ಶುಕ್ರವಾರ, ಜನವರಿ 30, 2009

ಉಫ್ ! ಇಷ್ಟೊಂದು ಮಾಹಿತಿ!


 ಮೊಬೈಲ್ ಟಾಕ್‌ -3
-----------------------------------------------------------------------------------------------------------
ಸಾಗರದ ಬಳಕೆದಾರರ ವೇದಿಕೆಯು ಹೊಸದೊಂದು ಪುಸ್ತಕವನ್ನು ಪ್ರಕಟಿಸಿದೆ. ಅದನ್ನು ಓದಿದ ನೀವು ಇಷ್ಟೊಂದು ಮಾಹಿತಿ ಇದರಲ್ಲಿದೆಯಲ್ಲಾ ! ಎಂದು ಉದ್ಗರಿಸದಿದ್ದರೆ, ಕೇಳಿ. 

* ಗ್ರಾಹಕ ಕಾಯ್ದೆ, ಮಾಹಿತಿ ಹಕ್ಕಿನ ಕಾಯ್ದೆ, ಬ್ಯಾಂಕಿಂಗ್ ಒಂಬುಡ್ಸ್‌ಮನ್, ಸರ್ಕಾರಿ ಇಲಾಖೆಗಳು, ದೂರವಾಣಿ, ವಿದ್ಯುತ್ - ಹೀಗೆ ಕಾನೂನು-ನಿಯಮಗಳ ಲೆಕ್ಕದಲ್ಲಿ ಇದು ವಿವರಗಳ ಖಜಾನೆ.
* ಪುಸ್ತಕದಲ್ಲಿ ಮಾಹಿತಿ ಕೇಳಲು ಅರ್ಜಿ ಸಲ್ಲಿಸಬೇಕು, ಬಳಕೆದಾರರ ನ್ಯಾಯಾಲಯಕ್ಕೆ ದೂರು ನೀಡಬೇಕು, ಒಂಬುಡ್ಸ್‌ಮನ್ ವಿಳಾಸ, ದೂರವಾಣಿ ದೂರು ಸ್ವೀಕಾರಕ್ಕಿರುವ ಅಧಿಕಾರಗಳ ವಿಳಾಸ; ದೂರವಾಣಿ ಸಂಖ್ಯೆ ; ಅತ್ಯಗತ್ಯವಾಗಿ ಬೇಕಾದ ಅರ್ಜಿ ಫಾರಂಗಳ ನಕಲುಗಳ, ವಿಳಾಸಗಳು, ಫೋನ್ ನಂಬರುಗಳು ಇದರಲ್ಲಿ ಲಭ್ಯ. 

* ವಿಶೇಷ ಆಕಾರದ ೬೮ ಪುಟಗಳ ಹೆಸರೇ ಚೆಂದ ’ದೂರಿಗೊಂದು ದಾಟುಗೋಲು’ 

* ಈ ಪುಸ್ತಕ ಆಸಕ್ತರಿಗೂ ಖರೀದಿಗೆ ಸಿಗುತ್ತದೆ. ಪ್ರತಿಯೊಂದರ ಬೆಲೆ ಕೇವಲ ೪೦ ರೂಪಾಯಿ. ಆಸಕ್ತರು ಮನಿಯಾರ್ಡರ್, ಡಿಡಿ ಮೂಲಕ ಹಣ ಪಾವತಿಸಿದರೆ ಪುಸ್ತಕವನ್ನು ಕಳಿಸುವ ಜವಾಬ್ದಾರಿ ಸಾಗರದ ಬಳಕೆದಾರರ ವೇದಿಕೆಯದು. ಹಣವನ್ನು ಬಳಕೆದಾರರ ವೇದಿಕೆ(ರಿ), ಬ್ರಾಸಂ, ನೆಹರೂ ಮೈದಾನ, ಸಾಗg. ೫೭೭೪೦೧ ವಿಳಾಸಕ್ಕೆ ಕಳುಹಿಸಿ. 

ಅದರ ಒಂದು ಲೇಖನ ಇಲ್ಲಿ ನಿಮಗಾಗಿ. ಅದೂ ಈ ಬ್ಲಾಗ್‌ನ ಮೊಬೈಲ್ ಟಾಕ್‌ನ ಮೂರನೇ ಕಂತಾಗಿ.
---------------------------------------------------------------------------------------------

ದೂರವಾಣಿಗೆ ಸಂಬಂಧಿಸಿದ ನಿಯಮಗಳನ್ನು ರೂಪಿಸಿ ಜಾರಿಗೊಳಿಸುವುದು ೧೯೯೭ರಿಂದ ಭಾರತ ಸರ್ಕಾರದ ಕೆಲಸವಲ್ಲ. ಸ್ವತಂತ್ರ ಮತ್ತು ಸ್ವಾಯತ್ತ ಸ್ಥಾನಮಾನಗಳಿರುವ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ಈ ಕೆಲಸ ಮಾಡುತ್ತದೆ. ಅದು ಗ್ರಾಹಕರ ಬಹುದಿನದ ಬೇಡಿಕೆಯಾಗಿದ್ದ ದೂರು ಪರಿಹಾರ ನಿಯಮಾವಳಿಗಳನ್ನು ಜಾರಿಗೆ ತಂದು ಆದೇಶ ಹೊರಡಿಸಿದೆ. ಇದು ೨೦೦೮ರ ಮೇ ೪ರಿಂದ ಅನುಷ್ಠಾನಗೊಂಡಿದೆ. 
ಟೆಲಿಕಾಂ ಗ್ರಾಹಕರಿಗೆ ತಮಗೇನಾದರೂ ಸಮಸ್ಯೆಯಾದರೆ ಗ್ರಾಹಕ ನ್ಯಾಯಾಲಯವನ್ನು ಆಶ್ರಯಿಸುವುದನ್ನು ಬಿಟ್ಟು ಈವರೆಗೆ ಬೇರೆ ಮಾರ್ಗವಿರಲಿಲ್ಲ. ದೂರವಾಣಿ ವಲಯಕ್ಕೇ ಪ್ರತ್ಯೇಕವಾದ ದೂರು ಪರಿಹಾರ ವ್ಯವಸ್ಥೆಯಾಗಲಿ, ನ್ಯಾಯ ನೀಡುವ ವೇದಿಕೆಯಾಗಲಿ ಇರಲಿಲ್ಲ. ಈ ಗಂಭೀರ ಲೋಪದ ಬಗ್ಗೆ ದೇಶದ ಪ್ರಮುಖ ಗ್ರಾಹಕ ಸಂಘಟನೆಗಳು ಟ್ರಾಯ್ ಗಮನ ಸೆಳೆದಿದ್ದರು, ಅಂತಹ ಒಂದು ವ್ಯವಸ್ಥೆ ಸ್ಥಾಪಿಸುವಂತೆ ಒತ್ತಾಯಿಸಿದ್ದವು.  ಇದೀಗ ಅವುಗಳ ಒತ್ತಾಯ ಫಲ ನೀಡಿದೆ. ಅಂತಹ ಒಂದು ವ್ಯವಸ್ಥೆಯನ್ನು ಟ್ರಾಯ್ ತಡವಾಗಿಯಾದರೂ ಜಾರಿಗೆ ತಂದು ದೂರಿ ನಿಂದ ಸಂತ್ರಸ್ಥಗೊಂಡ ಗ್ರಾಹಕರ ನೆರವಿಗೆ ಬಂದಿದೆ.

ದೂರು ನಿವಾರಣೆಗೆ ಕಾಲ್ ಸೆಂಟರ್
 ದೇಶದೊಳಗೆ ಕಾರ್ಯನಿರತವಾಗಿರುವ ಎಲ್ಲಾ ದೂರವಾಣಿ ಕಂಪೆನಿಗಳು  ಕಾಲ್ ಸೆಂಟರ್‌ನ್ನು ಸ್ಥಾಪಿಸಲೇಬೇಕು. ಅದು ಈಗ ಕಡ್ಡಾಯ.  ಹಾಗೆಂದು ಭಾರತೀಯ  ದೂರ ಸಂಪರ್ಕ ನಿಯಂತ್ರಣ  ಪ್ರಾಧಿಕಾರವು ನಿಯಮ ಮಾಡಿ ಜಾರಿಗೆ ತಂದಿದೆ. ಈ ಕಾಲ್‌ಸೆಂಟರುಗಳ ಕೆಲಸ ಗ್ರಾಹಕರ ದೂರು ಸ್ವೀಕರಿಸಿ, ನಿರ್ದಿಷ್ಟ ಕಾಲಮಿತಿಯಲ್ಲಿ ಬಗೆಹರಿಸುವುದು. ಈ ನಿಯಮದ ಪೂರ್ಣ ಮಾಹಿತಿ ಇಂತಿದೆ.
೧. ಪ್ರತಿ ಟೆಲಿಕಾಂ ಸೇವೆ ಪೂರೈಕೆದಾರನೂ ತನ್ನ ಗ್ರಾಹಕರ ದೂರು ನಿವಾರಣೆಗೆ ಕಾಲ್‌ಸೆಂಟರ್‌ನ್ನು ಸ್ಥಾಪಿಸಬೇಕು. ಈ ಕಾಲ್‌ಸೆಂಟರ್ ಗ್ರಾಹಕರಿಗೆ ೩೬೫ ದಿನದ ೨೪ ಗಂಟೆಯೂ ಲಭ್ಯವಾಗುವಂತಿರಬೇಕು.
೨. ಇಲ್ಲಿ ಟೆಲಿಕಾಂ ಸೇವೆ ಪೂರೈಕೆದಾರರೆಂದರೆ ಕೆಳಕಂಡ ಸೇವೆ ಕೊಡುವವರು ಬರುತ್ತಾರೆ;
ಎ) ಸ್ಥಿರ ದೂರವಾಣಿ ಕಂಪೆನಿಗಳು
ಬಿ) ಯುನಿಫೈಡ್ ಅಕ್ಸೆಸ್ ಸೇವಾದಾರರು
ಸಿ) ಮೊಬೈಲ್ ಕಂಪೆನಿಗಳು
ಡಿ) ಬ್ರಾಡ್‌ಬ್ಯಾಂಡ್ ಸೇವೆ ಒದಗಿಸುತ್ತಿರುವ ಕಂಪೆನಿಗಳು (ಆದರೆ ಕಂಪೆನಿಯೊಂದರ ಬ್ರಾಡ್ ಬ್ಯಾಂಡ್ ಕಂಪೆನಿಗಳ ಸಂಖ್ಯೆ೧೦ ಸಾವಿರದೊಳಗಿದ್ದರೆ ಈ ನಿಯಮ ಅನ್ವಯವಾಗದು.)
ಇ) ೫ ಕೋಟಿ ರೂ.ಗಳಿಗಿಂತ ಜಾಸ್ತಿ ಆರ್ಥಿಕ ವಹಿವಾಟಿರುವ ಇಂಟರ್‌ನೆಟ್ ಸೇವಾ ಪೂರೈಕೆ ಕಂಪೆನಿಗಳು.
೩. ಟೆಲಿಕಾಂ ಸೇವೆ ಕೊಡುತ್ತಿರುವ ಕಂಪೆನಿಗಳ ಪಟ್ಟಿಯಲ್ಲಿ ಖಾಸಗಿ ಕಂಪೆನಿಗಳ ಜೊತೆಗೆ ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್‌ಗಳು ಕೂಡಾ ಸೇರುತ್ತವೆ.
೪. ಒಂದೇ ಕಂಪೆನಿ ಬೇರೆ ಬೇರೆ ತರಹದ ಸೇವೆ - ಅಂದರೆ ಇಂಟರ್‌ನೆಟ್, ಮೊಬೈಲ್ ಇತ್ಯಾದಿ ಕೊಡುತ್ತಿದ್ದರೆ ಆಯಾಯ ಸೇವೆಗೆ  ಪ್ರತ್ಯೇಕವಾಗಿ  ಒಂದೊಂದು ಕಾಲ್‌ಸೆಂಟರ್ ಸ್ಥಾಪಿಸಬಹುದು.
೫. ಟೆಲಿಕಾಂ ಕಂಪೆನಿ ಹೀಗೆ ಸ್ಥಾಪಿಸುವ  ಕಾಲ್‌ಸೆಂಟರ್‌ನಲ್ಲಿ ಕೆಳಕಂಡ ಸವಲತ್ತುಗಳಿರಲೇಬೇಕು;
ಅ. ತಕ್ಕ ಸಿಬ್ಬಂದಿ  ಮತ್ತು ಮೂಲಸೌಕರ್ಯ.
ಆ. ಉಚಿತ ದೂರವಾಣಿ ಸೌಲಭ್ಯ- ಅಂದರೆ ಸಂತ್ರಸ್ಥ ಗ್ರಾಹಕರು ಕರೆ ಮಾಡಿದರೆ ಆ ಕರೆಯ ಶುಲ್ಕ ಅವನಿಗೆ ಬೀಳದಂತಿರುವ ದೂರವಾಣಿ ನಂಬರ್ ಕೊಡಬೇಕು.
ಇ. ಸೇವಾ ಗುಣಮಟ್ಟ ಕುರಿತು ಟ್ರಾಯ್ ಹೊರತಂದಿರುವ ನಿಯಮಕ್ಕೆ ಅನುಗುಣವಾಗಿ ದೂರು ತರುವ ಗ್ರಾಹಕನಿಗೆ ಸ್ಪಂದಿಸಬೇಕು.
ಈ. ಕಾಲ್ ಸೆಂಟರ್‌ಗೆ ಸಂಪರ್ಕಿಸುವ ಯಾವುದೇ ಕರೆ ಯಾ ಷಾರ್ಟ್‌ಮೆಸೇಜ್ ಸರ್ವಿಸ್ (ಎಸ್‌ಎಂಎಸ್)ಗಳಿಗೆ ಶುಲ್ಕ ಬೀಳದಂತೆ ನೋಡಿಕೊಳ್ಳಬೇಕು.
ಉ. ಪ್ರತಿಯೊಬ್ಬ ಸೇವಾ ಪೂರೈಕೆದಾರನು ಗ್ರಾಹಕರಿಗೆ ನೆರವೀಯುವ ಕಾಲ್‌ಸೆಂಟರ್ ಸ್ಥಾಪಿಸಿದ ನಂತರ  ಸದರಿ ಸುದ್ದಿಯನ್ನು   ಆತ ಸೇವೆ ಒದಗಿಸು ತ್ತಿರುವ  ಪ್ರದೇಶದಲ್ಲಿ ಪ್ರಕಟವಾಗುತ್ತಿರುವ  ಒಂದು ಇಂಗ್ಲಿಷ್ ಹಾಗೂ ಒಂದು ಕನ್ನಡ ಸುದ್ದಿ  ಪತ್ರಿಕೆಯಲ್ಲಿ ಜಾಹಿರಾತು ಕೊಡುವ ಮೂಲಕ ಜನರ ಗಮನಕ್ಕೆ ತರತಕ್ಕದ್ದು. ಆ ಜಾಹಿರಾತಿನಲ್ಲಿ ಉಚಿತ ದೂರವಾಣಿ ನಂಬರನ್ನು ಸಹ ಕೊಡಬೇಕು. ಕಾಲಕ್ರಮದಲ್ಲಿ ಈ ಸಂಖ್ಯೆ ಬದಲಾದರೆ ಅದನ್ನು ಸಹ ಸಾರ್ವಜನಿಕರ ಗಮನಕ್ಕೆ ತರತಕ್ಕದ್ದು.
ಸಾರ್ವಜನಿಕ ದೂರುಗಳನ್ನು ಕಾಲ್ ಸೆಂಟರ್ ನಿರ್ವಹಿಸುವ ಬಗೆ 
ಮೊದಲಲ್ಲಿ ಹೇಳಿದ ಸ್ಥಿರ, ಮೊಬೈಲ್ ದೂರವಾಣಿ, ಇಂಟರ್‌ನೆಟ್, ಬ್ರಾಡ್‌ಬ್ಯಾಂಡ್ ಸೇವಾಪೂರೈಕೆದಾರರು ಕೆಳಕಂಡ ರೀತಿಯಲ್ಲಿ ದೂರುಗಳನ್ನು ನಿರ್ವಹಿಸಬೇಕು,
೧. ಗ್ರಾಹಕರು ಕೊಟ್ಟ ದೂರನ್ನು ದಾಖಲಿಸಿಕೊಳ್ಳಬೇಕು. ಹಾಗೆ ದಾಖಲಿಸಿಕೊಳ್ಳುವಾಗ ಪ್ರತಿ ದೂರಿಗೆ ಡಾಕೆಟ್ ನಂಬರ್ ಕೊಡಬೇಕು. ದೂರು ಬರೆದುಕೊಳ್ಳುವಾಗ, ಈ ಡಾಕೆಟ್ ನಂಬರನ್ನು ತಾರೀಕು, ಸಮಯದ ಸಹಿತ ದೂರುದಾರ ಗ್ರಾಹಕನಿಗೆ ತಿಳಿಸಬೇಕು. ಆ ದೂರಿಗೆ ಸಂಬಂಧಿಸಿದ ದಾಖಲೆ ಕೇಳಬೇಕು.
  ಗ್ರಾಹಕನಿಗೆ ತಿಳಿಸಬೇಕಾದದ್ದು:
ಅ) ದೂರನ್ನು ನಿರ್ವಹಿಸುವ ನೋಡಲ್ ಆಫೀಸರ್‌ನ  ಹೆಸರು, ವಿಳಾಸ, ದೂರವಾಣಿ ನಂಬರ್
ಆ) ದೂರಿನ ಬಗ್ಗೆ ತೆಗೆದುಕೊಂಡ ತೀರ್ಮಾನ.
ಹಾಗೆ ತಿಳಿಸುವಾಗ :
ಎ) ದೂರವಾಣಿ/ ಇಂಟರ್‌ನೆಟ್ ಮುಖೇನ ದೂರುದಾರರನ್ನು ಸಂಪರ್ಕಿಸಬೇಕು.
ಬಿ) ದೂರು ನಿರ್ವಹಣೆಯ ಸಮಯ ಹೇಳಬೇಕು.
ಅವಧಿ ೨೦೦೫ ಜುಲೈ ೧ರಂದು ಟ್ರಾಯ್ ಹೊರಡಿಸಿದ ನಿಯಮದಲ್ಲಿ ಇಲ್ಲದ ಸೇವಾ ವೈಫಲ್ಯಗಳಿಗೆ  ಅನ್ವಯಿಸುತ್ತದೆ.
೨. ಯಾವುದೇ ನಿಯಮದಲ್ಲಿ ಕಾಣದ ಸೇವಾದೋಷಗಳಿಗೆ ಸಂಬಂಧಿಸಿದ ದೂರನ್ನು ೭ ದಿನಗಳಲ್ಲಿ ಇತ್ಯರ್ಥ ಪಡಿಸಬೇಕು.
೩. ಬೇರಾವುದೇ ಕಾನೂನು ಯಾ ನಿಯಮದಲ್ಲಿ ದೂರು ಪರಿಹಾರಕ್ಕೆ ಸಮಯ ಮಿತಿ ಇದ್ದಲ್ಲಿ ಆ ಅವಧಿಯಲ್ಲಿ ಅಂತಹ ದೂರನ್ನು ಬಗೆಹರಿಸ ಬೇಕು.

