ಸೋಮವಾರ, ಮೇ 11, 2009

ಪ್ರೀಮಿಯರ್ ಲೀಗ್‌ಗೆ ಬ್ಲಾಗ್ ಕಾಟ!

"ಇಲ್ಲ ಕಣ್ರೀ, ಈ ಬಾರಿಯ ಐಪಿಎಲ್ ಅಂತಹ ಯಶಸ್ಸನ್ನೇನೂ ಪಡೆಯುತ್ತಿಲ್ಲ. ನೋಡಲು ಜನ ಬರುತ್ತಿಲ್ಲ. ಟಿವಿ ನೇರಪ್ರಸಾರ ವೀಕ್ಷಿಸುವ ನಿಮಗೆ ಅರ್ಥವಾಗುವುದಿಲ್ಲ. ಇಲ್ಲಿ ಜನ ಇಲ್ಲ. ಕ್ರೀಡಾಂಗಣ ಖಾಲಿ ಖಾಲಿ ಉಳಿಯುತ್ತಿವೆ. ಮೊದಲ ಇನ್ನಿಂಗ್ಸ್ ವೇಳೆಯಲ್ಲಂತೂ ನಿರ್ಜನ! ಆದರೆ ಕಾಮೆಂಟರಿ ತಂಡಕ್ಕೆ ಆದೇಶ ಹೋಗಿದೆ. ಅವರು ಪಂದ್ಯದುದ್ದಕ್ಕೂ ಆಸಕ್ತಿಗೆ ಸಂಬಂಧಿಸಿದಂತೆ ಕುತೂಹಲ-ಕೋಲಾಹಲ-ಜ್ವರ ಏರಿದೆ ಎಂಬಂತೆಯೇ ಮಾತನಾಡಬೇಕು. ಆ ಮಟ್ಟಿನ ಉದ್ಘಾರ ಎತ್ತುತ್ತಿರಬೇಕು. ಕ್ಯಾಮರಾಮನ್‌ಗಳು ಜನರ ಗುಂಪಿನತ್ತ ಕ್ಯಾಮರಾ ಲೆನ್ಸ್ ತಿರುಗಿಸಬೇಕೇ ವಿನಃ ಖಾಲಿ ಜಾಗಗಳತ್ತ ಅಲ್ಲ. ಅಷ್ಟೇಕೆ, ಬಂದಿರುವ ವೀಕ್ಷಕರಿಗೂ ವಿನಂತಿಯಿದೆ, ಕ್ಯಾಮರಾ ಕಣ್ಣು ಹಾದಾಗಲೆಲ್ಲ ಕೂಗಬೇಕು, ಕುಣಿದಾಡಬೇಕೆಂದು" ಹೀಗೆ ಬರೆಯುತ್ತದೆ ಒಂದು ವಿಶಿಷ್ಟ ಬ್ಲಾಗ್. ಸ್ವಾರಸ್ಯವೆಂದರೆ, ಇದನ್ನು ಕೊಲ್ಕತ್ತಾ ನೈಟ್ ರೈಡರ್‍ಸ್ ತಂಡದ ಓರ್ವ ಅನಾಮಿಕ ಆಟಗಾರ ಬರೆಯುತ್ತಿದ್ದಾನೆ!
