ಶುಕ್ರವಾರ, ಫೆಬ್ರವರಿ 13, 2015

Santhosh aggro industries; The cold storage with a difference


ಸಾಗರದ ಅಡಿಕೆ ಬೆಳೆಗಾರರಿಗೆ ಅನುಕೂಲಕರ ಕೋಲ್ಡ್ ಸ್ಟೋರೇಜ್‍ಗೆ ಚಾಲನೆ
ಆನಂದಪುರದ ಮಲಂದೂರಿನಲ್ಲಿ ಕಾರ್ಯಾಚರಣೆ

ಮಾ.ವೆಂ.ಸ.ಪ್ರಸಾದ್

ಒಂದು ಲಕ್ಷ ಚೀಲ ಸಾಮಥ್ರ್ಯದ ಕೋಲ್ಡ್ ಸ್ಟೋರೇಜ್
ಸಂಪೂರ್ಣ ಅತ್ಯಾಧುನಿಕ ವ್ಯವಸ್ಥೆ
ಜಿಲ್ಲೆಯ 5 ತಾಲೂಕುಗಳಿಗೆ ಸುಲಭ ಸಂಪರ್ಕ
ಚಾಲಿ ಅಡಿಕೆ ಸಂಗ್ರಹ ಸಮಸ್ಯೆಗೆ ಉತ್ತರಸಾಗರ: ಯಶಸ್ವಿ ಕೃಷಿ ಎಂಬುದು ಕೇವಲ ಅತ್ಯಧಿಕ ಬೆಳೆ ಬೆಳೆಯುವುದಲ್ಲ ಎಂದು ಒಂದು ಚಿಂತಕ ವರ್ಗ ಪ್ರತಿಪಾದಿಸುತ್ತಲೇ ಬಂದಿದೆ. ಅವರ ಪ್ರಕಾರ, ಅಡಿಕೆ ತೋಟದಲ್ಲಿ ಕಳೆದ ವರ್ಷ 10 ಕ್ವಿಂಟಾಲ್ ಚಾಲಿ ಅಡಿಕೆ ಬೆಳೆದವನ ಎದುರು ಅಷ್ಟೇ ವಿಸ್ತೀರ್ಣದಲ್ಲಿ 7 ಕ್ವಿಂಟಾಲ್ ಬೆಳೆದವನ ಎದುರು ಯಶಸ್ವಿ ಎಂದು ಸಾರುವುದು ಸಮರ್ಪಕ ಅಲ್ಲ. ಬೆಳೆದವ ಅದನ್ನು ಯಾವ ರೀತಿಯಲ್ಲಿ ಮಾರುಕಟ್ಟೆ ಮಾಡಿ ಆದಾಯ ಪಡೆದ ಎಂಬುದೂ ಮುಖ್ಯ ಅಂಶವಾಗುತ್ತದೆ. 10 ಕ್ವಿಂಟಾಲ್ ಬೆಳೆದ ರೈತ ಒಮ್ಮೆಗೇ ಆರಂಭಿಕ ದಿನಗಳ 16 ಸಾವಿರ ರೂ. ಕ್ವಿಂಟಾಲ್‍ನಂತೆ ಮಾರಿದ್ದಾನೆ ಎಂತಾದರೆ ಅವನಿಗೆ 1.60 ಲಕ್ಷ ರೂ. ಲಭ್ಯವಾಗಿದೆ. 7 ಕ್ವಿಂಟಾಲ್ ಅಡಿಕೆಯಾತ ಹಂತಹಂತವಾಗಿ ಮಾರಿ ಕ್ವಿಂಟಾಲ್‍ಗೆ ಸರಾಸರಿ 28 ಸಾವಿರ ರೂ.ಗೆ ಮಾರಿದರೆ ಅವನಿಗೆ 1.96 ಲಕ್ಷ ರೂ. ಬಂದಿದೆ. ಯಶಸ್ಸನ್ನು ಅಳೆಯಲು ಅವನು ಮಾಡಿದ ವೆಚ್ಚ, ಗಳಿಸಿದ ಆದಾಯಗಳ ನಂತರದ ನಿವ್ವಳ ಹಣ ಮಾನದಂಡವಾಗಬೇಕು ಎಂದು ಹೇಳಲಾಗುತ್ತಿದೆ.
