ಮಂಗಳವಾರ, ಮೇ 26, 2009

ಟ್ವೆಂಟಿ ಆಡಿದರು ಗಂಗೂಲಿ!


ಐಪಿಎಲ್ ಹಿನ್ನೋಟ

ಒಂದು ಸಿನೆಮಾದಲ್ಲಿ ೧೬ ರೀಲ್‌ಗಳಿರುತ್ತವೆ ಎಂದರೆ ಒಂದೊಂದು ರೀಲ್‌ನಲ್ಲಿ ಹೀರೋ, ವಿಲನ್ ಪಾತ್ರಗಳನ್ನು ಒಬ್ಬನೇ ಅಭಿನಯಿಸಿದಂತ ವಿಚಿತ್ರ ಘಟನಾವಳಿಗಳಿಗೆ ಸಾಕ್ಷಿಯಾದದ್ದು ಸೌರವ್ ಗಂಗೂಲಿಯವರ ಕ್ರಿಕೆಟ್ ಕ್ಯಾರಿಯರ್. ಆಸ್ಟ್ರೇಲಿಯಾದಲ್ಲಿ ಏಕದಿನ ಪಾದಾರ್ಪಣೆಯ ವೈಫಲ್ಯದ ನಂತರ ೧೨ನೇ ಆಟಗಾರನಾಗಿ ನೀರು ಒಯ್ಯಲು ಒಲ್ಲೆ ಎಂದ ಮಹಾರಾಜರಿವರು. ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ಚೊಚ್ಚಲ ಟೆಸ್ಟ್‌ನಲ್ಲಿಯೇ ಶತಕ, ಬೆನ್ನ ಹಿಂದೆ ಇನ್ನೊಂದು ಶತಕ ಬಾರಿಸಿ ಸೌರವ್ ಹೀರೋ ಆದರು. ಭಾರತದ ಯಶಸ್ವಿ ನಾಯಕರಾಗಿ, ಅತ್ಯುತ್ತಮ ಏಕದಿನ ಓಪನರ್ ಆಗಿ ಸೌರವ್ ತೆಂಡೂಲ್ಕರ್‌ರನ್ನು ಮೀರಿ ಮಿಂಚಿದ್ದು ಒಂದೆಡೆಯಾದರೆ, ಅಂಗಿ ಬಿಚ್ಚಿ ಲಾರ್ಡ್ಸ್ ಬಾಲ್ಕನಿಯಲ್ಲಿ ಮೆರೆದಿದ್ದು, ಸ್ಟೀವ್ ವಾರನ್ನು ಟಾಸ್‌ಗೆ ಬಾರದೆ ಸತಾಯಿಸಿದ್ದು, ಕೊನೆಗೆ ಕೋಚ್ ಗ್ರೇಗ್ ಚಾಪೆಲ್ ಜೊತೆ ರಾದ್ಧಾಂತ.... ಗಂಗೂಲಿ ಕ್ಯಾರಿಯರ್‌ನ ಅಂತ್ಯಕ್ಕೆ ಮತ್ತೆ ವಿಲನ್ ಗೆಟಪ್!
ಈ ವರ್ಷದ ಐಪಿಎಲ್‌ನ ಆರಂಭಕ್ಕೆ ಮುನ್ನವೇ ತಲೆಕೆಟ್ಟ ಕೋಚ್ ಜಾನ್ ಬುಚನನ್ ಪಂದ್ಯಕ್ಕೊಬ್ಬ ನಾಯಕನ ನೇಮಕದ ಯೋಜನೆ ತಂದರು. ಅಲ್ಲಿಗೆ ಸೌರವ್ ಗಂಗೂಲಿಯ ನೈಟ್ ರೈಡರ್‍ಸ್ ನಾಯಕತ್ವ ಹೋಯಿತು. ಮಾಲಿಕ ಶಾರುಖ್ ಖಾನ್ ಅದೇನೋ ರಾಜಿ ಮಾಡಿದರು. ಕೊನೆಪಕ್ಷ ಗಂಗೂಲಿಗೆ ಆಡುವ ಹನ್ನೊಂದರಲ್ಲಿ ಸ್ಥಾನ ಖಾಯಂ ಆಯಿತು. ನಾಯಕ ಪಟ್ಟ ಕರಗಿತು!
ಈಗ ಹಿಂತಿರುಗಿ ನೋಡಿದರೆ, ಗಂಗೂಲಿಗೆ ಟ್ವೆಂಟಿ ೨೦ ಬೇಕಿತ್ತೇ ಎನ್ನಿಸುತ್ತದೆ. ಒಂದು ಕಾಲದಲ್ಲಿ ಮೆರೆದ ಬ್ಯಾಟ್ಸ್‌ಮನ್ ಮೊನ್ನೆ ದಕ್ಷಿಣ ಆಫ್ರಿಕಾದ ಪಿಚ್‌ನಲ್ಲಿ ತಡಕಾಡಿದ್ದು ನೋಡಿದಾಗ ಮತ್ತು ಎದುರಾಳಿ ಬೌಲರ್‌ಗಳು ಅದನ್ನು ಹುಸಿನಗೆಯಿಂದ ಅನುಭವಿಸುವುದನ್ನು ಕಂಡಾಗ ತಾನೇತಾನಾಗಿ ಉದ್ಗರಿಸಬೇಕಾಗುತ್ತದೆ, ಛೇ!
ಈ ಬಾರಿಯ ಪ್ರೀಮಿಯರ್ ಲೀಗ್‌ನಲ್ಲಿನ ಗಂಗೂಲಿ ಆಟವನ್ನು ಅಂಕಿಅಂಶಗಳಲ್ಲಿ ಪರಿಶೀಲಿಸಿ. ಡೆಕ್ಕನ್ ಚಾರ್ಜರ್‍ಸ್ ವಿರುದ್ಧದ ಪಂದ್ಯದಲ್ಲಿ ಒಂದು ರನ್ ಗಳಿಸಲು ಆಡಿದ್ದು ೧೨ ಬಾಲ್. ಎರಡು ಓವರ್‌ಗೆ ಒಂದು ರನ್! ಅವರದೇ ಇನ್ನೊಂದು ಮುಖಾಮುಖಿಯಲ್ಲಿ ೪೪ ರನ್ ಗಳಿಸಿದರೂ ಆಡಿದ್ದು ಬರೋಬ್ಬರಿ ೪೫ ಎಸೆತ. ಬೆಂಗಳೂರು ಎದುರು ಒಂದು ರನ್ನಿಗೆ ಖರ್ಚು ಮಾಡಿದ್ದು ಎಂಟು ಚೆಂಡು. ಇನ್ನೊಮ್ಮೆ ೬ ಚೆಂಡಿಗೆ ೪ ರನ್. ಹೈದರಾಬಾದ್ ಎದುರು ೪೧ ಚೆಂಡಿಗೆ ಏದುಸಿರಿನ ೩೩ ರನ್. ಚೆನ್ನೈ ಎದುರು ೧೪ ಎಸೆತಕ್ಕೆ ನಾಲ್ಕು ರನ್ ಮಾತ್ರ. ರಾಜಾಸ್ತಾನ ಪಂದ್ಯದಲ್ಲಿ ಮೂರು ಚೆಂಡಿಗೆ ಶೂನ್ಯ ಸಂಪಾದನೆ. ವಾಸ್ತವವಾಗಿ, ೧೩ ಪಂದ್ಯ ೧೧ ಇನ್ನಿಂಗ್ಸ್, ೧೮೯ ರನ್, ಸರಾಸರಿ ೧೭.೧೮ ಎಂದು ಹೇಳಿಬಿಡಬಹುದಾದರೂ ಸೌರವ್ ಬ್ಯಾಟಿಂಗ್‌ನಲ್ಲಿ ಚೆಂಡನ್ನು ಬಾರಿಸಲು ತಡಕಾಡುತ್ತಿದ್ದುದು ಎದುರಾಳಿಗಳಿಗೆ ಮನರಂಜನೆ, ಅಭಿಮಾನಿಗಳಿಗೆ ಹಿಂಸೆ! ಎದುರಾಳಿ ಕೋಚ್‌ಗಳು ಸೌರವ್‌ನನ್ನು ಔಟ್ ಮಾಡಿಸದೆ ಇರಲು ಎಂತಹ ಎಸೆತ ಹಾಕಬೇಕು ಎಂಬ ಸೂಚನೆಯನ್ನು ಬೌಲರ್‌ಗೆ ನೀಡುತ್ತಿದ್ದರಂತೆ!
ಏಕದಿನ ಕ್ರಿಕೆಟ್‌ನಲ್ಲಿ ಅಂದು ಸ್ಪಿನ್ನರ್‌ಗಳಿಗೆ ಕ್ರೀಸ್‌ನಿಂದ ಹೊರಬಂದರೆ ಸಿಕ್ಸ್ ಖಚಿತ ಎಂಬ ಖ್ಯಾತಿ ಪಡೆದಿದ್ದ ಸೌರವ್ ಇಡೀ ಐಪಿಎಲ್‌ನಲ್ಲಿ ಬಾರಿಸಿದ್ದು ಆರು ಸಿಕ್ಸರ್ ಮಾತ್ರ. ಬಾಲಂಗೋಚಿಗಳೂ ನೂರರ ಆಚೆಗೇ ಪ್ರತಿಶತ ಚೆಂಡಿಗೆ ರನ್ ಹೊಡೆಯುವಾಗ ಸೌರವ್ ೯೧.೩೦ಕ್ಕೇ ಸುಸ್ತಾಗಿದ್ದರು. ಒಂದೆರಡು ಪಂದ್ಯದಲ್ಲಿ ಅನುಕ್ರಮವಾಗಿ ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಕ್ಲಿಕ್ ಆಗಿದ್ದು ಬಿಟ್ಟರೆ ಸೌರವ್ ಸ್ಥಿತಿ ಹೀನಾಯವೇ ಸರಿ. "ಸೌರವ್, ಐಕಾನ್ ಪ್ಲೇಯರ್ ಗೌರವದ ನೀವು ಇನ್ನೊಮ್ಮೆ ಐಪಿಎಲ್‌ನಲ್ಲಿ ಆಡದಿರಿ. ಅದರ ದುಡ್ಡಿನ ಆಮಿಷಕ್ಕೆ ಧಿಕ್ಕಾರ ಹೇಳಿ. ಪ್ಲೀಸ್.... ಪ್ಲೀಸ್......"
ದೃಢಕಾಯ ವ್ಯಕ್ತಿಯ ಒಡನಾಡಿದವರು ಆತ ಕಾಯಿಲೆಗೆ ತುತ್ತಾಗಿ ಚಕ್ಕಳ ಮಕ್ಕಳವಾಗಿ ಸಾವಿನಂಚಿಗೆ ಬಂದಾಗ ಆ ದೃಶ್ಯವನ್ನು ನೋಡದಿರಲು ಬಯಸುವುದುಂಟು. ಕಣ್ಣ ಮುಂದೆ ಆ ಒಳ್ಳೆಯ ಚಿತ್ರವೇ ಅಜರಾಮರವಾಗಿರಲಿ ಎಂದು. ವಿ.ವಿ.ಎಸ್.ಲಕ್ಷ್ಮಣ್‌ರ ಬಗ್ಗೆ ಬರೆಯಬೇಕೆಂದಾಗ ನೆನಪಾಗುವುದೇ ಇದು. ಲಕ್ಷ್ಮಣ್ ಅರ್ಥಮಾಡಿಕೊಳ್ಳಬೇಕಿತ್ತು. ಟ್ವೆಂಟಿ ೨೦, ಕೊನೆಗೆ ಏಕದಿನಗಳೆರಡೂ ಅವರ ಊಟದ ತಟ್ಟೆಯಲ್ಲ. ಹಿಂದಿನ ಬಾರಿಯೂ ತಂಡದ ಅಷ್ಟೂ ಪಂದ್ಯವಾಡದ ಲಕ್ಷ್ಮಣ್ ಈ ವರ್ಷ ಆಡಿದ್ದು ಬರೇ ಐದು ಪಂದ್ಯ. ಆ ಐದು ಇನ್ನಿಂಗ್ಸ್‌ನಲ್ಲಿ ಗಳಿಸಿದ್ದು ಕೇವಲ ೧೯ ರನ್! ೧೦ ಗರಿಷ್ಠ. ಸರಾಸರಿ ೩.೮೦ ೧೦೦ ಚೆಂಡಿಗೆ ೫೭ ರನ್ ರೀತಿಯ ವೇಗ. ಅವರೆದುರಿಸಿದ ಎರಡೇ ಎಸೆತ ಬೌಂಡರಿಗೆ, ಸಿಕ್ಸರ್‌ಗೆ ಹೋಗಿದ್ದು. ಇದೇ ಲಕ್ಷ್ಮಣ್ ಆಸ್ಟ್ರೇಲಿಯಾದ ಹೆಗ್ಗಳಿಕೆಗಳನ್ನು ಮುರಿಯುವಂತ ಇನ್ನಿಂಗ್ಸ್ ಆಡಿ ಭಾರತೀಯನ ಕ್ರಿಕೆಟ್‌ನ ಪುನರುತ್ಥಾನಕ್ಕೆ ಕಾರಣವಾದದ್ದನ್ನು ಮರೆಯುವುದುಂಟೇ?
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅನಿಲ್ ಕುಂಬ್ಳೆ, ಹೇಡನ್, ಜಾಕ್ ಕಾಲಿಸ್, ಆಡಂ ಗಿಲ್‌ಕ್ರಿಸ್ಟ್, ತೆಂಡೂಲ್ಕರ್‌ರಂತಹ ಹಿರಿಯರು ಮಿಂಚಿದರೇನೋ ಸತ್ಯ. ಆದರೆ ಹಿರಿಯರಿಗೆ ಅವಮಾನ ಆಗಿರುವುದೂ ಅಷ್ಟೇ ಖಚಿತ. ಕಳೆದ ವರ್ಷ ಆಡಿದ ೧೪ ಪಂದ್ಯಗಳಲ್ಲಿ ೧೨ ವಿಕೆಟ್ ಪಡೆದಿದ್ದ, ಓವರ್‌ಗೆ ಬರೀ ೬.೬೧ ರನ್ (ಅದು ಭಾರತದ ಪಿಚ್‌ನಲ್ಲಿ ಎಂಬ ನೆನಪಿರಲಿ) ನೀಡಿದ್ದ ಆಸ್ಟ್ರೇಲಿಯಾದ ಗ್ಲೆನ್ ಮೆಗ್ರಾತ್‌ರಿಗೆ ದೆಹಲಿಯ ಡೇರ್ ಡೆವಿಲ್ಸ್ ಒಂದೇ ಒಂದು ಪಂದ್ಯವಾಡಲು ಅವಕಾಶ ನೀಡಲಿಲ್ಲ. ನ್ಯೂಜಿಲ್ಯಾಂಡ್‌ನ ನಾಯಕ ಡೇನಿಯಲ್ ವೆಟ್ಟೋರಿಯವರ ನಿಯಂತ್ರಿತ ಬೌಲಿಂಗ್ ಟ್ವೆಂಟಿ ೨೦ಗೆ ಹೇಳಿಮಾಡಿಸಿದಂತಿತ್ತು. ಆದರೂ ಅವರು ಈ ಬಾರಿ ಆಡಿದ್ದು ಏಳು ಪಂದ್ಯದಲ್ಲಿ ಮಾತ್ರ. ಇನ್ನರ್ಧ ವೇಳೆ ಡಗ್‌ಔಟ್‌ನ ಬೆಂಚು ಕಾಯಿಸಿದ್ದೇ ಬಂತು!
ಗ್ಲೆನ್ ಮೆಗ್ರಾತ್ ಬೇಸರಗೊಂಡು ಬರುವ ವರ್ಷ ಐಪಿಎಲ್‌ಗೆ ಮರಳುವುದಿಲ್ಲ ಎಂದು ಧ್ವನಿಸಿದ್ದು ಸುದ್ದಿಯಾಗಿತ್ತು. ಒಂದೇ ದಿನದಲ್ಲಿ ಅವರ ಹೇಳಿಕೆ ಬದಲಾಗಿತ್ತು. ತಣ್ಣಗೆ ಕೂತರೂ ಒಪ್ಪಂದದ ಭಾರೀ ಹಣದ ಚೆಕ್ ಕೈಸೇರುತ್ತದಲ್ಲ! ಮೆಗ್ರಾತ್ ತಮ್ಮ ಹೇಳಿಕೆಯನ್ನೇ ಅಲ್ಲಗಳೆದರು. ಗೌರವ ಬೇಕು ಎಂದವರು ಯರು? ಎಲ್ಲಾ ಕುರುಡು ಕಾಂಚಾಣದ ಮಹಿಮೆ, ಅಬ್ಬಾ!
ಅಂದರೆ ಬರುವ ವರ್ಷವೂ ಸೌರವ್ ಗಂಗೂಲಿ, ಲಕ್ಷ್ಮಣ್, ವೆಟ್ಟೋರಿಗಳು ಆಡಿದರೆ ಅಚ್ಚರಿಯಿಲ್ಲ!!

