ಬುಧವಾರ, ಆಗಸ್ಟ್ 26, 2009

ಕರೆ - ಖರ್ಚು, ವೆಚ್ಚ ಹೇಗೆ? ಎಷ್ಟು?

ಬಹುಷಃ ಬಿಎಸ್‌ಎನ್‌ಎಲ್ ಸ್ಥಿರ ದೂರವಾಣಿ ಇರಿಸಿಕೊಂಡವರಿಗೆ ಅದರ ಕರೆ ವೆಚ್ಚದ ಬಗ್ಗೆ ಮಾಹಿತಿ ಇರುವುದಿಲ್ಲ. ಬಿಲ್ ತಿಂಗಳ ತುದಿಗಷ್ಟೇ ಬರುವುದರಿಂದ ಅತ್ತ ಯೋಚಿಸುವವರೂ ಕಡಿಮೆ. ಕೆಲ ಬುದ್ಧಿವಂತರು ಬಿಎಸ್‌ಎನ್‌ಎಲ್‌ನ ಉಚಿತ ಮೀಟರ್ ರೀಡಿಂಗ್ ವ್ಯವಸ್ಥೆ 1962ಕ್ಕೆ ಡಯಲ್ ಮಾಡಿ ತಮ್ಮ ಕರೆ ವೆಚ್ಚ ತಿಳಿದುಕೊಳ್ಳುವುದುಂಟು. ಆದರೆ ಈ ಸೌಲಭ್ಯ ಸದ್ಯಕ್ಕೆ ವಿಲ್ ದೂರವಾಣಿ ಗ್ರಾಹಕರಿಗಿಲ್ಲ.
ಹಾಗಾಗಿ ಕರೆ ವೆಚ್ಚದ ಈ ಪುಟ್ಟ ಮಾಹಿತಿ ನಿಮಗೆ ಕೈಗನ್ನಡಿಯಾದೀತು. ಸರಳವಾಗಿ ಹೇಳುವುದಾದರೆ, 50 ಕಿ.ಮೀ ವ್ಯಾಪ್ತಿಯ ಎಲ್ಲ ಕರೆಗಳಿಗೆ ಮೂರು ನಿಮಿಷಗಳ ಅವಧಿಗೆ ಒಂದು ಪಲ್ಸ್ ಅಂದರೆ ಈ ಅವಧಿ ಮಾತುಕತೆಗೆ ಒಂದು ಕರೆ ವೆಚ್ಚ ಈ ಅಂತರ ಮೀರಿದ ಪ್ರತಿ ಕರೆಗೆ ಒಂದು ನಿಮಿಷಕ್ಕೆ ಒಂದು ಪಲ್ಸ್. ಯಾವುದೇ ಕಂಪನಿಯ ಮೊಬೈಲ್‌ಗೂ ಒಂದು ನಿಮಿಷಕ್ಕೆ ಒಂದು ಪಲ್ಸ್.
ಮತ್ತೆ ಗೊಂದಲ ಕಾಡಬಹುದು. ಈ 50 ಕಿ.ಮೀ. ಅಂತರವನ್ನು ಹೇಗೆ ನಿಗದಿಪಡಿಸುವುದು? ನಾವೇ - ಬಿಎಸ್‌ಎನ್‌ಎಲ್‌ನವರೇ? ತಾಂತ್ರಿಕ ಭಾಷೆಗಳನ್ನು ಬಿಟ್ಟಾಕಿಬಿಡೋಣ. ಒಬ್ಬ ಸಾಮಾನ್ಯ ಗ್ರಾಹಕನಿಗೆ ಅರ್ಥವಾಗುವಂತೆ ಈ ಕೆಳಗಿನ ಉದಾಹರಣೆಯಿದೆ.
ಸಾಗರ ಮತ್ತು ಸುತ್ತಮುತ್ತಲಿನ ದೂರವಾಣಿ ವಿನಿಮಯ ಕೆಂದ್ರಗಳ ಕೋಡ್ ನಂಬರ್08183. ಈ ಕೋಡ್ ಇರುವ ಗ್ರಾಹಕರೆಲ್ಲ ಒಂದು ವರ್ಗ. ಇವರಿಗೆ 08389(ಸಿದ್ಧಾಪುರ),08185 (ಸೊರಬ) , 08184 (ಹೊಸನಗರ), 08187 (ಶಿಕಾರಿಪುರ) ಕೋಡ್ ಸಹಿತದ ದೂರವಾಣಿ ಸಂಖ್ಯೆಗಳು 50ಕಿ.ಮೀ. ವ್ಯಾಪ್ತಿಯೊಳಗೇ ಇವೆ. ಅಂದರೆ ಇವರಿಗೆ ಮಾಡುವ ಕರೆಗೆ ಮೂರು ನಿಮಿಷದ ಅವದಿ. ಉಳಿದವಕ್ಕೆಲ್ಲ ಒಂದು ನಿಮಿಷದ ಪಲ್ಸ್.
ನಮ್ಮ ಉಳಿದ ಪ್ರದೇಶದ ಓದುಗರು ಸುಲಭವಾಗಿ ಕರೆ ವೆಚ್ಚ ತಿಳಿದುಕೊಳ್ಳಲು ಇಷ್ಟು ಮಾಡಿದರೆ ಸಾಕು. ತಮ್ಮ ಏರಿಯಾದ ಅಕೌಂಟ್ಸ್ ಆಫೀಸರ್‌ಗೆ ಫೋನ್ ಮಾಡಿ 50 ಕಿ.ಮೀ. ವ್ಯಾಪ್ತಿಗೆ ಬರುವ ಕೋಡ್‌ನಂಬರ್‌ಗಳನ್ನು ತಿಳಿದುಕೊಂಡರೆ ಆಯ್ತು.
ಇನ್ನೂ ಅನುಮಾನವೇ? ಬಿಎಸ್‌ಎನ್‌ಎಲ್‌ನ ಉಚಿತ ಗ್ರಾಹಕ ಸೇವಾ ಕೇಂದ್ರ 1500ಗೆ ಕರೆ ಮಾಡಿ ವಿಚಾರಿಸಿಕೊಳ್ಳಿ.
-ಮಾವೆಂಸ

ಸೋಮವಾರ, ಆಗಸ್ಟ್ 24, 2009

ಜ್ವರ ಜಾಸ್ತಿ ಮಾಡುವ ಥರ್ಮಾಮೀಟರ್ !


* ಥರ್ಮಾಮೀಟರ್‌ಗಳದೇ ತಪ್ಪು ಅಳತೆ!

