ವ್ಯಕ್ತಿಚಿತ್ರ ಬಿಡಿಸುವವರು ಅವರು ಜಮೈಕಾದಲ್ಲೊಮ್ಮೆ ದವಡೆಗೆ ಪಟ್ಟಿ ಕಟ್ಟಿಸಿಕೊಂಡು ಬೌಲ್ ಮಾಡಿದ್ದನ್ನೋ, ಮೊನ್ನೆ ದೆಹಲಿ ಪಂದ್ಯದಲ್ಲಿ ಡಜನ್ ಹೊಲಿಗೆ ಹಾಕಿಸಿಕೊಂಡ ಎಡಗೈ ನೋವಿನಲ್ಲಿ ವಿಕೆಟ್ ಕಿತ್ತಿದ್ದನ್ನೋ ಪ್ರಸ್ತಾಪಿಸದೇ ಇರರು. ಶುಷ್ಕ ಅಂಕಿಅಂಶಗಳಿಂದ ಅವರನ್ನು ವಿವರಿಸುವುದಾದರೆ ಸಾಕಷ್ಟು ಪುಟ ಖರ್ಚು ಮಾಡಬಹುದು. ಆ ಸಂಪ್ರದಾಯವನ್ನು ಈ ಬಾರಿ ಬಿಟ್ಟುಬಿಡೋಣ.
ಕುಂಬ್ಳೆ ನಮಗೆ ಆಪ್ತರಾಗುವುದು ಕನ್ನಡಿಗ ಎಂಬುದರ ಮೂಲಕ. ಹಲವು ಟಿ.ವಿ. ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಕಾಣಿಸಿಕೊಂಡಾಗ ಮಾತನಾಡಿದ್ದು ಸ್ಪಷ್ಟ ಕನ್ನಡದಲ್ಲಿ ಎಂಬ ಖುಷಿಗೆ. ಕ್ರಿಕೆಟಿಗ ಕುಂಬ್ಳೆ ನಿಮಗಿಷ್ಟವಾಗದಿರಬಹುದು. ಅದು ನಿಮ್ಮಿಷ್ಟ! ಆದರೆ ಸನ್ನಡತೆಯ ಕುಂಬ್ಳೆಯನ್ನು ಗೌರವಿಸದಿದ್ದರೆ ಅದು ನಮ್ಮಲ್ಲಿರುವ ಐಬು!! ಸಚಿನ್, ದ್ರಾವಿಡ್, ಲಕ್ಷ್ಮಣ್‌ರ ಜೊತೆ ಕುಂಬ್ಳೆ. ಓಹ್, ದೇಶದ ಸಂಸ್ಕೃತಿಯ ರಾಯಭಾರಿಗಳಿವರು.
ನೆನಪು ಸರಿಯಿದ್ದರೆ ಕುಂಬ್ಳೆ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ಶ್ರೀಲಂಕಾದ ವಿರುದ್ಧ ಶಾರ್ಜಾದಲ್ಲಿ, ೧೯೯೦ದಲ್ಲಿ. ಆ ನಂತರ ಭಾರತ ಇಂಗ್ಲೆಂಡಿನಲ್ಲಿ ಒನ್ ಡೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತದೆ. ಕುಂಬ್ಳೆ ಅತಿ ಬಿಗಿಯಾದ ಬೌಲಿಂಗ್ ಮಾಡಿ ಗಮನ ಸೆಳೆಯುತ್ತಾರೆ. ಮತ್ತೆ ನೆನಪಿನ ಆಧಾರದಲ್ಲಿಯೇ ಹೇಳುವುದಾದರೆ, ಇಂಗ್ಲೆಂಡ್ ವಿರುದ್ಧದ ಆ ಪಂದ್ಯ ಕುಂಬ್ಳೆಯವರ ಎರಡನೇ ಏಕದಿನ ಪಂದ್ಯವಾಗಿದ್ದಿರಬೇಕು. ತಮ್ಮ ಬೌಲಿಂಗ್ ಕೋಟಾದ ಹತ್ತು ಓವರ್‌ಗಳಲ್ಲಿ ಒಂದೇ ಒಂದು ಬೌಂಡರಿಯನ್ನು ಕುಂಬ್ಳೆ ಬಿಟ್ಟುಕೊಡಲಿಲ್ಲ ಎನ್ನುವುದೇ ಅಗ್ಗಳಿಕೆ. ಬಹುಷಃ ವಿಕೆಟ್ ಗಳಿಕೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಆಕರ್ಷಕ ನಿಯಂತ್ರಿತ ಬೌಲಿಂಗ್‌ಗೆ ‘ಪಂದ್ಯದ ವ್ಯಕ್ತಿ’ ಪ್ರಶಸ್ತಿಯನ್ನು ಪಡೆದ ಅಪರೂಪದ ಪ್ರಸಂಗ ಇದು.
ಕಪಿಲ್, ಶ್ರೀನಾಥ್ ದಿನಗಳಲ್ಲೂ ಭಾರತಕ್ಕೊಂದು ರೋಗವಿತ್ತು. ಆರಂಭಿಕ ಓವರ್‌ಗಳನ್ನು ಬಿಗ್ಗಬಿಗಿಯಾಗಿ ಮಾಡಿದರೂ ಅಂತಿಮ ೧೦ ಓವರ್‌ಗಳಲ್ಲಿ ಸ್ಲಾಗ್‌ಗೆ ಒಳಗಾಗಿಬಿಡುತ್ತಿದ್ದರು. ಆಗೆಲ್ಲ ನಾವು ಕುಂಬ್ಳೆಯವರನ್ನು ನೆನಪಿಸಿಕೊಳ್ಳಬೇಕಿತ್ತು. ಆಗೆಲ್ಲ ನಾವು ಕುಂಬ್ಳೆಯವರನ್ನು ಹುಡುಕಿಕೊಳ್ಳಬೇಕಿತ್ತು. ಒಬ್ಬ ಪಕ್ಕಾ ಮಧ್ಯಮ ವೇಗಿಯಂತೆ ಯಾರ್ಕರ್ ಎಸೆಯುತ್ತ ರನ್ ಪ್ರವಾಹ ನಿಯಂತ್ರಿಸುತ್ತಿದ್ದ ಕುಂಬ್ಳೆ ಹೆಚ್ಚು ಜನಪ್ರಿಯ. ಕ್ರಿಕೆಟ್‌ನ ಅಂತಿಮ ದಿನಗಳಲ್ಲಿ ಕುಂಬ್ಳೆಯ ಆ ಫ್ಲಿಫರ್, ಯಾರ್ಕರ್ ಮಾಯವಾಗಿದ್ದು ಅವರು ದೈಹಿಕವಾಗಿ ೧೮ ವರ್ಷ ಕ್ರಿಕೆಟ್ ಆಡಿದ್ದರ ಸವಕಳಿಯಿದ್ದೀತು.
ಕುಂಬ್ಳೆಗೆ ಅನ್ಯಾಯವಾಗಿದ್ದೇ ಜಾಸ್ತಿ. ನಾಯಕತ್ವದ ವಿಚಾರದಲ್ಲಂತೂ ಅವರು ಅವಕಾಶ ವಂಚಿತರು. ರಾಜ್ಯಕ್ಕೆ ರಣಜಿ ಪ್ರಶಸ್ತಿ ತಂದುಕೊಟ್ಟ ದೃಷ್ಟಾಂತವಿದ್ದರೂ ಆಯ್ಕೆದಾರರು ಬೌಲರ್‌ನೊಬ್ಬನಿಗೆ ನಾಯಕತ್ವ ಕೊಡಲು ಹಿಂಜರಿದು ಸೌರವ್, ದ್ರಾವಿಡ್‌ರತ್ತ ಒಲಿದುಬಿಟ್ಟರು. ಸೌರವ್ ಮಿಂಚಿದರೂ ಇಂಜಿನೀಯರ್ ಮೆದುಳಿನ ಕುಂಬ್ಳೆಗೆ ಕೊಕ್ ನೀಡಿದ್ದರಿಂದ ನಷ್ಟ ಭಾರತ ತಂಡಕ್ಕಾಯಿತು. ಸೌರವ್‌ರ ಅನಗತ್ಯ ಅಗ್ರೆಶನ್‌ತನದಿಂದ ದೇಶದ ಖ್ಯಾತಿಗೆ ಮುಕ್ಕಾಯಿತು. ಕೇವಲ ಬಿಸಿಸಿಐನ ಹಣಬಲ ನಮ್ಮ ಇಮೇಜ್ ಉಳಿಸಿದೆಯೇ ವಿನಃ ಸನ್ನಡತೆಯ ಮಾತು ಬಂದರೆ ನಾವು ಹಿಂದೆ. ಸ್ವತಃ ಸೌರವ, ಹರ್ಭಜನ್, ಶ್ರೀಶಾಂತ್‌ರೆಲ್ಲ ಕ್ರಿಕೆಟ್ ಸಂಸ್ಕೃತಿಯನ್ನೆಲ್ಲ ಹರಿದು ಹಂಚಿದವರೇ. ಆ ಲೆಕ್ಕದಲ್ಲಿ, ಕುಂಬ್ಳೆ ಈ ಮುನ್ನವೇ ನಾಯಕರಾಗಿದ್ದರೆ ತಂಡದ ಮೌಲ್ಯ ಹೆಚ್ಚುತ್ತಿತ್ತು.
ಬ್ಯಾಟಿಂಗ್ ವಿಚಾರದಲ್ಲಿ ಮಾತ್ರ ಅನ್ಯಾಯಕ್ಕೆ ಅನಿಲ್ ತಮ್ಮನ್ನೇ ದೂಷಿಸಿಕೊಳ್ಳಬೇಕು. ಕೊನೆ ಪಕ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಕುಂಬ್ಳೆಯವರ ಬ್ಯಾಟೂ ಮಾತನಾಡಬೇಕಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಅಲ್ಲೊಂದು ೮೭, ಇಲ್ಲೊಂದು ಅರ್ಧ ಶತಕ ಸಮರ್ಥನೆಗೆ ಸಾಕಾಗುವಂತದಲ್ಲ. ರಣಜಿಯಲ್ಲಿ ಹಲವು ಶತಕ ಹೊಡೆದವ ಟೆಸ್ಟ್‌ನಲ್ಲಿ ಹಾಸ್ಯಾಸ್ಪದನಾಗುವುದೇ? ಅಂತದೊಂದು ನೋವು ನಮ್ಮನ್ನು ಕಾಡುತ್ತಿರುವಾಗಲೇ ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಚಿಮ್ಮಿ ಬಂದ ಆ ಟೆಸ್ಟ್ ಶತಕ ಕುಂಬ್ಳೆಯವರದಲ್ಲ, ನಮ್ಮದು! ಶತಕದ ಬಾಗಿಲು ದಾಟಲು ಗಿಟ್ಟಿಸಿದ ಆ ಕೊನೆಯ ಬೌಂಡರಿಯನ್ನು ಉಲ್ಲೇಖಿಸಿ ಮತ್ತೆ ನಮ್ಮ ಅನಿಲ್‌ರನ್ನು ಹೀಗಳೆದರೆ ಹುಷಾರ್!
ಕುಂಬ್ಳೆಯವರ ಕೊನೆಯ ಕ್ರಿಕೆಟ್ ದಿನಗಳಲ್ಲಾದರೂ ಕೆಲವು ಪ್ರತಿಫಲ ಸಿಕ್ಕಿತಲ್ಲ, ಅಷ್ಟು ಸಾಕು. ದ್ರಾವಿಡ್‌ರ ಅನಿರೀಕ್ಷಿತ ರಾಜೀನಾಮೆ, ಧೋನಿಯ ಎಳಸುತನದಿಂದ ಕುಂಬ್ಳೆಗೆ ನಾಯಕತ್ವ ಸಿಕ್ಕಿತು ಎಂಬುದು ನಿಜವಾದರೂ ಅದೊಂದು ತರಹ ಬಿಸಿಸಿಐ ಮಾಡಿಕೊಂಡ ಪ್ರಾಯಶ್ಚಿತ್ತವೂ ಹೌದು. ಸಮಸ್ಯೆಗಳ ಆಸ್ಟ್ರೇಲಿಯನ್ ಪ್ರವಾಸವನ್ನು ಕುಂಬ್ಳೆ ನಿರ್ವಹಿಸಿದ ರೀತಿಯ ಮುಂದೆ ನಾಯಕತ್ವದ ಸಾಮರ್ಥ್ಯ ವಿವರಿಸುವ ಬೇರೆ ಪ್ರಸ್ತಾಪಗಳ ಅಗತ್ಯವಿಲ್ಲ.
ನಿವೃತ್ತಿಯನ್ನು ಪತ್ರಕರ್ತರ ಮುಂದೆ ಘೋಷಿಸುವಾಗ ಅನಿಲ್ ಹೇಳಿದ್ದರು, ಈ ನಿರ್ಧಾರಕ್ಕೆ ನಿನ್ನೆ ಸಂಜೆ ಬಂದೆ. ಆನಂತರ ಅದನ್ನು ಕುಟುಂಬದ ಸದಸ್ಯರಿಗೆ, ಭಾರತದ ಕ್ರಿಕೆಟ್ ಮಂಡಳಿಯವರಿಗೆ ಮತ್ತು ಎಲ್ಲ ಸಹ ಆಟಗಾರರಿಗೆ ವೈಯುಕ್ತಿಕವಾಗಿ ತಿಳಿಸಿದ್ದೇನೆ ಇನ್ನೊಮ್ಮೆ ಮೇಲಿನ ಸಾಲುಗಳನ್ನು ಓದುವಾಗ ‘ಎಲ್ಲ ಆಟಗಾರರಿಗೆ ವೈಯುಕ್ತಿಕವಾಗಿ ತಿಳಿಸಿದ್ದೇನೆ’ ಎಂಬುದನ್ನು ಓದಿ, ಅರ್ಥೈಸಿ. ಕುಂಬ್ಳೆ ಅರ್ಥವಾಗುತ್ತಾರೆ! 


-ಮಾವೆಂಸ
ಭಾನುವಾರ, ನವೆಂಬರ್ 9, 2008

ಡಿಕ್ಷನರಿ ಓದಿರಿ!ತಲೆಬರಹ ಓದಿ ಒಮ್ಮೆಗೇ ನಕ್ಕವರಲ್ಲಿ ನೀವೂ ಒಬ್ಬರಾಗದಿದ್ದರೆ ಸಾಕು! ಬಹುಷಃ ಬಹುಮಂದಿ ನಗದೇ ಇರರು. ಅಲ್ಲವೇ ಮತ್ತೇ? ಡಿಕ್ಷನರಿಗಳು ಇರುವುದು ಶಬ್ಧಾರ್ಥ ಹುಡುಕಾಟಕ್ಕೆ. ಒಂಥರ ಕತ್ತಲೆಯಲ್ಲಿ ಪದಾರ್ಥ ಹುಡುಕಲು ಬ್ಯಾಟರಿ ಬಳಸಿದಂತೆ. ಹಾಗೆಂದುಕೊಂಡರೆ ಅದು ತಪ್ಪು ಹೆಜ್ಜೆ. ಪದ ಎನ್ನುವುದು ಜೀವನದ ಸಲೀಸು ಜಾರಿಗೆ ಸಲಕರಣೆ. ಡಿಕ್ಷನರಿ ಅಂತಹ ಪದಗಳ ದೊಡ್ಡ ಗುಚ್ಛ. ಅದರಲ್ಲಿ ಬರೀ ಶಬ್ಧದ ಅರ್ಥ ಇರುವುದಿಲ್ಲ. ಒಂದು ಶಬ್ಧದ ಪೂವಾಪರ, ಬಳಕೆ ವಿಧಾನ, ವಾಕ್ಯದಲ್ಲಿ ಉಪಯೋಗಿಸಿದ ಉದಾಹರಣೆ, ಅಷ್ಟೇಕೆ, ಹೇಗೇಗೆಲ್ಲ ಪದದ ಪ್ರಯೋಜನವನ್ನು ಪಡೆಯಬಹುದು ಎಂಬುದೂ ಇರುತ್ತದೆ. ನಿಜಕ್ಕೂ ಮಕ್ಕಳು ಡಿಕ್ಷನರಿಯನ್ನು ‘ಓದಲು ಆರಂಭಿಸಿಬಿಟ್ಟರೆ’ ಭಾಷೆಯ ಮೇಲಿನ ಅವರ ಹಿಡಿತ ಸಾವಿರ ಪಟ್ಟು ಉತ್ತಮಗೊಂಡೀತು. ಡಿಕ್ಷನರಿ ಸ್ವಯಂ ಪಾಠ ಮಾಡುವ ಮನೆಶಿಕ್ಷಕ ಎನ್ನಬಹುದು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಭಾಷಾ ಪಾಂಡಿತ್ಯ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ‘ಡಿಕ್ಷನರಿ ಓದಿರಿ’ ಒಂದು ಆಂದೋಲನವಾಗುವ ಅಗತ್ಯವಿದೆ.
ನಿಜ, ಡಿಕ್ಷನರಿಗಳದು ಬಹುರೂಪಿ ನಿಲುವು. ಒಂದು ಭಾಷೆಯ ಪದಕ್ಕೆ ಅದೇ ಭಾಷೆಯಲ್ಲಿ ಅಥವಾ ಹೊರತಾದ ಬೇರೆ ಭಾಷೆಯಲ್ಲಿ ಅರ್ಥ, ಇತಿಹಾಸ ವಿವರಿಸುವ ಮಾದರಿ ಒಂದೇ ಅಲ್ಲ. ತ್ರಿ ಬಾಷಾ ಡಿಕ್ಷನರಿಗಳು ಕೂಡ ಇವೆ. ಪ್ರತಿ ವಿಷಯಕ್ಕೂ ಪ್ರತ್ಯೇಕವಾದ ಡಿಕ್ಷನರಿಗಳಿವೆ. ಇವತ್ತಿಗೂ ಡಿಕ್ಷನರಿ ನೋಡುವುದೆಂದರೆ ಪದದ ಅರ್ಥ ಗೊತ್ತಾಗದ ಕಷ್ಟ ಕಾಲದಲ್ಲಿ ಮಾತ್ರ ಎಂಬ ಅಭಿಪ್ರಾಯ ಖುದ್ದು ಶಿಕ್ಷಕರಿಗಿದೆ. ಅದಲ್ಲ, ಡಿಕ್ಷನರಿಯಲ್ಲಿ ಒಮ್ಮೆ ಕಣ್ಣಾಡಿಸುವ ಹವ್ಯಾಸ ಬೆಳೆದರೆ ನೀಡುವ ಖುಷಿ ವರ್ಣಿಸಲಾಗದ್ದು. ಮುಖ್ಯವಾಗಿ, ಪದಸಂಪತ್ತು ಬೆಳೆದು ಓದುವವರ ವ್ಯಕ್ತಿತ್ವವೇ ಬದಲಾಗುವ ಪರಿಯಲ್ಲಿ ಉತ್ಪ್ರೇಕ್ಷೆಯೇನಿಲ್ಲ.
ಡಿಕ್ಷನರಿ ಎಂದ ತಕ್ಷಣ ನೆನಪಾಗುವುದು ಆಕ್ಸ್‌ಫರ್ಡ್. ಇಪ್ಪತ್ತು ಸಂಪುಟಗಳ ಆಕ್ಸ್‌ಫರ್ಡ್ ಇಂಗ್ಲೀಷ್ ಡಿಕ್ಷನರಿಯಲ್ಲಿ ೨೧,೭೩೦ ಪುಟಗಳಿವೆ. ಇದನ್ನು ಇಂಗ್ಲೀಷ್‌ನ ಸಂಪೂರ್ಣ ಡಿಕ್ಷನರಿ ಎಂದೂ ಕರೆಯಲಾಗುತ್ತದೆ. ಓಇಡಿ ೬೧೫,೧೦೦ ಪದಗಳನ್ನು ೨,೪೩೬,೬೦೦ ವ್ಯಾಖ್ಯಾನಗಳ ಮೂಲಕ ವರ್ಣಿಸುತ್ತದೆ. ಶೇಕ್ಸ್‌ಸ್ಪಿಯರ್‌ನನ್ನು ೩೩,೩೦೦ ಬಾರಿ ಉಲ್ಲೇಖಿಸಲಾಗಿದ್ದರೆ, ಅವನ ನಾಟಕ ಹ್ಯಾಮ್ಲೆಟ್‌ನ್ನೇ ೧,೬೦೦ ಕಡೆ ದಾಖಲಿಸಲಾಗಿದೆ!
ದುಬಾರಿ ಬೆಲೆಯ ಈ ಮಾದರಿಯ ಓಇಡಿ, ವೆಬ್‌ಸ್ಟರ್ ಅಮೆರಿಕನ್ ಡಿಕ್ಷನರಿ, ಕ್ಯಾಂಡಮ್ ಹೌಸ್ ಡಿಕ್ಷನರಿಗಳನ್ನು ಸಾಮಾನ್ಯರು ಖರೀದಿಸುವುದು ಸುಲಭದ ಮಾತಲ್ಲ. ಹಾಗಾಗಿಯೇ ಇತ್ತೀಚಿನ ದಶಕದಲ್ಲಿ ಕಲಿಯುವ ಹಂತದಲ್ಲಿರುವವರಿಗಾಗಿ ಲರ್ನರ್‍ಸ್ ಡಿಕ್ಷನರಿಗಳನ್ನು ಹೊರತರಲಾಗಿದೆ. ತುಂಬಾ ಸರಳವಾಗಿ ಮತ್ತು ಹೆಚ್ಚು ಪ್ರಚಲಿತ ಶಬ್ಧಗಳನ್ನು ಮಾತ್ರ ಆಯ್ದು ವಿವರಿಸಲಾಗಿರುತ್ತದೆ. ಉದಾಹರಣೆಗೆ, ‘ಲಾಂಗ್‌ಮನ್ ಡಿಕ್ಷನರಿ ಆಫ್ ಕಂಟೆಂಪರ್ವರಿ ಇಂಗ್ಲೀಷ್’ನಲ್ಲಿ ೨,೦೭,೦೦೦ ಪದ-ವಿಶೇಷಣಗಳನ್ನು ವಿವರಿಸಲು ಕೇವಲ ಎರಡು ಸಾವಿರ ಸಾಮಾನ್ಯ ಪದ ಬಳಸಲಾಗಿದೆ. ಡಿಕ್ಷನರಿಯ ಗಾತ್ರವೂ ಚಿಕ್ಕದು. ಬೆಲೆಯೂ ಕೈಗೆಟುಕುವಂತದು. ಇಂತಹುದೇ ಡಿಕ್ಷನರಿಯನ್ನು ಮ್ಯಾಕ್‌ಮಿಲಾನ್, ಆಕ್ಸ್‌ಫರ್ಡ್ ಸಂಸ್ಥೆಗಳೂ ಪ್ರಕಾಶಿಸಿವೆ.
ಡಿಕ್ಷನರಿ ಎಂದಾಕ್ಷಣ ಗಂಭೀರವಾಗಿಯೇ ಪದಗಳನ್ನು ವಿವರಿಸಬೇಕು ಎಂಬುದೂ ತಪ್ಪು ಕಲ್ಪನೆ. ಶಬ್ಧಾರ್ಥ ಚಿಂತನೆಗೆ ಹಾಸ್ಯ ಸ್ವರೂಪ, ಆಟದ ಮೆರುಗು ಸಹ ನೀಡಬಹುದು ಎನ್ನುವುದನ್ನು ಚಾಂಬರ್‍ಸ್ ಇಂಗ್ಲೀಷ್ ಡಿಕ್ಷನರಿ ಶ್ರುತಪಡಿಸಿದೆ. ಡಿಕ್ಷನರಿಯಲ್ಲಿ ಪದ ಸರ್ಕಸ್, ಪದಬಂಧಗಳನ್ನು ಅಳವಡಿಸಿರುವುದು ಸ್ವಾಗತಾರ್ಹ. ಅಷ್ಟೇಕೆ, ರಸವತ್ತಾದ ಪದ ವಿವರಣೆಗಳಿವೆ. ಐಡಿಯಲ್ ವುಮನ್ ಎಂಬ ವಿಶೇಷಣವನ್ನು ಅದು ವಿವರಿಸುವುದು ಹೀಗೆ, ‘ಯಾರು ಮದುವೆಯಾದ ಪುರುಷರ ಪತ್ನಿಯರ ಲೋಪ ದೋಷಗಳನ್ನು ಹೊಂದಿರುವುದಿಲ್ಲವೋ ಅವರು!’ ದ್ವಿಚಕ್ರವಾಹನದ ‘ಪಿವಿಲಿಯನ್ ರೈಡರ್’ಗೆ ಪದಕೋಶ ಹೇಳುತ್ತದೆ, some one free of responsibility, but full of advice! 
ಮುಖ್ಯವಾಗಿ, ಇಂಗ್ಲೀಷ್ ಡಿಕ್ಷನರಿಗಳು ಪ್ರತಿ ವರ್ಷ ಪರಿಷ್ಕಾರಕ್ಕೊಳಗಾಗುತ್ತವೆ. ಜೊತೆಗೆ ಇಂಗ್ಲೀಷ್ ಭಾಷೆ ಬೇರೆ ಭಾಷೆಗಳಿಂದ ಪದಗಳನ್ನು ಸ್ವೀಕರಿಸುವುದರಲ್ಲಿ ಸಂಕೋಚಪಟ್ಟುಕೊಳ್ಳುವುದಿಲ್ಲ. ಇದೇ ಕಾರಣದಿಂದ ಆ ಭಾಷೆ, ಪದಕೋಶ ಬೆಳೆಯುತ್ತಲೇ ಇದೆ. ಬಹುಷಃ ಈ ಸಮಯದಲ್ಲಿ ಕನ್ನಡ ಪದಕೋಶಗಳ ಬಗ್ಗೆ ಪ್ರಸ್ತಾಪಿಸುವುದೂ ಬೇಸರದ ಸಂಗತಿ. ಇಲ್ಲಿ ಪರಿಷ್ಕರಣೆ ಕಾಲಕಾಲಕ್ಕೆ ನಡೆದಿದ್ದಿಲ್ಲ. ‘ಇಗೋ ಕನ್ನಡ’ದಂತ ಕೆಲವೇ ಕೆಲವು ಪ್ರಯತ್ನಗಳು ಡಿಕ್ಷನರಿ ಸಂಸ್ಕೃತಿಯನ್ನು ಜೀವಂತವಾಗಿಟ್ಟಿವೆ. ವಾಸ್ತವವಾಗಿ, ಇಗೋ ಕನ್ನಡದ ಯಶಸ್ಸು ಕನ್ನಡದಲ್ಲೂ ‘ಡಿಕ್ಷನರಿ ಓದಿರಿ’ ಆಂದೋಲನಕ್ಕೆ ಭವಿಷ್ಯವಿದೆ ಎನ್ನುವುದನ್ನು ತೋರಿಸಿದೆ.
ಕನ್ನಡದ ಮಡಿವಂತಿಕೆ ಭಾಷಾ ಬೆಳವಣಿಗೆಯ ದೃಷ್ಟಿಯಿಂದ ಪ್ರಶ್ನಾರ್ಹ. ಪೋಲೀಸರನ್ನು ಬಲವಂತವಾಗಿ ಆರಕ್ಷಕರು ಎಂದು ಅನುವಾದಿಸುವುದು, ಇಂಜಿನೀಯರರನ್ನು ಅಭಿಯಂತರರು ಎಂದು ಕರ್ಣ, ಜಿಹ್ವೆಗಳಿಗೆ ಕಷ್ಟ ಕೊಡುವುದು ನಡೆದಿರುವುದರಿಂದಲೇ ಭಾಷೆ ಸೊರಗಿದೆ. ಹೋಗಲಿ, ಈ ತರ್ಜುಮೆಗಳಾದರೂ ಎಷ್ಟರಮಟ್ಟಿಗೆ ಜಾರಿಯಲ್ಲಿದೆ?
ಪದಕೋಶಕ್ಕೆ ಈಗ ಸೀಮಿತ ಅರ್ಥವಿಲ್ಲ. ಇಷ್ಟೇ ಎಂಬ ಚೌಕಟ್ಟು ಇಲ್ಲ. ಇಂಗ್ಲೀಷ್‌ನ ಕೋಲಿನ್ಸ್ ಕೋನ್ಸಿಸ್ ಡಿಕ್ಷನರಿಯ ಇತ್ತೀಚಿನ ಆವೃತ್ತಿಯಲ್ಲಿ ಪದಗಳ ಜೊತೆಗೆ ಸಂಬಂಧಿಸಿದ ವೆಬ್‌ಸೈಟ್ ಲಿಂಕ್‌ಗಳನ್ನು ನೀಡಲಾಗಿದೆ. ಎನ್‌ಸೈಕ್ಲೋಪೀಡಿಯಾಗಳ ಸಂಕ್ಷಿಪ್ತ ಮಾಹಿತಿಯೂ ಅವೇ ಪುಟಗಳಲ್ಲಿ ಲಭ್ಯ. ಈ ಮಾದರಿ ಪ್ರಸ್ತುತ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು. ಇಂಗ್ಲೀಷ್‌ನಲ್ಲಿ ಸಾಕಷ್ಟು ಖಾಸಗಿ ಡಿಕ್ಷನರಿ ಪ್ರಕಾಶನಗಳಿವೆ. ಪೆಂಗ್ವಿನ್, ಅಮೆರಿಕನ್ ಹೆರಿಟೇಜ್, ದಿ ವರ್ಡ್ ಬುಕ್‌ಗಳು, ಮೇಲೆ ಹೇಳಿದ ಆಕ್ಸ್‌ಫರ್ಡ್, ವೆಬ್‌ಸ್ಟರ್, ಕೋಲಿನ್ಸ್‌ನಂತ ಸಂಸ್ಥೆಗಳ ಜೊತೆ ಚಾಲ್ತಿಯಲ್ಲಿವೆ. ಮತ್ತೆ ಕನ್ನಡದ ವಿಚಾರಕ್ಕೆ ಬಂದಲ್ಲಿ, ಮಾರುಕಟ್ಟೆಯ ಕಾರಣದಿಂದಲೇ ಇರಬೇಕು, ಇಲ್ಲಿ ಖಾಸಗಿ ಪ್ರಯತ್ನಗಳಿಗೆ ಉತ್ತೇಜನ ಸಿಕ್ಕಿಲ್ಲ. ಸಾಕಷ್ಟು ಹಣ, ವಿಪರೀತ ಶ್ರಮ, ಸಂಶೋಧನೆಗಳನ್ನು ಬಯಸುವ ಡಿಕ್ಷನರಿ ಪರಿಷ್ಕಾರ ಕನ್ನಡಕ್ಕಂತೂ ಸದ್ಯಕ್ಕೆ ಗಗನ ಕುಸುಮ. ಡಿಕ್ಷನರಿ ಓದುವ ಆಂದೋಲನ ಇದನ್ನು ಬದಲಿಸೀತು.
ಈ ದಿನಗಳಲ್ಲಿ ಡಿಕ್ಷನರಿಯ ಸ್ವರೂಪ ಕಂಪ್ಯೂಟರ್ ತಾಂತ್ರಿಕತೆಯಲ್ಲಿ ಕ್ರಾಂತಿಕಾರಕ ವೇಗದಲ್ಲಿ ಬದಲಾಗಿದೆ. ಮುದ್ರಿತ ಡಿಕ್ಷನರಿಗಳ ಮೇಲೆ ಒಂದು ನಿಜವಾದ ಆರೋಪ ಇತ್ತು. ನಾವು ಹುಡುಕುವ ಪದದ ವಿವರ ಎಲ್ಲಿದೆ ಎಂಬ ಮಾಹಿತಿ, ಶಬ್ಧದ ಅಸಲಿ ಅಕ್ಷರಗಳ ಅರಿವು ಇಲ್ಲದ ಪಕ್ಷದಲ್ಲಿ ನಮ್ಮ ಹುಡುಕಾಟ ಹುಲ್ಲಿನ ಗೊಣಬೆಯಲ್ಲಿ ಸೂಜಿ ಹುಡುಕಿದಂತಾಗುತ್ತಿತ್ತು. ಇನ್ನಿಲ್ಲ ಆ ಕಷ್ಟ.  ಡಿಕ್ಷನರಿಗಳು ಈಗ ಒಂದು ‘ಕ್ಲಿಕ್’ಗೆ ಎದುರಲ್ಲಿ! ಎಲ್ಲ ಪ್ರಸಿದ್ಧ ಡಿಕ್ಷನರಿಗಳು ಅಂತರ್ಜಾಲ ಆವೃತ್ತಿಗಳನ್ನು ಹೊಂದಿದ್ದು ಹೆಚ್ಚು ಸೌಲಭ್ಯವನ್ನು  ಹೊಂದಿವೆ. ಪದ ಅರ್ಥದಂತ ಸಾಮಾನ್ಯ ಡಿಕ್ಷನರಿ ಅಂಶಗಳನ್ನು ಬಿಡಿ, ಉಚ್ಛಾರಣೆಯ ಆಡಿಯೋ ರೂಪವೂ ಇರುತ್ತಿದೆ. ಇವುಗಳ ಪ್ರಧಾನ ಆವೃತ್ತಿಗೆ ವಾರ್ಷಿಕ ಸದಸ್ಯತ್ವವಿದೆ. ವೆಬ್‌ಸ್ಟರ್‌ನ ಎರಡು ವಿಭಿನ್ನ ಮಾದರಿಗೆ ವಾರ್ಷಿಕ ೧೪.೯೫ ಡಾಲರ್ ಹಾಗೂ ೨೯.೯೫ ಡಾಲರ್ ನೀಡಿ ಚಂದಾದಾರರಾಗಬೇಕು. ಕೆಲವು ಉಚಿತ ಮಾದರಿಗಳೂ ಇವೆ. ಉದಾಹರಣೆಗೆ, ಆಕ್ಸ್‌ಫರ್ಡ್ ಲರ್ನರ್‍ಸ್ ಡಿಕ್ಷನರಿ ಮತ್ತು ಕಾಪ್ಯಾಕ್ಟ್ ಡಿಕ್ಷನರಿಗಳನ್ನು ಉಚಿತವಾಗಿ ಒದಗಿಸುತ್ತದೆ. ಅಂತರ್ಜಾಲದಲ್ಲಿ ಪದೇಪದೆ ವೀಕ್ಷಿಸಿದ ಪದಪಟ್ಟಿ, ಇಗೋ ಕನ್ನಡದ ವೆಂಕಟಸುಬ್ಬಯ್ಯ ವಿವರಿಸಿದಂತ ಪದ ಟಿಪ್ಪಣಿ ಮುಂತಾದ ಸೌಲಭ್ಯವೂ ಲಭ್ಯ.  ಅಂತರ್ಜಾಲ ಡಿಕ್ಷನರಿಗಳ ಬಗ್ಗೆ ಕುತೂಹಲವಿರುವವರು ಸುಮ್ಮನೆ ಒಮ್ಮೆonelook.comನಂತ ವೆಬ್‌ಸೈಟ್‌ನಲ್ಲಿ ಇಣುಕಬಹುದು. 
ಕಂಪ್ಯೂಟರ್ ಮೌಸ್‌ನ ಕ್ಲಿಕ್ ಇರಲಿ, ಕಪ್ಪು ಶಾಹಿಯ ಡಿಕ್ಷನರಿ ಕಾಗದದ ಪುಟಗಳಿರಲಿ ನಾವು ಅದನ್ನು ಓದುವುದನ್ನು ಚಟವಾಗಿಸಿಕೊಳ್ಳಬೇಕು. ಸಮಯವಿದ್ದಾಗಲೆಲ್ಲ ಅತ್ತ ಕಣ್ಣಾಡಿಸಬೇಕು. ಆಸಕ್ತರ ಮಧ್ಯೆ ಈ ಕುರಿತು ಚರ್ಚೆಯಾಗಬೇಕು. ದುರಂತವೆಂದರೆ, ಇತ್ತೀಚೆಗೆ ಓದುವುದೇ ಮರೆತ ಮಾತಾಗುತ್ತಿದೆ, ನಾವೆಲ್ಲ ಬರೀ ನೋಡುಗರಾಗುತ್ತಿದ್ದೇವೆ. ಅಕ್ಷರಶಃ ಮೂರ್ಖರ ಪೆಟ್ಟಿಗೆಯ ದಾಸರಾಗುತ್ತಿದ್ದೇವೆ. ಹೀಗಾಗಿ ಇತರ ಪುಸ್ತಕಗಳನ್ನೇ ತಿರಸ್ಕರಿಸುವ ನಾವು ಡಿಕ್ಷನರಿ ಓದಿರಿ ಎಂದರೆ ಕೇಳಿಸಿಕೊಳ್ಳುತ್ತೇವೆ. ಸದ್ಯ, ಬ್ರಿಟನ್‌ನಲ್ಲಿ ಈಗ ಡಿಕ್ಷನರಿ ಓದುವಿಕೆ ಪಠ್ಯಕ್ರಮದ ಒಂದು ಭಾಗ. ಅದನ್ನು ಜಾರಿಗೆ ತರಲು ಕನ್ನಡದಂತ ಸೀಮಿತ ವ್ಯಾಪ್ತಿಯ ಪ್ರಾದೇಶಿಕ ಭಾಷೆಗೂ ತ್ರಾಸಿಲ್ಲ. ಆಂದೋಲನ ಹುಟ್ಟಲೂ ಇಷ್ಟು ಸಾಕು. ಅಲ್ಲವೇ?
-ಮಾವೆಂಸ