-ಮಾವೆಂಸ

ಗುರುವಾರ, ಮೇ 21, 2009

ಫ್ರೆಂಚ್ ಓಪನ್ 2009: ಶರಪೋವಾ ಬರುತ್ತಿದ್ದಾಳೆ!
ಇತ್ತೀಚೆಗೆ ಗ್ರಾನ್‌ಸ್ಲಾಂ ಟೆನಿಸ್ ಪೂರ್ವಸಮೀಕ್ಷೆಗಳು ಏಕತಾನತೆಯಿಂದ ಕೂಡಿರುತ್ತವೆ. ಅಕ್ಷರಶಃ ಇದು ಕನ್ನಡ ಚಿತ್ರಗಳ ಕಥೆ, ನಟನೆಗಳ ಬದಲು ಮಚ್ಚು ಲಾಂಗುಗಳ ಪಾತ್ರವಿದ್ದಂತೆ. ಒಬ್ಬ ಕ್ರೀಡಾ ಬರಹಗಾರ ಅದೇನೇ ಮಾಡಿದರೂ ರಫೆಲ್ ನಡಾಲ್ - ರೋಜರ್ ಫೆಡರರ್ ಎಂಬ ಪಾತ್ರಗಳನ್ನು ಅಲಕ್ಷಿಸಲು ಸಾಧ್ಯವೇ ಇಲ್ಲ. ಎಲ್ಲಾ ವಿಶ್ಲೇಷಣೆ ಇವರಿಬ್ಬರ ಸುತ್ತಲೇ ಗಿರಕಿ ಹೊಡೆಯುತ್ತದೆ!
ಆದರೆ ಫೆಡರರ್ ಈ ವರ್ಷದ ಫ್ರೆಂಚ್ ಓಪನ್ ಗೆಲ್ಲುವ ಫೇವರಿಟ್! ಈಗಾಗಲೇ ಒಂದು ವೆಬ್‌ಸೈಟ್ ಇಂತಹ ನಿರೀಕ್ಷೆಯನ್ನು ಮಾಡಿದೆಯಾದರೂ ಓದಿದವರು ನಕ್ಕು ಹಗುರಾಗುವ ಸಂಭವವೇ ಹೆಚ್ಚು. ಪೀಟ್ ಸಾಂಪ್ರಾಸ್‌ರ ಸಾರ್ವಕಾಲಿಕ ಸಿಂಗಲ್ಸ್ ಗ್ರಾನ್‌ಸ್ಲಾಂಗೆ ಒಂದೇ ಒಂದು ಮೆಟ್ಟಿಲು ಹತ್ತಬೇಕಿರುವ ಫೆಡ್ ಫ್ರೆಂಚ್ ಓಪನ್ ಗೆದ್ದರೆ ಹತ್ತು ಹಲವು ಪ್ರಶ್ನೆಗಳಿಗೆ ಒಮ್ಮೆಲೇ ಉತ್ತರ ಕೊಟ್ಟಂತೆ. ಅವರ ಫಾರಂ ಕೂಡ ತೀರ ಕಳಪೆಯಾಗಿಲ್ಲ. ೨೦೦೯ರಲ್ಲಿ ಅವರ ಸಾಧನೆ ನೆನಪಿರಲಿ, ಫೆಡ್ ನಡಾಲ್‌ರನ್ನು ಕ್ಲೇ ಕೋರ್ಟ್‌ನಲ್ಲಿಯೇ ಮಣಿಸಿದ ದೃಷ್ಟಾಂತವಿದೆ!
ನಡಾಲ್‌ರ ಗುಣಗಾನ ಇಂದಿನ ಅನಿವಾರ್ಯ. ಈಗಾಗಲೆ ನಾಲ್ಕು ಸತತ ಫ್ರೆಂಚ್ ಗೆದ್ದಿರುವ ನಡಾಲ್ ಅದಾಗಲೇ ೧೫ ಎಟಿಪಿ ಟೂರ್ ಮಾಸ್ಟರ್‍ಸ್ ಪ್ರಶಸ್ತಿ ಗೆದ್ದಿದ್ದಾರೆ. ಈ ಎಟಿಪಿ ಮಾಸ್ಟರ್‍ಸ್ ಹೆಚ್ಚು ಕಡಿಮೆ ಗ್ರಾನ್‌ಸ್ಲಾಂಗಳ ಎಲ್ಲ ಎದುರಾಳಿಗಳನ್ನೇ ಹೊಂದಿರುತ್ತದೆ. ಮೊನ್ನೆ ರೋಮ್‌ನಲ್ಲೂ ಕೈ ಮೇಲಾದದ್ದು ರಫಾದ್ದೇ. ಇದರ ಮಧ್ಯೆ ಫ್ರೆಂಚ್‌ನ ರೊಲ್ಯಾಂಡ್ ಗ್ಯಾರಸ್‌ನ ಕೆಂಪು ಮಣ್ಣು ನಡಾಲ್‌ರ ತವರುಮನೆ!
ಸುಮ್ಮನೆ ರಫೆಲ್‌ರ ಕ್ಯಾರಿಯರ್‌ನಲ್ಲಿ ಇಣುಕಿದರೆ ಕ್ಲೇ ಕೋರ್ಟ್‌ನಲ್ಲಿ ೧೭೩ ಸಿಂಗಲ್ಸ್ ಗೆದ್ದುದು ಕಾಣುತ್ತದೆ. ಸೋತದ್ದು ೧೪ ಬಾರಿ ಮಾತ್ರ. ಇದನ್ನೇ ೨೦೦೫ರ ನಂತರ ಎಂದು ವಿಂಗಡಿಸುವುದಾದರೆ, ರಫೆಲ್ ಆಡಿದ ೧೪೯ರಲ್ಲಿ ೧೪೫ ಕ್ಲೇ ಪಂದ್ಯ ಗೆದ್ದಿದ್ದಾರೆ. ಅಷ್ಟೇಕೆ, ಒಟ್ಟಾರೆ ಕ್ಲೇ ಕೋರ್ಟ್ ಫೈನಲ್‌ಗಳಲ್ಲಿ ರಫಾ ಪರಾಭವಗೊಂಡಿದ್ದು ಒಮ್ಮೆ, ವಿಜೇತರಾಗಿದ್ದು ೨೫ ಬಾರಿ!
ಪರಿಸ್ಥಿತಿ ಹೀಗಿರುವಾಗ ಉಳಿದ ಆಟಗಾರರು ರಫೆಲ್‌ರ ಅನಾರೋಗ್ಯವನ್ನು ಆಶಿಸಿ ತಪಸ್ಸು ಮಾಡಬೇಕಾದೀತು. ಸ್ವಾರಸ್ಯವೆಂದರೆ ಕೇವಲ ಒಂದು ವರ್ಷದ ಆಚೆಗೆ, ೨೦೦೭ರಲ್ಲಿ ರೋಜರ್ ಫೆಡರರ್ ಕುರಿತಂತೆ ಇದೇ ಮಾತುಗಳು ಅನುರಣಿಸುತ್ತಿದ್ದವು. ಅವರು ಫ್ರೆಂಚ್ ಗ್ರಾನ್‌ಸ್ಲಾಂ ಬಿಟ್ಟರೆ ಉಳಿದೆಡೆಗಳಲ್ಲಿ ಅಜೇಯರಾಗಿದ್ದರು. ಆಗ ಫೆಡ್ ಸೋಲಿಸುವ ಟಿಪ್ಸ್‌ಗಳು ಅವರನ್ನು ಸೋಲಿಸಲಾಗದ ಅಸಹಾಯಕತೆಯನ್ನು ಪ್ರತಿಬಿಂಬಿಸುವ ಹಾಸ್ಯಗಳಾಗಿದ್ದವು. ಇಂದು ಅವನ್ನೆಲ್ಲ ನಡಾಲ್‌ರಿಗೆ ಅನ್ವಯಿಸಬೇಕಿದೆ. ದುರಂತ ನೋಡಿ, ೨೦೦೮ರ ಆಸ್ಟ್ರೇಲಿಯನ್ ಓಪನ್ ವೇಳೆಗೆ ಪೂರ್ತಿ ಫಿಟ್‌ನೆಸ್ ಇಲ್ಲದ ಫೆಡರರ್ ಸೋತುಹೋದರು. ನಡಾಲ್‌ರಿಗೆ ಚಕ್ರಾಧಿಪತ್ಯ ಸ್ಥಾಪಿಸಲು ಕಾರಣವಾಯಿತು. ಇತಿಹಾಸ ಮರುಕಳಿಸುವುದೇ?
ಮೇ ೨೪ರಿಂದ ಜೂನ್ ೭ರವರೆಗೆ ಈ ಬಾರಿಯ ಕ್ಲೇ ಚಾಂಪಿಯನ್‌ಶಿಪ್ ಜರುಗಲಿದೆ. ಇದು ಅದರ ೭೯ನೇ ಸಂಚಿಕೆ. ಕಳೆದ ದಶಕದಲ್ಲಿ ಫ್ರೆಂಚ್ ಓಪನ್ ಮಾತ್ರ ಹೊಸ ಟೆನಿಸ್ ಪ್ರತಿಭೆಗಳಿಗೆ ಚೊಚ್ಚಲ ಗ್ರಾನ್‌ಸ್ಲಾಂ ಗಳಿಸಿಕೊಟ್ಟದ್ದು ನೆನಪಾದರೆ ಡೇವಿಡ್ ಫೆರರ್, ಫರ್ನಾಂಡೋ ವೆರ್ಡಾಸ್ಕೋ, ನಿಕೊಲಾಯ್ ಡೆವಿಡೆಂಕೋ, ಡೇವಿಡ್ ನೆಲಬಾಂಡಿಯನ್‌ರಂತವರಿಗೆ ರಫೆಲ್ ನಡಾಲ್‌ರನ್ನು ಮಣಿಸುವ ಚಿಕ್ಕ ಆತ್ಮವಿಶ್ವಾಸ ಮೂಡಬಹುದು. ಕಳೆದ ಎಂಟು ವರ್ಷಗಳಲ್ಲಿ ಆರು ಮಂದಿಗೆ ಚೊಚ್ಚಲ ಗ್ರಾನ್‌ಸ್ಲಾಂ ದಕ್ಕಿದ್ದು ಇಲ್ಲೇ. ನಡಾಲ್‌ರನ್ನೂ ಈ ಪಟ್ಟಿಗೆ ಸೇರಿಸಲಾಗಿದೆ! ವರ್ಷದಲ್ಲಾಗಲೇ ಐದು ಪ್ರಶಸ್ತಿ ಪಡೆದಾತನ ಬಗ್ಗೆ ಇತರರಿಗೆ ಪುಟ್ಟ ಹೆದರಿಕೆ ಇಲ್ಲದಿರುತ್ತದೆಯೇ?
ಇಲ್ಲಿ ಪುರುಷ ಹಾಗೂ ಮಹಿಳಾ ಚಾಂಪಿಯನ್‌ಗಳಿಗೆ ಸಮಾನ ಬಹುಮಾನದ ಮೊತ್ತ. ೧೦ ಲಕ್ಷ ಪೌಂಡ್‌ಗಳ ಭರ್ಜರಿ ಚೆಕ್. ಇಡೀ ವಿಶ್ವ ಆರ್ಥಿಕ ಹಿಂಜರಿತದ ಕಬಂಧ ಬಾಹುಗಳಲ್ಲಿದ್ದರೂ ಅದು ಫ್ರೆಂಚ್ ಓಪನ್‌ಗೆ ತಟ್ಟಿದಂತಿಲ್ಲ. ನಿಜಕ್ಕಾದರೆ ಬಹುಮಾನದ ಮೊತ್ತ ಶೇ.೩.೬೯ರಷ್ಟು ಹೆಚ್ಚಾಗಿದೆ!
ಫ್ರೆಂಚ್ ಮಹಿಳಾ ಪ್ರಶಸ್ತಿಯನ್ನು ಗೆಲ್ಲುವವರ ಮಾತು ಅತ್ಲಾಗಿರಲಿ, ಗ್ಲಾಮರಸ್ ಮಾರಿಯಾ ಶರಪೋವಾ ಸ್ಪರ್ಧಾತ್ಮಕ ಟೆನಿಸ್‌ಗೆ ಮರಳುತ್ತಿರುವುದು ಹೆಚ್ಚು ಪ್ರಚಾರದಲ್ಲಿರುವ ಸುದ್ದಿ. ಮಾರಿಯಾ ಪ್ರಶಸ್ತಿಯ ಫೇವರಿಟ್ ಮಾತ್ರ ಅಲ್ಲ! ಒಂಬತ್ತು ತಿಂಗಳಿನಿಂದ ರ್‍ಯಾಕೆಟ್ ಹಿಡಿಯದಿರುವ ಶರಪೋವಾರ ಈಗಿನ ರ್‍ಯಾಂಕಿಂಗ್ ೬೫. ಈ ಹಿಂದೆ ಆಗೊಮ್ಮೆ ಈಗೊಮ್ಮೆಯೆಂದು ೧೭ ವಾರ ಅಗ್ರಕ್ರಮಾಂಕದಲ್ಲಿ ಮೆರೆದಿದ್ದ ಪೋವಾ ವಾರ್ಸವಾ ಓಪನ್‌ನಿಂದ ಪುನರಾಗಮಿಸಿದ್ದಾರೆ. ಖುಷಿಪಡಬೇಕು, ಮಹಿಳಾ ಟೆನಿಸ್‌ನಲ್ಲಿ ತುಸು ಪೈಪೋಟಿ ಉಂಟಾಗಬಹುದು.
ರಷ್ಯಾದ ಮರಾತ್ ಸಫಿನ್ ಪ್ರತಿಭೆಯ ಕಣಜ ಎಂಬುದೇನೋ ನಿಜ. ಆದರೆ ಮಾನಸಿಕ ಸ್ಥಿರತೆ ಕಾಯ್ದುಕೊಳ್ಳದೆ ರ್‍ಯಾಕೆಟ್ ಮುರಿದುಹಾಕುತ್ತ ತನ್ನ ಟೆನಿಸ್ ಫಲಿತಾಂಶಗಳನ್ನು ಹಾಳು ಮಾಡಿಕೊಂಡಾತ. ಫೆಡರರ್‌ರ ಉತ್ಕರ್ಷದ ಕಾಲದಲ್ಲಿ ಅವರನ್ನು ಫೈನಲ್‌ನಲ್ಲಿ ಸೋಲಿಸಿದ ಪ್ರಪ್ರಥಮ ಸಾಹಸಿ. ಅಂತಹವನ ತಂಗಿ ದಿನಾರಾ ಸಫಿನಾ ಕೂಡ ಮೂಡಿಯೇ. ಅವಳದೀಗ ನಂ.೧ ಪಟ್ಟದ ಆಳ್ವಿಕೆ. ಅಗ್ರಕ್ರಮಾಂಕಕ್ಕೆ ಅನುಸಾರವಾಗಿಯೇ ಫಾರಂ ಇದೆ. ಮೊನ್ನೆ ರೋಮ್‌ನಲ್ಲಿ ಪ್ರಶಸ್ತಿ ಸಿಕ್ಕಿದೆ. ಗ್ರಾನ್‌ಸ್ಲಾಂ? ಸುಲಭವಲ್ಲ. ಈವರೆಗೆ ಒಂದೂ ಸಿಕ್ಕಿಲ್ಲ. ಇದೇ ಸಫಿನಾ ಆಸ್ಟ್ರೇಲಿಯನ್ ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್ ಎದುರು ಬಾಲಂಗೋಚಿಯಂತಾದದ್ದು ಕಣ್ಣ ಮುಂದೆ ಹಾಯುತ್ತದೆ.
ಟೆನಿಸ್ ಅಂದರೇನೇ ಹಾಗೆ. ಇಲ್ಲಿ ಚಾಂಪಿಯನ್ ಗುಣ ಇರಬೇಕು. ಮಹತ್ವದ ಘಟ್ಟದಲ್ಲಿ ಶಸ್ತ್ರ ಮರೆಯುವ ಕರ್ಣರಾಗುವಂತಿಲ್ಲ. ಆ ತಾಕತ್ತು ಇಗಿರುವುದು ಸೆರೆನಾಗೆ ಮಾತ್ರ. ಗಾಯದ ಸಮಸ್ಯೆಗೆ ಸಿಲುಕಿರುವ ಸೆರೆನಾ ಪೂರ್ಣ ಫಿಟ್ ಎನ್ನಿಸಿದಲ್ಲಿ ಅವರಿಂದ ಯಾರಿಗೂ ಪ್ರಶಸ್ತಿ ತಪ್ಪಿಸಲು ಸಾಧ್ಯವಿಲ್ಲ. ಈ ಮಾತನ್ನು ಫ್ರೆಂಚ್ ಕ್ಲೇ ಆಕೆಯ ಕನಿಷ್ಟ ಆದ್ಯತೆಯ ಅಂಕಣ ಎಂಬುದರ ಹೊರತಾಗಿಯೂ ಹೇಳುವ ಧೈರ್ಯ ಮಾಡಬಹುದು. ಆ ಮಟ್ಟಿಗೆ ಮಹಿಳಾ ಟೆನಿಸ್ ಗುಣಮಟ್ಟ ಕುಸಿದಿದೆ.
ಬೇರೆ ಬಿಡಿ, ಕಳೆದ ವರ್ಷದ ವಿಜೇತೆ ಅನಾ ಇವಾನೋವಿಕ್ ಸದರಿ ಸಂಚಿಕೆಯಲ್ಲಿ ಎರಡನೆ ವಾರಕ್ಕೆ ಬಾಳುವುದು ಸಂಶಯ. ಆಕೆ ಎಲ್ಲಿದ್ದಾಳೆಂಬ ಕುರಿತು ಹುಡುಕಾಡಲು ರ್‍ಯಾಂಕಿಂಗ್ ಪತ್ತೆದಾರರು ಬೇಕಾದಾರು. ಖುದ್ದು ಡಬ್ಲ್ಯುಟಿಎಗೆ ಈ ‘ಒನ್ ಟೈಮ್ ವಂಡರ್’ಗಳ ಬಗ್ಗೆ ಅವಜ್ಞೆಯಿದೆ.
ಕೊನೆ ಮಾತು - ಈ ರೊಲ್ಯಾಂಡ್ ಗ್ಯಾರಸ್ ಪ್ರಶಸ್ತಿಗೆ ಒಂದು ಆರೋಪವೂ ಇದೆ. ಇಲ್ಲಿ ತಮ್ಮ ಚೊಚ್ಚಲ ಗ್ರಾನ್‌ಸ್ಲಾಂ ಗೆದ್ದವರು ಇನ್ನೆಲ್ಲೂ, ಇನ್ನೆಂದೂ ಸ್ಲಾಂ ಗೆಲ್ಲದೇ ಹೋಗುವ ಸಂಪ್ರದಾಯ! ೧೭ ವರ್ಷಕ್ಕೆ ಇಲ್ಲಿ ಚೊಚ್ಚಲ ಸ್ಲಾಂ ಗೆದ್ದು ದಾಖಲೆ ಮಾಡಿದ ಮೈಕೆಲ್ ಚಾಂಗ್ ನಿವೃತ್ತಿ ಹೇಳುವಾಗ ಚೀಲದಲ್ಲಿದ್ದುದೂ ಅದೊಂದೇ!