* ಡಿಜಿಟಲ್ ಥರ್ಮಿ ದುಬಾರಿ

* ಹಿಕ್ಸ್‌ನ ಅಕ್ಯುಟೆಮ್, ಓವಲ್ ಇದ್ದುದರಲ್ಲಿ ಕ್ಷೇಮ


ಯಾಕೋ ಜ್ವರದ ಅನುಭವ, ಚಳಿ ಚಳಿ. ಜ್ವರದ ಥರ್ಮಾಮೀಟರ್ ಬಳಸಿ, ಜ್ವರ ಎಷ್ಟಿದೆ ನೋಡಿದರೆ... ಅಬ್ಬಬ್ಬಾ, ೧೦೩೦! ಊಹ್ಞೂ, ಆಗಲೂ ೧೦೩ ಡಿಗ್ರಿಗಳಷ್ಟು ಭಯ ಬೀಳುವುದು ಬೇಡ. ಏತಕ್ಕಪ್ಪಾಂದ್ರೆ, ಈ ಥರ್ಮಮೀಟರ್ ತೋರಿಸುವ ಮಾಪನವೇ ಸರಿಯಿಲ್ಲ, ಹಿಂದೂಸ್ಥಾನ ಗೋಲ್ಡ್ ಥರ್ಮಾಮೀಟರ್ ತೋರಿಸಿದ ಈ ಲೆಕ್ಕಕ್ಕಿಂತ ವಾಸ್ತವ ಜ್ವರ ೧.೦೬೦ ಕಡಿಮೆಯಿದೆ!
ಇದು ಹಿಂದೂಸ್ಥಾನ್ ಗೋಲ್ಡ್ ಒಂದರ ಕತೆಯಲ್ಲ. ನಮ್ಮ ದೇಶದಲ್ಲಿ ಮಾರಾಟವಾಗುವ ಯಾವ ಬ್ರಾಂಡ್‌ನ ಥರ್ಮಾಮೀಟರ್ರೂ ಸರಿಯಾದ ಮಾಪನ ತೋರಿಸುತ್ತಿಲ್ಲ. ಅಹ್ಮದಾಬಾದ್‌ನ ಕನ್ಸೂಮರ್ ಎಜುಕೇಷನ್ ಮತ್ತು ರೀಸರ್ಚ್ ಸೊಸೈಟಿ ದೇಶದ ಮಾರುಕಟ್ಟೆಯಲ್ಲಿರುವ ೧೮ ಬ್ರಾಂಡ್‌ಗಳನ್ನು ತನ್ನ ಅಧಿಕೃತ ಪ್ರಯೋಗಾಲಯದಲ್ಲಿ ಪರೀಕ್ಷಿಸಿದ್ದು, ಎಲ್ಲವೂ ರೋಗಗ್ರಸ್ಥವಾಗಿವೆ.
ಪಾದರಸ ಮಾಪಕದ ಸಾಲಿಡ್ ಸ್ಟೆಮ್, ಮುಚ್ಚಿದ ಸ್ಕೇಲ್ ಮಾದರಿಯ ಥರ್ಮಮೀಟರ್‌ಗಿಂತ ಡಿಜಿಟಲ್ ಥರ್ಮಿಗಳೇ ವಾಸಿ. ಅವುಗಳಲ್ಲಿ ಬೆಕ್ಟಾನ್ ಡಿಕಿನ್ಸನ್ ಬ್ರಾಂಡ್ ಥರ್ಮಿಯಲ್ಲಿ ೦.೧೧೦ ಗಳಷ್ಟು ವ್ಯತ್ಯಾಸ ಮಾತ್ರವಿದೆ. ಬಿಐಎಸ್ ಉಳಿದ ಥರ್ಮಿಗಳಲ್ಲಿ -+ ೦.೩೬೦ ಈನಷ್ಟು ವ್ಯತ್ಯಾಸಕ್ಕೆ ಮಾನ್ಯತೆಯಿತ್ತಿದೆ. ಆದರೆ ಈವರೆಗೂ ಬಿಐಎಸ್ ಡಿಜಿಟಲ್ ಥರ್ಮಿಗೆ ಮಾನದಂಡವನ್ನೇ ನಿಗದಿ ಪಡಿಸಿಲ್ಲ. ಅಲ್ಲದೇ ಡಿಜಿಟಲ್ ಥರ್ಮಿಗಳ ದರ ಇತರ ಮಾದರಿಗೆ ಹೋಲಿಸಿದರೆ ತೀವ್ರ ದುಬಾರಿ. ಕನಿಷ್ಟ ೧೮ ರಿಂದ ೯೦ ರೂ ಮಧ್ಯೆ ಇವು ಲಭ್ಯವಾದರೆ ಡಿಜಿಟಲ್ ಥರ್ಮಿ ಬೆಲೆ ೩೯೦ ರೂ. ಜ್ವರ ಏರಲು ಈ ವಿಷಯ ಕೇಳಿದರೂ ಸಾಕು!
೨೦೦೦ದ ಜುಲೈನಲ್ಲಿ ಸಿಇಆರ್‌ಎಸ್ ೨೧ ಥರ್ಮಿ ಬ್ರಾಂಡ್‌ಗಳನ್ನು ಪರೀಕ್ಷಿಸಿತು. ಆಗ ೨೦ ಬ್ರಾಂಡ್‌ಗಳು ನಿಖರ ಉಷ್ಣಾಂಶ ತೋರಿಸಲು ವಿಫಲವಾಗಿದ್ದವು. ಅಂದು ೯೮.೬ ೦ಈನ ಉಷ್ಣತೆಯ ಪರೀಕ್ಷೆ ಮಾತ್ರ ಮಾಡಲಾಗಿತ್ತು. ಅಲ್ಲಿಂದ ೭ ವರ್ಷಗಳು ಸಂದವು. ಗುಣಮಟ್ಟ ಹೆಚ್ಚಬೇಕಿತ್ತು. ಈಗ ಸಿಇಆರ್‌ಎಸ್ ೧೦೨.೨೦ ಹಾಗೂ ೧೦೫.೮೦ ಈನ ಉಷ್ಣತೆಯಲ್ಲೂ ಥರ್ಮಿಗಳನ್ನು ಪರಿಶೀಲಿಸಿತು. ಈ ಬಾರಿ ಅಷ್ಟಕ್ಕೆ ಅಷ್ಟೂ ಬ್ರಾಂಡ್‌ಗಳಷ್ಟೂ ಬ್ರಾಂಡ್‌ಗಳದ್ದು ಸೋಲು!
