ಸೋಮವಾರ, ಜೂನ್ 29, 2009

ಟ್ವೆಂಟಿ ಕ್ರಿಕೆಟ್ಟೂ, ಪಾಕ್ ವಿಜಯ ಸಂಭ್ರಮವೂ....



ಟ್ವೆಂಟಿ ೨೦ ವಿಶ್ವಕಪ್‌ನ ಎರಡನೇ ಆವೃತ್ತಿ ಭಾರತೀಯರಲ್ಲಿ ಎರಡು ಕಾರಣಕ್ಕೆ ಬೇಸರವನ್ನು ತಂದಿದೆ. ಮೊದಲನೆಯದು ನೇರವಾದ ಅಂಶ, ನಾವು ಹಾಲಿ ಚಾಂಪಿಯನ್ ಎನ್ನಿಸಿಕೊಂಡೂ ಸೂಪರ್ ಎಂಟರ ಹಂತ ದಾಟಲಿಲ್ಲ. ಆ ಸುತ್ತಲ್ಲಿ ಒಂದು ಪಂದ್ಯವನ್ನೂ ಗೆಲ್ಲಲಿಲ್ಲ. ಇದು ಬೇಸರ ತರುವುದು ಸಹಜ. ಇನ್ನೊಂದು, ಒಂದೇಟಿಗೆ ಒಪ್ಪಿಕೊಳ್ಳುವುದು ಕಷ್ಟವಾಗುವಂತದು. ಅದು ಪಾಕಿಸ್ತಾನದ ಪ್ರಶಸ್ತಿ ಗೆಲವು! ಪ್ರತಿಯೊಬ್ಬ ಭಾರತೀಯನಿಗೂ ಫೈನಲ್‌ನಲ್ಲಿ ಶ್ರೀಲಂಕಾ ತಂಡವೇ ಪಾಕಿಸ್ತಾನವನ್ನು ಸೋಲಿಸಲಿ ಎಂಬ ಆಶಯ ಇದ್ದರೆ ಅದು ತಪ್ಪು ಎನ್ನಲಾಗದು. ಆದರೆ.....
ಪಾಕ್‌ನ ಟಿ೨೦ ದಿಗ್ವಿಜಯ ಕ್ರಿಕೆಟ್ ವಿಶ್ವದ ಮಟ್ಟಿಗೆ ಸ್ವಾಗತಾರ್ಹವಾದುದು. ಪದೇ ಪದೇ ಆಸ್ಟ್ರೇಲಿಯಾವೋ, ಮತ್ತೆ ಭಾರತವೋ ವಿಶ್ವಕಪ್‌ನ್ನು ಎತ್ತುವುದು ಹೊಸ ವಲಯಗಳಿಗೆ ಉತ್ತೇಜನ ಕೊಡುವ ಗುರಿಗೆ ತೊಡಕೇ. ಆ ಲೆಕ್ಕದಲ್ಲಿ ಪಾಕ್ ಗೆದ್ದುದು ಡಬಲ್ ಬೋನಸ್. ಅಲ್ಲಿನ ಕ್ರಿಕೆಟ್ ತಂಡದಲ್ಲಿ ಪ್ರತಿಭೆಗಳಿದ್ದರೂ ನಮ್ಮ ರಾಜಕೀಯ ವಲಯವನ್ನು ನಾಚಿಸುವಂತ ಭಿನ್ನಮತವಿದ್ದುದು ಫಲಿತಾಂಶದಲ್ಲಿ ಸದಾ ಪ್ರತಿಫಲಿಸುತ್ತಿತ್ತು. ಆ ತಂಡದಲ್ಲಿ ಈ ವಿಜಯ ಒಗ್ಗಟ್ಟನ್ನು ಮೂಡಿಸಿದರೆ ಜಯದ ಮೌಲ್ಯ ಹೆಚ್ಚೀತು.
ಮುಖ್ಯವಾಗಿ, ಪಾಕ್‌ನ ಬಡ ಪ್ರಜೆಗೆ ಇದು ಮರುಭೂಮಿಯ ಓಯಸಿಸ್. ಭಾರತ ತಂಡದ ಪ್ರವಾಸ ರದ್ದಾದ ದುಃಖ ಮತ್ತು ಆ ಗಾಯದ ಮೇಲೆ ಬರೆಯೆಳೆದಂತೆ ಶ್ರೀಲಂಕಾ ಕ್ರಿಕೆಟಿಗರ ಮೇಲೆ ನಡೆದ ಮಾರಣಾಂತಿಕ ದಾಳಿ ಆತನಿಗೆ ಸ್ವದೇಶದಲ್ಲಿ ಪಾಕ್ ತಂಡ ಅಂತರ್ರಾಷ್ಟ್ರೀಯ ಕ್ರಿಕೆಟ್ ಆಡುವುದನ್ನು ನೋಡುವುದರಿಂದ ವಂಚಿಸಿತ್ತು. ಪಾಕ್‌ಗೆ ಬರಲು ಕೊನೆಗೆ ಬಾಂಗ್ಲಾ ದೇಶವೂ ನಿರಾಕರಿಸುವ ಸ್ಥಿತಿ ಬಂದಿದೆ!
ಇದರರ್ಥ ಪಾಕ್ ಆಟಗಾರರಿಗೆ ಅಂತರ್ರಾಷ್ಟ್ರೀಯ ಕ್ರಿಕೆಟ್ ಆಡುವ ಅವಕಾಶ ಕಡಿಮೆಯಾಗಿದೆ. ಐಪಿಎಲ್‌ನಲ್ಲಿ ಪ್ರವೇಶ ನಿರ್ಬಂಧ. ಐಸಿಎಲ್‌ನಲ್ಲಿ ‘ಲಾಹೋರ್ ಬಾದ್‌ಶಾಹ್’ಗಳಾದರೂ ಅಲ್ಲಿ ಪಂದ್ಯಗಳೆ ನಡೆಯುತ್ತಿಲ್ಲ. ಇಂತಹ ವೇಳೆ ಟ್ವೆಂಟಿ ೨೦ ವಿಶ್ವಕಪ್ ಗೆಲುವು ಒಂದು ನಿಟ್ಟುಸಿರು ಹುಟ್ಟಿಸಿರಬಹುದು. ಅಲ್ಲಿನ ಯುವ ವರ್ಗಕ್ಕೆ ಮತೆ ಕ್ರಿಕೆಟ್ ಆಟದತ್ತ ಗಂಭೀರ ತರಬೇತಿಗೆ ಪ್ರೋತ್ಸಾಹಿಸಬಹುದು. ಅಷ್ಟೇಕೆ, ಇತರ ರಾಷ್ಟ್ರಗಳು ಪಾಕಿಸ್ತಾನಕ್ಕೆ ಒಂದು ಚೂರು ಹೆಚ್ಚಿನ ಆದ್ಯತೆ ಕೊಟ್ಟು ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಆಹ್ವಾನಿಸಬಹುದು. ಅದರ ಮೊದಲ ಕುರುಹು ಇದೀಗ ಸಿಕ್ಕಿದೆ. ಪಾಕ್ - ಆಸ್ಟ್ರೇಲಿಯಾ ನಡುವೆ ೨೦೧೦ರ ಸರಣಿಯ ಆತಿಥ್ಯ ವಹಿಸಲು ಇಂಗ್ಲೆಂಡ್ ಮುಂದೆ ಬಂದಿದೆ. ಮುಳುಗುತ್ತಿರುವವನಿಗೆ ಇದು ಹುಲ್ಲುಕಡ್ಡಿ!
ನಿಜ, ಕ್ರಿಕೆಟ್‌ನಲ್ಲಿ ಅದೃಷ್ಟದ್ದು ಮಹತ್ವದ ಪಾತ್ರ. ಇಂದು ಯೂನಿಸ್ ಖಾನ್‌ರ ತಂಡ ಲೀಗ್ ಹಂತದಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿದ್ದು, ಸೂಪರ್ ಎಂಟರ ಸೆಣಸಾಟದಲ್ಲಿ ಫೈನಲ್ ಎದುರಾಳಿ ಶ್ರೀಲಂಕಾದ ಎದುರೇ ಪರಾಜಿತರಾಗಿದ್ದು ನೆನಪಾಗುತ್ತದೆ. ಅದರ ಬೌಲಿಂಗ್, ಬ್ಯಾಟಿಂಗ್ ಅಥವಾ ಫೀಲ್ಡಿಂಗ್‌ಗಳಾವುವೂ ಅತ್ಯುತ್ತಮ ಮಟ್ಟದಲ್ಲಿರಲಿಲ್ಲ. ಇಂಗ್ಲೆಂಡ್ ಎದುರಿನದ್ದಂತೂ ಹೀನಾಯ ಸೋಲು. ಆದರೂ ಅದೃಷ್ಟ, ತಂಡ ಉಪಾಂತ್ಯ ತಲುಪಿತ್ತು. ಮುಂದಿನದು ಶಾಹೀದ್ ಅಫ್ರಿದಿ ಮ್ಯಾಜಿಕ್!
ಟ್ವೆಂಟಿ ೨೦ಯಲ್ಲಿ ಓರ್ವ ಅದ್ಭುತ ಆಟ ತೋರಿದರೂ ಸಾಕು. ತಂಡ ಗೆಲುವಿನತ್ತ ನಾಗಲೋಟ ಹಾಕಬಲ್ಲದು. ಆದರೆ ವಿಶ್ವಕಪ್‌ನ ಸ್ವರೂಪದಲ್ಲಿಯೇ ದೋಷಗಳಿವೆ. ಅದು ಪಾಕ್‌ನ ಗೆಲುವಿನಲ್ಲಿಯೂ ಪಾತ್ರ ವಹಿಸಿದೆ. ಸೂಪರ್ ಎಂಟರ ರೂಪರೇಷೆ ಬದಲಾಗಬೇಕು. ಇಲ್ಲಿ ಎಲ್ಲಾ ತಂಡಗಳು ಪರಸ್ಪರ ಮುಖಾಮುಖಿಯಾಗಬೇಕಿತ್ತು ಅಥವಾ ಒಂದು ಗುಂಪಿನ ತಂಡಗಳು ಎರಡೆರಡು ಬಾರಿ ಸೆಣಸಾಡಬೇಕಿದ್ದುದು ಸೂಕ್ತ. ಈ ವಿಶ್ವಕಪ್ ಕ್ಲುಪ್ತವಾಗಿ ನಡೆದುಹೋಗಿ ಅಸಲಿ ಚಾಂಪಿಯನ್‌ನ್ನು ಆರಿಸಲಾಗಿದೆ ಎಂದರೆ ಸಂಶಯ!
ಇವೆಲ್ಲ ಕಾರಣಗಳನ್ನು ನೀಡಿ ಪಾಕಿಸ್ತಾನದ ಅಪ್ರತಿಮ ವಿಜಯದ ಬೆಲೆಯನ್ನು ಇಳಿಸುವುದು ಉದ್ದೇಶವಲ್ಲ. ಸೆಮಿಫೈನಲ್, ಫೈನಲ್‌ಗಳೆರಡು ನಾಕ್‌ಔಟ್ ಸ್ಪರ್ಧೆಗಳಲ್ಲಿ ಪಾಕ್ ತೋರಿದ್ದು ಆಕರ್ಷಕ ಪ್ರದರ್ಶನ. ಪಕ್ಕಾ ವೃತ್ತಿಪರ ಸ್ಪರ್ಶ. ಉಮರ್ ಗುಲ್, ಅಫ್ರಿದಿ ಬೌಲಿಂಗ್, ಕಮ್ರಾನ್ ಅಕ್ಮಲ್‌ರ ಬ್ಯಾಟಿಂಗ್. ಒಟ್ಟಾರೆ ಫೀಲ್ಡಿಂಗ್ ತಲೆದೂಗುವಂತಿತ್ತು. ಗೆಲುವಿಗೆ ಸಲಾಂ. ಆದರೆ....
ಟ್ವೆಂಟಿ ೨೦ ಯಶಸ್ಸಿಗೆ ಕೆಲವು ಸೂತ್ರಗಳನ್ನು ಪಾಕ್ ಕಂಡುಕೊಂಡಂತಿದೆ. ಮೊದಲ ಆರು ಓವರ್‌ಗಳ ಪವರ್ ಪ್ಲೇನಲ್ಲಿ ರನ್‌ಗಳ ಹೊಳೆ ಹರಿಯುವುದು ತುಸು ಮಂದವಾದರೂ ಓ.ಕೆ. ಅಗ್ರ ಬ್ಯಾಟ್ಸ್‌ಮನ್‌ಗಳ ವಿಕೆಟ್ ಪತನವಾಗದಿರುವುದು ಯಶಸ್ಸಿನ ಮಂತ್ರ. ಇದನ್ನು ಪಾಕ್ ವಿಭಿನ್ನ ಮಾದರಿಯಲ್ಲಿ ವ್ಯಾಖ್ಯಾನಿಸಿದೆ. ಅದು ಕಮ್ರಾನ್ ಅಕ್ಮಲ್‌ರನ್ನು ಪಿಂಚ್ ಹಿಟ್ಟರ್‌ನ್ನಾಗಿ ಬಳಸಿತು. ಬಹುಷಃ ಬರುವ ದಿನಗಳಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಪಿಂಚ್ ಹಿಟ್ಟರ್‌ಗಳನ್ನೇ ಕಣಕ್ಕಿಳಿಸುವುದು ಗಿಟ್ಟೀತು.
ಮೊದಲ ಹತ್ತು ಓವರ್‌ಗಳಲ್ಲಿ ೭೦-೮೦ ರನ್ ಗಳಿಸಿದರೂ ಮುಂದೆ ಅದೇ ಲಯವನ್ನು ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ. ಚೆಂಡು ಹಳೆಯದಾಗುವುದು, ಪಿಚ್ ಸ್ವಲ್ಪ ಮೃದುವಾಗುವುದು ಇದಕ್ಕೆ ಕಾರಣವಿರಬಹುದೇನೋ. ಆದರೆ ಪಾಕ್ ಉಮರ್ ಗುಲ್‌ರನ್ನು ಹತ್ತನೇ ಓವರ್‌ನ ನಂತರವೇ ಬೌಲಿಂಗ್‌ಗೆ ಇಳಿಸಿದ್ದು ಜಾಣ್ಮೆಯ ಪ್ರತೀಕ. ತಂತ್ರಗಾರಿಕೆಯ ಶೈಲಿಯ ಬೌಲರ್‌ಗಳನ್ನು ಇನ್ನಿಂಗ್ಸ್‌ನ ಎರಡನೇ ಭಾಗದಲ್ಲಿ ಬಳಸುವುದು ಇನ್ನು ಮುಂದೆ ಮಾದರಿಯಾಗಬಹುದು.
ಸ್ವಾರಸ್ಯವೆಂದರೆ, ಪಾಕ್‌ನಲ್ಲಿ ಯಾವತ್ತೂ ಯಶಸ್ಸು ಒಗ್ಗಟ್ಟನ್ನು ತಂದುಕೊಟ್ಟಿಲ್ಲ. ಹಿಂದೆ ೧೯೯೨ರಲ್ಲಿ ಏಕದಿನ ವಿಶ್ವಕಪ್ ಗೆದ್ದಾಗಲೂ ಇಮ್ರಾನ್‌ಖಾನ್‌ರಿಗೆ ಉಘೇ ಉಘೇ ಎನ್ನುವ ಬದಲು ಅವರ ಕ್ಯಾನ್ಸರ್ ಆಸ್ಪತ್ರೆ, ನಿಲುವುಗಳ ಬಗ್ಗೆ ತಂಡದೊಳಗಿನ ಆಕ್ಷೇಪ ಮುಗಿಲುಮಿಟ್ಟಿತ್ತು. ಈ ಬಾರಿ ಹಾಗಾಗದಿದ್ದರೆ ಸಾಕು. ಇದೇ ವೇಳೆ, ಗೆಲುವಿನ ಅಮಲಿನಲ್ಲಿ ಅಫ್ರಿದಿ ಭಾರತದ ವಿರುದ್ಧ ಕೆಂಡಕಾರಿದ್ದಾರೆ. ಫೈನಲ್‌ನಲ್ಲಿ ಅಫ್ರಿದಿ ಆಟ ಕಂಡವರಿಗೆ ಭವಿಷ್ಯದ ನಾಯಕ ಕಂಡರೆ ಇಲ್ಲಿ ನಿರಾಶೆ ಮೂಡಿಸಿದರು. ಗೆಲುವು ಅವರಲ್ಲಿ ಪ್ರಬುದ್ಧತೆಯನ್ನು ತಂದಂತಿಲ್ಲ!
ಒಂದು ಮಾತು - ಪಾಕ್ ಗೆಲುವಿಗಾಗಿ ಎಂತಹ ತಹತಹದಲ್ಲಿತ್ತು ಎಂದರೆ ತಾನೇ ಜೀವನಪರ್ಯಂತ ನಿಷೇಧ ಹೇರಿದ್ದ, ಅದು ರದ್ದಾದಾಗಲೂ ‘ಕೂಲಿಂಗ್ ಪೀರಿಯಡ್’ ಎಂದು ಒಂದು ವರ್ಷ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಇಲ್ಲ ಎಂಬ ನಿರ್ಬಂಧ ಸೂಚಿಸಿಯೂ ದಡಕ್ಕನೆ ಈ ಟಿ೨೦ ವಿಶ್ವಕಪ್‌ಗೆ ಅಬ್ದುಲ್ ರಜಾಕ್‌ರನ್ನು ಸೇರಿಸಿಕೊಂಡುಬಿಡುವುದೇ? ನೀತಿಗೆ ಕೊನೆಯ ಸ್ಥಾನ ಎಂಬ ರಾಜಕೀಯ ನೇತಾರರ ಅಜೆಂಡಾವೇ ಪಾಕ್ ತಂಡದ್ದೂ!
-ಮಾವೆಂಸ

ಮಂಗಳವಾರ, ಜೂನ್ 23, 2009

ಹೊಸ್ತಿಲಲ್ಲಿ ಕಾದಿದೆ ವೀ - ಅಪಾಯ!