ನೋಡಲ್ ಆಫೀಸರ್‌ಗಳು ದೂರು ಬಗೆಹರಿಸುವ ವಿಧಾನ

೧. ನೋಡಲ್ ಆಫೀಸರ್‌ಗಳ ನೇಮಕಾತಿ :
ಪ್ರತಿ  ಸೇವಾ ವಲಯದಲ್ಲಿ ಎಲ್ಲಾ ಸೇವಾ ಪೂರೈಕೆದಾರರು  ನೋಡಲ್  ಆಫೀಸರ್‌ಗಳನ್ನು ನೇಮಿಸಬೇಕು. ಸೇವೆ ಪೂರೈಸುವ ಕಂಪನಿಗಳು ತಮ್ಮ ಸೇವೆಯ ಸ್ವರೂಪಕ್ಕೆ (ಅಂದರೆ ಸ್ಥಿರ ದೂರವಾಣಿ ಯಾ  ಮೊಬೈಲ್ ದೂರವಾಣಿ ಯಾ  ಇಂಟರ್‌ನೆಟ್ ಇತ್ಯಾದಿ) ಅನುಗುಣವಾಗಿ ಪ್ರತ್ಯೇಕ ನೋಡಲ್ ಆಫೀಸರ್‌ರನ್ನು ನೇಮಿಸಬಹುದು ಅಥವಾ ಒಬ್ಬರನ್ನೇ ಎಲ್ಲದರ ದೂರು ವಿಚಾರಣೆಗೆ  ನೇಮಿಸಬಹುದು.
 ಹಾಗೆ ನೇಮಿಸಿಯಾದ ಮೇಲೆ ಪ್ರತಿ ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರೂ ಸುದ್ದಿಪತ್ರಿಕೆಗಳಲ್ಲಿ ಜಾಹಿರಾತು ಕೊಡುವ ಮೂಲಕ ತಮ್ಮ  ನೋಡಲ್ ಆಫೀಸರ್‌ನ ಹೆಸರು, ವಿಳಾಸ, ಸಂಪರ್ಕ, ದೂರವಾಣಿ ನಂಬರ್‌ಗಳನ್ನು ಸಾರ್ವಜನಿಕರಿಗೆ ತಿಳಿಸಬೇಕು. ಒಂದು ವೇಳೆ ನೋಡಲ್ ಆಫೀಸರ್ ಬದಲಾವಣೆಯಾದರೆ ಅದನ್ನೂ  ಪತ್ರಿಕೆಗಳ ಮೂಲಕ ಜನರಿಗೆ ತಿಳಿಸಬೇಕು. 
ಪ್ರತಿ ಸೇವಾ ಪೂರೈಕೆದಾರರು ತಮ್ಮ ಎಲ್ಲಾ ಕಛೇರಿಗಳಲ್ಲಿ ನೋಡಲ್ ಆಫೀಸರ್‌ನ ಮೇಲ್ಕಂಡ ವಿವರಗಳನ್ನು ಬೋರ್ಡ್ ಹಾಕಿ ಗ್ರಾಹಕರ ಗಮನಕ್ಕೆ ತರತಕ್ಕದ್ದು.
೨.  ಕಾಲ್‌ಸೆಂಟರಿನಲ್ಲಿ ಕೊಟ್ಟ ದೂರು ಇತ್ಯರ್ಥವಾಗದಿದ್ದಲ್ಲಿ ಸಂತ್ರಸ್ಥ ಗ್ರಾಹಕರು ದೂರವಾಣಿ, ಪತ್ರ, ಇ-ಮೇಲ್, ಎಸ್‌ಎಂಎಸ್ ಮುಂತಾದ ರೂಪದಲ್ಲಿ ನೋಡಲ್ ಆಫೀಸರ್ ಬಳಿ ದೂರಬಹುದು.
ತುರ್ತು ಸಂದರ್ಭದಲ್ಲಿ ಕಾಲ್ ಸೆಂಟರ್ ಬಿಟ್ಟು ನೇರವಾಗಿ ನೋಡಲ್ ಆಫೀಸರ್‌ರಲ್ಲಿ ದೂರಬಹುದು.
೩. ನೋಡಲ್ ಆಫೀಸರ್ ಕೆಳಗಿನಂತೆ ಕಡ್ಡಾಯವಾಗಿ ಮಾಡಲೇಬೇಕು:
ಅ. ಸಾರ್ವಜನಿಕರಿಗೆ ಮೇಲ್ಕಂಡಂತೆ  ತಿಳಿಸಿದ ವಿಳಾಸದಲ್ಲಿ ಲಭ್ಯವಿರಬೇಕು.
ಆ.ದೂರಿತ್ತವರ ವಿವರಗಳನ್ನು ನೋಂದಾಯಿಸಿಕೊಳ್ಳಬೇಕು.
ಇ. ದೂರುಕೊಟ್ಟ ೩ ದಿನಗಳೊಳಗೆ ದೂರು ನಂಬರನ್ನು ಗ್ರಾಹಕನಿಗೆ ತಿಳಿಸಬೇಕು.
ಈ. ನಿರ್ದಿಷ್ಟ ಸಮಯ ಮಿತಿಯಲ್ಲಿ ಅಂದರೆ ೩ ರಿಂದ ೧೦ ದಿನಗಳಲ್ಲಿ ದೂರು ಪರಿಹಾರಕ್ಕೆ ಕ್ರಮ ಕೈಗೊಂಡು ಅದನ್ನು ದೂರಿತ್ತ ಗ್ರಾಹಕನಿಗೆ ತಿಳಿಸಬೇಕು.

ಉ. ಸಮಯ  ಮಿತಿ : ಸೇವಾ ವ್ಯತ್ಯಯ ಮತ್ತು ಸಂಪರ್ಕ ಕಡಿತ ಕುರಿತ ದೂರುಗಳನ್ನು ದೂರು ನೋಂದಾಯಿಸಿದ ೩ ದಿನಗಳಲ್ಲಿ ಬಗೆಹರಿಸಬೇಕು. ಇತರೆ ದೂರುಗಳನ್ನು ೧೦ ದಿನಗಳೊಳಗೆ ಪರಿಹರಿಸಬೇಕು.
ಮೇಲ್ಮನವಿ ಪ್ರಾಧಿಕಾರ 
ಸೇವಾ ಪೂರೈಕೆದಾರನಡಿ ಇರುವ ಮೇಲ್ಮನವಿ ಪ್ರಾಧಿಕಾರಕ್ಕೆ ಆಪೀಲು ಸಲ್ಲಿಸುವ ಬಗೆ :
 ದೂರವಾಣಿ, ಇಂಟರ್‌ನೆಟ್, ಬ್ರಾಡ್‌ಬ್ಯಾಂಡ್ ಮುಂತಾದ ಸೇವೆ ಒದಗಿಸುತ್ತಿರುವ ಸೇವಾ ಕಂಪನಿಗಳು ‘ಟೆಲಿಕಾಂ ಗ್ರಾಹಕರ ದೂರು ಪರಿಹಾರ ನಿಯಮ’ ಜಾರಿಗೆ ಬಂದ ೩ ತಿಂಗಳೊಳಗೆ ತಾವು ಕಾರ್‍ಯ ನಿರ್ವಹಿಸುತ್ತಿರುವ ಪ್ರತಿ ಸೇವಾ ವಲಯದಲ್ಲಿ (ಅಂದರೆ ರಾಜ್ಯಕ್ಕೊಂದರಂತೆ) ಕನಿಷ್ಠ ಪಕ್ಷ ಒಂದಾದರೂ ಮೇಲ್ಮನವಿ ಪ್ರಾಧಿಕಾರವನ್ನು  ಸ್ಥಾಪಿಸಬೇಕು. ಈ ಸಂಬಂಧ ಕೇಂದ್ರ ಟೆಲಿಕಾಂ ಇಲಾಖೆ ೨೦೦೫ ಸೆಪ್ಟೆಂಬರ್ ೨೨ರಂದು ಹೊರಡಿಸಿದ ಸುತ್ತೋಲೆಯಂತೆ ಸ್ಥಾಪಿತವಾದ ಮೇಲ್ಮನವಿ ಪ್ರಾಧಿಕಾರಗಳು ಈಗಾಗಲೇ ಅಸ್ತಿತ್ವದಲ್ಲಿದ್ದರೆ, ಮತ್ತೆ ಹೊಸ ಮೇಲ್ಮನವಿ ಪ್ರಾಧಿಕಾರ ನೇಮಿಸುವ ಅಗತ್ಯವಿಲ್ಲ. ಹೊಸದಾಗಿ ಶುರುವಾದ ಕಂಪನಿಗಳು ತಮ್ಮ ಇನ್ನಿತರ ಚಟುವಟಿಕೆಗಳ ಜೊತೆ ಇಂತಹ ಮೇಲ್ಮನವಿ ಪ್ರಾಧಿಕಾರಗಳನ್ನು ಚಾಲೂ ಮಾಡತಕ್ಕದ್ದು.
 ಒಂದು ವೇಳೆ ಒಂದೇ ಕಂಪನಿ ವಿವಿಧ ಸೇವೆ ಕೊಡುತ್ತಿದ್ದರೆ ಅವೆಲ್ಲದಕ್ಕೆ ಪ್ರತ್ಯೇಕ ಅಥವಾ ಎಲ್ಲದರಿಂದ ಒಂದೇ ಮೆಲ್ಮನವಿ ಪ್ರಾಧಿಕಾರ ಸ್ಥಾಪಿಸಬಹುದು.
 ಸೇವಾಪೂರೈಕೆದಾರರು ಮೇಲೆ ಹೇಳಿದ  ದೂರು ಇತ್ಯರ್ಥಪಡಿಸುವ ಮೇಲ್ಮನವಿ ಪ್ರಾಧಿಕಾರ ನೇಮಿಸಿದ ನಂತರ ಕೆಳಕಂಡ ಕ್ರಮ ಅನುಸರಿಸತಕ್ಕದ್ದು.
೧. ಒಂದು ಇಂಗ್ಲೀಷ್ ಅಥವಾ ಹಿಂದಿ ಮತ್ತು ಸ್ಥಳೀಯ ಭಾಷೆಯ ಪತ್ರಿಕೆಯಲ್ಲಿ ಜಾಹಿರಾತು ಕೊಡುವ ಮುಖೇನ ಹಾಗೂ ದೂರವಾಣಿ ಬಿಲ್‌ಗಳಲ್ಲಿ ಮುದ್ರಿಸುವ  ಮುಖೇನ ಮೇಲ್ಮನವಿ ಪ್ರಾಧಿಕಾರ ಸ್ಥಾಪಿಸಿದ ವಿಚಾರವನ್ನು ಗ್ರಾಹಕರಿಗೆ ತಿಳಿಸಬೇಕು. ಆ ಜಾಹಿರಾತಿನಲ್ಲಿ ಮೇಲ್ಮನವಿ ಪ್ರಾಧಿಕಾರದ ವಿಳಾಸ, ಫೋನ್ ನಂಬರ್, ಇ ಮೇಲ್ ಐಡಿ ಇತ್ಯಾದಿಗಳಲ್ಲದೆ ಪ್ರಾಧಿಕಾರಕ್ಕೆ ಅಪೀಲು ಸಲ್ಲಿಸುವ ವಿಧಾನವನ್ನು ತಿಳಿಸಬೇಕು. ಈ ತರಹದ ಜಾಹಿರಾತನ್ನು ವರ್ಷಕ್ಕೊಂದು ಸಾರಿ ಪುನರಾವರ್ತಿಸಬೇಕು.
೨. ಸೇವಾ ಪೂರೈಕೆದಾರನ ಕಛೇರಿ,  ಕಾಲ್‌ಸೆಂಟರ್,  ಸಹಾಯ ಕೇಂದ್ರ, ಮಾರಾಟ ಮಳಿಗೆ, ವೆಬ್‌ಸೈಟ್ ಮುಂತಾದ ಕಡೆ ಬೋರ್ಡ್ ಹಾಕಿ ಮೇಲ್ಮನವಿ ಪ್ರಾಧಿಕಾರದ ಹೆಸರು, ವಿಳಾಸ ಮತ್ತು ಇನ್ನಿತರ ವಿವರಗಳನ್ನು ಪ್ರಚುರಪಡಿಸಬೇಕು.

೩.ಮೇಲ್ಮನವಿ ಪ್ರಾಧಿಕಾರಕ್ಕೆ ಆಪೀಲು ಸಲ್ಲಿಸುವಿಕೆ
೧. ದೂರವಾಣಿ, ಇಂಟರ್‌ನೆಟ್ ಮತ್ತು ಬ್ರಾಡ್‌ಬ್ಯಾಂಡ್ ಸೇವೆಯ ಕುರಿತು  ನೋಡಲ್ ಆಫೀಸರ್‌ಗೆ ಕೊಟ್ಟ ದೂರು ಇತ್ಯರ್ಥವಾಗದಿದ್ದರೆ, ಉತ್ತರ ಬರದಿದ್ದರೆ ಅಥವಾ ಅವರು ಕೊಟ್ಟ ತೀರ್‍ಮಾನ ದೂರಿತ್ತ ಗ್ರಾಹಕನಿಗೆ ಸಮಾಧಾನ ತರದಿದ್ದರೆ ಅಂತಹ ಗ್ರಾಹಕರು ಮೇಲ್ಮನವಿ ಪ್ರಾಧಿಕಾರಕ್ಕೆ ಲಿಖಿತ ದೂರು ಕೊಡಬಹುದು.
೨. ಮೇಲ್ಮನವಿಯಲ್ಲಿ ಪ್ರಾಧಿಕಾರಕ್ಕೆ ಸಲ್ಲಿಸುವ ಆಪೀಲು ದ್ವಿಪ್ರತಿಯಲ್ಲಿರಬೇಕು ಮತ್ತು ನಿಗದಿತ ಅರ್ಜಿ ನಮೂನೆಯಲ್ಲಿರಬೇಕು. (ಅರ್ಜಿ ನಮೂನೆಯನ್ನು ಪ್ರತ್ಯೇಕವಾಗಿ ಕೊಡಲಾಗಿದೆ)
೩. ನೋಡಲ್ ಆಫೀಸರ್‌ಗೆ ದೂರಿಕೊಂಡು ೧೦ ದಿನಗಳಾದರೂ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಆ ೧೦ ದಿನಗಳ ನಂತರ ಮೂರು ತಿಂಗಳೊಳಗೆ ಮೇಲ್ಮನವಿ ಪ್ರಾಧಿಕಾರಕ್ಕೆ ಆಪೀಲು ಸಲ್ಲಿಸಬೇಕು.
೪. ಎಲ್ಲಾ ಸೇವಾ ಪೂರೈಕೆದಾರರು ಸಂತ್ರಸ್ಥ ಗ್ರಾಹಕರಿಗೆ ಆಪೀಲು ಸಲ್ಲಿಸಲು ಅಗತ್ಯವಿರುವ ಅರ್ಜಿ ನಮೂನೆಯನ್ನು ಉಚಿತವಾಗಿ ಕೊಡಬೇಕು. ಸದರಿ ಅರ್ಜಿ ನಮೂನೆಗಳು ಸೇವಾ ಪೂರೈಕೆದಾರರ ಎಲ್ಲಾ ಕಛೇರಿ, ಮಾರಾಟ ಮಳಿಗೆ, ನೋಡಲ್ ಆಫೀಸರ್ ಕಛೇರಿಗಳಲ್ಲಿ ಲಭ್ಯವಿರಬೇಕು. ಅಲ್ಲದೇ ವೆಬ್‌ಸೈಟ್‌ನಲ್ಲೂ ಸಿಗುವಂತಿದ್ದು ಡೌನ್‌ಲೋಡ್ ಮಾಡಲು ಬರುವಂತಿರಬೇಕು.
ಅಪೀಲು ನಿರ್ವಹಿಸುವ ವಿಧಾನ
# ಮೇಲ್ಮನವಿ ಪ್ರಾಧಿಕಾರವು ತನಗೆ ಬರುವ ದೂರನ್ನು ದಾಖಲಿಸಿಕೊಂಡು, ಮೂರು ದಿನಗಳಲ್ಲಿ ಹಾಗೆ ದಾಖಲಿಸಿಕೊಂಡ ದೂರು ನಂಬರ್ ಸಹಿತ ಗ್ರಾಹಕನಿಗೆ ರಶೀದಿ ಕಳಿಸಬೇಕು.
# ಅಪೀಲು ದಾಖಲಿಸಿಕೊಂಡಾದ ಆರು ದಿನಗಳಲ್ಲಿ ದೂರು ಬರಲು ಕಾರಣವಾದ ಟೆಲಿಕಾಂ ಕಂಪನಿಗೆ ಅಪೀಲಿನ ಪ್ರತಿ ಕಳಿಸಿ ಪ್ರತಿಕ್ರಿಯೆ ಕೊಡಲು ಹೇಳಬೇಕು.
# ಸೇವಾ ಪೂರೈಕೆದಾರನು ಅಪೀಲಿನ ಪ್ರತಿ ಸ್ವೀಕೃತವಾದ ೧೫ ದಿನಗಳಲ್ಲಿ ತನ್ನ ಉತ್ತರ ಕೊಡಬೇಕು. ಇಲ್ಲಿ ಉತ್ತರ ಕೊಡುವುದೆಂದರೆ ಸಮಸ್ಯೆ ಪರಿಹರಿಸುವುದೂ ಸೇರುತ್ತದೆ.
# ಒಂದು ಪಕ್ಷ ಸೇವಾ ಪೂರೈಕೆದಾರನು ೧೫ ದಿನಗಳಲ್ಲಿ ಉತ್ತರಿಸದಿದ್ದಲ್ಲಿ, ಮೇಲ್ಮನವಿ ಪ್ರಾಧಿಕಾರವು ಆ ಪ್ರಕರಣಕ್ಕೆ ಸಂಬಂಧಿಸಿ ತನ್ನ ಬಳಿಯಿರುವ ದಾಖಲೆಗಳ ಆಧಾರದ ಮೇಲೆ ಪ್ರಕರಣವನ್ನು ಇತ್ಯರ್ಥಗೊಳಿಸಬೇಕು.
# ಪ್ರಕರಣವನ್ನು ಇತ್ಯರ್ಥಗೊಳಿಸಲು ಅಗತ್ಯವಿರುವ ಯಾವುದೇ  ಮಾಹಿತಿ, ದಾಖಲೆಗಳನ್ನು ಮೇಲ್ಮನವಿ ಪ್ರಾಧಿಕಾರವು ಸೇವಾ ಕಂಪನಿಯಿಂದ ಯಾ ಗ್ರಾಹಕನಿಂದ ಕೇಳಿ ಪಡೆಯಲು ಅಧಿಕಾರ ಹೊಂದಿದೆ.
# ಒಂದು ವೇಳೆ ಸೇವಾ ಕಂಪನಿಯು ಪ್ರಾಧಿಕಾರ ಕೇಳಿದ ಮಾಹಿತಿ, ದಾಖಲೆ ಒದಗಿಸದಿದ್ದರೆ ಪ್ರಕರಣದ ಯೋಗ್ಯತೆ ಅನುಸರಿಸಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಬಹುದು.
# ಸೇವಾಲೋಪ ಎಸಗಿದ ಕಂಪನಿಯಿಂದ ಉತ್ತರ ಬಂದ ನಂತರ ಹಾಗೂ ಪ್ರಾಧಿಕಾರ ಕೇಳಿದ ಮಾಹಿತಿ, ದಾಖಲೆ ಬಂದ ನಂತರ ಪ್ರಾಧಿಕಾರವು  ಸೂಕ್ತಕಂಡ ತನಿಖೆ ನಡೆಸಬಹುದು. ವಿಚಾರಣೆ ನಡೆಸುವಾಗ ಟೆಲಿಕಾಂ ಕಂಪನಿ  ಮತ್ತು ಗ್ರಾಹಕನಿಗೆ ತಮ್ಮ ವಾದ ಮಂಡಿಸಲು ಅವಕಾಶ  ನೀಡಬೇಕು. ತದನಂತರ ಪ್ರಕರಣದ ಅರ್ಹತೆ ಮೇಲೆ ನ್ಯಾಯ  ತೀರ್‍ಮಾನ ಕೊಡಬೇಕು. ತೀರ್‍ಮಾನವನ್ನು ಬರವಣಿಗೆಯಲ್ಲಿ  ಕಾರಣಸಹಿತವಾಗಿ ನೀಡಬೇಕು.
# ದೂರುದಾರ ಗ್ರಾಹಕನು ವಿಚಾರಣೆಗೆ ಖುದ್ದು ಹಾಜರಾಗಬಹುದು ಅಥವಾ ತನ್ನ ಪ್ರತಿನಿಧಿಯನ್ನು ಕಳಿಸಬಹುದು ಅಥವಾ ತನ್ನ ವಾದ ದಾಖಲಿಸಿ, ಲಿಖಿತ ಹೇಳಿಕೆ ಕಳಿಸಿ ಹಾಜರಾತಿಗೆ ವಿನಾಯ್ತಿ ಕೇಳಬಹುದು.
# ಟೆಲಿಕಾಂ ಕಂಪನಿಯು ತನ್ನ ಪ್ರತಿನಿಧಿಯನ್ನು  ವಿಚಾರಣೆಗೆ ಹಾಜರಾಗಲು ಕಳಿಸಬಹುದು. ಕಳಿಸದಿದ್ದರೆ ಮೇಲ್ಮನವಿ ಪ್ರಾಧಿಕಾರವು ಏಕಪಕ್ಷೀಯವಾಗಿ ವಿವಾದವನ್ನು ಇತ್ಯರ್ಥಪಡಿಸಬಹುದು.
# ಅಪೀಲು ದಾಖಲಿಸಿದ  ಮೂರು ತಿಂಗಳೊಳಗೆ ಮೇಲ್ಮನವಿ ಪ್ರಾಧಿಕಾರವು ಪ್ರಕರಣವನ್ನು ಇತ್ಯರ್ಥಗೊಳಿಸಬೇಕು.
# ಅಪೀಲು ಇತ್ಯರ್ಥವಾದ ಏಳು ದಿನಗಳಲ್ಲಿ ಉಭಯ ಪಕ್ಷಗಳಿಗೆ ತೀರ್‍ಮಾನವನ್ನು ತಿಳಿಸಬೇಕು.
# ದೂರಿಗೆ ಎಡೆಮಾಡಿಕೊಟ್ಟ ಟೆಲಿಕಾಂ ಕಂಪನಿಯು,  ಮೇಲ್ಮನವಿ ಪ್ರಾಧಿಕಾರವು ಕೊಟ್ಟ ತೀರ್ಪನ್ನು ೧೫ ದಿನಗಳಲ್ಲಿ ಜಾರಿಗೆ ತರಬೇಕು.
# ಒಂದು ಅಪೀಲನ್ನು ನಿರ್ವಹಿಸುವಾಗ ಮೇಲ್ಮನವಿ ಪ್ರಾಧಿಕಾರವು ಉಭಯತ್ರರನ್ನು ಕೂರಿಸಿ ಸಂಧಾನ ನಡೆಸಿ ಸಮಸ್ಯೆ ಬಗೆಹರಿಸಲು ಅವಕಾಶವಿದೆ.
ಮೇಲ್ಮನವಿ ಪ್ರಾಧಿಕಾರಕ್ಕೆ  ಅಪೀಲು ಸಲ್ಲಿಸುವ ಅರ್ಜಿ ನಮೂನೆ
ಟೆಲಿಕಾಂ ಗ್ರಾಹಕರ ಹಿತರಕ್ಷಣೆ ಮತ್ತು ದೂರು ಪರಿಹಾರ ನಿಯಮ, ೨೦೦೭ರಂತೆ....... (ಇಲ್ಲಿ ದೂರು ಹುಟ್ಟಲು ಕಾರಣವಾದ ಟೆಲಿಕಾಂ ಕಂಪೆನಿಯ ಹೆಸರು ಮತ್ತು ವಿಳಾಸ ಬರೆಯಬೇಕು) ಕಂಪನಿ ನೇಮಿಸಿರುವ ಮೇಲ್ಮನವಿ ಪ್ರಾಧಿಕಾರಕ್ಕೆ ಸಲ್ಲಿಸುತ್ತಿರುವ ದೂರು
ಅ. ಅಪೀಲುದಾರರ ಹೆಸರು, ವಿಳಾಸ, ಫೋನ್ ನಂಬರ್, ಇ ಮೇಲ್ ವಿವರ
ಆ. ಅಪೀಲು ಹಾಕಲು ಕಾರಣವಾದ ಸ್ಥಿರ ದೂರವಾಣಿ ನಂಬರ್ ಅಥವಾ ಮೊಬೈಲ್ ನಂಬರ್, ಬ್ರಾಡ್‌ಬ್ಯಾಂಡ್ ಸಂಪರ್ಕದ ಗುರುತು
ಇ. ದೂರು ಇರುವ ಪ್ರದೇಶದ ವಿವರ
ಈ. ದೂರು ಹುಟ್ಟಿರುವ ರಾಜ್ಯ ಅಥವಾ ಸೇವಾ ವಲಯದ ಹೆಸರು
ಉ. ದೂರಿನ ವಿವರವಾದ ಸ್ವರೂಪ (ದೂರು ಯಾವುದಕ್ಕೆ ಸಂಬಂಧಿಸಿದ್ದು ಬರೆಯಿರಿ. ಅಂದರೆ ಸಂಪರ್ಕ/ಆಕ್ಟಿವೇಶನ್ / ಬಿಲ್ಲಿಂಗ್ / ಕೆಟ್ಟಿರುವ ಫೋನ್ ರಿಪೇರಿ/ಸೇವಾಲೋಪ/ ಸಂಪರ್ಕ ಕಡಿತ/ಮೌಲ್ಯ ವರ್ಧಿತ ಸೇವೆ/ ದೂರವಾಣಿ ಸಂಪರ್ಕ ಸ್ಥಗಿತ-ಇತ್ಯಾದಿಗಳಲ್ಲಿ ಯಾವುದೆಂದು ಹೇಳಿ)
ಊ. ದೂರನ್ನು ಮೊದಲಬಾರಿ ಕಾಲ್ ಸೆಂಟರ್‌ನಲ್ಲಿ ದಾಖಲಿಸಿದಾಗ ಅಲ್ಲಿ ಕೊಟ್ಟ  ನಂಬರ್, ದಿನಾಂಕ ಸಹಿತ 
ಎ. ಎರಡನೇ ಹಂತದಲ್ಲಿ  ದೂರನ್ನು ನೋಡಲ್ ಆಫೀಸರ್‌ಗೆ ಕೊಟ್ಟಾಗ ಅವರು ಕೊಟ್ಟಿರುವ ದೂರು ಸಂಖ್ಯೆ, ದಿನಾಂಕದೊಂದಿಗೆ ಏ. ನೋಡಲ್ ಆಫೀಸರ್ ತೀರ್‍ಮಾನ ಕೊಟ್ಟಿದ್ದರೆ ಅದರ ವಿವರ ಮತ್ತು ಆದೇಶದ ಪ್ರತಿ. ಕೊಟ್ಟಿಲ್ಲದಿದ್ದಲ್ಲಿ ಅದನ್ನೂ ಕಾಣಿಸಬೇಕು 
ಐ. ದೂರಿನ ಅಥವಾ ಅಪೀಲಿಗೆ ಕಾರಣವಾಗುವ ವಿಷಯಗಳು.
ಒ. ಅಪೀಲಿಗೇನು ಕಾರಣ-ವಿಷಯದ ಪೂರ್ತಿ ವಿವರ, ದಾಖಲೆಗಳ ಪೊಟೊ ಪ್ರತಿ ಸಹಿತ 
ಓ. ಕೇಳುವ ಪರಿಹಾರವೇನು?(ಅಗತ್ಯಬಿದ್ದರೆ ಪ್ರತ್ಯೇಕ ಹಾಳೆಯಲ್ಲಿಯೂ ಬರೆಯ ಬಹುದು)
ಔ. ಸದರಿ ದೂರು ಯಾ ಆಪೀಲು ಬೇರಾವುದೇ  ನ್ಯಾಯಾಲಯದಲ್ಲಿ ದಾಖಲಾಗಿಲ್ಲವೆಂಬ ಬಗ್ಗೆ ಹೇಳಿಕೆ
ಅಂ. ಇನ್ನಿತರ ಮಾಹಿತಿ ಯಾ ದಾಖಲೆಗಳು
ಅಃ. ಖುದ್ದು ಹಾಜರಾತಿಗೆ ವಿನಾಯ್ತಿ ಕೋರಿದರೆ ಅದನ್ನು ಬರೆಯಬೇಕು.

ಈ ಅರ್ಜಿ ನಮೂನೆ ಜೊತೆಗೆ ಸತ್ಯ ಮಾಪನಾ ಹೇಳಿಕೆಯನ್ನೂ ಲಗತ್ತಿಸಬೇಕು.
೧. ಗ್ರಾಹಕ ಖುದ್ದು ಹಾಜರಾಗಬಹುದು ಅಥವಾ ತನ್ನ ಪ್ರತಿನಿಧಿಯನ್ನು ಕಳಿಸಬಹುದು ಅಥವಾ ತನ್ನ ವಾದ ದಾಖಲಿಸಿ, ಲಿಖಿತ ಹೇಳಿಕೆ ಕಳಿಸಿ ಹಾಜರಾತಿಗೆ ವಿನಾಯ್ತಿ ಕೇಳಬಹುದು.
೨. ಟೆಲಿಕಾಂ ಕಂಪನಿಯು ತನ್ನ ಪ್ರತಿನಿಧಿಯನ್ನು  ವಿಚಾರಣೆಗೆ ಹಾಜರಾಗಲು ಕಳಿಸಬಹುದು. ಕಳಿಸದಿದ್ದರೆ ಮೇಲ್ಮನವಿ ಪ್ರಾಧಿಕಾರವು ಏಕಪಕ್ಷೀಯವಾಗಿ ವಿವಾದವನ್ನು ಇತ್ಯರ್ಥ ಪಡಿಸಬಹುದು.
೩. ಅಪೀಲು ದಾಖಲಿಸಿದ  ೩ ತಿಂಗಳೊಳಗೆ ಮೇಲ್ಮನವಿ ಪ್ರಾಧಿಕಾರವು ಪ್ರಕರಣವನ್ನು ಇತ್ಯರ್ಥಗೊಳಿಸಬೇಕು.
೪. ಅಪೀಲು ಇತ್ಯರ್ಥವಾದ ೭ ದಿನಗಳಲ್ಲಿ ಉಭಯ ಪಕ್ಷಗಳಿಗೆ ತೀರ್‍ಮಾನವನ್ನು ತಿಳಿಸಬೇಕು.
೫. ದೂರಿಗೆ ಎಡೆಮಾಡಿಕೊಟ್ಟ ಟೆಲಿಕಾಂ ಕಂಪನಿಯು,  ಮೇಲ್ಮನವಿ ಪ್ರಾಧಿಕಾರವು ಕೊಟ್ಟ ತೀರ್ಪನ್ನು ೧೫ ದಿನಗಳಲ್ಲಿ ಜಾರಿಗೆ ತರಬೇಕು.
೬. ಒಂದು ಅಪೀಲನ್ನು ನಿರ್ವಹಿಸುವಾಗ ಮೇಲ್ಮನವಿ ಪ್ರಾಧಿಕಾರವು ಉಭಯತ್ರರನ್ನು ಕೂರಿಸಿ ಸಂಧಾನ ನಡೆಸಿ ಸಮಸ್ಯೆ ಬಗೆಹರಿಸಲು ಅವಕಾಶವಿದೆ.
ಅಪೀಲಿನ ಬಗ್ಗೆ ಮಾಹಿತಿ
ಟೆಲಿಕಾಂ ಕಂಪನಿಗಳು ತಮ್ಮ ವ್ಯಾಪ್ತಿಯ ಮೇಲ್ಮನವಿ ಪ್ರಾಧಿಕಾರದಡಿ ಇರುವ ಅಪೀಲುಗಳ ಸಂಖ್ಯೆ, ಇತ್ಯರ್ಥವಾದವು, ಇನ್ನೂ ವಿಚಾರಣೆ ನಡೆಯುತ್ತಿರುವುದು, ಅಪೀಲು ನಿರ್ವಹಣೆಯಲ್ಲಿ ಕಾಲಮಿತಿ ಅನುಸರಿಸಿದ ವಿವರ- ಇತ್ಯಾದಿಗಳನ್ನು ತಮ್ಮ ವೆಬ್‌ಸೈಟ್‌ನಲ್ಲಿ ಹಾಕಿ ಸಾರ್ವಜನಿಕರ ಗಮನಕ್ಕೆ ತರಬೇಕು.

ಗ್ರಾಹಕ ದೂರುಗಳನ್ನು  ಟ್ರಾಯ್  ಸಹಾ ನಿರ್ವಹಿಸುತ್ತದೆ
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ವು ಗ್ರಾಹಕರ ದೂರುಗಳನ್ನು, ಸೇವೆ ಪೂರೈಸುವ ಟೆಲಿಕಾಂ ಕಂಪನಿಗಳಿಗೆ ಇತ್ಯರ್ಥಕ್ಕಾಗಿ ಕಳುಹಿಸಬಹುದು. ಅವುಗಳ ವಿವರ ಹೀಗಿದೆ.
೧. ಟ್ರಾಯ್ ಕಾಯ್ದೆ ಅಥವಾ ಟ್ರಾಯ್ ಕೊಟ್ಟಿರುವ ಆದೇಶ, ನಿಯಮ ಅಥವಾ ನಿರ್ದೇಶನದ ಉಲ್ಲಂಘನೆ ಕುರಿತ ದೂರುಗಳನ್ನು ಕಳಿಸಬಹುದು.
೨. ಗ್ರಾಹಕರ ಸಾಮೂಹಿಕ ದೂರುಗಳು.
೩. ಸೇವೆ ಪೂರೈಸುವ ಟೆಲಿಕಾಂ ಕಂಪನಿಗಳು ಅನುಸರಿಸುತ್ತಿರುವ ಕಾರ್ಯ ವಿಧಾನ ಅಥವಾ ಪದ್ದತಿಗಳು ಗ್ರಾಹಕರ ಹಿತಾಸಕ್ತಿಗೆ ಧಕ್ಕೆ ತರುವಂತಿದ್ದರೆ ಅಂತಹ ದೂರುಗಳು.
೪. ಮೇಲಿನ ದೂರುಗಳನ್ನು ಟ್ರಾಯ್‌ನಿಂದ ಪಡೆದ ಒಂದು ತಿಂಗಳಲ್ಲಿ ಟೆಲಿಕಾಂ ಕಂಪನಿಗಳು ದೂರಿನ ಬಗ್ಗೆ ತನಿಖೆ ನಡೆಸಿ ಅವನ್ನು ಬಗೆಹರಿಸಬೇಕು.
೫. ಹಾಗೆ ಬಗೆಹರಿಸಿದ್ದನ್ನು ಗ್ರಾಹಕರಿಗೆ ಮತ್ತು ಟ್ರಾಯ್‌ಗೆ ಒಂದು ತಿಂಗಳೊಳಗೆ ತಿಳಿಸಬೇಕು.
೬. ಟ್ರಾಯ್‌ನಿಂದ ಕಳಿಸಲ್ಪಟ್ಟ ದೂರುಗಳು ಟೆಲಿಕಾಂ ಕಂಪನಿಯ ಅಧಕ್ಷತೆ, ಕಾರ್ಯವಿಧಾನದ ಲೋಪದೋಷ, ವ್ಯವಸ್ಥೆಯ ವೈಫಲ್ಯ ಮುಂತಾವುದನ್ನು ಸೂಚಿಸುವಂತಿದ್ದರೆ ಅಂತಹ ಎಲ್ಲಾ ಸಮಸ್ಯೆಗಳನ್ನು ಎರಡು ತಿಂಗಳಲ್ಲಿ ಬಗೆಹರಿಸಿಕೊಂಡು ಟ್ರಾಯ್‌ಗೆ ಮತ್ತು ದೂರಿತ್ತ ಗ್ರಾಹಕರಿಗೆ ತಿಳಿಸಬೇಕು.
ಶೆಡ್ಯೂಲ್ 
(ನಿಯಮ ೫ ನೋಡಿ)
ಕಾಲ್ ಸೆಂಟರ್‌ಗಳು ಟೆಲಿಕಾಂ ಗ್ರಾಹಕರ ದೂರು ನಿವಾರಿಸುವಾಗ ಅನುಸರಿಸಬೇಕಾದ  ಸೇವಾ ಮಾನದಂಡಗಳು ಮತ್ತು ಸಮಯ ಮಿತಿ

ಅ. ಸ್ಥಿರ ದೂರವಾಣಿ ಸೇವೆ
  ಸೇವಾ ಮಾನದಂಡ                 ಸಮಯ ಮಿತಿ
 ೧. ದೂರವಾಣಿ ಸಂಪರ್ಕ ಒದಗಿಸುವುದು  ೭ ದಿನಗಳಲ್ಲಿ (ತಾಂತ್ರಿಕ ಸಂಭವನೀಯತೆಗೆ ಒಳಪಟ್ಟು)
 ೨. ಕೆಟ್ಟಿರುವ ಫೋನ್ ರಿಪೇರಿ ೩ ದಿನಗಳಲ್ಲಿ
 ೩. ಟೆಲಿಫೋನ್ ವರ್ಗಾವಣೆ ೩ ದಿನಗಳಲ್ಲಿ
 ೪. ಟೆಲಿಫೋನ್ ಸಂಪರ್ಕ ತೆಗೆಸುವುದು ೨೪ ಗಂಟೆಗಳೊಳಗೆ
 ೫. ೪ ವಾರಗಳೊಳಗೆ ಇತ್ಯರ್ಥಗೊಳ್ಳುವ ಎಲ್ಲ ಬಿಲ್ಲಿಂಗ್ ದೂರುಗಳು
ಬಿಲ್ಲಿಂಗ್ ದೂರುಗಳ ಶೇಕಡಾವಾರು ೪ ವಾರಗಳಲ್ಲಿ ಬಗೆಹರಿಯಬೇಕು
 ೬. ದೂರವಾಣಿ ಸಂಪರ್ಕ ಕಡಿತಗೊಳಿಸಿದ ಎಲ್ಲಾ ಠೇವಣಿಗಳನ್ನು ೬೦ 
ನಂತರ ಠೇವಣಿ ವಾಪಸ್ಸಾತಿ ದಿನಗಳೊಳಗೆ ಮರಳಿಸಬೇಕು.