ಸಾಧ್ಯಕ್ಕಂತೂ ಎಲ್ಲವೂ ಸರಿ ಆಗಲಾರದು. ನಾವು ಥರ್ಮಿಗಳನ್ನು ಉಪಯೋಗಿಸಲೇಬೇಕು. ರೋಗದ ಮೂಲಭೂತ ಲಕ್ಷಣಗಳನ್ನು ಅರಿಯಲು ವೈದ್ಯರೂ ಥರ್ಮಿಗೆ ಮೊರೆ ಹೋಗಲೇ ಬೇಕು. ಹಾಗಾದರೆ ಯಾವ ಬ್ರಾಂಡ್‌ನ್ನು ಬಳಸಬೇಕು? ಮಿಲಿಯನ್ ಡಾಲರ್ ಪ್ರಶ್ನೆಯಿದು.
ವಿಚಿತ್ರವೆಂದರೆ, ಕೆಲವು ಬ್ರಾಂಡ್‌ಗಳು ಎರಡು ಘಟ್ಟದ ಉಷ್ಣತೆಯಲ್ಲಿ ಬಿಐಎಸ್ ಮಾನದಂಡಗಳಿಗೆ ಅನುರೂಪವಾಗಿವೆ. ಹಿಕ್ಸ್ ಅಕುಟೆಮ್ ಭಾರತೀಯ ತಯಾರಿಕೆ. ಇದು ೯೮.೬ ಹಾಗೂ ೧೦೫.೮೦ ಈ ಉಷ್ಣತೆಯಲ್ಲಿ ನಿಖರ ಉಷ್ಣತೆಯನ್ನೇ ದಾಖಲಿಸುತ್ತದೆ. ೧೦೨.೨೦ ಈನಲ್ಲಿ ಮಾತ್ರ ೦.೫೯೦ ಗಳಷ್ಟು ವ್ಯತ್ಯಾಸ. ಆ ಲೆಕ್ಕದಲ್ಲಿ ಈ ಸಾಲಿಡ್ ಸ್ಟೆಮ್ ಬ್ರಾಂಡ್ ಬಳಕೆಗೆ ಇದ್ದುದರಲ್ಲಿ ಆಯ್ಕೆಯಾಗುತ್ತದೆ. ಇದರ ಬೆಲೆಯೂ ಉಳಿದೆಲ್ಲವುಗಳಿಗಿಂತ ಕಡಿಮೆ, ೧೮ ರೂ. ಥರ್ಮಿಗಳ ಸ್ಕೇಲ್ (ಎನ್ ಕ್ಲೋಸ್‌ಡ್) ವರ್ಗದಲ್ಲಿಯೂ ಓವಲ್ ಖರೀದಿಗೆ ಸೂಕ್ತ, ೨೦ರೂ ಬೆಲೆ. ೧೦೨.೨೦ ಮತ್ತು ೧೦೫.೮೦ ಈನಲ್ಲಿ ಖಚಿತ ಮಾಹಿತಿ ಸಿಗುತ್ತದೆ. ೯೮.೬ ಈನಲ್ಲಿ ಮಾತ್ರ ೦.೨೯೦ ವ್ಯತ್ಯಾಸ. ದುಬಾರಿ ಬೆಲೆ ಸಮಸ್ಯೆಯಲ್ಲ ಎನ್ನುವವರು ಡಿಜಿಟಲ್ ಥರ್ಮಿ ಖರೀದಿಸಬಹುದು. ಅವುಗಳಲ್ಲೂ ಕೆಡಿ ೨೦೪ ಎ ಎಂಬ ಬ್ರಾಂಡ್ ನಂಬಲರ್ಹವಲ್ಲ.
ಅಷ್ಟಕ್ಕೂ ಪರೀಕ್ಷಿಸಲ್ಪಟ್ಟ ಬ್ರಾಂಡ್‌ಗಳ ವಿವರ ಬಳಕೆದಾರರಲ್ಲಿ ಇದ್ದರೆ ಚೆನ್ನ, ಸಿಇಆರ್‌ಎಸ್ ಸಾಲಿಡ್ ಸ್ಟೆಮ್ ವರ್ಗದ ಜೆವಿಎಂ ಡಾಕ್ಟರ‍್ಸ್ ಚಾಯ್ಸ್, ಎನ್‌ಬಿ ಸೇಫ್ಟಿ, ಎ-ಒನ್, ಹಿಂದೂಸ್ಥಾನ್ ಡಾಕ್ಟರ್, ಹಿಂದೂಸ್ಥಾನ್ ಗೋಲ್ಡ್ ಮಾದರಿಗಳನ್ನು, ಮುಚ್ಚಿದ ಸ್ಕೇಲ್ ಮಾದರಿಯಲ್ಲಿ ಸೇಫ್ಟಿ ಘಿಘಿಐ, ವೌಡೋ ಎಂಸಿಪಿ, ಕೋಮೆಟ್ ಗೋಲ್ಡ್, ಡಾಕ್ಟರ್, ಗೋಲ್ಡ್ ರಿಯಲ್, ಎಸ್‌ಎಂಐಸಿ ಗೋಲ್ಡ್, ಹಿಕ್ಸ್ ಎಕ್ಸ್‌ಎಲ್, ಎನ್‌ಬಿ ಎಸ್‌ಎಂಐಸಿ ಗೋಲ್ಡ್, ಹಿಕ್ಸ್ ಎಕ್ಸ್‌ಎಲ್, ಎನ್‌ಬಿ ಎಸ್ ಎಂಐಸಿಗೋಲ್ಡ್ ಮತ್ತು ಡಾ. ಮೋರ್‌ಪೆನ್ ಪರೀಕ್ಷೆಗೊಳಪಡಿಸಿತ್ತು
.
ಈಗಲೂ ಜ್ವರ ಇದೆಯೇ?
-ಮಾವೆಂಸ

ಗುರುವಾರ, ಆಗಸ್ಟ್ 20, 2009

ಟೊಮಾಟೋ ಕೆಚಪ್ - ಯಾವುದು ಖರೀದಿಸುವಿರಿ?