ಇತ್ತೀಚೆಗೆ ಪರಿಚಿತ ಬಿಎಸ್‌ಎನ್‌ಎಲ್ ಅಧಿಕಾರಿಯೊಬ್ಬರು ಹೇಳುತ್ತಿದ್ದರು, "ನಮ್ಮ ಗ್ರಾಮೀಣ ಬ್ರಾಡ್‌ಬ್ಯಾಂಡ್ ಯೋಜನೆ ಜಾರಿಗೊಳ್ಳುವವರೆಗೆ ಈ ಪರಿ ಹಳ್ಳಿ ಮನೆಗಳಲ್ಲಿ ಕಂಪ್ಯೂಟರ್‌ಗಳಿವೆ ಎಂಬುದೇ ಗೊತ್ತಿರಲಿಲ್ಲ" ಅವರದ್ದು ಹರ್ಷದ ಉದ್ಘಾರ. ಇನ್ನೊಂದು ರೀತಿಯಲ್ಲಿ ಯೋಚಿಸಿದರೆ ವೀ... ಅಪಾಯ ನಮ್ಮ ಬೆನ್ನ ಹಿಂದೆಯೇ ಇದೆ!
ಏನಿದು ವೀ?
ವಿದ್ಯುತ್ ಉಪಕರಣಗಳು ಹಾಗೂ ಎಲೆಕ್ಟ್ರ್ರಾನಿಕ್ ಸಾಧನಗಳ ತ್ಯಾಜ್ಯವನ್ನು ಇ - ವೇಸ್ಟ್ ಎನ್ನುತ್ತೇವೆ. ಇದನ್ನೇ ಹೆಚ್ಚು ವೈಜ್ಞಾನಿಕವಾಗಿ ಹೇಳುವುದಾದರೆ ವೀ(ಡಬ್ಲ್ಯುಇಇಇ)! ಕಂಪ್ಯೂಟರ್, ಲ್ಯಾಪ್‌ಟಾಪ್, ಟಿವಿ, ರೇಡಿಯೋ, ಫ್ರಿಜ್, ಮೊಬೈಲ್, ಡಿವಿಡಿಗಳೇ ಈ ವೀಗಳಾಗಿ ಪರಿವರ್ತಿತವಾಗುತ್ತವೆ. ಜನ ಬಳಸುವ ಎಲೆಕ್ಟ್ರಾನಿಕ್ ಸಲಕರಣೆಗಳು ಹಾಗೂ ಐಟಿ ಉಪಕರಣಗಳನ್ನು ಇ ವೇಸ್ಟ್ ಎನ್ನುವ ನಾವು ಎಲ್ಲ ಮಾದರಿಯ ಉದ್ಯಮಗಳು ಬಳಸಿ ಬಿಸಾಡಿದ ಎಲೆ-ಕ್ಟ್ರಾನಿಕ್, ಕ್ಟ್ರಿಕ್ ಯಂತ್ರೋಪಕರಣಗಳನ್ನು ವೀ ಎನ್ನಬೇಕಾಗುತ್ತದೆ.
ಈಗಾಗಲೆ ಯುರೋಪಿಯನ್ ಯೂನಿಯನ್ (ಇಯು) ವೀ ವ್ಯಾಪ್ತಿಗೆ ಹತ್ತು ವರ್ಗಗಳನ್ನು ಸೇರಿಸಿದೆ. ಫ್ರಿಜ್, ವಾಶಿಂಗ್ ಮೆಶಿನ್, ಎಸಿ, ಐರನ್ ಬಾಕ್ಸ್, ಟೋಸ್ಟರ್, ಕಾಫಿ ಮೆಶಿನ್, ವ್ಯಾಕ್ಯುಮ್ ಕ್ಲೀನರ್, ಕಂಪ್ಯೂಟರ್ ಸಲಕರಣೆಗಳು, ಫೋನ್, ಮೊಬೈಲ್, ಫ್ಯಾಕ್ಸ್, ಝೆರಾಕ್ಸ್, ಪ್ರಿಂಟರ್, ವಿಸಿಡಿ, ಡಿವಿಡಿ, ಹ್ಯಾಲೋಜನ್ ಬಲ್ಬ್, ವೈದ್ಯಕೀಯ ಉಪಕರಣಗಳು..... ಹೀಗೆ ಪಟ್ಟಿ ಮಾರುದ್ದವಿದೆ. ಅಲ್ಲಿ ಇ ವೇಸ್ಟ್ ನಿರ್ವಹಣೆಗೆ ಸ್ಪಷ್ಟ ಮಾನದಂಡವಿದೆ. ಸದ್ಯ ಭಾರತದಲ್ಲಿ ಆ ವಿಚಾರದಲ್ಲಿ ಕಾನೂನು ಕಣ್ಣು ಮುಚ್ಚಿಕೊಂಡು ಕೂತಿದೆ!
ಸಮಸ್ಯೆ ದೊಡ್ಡದಾಗಿಲ್ಲ ಎನ್ನುವಂತಿಲ್ಲ. ನಮ್ಮ ಸಂವಹನ ಮಾಧ್ಯಮಗಳನ್ನು ನಿದ್ರಿಸಲು ಬಿಟ್ಟು ಕೂತಿದ್ದೇವೆ ಎಂಬುದೇ ಸರಿ. ಭಾರತದ ಮೆಟ್ರೋಗಳಲ್ಲಿ ಇ ವೇಸ್ಟ್ ಸ್ಲಂಗಳಂತೆಯೇ ಬೆಳೆಯುತ್ತಿದೆ. ಒಂದು ಅಧ್ಯಯನದ ಪ್ರಕಾರ, ಶೇ.೯೦ರಷ್ಟು ತ್ಯಾಜ್ಯ ‘ವೀ’ಯಿಂದ ಎಂಬುದು ಸ್ಪಷ್ಟ. ೪೨.೧ಶೇ. ಪ್ರಮಾಣದ ಇ ವೇಸ್ಟ್ ಮನೆಯ ಉಪಕರಣಗಳಿಂದ, ಐಟಿಯಿಂದ ಶೇ.೩೩.೯ ಹಾಗೂ ಎಲೆಕ್ಟ್ರಾನಿಕ್ ಕ್ಷೇತ್ರದಿಂದ ೧೩.೭ಶೇ.ತ್ಯಾಜ್ಯ ಉತ್ಪತ್ತಿಯಾಗುತ್ತಿದೆ.
ಎಂಎಐಟಿ ಎಂಬ ಸಂಸ್ಥೆಯೊಂದಿದೆ. ಐಟಿ ಕ್ಷೇತ್ರದ ತಯಾರಕರ ಸಂಘಟನೆಯಿದು. ಇದು ೨೦೦೭ರಲ್ಲಿ ಭಾರತದಲ್ಲಿ ನಡೆಸಿದ ಅಧ್ಯಯನದ ವರದಿ ಪ್ರಕಟಗೊಂಡಿದೆ. ಇ ವೇಸ್ಟ್ ಒಟ್ಟು ೬೫ ನಗರಗಳಲ್ಲಿ ಹೊರಬೀಳುತ್ತಿದೆ. ಅದರಲ್ಲಿ ಮುಂಬೈಗೆ ಅಗ್ರ ಪಟ್ಟ. ೦೭ರಲ್ಲಿ ದೇಶದಲ್ಲಿ ಒಟ್ಟು ೩.೮೦ ಲಕ್ಷ ಟನ್ ಕಂಪ್ಯೂಟರ್, ಮೊಬೈಲ್, ಟಿವಿಗಳ ಕಸ ಸೃಷ್ಟಿಯಾಗಿತ್ತು. ಅದರದೇ ಅಂದಾಜಿನ ಪ್ರಕಾರ ೨೦೧೨ರಲ್ಲಿ ಇದು ೮ ಲಕ್ಷ ಟನ್ ದಾಟಿದರೆ ಅಚ್ಚರಿಯಿಲ್ಲ!
ವೀ ಅಪಾಯ ನಮಗಿನ್ನೂ ಅರ್ಥವೇ ಆಗಿಲ್ಲ. ಸೀಸ, ಕ್ಯಾಡ್ಮಿಯಂ, ಕ್ರೋಮಿಯಂ, ಪಾದರಸದಂತ ಅಪಾಯಕಾರಿ ಭಾರ ಲೋಹಗಳ ಶಿಲ್ಕು ಮತ್ತು ಪೀಲಿಕ್ಲೋರಿನೇಟೆಡ್ ಟಿಪೆನೆಲ್ಸ್(ಪಿಸಿಬಿ), ಪ್ರಲೇಟ್ಸ್‌ನಂತ ವಿಷಕಾರಿ ಧಾತುಗಳು ಇ ವೇಸ್ಟ್ ಆಸ್ತಿ! ನೀರು ಹಾಗೂ ಭೂಮಿಯನ್ನು ಸೇರುತ್ತಿರುವ ಇವು ಭವಿಷ್ಯದ ಭಯೋತ್ಪಾದಕರು. ಹೋಗಲಿ, ಇವುಗಳ ಸುರಕ್ಷಿತ ಪುನರ್ಬಳಕೆಯ ವ್ಯವಸ್ಥೆಯೂ ನಮ್ಮಲ್ಲಿಲ್ಲ. ಭಾರತದಲ್ಲಿ ಕೇವಲ ಎರಡು ಸಣ್ಣ ಪ್ರಮಾಣದ ‘ಅಧಿಕೃತ’ ಪುನರ್ಬಳಕೆ ಯೂನಿಟ್‌ಗಳೂ ಪ್ರಸ್ತುತ ಕಾರ್ಯಪ್ರವೃತ್ತವಾಗಿವೆ. ಬೆಂಗಳೂರಿನಲ್ಲಿರುವ ‘ಇ-ಪರಿಸರ’ ಅಂತದಲ್ಲೊಂದಾದರೆ ಇನ್ನೊಂದು ಯೂನಿಟ್ ಚೆನ್ನೈನಲ್ಲಿದೆ. ೩.೮೦ ಲಕ್ಷ ಟನ್‌ಗೆ ಅದು ಸಾಕೆ ಎಂಬ ಪ್ರಶ್ನೆಯೇ ಹಾಸ್ಯಾಸ್ಪದವಾದೀತು.
೨೦೦೩ರಲ್ಲಿ ಅಪಾಯಕಾರಿ ತ್ಯಾಜ್ಯ ನಿರ್ವಹಣೆ ನಿಯಮಗಳು ಜಾರಿಗೊಂಡಿದ್ದು ನಿಜ. ಇದರಲ್ಲಿ ಕೂಡ ವೀ ಪುನರ್ಬಳಕೆಗೆ ಸ್ಪಷ್ಟ ಕಾನೂನು ಅಥವಾ ಮಾನದಂಡ, ತಂತ್ರಜ್ಞಾನವನ್ನು ಹೆಸರಿಸಿಲ್ಲ. ಇದು ಅನಧಿಕೃತ - ಅಪಾಯಕಾರಿ ಪುನರ್ಬಳಕೆ ಕಾನೂನುಗಳ ಹುಟ್ಟಿಗೆ ಕಾರಣವಾಗಿದೆ. ಬಹುಷಃ ಹಳ್ಳಿಗಳಲ್ಲೂ ಈ ಪರಿ ಕಂಪ್ಯೂಟರ್, ಎಲೆಕ್ಟ್ರಿಕ್-ಕ್ಟ್ರಾನಿಕ್ ಸಲಕರಣೆಗಳು ಇರುವುದು ಅಪಾಯದ ಗಾಢತೆಯನ್ನಷ್ಟೇ ಹೇಳುತ್ತದೆ.
ಸರ್ಕಾರದ್ದು ನಿಧಾನಗತಿ. ೨೦೦೪ರ ಜುಲೈನಲ್ಲಿ ಒಂದು ಸ್ಪಷ್ಟ ಕಾರ್ಯಯೋಜನೆ ರೂಪಿಸಲು ರಾಷ್ಟ್ರೀಯ ವೀ ಟಾಸ್ಕ್‌ಫೋರ್ಸ್ ಸ್ಥಾಪನೆಯಾಗಿತ್ತು. ಕೇಂದ್ರ ಮಾಲಿನ್ಯ ನಿಯಂತ್ರಣ ನಿಗಮ (ಸಿಪಿಸಿಬಿ)ಯ ಅಧ್ಯಕ್ಷರದ್ದೇ ಮುಂದಾಳತ್ವ. ಅಂತೂ ೦೫ರ ಮಾರ್ಚ್ ವೇಳೆಗೆ ಪರಿಸರ ಹಾಗೂ ಅರಣ್ಯ ಸಚಿವಾಲಯ ಇ ವೇಸ್ಟ್‌ಗಳ ದಕ್ಷ ನಿರ್ವಹಣೆಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿತು. ತಾಂತ್ರಿಕ ಅಂಶಗಳಿಗೆ ಪ್ರಾಮುಖ್ಯ ಕೊಟ್ಟುದಲ್ಲದೆ, ತಯಾರಕರೇ ತಮ್ಮ ವಸ್ತುವನ್ನು ಹಿಂಪಡೆಯುವ ಸೂತ್ರವನ್ನು ಅದು ಒತ್ತಿ ಹೇಳಿದೆ. ಇದರಿಂದ ಮಾತ್ರ ಪುನರ್ಬಳಕೆ ನಿರಪಾಯಕಾರಿಯಾಗಿ ಯಶಸ್ವಿಯಾದೀತು ಎಂಬುದು ಹಿನ್ನೆಲೆಯಲ್ಲಿದ್ದ ಅಂಶ. ಕಾನೂನನ್ನೇ ಪಾಲಿಸದಿರುವ ದೇಶದಲ್ಲಿ ಮಾರ್ಗದರ್ಶಿ ಸೂತ್ರಗಳಿಗೆ ಎಲ್ಲಿದೆ ಕಿಮ್ಮತ್ತು?
‘ಮುಂದುವರೆದ ತಯಾರಕರ ಜವಾಬ್ದಾರಿ’ಯನ್ನು ತೋರಿದ್ದು ಕೆಲವೇ ಕಂಪನಿ. ವಿಪ್ರೋ, ಹೆಚ್‌ಸಿಎಲ್‌ನಂತವು ಇಂತಹ ಟೇಕ್‌ಬ್ಯಾಕ್ ಕಾರ್ಯಕ್ರಮವನ್ನು ಆರಂಭಿಸಿದ್ದೇನೋ ನಿಜ, ಜನರ ಪ್ರತಿಕ್ರಿಯೆ ನೀರಸವಾಗಿದ್ದುದು ಹೀನಾಯ. ಸೀಸ ಆಧಾರಿತ ಡಿಸಿ ಬ್ಯಾಟರಿಗಳ ವಿಚಾರದಲ್ಲಂತೂ ನಮ್ಮ ನಿರ್ಲಕ್ಷ್ಯ ಅಪಾಯಕಾರಿ. ಟೇಕ್ ಬ್ಯಾಕ್ ವ್ಯವಹಾರ ಅಲ್ಲೂ ಕಟ್ಟುನಿಟ್ಟಾಗಿ ನಡೆಯಬೇಕಿತ್ತು. ಆದರೆ....?
೨೦೦೬ರ ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ವಿಶ್ವದ ಒಟ್ಟಾರೆ ಕಂಪ್ಯೂಟರ್ ಮಾರಾಟ ೧.೩೯ ಮಿಲಿಯನ್ ದಾಟಿತ್ತು. ಈ ಸಂಖ್ಯೆ ಈಗ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ದಾಖಲಾಗುತ್ತಿದೆ. ಇತ್ತ ಪ್ರಗತಿ ಆಗುವುದೆಂದರೆ ಇ ವೇಸ್ಟ್ ಪ್ರಮಾಣ ಬೃಹದಾಕಾರವಾಗುತ್ತಿದೆ ಎಂತಲೇ ಅರ್ಥ. ಟಾಕ್ಸಿಕ್ ಲಿಂಕ್ ಎಂಬ ಸರ್ಕಾರೇತರ ಸಂಸ್ಥೆಯ ಸಂಶೋಧನೆಯ ಅನ್ವಯ ಭಾರತದಲ್ಲಿ ಎಲೆಕ್ಟ್ರಾನಿಕ್ ತಯಾರಕರು ಮತ್ತು ಜೋಡಿಸುವವರು ಸೃಷ್ಟಿಸುವ ಇ ವೇಸ್ಟ್ ವಾರ್ಷಿಕ ೧,೦೫೦ ಟನ್!
ವೀ ಅಪಾಯ ಭಾರತದಂತ ದೇಶಗಳಲ್ಲಿ ಇನ್ನಷ್ಟು ಹೆಚ್ಚು. ಇಲ್ಲಿನ ಬಡತನ ಇ ವೇಸ್ಟ್‌ನ್ನು ಕಚ್ಚಾ ವಿಧಾನದಲ್ಲಿ ಪುನರ್ಬಳಕೆ ಮಾಡುವುದನ್ನು ಪ್ರೋತ್ಸಾಹಿಸುತ್ತದೆ. ಇಂದು ದೆಹಲಿಯಲ್ಲಿ ತಾಮ್ರದ ತಂತಿಯನ್ನು ಪಡೆಯಲು ವೈರ್‌ಗಳನ್ನು ಸುಡುವ ತಂತ್ರವನ್ನು ಬಳಸಲಾಗುತ್ತಿದೆ. ಸರ್ಕ್ಯೂಟ್ ಬೋರ್ಡ್‌ಗಳನ್ನು ಆಸಿಡ್‌ನಲ್ಲಿ ಮುಕ್ತವಾಗಿ ಮಾನವ ಕೂಲಿಗಳೇ ಮುಳುಗಿಸುತ್ತಿದ್ದಾರೆ. ಈ ಆಸಿಡ್‌ನ್ನು ನಂತರ ಭೂಮಿಗೆ ಸುರುವಲಾಗುತ್ತದೆ. ಬಂಗಾರ ಹುಡುಕಲು ಪಾದರಸ ಹಾಗೂ ಸೈನೈಡ್ ಅಮಾಲ್ಗಮ್ ಬಳಕೆಯಾಗಿ ಕೊನೆಗೆ ಅಲ್ಲಿನ ಡ್ರೈನೇಜ್‌ಗೆ ಸೇರ್ಪಡೆಯಾಗುತ್ತಿದೆ. ಈ ದೃಶ್ಯ ನಿಮಗೆ ಮುಂಬೈ, ಬೆಂಗಳೂರು, ಹೈದರಾಬಾದ್‌ಗಳಲ್ಲಿ ಕಾಣುತ್ತದೆ. ಎಚ್ಚರಗೊಳ್ಳಬೇಕಾದವರು ಯಾರು?
ಐಟಿ ಉದ್ಯಮದ ಚಮಕ್ ಚಮಕ್, ಎಲೆಕ್ಟ್ರಾನಿಕ್-ಕ್ಟ್ರಿಕ್ ಸಾಧನಗಳ ಮಾರಾಟ ಹೆಚ್ಚಳದಿಂದ ಆರ್ಥಿಕ ಅಭಿವೃದ್ಧಿಯ ಮಂತ್ರ ಹೇಳುವ ಅರ್ಥ ತಜ್ಞರು ವೀ ಅಪಾಯವನ್ನು ಸಮರ್ಥವಾಗಿ ನಿರ್ವಹಿಸುವ ಸೂತ್ರವನ್ನು ಉತ್ತೇಜಿಸದಿದ್ದರೆ ಕೈಗೆ ಬಂದ ನಾಲ್ಕು ಕಾಸು ದೇಶದ ಆರೋಗ್ಯ ಕಾಪಾಡಲು ಸಾಕಾಗದು ಎಂಬುದಂತೂ ಸತ್ಯ.
-ಮಾವೆಂಸ

ಸೋಮವಾರ, ಜೂನ್ 22, 2009

ಚಿತ್ತಾರದ ವಿಂಬಲ್ಡನ್ - ತಂತ್ರಜ್ಞಾನದಿಂದ ಸಂಸ್ಕೃತಿಗೆ ಚ್ಯುತಿ?