ತಾತ್ವರ್ಯ ಇಷ್ಟೇ, ಬೆಳೆಯನ್ನು ವಿಕ್ರಯ ಮಾಡುವಲ್ಲಿ ಬೆಳೆಗಾರ ಹೆಚ್ಚು ವೈಜ್ಞಾನಿಕವಾಗಿ ಚಿಂತಿಸಬೇಕು ಎಂಬುದು. ಅಡಿಕೆ ಬೆಳೆಗಾರನಿಗೆ ಕೆಲವು ತಾಪತ್ರಯಗಳೂ ಇವೆ. ಚಾಲಿ ಅಡಿಕೆಯನ್ನು ಸುಲಿಸಿದ ನಂತರ ಮೂರು ತಿಂಗಳಿಗೂ ಹೆಚ್ಚು ಕಾಲ ಇರಿಸುವುದು ಕಷ್ಟ. ಇಂದಿನ ಕೂಲಿ ಕಾರ್ಮಿಕರ ಕೊರತೆಯ ಕಾರಣ ಕಂತು ಕಂತುಗಳಲ್ಲಿ ಸುಲಿಸಿ ವಿಕ್ರಯಿಸುವ ಕ್ರಮ ಅನುಸರಿಸುವುದೂ ಕಷ್ಟ. ಅಷ್ಟಕ್ಕೂ ಸುಲಿ ಕೆಲಸಕ್ಕೆ ಮಿಷನ್ ಬಳಸಿದರೆ ಒಮ್ಮೆಗೇ ಸುಲಿಸುವುದು ಅನಿವಾರ್ಯವಾಗುತ್ತದೆ. ಹಾಗಿದ್ದರೆ ವೈಜ್ಞಾನಿಕವಾಗಿ ಮಾರಾಟ ಮಾಡುವುದಕ್ಕಿಂತ ಬೆಳೆಯ ತಾಜಾತನ ಉಳಿಸಿಕೊಳ್ಳುವುದು ಹೇಗೆ?
ಶೀತಲ ಗೃಹಗಳೇ ಉತ್ತರ!
ಅದಕ್ಕೆ ಶೀತಲ ಗೃಹಗಳೇ ಉತ್ತರ. ಇದರಲ್ಲಿ ಇರಿಸಿದ ಬೆಳೆ ವರ್ಷಾನುಗಟ್ಟಲೆ ಏನೂ ಆಗದೆ ಉಳಿಯುತ್ತದೆ. ಒಮ್ಮೆಗೇ ಬೆಳೆ ಬಂದು ಬೆಲೆ ಇಲ್ಲದೆ ರಸ್ತೆಗೆ ಚೆಲ್ಲುವ ಟೊಮ್ಯಾಟೋ, ಮೆಣಸಿನಕಾಯಿಯಿಂದ ಹಿಡಿದು ಅಡಿಕೆ, ಕಾಳುಮೆಣಸು, ಹುಣಿಸೆಹಣ್ಣು, ಅರಿಸಿನ, ಶುಂಠಿ, ಆಲೂಗಡ್ಡೆ ಮೊದಲಾದ ಹಲವು ಬೆಳೆಗಳ ಕಾಪಿಡಲು ಕೋಲ್ಡ್ ಸ್ಟೋರೇಜ್ ಸೂಕ್ತವಾದುದು. ಅದೃಷ್ಟಕ್ಕೆ, ಶಿವಮೊಗ್ಗ ಜಿಲ್ಲೆಯ ರೈತರಿಗೆ ಆನಂದಪುರ ಸಮೀಪದ ಮಲಂದೂರಿನಲ್ಲಿ ರಾಷ್ಟ್ರೀಯ ತೋಟಗಾರಿಕಾ ಯೋಜನೆಯಡಿ ಸಿದ್ಧಗೊಂಡಿರುವ ಸಂತೋಷ್ ಆಗ್ರೋ ಇಂಡಸ್ಟ್ರೀಸ್ ಒಂದು ಆಶಾಕಿರಣವಾಗಿದೆ.
ಭಾರತದ ಎಲ್ಲ ಅತ್ಯಾಧುನಿಕ ಕೋಲ್ಡ್ ಸ್ಟೋರೇಜ್ ಸೌಕರ್ಯಗಳನ್ನು ಒಳಗೊಂಡಿರುವ ಸುಮಾರು 10 ಕೋಟಿ ರೂ. ವೆಚ್ಚದ ಈ ಶೀತಲ ಗೃಹ ನಾಲ್ಕು ಅಂತಸ್ತುಗಳನ್ನು ಹೊಂದಿದ್ದು 5 ಸಾವಿರ ಮೆಟ್ರಿಕ್ ಟನ್ ತೂಕದ ಸಾಮಥ್ರ್ಯ ಹೊಂದಿದೆ. ಹಾಗೆ ಹೇಳುವುದಕ್ಕಿಂತ, ಸುಮಾರು ಒಂದು ಲಕ್ಷ ಬ್ಯಾಗ್‍ಗಳನ್ನು ಸಂಗ್ರಹಿಸಬಹುದು ಎಂದರೆ ಅದರ ವಿಶಾಲತೆಯನ್ನು ಗ್ರಹಿಸಬಹುದು.
ಎಲ್ಲಿದೆ ಇದು?
ಆನಂದಪುರದ ಬಸ್ ನಿಲ್ದಾಣದಿಂದ ಸುಮಾರು 2-3 ಕಿಮೀ ದೂರದಲ್ಲಿ ಶಿಕಾರಿಪುರ ರಾಜ್ಯ ಹೆದ್ದಾರಿ 77ರ ಪಕ್ಕದಲ್ಲಿಯೇ ಇರುವ ಈ ಕೋಲ್ಡ್ ಸ್ಟೋರೇಜ್ ಯೂನಿಟ್‍ಗೆ ಎಪಿಎಂಸಿಯಿಂದ ಮಾನ್ಯತೆ ಇದೆ. ಗಮನಿಸಬೇಕಾದ ಅಂಶವೆಂದರೆ, ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ, ಶಿಕಾರಿಪುರ, ಸಾಗರ ತಾಲೂಕು ಕೇಂದ್ರಗಳಿಂದ ಸಾಕಷ್ಟು ಕಡಿಮೆ ಅಂತರದಲ್ಲಿದೆ. ಜೊತೆಗೆ ಅತ್ಯುತ್ತಮ ರಸ್ತೆ ಸಂಪರ್ಕವನ್ನು ಹೊಂದಿರುವುದು ರೈತರ ಪಾಲಿಗೆ ಹೆಚ್ಚಿನ ಅನುಕೂಲವೆನಿಸುತ್ತದೆ.
ಬೆಳೆಗಾರರು ಏನು ಮಾಡಬಹುದು?
ಮತ್ತೆ ಅಡಿಕೆಯನ್ನೇ ಉದಾಹರಣೆಯನ್ನಾಗಿ ತೆಗೆದುಕೊಳ್ಳೋಣ. ಮನೆಯಲ್ಲಿರುವ ಅಷ್ಟೂ ಒಣಗೋಟನ್ನು ಒಮ್ಮೆಗೇ  ಸುಲಿಸಿ ಸಿದ್ಧವಾದ ಚಾಲಿ ಅಡಿಕೆಯನ್ನು ಇಲ್ಲಿ ಸಂಗ್ರಹಿಸಬಹುದು. 11 ತಿಂಗಳ ಕಾಲ ಇಲ್ಲಿ ಇರಿಸುವ 50 ಕೆಜಿಯ ಒಂದು ಬ್ಯಾಗ್‍ಗೆ ಈ ಅವಧಿಗೆ 110 ರೂ. ಶುಲ್ಕ ವಿಧಿಸಲಾಗುತ್ತದೆ. ಜೂನ್‍ನಿಂದ ಸೆಪ್ಟೆಂಬರ್‍ವರೆಗಿನ 4 ತಿಂಗಳ ಅವಧಿಗೆ ಮಾತ್ರ ಇಡುವುದಾದರೆ 80 ರೂ. ಇಲ್ಲಿ ಇರಿಸುವ ಪ್ರತಿ ಬ್ಯಾಗ್ ವಿಮಾ ಯೋಜನೆಯಡಿ ಬರುತ್ತದೆ.
ಒಬ್ಬ ಅಡಿಕೆ ಬೆಳೆಗಾರ ತನ್ನ ಕೆಂಪು ಹಾಗೂ ಚಾಲಿ ಅಡಿಕೆಯನ್ನು ಇಲ್ಲಿ ತಂದಿರಿಸಿ ಕಳ್ಳತನದ ಭಯದಿಂದ ಮುಕ್ತನಾಗಬಹುದು. ಇಂದಿನ ಬೆಲೆ ಯುಗದಲ್ಲಿ ಮಾಲು ಸುರಕ್ಷಿತವಾಗಿದ್ದರೆ ನೆಮ್ಮದಿಯಿಂದ ಮನೆಯಲ್ಲಿ ಮಲಗಬಹುದು! ಬೆಳೆಗಾರ ಮಾಲನ್ನು ತನ್ನ ನಿಯಂತ್ರಣದಲ್ಲಿ ಇಡುವ ಪರಿಸ್ಥಿತಿ ಬಂದಾಗ ಅನಿವಾರ್ಯವಾಗಿ ಖರೀದಿದಾರ ದರ ಏರಿಕೆ ಕ್ರಮ ಅನುಸರಿಸಿ ಮಾಲು ವಿಕ್ರಯಿಸುವುದು ಅನಿವಾರ್ಯವಾಗುತ್ತದೆ.
ಬೆಳೆಗಾರನಿಗೆ ಇನ್ನೂ ಹಲವು ಅನುಕೂಲಗಳಿವೆ. ರಾಷ್ಟ್ರೀಕೃತ ಬ್ಯಾಂಕ್‍ಗಳ ಮಾನ್ಯತೆಯಿರುವುದರಿಂದ ಇಲ್ಲಿ ಸಂಗ್ರಹಿಸಿಟ್ಟ ಮಾಲಿಗೂ ಕೂಡ ಸಾಲ ಸೌಲಭ್ಯ ಪಡೆಯಬಹುದು. ಆನಂದಪುರದ ಎಸ್‍ಬಿಎಂ ಹಾಗೂ ಸಾಗರದ ಕಾರ್ಪೊರೇಶನ್ ಬ್ಯಾಂಕ್ ಈಗಾಗಲೇ ಆ ಮಾನ್ಯತೆ ನೀಡಿವೆ. ಇದೇ ಅನುಕೂಲವನ್ನು ಮುಂದಿನ ದಿನಗಳಲ್ಲಿ ಎಪಿಎಂಸಿ ಸಾಲ ಸೌಲಭ್ಯಕ್ಕೂ ಅನ್ವಯಿಸುವಂತಾದರೆ ರೈತರಿಗೆ ದೊಡ್ಡ ಪ್ರಮಾಣದ ಪ್ರಯೋಜನವಾಗಲಿದೆ.
ತಾಂತ್ರಿಕತೆಯಲ್ಲಿ ಈ ವ್ಯವಸ್ಥೆ ತನ್ನ ಅಡಿ ಟಿಪ್ಪಣಿಯಂತೆ `ದಿ ಕೋಲ್ಡ್ ಸ್ಟೋರೇಜ್ ವಿತ್ ಎ ಡಿಫರೆನ್ಸ್’ ಎಂಬುದಕ್ಕೆ ಅನ್ವರ್ಥವಾಗಿದೆ. ಪತ್ರಿಕೆಯೊಂದಿಗೆ ಮಾತನಾಡಿದ ಸ್ಥಾಪಕ ಟಿ.ಎನ್.ಸುಬ್ಬರಾವ್ ಮಾತನಾಡಿ, ಮಾಲು ಯಾವುದೇ ಸಂದರ್ಭದಲ್ಲಿ ಹಾಳಾಗದಿರುವಂತೆ 15 ಡಿಗ್ರಿ ತಾಪಮಾನವನ್ನು ಇಲ್ಲಿ ಕಾಯ್ದುಕೊಳ್ಳಲಾಗುತ್ತದೆ.  ಕಂಪ್ಯೂಟರೈಸ್ಡ್ ಸೆಂಟ್ರಲ್ ಮಾನಿಟರಿಂಗ್ ಹಾಗೂ ಕಂಟ್ರೋಲ್ ವ್ಯವಸ್ಥೆಯಿಂದ ಆಹಾರ ಸಂಗ್ರಹ ತಾಪಮಾನದಲ್ಲಿ ವ್ಯತ್ಯಯವಾಗುವುದಿಲ್ಲ. ಡು ಹ್ಯುಮಿಡಿಫಿಕೇಶನ್ ವ್ಯವಸ್ಥೆ ತಂಪು ವಾತಾವರಣದಲ್ಲೂ ಮಾಯಿಸ್ಚರ್ ಉಂಟಾಗದಂತೆ ನೋಡಿಕೊಳ್ಳುತ್ತದೆ. ತೂಕ ಲೆಕ್ಕಾಚಾರದಲ್ಲಿ ವಂಚನೆ ಆಗದಿರುವಂತೆ ಕಂಪ್ಯೂಟರೈಸ್ಡ್ ವೇವ್ ಬ್ರಿಜ್, ಮಾಲನ್ನು ಸುಲಭವಾಗಿ ಬೇಕಾದ ಅಂತಸ್ತಿಗೆ ಕೊಂಡೊಯ್ಯುವ ವರ್ಟಿಕಲ್ ಕನ್ವೇಯರ್, ಮಾಲಿನ ಗುಣಮಟ್ಟಕ್ಕೆ ಧಕ್ಕೆ ಆಗದಿರುವಂತೆ ವಿದ್ಯುತ್‍ಗೆ ಪರ್ಯಾಯವಾಗಿ ಡೀಸೆಲ್ ಜನರೇಟರ್ ಮೊದಲಾದ ವ್ಯವಸ್ಥೆಗಳನ್ನು ಹೊಂದಿದೆ. ಇಂದಿನ ದಿನಮಾನದ ಎಲ್ಲ ಅತ್ಯುತ್ತಮ ಕಚ್ಚಾವಸ್ತುಗಳಿಂದ ನಿರ್ಮಿಸಿರುವುದು ಪರೋಕ್ಷವಾಗಿ ಮಾಲು ಸಂರಕ್ಷಣೆಯ ಬೆನ್ನಿಗೆ ನಿಲ್ಲುತ್ತದೆ. ಇದೇ ಕಾರಣದಿಂದ ಶೀತಲ ಗೃಹ ಇಡೀ ಶಿವಮೊಗ್ಗ ಜಿಲ್ಲೆಯಲ್ಲಿ ಇದು ಪ್ರತ್ಯೇಕವಾಗಿ ನಿಲ್ಲುತ್ತದೆ. ದೂರದ ಹಾವೇರಿ, ಬ್ಯಾಡಗಿ ಬಿಟ್ಟರೆ  ಈ ಭಾಗದಲ್ಲಿ ಇದೇ ಪ್ರಪ್ರಥಮ ಎಂದು ಪ್ರತಿಪಾದಿಸುತ್ತಾರೆ.

ಬಳಸಿಕೊಳ್ಳಲಿ ಬೆಳೆಗಾರ...
ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಶುಂಠಿ ಬೆಳೆಗಾರರು ಮತ್ತು ವ್ಯಾಪಾರಿಗಳು ಈ ಶೀತಲ ಗೃಹದ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಸ್ವತಃ ಅಡಿಕೆ ಬೆಳೆಗಾರರ ಕುಟುಂಬದಿಂದ ಬಂದಿರುವ ಸುಬ್ಬರಾವ್ ಹೇಳುವುದೇ ಬೇರೆ, ಈ ಭಾಗದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುವ ಅಡಿಕೆಯನ್ನು ನಾವು ಬೇಕಾಬಿಟ್ಟಿಯಾಗಿ ಮಾರುತ್ತಿರುವುದರಿಂದಲೇ ಬೆಲೆ ಸೂತ್ರ ಖರೀದಿದಾರರಲ್ಲಿದೆ. ಬೆಳೆಗಾರನ ಸಂಗ್ರಹ ಸಂಕಷ್ಟಕ್ಕಂತೂ ಈ ಕೋಲ್ಡ್ ಸ್ಟೋರೇಜ್ ಉತ್ತರವಾಗಿದೆ. ಹಲವು ಸಣ್ಣ ಹಿಡುವಳಿದಾರರು ಸೇರಿ ದೊಡ್ಡ ರಖಂ ಮಾಡಿಕೊಂಡು ಇಲ್ಲಿ ತಂದಿಟ್ಟರೆ ಅವರಿಗೆ ಲಭಿಸುವ ಮಾಲಿನ ಬೆಲೆಯಲ್ಲಿ  ಇಲ್ಲಿನ ಬಾಡಿಗೆ, ಹಮಾಲಿ, ವಿಮಾ ಪ್ರೀಮಿಯಂ ನಗಣ್ಯ ಎನ್ನಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ನಿಜ, ಬೆಳೆಗಾರರು ಹೊಸ ವ್ಯವಸ್ಥೆಗಳನ್ನು ತಮ್ಮ ಅನುಕೂಲಕ್ಕೆ ಬಗ್ಗಿಸಿಕೊಳ್ಳಬೇಕಾಗಿದೆ! 
200812023996