ನವದೆಹಲಿಯ ಕನ್ಸೂಮರ್ ವಾಯ್ಸ್ ಸಂಘಟೆನೆ ವ್ಯವಸ್ಥಿತವಾದುದು. ಇದರ ತಂಡ ನಡೆಸುವ ಕೆಲಸಗಳು ಹಲವು. ೨೪ ಘಂಟೆ, ವಾರದ ಏಳೂ ದಿನ ಕಾರ‍್ಯ ನಿರ್ವಹಿಸುವ ಸಹಾಯ ದೂರವಾಣಿ ಸೇವೆ (೦೧೨೪-೩೯೮೯-೮೦೮೦) ನಡೆಸುವುದೂ ಅದರಲ್ಲೊಂದು. ಇದು ತನ್ನ ಪ್ರಯೋಗಾಲಯದಲ್ಲಿ ಗ್ರಾಹಕ ಬಳಕೆ ತಯಾರಿಕೆಗಳ ಪರೀಕ್ಷೆ ನಡೆಸುತ್ತದೆ. ಇತ್ತೀಚೆಗೆ ಅದು ಮಾರುಕಟ್ಟೆಯಲ್ಲಿ ಸಿಗುವ ಸಿದ್ಧ ಟೋಮಾಟೋ ಕೆಚಪ್‌ಗಳ ಪರೀಕ್ಷಾ ವರದಿಯನ್ನು ಬಿಡುಗಡೆ ಮಾಡಿದೆ. ಓದುಗರಿಗಾಗಿ ಆ ಮಾಹಿತಿಗಳು ಇಲ್ಲಿವೆ.
ಸ್ವಾರಸ್ಯವೆಂದರೆ, ಭಾರತದ ಪ್ರಮುಖ ಬ್ರಾಂಡ್‌ಗಳಾದ ಮ್ಯಾಗ್ಗಿ ಮತ್ತು ಕಿಸಾನ್‌ಗಳಿಗಿಂತ ಪಿಟ್ಸ್‌ಬರ್ಗ್ ಮೂಲದ ಹೈಂಜ್ (Heinz))
ಹೆಚ್ಚು ಅಂಕ ಗಳಿಸಿದ್ದು! ಯಾವುದೇ ರಾಸಾಯನಿಕ ಪ್ರಿಜರ್‌ವಿಟಿವ್ ಬಳಸದ, ಸಮತೋಲಿತವಾಗಿ ಸಕ್ಕರೆ ಬೆರೆಸಿರುವ ಹೈಂಜ್‌ಗೆ, ಪ್ರಥಮ ಸ್ಥಾನ- ಇದು ಕೆ.ಜಿ. ಬಾಟಲ್‌ಗೆ ೭೯ರೂ. ಅಮೆರಿಕದಲ್ಲಿ ಟೊಮಾಟೋ ಕೆಚಪ್ ಎಂದರೆ ಹೈಂಜ್ . ಬರುವ ದಿನಗಳಲ್ಲಿ ಭಾರತದಲ್ಲೂ ಅದರದ್ದೇ ಮಾತಾದರೂ ಅಚ್ಚರಿಯಿಲ್ಲ.
ನಂತರದ ಸ್ಥಾನ ಕಿಸಾನ್ ಕೆಚಪ್‌ಗೆ, ೧೯೮೦ರ ದಶಕದವರೆಗೂ ನಾವು ಕೆಚಪ್ ತಯಾರಿಕೆಯಲ್ಲಿ ಕಿಸಾನ್ ಬಿಟ್ಟರೆ ಬೇರೆ ಹೆಸರು ಕೇಳಿದ್ದಿಲ್ಲ. ಆನಂತರವೇ ಮ್ಯಾಗ್ಗಿ ಬಂದಿದ್ದು ವಾಸ್ತವವಾಗಿ, ಮೂರನೇ ಸ್ಥಾನದಲ್ಲಿರುವ ಮ್ಯಾಗ್ಗಿಗೂ ಕಿಸಾನ್‌ಗೂ ಗುಣಾವಗುಣಗಳಲ್ಲಿ ಅಂತಹ ಅಂತರವೇನೂ ಇಲ್ಲ, ಬೆಲೆಯಲ್ಲೂ, ಕಿಸಾನ್‌ಗೆ ೮೫ರೂ. ಮ್ಯಾಗ್ಗಿಗೆ ಇನ್ನೊಂದು ರೂಪಾಯಿ ಜಾಸ್ತಿ. ಉಳಿದಂತೆ ಉತ್ತಮ ಎನ್ನಬಹುದಾದದ್ದು, ಅನುಕ್ರಮ ರ‍್ಯಾಂಕಿಂಗ್‌ನಲ್ಲಿ ಟಾಪ್ಸ್, ಕ್ರೆಮಿಕಾ, ಟೇಸ್ಟಿ ಟ್ರೀಟ್, ಡ್ರಕ್, ಸ್ಮಿತ್ ಎಂಡ್ ಜೋನ್ಸ್, ಇಟ್ಸ್ ಫ್ರೂಟ್, ಪ್ಯಾನ್ ಕೆಚಪ್‌ಗಳಿವೆ.
ಅದೃಷ್ಟಕ್ಕೆ ಭಾರತದ ಎಲ್ಲ ತಯಾರಿಕೆಗಳಲ್ಲಿ ಅರ್ಸೆನಿಕ್, ಸೀಸದ ಅಂಶ ಬಿಐಎಸ್ ನಿಗದಿ ಪಡಿಸಿದ ೧.೧ ಪಿಪಿಎಂಗಿಂತ ಕಡಿಮೆಯೇ ಇದೆ. ಭೂತಾನ್ನ ಡ್ರಕ್ ಕೆಚಪ್ ಪ್ಯಾಕ್ ಮೇಲೆ ಎಫ್‌ಪಿ ಓ ಗುರುತಿಲ್ಲ, ತಯಾರಕರ ಪರವಾನಗಿ ಸಂಖ್ಯೆ ನಮೂದಿಸಿಲ್ಲ. ಸಂಗ್ರಹಿಸಿಡುವ ಕುರಿತ ಮಾಹಿತಿ ಕೇಳಬೇಡಿ. ಅಷ್ಟಕ್ಕೂ ಮ್ಯಾಗ್ಗಿ, ಇಟ್ಸ್ ಫ್ರೂಟ್‌ನಲ್ಲಿ ಮಾತ್ರ ಅಡಕದ ಜೀವ ದ್ರವ್ಯಗಳು ( ನ್ಯೂಟ್ರಿಷನ್) ಯಾವುವು ಎಂಬ ಮಾಹಿತಿಯಿದೆ.