ಆ. ಸ್ಥಿರ, ಡಬ್ಲುಎಲ್‌ಎಲ್ ಮತ್ತು ಸೆಲ್ಯುಲಾರ್ ಮೊಬೈಲ್ ದೂರವಾಣಿ ಸೇವೆ
    ಸೇವಾ ಮಾನದಂಡ                                                   ಸಮಯ ಮಿತಿ
ಬಿಲ್ಲಿಂಗ್ ದಕ್ಷತೆ
ಅ. ೪ ವಾರಗಳೊಳಗೆ ಇತ್ಯರ್ಥಗೊಳ್ಳಬೇಕಾದ ಎಲ್ಲಾ ದೂರುಗಳು
      ಬಿಲ್ಲಿಂಗ್ ದೂರುಗಳ ಶೇಕಡಾವಾರು ೪  ವಾರಗಳಲ್ಲಿ ಬಗೆಹರಿಯಬೇಕು.
ಆ. ದೂರು ಬಗೆಹರಿದ ದಿನದಿಂದ ಗ್ರಾಹಕರಿಗೆ ಎಲ್ಲಾ ಹಣ ಪಾವತಿ ಮತ್ತು ಠೇವಣಿ ಮರುಪಾವತಿಗಳು 
    ಪಾವ್ತಿಯಾಗಬೇಕಾದ ಹಣ ಮತ್ತು ಇನ್ನಿತರ ೪ ವಾರಗಳಲ್ಲಿ ಪರಿಹಾರವಾಗಬೇಕು.
ಠೇವಣಿಗಳ ವಾಪಸ್ಸಾತಿ

ಇ. ಬ್ರಾಡ್‌ಬ್ಯಾಂಡ್ ಸೇವೆ
ಸೇವಾ ಮಾನದಂಡ                                ಸಮಯ ಮಿತಿ
೧.   ಸೇವೆ ಒದಗಿಸುವುದು ಮತ್ತು ಆಕ್ಟಿವೇಶನ್ ಸಮಯ         ೧೫ ದಿನಗಳೊಳಗೆ (ತಾಂತ್ರಿಕ ಸಂಭ್ಯಾವತೆಗೆ ಒಳಪಟ್ಟು)
೨. ರಿಪೇರಿ ಹಾಗೂ ಪುನರ್ ಸಂಪರ್ಕ                    ೩ ದಿನಗಳೊಳಗೆ
೩. ಬಿಲ್ಲಿಂಗ್ ದೂರುಗಳು  ಅ. ಬಿಲ್ಲಿಂಗ್ ತಕರಾರು ೪ ವಾರಗಳಲ್ಲಿ
                  ಆ. ಠೇವಣಿ ವಾಪಸ್ಸಾತಿ ೬೦ ದಿನಗಳೊಳಗೆ


ಬಿಎಸ್‌ಎನ್‌ಎಲ್ - ಕರ್ನಾಟಕ ಟೆಲಿಕಾಂ ಸರ್ಕಲ್
ಮೊದಲ ಹಂತ :    ಕಾಲ್‌ಸೆಂಟರ್‌ಗಳು 
ಸ್ಥಿರ ದೂರವಾಣಿ/ಬ್ರಾಡ್‌ಬ್ಯಾಂಡ್ - ೧೫೦೦ 
ಜಿಎಸ್‌ಎಂ ಮೊಬೈಲ್ - ೯೪೦೦೦೨೪೩೬೫ 
ಬ್ರಾಡ್‌ಬ್ಯಾಂಡ್/ ಇಂಟರ್‌ನೆಟ್ ಸೇವೆ - ೧೮೦೦೪೨೪೧೬೦೦ 
MPLS  ಮತ್ತಿತರ ಡಾಟಾ ಸೇವೆಗಳು - ೧೮೦೦ ೪೨೫ ೧೯೫೭ 
(ಈ ಎಲ್ಲಾ ದೂರವಾಣಿಗಳು ಉಚಿತ ಸೇವೆ) 

ಎರಡನೇ ಹಂತ :    ನೋಡಲ್ ಆಫೀಸರ್
ಸರ್ವೀಸ್ - ಏರಿಯಾ ನೋಡಲ್ ಆಫೀಸರ್ ವಿವರ      
ಕರ್ನಾಟಕ ಟೆಲಿಕಾಂ ಎ.ಪಿ.ಭಟ್ ಡಿಜಿಎಂ (ಆ)

ಸರ್ಕಲ್‌ನ ಮುಖ್ಯ ಕಛೇರಿ ಸಿಜಿಎಂಟಿ ಕಚೇರಿ ಬೆಂಗಳೂರು ೦೮೦ - ೨೫೫೯೫೫೯೯
ಫ್ಯಾಕ್ಸ -೦೮೦-೨೫೫೧೧೨೭೭
ಮೊಬೈಲ್ ಸರ್ವೀಸ್ (ಒ) ಬಿ.ಎಸ್.ಕೃಷ್ಣಮೂರ್ತಿ ಡಿಇ(ಟಿಟಿ)
ಜಿಎರಿ ಕಚೇರಿ-ಮೊಬೈಲ್ ಸೇವೆ ಬೆಂಗಳೂರು
ಫೋನ್ - ೦೮೦-೨೨೩೫೬೨೨೨
ಮೊಬೈಲ್ ಸರ್ವೀಸ್ (ಡಿ) ರವಿಕುಮಾರ್ ಡಿಜಿಎಂ(ಇನ್ಸ್‌ಟಲೇಶನ್)
ಜಿಎಂ ಕಛೇರಿ - ಮೊಬೈಲ್ ಸೇವೆ ಬೆಂಗಳೂರು
ಪೋನ್ -೦೮೦-೨೫೫೫೨೮೧೬, ಫ್ಯಾಕ್ಸ್ - ೦೮೦-೨೫೫೫೨೮೧೭

ಮೂರನೇ ಹಂತ :    ಮೇಲ್ಮನವಿ ಪ್ರಾಧಿಕಾರ  

ಎ. ಸುಬ್ರಹ್ಮಣ್ಯನ್ ಜಿಎಂ (ಆ) 
ಸಿಜಿಎಂಟಿ ಕಚೇರಿ, 
ದೂರ ಸಂಪರ್ಕ ಭವನ, ಹಲ್ಸೂರು, 
ಬೆಂಗಳೂರು - ೫೬೦೦೦೮ 
ಪೋನ್ -೦೮೦-೨೫೫೭೬೫೭೭ 
ಫ್ಯಾಕ್ಸ್  -೦೮೦-೨೫೫೬೨೬೦೨  