ಇಂಟರ್ನೆಟ್ ಜಾಲಾಟದ ಅರಿವು ಇಲ್ಲದಿರುವವರಿಗೆ ಪುಟ್ಟ ಮಾಹಿತಿ. ಅಂತರ್ಜಾಲದಲ್ಲಿ ಪ್ರತಿ ವ್ಯಕ್ತಿಯೂ ತನ್ನದೇ ಆದ ವೆಬ್ ಪತ್ರಿಕೆ ಆರಂಭಿಸಬಹುದು.ಅದಕ್ಕೆ ಬ್ಲಾಗಿಂಗ್ ಎನ್ನುತ್ತಾರೆ.ಅಲ್ಲಿ ಆತ ತನಗೆ ಬೇಕಾದ ಭಾಷೆಯಲ್ಲಿ ಅನಿಸಿಕೆ, ವಿಚಾರ, ಸುದ್ದಿ ಬರೆಯಬಹುದು. ಫೋಟೋ ಹಾಕಬಹುದು. ಒಂದರ್ಥದಲ್ಲಿ, ನಾವೇ ಮುದ್ರಿಸುವ ಪತ್ರಿಕೆಗೆ ನಾವೇ ಸಂಪಾದಕರಿದ್ದಂತೆ, ಮುದ್ರಕರಿದ್ದಂತೆ. ಇಲ್ಲಿ ಇನ್ನಾರದ್ದೋ ಮರ್ಜಿಗೆ ಕಾಯಬೇಕಾಗಿಲ್ಲ. ಸರಿಯಾಗಿ ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾದಾಗಿನಿಂದ ಹೊಸದೊಂದು ಬ್ಲಾಗ್ ಕಾಣಿಸಿದೆ. ಅದು http://fakeiplplayer.blogspot.com/ ಇದರ ಬರಹಗಾರನ ವಿವರ ಅಜ್ಞಾತ. ಆತ ಹೇಳಿಕೊಳ್ಳುವ ಪ್ರಕಾರ, ಅವ ಕೊಲ್ಕತ್ತಾ ತಂಡದ ಆಟಗಾರ. ಆಡಲು ಅವಕಾಶ ಸಿಕ್ಕಿಲ್ಲ. ಅಂತಹ ಸಾಧ್ಯತೆಯೂ ಕ್ಷೀಣ. ತಂಡದ ಒಳಗಿದ್ದುಕೊಂಡೇ ಆತ ಈ ಬರಹಗಳಲ್ಲಿ ತನ್ನ ಕೋಚ್, ಮಾಜಿ ನಾಯಕ ಸೌರವ್... ಒಟ್ಟಾರೆ ಐಪಿಎಲ್ ವ್ಯವಸ್ಥೆಗಳ ಕಾಲು ಎಳೆಯುತ್ತಿದ್ದಾನೆ.
ಅದಾಗಲೇ ಕಳೆದ ಎಂಟು ಪಂದ್ಯಗಳಲ್ಲಿ ಕೇವಲ ಒಂದು ಜಯ ಸಾಧಿಸಿರುವ ನೈಟ್ ರೈಡರ್‍ಸ್‌ಗೆ ಇದು ನುಂಗಲಾಗದ ತುಪ್ಪ. ಜೊತೆಗೆ ಈ ಬ್ಲಾಗ್‌ನಲ್ಲಿ ಕೋಚ್ ಮತ್ತು ತಂಡದ ಮಾಲಿಕರತ್ತ ಶಾನೆ ಉರಿಯಾಗುವ ಟೀಕೆ ಒಂದು ತುತ್ತು ಜಾಸ್ತಿ. ಗಮನಿಸಬೇಕಾದುದೆಂದರೆ, ತನ್ನ ಸಹ ಆಟಗಾರರು, ತಾಂತ್ರಿಕ ಸಿಬ್ಬಂದಿಗಳನ್ನೆಲ್ಲ ಈತ ಅಡ್ಡಹೆಸರಿನಿಂದಲೇ ಉಲ್ಲೇಖಿಸುತ್ತಾನೆ. ಇವೆಲ್ಲ ಆ ತಂಡದೊಳಗೆ ಮಾತ್ರ ಪ್ರಚಲಿತದಲ್ಲಿರುವ ಹೆಸರುಗಳು! ಕೊಲ್ಕತ್ತಾ ತಂಡದಲ್ಲಿ ಇದನ್ನು ಬರೆದವರು ಯಾರು ಎಂಬವ ಅನುಮಾನಗಳ ಮೋಡ ಅತ್ತಿತ್ತ ಚಲಿಸುತ್ತಿದ್ದಾಗ ಈತ ಬರೆಯುತ್ತಾನೆ, "ಈ ಮಂದಿಗೆ ಇವತ್ತು ಬೆಳಿಗ್ಗಿನವರೆಗೆ ಬ್ಲಾಗ್ ಎಂದರೇನು ಎಂಬುದೇ ಗೊತ್ತಿರಲಿಲ್ಲ. ಈಗ ನೋಡಿ!?"