ಇದೊಂದೆಡೆಯಾದರೆ, ಕೆಚಪ್‌ನ ಗುಣಮಟ್ಟ ತಿಳಿದುಕೊಳ್ಳಲು ಇನ್ನೊಂದು ಸರಳ ಮಾದರಿಯಿದೆ ಕೆಚಪ್ ಬಾಟಲಿಯಲ್ಲಿ ಕಣ್ಣರಳಿಸಿ ಗಾಢವಾಗಿ ನೋಡಿ. ಅದರಲ್ಲಿನ ನೀರು ಪ್ರತ್ಯೇಕವಾಗಿ ಕಾಣಿಸಬಾರದು. ಪ್ಯಾನ್ ಕೆಚಪ್ ಬಾಟಲಿಯಲ್ಲಿ ಇಣುಕಿದ ಕನ್ಸೂಮರ್ ವಾಯ್ಸ್‌ಗೆ ನೀರು ಕಾಣಿಸಿತ್ತು!
ಕೆಲವು ಕಾನೂನುಗಳಿವೆ. ಕೆಚಪ್ ತಯಾರಿಕೆಗೆ ಅನುಮತಿ ಪಡೆದವರು ಕೇವಲ ಟೊಮಾಟೋದ ಕೆಚಪ್ ಮಾಡಬೇಕು. ಬೇರಿನ್ನಾವುದೇ ಮಾದರಿಯ ಕೆಚಪ್‌ಗೆ ಕಾನೂನಿನಲ್ಲಿ ಅವಕಾಶವಿಲ್ಲ. ಪ್ರತಿಯೊಂದು ಕೆಚಪ್‌ನಲ್ಲಿ ಟೊಮಾಟೋವೇ ಮುಖ್ಯ ಅಂಶವಾಗಿರಬೇಕು.
ಹಾಗೆಂದಾದರೆ ನಿಜಕ್ಕೂ ಈ ಕೆಚಪ್ ಗಳಲ್ಲಿ ಇರುವ ಟೊಮಾಟೋ ಪ್ರಮಾಣ ವೆಷ್ಟು? ಇದರ ಮಾಹಿತಿಗೆ ಲೈಕೋಪೀನೆ ಪರೀಕ್ಷೆ ನಡೆಸಲಾಗುತ್ತದೆ. ಟೇಸ್ಟಿ ಟ್ರೀಟ್ ೧೪.೭೫ ಎಂಜಿ/೧೦೦ ಗ್ರಾಂ. ಲೈಕೋಪೀನೆ ಹೊಂದಿದ್ದರೆ, ಮ್ಯಾಗ್ಗಿಯಲ್ಲಿ ೧೩.೫೪. ಇವು ಈ ಕ್ಷೇತ್ರದ ಗರಿಷ್ಠ ಫಲಿತಾಂಶ. ಕೆಚಪ್‌ನ ಹೆಸರು ‘ಇಟ್ಸ್ ಫ್ರೂಟ್’ ಎಂದಿದ್ದರೂ ಅದರಲ್ಲಿರುವ ಲೈಕೋಪೀನೆ ಕೇವಲ ೩.೭೯. ಒಂದು ವೆಬ್‌ಸೈಟ್ ಪ್ರಕಾರ, ಕೆಚಪ್‌ನಲ್ಲಿ ೧೭ ಎಂಜಿ/೧೦೦ ಗ್ರಾಂ. ಲೈಕೋಪೀನೆ ಇರಬೇಕು. ಆ ಲೆಕ್ಕದಲ್ಲಿ, ಎಲ್ಲಾ ೧೦ ಬ್ರಾಂಡ್‌ಗಳಲ್ಲಿ ಟೋಮಾಟೋ ಪ್ರಮಾಣದಲ್ಲಿಯೇ ಬರ!
ಕೆಚಪ್‌ಗೆ ಯೀಸ್ಟ್ (ಗಡ್ಡ, ಮೀಸೆ!) ಬರದಂತೆ ತಡೆಯುವುದು ಅಸೆಟಿಕ್ ಆಸಿಡ್ ಬಿಐಎಸ್ ೧.೨ ಶೇ.ದವರೆಗಿನ ಪ್ರಮಾಣವನ್ನು ಅನುಮೋದಿಸಿದೆ. ಪ್ಯಾನ್ ಬ್ರಾಂಡ್‌ನಲ್ಲಿ ಕೇವಲ ೦.೯೯ ಶೇ. ಆಸಿಟಿಕ್ ಆಸಿಡ್ ಇರುವುದು, ಅತ್ಯಂತ ಕನಿಷ್ಠ ಕ್ರೆಮಿಕಾದಲ್ಲಿ ಮಿತಿದಾಟಿ, ಶೇ. ೧.೪೪ ಹೈಂಜ್‌ನಲ್ಲಿ ಶೇ. ೧.೩೫ ಪ್ರಮಾಣದಲ್ಲಿ ಇದೆಯಾದರೂ ಅದು ನೈಸರ್ಗಿಕ ವಿನೆಗರ್‌ನ್ನು ಬಳಸುತ್ತಿದ್ದೇವೆ ಎನ್ನುತ್ತದೆ. ಯಾವುದೇ ಕೆಚಪ್ ಬ್ರಾಂಡ್‌ನಲ್ಲಿ ಪ್ರಿಜರ‍್ವೇಟಿವ್ ಆಗಿರುವ ಬೆಂಜೋಯಿಕ್ ಆಸಿಡ್ ಬಿಐಎಸ್ ಮಾನದಂಡ ದಾಟಿಲ್ಲ.

ಒಂದು ಮಾತು ನೆನಪಿರಲಿ. ಕೆಚಪ್‌ಗಳ ಆಯುಸ್ಸು ನಿಕ್ಕಿ ಒಂದು ವರ್ಷ, ಅದನ್ನು ಮೀರಿ ಬಳಸುವುದು ಆರೋಗ್ಯಕ್ಕೆ ಏನೇನೂ ಕ್ಷೇಮವಲ್ಲ.