-ಮಾವೆಂಸ

ಭಾನುವಾರ, ಮೇ 17, 2009

ಕೇರಳದ ವೈಶಿಷ್ಟ್ಯ:ಗ್ರಾಮಪಂಚಾಯ್ತಿಗೂ ಒಂಬುಡ್ಸ್‌ಮನ್......
ಭ್ರಷ್ಟಾಚಾರ ತಳಮಟ್ಟದವರೆಗೂ ಮುಟ್ಟಿದೆ. ಬಡ ನಿರ್ಗತಿಕರಿಗೆ ಮನೆ ಕಟ್ಟಲು ಕೊಡುವ ೨೦ ಸಾವಿರ ರೂ.ಗಳಲ್ಲೂ ೫೦೦, ಸಾವಿರ ರೂಪಾಯಿ ಕಿತ್ತುಕೊಳ್ಳುವ ಪಂಚಾಯ್ತಿ ಕಾರ್ಯದರ್ಶಿಗಳಿದ್ದಾರೆ, ಜನಪ್ರತಿನಿಧಿಗಳಿದ್ದಾರೆ. ಊರಲ್ಲಿ ಇಲ್ಲದ ಕೆರೆಯ ಹೂಳು ತೆಗೆಯುತ್ತಾರೆ. ಲೆಕ್ಕದಲ್ಲಿ ರಸ್ತೆ ರಿಪೇರಿ ಆಗಿರುತ್ತದೆ! ಹಾಗಾಗಿಯೇ ಒಂದು ಪಂಚಾಯ್ತಿ ಚುನಾವಣೆಯಲ್ಲಿ ಅಭ್ಯರ್ಥಿಗಳು ಹಲವು ಲಕ್ಷ ರೂಪಾಯಿ ಖರ್ಚು ಮಾಡುವುದು ಸಾಮಾನ್ಯವಾಗಿದೆ. ಒಂದೆಡೆ ಈ ಅವ್ಯವಹಾರಗಳನ್ನು ತಡೆಯಲು ಸರಳ ಕಾನೂನು ಅಸ್ತ್ರಗಳಿಲ್ಲ. ಲೋಕಾಯುಕ್ತಕ್ಕೆ ಅಥವಾ ಸಾಂಪ್ರದಾಯಿಕ ನ್ಯಾಯಾಲಯಗಳಿಗೇ ಹೋಗಬೇಕು. ಸಮಯ, ಖರ್ಚು ಲೆಕ್ಕದಲ್ಲಿ ದುಬಾರಿಯೇ ಸರಿ. ಇದು ಕರ್ನಾಟಕದ ವ್ಯಥೆ. ಪಕ್ಕದ ಕೇರಳದಲ್ಲಿ ಹಾಗಿಲ್ಲ. ಅಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ವಿರುದ್ಧದ ದೂರು ನಿವಾರಣೆಗೆ ಪಂಚಾಯತ್ ಒಂಬುಡ್ಸ್‌ಮನ್ ಇದೆ.
ಪ್ರಸ್ತುತ ಹಲವು ಕ್ಷೇತ್ರಗಳಲ್ಲಿ ಒಂಬುಡ್ಸ್‌ಮನ್ ಜನಪ್ರಿಯ. ಬ್ಯಾಂಕಿಂಗ್, ವಿಮೆ ಒಂಬುಡ್ಸ್‌ಮನ್‌ಗಳು ಪಡೆದಿರುವ ನ್ಯಾಯ ತೀರ್ಮಾನದ ‘ಪವರ್’ಗೆ ಬ್ಯಾಂಕ್, ಇನ್ಸೂರೆನ್ಸ್ ಕಂಪನಿಗಳು ಬೆಚ್ಚಿಬೀಳಲೇಬೇಕಿದೆ. ಒಂಬುಡ್ಸ್‌ಮನ್ ತೀರ್ಪಿಗೆ ಸದರಿ ಸಂಸ್ಥೆಗಳು ತಲೆಬಾಗಲೇಬೇಕು. ಮೇನ್ಮನವಿ ಸಲ್ಲಿಸುವುದಕ್ಕೂ ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಕೇರಳದ ಪಂಚಾಯತ್ ಒಂಬುಡ್ಸ್‌ಮನ್ ಸ್ವಾಗತಾರ್ಹ ವ್ಯವಸ್ಥೆ.
ಅಲ್ಲಿನ ಸರ್ಕಾರ ಒಂಬುಡ್ಸ್‌ಮನ್ ನಿಯಮಗಳನ್ನು ರಚಿಸಿದ್ದು ೨೦೦೦ದ ಜನವರಿಯಲ್ಲಿ. ಮುಂದಿನ ಐದೇ ತಿಂಗಳಲ್ಲಿ ಏಕ ನ್ಯಾಯಾಧೀಶರ ನೇತೃತ್ವದ ಒಂಬುಡ್ಸ್‌ಮನ್ ವ್ಯವಸ್ಥೆ ಜಾರಿಗೆ ಬಂದಾಗಿತ್ತು. ಸ್ಥಳೀಯ ಪಂಚಾಯತ್ ವ್ಯವಸ್ಥೆಗಳು ಮತ್ತು ಅಲ್ಲಿನ ಅಧಿಕಾರಿಗಳು, ಉದ್ಯೋಗಿಗಳು ನಡೆಸುವ ಭ್ರಷ್ಟಾಚಾರ, ಅಧಿಕಾರ ದುರುಪಯೋಗಗಳ ಕುರಿತಂತೆ ವಿಚಾರಣೆ ನಡೆಸಿ ತೀರ್ಪು ನೀಡುವುದು ಈ ಒಂಬುಡ್ಸ್‌ಮನ್ ಜವಾಬ್ದಾರಿ. ಇದರ ವ್ಯಾಪ್ತಿಗೆ ಪಂಚಾಯತ್ ರಾಜ್ ಪ್ರತಿನಿಧಿಗಳು, ಅಧ್ಯಕ್ಷರು ಕೂಡ ಒಳಪಡುತ್ತಾರೆ. ಇಂತಹ ಅದ್ಭುತ ಅವಕಾಶವನ್ನು ೧೯೯೪ರ ಕೇರಳ ಪಂಚಾಯತ್ ರಾಜ್ ಕಾಯ್ದೆಯ ಕಲಂ ೧೩ರಲ್ಲಿಯೇ ನೀಡಲಾಗಿದೆ. ಅಷ್ಟೇ ಅಲ್ಲ, ಅಲ್ಲಿನ ಪುರಸಭೆಗಳೂ ಈ ಒಂಬುಡ್ಸ್‌ಮನ್‌ನ ಕಣ್ಗಾವಲಿಗೆ ಒಳಪಡುತ್ತವೆ.
ಒಂದು ಅಂದಾಜಿನ ಪ್ರಕಾರ, ರಾಷ್ಟ್ರದ ಇನ್ನಾವುದೇ ರಾಜ್ಯದಲ್ಲಿ ಇಂತಹ ಪಂಚಾಯತ್ ರಾಜ್ ಒಂಬುಡ್ಸ್‌ಮನ್ ಇಲ್ಲ. ಒಂಬುಡ್ಸ್‌ಮನ್ ಮುಖ್ಯ ಕಛೇರಿ ರಾಜ್ಯದ ರಾಜಧಾನಿಯಲ್ಲಿ ಇದೆಯಾದರೂ ಒಂಬುಡ್ಸ್‌ಮನ್ ಯಾವುದೇ ಸ್ಥಳಕ್ಕೆ ಭೇಟಿ ಕೊಟ್ಟು ವಿಚಾರಣೆ ನಡೆಸುವ ಪ್ರಾವಿಧಾನವಿದೆ. ೨೦೦೧ರಲ್ಲಿ ರಾಜ್ಯದ ೪೯ ಕಡೆ ಕ್ಯಾಂಪ್ ಮಾಡಿ ೨೨೫೪ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಿದೆ. ಪ್ರಸ್ತುತ ಕೇರಳದ ಈ ಒಂಬುಡ್ಸ್‌ಮನ್ ಕಲಾಪ ತಿರುವನಂತಪುರಂ, ಎರ್ನಾಕುಲಂ, ಕೊಚಿಕೋಡಿಯಲ್ಲಿ ನಿರಂತರವಾಗಿ ಜರುಗುತ್ತಿದೆ. ಅಲ್ಲದೆ ಕನ್ನೂರು, ಪಾಲಕ್ಕಾಡ್ ಮುಂತಾದೆಡೆಯೂ ಅಪರೂಪಕ್ಕೊಮ್ಮೆಯೆಂಬಂತೆ ವಿಚಾರಣೆ ನಡೆಯುತ್ತಿದೆ.
೨೦೦೦ದಲ್ಲಿ ಈ ವ್ಯವಸ್ಥೆ ಆರಂಭವಾದಾಗ ಏಳು ಜನರ ಸಮಿತಿಯನ್ನು ಓರ್ವ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನಿರ್ವಹಿಸುವ ನಿಯಮವಿತ್ತು. ಆದರೆ ನಂತರದ ರಾಜ್ಯಸರ್ಕಾರ ೨೦೦೧ರಲ್ಲಿ ತಿದ್ದುಪಡಿ ಮಾಡಿ ಏಕವ್ಯಕ್ತಿಯ ಒಂಬುಡ್ಸ್‌ಮನ್ ಪದ್ಧತಿಯನ್ನು ಜಾರಿಗೊಳಿಸಿತು. ಆ ವರ್ಷಗಳಲ್ಲಿ ಜಸ್ಟೀಸ್ ಟಿ.ಕೆ.ಚಂದ್ರಶೇಖರ್ ದಾಸ್, ಜಸ್ಟೀಸ್ ಕೆ.ಪಿ.ರಾಧಾಕೃಷ್ಣ ಮೆನನ್, ಜಸ್ಟೀಸ್ ಸಿ.ಎ.ಮಹ್ಮದ್ ಒಂಬುಡ್ಸ್‌ಮನ್ ಆಗಿ ಕೆಲಸ ಮಾಡಿದರು. ೨೦೦೮ರಿಂದ ಜವಾಬ್ದಾರಿ ವಹಿಸಿಕೊಂಡಿರುವ ಜಸ್ಟೀಸ್ ಎಂ.ಆರ್.ಹರಿಹರನ್ ನಾಯರ್ ಮೂರು ವರ್ಷದ ಅವಧಿಗೆ ಅಂದರೆ ೨೦೧೧ರವರೆಗೆ ಕಾರ್ಯ ನಿರ್ವಹಿಸಲಿದ್ದಾರೆ.
ಒಂಬುಡ್ಸ್‌ಮನ್‌ಗೆ ದೂರು ಸಲ್ಲಿಸುವವರು ಲಿಖಿತ ದೂರು ದಾಖಲಿಸಬೇಕು. ಕೇವಲ ೧೦ ರುಪಾಯಿಗಳ ಕೋರ್ಟ್ ಶುಲ್ಕ ಕಟ್ಟಿದರೆ ಆಯಿತು. ವಿಶೇಷ ಸಂದರ್ಭಗಳಲ್ಲಿ ಮಾತ್ರ, ಅದೂ ನ್ಯಾಯಾಧೀಶರ ಒಪ್ಪಿಗೆ ಪಡೆದರಷ್ಟೇ ವಕೀಲರ ನೆರವು ಪಡೆದುಕೊಳ್ಳಬಹುದು. ಹೀಗೆ ನೇರವಾಗಿ ದೂರುದಾರರೇ ವಿಚಾರಣೆಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಪ್ರಕರಣಗಳು ಶೀಘ್ರವಾಗಿ ಇತ್ಯರ್ಥವಾಗುತ್ತಿದೆ. ಪ್ರತಿ ಲಿಖಿತ ದೂರಿನ ಜೊತೆಗೆ ದೂರುದಾರ ಫಾರಂ ಎ ಯನ್ನು ಸಲ್ಲಿಸಬೇಕು. ಹೆಸರಿಸಲಾದ ಆರೋಪಿಗಳ ಸಂಖ್ಯೆಯಷ್ಟೇ ದೂರಿನ ಫಾರಂ ಎ ಪ್ರತಿಯನ್ನು ಇಡಬೇಕಾಗುತ್ತದೆ. ನಾಗರಿಕರು ಖುದ್ದಾಗಿ ಅಥವಾ ಅಂಚೆ, ಫ್ಯಾಕ್ಸ್ ಮೂಲಕವೂ ತಮ್ಮ ದೂರು ಪ್ರಕರಣವನ್ನು ದಾಖಲಿಸಬಹುದು.
ಕೇರಳದಲ್ಲಿ ದೊಡ್ಡ ಸಂಖ್ಯೆಯಲ್ಲಿಯೇ ಒಂಬುಡ್ಸ್‌ಮನ್‌ಗೆ ದೂರುಗಳು ಬರುತ್ತಿವೆ. ೨೦೦೩-೦೪ರ ಒಂದು ಅಂಕಿಅಂಶದ ಪ್ರಕಾರ, ೨೩೨ ಪ್ರಕರಣಗಳನ್ನು ಸ್ವೀಕರಿಸಿದ ದಿನವೇ ತೀರ್ಮಾನಿಸಲಾಗಿದೆ! ಜೊತೆಗೆ ಉಳಿದ ೯೨೧ ದೂರುಗಳು ಇತ್ಯರ್ಥಗೊಂಡ ಪಟ್ಟಿಯಲ್ಲಿವೆ. ಈ ೧೧೫೩ ಪರಿಹಾರ ಕಂಡ ಪ್ರಕರಣಗಳಲ್ಲಿ ೮೬೦ ದೂರು ಅದೇ ವರ್ಷ ದಾಖಲಾದವು. ಖುದ್ದು ಒಂಬುಡ್ಸ್‌ಮನ್ ೨೩ ಪ್ರಕರಣಗಳನ್ನು ಹೆಚ್ಚಿನ ತನಿಖೆಗೆ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ವಿರೋಧಿ ಬ್ಯೂರೋಗೆ ಸೂಚಿಸಿತು. ಕಾನೂನಿನ ಅನ್ವಯವೇ ಪಂಚಾಯತ್ ಒಂಬುಡ್ಸ್‌ಮನ್ ಸಾಕ್ಷಿ, ದಾಖಲೆಗಳ ಸಾಮಾನ್ಯ ನ್ಯಾಯಾಲಯದ ವಿಧಿವಿಧಾನಗಳಿಗೆ ವ್ಯತಿರಿಕ್ತವಾಗಿ ಒಂಬುಡ್ಸ್‌ಮನ್‌ರಿಗೆ ಮನವರಿಕೆ ಆಗಬೇಕಾದ ತತ್ವವನ್ನು ಆಧರಿಸಿರುತ್ತದೆ. ಹಾಗಾಗಿಯೇ ಇಂದು ಅಲ್ಲಿನ ಒಂಬುಡ್ಸ್‌ಮನ್ ದಿನವೊಂದಕ್ಕೆ ಇತ್ಯರ್ಥಪಡಿಸುವ ಸರಾಸರಿ ಕೇಸ್‌ಗಳ ಸಂಖ್ಯೆ ಮೂರಕ್ಕೂ ಹೆಚ್ಚು!
ಸಾರ್ವಜನಿಕ ಹಿತಾಸಕ್ತಿಗಳನ್ನು ಕಾಪಾಡುವುದರಲ್ಲೂ ಒಂಬುಡ್ಸ್‌ಮನ್ ಪ್ರಜ್ಞಾವಂತಿಕೆ ಮೆರೆದಿದೆ. ಇತ್ತೀಚಿನ ಒಂದು ಪ್ರಕರಣದ ವಿಚಾರಣೆ ನಡೆಸಿದ ಹರಿಹರನ್ ನಾಯರ್ ಪ್ಲಾಸ್ಟಿಕ್ ತ್ರಾಜ್ಯಗಳ ವಿಲೇವಾರಿ ಕುರಿತಂತೆ ದೊಡ್ಡ ಆಂದೋಲನದ ಆದೇಶವಿತ್ತಿದ್ದಾರೆ. ಅಲ್ಲಿನ ಕೊಚ್ಚಿಯಲ್ಲಿ ತ್ರಾಜ್ಯ ನಿರ್ವಹಣೆ ಕೆಟ್ಟದಾಗಿದೆ. ಅದಕ್ಕಾಗಿ ಭೂಮಿಯ ಅಗತ್ಯವಿದ್ದು ಒಂಬುಡ್ಸ್‌ಮನ್ ಸಮೀಪದ ಬ್ರಹ್ಮಪುರಂನಲ್ಲಿ ತ್ರಾಜ್ಯ ಘಟಕವನ್ನು ರೂಪಿಸಲು ಆದೇಶಿಸಿದೆ. ಕೇರಳದಲ್ಲಿ ಕಚ್ಚಾ ಪ್ಲಾಸ್ಟಿಕ್ ಕೊರತೆಯ ಕಾರಣ ನೆರೆ ರಾಜ್ಯಗಳಿಂದ ಕಚ್ಚಾ ಪದಾರ್ಥ ಮತ್ತು ಪ್ಲಾಸ್ಟಿಕ್ ತ್ರಾಜ್ಯವನ್ನು ಕೈಗಾರಿಕೆಗಳು ದುಬಾರಿ ಬೆಲೆ ಕೊಟ್ಟು ಖರೀದಿಸುವುದನ್ನು ಜಸ್ಟೀಸ್ ನಾಯರ್ ಗಮನಿಸಿದ್ದಾರೆ. ಅಲ್ಲಿನ ಗೃಹಿಣಿಯರು ಹಾಗೂ ನಾಗರಿಕರು ಜಾಗೃತರಾದರೆ ಸ್ವಯಂ ಕಚ್ಚಾ ಪ್ಲಾಸ್ಟಿಕ್ ಒದಗಿಸಬಹುದು ಮತ್ತು ಪ್ಲಾಸ್ಟಿಕ್ ತ್ರಾಜ್ಯ ಸಮಸ್ಯೆಯನ್ನು ಒಂದು ಮಟ್ಟಿಗೆ ಬಗೆಹರಿಸಬಹುದು ಎಂಬುದು ನಾಯರ್ ಅನಿಸಿಕೆ. ಈ ಹಿನ್ನೆಲೆಯಲ್ಲಿ ಅವರು ಎಲ್ಲ ಸ್ಥಳೀಯ ಆಡಳಿತಗಳು ಪ್ಲಾಸ್ಟಿಕ್ ತ್ರಾಜ್ಯ ಸಂಗ್ರಹ ಹಾಗೂ ವಿಲೇವಾರಿಯನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಕುರಿತು ವಿವರವಾದ ಆದೇಶವನ್ನು ೨೦೦೮ರಲ್ಲಿ ಹೊರಡಿಸಿದರು.
ಅಕ್ಷರತೆಯ ಸಾಧನೆಯನ್ನು ಬೆನ್ನಿಗಿಟ್ಟುಕೊಂಡ ಕೇರಳದಲ್ಲೂ ಈ ಆದೇಶವನ್ನು ಸರ್ಕಾರ ಮೊದಲು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ನಾಯರ್ ಸ್ಥಳೀಯ ಸರ್ಕಾರ (ಎಲ್‌ಎಸ್‌ಜಿ) ವಿಭಾಗದ ಮುಖ್ಯ ಕಾರ್ಯದರ್ಶಿಗಳಿಗೆ ಸ್ಪಷ್ಟ ನಿರ್ದೇಶನವಿತ್ತಿದ್ದಾರೆ. ಈ ಘಟನೆ ಪಂಚಾಯತ್ ಒಂಬುಡ್ಸ್‌ಮನ್ ವ್ಯವಸ್ಥೆ ಕೇವಲ ವೈಯುಕ್ತಿಕ ಪ್ರಕರಣಗಳಲ್ಲದೆ ಸಮುದಾಯದ ಹಿತಕ್ಕೆ ಬೇಕಾದ ತೀರ್ಮಾನಗಳನ್ನೂ ಕೈಗೊಳ್ಳಬಹುದು ಎಂಬುದಕ್ಕೆ ಸಾಕ್ಷಿ. ಅಷ್ಟೇಕೆ, ಪತ್ರಿಕಾ ವರದಿ ಟಿವಿ ಸುದ್ದಿಗಳನ್ನು ಆಧರಿಸಿ ಸ್ವಯಂ ವಿವೇಚನೆಯಿಂದ ಪ್ರಕರಣಗಳನ್ನು ಕೈಗೆತ್ತಿಕೊಳ್ಳಬಹುದಾದ ಅಧಿಕಾರ ಒಂಬುಡ್ಸ್‌ಮನ್‌ರಿಗಿದೆ.
ಅಲ್ಲಿನ ಪಂಚಾಯತ್ ಒಂಬುಡ್ಸ್‌ಮನ್‌ನ ಹಲವು ತೀರ್ಪುಗಳಿಗೆ ಚರಿತ್ರಾರ್ಹ ಮಹತ್ವವಿದೆ. ಗ್ರಾಮಸಭೆಗಳು ತಮ್ಮ ಹಿಂದಿನ ತೀರ್ಮಾನಗಳನ್ನು ಕಾನೂನುಬಾಹಿರ ಅಥವಾ ಅಸಮರ್ಪಕ ಎಂದು ಪರಿಗಣಿಸಿ ಬದಲಿಸುವ ಅವಕಾಶ ನೀಡುವ ಆದೇಶವನ್ನು ಒಂಬುಡ್ಸ್‌ಮನ್ ೨೦೦೦ದಲ್ಲಿ ಒದಗಿಸಿಕೊಟ್ಟಿತು. ಕೇರಳದ ಮುನ್ಸಿಪಾಲಿಟೀಸ್ ಆಕ್ಟ್ ಆಂಡ್ ರೂಲ್ಸ್ ಅನ್ವಯ, ಕಟ್ಟಡ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದ ೩೦ ದಿನಗಳೊಳಗೆ ಯಾವುದೇ ನಿರ್ಧಾರವನ್ನು ಅರ್ಜಿದಾರನಿಗೆ ತಿಳಿಸದಿದ್ದಲ್ಲಿ ಅದನ್ನು ಕಲ್ಪಿತ ಒಪ್ಪಿಗೆ ಎಂದೇ ಪರಿಗಣಿಸಬಹುದು ಎಂಬ ಅಂಶವನ್ನು ಎತ್ತಿಹಿಡಿದದ್ದು ಇದೇ ಒಂಬುಡ್ಸ್‌ಮನ್.
ಬಡಜನರಿಗಾಗಿ ಕೇರಳ ಸರ್ಕಾರ ಮನೆ ಕಟ್ಟಲು ಯೋಜಿಸಿದ್ದು ಥನಲ್ ಕಾರ್ಯಕ್ರಮ. ಇದರ ಫಲಾನುಭವಿಗಳು ಸೂಚಿತ ಅಳತೆ ಮೀರಿ ಮತ್ತು ಹೆಚ್ಚುವರಿ ಸೌಲಭ್ಯವಿಟ್ಟು ಕಟ್ಟಿದ್ದು ಪಂಚಾಯತ್ ಒಂಬುಡ್ಸ್‌ಮನ್ ಎದುರು ದೂರು ದಾಖಲಾಗಿತ್ತು. ಧೀಶರು ಇಂತಹ ಮಂದಿಯನ್ನು ಬಡವರು ಎಂದು ಪರಿಗಣಿಸುವುದು ಸರಿಯಲ್ಲ ಎಂದೇ ತೀರ್ಮಾನಿಸಿ ಅವರಿಗೆ ಮಂಜೂರಾದ ಮೊತ್ತವನ್ನು ಮರಳಿ ಪಡೆಯಲು ಆದೇಶಿಸಿದ್ದು ಗಮನಿಸಬೇಕಾದದ್ದು.
ಕೇರಳದ ಪಂಚಾಯತ್ ಒಂಬುಡ್ಸ್‌ಮನ್ ಕೂಡ ರಾಜಕಾರಣಿಗಳ ಅವಕೃಪೆಗೆ ಒಳಗಾದಂತಿದೆ. ಹಾಗಾಗಿಯೇ ಹಲವು ತಿದ್ದುಪಡಿಗಳು ನಿರಂತರವಾಗಿ ತರಲಾಗುತ್ತಿದೆ. ಜಾರಿಗೆ ಬಂದ ಒಂದೇ ವರ್ಷದಲ್ಲಿ ೩೬ಕ್ಕೂ ಹೆಚ್ಚು ತಿದ್ದುಪಡಿಗಳು ಎಂದರೆ? ವಾಸ್ತವವಾಗಿ ಈ ಪಂಚಾಯತ್ ಒಂಬುಡ್ಸ್‌ಮನ್ ಮಾದರಿಯ ಮೂಲ ಇಂಗ್ಲೆಂಡ್‌ನ ಸ್ಥಳೀಯ ಸಂಸ್ಥೆ ಒಂಬುಡ್ಸ್‌ಮನ್ ಆಧರಿಸಿದ್ದು. ಅಲ್ಲಿಲ್ಲದ ಶಿಕ್ಷೆ, ದಂಡದ ಪ್ರಾವಿಧಾನಗಳನ್ನು ಸೇರಿಸಿದ್ದು ಕೇರಳದ ಹೆಗ್ಗಳಿಕೆ. ನಿಜಕ್ಕೂ ಈ ಮಾದರಿಯನ್ನು ಕೇಂದ್ರ ಸರ್ಕಾರ ಗಮನಿಸಬೇಕು ಮತ್ತು ಎಲ್ಲ ರಾಜ್ಯಗಳು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಬೇಕು. ಆಗಲಾದರೂ ಭ್ರಷ್ಟಾಚಾರ, ಅನೈತಿಕತೆಯಲ್ಲಿ ಮುಳುಗಿಹೋಗಿರುವ ಸ್ಥಳೀಯ ವ್ಯವಸ್ಥೆಗಳು ಹೊಸ ಚೈತನ್ಯ ಪಡೆದಾವು.

-ಮಾವೆಂಸ

ಬುಧವಾರ, ಮೇ 13, 2009

ಕೇಬಲ್ ಗ್ರಾಹಕನಿಗೆ ಇದೆ ಕಾನೂನು ಬೆಂಬಲ


ಮೊಬೈಲ್ ಟಾಕ್ - 6

ಕಳೆದ ಕೆಲವು ವಾರಗಳಿಂದ ಈ ‘ಮೊಬೈಲ್ ಟಾಕ್’ ಅಂಕಣವನ್ನು ನಿಮಗೆ ಕೊಡಲು ಸಾಧ್ಯವಾಗಿರಲಿಲ್ಲ. ಈ ವಾರ ಕೇಬಲ್ ಕಾನೂನುಗಳನ್ನು ನಿಮ್ಮ ಮುಂದೆ ಇರಿಸಿರುವೆ. ನಿಮ್ಮೆಲ್ಲ ಕೇಬಲ್, ಡಿಷ್ ಬಳಸುವ ಸ್ನೇಹಿತರಿಗೆ ಇದನ್ನು, ಈ ಬ್ಲಾಗ್‌ನ್ನು ಓದಲು ಹೇಳಿ. ನೂರರಲ್ಲಿ ಹತ್ತು ಜನರಾದರೂ ಪ್ರತಿಭಟನೆಯ ಕಾನೂನು ಅಸ್ತ್ರ ಹಿಡಿದರೆ ಈ ಬ್ಲಾಗ್ ಶ್ರಮ ಸಾರ್ಥಕ. ಈಗಾಗಲೇ ರಾಣೆಬೆನ್ನೂರಿನ ಸ್ನೇಹಿತ ಜೆ.ಎಂ.ರಾಜಶೇಖರ್ ಒಂದು ಕೇಬಲ್ ನೆಟ್‌ವರ್ಕ್‌ನವರ ವಿರುದ್ಧ ಸಮರ ಸಾರಿದ್ದು ಜಯದ ಹತ್ತಿರವಿದ್ದಾರೆ. ಈ ಕ್ರಮದ ಹಿಂದೆ ನನ್ನದೂ ಪುಟ್ಟ ಸೇವೆಯಿದೆ ಎಂಬುದು ನನ್ನ, ಈ ಬ್ಲಾಗ್‌ನ ಹೆಮ್ಮೆ. ಪ್ರತಿಕ್ರಿಯೆಗಳಿಗೆ ಎದುರುನೋಡುವೆ.
-ಮಾವೆಂಸಟಿ.ವಿ. ಆಂಟೆನಾಗಳ ಮೂಲಕ ದೂರದರ್ಶನ ಚಾನೆಲ್‌ಗಳನ್ನಷ್ಟೇ ವೀಕ್ಷಿಸುವ ಕಾಲ ಬಹುಪಾಲು ಕೊನೆಗೊಂಡಂತಿದೆ. ಹಾಗಾಗಿ ಟಿವಿ ಒಡೆಯ ಚಾನೆಲ್‌ಗಳ ದೃಶ್ಯ ಸೇವೆ ಪಡೆಯಲು ಡಿಟಿಎಚ್ ತಂತ್ರಜ್ಞಾನದ ಮೊರೆ ಹೋಗಲೇಬೇಕು. ನಗರದ ಜನತೆಗಿರುವ ಅತಿ ಸುಲಭ ಪರ್ಯಾಯವೆಂದರೆ ಕೇಬಲ್ ಸಂಪರ್ಕ. ಕೇಬಲ್ ಎಂದಾಕ್ಷಣ ನೆನಪಾಗುವುದು ಕೇಬಲ್ ಮಾಫಿಯಾ! ಕೇಬಲ್ ಸೇವೆ ಪಡೆಯುವವರಿಗೆ ಹತ್ತಾರು ಸಂಕಟ, ಪ್ರಸಾರ ಗುಣಮಟ್ಟದಲ್ಲಿ ಏರುಪೇರು, ಬಿಲ್ ವಸೂಲಿಯ ವೇಳೆ ಮಾತ್ರ ಅತ್ಯುತ್ತಮ ಕ್ವಾಲಿಟಿ, ಕೇಬಲ್ ಮಾಲಿಕರು ತಮ್ಮ ತಮ್ಮ ಏರಿಯಾಗಳನ್ನು ಗುರ್ತಿಸಿಕೊಳ್ಳುವುದರಿಂದ ಗ್ರಾಹಕನಿಗೆ ಆಯ್ಕೆ ಸ್ವಾತಂತ್ರ್ಯದ ಮೊಟಕು, ಹಣ ವಸೂಲಿಗೆ ಗೂಂಡಾಗಿರಿ.... ಈ ಕ್ಷೇತ್ರದ ನಿರ್ವಹಣೆಗೆ ಕಾನೂನುಗಳೇ ಇಲ್ಲವೇ?
ಕೇಬಲ್ ಸೇವೆಯನ್ನು ೧೯೯೫ರ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ಸ್ (ರೆಗ್ಯುಲೇಷನ್) ಕಾಯ್ದೆಯಡಿ ವ್ಯಾಖ್ಯಾನಿಸಲಾಗಿದೆ. ಕೇಂದ್ರ ಸರ್ಕಾರದ ಈ ಕಾಯ್ದೆಯ ಅನ್ವಯ ಕೇಬಲ್ ಅಪರೇಟರ್‌ಗಳು ಆಯಾ ಪ್ರದೇಶದ ಮುಖ್ಯ ಅಂಚೆ ಕಛೇರಿಯಲ್ಲಿ ನೊಂದಣಿ ಮಾಡಿಸಿಕೊಳ್ಳವುದು ಕಡ್ಡಾಯ. ಈ ಪ್ರಕ್ರಿಯೆಯ ನಂತರ ಅಂಚೆಇಲಾಖೆ ನೀಡುವ ಫಾರಂ ೩ರ ಪ್ರತಿಯನ್ನು ಕೇಬಲ್‌ಅಪರೇಟರ್ ತನ್ನ ಕಛೇರಿಯಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಬೇಕು.
ಕಾಯ್ದೆಯಲ್ಲಿ ವೈಯುಕ್ತಿಕವಾಗಿಯಲ್ಲದೆ, ಜಂಟಿಯಾಗಿ ನೆಟ್‌ವರ್ಕ್‌ನ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚಿನ ಕೇಬಲ್ ಅಪರೇಟರ್‌ಗಳು ಒಗ್ಗೂಡಿ ಪರವಾನಗಿ ಪಡೆಯಲು ಅವಕಾಶವಿದೆ. ಇತ್ತೀಚಿನ ದಿನಗಳಲ್ಲಿ ಕಾನೂನಿನ ಈ ವ್ಯಾಖ್ಯೆಯ ಲಾಭ ಪಡೆದು ನೆಟ್‌ವರ್ಕ್ ಅಂತಲೇ ನೊಂದಾಯಿಸಿಕೊಳ್ಳುವುದು ಕಂಡುಬರುತ್ತಿದೆ.
ಸಿಎಎಸ್ (ಕ್ಯಾಸ್ - ಕಂಡೀಷನಲ್ ಅಕ್ಸೆಸ್ ಸಿಸ್ಟಮ್) ವ್ಯವಸ್ಥೆಯಡಿ ಬರುವ ಆಯ್ದ ಮೆಟ್ರೋ ನಗರಗಳಲ್ಲೂ ಕೂಡ ಸೆಟ್‌ಟಾಪ್ ಬಾಕ್ಸ್‌ನ್ನು ಪಡೆಯಲೇಬೇಕೆಂದು ಒತ್ತಡ ಹೇರುವಂತಿಲ್ಲ. ಅಲ್ಲಿನ ಗ್ರಾಹಕ ಕೇವಲ ಉಚಿತ ಚಾನೆಲ್‌ಗಳನ್ನು ನಿಗದಿ ಪಡಿಸಿದ ಕನಿಷ್ಟ ಶುಲ್ಕ ನೀಡಿ ಪಡೆದರಾಯಿತು. ಕ್ಯಾಸ್‌ಗೆ ಒಳಪಡದ ನಗರಗಳ ಕೇಬಲ್ ಚಂದಾದಾರರಿಗೆಂದೇ ಭಾರತದ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ - ಟ್ರಾಯ್ ದರಪಟ್ಟಿಯನ್ನು ನಿಗದಿಪಡಿಸಿದೆ. ಈ ದರ ನಿಷ್ಕರ್ಷೆಯಲ್ಲಿ ನಗರಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಎ, ಎ-೧ ಗಳದ್ದು ಒಂದು ವರ್ಗ. ಬಿ-೧, ಬಿ-೨ ವರ್ಗ ಎರಡನೆಯದು. ಉಳಿದದ್ದು ಇನ್ನೊಂದು ವಿಭಾಗ. ವಿವರಗಳು ಪ್ರತ್ಯೇಕ ಪಟ್ಟಿಯಲ್ಲಿದೆ ಗಮನಿಸಿ. ಈ ಬೆಲೆ ನಿಗದಿ ೨೦೦೮ರ ಡಿಸೆಂಬರ್ ಒಂದರಿಂದಲೇ ಜಾರಿಗೆ ಬಂದಿದೆ.
ಇವತ್ತಿಗೂ ಕೇಬಲ್ ಚಂದಾದಾರ ತಾನು ಯಾವ ಯಾವ ಚಾನೆಲ್‌ಗಳನ್ನು ನೋಡಬಹುದು ಎಂಬ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿಲ್ಲ. ಆದರೆ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ನಿಯಮಗಳ ಪ್ರಕಾರ, ಕೇಬಲ್ ಅಪರೇಟರ್ ತಾನು ಪ್ರಸಾರ ಮಾಡುವ, ಪ್ರಸಾರ ನಿಲ್ಲಿಸಿದ ಚಾನೆಲ್‌ಗಳ ಆಮೂಲಾಗ್ರ ವಿವರಗಳನ್ನು ಫಾರಂ ೫ ರಿಜಿಸ್ಟಾರ್‌ನಲ್ಲಿ ದಾಖಲಿಸಬೇಕು. ಅಂಚೆ ಕಛೇರಿಗೆ ಪ್ರತಿ ತಿಂಗಳೂ ಪಟ್ಟಿ ಸಲ್ಲಿಸಬೇಕು. ಚಂದಾದಾರರಿಗೆ ಈ ಮಾಹಿತಿ ಬೇಕಿದ್ದಲ್ಲಿ ಕೇಂದ್ರ ಅಂಚೆ ಕಛೇರಿಯಿಂದ ಅಥವಾ ಕೇಬಲ್ ಅಪರೇಟರ್ ನೆಟ್‌ವರ್ಕ್‌ನಿಂದ ಪಡೆಯಬಹುದು. ಮಾಹಿತಿ ಹಕ್ಕು ಕಾಯ್ದೆಯ ಅಸ್ತ್ರ ಕೈಯಲ್ಲಿರುವುದರಿಂದ ಕೇಬಲ್‌ನವರ ಮೋಸ - ವಂಚನೆಗಳನ್ನು ಎದುರಿಸಲು ಇದು ನೆರವಾಗದಿರದು.
ಇತ್ತೀಚಿನ ದಿನಗಳಲ್ಲಿ ಡಿಟಿಎಚ್ ಕಂಪನಿಗಳು ರೀಚಾರ್ಜ್ ಮಾಡಿಸದಿದ್ದರೆ ಪೂರ್ಣ ಸೇವೆಯನ್ನೇ ನಿಲ್ಲಿಸಿಬಿಡುತ್ತವೆ. ವಾಸ್ತವವಾಗಿ ಗ್ರಾಹಕ ಮುಂಗಡವಾಗಿಯೇ ಸೆಟ್‌ಟಾಪ್ ಬಾಕ್ಸ್ ವೆಚ್ಚವನ್ನು ಬಾಡಿಗೆ ರೂಪದಲ್ಲಿ ಪಾವತಿಸಿರುವುದರಿಂದ ಕನಿಷ್ಟ ಶುಲ್ಕ ೭೭ರೂ.ಗೆ ಉಚಿತ ಚಾನೆಲ್‌ಗಳನ್ನು ಡಿಟಿಎಚ್ ಸೇವಾದಾತರು ನೀಡಲೇಬೇಕು. ಈ ಸಂಬಂಧ ಗ್ರಾಹಕ ನೇರವಾಗಿ ಆಯಾ ಸೇವಾದಾತರಿಗೆ (ಟಾಟಾ ಸ್ಕೈ - The Manager, tatasky Ltd.,3rd Floor, Bombay Dyeing, A.O.Building, Panduranga Budhakar Marg, Worli, Mumbai 400025 ಮತ್ತು ಡಿಶ್ ಟೀವಿಯನ್ನು Dish TV India Ltd.,essel House, B-10, Lawrence Road, Industrial Area, Delhi -110035) ಇಂತಹ ದೂರಿನ ಪ್ರತಿಯನ್ನು ಗ್ರಾಹಕ ಅಹ್ಮದಾಬಾದ್‌ನ ಸಿಇಆರ್‌ಸಿ ಎಂಬ ಗ್ರಾಹಕ ಪರ ಸಂಸ್ಥೆಗೂ ( CERC, suraksha Sankool, theltej, Ahmedabad-Gandinagar highway, Ahmedabad 380054) ಕಳಿಸಿಕೊಟ್ಟರೆ ಅವರು ಗ್ರಾಹಕ ಪರವಾಗಿ ಮುನ್ನುಗ್ಗುತ್ತಾರೆ.
ಕೇಬಲ್ ಕಾಯ್ದೆಯ ಅನ್ವಯ, ಸೇವಾದಾತ ಕೆಟ್ಟಾಕೊಳಕ ಕಾರ್ಯಕ್ರಮಗಳನ್ನು, ಜಾಹೀರಾತುಗಳನ್ನು ಪ್ರಸಾರಿಸುವಂತಿಲ್ಲ. ತಾಂತ್ರಿಕವಾಗಿ ಹೇಳುವುದಾದರೆ, ಕೇಬಲ್ ಕಾಯ್ದೆಯಲ್ಲಿ ವ್ಯಾಖ್ಯಾನಿಸಿರುವ ಕಾರ್ಯಕ್ರಮ ಮಾನದಂಡ, ಜಾಹೀರಾತು ನೀತಿ ಸಂಹಿತೆಗಳನ್ನು ಮೀರುವಂತಿಲ್ಲ. ಇಂತಹ ಉಲ್ಲಂಘನೆಗೆ ವೀಕ್ಷಕ ಜಿಲ್ಲಾ ನ್ಯಾಯಾಧೀಶ, ಉಪವಿಭಾಗೀಯ ನ್ಯಾಯಾಧೀಶ, ಪೋಲೀಸ್ ದಂಡಾಧಿಕಾರಿ ಮತ್ತು ಇನ್ನಿತರ ಸ್ಥಳೀಯ ಕಾನೂನು ವ್ಯವಸ್ಥೆಯ ಅಧಿಕಾರ ಪಡೆದವರಿಗೆ ದೂರು ಸಲ್ಲಿಸಬೇಕು. ಕಾಯ್ದೆಯ ಶಿಕ್ಷೆ ಕಠಿಣವಾಗಿದೆ. ಮೊದಲ ಬಾರಿಯ ರುಜುವಾತಾದ ಅಪರಾಧಕ್ಕೆ ೨ ವರ್ಷದ ಜೈಲುಶಿಕ್ಷೆಯಾಗುತ್ತದೆ. ಇದರ ಜೊತೆಗೆ ಒಂದು ಸಾವಿರ ರೂ.ಗಳ ದಂಡ ವಿಧಿಸುವ ಸಾಧ್ಯತೆಗಳಿರುತ್ತದೆ. ಇನ್ನೊಮ್ಮೆ ಅಪರಾಧ ಪುನರಾವರ್ತನೆಯಾದರೆ ೫ ವರ್ಷ ಜೈಲು, ೫ ಸಾವಿರ ರೂ. ದಂಡಗಳಲ್ಲಿ ಎರಡನ್ನು ಅಥವಾ ಯಾವುದಾದರೂ ಒಂದನ್ನು ವಿಧಿಸಬಹುದು.
ದುರಂತವೆಂದರೆ, ವೀಕ್ಷಕ ಧಾರಾವಾಹಿಯಲ್ಲಿ ಸಿಎಸ್‌ಪಿ ಎಂಬ ಕಾಲ್ಪನಿಕ ವಕೀಲ ಭ್ರ್ರಷ್ಟಾಚಾರ, ಉಲ್ಲಂಘನೆಯ ವಿರುದ್ಧ ಯಶಸ್ಸು ಸಾಧಿಸಿದ್ದನ್ನು ನೋಡಿ ಆನಂದಿಸುತ್ತಾರೆ, ಅದಾಗಲೇ ರಾತ್ರಿಯಾಗಿರುವುದರಿಂದ ನಿದ್ರಿಸಿ ತಾವು ಹಾಗಾಗಬಹುದು ಎನ್ನುವುದನ್ನು ಮರೆಯುತ್ತಾನೆ!


---------------------------------------------------------------

ಕೇಬಲ್ ದರ ಪಟ್ಟಿ
ಕ್ಯಾಸ್‌ಗೆ ಒಳಪಡದ ನಗರಗಳಲ್ಲೂ ನಿಶ್ಚಿತವಾದ ಬಾಡಿಗೆಯನ್ನೇ ಕೇಬಲ್ ಸೇವಾದಾತರು ಪಡೆಯಬೇಕೆಂದು ಟ್ರಾಯ್ ಆದೇಶಿಸಿದೆ. ಅವರ ವಿವರ ಕೆಳಗಿನಂತಿದೆ.
ಚಾನೆಲ್ ಆಯ್ಕೆ ಎ-೧ & ಎ ವರ್ಗ ಬಿ-೧ & ಬಿ-೨ ಇತರ ನಗರ
ಉಚಿತ ಮಾತ್ರ ೭೭ರೂ. ೭೭ರೂ. ೭೭ರೂ.
ಉಚಿತ+೨೦ ಪೇ ೧೬೦ರೂ. ೧೪೦ರೂ. ೧೩೦ರೂ.
ಉಚಿತ+೨೦-೩೦ ಪೇ ೨೦೦ರೂ. ೧೭೦ರೂ. ೧೬೦ರೂ.
ಉಚಿತ+೩೦-೪೫ ಪೇ ೨೩೫ರೂ. ೨೦೦ರೂ. ೧೮೫ರೂ.
ಉಚಿತ+ >೪೫ ಪೇ ೨೬೦ರೂ. ೨೨೦ರೂ. ೨೦೦ರೂ.


----------------------------------------------------------------

ವರ್ಗ ವಿಂಗಡನೆ

ನಾಲ್ಕು ಮೆಟ್ರೋಗಳು ಹಾಗೂ ಬೆಂಗಳೂರು, ಹೈದರಾಬಾದ್‌ಗಳು ಎ-೧ ವರ್ಗದಲ್ಲಿ
ಅಹ್ಮದಾಬಾದ್, ಸೂರತ್, ಜೈಪುರ, ಕಾನ್ಪುರ, ಪುಣೆ, ಲಕ್ನೋಗಳು ಎ ವರ್ಗ
ಇನ್ನುಳಿದಂತೆ ೨೨ ನಗರಗಳು ಬಿ-೧ ಮತ್ತು ೩೦ ಬಿ-೨ ಎಂದು ವಿಂಗಡಿಸಲಾಗಿದೆ.
-----------------------------------------------------------------
-ಮಾವೆಂಸ

ಸೋಮವಾರ, ಮೇ 11, 2009

ಪ್ರೀಮಿಯರ್ ಲೀಗ್‌ಗೆ ಬ್ಲಾಗ್ ಕಾಟ!

"ಇಲ್ಲ ಕಣ್ರೀ, ಈ ಬಾರಿಯ ಐಪಿಎಲ್ ಅಂತಹ ಯಶಸ್ಸನ್ನೇನೂ ಪಡೆಯುತ್ತಿಲ್ಲ. ನೋಡಲು ಜನ ಬರುತ್ತಿಲ್ಲ. ಟಿವಿ ನೇರಪ್ರಸಾರ ವೀಕ್ಷಿಸುವ ನಿಮಗೆ ಅರ್ಥವಾಗುವುದಿಲ್ಲ. ಇಲ್ಲಿ ಜನ ಇಲ್ಲ. ಕ್ರೀಡಾಂಗಣ ಖಾಲಿ ಖಾಲಿ ಉಳಿಯುತ್ತಿವೆ. ಮೊದಲ ಇನ್ನಿಂಗ್ಸ್ ವೇಳೆಯಲ್ಲಂತೂ ನಿರ್ಜನ! ಆದರೆ ಕಾಮೆಂಟರಿ ತಂಡಕ್ಕೆ ಆದೇಶ ಹೋಗಿದೆ. ಅವರು ಪಂದ್ಯದುದ್ದಕ್ಕೂ ಆಸಕ್ತಿಗೆ ಸಂಬಂಧಿಸಿದಂತೆ ಕುತೂಹಲ-ಕೋಲಾಹಲ-ಜ್ವರ ಏರಿದೆ ಎಂಬಂತೆಯೇ ಮಾತನಾಡಬೇಕು. ಆ ಮಟ್ಟಿನ ಉದ್ಘಾರ ಎತ್ತುತ್ತಿರಬೇಕು. ಕ್ಯಾಮರಾಮನ್‌ಗಳು ಜನರ ಗುಂಪಿನತ್ತ ಕ್ಯಾಮರಾ ಲೆನ್ಸ್ ತಿರುಗಿಸಬೇಕೇ ವಿನಃ ಖಾಲಿ ಜಾಗಗಳತ್ತ ಅಲ್ಲ. ಅಷ್ಟೇಕೆ, ಬಂದಿರುವ ವೀಕ್ಷಕರಿಗೂ ವಿನಂತಿಯಿದೆ, ಕ್ಯಾಮರಾ ಕಣ್ಣು ಹಾದಾಗಲೆಲ್ಲ ಕೂಗಬೇಕು, ಕುಣಿದಾಡಬೇಕೆಂದು" ಹೀಗೆ ಬರೆಯುತ್ತದೆ ಒಂದು ವಿಶಿಷ್ಟ ಬ್ಲಾಗ್. ಸ್ವಾರಸ್ಯವೆಂದರೆ, ಇದನ್ನು ಕೊಲ್ಕತ್ತಾ ನೈಟ್ ರೈಡರ್‍ಸ್ ತಂಡದ ಓರ್ವ ಅನಾಮಿಕ ಆಟಗಾರ ಬರೆಯುತ್ತಿದ್ದಾನೆ!
ಇಂಟರ್ನೆಟ್ ಜಾಲಾಟದ ಅರಿವು ಇಲ್ಲದಿರುವವರಿಗೆ ಪುಟ್ಟ ಮಾಹಿತಿ. ಅಂತರ್ಜಾಲದಲ್ಲಿ ಪ್ರತಿ ವ್ಯಕ್ತಿಯೂ ತನ್ನದೇ ಆದ ವೆಬ್ ಪತ್ರಿಕೆ ಆರಂಭಿಸಬಹುದು.ಅದಕ್ಕೆ ಬ್ಲಾಗಿಂಗ್ ಎನ್ನುತ್ತಾರೆ.ಅಲ್ಲಿ ಆತ ತನಗೆ ಬೇಕಾದ ಭಾಷೆಯಲ್ಲಿ ಅನಿಸಿಕೆ, ವಿಚಾರ, ಸುದ್ದಿ ಬರೆಯಬಹುದು. ಫೋಟೋ ಹಾಕಬಹುದು. ಒಂದರ್ಥದಲ್ಲಿ, ನಾವೇ ಮುದ್ರಿಸುವ ಪತ್ರಿಕೆಗೆ ನಾವೇ ಸಂಪಾದಕರಿದ್ದಂತೆ, ಮುದ್ರಕರಿದ್ದಂತೆ. ಇಲ್ಲಿ ಇನ್ನಾರದ್ದೋ ಮರ್ಜಿಗೆ ಕಾಯಬೇಕಾಗಿಲ್ಲ. ಸರಿಯಾಗಿ ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾದಾಗಿನಿಂದ ಹೊಸದೊಂದು ಬ್ಲಾಗ್ ಕಾಣಿಸಿದೆ. ಅದು http://fakeiplplayer.blogspot.com/ ಇದರ ಬರಹಗಾರನ ವಿವರ ಅಜ್ಞಾತ. ಆತ ಹೇಳಿಕೊಳ್ಳುವ ಪ್ರಕಾರ, ಅವ ಕೊಲ್ಕತ್ತಾ ತಂಡದ ಆಟಗಾರ. ಆಡಲು ಅವಕಾಶ ಸಿಕ್ಕಿಲ್ಲ. ಅಂತಹ ಸಾಧ್ಯತೆಯೂ ಕ್ಷೀಣ. ತಂಡದ ಒಳಗಿದ್ದುಕೊಂಡೇ ಆತ ಈ ಬರಹಗಳಲ್ಲಿ ತನ್ನ ಕೋಚ್, ಮಾಜಿ ನಾಯಕ ಸೌರವ್... ಒಟ್ಟಾರೆ ಐಪಿಎಲ್ ವ್ಯವಸ್ಥೆಗಳ ಕಾಲು ಎಳೆಯುತ್ತಿದ್ದಾನೆ.
ಅದಾಗಲೇ ಕಳೆದ ಎಂಟು ಪಂದ್ಯಗಳಲ್ಲಿ ಕೇವಲ ಒಂದು ಜಯ ಸಾಧಿಸಿರುವ ನೈಟ್ ರೈಡರ್‍ಸ್‌ಗೆ ಇದು ನುಂಗಲಾಗದ ತುಪ್ಪ. ಜೊತೆಗೆ ಈ ಬ್ಲಾಗ್‌ನಲ್ಲಿ ಕೋಚ್ ಮತ್ತು ತಂಡದ ಮಾಲಿಕರತ್ತ ಶಾನೆ ಉರಿಯಾಗುವ ಟೀಕೆ ಒಂದು ತುತ್ತು ಜಾಸ್ತಿ. ಗಮನಿಸಬೇಕಾದುದೆಂದರೆ, ತನ್ನ ಸಹ ಆಟಗಾರರು, ತಾಂತ್ರಿಕ ಸಿಬ್ಬಂದಿಗಳನ್ನೆಲ್ಲ ಈತ ಅಡ್ಡಹೆಸರಿನಿಂದಲೇ ಉಲ್ಲೇಖಿಸುತ್ತಾನೆ. ಇವೆಲ್ಲ ಆ ತಂಡದೊಳಗೆ ಮಾತ್ರ ಪ್ರಚಲಿತದಲ್ಲಿರುವ ಹೆಸರುಗಳು! ಕೊಲ್ಕತ್ತಾ ತಂಡದಲ್ಲಿ ಇದನ್ನು ಬರೆದವರು ಯಾರು ಎಂಬವ ಅನುಮಾನಗಳ ಮೋಡ ಅತ್ತಿತ್ತ ಚಲಿಸುತ್ತಿದ್ದಾಗ ಈತ ಬರೆಯುತ್ತಾನೆ, "ಈ ಮಂದಿಗೆ ಇವತ್ತು ಬೆಳಿಗ್ಗಿನವರೆಗೆ ಬ್ಲಾಗ್ ಎಂದರೇನು ಎಂಬುದೇ ಗೊತ್ತಿರಲಿಲ್ಲ. ಈಗ ನೋಡಿ!?"
ಸೂಪರ್‌ಸ್ಟಾರ್ ಶಾರುಖ್‌ಖಾನ್ ಹಾಗೂ ಕೋಚ್ ಜಾನ್ ಬುಚನನ್ ಐಪಿಎಲ್‌ನ ಎರಡನೇ ಸಂಚಿಕೆ ದಕ್ಷಿಣ ಆಫ್ರಿಕಾಕ್ಕೆ ಹಾರುವುದಕ್ಕಿಂತ ಮುನ್ನವೇ ವಿವಾದಗಳ ಅಲೆ ಎಬ್ಬಿಸಿದವರು. ‘ಪಂದ್ಯಕ್ಕೊಬ್ಬ ನಾಯಕ’ ಸೂತ್ರ ವಿವಾದ, ನಗೆಗಳೆರಡನ್ನೂ ತಂದಿತ್ತು. ಶಾರುಖ್ ಸೌರವ್ ಗಂಗೂಲಿಯನ್ನು ಸಮಾಧಾನಪಡಿಸಿದರು, ಸುನಿಲ್ ಗವಾಸ್ಕರ್‌ರನ್ನು ಹೀಗಳೆದರು. ದುರದೃಷ್ಟಕ್ಕೆ ಆಯ್ಕೆಯಾದ ನಾಯಕ ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಮ್ ‘ರನ್’ ಎಂದರೆ ಔಟಾಗಿ ಪೆವಿಲಿಯನ್ ದಿಕ್ಕಿಗೆ ಓಡುವುದು ಎಂದುಕೊಂಡಿದ್ದಾರೆ! ಅವರ ತಂಡದಲ್ಲೀಗ ಕರೆದು ಕೊಟ್ಟರೂ ನಾಯಕತ್ವ ಬೇಡ ಎನ್ನುವವರೇ ಹೆಚ್ಚು.
ಇಂತಹ ವೇಳೆ ಬ್ಲಾಗ್‌ನ ರಸವತ್ತಾದ ಬರಹಗಳು ‘ಮಂಡೆಬಿಸಿ’ ಹೆಚ್ಚಿಸಿವೆ. ಬರೆಯುತ್ತಿರುವವರು ಯಾರು? ಸೌರವ್ ಮೇಲೆ ಅನುಮಾನ ಬಂದಿತ್ತು. ಆದರೆ ಬ್ಲಾಗ್ ಬರೆಯುತ್ತದೆ, ‘ಬಿಡಿ ಸ್ವಾಮಿ. ಅವರನ್ನೇಕೆ ಅನುಮಾನಿಸುತ್ತೀರಿ. ಇನ್ನಾದರೂ ಅವರಿಗೆ ವಿಶ್ರಾಂತಿ ಕೊಡಿ. ಆತನಿಗೆ ಗೊತ್ತು, ಐಪಿಎಲ್ ಮೂಲಕ ತನ್ನ ಟೆಸ್ಟ್ ಬ್ಯಾಟಿಂಗ್‌ಗೆ ಒಳ್ಳೆಯ ಪ್ರಾಕ್ಟೀಸ್ ದೊರಕಿಸಿಕೊಡಲು ತಂಡ ಸಿದ್ಧವಿದೆ!’
ಬ್ಲಾಗ್ ಆರಂಭದಲ್ಲಿ ತಂಡದ ಆಟಗಾರರ ಆಸೆ, ಸ್ವಾರ್ಥ ಅಥವಾ ಸ್ತ್ರೀ ಮೋಹಗಳತ್ತ ಹೇಳಿದ್ದರೂ ಮುಂದಿನ ದಿನಗಳಲ್ಲಿ ತಂಡಗಳ ತಂತ್ರಗಾರಿಕೆ ಕುರಿತು, ತಮ್ಮ ತಂಡದ ಚಟುವಟಿಕೆಗಳನ್ನು ಮುಂಚಿತವಾಗಿ ಚರ್ಚಿಸುವ ಪ್ರೌಡಿಮೆ ಮೆರೆದಿತ್ತು. ಬ್ಲಾಗ್ ಬರೆಯುವವರ ಭಾಷೆ ಸರಳ ಇಂಗ್ಲೀಷ್ ಅಲ್ಲ ಎಂಬುದೂ ಗಮನಿಸಬೇಕಾದ ಅಂಶ. ಒಮ್ಮೆ ಬುಚನನ್‌ನ ಕಾಲು ಎಳೆದದ್ದು ಹೀಗೆ, "ತಂಡಕ್ಕೊಬ್ಬ ರನ್ ಗಳಿಸಬಲ್ಲ ಎರಡನೇ ವಿಕೆಟ್ ಕೀಪರ್ ಬೇಕಾಗಿದ್ದಾನೆ. ಬುಚನನ್ ಐಪಿಎಲ್‌ನ ಮೊದಲ ವರ್ಷದ ಕಂತನ್ನು ಗಮನಿಸಿದ್ದರೆ ಗೊತ್ತಾಗುತ್ತಿತ್ತು. ಓಹ್, ಸಾರಿ. ಜಾನ್‌ರ ಲ್ಯಾಪ್‌ಟಾಪ್ ಕೆಲ ತಿಂಗಳ ಹಿಂದೆ ಹಾಳಾಗಿದೆ ಮತ್ತು ಹಿಂದಿನ ವರ್ಷದ ಎಲ್ಲ ದಾಖಲೆಗಳು ನಾಶವಾಗಿದೆ ಎಂಬ ಅನುಮಾನವಿದೆ!"
ಐಪಿಎಲ್‌ನಲ್ಲಿ ಅಥವಾ ಭಾರತದ ತಂಡದಲ್ಲಿ ಖಾಯಂ ಸ್ಥಾನ ಪಡೆಯುವ ಆಕಾಂಕ್ಷಿ ಆಟಗಾರರೂ ಇಂತಹ ಬ್ಲಾಗ್ ಬರೆಯುವುದಿಲ್ಲ. ಇದನ್ನು ತಂಡದ ಸಹಸಿಬ್ಬಂದಿಯಾಗಿರುವವರು ಅಥವಾ ಮಾಹಿತಿಯನ್ನಷ್ಟೇ ಪಡೆವ ಆಟಗಾರರ ಸ್ನೇಹಿತರಾರೋ ಮಾಡಬಹುದಷ್ಟೇ. ಕೊಲ್ಕತ್ತಾ ತಂಡ ಗೆಲ್ಲುತ್ತಲೇ ಸಾಗಿದ್ದರೆ ಈ ಬ್ಲಾಗ್ ಸತ್ತು ಹೋಗುತ್ತಿತ್ತು. ಆದರೆ ಈಗ ಈ ಬ್ಲಾಗ್‌ಗೆ ೫೬೨೫ ಮಂದಿ ಖಾಯಂ ಅನುಯಾಯಿಗಳು!
ಪ್ರತಿ ಬಾರಿ ಹೊಸದನ್ನು ನಿರೀಕ್ಷಿಸುವ ಅಭಿಮಾನಿಗಳಿಗೆ ಸದ್ಯಕ್ಕೆ ಸಿಕ್ಕಿದ್ದು ತಂತ್ರಗಾರಿಕೆಯ ಟೈಮ್‌ಔಟ್ ಎಂಬ ಅಡಚಣೆ! ಈ ತರದ ಬ್ಲಾಗಿಂಗ್ ಖಚಿತವಾಗಿಯೂ ಒಂದು ಹೊಸ ತಂತ್ರ. ಮುಂದಿನ ವರ್ಷಗಳಲ್ಲಿ ಪ್ರತಿ ತಂಡದಲ್ಲಿ ಒಬ್ಬೊಬ್ಬ ಅನಾಮಿಕ ಬ್ಲಾಗಿ ಹುಟ್ಟಿ ಆ ಮಟ್ಟಿಗೆ ತಂಡದ ಜನಪ್ರಿಯತೆಯನ್ನು ಹೆಚ್ಚಿಸಲು ಪ್ರಯತ್ನಿಸಬಹುದು.
ಸದರಿ ಕೊಲ್ಕತ್ತಾ ರೈಡರ್ ಬ್ಲಾಗಿ ಹೇಳುತ್ತಾನೆ, ಐಪಿಎಲ್ ಎಷ್ಟು ಪ್ರಮಾಣದಲ್ಲಿ ಸುಳ್ಳು ಸುಳ್ಳೇ ತನ್ನನ್ನು ಜನಪ್ರಿಯ ಎಂದು ತೋರಿಸಿಕೊಳ್ಳುತ್ತಿದೆ ಎಂದರೆ ಈ ‘ಫ್ಲೇಕ್’ ಬ್ಲಾಗನ್ನೇ ಆ ಕಸರತ್ತು ನಾಚಿಸುವಂತಿದೆ! ಒಂದಂತೂ ನಿಜ, ಜನಪ್ರಿಯತೆಯಲ್ಲಿ ಮುಕ್ಕಾಗಿದೆ ಎಂಬುದು ಪಕ್ಕಾ ಅನ್ನಿಸಿದರೆ ಐಪಿಎಲ್ ಮುಂದಿನ ಬಾರಿ ಇನ್ನೊಂದು ಹೆಜ್ಜೆ ಇರಿಸುತ್ತದೆ, ‘ತಾನೇ ಅನಾಮಿಕ ಆಟಗಾರರ ಹೆಸರಲ್ಲಿ ತಂಡಕ್ಕೊಂದು ಬ್ಲಾಗ್ ಆರಂಭಿಸಿಬಿಡುತ್ತದೆ!’
ರಾಮ ರಾಮಾ!!

-ಮಾವೆಂಸ

ಸೋಮವಾರ, ಮೇ 4, 2009

ಬಿಸಿಸಿಐನ ಧೃತರಾಷ್ಟ್ರ ಆಲಿಂಗನ!


ಐಸಿಎಲ್ ನಾಶಕ್ಕೆ ಹೊಸ ಆಟ

ಇಂಡಿಯನ್ ಕ್ರಿಕೆಟ್ ಲೀಗ್ - ಐಸಿಎಲ್ ಆಟಗಾರರ ಶಾಪ ವಿಮೋಚನೆಯಾಗಿದೆ. ಭಾರತೀಯ ಕ್ರಿಕೆಟ್ ಮಂಡಳಿ ಬಿಸಿಸಿಐ ಈವರೆಗೆ ತಾನು ಹೇರಿದ್ದ ಐಸಿಎಲ್ ಆಟಗಾರರ ಮೇಲಿನ ನಿಷೇಧವನ್ನು ಏಕಾಏಕಿ ಹಿಂಪಡೆದಿದೆ. ಎರಡು ವರ್ಷದ ಕೆಳಗೆ ವರ್ಣರಂಜಿತ ಕನಸುಗಳೊಂದಿಗೆ ಐಸಿಎಲ್ ಸೇರಿದ್ದ ಯುವ ಆಟಗಾರರು ಖಂಡಿತವಾಗಿಯೂ ನಿಟ್ಟಿಸಿರು ಬಿಟ್ಟಿರುತ್ತಾರೆ!
ಇಂದಿನ ಅಬ್ಬರದ ಇಂಡಿಯನ್ ಪ್ರೀಮಿಯರ್ ಲೀಗ್ ಹುಟ್ಟಲು ಕಾರಣ ಐಸಿಎಲ್. ರಣಜಿ ಸೇರಿದಂತೆ ಪ್ರಥಮ ದರ್ಜೆ ಪಂದ್ಯದ ಆಟಗಾರರ ಶುಲ್ಕಗಳನ್ನು ಬರೋಬ್ಬರಿಯಾಗಿ ಬಿಸಿಸಿಐ ಏರಿಸಿರುವುದರ ಹಿಂದೆ ಐಸಿಎಲ್ ಬೆದರಿಕೆಯಿದ್ದುದು ನಿಜ. ದುರಂತವೆಂದರೆ, ಕಪಿಲ್‌ದೇವ್ ಸಹ ಗುರ್ತಿಸಿಕೊಂಡಿರುವ ಐಸಿಎಲ್‌ನ ಸಾಧನೆ ಇಲ್ಲಿಗೇ ಅಂತ್ಯವಾಗುತ್ತದೆ!
ಒಂದು ಮಟ್ಟಿಗೆ ಬಿಸಿಸಿಐ ಹೆದರಿದ್ದಂತೂ ಸತ್ಯ. ವಿದೇಶೀ ಆಟಗಾರರಿಗೆ, ಭಾರತದಲ್ಲೂ ರೋಹನ್ ಗವಾಸ್ಕರ್, ಹೇಮಂಗ್ ಬದಾನಿ, ಸೋಧಿ, ಸ್ಟುವರ್ಟ್ ಬಿನ್ನಿ ಮುಂತಾದ ಹಲವಾರು ಯುವ ಪ್ರತಿಭೆಗಳಿಗೆ ಐಸಿಎಲ್ ಒಡೆಯ ಜಿ ಟೆಲಿಫಿಲ್ಮ್ಸ್ ಸಮುದಾಯ ಗಾಳ ಹಾಕಲಾರಂಭಿಸಿದಾಗ ಬಿಸಿಸಿಐ ಮುಂದೆ ಅಪಾಯದ ವಾಸನೆ ಬಡಿದಿತ್ತು. ತಕ್ಷಣಕ್ಕೇ ಅವರು ಇತರ ದೇಶಗಳ ಕ್ರಿಕೆಟ್ ಮಂಡಳಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ಯಾವುದೇ ದೇಶದ ಹಾಲಿ ಆಟಗಾರರನ್ನು ಐಸಿಎಲ್ ಸೆಳೆಯುವ ಕ್ರಮ ವಿಫಲವಾದದ್ದು ಹಾಗೆ. ಶೇನ್ ವಾರ್ನ್ ಒಂದು ಹೆಜ್ಜೆ ಅತ್ತ ಇಟ್ಟಿದ್ದವರು ಹಿಂದೆ ಸರಿದರು. ಕಪಿಲ್‌ರ ತಾಕತ್ತನ್ನು ಬಿಸಿಸಿಐನ ಹಣ - ಅಧಿಕಾರಗಳು ಕುಂದಿಸಿದವು. ಐಸಿಎಲ್‌ಗೆ ಕೊನೆಗೂ ಬಂದಿದ್ದು ನಿವೃತ್ತಿ ಅಂಚಿನಲ್ಲಿದ್ದ ಕ್ರಿಸ್ ಕ್ರೇನ್ಸ್, ಮ್ಯಾಕ್‌ಮಿಲನ್, ಡೇನಿಯಲ್ ಮಾರ್ಟಿನ್, ಇಂಜಮಾಮ್ ತರದವರು. ಬ್ರಿಯಾನ್ ಲಾರಾರಂತವರು ದಕ್ಕಲಿಲ್ಲ. ಅಲ್ಲಿಗೆ ಐಸಿಎಲ್ ಆಕರ್ಷಣೆ ಸೀಮಿತವಾಯಿತು.
ಮೊದಲ ವರ್ಷ (೨೦೦೭-೦೮)ರಲ್ಲಿ ಐಸಿಎಲ್ ಭರ್ಜರಿಯಾಗಿಯೇ ಆರಂಭವಾಯಿತು. ಪಾಕ್‌ನ ಬಹುಪಾಲು ರಾಷ್ಟ್ರೀಯ ಆಟಗಾರರು ಇದ್ದ ಲಾಹೊರ್ ಬಾದ್‌ಶಾಹ್‌ಗಳು ಜನಾಕರ್ಷಣೆ ಉಂಟುಮಾಡಿದರು. ಹೆಚ್ಚು ಆಟಗಾರರ ಬಲ ಇಲ್ಲದಿರುವುದರಿಂದ ಮತ್ತೆ ಮತ್ತೆ ಆಟಗಾರರಲ್ಲೇ ವಿವಿಧ ತಂಡ ಮಾಡಿ ಲೀಗ್‌ಗಳನ್ನು ರೂಪಿಸಿ ಪಂದ್ಯಗಳನ್ನಾಡಿಸಿತು. ಬಹುಷಃ ಜಿ ಟೆಲಿಫಿಲ್ಮ್‌ಗೆ ಆಗಲೇ ಸಣ್ಣಗೆ ಸುಸ್ತು ಕಾಣಿಸಿರಬೇಕು!
ಮಹಾಭಾರತದ ಯುದ್ಧದಲ್ಲಿ ಗೆದ್ದು ಪಾಂಡವರು ಧೃತರಾಷ್ಟ್ರನನ್ನು ಕಾಣಲು ಬರುತ್ತಾರೆ. ಧೃತರಾಷ್ಟ್ರ ಭೀಮನನ್ನು ಆಲಂಗಿಸಿಕೊಳ್ಳಲು ಬಯಸುತ್ತಾನೆ. ಹೆಜ್ಜೆ ಮುಂದಿಟ್ಟ ಭೀಮನನ್ನು ತಡೆಯುವ ಕೃಷ್ಣ ಭೀಮನ ವಿಗ್ರಹವನ್ನು ಮುಂದೂಡುತ್ತಾನೆ. ಧೃತರಾಷ್ಟ್ರನ ಅಪ್ಪುಗೆಗೆ ನಲುಗಿ ವಿಗ್ರಹ ಪುಡಿಪುಡಿಯಾಗುತ್ತದೆ! ಬಿಸಿಸಿಐಗೆ ಐಪಿಎಲ್‌ನ್ನು ಪರಿಪೂರ್ಣವಾಗಿ ನಾಶಪಡಿಸಲು ಕಂಡ ಉಪಾಯವೂ ಅದೇ.
ಅದು ಸ್ಪಷ್ಟವಾಗಿ ಘೋಷಿಸಿದೆ, ಇನ್ನು ಮುಂದೆ ಐಸಿಎಲ್‌ನಲ್ಲಿ ಆಡಿದ ಆಟಗಾರರಿಗೆ ನಾವು ನಿಷೇಧ ಹೇರುವುದಿಲ್ಲ. ಅವರು ಮರಳಿ ಇತ್ತ ಬರಬಹುದು. ಆದರೆ ಷರತ್ತುಗಳಿವೆ. ಮೇ ೩೧ರೊಳಗೆ ಐಸಿಎಲ್ ಜೊತೆಗಿನ ಎಲ್ಲ ವ್ಯವಹಾರಗಳನ್ನು ಕೊನೆಗೊಳಿಸಿ ಬಂದರೆ ಈ ವರ್ಷ ಆಟಗಾರರು ಪ್ರಥಮ ದರ್ಜೆ ಋತುವಿನಲ್ಲಿ ಆಡಬಹುದು. ಒಂದು ವರ್ಷದ ನಂತರವಷ್ಟೇ ಅಂತರ್ರಾಷ್ಟ್ರೀಯ ಕ್ರಿಕೆಟ್‌ಗೆ ಅರ್ಹತೆ. ನೆನಪಿಡಿ, ಈ ಪ್ರಥಮ ದರ್ಜೆ ಜೂನ್ ಒಂದರಿಂದ ಆರಂಭವಾಗುತ್ತದೆ ಮತ್ತು ಇದರ ಕೆಳಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನ ಆಕರ್ಷಕ ಅವಕಾಶವೂ ಲಭ್ಯ!
ಇದರ ಹಿಂದೆ ಐಸಿಸಿಯ ಕೃಪಾಶೀರ್ವಾದ ಬಿಸಿಸಿಐಗೆ ಇದೆ. ಅಧಿಕೃತ ಲೀಗ್‌ಗಳ ಬಗೆಗಿನ ಹೊಸ ಐಸಿಸಿ ಕಾಯ್ದೆ ಜೂನ್ ಒಂದರಿಂದ ಜಾರಿಗೆ ಬರಲಿದೆ. ಆದರೆ ಇದನ್ನು ಪೂರ್ವಾನ್ವಯವಾಗಿ ಹೇರುವಂತಿಲ್ಲ. ಈಗಾಗಲೇ ತನಗೆ ಮಾನ್ಯತೆ ನೀಡುವ ಕುರಿತು ಹಾಗೂ ತನ್ನ ಆಟಗಾರರ ಮೇಲೆ ಕ್ರಿಕೆಟ್ ಮಂಡಳಿಗಳು ನಿಷೇಧ ಹಾಕುವ ವಿರುದ್ಧ ಜಿ ಸಂಸ್ಥೆಯ ಕಾನೂನು ಹೋರಾಟ ಸಫಲತೆಯ ಕಡೆಗೆ ನಡೆದಿದೆ. ಈಗ ಬಿಸಿಸಿಐ-ಐಸಿಸಿ ಹೂಡಿದ ಆಟ ಹೇಗಿದೆಯೆಂದರೆ, ಒಂದೊಮ್ಮೆ ಐಸಿಎಲ್ ಪರವೇ ತೀರ್ಪು ಬಂದರೂ ಆ ವೇಳೆಗೆ ಆಟಗಾರರೇ ಅವರ ಬಳಿ ಇರಬಾರದು!
ಈ ಹಂತದಲ್ಲಿ ಜಿ ಹೆಜ್ಜೆಗಳು ಕುತೂಹಲಕಾರಿ. ಆರ್ಥಿಕ ಹೊಡೆತಕ್ಕೆ ಸಿಕ್ಕಿರುವ ಅದು ಅನಿವಾರ್ಯವಾಗಿ ಮಾರ್ಚ್ ಟೂರ್ನಿಯನ್ನು ರದ್ದುಗೊಳಿಸಿದೆ. ಇಂಜಿ, ಮುಷ್ತಾಕ್ ಸೇರಿದಂತೆ ಎಲ್ಲ ಪಾಕ್ ಆಟಗಾರರು ಅಲಭ್ಯ ಎನ್ನುವುದು ಸರಣಿಯ ಆಕರ್ಷಣೆಗೇ ಕುತ್ತು ತಂದಿದೆ. ಒಂದೆಡೆ ಆಟಗಾರರಿಗೆ ಪೂರ್ತಿ ಪಾವತಿ ಆಗಿಲ್ಲ, ಅವರಿಗೆ ಎಲ್ಲೂ ಆಡುವಂತೆಯೂ ಇಲ್ಲ. ಹಾಗೆಂದು ಅವರು ಏಕಾಏಕಿ ಬಿಸಿಸಿಐ ಕಡೆಗೆ ಬರುವಂತಿಲ್ಲ. ಇನ್ನೂ ಒಪ್ಪಂದದ ಅವಧಿ ಚಾಲ್ತಿಯಲ್ಲಿರುವವರು ತಮ್ಮ ನಿರ್ಗಮನದ ಕುರಿತು ನಿಶ್ಚಿತ ಅವಧಿಗೆ ಮುನ್ನ ನೋಟೀಸ್ ಕೊಡಬೇಕು. ನೋಟೀಸ್ ಟೈಮ್ ಪಾಲಿಸಬೇಕು. ನಂತರದಲ್ಲಿ ಜಿಯಿಂದ ನೋ ಅಬ್ಜೆಕ್ಷನ್ ಪರವಾನಗಿ ಪತ್ರವನ್ನು ಪಡೆಯಬೇಕು. ಜಿ ಒಪ್ಪದಿದ್ದರೆ ಅವರ ಪಕ್ಷಾಂತರ ಕಷ್ಟ ಕಷ್ಟ. ಜಿ ವ್ಯವಹಾರ ಮುಖ್ಯಸ್ಥ ಹಿಮಾಂಶು ಮೂಡಿಯವರ ಪ್ರಕಾರ, ಅಕ್ಟೋಬರ್‌ನಲ್ಲಿ ಹೊಸ ಸರಣಿ ಯೋಜಿಸಲಾಗಿದ್ದು ಈ ಘಟ್ಟದಲ್ಲಿ ಐಸಿಎಲ್ ಹೋರಾಟದಿಂದ ಹಿಂಸರಿಯುವುದಿಲ್ಲ!
ಅಂದರೆ ರೋಹನ್ ಗವಾಸ್ಕರ್, ದಿನೇಶ್ ಮೊಂಗಿಯಾ, ಬದಾನಿಯಂತವರದು ಇಕ್ಕಳದಲ್ಲಿ ಸಿಲುಕಿದ ಸ್ಥಿತಿಯಾದೀತು. ಅಷ್ಟಕ್ಕೂ ನ್ಯಾಯಾಲಯವೇನಾದರೂ ಬಿಸಿಸಿಐ-ಐಸಿಸಿಯ ನಿಷೇಧದ ಆದೇಶವನ್ನು ರದ್ದುಗೊಳಿಸಿದರೆ ಬಿಸಿಸಿಐನ ಕಡೆಯಿಂದಲೂ ಅವಕಾಶ ಗಿಟ್ಟದ ಆಟಗಾರರು ಇತ್ತ ಬರಲಾರಂಭಿಸುತ್ತಾರೆ. ಈಗಾಗಲೆ ೮೫ ಭಾರತೀಯ ಹಾಗೂ ೬೦ ವಿದೇಶೀ ಆಟಗಾರರನ್ನು ತನ್ನ ಸುಪದಿಯಲ್ಲಿಟ್ಟುಕೊಂಡಿರುವ ಐಸಿಎಲ್ ಕೂಡ ‘ಹೊಸ ಆಟ’ ಆರಂಭಿಸುತ್ತದೆ!! ಮುಖ್ಯವಾಗಿ, ನಮ್ಮ ದೇಶದಲ್ಲಿ ಎರಡೆರಡು ಟ್ವೆಂಟಿ ೨೦ ಕ್ರಿಕೆಟ್ ಟೂರ್ನಿ ನಡೆಯುವುದನ್ನು ನೋಡಲು ಜನರಂತೂ ಇದ್ದಾರೆ. ಸಾಕಲ್ಲ?
ಎಲ್ಲೆಡೆಯೂ ಸಲ್ಲುವ ಪ್ರಕ್ರಿಯೆ ಶುರುವಾಗಿದೆ. ಅದಾಗಲೇ ಪಾಕ್ ಆಟಗಾರರಿಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಲು ಅವಕಾಶ ಸಿಕ್ಕಿದೆ. ಶ್ರೀಲಂಕಾದಲ್ಲಿಯೂ ಆ ಅನುಮತಿ ಕೊಟ್ಟುದುದಕ್ಕೆ ಅರ್ಜುನ ರಣತುಂಗ ತಮ್ಮ ಅಧ್ಯಕ್ಷ ಸ್ಥಾನವನ್ನೇ ಕಳೆದುಕೊಂಡಿದ್ದಾರೆ. ಅತ್ತ ಶೇನ್ ಬಾಂಡ್ ಐಸಿಎಲ್ ಬಿಟ್ಟು ರಾಷ್ಟ್ರೀಯ ತಂಡಕ್ಕೆ ಮರಳಲು ಯೋಚಿಸಿದ್ದಾರೆ. ಬಾಂಗ್ಲಾದ ಇಡೀ ತಂಡವನ್ನು ಖರೀದಿಸಿದ್ದ ಐಸಿಎಲ್ ಕುರಿತ ನಿಷೇಧವನ್ನು ತೆಗೆದು ಹಾಕುವುದು ಅಲ್ಲಿನ ಕ್ರಿಕೆಟ್ ಮಂಡಳಿಗೆ ಬಹುಪಾಲು ಅನಿವಾರ್ಯ. ಈ ಕಾಲಘಟ್ಟದಲ್ಲಿ ಉಳಿದಿರುವ ಒಂದೇ ಒಂದು ಕುತೂಹಲವೆಂದರೆ, ಎರಡು ವರ್ಷ ಪಟ್ಟಭದ್ರರ ಸವಾಲನ್ನು ತಾಳೀಕೊಂಡ ಇಂಡಿಯನ್ ಕ್ರಿಕೆಟ್ ಲೀಗ್ ಇದೀಗ ತನ್ನ ಶ್ರಮದ ಫಲ ಸಿಗುವ ಸಂದರ್ಭದಲ್ಲಿ ಸ್ಪರ್ಧೆಯಿಂದ ಹಿಂಸರಿದುಬಿಡುತ್ತದೆಯೇ?
-ಮಾವೆಂಸ

 
200812023996