ಮಂಗಳವಾರ, ಡಿಸೆಂಬರ್ 29, 2009

ಹೊಸಬರಲ್ಲೂ ಗೆಲುವಿನ ರಭಸ!


ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತದ ಪ್ರದರ್ಶನವನ್ನು ಎರಡೇ ಪದಗಳ ವಾಕ್ಯದಲ್ಲಿ ವಿವರಿಸುವುದಾದರೆ, ‘ಅಧಿಕಾರಯುತ ಗೆಲುವು’ ಎನ್ನುವುದೇ ಸೂಕ್ತ. ಇನ್ನೂ ಒಂದು ಪಂದ್ಯ ಬಾಕಿಯಿದ್ದಾಗಲೇ ೩-೧ರ ಅಂತರದಲ್ಲಿ ಗೆದ್ದ ತಂಡ ಅಂತಹ ಪ್ರಶಂಸೆಗೆ ಅರ್ಹ. ಸ್ವಾರಸ್ಯವೆಂದರೆ, ಸರಣಿಯ ಪಂದ್ಯಗಳನ್ನು ಖುದ್ದು ನೋಡಿದವರಿಗೆ ಬೇರೆಯದೇ ಸತ್ಯ ಕಾಣುತ್ತದೆ. ಭಾರತಕ್ಕಿಂತ ಶ್ರೀಲಂಕಾ ಹೆಚ್ಚು ಕಳಪೆ ಆಟ ಆಡಿತು!
ಕ್ರಿಕೆಟ್‌ನಲ್ಲಿ ಥ್ರಿಲ್, ಖುಷಿ ಜೊತೆ ಕಾಮಿಡಿಯನ್ನು ಬೆರೆಸುವ ಪ್ರಯತ್ನ ಮಾಡಿದ್ದು ಭಾರತ. ಮೊತ್ತಮೊದಲ ರಾಜ್‌ಕೋಟ್ ಏಕದಿನ ಪಂದ್ಯದಲ್ಲಿ ೪೧೪ ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದರೂ ಧುಸುಗುಡುತ್ತಲೇ ಗೆದ್ದದ್ದು ಬದಿಗಿರಿಸಿ. ಅವತ್ತು ಭಾರತೀಯರು ಮಾಡಿದ ಫೀಲ್ಡಿಂಗ್, ಬಿಟ್ಟ ಕ್ಯಾಚ್ ನಗೆ ತರಿಸಿತ್ತು. ಪಂದ್ಯ ಗೆದ್ದುದರಿಂದ ಟೀಕೆ ದಟ್ಟವಾಗಿರಲಿಲ್ಲ. ಮುಂದಿನ ಪಂದ್ಯದಲ್ಲಿ ಇದೇ ಹೀನಾಯ ಫೀಲ್ಡಿಂಗ್ ಕಾರಣದಿಂದಾಗಿ ಪಂದ್ಯ ಕೈಬಿಟ್ಟಿತು. ಆದರೆ ಅಷ್ಟರೊಳಗೆ ಭಾರತೀಯರು ಈ ರೋಗದ ಕೀಟಾಣುವನ್ನು ಲಂಕನ್‌ರಿಗೂ ದಾಟಿಸಿದ್ದರು. ನಾಲ್ಕನೇ ಕೊಲ್ಕತ್ತಾ ಪಂದ್ಯದ ವೇಳೆಗೆ ಸಿಂಹಳೀಯರು ನಮ್ಮವರನ್ನೇ ನಾಚಿಸುವಂತೆ ಕ್ಯಾಚ್ ಬಿಟ್ಟರು, ಮಿಸ್‌ಫೀಲ್ಡ್ ಮಾಡಿದರು. ಫಲಿತಾಂಶ - ನಮ್ಮೂರಿನ ವೀಕ್ಷಕರಿಗೆ ತಮಾಷೆಯ ಜೊತೆಗೆ ಗೆಲುವಿನ ಬೋನಸ್ ಸಿಕ್ಕಿತು.
ಮಹೇಂದ್ರ ಸಿಂಗ್ ಧೋನಿ ಅದೃಷ್ಟವಂತರೇ? ಈವರೆಗೆ ಇವರ ನಾಯಕತ್ವದಲ್ಲಿ ಆಡಿದ ಎಂಟು ದ್ವಿಪಕ್ಷೀಯ ಸರಣಿಗಳಲ್ಲಿ ಏಳು ಬಾರಿ ಭಾರತ ಸರಣಿ ಗೆದ್ದಿರುವ ಅಂಕಿಅಂಶವನ್ನು ಕಂಡಾಗ ಹೌದೆನ್ನಿಸುತ್ತದೆ. ಆದರೆ ಮೊನ್ನೆ ನಾಗ್ಪುರದಲ್ಲಿ ಭಾರತ ನಿಧಾನಗತಿಯ ಬೌಲಿಂಗ್ ಮಾಡಿತು ಎಂದು ಧೋನಿಯ ಮೇಲೆ ಎರಡು ಪಂದ್ಯದ ನಿಷೇಧದ ಶಿಕ್ಷೆ ಅದೃಷ್ಟ ಕೈಕೊಟ್ಟಿದ್ದನ್ನು ವಿವರಿಸುವಂತಿದೆ. ವಾಸ್ತವವಾಗಿ, ಐಸಿಸಿಯು ‘ನಿಧಾನಗತಿ ಬೌಲಿಂಗ್‌ಗೆ ವಿಧಿಸುವ ಶಿಕ್ಷೆಯನ್ನು ಮಾರ್ಪಡಿಸಿದೆ. ಒಂದು ತಂಡ ನಿಗದಿತ ಸಮಯದಲ್ಲಿ ಎರಡು ಓವರ್ ಕಡಿಮೆ ಬೌಲ್ ಮಾಡಿದರೆ ಅದನ್ನು ‘ಲಘು ಅಪರಾಧ’ವೆಂತಲೂ, ಇದನ್ನು ಮೀರಿದ್ದನ್ನು ‘ಗಂಭೀರ’ ಅಂತಲೂ ಪರಿಗಣಿಸಲಾರಂಭಿಸಿದೆ. ಅವತ್ತು ಧೋನಿ ಪಡೆ ನಿಗದಿತ ಸಮಯ ಮೀರಿ ಗಂಭೀರ ತಪ್ಪು ಮಾಡಿತ್ತು!
ಅದಲ್ಲ ವಿಷಯ, ಮೂರೂವರೆ ಘಂಟೆಗಳ ಸಮಯಾವಕಾಶದ ಎರಡು ಇನ್ನಿಂಗ್ಸ್ ಲೆಕ್ಕಾಚಾರ ಸರಿಹೋದೀತೆ? ಎರಡನೇ ಪಾಳಿಯಲ್ಲಿ ಬೌಲಿಂಗ್ ಮಾಡುವ ತಂಡಕ್ಕೆ ಹಲವು ತಲೆಬಿಸಿ. ಉದಾಹರಣೆಗೆ ನಾಗ್ಪುರದಲ್ಲಿ ಭಾರತ ೪೨ನೇ ಓವರ್‌ವರೆಗೆ ಸಮಯ ನಿರ್ಬಂಧದ ಅನುಸೂಚಿ ಪ್ರಕಾರವೇ ನಡೆದಿತ್ತು. ಆದರೆ ಮುಂದಿನ ಎಂಟು ಓವರ್‌ಗೆ ಬರೋಬ್ಬರಿ ಒಂದು ಘಂಟೆಯನ್ನು ತೆಗೆದುಕೊಂಡಿತ್ತು. ಹಾಗಿದ್ದರೆ ತರಾತುರಿಯಲ್ಲಿ ಬೌಲಿಂಗ್ ಮಾಡಿ ಪಂದ್ಯದ ಸ್ಪರ್ಧಾತ್ಮಕತೆಯನ್ನು ಕಡಿಮೆ ಮಾಡಿದ್ದರೆ ಐಸಿಸಿ ರೆಫ್ರಿಯನ್ನು ಸಂತೃಪ್ತಗೊಳಿಸಬಹುದಿತ್ತು, ಆಟದ ಅಸಲಿ ಬಂಡವಾಳವಾದ ವೀಕ್ಷಕರಿಗೆ ನಷ್ಟ!
ಬದಲಾಗಬೇಕು, ಎರಡನೇ ಅವಧಿಯ ಫೀಲ್ಡಿಂಗ್ ನಾಯಕನಿಗೆ ಅರ್ಧ ಘಂಟೆಯ ಹೆಚ್ಚಿನ ಕಾಲಾವಕಾಶ ಬೇಕು ಎಂಬ ತರ್ಕ ಇದೀಗ ಜನಜನಿತವಾಗಿದೆ. ಅದೊಂದು ಅರ್ಥಪೂರ್ಣ ಚರ್ಚೆಯಾಗಬೇಕು. ಈ ಮಧ್ಯೆ ತೂಗು ಕತ್ತಿ ಧೋನಿ ತಲೆ ಮೇಲೆ ಮುಂದಿನ ೧೨ ತಿಂಗಳ ಅವಧಿಯುದ್ದಕ್ಕೂ ತೂಗುತ್ತಿರುತ್ತದೆ. ಈ ವೇಳೆ ಧೋನಿಯ ಗಂಭೀರ ಅಪರಾಧ ಮರುಕಳಿಸಿದರೆ ಎರಡರಿಂದ ಎಂಟು ಏಕದಿನ ಅಥವಾ ಒಂದರಿಂದ ನಾಲ್ಕು ಟೆಸ್ಟ್ ನಿಷೇಧದ ಶಿಕ್ಷೆ ಕಾದಿದೆ. ಅತ್ಯುತ್ತಮ ಫಾರಂನಲ್ಲಿದ್ದ, ಸರಣಿಯಲ್ಲಿ ಅದಾಗಲೇ ಎರಡೆರಡು ಶತಕ ಬಾರಿಸಿದ್ದ ಧೋನಿ ಅನುಪಸ್ಥಿತಿ ಎದ್ದು ಕಾಣಲಿಲ್ಲ ಎಂಬುದು ಭಾರತದ ಪುಣ್ಯ.
ಶ್ರೀಲಂಕಾದ ಪಾಪ ವಿಮೋಚನೆ ಆದಂತಿಲ್ಲ. ಆ ದೇಶಕ್ಕೆ ಭಾರತದಲ್ಲಿ ಟೆಸ್ಟ್ ಸರಣಿಯಲ್ಲಾಗಲಿ, ದ್ವಿಪಕ್ಷೀಯ ಏಕದಿನ ಟೂರ್ನಿಯನ್ನಾಗಲಿ ಒಮ್ಮೆಯೂ ಗೆಲ್ಲಲಾಗಿಲ್ಲ. ನೆಪ ಹೇಳಬಹುದು, ಮುತ್ತಯ್ಯ ಮುರುಳೀಧರನ್, ಅಂಜೆಲೋ ಮ್ಯಾಥ್ಯೂಸ್, ತಿಲಾನ್ ತುಷಾರ, ಚನಕ ವೆಲ್ಲವೇಂದ್ರ ಮುಂತಾದ ಆಟಗಾರರ ಅಲಭ್ಯತೆ ಫಲಿತಾಂಶದಲ್ಲಿ ಪ್ರತಿಫಲಿಸಿದೆ ಎಂದು. ಆ ಲೆಕ್ಕದಲ್ಲಿ ಭಾರತದ್ದೂ ಅದೇ ಕತೆ. ಧೋನಿ ‘ಫಿಟ್’ ಆಗಿದ್ದೂ ಎರಡು ಪಂದ್ಯ ಕಳೆದುಕೊಂಡರೆ ಯುವರಾಜ್ ಸಿಂಗ್ ಇತ್ತೀಚೆಗೆ ಆಡಿದ್ದಕ್ಕಿಂತ ಪೆವಿಲಿಯನ್‌ನಲ್ಲಿ ಗಾಯಗೊಂಡ ಬೆರಳು ತೋರಿಸಿದ್ದೇ ಜಾಸ್ತಿ. ಈ ಪಟ್ಟಿಯಲ್ಲಿ ಶ್ರೀಶಾಂತ್‌ರನ್ನು ಸಹ ಸೇರಿಸಬಹುದು. ಪ್ರಬಲ ಬ್ಯಾಟಿಂಗ್ ಪಟುಗಳೊಂದಿಗೆ ಬಂದ ಶ್ರೀಲಂಕಾ ಬೌಲಿಂಗ್ ವಿಭಾಗದಲ್ಲಿ ಮುಗ್ಗರಿಸಿದ್ದು ನಿಜ.
ಸರಣಿಯುದ್ದಕ್ಕೂ ಬೌಲರ್‌ಗಳನ್ನು ಗೋಳು ಹೊಯ್ದುಕೊಳ್ಳುವ ಪಿಚ್‌ನಲ್ಲಿ ರವೀಂದ್ರ ಜಡೇಜಾ ಎಂಬ ಬೌಲರ್ ಮಿಂಚಿದ್ದು ಉಲ್ಲೇಖಾರ್ಹ. ಕಟಕ್ ಪಿಚ್ ಕೂಡ ಬ್ಯಾಟಿಂಗ್ ಪ್ರೇಮಿಯೇ. ಅಂತಲ್ಲಿ ಜಡೇಜಾ ೩೨ ರನ್‌ಗೆ ನಾಲ್ಕು ವಿಕೆಟ್ ಕಬಳಿಸಿದ್ದು ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಲು ಸಾಕಾಯಿತು. ಇಡೀ ಸರಣಿಯಲ್ಲಿ ಜಡೆಜಾ ಬಿಗಿ ಬೌಲಿಂಗ್‌ಗೆ ಹೆಸರು ಪಡೆದರು. ನಾಲ್ಕನೇ ಪಂದ್ಯದ ಅಂತ್ಯಕ್ಕೆ ಜಡೇಜಾ ಓವರ್ ಒಂದಕ್ಕೆ ನೀಡಿದ್ದು ೫.೪೭ ರನ್ ಮಾತ್ರ. ನೆನಪಿರಲಿ, ಇನ್ನುಳಿದಂತೆ ಎರಡು ದೇಶಗಳ ಪ್ರಮುಖ ಬೌಲರ್‌ಗಳು ಆರಕ್ಕಿಂತ ಹೆಚ್ಚಿನ ರನ್ ನೀಡಿದ್ದರು!
ಭಾರತದ ಮಟ್ಟಿಗೆ ಸರಣಿ ಗೆಲುವಿನ ಹೊರತಾಗಿ ಹಲವು ಗಳಿಕೆಗಳಿವೆ. ವಿರಾಟ್ ಕೊಹ್ಲಿ ಧೋನಿ - ಯುವಿ ಕೊರತೆಯನ್ನು ಮರೆಯುವಂತೆ ಬ್ಯಾಟ್ ಮಾಡಿದ್ದು, ಹರ್‌ಭಜನ್ ಕುಂಬ್ಳೆಯವರನ್ನು ನೆನಪಿಸುವಂತೆ ಬಿಗ್ಗಬಿಗಿ ಬೌಲಿಂಗ್ ಮಾಡುವುದನ್ನು ಮತ್ತೆ ಕಂಡುಕೊಂಡಿದ್ದು, ಇರಿಸುಮುರಿಸಾದವರಂತೆ ಕಂಡರೂ ಗೌತಮ್ ಗಂಭೀರ್ ಮೂರನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ನೆಲೆ ಕಂಡುಕೊಳ್ಳುತ್ತಿರುವುದು.... ಇವೆಲ್ಲವುದರ ಪರಿಣಾಮ ನಾಳೆ ಬಾಂಗ್ಲಾದಲ್ಲೂ ಕಂಡರೆ ಚೆನ್ನ. ಏತಕ್ಕಪ್ಪಾಂದ್ರೆ, ಈ ದಿನಗಳಲ್ಲಿ ತ್ರಿಕೋನ ಅಥವಾ ಬಹುತಂಡಗಳ ಟೂರ್ನಿಗಳಲ್ಲಿ ಭಾರತ ಎಡವುತ್ತಲೇ ಬಂದಿದೆ ಮತ್ತು ಬಾಂಗ್ಲಾದಲ್ಲಿ ನಡೆಯುವುದು ಶ್ರೀಲಂಕಾವನ್ನೂ ಒಳಗೊಂಡ ತ್ರಿಕೋನ ಸರಣಿ!
-ಮಾವೆಂಸ

ಸೋಮವಾರ, ಡಿಸೆಂಬರ್ 28, 2009

ಲೇಔಟ್ ಹೀಗಿದ್ದರೆ ಚೆಂದ!ವಾರಕ್ಕೊಮ್ಮೆ........5
ಕೆಲವರ್ಷಗಳ ಹಿಂದಿನ ಮಾತು. ನಾಗೇಶ್ ಹೆಗಡೆ ಪ್ರಜಾವಾಣಿಯ ಪುರವಣಿಗಳನ್ನು ನಿರ್ವಹಿಸುತ್ತಿದ್ದ ಕಾಲ. ನನಗಿದ್ದುದು ಫೋನ್ ಪರಿಚಯ ಮಾತ್ರ. ದೂರವಾಣಿಯಲ್ಲಿ, ಪುಟ್ಟ ಕಾರ್ಡ್‌ನಲ್ಲಿ ಅವರು ಒದಗಿಸುತ್ತಿದ್ದ ಪ್ರೋತ್ಸಾಹ ಅಪರಿಮಿತ. ಅವರ ನಿರ್ವಹಣೆಯ ‘ಕರ್ನಾಟಕ ದರ್ಶನ’ದಲ್ಲಿ ನಮ್ಮ ಒಂದು ಲೇಖನ ಬಂತೆಂದರೆ ಅದು ಎಲ್ಲ ಪರೀಕ್ಷೆ ಪಾಸಾದಂತೆ! ಇಂತಹ ವೇಳೆಯ ಮಾತುಕತೆಯಲ್ಲಿ ಹೆಗಡೆಯವರಲ್ಲಿ ನಾನು ಸಹಸಂಪಾದಕನಾಗಿದ್ದ ‘ಬಳಕೆ ತಿಳುವಳಿಕೆ’ಯ ಪ್ರಸ್ತಾಪ ಎಲ್ಲೋ ಬಂದಿರಬೇಕು. ಒಂದು ಪ್ರತಿ ಕಳಿಸಲು ಹೇಳಿದ್ದರು. ಅದರ ಕುರಿತಂತೆ ಅವರ ಎಂದಿನ ಚುಟುಕು ಪ್ರತಿಕ್ರಿಯೆಯೂ ಸಿಕ್ಕಿತ್ತು, "ಲೇಔಟ್ ಚೆನ್ನಾಗಿದೆ"
ಪುಟ ವಿನ್ಯಾಸ ನನಗೆ ಸದಾ ಆಸಕ್ತಿಯ ವಿಷಯ. ಸುಧಾ-ಮಯೂರಗಳ ಸಾಹಿತ್ಯಿಕ ಮೌಲ್ಯದ ಜೊತೆಗೆ ಅದರ ಇಂದಿನ ವಿನ್ಯಾಸ ಆಕರ್ಷಕ. ದುರಂತವೆಂದರೆ, ಸಾಮಾನ್ಯವಾಗಿ ಧಾರ್ಮಿಕ ಪತ್ರಿಕೆಗಳಲ್ಲಿ ಲೇಔಟ್‌ಗೆ ಕನಿಷ್ಟ ಆದ್ಯತೆ. ಅಲ್ಲೇನಿದ್ದರೂ ಉದ್ದುದ್ದದ ಲೇಖನಗಳು, ಪುಟ ತುಂಬುವ ಸರ್ಕಸ್. ಅಂತವು ಎಂದು ಒಂದೆರಡನ್ನು ಹೆಸರಿಸುವುದು ಬೇಡ. ಆದರೆ ‘ವಿವೇಕಪ್ರಭ’ ಮಾತ್ರ ಅಕ್ಷರಶಃ ವಿಭಿನ್ನ.
ಮೈಸೂರಿನ ಶ್ರೀರಾಮಕೃಷ್ಣ ಆಶ್ರಮ [ಯಾದವಗಿರಿ, ಮೈಸೂರು -570020]ದ ವಿವೇಕಪ್ರಭ ವಿಭಾಗ ಪ್ರಕಟಿಸುತ್ತಿರುವ ಈ ಮಾಸಿಕದಲ್ಲಿ ಮೊತ್ತಮೊದಲು ನನ್ನ ಗಮನ ಸೆಳೆದಿದ್ದು ಲೇಔಟ್. ಈಗ 10ವಸಂತಗಳನ್ನು ಪೂರೈಸಿದ ಹೆಮ್ಮೆ ಇದಕ್ಕೆ. ಅದಕ್ಕೋ ಏನೋ, ಕಳೆದ ಎರಡು ಸಂಚಿಕೆಗಳಿಂದ ಪತ್ರಿಕೆಯ ಪ್ರತಿ ಪುಟವೂ ಬಣ್ಣ ಬಣ್ಣದಲ್ಲಿ ಪ್ರಕಟವಾಗುತ್ತಿದೆ.
ಇದೇ ಪತ್ರಿಕೆಯಲ್ಲಿ ಮೂಡಿದ ಮಾಹಿತಿಯಂತೆ, ಇದರ ವ್ಯವಸ್ಥಾಪಕ ಸಂಪಾದಕರು ಸ್ವಾಮಿ ನಿತ್ಯಸ್ಥಾನಂದರು. ರಾಮಕೃಷ್ಣ ಮಹಾಸಂಘದ ಏಕೈಕ ಮಾಸಪತ್ರಿಕೆ ಎಂಬ ಅಗ್ಗಳಿಕೆಯ ‘ವಿವೇಕಪ್ರಭ’ದ ಸಂಪಾದಕೀಯ ಸಲಹಾ ಮಂಡಳಿಯಲ್ಲಿ ಗುರುಗಳಾದ ಡಾ.ನಿರಂಜನ ವಾನಳ್ಳಿಯವರೂ ಇದ್ದಾರೆ. 42 ಪುಟಗಳ ಪತ್ರಿಕೆಯ ಬಿಡಿ ಪ್ರತಿ ಬೆಲೆ 10 ರೂಪಾಯಿ. ವಾರ್ಷಿಕ ಚಂದಾ 100 ರೂ. ಮೂರು ವರ್ಷಕ್ಕೆ250. 25 ವರ್ಷಕ್ಕೆ ಕೇವಲ ಒಂದೂವರೆ ಸಾವಿರ ರೂ. ಹೆಚ್ಚಿನ ಚಂದಾ ವಿವರಕ್ಕೆ 0821-2417444 ಅಥವಾ 2412424ನ್ನು ಸಂಪರ್ಕಿಸಬಹುದು.
ಇನ್ನೊಂದು ಹೇಳಲೇಬೇಕಾದ ಮಾಹಿತಿಯಿದೆ. ವಿವೇಕಪ್ರಭ ಉಳಿದ ಪತ್ರಿಕೆಗಳಂತೆ ಸಂಕೀರ್ಣ ವಾಕ್ಯಗಳ ಒಣ ಲೇಖನಗಳ ಮೂಲಕ ಧರ್ಮ, ವೇದಾಂತ, ಉಪನಿಷತ್ ಎನ್ನುತ್ತ ಬರೆಯುವುದಿಲ್ಲ. ತುಂಬಾ ಸರಳವಾಗಿ ಮತ್ತು ಅಷ್ಟೇ ಆಕರ್ಷಕ ನಿರೂಪಣೆಯಲ್ಲಿ ಲೇಖನಗಳಿರುತ್ತವೆ. ಮುಖ್ಯವಾಗಿ, ರಾಮಕೃಷ್ಣ, ವಿವೇಕಾನಂದ, ಶ್ರೀಮಾತೆ ಕುರಿತಂತೆ ಘಟನೆಗಳನ್ನಾಧರಿಸಿದ ಬರಹಗಳು ಇರುವುದು ಚೆನ್ನ. ದೊಡ್ಡವರೇಕೆ ಸಣ್ಣ ಮಕ್ಕಳೂ ಕೂಡ ಓದುವಂತಿರುತ್ತವೆ. ಕಥೋಪದೇಶ, ವಿದ್ಯಾರ್ಥಿ ಪ್ರಭ ಮತ್ತು ಸಣ್ಣ ಪುಟ್ಟ ತುಣುಕುಗಳ ಮಾಹಿತಿ ಅಲ್ಲಲ್ಲಿ ಇರುವುದು ನಿಜಕ್ಕೂ ಚೆಂದ ಚೆಂದ.
ಮಾದರಿ ಪ್ರತಿ ಕಳಿಸಿಕೊಡುವರೋ ಇಲ್ಲವೋ ಗೊತ್ತಿಲ್ಲ kannada.vivekaprabha@gmail.com ಮೂಲಕವೂ ತಾವು ವಿಚಾರಿಸಬಹುದು. ನಮ್ಮ ‘ವೀಣಾ ಸ್ಮಾರಕ ಮಾವಿನಮನೆ ವಾಚನಾಲಯ’ಕ್ಕೆ ಉಚಿತವಾಗಿ ಕಳಿಸಿಕೊಡುತ್ತಿರುವುದಕ್ಕೆ ನಾನು ವಿವೇಕಪ್ರಭ ಬಳಗಕ್ಕೆ ಸದಾ ಕೃತಜ್ಞ.


-ಮಾ.ವೆಂ.ಸ.ಪ್ರಸಾದ್
ಮಾವಿನಸರ
ಪೋಸ್ಟ್-ಎಡಜಿಗಳೇಮನೆ
ಸಾಗರ ತಾ. ಶಿವಮೊಗ್ಗ ಜಿ.
577401
ಫೋನ್-08183 236068, 296543
9886407592
ಇ ಮೇಲ್- mavemsa@gmail.com

ಭಾನುವಾರ, ಡಿಸೆಂಬರ್ 20, 2009

‘ಇನ್‌ಸೈಟ್’ ಇದ್ದರೆ ಒಳ್ಳೆಯದು!


ವಾರಕ್ಕೊಮ್ಮೆ.........4

ಗೆಳೆಯ ಜಿತು ಜೊತೆ ಇತ್ತೀಚೆಗೆ ಜಿಮೈಲ್ ಚಾಟ್ ನಡೆಸುತ್ತಿದ್ದಾಗ ಇದ್ದಕ್ಕಿದ್ದಂತೆ ಆತ ಕೇಳಿದ್ದ, ನಿನ್ನ ಈ ಅಂಕಣದಲ್ಲಿ ಇಂಗ್ಲೀಷ್ ಪತ್ರಿಕೆಗಳ ಬಗ್ಗೆ ಬರೆಯುವುದಿಲ್ಲವೇ? ನನ್ನ ನಿಲುವು ಸರಳ, ಅಂತಹ ಯಾವುದೇ ಮಡಿ ಮುಚ್ಚಟ್ಟೆ ಈ ಅಂಕಣಕ್ಕಿಲ್ಲ. ಪತ್ರಿಕೆ ನನಗೆ ವಿಶಿಷ್ಟ ಅಂತ ಅನಿಸಿರಬೇಕು. ಹಾಗಾಗಿ ಈ ವಾರ ನಾನು ಬೇಕೆಂತಲೇ ಪರಿಚಯಿಸಬೇಕಿದ್ದ ಕನ್ನಡ ಮಾಸಪತ್ರಿಕೆಯ ಸರತಿ ತಪ್ಪಿಸಿ ಅಪರೂಪದ ಆಂಗ್ಲ ದ್ವೈಮಾಸಿಕವನ್ನು ನಿಮ್ಮೆದುರಿಗೆ ಇಟ್ಟಿದ್ದೇನೆ. ಒಪ್ಪಿಸಿಕೊಳ್ಳಿ.....


ಸ್ಲಿಮ್ ಟ್ಯೂಬ್‌ಲೈಟ್, ಅಡುಗೆ ಎಣ್ಣೆ, ಬ್ಯಾಟರಿ ಸೆಲ್, ಟೂತ್‌ಪೇಸ್ಟ್, ಟಿವಿ, ಗೋಧಿ ಹಿಟ್ಟು... ಹೀಗೆ ಹಲವು ವಿಚಾರಗಳಲ್ಲಿ ಖರೀದಿಗೆ ಹೊರಟಾಗ ನಮ್ಮ ತಲೆಯಲ್ಲಿ ಒಂದು ಅನುಮಾನ ಮೂಡಬಹುದು, ಯಾವ ಕಂಪನಿಯ ತಯಾರಿಕೆ ಖರೀದಿಗೆ ಯೋಗ್ಯ? ಕಾನೂನು ಮಾನದಂಡಗಳನ್ನು ಇವು ಸರಿಯಾಗಿ ಪಾಲಿಸಿತ್ತವೆಯೇ? ಬೆಲೆಗೆ ತಕ್ಕ ಮೌಲ್ಯ ದೊರಕುತ್ತದೆಯೇ? ಮಾರುಕಟ್ಟೆಯಲ್ಲಿ ಯಾವ ಯಾವ ಕಂಪನಿಯ ತಯಾರಿಕೆಗಳಿವೆ? ಗುಣಮಟ್ಟ ಹೇಗೆ? ಉಫ್, ಈ ಪ್ರಶ್ನೆಗಳಿಗೆಲ್ಲ ಉತ್ತರ ಎಲ್ಲಿ ಸಿಕ್ಕೀತು?
ಇಂಗ್ಲೀಷ್‌ನಲ್ಲೊಂದು ಗ್ರಾಹಕ ಪತ್ರಿಕೆಯಿದೆ. ಎರಡು ತಿಂಗಳಿಗೊಮ್ಮೆ ಪ್ರಕಟವಾಗುವ ಈ ಸುಂದರ ಪತ್ರಿಕೆಯ ಹೆಸರೇ ‘ಇನ್‌ಸೈಟ್’ ಅಹ್ಮದಾಬಾದ್‌ನ ಕನ್ಸ್ಯೂಮರ್ ಎಜುಕೇಷನ್ ಅಂಡ್ ರೀಸರ್ಚ್ ಸೊಸೈಟಿ (ಸಿಇಆರ್‌ಎಸ್) ರಾಷ್ಟ್ರದ ಪ್ರತಿಷ್ಟಿತ ಗ್ರಾಹಕ ಸಂಘಟನೆ. ಇದು ತನ್ನ ವ್ಯಾಪ್ತಿಯಲ್ಲಿ ಅತ್ಯಾಧುನಿಕ ಪರೀಕ್ಷಾ ಕೇಂದ್ರದ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿಯೇ ವಿವಿಧ ಕಂಪನಿಗಳ ತಯಾರಿಕೆಗಳನ್ನು ಪರೀಕ್ಷಿಸಿದೆ, ಪರೀಕ್ಷಿಸುತ್ತಿದೆ. ಅದರ ಆಮೂಲಾಗ್ರ ವರದಿಯನ್ನು ಪ್ರತಿ ಇನ್‌ಸೈಟ್‌ನಲ್ಲಿ ಪ್ರಮುಖವಾಗಿ ಪ್ರಕಟಿಸಲಾಗುತ್ತದೆ. ತುಂಬಾ ಪಾರದರ್ಶಕವಾಗಿ, ಪ್ರಜಾತಂತ್ರೀಯವಾಗಿ ಪರೀಕ್ಷೆ ನಡೆಯುವುದರಿಂದ ಅವು ನಂಬಲರ್ಹ. ಮುಖ್ಯವಾಗಿ, ತಾನು ಕಂಡುಹಿಡಿದ ಮಾಹಿತಿಗಳನ್ನು ಚಂದವಾಗಿ, ಮನಸ್ಸಿಗೆ ನಾಟುವಂತೆ ಲೇಖನವಾಗಿಸುವುದು ಇನ್‌ಸೈಟ್‌ಗೆ ಗೊತ್ತು.
ಇಷ್ಟೇ ಅಲ್ಲ, ಕಾನೂನು ಸಲಹೆ, ತೆರಿಗೆ ಮಾಹಿತಿ, ಅನಾರೋಗ್ಯಕರ ತಯಾರಿಕೆಗಳು, ಬಳಕೆದಾರರ ಸಂಬಂಧೀ ಕಾಯ್ದೆಗಳು.. ಮಾಹಿತಿ ಹೇರಳ. ಸ್ವಲ್ಪ ಪ್ರಮಾಣದ ಇಂಗ್ಲೀಷ್ ಗೊತ್ತಿದ್ದವನಿಗೂ ಪತ್ರಿಕೆ ಗಿಟ್ಟುತ್ತದೆ, ಈಗ ನಾನಿಲ್ಲವೇ?
ಅದರ ಬಿಡಿ ಪ್ರತಿ ಬೆಲೆ 40 ರೂ. ಮಾರಾಟದಲ್ಲಿ ಬಿಡಿ ಪ್ರತಿ ಸಿಕ್ಕದು. ವಾರ್ಷಿಕ ಚಂದಾ 180ರೂ. ಅದೇ ಮೂರು, ಐದು ವರ್ಷಗಳಿಗೆ ಆದರೆ ರಿಯಾಯಿತಿ ದರವಿದೆ. ಅನುಕ್ರಮವಾಗಿ ಅದು 450, 700ರೂ. ಚಂದಾ ಕಳಿಸುವುದಾದರೆ, CERS, `Suraksha Sankool' Thaltej-Gandinagar Highway, Ahmadabad - 380054, GUJARATH
ನೆನಪಿರಲಿ, ಪತ್ರಿಕೆಯ ಉದ್ದೇಶ ಗ್ರಾಹಕ ಜಾಗೃತಿಯೇ ವಿನಃ ವ್ಯಾವಹಾರಿಕ ಲಾಭವಲ್ಲ. ಆದರೂ ಪತ್ರಿಕೆ ಬೇಡ, ಮಾಹಿತಿಯಷ್ಟೇ ಬೇಕು ಎನ್ನುವವರು http://www.cercindia.org/ ವೆಬ್‌ಸೈಟ್‌ನಲ್ಲಿ ಇಣುಕಬಹುದು.

ಕೊನೆಮಾತು - ಮಿತ್ರ ಜಿತು ಈಗ ‘ತನಗೆ ಬರುತ್ತಿರುವ ಕೆಲವು ವಿಶಿಷ್ಠ ಪತ್ರಿಕೆಗಳನ್ನು ನನಗೆ ಕೊಡುವುದಾಗಿ ತಿಳಿಸಿದ್ದಾನೆ. ನಿಮ್ಮಂತ ಇತರ ಸ್ನೇಹಿತರಲ್ಲೂ ನಾನು ಕೇಳುವುದಿಷ್ಟೇ, ನಿಮಗೆ ಉತ್ತಮ ಎನ್ನಿಸಿದ ಪತ್ರಿಕೆಯ ಸ್ಯಾಂಪಲ್ ಪ್ರತಿಯನ್ನು ನನ್ನ ವಿಳಾಸಕ್ಕೆ ಕಳಿಸಿಕೊಡಿ. ನನಗೂ ಮೆಚ್ಚುಗೆಯಾದರೆ ಈ ಅಂಕಣದಲ್ಲಿ ಬಳಸಿಕೊಳ್ಳುವೆ. ಅಷ್ಟಕ್ಕೂ ನನಗೆ ಲಭ್ಯವಿರುವ ಅಪರೂಪದ ಪತ್ರಿಕೆಗಳು ಕೆಲವೊಂದು ಮಾತ್ರ. ಉಳಿದವಕ್ಕೆ ಸಲ್ಲಬೇಕಾದ ಸಮ್ಮಾನ ತಪ್ಪಿಹೋದೀತು. ಕಳಿಸಿಕೊಡುವಿರಾ?-ಮಾ.ವೆಂ.ಸ.ಪ್ರಸಾದ್
ಮಾವಿನಸರ
ಪೋಸ್ಟ್-ಎಡಜಿಗಳೇಮನೆ
ಸಾಗರ ತಾ. ಶಿವಮೊಗ್ಗ ಜಿ.
577401
ಫೋನ್-08183 236068, 296543
9886407592
ಇ ಮೇಲ್- mavemsa@gmail.com

ಭಾನುವಾರ, ಡಿಸೆಂಬರ್ 13, 2009

ಕಾಫಿ ಬೆಲೆಗೆ ‘ಸುಮ್ನೆ’ ಓದಿ!


ವಾರಕ್ಕೊಮ್ಮೆ......... 3

ನಿಮ್ಮೂರಿನ ಹೋಟೆಲ್‌ನಲ್ಲಿ ಈಗ ಒಂದು ಕಾಫಿಯ ಬೆಲೆ ಎಷ್ಟು? ನಮ್ಮೂರಿನಂತ ನಮ್ಮೂರಿನಲ್ಲೇ ಅದಕ್ಕೆ ಐದು ರೂಪಾಯಿ. ಎರಡು ಗುಟುಕಿಗೆ ಆ ಪ್ಲಾಸ್ಟಿಕ್ ಕಪ್ ಖಾಲಿ ಬೇರೆ! 10, 20 ರೂ. ಆಯಾ ನಗರದ, ಆಯಾ ದರ್ಜೆಯ ಹೋಟೆಲ್‌ಗಳನ್ನು ಅನುಸರಿಸಿ ದರವಿದ್ದೀತು. ಅವತ್ತೊಂದು ದಿನ ಬೆಂಗಳೂರಿನ ಏರ್‌ಪೋರ್ಟ್ ಒಳಗೆ ಕಾಫಿ ಕುಡಿದರೆ ಬಿಲ್ ಕೈ ಸುಟ್ಟಿತ್ತು, 70 ರೂಪಾಯಿ! ಇಂತಹ ದಿನಗಳಲ್ಲಿ ಕೇವಲ ಮೂರು ರೂ.ಗೆ ಒಂದು ಮಾಸಪತ್ರಿಕೆ ಪ್ರಕಟಗೊಳ್ಳುತ್ತಿರುವುದು ನಿಮಗೆ ಗೊತ್ತೆ?
ಗಂಭೀರವಾಗಿಯೇ ಹೇಳುತ್ತಿದ್ದೇನೆ, ಪತ್ರಿಕೆಯ ಹೆಸರೇ ‘ಸುಮ್ ಸುಮ್ನೆ’ ನನಗೆ ನೆನಪಿರುವಂತೆ ಈ ಪತ್ರಿಕೆ ಆರಂಭವಾದದ್ದು ಎಂಟೂ ಹತ್ತೋ ರೂ. ದರದಲ್ಲಿ. ಆಗ ಅದರ ಪುಟ ಸಂಖ್ಯೆ, ಬಹುಷಃ ನೀತಿ ಬೇರೆಯೇ ಇತ್ತು. ಆದರೆ ಮಾರುಕಟ್ಟೆಯಲ್ಲಿ ತನ್ನದೇ ಒಂದು ಅಸ್ತಿತ್ವ ಪ್ರದರ್ಶಿಸಲು ಮೂರು ರೂ.ಗಳ ದರವಿಟ್ಟು ಪತ್ರಿಕೆಯನ್ನು ಪುನರ್ರ‍ೂಪಿಸಿದ್ದು ಸುಮಖ ಪ್ರಕಾಶನದ ರೂವಾರಿ ನಾರಾಯಣ ಮಾಳ್ಕೋಡ್.
ಸ್ವಲ್ಪ ಪತ್ರಿಕೋದ್ಯಮದ ಪರಿಚಯವಿದ್ದವರಿಗೆ ಮಾಳ್ಕೋಡ್‌ರ ಹೆಸರು ಕಿವಿಗೆ ಬಿದ್ದೇಬಿದ್ದಿರುತ್ತದೆ. ಬದುಕಿನ ಮಜಲುಗಳಲ್ಲಿ ವರದಿಗಾರರಾಗಿ, ಉಪಸಂಪಾದಕರಾಗಿ ದುಡಿದು ಈಗ ತಮ್ಮದೇ ಒಂದು ಬೃಹತ್ ಪುಸ್ತಕ ಪ್ರಕಾಶನವನ್ನು ನಡೆಸುತ್ತಿರುವ ಸಾಹಸಿ ಮಾಳ್ಕೋಡ್. ವೈಯುಕ್ತಿಕವಾಗಿ ಯಾವುದೇ ಪರಿಚಯ ನನಗಿಲ್ಲ. ಆದರೆ ಮೂಲತಃ ಹೊನ್ನಾವರದವರು ಎಂಬ ಮಾಹಿತಿ ಕೇಳಿ ಗೊತ್ತು. ಪ್ರತಿ ತಿಂಗಳು ಮುದ್ದಾಂ ಪುಸ್ತಕ ಪ್ರಕಟನೆ ಮಾಡುವುದು, ಸಂಗೀತ ಸಂಜೆ ಕಾರ್ಯಕ್ರಮ ನಡೆಸುವುದು, ಸಾಹಿತ್ಯಿಕ ಗೋಷ್ಠಿ... ನಡೆಸುವ ಸುಮುಖ ಇವತ್ತು ಈ ಹಿಂದಿನ ಸಂಗಮ ಪ್ರಕಾಶನದ ರಾಗಸಂಗಮ, ಚುಟುಕು ಪತ್ರಿಕೆಗಳ ಜವಾಬ್ದಾರಿಯ ಜೊತೆಗೆ ತನ್ನದೇ ನಾಲ್ಕು ಮಾಸಿಕಗಳನ್ನು ಹೊರತರುತ್ತಿದೆ. ಅದರಲ್ಲೊಂದು ಸುಮ್ ಸುಮ್ನೆ.
ನಿಜ, ಸುಮ್ನೆಯದು ಗಟ್ಟಿ ಸಾಹಿತ್ಯಿಕ ಚಿಂತನೆ ಹಚ್ಚುವಂತದಲ್ಲ. ಹಾಗೆಂದು ಅದು ತನ್ನನ್ನು ಕರೆದುಕೊಂಡೂ ಇಲ್ಲ. ಟೈಂಪಾಸ್‌ಗೆ ಕಡ್ಲೆ ಕಾಯಿ ತಿಂದು ಆರೋಗ್ಯ ಹಾಳುಮಾಡಿಕೊಳ್ಳುವುದಕ್ಕಿಂತ ಅದೇ ದರಕ್ಕೆ ಒಂದು ಸುಮ್ನೆ ಕೊಂಡು ಬಸ್‌ನಲ್ಲಿ ಓದುತ್ತ ಕೂರಬಹುದು. 26 ಪುಟಗಳಲ್ಲಿ ಪುಟ್ಟ ಸಣ್ಣ ಮಾಹಿತಿಗಳ ಸಂಗ್ರಹ. ಚಿತ್ರ ಸಮೇತ. ಇತ್ತೀಚೆಗಂತೂ ನಾಲ್ಕು - ಎಂಟು ಪುಟಗಳನ್ನು ಬಹುವರ್ಣಗಳಲ್ಲಿ ಮುದ್ರಿಸುವ ಸಾಹಸವನ್ನು ಮಾಡುತ್ತಿದ್ದಾರೆ. ‘ಮಕ್ಕಳ ಜ್ಞಾನ ವಿಕಾಸಕ್ಕಾಗಿ’ ಎಂಬ ಉಲ್ಲೇಖ ಪತ್ರಿಕೆಯಲ್ಲಿದ್ದರೂ ಇದು ಎಲ್ಲ ವರ್ಗದ ಓದುಗರಿಗೆ ಸಲ್ಲುತ್ತದೆ. ತುಸು ಖುಷಿ, ಚುಟುಕು ಮಾಹಿತಿಯ ಪತ್ರಿಕೆಯ ತಂತ್ರ ಗಮನ ಸೆಳೆಯುತ್ತದೆ.
ಪತ್ರಿಕೆಗೆ ಇನ್ನೂ ಎರಡು ವರ್ಷಗಳ ಪ್ರಾಯ. ನನ್ನ ಆಪ್ತ ಮಾಹಿತಿದಾರರ ಪ್ರಕಾರ, ಸುಮ್ನೆಯ ಪ್ರಸಾರ ಸಂಖ್ಯೆ ಉತ್ತೇಜನಕಾರಿಯಾಗಿಲ್ಲ. ಬುಕ್‌ಸ್ಟಾಲ್‌ಗಳ ಕೌಂಟರ್ ಸೇಲ್ ಕೂಡ ಚೆನ್ನಾಗಿಲ್ಲ. ಖಂಡಿತವಾಗಿಯೂ ಇದು ಅಸಹನೀಯ ಅಂಶ. ಕೇವಲ ಮೂರು ರೂಪಾಯಿಯ ಈ ಪತ್ರಿಕೆ ಅಷ್ಟು ದುಡ್ಡಿಗೆ ಮೋಸ ಮಾಡುವುದಿಲ್ಲವೆಂದು ನಾನು ‘ಯಾವುದೇ ದೇವರ ಮೇಲೆ’ ಆಣೆ ಮಾಡಿ ಹೇಳಬಲ್ಲೆ! ಬೇಕೆನ್ನುವವರಿಗೆ ಬುಕ್‌ಸ್ಟಾಲ್‌ಗಳಲ್ಲಿ ಲಭ್ಯ. ಅಥವಾ ವರ್ಷಕ್ಕೆ ಬರೇ 36 ರೂ. ಚಂದಾವನ್ನು ಸುಮುಖ ಡಿಸ್ಟಿಬ್ಯೂಟರ‍್ಸ್, ನಂ.174ಇ/28,2ನೇ ಮಹಡಿ, ಒಂದನೇ ಮುಖ್ಯರಸ್ತೆ, ವಿದ್ಯಾರಣ್ಯ ನಗರ, ಮಾಗಡಿ ರಸ್ತೆ, ಟೋಲ್‌ಗೇಟ್, ಬೆಂಗಳೂರು -560023 ಗೆ ಕಳುಹಿಸಿಕೊಡಬಹುದು.
ಫೋನ್ - 080 23146060
ಪ್ಲೀಸ್, ಓದಿ ಸುಮ್ನಾಗದಿರಿ!

-ಮಾ.ವೆಂ.ಸ.ಪ್ರಸಾದ್
ಮಾವಿನಸರ
ಪೋಸ್ಟ್-ಎಡಜಿಗಳೇಮನೆ
ಸಾಗರ ತಾ. ಶಿವಮೊಗ್ಗ ಜಿ.
577401
ಫೋನ್-08183 236068, 296543
9886407592
ಇ ಮೇಲ್- mavemsa@gmail.com

ಗುರುವಾರ, ಡಿಸೆಂಬರ್ 10, 2009

ನಾನೀಗ ‘ದಟ್ಸ್ ಕನ್ನಡ’ ವೆಬ್ ಅಂಕಣಕಾರ!

ನಿಮಗೂ ಗೊತ್ತು, ಈ ಬ್ಲಾಗ್‌ಗಳನ್ನು ಪತ್ರಿಕೆಗಳೆಂದು ಭಾವಿಸಿದರೆ ಅವುಗಳನ್ನು ಅನಿಯತಕಾಲಿಕಗಳಿಗೆ ಸೇರಿಸಬೇಕು. ಯಾವ ಬ್ಲಾಗಿಗನೂ ಒಂದು ನಿಯಮಿತ ವೇಳೆಯನ್ನು ಅನುಸರಿಸಿ ಬ್ಲಾಗ್ ಅಪ್‌ಲೋಡ್ ಮಾಡುವುದಿಲ್ಲ. ಅದರಲ್ಲಿ ನಾನೂ ಒಬ್ಬ! ಕೊನೆಪಕ್ಷ ಶಿಸ್ತು ಬರಲಿ ಎಂಬ ಕಾರಣಕ್ಕೆ ನಿಯಮಿತವಾಗಿ ಬರೆಯಲು ವಿಷಯ ಹುಡುಕಿದಾಗ ಸಿಕ್ಕಿದ್ದು ‘ಪತ್ರಿಕೆಗಳು’. ಹೌದು, ಎಷ್ಟೋ ಬಾರಿ ನಾನು ಓದುವ ಹಲವು ಪತ್ರಿಕೆಗಳ ಬಗ್ಗೆ ಹೇಳಬೇಕೆನಿಸಿದರೂ ಕೇಳಲು ಕಿವಿಗಳೂ ಸಿಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ವಾರಕ್ಕೊಮ್ಮೆ ಬರೆಯುವ ಉದ್ಘೋಷದೊಂದಿಗೆ ಅದೇ ಹೆಸರಿನ ಅಂಕಣ ಬರಹ ರೂಪದಲ್ಲಿ ಇದೇ ಬ್ಲಾಗ್ ಅಪ್‌ಲೋಡ್ ಆರಂಭಿಸಿದೆ. ನನ್ನ ಕೆಲಸದಿಂದ ಕೆಲವು ಪತ್ರಿಕೆಗಳಿಗೆ ಲಾಭವಾದರೆ ಸಾರ್ಥಕ ಎಂಬ ಭಾವವೂ ಇತ್ತು. ವಿಶ್ವಾಸವಿರಿಸಿ ನಮ್ಮೂರ ವಾಚನಾಲಯಕ್ಕೆ ಉಚಿತ ಪತ್ರಿಕೆ ಕಳುಹಿಸಿದ ಸಂಪಾದಕರಿಗೆ ನಾನು ಸಲ್ಲಿಸುವ ಗೌರವ ಎನ್ನುವುದು ಇನ್ನೊಂದು ಸತ್ಯ.
ಯಾಕೋ ಗೊತ್ತಿಲ್ಲ. ನನ್ನ ಬ್ಲಾಗ್‌ನಲ್ಲಿಯೇ ಕಾಮೆಂಟ್ ಬರೆಯುವವರು ಕಡಿಮೆ. ನೀವೇ ನೋಡಿ, ವಾರಕ್ಕೊಮ್ಮೆ ಸರದಿಯ ಎರಡನೇ ಲೇಖನಕ್ಕೆ ಒಂದೇ ಒಂದು ಕಾಮೆಂಟ್ ಇಲ್ಲ. ಆದರೆ ನನ್ನ ಮೈಲ್ ಐಡಿಗೆ ಪ್ರತಿಕ್ರಿಯೆಗಳು ಸಾಕಷ್ಟು. ಯಾಕೆ ಹೀಗೆ... ಗೊತ್ತಾಗುತ್ತಿಲ್ಲ.
ಅಂತಹ ಒಂದು ಮೈಲ್ ಕಳೆದ ವಾರದ ವಾರಕ್ಕೊಮ್ಮೆ ಕಂತನ್ನು ಬರೆದಾಗಲೇ ಸಿಕ್ಕಿತ್ತು. ‘ದಟ್ಸ್ ಕನ್ನಡ’ ವೆಬ್ ಪತ್ರಿಕೆಯ ಸಂಪಾದಕರಾದ ಎಸ್.ಕೆ.ಶ್ಯಾಮಸುಂದರ್ ಬರೆದಿದ್ದರು...Wonderful Idea....Shall I too publish this feature ( ಕನ್ನಡ ಪತ್ರಿಕೆಗಳ ವಾರಪತ್ರಿಕೆ !! ) on a real time basis ( Monday) on thatskannada pages ( server) ...........thanks to mavemsa blog ?
Please let me know.
ನಾನು ಒಪ್ಪಿದೆ. ಸಮಸ್ಯೆಯೇನಿಲ್ಲವಲ್ಲ.? ಆದರೆ ಈಗ ಅನಿಸುತ್ತಿದೆ. ನನ್ನದೇ ಬ್ಲಾಗ್ ಆಗಿದ್ದರೆ ಒಂದು ವಾರ ಮಿಸ್ ಆದರೂ ನಡೆದೀತು. ಆದರೆ ಅಲ್ಲಿ ಒಪ್ಪಿಕೊಂಡ ನಂತರ ಕಷ್ಟ, ಪ್ರತಿ ವಾರ ಬರೆಯಲೇ ಬೇಕು. ಎಲ್ಲಿಯವರೆ ಸಾಧ್ಯವಾದೀತೋ ಅಲ್ಲಿಯವರೆಗೆ ಬರೆದರೆ ಆಯ್ತು ಎಂದು ಮನಸ್ಸನ್ನು ಸಮಾಧಾನ ಪಡಿಸಿರುವೆ. ಶ್ಯಾಮ್ ವಿವರವಾಗಿ ಬರೆದರು.... "ನಿಮ್ಮ ಕಲ್ಪನೆ ಮತ್ತು ಪ್ರಯೋಗ ಎರಡೂ ಪ್ರಶಂಸಾರ್ಹ. ನಮ್ಮ ನಾಡಿನಲ್ಲಿನ ಗ್ರಾಮಾಂತರ ಪತ್ರಿಕೆಗಳ ಬಗೆಗೆ ನಮಗೆ ಏನೂ ಗೊತ್ತಿಲ್ಲ. ಸುಧಾ, ಮಯೂರ, ತುಷಾರ, ತರಂಗ ಪತ್ರಿಕೆಗಳೇ ಎಲ್ಲವೂ ಅಲ್ಲ. ಪ್ರತೀ ಸೋಮವಾರ ಎಂದು ಹೇಳಿದ್ದೀರಿ. ಸರಿ. ಮೊದಲ ವಾರದ ಕಂತನ್ನು ಕೈಬಿಡಬಾರದು ಎಂಬ ದೃಷ್ಟಿಯಿಂದ ಈ ಬಾರಿ " ತಿಂಗಳು" ಪತ್ರಿಕೆ ಪರಿಚಯವನ್ನು ಶುಕ್ರವಾರವೇ ಮಾಡಿಬಿಡುತ್ತೇನೆ. ನಂತರ ಪ್ರತೀ ಸೋಮವಾರ. ತಾವು ಭಾನುವಾರ ಬರೆದ ನಂತರವೇ ನನಗೆ ರವಾನಿಸಿದರೆ, ಸೋಮವಾರ ಬೆಳಗ್ಗೆ ಪ್ರಕಟಿಸುತ್ತೇವೆ. ಪತ್ರಿಕೆ ಪರಿಚಯದ ಹಾದಿಯಲ್ಲಿ ಬಗೆಬಗೆಯ ವಿಷಯಾಧಾರಿತ ಪತ್ರಿಕೆಗಳು, ವಿವಿಧ ಜಿಲ್ಲೆ, ತಾಲೂಕುಗಳು "ನಿಯತಕಾಲಿಕೆಗಳ ವಾರಪತ್ರಿಕೆ " ಬುಟ್ಟಿಯಲ್ಲಿ ಕಾಣಸಿಗಲಿ " ಅಂದಿನಿಂದಲೇ ದಟ್ಸ್ ಕನ್ನಡದಲ್ಲಿ ಅಂಕಣ ಪ್ರಕಟಗೊಳ್ಳುತ್ತಿದೆ. ಸುಮ್ಮನೆ ನೋಡಿ, http://thatskannada.oneindia.in/column/periodicals/2009/1207-kannada-periodical-sahaja-agri-bimonthly.html. ಮೆಚ್ಚುಗೆಯಿಂದ ಭೂಮಿ ಮೇಲಿನ ಹೆಜ್ಜೆ ನೆಲ ಬಿಡಬಾರದು. ಎಷ್ಟೋ ಬಾರಿ, ಪ್ರಶಂಸೆಯ, ಮನ್ನಣೆಯ ಮಾತು ಹೊಸ ಉತ್ಸಾಹವನ್ನು ತರುವುದು ಖಚಿತ. ಹಾಗಾಗಿದೆ ಎಂದು ವಿನಮ್ರನಾಗಿ ಭಿನ್ನವಿಸುತ್ತೇನೆ. ಹಲವು ಹಿರಿಯರ ಪತ್ರಗಳಲ್ಲಿ ನನ್ನ ಗಮನವನ್ನು ವಿಶೇಷವಾಗಿ ಸೆಳೆದಿದ್ದು ಎಸ್.ಎಂ.ಪೇಜತ್ತಾಯರು ಬರೆದ ಮಿಂಚಂಚೆ, ತಿಂಗಳು ಪತ್ರಿಕೆಗೆ ಚಂದಾದಾರ ಆಗುವೆ." ಇನ್ನೂ ಇಪ್ಪತ್ತ ಮೂರು ಮೈಲ್ ಸ್ನೇಹಿತರು ಬೆಂಬಲಕ್ಕೆ ನಿಂತಿದ್ದಾರೆ. ನೀವೂ ಇರುವಿರಿ ತಾನೇ?
ಇನ್ನೆಂತ ಹೇಳಲಿ, ನಮಸ್ಕಾರ.
-ಮಾ.ವೆಂ.ಸ.ಪ್ರಸಾದ್
ಮಾವಿನಸರ
ಪೋಸ್ಟ್-ಎಡಜಿಗಳೇಮನೆ
ಸಾಗರ ತಾ. ಶಿವಮೊಗ್ಗ ಜಿ.
577401
ಫೋನ್-08183 236068, 296543
9886407592
ಇ ಮೇಲ್- mavemsa@gmail.comಭಾನುವಾರ, ಡಿಸೆಂಬರ್ 6, 2009

ಕೃಷಿ ಪತ್ರಿಕೆ - ಕೃಷಿಕರಲ್ಲದವರಿಗೂ ಸೈ!


ವಾರಕ್ಕೊಮ್ಮೆ......... 2
ನಮ್ಮೂರಿನ ‘ವೀಣಾ ಸ್ಮಾರಕ ಮಾವಿನಮನೆ ವಾಷನಾಲಯ’ದ ಮೂರನೇ ವಾರ್ಷಿಕೋತ್ಸವ ಸಂದರ್ಭ. ಬರಹಗಾರ್ತಿ ಶ್ರೀಮತಿ ರೋಹಿಣಿ ಶರ್ಮ ಅಜ್ಜಂಪುರ ನಮ್ಮ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದರು. ಅವರ ಕೈಯಲ್ಲಿ ಹತ್ತೆಂಟು ಪತ್ರಿಕೆಗಳ ಪ್ರತಿಗಳಿತ್ತು. ಈ ರೋಹಿಣಕ್ಕ ಮನೆಗೆ ಪ್ರತಿತಿಂಗಳು ಸರಿಸುಮಾರು ೩೦ ಪತ್ರಿಕೆಗಳನ್ನು ಅಂಚೆಯಲ್ಲಿ ತರಿಸುತ್ತಾರಂತೆ. ಅವತ್ತು ತಂದ ಆ ಪತ್ರಿಕೆಗಳಲ್ಲಿ ನನಗೆ ಎದ್ದು ಕಂಡದ್ದು ‘ಸಹಜ ಸಾಗುವಳಿ’ ಮುಖಪುಟದ ಹೊರತಾಗಿ ಉಳಿದೆಲ್ಲ ಪುಟಗಳಲ್ಲಿ ಸುದ್ದಿ, ಲೇಖನಗಳಿಂದ ಶೃಂಗರಿಸಿಕೊಂಡ ‘ಸಹಜ’ ಸಹಜವಾಗಿಯೇ ನನ್ನ ಗಮನ ಸೆಳೆಯಿತು.
ದ್ವೈಮಾಸಿಕ ಪತ್ರಿಕೆಯಿದು. 28ರಿಂದ 32ರವರೆಗೆ ಪುಟಗಳು. ಆರಂಭಿಕ ದಿನಗಳ ‘ಅಡಿಕೆ ಪತ್ರಿಕೆ’ಯ ಆಕಾರ. ಕಾರ್ಪೊರೇಟ್ ದುರಾಕ್ರಮಣವನ್ನು ವಿರೋಧಿಸುವ ಖಡಕ್ ನೀತಿ. ಹಾಗಾಗಿ ರಾಸಾಯನಿಕ ಗೊಬ್ಬರ, ಕೆಮಿಕಲ್ ಔಷಧಿ, ಬಿಟಿ ಜ್ಞಾನಗಳನ್ನು ಆಮೂಲಾಗ್ರವಾಗಿ ಸಹಜ ಸಾಗುವಳಿ ವಿರೋಧಿಸುತ್ತದೆ. ಇವುಗಳ ಮೂಲವಾದ ಬಹುರಾಷ್ಟ್ರೀಯ ಕಂಪನಿಗಳನ್ನು, ಉತ್ಪಾದಕರನ್ನು ಟೀಕಿಸುತ್ತಲೇ ಇರುವುದರಿಂದ ಜಾಹೀರಾತುಗಳ ಕಾಟ ಈ ಪತ್ರಿಕೆ ಓದುಗನಿಗಿಲ್ಲ. ಅಷ್ಟೇಕೆ, ಹಿಂದೊಮ್ಮೆ ನನ್ನ ‘ಇಲಿಗಳ ನಾಶ’ ತಂತ್ರದ ಲೇಖನವನ್ನು ಪ್ರಕಟಿಸಿದ್ದರೂ ಅದರಲ್ಲಿದ್ದ ‘ಹಿಟ್ಟಿಗೆ ರಾಸಾಯನಿಕ ಥಿಮೆಟ್ ಹಾಕಿ ಇಟ್ಟರೆ ತಿನ್ನುವ ಹೆಗ್ಗಣ ಸಾಯುತ್ತದೆ’ ಎಂಬ ವಾಕ್ಯವನ್ನು ನಿರ್ದಾಕ್ಷಿಣ್ಯವಾಗಿ ಸಂಪಾದಕಿ ವಿ.ಗಾಯತ್ರಿಯವರು ಕತ್ತರಿಸಿ ಎಸೆದಿದ್ದರು!
ಸಹಜ ಸಾಗುವಳಿಯನ್ನು ಸರ್ಕಾರೇತರ ಸಂಸ್ಥೆ ಇಕ್ರಾ ಹೊರತರುತ್ತಿದೆ. ಇತ್ತೀಚೆಗೆ ನಡೆದ ‘ರೈತಶಕ್ತಿ’ ಎಂಬ ದೊಡ್ಡ ಕಾರ್ಯಕ್ರಮ ಸಂಯೋಜನೆಯಲ್ಲಿಯೂ ಇಕ್ರಾ ಪಾಲ್ಗೊಂಡಿತ್ತು. ಹಲವು ಪುಸ್ತಕ ಪ್ರಕಟನೆಗಳನ್ನು ಮಾಡಿದೆ ಕೂಡ. ಖುದ್ದು ಸಸಾ ತನ್ನನ್ನು ಸುಸ್ಥಿರ ಸಾವಯವ-ಸಹಜ ಕೃಷಿಗೆ ಮೀಸಲಾದ ಪತ್ರಿಕೆ ಎಂದು ಹೇಳಿಕೊಂಡಿದೆ. ಸಸಾ ಉತ್ತಮ ಗುಣಮಟ್ಟದ ಕಾಗದದಲ್ಲಿ ಮುದ್ರಣಗೊಳ್ಳುತ್ತಿದೆ. ಹಲವು ಲೇಖನಗಳನ್ನು ರೈತರ ಆಡುಭಾಷೆಯಲ್ಲಿಯೇ ಇಡುವುದು ವೈಶಿಷ್ಟ್ಯತೆ. ವಿಷಯ ವೈವಿಧ್ಯಕ್ಕೂ ಕೊರತೆಯಿಲ್ಲ. ಮುಖ್ಯವಾಗಿ, ರೈತರಲ್ಲದ ಓದುಗರು ಕೂಡ ಸಹಜ ಸಾಗುವಳಿಯನ್ನು ಖುಷಿಯಿಂದ ಓದಬಹುದು. ಜಿಎಂ ತಂತ್ರಜ್ಞಾನ, ಪರ್ಮಾಕಲ್ಚರ್‌ಗಳಂತ ಹತ್ತಾರು ವಿಚಾರಗಳ ಬಗ್ಗೆ ಮತ್ತು ಅದೇ ವೇಳೆ ಸಾಂಪ್ರದಾಯಿಕ ಕೃಷಿ ಪದ್ಧತಿಗಳ ಕುರಿತು ಮಾಹಿತಿ ಪಡೆಯಬಹುದು. ತಜ್ಞರ ಬರಹಗಳ ಭಾಷಾಂತರವೂ ಇಲ್ಲಿ ಲಭ್ಯ.
ಬಿಡಿ ಪ್ರತಿಗೆ 12ರೂ. ವಾರ್ಷಿಕ ಚಂದಾ 60 ರೂ. ಸಸಾ ವಿಳಾಸ -ಸಂಪಾದಕರು, ಸಹಜ ಸಾಗುವಳಿ, ನಂ22, 5ನೇ ಕ್ರಾಸ್, ಮೈಖೇಲ್ ಪಾಳ್ಯ, 2ನೇ ಹಂತ, ಹೊಸ ತಿಪ್ಪಸಂದ್ರ ಅಂಚೆ, ಬೆಂಗಳೂರು - 560075
ದೂರವಾಣಿ - 080-25283370/25213104
ಕೊನೆಮಾತು - ಪತ್ರಿಕೆಗಳ ಕೊರತೆಗಳ ಬಗ್ಗೆ ಪ್ರಜ್ಞಾಪೂರ್ವಕವಾಗಿಯೇ ನಾನು ಬರೆಯುತ್ತಿಲ್ಲ. ವಿಮರ್ಶೆಯ ಗುರಿ ಸದ್ಯಕ್ಕೆ ನನ್ನದಲ್ಲ. ಪತ್ರಿಕೆಗಳ ಪರಿಚಯ ಈಗಿನ ಜರೂರಿ. ಹಾಗಾಗಿ ತುಸು ಹೊಗಳಿಕೆ ಹೆಚ್ಚಿದೆ ಎನ್ನಿಸಿದರೆ ಅದನ್ನು ರುಚಿಗೆ ಹಾಕಿದ ಒಗ್ಗರಣೆ ಎಂದುಕೊಳ್ಳಿ!
ಇನ್ನೂ ಒಂದು ಮಾತು - ಸಹಜ ಸಾಗುವಳಿಯಲ್ಲಿ ಇದು ಬೇಕು, ಇದಿರಬೇಕಿತ್ತು ಎಂಬ ಸಲಹೆಗಳ ಪಟ್ಟಿಯನ್ನು ನಿರ್ವಾಹಕ ಸಂಪಾದಕಿ ಗಾಯತ್ರಿಯವರಿಗೆ ಕಳಿಸಿಕೊಟ್ಟಿದ್ದೆ. ಅಂತಹ ಒಂದು ಸಲಹೆ ಜಾರಿಗೊಂಡಿದ್ದರ ಪರಿಣಾಮವಾಗಿ ಇವತ್ತು ನಾನು ಆ ಪತ್ರಿಕೆಯಲ್ಲಿ ‘ಅಂಕಣಕಾರ!’
-ಮಾ.ವೆಂ.ಸ.ಪ್ರಸಾದ್
ಮಾವಿನಸರ
ಪೋಸ್ಟ್-ಎಡಜಿಗಳೇಮನೆ
ಸಾಗರ ತಾ. ಶಿವಮೊಗ್ಗ ಜಿ.
577401
ಫೋನ್-08183 236068, 296543
9886407592
ಇ ಮೇಲ್- mavemsa@gmail.com


ಭಾನುವಾರ, ನವೆಂಬರ್ 29, 2009

ತಂಗಳು ಅಲ್ಲದ ‘ತಿಂಗಳು’

ವಾರಕ್ಕೊಮ್ಮೆ..........
ಒಂದು ಪ್ರಯೋಗ ಮಾಡುವ ಆಸೆ. ಕನ್ನಡ ಪತ್ರಿಕಾ ಕ್ಷೇತ್ರದ ಹಲಕೆಲವು ಪತ್ರಿಕೆಗಳ ಪರಿಚಯ ಮಾಡುವ ಯೋಚನೆಯ ಫಲಶ್ರುತಿ ಇದು. ಅದರ ಮೊದಲ ಕಂತು ಇಲ್ಲಿದೆ. ಪ್ರತಿ ಭಾನುವಾರ ಹೊಸ ಅಪ್‌ಲೋಡ್ ಮಾಡುವ ಲೆಕ್ಕಾಚಾರದಿಂದ ಆರಂಭಿಸಿರುವೆ. ಮುಖ್ಯವಾಗಿ, ಉತ್ತಮವಾಗಿದ್ದ್ದೂ ಕನ್ನಡದ ಬಹುಪಾಲು ಓದುಗರಿಗೆ ಪರಿಚಯವಿಲ್ಲದ ಪತ್ರಿಕೆಗಳಿಗೆ ಆದ್ಯತೆ ಕೊಟ್ಟು ಬರೆಯುವೆ. ನಮ್ಮೂರಿನ ‘ವೀಣಾ ಸ್ಮಾರಕ ಮಾವಿನಮನೆ ವಾಚನಾಲಯ’ಕ್ಕೆ ಹೆಚ್ಚಿನ ಪತ್ರಿಕೆಗಳು ಬರುತ್ತಿವೆ ಎಂಬುದು ಬರೆಯಲು ಧೈರ್ಯ ಕೊಟ್ಟಿದೆ. ನನ್ನ ಬ್ಲಾಗ್ ಓದುಗರೇ, ನಿಮ್ಮೆಲ್ಲ ಮಿತ್ರರಿಗೆ ಈ ಬರಹಗಳ ಲಿಂಕ್ ಕಳಿಸಿಕೊಡಲು ವಿನಂತಿಸುವೆ. ಈ ಮೂಲಕ ಆ ಪತ್ರಿಕಾ ಪ್ರಯತ್ನಗಳಿಗೆ ಬೆಂಬಲ ನೀಡೋಣ. ಆಗದೇ?
-ಮಾವೆಂಸ


ಮೂರು ತಿಂಗಳ ಹಿಂದಿನ ಮಾತು. ಬಹುಷಃ ಹೊನ್ನಾವರದಿಂದ ಪ್ರಕಟಗೊಳ್ಳುವ ‘ನಾಗರಿಕ’ ವಾರಪತ್ರಿಕೆಯಲ್ಲಿ ಓದಿದ ನೆನಪು ಎಂದು ಕಾಣುತ್ತದೆ. ಅದರಲ್ಲಿ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರರು ಮೈಸೂರಿನಿಂದ ಪ್ರಕಟಗೊಳ್ಳುವ ಪತ್ರಿಕೆಯೊಂದರ ಬಗ್ಗೆ ಸ್ತುತಿಸಿ ಬರೆದಿದ್ದರು. ಹೆಬ್ಬಾರರು ಮೆಚ್ಚಿರುವರೆಂದರೆ ಅದರಲ್ಲಿ ತಥ್ಯವಿರಲೇಬೇಕು ಎನಿಸಿತು. ಸುದ್ದಿಯ ಜೊತೆಗಿದ್ದ ಮೊಬೈಲ್ ನಂಬರ್‌ಗೆ ಫೋನ್ ಮಾಡಿದೆ. ವಾರವೊಪ್ಪತ್ತಿನಲ್ಲಿ ನನ್ನ ಕೈ ಸೇರಿತ್ತು ‘ತಿಂಗಳು’
ನಿಜ, ಪತ್ರಿಕೆಯ ಹೆಸರು ಶಾನೆ ವಿಚಿತ್ರ. ಮಾಸಪತ್ರಿಕೆಯ ಅನ್ವರ್ಥನಾಮವೇ ಅದರ ಹೆಸರೂ ಕೂಡ ಆಗಿದೆ ಇಲ್ಲಿ. ಪತ್ರಿಕೋದ್ಯಮದಲ್ಲಿ, ಪ್ರಮುಖವಾಗಿ ಪ್ರಜಾವಾಣಿಯಲ್ಲಿ ದುಡಿದ ಜಿ.ಪಿ.ಬಸವರಾಜು ‘ತಿಂಗಳು’ ಸಂಪಾದಕರು. ಅವರ ಸಂಪರ್ಕ ಅಗಾಧವಾಗಿದೆ ಎಂಬುದಕ್ಕೆ ಬರೀ ನಾಲ್ಕು ಸಂಚಿಕೆಗಳನ್ನಷ್ಟೇ ಕಂಡರೂ ಖ್ಯಾತ ಬರಹಗಾರರ ಬಳಗವೇ ಬರೆಯುತ್ತಿರುವುದನ್ನು ಸಾಕ್ಷಿಯಾಗಿ ಹೇಳಬಹುದು. ‘ಮಲ್ಲಿಗೆ’ ಮಾಸಪತ್ರಿಕೆಯ ಆಕಾರ, ವಿನ್ಯಾಸವನ್ನು ಇದು ತುಸು ಹೋಲುತ್ತದೆ. ತಿಂಗಳ ಹೂರಣ ಮಾತ್ರ ಅದಕ್ಕಿಂತ ಹೆಚ್ಚು ಗಟ್ಟಿ. ಅದರಲ್ಲಿ ಬರೆದಿರುವ ಕೆಲವು ಲೇಖಕರ ಹೆಸರನ್ನು ಮಾತ್ರ ಬರೆದು ಇತರರಿಗೆ ಅಗೌರವ ಮಾಡುವುದು ಬೇಡ. ಗಂಭೀರ ಸಾಹಿತ್ಯ ಓದುವ ಕನಸು ಕಾಣುವವರು ೧೬೪ ಪುಟಗಳ ಈ ಮಾಸಿಕವನ್ನು ಓದಲೇಬೇಕು. ಅಷ್ಟಕ್ಕೂ ಬಿಡಿ ಪ್ರತಿ ಬೆಲೆ ಕೇವಲ12 ರೂ.
ಈ ತರದ ಪತ್ರಿಕೆಗಳಲ್ಲಿ ‘ತುಷಾರ’ವನ್ನು ಹೊರತುಪಡಿಸಿ ‘ಮಯೂರ’ ಹೊಸ ಉತ್ಸಾಹದಿಂದ ಪ್ರಕಟಗೊಳ್ಳುತ್ತಿದೆ. ಅದರ ಪುಟ ವಿನ್ಯಾಸವಂತೂ ಭವ್ಯವಾಗಿದೆ. ಆ ಮಟ್ಟಿಗೆ ‘ತಿಂಗಳು’ ಪ್ರಯತ್ನವೂ ಸಣ್ಣದಲ್ಲ. ಆರಂಭವಾಗಿ ಅರ್ಧ ವರ್ಷವೂ ಕಳೆಯದಿರುವ ಕ್ಲುಪ್ತ ಅವಧಿಯಲ್ಲಿ ಅದರದು ಗಮನ ಸೆಳೆಯುವ ಪ್ರಯತ್ನ. ಎರಡೂವರೆ ಸಹಸ್ರ ಪ್ರಥಮ ಬಹುಮಾನದ ಕಥಾ ಸ್ಪರ್ಧೆಯನ್ನು ಪ್ರತಿ ತಿಂಗಳೂ ನಡೆಸುವಂತ ಸಾಹಸಕ್ಕೂ ತಿಂಗಳು ಅಡಿಯಿಟ್ಟಿದೆ.
ತಿಂಗಳು ಬೇಕೆನ್ನುವವರು ಮೊಬೈಲ್ ಸಂಖ್ಯೆ 9980560013ಕ್ಕೆ ಕರೆ ಮಾಡಿ. ವಾರ್ಷಿಕ ಚಂದಾ 150ರೂಪಾಯಿಯನ್ನು ಸಂಪಾದಕರು, ತಿಂಗಳು, ಅಭಿರುಚಿ ಪ್ರಕಾಶನ., 386,14ನೇ ಮುಖ್ಯ ರಸ್ತೆ, 3ನೇ ಕ್ರಾಸ್, ಸರಸ್ವತೀ ಪುರಂ, ಮೈಸೂರು-570009ಕ್ಕೆ ತಲುಪಿಸಬಹುದು.
ಕೊನೆಮಾತು - ಈ ವ್ಯಾವಹಾರಿಕ ದಿನಗಳಲ್ಲಿ ‘ತಿಂಗಳು’ವಿನ ಇನ್ನೊಂದು ಒಳ್ಳೆಯತನವನ್ನು ನೆನೆಯಲೇಬೇಕು. ಈ ಪತ್ರಿಕೆ ನಮ್ಮಲ್ಲಿನ ಸ್ಥಳೀಯ ಅಂಗಡಿಗಳಲ್ಲಿ ಲಭ್ಯವಾಗುತ್ತಿಲ್ಲ. ಇದನ್ನು ತಿಳಿಸಿದ ತಕ್ಷಣ ನನಗೆ ಅಂಚೆಯಲ್ಲಿ ಪತ್ರಿಕೆ ಬರಲಾರಂಭಿಸಿದೆ. ಅನಿವಾರ್ಯ ಕಾರಣಗಳಿಂದಾಗಿ ಇಂದಿಗೂ ಚಂದಾ ತಲುಪಿಸಲಾಗಿಲ್ಲ. ಊಹ್ಞೂ, ಪತ್ರಿಕೆ ಬರುವುದು ಮಾತ್ರ ನಿಂತಿಲ್ಲ. ಈ ವಿಶ್ವಾಸ ದೊಡ್ಡದು. ತಡವಾಗಿಯಾದರೂ ಚಂದಾ ಕಳುಹಿಸುವೆ. ಆದರೆ ನೀವು ಮಾತ್ರ ನನ್ನಂತೆ ಮಾಡದಿರಿ. ಚಂದಾವನ್ನು ಕಳಿಸಿ ಒಂದು ಒಳ್ಳೆಯ ಪತ್ರಿಕೆಯನ್ನು ಬೆಂಬಲಿಸಿ.
-ಮಾ.ವೆಂ.ಸ.ಪ್ರಸಾದ್
ಮಾವಿನಸರ
ಪೋಸ್ಟ್-ಎಡಜಿಗಳೇಮನೆ
ಸಾಗರ ತಾ. ಶಿವಮೊಗ್ಗ ಜಿ.
577401
ಫೋನ್-08183 236068, 296543
9886407592
ಇ ಮೇಲ್- mavemsa@gmail.comಸೋಮವಾರ, ನವೆಂಬರ್ 23, 2009

ಸಚಿನ್- ಬಹುಪರಾಕ್, ಬಹುಪರಾಕ್!ಸಚಿನ್ ರಮೇಶ್ ತೆಂಡೂಲ್ಕರ್ ತಮ್ಮ ಕ್ರಿಕೆಟ್ ಕ್ಯಾರಿಯರ್‌ನ ೨೦ ವಸಂತಗಳನ್ನು ಪೂರೈಸುತ್ತಿದ್ದಂತೆ ಪುಂಖಾನುಪುಂಖವಾಗಿ ಅವರನ್ನು ಶ್ಲಾಘನೆಗಳಿಂದ ಅಭಿಷೇಕಗೈಯುವ ಮಾಧ್ಯಮಪ್ರಚಾರ ಜಾರಿಯಲ್ಲಿದೆ. ಹತ್ತಿರಹತ್ತಿರ ಏಳೂವರೆ ಸಾವಿರ ದಿನಗಳಿಂದ ನಿರಂತರವಾಗಿ ಅಂತರ್ರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವವನ ದೇಹ, ಮನಸ್ಸು ಜರ್ಜರಿತಗೊಳ್ಳಬೇಕಿತ್ತು. ಆದರೆ ಸಚಿನ್ ಉಸಿರಾಡುತ್ತಿರುವುದೇ ಕ್ರಿಕೆಟ್‌ನ್ನು. ಉಸಿರಾಟದಿಂದಾಗಿ ಸುಸ್ತಾದ ಮನುಷ್ಯ ಯಾರೂ ಇಲ್ಲವಲ್ಲ! ಮೊನ್ನೆ ಮೊನ್ನೆ ಆಸ್ಟ್ರೇಲಿಯಾದೆದುರು ಏಕದಿನ ಪಂದ್ಯದಲ್ಲಿ ಗಳಿಸಿದ ೧೭೫ ರನ್, ನಿನ್ನೆ ಶ್ರೀಲಂಕಾದೆದುರು ಟೆಸ್ಟ್‌ನಲ್ಲಿ ಗಳಿಸಿದ ೪೩ನೇ ಶತಕ... ಬಿಡಿ, ಅಂಕಿಅಂಶಗಳಲ್ಲಿ ಸಚಿನ್ ಪರಾಕ್ರಮ ವಿವರಿಸಲು ‘ರಾಮಾಯಣ’ ಗ್ರಂಥದುದ್ದಕ್ಕೂ ಬರೆಯಬೇಕಾದೀತು!!
ಇಲ್ಲಿ ಅಂಕಿಅಂಶ, ದಾಖಲೆ, ಸಾಧನೆಗಳ ಗೋಜಿಗೆ ಹೋಗುತ್ತಿಲ್ಲ. ಸುಮ್ಮನೆ ಸಚಿನ್‌ರ ಕ್ರಿಕೆಟ್ ಬದುಕಿನಲ್ಲಿ ಓಡಾಡಿ ಹಲವು ಘಟನೆಗಳನ್ನು ಸಂಗ್ರಹಿಸಿದೆ. ಬರೀ ರನ್, ಧನ ಸಂಪಾದನೆಯಲ್ಲಿ ಅಲ್ಲದೆ ನಡೆನುಡಿಯಲ್ಲೂ ಸಚಿನ್ ಮಾದರಿಯಾಗುವಂತವರು. ಅವರಂತ ವ್ಯಕ್ತಿ ಇರುವುದರಿಂದಲೇ ನಮ್ಮ ದೇಶದ ಕಿಮ್ಮತ್ತು ನಿಸ್ಸಂಶಯವಾಗಿ ಜಾಸ್ತಯಾಗಿದೆ. ಇಲ್ಲಿ ಆಯ್ದ ವಿಶೇಷ ಪ್ರಸಂಗಗಳನ್ನು ನೀವೂ ಸವಿದು ಚಪ್ಪರಿಸಿ.
ರಾತ್ರಿ ಬ್ಯಾಟಿಂಗ್!
೧೯೮೯ರ ಪಾಕಿಸ್ತಾನದ ಪ್ರವಾಸ. ಸಚಿನ್ ತೆಂಡೂಲ್ಕರ್‌ಗೆ ಅದು ಚೊಚ್ಚಲ ಅಂತರ್ರಾಷ್ಟ್ರೀಯ ಅನುಭವ. ಸಿಯಾಲ್‌ಕೋಟ್ ಟೆಸ್ಟ್‌ನ ಹಿಂದಿನ ರಾತ್ರಿ. ಮರುದಿನ ಬೆಳಿಗ್ಗೆ ಸಚಿನ್‌ರಿಗೆ ತಂಡದ ಹಿರಿಯರಿಂದ ಎರಡು ಬ್ಯಾಟ್ ಸಿಗುವುದಿತ್ತು. ತಂಡಕ್ಕೆ ಆಯ್ಕೆ ಆದರೂ ಅಚ್ಚರಿಯಿರಲಿಲ್ಲ. ಹಾಗೊಂದು ಯೋಚನೆ ಹೊತ್ತೇ ಸಚಿನ್ ಹೋಟೆಲ್ ರೂಂನ ಹಾಸಿಗೆ ದಿಂಬಿಗೆ ತಲೆ ಕೊಟ್ಟರು. ಹೇಳಿ ಕೇಳಿ ಸಚಿನ್ ‘ಬೇಗ ಮಲಗಿ ಬೇಗ ಏಳು’ ಮಾಡೆಲ್! ಒಂದೆರಡು ತಾಸು ಕಳೆದಿರಬಹುದು. ತಂಡದ ಕೆಲವರು ಇನ್ನೂ ಕಾರಿಡಾರ್‌ನಲ್ಲಿ ಆರಾಮವಾಗಿ ಮಾತನಾಡಿಕೊಂಡಿದ್ದರು. ಇದ್ದಕ್ಕಿದ್ದಂತೆ ಸಚಿನ್ ಕೊಠಡಿಯಿಂದ ಹೊರಬಂದರು. ಅಲ್ಲಿದ್ದ ಸಹ ಆಟಗಾರರಲ್ಲಿ ಬ್ಯಾಟ್ ಬಗ್ಗೆ ವಿಚಾರಿಸಿದರು. ಬೆಳಗಾಯಿತು ಎಂದುಕೊಂಡರೇನೋ? ಛೆ, ಆಗಿನ್ನೂ ಮಟಮಟ ರಾತ್ರಿ ಹನ್ನೊಂದೂವರೆ. ‘ಬ್ಯಾಟ್ ಬರುತ್ತೆ. ಚಿಂತೆ ಬೇಡ. ಮಲಕ್ಕೋ ಹೋಗಪ್ಪ’ ಎಂದು ಹಿರಿಯ ಆಟಗಾರರು ಸಚಿನ್‌ರನ್ನು ಮರಳಿ ಕೊಠಡಿಗೆ ಕಳಿಸಿದರು. ಅಕ್ಷರಶಃ ದಬ್ಬಿದರು ಎಂದರೂ ಸರಿ.
ಇಲ್ಲ, ರಾತ್ರಿ ರಾತ್ರಿಯೇ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುವ ತರದೂದು ಇರಲಿಲ್ಲ. ಅಷ್ಟಕ್ಕೂ ಸಚಿನ್‌ರಿಗಾಗ ಕಾಡಿದ್ದು ಇನ್ಸೋಮ್ನಿಯಾ, ರಾತ್ರಿ ನಿದ್ರಾನಡಿಗೆ!
ಕೈ ಕೊಟ್ಟ ಫಾರಂ!
ಒಂದು ಪೂರ್ವಭಾವಿ ಶಿಬಿರ. ಚೆನ್ನೈನಲ್ಲಿ. ಇಂಗ್ಲೆಂಡ್ ವಿಶ್ವಕಪ್‌ಗೆ ಮುನ್ನ. ಆಸ್ಟ್ರೇಲಿಯಾದ ಖ್ಯಾತ ಆಟಗಾರ ಹಾಗೂ ಭಾರತದ ಅಂದಿನ ಕೋಚ್ ಬಾಬ್ ಸಿಂಪ್ಸನ್ ನೇತೃತ್ವ ವಹಿಸಿದ್ದರು. ಆ ಸಂದರ್ಭದಲ್ಲಿ ನೆಟ್ಸ್‌ನಲ್ಲಿ ಹರ್ಭಜನ್ ಸಿಂಗ್ ತುಂಬಾ ಹತ್ತಿರದಿಂದ ತೆಂಡೂಲ್ಕರ್‌ಗೆ ಬೌಲ್ ಮಾಡುತ್ತಿದ್ದರು. ಅದೂ ಟೆನಿಸ್ ಬಾಲ್‌ನಿಂದ. ಸಚಿನ್ ಎದುರಿಸಿದ ಐದು ಎಸೆತಗಳಲ್ಲಿ ಒಮ್ಮೆ ಬೀಟ್ ಆದರು. ಹೇ, ಸಚಿನ್‌ರ ಫಾರಂ ಕೈಕೊಟ್ಟಿದೆ ಬಿಡಿ, ಅದಕ್ಕೇ ‘ಮಿಸ್’ ಆಗಿದ್ದು ಅಂತ ಮಾತ್ರ ಅನ್ನುವಂತಿಲ್ಲ. ಅವತ್ತು ಸಚಿನ್ ಬ್ಯಾಟ್ ಆಗಿ ಬಳಸಿದ್ದು ಒಂದು ಸ್ಟಂಪ್‌ನ್ನು!
ಬದಲಿ ಕೀಪರ್ ಯಾರು?
ಪಂದ್ಯವೊಂದರಲ್ಲಿ ಹೀಗಾಗುತ್ತದೆಯೆಂದು ಊಹಿಸಿಕೊಳ್ಳಿ. ಹರ್ಭಜನ್‌ರ ಎಸೆತವೊಂದು ಪಿಚ್‌ನ ರಫ್‌ಗೆ ಬಿದ್ದು ಅಚಾನಕ್ ಎಗರುತ್ತದೆ. ಬ್ಯಾಟ್‌ನಿಂದ ತಪ್ಪಿಸಿಕೊಂಡ ಅದು ಅಷ್ಟೇ ಆಕಸ್ಮಿಕವಾಗಿ ವಿಕೆಟ್ ಕೀಪರ್ ಧೋನಿಯವರ ಮುಖಕ್ಕೆ ಅಪ್ಪಳಿಸುತ್ತದೆ. ಅವರು ಕೀಪಿಂಗ್ ಮುಂದುವರೆಸುವ ಸ್ಥಿತಿಯಲ್ಲಿಲ್ಲ. ಹಾಗಾದರೆ ಬದಲಿ ವಿಕೆಟ್ ಕೀಪರ್ ಯಾರಾದಾರು? ಯುವರಾಜ್ ಸಿಂಗ್, ರೈನಾ, ಗೌತಮ್ ಗಂಭೀರ್... ಹೇಳಿ, ಯಾರು?
ಖ್ಯಾತ ಕ್ರಿಕೆಟ್ ಅಂಕಣಕಾರ, ಭಾರತೀಯ ಕ್ರಿಕೆಟ್‌ನ ಸಂಪರ್ಕಾಧಿಕಾರಿಗಳೂ ಆಗಿದ್ದ ಅಮೃತ್ ಮಾಥುರ್‌ರ ಪ್ರಕಾರ, ಸಚಿನ್ ತೆಂಡೂಲ್ಕರ್! ಏಕೆಂದರೆ ಈವರೆಗೆ ಸಚಿನ್ ತಮ್ಮ ಜಾದೂವನ್ನು ಪ್ರದರ್ಶಿಸದೆ ಬಿಟ್ಟಿರುವುದು ಈ ಸ್ಥಾನದಲ್ಲಿ ಮಾತ್ರ. ಇಲ್ಲೂ ಒಂದು ಕೈ ನೋಡಲಿ ಅಲ್ಲವೇ?
ಬಿಟ್ಟದ್ದು ಬೈಕೋ, ರೈಲೋ?
ಎಳೆಯ ಸಚಿನ್‌ರ ಮೊತ್ತಮೊದಲ ಜಾಹೀರಾತು ಶೂಟಿಂಗ್ ಇದ್ದುದೇ ಬೈಕ್ ಮೇಲೆ, ೧೯೯೦ರಲ್ಲಿ. ಅದನ್ನು ಓಡಿಸುವ ಸನ್ನಿವೇಶವನ್ನು ಚಿತ್ರೀಕರಿಸಬೇಕಿತ್ತು. ರಸ್ತೆಯ ಮೇಲೆಯೇ ಶೂಟಿಂಗ್ ಮಾಡಬಹುದಾದುದನ್ನು ಇದ್ದಕ್ಕಿದ್ದಂತೆ ರದ್ದು ಮಾಡಿ ಹೈದರಾಬಾದ್‌ನ ಸ್ಟೇಡಿಯಂ ಒಳಗೆ ಚಿತ್ರೀಕರಿಸಲಾಯಿತು. ಅಲ್ಲೇ ರಸ್ತೆಯ ಮಾದರಿಯ ಸೃಷ್ಟಿ. ‘ಪಸಂದಾಗಿದೆ ಬೈಕು’ ಎಂದು ಸಚಿನ್ ನಮಗೆಲ್ಲ ಶಿಫಾರಸು ಮಾಡುವ ದೃಶ್ಯ. ಯಾಕಿಂಗಪ್ಪಾ ಎಂದರೆ ಸಚಿನ್‌ರಿಗಾಗ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ. ಕೊಡೋಣ ಎಂದರೂ ಅವರಿಗಿನ್ನೂ ೧೮ ವರ್ಷವಾಗಿರಲಿಲ್ಲ. ಅವತ್ತಿಗೆ ಬಿಡಲೂ ಬರುತ್ತಿರಲಿಲ್ಲ. ಅಂದರೆ ‘ನನಗಿದು ಇಷ್ಟದ ಬೈಕ್’ ಎಂದು ಸಚಿನ್ ಬಿಟ್ಟದ್ದು ರೈಲು!
ಸಚಿನ್ ಔಟ್!
ಮುಂಬೈಕರ್‌ನ ಬ್ಯಾಟಿಂಗ್ ಪ್ರತಿಭೆಯ ಬಗ್ಗೆ ಎರಡು ಮಾತಿರಲು ಸಾಧ್ಯವಿಲ್ಲ. ಕೆಲವರು ಹೇಳುವಂತೆ ಸಚಿನ್‌ರಿಗೆ ತಾವು ಎದುರಿಸುವ ಪ್ರತಿ ಚೆಂಡಿಗೆ ಎರಡು ವಿಧದ ಹೊಡೆತಗಳನ್ನು ಕ್ರಿಯೇಟ್ ಮಾಡುವ ಸಾಮರ್ಥ್ಯವಿದೆ. ಅದು ಸರಿ, ಹಾಗಿದ್ದರೂ ಸಚಿನ್ ಔಟಾಗುವುದಾದರೂ ಹೇಗೆ? ಹೀಗೆಂದು ಕುಹಕಿಗಳು ಪ್ರಶ್ನೆ ಕೇಳಿದರೆ ಆ ಕೆಲವರ ಉತ್ತರ ನೇರ ನೇರ - ಅಯ್ಯಾ, ಈ ಸಚಿನ್ ಆ ಎರಡೂ ಹೊಡೆತ ಬಿಟ್ಟು ಮೂರನೆಯ ಮಾದರಿಯನ್ನು ಪ್ರಯೋಗಿಸಲು ಪ್ರಯತ್ನಿಸುವುದರಿಂದ!!
ಮುಯ್ಯಿ!
ಹದಿನಾರು ವರ್ಷಗಳ ಹಿಂದಿನ ನೆನಪು. ಭರ್ಜರಿ ಬಿಸಿಲಿನ ಮಧ್ಯಾಹ್ನ. ವಾಂಖೆಡೆ ಸ್ಟೆಡಿಯಂನಲ್ಲಿ ನಡೆಯುತ್ತಿದ್ದದು ಇರಾನಿ ಕಪ್. ಹದಿನಾರೇ ವರ್ಷದ ಸಚಿನ್‌ಗೂ ಅದು ಚೊಚ್ಚಲ ಇರಾನಿ.
ತೆಂಡೂಲ್ಕರ್ ಬ್ಯಾಟ್ ಬೀಸುತ್ತಿದ್ದರು. ಆದರೇನು? ಅವರ ಶತಕಕ್ಕೆ ಕೇವಲ ಹನ್ನೊಂದು ರನ್ ಬೇಕು ಎನ್ನುವಾಗ ತಂಡದ ಒಂಭತ್ತನೇ ಬ್ಯಾಟ್ಸ್‌ಮನ್‌ನ್ನೂ ಔಟಾಗಿದ್ದ. ತಂಡ ಇನ್ನಿಂಗ್ಸ್ ಮುಗಿಸಲೇಬೇಕಾದ ಸ್ಥಿತಿ. ಇನ್ನೊಬ್ಬ ಆಟಗಾರ ಗುರುಶರಣ್ ಸಿಂಗ್ ಬ್ಯಾಟ್ ಮಾಡುವ ಸ್ಥಿತಿಯಲ್ಲಿರಲಿಲ್ಲ. ಅವರ ಬಲಗೈಯ ಪೂರ್ಣಭಾಗಕ್ಕೆ ಪ್ಲಾಸ್ಟರ್ ಹಾಕಲಾಗಿತ್ತು. ಮಧ್ಯದ ಬೆರಳು ಮುರಿದು ಹೋಗಿತ್ತು. ಅದೇನೆನಿಸಿತೋ ಏನೋ, ೯ನೇ ವಿಕೆಟ್ ಬಿದ್ದ ಕ್ಷಣಕ್ಕೆ ಯಾರ ಮಾತೂ ಕೇಳದೆ ಗುಶ್ ಬ್ಯಾಟ್ ಹಿಡಿದು ಅಂಕಣಕ್ಕೆ ಧಾವಿಸಿದರು. ಅಕ್ಷರಶಃ ಒಂದೇ ಕೈಯಲ್ಲಿ ಬ್ಯಾಟ್ ಹಿಡಿದು ಚೆಂಡು ಎದುರಿಸಿದರು. ೧೬ ಚೆಂಡುಗಳು, ಅಷ್ಟರಲ್ಲಿ ತೆಂಡೂಲ್ಕರ್ ಶತಕ ಬಾರಿಸಿದ್ದಾಗಿತ್ತು. ನೆನಪಿರಲಿ, ರಣಜಿ, ದುಲೀಪ್, ಇರಾನಿಗಳೆಲ್ಲದರ ಚೊಚ್ಚಲ ಪಂದ್ಯದಲ್ಲೇ ಸಚಿನ್ ಶತಕ ಬಾರಿಸಿದಂತಾಯಿತು.
ಶುದ್ಧ ದಶರಥನಂತೆ ಸಚಿನ್ ಅವತ್ತೇ ಉಸುರಿದ್ದರು, "ಈ ಅವಿಸ್ಮರಣೀಯ ಋಣವನ್ನು ನಾನೆಂದಾದರೂ ತೀರಿಸಿಯೇನು" ೧೬ ದೀರ್ಘ ವರ್ಷ. ಯಾರಿಗೆ ನೆನಪಿದ್ದೀತು? ಸಚಿನ್ ಕುಟುಂಬದೊಂದಿಗೆ ಅಮೆರಿಕದ ಪ್ರವಾಸಗೈಯುವ ತರಾತುರಿಯಲ್ಲಿದ್ದರು. ಆ ಕ್ಷಣಕ್ಕೆ ಗುಶ್ ಫೋನ್ ಬಂತು. ‘ಫಿರೋಜಾ ಕೋಟ್ಲಾದಲ್ಲಿ ನನ್ನ ಬೆನಿಫಿಟ್ ಪಂದ್ಯ ಇದೆ. ಪಾಲ್ಗೊಳ್ಳಲಾದೀತಾ?’ ಸಚಿನ್‌ರ ನೆನಪು ಹಸಿರು. ಆಹ್ವಾನಕ್ಕೆ ಎಸ್ ಎಂದರು. ಅಮೆರಿಕ ಪ್ರವಾಸ ರದ್ದು. ಸಚಿನ್‌ರಿಗೆ ಋಣ ಸಂದಾಯದ ತೃಪ್ತಿ!

ಈಗ ಹೇಳಿ, ಸಚಿನ್ ತೆಂಡೂಲ್ಕರ್‌ಗೆ ನಾವು ಪ್ರತಿದಿನ ಬೆಳಿಗ್ಗೆ ಒಂದು ನಮಸ್ಕಾರ ಸಲ್ಲಿಸಿದರೆ ತಪ್ಪಿದೆಯೇ?

-ಮಾವೆಂಸ


ಭಾನುವಾರ, ನವೆಂಬರ್ 15, 2009

ತಾಯಿತನ-ಮಗುವಿನ ಜೊತೆಗೆ ಪ್ರಶಸ್ತಿ ಬೋನಸ್!ಪಡ್ಡೆ ಹೈಕಳಿಗೆ ರೋಮಾಂಚನ ಹುಟ್ಟಿಸುವ ಸುದ್ದಿಯೊಂದು ದಕ್ಷಿಣ ಆಫ್ರಿಕಾದಿಂದ ಬಂದಿತ್ತು. ಭಾರತೀಯ ಕ್ರಿಕೆಟ್ ತಂಡದ ಕೋಚ್ ಗ್ಯಾರಿ ಕರ್ಸೈನ್ ತಂಡದ ಆಟಗಾರರಿಗೆ ಸಕ್ರಿಯ ಸೆಕ್ಸ್ ನಡೆಸಲು ಆದೇಶಿಸಿದರೆಂಬ ವಿಚಾರ ಗುಲ್ಲಾಗಿತ್ತು. ಪಂದ್ಯಗಳ ಮುನ್ನಾದಿನ ಸಕ್ರಿಯ ಸೆಕ್ಸ್ ನಡೆಸುವುದರಿಂದ ಸಾಮರ್ಥ್ಯ ಹೆಚ್ಚುತ್ತದೆ ಎಂದು ಗ್ಯಾರಿ ಕೋಚಿಂಗ್ ಕೊಟ್ಟಿದ್ದರಂತೆ! ಯಥಾಪ್ರಕಾರ ಅಲ್ಲಗಳೆಯುವ ವಿಧಿವಿಧಾನವೂ ಜರುಗಿತು. ಸ್ವದೇಶದಲ್ಲಿ ಗ್ಯಾರಿಗೆ ಕಸಿವಿಸಿಯಾಯಿತು. ಕ್ರಿಕೆಟ್‌ನೊಂದಿಗೆ ನೇರ ಸಂಬಂಧವಿಲ್ಲದ ಆದರೆ ಕ್ರೀಡಾಕ್ಷೇತ್ರದಲ್ಲಿ ಚರ್ಚೆಗೆ ಅಸ್ತ್ರವಾಗಬಲ್ಲ, ಸಕ್ರಿಯ ಸೆಕ್ಸ್‌ನ ಇನ್ನೊಂದು ಮಗ್ಗುಲಿನಂತಿರುವ ಸಂಗತಿಯೊಂದು ನಡೆದಿರುವುದಂತೂ ಖರೆ.
ಕಳೆದ ಯುಎಸ್ ಓಪನ್ ಟೆನಿಸ್ ಗ್ರಾನ್‌ಸ್ಲಾಂನಲ್ಲಿ ಆಗಷ್ಟೇ ಮರಳಿ ಬಂದ ಕಿಂ ಕ್ಲಿಸ್ಟರ‍್ಸ್ ಎಂಬಾಕೆ ದಡದಡನೆ ವಿಲಿಯಮ್ಸ್ ಸಹೋದರಿಯರನ್ನೂ ಪರಾಭವಗೊಳಿಸಿ ಸಿಂಗಲ್ಸ್ ಪ್ರಶಸ್ತಿ ಗೆದ್ದುಬಿಟ್ಟುದು ಟೆನಿಸ್ ತಜ್ಞರಲ್ಲೂ ಅಚ್ಚರಿ ಮೂಡಿತ್ತು. ೨೦೦೮ರಲ್ಲಿ ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸಿದ್ದ ಈ ಬೆಲ್ಜಿಯನ್ ತಾರೆ ಮತ್ತೆ ಮರಳಿದ್ದು ಮದುವೆಯಾಗಿ ಒಂದು ಹೆಣ್ಣು ಮಗುವಿನ ತಾಯಿಯಾದ ನಂತರ. ಈ ವಿದ್ಯಮಾನ ಈ ಹಿಂದೆಯೇ ಚರ್ಚೆಯಲ್ಲಿದ್ದ ವಿಷಯಕ್ಕೆ ಸಾಕ್ಷಿಯ ಒತ್ತು ನೀಡಿದೆ. ವಿಷಯವಿಷ್ಟೇ, ಕ್ರೀಡಾರಂಗದಲ್ಲಿ ಇರುವ ಮಹಿಳೆಯರಿಗೆ ಪ್ರೆಗ್ನೆನ್ಸಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ!
ವೈದ್ಯ ವಿಜ್ಞಾನದ ಸಮರ್ಥನೆ
ಇಂತದೊಂದು ವಾದ ಅಂತೆಕಂತೆಗಳ ಸರಕಲ್ಲ. ಮಿಚೆಗನ್ ಯೂನಿವರ್ಸಿಟಿಯ ಡಾ. ಜೇಮ್ಸ್ ಪಿವಾರ‍್ನಿಕ್ ಗರ್ಭಿಣಿ ಅಥ್ಲೇಟ್‌ಗಳ ಕುರಿತಂತೆ ಆಳ ಅಧ್ಯಯನವನ್ನು ನಡೆಸಿದ್ದಾರೆ. ಅಂತಿಮವಾಗಿ ಅವರು ಹೇಳುವುದೂ ಇದನ್ನೇ, ತಾಯಿಯಾಗುವ ಪ್ರಕ್ರಿಯೆ ಕ್ರೀಡಾಪಟುವಿಗೆ ಹಲವು ಕೋನಗಳಿಂದ ಅನುಕೂಲ ಒದಗಿಸುವುದಂತೂ ಸತ್ಯ.
ಹೇಗೆ? ಬಹುಷಃ ಎಲ್ಲರಿಗೂ ತಿಳಿದಿರುವಂತೆ, ಪ್ರಸವದವರೆಗಿನ ಗರ್ಭಿಣಿ ಅವಸ್ಥೆಯೇ ಮಹಿಳೆಯರ ಗರಿಷ್ಠ ದೈಹಿಕ ಸಾಮರ್ಥ್ಯವನ್ನು ಬಯಸುತ್ತದೆ. ಈ ವೇಳೆಯಲ್ಲಿ ತಾಯಿಯ ಪ್ರತಿಯೊಂದು ಅಂಗವೂ ಹೆಚ್ಚುವರಿ ಕೆಲಸದ ಭಾರವನ್ನು ನಿರ್ವಹಿಸಲು ಸರ್ವ ಸನ್ನದ್ಧವಾಗುತ್ತವೆ, ಗಟ್ಟಿತನ ಬೆಳೆಸಿಕೊಳ್ಳುತ್ತವೆ. ಬೆಳೆಯುತ್ತಿರುವ ಮಗುವಿನ ಪೋಷಣೆಗಾಗಿ ಮಹಿಳೆಯ ರಕ್ತದ ಪ್ರಮಾಣ ಅಚ್ಚರಿಯಾಗುವಂತೆ ಏರುತ್ತದೆ ಎಂಬುದು ವೈದ್ಯವಿಜ್ಞಾನದ ಗಮನಕ್ಕೆ ಬಂದಿವೆ. ಈ ಕಾರಣದಿಂದಾಗಿಯೇ ಆಮ್ಲಜನಕ ತಾಯಿಯ ಗರ್ಭಕ್ಕೆ ಸರಬರಾಜಾಗುವುದು ಸಾಧ್ಯವಾಗುತ್ತದೆ. ಈ ಎಲ್ಲ ಸಿದ್ಧತೆಗಳು ಒಮ್ಮೆ ಮಹಿಳೆ ಮಗುವಿಗೆ ಜನ್ಮ ಕೊಟ್ಟ ಮರುಕ್ಷಣವೇ ಯಥಾಸ್ಥಿತಿಗೆ ಬರುವುದಿಲ್ಲ. ಹಲವು ತಿಂಗಳವರೆಗೆ ಹಿಮೋಗ್ಲೋಬಿನ್‌ನಿಂದ ಸಮೃದ್ಧವಾದ ಕೆಂಪು ರಕ್ತ ಕಣಗಳು ತಾಯಿಯಲ್ಲೇ ಪವಡಿಸಿರುತ್ತವೆ. ಅಂದರೆ ಆಕೆಯ ದೇಹದಲ್ಲಿ ಮಾಂಸಖಂಡಗಳಿಗೆ ನಿರಾಯಾಸವಾಗಿ ಆಮ್ಲಜನಕ ಸರಬರಾಜಾಗುವ ಸ್ಥಿತಿ ನಿರ್ಮಾಣವಾಗಿರುತ್ತದೆ. ಫಲಿತಾಂಶವೆಂದರೆ, ಅಂತಹ ಕ್ರೀಡಾಳುವಿನ ದೈಹಿಕ ದೃಢತೆ (ಫಿಟ್‌ನೆಸ್) ಹೆಚ್ಚು ಕಾಲ ಬಾಳುತ್ತದೆ ಮತ್ತು ಆಕೆ ಹೆಚ್ಚಿನ ಅವಧಿಯ ತರಬೇತಿ ಪಡೆಯಲು ಸಾಧ್ಯವಾಗುತ್ತದೆ. ಅಂದಮೇಲೆ ತಂತ್ರಕ್ಕಿಂತ ಸಾಮರ್ಥ್ಯಕ್ಕೆ ಒಲವಿರುವ ಕ್ರೀಡೆಗಳಲ್ಲಿ ‘ತಾಯಿ’ಯರದು ಒಂದು ಕೈ ಮೇಲೆ ಎನ್ನುವಂತಾಗದೆ?
ಅಷ್ಟಕ್ಕೂ ಈ ಸತ್ಯಗಳು ಇದೀಗ ಕಂಡುಕೊಂಡಿದ್ದಲ್ಲ. ೮೮ರ ಉದಾಹರಣೆ ಮುಂದಿದೆ. ಗರ್ಭಿಣಿಯರಲ್ಲಿ ನಡೆಯುವ ದೈಹಿಕ ಪ್ರಕ್ರಿಯೆಗಳ ಬಗ್ಗೆ ಸ್ಪಷ್ಟತೆ ಮೂಡತೊಡಗಿದ್ದು ಮಾತ್ರ ಇತ್ತೀಚೆಗೆ. ಡಾ.ಜೇಮ್ಸ್ ಹೇಳುತ್ತಾರೆ, "ಮಗುವಿನ ಜನ್ಮ ಕೊಡುವ ಸಂದರ್ಭದಲ್ಲಿ ಉತ್ಪಾದನೆಯಾಗುವ ಹಾರ್ಮೋನ್ ರಿಲ್ಯಾಕ್ಸಿನ್ ಸೊಂಟದ ಮೂಳೆಗಳನ್ನು ಸಡಿಲಗೊಳಿಸುತ್ತದೆ. ಇದು ನಂತರ ಒದಗಬಹುದಾದ ಅಥ್ಲೆಟಿಕ್ ಸ್ಪಧೆಗಳ ಸಮಯದಲ್ಲಿ ಚಲನೆಯನ್ನು ಸುಧಾರಿಸುವುದು ಖಚಿತ. ಕ್ಲಿಸ್ಟರ‍್ಸ್ ಈ ಮುನ್ನ ಅಂಕಣದಲ್ಲಿ ಚಲನೆಯಲ್ಲಿ ತುಸು ಮಂದವಾಗಿದ್ದವರು ಈಗ ಚುರುಕಾಗಿರುವುದನ್ನು ನಾವೇ ಕಾಣುತ್ತಿದ್ದೇವೆ!
ಗ್ರಾಮೀಣ ಭಾಗದಲ್ಲೂ ಹೆರಿಗೆಯನ್ನು ಹೆಣ್ಣಿನ ಮರುಜನ್ಮವೆಂದು ಪರಿಗಣಿಸುವುದು ವಾಡಿಕೆ. ಬಹುಷಃ ಈ ಲೆಕ್ಕದಲ್ಲಿಯೇ ಇರಬೇಕು, ಹೆರಿಗೆ ನೋವು ತಿಂದ ಮಹಿಳೆ ಮುಂದಿನ ದಿನಗಳಲ್ಲಿ ನೋವನ್ನು ನುಂಗಿಕೊಳ್ಳುವ ಗಟ್ಟಿತನ ಬೆಳೆಸಿಕೊಳ್ಳುತ್ತಾಳೆ. ನೋವು - ನುಂಗುವ ಮಾತು ಮನಸ್ಸಿಗೆ ಸಂಬಂಧಪಟ್ಟಿದ್ದು. ಒಮ್ಮೆ ಕ್ರೀಡಾಪಟು ನೋವು ನುಂಗಿ ಆಡುವ ಪರಿಣತಿ ಪಡೆದರೆಂದರೆ ಫಿಟ್‌ನೆಸ್ ಎಂಬ ದೊಡ್ಡ ಎದುರಾಳಿಯನ್ನು ಪರಾಭವಗೊಳಿಸಿದಂತೆ ತಾನೇ?
ತಾಕತ್ತಿಗಾಗಿ ಗರ್ಭಪಾತ!
ಇಂಗ್ಲೆಂಡ್‌ನ ಕ್ರೀಡಾ ಸಚಿವಾಲಯ ಎಥಿಕ್ಸ್ ಎಂಡ್ ಆಂಟಿ ಡೋಪಿಂಗ್ ವಿಭಾಗ ಹಲವು ಬಾರಿ ಗರ್ಭಿಣಿ-ತಾಯಿ ಕ್ರೀಡಾಪಟುಗಳ ವಿಚಾರವನ್ನು ಎತ್ತಿದೆ. ಒಂದರ್ಥದಲ್ಲಿ, ‘ಪ್ರಗ್ನೆನ್ಸಿ’ ಎಂದರೆ ಕಾನೂನಿನ ಚೌಕಟ್ಟಿನಲ್ಲಿಯೇ ಪ್ರದರ್ಶನದ ಮಟ್ಟವನ್ನು ಉತ್ತೇಜಿಸುವ ಹಾರ್ಮೋನ್ ತೆಗೆದುಕೊಂಡಂತೆ. ಸಚಿವಾಲಯದ ಈ ವಾದಕ್ಕೆ ಪ್ರಸ್ತುತ ಹೆಚ್ಚಿನ ಬೆಂಬಲ ಸಿಕ್ಕಿಲ್ಲ. ಸತ್ಯ ಈ ವಾದದ ಆಚೀಚೆಯೇ ಇದೆ! ಸ್ವಾರಸ್ಯವೆಂದರೆ, ೧೯೮೮ರಷ್ಟು ಹಿಂದೆಯೇ ಈ ಕುರಿತು ಗಂಭೀರ ಚರ್ಚೆ ನಡೆದಿತ್ತು. ಆಗ ನಡೆದಿದ್ದ ಸೋರ್ಟ್ಸ್ ಆಂಟಿ ಡೋಪಿಂಗ್ ವಿಶ್ವ ಸಮಿತಿ ಪ್ರಥಮ ಸಭೆಯಲ್ಲಿಯೇ ‘ಅಬಾರ್ಷನ್ ಡೋಪಿಂಗ್’ನ್ನು ವಿಷಯಸೂಚಿಯಲ್ಲಿ ಸೇರಿಸಲಾಗಿತ್ತು. ಅದಕ್ಕೆ ಕಾರಣವೂ ಇತ್ತು. ಪೂರ್ವ ಯುರೋಪಿಯನ್ ಕ್ರೀಡಾಳುಗಳು ಪ್ರಮುಖ ಕ್ರೀಡಾಕೂಟಗಳಿಗೆ ಮುನ್ನ ಐಚ್ಛಿಕವಾಗಿ ಗರ್ಭಿಣಿಯರಾಗಿ ಗರ್ಭಪಾತ ಮಾಡಿಸಿಕೊಳ್ಳುತ್ತಿದ್ದರು ಮತ್ತು ಆ ಮೂಲಕ ತಮ್ಮ ಕ್ರೀಡಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ತಂತ್ರ ರೂಪಿಸುತ್ತಿದ್ದರು ಎಂಬ ಆರೋಪಗಳಿದ್ದವು. ಯಾಕೋ ಗೊತ್ತಿಲ್ಲ, ಈ ಸುದ್ದಿಯ ಹಿಂದೆ ಯಾವುದೇ ಸಂಶೋಧನೆಗಳು ಆಗ ನಡೆಯಲೇ ಇಲ್ಲ.
ದಡೂತಿ, ಸುಸ್ತುಗಳ ಫಲಿತಾಂಶ?
ಕ್ರೀಡಾಳುವಿಗೆ ತಾಯಿತನ ತಂದುಕೊಡುವ ತಾಕತ್ತು ನಾಣ್ಯದ ಒಂದು ಮುಖ. ಕನ್ನಡದ ಪ್ರಖ್ಯಾತ ಚಿತ್ರನಟಿ ರಕ್ಷಿತಾ ಪ್ರೇಮ್ ಗಂಡುಮಗುವಿನ ತಾಯಿಯಾದ ನಂತರ ಊದಿದ ಪರಿಯನ್ನು ಗಮನಿಸಿದವರಿಗೆ ‘ತಾಕತ್ತು ಹೆಚ್ಚುವ ಸೂತ್ರ’ ಸುಳ್ಳಿನ ಕಂತೆ ಎನ್ನಿಸಿದರೆ ಅಚ್ಚರಿಯಿಲ್ಲ. ವಾಸ್ತವವಾಗಿ ಕ್ರೀಡಾಳುವಿನ ಜೀವನದಲ್ಲಿ ತಾಯ್ತನದ ನಂತರದ ಕ್ಯಾರಿಯರ್ ದೊಡ್ಡ ಸವಾಲೂ ಆದೀತು. ಮಹಿಳೆಯರ ಸ್ಪೋರ್ಟ್ಸ್ ಎಂಡ್ ಪಿಟ್‌ನೆಸ್ ಫೌಂಡೇಷನ್ ಈ ಮಗ್ಗುಲಿನತ್ತ ಬೆಳಕು ಚೆಲ್ಲುತ್ತದೆ. ಅದರ ಸಂಶೋಧನೆಗಳ ಪ್ರಕಾರ, ತಾಯಿಯಾದಾಕೆಗೆ ಸಮಯದ ಒತ್ತಡ ಹೆಚ್ಚು. "ಮಗುವಿನ ಲಾಲನೆ ಪಾಲನೆಯ ಹಿನ್ನೆಲೆಯಲ್ಲಿ ಮೊತ್ತಮೊದಲ ಕತ್ತರಿ ಬೀಳುವುದು ಅಭ್ಯಾಸಕ್ಕೆ, ವ್ಯಾಯಾಮಕ್ಕೆ. ಮಗುವಿನ ಜೊತೆಜೊತೆಗೆ ವ್ಯಾಯಾಮ ನಡೆಸುವಂತ ಮಾದರಿಯನ್ನು ರೂಪಿಸಿದರಷ್ಟೇ ಕ್ಯಾರಿಯರ್ ಉಳಿದೀತು. ಉದಾಹರಣೆಗೆ ಮಗುವಿನ ಸಂಗಡ ಈಜು ಅಭ್ಯಾಸ ಒಳ್ಳೆಯ ತಂತ್ರ. ಪ್ರಾಕ್ಟೀಸ್ ಸೌಲಭ್ಯದ ಜೊತೆಗೆ ಚೈಲ್ಡ್ ಕೇರ್ ಇದ್ದರಂತೂ ಸ್ವಾಗತಾರ್ಹ. ಕಿಂ ಕ್ಲಿಸ್ಟರ‍್ಸ್ ಅಂಗಳದಲ್ಲಿ ಮಗಳ ಜೊತೆಗೆ ಅತ್ತಿತ್ತ ಅಡ್ಡಾಡುವುದು ಕೂಡ ಅಂತಹ ಧನಾತ್ಮಕ ಚಟುವಟಿಕೆಯ ಒಂದು ದೃಶ್ಯ" ಹೀಗೆನ್ನುತ್ತಾರೆ ಫಿಟ್‌ನೆಸ್ ಫೌಂಡೇಷನ್‌ನ ಹೌರಿಯಟ್ ಫಾಕ್ಸ್‌ವೆಲ್.
ಬಾತ್ ವಿಶ್ವವಿದ್ಯಾಲಯದ ಅಧ್ಯಯನದಿಂದ ಮಹಿಳೆಯರು ಪುರುಷರಿಗಿಂತ ಶೀಘ್ರವಾಗಿ ನೋವಿನ ಅನುಭವ ಪಡೆಯುತ್ತಾರೆ ಎಂಬುದು ಗೊತ್ತಾಗಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಪುರುಷರಿಗಿಂತ ಬೇಗ ಮಹಿಳೆಯರು ದೈಹಿಕ ಹಿನ್ನಡೆ ಅನುಭವಿಸುವ ಕಾರಣವಿದು. ನೋವಿನ ಹೆರಿಗೆಯ ಅನುಭವ ಪಡೆದ ಮಹಿಳೆಯರು ಮಾನಸಿಕ ದೃಢತೆ, ಜಾಗೃತ ಮನೋಭಾವ ಮತ್ತು ಚುರುಕುತನವನ್ನು ಪಡೆಯುತ್ತಾರೆ ಎಂದು ಮೇಲಿನ ಉಸುರಿನಲ್ಲಿಯೇ ಅಧ್ಯಯನ ಅಭಿಪ್ರಾಯಪಡುತ್ತದೆ. ಕ್ರೀಡಾ ಅಂಕಣದಲ್ಲಿ ಈ ಸ್ವಭಾವಗಳೇ ಅತೀವ ಅಗತ್ಯ ಎಂಬುದು ಗಮನಾರ್ಹ ಅಂಶ. ಕಳೆದ ಬೇಸಿಗೆಯಲ್ಲಿ ಬಾಣಂತನದ ಆಹಾರ - ವ್ಯಾಯಾಮಗಳ ಕುರಿತು ವಿಶೇಷ ಸಂಶೋಧನೆಗಳು ಬೆಳಕು ಕಂಡಿವೆ. ಪೂರಕವಾಗಿ ನಡೆದಿರುವ ‘ತೂಕ ಇಳಿಸುವ ತಂತ್ರಜ್ಞಾನ’ ಪ್ರಬಂಧದ ಸಲಹೆಗಳಲ್ಲಿ ತೂಕ ಇಳಿಸುವ ವ್ಯಾಯಾಮದ ಷರತ್ತಿಗಿಂತ ವಿವೇಚನಾಶೀಳ ಆಹಾರ ಪದ್ಧತಿ ಕ್ಷೇಮ ಎನ್ನಲಾಗಿದೆ. ಕ್ರೀಡಾಳುಗಳು ತಮ್ಮ ಬಾಣಂತನದ ವೇಳೆ ಇದನ್ನು ಅನುಸರಿಸುತ್ತಿದ್ದಾರೆ ಎಂಬುದಂತೂ ಸ್ಪಷ್ಟ.
ವಾಸ್ತವವಾಗಿ ಗೊಂದಲ ಮುಂದುವರೆದಿದೆ. ಇತ್ತೀಚಿನ ದಿನಗಳಲ್ಲಿ ಸಂಶೋಧನೆಗೆ ವಿಷಯಗಳೇ ಬಾಕಿ ಉಳಿದಿಲ್ಲ. ಬಹುಪಾಲು ಎಲ್ಲವನ್ನು ಅರ್ಥೈಸಿ ಪರಿಹಾರ ಸೂಚಿಸಲಾಗಿದೆ ಎಂಬ ಭಾವ ಮೂಡಿದೆ. ಆದರೆ ಬಾಣಂತನದ ತಾಕತ್ತಿನ ಬಗ್ಗೆ ವಿಶ್ಲೇಷಣೆಗಳಾಗಿಲ್ಲ. ಒಂದು ತಾರ್ಕಿಕ ಅಂತ್ಯ ಕಾಣಲಾಗಿಲ್ಲ. ವೈದ್ಯ ವಿಜ್ಞಾನದ ವಿದ್ಯಾರ್ಥಿಗಳಿಗೆ ಇದೊಂದು ಸವಾಲು. ಡೋಪಿಂಗ್ ಪರೀಕ್ಷೆಗೆ ದಕ್ಕದ ಸಾಮರ್ಥ್ಯವರ್ಧಕ ಕಂಡುಹಿಡಿಯಲು ಚೀನಾ, ಅಮೆರಿಕನ್ ದೇಶಗಳಲ್ಲಿ ಪ್ರತ್ಯೇಕ, ಗುಪ್ತ ಸಂಶೋಧನಾಲಯಗಳನ್ನೇ ಹೊಂದಲಾಗಿರುತ್ತದೆ. ಪ್ರಗ್ನೆನ್ಸಿ ವಿಚಾರ ಗಿಟ್ಟುತ್ತದೆಂದಾದರೆ ಒಲಂಪಿಕ್ಸ್ ಪದಕಕ್ಕಾಗಿ ಬೇಕೆಂದೇ ಗರ್ಭ ಧರಿಸಿ ಅಬಾರ್ಷನ್ ಮಾಡಿಸಿಕೊಳ್ಳುವ ಕಾಲ ಬರಬಹುದು. ಡೋಪಿಂಗ್ ಪರೀಕ್ಷೆಯ ವಿಧಿ ವಿಧಾನಗಳು ಬದಲಾಗಲೇ ಬೇಕಾಗುತ್ತದೆ. ಅನಾಹುತವೇ ಭವಿಷ್ಯವಾದೀತು.
ಧನಾತ್ಮಕವಾಗಿ ನೋಡುವವರು ಕಿಂ ಕ್ಲಿಸ್ಟರ‍್ಸ್‌ರ ಗ್ರಾನ್‌ಸ್ಲಾಂ ಪ್ರಶಸ್ತಿಯನ್ನು ನೋಡಬೇಕು. ಅವರ ಛಲ, ಅಭ್ಯಾಸ, ಆಸಕ್ತಿಗಳೇ ಸ್ಫೂರ್ತಿಯಾಗಬೇಕು. ಈಗಾಗಲೇ ಅದೇ ಬೆಲ್ಜಿಯಂನ ಇನ್ನೋರ್ವ ನಿವೃತ್ತ ಟೆನಿಸ್ ತಾರೆ, ಏಳು ಸ್ಲಾಂ ವಿಜೇತೆ, ಅಲ್ಲದೆ ಮಗುವೊಂದರ ತಾಯಿಯಾಗಿರುವ ಜಸ್ಟಿನ್ ಹೆನಿನ್ ಮರಳಿ ಸರ್ಕ್ಯೂಟ್‌ಗೆ ಬರುವ ಮಾತನಾಡಿದ್ದಾರೆ. ಇನ್ನು ಮುಂದೆ ಮದುವೆ, ತಾಯ್ತನ ಚಿತ್ರರಂಗದ ಹಿರೋಯಿನ್‌ಗಳಿಗೆ ತೊಡಕಾಗಬಹುದು. ಕ್ರೀಡಾಕಣದ ಮಹಿಳೆಯರಿಗಲ್ಲ!!
ಕೊನೆ ಕೊಸರು
ಬಾಣಂತನದ ಅವಧಿಯಲ್ಲಿರುವ ಮಹಿಳೆಯರನ್ನು ಮಾತನಾಡಿಸಿ ನೋಡಿ. ಮಗುವಿನ ಆರೈಕೆ, ಮನೆಗೆಲಸದಿಂದ ಹೈರಾಣಾಗಿ ಎಲ್ಲವೂ ಮರೆತು ಹೋಗುತ್ತದೆ. ಫೋನ್ ನಂಬರ್, ಹೆಸರು..... ಎಲ್ಲವನ್ನೂ ನೆನಪಿಸಿಕೊಳ್ಳುವುದು ಈಗ ಕಷ್ಟ ಎಂದು ಆ ಬಾಣಂತಿಯರು ಗೊಣಗುತ್ತಾರೆ. ನಾವು ಗೋಣಾಡಿಸುತ್ತೇವೆ. ಇದೀಗ ವ್ಯಕ್ತವಾಗಿರುವ ವೈದ್ಯ ವಿಜ್ಞಾನ ಅಧ್ಯಯನದ ಪ್ರಕಾರ, ಹೆರುವ ಪ್ರಕ್ರಿಯೆ ಹಾಗೂ ಎದೆ ಹಾಲು ಕುಡಿಸುವ ಕ್ರಿಯೆ ನಡೆಯುವ ಕಾಲದಲ್ಲಿ ಹಾರ್ಮೋನ್ ಚಂಚಲತೆಯ ಕಾರಣದಿಂದಾಗಿ ಅವರ ಮೆದುಳಿನ ಕೆಲ ಭಾಗದ ಕೋಶಗಳ ಗಾತ್ರ ಹೆಚ್ಚಾಗುತ್ತದಂತೆ. ಅರೆರೆ, ಹಾಗಾದರೆ ಅವರಿಗಾಗ ನೆನಪಿನ ಶಕ್ತಿ ಜಾಸ್ತಿಯಾಗಬೇಕಿತ್ತಲ್ಲವೇ?!

-ಮಾವೆಂಸ

ಬುಧವಾರ, ನವೆಂಬರ್ 11, 2009

ಜೈಪುರ ತೈಲ ಬೆಂಕಿ - ಕೋಟಿ ನಷ್ಟ, ಭವಿಷ್ಯ ಕಷ್ಟಇಂಡಿಯನ್ ಆಯಿಲ್ ಕಾರ್ಪೊರೇಷನ್ ದೇಶದ ಅತಿ ದೊಡ್ಡ ತೈಲ ಪೂರೈಕೆ ಉದ್ಯಮ. ಕೇಂದ್ರ ಸರ್ಕಾರದ ಆಧಿಪತ್ಯಕ್ಕೆ ಒಳಪಟ್ಟ ಸಂಸ್ಥೆಯಿದು. ಅದಕ್ಕೊಂದು ಅಧಿಕೃತ ವೆಬ್‌ಸೈಟ್ ಕೂಡ ಇದೆ. ಈ ದಿನಗಳಲ್ಲಿ ನೀವು ಆ ಸೈಟ್‌ನಲ್ಲಿ ಇಣುಕಿದರೆ ನಾನಾ ಮಾದರಿಯ ಪೋರ್ಟಲ್‌ಗಳು ಕಾಣಸಿಗುತ್ತವೆ. ತೀರಾ ಇತ್ತೀಚಿನ ಸುದ್ದಿಯತ್ತ ಕ್ಲಿಕ್ಕಿಸಿದರೆ ಕಾಣುತ್ತದೆ, ಐಓಸಿ ೨೮೪ ಕೋಟಿ ರೂ. ಲಾಭ ಗಳಿಸಿದ ಮಾಹಿತಿ. ಬುಡದಿಂದ ತಲೆತನಕ ಕಣ್ಣು ಹಾಯಿಸಿದರೂ ಮೊನ್ನೆ ಮೊನ್ನೆ ಜೈಪುರದಲ್ಲಿ ನಡೆದ ಪರಿಷ್ಕರಣ ಕೇಂದ್ರದ ಟ್ಯಾಂಕ್‌ಗಳು ಬೆಂಕಿಗೆ ಆಹುತಿಯಾದ, ಕನಿಷ್ಟ ೧೩ ಮಂದಿ ಜೀವ ತೆತ್ತ ಸುದ್ದಿಯ ತುಣುಕೂ ಕಾಣುವುದಿಲ್ಲ!
ಐಓಸಿ ಬೇಜವಾಬ್ದಾರಿತನಕ್ಕೆ ಇದು ಪುಟ್ಟ ಉದಾಹರಣೆ ಮಾತ್ರ. ಅಕ್ಟೋಬರ್ ೩೦ರಂದು ಜೈಪುರ ಸಮೀಪದ ಸೀತಾಪುರ ಇಂಡಸ್ಟ್ರಿಯಲ್ ಏರಿಯಾದ ಐಓಸಿ ಸಂಸ್ಕರಣ ಕೇಂದ್ರದ ೧೧ ಸಂಗ್ರಾಹಕ ಟ್ಯಾಂಕ್‌ಗಳ ಪೈಕಿ ಐದರಲ್ಲಿ ಬೆಂಕಿ ಕಾಣಿಸಿದೆ. ಪೆಟ್ರೋಲ್ ಹಾಗೂ ಸೀಮೆಎಣ್ಣೆಗಳನ್ನು ಆ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಲಾಗಿತ್ತು. ಸತತ ಏಳು ದಿನ ಈ ಬೆಂಕಿ ಉರಿದು ತೈಲ ಖಾಲಿಯಾದ ನಂತರವೇ ಬೆಂಕಿ ಆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಗಮನಿಸಬೇಕಾದುದೆಂದರೆ, ಈ ಬೆಂಕಿ ದುರಂತ ನಡೆದ ದಿನವೇ ಅತ್ತ ಐಓಸಿ ವೆಬ್‌ಸೈಟ್‌ನಲ್ಲಿ ಈ ತ್ರೈಮಾಸಿಕ ಋತುವಿನಲ್ಲಿ ಸಂಪಾದಿಸಿದ ಲಾಭದ ಸುದ್ದಿಯನ್ನು ದೊಡ್ಡದಾಗಿ ಪ್ರಕಟಿಸಲಾಗಿತ್ತು!
ಜೈಪುರ ತೈಲ ದುರಂತದಿಂದ ಆದ ನಷ್ಟದ ಬಗ್ಗೆ ಮಾಡುತ್ತಿರುವ ಲೆಕ್ಕಾಚಾರ ಗೊಂದಲಮಯವಾಗಿದೆ. ಮಾಧ್ಯಮಗಳು ೫೦೦ ಕೋಟಿ ನಷ್ಟದ ಚಿತ್ರಣವನ್ನು ನೀಡುತ್ತಿವೆ. ಆದರೆ ಐಓಸಿಯ ಯೋಜನೆ ಮತ್ತು ವ್ಯಾಪಾರ ವಿಭಾಗದ ನಿರ್ದೇಶಕ ಬಿ.ಎಮ್.ಬಸ್ಸಾಲ್ ಹೇಳುವುದೇ ಬೇರೆ, ‘ಆ ಕೇಂದ್ರದ ತೈಲ ಸಂಗ್ರಹ ಸಾಮರ್ಥ್ಯ ಒಂದು ಲಕ್ಷ ಕಿಲೋ ಲೀಟರ್‌ಗಳು. ನಮ್ಮ ಅಂದಾಜಿನ ಪ್ರಕಾರ, ಅಗ್ನಿ ಅನಾಹುತದ ವೇಳೆ ೫೦ ಸಾವಿರ ಕಿಲೋ ಲೀಟರ್ ಕಚ್ಚಾ ತೈಲ ಸಂಗ್ರಹದಲ್ಲಿತ್ತು. ಸುಮಾರು ೧೪೦ರಿಂದ ೧೫೦ ಕೋಟಿ ರೂ. ಮೌಲ್ಯದ ಸಂಗ್ರಹ ಬೆಂಕಿಗೆ ಆಹುತಿಯಾದಂತಾಗಿದೆ. ಅಷ್ಟಕ್ಕೂ ಈ ಸಂಸ್ಕರಣ ಕೇಂದ್ರಕ್ಕೆ ಐಸಿಐಸಿಐನ ವಿಮಾ ಯೋಜನೆ ಅನ್ವಯವಾಗುತ್ತವೆ. ಹಾಗಾಗಿ ಐಓಸಿಯ ಅರ್ಥವ್ಯವಸ್ಥೆ ಧಕ್ಕೆಯಾಗುವುದಿಲ್ಲ.’
ಐಓಸಿಯ ಇತಿಹಾಸವನ್ನು ಗಮನಿಸಿದರೆ, ಈ ತೆರನ ನಿರ್ಲಕ್ಷ್ಯ ಎದ್ದುಕಾಣುತ್ತದೆ. ಅವರ ಅಗ್ನಿ ದುರಂತಗಳ ಸಾಲಿಗೆ ಇದು ಇನ್ನೊಂದು ಸೇರ್ಪಡೆಯಷ್ಟೇ. ೨೦೦೪ರ ಜೂನ್ ೦೩ರಂದು ಕೊಲ್ಕತ್ತಾದ ರಾಜಬಂಧು ತೈಲ ಕೇಂದ್ರದಲ್ಲಿ ೪,೧೮೯ ಕಿಲೋ ಲೀಟರ್ ತೈಲ ಬೆಂಕಿಗೆ ಭಸ್ಮವಾಗಿತ್ತು. ೨೦೦೧ರಲ್ಲಿ ಕಾನ್ಪುರದಲ್ಲಿ ಪೈಪ್‌ಲೈನ್‌ಗೆ ಹೊತ್ತಿಕೊಂಡ ಬೆಂಕಿಗೆ ಅಪಾರ ಪ್ರಮಾಣದ ಪೆಟ್ರೋಲಿಯಂ ನಷ್ಟವಾಗಿತ್ತು. ಹೀಗೆ.... ನೀಡಬಹುದಾದ ದೃಷ್ಟಾಂತಗಳಲ್ಲೆಲ್ಲ ಕಾಣುವುದು ಐಓಸಿಯ ಅಸಡ್ಡಾಳತನ. ಜೈಪುರದ ಪ್ರಕರಣದಲ್ಲೂ ನಿರ್ಲಕ್ಷ್ಯದ ಆರೋಪವೇ ಎದ್ದು ಕಾಣುತ್ತದೆ. ತನಿಖೆಯ ಶಾಸ್ತ್ರಕ್ಕೆ ಈಗಾಗಲೇ ಆದೇಶವಾಗಿದೆ. ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳುವವರಾರು?
ಸೆಪ್ಟೆಂಬರ್ ೩೦ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಲೆಕ್ಕಾಚಾರದಲ್ಲಿ ಐಓಸಿ ತೆರಿಗೆಯನ್ನು ಕಳೆದು ನಿವ್ವಳ ೨೮೪ ಕೋಟಿ ರೂ. ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೭೦೪೭ ಕೋಟಿ ರೂ. ನಷ್ಟ ಉಂಟಾಗಿತ್ತು. ಜಾಗತಿಕ ತೈಲ ಉದ್ಯಮಗಳ ಏರಿಳಿತ ಈ ಲಾಭನಷ್ಟದಲ್ಲಿ ಪ್ರತಿಫಲಿಸಿದೆ. ಐಓಸಿ ಒಟ್ಟು ಎಂಟು ರಿಫೈನರಿಗಳನ್ನು ಹೊಂದಿದ್ದು ವರದಿ ಸಾಲಿನಲ್ಲಿ ೧೨,೪೧೨ ಮೆಟ್ರಿಕ್ ಟನ್ ತೈಲವನ್ನು ಮಾರಾಟಮಾಡಿದೆ. ವಾಸ್ತವವಾಗಿ ಇದು ಅವರ ಸಾಮರ್ಥ್ಯದ ಶೇ.೯೯.೯ರ ಬಳಕೆಯಾದಂತೆ ಎನ್ನಲಾಗಿದೆ. ಪೈಪ್‌ಲೈನ್‌ಗಳ ತಾಕತ್ತನ್ನು ಶೇ.೮೩ರಷ್ಟು ಉಪಯೋಗಿಸಿಕೊಳ್ಳಲಾಗಿದೆ ಎಂದು ಅದು ಹೇಳಿಕೊಳ್ಳುತ್ತದೆ. ಜಾಗತಿಕ ತೈಲ ಬೆಲೆ ಕಡಿಮೆಯಾದುದರಿಂದ ಈ ಸರ್ತಿ ಲಾಭ ಸಿಕ್ಕಿದೆ. ಕಳೆದ ವರ್ಷ ೧೫,೫೩೬ ಮೆಟ್ರಿಕ್ ಟನ್ ತೈಲ ಮಾರಾಟ ಮಾಡಿದ್ದರೂ ನಷ್ಟವೇ ಆಗಿತ್ತು.
ಲಾಭ, ನಷ್ಟದ ಬಾಬತ್ತನ್ನು ತೈಲ ಬೆಲೆಯೊಂದಿಗೆ ಸಮೀಕರಿಸುವುದೇ ಅರ್ಥಹೀನ. ಇಂದು ಜೈಪುರ ತೈಲಕ್ಕೆ ಬಿದ್ದ ಬೆಂಕಿಯ ಹೊಗೆಯ ಕಪ್ಪು ಕಣಗಳು ಎಂಟರಿಂದ ೧೦ ಕಿ.ಮೀ. ಸುತ್ತಳತೆಯ ಪ್ರದೇಶವನ್ನು ಆವರಿಸಿದೆ. ಪಿಂಕ್ ಸಿಟಿ ಎಂಬ ಖ್ಯಾತಿಯ ಜೈಪುರವನ್ನು ಇನ್ನು ಬ್ಲಾಕ್ ಸಿಟಿ ಎನ್ನಬೇಕಾದೀತು ಎಂಬ ವಿಶ್ಲೇಷಣೆಯೂ ವ್ಯಕ್ತವಾಗಿದೆ. ಡಹ್ಲಾಸ್, ಕೋಸೂರ್, ಚಿತ್ರವಾಲಾ, ವಿಡಾನಿ, ರಾಮಚಂದ್ರಪುರ, ಟಿಬಾ.... ದಂತ ಹಳ್ಳಿಗಳ ಭೂಮಿಯ ಮೇಲೆ ಕಪ್ಪು ಬೂದಿ ಕಣಗಳು ಸಂಗ್ರಹವಾಗಿವೆ. ಇಲ್ಲಿನ ಭೂಮಿಯ ಫಲವತ್ತತೆ ಕಡಿಮೆಯಾಗುತ್ತದೆ ಎಂಬುದನ್ನು ತಜ್ಞರೇ ಖಚಿತಪಡಿಸಿದ್ದಾರೆ. ಜೈಪುರದ ಕೃಷಿ ಭೂಮಿ ತರಕಾರಿ ಹಾಗೂ ಆಹಾರಧಾನ್ಯ ಉತ್ಪಾದನೆಗೆ ಖ್ಯಾತ. ಆದರೆ ಈ ಋತುವಿನ ಬೆಳೆಯೇ ಹಾನಿಗೊಳಗಾಗಿದೆ. ಈ ನಷ್ಟಗಳ ಅಂದಾಜನ್ನು ಈವರೆಗೆ ಸರ್ಕಾರ ಪ್ರಕಟಿಸಿಲ್ಲ.
ಒಂದು ಕೋಟಿ ಲೀಟರ್ ಪೆಟ್ರೋಲ್ ಸುಟ್ಟಿರುವುದರಿಂದ ವಾತಾವರಣ ಕಲುಷಿತಗೊಳ್ಳುವುದು ನಿಸ್ಸಂಶಯ. ಅಲ್ಲಿ ಆಮ್ಲಜನಕದ ಕೊರತೆಯೂ ಕಾಣಿಸಿರುವುದರಿಂದ ವಿಷಕಾರಿ ಅನಿಲಗಳು ಹೈಡ್ರೋಕಾರ್ಬನ್ ಆಗಲಾರದೆ ನೇರವಾಗಿ ಕಾರ್ಬನ್ ಹೈಡ್ರಾಕ್ಸೈಡ್ ಆಗಿ ಮಾರ್ಪಡುತ್ತದೆ. ಹೀಗಾಗಿ ನಿಷೇಧಿತ ಪದಾರ್ಥಗಳ ಮಟ್ಟ (ಆರ್‌ಎಸ್‌ಪಿಎಂ) ಸಾಮಾನ್ಯಕ್ಕಿಂತ ಒಂದೂವರೆ ಪಟ್ಟು ವೃದ್ಧಿಸುತ್ತದೆ. ಮಾನವನ ಆರೋಗ್ಯಕ್ಕೆ ಇದು ತೀರ್ವ ಹಾನಿಕಾರಕ. ಶುಷ್ಕ ಚರ್ಮ, ಅಸ್ತಮಾ ಮುಂತಾದ ಸಮಸ್ಯೆಗೆ ನಾಂದಿಯಾಗುತ್ತದೆ. ಸಲ್ಫರ್ ಹಾಗೂ ನೈಟ್ರಿಕ್ ಆಸಿಡ್ ವಾತಾವರಣವನ್ನು ಸೇರಿರುವುದರಿಂದ ಆಸಿಡ್ ಮಳೆ ಧಾಳಿಯಿಡುತ್ತದೆ. ಈಗಲೇ ರೈತರು ಬೆಳಗಿನ ಮಂಜಿನಲ್ಲಿ ಆಮ್ಲೀಯ ಅಂಶವನ್ನು ಗುರ್ತಿಸುತ್ತಿದ್ದಾರೆ. ಇಳುವರಿ ಕುಸಿತದ ಸಂಭಾವ್ಯತೆ ಹೆಚ್ಚಿದೆ.
ಈ ಹಿನ್ನೆಲೆಯಲ್ಲಿಯೇ ನಷ್ಟದ ಅಂದಾಜು ಸಂಕೀರ್ಣ ಎನ್ನಬೇಕು. ಜನರ ಆರೋಗ್ಯದ ಖರ್ಚನ್ನು ಐಓಸಿ ಭರಿಸುವುದಿಲ್ಲ. ರೈತನ ಬೆಳೆ ನಷ್ಟಕ್ಕೆ ಅದು ಜವಾಬ್ದಾರನಾಗುವುದಿಲ್ಲ. ತನ್ನ ಪೆಟ್ರೋಲ್ ಸುಟ್ಟಿದ್ದಕ್ಕೆ ವಿಮಾ ರಕ್ಷಣೆ ಪಡೆದು ಆರ್ಥಿಕವಾಗಿ ತನಗೇನಾಗಿಲ್ಲ ಎಂದು ಘೋಷಿಸುತ್ತದೆ. ಇಲ್ಲಿಯೇ ಅಡಗಿದೆ ತೈಲ ದುರಂತದ ವ್ಯಂಗ್ಯ!
-ಮಾವೆಂಸಮಂಗಳವಾರ, ನವೆಂಬರ್ 3, 2009

ಇದು ಭಾರತ...!


ಫೋಟೋನೇ ಎಲ್ಲವನ್ನು ಹೇಳುವಾಗ ನಾನೇನು ಹೇಳುವುದು? ಇಷ್ಟನ್ನು ಹೇಳಬಹುದು, ಇದು ಸಾಗರದ ಕೆಎಸ್‌ಆರ್‌ಟಿಸಿ ಬಸ್ ಡಿಪೋದಲ್ಲಿ ಕಂಡ ದೃಶ್ಯ. ಇಲ್ಲಿಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ!

ಶುಕ್ರವಾರ, ಅಕ್ಟೋಬರ್ 30, 2009

ಅನಪೇಕ್ಷಿತ ಕರೆ ತಡೆಗೆ ‘ಡು ನಾಟ್ ಕಾಲ್’
ನಿಜ, ಟ್ರಾಯ್ ಬರುವ ದಿನಗಳಲ್ಲಿ ‘ಡು ಕಾಲ್’ ಎಂಬ ನೂತನ ಪದ್ಧತಿಯನ್ನು ಜಾರಿಗೆ ತರಲಿಕ್ಕಿದೆ. ಮೊಬೈಲ್‌ನಲ್ಲಿ ನಮಗೆ ಬೇಕಾದ ಜಾಹೀರಾತು ಕರೆಯನ್ನು ನಮಗೆ ಅನುಕೂಲವಾದ ಸಮಯದಲ್ಲಿ ಆಲಿಸಲು ಅವಕಾಶವಾಗುತ್ತದೆ. ಆದರೆ ಆ ನಿಯಮ ಬರಲು ತುಸು ಸಮಯ ಬೇಕು. ಟ್ರಾಯ್ ಕಚ್ಚಾ ನಿಯಮವನ್ನು ರೂಪಿಸಿ ಸಂಬಂಧಿಸಿದ ಎಲ್ಲರ ಅಭಿಪ್ರಾಯ ಕೇಳಬೇಕು, ಮೊಬೈಲ್ ಸೇವಾದಾತರು - ಜಾಹಿರಾತುದಾರರು ಮತ್ತು ಗ್ರಾಹಕರಾರಿಗೂ ಅನ್ಯಾಯವಾಗದ ವ್ಯವಸ್ಥೆಯನ್ನು ರೂಪಿಸಬೇಕು. ಆವರೆಗೆ ಮೊಬೈಲ್ ಚಂದಾದಾರನಿಗೆ ಕಿರಿಕಿರಿ ಕರೆಗಳಿಂದ ಮುಕ್ತಿ ಇಲ್ಲವೇ? ಆಮಟ್ಟಿಗೆ ಪರಿಣಾಮಕಾರಿಯಾದ ಟ್ರಾಯ್ ನಿಯಮ ಈಗಾಗಲೇ ಜಾರಿಯಲ್ಲಿದೆ. ಕೈಹಿಡಿದು ನಡೆಸುವ ಮಾದರಿಯಲ್ಲಿ ವಿವರ ಇಲ್ಲಿವೆ.
ಬರ್ರ್ ಎಂದು ಬೈಕ್‌ನಲ್ಲಿ ಹೋಗುತ್ತಿರುವಿರಿ. ಜೇಬಿನಲ್ಲಿರುವ ಮೊಬೈಲ್ ರಿಂಗಾಗತೊಡಗಿದೆ. ಏನು ಅಜೆಂಟೋ ಎಂದು ರಸ್ತೆ ಬದಿಗೆ ಬಂದು ಮೊಬೈಲ್ ಎತ್ತಿದರೆ ‘ನಿಮಗೆ ಈ ಹಾಡು ಬೇಕಿದ್ದರೆ ಸ್ಟಾರ್ ಒತ್ತಿ.....’ ಎಂಬ ಕಾಲರ್‌ಟ್ಯೂನ್ ಜಾಹೀರಾತು! ಮಹತ್ವದ ಸಭೆ ನಡೆಯುತ್ತಿದೆ. ಗಂಭೀರ ಚರ್ಚೆಯಲ್ಲಿ ಭಾಗವಹಿಸಿದ್ದೀರಿ. ಮೊಬೈಲ್‌ನ ವೈಬ್ರೇಟರ್ ಮೋಡ್ ನಿಮ್ಮನ್ನು ಎಚ್ಚರಿಸುತ್ತಿದೆ. ಕರೆ ಬಂತು, ಕರೆಬಂತು... ನಂಬರ್ ನೋಡಿದರೆ ಅಪರಿಚಿತ. ವಿಷಯ ಏನಿದ್ದೀತೋ ಎಂದು ಕರೆ ಸ್ವೀಕರಿಸಿದರೆ " ನಿಮಗೆ ನಮ್ಮ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಬೇಕೆ?...." ಎಂಬ ನುಲಿಯುವ ಯುವತಿಯ ಬಲವಂತದ ಒತ್ತಾಯ!!
ಈ ಸಂಬಂಧ ಕಿರಿಕಿರಿಗೊಳಗಾದ ಮೊಬೈಲ್ ಗ್ರಾಹಕರ ದೂರು ಇಂದು ನಿನ್ನೆಯದಲ್ಲ. ಆದರೆ ಅದರ ತಡೆಗೆ ಯಾವುದೇ ನಿರ್ದಿಷ್ಟ ಕಾನೂನುಗಳಿರಲಿಲ್ಲ. ಈ ಮುನ್ನ ಒಳಬರುವ ಕರೆಗಳಿಗೂ ವೆಚ್ಚ ವಿಧಿಸುತ್ತಿದ್ದ ಕಾಲದಲ್ಲಂತೂ ಈ ಅಪರಿಚಿತ ಕರೆಗಳು ಭಯವನ್ನೇ ಹುಟ್ಟಿಸುತ್ತಿದ್ದವು. ಪ್ರಸ್ತುತ ಕೇಂದ್ರ ಸರ್ಕಾರ ಕೂಡ ತನ್ನ ಜವಾಬ್ದಾರಿಗಳನ್ನು ಟ್ರಾಯ್‌ಗೆ ವಹಿಸಿದೆ. ಟ್ರಾಯ್ ಕಾನೂನು ಬಂದು ಹತ್ತು ವರ್ಷಗಳು ಸಂದಿವೆ. ಬಹುಪಾಲು ಗ್ರಾಹಕ ಪರ ವಹಿಸಿರುವ ಟ್ರಾಯ್ ಕಿರಿಕಿರಿ ಜಾಹೀರಾತು ಕರೆಯ ವಿಚಾರದಲ್ಲೂ ಪರಿಹಾರಕ್ಕೆ ಹೆಜ್ಜೆ ಇರಿಸಿದೆ. ಸ್ವತಃ ಟೆಲಿಕಾಂ ರೆಗ್ಯುಲೇಟರಿ ಆಥಾರಿಟಿ ಆಫ್ ಇಂಡಿಯಾ (ಟ್ರಾಯ್) ಪೋಷಿಸಿಕೊಂಡಂತೆ ಅನಗತ್ಯ ಜಾಹಿರಾತು ಕರೆ, ಸಂದೇಶಗಳನ್ನು ನಿರ್ಬಂಧಿಸುವ ಅದರ ಮಹಾತ್ವಾಕಾಂಕ್ಷೆಯ ಯೋಜನೆಯೇ ಈ ‘ಡು ನಾಟ್ ಕಾಲ್’ ನೊಂದಣಿ. (ಎನ್‌ಡಿಎನ್‌ಸಿ)
ತಡೆಗೆ ಹಲವು ಒತ್ತಾಯ
ಒಂದು ಚೂರು ಫ್ಲಾಶ್ ಬ್ಯಾಕ್‌ಗೆ ಹೋಗಿಬರುವುದು ರುಚಿಕರ. ೨೦೦೫ರಷ್ಟು ಹಿಂದೆಯೇ ಸುಪ್ರೀಂಕೋರ್ಟ್‌ನ ಮುಂದೆ ಅನಪೇಕ್ಷಿತ ಜಾಹಿರಾತು ಕರೆ, ಎಸ್‌ಎಂಎಸ್ ಸಂಬಂಧವಾಗಿ ಒಂದು ಸಾರ್ವಜನಿಕ ಹಿತಾಸಕ್ತಿಯ ಅರ್ಜಿ (wp 35/2005) ದಾಖಲಾಗಿತ್ತು. ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಎಂಬ ಸ್ವಯಂಸೇವಾ ಸಂಸ್ಥೆಯಿಂದ ‘ಮೊಬೈಲ್ ಸೇವಾದಾತರು ತಾವು ನೀಡಿದ ವೈಯುಕ್ತಿಕ ದಾಖಲೆಗಳನ್ನು ಜಾಹಿರಾತು - ವೃತ್ತಿಪರ ಉದ್ದೇಶಗಳಿಗೆ ಬಳಸುತ್ತಿವೆ. ಭಾರತೀಯ ಟೆಲಿಗ್ರಾಫ್ ಕಾಯ್ದೆ ೧೯೫೧ರ ಸೆಕ್ಷನ್ ೪೨೭ ಮತ್ತು ೫೧೩ರ ಪ್ರಕಾರ ಇದು ಉಲ್ಲಂಘನೆ’ ಎಂದು ಕೇಂದ್ರ ಸರ್ಕಾರದ ವಿರುದ್ಧ ಆ ಅರ್ಜಿಯಲ್ಲಿ ವಾದ ಮಾಡಲಾಗಿತ್ತು. ಆ ದಿನಗಳಲ್ಲಿ ಇಂತಹ ಕರೆಗಳನ್ನು ಬಲುಮುಖ್ಯವಾಗಿ ಮಾಡುತ್ತಿದ್ದುದು ಬ್ಯಾಂಕ್, ಫೈನಾನ್ಸ್‌ನಂತ ಹಣಕಾಸು ವ್ಯವಹಾರದ ಸಂಸ್ಥೆಗಳು. ಹಾಗಾಗಿ ಕೋರ್ಟ್ ಆರ್‌ಬಿಐಗೆ ಸೂಚನೆ ನೀಡಿ, ಇನ್ನು ಮುಂದೆ ಈ ಅನಗತ್ಯ ಕರೆ ತಡೆಯಲೇಬೇಕು ಎಂದು ಆದೇಶಿಸಿತು. ಪಿಎಲ್‌ಐ ಅರ್ಜಿಗೆ ಗೆಲುವು ಸಿಕ್ಕಿತ್ತು!
ಚುರುಕಾಗಿ ಕೆಲಸ ಮಾಡಿದ ಆರ್‌ಬಿಐ ಏಪ್ರಿಲ್ ವೇಳೆಗಾಗಲೇ ತನ್ನ ವರದಿಯನ್ನು ಸಲ್ಲಿಸಿಯಾಗಿತ್ತು. ಅದರ ಪ್ರಕಾರ, ಒಮ್ಮಿಂದೊಮ್ಮೆಗೆ ಈ ಕರೆ ಮಾದರಿಯನ್ನೇ ನಿಷೇಧಿಸುವಂತಾಗಬಾರದು, ವೃತ್ತಿಪರ ಉದ್ದೇಶಗಳಿಗೆ ಇದನ್ನು ಬಳಸುವಂತ ಅತ್ಯಪರೂಪದ ಸಂಪರ್ಕ ಮಾಧ್ಯಮವನ್ನು ಬಿಟ್ಟುಕೊಡುವುದು ಸರಿಯಲ್ಲ. ಪ್ರಚಾರಕ್ಕೆ ಹಾಗೂ ಮಾಹಿತಿಗೆ ಇದು ಅತ್ಯಗತ್ಯ’ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿಯೇ ಆರ್‌ಬಿಐ ೨೦೦೫ರ ನವೆಂಬರ್‌ನಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿತು. ಅದರ ಪ್ರಕಾರ ಇನ್ನು ಮುಂದೆ ತಮಗೆ ಕಿರುಕುಳ ಕೊಡದಿರಿ ಎಂದು ಸೂಚಿಸಿದ ಗ್ರಾಹಕರಿಗೆ ಯಾವುದೇ ಬ್ಯಾಂಕ್ ಕರೆ ಮಾಡುವಂತಿರಲಿಲ್ಲ. ಆದರೆ ಇದು ಅಂತಹ ಪರಿಣಾಮವನ್ನೇನೂ ಬೀರಲಿಲ್ಲ. ಆರ್‌ಬಿಐ ಬ್ಯಾಂಕ್‌ಗಳ ಹಿತ ಕಾಪಾಡಿತು!
೨೦೦೬ರ ಮೇನಲ್ಲಿ ಒರಿಸ್ಸಾದ ಬಿ.ಜೆ.ಪಾಂಡಾ ರಾಜ್ಯಸಭೆಯಲ್ಲಿ ಖಾಸಗಿ ಮಸೂದೆಯನ್ನು ಮಂಡಿಸಿದ್ದುಂಟು. ಅದು ‘ಪ್ರಿವೆನ್ಶನ್ ಆಫ್ ಅನ್‌ಸಾಲಿಸಿಟೆಡ್ ಟೆಲಿಫೋನಿಕ್ ಆಕ್ಟ್ ಎಂಡ್ ಪ್ರೊಟೆಕ್ಷನ್ ಆಫ್ ಪ್ರೈವೆಸಿ’ ಎಂಬ ಹೆಸರಿನಲ್ಲಿ ಮಂಡನೆಯಾಗಿತ್ತು. ಈ ಮಸೂದೆ ಅನಪೇಕ್ಷಿತವಾದ ವ್ಯಾಪಾರಿ ಜಾಹಿರಾತನ್ನು ನಿಷೇಧಿಸಲು ಸೂಚಿಸಿತ್ತು. ಉಲ್ಲಂಘನೆಗೆ ಎರಡು ವರ್ಷದ ಜೈಲು ಶಿಕ್ಷೆಯಿಂದ ಗರಿಷ್ಟ ನಾಲ್ಕು ವರ್ಷದವರೆಗೆ ಎಂದು ನಿಗದಿಪಡಿಸಲಾಗಿತ್ತು. ಎರಡು ಲಕ್ಷದವರೆಗೆ ದಂಡ ವಿಧಿಸಲೂ ಆ ಬಿಲ್‌ನಲ್ಲಿ ಪ್ರಾವಿಧಾನವನ್ನು ಇರಿಸಲಾಗಿತ್ತು. ಇತರ ರಾಜಕಾರಣಿಗಳ ಕೃಪಾ ಪೋಷಣೆಯಿಲ್ಲದ ಕಾಯ್ದೆ ಬರಕಾತ್ತಾಗಲಿಲ್ಲ.
ಅಷ್ಟಕ್ಕೆ ಮುಗಿಯಲೂ ಇಲ್ಲ. ಭಾರತಿ ಟೆಲಿ ವೆಂಚರ್ ವಿರುದ್ಧ ಶರ್ಮ ಎಂಬಾತ ದೆಹಲಿಯ ರಾಜ್ಯ ಗ್ರಾಹಕ ನ್ಯಾಯಾಲಯದಲ್ಲಿ ಅನಪೇಕ್ಷಿತ ಕರೆಯ ಕಿರಿಕಿರಿಯನ್ನು ವಿರೋಧಿಸಿ ದೂರು ಸಲ್ಲಿಸಿದ. ಈ ನ್ಯಾಯಾಲಯ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿತು. ಅದು ತನ್ನ ತೀರ್ಪಿನಲ್ಲಿ, ಈ ಕುರಿತು ಅಗತ್ಯ ನಿಯಮ ರೂಪಿಸಲು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಟ್ರಾಯ್‌ಗೆ ಆದೇಶ ನೀಡಿತು. ಇದರ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಮೇಲ್ಮನವಿ ಹೋಗಲಾಗಿತ್ತಾದರೂ ಅದೂ ಮೇಲಿನ ಆದೇಶವನ್ನೇ ಎತ್ತಿಹಿಡಿಯಿತು. ಒಟ್ಟಾರೆಯಾಗಿ ಟ್ರಾಯ್‌ಗೆ ಈ ಸಂಬಂಧ ವ್ಯವಸ್ಥೆಯೊಂದನ್ನು ಸ್ಥಾಪಿಸಲು ಸಮಯ ಪಕ್ವವಾಗಿತ್ತು. ಹಾಗೆಂದು ಈ ಸೌಲಭ್ಯ ನೀಡಿದ ದೇಶಗಳಲ್ಲಿ ಭಾರತ ಮೊದಲನೆಯದೇನೂ ಆಗಿರಲಿಲ್ಲ. ಅಮೆರಿಕ, ಕೆನಡಾ, ಇಂಗ್ಲೆಂಡ್ ಹಾಗೂ ಐರ್ಲೆಂಡ್‌ಗಳಲ್ಲಿ ಹಿಂದಿನಿಂದಲೇ ಡು ನಾಟ್ ಕಾಲ್ ನೊಂದಣಿ ವ್ಯವಸ್ಥೆ ಜಾರಿಗೆ ಬಂದಿತ್ತು. ಹಾಂಗ್‌ಕಾಂಗ್‌ನಲ್ಲಿ ಯಾವುದೇ ಟೆಲಿ ಮಾರ್ಕೆಟಿಂಗ್ ಕಂಪನಿ ಮೊಬೈಲ್ ಗ್ರಾಹಕನ ಒಪ್ಪಿಗೆ ಪಡೆದ ನಂತರವಷ್ಟೇ ಟೆಲಿ ಮಾರ್ಕೆಟಿಂಗ್ ಮಾಡಬಹುದು ಎಂಬ ನಿಯಮವಿತ್ತು.
ಅಳೆದೂ ಸುರಿದು ೨೦೦೮ರ ಮಾರ್ಚ್‌ನಲ್ಲಿ ಟ್ರಾಯ್ ಜಾರಿಗೆ ತಂದ ಎನ್‌ಡಿಎನ್‌ಸಿ ಪದ್ಧತಿಯಲ್ಲಿ ಹಲವು ಕ್ಲಿಷ್ಟತೆಗಳಿತ್ತು. ಪ್ರತಿಯೊಂದು ಮೊಬೈಲ್ ಸೇವಾದಾರರು ವಿಭಿನ್ನ ವಿಭಿನ್ನ ಕರೆ ಸಂಖ್ಯೆ, ಎಸ್‌ಎಂಎಸ್ ಮಾದರಿಯಿಂದ ಈ ಡು ನಾಟ್ ಕಾಲ್ ನೊಂದಣಿಯನ್ನು ತಮ್ಮ ತಮ್ಮ ಮೊಬೈಲ್ ಕಂಪನಿಗಳಲ್ಲಿ ಮಾಡಿಕೊಳ್ಳಬೇಕಿತ್ತು. ಬಹುಪಾಲು ಗ್ರಾಹಕರಿಗೆ ಇದು ಗೊಂದಲವಾಗಿ ಪರಿಣಮಿಸುತ್ತಿದ್ದ ಪರಿಣಾಮವಾಗಿ ಅಗತ್ಯವಿದ್ದರೂ ಎನ್‌ಡಿಎನ್‌ಸಿ ನೊಂದಣಿ ಮಾಡಿಸಿಕೊಳ್ಳದೆ ಸುಮ್ಮನುಳಿಯುತ್ತಿದ್ದರು. ಇದನ್ನು ಮನಗಂಡ ಟ್ರಾಯ್ ಈ ವ್ಯವಸ್ಥೆಯನ್ನು ಸರಳೀಕೃತಗೊಳಿಸಿದೆ. ಈಗ ಡು ನಾಟ್ ಕಾಲ್ ನೊಂದಣಿ ಎಲ್ಲ ಕಂಪನಿಯ ಮೊಬೈಲ್ ಗ್ರಾಹಕರಿಗೂ, ಸ್ಥಿರ ದೂರವಾಣಿ ಚಂದಾದಾರರಿಗೂ ಏಕ ಪ್ರಕಾರ.
ನೀವೂ ನೊಂದಾಯಿಸಿ
ಹೇಗೆ? ಪ್ರಥಮ ಹೆಜ್ಜೆ ಈ ಮುಂದಿನಂತೆ. ೧೯೦೯ಕ್ಕೆ ಕರೆಮಾಡಿ. ಇದು ಸಂಪೂರ್ಣ ಉಚಿತ ಕರೆ. ಇಲ್ಲಿ ಸೂಚನೆಗಳನ್ನು ಪಾಲಿಸುತ್ತ ಬಂದರೆ ಎನ್‌ಡಿಎನ್‌ಸಿಯಲ್ಲಿ ನೊಂದಣಿಯಾಗುತ್ತದೆ. ಚಂದಾದಾರರು ಎಸ್‌ಎಂಎಸ್ ಮೂಲಕವೂ ನೊಂದಾಯಿಸಿಕೊಳ್ಳಬಹುದು. ಕ್ಯಾಪಿಟಲ್ ಅಕ್ಷರಗಳಲ್ಲಿ STARTಎಂದು ಟೈಪ್ ಮಾಡಿ ಒಂದು ಸ್ಪೇಸ್ ಕೊಟ್ಟುDNDಎಂದು ಟೈಪ್ ಮಾಡಬೇಕು. (ಮಾದರಿ - START DND) ಇದನ್ನು ಕೂಡ ೧೯೦೯ಗೆ ಕಳುಹಿಸಬೇಕು. ಈ ಸಂಖ್ಯೆಗೆ ಮಾಡುವ ಎಸ್‌ಎಂಎಸ್ ಸಹ ಉಚಿತ. ಇಂದು ಹೊಸದಾಗಿ ಚಂದಾದಾರರಾಗುವವರಿಗೆ ಅರ್ಜಿ ಫಾರಂನಲ್ಲಿಯೇ ಎನ್‌ಡಿಎನ್‌ಸಿಯಲ್ಲಿ ನೊಂದಾಯಿಸಿಕೊಳ್ಳುವ ಆಯ್ಕೆಯನ್ನು ಕೊಡಲಾಗುತ್ತಿದೆ.
ಮುಂದಿನ ಹೆಜ್ಜೆಯಲ್ಲಿ ನಿಮ್ಮ ಎಸ್‌ಎಂಎಸ್ ಯಾ ಕರೆ ಮೂಲಕ ನೊಂದಾವಣೆ ಮಾಡಿಕೊಂಡ ನಂತರ ಸೇವಾದಾರರು ನಿಮಗೊಂದು ‘ದಾಖಲಾತಿ ಸಂಖ್ಯೆ’ಯನ್ನು ನೀಡುತ್ತಾರೆ. ಇದನ್ನು ಕಾಪಿಟ್ಟುಕೊಳ್ಳಬೇಕು, ಮುಂದಿನ ಯಾವುದೇ ವ್ಯವಹಾರಕ್ಕೆ ಈ ಸಂಖ್ಯೆ ಬೇಕೇಬೇಕು. ಗ್ರಾಹಕ ಡು ನಾಟ್ ಕಾಲ್‌ಗೆ ವಿನಂತಿ ಸಲ್ಲಿಸಿದ ೪೫ ದಿನಗಳ ಅವಧಿಯಲ್ಲಿ ಚಾಲ್ತಿಗೆ ಬರುತ್ತದೆ. ಅಂದರೆ ನೊಂದಾಯಿಸಿದ ಒಂದೂವರೆ ತಿಂಗಳ ನಂತರದಿಂದಷ್ಟೆ ಈ ಜಾಹಿರಾತು ಕರೆ - ಎಸ್‌ಎಂಎಸ್ ನಿಲ್ಲುತ್ತದೆ. ಇದೇ ೧೯೦೯ಗೆ ಕರೆ ಮಾಡಿ ಅಥವಾ STOP DND ಎಂಬ ಎಸ್‌ಎಂಎಸ್ ಮಾಡಿ ನೊಂದಣಿಯನ್ನು ರದ್ದುಗೊಳಿಸಲು ಅವಕಾಶವಿದೆ.
ನೊಂದಾವಣೆಯಾದ ೪೫ ದಿನಗಳ ತದ ನಂತರವೂ ವಾಣಿಜ್ಯ ಕರೆ ಸಂದೇಶ ಬರುತ್ತಿದ್ದರೆ ನೀವು ದೂರು ದಾಖಲಿಸಬೇಕಾಗುತ್ತದೆ. ಇಂತಹ ಕರೆ ಸಂದೇಶ ಬಂದ ೧೫ ದಿನಗಳೊಳಗೆ ಗ್ರಾಹಕ ದೂರು ಕೊಡಬೇಕು. ಮೊತ್ತ ಮೊದಲು ಸೇವಾದಾತರ ಕಾಲ್ ಸೆಂಟರ್‌ಗೆ ಕರೆಮಾಡಿ ದೂರು ದಾಖಲಿಸಬೇಕು. ದಾಖಲಿಸುವ ವೇಳೆ ಇವನ್ನು ಗಮನಿಸಿ; ೧) ನಿಮ್ಮ ದೂರವಾಣಿ ಸಂಖ್ಯೆ, ೨) ಟೆಲಿ ಮಾರ್ಕೆಂಟಿಂಗ್ ಮಾಡಿದ ದೂರವಾಣಿ ಸಂಖ್ಯೆ, ೩) ಕರೆಯ ದಿನಾಂಕ ಮತ್ತು ಸಮಯ, ೪) ಈ ಕರೆ ಅಥವಾ ಎಸ್‌ಎಂಎಸ್‌ನ ವಿಷಯ - ಈ ನಾಲ್ಕು ಅಂಶಗಳನ್ನು ನೀವು ಉಲ್ಲೇಖಿಸಬೇಕು. ದೂರು ದಾಖಲಿಸಿದ್ದಕ್ಕೆ ಕಾಲ್ ಸೆಂಟರ್‌ನಿಂದ ಡಾಕೆಟ್ ಸಂಖ್ಯೆಯನ್ನು ಗ್ರಾಹಕ ಮುದ್ದಾಂ ಪಡೆಯಬೇಕು. ಇಂತಹ ಚಂದಾದಾರ ೫೦೦ ರೂ. ಪರಿಹಾರಕ್ಕೆ ಸೇವಾದಾತರನ್ನು ಒತ್ತಾಯಿಸಬೇಕು. ಮುಂದಿನ ೩೦ ದಿನಗಳಲ್ಲಿಯೂ ನಿಮ್ಮ ದೂರನ್ನು ಪರಿಹರಿಸದಿದ್ದರೆ, ಇನ್ನೂ ಅನಪೇಕ್ಷಿತ ವಾಣಿಜ್ಯ ಕರೆ- ಸಂದೇಶ ಹಿಂದಿನ ಟೆಲಿ ಮಾರ್ಕೆಂಟಿಂಗ್ ಕಂಪನಿಯಿಂದಲೇ ಬರುತ್ತಿದ್ದರೆ ನೀವು ಟ್ರಾಯ್‌ನಲ್ಲಿಯೇ ದೂರು ದಾಖಲಿಸಬಹುದು. ಅವರ ಇ-ಮೇಲ್ ಐಡಿucccomplaints@ndncregistry.gov.in
ಇದೀಗ ಟ್ರಾಯ್ ‘ಟೆಲಿಕಾಂ ಅನ್‌ಸಾಲಿಸಿಟೆಡ್ ಕಮರ್ಷಿಯಲ್ ಕಮ್ಯುನಿಕೇಷನ್(ಯುಸಿಸಿ) ಎರಡನೇ ತಿದ್ದುಪಡಿ - ೨೦೦೮’ ನಿಯಮಗಳನ್ನು ಜಾರಿಗೊಳಿಸಿದೆ. ಇನ್ನು ಮುಂದೆ ಮೊಬೈಲ್ ಕಂಪನಿ ದೂರು ಸ್ವೀಕರಿಸಿದ ೨೮ ದಿನಗಳಲ್ಲಿ ತನ್ನ ತನಿಖೆಯನ್ನು ಪೂರ್ಣಗೊಳಿಸಲೇಬೇಕು. ಒಂದೊಮ್ಮೆ ಈ ಗಡುವಿನಲ್ಲಿ ದೂರನ್ನು ನಿರ್ವಹಿಸದಿದ್ದರೆ, ಮೊದಲ ಸಂದರ್ಭದಲ್ಲಿ ಗರಿಷ್ಟ ೫ ಸಾವಿರ ರೂ. ದಂಡವನ್ನು ಸೇವಾದಾತ ಅರ್ಜಿದಾರನಿಗೆ ಕೊಡಬೇಕಾಗುತ್ತದೆ. ನಿರ್ಲಕ್ಷ್ಯ ಮುಂದುವರಿದಲ್ಲಿ ದಂಡದ ಮೊತ್ತ ೨೦ ಸಾವಿರದವರೆಗೆ ಹೆಚ್ಚಬಹುದು. ಅಷ್ಟೇ ಅಲ್ಲ, ಇನ್ನು ಮುಂದೆ ಪ್ರತಿ ಹೊಸ ಚಂದಾದಾರನಿಗೆ ಆಕ್ಟಿವೇಷನ್ ವೇಳೆಯಲ್ಲಿಯೇ ‘ಡು ನಾಟ್ ಕಾಲ್ ರಿಜಿಸ್ಟ್ರಿ’ಗೆ ನೊಂದಣಿ ಆಗಬೇಕೆ ಎಂಬ ವಿಚಾರಣೆಯನ್ನು ಸಿಮ್‌ದಾತರು ಮಾಡಲೇಬೇಕು. ಗಮನದಲ್ಲಿರಲಿ, ಈ ಯೋಜನೆ ೨೦೦೮ರ ಮಾರ್ಚ್ ಒಂದರಿಂದ ಜಾರಿಗೆ ಬಂದಿದೆ. ಚಂದಾದಾರರು ತಮ್ಮ ಸೇವಾದಾತರ ಅಧಿಕೃತ ವೆಬ್‌ಸೈಟ್‌ಗೆ ಹೋಗಿಯೂ ತಮ್ಮನ್ನು ಎನ್‌ಡಿಎನ್‌ಸಿ ವ್ಯವಸ್ಥೆಯಲ್ಲಿ ನೊಂದಾಯಿಸಿಕೊಳ್ಳಬಹುದು.
ಕಿರಿಕಿರಿ ಕರೆ ಹಿಂದೆ ಕರುಣೆಯ ಕತೆ
ಭಾರತದ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಜಾರಿಗೆ ತಂದಿರುವ ಒಂದು ಕ್ರಾಂತಿಕಾರಕ ಕ್ರಮವೆಂದರೆ, ಅದು ನ್ಯಾಷನಲ್ ಡು ನಾಟ್ ಕಾಲ್ ರಿಜಿಸ್ಟ್ರಿ ಎಂದು ತಮ್ಮ ಭಾಷಣಗಳಲ್ಲಿ ಖುದ್ದು ಮ್ಯಾಥ್ಯೂ ಫಾಲಮಟ್ಟಮ್ ಹೇಳದಿರರು. ‘ಈ ವ್ಯವಸ್ಥೆಯಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ದಾಖಲಿಸಿದವರಿಗೆ ಯಾವುದೇ ಕಮರ್ಷಿಯಲ್ ಕರೆ ಬರುವುದಿಲ್ಲ.’ ಅವರ ವಿವರಣೆ ಕೇಳಿ ಪ್ರೇರಿತರಾಗುವವರು ಹೆಚ್ಚು ಜನರಿದ್ದಾರು. ತನ್ನ ನಿಬಿಡ ಕೆಲಸ ಕಾರ್ಯಗಳ ನಡುವೆ ಈ ಕಮರ್ಷಿಯಲ್ ಕರೆ, ಸಂದೇಶಗಳ ಕಿರಿ ಕಿರಿ ಬೇಡವೆಂದು ನಮ್ಮಲ್ಲಿನ ಬಹುಸಂಖ್ಯಾತ ಗಣ್ಯರು, ಅಧಿಕಾರಿಗಳು ತಮ್ಮ ಮೊಬೈಲ್ ನಂಬರ್‌ನ್ನು ನೊಂದಾಯಿಸಿಬಿಟ್ಟಿರುತ್ತಾರೆ. ಆಶ್ಚರ್ಯ, ಸ್ವತಃ ಟ್ರಾಯ್‌ನ ಗ್ರಾಹಕ ವ್ಯವಹಾರಗಳ ಉಪ ಆಯುಕ್ತ ಈ ಮ್ಯಾಥ್ಯೂ ಫಾಲಮಟ್ಟಮ್ ತಮ್ಮ ನಂಬರ್ ನೊಂದಾಯಿಸಿಲ್ಲ!
ಮ್ಯಾಥ್ಯೂ ಹೇಳುತ್ತಾರೆ, “ಭಾರತದಲ್ಲಿ ಇಂತಹ ವ್ಯಾಪಾರೀ ಕರೆ ವ್ಯವಸ್ಥೆಗಳ ಕಾರಣದಿಂದಾಗಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಗಿದೆ. ಒಂದೊಮ್ಮೆ ನಾವೆಲ್ಲರೂ ಎನ್‌ಡಿಸಿಯಲ್ಲಿ ಹೆಸರು ನೊಂದಾಯಿಸಿದರೆ ನಮ್ಮಲ್ಲಿನ ಯುವ ಜನರ ಉದ್ಯೋಗಾವಕಾಶವನ್ನೇ ಕಸಿದಂತಾಗುತ್ತದೆ. ಹಾಗಾಗಿ ನಾನು ...”
ಕಮರ್ಷಿಯಲ್ ಕರೆಯ ಕಿರಿಕಿರಿಯ ಇನ್ನೊಂದು ಮಗ್ಗುಲಿನಲ್ಲಿ ಮಾನವೀಯ ಆಶಯ!

-ಮಾವೆಂಸ

ಬುಧವಾರ, ಅಕ್ಟೋಬರ್ 21, 2009

ಹಳ್ಳಿ ಮೂಲೆಯ ಗಟ್ಟಿ ಪ್ರಯತ್ನ - ಮಾವಿನಮನೆ ವಾಚನಾಲಯ


‘ಉದಯವಾಣಿ’ಯ ಉಪಸಂಪಾದಕ ನಾಗರಾಜ ಮತ್ತೀಗಾರ ‘ತರಂಗ’ ಸಾಪ್ತಾಹಿಕದ ಅಕ್ಟೋಬರ್ ೨೯ರ ಸಂಚಿಕೆಯಲ್ಲಿ ಬರೆದ ಲೇಖನ ಕೆಳಗಿದೆ. ಓದಿ. ಅದನ್ನು ಇಲ್ಲಿ ಅಪ್‌ಲೋಡ್ ಮಾಡಲು ಕಾರಣ, ಅದರ ವಿಷಯ ನಾನು ನಿರ್ವಹಿಸುತ್ತಿರುವ ಒಂದು ಪುಟ್ಟ, ಸಾಹಿತ್ಯಿಕ ಪ್ರಯತ್ನ ಎಂಬುದು. ಇನ್ನೂ ಒಂದು ಆಸೆಯೆಂದರೆ, ಓದಿದ ನೀವೂ ನನ್ನೊಂದಿಗೆ ಈ ಪ್ರಯತ್ನದಲ್ಲಿ ಕೈಜೋಡಿಸುವ ಮನಸ್ಸು ಮಾಡಬಹುದು ಎಂಬುದು. ಅದು ದುರಾಸೆ ಅಲ್ಲ ಎಂದುಕೊಳ್ಳುವೆ!
ನಿಜಕ್ಕೂ ಸಹಾಯಕ್ಕೆ ವಿನಂತಿಸುತ್ತೇನೆ. ತುಸು ದೊಡ್ಡ ಮೊತ್ತದ ಧನ ಬೆಂಬಲ ಕೊಡುವವರಿಗೆ ಒಂದು ಮಾತು ಸ್ಪಷ್ಟೀಕರಿಸಲು ಬಯಸುತ್ತೇನೆ, ‘ಒಂದೊಮ್ಮೆ ಈ ವಾಚನಾಲಯ ಯಾವುದೇ ವರ್ಷ ಬಾಗಿಲು ಹಾಕಿದರೆ ನಿಮ್ಮ ಪಾವತಿಯನ್ನು ಪೂರ್ತಿ ನಿಮಗೆ ಮರಳಿಸುತ್ತೇವೆ"
ಆನ್‌ಲೈನ್‌ನಲ್ಲಿ ಸಹಾಯ ಮಾಡುವವರಿಗೆ ವಾಚನಾಲಯದ ಬ್ಯಾಕ್ ಖಾತೆ ವಿವರ
ಕರ್ನಾಟಕ ಬ್ಯಾಂಕ್, ಸಾಗರ ಶಾಖೆ ೫೭೭೪೦೧ ಶಿವಮೊಗ. ಕರ್ನಾಟಕ
ಖಾತೆ ನಂಬರ್ -7122500101304001 ಬ್ಯಾಂಕ್ ಕೋಡ್ - KARB0000712
ಸಹಾಯ ಮಾಡಿದವರ ವಿವರವನ್ನು ಬರುವ ದಿನದಲ್ಲಿ ಇದೇ ಬ್ಲಾಗ್‌ನಲ್ಲೂ ಒದಗಿಸುವೆ. ನಿಮ್ಮ ಯಾವುದೇ ಸಲಹೆ ಸೂಚನೆಗೂ ಸ್ವಾಗತ.
-ಮಾವೆಂಸ
================
ನಿಮಗೂ ಗೊತ್ತು, ಶಿವಮೊಗ್ಗ ಜಿಲ್ಲೆಯ ಸಾಗರದ ವರದಪುರ ಕ್ಷೇತ್ರಕ್ಕೆ ರಾಜ್ಯದ ನಕ್ಷೆಯಲ್ಲಿ ಒಂದು ಗುರುತರ ಸ್ಥಾನವಿದೆ. ಶ್ರೀಧರ ಸ್ವಾಮಿಗಳು ನೆಲೆಸಿದ ಈ ಸ್ಥಳ ಪ್ರೇಕ್ಷಣೀಯವಾಗಿಯೂ, ಧಾರ್ಮಿಕವಾಗಿಯೂ ಪ್ರವಾಸಿ ತಾಣ. ಹಾಗೆಂದು ಅಲ್ಲಿಗೆ ಹೋಗಲು ಸಾಗರದಲ್ಲಿ ಬಸ್ ಹತ್ತಿ ವರದಪುರದ ‘ದ್ವಾರಬಾಗಿಲು’ ಬಳಿ ಇಳಿದವರಿಗೆ ಮೊದಲು ಕಾಣಿಸುವುದು ಮಾತ್ರ ವಿಚಿತ್ರ ಹೆಸರಿನ ನಾಮಫಲಕ, ‘ವೀಣಾ ಸ್ಮಾರಕ ಮಾವಿನಮನೆ ವಾಚನಾಲಯ’. ಒಳಹೊಕ್ಕು ನೋಡಿದರೆ, ಇದರ ಬಗ್ಗೆ ಹೇಳಬೇಕಾದುದು ತುಂಬಾ ಇದೆ!
ಎಡಜಿಗಳೇಮನೆ ಮಾವಿನಸರ ಊರಿಗೆ ಸೇರಿದ್ದು ಉಮಾಮಹೇಶ್ವರ ದೇವಸ್ಥಾನ. ಇದರ ಬೆನ್ನಿಗೆ ಅರ್ಚಕರ ಮನೆ. ಮನೆಯ ಒಂದು ಭಾಗದಲ್ಲಿ ಮಾವಿನಮನೆ ವಾಚನಾಲಯ. ಈ ಎರಡೂ ಊರುಗಳ ಆದಿ - ಅಂತ್ಯಗಳ ಕಸಿಯೇ ಮಾವಿನಮನೆ! ಇಲ್ಲಿ ಬರೋಬ್ಬರಿ ೫೯ ನಿಯತಕಾಲಿಕಗಳು ಓದಲು ಸಿಗುತ್ತದೆ. ಎಲ್ಲವೂ ತಾಜಾ ತಾಜ! ಬಹುಷಃ ಎಂತಹ ಸರ್ಕಾರಿ ನಗರ ಗ್ರಂಥಾಲಯದಲ್ಲೂ ಇಷ್ಟು, ಕಷ್ಟ ಕಷ್ಟ.
ಮಾವಿನಮನೆ ವಾಚನಾಲಯ ಇಲ್ಲಿನ ಗ್ರಾಮಸ್ಥರ ಸಂಘಟನೆಯ ಫಲ. ಊರಿನ ಶ್ರೇಯೋಭಿಲಾಷೆಗೆಂದು ಅವರು ಗ್ರಾಮಾಭಿವೃದ್ಧಿ ಸಂಘವನ್ನು ಮಾಡಿಕೊಂಡಿದ್ದಾರೆ. ದೇವಸ್ಥಾನದ ನಿರ್ವಹಣೆಯ ಜೊತೆಗೆ ಗ್ರಾಮದ ಇನ್ನಿತರ ಚಟುವಟಿಕೆ ಇದರ ಗುರಿ. ಅದರ ಈಡೇರಿಕೆಗೆ ಪ್ರಪ್ರತ್ಯೇಕ ಸಮಿತಿಗಳಿವೆ. ಕೃಷಿ ವಿಚಾರಕ್ಕೊಂದು, ಮಹಿಳಾ ಚಿಂತನೆ ಚಟುವಟಿಕೆಗೊಂದು ಇದ್ದಂತೆ ಸ್ವತಂತ್ರ ವಾಚನಾಲಯ ಸಮಿತಿಯಿದೆ. ಮೂರು ಸದಸ್ಯರ ಸಮಿತಿಗೆ ಮಾ.ವೆಂ.ಸ.ಪ್ರಸಾದ್ ಸಂಚಾಲಕರು. ಗ್ರಾಮಾಭಿವೃದ್ಧಿ ಸಮಿತಿ ವಾರ್ಷಿಕ ಕೊಡುವ ೧,೪೦೦ ರೂ.ಗಳ ಜೊತೆಗೆ ಅಗತ್ಯಬೀಳುವ ಹೆಚ್ಚಿನ ಹಣಕಾಸು ಸಂಗ್ರಹಿಸುವ ಮೂಲಕ ಲೈಬ್ರರಿ ನಡೆಸುವ ಜವಾಬ್ದಾರಿ ಈ ವಾಚನಾಲಯ ಸಮಿತಿಯದ್ದು.
ಅಂಕಿಅಂಶಗಳತ್ತ ಗಮನಿಸಿದರೆ, ಪ್ರತಿ ತಿಂಗಳೂ ಸರಿಸುಮಾರು ೭೦೦ ರೂ.ಗಳನ್ನು ಪ್ರಯೋಜಕರು, ಚಂದಾದಾರರಿಂದ ಸಂಗ್ರಹಿಸಲಾಗುತ್ತದೆ. ಅದರಲ್ಲಿ ಎಂಟು ಸಾಪ್ತಾಹಿಕ, ಏಳು ಪಾಕ್ಷಿಕ, ೨೦ ಮಾಸಿಕಗಳನ್ನು ಖರೀದಿಸಿ ಓದುಗರಿಗೆ ಒದಗಿಸಲಾಗುತ್ತದೆ. ಇದರ ಜೊತೆಗೆ ೨೪ ಪತ್ರಿಕೆಗಳು ಖುದ್ದು ತಾವೇ ಉಚಿತವಾಗಿ ಸಂಚಿಕೆಗಳನ್ನು ಕಳಿಸಿಕೊಡುತ್ತವೆ. ಅದರಲ್ಲಿ ಸುಜಾತ ಸಂಚಿಕೆ, ಹವ್ಯಕ, ಆಯುರ್ವೇದ ಮತ್ತು ಯೋಗ...... ಹೆಸರಿಸ ಹೊರಟರೆ ಸಾಲು ದೀರ್ಘ. ಕನ್ನಡದ ಎಲ್ಲ ಪ್ರಮುಖ ಪತ್ರಿಕೆಗಳು ಇಲ್ಲಿ ಲಭ್ಯವಾಗುವುದು ಗಮನಾರ್ಹ. ಓದಲು ಬರುವವರಿಗೆ ಒಂದು ತಾಪತ್ರಯವಿದೆ! ಇದು ಪ್ರತಿ ದಿನ ಸಂಜೆ ನಾಲ್ಕರಿಂದ ಎರಡು ಘಂಟೆ ಕಾಲ ಮಾತ್ರ ತೆರೆದಿರುತ್ತದೆ. ಹಾಗೆಂದು ವರ್ಷದ ಯಾವುದೇ ದಿನ ರಜೆ ಇಲ್ಲ. ಊರಿನವರಲ್ಲೇ ಪ್ರತಿ ದಿನಕ್ಕೆ ಇಬ್ಬರಂತೆ ಕಾರ್ಯಕರ್ತರನ್ನು ಆಯ್ದುಕೊಳ್ಳಲಾಗಿದೆ. ಕಾರ್ಯ ನಿರ್ವಹಿಸುವ ದಿನ ನಿಗದಿಪಟ್ಟಿರುತ್ತದೆ. ಆ ಕಾರ್ಯಕರ್ತರಲ್ಲೊಬ್ಬರು ಬಾಗಿಲು ತೆರೆಯುತ್ತಾರೆ. ಊಹ್ಞೂ, ಯಾರಿಗೂ ಸಂಬಳ, ಗೌರವಧನದ ಮಾತಿಲ್ಲ.
೨೦೦೪ರ ಗಾಂಧಿ ಜಯಂತಿಯ ದಿನ ಆರಂಭವಾದ ಈ ವಾಚನಾಲಯಕ್ಕೆ ಈಗ ಐದನೇ ವರ್ಷ. ಹಿಂತಿರುಗಿ ನೋಡಿದರೆ ಸಮಾಧಾನ ಸಂಖ್ಯೆಯ ದೃಷ್ಟಿಯಿಂದ ಮಾತ್ರ ಸಿಕ್ಕಿದೆ ಎನ್ನುತ್ತಾರೆ ಸಂಚಾಲಕ ಮಾವೆಂಸ, "ಇವತ್ತು ಪತ್ರಿಕೆಗಳಲ್ಲದೆ ೧೩೬೦ ಸಾಹಿತ್ಯಿಕ, ಸಾಹಿತ್ಯೇತರ ಕೃತಿಗಳು ನಮ್ಮಲ್ಲಿ ಲಭ್ಯ. ಎಲ್ಲ ಪತ್ರಿಕೆಗಳ ಯುಗಾದಿ, ದೀಪಾವಳಿ ವಿಶೇಷಾಂಕಗಳೂ ಬರುತ್ತವೆ. ಓದುವವರಿಗೆ ಆಸನ ವ್ಯವಸ್ಥೆ, ಅಲ್ಮೆರಾ ಸೌಲಭ್ಯ ತಕ್ಕಮಟ್ಟಿಗಿದೆ. ಆದರೆ ನಮ್ಮ ಬಹುಪಾಲು ಗುರಿಗಳು ಇನ್ನೂ ಬಾಕಿ ಬಾಕಿ. ವಾಚನಾಲಯಕ್ಕೆ ಪೂರಕವಾದ ಒಳಾಂಗಣ ಇರುವ ಸ್ವತಂತ್ರ ಕಟ್ಟಡ ಆಗಬೇಕಿದೆ. ಪತ್ರಿಕೆಗಳ ಹಾಗೂ ಗ್ರಾಮದ ಕುರಿತ ಡಾಟಾ ಸಂಗ್ರಹ ಯೋಜನೆ ಇನ್ನೂ ಪ್ರಾಥಮಿಕ ಹಂತದಲ್ಲೇ ಇದೆ. ಕಂಪ್ಯೂಟರ್ ಅಳವಡಿಸಿ ಗ್ರಾಮಸ್ಥರನ್ನು ಇ ಸಾಕ್ಷರರನ್ನಾಗಿಸುವ ಆಕಾಂಕ್ಷೆಯೂ ಸಾಧನೆಯಾಗಿಲ್ಲ
.
ಮಾವಿನಮನೆ ವಾಚನಾಲಯದ ಹೆಸರಿನ ಜೊತೆಗಿರುವ ವೀಣಾ ನೆನಪಿಗೆ ವಿಶೇಷ ಅರ್ಥವಿದೆ. ಈ ಊರಿನ ಮಗಳಾದ ವೀಣಾ ಎಂಬ ಸಾಹಿತ್ಯಾಸಕ್ತೆ ಹಾವು ಕಚ್ಚಿ ಅಕಾಲಿಕ ಸಾವು ಕಂಡಿದ್ದಾರೆ. ಅವರನ್ನು ಸದಾ ಸ್ಮರಿಸಿಕೊಳ್ಳಲು ಊರವರು ಬಳಸಿಕೊಂಡ ಮಾರ್ಗವೇ ಈ ‘ವೀಣಾ ಸ್ಮಾರಕ....’ ವಾಚನಾಲಯ ಇಟ್ಟ ಪ್ರತಿ ಯಶಸ್ವಿ ಹೆಜ್ಜೆಯೂ ವೀಣಾ ನೆನಪಿಗೆ ಅರ್ಪಿತ. ಹಾಗಿರುವುದರಿಂದಲೇ ನಮಗೆ ಇದು ನಾವು ಮಾಡಿದ್ದು ಎಂಬ ಯಾವುದೇ ಅಹಂಕಾರ ತಾಕುವುದಿಲ್ಲ ಎನ್ನುತ್ತಾರೆ ವಾಚನಾಲಯ ಸಮಿತಿ ಸದಸ್ಯೆ ಲಲಿತಾ ಜಿ.ಭಟ್.
ಪ್ರಗತಿಯ ಹಿಂದಿರುವ ಪ್ರಾಯೋಜಕರ ಪಾತ್ರವನ್ನು ಇನ್ನೋರ್ವ ಸದಸ್ಯೆ ಮಮತಾ ದಿನೇಶ್ ಉಲ್ಲೇಖಿಸುತ್ತಾರೆ. ಇಂದು ಮಾಸಿಕ ಹತ್ತು ರೂಪಾಯಿಯಿಂದ ವಾರ್ಷಿಕ ೫೦೦ ರೂ.ವರೆಗೆ ದೇಣಿಗೆ ನೀಡುವ ಸಹೃದಯಿಗಳಿದ್ದಾರೆ. ರಾಜ್ಯದ ಎಲ್ಲ ಭಾಗಗಳ ಸಾಹಿತ್ಯ ಪ್ರೇಮಿಗಳು ಧನಸಹಾಯಕ್ಕೆ ನಿಂತಿದ್ದಾರೆ. ಬೆಳಗಾಂನ ಪಾರ್ಥ ಸಾನು, ಲಿಂಗಸಗೂರಿನ ಲಕ್ಷೀಕಾಂತ್ ಕೊಂಪಲ್, ಬೆಂಗಳೂರಿನ ಸುರಭಿ ಸೂರ್ಯ.... ಹೀಗೆ ಪ್ರಾಯೋಜಕರಾಗಿರುವವರ ಸಂಖ್ಯೆ ಒಟ್ಟು ೩೨. ಇದರಲ್ಲಿ ಗ್ರಾಮಸ್ಥರು, ಊರ ಹೆಣ್ಣು ಮಕ್ಕಳೂ ಸೇರಿದ್ದಾರೆ. ಊರವರಲ್ಲದೆ ಅಕ್ಕ ಪಕ್ಕದ ಹಳ್ಳಿಗರು ಚಂದಾದಾರರಾಗಿ ಮನೆಗೆ ಪುಸ್ತಕ ಒಯ್ದು ಓದುತ್ತಿದ್ದಾರೆ. ಆದರೆ ವಾಚನಾಲಯದಲ್ಲಿಯೇ ಓದುವಿಕೆ ಉಚಿತ!
ಏನಿದರ ವೈಶಿಷ್ಟ್ಯ?
ಹಳ್ಳಿಯ ಮೂಲೆಯೊಂದರಲ್ಲಿ , ಕೇವಲ ೧೫ ಮನೆಗಳಿರುವ ಗ್ರಾಮದಲ್ಲಿ ಈ ಪ್ರಮಾಣದ ವಾಚನಾಲಯ ಚಾಲನೆಯಲ್ಲಿರುವುದು ಅಪರೂಪ. ಇಲ್ಲಿ ಓದಲು ಸಿಗುವಷ್ಟು ಪತ್ರಿಕೆಗಳು ಸರ್ಕಾರಿ ಗ್ರಂಥಾಲಯದಲ್ಲೂ ಕೈಗೆಟುಕಲ್ಲ ಎಂಬುದು ಕಠೋರ ಸತ್ಯ. ಈ ಸಾಧನೆಯ ಹಿಂದಿರುವವರು ಕೇವಲ ಕೃಷಿಕರು ಎನ್ನುವುದು ಇನ್ನೊಂದು ವಿಶೇಷ. ಇವುಗಳಲ್ಲದೆ ವಾಚನಾಲಯ ನಡೆಸುತ್ತಿರುವ ಹಲವು ಜಾಗೃತಿ ಕಾರ್ಯಕ್ರಮಗಳಲ್ಲಿ ಬ್ಯಾಂಕ್ ಮ್ಯಾನೇಜರ್ ಜೊತೆ ಚರ್ಚೆ, ಡಾ.ವಸುಂಧರಾ ಭೂಪತಿಯವರ ಪುಸ್ತಕಗಳ ವಿಮರ್ಶೆಯನ್ನು ಇಲ್ಲಿನ ಮಹಿಳೆಯರು ಮಾಡಿದ ವಿನೂತನ ಪ್ರಯೋಗದಂತವು ನೆನಪಿಡುವಂತದು.
ಈ ನಡುವೆ ವಾಚನಾಲಯ ಇನ್ನೊಂದು ಮಗ್ಗುಲಿನತ್ತ ತೆರೆದುಕೊಳ್ಳುವ ಸಾಧ್ಯತೆಗಳಿವೆ. ಈ ವಾಚನಾಲಯಕ್ಕೆ ಸದಾ ಧನಸಹಾಯ ಒದಗಿಸುತ್ತ ಬಂದಿರುವ ಕೆನರಾ ಬ್ಯಾಂಕ್ ಜ್ಯುಬಿಲಿ ಎಜುಕೇಷನ್ ಫಂಡ್ ಬೆಂಗಳೂರಿನಲ್ಲಿ ಸ್ಟಡಿ ಸೆಂಟರ್‌ನ್ನು ನಡೆಸುತ್ತಿದೆ. ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕಗಳನ್ನು ಒದಗಿಸುವ ಕೆಲಸ ಅಲ್ಲಿ ನಡೆಯುತ್ತಿದೆ. ದುಬಾರಿ ಬೆಲೆಯ ಪಠ್ಯ ಪುಸ್ತಕ ಕೊಳ್ಳಲಾಗದವರಿಗೆ ಇದು ಸಂಜೀವಿನಿ. ಅಂತದ್ದೇ ಒಂದು ಸೌಲಭ್ಯವನ್ನು ಮಲೆನಾಡಿನಲ್ಲಿ ಸ್ಥಾಪಿಸಲು ಜ್ಯುಬಿಲಿ ಫಂಡ್ ಯೋಜಿಸಿದ್ದು ಇದೇ ಮಾವಿನಮನೆ ವಾಚನಾಲಯದಲ್ಲಿ ಜಾರಿಗೊಳಿಸಲು ಚಿಂತಿಸುತ್ತಿದೆ.
ಈ ವಾಚನಾಲಯಕ್ಕೆ ಶಿವಮೊಗ್ಗದ ಅಡಿಕೆ ದಲ್ಲಾಳಿ ಸಹಕಾರ ಸಂಸ್ಥೆ ಮ್ಯಾಮ್ಕೋಸ್, ಸಾಗರದ ವೆನಿಲ್ಲಾ ಬೆಳೆಗಾರರ ಸಂಘ, ಧರ್ಮಸ್ಥಳ ಹೊರನಾಡು ಕ್ಷೇತ್ರ ಪ್ರಮುಖರು ಸೇರಿದಂತೆ ಹಲವರು ಧನಸಹಾಯ ನೀಡಿರುವುದು ಈ ಪರಿ ಬೆಳವಣಿಗೆ ತೋರಿಸಲು ಕಾರಣವಾಗಿದೆ ಎಂಬ ಅಭಿಪ್ರಾಯ ಊರಿನ ಹಿರಿಯ ಜೀವ ಎಂ.ಜಿ.ಚಂದ್ರಶೇಖರ್‌ರಾವ್‌ರದ್ದು. ಬಹುಷಃ ಅವರ ಗುರಿ ಈಡೇರಿಕೆಗೆ ರಾಜ್ಯದ ಎಲ್ಲೆಡೆಯಿಂದ ಇನ್ನಷ್ಟು ಸಹಾಯಹಸ್ತ ಒದಗಬೇಕು, ಪ್ರಾಯೋಜಕರು ಮುಂದೆಬರಬೇಕು. ಹಾಗಾದರೆ ಇದು ರಾಷ್ಟ್ರದಲ್ಲಿಯೇ ಗುರ್ತಿಸುವಂತ ಸಾಧನೆ ಆದೀತು. ರಾಜ್ಯದಲ್ಲಿ ಏಕೈಕ ಎಂತಾದರೆ, ಹೆಗ್ಗೋಡಿನ ನಿನಾಸಂ ಇದ್ದಂತೆ ಇನ್ನೊಂದು ವಿನೂತನ ಪ್ರಯತ್ನ ಇದಾಗಲಿ ಅಲ್ಲವೇ?
ಇಂದು ವರದಪುರಕ್ಕೆ ಸಾವಿರ ಸಂಖ್ಯೆಯಲ್ಲಿ ಜನ ಭೇಟಿ ನೀಡುತ್ತಿದ್ದಾರೆ. ಹಲವರು ೨-೩ ದಿನ ಕಾಲ ತಂಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಾಚನಾಲಯಕ್ಕೆ ಓದುಗರ ಕೊರತೆ ಬೀಳಲಿಕ್ಕಿಲ್ಲ. ಶ್ರೀಧರಾಶ್ರಮದತ್ತ ಬರುವವರಿಗೆ ವೀಣಾ ಸ್ಮಾರಕ ವಾಚನಾಲಯ ಒಂದು ಬೋನಸ್. ಸಹಾಯಹಸ್ತ ಚಾಚಲು ಬಯಸುವವರು ಸಂಚಾಲಕರನ್ನು, ಎಡಜಿಗಳೇಮನೆ, ಸಾಗರ - ೫೭೭೪೦೧ ಈ ವಿಳಾಸದಲ್ಲಿ ಅಥವಾ ೦೮೧೮೩-೨೩೬೦೬೮, ೯೮೮೬೪೦೭೫೯೨ ದೂರವಾಣಿಯಲ್ಲಿ ಸಂಪರ್ಕಿಸಬಹುದು.


-ನಾಗರಾಜ ಮತ್ತೀಗಾರ
ಸ್ನೇಹಿತ ಮತ್ತೀಗಾರರಿಗೆ ಹೃತ್ಪೂರ್ವಕ ವಂದನೆಗಳು.....

ಸೋಮವಾರ, ಅಕ್ಟೋಬರ್ 19, 2009

ಸೆಕೆಂಡ್ ಕರೆ, ಡೂ ಕಾಲ್, ಬ್ಲಾಕ್ ಔಟ್ - ಏನಿದು ?


ಇದು ಈ ಹಿಂದೆ ವಿಜಯ ಕರ್ನಾಟಕದಲ್ಲಿ ಪ್ರಕಟಗೊಂಡ ಲೇಖನ. ಈಗ ನೀವೂ ಓದಿ.......

ಟೆಲಿಕಾಂ ರೆಗ್ಯುಲೇಟರಿ ಆಧಾರದ ಆಥಾರಿಟಿ ಆಫ್ ಇಂಡಿಯಾ- ಟ್ರಾಯ್‌ನಲ್ಲಿ ನೊಂದಾಯಿತವಾಗಿರುವ ಗ್ರಾಹಕಪರ ಸಂಘಟನೆಗಳ ಸಂಖ್ಯೆ ಒಟ್ಟು ೪೧. ಅದರಲ್ಲಿ ರಾಜ್ಯದಿಂದ ದಾಖಲಾಗಿರುವುದು ಮೂರು ಎನ್.ಜಿ.ಓ. ಮಾತ್ರ. ಇವುಗಳಲ್ಲಿ ಎರಡು ಬೆಂಗಳೂರಿನಿಂದ ಕೆಲಸ ಮಾಡುವುದಾದರೆ ಅಕ್ಷರಶಃ ಹಳ್ಳಿಮೂಲೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಾ ರಾಜಧಾನಿ ದೆಹಲಿಗೆ ಬಳಕೆದಾರರ ಕೂಗನ್ನು ಒಯ್ಯುವ ಜವಾಬ್ದಾರಿ ನಿರ್ವಹಿಸುತ್ತಿರುವ ಸಾಗರದ ಬಳಕೆದಾರರ ವೇದಿಕೆ ಇನ್ನೊಂದು. ಇವುಗಳ ಜೊತೆ ಟ್ರಾಯ್ ವರ್ಷಕ್ಕೆ ಎರಡು ಬಾರಿ ಸಭೆ ನಡೆಸುತ್ತದೆ. ಅಂತಹ ಒಂದು ಸಭೆ ಇತ್ತೀಚೆಗೆ ದೆಹಲಿಯಲ್ಲಿ ನಡೆದಿತ್ತು. ಅದರಲ್ಲಿ ಪ್ರಸ್ತಾಪಿಸಲ್ಪಟ್ಟ ಹಲವು ವಿಚಾರಗಳು ದೂರವಾಣಿ ಗ್ರಾಹಕರಿಗೆ ಆಪ್ತವಾಗುವಂತದು.
ದೂರವಾಣಿ ನಿಯಂತ್ರಣ ಪ್ರಾಧಿಕಾರಕ್ಕೆ ಈಗ ಹೊಸ ಅಧ್ಯಕ್ಷರು. ಈ ಹಿಂದೆ ಟಿಡಿಸ್ಯಾಟ್‌ನಲ್ಲಿ ಸೇವೆ ಸಲ್ಲಿಸಿ ಬಂದಿರುವ ಎಸ್.ಕೆ.ಶರ್ಮ ಟ್ರಾಯ್‌ನ ಹೊಸ ಚಿಂತನೆ ಗುರಿಗಳನ್ನು ಪ್ರಸ್ತುತಪಡಿಸುತ್ತಾರೆ. ಡು ನಾಟ್ ಕಾಲ್ ನೊಂದಣಿಯ ಕ್ರಾಂತಿಕಾರಕ ಯೋಜನೆ ಪೂರ್ಣ ಫಲಪ್ರದವಾಗದೇ ಇರುವುದು ಟ್ರಾಯ್‌ನ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷರು ಘೊಷಿಸಿದ ಹೊಸ ಯೋಜನೆ ‘ಡು ಕಾಲ್ ರಿಜಿಸ್ಟ್ರಿ’
ವಾಸ್ತವವಾಗಿ ಟ್ರಾಯ್‌ಗೆ ಡು ನಾಟ್ ಕಾಲ್ ವ್ಯವಸ್ಥೆ ಜಾರಿಯ ಬಗ್ಗೆ ಪೂರ್ಣ ಪ್ರಮಾಣದ ಒಪ್ಪಿಗೆ ಇರಲಿಲ್ಲ. ಅದರ ಗ್ರಾಹಕ ವ್ಯವಹಾರಗಳ ವಿಭಾಗದ ಮ್ಯಾಥ್ಯೂ ಫಾಲಮಟ್ಟಮ್, ‘ಈ ನೊಂದಣಿ ಮಾಡಿಸಿಕೊಂಡು ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡುವ ನಮ್ಮ ದೇಶದ ಯುವಕರ ಹೊಟ್ಟೆಯ ಮೇಲೆ ಕಲ್ಲು ಹಾಕದಿರಿ’ ಎಂದು ಅಭಿಪ್ರಾಯ ಪಟ್ಟಿರುವುದು ಗಮನಾರ್ಹ. ಅದೆಷ್ಟೇ ಕಠಿಣ ಕಾನೂನು ರೂಪಿಸಿದರೂ ಅದರ ಕಬಂಧ ಬಾಹುಗಳಿಂದ ಟೆಲಿಮಾರ್ಕೆಟಿಂಗ್ ಕಂಪನಿಗಳು ನುಸುಳಿ ತಪ್ಪಿಸಿಕೊಳ್ಳುತ್ತಿರುವುದು ಹಾಗೂ ಒಂದು ವ್ಯಾಪಾರಿ ಮಾಧ್ಯಮಕ್ಕೆ ಧಕ್ಕೆಯುಂಟಾಗುವ ಹಿನ್ನೆಲೆಯಲ್ಲಿ ಈ ವ್ಯವಸ್ಥೆಯನ್ನು ಪುನರ್ರ‍ೂಪಿಸಲು ಟ್ರಾಯ್ ನಿರ್ಧರಿಸಿದೆ.
ಹೇಳಿ ಕೇಳಿ ಟೆಲಿಮಾರ್ಕೆಟಿಂಗ್ ಪ್ರಭಾವಯುತ ಸಂಪರ್ಕ ಮಾಧ್ಯಮ. ಈ ಜಾಹಿರಾತು ಯುಗದಲ್ಲಿ ಅದಕ್ಕೆ ಸಂಪೂರ್ಣ ನಿಷೇಧ ಹೇರುವುದು ಸಾಧ್ಯವೇ ಇಲ್ಲ. ಡು ನಾಟ್ ಕಾಲ್ ವ್ಯವಸ್ಥೆಯಿಂದ ಮೊಬೈಲ್ ಸೇವಾದಾತರಿಗೂ ನಷ್ಟ. ಅವರಿಗೆ ಕರೆಗಳಿಂದ ಎಸ್.ಎಂ.ಎಸ್.ನಿಂದ ಹುಟ್ಟುತ್ತಿದ್ದ ಆದಾಯಕ್ಕೆ ಸಂಚಕಾರವಾದಂತೆ. ಪತ್ರಿಕೆಗಳೊಂದಿಗೆ ಬರುವ ‘ವರ್ಗೀಕೃತ ಜಾಹಿರಾತು’ಗಳ ಕ್ಲಾಸಿಫೈಡ್ ಪುರವಣಿಯನ್ನು ಯಾರೂ ಓದುವುದಿಲ್ಲ! ಆದರೆ ಬಾಡಿಗೆ ಮನೆಯ ಅಗತ್ಯಬಿದ್ದಾಗ, ಉದ್ಯೋಗಾಕಾಂಕ್ಷಿಯಾದಾಗ ಆ ಪುಟಗಳೇ ಪರಮಾಪ್ತವಾಗುತ್ತವೆ. ಸಾರಾಂಶ ಇಷ್ಟೇ, ಅಗತ್ಯತೆಯ ಆಧಾರದ ಮೇಲೆ ಇಷ್ಟಾನಿಷ್ಟಗಳು ನಿಂತಿರುತ್ತವೆ.
ಇದು ದೂರವಾಣಿಯ ಟೆಲಿಮಾರ್ಕೆಟಿಂಗ್ ಕರೆಗಳಿಗೂ ಅನ್ವಯಿಸುತ್ತದೆ. ಡು ನಾಟ್ ಕಾಲ್‌ನಲ್ಲಿ ನೋಂದಾಯಿಸಿಕೊಂಡ ಚಂದಾದಾರರಿಗೆ ಪೂರಾ ಪೂರಾ ಜಾಹಿರಾತು ಕರೆಗಳು ನಿಂತುಹೋದರೆ ಆ ಗ್ರಾಹಕರಿಗೂ ನಷ್ಟ. ಅವರಿಗೆ ಬೇಕಾದ, ಅಗತ್ಯವಾದ ‘ವರ್ಗೀಕೃತ ಜಾಹಿರಾತು’ ಬೇಕೆಂದರೂ ಸಿಗದು. ಅಂದರೆ ಎಲ್ಲ ಕೆಲಸಗಳಿಂದಲೂ ಡಿ.ಎನ್.ಸಿ ವ್ಯವಸ್ಥೆ ಪೂರಕವಲ್ಲ. ಹಾಗೆಂದು ಯೋಚಿಸಿರುವ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ‘ ಡು ಕಾಲ್’ ನೊಂದಣಿಯ ವ್ಯವಸ್ಥೆ ಜಾರಿಗೆ ಸನ್ನದ್ಧವಾಗಿದೆ.
ಏನಿದು ಡು ಕಾಲ್ ?
ಈ ದಾಖಲಾತಿ ವ್ಯವಸ್ಥೆಯಲ್ಲಿ ನೋಂದಾಯಿಸಿಕೊಂಡವರಿಗೆ ಮಾತ್ರ ಇನ್ನೂ ಮುಂದೆ ಟೆಲಿಮಾರ್ಕೆಟಿಂಗ್ ಕರೆಗಳು ಬರುತ್ತವೆ. ಈ ವ್ಯವಸ್ಥೆಯಲ್ಲಿ ದೂರವಾಣಿ ಗ್ರಾಹಕ ತನ್ನ ಆಸಕ್ತಿಯ ಕ್ಷೇತ್ರಗಳನ್ನು ದಾಖಲಿಸಬೇಕು. ಇದರಿಂದ ಆ ವಿಭಾಗದ ಜಾಹಿರಾತು ಕರೆಗಳು ಮಾತ್ರ ಬರುತ್ತವೆ. ಗ್ರಾಹಕನಿಗೆ ದಿನದ ಯಾವ ವೇಳೆಯಲ್ಲಿ ಜಾಹಿರಾತು ಕೇಳಲು ಸಮಯವಿದೆ ಎನ್ನುವುದನ್ನೂ ಸೂಚಿಸಲು ಅವಕಾಶವಿದೆ. ಅಷ್ಟೇಕೆ, ನಿರ್ದಿಷ್ಟ ಕ್ಷೇತ್ರದ ಜಾಹಿರಾತು ಯಾವ ಅವಧಿಯವರೆಗೆ ಆಲಿಸುವ ಆಸಕ್ತಿಯಿದೆ ಎಂಬುದನ್ನೂ ನಿರ್ದೇಶಿಸಬಹುದು. ಉದಾಹರಣೆಗೆ ಓರ್ವ ಗ್ರಾಹಕನಿಗೆ ಬ್ಯಾಂಕ್‌ಸಾಲದ ಬಗ್ಗೆ ಈ ತಿಂಗಳು ಮಾತ್ರ ಮಾಹಿತಿ ಬೇಕು ಎಂದರೆ ಅದೂ ಸಾಧ್ಯ. ಇದನ್ನು ಟೆಲಿ ಮಾರ್ಕೆಟಿಂಗ್ ಕಂಪನಿಗಳು ಗಮನಿಸಿ ಅನುಸರಿಸುತ್ತವೆ. ಟ್ರಾಯ್ ಬರುವ ದಿನಗಳಲ್ಲಿ ಡು ಕಾಲ್ ವ್ಯವಸ್ಥೆಯನ್ನು ಚಾಲ್ತಿಗೆ ತರುವುದು ಖಚಿತ.
ಟ್ರಾಯ್‌ನ ಅಧಿಕೃತ ವೆಬ್‌ಸೈಟ್ www.trai.gov.inನಲ್ಲಿ ಗ್ರಾಹಕರ ದೂರು ದಾಖಲಿಸಲೆಂದೇ ಒಂದು ಪೋರ್ಟಲ್ ಇದೆ. ದುರಂತವೆಂದರೆ ಈ ಕ್ರಮ ಕೇವಲ ಔಪಚಾರಿಕವಾಗಷ್ಟೇ ಇದೆ ಎಂದು ಆರೋಪಿಸುವಂತಾಗಿದೆ. ಗ್ರಾಹಕರು ಈ ಪೋರ್ಟ್‌ಲ್‌ನಲ್ಲಿ ದೂರು ದಾಖಲಿಸಿದರೆ, ಮಾಹಿತಿ ಕೇಳಿದರೆ ಮಾರುತ್ತರವಾಗಲಿ, ಪರಿಹಾರವಾಗಲೀ ಸಿಕ್ಕುವ ಸಂಭಾವ್ಯತೆ ಇಲ್ಲ. ಇದು ಹಲವರ ಗಮನಕ್ಕೆ ಬಂದಿದೆ. ನಿಜಕ್ಕೂ ಟ್ರಾಯ್ ಇದಕ್ಕೊಂದು ವ್ಯವಸ್ಥಿತ ರೂಪ ಕೊಡುವುದು ಅಪೇಕ್ಷಣೀಯ.ಹಾಗಾದರೆ ಇಲ್ಲಿ ದಾಖಲಾಗುವ ದೂರುಗಳನ್ನು ಟ್ರಾಯ್ ಸ್ವತಃ ಗಮನಿಸುವುದರಿಂದ ದೂರವಾಣಿ ಸೇವಾದಾತರು ಟ್ರಾಯ್ ನಿರ್ದೇಶನ, ನಿಯಮಗಳನ್ನು ಯಾವ ಪರಿಯಲ್ಲಿ ಉಲ್ಲಂಘಿಸುತ್ತಿದ್ದಾರೆ ಎಂಬ ಅರಿವು ದಕ್ಕುತ್ತದೆ. ಹೊಸದಾದ ತಿದ್ದುಪಡಿಗಳನ್ನು ರೂಪಿಸಲು ಸಹಕಾರಿಯಾಗುತ್ತದೆ. ಒಂದರ್ಥದಲ್ಲಿ ಸಮರ್ಪಕ ನಿರ್ವಹಣೆ ತೋರಿದರೆ ಈ ಪೋರ್ಟಲ್ ಟ್ರಾಯ್‌ಗೆ ಅತ್ಯುತ್ತಮ. ‘ಫೀಡ್ ಬ್ಯಾಕ್’ ಸಾಧನವೇ ಆಗಬಲ್ಲದು. ಮುಖ್ಯವಾಗಿ ಇದು ಸಾಮಾನ್ಯ ಬಳಕೆದಾರೊಂದಿಗೆ ಟ್ರಾಯ್ ಹೊಂದಿರುವ ಏಕೈಕ ಸಂಪರ್ಕ ಮಾಧ್ಯಮ .ಇನ್ನಾದರೂ ಇದನ್ನು ಗಂಭೀರವಾಗಿ ಪರಿಗಣಿಸುವ ಕೆಲಸ ಆಗಬೇಕು.
ಈ ಮಧ್ಯೆ ಟ್ರಾಯ್ ಅಧ್ಯಕ್ಷ ಶರ್ಮರ ತಲೆಯಲ್ಲಿ ಹೊಸದೊಂದು ವಿಚಾರವೇ ಸುಳಿದಾಡುತ್ತಿದೆ. ಬರುವ ದಿನಗಳಲ್ಲಿ ನೊಂದಾಯಿತ ಗ್ರಾಹಕ ಸಂಘಟನೆಗಳಿಗೆಂದೇ ಒಂದು ಪ್ರತ್ಯೇಕ ವಿಭಾಗವನ್ನು ತನ್ನ ವೆಬ್‌ಸೈಟ್‌ನಲ್ಲಿ ಆರಂಭಿಸಲಿದೆ. ಇದು ಟ್ರಾಯ್‌ನೊಂದಿಗೆ ಈ ಸಂಘಟನೆಗಳಿಗೆ ನೇರ ಸಂಪರ್ಕ ಮಾಧ್ಯಮ. ಸಂಘಟನೆಗಳಿಗೆ ಪ್ರತ್ಯೇಕ ಪಾಸ್‌ವರ್ಡ್‌ಗಳನ್ನು ನೀಡಲಾಗುತ್ತದೆ. ಅಂದರೆ ಇಲ್ಲಿ ಬೇರೆಯವರಿಗೆ ಪ್ರವೇಶವಿಲ್ಲ. ವಾಸ್ತವವಾಗಿ ತಳ ಮಟ್ಟದ ದೂರವಾಣಿ ಚಂದಾದಾರರ ಸಮಸ್ಯೆಗಳ ಅರಿವಿರುವ ಬಳಕೆದಾರರ ವೇದಿಕೆಗಳಿಗೆ ಈ ಪೋರ್ಟಲ್ ಹೆಚ್ಚಿನ ಅನುಕೂಲ ಒದಗಿಸುತ್ತದೆ. ಪ್ರತಿ ಸಂಘಟನೆಗಳಿಂದ ಜಿಲ್ಲಾ ಮಟ್ಟದ ದೂರು ದಾಖಲಾತಿ ಕೇಂದ್ರಗಳನ್ನು ರೂಪಿಸಲೂ ಟ್ರಾಯ್ ಯೋಚಿಸಿದೆ. ಇದರಿಂದ ಪ್ರಾದೇಶಿಕ ಭಾಷೆಯ ಚಂದಾದಾರರಿಗೆ ಹೆಚ್ಚಿನ ಅನುಕೂಲವಾದೀತು.
ಇನ್ನೆಷ್ಟು ದಿನ ಬ್ಲಾಕ್‌ಔಟ್?
ಮೊಬೈಲ್ ಕಂಪನಿಗಳಿಗೆ ಟ್ರಾಯ್ ಒದಗಿಸಿರುವ ಒಂದು ವಿಶೇಷ ರಿಯಾಯ್ತಿಯೆಂದರೆ ಬ್ಲಾಕ್‌ಔಟ್ ಡೇ ಸೌಲಭ್ಯ. ಈ ಪ್ರಕಾರ ವರ್ಷದ ಗರಿಷ್ಠ ಐದು ದಿನಗಳಲ್ಲಿ ಮೊಬೈಲ್ ಸೇವಾದಾತರು ತಾವು ಕೊಡುತ್ತಿರುವ ಉಚಿತ ಅಥವಾ ರಿಯಾಯ್ತಿಯ ಎಸ್‌ಎಂಎಸ್‌ನ ಸೇವೆಯನ್ನು ರದ್ದುಗೊಳಿಸಬಹುದು. ನಿಜಕ್ಕಾದರೆ ಟ್ರಾಯ್ ಈ ರಿಯಾಯತಿಗೆ ಒಂದು ಸಮಯ ಮಿತಿಯನ್ನು ನಿಗದಿಪಡಿಸಬೇಕಾಗಿತ್ತು. ಒಂದು ಅಥವಾ ಎರಡು ವರ್ಷಗಳೊಳಗೆ ಈ ರಿಯಾಯತಿಯನ್ನು ಹಿಂಪಡೆಯುವ ಷರತ್ತು ನಿಗದಿಪಡಿಸಬೇಕಿತ್ತು. ಈವರೆಗೆ ಟ್ರಾಯ್ ಅವಧಿಯನ್ನು ನಿಗದಿಪಡಿಸಿಲ್ಲ. ನಿರ್ದಿಷ್ಟ ಕಾಲದ ಅಂತರದಲ್ಲಿ ಮೊಬೈಲ್ ಸೇವಾದಾತರು ತಮ್ಮ ತಾಂತ್ರಿಕತೆಯನ್ನು ಉನ್ನತೀಕರಿಸಿ ತನ್ನೆಲ್ಲ ಚಂದಾದಾರರು ಒಮ್ಮೆಗೆ ಎಸ್‌ಎಂಎಸ್ ಮಾಡಿದರೂ ಗುಣಮಟ್ಟ ಕುಸಿಯದಂತೆ ನೋಡಿಕೊಳ್ಳುವ ಹಂತಕ್ಕೆ ಬರಬೇಕಿತ್ತು. ಈ ಬ್ಲಾಕ್‌ಔಟ್ ನಿಯಮದಿಂದಾಗಿ ಎಸ್‌ಎಂಎಸ್ ಪ್ಯಾಕೇಜ್ ಅಳವಡಿಸಿಕೊಂಡು ಹೆಚ್ಚುವರಿ ಶುಲ್ಕ ಪಾವತಿಸಿದ ಗ್ರಾಹಕರಿಗೆ ನಷ್ಟವಾಗುವುದು ವಿಪರ್ಯಾಸ. ದೃಷ್ಟಾಂತ ಬೇಕೆಂದರೆ ಮುಂದೆ ಓದಿ. ವಡಾಫೋನಿನ ಮಣಿಪಾಲ್ ಪ್ಲಾನಿನಲ್ಲಿ ದಿನಕ್ಕೆ ಒಂದು ರೂಪಾಯಿ ಬಾಡಿಗೆ. ಆ ದಿನಕ್ಕೆ ೧೦೦ ಎಸ್‌ಎಂಎಸ್ ಉಚಿತ! ವರ್ಷದ ೩೬೦ ದಿನವೂ ಬಾಡಿಗೆ ತೆರುವ ಗ್ರಾಹಕ ಹೊಸ ವರ್ಷ ದೀಪಾವಳಿ, ವ್ಯಾಲಂಟೈನ್ಸ್ ಡೇಗಳಂತ ಸಂದರ್ಭದಲ್ಲಿ ಮಾತ್ರ ದುಬಾರಿ ಶುಲ್ಕದ ಎಸ್‌ಎಂಎಸ್ ಮಾಡಬೇಕು. ಉಚಿತ ಇಲ್ಲ. ಕಾರಣ ಬ್ಲಾಕ್‌ಔಟ್ ಡೇ! ನ್ಯಾಯವೇ?
ಈ ಹಿನ್ನೆಲೆಯಲ್ಲಿ ಟ್ರಾಯ್ ಈ ನಿಮಯವನ್ನು ಪುನರ್ವಿಮರ್ಶಿಸಬೇಕು ಹಾಗೂ ತಿದ್ದುಪಡಿಗಳನ್ನು ಅಳವಡಿಸಬೇಕೆಂದು ದೆಹಲಿ ಸಭೆಯಲ್ಲಿ ಒತ್ತಾಯಿಸಲಾಗಿದೆ. ತಕ್ಷಣಕ್ಕೆ ನಿಯಮದ ರದ್ದು ಸಾಧ್ಯವಿಲ್ಲವೆಂದಾದರೆ ೨೦೧೦ರಿಂದ ಇದಕ್ಕೆ ಕೆಲವು ಷರತ್ತುಗಳನ್ನು ವಿಧಿಸಲು ಟ್ರಾಯ್‌ಗೆ ಸೂಚಿಸಲಾಗಿದೆ.
ಅವುಗಳೆಂದರೆ (೧) ಗರಿಷ್ಠ ಐದು ಬ್ಲಾಕ್‌ಔಟ್ ದಿನಗಳಲ್ಲಿ ಸತತ ಎರಡು ದಿನ ಬ್ಲಾಕ್‌ಔಟ್ ಮಾಡದಿರಲು ನಿರ್ಬಂಧ. ಪ್ರಸ್ತುತ ಡಿಸೆಂಬರ್ ೩೧ ಹಾಗೂ ಜನವರಿ ಒಂದು, ಫೆಬ್ರುವರಿ ೧೩, ೧೪ರ ದಿನ ಬ್ಲಾಕ್‌ಔಟ್ ಮಾಡುವ ಕ್ರಮ ಜಾರಿಯಲ್ಲಿದೆ.
(೨) ತಮ್ಮ ಪ್ಲಾನ್‌ನಲ್ಲಿಯೇ ಉಚಿತ ಯಾ ರಿಯಾಯ್ತಿ ಎಸ್‌ಎಂಎಸ್ ಪಡೆದವರಿಗೆ ಈ ದಿನಗಳಲ್ಲಿ ಸ್ವಲ್ಪ ಪ್ರಮಾಣದಲ್ಲಾದರೂ ಉಚಿತ, ರಿಯಾಯ್ತಿ ಎಸ್‌ಎಂಎಸ್ ಕೊಡಬೇಕು. ಉದಾಹರಣೆಗೆ ದೈನಿಕ ೧೦೦ ಎಸ್‌ಎಂಎಸ್ ಇರುವವರಿಗೆ ಆ ದಿನದ ಮಟ್ಟಿಗೆ ಉಚಿತ ೨೦, ಶೇ.೨೦ರ ದರದಲ್ಲಿ.
(೩) ಬ್ಲಾಕ್‌ಔಟ್ ದಿನವನ್ನು ಅದರ ಹಿಂದಿನ ದಿನ ಎಲ್ಲಾ ಗ್ರಾಹಕರಿಗೆ ತಿಳಿಸಿ ಸೇವಾದಾತ ಎಸ್‌ಎಂಎಸ್ ಸೂಚನೆ ಒದಗಿಸಬೇಕು. ಪ್ರಸ್ತುತ ಪೂರ್ವ ಸೂಚನೆ ನೀಡಬೇಕೆಂಬ ನಿಯಮವಿದ್ದರೂ ಪಾಲನೆಯಾಗುತ್ತಿಲ್ಲ.
ಸೆಕೆಂಡ್ ಮಾತು!
ಈ ಹಿಂದೆ ಜೂನ್‌ನಲ್ಲಿ ಮೈಸೂರಿನಲ್ಲಿ ದಕ್ಷಿಣ ಭಾರತದ ಗ್ರಾಹಕ ಸಂಘಟನೆಗಳ ತರಬೇತಿ ಕಾರ್ಯಾಗಾರವನ್ನು ಟ್ರಾಯ್‌ನಿಂದ ಹಮ್ಮಿಕೊಳ್ಳಲಾಗಿತ್ತು. ಕಾರ‍್ಯಾಗಾರದಲ್ಲಿ ಕರೆಯ ಪಲ್ಸ್ ದರವನ್ನು ಸೆಕೆಂಡ್‌ಗಳಲ್ಲಿ ಜಾರಿಗೊಳಿಸಲು ಟ್ರಾಯ್‌ನ್ನು ಒತ್ತಾಯಿಲಾಗಿತ್ತು. ವಿಪರೀತ ಎನ್ನಿಸುವಷ್ಟು ಕಾಲ್ ಡ್ರಾಪ್ ಪ್ರಮಾಣವಿರುವುದರಿಂದ ಟ್ರಾಯ್ ಕೂಡ ತಾತ್ವಿಕವಾಗಿ ಒಪ್ಪಿತ್ತು. ಜೊತೆಗೆ ಅಡೆತಡೆಗಳನ್ನು ಪಟ್ಟಿ ಮಾಡಿತ್ತು. ಒಂದರ್ಥದಲ್ಲಿ ಅದೂ ಕೂಡ ಸಮರ್ಪಕವಾದುದು. ಟ್ರಾಯ್ ಎಂಬ ಈ ಸ್ವಾಯತ್ತ ಸಂಸ್ಥೆ ಗ್ರಾಹಕರ ಪರವಿರುವ ಪೂರಾಪೂರ ವ್ಯವಸ್ಥೆಯಲ್ಲ. ಅತ್ತ ಗ್ರಾಹಕರಿಗೆ, ಇತ್ತ ಸೇವಾದಾತರಿಗೆ ಅನ್ಯಾಯವಾಗದ ಹಾಗೆ ನೋಡಿಕೊಳ್ಳುವ ಮತ್ತು ಅದೇ ಕಾಲದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ವಾತಾವರಣ ಸೃಷ್ಟಿಯಾಗುವಂತಾಗಲೂ ನೋಡಿಕೊಳ್ಳುತ್ತದೆ. ಆ ಲೆಕ್ಕದಲ್ಲಿ ಟ್ರಾಯ್ ಒಮ್ಮೆಗೇ ಒಂದು ತೀರ್ಮಾನಕ್ಕೆ ಬರುವುದಿಲ್ಲ.
ಸ್ವಾರಸ್ಯವೆಂದರೆ, ಟ್ರಾಯ್ ಇನ್ನೂ ಮೀನಾಮೇಷ ಎಣಿಸುತ್ತಿರುವಾಗಲೇ ಟಾಟಾ ಡೊಕೋಮೋ, ಏರ್‌ಸೆಲ್ ಹಾಗೂ ಬಿಎಸ್‌ಎನ್‌ಎಲ್ ಸೆಕೆಂಡ್‌ಗಳ ಪಲ್ಸ್ ದರವನ್ನು ಜಾರಿಗೆ ತಂದಾಗಿತ್ತು! ಈಗ ಟ್ರಾಯ್ ಎಲ್ಲ ಮೊಬೈಲ್ ಸೇವಾದಾತರು ಗ್ರಾಹಕರಿಗೆ ಸೆಕೆಂಡ್‌ಗಳ ಪಲ್ಸ್ ದರದ ನಿಯಮವನ್ನು ಜಾರಿಗೆ ತರಲು ಸಿದ್ಧತೆಗಳನ್ನು ನಡೆಸಿದೆ. ಟ್ರಾಯ್ ನೇರವಾಗಿ ಸೆಕೆಂಡ್‌ಗಳ ಪಲ್ಸ್ ದರದ ಮಾದರಿಗೂ ಸಿದ್ಧವಿರಲಿಲ್ಲ. ಅದರ ಪ್ರಕಾರ, ಪ್ರತಿ ಕರೆ ‘ಏರ್ಪಡಿಸಲು’ ಕೆಲ ಖರ್ಚು ಇರುವುದರಿಂದ ಒಂದು ಕನಿಷ್ಟ ಶುಲ್ಕ ನಿಗದಿಪಡಿಸಿ ನಂತರದ ಪ್ರತಿ ಸೆಕೆಂಡ್‌ಗೆ ದರ ನಿಗದಿಪಡಿಸುವ ಯೋಚನೆಯಲ್ಲಿತ್ತು. ಒಂದು ರೀತಿಯಲ್ಲಿ ಆಟೋ ಮೀಟರ್ ವ್ಯವಸ್ಥೆಯ ಮಾದರಿಯಲ್ಲಿ. ಮೊಬೈಲ್ ಕಂಪನಿಗಳಿಗೆ ಗೊತ್ತು, ಈ ಭಾರತೀಯರು ಮಾತಿನ ಮಲ್ಲರು. ಸೆಕೆಂಡ್‌ಗಳು ನಿಮಿಷಗಳಾಗೇ ತೀರುತ್ತವೆ! ನಿಮಿಷಕ್ಕೆ ೬೦ ಪೈಸೆಯಾಗುವ ಸೆಕೆಂಡ್ ಪಲ್ಸ್ ದರ ಮೊಬೈಲ್ ಸೇವಾದಾತರು ಕರೆ ದರವನ್ನು ೩೦ - ೫೦ ಪೈಸೆಯಿಂದ ೬೦ ಪೈಸೆಗೆ ಹೆಚ್ಚಿಸಿದಂತೆಯೂ ಆದೀತು!! ಹಾಗಾಗಿ ಅವು ಮೊದಲ ಸೆಕೆಂಡ್‌ನಿಂದಲೇ ಪಲ್ಸ್ ದರ ನಿಗದಿಪಡಿಸಿವೆ. ಕನಿಷ್ಟ ಶುಲ್ಕದ ಗೋಜಿಗೆ ಹೋಗಿಲ್ಲ. ಈಗಾಗಲೇ ಟಾಟಾ ಡೊಕೋಮೋ ತನ್ನ ಯೋಜನೆಗಳು ಆರು ತಿಂಗಳ ನಂತರವೂ ಮುಂದುವರೆಯುವುದನ್ನು ಸ್ಪಷ್ಟಪಡಿಸಿದೆ. ಇದೀಗ ಏರ್‌ಸೆಲ್ ಸೆಕೆಂಡ್‌ಗಳ ಪಲ್ಸ್ ದರಕ್ಕೆ ಹೆಜ್ಜೆ ಹಾಕಿದೆ. ಇದು ಖುದ್ದು ಟ್ರಾಯ್ ಉಗುಳು ನುಂಗಬೇಕಾದ ಪರಿಸ್ಥಿತಿ!
ಸೆಕೆಂಡ್‌ಗಳ ಪಲ್ಸ್ ದರದ ಕೂಗಿಗೆ ಇನ್ನೊಂದು ಕಾರಣವಿದೆ. ಇಂದು ನಾವು ಖರೀದಿಸುವುದು ಟಾಕ್‌ಟೈಮ್. ನಿಮಿಷದ ಪಲ್ಸ್‌ನಲ್ಲಿ ೧೦ ಸೆಕೆಂಡ್ ಮಾತನಾಡಿದರೂ ಟಾಕ್‌ಟೈಮ್‌ನಲ್ಲಿ ಉಳಿದ ೯೦ ಪೈಸೆಯ ನಷ್ಟ. ಅಂದರೆ ಸೇವಾದಾತರಿಗೆ ಸೇವೆ ಒದಗಿಸದೆಯೂ ಅದೆಷ್ಟೋ ಕೋಟಿ ರೂಪಾಯಿ ಖಜಾನೆಗೆ ಬಂದಂತೆ. ಈ ಹಿನ್ನೆಲೆಯಲ್ಲಿಯೂ ಸೆಕೆಂಡ್ ಪಲ್ಸ್‌ನ್ನು ಗ್ರಾಹಕ ಸಂಘಟನೆಗಳು ಒತ್ತಾಯಿಸಿದ್ದವು.
ಇಂದು ಮೊಬೈಲ್ ನಂತರದಲ್ಲಿ ತೀವ್ರ ಬೆಳವಣಿಗೆ ಕಾಣುತ್ತಿರುವುದು ಡೈರೆಕ್ಟ್ ಟು ಹೋಂ ಸರ್ವೀಸ್. ಆದರೆ ಟ್ರಾಯ್‌ನ ನಿಯಮ, ನಿರ್ದೇಶನಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಅನುಸರಿಸಲಾಗಿರುವುದೂ ಇಲ್ಲಿಯೇ. ನಿಯಮ ಪ್ರಕಾರ ಅವು ಉಚಿತ ಗ್ರಾಹಕ ದೂರು ಸಂಖ್ಯೆ ಒದಗಿಸಬೇಕು. ಇವತ್ತಿಗೂ ಕೇವಲ ಎರಡು ಸೇವಾದಾತರು ಮಾತ್ರ ಉಚಿತ ಗ್ರಾಹಕ ಕರೆ ನಂಬರ್ ಒದಗಿಸಿದ್ದು, ಅವೆಂದರೆ ರಿಲಯನ್ಸ್ ಹಾಗೂ ಏರ್‌ಟೆಲ್. ಉಳಿದ ನಾಲ್ಕು ಸೇವಾದಾತರು ಈವರೆಗೆ ಉಚಿತ ಕರೆಸಂಖ್ಯೆಯನ್ನೇ ಒದಗಿಸಿಲ್ಲ. ಇನ್ನು ಗ್ರಾಹಕ ದೂರು ಪರಿಹಾರ ಕ್ರಮಗಳಾದ ನೋಡಲ್ ಆಫೀಸರ್, ಅಪಲೇಟ್ ಅಥಾರಿಟಿಗಳೆಲ್ಲ ದೂರದ ಮಾತು. ಟ್ರಾಯ್ ಇತ್ತ ಗಮನ ಹರಿಸದಿದ್ದರೆ ನಡೆಯುತ್ತಿರುವ ಹಗಲುದರೋಡೆ ಮಿತಿಮೀರೀತು ಎಂದು ಟ್ರಾಯ್‌ನ ದೆಹಲಿ ಸಭೆಯಲ್ಲಿ ಪಾಲ್ಗೊಂಡ ಸಾಗರದ ಬಳಕೆದಾರರ ವೇದಿಕೆ ಕಳವಳ ವ್ಯಕ್ತಪಡಿಸಿತು.
ಒಂದಂತೂ ನಿಜ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಸುಮ್ಮಸುಮ್ಮನೆ ನಿಯಮಗಳನ್ನು ಜಾರಿಗೆ ತರುವುದಿಲ್ಲ. ಪ್ರತಿ ನಿಯಮ ಜಾರಿಗೆ ಮುನ್ನ ಎಲ್ಲ ಸಂಬಂಧಪಟ್ಟ ವರ್ಗದ ಅಭಿಪ್ರಾಯ ಪಡೆದೇ ಮುಂದಿನ ಹೆಜ್ಜೆ ರೂಪಿಸುತ್ತದೆ. ಟೀಕೆಗಳ ಹೊರತಾಗಿಯೂ ಟ್ರಾಯ್ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಗಾಳಿ ತಂದಿರುವುದು ಎದ್ದು ಕಾಣುತ್ತದೆ.
-ಮಾವೆಂಸ


ಗುರುವಾರ, ಅಕ್ಟೋಬರ್ 8, 2009

ತೀರ್ಪು ಕೊಡುವವರು ಬೇಕಾಗಿದ್ದಾರೆ!

======
ಬಿಸಿಸಿಐ ಸಂಸ್ಥೆ ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನಲ್ಲಿ ವಿಶೇಷ ಪ್ರಭಾವ ಹೊಂದಿರುವ ದಿನಗಳಿವು. ಇಂತಹ ವೇಳೆ ಬಿಸಿಸಿಐನ ಅತಿ ಹಿರಿಯ ಅಧಿಕಾರಿಯೋರ್ವರ ಮನೆಯಲ್ಲಿ ಅವರ ಪುತ್ರನ ಮದುವೆ. ಖುದ್ದು ಬಿಸಿಸಿಐ ಕೂಡ ಆ ದಿನದ ತನ್ನ ಕಾರ್ಯಕಾರಿ ಸಭೆಯನ್ನು ಮದುವೆ ನಡೆವ ನಗರಕ್ಕೆ ಸ್ಥಳಾಂತರಿಸಲಾಗಿತ್ತು! ಅವತ್ತು ಮದುವೆಯ ಆರತಕ್ಷತೆಯಲ್ಲಿ ಭಾರತದ ಪ್ರಥಮ ದರ್ಜೆ ಅಂಪೈರ್‌ಗಳಲ್ಲಿ ಬಹುಸಂಖ್ಯಾತರು ಹಾಜರಿದ್ದರು. ಆಹ್ವಾನ ಪತ್ರಿಕೆ ಇಲ್ಲದ ಅಂಪೈರ್‌ಗಳೂ ಮುದ್ದಾಂ ಬಂದಿದ್ದರು ಎಂದರೆ?
ಆ ದಿನದ ಅಂಪೈರ್‌ಗಳ ಉಪಸ್ಥಿತಿ ನೋಡಿದವರು ಒಂದು ಮಾತು ಹೇಳಿದ್ದುಂಟು, ‘ಅಂಪೈರ್ ಸಮಾವೇಶ ನಡೆದಾಗಲೂ ಇಷ್ಟು ಮಂದಿ ಭಾರತೀಯ ಅಂಪೈರ್‌ಗಳು ಒಂದೆಡೆ ಸೇರಿದ್ದಿಲ್ಲ!’ ಹೆಸರು ಪ್ರಕಟಿಸಲಿಚ್ಛಿಸದ ಅಂಪೈರ್‌ರೋರ್ವರು ಹೇಳುವುದೇ ಬೇರೆ, "ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಟಾಪ್ ಬಿಸಿಸಿಐ ಅಧಿಕಾರಿಗಳಿಗೆ ಪರಿಚಿತರಾಗುವುದರಿಂದ ಕ್ಯಾರಿಯರ್‌ಗೆ ಅನುಕೂಲವಾಗುತ್ತದೆ. ಪಂದ್ಯಗಳಿಗೆ ಅವರು ವಶೀಲಿ ಮಾಡಿ ಪೋಸ್ಟಿಂಗ್ ಮಾಡುತ್ತಾರೆ ಗೊತ್ತೇ?"
ನಿಜ, ಅಂಪೈರ್‌ಗಳದು ಕೃತಜ್ಞತೆರಹಿತ ಉದ್ಯೋಗ. ಹನ್ನೊಂದು ಅತ್ಯುತ್ತಮ ನಿರ್ಣಯಗಳಿಗೆ ಸಲ್ಲಬೇಕಾದ ಶ್ಲಾಘನೆಯು ಒಂದೇ ಒಂದು ಪುಟ್ಟ ತಪ್ಪಿಗೆ ಕೊಚ್ಚಿ ಹೋಗಿಬಿಡುತ್ತದೆ. ಪಂದ್ಯದುದ್ದಕ್ಕೂ ಬಿಸಿಲಿನಲ್ಲಿ ಬಸವಳಿದು, ಏಕಾಗ್ರತೆ ಕಾಯ್ದುಕೊಂಡು ಪಂದ್ಯವನ್ನು ನಿರ್ವಹಿಸುವ ಅವರ ತಾಕತ್ತನ್ನು ಗಮನಿಸುವವರು ಕಡಿಮೆ. ನಿಜಕ್ಕಾದರೆ, ಆಟಗಾರರಿಗೆ ಇರುವಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ಫಿಟ್‌ನೆಸ್ ಅಂಪೈರ್‌ಗಳಿಗಿರಬೇಕು. ಅಲ್ವೆ ಮತ್ತೇ, ದಿನದ ೯೦-೧೦೦ ಓವರ್‌ಗಳುದ್ದಕ್ಕೂ ನಿಂತುಕೊಂಡೇ ಇರಬೇಕಾದ ಅಂಪೈರಿಂಗ್‌ನ ಆ ಒಂದು ಜವಾಬ್ದಾರಿಗೇ ಎಷ್ಟು ಸಾಮರ್ಥ್ಯವಿದ್ದರೂ ಬೇಕು.
ಆದರೆ ಭಾರತೀಯ ಅಂಪೈರ್‌ಗಳ ದುರಂತವೇ ಬೇರೆ. ಅವರು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ, ಅಂತರ್ರಾಷ್ಟ್ರೀಯ ಮಟ್ಟಕ್ಕೆ ಏರಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವ ಕುರಿತು ವರದಿಗಳಿಲ್ಲ. ಅಂಪೈರಿಂಗ್‌ಗೆ ಬೇಕಾದ ಚಾಕಚಕ್ಯತೆಯನ್ನು ಮೈಗೂಡಿಸಿಕೊಳ್ಳುತ್ತಿಲ್ಲ. ಪರಿಣಾಮವಾಗಿ ಭಾರತೀಯ ಅಂಪೈರ್‌ಗಳ ಗುಣಮಟ್ಟ ವಿಪರೀತವೆನ್ನಿಸುವಷ್ಟು ಕುಸಿದಿದೆ. ಇವತ್ತು ಐಸಿಸಿ ಎಲೈಟ್ ಪ್ಯಾನೆಲ್‌ನಲ್ಲಿ ಭಾರತದ ಒಬ್ಬಾನೊಬ್ಬ ಅಂಪೈರ್ ಕೂಡ ಇಲ್ಲ. ಅವಮಾನ!
ಏನಿದು ಎಲೈಟ್ ಪ್ಯಾನೆಲ್?
ಐಸಿಸಿಯ ಟೆಸ್ಟ್ ಮಾನ್ಯ ರಾಷ್ಟ್ರಗಳು ತಮ್ಮ ದೇಶದ ಅತ್ಯುತ್ತಮ ಅಂಪೈರ್‌ರ ಹೆಸರನ್ನು ಶೀಫಾರಸು ಮಾಡುತ್ತವೆ. ಆ ಅಂಪೈರ್‌ಗಳ ಹಿಂದಿನ ದಾಖಲೆ, ನಾಯಕ-ರೆಫ್ರಿಯರ ವರದಿಗಳನ್ನು ಪರಿಶೀಲಿಸಿ ಅವರನ್ನು ಒಂದು ವಿಶಿಷ್ಟ ಗುಂಪಿನೊಳಗೆ ಸೇರಿಸಿಕೊಳ್ಳಲು ಐಸಿಸಿ ತೀರ್ಮಾನಿಸುತ್ತದೆ. ಅದೇ ಎಮಿರೇಟ್ಸ್ ಎಲೈಟ್ ಪ್ಯಾನೆಲ್. ಈ ಅಂಪೈರ್‌ಗಳು ಮಾತ್ರ ಟೆಸ್ಟ್ ಪಂದ್ಯಗಳಲ್ಲಿ ಕಾರ್ಯ ನಿರ್ವಹಿಸಲು ಅರ್ಹರಾಗಿರುತ್ತಾರೆ. ಪ್ರಸ್ತುತ ಬಿಲ್ಲಿ ಬೌಡೆನ್, ಸ್ಟೀವ್ ಬಕ್ನರ್, ಅಲೀಂ ಧರ್, ಡರೆಲ್ ಹೇರ್, ಡರೆಲ್ ಹಾರ್ಪರ್, ರುಡಿ ಕುರ್ಟಿಜೆನ್, ಸೈಮನ್ ಟಾಫೆಲ್ ಮಾತ್ರ ಈಗ ಈ ಎಲೈಟ್ ಪ್ಯಾನೆಲ್‌ನಲ್ಲಿದ್ದಾರೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಬಿಸಿಸಿಐಗೆ ಈ ಗುಂಪಿಗೆ ಸಮರ್ಥ ಶಿಫಾರಸು ಮಾಡಲೂ ಭಾರತದಲ್ಲೊಬ್ಬ ಅರ್ಹ ಅಂಪೈರ್ ಸಿಕ್ಕಿಲ್ಲ!
೨೦೦೪ರಲ್ಲಿ ಎಸ್.ವೆಂಕಟರಾಘವನ್ ಅಂಪೈರಿಂಗ್ ಹುದ್ದೆಯಿಂದ ನಿವೃತ್ತಿ ಹೊಂದಿದರು, ಅವರು ಎಲೈಟ್ ಗುಂಪಿನಲ್ಲಿದ್ದವರು. ಅಂಪೈರಿಂಗ್‌ನ ಕೊನೆಯ ದಿನಗಳಲ್ಲಿ ವೆಂಕಟ್‌ರ ತೋರುಬೆರಳಿನ ಬಗ್ಗೆ ಸಾಕಷ್ಟು ಅಸಮಾಧಾನ ಕೇಳಿಬಂದಿದ್ದು ಮತ್ತು ಎಲೈಟ್ ಗುಂಪಿನಿಂದ ಕೈಬಿಡುವುದರ ಬದಲು ಐಸಿಸಿ ಗೌರವಯುತವಾಗಿ ನಿವೃತ್ತರಾಗಲು ಸೂಚಿಸಿತ್ತೆನ್ನುವುದು ಬೇರೆಯದೇ ವಿಷಯ. ನಂತರದ ಈ ಐದು ವರ್ಷಗಳಲ್ಲಿ ಎಲೈಟ್ ಗುಂಪಿನಲ್ಲಿ ಭಾರತದ ಪ್ರತಿನಿಧಿಯಿಲ್ಲ. ಜೊತೆಗೆ ದಿನದಿಂದ ದಿನಕ್ಕೆ ದೇಶದೊಳಗಿನ ಅಂಪೈರ್‌ಗಳ ಗುಣಮಟ್ಟ ಕುಸಿಯುತ್ತಲೇ ಹೋಗುತ್ತಿದೆ.
ಬಿಸಿಸಿಐ ಈ ಕುರಿತು ಎಚ್ಚೆತ್ತುಕೊಳ್ಳಲೇಇಲ್ಲ ಎನ್ನುವಂತಿಲ್ಲ. ಜಗ್‌ಮೋಹನ್ ದಾಲ್ಮಿಯಾ ಬಿಸಿಸಿಐನ ಅಧ್ಯಕ್ಷರಾಗಿದ್ದಾಗಲೇ ಒಮ್ಮೆ ರಾಷ್ಟ್ರದ ಐದು ಟಾಪ್ ಅಂಪೈರ್‌ರನ್ನು ಒಳಗೊಂಡ ಎಂಟು ಜನರ ಸಮಿತಿ ಸಭೆಯನ್ನು ಆಯೋಜಿಸಿತ್ತು. ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಆವರಣದಲ್ಲಿಯೇ ಅಂಪೈರಿಂಗ್ ಅಕಾಡೆಮಿಯನ್ನೂ ಆರಂಭಿಸಲು ತೀರ್ಮಾನಿಸಲಾಯಿತು. ವಿಪರ್ಯಾಸವೆಂದರೆ, ಸದರಿ ಅಕಾಡೆಮಿಯೂ ನಿರೀಕ್ಷಿತ ಫಲಿತಾಂಶವನ್ನು ನೀಡಿಲ್ಲ. ದುರಂತ, ದುರಂತ.....ಅಂಪೈರ್‌ಗಳು ಈಗಲೂ ಬಿಸಿಸಿಐ ಅಧಿಕಾರಿಗಳ ಮನೆ ಮದುವೆಯ ಆಹ್ವಾನವನ್ನೇ ಆಶಿಸುತ್ತಿದ್ದಾರೆ!
ಆ ಸಮಯದಲ್ಲಿಯೂ ಭಾರತದಲ್ಲಿ ಅಂಪೈರ್‌ಗಳಿಗೆ ಸಂಖ್ಯೆಯಲ್ಲಿ ಕೊರತೆ ಇರಲಿಲ್ಲ. ಐದು ವಲಯಗಳಿಂದ ೧೪೬ ಅಂಪೈರ್‌ಗಳು ಬಿಸಿಸಿಐ ಪಟ್ಟಿಯಲ್ಲಿದ್ದರು. ರಣಜಿ ಪ್ಯಾನೆಲ್‌ನಲ್ಲಿ ೬೯ ಮತ್ತು ಇತರ ಸರ್ವರ ಗುಂಪಿನಲ್ಲಿ ೭೭ ಜನರಿದ್ದರು. ಎ.ವಿ.ಜಯಪ್ರಕಾಶ್, ಕೆ.ಹರಿಹರನ್, ಬಿ.ವಿ.ಜಮೂಲಾ, ಸುಶಾಂತ್ ನಾಥುರ್, ಆಸ್ವಾನಿಯರಂತ ಅಂಪೈರ್‌ಗಳು ದೇಶದ ಸೇವೆಯಲ್ಲಿದ್ದರು. ಊಹ್ಞೂ, ಅದಕ್ಕಿಂತ ಮುಂದೆ ಹೋಗಲು ಈ ಐದು ವರ್ಷಗಳಲ್ಲಿ ಒಬ್ಬರಿಗೂ ಸಾಧ್ಯವಾಗಿಲ್ಲ.
ಪುಟ್ಟ ಸಮಾಧಾನವೆಂದರೆ, ಐಸಿಸಿಯ ಎಮಿರೇಟ್ಸ್ ಇಂಟರ್‌ನ್ಯಾಷನಲ್ ಪ್ಯಾನೆಲ್‌ನಲ್ಲಿ ಭಾರತದ ಮೂವರು ಸ್ಥಾನ ಪಡೆದಿದ್ದಾರೆ. ಈ ಅಂಪೈರ್‌ಗಳು ಸ್ವದೇಶದ ಏಕದಿನ, ಟಿ೨೦ ಪಂದ್ಯಗಳಲ್ಲಿ ಕಾರ್ಯ ನಿರ್ವಹಿಸಬಹುದು. ಒಂದೊಮ್ಮೆ ಎಲೈಟ್ ಪ್ಯಾನೆಲ್‌ನ ಅಷ್ಟೂ ಅಂಪೈರ್‌ಗಳು ಲಭ್ಯರಿರದಿದ್ದರೆ, ಅನಿವಾರ್ಯತೆ ಬಿದ್ದರೆ ಈ ಅಂಪೈರ್‌ಗಳೂ ಟೆಸ್ಟ್‌ನಲ್ಲಿ ತೀರ್ಪುಗಾರರಾಗಬಹುದು. ನೆನಪಿರಲಿ, ಇಂತಹ ಅವಕಾಶ ಅಪರೂಪದಲ್ಲಿ ಅಪರೂಪ. ಅಷ್ಟಕ್ಕೂ ಇದು ಯಾವ ದೇಶಕ್ಕೂ ಗೌರವ ಕೊಡುವ ವಿಚಾರವೇನಲ್ಲ. ಇರಲಿ, ಪ್ರಸ್ತುತ ಹರಿಹರನ್ ಕೃಷ್ಣನ್, ಎ.ವಿ.ಜಯಪ್ರಕಾಶ್, ಐ.ಶಿವರಾಂ ಭಾರತದ ಇಂಟರ್‌ನ್ಯಾಷನಲ್ ಅಂಪೈರ್ ಆಗಿ ಕೆಲಸ ಮಾಡುತ್ತಿದ್ದಾರೆ. ನಿಜಕ್ಕಾದರೆ ಬಿಸಿಸಿಐನ ತಳಮಳ ಐಪಿಎಲ್ ಬಂದಮೇಲೆ ಹೆಚ್ಚಾಗಿದೆ!
ಪ್ರೀಮಿಯರ್ ಅಂಪೈರ್ ಪರಿಪಾಟಲು!
ಕಳೆದ ಎರಡು ವರ್ಷಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ ೨೦ ಕ್ರಿಕೆಟ್ ಟೂರ್ನಿ ನಡೆಯುತ್ತಿದೆ. ಇದು ಐಸಿಸಿಗೆ ಸಂಬಂಧಪಡದ ಸ್ಪರ್ಧೆ. ಭಾರತದ ಪ್ರಥಮ ದರ್ಜೆ ಕ್ರಿಕೆಟ್ ಕೂಡ ಅಲ್ಲ. ಆದರೆ ಬಿಸಿಸಿಐ ಆಮಿಷಕ್ಕಿಟ್ಟ ಹಣದ ಕಾರಣ ಇಲ್ಲಿ ದೊಡ್ಡ ಸಂಖ್ಯೆಯ ವಿದೇಶಿ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ. ಟಿವಿ ಪ್ರಸಾರ, ಕ್ರೀಡಾಂಗಣ, ಆಟಗಾರರುಗಳೆಲ್ಲ ವಿಶ್ವದರ್ಜೆಯಲ್ಲಿ ಇರುವುದರಿಂದ ಭಾರತದ ಹೊರಗೂ ಐಪಿಎಲ್ ಅದ್ಭುತವಾದ ಜನಪ್ರಿಯತೆಯನ್ನು ಪಡೆದಿದೆ. ಪಂದ್ಯಗಳ ವೇಳೆಯಲ್ಲಿ ಅಂಪೈರ್ ಕ್ಯಾಪ್ ಧರಿಸುವವರು ಮಾತ್ರ ಇದೇ ಭಾರತದ ಆಂತರಿಕ ಅಂಪೈರ್‌ಗಳು! ಬಿಸಿಸಿಐನ ತಲೆಬಿಸಿ ವೃದ್ಧಿಸಲು ಇವರು ಕೊಡುವ ತೀರ್ಪುಗಳು ಸಾಕಲ್ಲವೇ!?
ಕಳೆದ ಐಪಿಎಲ್ ವೇಳೆಯಲ್ಲಿಯೂ ಕಳಪೆ ಅಂಪೈರಿಂಗ್ ಪ್ರದರ್ಶನ ಬಟಾಬಯಲಾಗಿತ್ತು. ಒಂದು ಉದಾಹರಣೆ ಕೊಡುವುದಾದರೆ, ಪಂದ್ಯವೊಂದರಲ್ಲಿ ತಾವೇ ಇತ್ತ ಕ್ಯಾಚ್ ತೀರ್ಪಿನ ವಿರುದ್ಧ ಹಿರಿಯ ಕ್ರಿಕೆಟಿಗ ಸೌರವ್ ಗಂಗೂಲಿ ಅಸಮಾಧಾನ ತೋರಿದ್ದನ್ನು ನೋಡಿ ಜಿ.ಎ.ಪಾರ್ಥಕುಮಾರ್ ಎಂಬ ಅಂಪೈರ್ ದಡಕ್ಕನೆ ಟಿವಿ ರಿಪ್ಲೆಗೆ ಮೂರನೇ ಅಂಪೈರ್‌ಗೆ ಸಂಜ್ಞೆ ಮಾಡಿಬಿಡುವುದೇ? ಈಗಾಗಲೆ ಬಿಸಿಸಿಐ ಕಾರ್ಯದರ್ಶಿ ನಿರಂಜನ್ ಶಾ ಅಂಪೈರ್‌ರ ಪರೀಕ್ಷಾ ವಿಧಾನವನ್ನು ಬದಲಿಸುವ ಸೂಚನೆ ನೀಡಿದ್ದಾರೆ. ಜಂಟಿ ಕಾರ್ಯದರ್ಶಿ ಎಂಡಿ ಪಾಂಡೋವೆ "ಸರಾಸರಿಗಿಂತ ಕೆಳಗಿನ ಅಂಪೈರ್‌ಗೆ ಇನ್ನುಮುಂದೆ ಸ್ಥಾನವಿಲ್ಲ. ಹೊಸದಾದ, ಯುವ ರಕ್ತವನ್ನು ಅಂಪೈರಿಂಗ್ ಕ್ಷೇತ್ರಕ್ಕೂ ತರುತ್ತೇವೆ. ಈಗಿರುವ ಅಂಪೈರ್‌ಗಳಿಗೆ ಮುಂಬೈನಲ್ಲಿ ಇನ್ನೊಂದು ಪರೀಕ್ಷೆ ನಡೆಸಲಾಗುತ್ತದೆ.ಅವರ ಸ್ಥಾನ ಇಲ್ಲಿನ ಫಲಿತಾಂಶವನ್ನು ಆಧರಿಸುತ್ತದೆ" ಎಂದು ಸ್ಪಷ್ಟಪಡಿಸಿದ್ದಾರೆ. ಇಷ್ಟರಿಂದಲೇ ಅಂಪೈರಿಂಗ್ ಗುಣಮಟ್ಟ ಏರುತ್ತದೆಂಬ ಭ್ರಮೆಯಲ್ಲಿ ಬಿಸಿಸಿಐ ಇದ್ದರೆ ಅದಕ್ಕಿಂತ ಹಾಸ್ಯಾಸ್ಪದ ವಿಚಾರ ಇನ್ನೊಂದಿಲ್ಲ.
ಕುಲಕರ್ಣಿ ಅಧ್ಯಯನ
ಅಂಪೈರಿಂಗ್ ಕ್ಷೇತ್ರದ ಗೌರವಾನ್ವಿತ ವ್ಯಕ್ತಿ ವಿ.ಎಮ್.ಕುಲಕರ್ಣಿಯವರು ಪರಿಸ್ಥಿತಿಯನ್ನು ಸುಧಾರಿಸಲು ಒಂದು ಅಧ್ಯಯನ ವರದಿಯನ್ನೇ ನೀಡಿದ್ದಾರೆ. ಅದರ ಪ್ರಕಾರ, ಭಾರತೀಯ ಅಂಪೈರ್‌ಗಳನ್ನು ಎ ಪ್ಲಸ್, ಎ, ಬಿ ಮತ್ತು ಸಿ ಎಂದು ವರ್ಗೀಕರಿಸಬೇಕು. ಅಂಪೈರ್‌ಗಳ ಪ್ರದರ್ಶನದ ಮಟ್ಟವನ್ನು ಆಧರಿಸಿ ಇವರ ಸ್ಥಾನಮಾನದ ನಿರ್ಧಾರ, ಭಡ್ತಿ-ಹಿಂಭಡ್ತಿಗಳು ನಿಗದಿ ಪಡಿಸುವ ಅಂಶ ಆ ವರದಿಯಲ್ಲಿತ್ತು. ಎರಡು ವರ್ಷಗಳ ನಂತರ ಎ ವರ್ಗದಿಂದ ನಾಲ್ವರನ್ನು ಬಿಗೆ ಹಾಗೂ ಬಿನಿಂದ ಆರು ಜನರನ್ನು ಸಿಗೆ ಸ್ಥಾನಪಲ್ಲಟಗೊಳಿಸುವ ಸಲಹೆ ಅಲ್ಲಿತ್ತು. ಟೆಸ್ಟ, ಏಕದಿನಕ್ಕೆ ಎ ಅಂಪೈರ್, ಬಿ ವರ್ಗ ಪ್ರಥಮ ದರ್ಜೆಗೆ, ಎ ಪ್ಲಸ್ ಎಲೈಟ್ ಗುಂಪಿಗೆ. ಎ ಪ್ಲಸ್, ಎನಲ್ಲಿ ತಲಾ ೧೦, ಬಿನಲ್ಲಿ ೩೦ ಮತ್ತು ಸಿನಲ್ಲಿ ೮೦ ಅಂಪೈರ್‌ಗಳಿಗೆ ಅವಕಾಶ ನೀಡಬೇಕು ಮುಂತಾಗಿ ಕುಲಕರ್ಣಿ ಹಲವು ಗಮನೀಯ ಸಲಹೆಗಳನ್ನು ಪಟ್ಟಿ ಮಾಡಿದ್ದರು. ಕುಲಕರ್ಣಿ ವರದಿಯ ಪ್ರಸಂಗದಲ್ಲಿಯೂ ಬಿಸಿಸಿಐ ಗಂಭೀರವಾಗಿ ವರ್ತಿಸಲೇ ಇಲ್ಲ.
ಅದೃಷ್ಟಕ್ಕೆ, ಐಪಿಎಲ್ ಮುಖಭಂಗಗಳ ನಂತರ ಒಂದಿಷ್ಟು ಚುರುಕುತನ ಕಾಣಿಸಿದಂತಿದೆ. ಬಿಸಿಸಿಐನಲ್ಲಿಯೇ ಅಂಪೈರ್ ಕಮಿಟಿಯೊಂದಿದೆ. ಅದಕ್ಕೆ ಎಸ್.ವೆಂಕಟರಾಘವನ್ ಮುಖ್ಯಸ್ಥರು. ಅದರ ಸಭೆ ಇತ್ತೀಚೆಗೆ ನಡೆದಿದೆ. ಹಲವು ಸ್ವಾಗತಾರ್ಹ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಇನ್ನು ಮುಂದೆ ೩೦ ಉತ್ತಮ ಅಂಪೈರ್‌ಗಳ ಬಿಸಿಸಿಐ ಎಲೈಟ್ ಪ್ಯಾನೆಲ್ ಜಾರಿಗೆ ಬರುತ್ತದೆ. ವಲಯ ಮಟ್ಟದಲ್ಲಿ ಅಂಪೈರ್‌ಗಳಿಗೆ ತರಬೇತಿ ಇರುತ್ತದೆ. ಈ ೩೦ ಅಂಪೈರ್‌ಗಳನ್ನು ಕಳೆದ ವಷದ ಅಂಪೈರ್‌ಗಳ ‘ಆಟ’ದ ವಿಡಿಯೋ ನೋಡಿ ಆರಿಸಲಾಗುತ್ತದೆ. ಅಂಪೈರ್‌ಗಳಲ್ಲಿ ಐಸಿಸಿ ಎಲೈಟ್ ಗುಂಪಿಗೆ ಶಿಫಾರಸು ಮಾಡುವ ಮಟ್ಟಕ್ಕೆ ಬೆಳೆಸುವುದು ಗುರಿ.
ಮೇಲಿನ ತೀರ್ಮಾನಗಳಿಂದಲೇ ಪವಾಡಗಳನ್ನು ನಿರೀಕ್ಷಿಸುವುದು ಮೂರ್ಖತನ. ಕೊನೆಪಕ್ಷ ಸರಿಯಾದ ದಾರಿಯಲ್ಲಿ ನಡೆಯುತ್ತಿರುವ ಸಮಾಧಾನ ತಾಳಬಹುದು. ಮುಖ್ಯವಾಗಿ, ಮಾಜಿ ಕ್ರಿಕೆಟ್ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಅಂಪೈರಿಂಗ್‌ಗೆ ಬರುವಂತಾಗಬೇಕು. ಇಂದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ ಧರ್ಮಸೇನರ ಆಗಮನದಿಂದ ಅನುಭವದ ಲಾಭ ಆಟಕ್ಕೆ ಸಿಕ್ಕಿದ್ದು ರುಜುವಾತಾಗಿದೆ. ಇಂತದ್ದು ಭಾರತದಲ್ಲೂ ಆಗಬೇಕಿತ್ತು. ಜಯಪ್ರಕಾಶ್, ವೆಂಕಟರಾಘವನ್ ಮಾಜಿ ಕ್ರಿಕೆಟಿಗರೇ. ಆದರೆ ಮಣೀಂದರ್ ಸಿಂಗ್‌ರಂತವರು ಅಂಪೈರಿಂಗ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರೂ ಅಂತಿಮವಾಗಿ ಆರಿಸಿಕೊಂಡಿದ್ದು ಹೆಚ್ಚು ಗ್ಲಾಮರಸ್ ಆಗಿರುವ ಟಿವಿ ಕಾಮೆಂಟರೇಟರ್ ಕೆಲಸವನ್ನು. ಎಸಿ ರೂಮ್, ನಿರಾಯಾಸ ಕೆಲಸ, ಗರಿಷ್ಠ ಸಂಭಾವನೆಯ ಈ ಅವಕಾಶವಿರುವಾಗ ಶುಷ್ಕ ಅಂಪೈರಿಂಗ್ ಮಾಜಿ ಕ್ರಿಕೆಟಿಗರನ್ನು ಆಕರ್ಷಿಸುವ ಸಾಧ್ಯತೆ ಕಡಿಮೆ. ಹಾಗಾಗಿ ಪರಿಸ್ಥಿತಿ ಸುಧಾರಿಸುವುದು ಕಠಿಣ.
ಕೊನೆಮಾತು - ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಹಿಡಿತದಲ್ಲಿರುವುದು ನಿಚ್ಚಳ. ಅಂತಹ ಸುಪ್ರೀಂ ಸಂಸ್ಥೆಯೇ ಕೈಯಲ್ಲಿರುವಾಗ ಯಕಶ್ಚಿತ್ ಅಂಪೈರ್ ಎಲೈಟ್ ಪ್ಯಾನೆಲ್ ಬಗ್ಗೆ ಈವರೆಗೆ ಬಿಸಿಸಿಐ ತಲೆ ಕೆಡಿಸಿಕೊಂಡಿರಲಿಲ್ಲ. ಈಗ ಐಪಿಎಲ್ ಈ ವಾತಾವರಣವನ್ನು ಬದಲಿಸಿದೆ. ಆ ಮಟ್ಟಿಗಾದರೂ ನಾವು ಪ್ರೀಮಿಯರ್ ಲೀಗ್ ಹೊಡಿಬಡಿ ಕ್ರಿಕೆಟ್‌ಗೆ ಥ್ಯಾಂಕ್ಸ್ ಹೇಳಬೇಕಲ್ಲವೇ?

-ಮಾವೆಂಸ

 
200812023996