ಭಾನುವಾರ, ಆಗಸ್ಟ್ 16, 2009

ಕ್ರಿಕೆಟ್‌ನ್ನು ಕೊಲ್ಲುವ ಪ್ರೀಮಿಯರ್ ಲೀಗ್!ನಿನ್ನೆ ಮೊನ್ನೆ ಪತ್ರಿಕೆಯೊಂದರಲ್ಲಿ ಬಂದ ವ್ಯಂಗ್ಯ ಚಿತ್ರ. ಬಿಸಿಸಿಐ ಒಂದು ಪತ್ರಿಕಾಗೋಷ್ಠಿಯನ್ನು ಕರೆದಿದೆ. ಅದರಲ್ಲಿ ಮಂಡಳಿಯ ಕಾರ್ಯದರ್ಶಿ ಮಾತನಾಡುತ್ತಿದ್ದಾರೆ, "ನಾವು ಹೊಸದೊಂದು ಯೋಚನೆಯಲ್ಲಿದ್ದೇವೆ. ಸದ್ಯದಲ್ಲೇ ವಾಡಾ ಪರವಾದ ಭಾರತೀಯ ಇಲೆವೆನ್ ಹಾಗೂ ವಾಡಾ ವಿರುದ್ಧದ ಇಂಡಿಯನ್ ಹನ್ನೊಂದರ ನಡುವೆ ಟ್ವೆಂಟಿ ೨೦ ಪಂದ್ಯ ಏರ್ಪಡಿಸುವ ತಯಾರಿಯಲ್ಲಿದ್ದೇವೆ!" ಬಹುಷಃ ‘ದಿ ಹಿಂದೂ’ದಲ್ಲಿ ಪ್ರಕಟಗೊಂಡ ಈ ವ್ಯಂಗ್ಯ ಚಿತ್ರ ಭಾರತೀಯ ಕ್ರಿಕೆಟ್ ಆಡಳಿತ ನಡೆಸುವವರ ಮನಸ್ಥಿತಿಯನ್ನು ಅಚ್ಚುಕಟ್ಟಾಗಿ ಬಹಿರಂಗಪಡಿಸಿದೆ.
ನಿಮಗೂ ಗೊತ್ತಿರಬಹುದು, ಐಸಿಸಿ ನಡೆಸಿದ ಪ್ರಪ್ರಥಮ ಟಿ೨೦ ವಿಶ್ವಕಪ್‌ನಲ್ಲಿನ ಭಾರತೀಯರ ಗೆಲುವು ಹಾಗೂ ಜಿ ನೆಟ್‌ವರ್ಕ್ ಪ್ರತ್ಯೇಕ ಪಂದ್ಯಾವಳಿ ಆಯೋಜಿಸಿ ಭಾರತದ ಅಗ್ರಪಂಕ್ತಿಯ ಆಟಗಾರರನ್ನು ಸೆಳೆಯುವ ಪ್ರಯತ್ನಗಳ ಹಿನ್ನೆಲೆಯಲ್ಲಿ ಲಲಿತ್ ಮೋದಿಯವರ ಭಾರತೀಯ ಪ್ರೀಮಿಯರ್ ಲೀಗ್ ರೂಪ ತಳೆಯಿತು. ಮೋದಿಯವರ ಸಲಹೆ ಎರಡು ವರ್ಷಗಳಷ್ಟು ಹಳೆಯದಾಗಿತ್ತಾದರೂ ಬಿಸಿಸಿಐ ಅಸ್ಥಿತ್ವ ಉಳಿಸಿಕೊಳ್ಳಲು ಟಿ೨೦ ಲೀಗ್ ಐಪಿಎಲ್ ನಡೆಸಿತು. ಅದಕ್ಕೆ ಹಣದ ಅತಿವೃಷ್ಟಿಯಾಗಬೇಕೆ?
ಅಕ್ಷರಶಃ ಒಂದು ವ್ಯಾಪಾರಿ ಸರಕಾಗಿ ಕ್ರಿಕೆಟ್ ಪರಿವರ್ತಿತವಾಗಿದ್ದು ಈ ಕಾಲದಲ್ಲಿ. ಈಗ ಆಟಗಾರರೂ ಹರಾಜಿನಿಂದ ಕೊಳ್ಳಲ್ಪಡುವ ವಸ್ತುಗಳು. ಹಣ ; ಅದೂ ದಿಢೀರ್ ಹಣದ ಹಿಂದೆ ಬಿದ್ದಿರುವ ಕ್ರಿಕೆಟ್ ಮಂಡಳಿಗಳಿಗೆ ಕಾಣುತ್ತಿರುವುದು ೨೦ ಓವರ್‌ಗಳ ಚುಟುಕು ಆಟವಷ್ಟೇ. ಬಹುಷಃ ನಿಮಗೂ ಗೊತ್ತು, ವೆನಿಲ್ಲಾ ಬೆಳೆಗೆ ಕೆಜಿಗೆ ನಾಲ್ಕು ಸಾವಿರದಂತ ಬಂಗಾರದ ಬೆಲೆ ಬಂದಾಗ ಜನ ಪೇಟೆಯಲ್ಲಿ ತಾರಸಿ ಮೇಲೂ ಕುಂಡವಿಟ್ಟು ಬೆಳೆ ತೆಗೆಯಲು ಹೊರಟರು. ಆಗಿದ್ದೇನು? ಬಳ್ಳಿಗೆ ಕೊಳೆ ರೋಗ, ವೆನಿಲ್ಲಾ ಕೋಡಿಗೆ ನಾಲ್ಕಾಣೆ ಬೆಲೆ. ಕ್ರಿಕೆಟ್‌ನ ಸ್ಥಿತಿ ಅತ್ತ ಮುಟ್ಟಿದರೆ ಅಚ್ಚರಿ ಪಡಬೇಡಿ.
ಕರ್ನಾಟಕದ ಕ್ರಿಕೆಟ್ ಆಡಳಿತಕ್ಕೂ ಈಗ ಟ್ವೆಂಟಿ ಜ್ವರ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್-ಕೆಎಸ್‌ಸಿಎಗೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅಧ್ಯಕ್ಷರು. ಬ್ರಿಜೇಶ್ ಪಟೇಲ್ ಕಾರ್ಯದರ್ಶಿ. ಒಂದರ್ಥದಲ್ಲಿ ಇಬ್ಬರಿಗೂ ಎಣ್ಣೆ ಸೀಗೇಕಾಯಿ ಸಂಬಂಧ. ಕೋಟಿ ಕೋಟಿ ಎಣಿಸುವ ಕರ್ನಾಟಕ ಪ್ರೀಮಿಯರ್ ಲೀಗ್ ಕೆಪಿಎಲ್ ಜಾರಿಗೊಳಿಸುವ ಹಿನ್ನೆಲೆಯಲ್ಲಿ ಈ ಇಬ್ಬರೂ ಭಾಯಿ ಭಾಯಿ!
ಕೆಪಿಎಲ್ ಐಪಿಎಲ್‌ನದೇ ನಕಲು ಪ್ರತಿ. ಇಲ್ಲೂ ಪಾಲ್ಗೊಳ್ಳುವುದು ಎಂಟು ತಂಡ. ೩೧ ಪಂದ್ಯ. ಮಧ್ಯಾಹ್ನಕ್ಕೊಂದು, ರಾತ್ರಿಗೊಂದು ಪಂದ್ಯ. ಹೊರರಾಜ್ಯದ ನಾಲ್ವರು ಆಡುವ ಹನ್ನೊಂದರಲ್ಲಿರಬಹುದು. ಆಯಾ ವಲಯದ ಯುವ ಪ್ರತಿಭೆಗಳಲ್ಲಿ ತಲಾ ನಾಲ್ವರ ಅವಕಾಶ ಕಡ್ಡಾಯ. ಪಂದ್ಯವೊಂದಕ್ಕೆ ಆಟಗಾರರಿಗೆ ಕನಿಷ್ಟ ೧೦ ಸಾವಿರ ರೂ. ಸಂಭಾವನೆ. ಕರ್ನಾಟಕದ ಕ್ರಿಕೆಟ್ ಆಟಗಾರರಿಗೆ ಅವಕಾಶ, ಹಣಕಾಸಿನ ರಸದೌತಣ. ಹಾಗಂದುಕೊಂಡು ಕಿವಿಗೆ ಹೂವು ಇಟ್ಟುಕೊಂಡರೆ ಏಪ್ರಿಲ್ ಒಂದರ ಶುಭಾಷಯ!
ಈ ಹೊತ್ತು ಸರಳ ಎಕನಾಮಿಕ್ಸ್‌ನ್ನು ವಿವೇಚಿಸಬೇಕು. ಬೆಂಗಳೂರು ನಗರ ವಲಯವನ್ನು ಬ್ರಿಗೇಡ್ ಗ್ರೂಪ್ ಖರೀದಿಸಲು ಕೊಟ್ಟದ್ದು ೭.೨೦ ಕೋಟಿ. ಇವರು ಫೈನಲ್‌ವರೆಗೆ ಆಡುತ್ತಾರೆ, ಆಟಗಾರರಿಗೆ ಕನಿಷ್ಟ ಸಂಭಾವನೆ ಕೊಡುತ್ತಾರೆ ಎಂದರೆ ಆಡುವ ಒಂಭತ್ತು ಪಂದ್ಯದಿಂದ ಆಡುವ ಆಟಗಾರರಿಗೆ ಸಂದಾಯವಾಗಬೇಕಿರುವ ಮೊತ್ತ ಅಜಮಾಸು ೧೦ ಲಕ್ಷ. ಆಡುವ ಹನ್ನೊಂದಲ್ಲದೆ ಉಳಿದವರಿಗೂ ಸಂಬಳ ಕೊಡಬೇಕು ಎಂಬುದು ಬೇರೆ ಮಾತು. ಆಟಗಾರರನ್ನು ಬಿಡ್ಡಿಂಗ್‌ನಲ್ಲಿ ಖರೀದಿಸಬೇಕಿರುವುದರಿಂದ ಅವರ ಬೆಲೆ ೯೦ ಸಾವಿರವನ್ನು ಮೀರುವ ಸಾಧ್ಯತೆಯಿದೆ ಎಂಬುದು ಇನ್ನೊಂದು ವಿಚಾರ. ಇನ್ನು ತಂಡವನ್ನು ನಿರ್ವಹಿಸುವ ಖರ್ಚು, ಬೇಕೇಬೇಕಾಗುವ ತುಂಡುಡುಗೆಯ ಚಿಯರ್ ಗರ್ಲ್ಸ್ ಹಾಗೂ ಬಾಲಿವುಡ್ ಸ್ಯಾಂಡಲ್‌ವುಡ್ ಕಾಲಿವುಡ್ ಪ್ರಚಾರ ರಾಯಭಾರಿಗಳ ಪೆರೇಡ್, ಕೋಚ್ - ಫಿಜಿಯೋಗಳ ನೇಮಕದ ಖರ್ಚು ಇತ್ಯಾದಿ ಇತ್ಯಾದಿಗಳು ಸೇರಿ ಇನ್ನೊಂದು ಕೋಟಿ ದಾಟಿದರೆ ಹಣ ಹೊಂದಿಸದೆ ಬೇರೆ ದಾರಿಯಿಲ್ಲ.
ಅಷ್ಟಾಗಿ ಮರಳಿ ದಕ್ಕುವುದು ಏನು? ಪ್ರಶಸ್ತಿ ಗೆದ್ದರೆ ಬರುವುದು ೨೦ ಲಕ್ಷ ರೂ ಮಾತ್ರ! ತಂಡವೊಂದರ ಕನಿಷ್ಟ ಬಿಡ್ ಮೊತ್ತವನ್ನು ಕೆಪಿಎಲ್ ಮರಳಿಸಿರುತ್ತದೆ!! ಸ್ಟೇಡಿಯಂನ ಟಿಕೆಟ್ ಧನದಲ್ಲಿ ಒಂದಷ್ಟು ಭಾಗ ಫ್ರಾಂಚೈಸಿ ಮಾಲಿಕರಿಗೆ ಎಂದರೂ ಅದು ಗುಟುಕು ನೀರು. ಬ್ರಿಜೇಶ್ ಪಟೇಲ್‌ರ ಅನಿಸಿಕೆ ಪ್ರಕಾರವೇ ಪಂದ್ಯಕ್ಕೆ ೧೦ ಸಹಸ್ರ ಪ್ರೇಕ್ಷಕರು ಬಂದರೆ ಹೆಚ್ಚು. ಟಿವಿ ನೇರಪ್ರಸಾರದ ಮೊತ್ತದಲ್ಲಿ ಇವರಿಗೂ ಪಾಲಿದೆ ಎಂದರೂ ಅದು ಬರೀ ೭೫ ಲಕ್ಷಕ್ಕೆ ಮಾರಾಟವಾದ ಸುದ್ದಿಯಿದೆ. ಆಟಗಾರರ ಅಂಗಿ, ಪ್ಯಾಂಟ್ ಮೇಲೆ ನಾನಾ ಕಂಪನಿಗಳ ಲೋಗೋ ಹಾಕಿ ಹಣ ಮಾಡುವ ಮಾರ್ಗ ಇರುವುದೇನೋ ನಿಜ, ಅಲ್ಲೂ ಒಪ್ಪಂದ ಎರಡಂಕಿಯ ಲಕ್ಷಕ್ಕೆ ಹೋಗುವುದು ಅನುಮಾನ. ತಂಡಗಳಿಗೆ ಕೊಳ್ಳುವವರಲ್ಲಿಇದ್ದ ಬೇಡಿಕೆ, ಈ ಪರಿ ಬಿಡ್ ಅರ್ಥವಾಗುತ್ತಿಲ್ಲ.
ಹೊರರಾಜ್ಯದ ಯಾವ ಆಟಗಾರರು ಇಲ್ಲಿ ಆಡಲಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಈ ಟೂರ್ನಿಯ ಮುಕ್ತಾಯಕ್ಕೆ ಮುನ್ನವೇ ದಕ್ಷಿಣ ಆಫ್ರಿಕಾದಲ್ಲಿ ಚಾಂಪಿಯನ್ಸ್ ಟ್ರೋಫಿ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ತಂಡದ ಸದಸ್ಯರ ಲಭ್ಯತೆ ಕಷ್ಟ. ಅಷ್ಟೇಕೆ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆಯಂತವರೇ ಆಡುತ್ತಿಲ್ಲ. ಟ್ವೆಂಟಿ ೨೦ ಪಂದ್ಯಾವಳಿ ಎಂದ ಮಾತ್ರಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಲ್ಲುತ್ತಾರೆ ಎಂಬುದು ಭ್ರಮೆಯಾದೀತು. ಹಾಗಾದರೆ ಎಂಟತ್ತು ಕೋಟಿ ಸುರಿಯುವ ಫ್ರಾಂಚೈಸಿ ಮಾಲಿಕರ ಖರೀದಿ ಹಿಂದಿನ ಲೆಕ್ಕಾಚಾರವೇನು?
ತಂಡಗಳ ಖರೀದಿಯಲ್ಲಿ ರಾಜಕಾರಣಿಗಳ ಸಂಸ್ಥೆಗಳದೇ ದೊಡ್ಡ ಹೆಸರು, ಪಟ್ಟಿ. ನೇರವಾಗಿಯೇ ನಾಲ್ಕು ತಂಡಗಳು ಇಂತವರ ಪಾಲಾಗಿದೆ. ಅಪ್ಪಟ ಉದ್ಯಮಿಗಳಿಗಿಂತ ರಾಜಕಾರಣಿಗಳು ಹೆಚ್ಚು ಲೆಕ್ಕಾಚಾರ ನಿಪುಣರು ಎನ್ನುವುದು ಇಂದಿನ ಸತ್ಯ. ಹಾಗೆಯೇ ಅವರಿಗೆ ಸೋಲುಗಳು ಹೊಸದಲ್ಲ. ಚುನಾವಣಾ ಸೋಲಿಗೆ ಅವರು ಅಂಜುವುದೂ ಇಲ್ಲ. ಪರಾಜಯದ ಕಾರಣ ಹುಡುಕಿ ಪರಿಹರಿಸಿಕೊಳ್ಳುವ ಜಾಣರು. ನೇರ ದಾರಿಯೇ ಆಗಬೇಕೆಂಬ ಹಟವಿಲ್ಲ. ಹಿಂದಿನ ಬಾರಿ ತಮಗೆ ಏನೇನೂ ಮತ ತಾರದ ಬೂತ್‌ಗಳ ಮತದಾರರ ಹೆಸರು ಮತದಾರಪಟ್ಟಿಯಲ್ಲಿ ಇಲ್ಲದಂತೆ ಮಾಡಿಬಿಟ್ಟರಾಯಿತಲ್ಲ?!
ಇಲ್ಲೂ ಅದು ಅನ್ವಯವಾಗದಿದ್ದರೆ ಸಾಕು! ಒಂದು ಟೂರ್ನಿ ಯಶಸ್ವಿಯಾಗಲು ಕ್ರೀಡಾಂಗಣದಲ್ಲಿ ಪ್ರೇಕ್ಷಕರ ನೂಕುನುಗ್ಗಲು ಬೇಕೆ ಬೇಕು. ಬಡ ಪ್ರೇಕ್ಷಕನಿಗೆ ಸಿಕ್ಸ್, ಫೋರ್‌ಗಳ ಜೊತೆಗೆ ಕೊನೆಯ ಓವರ್, ಅಂತಿಮ ಚೆಂಡಿನ ತುದಿಗಾಲಿನ ಕ್ಲೈಮ್ಯಾಕ್ಸ್ ಇದ್ದಿರಬೇಕು. ನಷ್ಟದ ಬಾಬತ್ತಿಗೆ ಹೆದರಿ ಈ ಫ್ರಾಂಚೈಸಿ ಮಾಲಿಕರು ತಾವೇ ಫಲಿತಾಂಶಗಳನ್ನು ‘ಮ್ಯಾನುಫ್ಯಾಕ್ಚರ್’ ಮಾಡುವ ಸಾಧ್ಯತೆಗಳ ಬಗ್ಗೆ ಹಲವು ಕ್ರಿಕೆಟ್ ತಜ್ಞರ ದೃಢವಾದ ಶಂಕೆಗಳಿವೆ.
ಈಗ ಕೆಎಸ್‌ಸಿಎಗೆ ರಣಜಿ ಕ್ರಿಕೆಟ್ ಒಂಥರ ಹೆಣ್ಣು ಮಗುವಿದ್ದಂತೆ. ಕೆಪಿಎಲ್ ವಂಶೋದ್ಧಾರಕ! ಕಳೆದ ಐದು ವರ್ಷಗಳಿಂದ ಕರ್ನಾಟಕದ ರಣಜಿ ಪ್ರದರ್ಶನ ಕಳಪೆಯಿಂದ ಹೀನಾಯಕ್ಕೆ ಸಾಗುತ್ತಿರುವ ದಾರಿಯಲ್ಲಿ ಬದಲಾವಣೆ ಮೂಡುವ ಸಂಭವನೀಯತೆ ಕಾಣುತ್ತಿಲ್ಲ. ಕೆಪಿಎಲ್ ರೊಕ್ಕ ತಂದೀತು. ಕ್ವಾಲಿಟಿ ಆಟಗಾರರನ್ನಲ್ಲ.
ಮತ್ತೊಮ್ಮೆ ಲೆಕ್ಕಕ್ಕೇ ಹೋಗೋಣ. ಕಳೆದ ವರ್ಷದ ಐಪಿಎಲ್ ಸಂಗ್ರಹಿಸಿದ್ದು ೧,೨೦೦ ಕೋಟಿ ರೂಪಾಯಿ. ಧಾರಾಳವಾಗಿ ಮಣ್ಣು ಮಸಿ ಎಂದು ಖರ್ಚು ತೋರಿಸಿಯೂ ಉಳಿದದ್ದು ೩೫೦ ಕೋಟಿ. ಅದರ ಹಿಂದಿನ ವರ್ಷ ಅಂದರೆ ