ಶುಕ್ರವಾರ, ಜನವರಿ 23, 2009

ಕ್ರಿಕೆಟ್‌ಗೆ ಹಾಕಿಯನ್ನು ಸೋಲಿಸುವ ತವಕ?
ದೇಶದೆಲ್ಲೆಡೆ ಕೆರೆಗಳು ಮಾಯವಾಗುತ್ತಿವೆ, ಸೈಟ್‌ಗಳಾಗುತ್ತಿವೆ. ಕಾಂಪ್ಲೆಕ್ಸ್ ಕಟ್ಟಲಾಗುತ್ತಿದೆ. ಹೀಗಾಗಿ ಸುಂದರ ಕಮಲದ ಹೂವುಗಳು ಎಲ್ಲಿ ಅರಳಬೇಕು? ಅವೂ ನಾಶವಾಗುತ್ತಿವೆ. ಇದೇ ವೇಳೆ ಕೃಷಿಕರು, ಕಾರ್ಪೋರೇಟ್ ವಲಯಗಳು ದೊಡ್ಡ ಪ್ರಮಾಣದಲ್ಲಿ ಆರ್ಕಿಡ್‌ಗಳನ್ನು ಬೆಳೆಯುತ್ತಿದ್ದಾರೆ, ಟನ್ ಲೆಕ್ಕದಲ್ಲಿ ರಫ್ತಾಗುತ್ತಿದೆ. ವಿದೇಶಿ ವಿನಿಮಯದಲ್ಲಿ ಡಾಲರ್ ಹರಿದುಬರುತ್ತಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ನಮ್ಮ ರಾಷ್ಟ್ರೀಯ ಪುಷ್ಪ ಗೌರವವನ್ನು ಕಮಲದ ಹೂವಿಗೆ ಬದಲು ಆರ್ಕಿಡ್‌ಗೆ ಕೊಡಬೇಕಾಗುತ್ತದೆ, ಅಲ್ಲವೇ?
ಸ್ಟುಪಿಡ್ ಚಿಂತನೆ ಎನ್ನುವಿರೇನೋ. ಈ ಒಂದು ವಾರದಿಂದ ಭಾರತೀಯ ಕ್ರೀಡಾರಂಗದಲ್ಲೂ ಇಂತದೊಂದು ಸ್ಟುಪಿಡ್ ಯೋಚನೆ ಹರಿದಾಡುತ್ತಿದೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮನ್ಸೂರ್ ಆಲಿ ಖಾನ್ ಪಟೌಡಿ, ಧೋನಿ ನೇತ್ರತ್ವದ ಪಡೆ ಗೆಲುವುಗಳ ದಿಗ್ವಿಜಯದಲ್ಲಿದೆ. ಇದು ಭಾರತದ ರಾಷ್ಟ್ರೀಯ ಕ್ರೀಡೆಯನ್ನಾಗಿ ಕ್ರಿಕೆಟ್‌ನ್ನು ಹೆಸರಿಸಲು ಸೂಕ್ತ ಕಾಲ ಎನ್ನುತ್ತಿದ್ದಾರೆ. ಇದಕ್ಕೂ ಹೇಳಬಹುದಲ್ಲವೇ - ಸ್ಟುಪಿಡ್?!
ಹೊಸದೊಂದು ಸಂಸ್ಕೃತಿ ಆರಂಭವಾಗಿದೆ. ಏನಾದರೂ ಮಾಡು, ಎಂತಾದರೂ ಮಾಡು - ನೀ ಸುದ್ದಿಯಲ್ಲಿರು ಎಂಬ ನೀತಿ. ಹಿಂದಿ ಸಿನೆಮಾದ ಲಲನಾಮಣಿಗಳು, ಅಸಂಬದ್ಧವಾಗಿ ಯೋಚಿಸುವ ರಾಜ ಠಾಕ್ರೆ ತರಹದ ರಾಜಕಾರಣಿಗಳು ಏನಾದರೊಂದು ವಿವಾದಾತ್ಮಕ ಹೇಳಿಕೆ ನೀಡಿ ಟೀಕೆ ಟಿಪ್ಪಣಿಗಳಿಗೆ ಕಾರಣರಾಗುವುದು. ಆ ಮೂಲಕ ಸುದ್ದಿಯಲ್ಲಿರುವ ತೃಪ್ತಿ ಹೊಂದುವುದನ್ನು ನೋಡುತ್ತಿದ್ದೇವೆ.
ಬಹುಷಃ ಪಟೌಡಿಯವರಿಗೆ ಇದರ ಗಾಳಿ ಸೋಂಕಿರಬಹುದು! ಅಥವಾ ಪತ್ನಿ ಶರ್ಮಿಳಾ ಟಾಗೋರ್, ಮಗ ಸೈಫ್, ಮಗಳು... ಹೀಗೆ ಮನೆಯ ಉಳಿದವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುವಾಗ ತಾನು ಮಾತ್ರ ಬೆಳಕಲ್ಲಿ ಇಲ್ಲದ ಕುರುಕುರಿಯಲ್ಲಿದ್ದರೇನೋ. ಅವಕಾಶ ಸಿಕ್ಕಾಗ ವಿವಾದದ ಕಡ್ಡಿ ಗೀರಿಬಿಟ್ಟರು. ಹಾಕಿ ಕಾಲ ಮುಗಿಯಿತು. ಕ್ರಿಕೆಟ್‌ನ್ನು ರಾಷ್ಟ್ರೀಯ ಕ್ರೀಡೆಯನ್ನಾಗಿ ಮಾಡಲು ಇದು ಸಕಾಲ. ಕಾರಣ ಭಾರತ ಕ್ರಿಕೆಟ್ ತಂಡ ಈಗ ಅತ್ಯುತ್ತಮ ಪ್ರದರ್ಶನ ನೀಡುತ್ತದೆ. ಹಾಗಾಗಿ ರಾಷ್ಟ್ರೀಯ ಸ್ಥಾನ ಮಾನವನ್ನು ವರ್ಗಾಯಿಸಬೇಕು ಕ್ರಿಕೆಟ್ ಕುರಿತಂತೆ ಎಲ್ಲ ಗೌರವಗಳನ್ನಿಟ್ಟುಕೊಂಡೂ ಮನಸ್ಸು ಉಲಿಯುತ್ತದೆ, ಸ್ಟುಪಿಡ್!
ರಾಷ್ಟ್ರೀಯ ಕ್ರೀಡೆಯ ಸ್ಥಾನವನ್ನು ವರ್ಗಾಯಿಸುವುದು ಸಾಧ್ಯವಾದೀತು. ಆದರೆ ‘ಮಾನ’ದ ಮಾತು ಬಂದರೆ ಕ್ರ್ರಿಕೆಟ್ ಕೊನೆಯ ಬೆಂಚ್‌ಗೆ ಸ್ಪರ್ಧಿಸುವ ಸ್ಥಿತಿ. ಮ್ಯಾಚ್ ಫಿಕ್ಸಿಂಗ್ ಹಗರಣ ಕ್ರಿಕೆಟ್‌ನ್ನು ಕಾಡಿದಷ್ಟು ಇನ್ನಾವ ಆಟವನ್ನೂ ಹಿಂಸಿಸಿಲ್ಲ. ಆಸಿಫ್, ವಾರ್ನ್ ಮೊದಲಾದವರ ನಿಷೇಧಿತ ದ್ರವ್ಯ ಸೇವನೆ ಇತಿಹಾಸದಲ್ಲಿದೆ. ಬಿಡಿ, ಕ್ರಿಕೆಟ್‌ನ ಮಾನ ಹರಾಜು ಹಾಕುವ ಅಗತ್ಯವಿಲ್ಲ. ಮುಖ್ಯವಾಗಿ, ಜನಪ್ರಿಯತೆಯ ಆಧಾರದಲ್ಲಿ ರಾಷ್ಟ್ರೀಯ ಕ್ರೀಡೆಯ ಸ್ಥಾನ ಘೋಷಣೆಯನ್ನು ಯಾವ ಮಹಾತ್ಮನು ಚಿಂತಕರ ತಲೆಯಲ್ಲಿ ತುಂಬಿರುವನೋ ಗೊತ್ತಿಲ್ಲ. ಅಂತವರಿಗೆ ರೇಗಿ ಹೇಳಲೇಬೇಕಾಗುತ್ತದೆ, ‘ಸ್ಟುಪಿಡ್’!
ಆ ಮಟ್ಟಿಗೆ ಚೆಸ್ ಆಟವನ್ನು ರಾಷ್ಟ್ರೀಯ ಕ್ರೀಡೆಯನ್ನಾಗಿಸಬೇಕು ಎಂಬ ಕೂಗು ಎದ್ದಿದ್ದರೆ ಅದನ್ನು ಸಮರ್ಥಿಸಲು ಹೆಚ್ಚು ಕಾರಣಗಳಿರುತ್ತಿತ್ತು. ಸದ್ಯ ವಿಶ್ವನಾಥನ್ ಆನಂದ್ ವಿಶ್ವ ಚಾಂಪಿಯನ್ ಎಂಬ ಹಿನ್ನೆಲೆಯಲ್ಲಾಗಲಿ, ಭಾರತ ಪ್ರಸ್ತುತ ಎರಡು ಡಜನ್ ಗ್ರಾಂಡ್‌ಮಾಸ್ಟರ್‌ಗಳನ್ನು ಪಡೆದು ಸಮೃದ್ಧ ಸ್ಥಿತಿಯಲ್ಲಿದೆ ಎಂಬುದಾಗಲಿ ಈ ಮಾತನ್ನಾಡಲು ಪ್ರೇರೇಪಿಸಿಲ್ಲ. ಹೇಳಿ ಕೇಳಿ ಚದುರಂಗದ ಮೂಲವೇ ಭಾರತ. ಈ ಆಟ ಹುಟ್ಟಿದ್ದು ನಮ್ಮ ದೇಶದಲ್ಲಿ. ಅಂದ ಮೇಲೆ ರಾಷ್ಟ್ರೀಯ ಕ್ರೀಡೆಯ ಸ್ಥಾನ ಪಡೆಯಲು ಹಾಕಿಯಷ್ಟೇ ಯೋಗ್ಯವಾದದ್ದು ಚೆಸ್. ಗೆಲುವುಗಳ ಲೆಕ್ಕಾಚಾರದಲ್ಲಿ ಚೆಸ್ ಹಾಕಿಯನ್ನು ನಿಸ್ಸಂಶಯವಾಗಿ ಹಿಂದೆ ಹಾಕುತ್ತದೆ.
ಅಲ್ಲದೆ ಇಂದು ಚೆಸ್‌ಗೆ ಕಾರ್ಫೋರೇಟ್ ವಲಯದ ಪ್ರಾಯೋಜನೆ ದೊಡ್ಡ ಪ್ರಮಾಣದಲ್ಲಿ ಲಭಿಸಿಬಿಟ್ಟರೆ ಭಾರತೀಯ ಚೆಸ್ ಪ್ರತಿಭೆಗಳು, ಗ್ರಾಂಡ್‌ಮಾಸ್ಟರ್‌ಗಳು ಅದ್ಭುತವನ್ನೇ ಸೃಷ್ಟಿಸಬಲ್ಲರು. ಈ ಹಿಂದಿನ ಜಿಎಂ ದಿವ್ಯೇಂದು ಬರುವಾ, ಪ್ರವೀಣ್ ತಿಪ್ಸೆ ಇತರರು ತುಂಬಾ ಮಹತ್ವದ ಗೆಲುವುಗಳನ್ನು ಪಡೆಯಲಿಲ್ಲ ಎಂದು ಫ್ಲಾಶ್‌ಬ್ಯಾಕ್ ಹೇಳುತ್ತದೆ. ನಿಜಕ್ಕಾದರೆ ಬಹುಸಂಖ್ಯಾತ ಜಿಎಂಗಳು ವಿದೇಶಿ ಟೂರ್ನಿಯ ಪ್ರಾವಸ ವೆಚ್ಚ, ದುಬಾರಿ ಬೆಲೆಯ ಸೆಕೆಂಡ್ಸ್, ಚೆಸ್ ಪುಸ್ತಕಗಳು, ಸಾಫ್ಟ್‌ವೇರ್‌ಗಳನ್ನು ಭರಿಸಲಾಗದೆ ಭಾರತದಲ್ಲಿ ಕಮರಿ ಹೋಗುತ್ತಿದ್ದಾರೆ.
ಬಹುಷಃ ಭಾರತೀಯ ಹಾಕಿಯ ಬಗ್ಗೆ ಹೇಳುವಾಗಲೂ ಇದನ್ನೇ  ಹೇಳಬೇಕಾಗುತ್ತದೆ. ಪ್ರಸ್ತುತ ಹಾಕಿಯ ಆರೋಗ್ಯ ಕೆಡಲು ಅದರ ಆಡಳಿತ ವ್ಯವಸ್ಥೆಯ ಹುಳುಕು ಹೆಚ್ಚು ಹೊಣೆ. ವಿದೇಶೀ ಕೋಚ್, ಅತ್ಯಾಧುನಿಕ ತರಬೇತಿ ವ್ಯವಸ್ಥೆ, ಒಳ್ಳೆಯ ಸಂಭಾವನೆಯನ್ನು ಕೊಟ್ಟರೆ ಮತ್ತೇಕೆ ಹಾಕಿ ಚಿಗುರದು? ನೆನಪಿರಲಿ, ಮೂಲತಃ ರಾಹುಲ್ ದ್ರಾವಿಡ್ ಒಬ್ಬ ಹಾಕಿ ಆಟಗಾರ!
ಅದಿರಲಿ, ಹಾಕಿಯ ಅಭಿವೃದ್ಧಿಗೆ ಅಥವಾ ದೇಶದ ಇನ್ನಿತರ ಆಟಗಳ ಅಭಿವೃದ್ಧಿಗೆ ಬಿಸಿಸಿಐ ತನ್ನ ಆದಾಯದಲ್ಲಿ ದೊಡ್ಡ ಮೊತ್ತದ ಹಣವನ್ನು ಮೀಸಲಿಡಬೇಕು. ಬಿಸಿಸಿಐಗೇನು ಕರ್ಮ ಎಂದು ವಾದಿಸುವವರಿದ್ದಾರು. ಅಂತವರು ಗಮನಿಸಬೇಕು, ಭಾರತೀಯ ಕ್ರಿಕೆಟ್ ತಂಡ, ಭಾರತ ಎಂದೆಲ್ಲ ಕರೆಸಿಕೊಳ್ಳುವ ಧೋನಿ ಪಡೆ ವಾಸ್ತವವಾಗಿ ಬಿಸಿಸಿಐ ಇಲೆವೆನ್ ಅಷ್ಟೇ! ಅದು ದೇಶವನ್ನು ಪ್ರತಿನಿಧಿಸುವ ಅಧಿಕೃತ ವ್ಯವಸ್ಥೆಯಲ್ಲ. ಹಾಕಿ, ಟೆನಿಸ್‌ಗಳನ್ನು ದೇಶದ ಕ್ರೀಡಾ ಇಲಾಖೆ ನಿರ್ವಹಿಸಿದರೆ ಕ್ರಿಕೆಟ್‌ನ ಬಿಸಿಸಿಐ ಒಂತರ ಖಾಸಗಿ ಕಂಪನಿ. ಐಸಿಸಿಯ ಮಾನ್ಯತೆಯೇ ಅದರ ಶಕ್ತಿ. ಹಾಗಾಗಿ ಬಿಸಿಸಿಐ ತನ್ನ ತಂಡವನ್ನು ‘ಭಾರತ’ ಎಂದು ಕರೆದು ಭಾವನಾತ್ಮಕವಾಗಿ ಜನರನ್ನು ವಶೀಕರಿಸಿ ಹಣದ ಹೊಳೆಯನ್ನು ತನ್ನತ್ತ ಹರಿಸಿಕೊಳ್ಳುತ್ತಿರುವುದರಿಂದಲೂ ಹೇಳಬೇಕೆನಿಸುತ್ತದೆ, ಅದು ಉಳಿದ ಕ್ರೀಡೆಗಳ ಬೆಳವಣಿಗೆಗೆ ಆದಾಯದ ಕೆಲ ಭಾಗವನ್ನು ಸುಂಕವೆಂಬಂತೆ ಒದಗಿಸಬೇಕು’ ಎಂದು.  ಈ ಮಾತನ್ನು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮನ್ಸೂರ್ ಆಲಿ ಖಾನ್ ಪಟೌಡಿ ಹೇಳಿಬಿಟ್ಟಿದ್ದರೆ ಅವರು ಇನ್ನಷ್ಟು ಎತ್ತರದ ವ್ಯಕ್ತಿಯಾಗುತ್ತಿದ್ದರು.
ಚರ್ಚೆ ನಡೆಯುತ್ತಿದೆ. ಅದೃಷ್ಟಕ್ಕೆ ಹಾಕಿ ಪರವಿರುವವರ ಸಂಖ್ಯೆಯೇ ಹೆಚ್ಚೆಂದು ಭಾಸವಾಗುತ್ತಿದೆ. ದುರಂತವೆಂದರೆ, ಕೊನೆಗೂ ಪಟೌಡಿಯಂತವರ ಮೂಲ ಆಸೆ ಸಿದ್ಧಿಯಾಗಿಬಿಡುತ್ತದೆ. ಅವರದ್ದೊಂದೇ ಧ್ಯೇಯ, ‘ಹೇಗಾದರೂ ಸುದ್ದಿಯಲ್ಲಿರು!’ ಅವರು ಅದರಲ್ಲಿ ಗೆದ್ದುಬಿಡುತ್ತಾರೆ, ಇದು ಮಾತ್ರ ವಿಪರ್ಯಾಸ. 

-ಮಾವೆಂಸ
ಇ ಮೇಲ್- mavemsa@gmail.com 

1 comments:

ಮನಸ್ವಿ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
 
200812023996