ಶುಕ್ರವಾರ, ಜನವರಿ 23, 2009

ಕ್ರಿಕೆಟ್‌ಗೆ ಹಾಕಿಯನ್ನು ಸೋಲಿಸುವ ತವಕ?
ದೇಶದೆಲ್ಲೆಡೆ ಕೆರೆಗಳು ಮಾಯವಾಗುತ್ತಿವೆ, ಸೈಟ್‌ಗಳಾಗುತ್ತಿವೆ. ಕಾಂಪ್ಲೆಕ್ಸ್ ಕಟ್ಟಲಾಗುತ್ತಿದೆ. ಹೀಗಾಗಿ ಸುಂದರ ಕಮಲದ ಹೂವುಗಳು ಎಲ್ಲಿ ಅರಳಬೇಕು? ಅವೂ ನಾಶವಾಗುತ್ತಿವೆ. ಇದೇ ವೇಳೆ ಕೃಷಿಕರು, ಕಾರ್ಪೋರೇಟ್ ವಲಯಗಳು ದೊಡ್ಡ ಪ್ರಮಾಣದಲ್ಲಿ ಆರ್ಕಿಡ್‌ಗಳನ್ನು ಬೆಳೆಯುತ್ತಿದ್ದಾರೆ, ಟನ್ ಲೆಕ್ಕದಲ್ಲಿ ರಫ್ತಾಗುತ್ತಿದೆ. ವಿದೇಶಿ ವಿನಿಮಯದಲ್ಲಿ ಡಾಲರ್ ಹರಿದುಬರುತ್ತಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ನಮ್ಮ ರಾಷ್ಟ್ರೀಯ ಪುಷ್ಪ ಗೌರವವನ್ನು ಕಮಲದ ಹೂವಿಗೆ ಬದಲು ಆರ್ಕಿಡ್‌ಗೆ ಕೊಡಬೇಕಾಗುತ್ತದೆ, ಅಲ್ಲವೇ?
ಸ್ಟುಪಿಡ್ ಚಿಂತನೆ ಎನ್ನುವಿರೇನೋ. ಈ ಒಂದು ವಾರದಿಂದ ಭಾರತೀಯ ಕ್ರೀಡಾರಂಗದಲ್ಲೂ ಇಂತದೊಂದು ಸ್ಟುಪಿಡ್ ಯೋಚನೆ ಹರಿದಾಡುತ್ತಿದೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮನ್ಸೂರ್ ಆಲಿ ಖಾನ್ ಪಟೌಡಿ, ಧೋನಿ ನೇತ್ರತ್ವದ ಪಡೆ ಗೆಲುವುಗಳ ದಿಗ್ವಿಜಯದಲ್ಲಿದೆ. ಇದು ಭಾರತದ ರಾಷ್ಟ್ರೀಯ ಕ್ರೀಡೆಯನ್ನಾಗಿ ಕ್ರಿಕೆಟ್‌ನ್ನು ಹೆಸರಿಸಲು ಸೂಕ್ತ ಕಾಲ ಎನ್ನುತ್ತಿದ್ದಾರೆ. ಇದಕ್ಕೂ ಹೇಳಬಹುದಲ್ಲವೇ - ಸ್ಟುಪಿಡ್?!
ಹೊಸದೊಂದು ಸಂಸ್ಕೃತಿ ಆರಂಭವಾಗಿದೆ. ಏನಾದರೂ ಮಾಡು, ಎಂತಾದರೂ ಮಾಡು - ನೀ ಸುದ್ದಿಯಲ್ಲಿರು ಎಂಬ ನೀತಿ. ಹಿಂದಿ ಸಿನೆಮಾದ ಲಲನಾಮಣಿಗಳು, ಅಸಂಬದ್ಧವಾಗಿ ಯೋಚಿಸುವ ರಾಜ ಠಾಕ್ರೆ ತರಹದ ರಾಜಕಾರಣಿಗಳು ಏನಾದರೊಂದು ವಿವಾದಾತ್ಮಕ ಹೇಳಿಕೆ ನೀಡಿ ಟೀಕೆ ಟಿಪ್ಪಣಿಗಳಿಗೆ ಕಾರಣರಾಗುವುದು. ಆ ಮೂಲಕ ಸುದ್ದಿಯಲ್ಲಿರುವ ತೃಪ್ತಿ ಹೊಂದುವುದನ್ನು ನೋಡುತ್ತಿದ್ದೇವೆ.
ಬಹುಷಃ ಪಟೌಡಿಯವರಿಗೆ ಇದರ ಗಾಳಿ ಸೋಂಕಿರಬಹುದು! ಅಥವಾ ಪತ್ನಿ ಶರ್ಮಿಳಾ ಟಾಗೋರ್, ಮಗ ಸೈಫ್, ಮಗಳು... ಹೀಗೆ ಮನೆಯ ಉಳಿದವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುವಾಗ ತಾನು ಮಾತ್ರ ಬೆಳಕಲ್ಲಿ ಇಲ್ಲದ ಕುರುಕುರಿಯಲ್ಲಿದ್ದರೇನೋ. ಅವಕಾಶ ಸಿಕ್ಕಾಗ ವಿವಾದದ ಕಡ್ಡಿ ಗೀರಿಬಿಟ್ಟರು. ಹಾಕಿ ಕಾಲ ಮುಗಿಯಿತು. ಕ್ರಿಕೆಟ್‌ನ್ನು ರಾಷ್ಟ್ರೀಯ ಕ್ರೀಡೆಯನ್ನಾಗಿ ಮಾಡಲು ಇದು ಸಕಾಲ. ಕಾರಣ ಭಾರತ ಕ್ರಿಕೆಟ್ ತಂಡ ಈಗ ಅತ್ಯುತ್ತಮ ಪ್ರದರ್ಶನ ನೀಡುತ್ತದೆ. ಹಾಗಾಗಿ ರಾಷ್ಟ್ರೀಯ ಸ್ಥಾನ ಮಾನವನ್ನು ವರ್ಗಾಯಿಸಬೇಕು ಕ್ರಿಕೆಟ್ ಕುರಿತಂತೆ ಎಲ್ಲ ಗೌರವಗಳನ್ನಿಟ್ಟುಕೊಂಡೂ ಮನಸ್ಸು ಉಲಿಯುತ್ತದೆ, ಸ್ಟುಪಿಡ್!
ರಾಷ್ಟ್ರೀಯ ಕ್ರೀಡೆಯ ಸ್ಥಾನವನ್ನು ವರ್ಗಾಯಿಸುವುದು ಸಾಧ್ಯವಾದೀತು. ಆದರೆ ‘ಮಾನ’ದ ಮಾತು ಬಂದರೆ ಕ್ರ್ರಿಕೆಟ್ ಕೊನೆಯ ಬೆಂಚ್‌ಗೆ ಸ್ಪರ್ಧಿಸುವ ಸ್ಥಿತಿ. ಮ್ಯಾಚ್ ಫಿಕ್ಸಿಂಗ್ ಹಗರಣ ಕ್ರಿಕೆಟ್‌ನ್ನು ಕಾಡಿದಷ್ಟು ಇನ್ನಾವ ಆಟವನ್ನೂ ಹಿಂಸಿಸಿಲ್ಲ. ಆಸಿಫ್, ವಾರ್ನ್ ಮೊದಲಾದವರ ನಿಷೇಧಿತ ದ್ರವ್ಯ ಸೇವನೆ ಇತಿಹಾಸದಲ್ಲಿದೆ. ಬಿಡಿ, ಕ್ರಿಕೆಟ್‌ನ ಮಾನ ಹರಾಜು ಹಾಕುವ ಅಗತ್ಯವಿಲ್ಲ. ಮುಖ್ಯವಾಗಿ, ಜನಪ್ರಿಯತೆಯ ಆಧಾರದಲ್ಲಿ ರಾಷ್ಟ್ರೀಯ ಕ್ರೀಡೆಯ ಸ್ಥಾನ ಘೋಷಣೆಯನ್ನು ಯಾವ ಮಹಾತ್ಮನು ಚಿಂತಕರ ತಲೆಯಲ್ಲಿ ತುಂಬಿರುವನೋ ಗೊತ್ತಿಲ್ಲ. ಅಂತವರಿಗೆ ರೇಗಿ ಹೇಳಲೇಬೇಕಾಗುತ್ತದೆ, ‘ಸ್ಟುಪಿಡ್’!
ಆ ಮಟ್ಟಿಗೆ ಚೆಸ್ ಆಟವನ್ನು ರಾಷ್ಟ್ರೀಯ ಕ್ರೀಡೆಯನ್ನಾಗಿಸಬೇಕು ಎಂಬ ಕೂಗು ಎದ್ದಿದ್ದರೆ ಅದನ್ನು ಸಮರ್ಥಿಸಲು ಹೆಚ್ಚು ಕಾರಣಗಳಿರುತ್ತಿತ್ತು. ಸದ್ಯ ವಿಶ್ವನಾಥನ್ ಆನಂದ್ ವಿಶ್ವ ಚಾಂಪಿಯನ್ ಎಂಬ ಹಿನ್ನೆಲೆಯಲ್ಲಾಗಲಿ, ಭಾರತ ಪ್ರಸ್ತುತ ಎರಡು ಡಜನ್ ಗ್ರಾಂಡ್‌ಮಾಸ್ಟರ್‌ಗಳನ್ನು ಪಡೆದು ಸಮೃದ್ಧ ಸ್ಥಿತಿಯಲ್ಲಿದೆ ಎಂಬುದಾಗಲಿ ಈ ಮಾತನ್ನಾಡಲು ಪ್ರೇರೇಪಿಸಿಲ್ಲ. ಹೇಳಿ ಕೇಳಿ ಚದುರಂಗದ ಮೂಲವೇ ಭಾರತ. ಈ ಆಟ ಹುಟ್ಟಿದ್ದು ನಮ್ಮ ದೇಶದಲ್ಲಿ. ಅಂದ ಮೇಲೆ ರಾಷ್ಟ್ರೀಯ ಕ್ರೀಡೆಯ ಸ್ಥಾನ ಪಡೆಯಲು ಹಾಕಿಯಷ್ಟೇ ಯೋಗ್ಯವಾದದ್ದು ಚೆಸ್. ಗೆಲುವುಗಳ ಲೆಕ್ಕಾಚಾರದಲ್ಲಿ ಚೆಸ್ ಹಾಕಿಯನ್ನು ನಿಸ್ಸಂಶಯವಾಗಿ ಹಿಂದೆ ಹಾಕುತ್ತದೆ.
ಅಲ್ಲದೆ ಇಂದು ಚೆಸ್‌ಗೆ ಕಾರ್ಫೋರೇಟ್ ವಲಯದ ಪ್ರಾಯೋಜನೆ ದೊಡ್ಡ ಪ್ರಮಾಣದಲ್ಲಿ ಲಭಿಸಿಬಿಟ್ಟರೆ ಭಾರತೀಯ ಚೆಸ್ ಪ್ರತಿಭೆಗಳು, ಗ್ರಾಂಡ್‌ಮಾಸ್ಟರ್‌ಗಳು ಅದ್ಭುತವನ್ನೇ ಸೃಷ್ಟಿಸಬಲ್ಲರು. ಈ ಹಿಂದಿನ ಜಿಎಂ ದಿವ್ಯೇಂದು ಬರುವಾ, ಪ್ರವೀಣ್ ತಿಪ್ಸೆ ಇತರರು ತುಂಬಾ ಮಹತ್ವದ ಗೆಲುವುಗಳನ್ನು ಪಡೆಯಲಿಲ್ಲ ಎಂದು ಫ್ಲಾಶ್‌ಬ್ಯಾಕ್ ಹೇಳುತ್ತದೆ. ನಿಜಕ್ಕಾದರೆ ಬಹುಸಂಖ್ಯಾತ ಜಿಎಂಗಳು ವಿದೇಶಿ ಟೂರ್ನಿಯ ಪ್ರಾವಸ ವೆಚ್ಚ, ದುಬಾರಿ ಬೆಲೆಯ ಸೆಕೆಂಡ್ಸ್, ಚೆಸ್ ಪುಸ್ತಕಗಳು, ಸಾಫ್ಟ್‌ವೇರ್‌ಗಳನ್ನು ಭರಿಸಲಾಗದೆ ಭಾರತದಲ್ಲಿ ಕಮರಿ ಹೋಗುತ್ತಿದ್ದಾರೆ.
ಬಹುಷಃ ಭಾರತೀಯ ಹಾಕಿಯ ಬಗ್ಗೆ ಹೇಳುವಾಗಲೂ ಇದನ್ನೇ  ಹೇಳಬೇಕಾಗುತ್ತದೆ. ಪ್ರಸ್ತುತ ಹಾಕಿಯ ಆರೋಗ್ಯ ಕೆಡಲು ಅದರ ಆಡಳಿತ ವ್ಯವಸ್ಥೆಯ ಹುಳುಕು ಹೆಚ್ಚು ಹೊಣೆ. ವಿದೇಶೀ ಕೋಚ್, ಅತ್ಯಾಧುನಿಕ ತರಬೇತಿ ವ್ಯವಸ್ಥೆ, ಒಳ್ಳೆಯ ಸಂಭಾವನೆಯನ್ನು ಕೊಟ್ಟರೆ ಮತ್ತೇಕೆ ಹಾಕಿ ಚಿಗುರದು? ನೆನಪಿರಲಿ, ಮೂಲತಃ ರಾಹುಲ್ ದ್ರಾವಿಡ್ ಒಬ್ಬ ಹಾಕಿ ಆಟಗಾರ!
ಅದಿರಲಿ, ಹಾಕಿಯ ಅಭಿವೃದ್ಧಿಗೆ ಅಥವಾ ದೇಶದ ಇನ್ನಿತರ ಆಟಗಳ ಅಭಿವೃದ್ಧಿಗೆ ಬಿಸಿಸಿಐ ತನ್ನ ಆದಾಯದಲ್ಲಿ ದೊಡ್ಡ ಮೊತ್ತದ ಹಣವನ್ನು ಮೀಸಲಿಡಬೇಕು. ಬಿಸಿಸಿಐಗೇನು ಕರ್ಮ ಎಂದು ವಾದಿಸುವವರಿದ್ದಾರು. ಅಂತವರು ಗಮನಿಸಬೇಕು, ಭಾರತೀಯ ಕ್ರಿಕೆಟ್ ತಂಡ, ಭಾರತ ಎಂದೆಲ್ಲ ಕರೆಸಿಕೊಳ್ಳುವ ಧೋನಿ ಪಡೆ ವಾಸ್ತವವಾಗಿ ಬಿಸಿಸಿಐ ಇಲೆವೆನ್ ಅಷ್ಟೇ! ಅದು ದೇಶವನ್ನು ಪ್ರತಿನಿಧಿಸುವ ಅಧಿಕೃತ ವ್ಯವಸ್ಥೆಯಲ್ಲ. ಹಾಕಿ, ಟೆನಿಸ್‌ಗಳನ್ನು ದೇಶದ ಕ್ರೀಡಾ ಇಲಾಖೆ ನಿರ್ವಹಿಸಿದರೆ ಕ್ರಿಕೆಟ್‌ನ ಬಿಸಿಸಿಐ ಒಂತರ ಖಾಸಗಿ ಕಂಪನಿ. ಐಸಿಸಿಯ ಮಾನ್ಯತೆಯೇ ಅದರ ಶಕ್ತಿ. ಹಾಗಾಗಿ ಬಿಸಿಸಿಐ ತನ್ನ ತಂಡವನ್ನು ‘ಭಾರತ’ ಎಂದು ಕರೆದು ಭಾವನಾತ್ಮಕವಾಗಿ ಜನರನ್ನು ವಶೀಕರಿಸಿ ಹಣದ ಹೊಳೆಯನ್ನು ತನ್ನತ್ತ ಹರಿಸಿಕೊಳ್ಳುತ್ತಿರುವುದರಿಂದಲೂ ಹೇಳಬೇಕೆನಿಸುತ್ತದೆ, ಅದು ಉಳಿದ ಕ್ರೀಡೆಗಳ ಬೆಳವಣಿಗೆಗೆ ಆದಾಯದ ಕೆಲ ಭಾಗವನ್ನು ಸುಂಕವೆಂಬಂತೆ ಒದಗಿಸಬೇಕು’ ಎಂದು.  ಈ ಮಾತನ್ನು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮನ್ಸೂರ್ ಆಲಿ ಖಾನ್ ಪಟೌಡಿ ಹೇಳಿಬಿಟ್ಟಿದ್ದರೆ ಅವರು ಇನ್ನಷ್ಟು ಎತ್ತರದ ವ್ಯಕ್ತಿಯಾಗುತ್ತಿದ್ದರು.
ಚರ್ಚೆ ನಡೆಯುತ್ತಿದೆ. ಅದೃಷ್ಟಕ್ಕೆ ಹಾಕಿ ಪರವಿರುವವರ ಸಂಖ್ಯೆಯೇ ಹೆಚ್ಚೆಂದು ಭಾಸವಾಗುತ್ತಿದೆ. ದುರಂತವೆಂದರೆ, ಕೊನೆಗೂ ಪಟೌಡಿಯಂತವರ ಮೂಲ ಆಸೆ ಸಿದ್ಧಿಯಾಗಿಬಿಡುತ್ತದೆ. ಅವರದ್ದೊಂದೇ ಧ್ಯೇಯ, ‘ಹೇಗಾದರೂ ಸುದ್ದಿಯಲ್ಲಿರು!’ ಅವರು ಅದರಲ್ಲಿ ಗೆದ್ದುಬಿಡುತ್ತಾರೆ, ಇದು ಮಾತ್ರ ವಿಪರ್ಯಾಸ. 

-ಮಾವೆಂಸ
ಇ ಮೇಲ್- mavemsa@gmail.com 

ಸೋಮವಾರ, ಜನವರಿ 19, 2009

ಕಾಂಗರೂ ನಾಡಿನಲ್ಲಿ ಈಗ ಟೆನಿಸ್ ಕಲರವ!
ಇಂದಿನಿಂದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಚಾಂಪಿಯನ್‌ಶಿಪ್‌ನ ೨೦೦೯ರ ಆವೃತ್ತಿಯ ಆರಂಭ. ಒಂದರ್ಥದಲ್ಲಿ ಇದು ನಮ್ಮ ಓಪನ್! ವರ್ಷದ ನಾಲ್ಕು ಟೆನಿಸ್ ಗ್ರಾನ್‌ಸ್ಲಾಂಗಳಲ್ಲಿ ಚೊಚ್ಚಲು ಸ್ಪರ್ಧೆಯಾದ ಇದು ಏಷ್ಯಾ ಮತ್ತು ಫೆಸಿಫಿಕ್ ಖಂಡವನ್ನು ಪ್ರತಿನಿಧಿಸುತ್ತದೆ. ವ್ಯಾವಹಾರಿಕವಾಗಿ, ಏಷ್ಯಾದ ಬಲು ದೊಡ್ಡ ಜನಸಾಗರವನ್ನು ಆಕರ್ಷಿಸುವ ತಂತ್ರ ಇದಾದರೂ ನಾಲ್ಕು ವೈಲ್ಡ್‌ಕಾರ್ಡ್‌ಗಳು ಏಷ್ಯನ್‌ರಿಗೆ ಮೀಸಲಿಟ್ಟಿರುವ ಲಾಭವೂ ಇದೆ.
ಪುಟ್ಟ ದುರಂತವೆಂದರೆ, ಏಷ್ಯನ್ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ಅಲ್ಲೆಲ್ಲೋ ಫುಟಬಾಲ್ ವಿಶ್ವಕಪ್ ನಡೆದರೆ ಹಾರಾಡುತ್ತವೆ. ಇಂಗ್ಲೆಂಡಿಗರ ವಿಂಬಲ್ಡನ್ ಸುದ್ದಿ ಬರೆಯುವಾಗ ನಮ್ಮೂರಿನ ಸಮಾಚಾರ ಎಂದು ಸಂಭ್ರಮಿಸುತ್ತವೆ. ಕೊನೆಗೆ ಬಾಕ್ಸಿಂಗ್, ಕೌಂಟಿ ಕ್ರಿಕೆಟ್‌ಗೂ ಆದ್ಯತೆ ಸಿಗುತ್ತದೆ. ನಮ್ಮದೆನ್ನಬೇಕಾದ ಆಸ್ಟ್ರೇಲಿಯನ್ ಓಪನ್‌ಗೆ ಸ್ಥಳಾವಕಾಶದ ಕೊರತೆ!!
ಆಸ್ಟ್ರೇಲಿಯನ್ ಗ್ರಾನ್‌ಸ್ಲಾಂ ಹಲವು ಅವತಾರಗಳ ನಂತರವೇ ಈಗಿನ ಸ್ವರೂಪ ತಾಳಿದ್ದು. ಸಂಕ್ಷಿಪ್ತವಾಗಿ ವಿವರಿಸುವುದಾದರೆ, ೧೯೦೫ರಲ್ಲಿ ಈ ಪ್ರತಿಷ್ಠಿತ ಟೂರ್ನಿ ಆರಂಭವಾಯಿತು. ೧೯೮೭ರವರೆಗೂ ಇದು ನಡೆದದ್ದು ಹುಲ್ಲಿನಂಕಣದಲ್ಲಿ. ೧೯೮೮ರಿಂದ ಕೃತಕ ಮಾದರಿಯ ಹಾರ್ಡ್‌ಕೋರ್ಟ್ ಬಳಸಲಾಗಿದೆ. ಈ ಹಾರ್ಡ್‌ಕೋರ್ಟ್ ಮೇಲ್ಮೆಗೆ ತರಾವರಿ ಟರ್ಫ್‌ನ ಪ್ರಯೋಗ ಮಾಡಲಾಗಿದೆ. ಈವರೆಗೆ ರಿಬೌಂಡ್ ಏಸ್ ಟರ್ಫ್ ಇದ್ದರೆ ಕಳೆದ ವರ್ಷದಿಂದ ಫ್ಲೆಕ್ಸಿಕುಷನ್. ದಾಖಲೆಯ ಮಟ್ಟಿಗೆ, ಮ್ಯಾಟ್ಸ್ ವಿಲಾಂಡರ್ ಮಾತ್ರ ಓಪನ್‌ನ ಹುಲ್ಲು ಹಾಗೂ ಹಾರ್ಡ್‌ಕೋರ್ಟ್‌ಗಳೆರಡರಲ್ಲೂ ಸಿಂಗಲ್ಸ್ ಪ್ರಶಸ್ತಿ ಪಡೆದ ಸಾಧಕ.
೧೯೨೦ರ ದಶಕದಲ್ಲಿ ಈ ಟೂರ್ನಿಗೆ ವಿದೇಶಿಯರಾರೂ ಬರುತ್ತಿರಲಿಲ್ಲ. ಅಷ್ಟಕ್ಕೂ ಯುರೋಪ್‌ನಿಂದ ಇಲ್ಲಿಗೆ ಬಂದು ಹೋಗಲು ಬರೋಬ್ಬರಿ ಮೂರು ತಿಂಗಳು ಬೇಕಾಗುತ್ತಿತ್ತು! ಅದು ಹಡಗಿನಲ್ಲಿ ಪಯಣಿಸುತ್ತಿದ್ದ ದಿನಗಳು. ಅಂತೂ ೧೯೪೬ರಲ್ಲಿ ಪ್ರಥಮ ಬಾರಿಗೆ ವಿಮಾನದಲ್ಲಿ ಅಮೆರಿಕನ್  ಆಟಗಾರರು ಬಂದರು. ೧೯೦೬ರಲ್ಲೊಮ್ಮೆ ಕ್ರೈಸ್ಟ್‌ಚರ್ಚ್‌ನಲ್ಲಿ ಈ ಗ್ರಾನ್‌ಸ್ಲಾಂ ನಡೆದಾಗ ಕೇವಲ ೧೦ ಮಂದಿ ಆಟಗಾರರು ಪಾಲ್ಗೊಂಡಿದ್ದರು. ಅದರಲ್ಲಿ ಇಬ್ಬರು ಮಾತ್ರ ಕಾಂಗರೂಗಳು. ನ್ಯೂಜಿಲ್ಯಾಂಡಿಗನೊಬ್ಬ ಪ್ರಶಸ್ತಿ ಗೆದ್ದ. ಆ ಸ್ಪರ್ಧೆ ನಡೆದ ಕ್ರೈಸ್ಟ್‌ಚರ್ಚ್ ಇರುವುದು ನ್ಯೂಜಿಲ್ಯಾಂಡಿನಲ್ಲೇ!
ಹೋಗಲಿ, ಆ ಕಾಲದಲ್ಲಿ ಆಸ್ಟ್ರೇಲಿಯನ್‌ರಾದರೂ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳಬಹುದಿತ್ತಲ್ಲ ಎಂಬ ಪ್ರಶ್ನೆ ಹಾದು ಹೋಗದೇ ಇರದು. ಅದೂ ಕಷ್ಟ. ಪರ್ತ್‌ನಲ್ಲಿ ಈ ಕೂಟ ನಡೆದಾಗ ಖುದ್ದು ಆಸೀಸ್‌ಗಳು ಪಾಲ್ಗೊಳ್ಳುತ್ತಿರಲಿಲ್ಲ. ಕಾರಣವಿತ್ತು. ಪರ್ತ್‌ಗೆ ವಿಕ್ಟೋರಿಯಾ ಅಥವಾ ನ್ಯೂ ಸೌತ್ ವೇಲ್ಸ್‌ನ ಆಟಗಾರರು ತಲುಪಲು ಮೂರು ಸಾವಿರ ಕಿ.ಮೀ.ಗಳ ದಾರಿಯನ್ನು ಕ್ರಮಿಸಬೇಕಿತ್ತು!
ಬಿಡಿ ಬಿಡಿ, ಇವೆಲ್ಲ ಹಳೆಯ ಕತೆ. ಇಂದಿನ ದಿನಕ್ಕೆ ಬಂದರೆ ಆಸ್ಟ್ರೇಲಿಯನ್ ಓಪನ್ ಲಕಲಕ ಹೊಳೆಯುತ್ತದೆ. ಕಳೆದ ವರ್ಷದ ಒಂದು ದಿನ ಹಗಲು ರಾತ್ರಿಗಳ ಒಟ್ಟು ಹಾಜರಿ ೬೨,೮೮೫ ಪ್ರೇಕ್ಷಕರು. ಇದು ಯಾವುದೇ ಗ್ರಾನ್‌ಸ್ಲಾಂನಲ್ಲಿ ಕಾಣಿಸಿಕೊಂಡ ಒಂದು ದಿನದ ಅತ್ಯಧಿಕ ವೀಕ್ಷಕರು. ೨೦೦೮ರಲ್ಲಿ ಒಟ್ಟಾರೆ ೬,೦೫,೭೩೫ ಜನರು ಮೆಲ್ಬೋರ್ನ್‌ನ ಈ ರಾಡ್‌ಲೇವರ್ ಹಾಗೂ ಹೆಸ್ಸಿನ್ನಾ ಸ್ಟೇಡಿಯಂಗಳಿಗೆ ಭೇಟಿ ಕೊಟ್ಟಿದ್ದರು. ಆಸ್ಟ್ರೇಲಿಯಾದ ಆರ್ಥಿಕತೆಗೆ ಪ್ರತಿ ವರ್ಷ ೩೮ ಮಿಲಿಯನ್ ಪೌಂಡ್‌ಗಳನ್ನು ಈ ಓಪನ್ ಹರಿಸುತ್ತಿದೆ ಎಂದ ಮೇಲೆ ಅದರ ಯಶಸ್ಸು ಅರ್ಥವಾಗುವಂತದ್ದು.
೨೦೦೯ರ ಸ್ಪರ್ಧೆ ಬಾಗಿಲಲ್ಲಿರುವಾಗ ಕಾಡುವ ಪ್ರಶ್ನೆ ಒಂದೇ - ಯಾರು ಫೇವರಿಟ್? ಕಳೆದ ವರ್ಷದಿಂದ ಮೆಲ್ಬೋರ್ನ್ ಸ್ಕ್ರಿಪ್ಟ್ ಬದಲಾಗಿದೆ. ಸ್ವಿರ್ಜರ್‌ಲೆಂಡ್‌ನ ರೋಜರ್ ಫೆಡರರ್ ಹಾಟ್ ಫೇವರಿಟ್ ಅಲ್ಲ, ಅಗ್ರಕ್ರಮಾಂಕಿತರೂ ಈಗಲ್ಲ. ರಫೆಲ್ ನಡಾಲ್ ಫೆಡರರ್ ಕೋಟೆಯನ್ನು ಮುರಿದು ನಂ.೧ ಎನಿಸಿಕೊಂಡಿದ್ದಾರೆ. ಆದರೆ ನಡಾಲ್ ಜ್ಞಾಪಿಸಿಕೊಳ್ಳಲೇ ಬೇಕಾದ ಹಲವು ಅಂಶಗಳಿವೆ. ಇಲ್ಲಿನ ಫ್ಲೆಕ್ಸಿ ಟರ್ಫ್ ಬಹುಪಾಲು ಯು.ಎಸ್.ಓಪನ್‌ನ ಡೆಕೋವನ್ನು ಹೋಲುತ್ತದೆ. ಈ ವರ್ಷ ಅತ್ಯಧಿಕ ವೇಗ ಪಡೆದುಕೊಳ್ಳುತ್ತದೆ ಎಂಬುದು ತಜ್ಞರ ಊಹೆ. ಇದು ಫೆಡರರ್‌ರಿಗೆ ಅನುಕೂಲ. ಮುಖ್ಯವಾಗಿ, ಕಳೆದ ಗ್ರಾನ್‌ಸ್ಲಾಂನ್ನು ನ್ಯೂಯಾರ್ಕ್‌ನಲ್ಲಿ, ಡೆಕೋ ಟರ್ಫ್‌ನಲ್ಲಿ ಗೆದ್ದವರು ಇದೇ ಫೆಡರರ್!
ಕಳೆದ ಬಾರಿಯ ವಿಜೇತ ನೋವಾಕ್ ಜ್ವೋಕೋವಿಕ್‌ರಿಗೆ ಮೂರನೇ ಶ್ರೇಯಾಂಕ. ಪ್ರಶಸ್ತಿ ಉಳಿಸಿಕೊಳ್ಳುವ ಸಾಧ್ಯತೆ ಬಗ್ಗೆ ಅವರಿಗೇ ವಿಶ್ವಾಸವಿದ್ದಂತಿಲ್ಲ. ಹೋಗಲಿ, ಕಳೆದ ಸಂಚಿಕೆಯ ರನ್ನರ್ ಅಪ್ ತ್ಸೊಂಗಾ ಕಡೆ ನೋಡಿದರೆ, ಆತ ಗಾಯಗೊಂಡಿದ್ದು ಈ ಬಾರಿ ಆಡುವುದೇ ಅನುಮಾನ! ಕೊನೆಗೂ ಈ ಸ್ಲಾಂ ನಡಾಲ್ - ಫೆಡರರ್‌ರ ಪೈಪೋಟಿಯೇ ಆದೀತು.
ಜ್ವೋಕೋವಿಕ್, ಮಹಿಳಾ ವಿಭಾಗದ ಯಾನಾ ಜಾಂಕೋವಿಕ್, ಆನಾ ಇವಾನೋವಿಕ್, ಇರಾಕೋವಿಕ್ ಎಂಬ ಹೆಸರುಗಳು ಟೆನಿಸ್ ಪ್ರಿಯ ಭಾರತೀಯರನ್ನು ಗೊಂದಲಕ್ಕೀಡು ಮಾಡುತ್ತ ಇರುವುದಂತೂ ನಿಜ. ನಮ್ಮೂರಲ್ಲಿದ್ದಂತೆ ಶಿವ, ಪ್ರಿಯಾಂಕ, ಶಿಲ್ಪಾ, ರಮ್ಯ, ಸೋನಿಯಾ ತರ ಇದ್ದಿದ್ದರೇ?
ಹೆಸರು ಏನು ಮಾಡುತ್ತದೊ ಗೊತ್ತಿಲ್ಲ, ಮಹಿಳಾ ವಿಭಾಗದ ನಂ.೧ ಯಾನಾ ಜಾಂಕೋವಿಕ್ ಗ್ರಾನ್‌ಸ್ಲಾಂ ಗೆಲ್ಲದ ಅಗ್ರಕ್ರಮಾಂಕಿತೆ ಎಂಬ ಅಪವಾದದಿಂದ ಹೊರಬರಲು ಪ್ರಯತ್ನಿಸಬಹುದು. ಯಶಸ್ವಿಯಾದಾರೇ? ಕಷ್ಟ. ವಾಸ್ತವವಾಗಿ, ರಷ್ಯಾದ ಎಲೆನಾ ಡೆಮೆಂಟಿವಾ ಹಾಗೂ ದಿಲಾರಾ ಸಫೀನಾರ ವಿಜಯದ ಸಾಧ್ಯತೆ ಹೆಚ್ಚು ದಟ್ಟವಾಗಿದೆ.
ಮುಖ್ಯ ಡ್ರಾನಲ್ಲಿ ಭಾರತದಿಂದ ಪಾಲ್ಗೊಳ್ಳುತ್ತಿರುವುದು ೧೦೭ನೇ ಶ್ರೇಯಾಂಕಕ್ಕೆ ಕುಸಿದಿರುವ ಸಾನಿಯಾ ಮಿರ್ಜಾ ಮಾತ್ರ. ಅವರು ಮೊದಲ ಸುತ್ತಿನಲ್ಲಿ ಎದುರಿಸುತ್ತಿರುವ ೬೧ನೇ ಕ್ರಮಾಂಕದ ಡೊಮಾಚೋವಸ್ಕ. ಸಾನಿಯಾ ಕಳೆದ ವರ್ಷ ೨೭ನೇ ಕ್ರಮಾಂಕದಲ್ಲಿದ್ದರು ಎಂದುಕೊಂಡು ಧೈರ್ಯ ತಂದುಕೊಳ್ಳುತ್ತಿರುವಾಗಲೇ ನೆನಪಾಗುತ್ತದೆ. ಈ ಡೊಮಾಚೋವಸ್ಕ ಹಿಂದಿನ ಬಾರಿ ಇದೇ ಮೆಲ್ಬೋರ್ನ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಆಡಿದವರು!
ಮುಗಿಸುವ ಮುನ್ನ - ಕ್ರಿಸ್‌ಮಸ್, ಹೊಸವರ್ಷ ಸಂಭ್ರಮವನ್ನು ಅರ್ಧಕ್ಕೇ ಮೊಟಕುಗೊಳಿಸಿ ಆಸ್ಟ್ರೇಲಿಯನ್ ಓಪನ್‌ಗೆ, ಅದರ ಸಿದ್ಧತೆಗೆ ತೊಡಗಬೇಕಾದ್ದು ಕಾಡುತ್ತಲೇ ಇರುವ ಕಷ್ಟ. ರೋಜರ್ ಫೆಡರರ್ ‘ಪ್ರತಿಷ್ಠಿತವಾದುದರಿಂದಲೇ’ ಇದನ್ನು ಫೆಬ್ರವರಿಗೆ ಮುಂದೂಡುವ ವಿಚಾರವನ್ನು ಹರಿಯಬಿಟ್ಟಿದ್ದಾರೆ. ರಫೆಲ್ ನಡಾಲ್ ಬೆಂಬಲಿಸಿದ್ದಾರೆ. ಮುಂದಿನ ೧೪ ದಿನ ಇದು ಚರ್ಚೆಯಲ್ಲಿರುವುದಂತೂ ವಾಸ್ತವ. ನೀವೇನಂತೀರಿ? 

-ಮಾವೆಂಸ
ಇ ಮೇಲ್- mavemsa@gmail.com

ಸ್ನೇಹಿತರೇ ಗಮನಿಸಿ,
ಮೊಬೈಲ್ ಟಾಕ್‌ನ ಬಲುಮುಖ್ಯ ಕಾನೂನು ಮಾಹಿತಿಯನ್ನು ಸದ್ಯದಲ್ಲೇ ಅಪ್‌ಲೋಡ್ ಮಾಡಲಿದ್ದೇನೆ. ತುಸು ಕಾಯುವಿಕೆ ಅನಿವಾರ್ಯ!

ಶುಕ್ರವಾರ, ಜನವರಿ 2, 2009

ಮೊಬೈಲ್ ಇದ್ದಲ್ಲಿ ಮಾತ್ರ ಓದಿ!


 ಮೊಬೈಲ್ ಟಾಕ್ - 2
ರಜಾದಿನ, ಇಲ್ಲ  ಉಚಿತ ಎಸ್‌ಎಂಎಸ್!
 ಸಂಗಮೇಶ್ ಮೆಣಸಿನಕಾಯಿ ಬರೆಯುತ್ತಾರೆ.  
ಕಳೆದ ಅಕ್ಟೋಬರ್ ೧೨ರಂದು ನನಗೆ ಏರ್‌ಟೆಲ್‌ನಿಂದ ಒಂದು ಸಂದೇಶ ಬಂತು. ’ಎಸ್‌ಎಂಎಸ್‌ನ ಸರಾಗ ಅನುಭವಕ್ಕಾಗಿ ಅಕ್ಟೋಬರ್ ೧೩ರಂದು ಉಚಿತ/ರಿಯಾಯತಿ ದರದ ಎಸ್‌ಎಂಎಸ್ ಸೌಲಭ್ಯ ಇರುವುದಿಲ್ಲ. ಮುಂದಿನ ಇಂಥ ಮೂರು ದಿನಗಳನ್ನು ತಿಳಿಯಲು ೩ ಆಂಙS ಎಂದು ೨೨೨ಗೆ ಎಸ್‌ಎಂಎಸ್ ಮಾಡಿ’ ಎಂಬುದು ಅದರ ಸಾರ. ಅದರಂತೆ ನಾನು ಎಸ್‌ಎಂಎಸ್ ಮಾಡಿದಾಗ ಉಚಿತ/ರಿಯಾಯತಿ ದರದ ಎಸ್‌ಎಂಎಸ್ ಸೌಲಭ್ಯ ಇಲ್ಲದ ದಿನಗಳು ಅಕ್ಟೋಬರ್-೧೪, ಅಕ್ಟೋಬರ್-೧೯ ಹಾಗೂ ನವೆಂಬರ್-೦೮ ಎಂಬ ಸಂದೇಶ ಬಂತು.
  ಸರಿ, ಅಕ್ಟೋಬರ್ ೧೯ರಂದು ಯಾರಿಗೂ ಸಂದೇಶ ಕಳುಹಿಸಲಿಲ್ಲ. ಅದೇ ದಿನ ಸಂಜೆ ’ಎಸ್‌ಎಂಎಸ್‌ನ ಸರಾಗ ಅನುಭವಕ್ಕಾಗಿ ಅಕ್ಟೋಬರ್ ೨೦ರಂದು ಉಚಿತ/ರಿಯಾಯತಿ ದರದ ಎಸ್‌ಎಂಎಸ್ ಸೌಲಭ್ಯ ಇರುವುದಿಲ್ಲ. ಮುಂದಿನ ಮೂರು ದಿನಗಳನ್ನು ತಿಳಿಯಲು ೩ಆಂಙS ಎಂದು ೨೨೨ಗೆ ಎಸ್‌ಎಂಎಸ್ ಮಾಡಿ’ ಎಂಬ ಸಂದೇಶ ಬಂತು! ಒಂದು ವಾರದ ಹಿಂದಷ್ಟೇ ಏರ್‌ಟೆಲ್ ಕಂಪನಿಯೇ ಕಳುಹಿಸಿದ ಸಂದೇಶದಲ್ಲಿ ’ಅಕ್ಟೋಬರ್-೨೦..’ ಇರಲಿಲ್ಲ. ಈ ಕುರಿತು ಕಂಪನಿಯ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್‌ಗೆ ದೂರು ಸಲ್ಲಿಸಲು ಕರೆ ಮಾಡಿದರೆ ಇಂಥ ದೂರುಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂಬ ಉತ್ತರ ಬಂತು.
  ಇತ್ತೀಚೆಗಷ್ಟೇ ಉಚಿತ ಸಂದೇಶ ಸೇವೆಯನ್ನು ಹಿಂತೆಗೆದುಕೊಂಡಿರುವ ಮೊಬೈಲ್ ಕಂಪನಿಗಳು ಈಗ ಏನೇನೊ ನೆಪ ಹುಡುಕಿ ಗ್ರಾಹಕರ ಹಣ ದೋಚುವಲ್ಲಿ ಸ್ಪರ್ಧೆ ನಡೆಸಿವೆ. ಇವರಿಗೆ ಹೇಳೋರು-ಕೇಳೋರು ಯಾರೂ ಇಲ್ಲವೇ? ಟ್ರಾಯ್ ಈ ಬಗ್ಗೆ ಗಮನ ಹರಿಸುವುದೇ? ಅಕ್ಟೋಬರ್೨೦ ರಂದು ಸಂಗಮೇಶ್ ಎಸ್‌ಎಂಎಸ್‌ಗಳನ್ನು ಮಾಡಿ ಅದಕ್ಕೆ ಶುಲ್ಕ ಪಾವತಿಸುವಂತಾಗಿತ್ತೇ? ಹಾಗಿದ್ದಲ್ಲಿ ಆ ಮೊತ್ತವನ್ನು ಮರಳಿ ಪಡೆಯಲು ಸಾಧ್ಯವಿದೆ.
ವಾಸ್ತವವಾಗಿ, ಟ್ರಾಯ್‌ನ ಒಂದು ನಿರ್ದೇಶನದಂತೆ  ಆಕ್ಟಿವೇಷನ್ ನಂತರದ ಆರು ತಿಂಗಳವರೆಗೆ ಅಥವಾ ವ್ಯಾಲಿಡಿಟಿ ಅವಧಿಯವರೆಗೆ ಪ್ಲಾನ್‌ನ ಯಾವುದೇ ಅಂಶವನ್ನು ಬದಲಿಸುವಂತಿಲ್ಲ, ಅದಕ್ಕೆ ಕತ್ತರಿ ಹಾಕುವಂತಿಲ್ಲ. ಈ ನಿರ್ದೇಶನದ ಪ್ರಕಾರ, ರಜಾದಿನಗಳಲ್ಲಿ ಉಚಿತ ಎಸ್‌ಎಂಎಸ್‌ನ್ನು ರದ್ದುಗೊಳಿಸುವಂತಿಲ್ಲ ಅಲ್ಲವೇ? ಬಂದಿದೆ ಹೊಸ ನಿಯಮ! 
ನಿರ್ದಿಷ್ಟ ರಜಾದಿನಗಳಲ್ಲಿ ವಿಪರೀತ ಎಸ್‌ಎಂಎಸ್‌ಗಳ ಹಾರಾಟ ನಡೆಯುತ್ತದೆ. ಇದೇ ಕಾರಣದಿಂದ  ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಸೇವಾ ಗುಣಮಟ್ಟ ಕುಸಿಯುತ್ತದೆ. ಸೇವೆ ‘ಜ್ಯಾಮ್’ ಆದೀತು. ಇದನ್ನು ತಪ್ಪಿಸಲು ವರ್ಷದ ಕೆಲವು ದಿನ ಉಚಿತ, ರಿಯಾಯ್ತಿ ಸಂದೇಶ ಸೇವೆಯನ್ನು ಸ್ಥಗಿತಗೊಳಿಸುವುದಕ್ಕೆ ಅವಕಾಶ ನೀಡುವಂತೆ ಮೊಬೈಲ್ ಕಂಪನಿಗಳು ಟ್ರಾಯ್‌ನ್ನು ವಿನಂತಿಸಿದ್ದವು. ತನ್ನ ಹಿಂದಿನ ನಿರ್ದೇಶನದ ಉಲ್ಲಂಘನೆಯಾಗಿದ್ದರೂ ಟ್ರಾಯ್ ಇದಕ್ಕೆ ಒಪ್ಪಿ ಕೆಲವು ನಿಬಂಧನೆಗಳನ್ನು ಹೇರಿತ್ತು. ಅವುಗಳೆಂದರೆ,
* ನಿರ್ದಿಷ್ಟ ದಿನಗಳನ್ನು ಆಯಾ ಕಂಪನಿಗಳು ನಿರ್ಧರಿಸಿ, ಎಸ್‌ಎಂಎಸ್ ಬ್ಲಾಕ್‌ಔಟ್ ದಿನಗಳೆಂದು ಘೋಷಿಸಬಹುದು. ಈ ದಿನಗಳಲ್ಲಿ ಉಚಿತ ಯಾ ರಿಯಾಯ್ತಿ ಸಂದೇಶ ಸೇವೆ ಇರುವುದಿಲ್ಲ. ಆ ದಿನದ ಎಸ್‌ಎಂಎಸ್‌ನ ದರ ನಿಗದಿ ಪಡಿಸುವುದು ಆಯಾ ಕಂಪನಿಗೆ ಸೇರಿದ್ದು. ಆದರೆ ಮೊಬೈಲ್ ಚಂದಾದಾರನಿಗೆ ಪ್ಯಾಕೇಜ್ ಆಕ್ಟೀವೇಷನ್ ವೇಳೆಯಲ್ಲಿಯೇ ಬ್ಲಾಕ್ ಔಟ್ ದಿನ ಯಾವುವೆಂಬ ಮಾಹಿತಿ ಒದಗಿಸಬೇಕು. ಅಲ್ಲದೇ ವರ್ಷಕ್ಕೆ ಗರಿಷ್ಠ ಐದು ದಿನ ಮಾತ್ರ ಬ್ಲಾಕ್ ಔಟ್ ದಿನವೆಂದು ಘೋಷಿಸಬಹುದು.
ಟಿಪ್ಪಣಿ- ವಾಸ್ತವವಾಗಿ, ಮಾಹಿತಿ ಕೊಡುವ ಕ್ರಮ ಜಾರಿಯಲ್ಲಿಲ್ಲ. ಕೇಳಿದರಷ್ಟೇ ವಿವರ ಸಿಗುತ್ತಿದೆ.
* ಬ್ಲಾಕ್‌ಔಟ್ ದಿನದ ಎಸ್‌ಎಂಎಸ್ ದರವನ್ನು ಗ್ರಾಹಕರಿಗೆ ತಿಳಿಸಲೇಬೇಕು. ಒಮ್ಮೆ ಪ್ಯಾಕೇಜ್ ವೇಳೆ ಬ್ಲಾಕ್‌ಔಟ್ ದಿನಗಳನ್ನು ಪ್ರಕಟಿಸಿದ ಮೇಲೆ ಬದಲಿಸುವಂತಿಲ್ಲ, ಹೊಸ ಸೇರ್ಪಡೆ ಮಾಡುವಂತಿಲ್ಲ.
ಟಿಪ್ಪಣಿ - ಮೊಬೈಲ್ ಕಂಪನಿಗಳು ರಂಗೋಲಿ ಕೆಳಗೆ ನುಸುಳುವುದನ್ನು ನಿಲ್ಲಿಸಿಲ್ಲ. ಬಹುಷಃ ಬ್ಲಾಕ್ ಔಟ್ ದಿನಕ್ಕೆ ಟ್ರಾಯ್‌ನ್ನು ಒಪ್ಪಿಸಿದ ನಂತರ ಅವು ಈ ಮಾದರಿಯಲ್ಲಿ ಮತ್ತೆ ಲಾಭ ಹುಡುಕಲಾರಂಭಿಸಿವೆ. ಸಂಗಮೇಶ್ ಮೆಣಸಿನಕಾಯಿಯವರ ಪ್ರಕರಣ ನಿಯಮಬಾಹಿರ ಚಟುವಟಿಕೆಗೆ ಸ್ಪಷ್ಟ ಉದಾಹರಣೆ.
ವಿಪರೀತ ನಿಯಮಗಳನ್ನು ಮಾಡಿ ಟ್ರಾಯ್ ಗ್ರಾಹಕ ಪರ ಎನ್ನಿಸಿಕೊಳ್ಳಲು ಹಾತೊರೆಯುತ್ತದೆ. ನಿಯಮ ಜಾರಿಯಲ್ಲಿ ಎಂತಹ ಆಸಕ್ತಿಯನ್ನೂ ತೋರುವುದಿಲ್ಲ. ಟ್ರಾಯ್ ಆಕ್ಟ್‌ನ ಸೆಕ್ಷನ್ ೧೩ ಅದಕ್ಕೆ ಬ್ರಹ್ಮಾಂಡ ಶಕ್ತಿ ಕೊಟ್ಟಿದ್ದರೂ ನಿರರ್ಥಕವಾಗುತ್ತಿದೆ ಎಂಬ ಮಾತುಗಳು ಗ್ರಾಹಕ ವಲಯದಲ್ಲಿದೆ. ಒಮ್ಮೆ ಮೊಬೈಲ್ ಕ್ಷೇತ್ರದಲ್ಲಿ ಕಣ್ಣಾಡಿಸಿದರೆ ಅದು ನಿಜ ಎನ್ನಿಸುತ್ತದೆ.
ಟ್ರಾಯ್‌ನ್ನು ಮೊಬೈಲ್ ಕಂಪನಿಗಳು ಬ್ಲಾಕ್‌ಔಟ್ ದಿನದ ವಿಷಯದಲ್ಲಿ ಪಿಗ್ಗಿ ಬೀಳಿಸಿದವು ಎನ್ನಬಹುದು. ಕಂಪನಿಯೊಂದು ಎಷ್ಟು ಸಂಖ್ಯೆಯ ಚಂದಾದಾರರನ್ನು ಹೊಂದುತ್ತದೆಯೋ ಅವರೆಲ್ಲರಿಗೂ ಸೇವೆ ಒದಗಿಸುವ ಸಾಮರ್ಥ್ಯವನ್ನು ಅಳವಡಿಸಿಕೊಳ್ಳಲೇಬೇಕು. ‘ಟ್ರಾಫಿಕ್ ಜ್ಯಾಮ್’ ಮಾತ್ರ ಆಗಬಾರದು. ಬ್ಲಾಕ್ ಔಟ್ ಪ್ರಶ್ನೆ ಉದ್ಭವಿಸಬಾರದು. ಇವತ್ತು ಸುಳ್ಳೇ ಬ್ಲಾಕ್‌ಔಟ್ ಘೋಷಿಸಿ ಅಮಾಯಕ ಚಂದಾದಾರರ ಕೈ ತಪ್ಪಿ ಮಾಡಿದ ಎಸ್‌ಎಂಎಸ್‌ನಿಂದ ಮೊಬೈಲ್ ಕಂಪನಿಗಳು ಹಣವನ್ನು ಗೋರಿಕೊಳ್ಳುತ್ತಲೇ ಇವೆ. ಟ್ರಾಯ್ ತಣ್ಣಗಿದೆ!
- ಮಾವೆಂಸ. mavemsa@gmail.com

 
200812023996