ಶುಕ್ರವಾರ, ನವೆಂಬರ್ 7, 2008

ನಗೆಹೊನಲು 
ಕಬ್ಬನ್‌ಪಾರ್ಕ್‌ನ ಆಚೆ ಕಾರಿನಲ್ಲಿ ಕುಳಿತು ಇನ್ನೇನು ಹೊರಡಬೇಕು ಎಂದಿದ್ದ ಫ್ರೊಫೆಸರ್ ನೋಡುತ್ತಾರೆ, ಒಬ್ಬ ಮಧ್ಯವಯಸ್ಕನನ್ನು ಮೂರು ನಾಯಿಗಳು ಬೆನ್ನಟ್ಟಿ ಬರುತ್ತಿವೆ. ತಕ್ಷಣವೇ ಕಾರಿನ ಬಾಗಿಲು ತೆಗೆದು ಆ ಮನುಷ್ಯನನ್ನು ಒಳಕರೆಯುತ್ತಾರೆ.
ದಡಕ್ಕನೆ ಕಾರಿನ ಒಳಹೊಕ್ಕ ಆ ಮನುಷ್ಯ ಥ್ಯಾಂಕ್ಸ್ ಹೇಳಿದ, ಬಹಳಷ್ಟು ಜನ ನನಗೆ ಲಿಫ್ಟ್ ಕೊಡಲೇ ಅಂಜುತ್ತಾರೆ. ಅವರೆಲ್ಲ ನನ್ನ ನಾಯಿಗಳನ್ನು ನೋಡಿ ಬೆದರಿಬಿಡುತ್ತಾರೆ. ಅವನ್ನೂ ಒಳಕರೆದುಕೊಳ್ಳಲೇ, ಜಂಟಲ್‌ಮನ್!?
*******

ಲಾಯರ್ ರಂಗರ ಕಛೇರಿಯ ಮುಂದಿದ್ದ ಬೋರ್ಡ್ ಇಂತಿತ್ತು, ‘ಮನಸ್ಸಿದ್ದಲ್ಲಿ ದಾರಿಯಿದೆ. ದಾರಿಯಿದ್ದಲ್ಲಿ ಕಾನೂನುಗಳಿವೆ. ಕಾನೂನುಗಳಿದ್ದಲ್ಲಿ ಲೂಪ್‌ಹೋಲ್‌ಗಳಿರುತ್ತವೆ. ಈ ಲೂಪ್‌ಹೋಲ್ ಇರುವಲ್ಲಿ ನಿಮ್ಮ ರಕ್ಷಣೆಗೆ ನಾನಿದ್ದೇನೆ! ಬನ್ನಿ, ಸುಸ್ವಾಗತ!!’


ಕಳ್ಳನ ವಿಚಾರಣೆ ನಡೆಯುತ್ತಿತ್ತು. ಕಳ್ಳನ ಪರ ಇದ್ದ ವಕೀಲ ಚಾಲಾಕಿ. ಜೀವಾವಧಿ ಶಿಕ್ಷೆ ವಿಧಿಸಬಹುದಾದ ಸಾಧ್ಯತೆಯಿದ್ದ ಕಾರಣ ಮುಖ್ಯ ಜಡ್ಜ್‌ಗೆ ಲಂಚ ಕೊಟ್ಟು ಸರಿಮಾಡಿಕೊಂಡಿದ್ದ. ಆತ ಜಡ್ಜ್‌ಗೆ ಹೇಗಾದರೂ ಮಾಡಿ ಹತ್ತು ವರ್ಷದ ಜೈಲು ಮಾಡಲು ವಿನಂತಿಸಿದ್ದ. 
ಅದೃಷ್ಟ! ಜಡ್ಜ್ ಖಡಕ್ಕಾಗಿ ಹತ್ತು ವರ್ಷಗಳ ಶಿಕ್ಷೆಯನ್ನೇ ಘೋಷಿಸಿದರು. ಕೆಲಕಾಲದ ನಂತರ ಜಡ್ಜ್‌ನ್ನು ಭೇಟಿಯಾದ ವಕೀಲ ಅವರನ್ನು ಅಭಿನಂದಿಸಿದ, ತೀರ್ಪು ಬರುವವರೆಗೂ ನಾನು ಗಾಬರಿಯಾಗಿದ್ದೆ. ಬಹುಷಃ ನೀವೂ ಟೆನ್ಶನ್‌ನಲ್ಲಿದ್ದಂತೆ ಕಾಣುತ್ತಿತ್ತು.
ನಿಜ ನಿಜ..., ಜಡ್ಜ್ ಒಪ್ಪಿಕೊಂಡ. ನೋಡಿ, ಉಳಿದ ಜಡ್ಜ್‌ಗಳನ್ನು ಸಮಾಧಾನಪಡಿಸಿ ಈ ಶಿಕ್ಷೆ ವಿಧಿಸಲು ಕಷ್ಟವಾಯಿತು. ಅವರೆಲ್ಲ ಆರೋಪಿಯನ್ನು ಬಿಟ್ಟುಬಿಡೋಣ ಎನ್ನತೊಡಗಿದ್ದರು ಕಣ್ರೀ......!
******

ಕೆಂಪನ ಮೇಲೆ ಕ್ರೀಡಾ ಸಾಮಗ್ರಿಗಳ ಅಂಗಡಿಯಲ್ಲಿ ಕಳ್ಳತನ ಮಾಡಿದ ಆರೋಪ ಬಂದಿತ್ತು. ಲಾಯರ್‌ನೇನೋ ಈತನ ಪರ ವಾದ ನಡೆಸಲು ಒಪ್ಪಿಕೊಂಡ. ಆದರೆ ಆತ ಎರಡು ಷರತ್ತು ವಿಧಿಸಿದ. ಕೆಂಪ ಪ್ರಾಮಾಣಿಕ ಎಂಬುದನ್ನು ಸ್ಪಷ್ಟಪಡಿಸಬೇಕು ಮತ್ತು ಎರಡು ಸಾವಿರ ರೂ. ಶುಲ್ಕ ಪಾವತಿಸಬೇಕು.
ಕೆಂಪ ಸ್ವಲ್ಪ ಹೊತ್ತು ಯೋಚಿಸಿದ. ನಂತರ ಚೌಕಾಶಿ ಶುರು ಹಚ್ಚಿದ. ಸಾರ್, ದಯವಿಟ್ಟು ನಾಲ್ಕು ನೂರು ರೂ.ಗೆ ಒಪ್ಪಿಕೊಳ್ಳಿ. ಬೇಕಿದ್ದರೆ ನಿಮಗೊಂದು ಜೊತೆ ಒಳ್ಳೆಯ ಕ್ವಾಲಿಟಿಯ ಟೆನಿಸ್ ರ್‍ಯಾಕೆಟ್‌ಗಳನ್ನು ತಂದುಕೊಡುತ್ತೇನೆ!
******

ಗುಂಡ ತನ್ನ ಕುದುರೆಯನ್ನು ವರ್ಣಿಸುತ್ತಿದ್ದ. ‘ಪ್ರತಿದಿನ ಬೆಳಿಗ್ಗೆ ಡೈರಿಯಿಂದ ಹಾಲಿನ ಪ್ಯಾಕ್ ತಂದುಕೊಡುತ್ತದೆ. ಆನಂತರ ಪೇಪರ್ ತಂದು ಕೈಗಿಡುವುದೂ ಇದೇ. ಆಫೀಸ್‌ಗೂ ಇದರ ಮೇಲೆ ಹೋಗುತ್ತೇನೆ. ನಾನು ವಾಪಾಸ್ ಮನೆಗೆ ಹೊರಡುವವರೆಗೂ ಅದು ಕಾಯುತ್ತಿರುತ್ತದೆ.....’ ಗುಂಡನ ಕತೆ ಮುಂದುವರೆದಿತ್ತು.  ಇದನ್ನೆಲ್ಲ ಕೇಳಿ ಕೆಂಪ ಆ ಕುದುರೆಯತ್ತ ಆಕರ್ಷಿತನಾದ. ಗುಂಡ ಹೇಳಿದ ಐದು ಸಾವಿರ ರೂ. ಬೆಲೆಯನ್ನು ತೆತ್ತು ಕುದುರೆಯನ್ನು ಖರೀದಿಸಿಯೇ ಬಿಟ್ಟ.
ವಾರದ ನಂತರ ಕೆಂಪನಿಗೆ ಗುಂಡ ಸಿಕ್ಕ. ಕೆಂಪ ಕೆಂಡಾಮಂಡಲ. ನಿನ್ನ ಕುದುರೆ ಮಲಗುವುದು, ತಿನ್ನುವುದು ಬಿಟ್ಟರೆ ಇನ್ನೇನೂ ಮಾಡುವುದಿಲ್ಲ. ದರಿದ್ರ ಕುದುರೆ.... ಬೈಯ್ದಾಟ ಮುಂದುವರಿದಿತ್ತು. ಗುಂಡ ಸಮಾಧಾನವಾಗಿ ಹೇಳಿದ, ಈ ಕುದುರೆಯನ್ನು ನೀನು ಹೀಗೆ ಬೈಯುತ್ತಲೇ ಇದ್ದರೆ ಅದನ್ನು ಮಾರಾಟ ಮಾಡುವುದು ನಿನಗೇ ಕಷ್ಟವಾದೀತು. ಹುಷಾರ್!!


ಸಂತೆಯಲ್ಲೊಂದು ಶೋ. ಪೈಲ್ವಾನ್ ಮನುಷ್ಯ ನಿಂಬೆಹಣ್ಣನ್ನು ಹಿಂಡಿ ಹುಳಿಯನ್ನಷ್ಟೂ ತೆಗೆಯುತ್ತಾನೆ. ಇನ್ನೊಂದು ಹನಿ ಅದರಲ್ಲಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ನೆರೆದವರಲ್ಲಿ ಸವಾಲು ಹಾಕುತ್ತಿದ್ದ. ‘ಇದರಿಂದ ಇನ್ನೊಂದು ಹನಿ ರಸವನ್ನು ತೆಗೆದವರಿಗೆ ಎರಡು ಸಾವಿರ ರೂಪಾಯಿ ಕೊಡುತ್ತೇನೆ. ಸೋತವರು ನೂರು ರೂಪಾಯಿ ಕೊಡಬೇಕು’ ಹಲವರು ಪ್ರಯತ್ನಿಸಿ ಸೋತರು. ಆಗ ತೆಳ್ಳಗಿನ ಸೂಟ್‌ಧಾರಿ ಯುವಕನೊಬ್ಬ ಮುನ್ನುಗ್ಗಿ ಸವಾಲು ಸ್ವೀಕರಿಸಿದ. ಆತ ಸುಲಭದಲ್ಲಿ ಹಲವು ಹನಿ ನಿಂಬೆ ರಸ ಬರುವಂತೆ ಮಾಡಿದ್ದಲ್ಲದೆ ಇನ್ನಷ್ಟು ಬೇಕಾ ಎಂದ. ಈಗ ಮಾತ್ರ ಪೈಲ್ವಾನ್‌ನಿಗೆ ಆಶ್ಚರ್ಯವಾಯಿತು. ಏನು ಕೆಲಸ ಮಾಡುವೆ? ಪ್ರಶ್ನಿಸಿದ.
ನಸುನಗುತ್ತ ಯುವಕ ಹೇಳಿದ,  ನಾನೊಬ್ಬ ಇನ್‌ಕಂ ಟ್ಯಾಕ್ಸ್ ಅಧಿಕಾರಿ!ರೀ, ನಮ್ಮ ಮಗ ನಮಗೆ ಪತ್ರ ಬರೆಯದೆ ಎಷ್ಟು ದಿನಗಳಾದವು........ ಗೊತ್ತೇ?
ತಡೆ, ತಡೆ. ನನ್ನ ಚೆಕ್ ಪುಸ್ತಕ ನೋಡಿ ಹೇಳುವೆ. ಕೊನೆಯ ಬಾರಿ ಅವನಿಗೆ ಚೆಕ್ ಕೊಟ್ಟದ್ದು ಯಾವತ್ತು ಎಂದು!!ಗಂಡ ಹೆಂಡತಿ ಇಬ್ಬರೂ ಗಾಲ್ಫ್ ಆಟಗಾರರು. ಒಂದು ರೊಮ್ಯಾಂಟಿಕ್ ಕ್ಷಣದಲ್ಲಿ ಹೆಂಡತಿ ಕೇಳಿದಳು, ಒಂದೊಮ್ಮೆ ನಾನು ಸತ್ತುಹೋದರೆ ನೀವು ಮರುಮದುವೆಯಾಗಿ ಇದೇ ಮನೆಯಲ್ಲಿರುವಿರೇ?
ಹೌದು ಪ್ರಿಯೆ, ಇದು ಸ್ವಂತ ಮನೆಯಲ್ಲವೇ?
ನಮ್ಮ ಕಾರನ್ನು ನೀವಿಬ್ಬರೂ ಉಪಯೋಗಿಸುವಿರೇ?
ಎಸ್ ಡಿಯರ್, ಅದನ್ನು ನಾವೇ ಖರೀದಿಸಿದ್ದು ತಾನೇ?
ನನ್ನ ಗಾಲ್ಫ್ ಕ್ಲಬ್‌ಗಳನ್ನು ಮದುವೆಯಾಗುವವಳಿಗೆ ಕೊಡುವಿರೇ?
ನೋ ನೋ ಡಾರ್ಲಿಂಗ್, ಈ ಗಾಲ್ಫ್ ಸ್ಟಿಕ್‌ಗಳಿಂದ ಅವಳಿಗೆ ಉಪಯೋಗವಿಲ್ಲ. ಆಕೆ ಲೆಫ್ಟ್‌ಹ್ಯಾಂಡರ್!

******
ಸಂಗೀತ ಸಭೆಗೆ ಗುಂಡನನ್ನು ಆತನ ಪತ್ನಿ ಒತ್ತಾಯಪೂರ್ವಕವಾಗಿ ಕರೆದೊಯ್ದಳು. ಕೆಲಸಮಯದ ನಂತರ ಪಕ್ಕದಲ್ಲಿ ಕುಳಿತವನ ಪಕ್ಕೆಲಬು ಗುಂಡನನ್ನು ತಿವಿಯತೊಡಗಿತು. ಸ್ವಲ್ಪ ಕಾಲ ಸಹಿಸಿಕೊಂಡರೂ ಇನ್ನು ಗುಂಡನಿಗೆ ತಡೆಯಲಾಗಲಿಲ್ಲ. ಹೆಂಡತಿಯನ್ನು ಕರೆದು ಹೇಳಿದ, ನಾವೆಲ್ಲಾದರೂ ಬೇರೆಡೆ ಕುಳಿತುಕೊಳ್ಳೋಣವೇ? ಈ ಮನುಷ್ಯ ಸಂಗೀತವನ್ನು ಸವಿಯಲು ಬಿಡುತ್ತಿಲ್ಲ....
ಪತ್ನಿಗೆ ಕೆಂಡಾಮಂಡಲ ಸಿಟ್ಟು ಬಂತು, ಇಷ್ಟೇ ತಾನೇ? ಅತ್ತ ಎಲ್ಲಾದರೂ ಹೋಗಿ ಕುಳಿತುಕೊಂಡಿದ್ದರಾಗುತ್ತಿರಲಿಲ್ಲವೇ? ಅಷ್ಟಕ್ಕೆ ನನ್ನನ್ನು ನಿದ್ರೆಯಿಂದ ಎಬ್ಬಿಸುವುದೇ?


ಪಾರ್ಕ್‌ನಲ್ಲಿ ಯುವಕ- ಯುವತಿ ಪರಸ್ಪರ ಚುಂಬಿಸುತ್ತಿದ್ದರು. ಅದನ್ನು ನೋಡಿದ ಪತ್ನಿ ಪತಿಗೆ ತಿವಿದಳು, ನೋಡಿ, ಆತ ಹೇಗೆ ಮುತ್ತಿಕ್ಕುತ್ತಿದ್ದಾನೆ. ನೀವೇಕೆ ಹಾಗೆ ಮಾಡಬಾರದು?
ಪತಿ ಸಮಜಾಯಿಸಿ ಇತ್ತ, ನಿಜ ಪ್ರಿಯೆ, ನನಗೂ ಹಾಗೆ ಮುತ್ತಿಕ್ಕುವ ಆಸೆ. ಆದರೆ ಯುವತಿಗೆ ಚುಂಬಿಸಿದರೆ ಆ ಹುಡುಗ ನನ್ನನ್ನು ಬಿಟ್ಟಾನೇ?


ನೀವು ಸಾವಿನ ನಂತರವೂ ಆತ್ಮ ಬದುಕಿರುತ್ತದೆ ಎಂಬುದನ್ನು ನಂಬುವಿರೇ? ಬಾಸ್ ತನ್ನ ಕೈಕೆಳಗಿನ ಕ್ಲರ್ಕ್‌ನ್ನು ಕೇಳಿದ, ಯೆಸ್ ಸರ್ ಕ್ಲರ್ಕ್‌ಗೆ ತಲೆಬುಡ ಅರ್ಥವಾಗಲಿಲ್ಲ. 
ಈಗ ಬಾಸ್ ನಿಟ್ಟುಸಿರು ಬಿಟ್ಟು ಹಾಗಿದ್ದರೆ ಸರಿ. ನಿನ್ನೆ ನೀವು ನಿಮ್ಮ ತಾತನ ಶವಸಂಸ್ಕಾರಕ್ಕೆ ಹೋದ ವೇಳೆ ಇಲ್ಲಿ ನಿಮ್ಮನ್ನು ಕಾಣಲು ತಾತ ಬಂದಿದ್ದರು!!


 ಯಾಕೆ ನೀವು ಈ ದಿನವೂ ತಡ? ಆಫೀಸರ್ ಗುರುಗುಟ್ಟಿದ. ತೇಜ ಅವರನ್ನು ಸಮಾಧಾನಪಡಿಸಿದ. ಇಲ್ಲ ಸಾರ್. ನನ್ನ ತಪ್ಪಿಲ್ಲ. ನಮ್ಮ ಎದುರು ಮನೆಯ ಯುವತಿಗೆ ತುಂಬಾ ತುಂಬಾ ಡ್ರೆಸ್ ಪ್ರಜ್ಞೆಯಿದೆ. ಜಾಗಿಂಗ್‌ಗೆ ಹೋಗುವಾಗ ಜಾಗಿಂಗ್ ಡ್ರೆಸ್, ಸಾಹಿತ್ಯದ ಸಮಾರಂಭಕ್ಕೆ ಖಾದಿ ಬಟ್ಟೆ, ಕೆಲಸಕ್ಕೆ ಹೋಗುವಾಗ ಬ್ಯುಸಿನೆಸ್ ಸೂಟ್... ಹೀಗೆ ಸಂದರ್ಭಕ್ಕೆ ತಕ್ಕ ಉಡುಗೆ ಧರಿಸುತ್ತಾಳೆ. ಇಂದು ಅವಳು ಮನೆಯಿಂದ ಹೊರಬರುವುದನ್ನೇ ನಿರೀಕ್ಷಿಸುತ್ತ ತಡವಾಗಿ ಹೋಯಿತು...
ಏನಿವತ್ತು ವಿಶೇಷ?
’ಇವತ್ತು ಅವಳ ಬರ್ತ್‌ಡೇ ಸಾರ್!

******
ಸಲೂನ್‌ಗೆ ಧಾವಿಸಿ ಬಂದ ಆ ವ್ಯಕ್ತಿ ಕೇಳಿದ, ಇನ್ನು ಎಷ್ಟು ಮಂದಿ ಕಟಿಂಗ್ ಇನ್ನೂ ಇದೆ? ಆರು ಕ್ಷೌರಿಕ ಉತ್ತರಿಸಿದ.  ಈ ಮನುಷ್ಯ ಅಲ್ಲಿಂದ ಮರಳಿದ.
ಹದಿನೈದು ದಿನದ ನಂತರ ಅದೇ ಮನುಷ್ಯ ಬಂದು ಅದೇ ಪ್ರಶ್ನೆ ಕೇಳಿದ. ಕ್ಷೌರಿಕ ಪ್ರಾಮಾಣಿಕವಾಗಿ ಒಂಭತ್ತು ಎಂದ. ಒಳ್ಳೆಯದಾಗಲಿ ಒಳ್ಳೆಯದಾಗಲಿ ಎನ್ನುತ್ತಲೇ ಆ ಮನುಷ್ಯ ಅಂಗಡಿಯಿಂದ ನಿರ್ಗಮಿಸಿದ. 
ಮರುದಿನ ಮತ್ತೆ ಬಂದು ಅದೇ ಪ್ರಶ್ನೆ ಕೇಳಿ ನಿರ್ಗಮಿಸಿದವನ ಮೇಲೆ ಕ್ಷೌರಿಕನಿಗೆ ಕುತೂಹಲವಾಯಿತು. ತನ್ನ ಅಸಿಸ್ಟೆಂಟ್‌ನ್ನು ಹಿಂಬಾಲಿಸಿ ಹೋಗಲು ಹೇಳಿದ. ಕೆಲ ನಿಮಿಷಗಳ ನಂತರ ಮರಳಿದ ಅಸಿಸ್ಟೆಂಟ್ ಉಸುರಿದ, ಆ ಮನುಷ್ಯ ನಮ್ಮ ಮನೆಯೊಳಗೆ ಹೊಕ್ಕಿದ್ದನ್ನು ಕಂಡೆ!!


ತೆಳ್ಳಗಾಗಬೇಕು ತಾನೇ? ನಿಮ್ಮ ಚಿಕಿತ್ಸೆಯನ್ನು ನಾಳೆ ಬೆಳಿಗ್ಗೆ ಎಂಟರಿಂದ ಪ್ರಾರಂಭಿಸುತ್ತೇನೆ ಡಾಕ್ಟರ್ ೧೩೫ ಕೆ.ಜಿ. ತೂಕದ ದಢೂತಿಗೆ ಭರವಸೆಯಿತ್ತ.
ಮರುದಿನ ಬೆಳಿಗ್ಗೆ ಎಂಟಕ್ಕೆ ದಢೂತಿ ಮನೆಯ ಬಾಗಿಲು ತೆರೆದರೆ ಕಾಣಿಸಿದ್ದು ಅದ್ಭುತ ಸೌಂದರ್ಯದ ಯುವತಿ. ಬಿಗಿಬಿಗಿಯ ಉಡುಪು ಧರಿಸಿ ಕಂಗೊಳಿಸುತ್ತಿದ್ದಳು. ಹೇಳಿದ್ದು ಒಂದೇ ಮಾತು. ‘ನೀವು ನನ್ನನ್ನು ಹಿಡಿದುಕೊಂಡರೆ ನಾನು ನಿನ್ನವಳಾಗುತ್ತೇನೆ!’ ಈ ಆಟ ಸತತ ಐದು ತಿಂಗಳು ಮುಂದುವರಿಯಿತು. ಆತ ಪ್ರತಿದಿನ ಆಕೆಯನ್ನು ಹಿಡಿಯಲು ಬೆನ್ನತ್ತಿ ಬೆನ್ನತ್ತಿ ೫೦ ಕೆ.ಜಿ. ತೂಕವನ್ನು ಕಳೆದುಕೊಂಡ.
ಮರುದಿನ ಬೆಳಿಗ್ಗೆ ಎಂದಿನಂತೆ ಬಾಗಿಲ ಕರೆಘಂಟೆ ಬಾರಿಸಿತು. ತೂಕ ಇಳಿಸಿಕೊಂಡ ಈ ಸುಂದರಾಂಗ ಮನುಷ್ಯ ಬಾಗಿಲು ತೆರೆದರೆ ಕಂಡಿದ್ದು ೧೩೦ ಕೆ.ಜಿ. ತೂಕದ ದೈತ್ಯೆಯೊಬ್ಬಳು. ಆಕೆ ಉಲಿದಳು, ಡಾಕ್ಟರರು ನಿಮ್ಮಲ್ಲಿಗೆ ನನ್ನನ್ನು ಕಳುಹಿಸಿದರು. ನಾನು ನಿಮ್ಮನ್ನು ಹಿಡಿದರೆ ನೀವು ನನ್ನವರಾಗುವಿರಂತೆ!
ಸುಂದರಾಂಗ ಬೆದರಿ ಓಡಲಾರಂಭಿಸಿದ!
   
    
-ಮಾವೆಂಸ, mavemsa@gmail.com
ಭಾನುವಾರ, ನವೆಂಬರ್ 2, 2008

ನಿವೃತ್ತಿ - ಕಣಿ ಹೇಳುವವರಾರು?

ಭಾರತೀಯ ಕ್ರಿಕೆಟ್‌ನಲ್ಲಿ ಸೌರವ್ ಗಂಗೂಲಿಗೆ ಸಂಬಂಧಿಸಿದಂತೆ ಪ್ರತಿ ವಿಷಯವೂ ಸುದ್ದಿಯಾಗುತ್ತದೆ, ಚರ್ಚೆಯಾಗುತ್ತದೆ. ಬಹುಷಃ ಇದೇ ದಾದಾಗೆ ನಮ್ಮ ಮಾಧ್ಯಮಗಳು ಸಲ್ಲಿಸುವ ಗೌರವ. ಕೆ.ಶ್ರೀಕಾಂತರ ನೇತೃತ್ವದ ಆಯ್ಕೆ ಸಮಿತಿ ಈ ಬಂಗಾಳಿ ಹುಲಿಗೆ ಗೌರವಯುತ ನಿವೃತ್ತಿಗೆಂದೇ ಆಸ್ಟ್ರೇಲಿಯಾ ವಿರುದ್ಧ ಅವಕಾಶವಿತ್ತರಷ್ಟೇ, ಈ ಸಂದರ್ಭದಲ್ಲಿ ಒಂದು ಪ್ರಶ್ನೆ ಮೂಡುತ್ತದೆ. ನಿವೃತ್ತಿ ಎಂಬುದು ಆಟಗಾರನ ಸ್ವಾತಂತ್ರ್ಯವಾಗಬೇಕೆ?
ತಟಕ್ಕನೆ ನೆನಪಾಗುವುದು ಕಪಿಲ್‌ದೇವ್ ನಿಖಾಂಜಿ. ಮೊನ್ನೆ ‘ಆಟಗಾರರಿಗೆ ನಿವೃತ್ತಿಯ ಸಮಯ ನಿರ್ಧರಿಸುವ ಸ್ವಾತಂತ್ರ್ಯ ಇರಬೇಕು’ ಎಂದು ಬೊಬ್ಬಿಟ್ಟರು ಕಪಿಲ್. ಸೌರವ್‌ಗೆ ಒತ್ತಡ ಹೇರಿ ನಿವೃತ್ತಿ ಮಾತು ಹೇಳಿಸಿದರು ಎಂಬುದು ಮಾತಿನ ಹಿಂದಿನ ತಾತ್ಪರ್ಯ. ಭಾರತೀಯ ಕ್ರಿಕೆಟ್‌ನಲ್ಲಿ ನಿವೃತ್ತಿಯ ಸ್ವಾತಂತ್ರ್ಯವನ್ನು ಅನುಭವಿಸಿದ ‘ಏಕೈಕ’ ಆಟಗಾರ ಕಪಿಲ್‌ದೇವ್!
ಆಗಿದ್ದೇನು? ಕಪಿಲ್ ನ್ಯೂಜಿಲ್ಯಾಂಡಿಗ ರಿಚರ್ಡ್ ಹ್ಯಾಡ್ಲಿಯವರ ಅಂದಿನ ವಿಶ್ವದಾಖಲೆ ೪೩೨ ಟೆಸ್ಟ್ ವಿಕೆಟ್ ದಾಖಲೆಯನ್ನು ಮೀರಲಿ ಎಂದೇ ಅವರಿಗೆ ಕನಿಷ್ಠ ೧೦ ಟೆಸ್ಟ್‌ಗಳವರೆಗೆ ಆಯ್ಕೆಯ ಜೀವದಾನ ನೀಡಲಾಯಿತು. ಕೇವಲ ಸ್ವಿಂಗ್ ಮೇಲೆ ಆಧಾರಗೊಂಡಿದ್ದ ಕಪಿಲ್‌ಗೆ ಕೊನೆಕೊನೆಗೆ ವಿಕೆಟ್ ಸಿಕ್ಕುವುದೇ ದುರ್ಲಭವಾಗಿತ್ತು. ಒಂದು ಬೆಂಗಳೂರು ಟೆಸ್ಟ್‌ನಲ್ಲಂತೂ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಇನ್ನೊಂದು ತುದಿಯಲ್ಲಿ ಬೌಲ್ ಮಾಡುತಿದ್ದ ಕಪಿಲ್‌ರಿಗೆ ಎದುರಾಳಿಯ ಕೊನೆಯ ವಿಕೆಟ್ ಆದರೂ ಸಿಕ್ಕಲಿ ಎಂದು ಸುಖಾಸುಮ್ಮನೆ ಆಫ್‌ಸ್ಟಂಪ್‌ನಿಂದ ಆಚೆ ಬೌಲ್ ಮಾಡಿದ್ದನ್ನು ಸ್ಮರಿಸಬೇಕಾಗುತ್ತದೆ.
ಕಪಿಲ್‌ರ ವಿಶ್ವದಾಖಲೆಗಾಗಿ ಅತಿ ಹೆಚ್ಚಿನ ತ್ಯಾಗ ಮಾಡಿದ್ದು ನಮ್ಮ ಜಾವಗಲ್ ಶ್ರೀನಾಥ್. ಅಂದು ಭಾರತದಲ್ಲಿ ಟೆಸ್ಟ್ ತಂಡದಲ್ಲಿ ಇಬ್ಬರು ವೇಗಿಗಳಿಗೆ ಮಾತ್ರ ಅವಕಾಶ, ಉಳಿದಂತೆ ಸ್ಪಿನ್ ತ್ರಿವಳಿಗಳು. ಹೀಗಾಗಿ ಶ್ರೀ ತಮ್ಮ ಅದ್ಭುತ ವೇಗದ ದಿನಗಳಲ್ಲಿ ಪೆವಿಲಿಯನ್‌ನಲ್ಲಿ ಕೂರುವಂತಾಗಿದ್ದುದರಿಂದ ಆದ ನಷ್ಟ ಯಾರಿಗೆ?
ನಿವೃತ್ತಿಯ ಸ್ವಾತಂತ್ರ್ಯ ಬಳಸಿಕೊಂಡ ಆಸ್ಟ್ರೇಲಿಯಾದ ಶೇನ್‌ವಾರ್ನ್, ಆಡಂ ಗಿಲ್‌ಕ್ರಿಸ್ಟ್, ಗ್ಲೆನ್ ಮೆಗ್‌ಗ್ರಾತ್, ಮಾರ್ಟಿನ್ ಒಮ್ಮೆಗೇ ಕ್ರಿಕೆಟ್‌ನಿಂದ ಹಿಂಸರಿದುದರಿಂದಲೇ ಆಸ್ಟ್ರೇಲಿಯಾ ಮೊನ್ನೆ ಮೊಹಾಲಿ ಟೆಸ್ಟ್‌ನಲ್ಲಿ ಭಾರತದ ಎದುರು ಸೋತಿದ್ದು ಎಂಬರ್ಥದ ವಾದ ಆಸ್ಟ್ರೇಲಿಯನ್ ಪತ್ರಿಕೆಗಳಲ್ಲಿ ಓದುತ್ತಲೇ ಇದ್ದೇವೆ. ಒಂದಂತೂ ಸ್ಪಷ್ಟ, ನಿವೃತ್ತಿಯ ಸ್ವಾತಂತ್ರ್ಯದಿಂದ ಆಟಗಾರರಿಗೆ ಅನುಕೂಲವಾದೀತೇ ವಿನಃ ಅವರ ದೇಶಕ್ಕಲ್ಲ.
ಈ ಚರ್ಚೆಗಳಿಂದ ಘನೀಭವಿಸುವ ಅಂಶವೆಂದರೆ, ಆಟಗಾರರ ನಿವೃತ್ತಿಯನ್ನು ಅಲ್ಲಿನ ಕ್ರಿಕೆಟ್ ಮಂಡಳಿ ನಿರ್ವಹಿಸುವುದೇ ಹೆಚ್ಚು ಸೂಕ್ತವಾದುದು. ಒಟ್ಟಾರೆ ತಂಡಕ್ಕೆ ಘಾತವಾಗದಂತೆ ಹಾಗೂ ಗೊತ್ತಾಗದಂತೆ ಹಿರಿಯ ಆಟಗಾರರಿಂದ ಕಿರಿಯರಿಗೆ ಜವಾಬ್ದಾರಿ ವರ್ಗಾಯಿಸುವ ಪ್ರಕ್ರಿಯೆಗೆ ಆಯ್ಕೆ ಸಮಿತಿಯ ನಿರ್ದೇಶನ ಇದ್ದರೆ ಚೆನ್ನ. ಉದಾಹರಣೆಗೆ ಈ ಕಾಂಗರೂ ಸರಣಿಯ ನಂತರ ಗಂಗೂಲಿ ಶಸ್ತ್ರ ತ್ಯಾಗ ಮಾಡುತ್ತಾರೆ, ಫೈನ್. ಬದಲಿಯಾಗಿ ರೋಹಿತ್ ಶರ್ಮ, ಬದರೀನಾಥ್‌ರನ್ನು ನಾವು ಮುಖ್ಯವಾಹಿನಿಗೆ ಸೇರಿಸಬಹುದು. ಬಹುಷಃ ಕುಂಬ್ಳೆ ನಿವೃತ್ತ್ತರಾದರೂ ಚಿಂತೆಯಿಲ್ಲ. ಅಮಿತ್ ಮಿಶ್ರಾ ಅವರ ಶೂಗಳಲ್ಲಿ ಕಾಲು ತೂರಿಸಬಲ್ಲರು. ಅಂದರೆ ಸಚಿನ್, ದ್ರಾವಿಡ್, ಲಕ್ಷ್ಮಣ್‌ರ ನಿವೃತ್ತಿಯನ್ನು ಮುಂದಿನ ಸರಣಿಗಳಲ್ಲಿ ಹಂತಹಂತವಾಗಿ ನಿರ್ವಹಿಸಬೇಕು. ಆಟಗಾರರ ಪ್ರತಿಷ್ಠೆಗೆ ಧಕ್ಕೆ ಬಾರದಂತೆ ನಿವೃತ್ತಿಯನ್ನು ಆಯೋಜಿಸುವುದು ಕ್ರಿಕೆಟ್ ಮಂಡಳಿಯ ಮುಖ್ಯ ಗುರಿಯಾಗಬೇಕು. ಈ ಹಿಂದೆ ಆಸ್ಟ್ರೇಲಿಯಾ ಇಯಾನ್ ಹೀಲಿ, ಡೇವಿಡ್ ಬೂನ್‌ರಂತವರಿಗೆ ಇಂತಹ ಗೌರವದ ನಿವೃತ್ತಿ ನೀಡಿತ್ತು. ಇದಕ್ಕಿದ್ದಂತೆ ಕೊಕ್ ನೀಡಿ ಮರ್ಯಾದೆ ಕಳೆದಿರಲಿಲ್ಲ.
ವಿಚಿತ್ರವೊಂದಿದೆ. ಟೆನಿಸ್ ಪೂರಾಪೂರ ವೈಯುಕ್ತಿಕ ಆಟ. ಇಲ್ಲಿ ನಿವೃತ್ತಿ ಆಟಗಾರನ ಸ್ವಾತಂತ್ರ್ಯ. ಖ್ಯಾತ ಆಟಗಾರರು ಸೋಲು ಗೆಲುವಿನ ಹೊರತಾಗಿ ಪಾಲ್ಗೊಳ್ಳುವಿಕೆಗೂ ದುಬಾರಿ ಶುಲ್ಕ ಪಡೆಯುವ ಅವಕಾಶವಿರುತ್ತದೆ. ರ್‍ಯಾಕೆಟ್ ಎತ್ತಿಕೊಳ್ಳುವ ಶಕ್ತಿ ಇರುವವರೆಗೂ ಆಡುತ್ತಿರಬಹುದು. ಆದರೆ ಹಿಂತಿರುಗಿ ನೋಡಿ, ಗೆಬ್ರಿಯಾಲಾ ಸಬಾಟಿನಿ, ಜಸ್ಟಿನ್ ಹೆನಿನ್, ಪ್ಯಾಟ್ರಿಕ್ ರ್‍ಯಾಫ್ಟರ್, ಕಿಂ ಕ್ಲಿಸ್ಟರ್‍ಸ್.... ಸ್ವಾತಂತ್ರ್ಯವಿದ್ದೂ ಇವರೆಲ್ಲ ತಮ್ಮ ದಿನಗಳಲ್ಲಿ, ಇನ್ನೂ ಆಡಬಹುದು ಎನ್ನಿಸಿರುವಾಗಲೇ ನಿವೃತ್ತರಾದರು. ನಿವೃತ್ತಿ ಬಗ್ಗೆ ಬೇರೆಯವರ ಮರ್ಜಿಗೆ ಕಾಯಬೇಕಿರುವ, ವಾಸ್ತವವಾಗಿ ತಂಡದ ಗೆಲುವೇ ಮುಖ್ಯವಾಗಿರುವಾಗ ಕ್ರಿಕೆಟ್ ಆಟಗಾರರು ತಂಡದಿಂದ ಹೊರಹಾಕುವವರೆಗೆ ಜಪ್ಪಯ್ಯ ಎಂದರೂ ನಿವೃತ್ತಿ ಹೊಂದುವುದಿಲ್ಲ!
ಐಪಿಎಲ್ - ಇಂಡಿಯನ್ ಲೀಗ್ ಟ್ವೆಂಟಿ ೨೦ ಕ್ರಿಕೆಟ್‌ನ ಉಗಮ ಭಾರತೀಯ ಕ್ರಿಕೆಟ್‌ನ ಧನಾತ್ಮಕ ಬೆಳವಣಿಗೆ. ಭಾರತದ ಪ್ರಥಮ ದರ್ಜೆ ಆಟಗಾರರು ವಿಶ್ವಮಾನ್ಯ ಆಟಗಾರರೊಂದಿಗೆ ಸೆಣಸುವ ಅವಕಾಶ ಐಪಿಎಲ್‌ನಲ್ಲಿ, ಅದರಲ್ಲಿ ಸಾಕಷ್ಟು ಉತ್ತಮ ಪ್ರದರ್ಶನ ನೀಡಿಬಿಟ್ಟರೆ ಸದರಿ ಆಟಗಾರನ ಆತ್ಮವಿಶ್ವಾಸ ಹೆಚ್ಚುತ್ತದೆ. ಅಂತರ್ರಾಷ್ಟ್ರೀಯ ಕ್ರಿಕೆಟ್‌ನ ಆಳ ಗೊತ್ತಾಗುತ್ತದೆ. ಅಂತಹ ಆಟಗಾರ ಟೆಸ್ಟ್, ಏಕದಿನ ಕ್ರಿಕೆಟ್‌ನಲ್ಲಿ ಪಾದಾರ್ಪಣೆ ಮಾಡಿದಾಗ ಅಂತಹ ಅವ್ಯಕ್ತ ಒತ್ತಡ ಅನುಭವಿಸುವುದಿಲ್ಲ. ಬಹುಷಃ ಅಮಿತ್ ಮಿಶ್ರಾರ ಚೊಚ್ಚಲ ಟೆಸ್ಟ್ ಇನ್ನಿಂಗ್ಸ್‌ನ ಐದು ವಿಕೆಟ್ ಅದನ್ನೇ ಹೇಳುತ್ತದೆ. ಈ ಹಿಂದೆ ಆಸ್ಟ್ರೇಲಿಯಾದ ಪ್ರಥಮ ದರ್ಜೆ ಕ್ರಿಕೆಟ್‌ನ ಗುಣಮಟ್ಟ ಅತ್ಯುತ್ತಮವಾಗಿದ್ದರಿಂದಲೇ ಅಲಾನ್ ಬಾರ್ಡರ್, ವಾ ಸಹೋದರರು, ಇಯಾನ್ ಹೀಲಿಯವರ ನಿವೃತ್ತಿ ಕಂದಕವನ್ನು ಸೃಷ್ಟಿಸಿರಲಿಲ್ಲ.
ನಿವೃತ್ತರಾಗಲು ಇಚ್ಛಿಸದ ಆಟಗಾರರನ್ನು ಟೀಕಿಸುವುದೂ ತಪ್ಪು. ಆಟದ ಮೇಲೆ ಪ್ರೀತಿ ಇರುವವರರೆಲ್ಲ ಅದರಲ್ಲಿ ಸದಾ ಕಾಲ ತೊಡಗಿಸಿಕೊಳ್ಳಲು ಆಶಿಸುತ್ತಾರೆ. ಹಾಗಾಗಿ ನಿವೃತ್ತಿ ಅವರಿಗೊಂದು ಶಿಕ್ಷೆ. ಸಚಿನ್ ತೆಂಡೂಲ್ಕರ್ ಇನ್ನಷ್ಟು ಆಲ ಆಡುತ್ತೇವೆನ್ನುವುದು ಇದೇ ಕಾರಣಕ್ಕೆ. ಅವರಿಗೆ ಇನ್ನೂ ರನ್ ದಾಹ ಇರಬಹುದೇ ವಿನಃ ಹಣದ ವ್ಯಾಮೋಹ ಇರಲಿಕ್ಕಿಲ್ಲ. ಇಂತಹವರಿಗೆಲ್ಲ ತಂಡದ ಅಗತ್ಯತೆಯನ್ನು ವಿವರಿಸಿ ನಿವೃತ್ತಿಗೆ ಭೂಮಿಕೆ ಸಿದ್ಧಪಡಿಸುವುದು ಕ್ರಿಕೆಟ್ ಮಂಡಳಿ ಜವಾಬ್ದಾರಿಯಾಗಬೇಕು. ಅಲ್ಲವೇ?
ಕೊನೆಮಾತು -ಇನ್ನೂ ಬೇಕು ಎನ್ನುವಾಗಲೇ ನಿವೃತ್ತರಾಗಬೇಕು ಎಂಬ ಸಿದ್ಧಾಂತದ ಸುನಿಲ್ ಗವಾಸ್ಕರ್ ಅದನ್ನು ಅಕ್ಷರಶಃ ಜಾರಿಗೊಳಿಸಿದವರು. ಪಾಕ್ ವಿರುದ್ಧದ ಬೆಂಗಳೂರು ಟೆಸ್ಟ್ ಅವರ ಅಂತಿಮ ಟೆಸ್ಟ್ ಎಂದೇ ಘೋಷಣೆಯಾಗಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ವೀರೋಚಿತ ೯೬ ರನ್ ಗಳಿಸಿದರೂ ಭಾರತ ಪಾಕ್ ಎದುರು ೧೬ ರನ್‌ನಿಂದ ಸೋತಿತು. ಜೊತೆಗೆ ಸರಣಿಯೂ ಕೈಬಿಟ್ಟಿತು. ಆ ದುಃಖದಲ್ಲಿ ಸನ್ನಿಯ ನಿವೃತ್ತಿ ವಿಚಾರ ಮಸುಕಾಯಿತು. ಹೋಗಲಿ, ಏಕದಿನ ಕ್ರಿಕೆಟ್‌ನಲ್ಲಿಯಾದರೂ ಆಗಿದ್ದು ಅದೇ. ವಿಶ್ವಕಪ್ ಕೂಟವೇ ಕಡೆ ಎಂದ ಗವಾಸ್ಕರ್ ಉಪಾಂತ್ಯದಲ್ಲಿ ಏಕಾಏಕಿ ಸೋತಿದ್ದರಿಂದ ಅವರಬಗ್ಗೆ ಯೋಚಿಸುವವರಿರಲಿಲ್ಲ. ಎಲ್ಲರಿಗೂ ಭಾರತ ಸೋತದ್ದರ ದುಃಖ, ಸಿಟ್ಟು!
-ಮಾವೆಂಸ
 
200812023996