ಸೂಪರ್‌ಸ್ಟಾರ್ ಶಾರುಖ್‌ಖಾನ್ ಹಾಗೂ ಕೋಚ್ ಜಾನ್ ಬುಚನನ್ ಐಪಿಎಲ್‌ನ ಎರಡನೇ ಸಂಚಿಕೆ ದಕ್ಷಿಣ ಆಫ್ರಿಕಾಕ್ಕೆ ಹಾರುವುದಕ್ಕಿಂತ ಮುನ್ನವೇ ವಿವಾದಗಳ ಅಲೆ ಎಬ್ಬಿಸಿದವರು. ‘ಪಂದ್ಯಕ್ಕೊಬ್ಬ ನಾಯಕ’ ಸೂತ್ರ ವಿವಾದ, ನಗೆಗಳೆರಡನ್ನೂ ತಂದಿತ್ತು. ಶಾರುಖ್ ಸೌರವ್ ಗಂಗೂಲಿಯನ್ನು ಸಮಾಧಾನಪಡಿಸಿದರು, ಸುನಿಲ್ ಗವಾಸ್ಕರ್‌ರನ್ನು ಹೀಗಳೆದರು. ದುರದೃಷ್ಟಕ್ಕೆ ಆಯ್ಕೆಯಾದ ನಾಯಕ ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಮ್ ‘ರನ್’ ಎಂದರೆ ಔಟಾಗಿ ಪೆವಿಲಿಯನ್ ದಿಕ್ಕಿಗೆ ಓಡುವುದು ಎಂದುಕೊಂಡಿದ್ದಾರೆ! ಅವರ ತಂಡದಲ್ಲೀಗ ಕರೆದು ಕೊಟ್ಟರೂ ನಾಯಕತ್ವ ಬೇಡ ಎನ್ನುವವರೇ ಹೆಚ್ಚು.
ಇಂತಹ ವೇಳೆ ಬ್ಲಾಗ್‌ನ ರಸವತ್ತಾದ ಬರಹಗಳು ‘ಮಂಡೆಬಿಸಿ’ ಹೆಚ್ಚಿಸಿವೆ. ಬರೆಯುತ್ತಿರುವವರು ಯಾರು? ಸೌರವ್ ಮೇಲೆ ಅನುಮಾನ ಬಂದಿತ್ತು. ಆದರೆ ಬ್ಲಾಗ್ ಬರೆಯುತ್ತದೆ, ‘ಬಿಡಿ ಸ್ವಾಮಿ. ಅವರನ್ನೇಕೆ ಅನುಮಾನಿಸುತ್ತೀರಿ. ಇನ್ನಾದರೂ ಅವರಿಗೆ ವಿಶ್ರಾಂತಿ ಕೊಡಿ. ಆತನಿಗೆ ಗೊತ್ತು, ಐಪಿಎಲ್ ಮೂಲಕ ತನ್ನ ಟೆಸ್ಟ್ ಬ್ಯಾಟಿಂಗ್‌ಗೆ ಒಳ್ಳೆಯ ಪ್ರಾಕ್ಟೀಸ್ ದೊರಕಿಸಿಕೊಡಲು ತಂಡ ಸಿದ್ಧವಿದೆ!’
ಬ್ಲಾಗ್ ಆರಂಭದಲ್ಲಿ ತಂಡದ ಆಟಗಾರರ ಆಸೆ, ಸ್ವಾರ್ಥ ಅಥವಾ ಸ್ತ್ರೀ ಮೋಹಗಳತ್ತ ಹೇಳಿದ್ದರೂ ಮುಂದಿನ ದಿನಗಳಲ್ಲಿ ತಂಡಗಳ ತಂತ್ರಗಾರಿಕೆ ಕುರಿತು, ತಮ್ಮ ತಂಡದ ಚಟುವಟಿಕೆಗಳನ್ನು ಮುಂಚಿತವಾಗಿ ಚರ್ಚಿಸುವ ಪ್ರೌಡಿಮೆ ಮೆರೆದಿತ್ತು. ಬ್ಲಾಗ್ ಬರೆಯುವವರ ಭಾಷೆ ಸರಳ ಇಂಗ್ಲೀಷ್ ಅಲ್ಲ ಎಂಬುದೂ ಗಮನಿಸಬೇಕಾದ ಅಂಶ. ಒಮ್ಮೆ ಬುಚನನ್‌ನ ಕಾಲು ಎಳೆದದ್ದು ಹೀಗೆ, "ತಂಡಕ್ಕೊಬ್ಬ ರನ್ ಗಳಿಸಬಲ್ಲ ಎರಡನೇ ವಿಕೆಟ್ ಕೀಪರ್ ಬೇಕಾಗಿದ್ದಾನೆ. ಬುಚನನ್ ಐಪಿಎಲ್‌ನ ಮೊದಲ ವರ್ಷದ ಕಂತನ್ನು ಗಮನಿಸಿದ್ದರೆ ಗೊತ್ತಾಗುತ್ತಿತ್ತು. ಓಹ್, ಸಾರಿ. ಜಾನ್‌ರ ಲ್ಯಾಪ್‌ಟಾಪ್ ಕೆಲ ತಿಂಗಳ ಹಿಂದೆ ಹಾಳಾಗಿದೆ ಮತ್ತು ಹಿಂದಿನ ವರ್ಷದ ಎಲ್ಲ ದಾಖಲೆಗಳು ನಾಶವಾಗಿದೆ ಎಂಬ ಅನುಮಾನವಿದೆ!"
ಐಪಿಎಲ್‌ನಲ್ಲಿ ಅಥವಾ ಭಾರತದ ತಂಡದಲ್ಲಿ ಖಾಯಂ ಸ್ಥಾನ ಪಡೆಯುವ ಆಕಾಂಕ್ಷಿ ಆಟಗಾರರೂ ಇಂತಹ ಬ್ಲಾಗ್ ಬರೆಯುವುದಿಲ್ಲ. ಇದನ್ನು ತಂಡದ ಸಹಸಿಬ್ಬಂದಿಯಾಗಿರುವವರು ಅಥವಾ ಮಾಹಿತಿಯನ್ನಷ್ಟೇ ಪಡೆವ ಆಟಗಾರರ ಸ್ನೇಹಿತರಾರೋ ಮಾಡಬಹುದಷ್ಟೇ. ಕೊಲ್ಕತ್ತಾ ತಂಡ ಗೆಲ್ಲುತ್ತಲೇ ಸಾಗಿದ್ದರೆ ಈ ಬ್ಲಾಗ್ ಸತ್ತು ಹೋಗುತ್ತಿತ್ತು. ಆದರೆ ಈಗ ಈ ಬ್ಲಾಗ್‌ಗೆ ೫೬೨೫ ಮಂದಿ ಖಾಯಂ ಅನುಯಾಯಿಗಳು!
ಪ್ರತಿ ಬಾರಿ ಹೊಸದನ್ನು ನಿರೀಕ್ಷಿಸುವ ಅಭಿಮಾನಿಗಳಿಗೆ ಸದ್ಯಕ್ಕೆ ಸಿಕ್ಕಿದ್ದು ತಂತ್ರಗಾರಿಕೆಯ ಟೈಮ್‌ಔಟ್ ಎಂಬ ಅಡಚಣೆ! ಈ ತರದ ಬ್ಲಾಗಿಂಗ್ ಖಚಿತವಾಗಿಯೂ ಒಂದು ಹೊಸ ತಂತ್ರ. ಮುಂದಿನ ವರ್ಷಗಳಲ್ಲಿ ಪ್ರತಿ ತಂಡದಲ್ಲಿ ಒಬ್ಬೊಬ್ಬ ಅನಾಮಿಕ ಬ್ಲಾಗಿ ಹುಟ್ಟಿ ಆ ಮಟ್ಟಿಗೆ ತಂಡದ ಜನಪ್ರಿಯತೆಯನ್ನು ಹೆಚ್ಚಿಸಲು ಪ್ರಯತ್ನಿಸಬಹುದು.
ಸದರಿ ಕೊಲ್ಕತ್ತಾ ರೈಡರ್ ಬ್ಲಾಗಿ ಹೇಳುತ್ತಾನೆ, ಐಪಿಎಲ್ ಎಷ್ಟು ಪ್ರಮಾಣದಲ್ಲಿ ಸುಳ್ಳು ಸುಳ್ಳೇ ತನ್ನನ್ನು ಜನಪ್ರಿಯ ಎಂದು ತೋರಿಸಿಕೊಳ್ಳುತ್ತಿದೆ ಎಂದರೆ ಈ ‘ಫ್ಲೇಕ್’ ಬ್ಲಾಗನ್ನೇ ಆ ಕಸರತ್ತು ನಾಚಿಸುವಂತಿದೆ! ಒಂದಂತೂ ನಿಜ, ಜನಪ್ರಿಯತೆಯಲ್ಲಿ ಮುಕ್ಕಾಗಿದೆ ಎಂಬುದು ಪಕ್ಕಾ ಅನ್ನಿಸಿದರೆ ಐಪಿಎಲ್ ಮುಂದಿನ ಬಾರಿ ಇನ್ನೊಂದು ಹೆಜ್ಜೆ ಇರಿಸುತ್ತದೆ, ‘ತಾನೇ ಅನಾಮಿಕ ಆಟಗಾರರ ಹೆಸರಲ್ಲಿ ತಂಡಕ್ಕೊಂದು ಬ್ಲಾಗ್ ಆರಂಭಿಸಿಬಿಡುತ್ತದೆ!’
ರಾಮ ರಾಮಾ!!

-ಮಾವೆಂಸ

 
200812023996