ಚಿರಿಪಿರಿ ಮಳೆ. ವಿಂಬಲ್ಡನ್‌ನ ಸೆಂಟರ್‌ಕೋರ್ಟ್‌ನಲ್ಲಿ ಬಣ್ಣಬಣ್ಣದ ಕೊಡೆಗಳ ಹಾರಾಟ. ಹಲವರ ಮಳೆ ಕೋಟು ಕೂಡ ಫ್ಯಾಶನ್‌ನ ಒಂದು ಅಂಗ. ಘಂಟೆಗಟ್ಟಲೆ ಸಮಯ ನೀರಿನಲ್ಲಿ ಕೊಚ್ಚಿಹೋದದ್ದು ಬೇಜಾರಾಗದಿರಲು ಪಾಪ್, ರಾಕ್ ಸಂಗೀತಗಾರರ ಮೇಳ. ಇದನ್ನೆಲ್ಲ ಸಾಂಪ್ರದಾಯಿಕ ವಿಂಬಲ್ಡನ್‌ನ ಲಕ್ಷಣಗಳು ಎಂದುಕೊಂಡವರು ಇನ್ನು ಮುಂದೆ ಅದು ಕಣ್ಮರೆಯಾದ ದುಃಖವನ್ನು ಪರಿತಪಿಸಲೇಬೇಕು. ಈ ವರ್ಷ ಅಲ್ಲಿನ ಸೆಂಟರ್ ಕೋರ್ಟ್ ಹಾಗೂ ನಂಬರ್ ಒನ್ ಕೋರ್ಟ್‌ಗೆ ಕೃತಕ ಮೇಲ್ಚಾವಣಿ ಬಂದಿದೆ. ನೀಲಿ ಗಗನದಲ್ಲಿ ಮೋಡ ಮುಸುಕಿ ಮಳೆ ಬರುವಂತಾದರೆ ಈ ಚಾವಣಿ ತಂತ್ರಜ್ಞಾನದ ಸಹಾಯದಿಂದ ಚಲಿಸಿ ಇದೇ ಕೋರ್ಟ್ ಮೇಲೆಯೇ ಕೊಡೆ ಹಿಡಿಯುತ್ತದೆ. ನೆನೆಯುವವರು ಯಾರು?
ಇಂಗ್ಲೆಂಡ್‌ನ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಪ್ರತಿಯೊಂದು ಹೆಜ್ಜೆಗೆ ಸಂಪ್ರದಾಯದ ಮೆರುಗು. ಅದನ್ನು ನೆನಪಿಸಲೇಬೇಕು. ಇತ್ತೀಚೆಗೆ ಅಲ್ಲಿ ವಿಜೇತರೂ ಸಂಪ್ರದಾಯವಾಗಿಬಿಟ್ಟಿದ್ದಾರೆ. ಕಳೆದ ಬಾರಿ ರಫೆಲ್ ನಡಾಲ್ ಗೆದ್ದುದು ಬಿಟ್ಟರೆ ಉಳಿದಂತೆ ಐದು ಬಾರಿ ರೋಜರ್ ಫೆಡರರ್. ಕಳೆದ ಒಂಬತ್ತು ವರ್ಷಗಳಲ್ಲಿ ಮಹಿಳಾ ವಿಭಾಗದ ಪ್ರಶಸ್ತಿ ಏಳು ಬಾರಿ ವಿಲಿಯಮ್ಸ್ ಸಹೋದರಿಯರಲ್ಲೇ ಹಂಚಿಕೆಯಾಗಿದೆ. ಚಾಂಪಿಯನ್‌ಗಳ ವಿಚಾರದಲ್ಲೂ ಹೊಸಹೊಸಬರನ್ನು ಉತ್ತೇಜಿಸಲು ಹುಲ್ಲುಹಾಸಿಗೆ ಚೌಕಾಶಿ!
ವಿಂಬಲ್ಡನ್‌ನಲ್ಲಿ ಗಮನ ಸೆಳೆಯುವವರು ಬಾಲ್ ಬಾಯ್ಸ್-ಗರ್ಲ್ಸ್. ಸ್ವಾರಸ್ಯವೆಂದರೆ, ಈ ಪ್ರಕ್ರಿಯೆಗೂ ಸಂಪ್ರದಾಯದ ಹಿನ್ನೆಲೆಯಿದೆ. ಫೈನಲ್ ವೇಳೆ ಅಲ್ಲಿನ ಕೆಂಟ್ ರಾಣಿ - ರಾಜರು ಹಾಜರಿರುತ್ತಾರೆ. ಅವರು ಚಾಂಪಿಯನ್‌ರಿಗೆ ಟ್ರೋಫಿಗಳನ್ನು ಪ್ರಧಾನಿಸುವ ಮೊದಲು ಸಾಲಾಗಿ ಶಿಸ್ತಿನಲ್ಲಿ ನಿಂತ ಈ ಚೆಂಡು ಹುಡುಗ ಹುಡುಗಿಯರನ್ನು ವೈಯುಕ್ತಿಕವಾಗಿ ಹಸ್ತಲಾಘವ ಕೊಟ್ಟು ಮಾತನಾಡಿಸುತ್ತಾರೆ, ಬೆನ್ನು ತಟ್ಟುತ್ತಾರೆ, ಬೆಚ್ಚಗೆ ತಬ್ಬುತ್ತಾರೆ. ಅಂತದೊಂದು ಕ್ಷಣಕ್ಕಾಗಿ ಇಂಗ್ಲೆಂಡಿಗರೇನು, ನಾವೂ ಆಶಿಸುವಂತಾಗುತ್ತದೆ. ಸಂಪ್ರದಾಯಗಳೆಲ್ಲ ಗೊಡ್ಡಲ್ಲ, ಗ್ರೇಟ್!
೧೯೪೭ರ ಸಮಯದಲ್ಲಿ ಬಾರ್ಬಡೋಸ್ ಶಾಲೆಯ ಮಕ್ಕಳನ್ನು ಚೆಂಡು ಹೆಕ್ಕಲು ನೇಮಿಸಿಕೊಳ್ಳಲಾಗುತ್ತಿತ್ತು. ೨೦೦೮ರಿಂದ ನಿಯಮದಲ್ಲಿ ಬದಲಾವಣೆಯಾಗಿದೆ. ಈಗ ಲಂಡನ್‌ನ ಸ್ಥಳೀಯ ಶಾಲೆಗಳಿಂದ ಮಕ್ಕಳನ್ನು ಆಯ್ದುಕೊಳ್ಳಲಾಗುತ್ತದೆ. ಇವರಿಗೆ ಬಿಬಿಜಿ ಎನ್ನಲಾಗುತ್ತದೆ. ಇವರೆಲ್ಲರ ಸರಾಸರಿ ವಯಸ್ಸು ೧೫. ಒಂಬತ್ತು ಅಥವಾ ಹತ್ತನೇ ತರಗತಿಯ ಮಕ್ಕಳಿಗಷ್ಟೇ ಈ ಅವಕಾಶ.
ಇಲ್ಲಿಗೆ ಆಯ್ಕೆಯಾಗುವುದೂ ಸುಲಭವಲ್ಲ. ಶಾಲೆಯ ಮುಖ್ಯೋಪಾಧ್ಯಾಯರು ತಮ್ಮ ತಮ್ಮ ಶಾಲೆಯಿಂದ ಆಯ್ದ ಮಕ್ಕಳನ್ನು ನಾಮ ನಿರ್ದೇಶನ ಮಾಡುತ್ತಾರೆ. ೨೦೦೫ರಲ್ಲಿ ಹೀಗೆ ೬೦೦ ಮಂದಿಗೆ ತರಬೇತಿ ನೀಡಲಾಗಿತ್ತು. ಈ ತರಬೇತಿಯ ವೇಳೆ ಚುರುಕುತನ, ಜಾಗೃತಿಯ ಮಟ್ಟ, ಆತ್ಮವಿಶ್ವಾಸ ಮತ್ತು ಪರಿಸ್ಥಿತಿಗೆ ಹೊಂದಿಕೊಳ್ಳುವ ಮನಸ್ಥಿತಿಗಳ ಅವಲೋಕನ ಜರುಗುತ್ತದೆ. ಇಲ್ಲಿ ಗೆದ್ದಲ್ಲಿ ದೊಡ್ಡ ಯುದ್ಧ ಗೆದ್ದಂತೆ. ೨೦೦೫ರಲ್ಲಿ ೬೦೦ರ ಪೈಕಿ ಕೇವಲ ೨೫೦ ಮಕ್ಕಳು ಮಾತ್ರ ‘ಅಂತಿಮ ಶೋ’ಗೆ ಆಯ್ಕೆಯಾಗಿದ್ದರು!
ವಿಂಬಲ್ಡನ್ ಜರುಗುವುದು ಜೂನ್ ತಿಂಗಳ ಕೊನೆಯ ವಾರದಲ್ಲಿ. ಬಿಬಿಜಿಗಳ ತರಬೇತಿ ಆರಂಭವಾಗುವುದು ಫೆಬ್ರವರಿಯಲ್ಲೇ! ಚೆಂಡು ಹುಡುಗಿಯರನ್ನು ಆಲ್ ಇಂಗ್ಲೆಂಡ್ ಕ್ಲಬ್ ೧೯೭೭ರಿಂದಷ್ಟೇ ಮಾನ್ಯ ಮಾಡಿದೆ. ಮುಂದೆ ಎಂಟು ವರ್ಷ ಕಳೆದ ನಂತರ ಅವರಿಗೆ ಸೆಂಟರ್ ಕೋರ್ಟ್‌ನಲ್ಲಿ ಕೆಲಸ ಮಾಡಲು ಅವಕಾಶವಿತ್ತಿತು. ಹುಡುಗ ಹುಡುಗಿಯರವು ಸರಿಸಮಾನ ೫೦:೫೦ ಅನುಪಾತದಲ್ಲಿ ಸ್ಥಾನ ಭರ್ತಿ. ಅವರ ಕಾರ್ಯ ವೈಖರಿಯೂ ವಿಭಿನ್ನ. ಆಟದ ವೇಳೆ ಒಂದು ಕೋರ್ಟ್‌ಗೆ ಆರು ಬಿಬಿಜಿಯರು ಬೇಕು. ಇಬ್ಬರು ನೆಟ್ ಬಳಿ. ಉಳಿದ ನಾಲ್ವರು ಬೇಸ್‌ಲೈನ್ ಪರಿಚಾಲಕರು. ಒಂದು ಘಂಟೆ ಕೆಲಸ ಮಾಡಿದರೆ ಮುಂದಿನ ಒಂದು ಘಂಟೆ ವಿಶ್ರಾಂತಿ. ೨೦೦೬ರಿಂದ ಇವರು ನೀಲಿ ಉಡುಗೆ ತೊಟ್ಟು ಮಿಂಚುತ್ತಿದ್ದಾರೆ. ಈ ಮುನ್ನ ಇವರೂ ಹುಲ್ಲಿನಂತೆ ಹಸಿರಾಗಿದ್ದರು. ದಿನಕ್ಕೆ ಎರಡು ಅವಧಿ ದುಡಿಯುವ ಇವರಿಗೆ ನಯಾಪೈಸೆಯ ಸಂಬಳವಿಲ್ಲ!
ನಿಜ, ವಿಂಬಲ್ಡನ್‌ನಲ್ಲಿ ಬಿಬಿಜಿಯಾಗಿ ಕೆಲಸ ಮಾಡುವುದನ್ನು ಗೌರವದ ಪ್ರತೀಕ ಎಂದೇ ಪರಿಗಣಿಸಲಾಗುತ್ತಿದೆ. ಅಲ್ಲಿನ ಮಕ್ಕಳು ಶಾಲೆಯನ್ನು ತೊರೆಯುವಾಗ ‘ನಡತೆ ಪತ್ರ’ ಜೊತೆಗಿರಲೇಬೇಕು. ಅದರಲ್ಲಿ ಒಳ್ಳೆಯ ಮಾತು ಬರೆಯದಿದ್ದಲ್ಲಿ ಮುಂದಿನ ಶಿಕ್ಷಣಕ್ಕೆ ಯಾವುದೇ ವಿದ್ಯಾಲಯ ಸೇರಿಸಿಕೊಳ್ಳುವುದಿಲ್ಲ. ಇಂತಹ ವೇಳೆ ವಿದ್ಯಾರ್ಥಿ ವಿಂಬಲ್ಡನ್‌ನಲ್ಲಿ ಬಿಬಿಜಿಯಾಗಿ ಕೆಲಸ ಮಾಡಿದ ಪುಟ್ಟ ಉಲ್ಲೇಖ ಇದ್ದರೆ ಸಾಕು, ಆತ ಎಲ್ಲಿ ಬೇಕಾದರೂ ಸೇರ್ಪಡೆಗೆ ಅರ್ಹ. ಹಾಗೆಂದು ಓರ್ವ ವಿದ್ಯಾರ್ಥಿಗೆ ಇಲ್ಲಿ ಹೆಚ್ಚೆಂದರೆ ಎರಡು ವರ್ಷ ಮಾತ್ರ ಪ್ರವೇಶ ಸೌಕರ್ಯ.
ಇದರಲ್ಲೂ ದಾಖಲೆಗಳನ್ನು ಹುಡುಕುವವರಿಗಾಗಿ ಕಿರು ಮಾಹಿತಿ. ಕ್ರಿಸ್ಟೋಫರ್ ರಾಬೆ ಎಂಬ ಓವರ್ಟನ್ ಶಾಲೆಯ ವಿದ್ಯಾರ್ಥಿ ಸತತ ಎರಡು ಪುರುಷರ ಫೈನಲ್‌ನಲ್ಲಿ ಬ್ಯಾಗ್ ಬಾಯ್ ಆದ ಹೆಗ್ಗಳಿಕೆ. ೨೦೦೫ರಲ್ಲಿ ಫೆಡರರರ್‌ರ ಬ್ಯಾಗ್ ಹೊತ್ತೊಯ್ದರೆ ಮರು ವರ್ಷ ನಡಾಲ್‌ರ ಲಗೇಜ್ ಹೊತ್ತಿದ್ದರು. ಇದೂ ದಾಖಲೆ!
ವಿಶ್ವದ ನಾಲ್ಕು ಗ್ರಾನ್‌ಸ್ಲಾಂಗಳಲ್ಲಿ ಫ್ರೆಂಚ್ ಹೊರತುಪಡಿಸಿ ಉಳಿದೆಲ್ಲಡೆ ಹುಲ್ಲಿನಂಕಣದಲ್ಲಿಯೇ ಸ್ಪರ್ಧೆ ನಡೆಯುತ್ತಿದ್ದ ಕಾಲವಿತ್ತು. ಈಗ ಹುಲ್ಲು ಉಳಿದಿರುವುದು ಲಂಡನ್‌ನಲ್ಲಿ ಮಾತ್ರ. ಇಲ್ಲಿ ಒಟ್ಟು ೧೩ ಪ್ರಮುಖ ಸ್ಪರ್ಧೆಗಳು ೧೪ ದಿನಗಳಲ್ಲಿ ಜರುಗುತ್ತವೆ. ಐದು ಮೇಜರ್, ತಲಾ ನಾಲ್ಕು ಜೂನಿಯರ್ ಹಾಗೂ ಆಹ್ವಾನಿತರ ಸ್ಪರ್ಧೆ ಇಲ್ಲಿ ಏರ್ಪಾಡಾಗುತ್ತದೆ. ಅದರಲ್ಲೂ ಸಿಂಗಲ್ಸ್ ವಿಭಾಗಕ್ಕೆ ಪ್ರಮುಖ ಆಕರ್ಷಣೆ.
ಅಗ್ರಕ್ರಮಾಂಕ, ಹಾಲಿ ಚಾಂಪಿಯನ್ ಪಟ್ಟ ನಡಾಲ್‌ರದಾದರೂ ರೋಜರ್ ಫೆಡರರ್ ಹಾಟ್ ಫೇವರಿಟ್. ನಡಾಲ್ ಮೊಣಕಾಲು ನೋವಿಗೊಳಗಾಗಿದ್ದು ಆಡುವುದು ಅನುಮಾನ. ಆಡಿದರೂ.... ಮೊನ್ನೆ ಒಂದು ಪ್ರದರ್ಶನ ಟೂರ್ನಿಯಲ್ಲಿ ಸೋತದ್ದಾಗಿದೆ. ೨೦೦೮ರ ಯುಎಸ್ ಓಪನ್ ಫೈನಲಿಸ್ಟ್ ಆಂಡಿ ಮರ್ರೆ ಇಂಗ್ಲೆಂಡಿಗರನ್ನು ಕುತೂಹಲಿಗಳನ್ನಾಗಿಸಿದ್ದಾರೆ. ಜೋ ವಿಲ್ಫ್ರೆಡ್ ತ್ಸೋಂಗಾ, ಜಾನ್ ಮಾರ್ಟಿನ್ ಡೆಲ್ ಪೋಬ್ರೋ ಕೂಡ ಜಾಂಕೋವಿಕ್‌ರ ಸಮೇತ ಉಪಾಂತ್ಯ ತಲುಪಬಹುದು.
ಮಹಿಳಾ ವಿಭಾಗದಲ್ಲಿ ರೋಸ್ ವಾಟರ್ ಡಿಶ್ ಪ್ರಶಸ್ತಿಗೆ ಬುಕ್ ಮೇಕರ್ ಪ್ರಕಾರ ಸೆರೆನಾ ವಿಲಿಯಮ್ಸ್ ಗೆದ್ದಾರು. ಹಾಲಿ ಚಾಂಪಿಯನ್ ವೀನಸ್‌ಗೆ ಫೇವರಿಟ್ ಕ್ರಮಾಂಕದಲ್ಲಿ ಎರಡನೇ ಸ್ಥಾನ. ಮಾರಿಯಾ ಶರಪೋವಾ ಹುಲ್ಲಿನಂಕಣದಲ್ಲಿ ಮಿಂಚುವ ಹೆಚ್ಚು ಸಾಧ್ಯತೆ. ಅಗ್ರಕ್ರಮಾಂಕದ ದಿನಾರಾ ಸಫಿನಾ, ದ್ವಿತೀಯ ಕ್ರಮಾಂಕದ ಸ್ವೆಟ್ಲಾನಾ ಕುಜ್ನೆತ್ಸೋವಾರಿಗೆ ಹುಲ್ಲು ತುಸು ಕಷ್ಟದ ಬಾಬತ್ತು. ವಿಕ್ಟೋರಿಯಾ ಅಜರೆಂಕಾ ಈ ವಿಭಾಗದ ಕಪ್ಪುಕುದುರೆ.
೧೮೭೭ರಲ್ಲಿ ಆರಂಭವಾದ ಅತ್ಯಂತ ಹಿರಿಯ ಗ್ರಾನ್‌ಸ್ಲಾಂನಲ್ಲಿ ಈ ವರ್ಷ ಮಳೆಯ ಕಾಟ ಇಲ್ಲ. ಗೊತ್ತಾಗದಿರುವುದೆಂದರೆ, ಬೆಳೆ ಹೇಗೋ?
-ಮಾವೆಂಸ

ಬುಧವಾರ, ಜೂನ್ 17, 2009

ಎಟಿಎಂ ಸೇವಾ ಶುಲ್ಕ ವಸೂಲಾತಿ ಪುರಾಣ



ನೀವು ಯಾವುದೇ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿದ್ದೀರಾ? ಅಥವಾ ಚಾಲ್ತಿ ಖಾತೆ? ಆ ಖಾತೆಗೆ ಎಟಿಎಂ ಕಾರ್ಡ ಪಡೆದಿದ್ದೀರಾ?ಇವೆಲ್ಲ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೆ ಮಾತ್ರ ಮುಂದೆ ಓದಿ.
2008ರ ಮಾರ್ಚ್ 10ರಂದು ರಿಸರ್ವ ಬ್ಯಾಂಕ್ ಒಂದು ಪ್ರಕಟಣೆಯನ್ನು ಹೊರಡಿಸುತ್ತದೆ. ಆ ಆದೇಶ ಪತ್ರ RB/2007-2008/260,DPSS No.1405/02.10.02/2007-2008 ನ್ನು ಎಲ್ಲ ವಾಣಿಜ್ಯ ಬ್ಯಾಂಕ್‌ಗಳಿಗೆ ರಿಸರ್ವ ಬ್ಯಾಂಕ್ ಕಳಿಸಿಕೊಡುತ್ತದೆ. ಇದರ ಪ್ರಕಾರ ಬ್ಯಾಂಕ್‌ಗಳು ಇನ್ನು ಮುಂದೆ ಎಟಿಎಂ (ಎನಿ ಟೈಮ್ ಮನಿ-ಆಟೋಮೆಟೆಡ್ ಟೆಲ್ಲರ್ ಮಿಷನ್)ಗಳೇ ಯಾವುದೇ ಸೇವೆಗೆ ಬ್ಯಾಂಕ್‌ಗಳು ಶುಲ್ಕ ವಿಧಿಸುವಂತಿಲ್ಲ.
ವಿವರಗಳಿಗೆ ಹೋಗುವ ಮುನ್ನ, ಹಿನ್ನೆಲೆಯತ್ತ ಒಂದು ನೋಟ. 2007ರ ಡಿಸೆಂಬರ್ ವೇಳೆಗೆ ನಮ್ಮ ದೇಶದಲ್ಲಿ 32,342 ಎಟಿಎಂ ಇತ್ತು. ಈಗ ಈ ಸಂಖ್ಯೆ 40ಸಹಸ್ರ ದಾಟಿದ್ದರೆ ಅಚ್ಚರಿಯಿಲ್ಲ. ನಿಮಗ್ಗೊತ್ತು, ಬ್ಯಾಂಕ್‌ಗಳು ತಮ್ಮ ಖಾತೆದಾರರಿಗೆ ವಾರ್ಷಿಕ ನಿರ್ವಹಣಾ ಶುಲ್ಕ ವಿಧಿಸುತ್ತವೆ. ಇತರ ಬ್ಯಾಂಕ್ ಗ್ರಾಹಕ ಬಳಸಿದರಂತೂ ಬಳಕೆ ಶುಲ್ಕ, ಕೊನೆಗೆ ವಿವರಣೆ ಪಟ್ಟಿ, ಬ್ಯಾಲೆನ್ಸ್ ವಿಚಾರಣೆಗೂ ದುಬಾರಿ ಶುಲ್ಕ ವಿಧಿಸಿ ಹಣ ಕಮಾಯಿಸುತ್ತಿವೆ. ಶುಲ್ಕ ವಿವರ ಲಭ್ಯವಿಲ್ಲದಿರುವುದು ಮತ್ತು ಶುಲ್ಕ ವಿಧಿಸುವಲ್ಲಿ ಬ್ಯಾಂಕ್‌ಗಳದೇ ಮರ್ಜಿ ಆಗಿರುವುದರಿಂದ ಅವರಿಗೆ ತೋಚಿದ ಬೆಲೆ ನಿಗದಿಪಡಿಸಿರುವುದು ಆರ್‌ಬಿಐಗೆ ಕಂಡುಬಂದಿತು.
ಎಟಿಎಂಗೆ ಸಂಬಂಧಿಸಿದಂತೆ ಆರ್‌ಬಿಐ ವಿದೇಶಗಳ ನಡುವಳಿಕೆಯನ್ನು ಅಭ್ಯಸಿಸಿತು. ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್‌ಗಳಲ್ಲಿ ಬ್ಯಾಂಕ್ ಗ್ರಾಹಕನಿಗೆ ಯಾವುದೇ ಎಟಿಎಂ ಬಳಕೆ ಉಚಿತ. ಕೇವಲ ಬಿಳಿ ಹಣೆಪಟ್ಟಿಯ ಅಂದರೆ ಬ್ಯಾಂಕೇತರ ಸಂಸ್ಥೆಗಳ ಎಟಿಎಂನಲ್ಲಿ ಮಾತ್ರ ವೆಚ್ಚಗಳನ್ನು ವಸೂಲಿಸಲಾಗುತ್ತದೆ. ಭಾರತದಲ್ಲಿ ಈವರೆಗೆ ಎಟಿಎಂ ಶುಲ್ಕ ವ್ಯವಸ್ಥೆಯಲ್ಲಿ ಶಿಸ್ತಿರಲಿಲ್ಲ. ಮನಗಂಡ ಆರ್‌ಬಿಐ ಎಲ್ಲ ಸೇವಾದಾತರ ಅಭಿಪ್ರಾಯ ಕೇಳಿ ದರ ನಿಗದಿಪಡಿಸಿದೆ.
ಈ ಹಿನ್ನೆಲೆಯಲ್ಲಿ ಹೊರಬಿದ್ದ ಆದೇಶದ ವಿವರ ಈ ಕೆಳಗಿನಂತಿದೆ.
(1.) ಸ್ವಂತ ಎಟಿಎಂ ಬಳಕೆ - ಉಚಿತ (ತಕ್ಷಣದಿಂದ)
(2.) ಇತರ ಬ್ಯಾಂಕ್ ಎಟಿಎಂಗಳಲ್ಲಿ ಬ್ಯಾಲೆನ್ಸ್ಸ್ ವಿಚಾರಣೆ - ಉಚಿತ(ತಕ್ಷಣದಿಂದ)
(3.) ಇತರ ಬ್ಯಾಂಕ್ ಎಟಿಎಂಗಳಲ್ಲಿ ನಗದು ಪಡೆಯುವಿಕೆ -
(a) ಡಿಸೆಂಬರ್ 23, 2007ರಲ್ಲಿದ್ದ ಶುಲ್ಕಗಳನ್ನು ಬ್ಯಾಕ್‌ಗಳು ಏರಿಸುವಂತಿಲ್ಲ.
(b) ಮಾರ್ಚ್ 31,2008ರ ನಂತರ ಯಾವುದೇ ಎಟಿಎಂ ವ್ಯವಹಾರದ ಶುಲ್ಕ 20ರೂ.ಗಿಂತ ಹೆಚ್ಚಿಸುವಂತಿಲ್ಲ.
(c) ಏಪ್ರಿಲ್ 1, 2009ರಿಂದ ಇತರ ಬ್ಯಾಂಕ್‌ಗಳ ಎಲ್ಲ ಸೇವೆಗಳೂ ಪೂರ್ತಿ ಉಚಿತ.
ಆರ್‌ಬಿಐಗೆ ಈ ಬ್ಯಾಂಕ್‌ಗಳ ದಗಲ್‌ಬಾಜಿತನ ಚೆನ್ನಾಗಿ ಗೊತ್ತಿರುವಂತಿದೆ. ಹಾಗಾಗಿ ಅದು ತನ್ನ ಇದೇ ಆದೇಶ ಪತ್ರದಲ್ಲಿ ಇನ್ನಷ್ಟು ಸೃಷ್ಟೀಕರಣಗಳನ್ನು ಸೂಚಿಸಿದೆ. ಅದರ ಪ್ರಕಾರ, (1) ಮತ್ತು (2)ನೇ ವಿಚಾರದಲ್ಲಿ ಗ್ರಾಹಕರ ಮೇಲೆ ಸೇವಾಶುಲ್ಕವಲ್ಲದೆ ಇನ್ನಾವುದೇ ಶೀರ್ಷಿಕೆಯಡಿಯಲ್ಲೂ ಖರ್ಚು ಹೇರುವಂತಿಲ್ಲ. ಈ ಸೇವೆಗಳು 2008ರ ಮಾರ್ಚ್10ರಿಂದಲೇ ಪೂರ್ತಿ ಉಚಿತ.
ಇತರ ಬ್ಯಾಂಕ್‌ಗಳಲ್ಲಿ 2008ರ ಮಾರ್ಚ್ 31ರಿಂದ2009ರ ಏಪ್ರಿಲ್ 1ರ ನಡುವೆ ನಡೆಸಿದ ಯಾವುದೇ ವ್ಯವಹಾರವೊಂದಕ್ಕೆ 20ರೂ. ಶುಲ್ಕ ವಿಧಿಸಬಹುದೇ ವಿನಃ ಹಿಂದುಗಡೆ ಬಾಗಿಲಿನಿಂದ ಮತ್ತೊಂದು ಖರ್ಚು ಹೇರುವುದು ಕಾನೂನು ಬಾಹಿರ.
ಆರ್‌ಬಿಐ ಸೂಚನೆಯನ್ವಯ, ಕ್ರೆಡಿಟ್ ಕಾರ್ಡ್ ಬಳಸಿ ನಗದು ಪಡೆದರೆ ಮತ್ತು ದೇಶದ ಹೊರಗಿರುವ ಎಟಿಎಂನಿಂದ ಹಣ ಪಡೆಯುವ ಸೇವೆಗಳಿಗೆ ದರ ನಿಗದಿಪಡಿಸುವ ಜವಾಬ್ದಾರಿ ಆಯಾ ಬ್ಯಾಂಕ್‌ಗಳಿಗೆ ಸೇರಿದ್ದು. ಈ ನಡುವೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ರಿಸರ್ವ ಬ್ಯಾಂಕ್‌ನ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಿದ ಪ್ರಕರಣಗಳು ವರದಿಯಾಗುತ್ತಿವೆ. ಮಾಚ್ 23ರಂದು ಎಸ್‌ಬಿಎಂ ತನ್ನೆಲ್ಲ ಎಟಿಎಂ ಕಾರ್ಡ ಬಳಕೆದಾರರ ಖಾತೆಗಳಿಗೆ 50ರೂ. ಶುಲ್ಕ ವಿಧಿಸಿದೆ. ಅದಕ್ಕೆ ಒಂದು ಕೋಟಿ ಎಟಿಎಂ ಚಂದಾದಾರರಿದ್ದಾರೆ ಎಂದು ಅಂದಾಜಿಸಿದರೆ ಅವರು ಅನಾಮತ್ತಾಗಿ ಪಡೆದ ಲಾಭ 50ಕೋಟಿಯಾಗುತ್ತದೆ!
ಈ ಹಿನ್ನೆಲೆಯಲ್ಲಿ ನಾನು ಅಂತರ್ಜಾಲದ ಮೂಲಕ ದೂರು ದಾಖಲಿಸಿದ್ದೂ ಆಗಿದೆ. ಅದಕ್ಕೆ ಉತ್ತರಿಸಿರುವ ಬೆಂಗಳೂರು ಕೇಂದ್ರದ ಸಹಾಯಕ ಜನರಲ್ ಮ್ಯಾನೇಜರ್ ‘ತಮ್ಮದು ಸರಿಯಾದ ಕ್ರಮ’ ಎಂದೇ ವಾದಿಸಿದ್ದಾರೆ. ‘ನಾವು ಗ್ರಾಹಕರಿಗೆ ಯಾವುದೇ ಸೇವಾ ವೆಚ್ಛವನ್ನು ವಸೂಲು ಮಾಡುತ್ತಿಲ್ಲ. ಪಡೆದಿರುವುದು ವಾರ್ಷಿಕ ನಿರ್ವಹಣಾ ವೆಚ್ಛ ಮಾತ್ರ. ಹಾಗಾಗಿ ತಮ್ಮ ಕ್ರಮ ಕಾನೂನು ಬದ್ಧ’ ವಾದದ ಸಾರಾಂಶವಿದು.
ಈಗಾಗಲೇ ನಾನು ರಿಸವ್ ಬ್ಯಾಂಕ್ ಆದೇಶದ ಪ್ರತಿ ಆಂಶವನ್ನು ಸ್ಪಷ್ಟವಾಗಿ ತಿಳಿಸಿ, ಯಾವುದೇ ಶೀರ್ಷಿಕೆಯಡಿಯೂ ಶುಲ್ಕ ಪಡೆಯುವಂತಿಲ್ಲ ಎಂಬ ಉಲ್ಲೇಖಗಳನ್ನು ತೋರಿಸಿ ಇನ್ನೊಂದು ದೂರು ದಾಖಲಿಸಿದ್ದೇನೆ.‘ ನೀವು ಪರಿಹಾರ ಒದಗಿಸದಿದ್ದರೆ ಬ್ಯಾಂಕಿಂಗ್ ಒಂಬುಡ್ಸಮನೆ’ ವ್ಯವಸ್ಥೆಗೆ ದೂರು ಸಲ್ಲಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ. ಉತ್ತರಕ್ಕಾಗಿ ಕಾಯಲಾಗುತ್ತಿದೆ.
ಬಹುಷಃ ಇದು ಎಸ್‌ಬಿನ ಕತೆಯೊಂದೇ ಅಲ್ಲ. ಎಲ್ಲ ಬ್ಯಾಂಕ್ ಈ ವರ್ಷ ಈ ವೆಚ್ಛವನ್ನು ವಸೂಲಿಸಿರುವ ಸಾಧ್ಯತೆ ಇದೆ. ಇದನ್ನು ಆಯಾ ಬ್ಯಾಂಕ್ ಗ್ರಾಹಕರು ಪರಿಶಿಲಿಸಬೇಕು. ನನಗೂ ಆ ಬಗ್ಗೆ ಮಾಹಿತಿ ನೀಡಿದರೆ ಒಳಿತು. ಸಾಗರದ ಬಳಕೆದಾರರ ವೇದಿಕೆ ಈ ವಿಚಾರದಲ್ಲಿ ಸಾರ್ವಜನಿಕರೆಲ್ಲರಿಗೆ ಅನುಕೂಲವಾಗುವಂತೆ ಹೆಜ್ಜೆಯಿಡಲಿದೆ.
ಕೊನೆ ಮಾತು- ಪಾಪ, ಹಲವರ ಎಸ್‌ಬಿ ಖಾತೆಯಲ್ಲಿ ಕನಿಷ್ಟ ಮೊತ್ತ ಮಾತ್ರವಿತ್ತು. ಮಾರ್ಚ್ 23ರಂದು 50ರೂ. ನಿರ್ವಹಣಾ ವೆಚ್ಛವನ್ನು ಎಸ್‌ಬಿಎಂ ಕಸಿದುಕೊಂಡಿತು. ಮಾಚ್ 31ರಂದು ಖಾತೆಯಲ್ಲಿ ಕನಿಷ್ಟ ಶುಲ್ಕ ಇಲ್ಲದ ಕಾರಣ ಖಾತೆದಾರರಿಗೆ ಮತ್ತೆ 50ರೂ. ದಂಡ! ಕಾನೂನು ಕತ್ತೆ ಬಾಲ, ದುಡ್ಡು ಕಮಾಯಿಸುವುದನ್ನು ಇವರನ್ನು ನೋಡಿ ಕಲಿಯಬೇಕು. ಕೇಳಿ ನೋಡಿ, ಎಲ್ಲ ಕಂಪ್ಯೂಟರ್ ಸಾಫ್ಟವೇರ್ ಪ್ರಭಾವ ಎಂದು ಕೈ ಜಾಡಿಸಿಬಿಡುತ್ತಾರೆ.
ಚಿಕಿತ್ಸೆಗೆ ಕಾಲ ಕೂಡಿ ಬಂದಿದೆ.!
-ಮಾವೆಂಸ

ಸೋಮವಾರ, ಜೂನ್ 15, 2009

ಮಳೆ ಕ್ರಿಕೆಟ್‌ಗೆ ಡಕ್‌ವರ್ತ್ - ಲೂಯಿಸ್ ಛತ್ರಿ!



ಕಳೆದ ಫೆಬ್ರವರಿಯಲ್ಲಿ ಜರುಗಿದ ಭಾರತ - ನ್ಯೂಜಿಲ್ಯಾಂಡ್ ಏಕದಿನ ಸರಣಿಯ ಒಂದು ಸಂದರ್ಭ. ಭಾರತೀಯರು ಬ್ಯಾಟಿಂಗ್ ಮಾಡುತ್ತಿದ್ದಾಗ ಪದೇ ಪದೇ ಮಳೆ. ಪಂದ್ಯಕ್ಕೆ ಅಡಚಣೆಯಾಗುತ್ತಿತ್ತು. ಪ್ರತಿ ಬಾರಿ ಆಟಗಾರರು ಹತ್ತಿಪ್ಪತ್ತು ನಿಮಿಷ ಕಾಲ ಆಟ ನಿಲ್ಲಿಸಿ ಪೆವಿಲಿಯನ್‌ಗೆ ಓಡಬೇಕಾಯಿತು. ಇದೇ ವೇಳೆ ಪಂದ್ಯದ ಅವಧಿಯಲ್ಲಿ ಕಡಿತಗೊಂಡಿದ್ದರಿಂದ ಗೆಲುವಿನ ಗುರಿಯನ್ನು ಹಲವು ಬಾರಿ ಮಾರ್ಪಡಿಸಲಾಗುತ್ತಿತ್ತು. ಹೀಗೆ ಮಳೆ ಕೈ ಕೊಡುತ್ತಲಿದ್ದುದರಿಂದ ಎಲ್ಲರೂ ನಿರಾಶರಾಗುತ್ತಿದ್ದಾಗ ಓರ್ವ ಟಿವಿ ವೀಕ್ಷಕ ವಿವರಣೆಗಾರರು ಹಾಸ್ಯ ಚಟಾಕಿ ಹಾರಿಸಿದರು, ‘ಈ ಕ್ಷಣಗಳಲ್ಲಿ ಖುಷಿಯಾಗುವುದು ಡಕ್‌ವರ್ತ್ ಹಾಗೂ ಲೂಯಿಸ್ ಮಾತ್ರ!’
ಮಳೆಯಿಂದಾಗಿ ಅಡಚಣೆಗೊಳಗಾದ ಪಂದ್ಯದ ಫಲಿತಾಂಶ ನಿರ್ಧರಿಸಲು, ಪರಿಷ್ಕೃತ ಗುರಿಯನ್ನು ನಿಗದಿಪಡಿಸಲು ಬಳಸುವ ಆಧುನಿಕ ಪದ್ಧತಿಯೇ ಡಕ್‌ವರ್ತ್ - ಲೂಯಿಸ್ ಸೂತ್ರ. ಅತ್ಯಂತ ಸಂಕೀರ್ಣ ರೂಪದ ಕ್ರಿಕೆಟ್‌ನಲ್ಲಿ ಪಿಚ್, ಬ್ಯಾಟ್ಸ್‌ಮನ್, ಬೌಲಿಂಗ್ ಕೋಟಾ, ಪವರ್ ಪ್ಲೇ, ಹವಾಮಾನಗಳೆಲ್ಲವೂ ರನ್ ಗಳಿಕೆಯನ್ನು ಪ್ರಭಾವಿಸುತ್ತವೆ. ಈ ಸ್ಥಿತಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಡಿ ಎಂಡ್ ಎಲ್ ಪದ್ಧತಿ ಹೆಚ್ಚು ಸಮಚಿತ್ತದ್ದು. ಮಳೆ ಕಾಡಿ ಸೋತ ತಂಡಕ್ಕೆ ಮಾತ್ರ ಡಿ &ಎಲ್ ವಿಲನ್!
ಫುಟ್‌ಬಾಲ್‌ನ್ನು ಮಳೆ ಬರುತ್ತಿರುವಾಗಲೂ ಆಡಬಹುದು. ಟೆನಿಸ್ ಗ್ರಾನ್‌ಸ್ಲಾಂ ವೇಳೆ ಮೇಲ್ಛಾವಣಿಯನ್ನು ಮುಚ್ಚಿ ಆಡುವ ತಾಂತ್ರಿಕ ಸೌಲಭ್ಯಗಳಿವೆ. ಕ್ರಿಕೆಟ್ ಮಾತ್ರ ಮಳೆಯೆದುರು ಅನಾಥ. ಹಿಂದೆಲ್ಲ ಅಪಕ್ವ ಮಳೆ ನಿಯಮಗಳನ್ನು ಬಳಸಲಾಗುತ್ತಿತ್ತು. ಇತಿಹಾಸದತ್ತ ನಿರುಕಿಸಿದರೆ, ಮೊತ್ತ ಮೊದಲು ತುಂಬಾ ಸರಳವಾಗಿ ರನ್ ಸರಾಸರಿಯನ್ನು ಆಧರಿಸಿ ನಿರ್ಧರಿಸಲಾಗುತ್ತಿತ್ತು. ಉದಾಹರಣೆಗೆ, ಮೊದಲು ಆಡಿದ ತಂಡ ೫೦ ಓವರ್‌ನಲ್ಲಿ ೨೫೦ ರನ್ ಗಳಿಸಿದೆಯೆಂದುಕೊಳ್ಳಿ. ಎರಡನೇ ಇನ್ನಿಂಗ್ಸ್ ಆಡುವ ವೇಳೆ ಮಳೆ ಬಂದು ೩೦ ಓವರ್ ಮಾತ್ರ ಸಾಧ್ಯವಾದರೆ, ಆ ತಂಡ ಶೇಕಡಾ ಐದರ ಸರಾಸರಿಯಲ್ಲಿ ೧೫೧ ರನ್ ಗಳಿಸಿದರೆ ಜಯ! ೧೫ ಓವರ್‌ಗೆ ೭೫, ೨೦ ಓವರ್‌ಗೆ ೧೦೦ ರನ್ ಎಂಬ ಗುರಿ ಬೆನ್ನಟ್ಟುವ ತಂಡಕ್ಕೆ ಸುಲಭ ತುತ್ತು. ಅಂದರೆ ಈ ನಿಯಮ ಪಕ್ಷಪಾತಿ, ದೋಷಗಳ ಆಗರ.
ನಂತರ ೧೯೯೨ರಲ್ಲಿ ಬಂದದ್ದು ಇನ್ನಷ್ಟು ವಿಚಿತ್ರ ಮಾದರಿ. ಈ ವ್ಯವಸ್ಥೆಯಲ್ಲಿ ೩೦ ಓವರ್‌ಗೆ ಗುರಿ ನಿಗದಿಪಡಿಸುವಾಗ ಮೊದಲು ಆಡಿದ ತಂಡ ಅತ್ಯಂತ ಕಡಿಮೆ ರನ್ ಗಳಿಸಿದ ೨೦ ಓವರ್‌ಗಳನ್ನು ಲೆಕ್ಕದಿಂದ ತೆಗೆದುಹಾಕಿಬಿಡುವುದು ಮೂಲ ನಿಯಮ! ಇದು ಹಲವು ಬಾರಿ ಎರಡನೇ ತಂಡಕ್ಕೆ ಆಘಾತಕಾರಿಯಾಗಿಬಿಡುತ್ತಿತ್ತು. ದೃಷ್ಟಾಂತ ಬೇಕೆ? ಬೌಲರ್‌ಗಳ ಸ್ವರ್ಗದಂತಿದ್ದ ಪಿಚ್‌ನಲ್ಲಿ ಮೊದಲ ತಂಡ ೫೦ ಓವರ್‌ನಲ್ಲಿ ೧೫೦ ರನ್ ಗಳಿಸಲಷ್ಟೇ ಸಾಧ್ಯವಾಯಿತು ಎಂದುಕೊಳ್ಳೋಣ. ೧೦ ಮೇಡನ್ ಹಾಗೂ ಇನ್ಹತ್ತು ಓವರ್‌ನಲ್ಲಿ ಬರೀ ಒಂದು ರನ್ ದಕ್ಕಿತ್ತು ಎಂದಾದರೆ ಎರಡನೇ ತಂಡ ೩೦ ಓವರ್‌ನಲ್ಲಿ ಗೆಲ್ಲಲು ೧೪೦ ರನ್ ದಾಟಬೇಕು!
ನೆನಪಿರಬಹುದು, ೯೨ರ ವಿಶ್ವಕಪ್‌ನ ಸೆಮಿಫೈನಲ್. ಇಂಗ್ಲೆಂಡ್‌ನ ಮೊತ್ತವನ್ನು ಹಿಂಬಾಲಿಸಿದ್ದ ದ.ಆಫ್ರಿಕಾಕ್ಕೆ ೧೩ ಎಸೆತದಲ್ಲಿ ೨೩ ರನ್ ಬೇಕಿದ್ದಾಗ ಜೋರು ಮಳೆ. ಅಂತೂ ಪಂದ್ಯ ಪುನರಾರಂಭವಾದಾಗ ಅಂದಿನ ನಿಯಮ ಪ್ರಕಾರ ಒಂದು ಎಸೆತಕ್ಕೆ ಗೆಲ್ಲಲು ೨೨ ರನ್ ಗಳಿಸಬೇಕಿತ್ತು! ೧೨ ಎಸೆತ ಕಡಿಮೆಯಾದರೂ ರನ್ ಗುರಿ ಒಂದು ರನ್ ಮಾತ್ರ ಕಡಿಮೆ. ಅದೇ ಆಗ ಡಿ ಎಲ್ ಸೂತ್ರ ಇದ್ದಿದ್ದರೆ ಆ ಒಂದು ಎಸೆತಕ್ಕೆ ಐದು ರನ್ ಬಾರಿಸಿದ್ದರೆ ಆಫ್ರಿಕಾ ಜಯಿಸುತ್ತಿತ್ತು. ಬಹುಷಃ ಇದು ಸೂಕ್ತವಾದುದಾಗುತಿತ್ತು.
ಈ ದೌರ್ಬಲ್ಯಗಳನ್ನು ಮೀರಲು ಸಮರ್ಥ ಪ್ರಯತ್ನವಾಗಿ ಬಂದಿದ್ದೇ ಡಕ್‌ವರ್ತ್ ಲೂಯಿಸ್ ಸೂತ್ರ. ಇಂಗ್ಲೆಂಡಿನ ಅಂಕಿಅಂಶ ತಜ್ಞರಾಗಿದ್ದ ಫ್ರಾಂಕ್ ಡಕ್‌ವರ್ತ್ - ಟೋನಿ ಲೂಯಿಸ್ ಜೋಡಿ ೧೯೯೬ರಲ್ಲಿ ಕಂಡುಹಿಡಿದ ಮೊದಲ ‘ಸೂತ್ರ’ ಸರಳವಾಗಿತ್ತು. ಆ ಸ್ಟಾಂಡರ್ಡ್ ಎಡಿಷನ್‌ನಲ್ಲಿ ಲೆಕ್ಕಾಚಾರಕ್ಕೆ ಒಂದು ಕ್ಯಾಲ್ಕುಲೇಟರ್ ಸಾಕಾಗಿತ್ತು. ಅವರು ತಮ್ಮ ಪಶ್ಚಿಮ ಇಂಗ್ಲೆಂಡ್ ವಿಶ್ವವಿದ್ಯಾಲಯದ ಅಂತಿಮ ವರ್ಷದ ಪ್ರಾಜೆಕ್ಟ್ ಆಗಿ ಸಲ್ಲಿಸಿದ ಈ ಪದ್ಧತಿಯಿದು! ಇದನ್ನು ೨೦೦೩ರವರೆಗೆ ಎಲ್ಲೆಡೆ ಅನುಸರಿಸಲಾಗಿತ್ತು. ಇಂದಿಗೂ ಇಂಗ್ಲೆಂಡ್‌ನ ಕ್ಲಬ್ ಲೀಗ್‌ನಲ್ಲಿ ಈ ಮಾದರಿಯನ್ನೇ ಪಾಲಿಸಲಾಗುತ್ತಿದೆ. ಇದೀಗ ಅಂತರ್ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದರ ‘ಫ್ರೊಫೆಷನಲ್ ಎಡಿಷನ್’ ಸೂತ್ರವನ್ನು ಒಪ್ಪಿಕೊಳ್ಳಲಾಗಿದೆ. ಹಾಗಾಗಿ ಕ್ರಿಕೆಟ್ ವೇಳೆ ಆಟಗಾರರಲ್ಲದೆ ಲ್ಯಾಪ್‌ಟಾಪ್, ಡಿ ಎಂಡ್ ಎಲ್ ಪ್ರೋಗ್ರಾಂ ಸಾಫ್ಟ್‌ವೇರ್‌ಗಳೂ ಬೇಕು! ಅದಕ್ಕೇ ಇರಬೇಕು, ಒಂದೊಮ್ಮೆ ಕಂಪ್ಯೂಟರ್ ಕೈಕೊಟ್ಟರೆ ಹಿಂದಿನ ೨೦೦೩ರ ಸ್ಟಾಂಡರ್ಡ್ ಪದ್ಧತಿಯನ್ನು ಬಳಸಬಹುದು ಎಂಬ ಷರಾವನ್ನು ಐಸಿಸಿ ಕಾನೂನಿನಲ್ಲಿ ಸೇರಿಸಲಾಗಿದೆ.
೨೦೦೩ರ ವ್ಯವಸ್ಥೆಯಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ೨೫೦ಕ್ಕಿಂತ ಹೆಚ್ಚು ಮೊತ್ತ ಗಳಿಸಿದಾಗ ಮಳೆ ತಾಪತ್ರಯ ಕಾಡಿದರೆ ಲೆಕ್ಕಾಚಾರ ಎಡವಟ್ಟಾಗಿಬಿಡುತ್ತಿತ್ತು. ಈ ನಿಟ್ಟಿನಲ್ಲಿ ಸರಿಪಡಿಸಲು ಬಂದಿದ್ದೇ ಫ್ರೊಫೆಷನಲ್ ಎಡಿಷನ್. ಇದಕ್ಕೆ ಸಿಓಡಿಎ ಎಂಬ ಇತ್ತೀಚಿನ ಸಾಫ್ಟ್‌ವೇರ್ ಅಗತ್ಯ. ಕಂಪ್ಯೂಟರ್ ಪ್ರೋಗ್ರಾಮಿಂಗ್ ಆಗಿರಲೇಬೇಕು. ಆದರೆ ಇಂದು ಶುಷ್ಕ ಪಿಚ್ ಕಾರಣ ಸಾಮಾನ್ಯ ಸ್ಕೋರು ೨೭೫ - ೩೫೦ ಎಂಬ ಹಂತಕ್ಕೆ ಬಂದಿರುವುದರಿಂದ ಮತ್ತು ಗರಿಷ್ಟ ಸ್ಕೋರು ದಾಖಲಾಗುವ ಟ್ವೆಂಟಿ ೨೦ಗೆ ಅಡಚಣೆಯ ನಂತರದ ಗುರಿ ನಿಗದಿಪಡಿಸಲು ಅತ್ಯಂತ ಅನುಕೂಲವಾಗಿದೆ.
ಈ ಪದ್ಧತಿಯನ್ನು ವಿವರಿಸಲು ಉದಾಹರಣೆಗಳೇ ಹೆಚ್ಚು ಸೂಕ್ತ. ಎಷ್ಟೋ ಬಾರಿ ಮೊದಲು ಆಡಿದ ತಂಡಕ್ಕಿಂತ ಕಡಿಮೆ ಓವರ್ ಆಡಬೇಕಾದರೂ ಮೊದಲಿದಕ್ಕಿಂತ ಹೆಚ್ಚಿನ ಮೊತ್ತ ಗಳಿಸುವ ಸವಾಲನ್ನು ಡಿ & ಎಲ್ ಪದ್ಧತಿ ಹೇಳುತ್ತದೆ. ಏಕೆ? ಮೊದಲ ತಂಡ ೫೦ ಓವರ್ ಆಡುವ ಮುನ್ನವೇ ಮಳೆ ಕಾಡಿ ೪೦ ಓವರ್ ಮಾತ್ರ ಆಡಿತು. ಉಳಿದ ಇನ್ನಿಂಗ್ಸ್ ತೊಳೆದುಹೋಯಿತು. ಎರಡನೇ ತಂಡಕ್ಕೆ ಖಡಕ್ಕಾಗಿ ೪೦ ಓವರ್ ಮಾತ್ರ ಆಡಲಿದೆ ಎಂಬುದು ಗೊತ್ತು. ಒಂದೊಮ್ಮೆ ಮೊದಲ ತಂಡಕ್ಕೆ ತಾವು ಆಡುವುದು ೪೦ ಓವರ್ ಮಾತ್ರ ಎಂಬುದು ಗೊತ್ತಿದ್ದಿದ್ದರೆ ಇನ್ನೂ ೬೦ -೭೦ ರನ್ ಹೆಚ್ಚು ಸೇರಿಸುವ ಬಿರುಸಿನ ಆಟ ಆಡುತ್ತಿತ್ತೇನೋ. ಇಂತಹ ಸಂದರ್ಭದಲ್ಲಿ ಮೇಲಿನ ಅಂಶವನ್ನು ಲೆಕ್ಕಿಸಿಯೇ ಡಿ ಎಂಡ್ ಎಲ್ ಸೂತ್ರ ಗೆಲ್ಲುವ ಗುರಿಯನ್ನು ನಿಗದಿಪಡಿಸುತ್ತದೆ. ಇದರಿಂದಾಗಿ ಮೊದಲ ತಂಡ ಗಳಿಸಿರುವುದಕ್ಕಿಂತ ಕನಿಷ್ಟ ೨೦ - ೨೫ ರನ್ ಹೆಚ್ಚು ಸೇರಿದ ಗುರಿ ಎದುರಿಸುವ ಸವಾಲು ಎರಡನೇ ತಂಡಕ್ಕೆ ಬಂದೀತು.
ಇನ್ನೊಂದು ಅಸಲಿ ಉದಾಹರಣೆ. ೨೦೦೬ರ ಏಕದಿನ ಸರಣಿ. ಭಾರತ ಮೊದಲು ಬ್ಯಾಟ್ ಮಾಡಿ ೪೯ನೇ ಓವರ್‌ನಲ್ಲಿ ೩೨೫ಕ್ಕೆ ಆಲ್‌ಔಟ್. ಪಾಕ್ ೪೭ ಓವರ್‌ನ ಮುಕ್ತಾಯಕ್ಕೆ ಮಂದಬೆಳಕಿನ ಕಾರಣ ಆಟ ನಿಲ್ಲಿಸಬೇಕಾಯಿತು. ಅವರ ಸ್ಕೋರು ೭ ವಿಕೆಟ್‌ಗೆ ೩೧೧. ಅಂದರೆ ಇನ್ನುಳಿದ ೧೮ ಎಸೆತದಲ್ಲಿ ೧೮ ರನ್ ಬಾರಿಸಬೇಕಾದ ಗುರಿ. ಸಾಮಾನ್ಯವಾಗಿ ಗೆಲ್ಲುವ ಸಾಧ್ಯತೆ ಹೆಚ್ಚು. ಡಿ ಎಲ್ ಪ್ರಕಾರ ೪೭ನೇ ಓವರ್‌ಗೆ ಪಾಕ್ ೩೦೪ ರನ್ ಗಳಿಸಿದ್ದರೆ ಸಾಕಿತ್ತು. ಅದಕ್ಕೆ ಸಿಕ್ಕ ಏಳು ರನ್ ಜಯ ಸಮರ್ಥನೀಯ.
೨೦೦೮. ಇಂಗ್ಲೆಂಡ್ ಭಾರತ ಪಂದ್ಯ. ಮೊದಲ ಇನ್ನಿಂಗ್ಸ್‌ಗೆ ಎರಡು ಬಾರಿ ತಡೆ. ಮೊದಲು ಆಡಿದ ಭಾರತ ೨೨ ಓವರ್‌ನಲ್ಲಿ ೪ ವಿಕೆಟ್‌ಗೆ ೧೬೬ ರನ್ ಗಳಿಸಲು ಸಾಧ್ಯವಾಯಿತು. ಡಕ್‌ವರ್ತ್ ಲೂಯಿಸ್ ಸೂತ್ರ ಇಂಗ್ಲೆಂಡ್ ಗುರಿಯನ್ನು ೨೨ ಓವರ್‌ಗೆ ೧೯೮ಕ್ಕೆ ನಿಗದಿಪಡಿಸಿತು. ತಾನು ಆಡುವ ಓವರ್‌ಗಳ ಬಗ್ಗೆ ಗೊಂದಲವಿದ್ದ ಭಾರತಕ್ಕೆ ನ್ಯಾಯ ಸಿಕ್ಕಿದ್ದು ಡಿಎಲ್‌ನಿಂದ! ಅದು ಪಂದ್ಯವನ್ನು ೧೯ ರನ್‌ನಿಂದ ಗೆದ್ದದ್ದು ಬೇರೆಯದೇ ಕತೆ.
ಈ ಹಿಂದಿನ ಡಕ್‌ವರ್ತ್ ಲೂಯಿಸ್ ಪದ್ಧತಿಗೆ ಜಿ೫೦ ಹಾಗೂ ಸಂಪನ್ಮೂಲ ಸಂಗ್ರಹಗಳು ಲೆಕ್ಕಕ್ಕೆ ಬರುತ್ತಿತ್ತು. ಜಿ೫೦ ಎಂದರೆ ಒಂದು ರಾಷ್ಟ್ರದಲ್ಲಿ ಸಾಮಾನ್ಯವಾಗಿ ದಾಖಲಾಗುವ ಮೊತ್ತವನ್ನು ಮೂಲಾಧಾರವಾಗಿ ಬಳಸಿಕೊಳ್ಳುವುದು. ಅದರ ಆಧಾರದಲ್ಲಿ ಉಳಿದ ಗಣಿತ ಮಾಡಲಾಗುತ್ತದೆ. ಅದರ ಪ್ರಕಾರ ೨೩೫ ರನ್ ಭಾರತದ ಜಿ೫೦ ಆಗಿದ್ದು ಮೊದಲ ತಂಡದ ಮೊತ್ತ ೨೫೦ ರನ್ ಆದರೂ ನಿಗದಿ ಪಡಿಸುವ ಗುರಿ ೨೩೫ ಹೊಡೆದಾಗಲೂ, ೨೫೦ ಚಚ್ಚಿದಾಗಲೂ ಸರಿಸುಮಾರು ಒಂದೇ. ನಿಖರವಾಗಿ ಹೇಳುವುದಾದರೆ, ಅದು ೨ - ೩ ರನ್‌ಗಿಂತ ಹೆಚ್ಚು ವ್ಯತ್ಯಾಸವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೊಸ ಪದ್ಧತಿಯಲ್ಲಿ ಜಿ೫೦ಯನ್ನು ಅಳವಡಿಸಲಾಗಿಲ್ಲ.
ಹೊಸ ಫ್ರೊಫೆಷನಲ್ ತಂತ್ರ ಕೆಲಸ ಮಾಡುವ ವಿಧಾನವನ್ನು ವಿಶ್ಲೇಷಿಸುವುದು ಕಷ್ಟ. ಆದರೆ ಒಂದು ಪಾರ್ಶ್ವ ನೋಟವಷ್ಟನ್ನು ಒದಗಿಸಬಹುದು. ಇದರಲ್ಲಿ ಎರಡು ಸಂಪನ್ಮೂಲಗಳಿಗೆ ಮಹತ್ವದ ಸ್ಥಾನ. ಆಡಲು ಉಳಿದಿರುವ ಓವರ್ ಸಂಖ್ಯೆ ಹಾಗೂ ಕೈಯಲ್ಲಿರುವ ವಿಕೆಟ್‌ಗಳೇ ಈ ಚಿಂತನೆಗೆ ಆಧಾರ.
ಕೆಲವೊಮ್ಮೆ ಎರಡನೇ ಬ್ಯಾಟಿಂಗ್ ನಡೆಸುವ ತಂಡವೂ ‘ರನ್’ ಆಧಾರದಲ್ಲಿ ಗೆಲ್ಲುವ ವೈಚಿತ್ರ್ಯ ಡಕ್‌ವರ್ತ್ ಲೂಯಿಸ್ ಸೂತ್ರದಲ್ಲಿದೆ. ಇಂತಹ ವೇಳೆ ನಿಶ್ಚಿತ ಓವರ್ ಆಡಿದ್ದರಷ್ಟೇ ಎರಡನೇ ತಂಡದೊಂದಿಗೆ ಮೊದಲ ತಂಡದ ಆ ಓವರ್‌ನ ಮೊತ್ತಕ್ಕೆ ಹೋಲಿಸಲಾಗುತ್ತದೆ. ಇಲ್ಲಿ ವಿಶೇಷವೆಂದರೆ, ಆ ಹಂತದಲ್ಲಿ ಮೊದಲ ತಂಡದ ಸ್ಕೋರನ್ನು ಡಿ ಎಂಡ್ ಎಲ್ ಸೂತ್ರದ ಪ್ರಕಾರ ಲೆಕ್ಕಿಸಬೇಕಾಗುತ್ತದೆ! ಆ ಮೊತ್ತವನ್ನು ಎರಡನೇ ತಂಡ ಆ ವೇಳೆಗೆ ದಾಟಿದ್ದರೆ ಅವರಿಗೆ ರನ್ ಲೆಕ್ಕದಲ್ಲಿ ವಿಜಯ ಲಭ್ಯವಾಗುತ್ತದೆ. ಇದಕ್ಕೆ ಏಕದಿನ ಕ್ರಿಕೆಟ್‌ನಲ್ಲಿ ಉಭಯ ತಂಡಗಳು ಕನಿಷ್ಟ ೧೫ ಓವರ್ ಆಡಿರಬೇಕು ಮತ್ತು ಟ್ವೆಂಟಿಯಲ್ಲಿ ೫ ಓವರ್ ಆಟವಾದರೂ ಆಗಿರಬೇಕು ಎಂಬ ಷರತ್ತಿದೆ. ಈ ತರದ ಪ್ರಕರಣದಲ್ಲಿ ಮೊದಲ ತಂಡ ಕಳೆದುಕೊಳ್ಳುವ ವಿಕೆಟ್ ಕೂಡ ಫಲಿತಾಂಶವನ್ನು ಪ್ರಭಾವಿಸುತ್ತದೆ.
ಇಂದಿನ ಪಿಂಚ್ ಹಿಟ್ಟರ್‌ಗಳ ಅಬ್ಬರದಲ್ಲಿ ಬ್ಯಾಟ್ಸ್‌ಮನ್‌ಗಳನ್ನು ‘ದರ್ಜೆ’ಯ ಮಾನದಂಡದಲ್ಲಿ, ಬ್ಯಾಟಿಂಗ್ ಕ್ರಮಾಂಕದ ಅನುಸಾರ ಅಳೆಯಲಾಗುವುದಿಲ್ಲ. ಒಂದಂತೂ ನಿಜ, ಯಾವುದೇ ಮಳೆ ಸೂತ್ರ ಎಲ್ಲರನ್ನು ಸಮಾಧಾನಪಡಿಸಲಾಗದ್ದು. ಡಕ್‌ವರ್ತ್ ಲೂಯಿಸ್ ವ್ಯವಸ್ಥೆಯಲ್ಲಿ ೨೫ - ೩೦ ಓವರ್ ಎರಡನೇ ಇನ್ನಿಂಗ್ಸ್ ನಡೆದಲ್ಲಿ ನ್ಯಾಯಯುತ ಎನ್ನಿಸುತ್ತದೆ. ಅದೇ ಇದ್ದಕ್ಕಿದ್ದಂತೆ ಮಳೆಯ ಕಾಟಕ್ಕೊಳಗಾಗಿ ನಂತರದಲ್ಲಿ ನಾಲ್ಕೆಂಟು ಓವರ್ ಮಾತ್ರ ಆಡಬೇಕಾದಲ್ಲಿ ನಗೆಪಾಟಲಿಗೊಳಗಾದದ್ದೂ ಇದೆ!
ಹಾಗೆಂದು ಕೆಲವು ಪ್ರಕರಣಗಳಲ್ಲಿ ತಾನು ಅಸಹಾಯಕನೆಂದು ಸ್ವತಃ ಡಿ & ಎಲ್ ಪದ್ಧತಿ ಹೇಳಿಕೊಂಡಿದೆ. ನೀವೇ ನೋಡಿ, ೫೦ ಓವರ್ ಪಂದ್ಯ. ಡಿ ಎಲ್ ಅಳವಡಿಕೆಗೆ ೧೦ ಓವರ್ ಸಾಕು ಎಂಬ ನಿಯಮವಿತ್ತು ಎಂದುಕೊಳ್ಳಿ. ಮೊದಲ ತಂಡ ಪಿಂಚ್ ಹಿಟ್ಟರ್‌ಗಳನ್ನೇ ಮೈದಾನಕ್ಕಿಳಿಸಿ ೧೦೦ ರನ್‌ನ್ನು ಯಾವುದೇ ವಿಕೆಟ್ ನಷ್ಟವಿಲ್ಲದೆ ಗಳಿಸಿದೆ. ನಂತರ ಬೇರಾವುದೇ ಆಟ ಸಾಧ್ಯವಾಗದೆ ಎರಡನೇ ತಂಡಕ್ಕೆ ೧೦ ಓವರ್ ಮಾತ್ರ ಆಡಲು ಅವಕಾಶವಾಗುತ್ತದೆ. ಆಗ ಡಿ ಎಲ್ ಸ್ಟಾಂಡರ್ಡ್ ಪದ್ಧತಿ ಅನ್ವಯ ಎರಡನೇ ತಂಡ ಇಷ್ಟೇ ಓವರ್‌ನಲ್ಲಿ ಗೆಲ್ಲಲು ೧೫೧ ರನ್ ಗಳಿಸಬೇಕು. ನ್ಯಾಯವೇ?
ಇನ್ನೊಂದು ಘಟನೆ. ಮೊದಲು ಬ್ಯಾಟಿಂಗ್ ಮಾಡಿದ ಪಂಗಡ ೫೦ ಓವರ್‌ನಲ್ಲಿ ೩೫೦ ರನ್ ಗಳಿಸಿದೆ. ರನ್ ಛೇಸ್ ಆರಂಭಿಸಿದ ಪಂಗಡ ೧೦ ಓವರ್‌ಗೆ ವಿಕೆಟ್ ನಷ್ಟವಿಲ್ಲದೆ ೪೦ ರನ್ ಗಳಿಸಿದೆ. ನಂತರದ ಆಟ ಹವಾಮಾನದ ವೈಪರೀತ್ಯಕ್ಕೆ ತುತ್ತಾಯಿತು ಎಂದಿಟ್ಟುಕೊಂಡರೆ ಫಲಿತಾಂಶ ಡಿ ಎಲ್ ಸೂತ್ರದ ಪ್ರಕಾರ ಎರಡನೇ ತಂಡ ಮೂರು ರನ್‌ನಿಂದ ಗೆದ್ದಿದೆ!
ಕ್ರಿಕೆಟ್‌ನಂತ ಕ್ಲೀಷೆಯ ಆಟದಲ್ಲಿ ಕೆಲವು ಅಸಹಜ ಗುರಿ ನಿಗದಿ ಆಗುವುದಿದೆ ಎಂದು ಡಕ್‌ವರ್ತ್ ಲೂಯಿಸ್ ಒಪ್ಪಿಕೊಳ್ಳುತ್ತಾರೆ. ೧೦ ಓವರ್ ಬಿಡಿ, ೨೦ ಓವರ್ ಆಟವಷ್ಟೇ ಆದಲ್ಲೂ ಇಂತಹ ಕೆಲವು ಘಟಿಸುತ್ತವೆ. ಆದರೆ ಈಗಿನ ಫ್ರೊಫೆಶನಲ್ ಸೂತ್ರ ಈ ಅಸಹಜತೆಗಳಿಗೆ ಸಾಕಷ್ಟು ಬ್ರೇಕ್ ಹಾಕಿದೆ.
ಕೆಲವರಲ್ಲಿ ಇನ್ನಷ್ಟು ಸಂಶಯಗಳಿರಬಹುದು. ಪವರ್ ಪ್ಲೇಗಳು, ಅದರಲ್ಲೂ ಈಗಿನ ಬ್ಯಾಟ್ಸ್‌ಮನ್ ಪವರ್ ಪ್ಲೇ ಆಯ್ಕೆಯಿರುವಾಗ ಈ ಪದ್ಧತಿ ಬೇಸ್ತು ಬೀಳುವುದಿಲ್ಲವೇ? ಹಿಂದಿನ ಪಂದ್ಯಗಳ ಸುದೀರ್ಘ ಅಧ್ಯಯನವು ಬ್ಯಾಟ್ಸ್‌ಮನ್ ಪವರ್ ಪ್ಲೇಯಿಂದ ರನ್ ಸರಾಸರಿಯಲ್ಲಿ ಅಗಾಧ ವ್ಯತ್ಯಾಸವೇನೂ ಕಾಣದ್ದನ್ನು ದೃಢಪಡಿಸಿದೆ. ಆದ್ದರಿಂದ ಡಿ ಎಲ್‌ನಲ್ಲಿ ಅದನ್ನು ಪ್ರಭಾವಿಸುವ ಅಂಶವಾಗಿ ಪರಿಗಣಿಸಿಲ್ಲ. ಆ ಲೆಕ್ಕದಲ್ಲಿ, ಈಗಿನ ೩೪ ಓವರ್ ನಂತರದ ಹೊಸ ಚೆಂಡು ತೆಗೆದುಕೊಳ್ಳುವ ನಿಯಮವೂ ಗಮನಿಸಬೇಕಾದುದಂತದೇ.
ಒಂದು ಮಾತನ್ನು ಒಪ್ಪಿಕೊಳ್ಳಲೇಬೇಕು. ಮಳೆ ಆಡುವ ವಾತಾವರಣಕ್ಕೆ ಅಸಹಜ. ಹಾಗೆಂದೇ ಪ್ರಕೃತಿಯ ಕೃತ್ಯಗಳನ್ನು ನುಂಗಲೇಬೇಕೆಂಬ ಅನಿವಾರ್ಯ. ಈ ತರ್ಕ ಡಕ್‌ವರ್ತ್ ಲೂಯಿಸ್ ಪದ್ಧತಿಗೂ ಲಾಗೂವಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಅಡಚಣೆಗೊಳಗಾದ ಪಂದ್ಯದಲ್ಲಿ ಗುರಿಯನ್ನು, ಫಲಿತಾಂಶವನ್ನು ನಿರ್ಧರಿಸಲು ಇದು ಕೈಯಲ್ಲಿರುವ ಒಳ್ಳೆಯ ಆಯ್ಕೆ. ಇದೂ ಒಂತರ ಅಂಪೈರ್‌ರ ತೋರುಬೆರಳಿದ್ದಂತೆ. ಒಪ್ಪಿಕೊಂಡು ಸಮಾಧಾನ ಪಟ್ಟುಕೊಳ್ಳಲೇಬೇಕು!
ಈ ಸೂತ್ರವನ್ನು ಅರ್ಥೈಸಿಕೊಳ್ಳಲು ಕ್ರಿಕೆಟ್‌ನ ಉನ್ನತ ಸ್ಥಾನದವರೇ ಎಡವುತ್ತಿರುವುದು ಕಂಡುಬರುತ್ತದೆ. ಒಮ್ಮೆ ವಿಶ್ವಕಪ್‌ನಲ್ಲೇ ದಕ್ಷಿಣ ಆಫ್ರಿಕಾ ನಾಯಕ ಶಾನ್ ಪೊಲಾಕ್ ತಪ್ಪು ಮಾಹಿತಿ ಕೊಟ್ಟು ಪರಾಭವದ ಕಹಿ ಉಂಡಿದ್ದರು. ಅಷ್ಟೇಕೆ, ಮೊನ್ನೆ ಮೊನ್ನೆ ಮಾರ್ಚ್ ೨೦ರಂದು ಇಂಗ್ಲೆಂಡ್ ವೆಸ್ಟ್ ಇಂಡೀಸ್ ಪಂದ್ಯದಲ್ಲಿ ವಿಂಡೀಸ್ ಛೇಸ್ ಮಾಡುತ್ತಿರುವಾಗ ಅದರ ಕೋಚ್ ಜಾನ್ ಡೈಸನ್ ಪಿಗ್ಗಿ ಬಿದ್ದರು. ಆ ವೇಳೆಗೆ ಕವಿಯುತ್ತಿದ್ದ ಕತ್ತಲನ್ನು ನೋಡಿ, ಆ ವೇಳೆಗೆ ತಮ್ಮ ತಂಡವೇ ಡಿಎಲ್ ಸೂತ್ರದ ಪ್ರಕಾರ ಒಂದು ರನ್‌ನಿಂದ ಜಯಿಸಿದೆಯೆಂದು ಲೆಕ್ಕಿಸಿ ಬ್ಯಾಡ್‌ಲೈಟ್‌ಗೆ ಅಪೀಲು ಮಾಡಲು ತಿಳಿಸಿದರು. ಆ ಓವರ್‌ನ ಅಂತ್ಯಕ್ಕೆ ಆ ಮನವಿಗೆ ಮನ್ನಣೆಯೂ ಸಿಕ್ಕಿತು. ಪಂದ್ಯದ ರೆಫ್ರಿ ಜಾವಗಲ್ ಶ್ರೀನಾಥ್ ಇಂಗ್ಲೆಂಡ್ ವಿಜಯಿಯೆಂದು ಘೋಷಿಸಬೇಕೆ? ಆಗಿದ್ದಿಷ್ಟೇ, ವಿಂಡೀಸ್‌ರು ಕೊನೆಯ ಎಸೆತದಲ್ಲಿ ಒಂದು ವಿಕೆಟ್ ಕಳೆದುಕೊಂಡಿದ್ದರು. ಹಾಗಾಗಿ ಇಂಗ್ಲೆಂಡ್ ಎರಡು ರನ್‌ನಿಂದ ಗೆದ್ದಿತ್ತು!
ಕೊನೆ ಮಾತು - ಇದೀಗ ಇಂಗ್ಲೆಂಡ್‌ನಲ್ಲಿ ಟ್ವೆಂಟಿ ೨೦ ವಿಶ್ವಕಪ್ ನಡೆಯುತ್ತಿದೆ. ಅಲ್ಲಿನ ಬ್ಯಾಟ್ಸ್‌ಮನ್‌ಗಳಂತೆ ಹವಾಮಾನವೂ ಚಂಚಲ. ಈಗಾಗಲೇ ಮಳೆ ಹೊಂಚುಹಾಕಿದೆ. ಅಲ್ಲಿನ ಡಕ್‌ವರ್ತ್ ಹಾಗೂ ಲೂಯಿಸ್ ಜೋಡಿ ಕ್ರೀಡಾಂಗಣಕ್ಕೇ ಬಂದು ತಮ್ಮ ನಿಯಮ ಜಾರಿಯಾಗುವುದನ್ನು ಖುಷಿಯಿಂದ ನಿರೀಕ್ಷಿಸುತ್ತಿರಬಹುದೇ?!

-ಮಾವೆಂಸ

ಮಂಗಳವಾರ, ಜೂನ್ 9, 2009

ಬಣ್ಣದ ಉಡುಗೆ!



ಅನಾ ಇವಾನೋವಿಕ್ ಮಹಿಳಾ ಟೆನಿಸ್‌ನಲ್ಲಿ ಸೌಂದರ್ಯಕ್ಕೆ ಹೊಸ ಅರ್ಥ ಕೊಟ್ಟವರು. ಅವರು ಧರಿಸುವ ವಿಶಿಷ್ಟ ಮಾದರಿಯ ನೇರಳೆ ಬಣ್ಣದ ಶರ್ಟ್, ಸ್ಕರ್ಟ್ ಗಮನ ಸೆಳೆಯದೆ ಇರದು. ಅತ್ತ ಸೆರೆನಾ, ವೀನಸ್ ವಿಲಿಯಮ್ಸ್‌ಗಳು, ಶರಪೋವಾ ಮತ್ತಿತರರು ಸೆಕ್ಸಿ, ಸೆಕ್ಸಿ ಉಡುಪುಗಳಿಂದ ದೇಹದ ಓರೆಕೋರೆಗಳನ್ನು ಢಾಳಾಗಿ ತೋರಿಸುವಾಗ ಅನಾರದು ಮುಚ್ಚಿಟ್ಟ ಚೆಲುವು! ಹಾಗಿದ್ದೂ ಈ ಉಡುಗೆ ತೊಟ್ಟರೆ ಪೋಲೀಸರು ಬಂಧಸುತ್ತಾರೆಂದರೆ?
ಕಳೆದ ವರ್ಷ. ಅನಾ ಇನ್ನೂ ಗ್ರಾನ್‌ಸ್ಲಾಂ ಗೆದ್ದಿರಲಿಲ್ಲ. ಫೈನಲ್‌ನಲ್ಲಿ ಸೋಲುವುದು ಪದ್ಧತಿ. ಗೆಲ್ಲುವ ಇನ್‌ಸಿಂಗ್ಟ್ ಗಳಿಸಲು ಆಕೆಯ ಕೋಚ್ ಒಂದು ಸವಾಲು ಹಾಕಿದರು, ‘ನೀನು ಫ್ರೆಂಚ್ ಓಪನ್ ಗೆದ್ದರೆ ನಾನು ಅಲ್ಲಿನ ಆರ್ಕ್ ಡಿ ಟ್ರಿಯೋಮ್ಪೆಯನ್ನು ಒಂದು ಸುತ್ತು ಸುತ್ತಿಬರುವೆ.’ ಅನಾ ಸವಾಲು ಸ್ವೀಕರಿಸಿದಳು. ಫ್ರೆಂಚ್ ಓಪನ್ ಗೆದ್ದೇಬಿಟ್ಟಳು. ಮಾತಿಗೆ ತಪ್ಪದ ಕೋಚ್ ಟ್ರಿಯೋಮ್ಪೆಯನ್ನು ಸುತ್ತುವಾಗ ಹಿಂದಿನಿಂದ ಪೋಲೀಸರು ಬೆನ್ನತ್ತಬೇಕೆ? ಅಂತೂ ಹೋಟೆಲ್ ಸೇರಿದ ಕೋಚ್ ಉಸ್ಸೆನ್ನುತ್ತ ತಾವು ತೊಟ್ಟ ಉಡುಗೆ ಕಳಚಿ ಹಾಕಿದರು. ಮಂಚದ ಆ ಬದಿಗೆ ಬಿತ್ತು ಅದೇ, ಅನಾ ಇವಾನೋವಿಕ್ ಹಾಕಿಕೊಳ್ಳುವ ನೇರಳೆ ಬಣ್ಣದ ಸ್ಕರ್ಟ್!!
ಅರ್ಥವಾಗದವರು ಮತ್ತೆ ಮೊದಲಿನಿಂದ ಓದಬೇಕು!

-ಮಾವೆಂಸ

ಸೋಮವಾರ, ಜೂನ್ 8, 2009

ರೊಲ್ಯಾಂಡ್ ಗ್ಯಾರಸ್‌ಗೆ ಹೊಸ ಚಾಂಪಿಯನ್!



ರೊಲ್ಯಾಂಡ್ ಗ್ಯಾರಸ್ ನಿಟ್ಟುಸಿರು ಬಿಟ್ಟಿರಬೇಕು. ಕಳೆದ ನಾಲ್ಕು ವರ್ಷಗಳಿಂದ ಅದೇ ರಫೆಲ್ ನಡಾಲ್‌ರನ್ನು ನೋಡಿ ಅದು ಬೇಸತ್ತಿತ್ತು. ನಿಜ, ರಫಾರ ಸಾಮರ್ಥ್ಯದ ಬಗ್ಗೆ ಅದಕ್ಕೆ ಗೌರವವಿತ್ತು. ಆದರೆ ಒಬ್ಬರೇ ಚಾಂಪಿಯನ್ ಪಟ್ಟದ ಹಕ್ಕುದಾರರಾಗಿಬಿಟ್ಟರೆ ಆಟ ಬಸವಳಿಯುತ್ತದೆ. ಟೆನಿಸ್‌ನಲ್ಲೂ ಹಾಗೆ. ಹೊಸ ನೀರು, ಕೊನೆ ಪಕ್ಷ ಹೊಸ ಚಾಂಪಿಯನ್ ಮೂಡುತ್ತಿರಬೇಕು. ಈ ವರ್ಷ ಹಾಗಾಗಿದೆ. ಫ್ರೆಂಚ್ ಓಪನ್‌ನ ಎರಡೂ ವಿಭಾಗಗಳಲ್ಲಿ ವಿನೂತನ ಚಾಂಪಿಯನ್‌ಗಳೇ ಸೃಷ್ಟಿಯಾಗಿದ್ದಾರೆ. ಥ್ಯಾಂಕ್ಸ್ ಟು ನಡಾಲ್!
ಅಲ್ಲವೇ ಮತ್ತೆ, ರಫಾ ಪ್ರಾನ್ಸ್‌ನ ಈ ಗ್ರಾನ್‌ಸ್ಲಾಂನಲ್ಲಿ ಪದಾರ್ಪಣೆಗೈದದ್ದು ೨೦೦೪ರಲ್ಲಿ. ಅಲ್ಲಿಂದ ಮುಂದೆ ೩೧ ಪಂದ್ಯಗಳವರೆಗೆ ನಡಾಲ್ ಪರಾಭವದ ಮುಖ ನೋಡಲಿಲ್ಲ. ರೋಜರ್ ಫೆಡರರ್ ತಮ್ಮ ಅತ್ಯುತ್ತಮ ಫಾರಂನಲ್ಲಿದ್ದ ವೇಳೆಯಲ್ಲೂ ಕ್ಲೇ ಕೋರ್ಟ್ ಮಟ್ಟಿಗೆ ನಡಾಲ್ ಅದ್ವಿತೀಯರಾಗಿದ್ದರು. ಕ್ಲೇನಲ್ಲಿ ಸತತ ೮೧ ಪಂದ್ಯ ಗೆದ್ದಿದ್ದ ದಾಖಲೆ, ಕ್ಲೇ ಕೋರ್ಟ್ ಫೈನಲ್‌ನಲ್ಲಿ ೨೨-೧ರ ಸಾಧನೆ, ಕ್ಲೇ ಮಣ್ಣಲ್ಲಿ ಕೇವಲ ಏಳು ಆಟಗಾರರಿಂದ ಮಾತ್ರ ಸೋಲು, ೨೦೦೫ರ ನಂತರ ಕ್ಲೇನಲ್ಲಿ ೧೫೩ ಗೆಲವು, ಬರೀ ಆರು ಸೋಲು..... ಅಗ್ರ ಕ್ರಮಾಂಕದ ಆಟಗಾರನ ಒಂದು ಸೋಲು ಒಟ್ಟಾರೆ ಚಿತ್ರಣವನ್ನೇ ಬದಲಿಸಿದೆ. ರೋಜರ್ ಫೆಡರರ್ ಕೂಡ ನಿಟ್ಟುಸಿರು ಬಿಟ್ಟಿದ್ದಾರು. ನಡಾಲ್‌ರನ್ನೇ ಕೇಳಿ ನೋಡಿ, "ನಿಮ್ಮ ಈವರೆಗಿನ ಜಯಗಳಿಗೆ ಬೆಲೆ ಬರಬೇಕೆಂದರೆ ಒಂದು ಸೋಲಿನ ಅಗತ್ಯವಿದೆ!"
ರೋಲ್ಯಾಂಡ್‌ಗೆ ಸಮಾಧಾನವಾಗಿಲ್ಲ. ಅದು ಈ ಬಾರಿಯಾದರೂ ರಷ್ಯಾದ ದಿನಾರಾ ಸಫಿನಾ ಗ್ರಾನ್‌ಸ್ಲಾಂ ಗೆಲ್ಲಲಿ ಎಂದು ಅದು ಬಯಸಿತ್ತು. ಕಳೆದ ವರ್ಷ ಅನಾ ಇವಾನೋವಿಕ್‌ರ ಕೈಯಲ್ಲಿ ಸೋತ ದಿನಾರಾ ಕರುಣೆಯುಕ್ಕುವಂತೆ ಮಾಡಿದ್ದುದು ಸುಳ್ಳಲ್ಲ. ಅಷ್ಟೇಕೆ, ಸ್ಟುಟ್‌ಗರ್ಟ್‌ನಲ್ಲಿ ಸೋತಾಗಲಂತೂ ಕಣ್ಣೀರು ಹರಿಸಿದ್ದಳು ದಿನಾರಾ. ಈಗ ಮೂರು ಗ್ರಾನ್‌ಸ್ಲಾಂ ಫೈನಲ್‌ಗಳ ನಂತರವೂ ಬರಿಗೈಯಲ್ಲಿ ನಿಲ್ಲುವಂತಾಗುವುದು ಅಗ್ರಕ್ರಮಾಂಕಿತೆಗೆ ಅವಮಾನ.
ಸ್ವೆಟ್ಲಾನಾ ಕುಜ್ನೆತ್ಸೋವಾರಿಗೆ ಚೊಚ್ಚಲ ಫ್ರೆಂಚ್ ಸ್ಲಾಂ ದಕ್ಕಿದೆ. ಐದು ವರ್ಷಗಳ ಹಿಂದೆ, ೧೯ರ ಹರೆಯದ ಸ್ವೆಟ್ಲಾನಾ ಯು.ಎಸ್.ಓಪನ್ ಗೆದ್ದದ್ದು ಹಲವರಿಗೆ ನೆನಪಿಲ್ಲ. ಹಿಂದೊಮ್ಮೆ ೨೦೦೬ರಲ್ಲಿ ಇಲ್ಲಿಯೇ ರನ್ನರ್ ಅಪ್ ಆಗಿದ್ದುಂಟು. ಅಗ್ರಕ್ರಮಾಂಕಿತರ ಮೇಲೆ ಆರು ಬಾರಿ ಗೆಲುವು ಸಾಧಿಸಿದ ಹೆಗ್ಗಳಿಕೆಯಿರುವ ಸ್ವೆಟ್ಲಾನಾ ದಿನಾರಾ ಸಫಿನಾ ಪಾಲಿಗೆ ಮಾತ್ರ ೨೦೦೯ರಲ್ಲಿ ಖಳನಾಯಕಿ! ಇದೀಗ ದ್ವಿತೀಯ ಕ್ರಮಾಂಕಕ್ಕೆ ಭಡ್ತಿ ಪಡೆದಿರುವಾಕೆಯ ಮೇಲೆ ದಿನಾರಾ ಭಯಪಡಲು ಸಾಕಷ್ಟು ಹಿನ್ನೆಲೆಯಿದೆ.
ದಿನಾರಾ ಒಂದು ಸಮಾಧಾನ ಮಾಡಿಕೊಳ್ಳಬಹುದು. ತಾನಲ್ಲದಿದ್ದರೂ ಇನ್ನೊಬ್ಬ ರಷ್ಯನ್ ಗ್ರಾನ್‌ಸ್ಲಾಂ ಗೆದ್ದುದು. ಹೀಗೆ ಆಲ್ ರಷ್ಯನ್ ಫೈನಲ್ ನಡೆದಿರುವುದು ಮೂರನೇ ಬಾರಿ. ಆ ಲೆಕ್ಕದಲ್ಲಿ ೨೦೦೪ರಲ್ಲಿ ಎಲ್ಲಾ ನಾಲ್ಕು ಸ್ಲಾಂ ರಷ್ಯಾದ ಚೆಲುವೆಯರಿಗೆ ಸಿಕ್ಕಿತ್ತು! ದಿನಾರಾ ಕಳೆದ ಏಪ್ರಿಲ್‌ನಿಂದ ಅಗ್ರಪಟ್ಟಕ್ಕೇರಿದ್ದಾರೆ. ತದನಂತರ ೨೦-೧ರ ಉತ್ತಮ ದಾಖಲೆ ಹೊಂದಿದ್ದರೂ ಏಕೈಕ ಸೋಲು ಸ್ವೆಟ್ಲಾನಾ ಎದುರೇ ಬಂದಿತ್ತು. ಸತತ ೧೬ ಜಯದ ಸಾಧನೆಯೊಂದಿಗೆ ರೋಮ್‌ನ ಫೈನಲ್‌ನಲ್ಲಿ ಇದೇ ಸ್ವೆಟ್ಲಾನಾರನ್ನೇ ಮಣಿಸಿ ದಿನಾರಾ ಸೇಡು ತೀರಿಸಿಕೊಂಡಿದ್ದರು. ಆದರೇನು, ಮತ್ತೆ ಸ್ವೆಟ್ಲಾನಾ ಕೈ ಮೇಲಾಗಿದೆ!
ಸೆಮಿಫೈನಲ್‌ನಲ್ಲಿ ಆಡಿದ ಡೊಮಿನಿಕಾ ಓಬುಲ್ಕೋವಾ, ಸಮಂತಾ ಸ್ಪೋಸುರ್, ಸ್ವೆಟ್ಲಾನಾ, ದಿನಾರಾರೆಲ್ಲ ಟೆನಿಸ್ ಗ್ಲಾಮರ್‌ನ ಪ್ರತಿಪಾದಕರಲ್ಲ. ಅನಾ ಇವಾನೋವಿಕ್, ಮಾರಿಯಾ ಶರಪೋವಾರೆಲ್ಲ ಮೊದಲ ವಾರವೇ ಸೋತು ಸುಸ್ತಾದರು. ಇಂತಹ ಕಾಲದಲ್ಲಿ ಅವತರಿಸಿದ್ದು ರೊಮಾನಿಯಾದ ಸೊರಾನಾ ಸಿಸ್ಟಿಯಾ. ೧೯ರ ಮಿಂಚು ಪ್ರಾಯದ ಚೆಲುವೆ ಕ್ವಾರ್ಟರ್ ಫೈನಲ್‌ವರೆಗೆ ರಸಿಕರ ಕಣ್ಣು ತಂಪಾಗಿಸಿದರು. ಅಷ್ಟಲ್ಲದೆ, ಮಾಜಿ ನಂ.೧ ಜೆಲೆನಾ ಜಾಂಕೋವಿಕ್‌ರನ್ನು ಪರಾಭವಗೊಳಿಸಿದ್ದು ಮುಂದಿನ ದಿನಗಳಲ್ಲಿ ಅವರತ್ತ ಕುತೂಹಲದಿಂದ ನಿರೀಕ್ಷಿಸಲು ಕಾರಣವಾಗಿದೆ.
ಪಂದ್ಯಾವಳಿಯ ೧೫ನೇ ದಿನ ರೋಲ್ಯಾಂಡ್ ಗ್ಯಾರಸ್‌ಗೆ ಗೊಂದಲವೋ ಗೊಂದಲ. ಪುರುಷರ ಫೈನಲ್‌ನಲ್ಲಿ ಯಾರನ್ನು ಬೆಂಬಲಿಸಬೇಕು ಎಂಬ ಜಿಜ್ಞಾಸೆಯಲ್ಲಿತ್ತದು. ಗರಿಷ್ಠ ಗ್ರಾನ್‌ಸ್ಲಾಂ ಸಾಧನೆ ಮಾಡಲಿರುವ ರೋಜರ್, ಆ ಮೂಲಕ ಎಲ್ಲಾ ನಾಲ್ಕು ವಿಭಿನ್ನ ಸ್ಲಾಂ ಪಡೆದ ವಿಕ್ರಮ ಮಾಡಿದರೆ ಖುಷಿಯಾಗದಿರುತ್ತದೆಯೇ? ಅದೂ ಕಳೆದ ಸತತ ಮೂರು ವರ್ಷಗಳಿಂದ ಫೈನಲ್‌ನಲ್ಲಿ ಬಸವಳಿಯುತ್ತಿದ್ದ ಅಪ್ರತಿಮ ಆಟಗಾರನ ಪರ ನಿಲ್ಲುವ ಆಸೆ.
ಹಾಗೆಂದು ಸ್ವೀಡನ್ನಿನ ರಾಬಿನ್ ಸೊಡೆರ್‍ಲಿಂಗ್‌ರನ್ನು ಕಡೆಗಣಿಸುವಂತಿರಲಿಲ್ಲ. ಸ್ಲಾಂ ಗೆದ್ದ ಇತಿಹಾಸವಿಲ್ಲ, ಫೈನಲ್‌ನಲ್ಲಿ ಆಡಿದ ದಾಖಲೆಯಿಲ್ಲ. ಆದರೆ ರಫೆಲ್ ನಡಾಲ್‌ರ ಸಾಮ್ರಾಜ್ಯಕ್ಕೆ ಲಗ್ಗೆ ಇಟ್ಟ ಧೀರ. ಅವರನ್ನು ಮಣಿಸಿದ್ದು ಸಾಮಾನ್ಯವೇ? ಫ್ರೆಂಚ್ ಓಪನ್‌ಗೆ ಯಾವತ್ತೂ ಇನ್ನೆಲ್ಲೂ ಗ್ರಾನ್‌ಸ್ಲಾಂ ಗೆಲ್ಲದವರ ಮೇಲೆ ಹೆಚ್ಚು ಕಕ್ಕುಲಾತಿ ಇದಕ್ಕೂ ಮುನ್ನ, ಕಳೆದ ೧೬ ಗ್ರಾನ್‌ಸ್ಲಾಂಗಳಲ್ಲಿ ೧೫ನ್ನು ನಡಾಲ್ - ಫೆಡರರ್ ಹಂಚಿಕೊಂಡಿದ್ದರು. ಕೇವಲ ಒಂದು ಸ್ಲಾಂ, ಅದೂ ಕಳೆದ ವರ್ಷ ನೋವಾಕ್ ಜೋಕೋವಿಕ್‌ರಿಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸಿಕ್ಕಿತ್ತು.

-ಮಾವೆಂಸ

ಮಂಗಳವಾರ, ಜೂನ್ 2, 2009

ಬುಕ್ಕಿಗಳು ಐಪಿಎಲ್ ಆಳಿದ್ದು ನಿಜವೇ?



ಭಾರತೀಯ ಪ್ರೀಮಿಯರ್ ಲೀಗ್‌ನ ಎರಡನೇ ಸಂಚಿಕೆಯು ಯಶಸ್ವಿಯಾಗಿ ಮುಗಿದಿದೆ. ಭಯೋತ್ಪಾದಕರ ಕರಿನೆರಳಲ್ಲಿ ಟೂರ್ನಿ ಪಕ್ಷಾಂತರ ಮಾಡಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಿತು ಎಂಬುದೇ ಒಂದು ಲೆಕ್ಕದ ಸಫಲತೆ. ಯಶಸ್ಸಿನ ಮಾನದಂಡಗಳು ಹಲವು. ಆದಿಕ್ಕಿನಲ್ಲಿ ಗೊಂದಲಗಳಿವೆ. ಆದರೆ ಸಚ್ಛಾರಿತ್ರ್ಯದ ವಿಚಾರದಲ್ಲಿ ‘ನಡತೆ ಪ್ರಮಾಣಪತ್ರ’ವನ್ನು ಐಪಿಎಲ್‌ಗೆ ಕೊಡಲು ಹೆಚ್ಚು ತಕರಾರುಗಳಿವೆ!
ಐಪಿಎಲ್ ದ.ಆಫ್ರಿಕಾದಲ್ಲಿ ನಡೆದಿದ್ದೇ ಮ್ಯಾಚ್ ಫಿಕ್ಸಿಂಗ್ ನಿರೂಪಕರಿಗೆ ಆಟ ಆಡಲು ಅವಕಾಶ ಒದಗಿಸಿತು ಎನ್ನುವವರಿದ್ದಾರೆ. ಬೆಟ್ಟಿಂಗ್ ಮಾನ್ಯತೆ ಪಡೆದಿರುವ ಅಲ್ಲಿ ನಡೆದ ಬೆಳವಣಿಗೆಗಳು ಅಂತಹ ಅನುಮಾನಗಳನ್ನು ದಟ್ಟವಾಗಿಸಿದೆ. ಖುದ್ದು ಐಪಿಎಲ್ ಬೆಟ್ಟಿಂಗ್‌ನ್ನು ಪ್ರೋತ್ಸಾಹಿಸಿತು! ‘ಸಿಕ್ಸ್ ಅಪ್’ ಹೆಸರಿನ ಎಸ್‌ಎಂಎಸ್ ಸ್ಪರ್ಧೆಯ ಮೂಲಕ ಐಪಿಎಲ್‌ನ ಅಧಿಕೃತ ವೆಬ್‌ಸೈಟ್ ಆಟ ಆರಂಭಿಸಿತು. ಇದರಲ್ಲಿ ಮೊಬೈಲಿಗ ಮುಂದಿನ ಓವರ್‌ನ ಆರು ಎಸೆತಗಳಲ್ಲಿ ಬರುವ ರನ್‌ಗಳನ್ನು ಅಂದಾಜಿಸಿ ಎಸ್‌ಎಂಎಸ್‌ನ್ನು ಕಳುಹಿಸಬೇಕು. ಸರಿಹೊಂದಿದರೆ ಝಣ ಝಣ ದುಡ್ಡು. ಈ ದುಬಾರಿ ಎಸ್‌ಎಂಎಸ್‌ನಿಂದ ಬರುವ ಹಣದ ಅರ್ಧ ಮೊತ್ತ ಐಪಿಎಲ್‌ಗೆ. ಭಾರತದಲ್ಲಿ ಬೆಟ್ಟಿಂಗ್ ಕಾನೂನುಬಾಹಿರವಾದುದರಿಂದ ಐಪಿಎಲ್ ಚಾಣಾಕ್ಷತೆಯಿಂದ ಜೂಜುಕೋರರನ್ನು ಉತ್ತೇಜಿಸಿತು. ಕೇಂದ್ರದ ಅಂದಿನ ಕ್ರೀಡಾ ಸಚಿವ ಎಂ.ಎಸ್.ಗಿಲ್ ಈ ಕ್ರಮವನ್ನು ಖಂಡಿಸಿದ ಮೇಲೆ ಐಪಿಎಲ್ ಜೂಜು ನಿಂತಿತು. ಸದರಿ ಜೂಜಿನ ನಿರ್ವಾಹಕ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ. ಬುಕ್ಕಿಗಳ ಸಂಪರ್ಕವಿದ್ದುದು ರುಜುವಾತಾಗಿರುವ ಮಾರ್ಕ್‌ರ ಸಹೋದರ! ಇರಲಿ, ಜೂಜು ನಿಂತಿತು, ಮ್ಯಾಚ್ ಫಿಕ್ಸಿಂಗ್ ಅನುಮಾನಗಳು ಮುಂದುವರೆಯಿತು!
ಸ್ವತಃ ಐಪಿಎಲ್ ವ್ಯವಸ್ಥಾಪಕ ಲಲಿತ್ ಮೋದಿಯವರಿಗೆ ಅಂತಹ ಶಂಕೆ ಕಾಡಿದೆ. ಕೊಲ್ಕತ್ತಾ ನೈಟ್ ರೈಡರ್‍ಸ್‌ನ ಯಶಸ್ವಿ ಬ್ಯಾಟ್ಸ್‌ಮನ್ ಬ್ರಾಡ್ ಹಾಡ್ಜ್‌ರನ್ನು ಇದ್ದಕ್ಕಿದ್ದಂತೆ ಬೆಂಗಳೂರು ಎದುರಿನ ಪಂದ್ಯದಿಂದ ಕೈಬಿಟ್ಟಾಗ ಮೋದಿಯವರಿಗೇ ಸಂಶಯ ಬಂದಿತ್ತು. ಅತ್ತ ಹಾಡ್ಜ್ ಪಂದ್ಯ ವೀಕ್ಷಿಸಲು ಅತಿಥಿಗಳ ಕ್ಯಾಬಿನ್‌ನಲ್ಲಿ ಕೂತಿದ್ದು ಏಕೆ? ರೈಡರ್‍ಸ್‌ನ ಸಿಇಓ ಜಾಯ್ ಭಟ್ಟಾಚಾರ್ಯರ ಸ್ಪಷ್ಟೀಕರಣದ ನಂತರವೂ ವಾತಾವರಣ ತಿಳಿಯಾಗಿಲ್ಲ.
ಪಂಜಾಬ್ ಕಿಂಗ್ಸ್ ಇಲೆವೆನ್ ಮತ್ತು ಡಕೆನ್ ಚಾರ್ಜರ್‍ಸ್ ಪಂದ್ಯದ ಸಮಯದಲ್ಲಿ ಹಮಿದ್ ಬಾಂಜೋ ಖಾಸಿಮ್ ಪ್ರತಿಷ್ಠಿತರಿಗೆಂದು ಮೀಸಲಾದ ಆವರಣದಲ್ಲಿ ಕುಳಿತಿದ್ದುದು ಹಲವರ ಹುಬ್ಬೇರುವಂತೆ ಮಾಡಿತ್ತು. ಈ ಬಾಂಜೋ ಹಿಂದೆ ದ.ಆಫ್ರಿಕಾದ ನಾಯಕರಾಗಿದ್ದ ಹ್ಯಾನ್ಸಿ ಕ್ರೋನಿಯೇರನ್ನು ಮ್ಯಾಚ್ ಫಿಕ್ಸಿಂಗ್ ಜಾಲಕ್ಕೆ ಎಳೆದೊಯ್ದವರು. ಇನ್ನೊಬ್ಬ ಆರೋಪಿ ಆಟಗಾರ ಹರ್ಷೆಲ್ ಗಿಬ್ಸ್ ಇದೇ ಐಪಿಎಲ್‌ನಲ್ಲಿ ಆಡುತ್ತಿದ್ದುದೂ ಗಮನಾರ್ಹ. ಇವತ್ತು ಜೋಹಾನ್ಸ್‌ಬರ್ಗ್‌ನಲ್ಲಿ ಒಂದು ಸಣ್ಣ ಅಂಗಡಿ ಮಾಡಿಕೊಂಡಿದ್ದಾರಷ್ಟೇ ಎಂಬ ಅಂಶ ಜಾಂಬೋ ಪರವಾಗಿ ನಿಲ್ಲುವುದಿಲ್ಲ. ಐಪಿಎಲ್ ಇಂತಹವರಿಗೆ ಪ್ರವೇಶವನ್ನೇ ನಿರಾಕರಿಸಬೇಕಿತ್ತು.
ಆದರೆ ಐಪಿಎಲ್ ಪ್ರವೇಶ ನಿರಾಕರಿಸಿದ್ದು ಐಸಿಸಿಯ ಆಂಟಿ ಕರಪ್ಶನ್ ಮತ್ತು ಸೆಕ್ಯುರಿಟಿ ಯೂನಿಟ್ ಎಸಿಎಸ್‌ಯುಗೆ! ಕಾನೂನಿನ ಅನ್ವಯ, ಖಾಸಗಿ ಟೂರ್ನಿಯೊಂದಕ್ಕೆ ಐಸಿಸಿ ನೇರವಾಗಿ ತನ್ನ ಭ್ರಷ್ಟಾಚಾರ ವಿರೋಧಿ ಪಡೆಯನ್ನು ನೇಮಿಸುವಂತಿಲ್ಲ. ಅಂತಹ ವೇಳೆ ಟೂರ್ನಿಯ ನಿಯೋಜಕರ ಒಪ್ಪಿಗೆ ಬೇಕು. ಲಲಿತ್ ಮೋದಿ ಸ್ಪಷ್ಟವಾಗಿ ಎಸಿಎಸ್‌ಯುವನ್ನು ವಿರೋಧಿಸಿದ್ದಾರೆ. ಸ್ವಾತಂತ್ರ್ಯದ ಹರಣದ ಕಾರಣವನ್ನು ಅವರು ನೀಡಿದ್ದಾರಾದರೂ ಅವರ ನಡೆ ಚರ್ಚಾಸ್ಪದ.
ಇದಕ್ಕೆ ಇನ್ನೊಂದು ವ್ಯಾಖ್ಯಾನವೂ ಐಪಿಎಲ್ ಕಡೆಯಿಂದ ಬಂದಿದೆ. ಎಸಿಎಸ್‌ಯು ಅಧ್ಯಕ್ಷ ಸರ್ ಪೌಲ್ ಕಾಂಡೋನ್‌ರ ಪಡೆ ನಿರೀಕ್ಷಣೆಗೆ ಪಡೆಯುವ ಮೊತ್ತ ೧.೨ ಮಿಲಿಯನ್ ಡಾಲರ್. ಇದು ತುಂಬಾ ದುಬಾರಿ ಎಂಬುದು ಬಿಸಿಸಿಐನ ಕಾರ್ಯಕಾರಿ ಸಮಿತಿಯ ಚಿಂತನೆ. ಹಾಗಾಗಿ ಅದು ಹತ್ತು ಮಂದಿ ನಿವೃತ್ತ ಪೋಲೀಸ್ ಹಾಗೂ ಸೈನ್ಯಾಧಿಕಾರಿಗಳ ನೆರವಿನಿಂದ ಭ್ರಷ್ಟಾಚಾರ ತಡೆ ಪಡೆಯನ್ನು ನಿಯೋಜಿಸಿತ್ತು. ಅಷ್ಟಕ್ಕೂ ಎಸಿಎಸ್‌ಯು ಕೇಳುವ ಮೊತ್ತ ದುಬಾರಿ ಎಂಬುದೇ ಮಿಥ್ಯೆ. ಅದು ತನ್ನದೆ ಕ್ಲೋಸ್ಡ್ ಸರ್ಕ್ಯೂಟ್ ಟಿವಿ ಕ್ಯಾಮರಾಗಳನ್ನು ಎಲ್ಲೆಡೆ ಅಳವಡಿಸುತ್ತದೆ. ತನ್ನ ಕಣ್ಣಂಚಿನಲ್ಲೇ ಆಟಗಾರರು, ಕೋಚ್ ಮತ್ತು ಫ್ರಂಚೈಸಿಗಳ ಇತರರು ಚಲನವಲನ ನಡೆಸುವಂತೆ ನೋಡಿಕೊಳ್ಳುತ್ತದೆ. ಆಟಗಾರರು ಅನಾಮಿಕರನ್ನು ಸಂಪರ್ಕಿಸದಂತೆ, ಅನುಮಾನಾಸ್ಪದ ವ್ಯಕ್ತಿ, ನಡೆಗಳನ್ನು ೨೪ ಘಂಟೆ ಪರಿಶೀಲಿಸುತ್ತದೆ. ಆಟಗಾರರ ಮೇಲಂತೂ ಹದ್ದಿನ ಕಣ್ಣಿನ ಕಾವಲು ಎಂದರೂ ಸರಿಯೇ. ಇವೆಲ್ಲ ಬಾರೀ ವೆಚ್ಚವನ್ನೇ ನಿರೀಕ್ಷಿಸುತ್ತದೆ. ಪರಿಶೀಲಿಸಬೇಕಾದುದೆಂದರೆ, ಬಿಸಿಸಿಐನ ಕಳೆದ ವರ್ಷದ ಲಾಭ ೨೦೦ ಮಿಲಿಯನ್ ಡಾಲರ್. ಐಪಿಎಲ್ ಚೊಚ್ಚಲ ಆವೃತ್ತಿಯಿಂದಲೇ ಬಂದ ನಿಶ್ಚಿತ ಲಾಭ ೧೦ ಮಿಲಿಯನ್. ೧.೨ ಮಿ. ಡಾಲರ್ ಖರ್ಚು ಮಾಡಿದ್ದರೂ ನಷ್ಟದ ಮಾತೆಲ್ಲಿ?
ಭ್ರಷ್ಟತೆಯ ಸೋಂಕು ತಗುಲಿದರೆ ಮತ್ತೆ ಬಚಾಯಿಸುವುದು ಬಿಸಿಸಿಐಗೇನೇ ಕಷ್ಟ. ಈ ಅರಿವು ತಡವಾಗಿ ಆದಂತಿದೆ. ಟೂರ್ನಿ ಆರಂಭಕ್ಕೆ ಎರಡು ದಿನ ಮೊದಲು ಬಿಸಿಸಿಐ ಎಸಿಎಸ್‌ಯುನ ನೆರವು ಕೇಳಿದೆ. ಕೇವಲ ೪೮ ಘಂಟೆಗಳ ಸಮಯಾವಕಾಶದಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಪೌಲ್ ಕಾಂಡೋನ್ ಬೇಡಿಕೆಯನ್ನು ತಳ್ಳಿಹಾಕಿದ್ದಾರೆ. ಹಾಗಾಗಿ ಎಸಿಎಸ್‌ಯುನ ಸ್ಥಳೀಯ ಅಧಿಕಾರಿ ಅರ್ರಿ ಡೆ ಬೀರ್ ತಮ್ಮ ದಕ್ಷಿಣ ಆಫ್ರಿಕಾ ಘಟಕದಿಂದ ಮೇಲ್ವಿಚಾರಣೆ ನಡೆಸಿದ್ದು ವರದಿಯನ್ನು ದುಬೈನ ಐಸಿಸಿ ಕೇಂದ್ರಕ್ಕೆ, ಲಂಡನ್‌ನ ಎಸಿಎಸ್‌ಯು ಮುಖ್ಯ ಕಛೇರಿಗೆ ಕಳಿಸಿದ್ದಾರಂತೆ. ಗಟ್ಟಿ ಕೇಳಿದರೆ, ತಮ್ಮ ವ್ಯಾಪಾರಕ್ಕೆ ಧಕ್ಕೆಯಾದೀತೆಂದು ಬರಬಹುದಾದ ಮ್ಯಾಚ್ ಫಿಕ್ಸಿಂಗ್ ಆರೋಪಗಳನ್ನೆಲ್ಲ ಮೋದಿ ಬಳಗ ಸಾರಾಸಗಟಾಗಿ ತಳ್ಳಿಹಾಕದೇ ಇರದು.
ಇದೇ ಲಲಿತ್‌ರ ಮೆದುಳಿನ ಕೂಸು ಏಳೂವರೆ ನಿಮಿಷಗಳ ‘ತಂತ್ರಗಾರಿಕೆ ವಿರಾಮ’. ಮ್ಯಾಚ್ ಫಿಕ್ಸಿಂಗ್ ನಡವಳಿಕೆಗೆ ರಾಜಭೋಜನವಿದ್ದಂತೆ. ಈ ವೇಳೆ ಆಟಗಾರರು ತಂಡದ ವ್ಯವಸ್ಥಾಪಕರು, ಐಪಿಎಲ್ ನಿರ್ವಾಹಕರು, ಟಿವಿ ತಂತ್ರಜ್ಞರು, ಇನ್ನಿತರ ಎಲ್ಲ ವರ್ಗದ ಜನರಿಗೆ ತೆರೆದುಕೊಳ್ಳುವುದರಿಂದ ಏನು ಅನಾಹುತವಾಗುತ್ತದೆಂದು ಊಹಿಸುವುದೇ ಕಷ್ಟ ಎಂಬ ಅಭಿಪ್ರಾಯವಿದೆ. ಎಸಿಎಸ್‌ಯುನ ಕಾಂಡೋನ್ ಕೂಡ ಈ ತಂತ್ರವನ್ನು ವಿರೋಧಿಸಿದ್ದಾರೆ. ಅಷ್ಟೇಕೆ, ಪಂದ್ಯಾವಳಿ ಆರಂಭಕ್ಕೆ ಮುನ್ನವೇ ಓರ್ವ ಬುಕ್ಕಿ ಹೇಳುತ್ತಿದ್ದ ಮಾತು ನೆನಪಾಗುತ್ತದೆ, "ತಂಡವೊಂದು ಸಲೀಸಾಗಿ ಸಾಗುತ್ತಿರುವಾಗ ಪ್ರಮುಖ ಬ್ಯಾಟ್ಸ್‌ಮನ್ ಔಟಾದ ತಕ್ಷಣ ೧೭ ರನ್‌ಗಳ ಆಚೀಚೆಗೆ ಏಳು ವಿಕೆಟ್ ಬಿದ್ದೀತೆಂದರೆ ಆ ಪಂದ್ಯವನ್ನು ಖರೀದಿಸಲಾಗಿತ್ತು ಎಂಬುದು ಖಚಿತ" ಡೆಕ್ಕನ್ ಚಾರ್ಜರ್‍ಸ್‌ನ ವಿರುದ್ಧ ಮೊದಲ ೧೦ ಓವರ್‌ಗಳಲ್ಲಿ ವಿಕೆಟ್ ನಷ್ಟಕ್ಕೆ ೮೪ ರನ್ ಗಳಿಸಿದ್ದ ಸಚಿನ್ ಮುಂಬೈ ಮುಂದಿನ ೫೦ ರನ್ ಗಳಿಸುವಷ್ಟರಲ್ಲಿ ಆರು ವಿಕೆಟ್ ಕಳೆದುಕೊಂಡು ೧೨ ರನ್‌ನಿಂದ ಸೋತರೆ ಅನುಮಾನ, ಅನುಮಾನ!
ವಾಸ್ತವವಾಗಿ, ಟ್ವೆಂಟಿ೨೦ ಕ್ರಿಕೆಟ್ ಪಂದ್ಯ, ಆಟಗಾರರನ್ನು ಖರೀದಿಸುವ ಬುಕ್ಕಿಗಳ ಫೇವರಿಟ್. ಇಲ್ಲಿ ಒಬ್ಬ ಬೌಲರ್‌ನ ಒಂದು ಓವರ್‌ನ್ನು ೨೦-೨೫ ರನ್ ನೀಡುವಂತೆ ನಿರ್ದೇಶೀಸಿದರೆ ಫಲಿತಾಂಶ ಬದಲಾಗುತ್ತದೆ. ಬಾಂಗ್ಲಾದ ಮುರ್ತಫಾ ಮುರ್ತಜೆ ೧೯ನೇ ಓವರ್‌ನಲ್ಲಿ ೨೬ ರನ್ ಕೊಟ್ಟರೆ ಸಾಕು! ಅವತ್ತು ಹೈದರಾಬಾದ್‌ನ ಡೆಕ್ಕನ್ ಚಾರ್ಜರ್‍ಸ್ ಈ ರೀತಿ ಗೆದ್ದರೆ ಪತ್ತೆದಾರರು ಎಚ್ಚರಗೊಳ್ಳಲೇಬೇಕು. ಒಂದೊಮ್ಮೆ ಬ್ಯಾಟ್ಸ್‌ಮನ್ ಆರು ಎಸೆತಗಳಲ್ಲಿ ತಡಕಾಡಿದರೂ ಪಂದ್ಯದ ದಿಕ್ಕು ಬದಲಾದಂತೆ ಅಲ್ಲವೇ?
ಕ್ರಿಕೆಟ್ ಆಸಕ್ತರು ಈ ವರ್ಷದ ಐಪಿಎಲ್‌ನಿಂದ ಇಂತಹ ಪಂದ್ಯಗಳ ಪಟ್ಟಿ ತೆರೆದು ವಿಶ್ಲೇಷಿಸಿದರೆ ಅನಾಹುತಕಾರಿ ಚಿತ್ರಣ ಕಂಡೀತು, ಬೆಚ್ಚದಿರಿ. ಈ ಕ್ರಿಕೆಟ್ ಯಾವತ್ತೋ ಹಳಿ ತಪ್ಪಿದೆ!



-ಮಾವೆಂಸ

 
200812023996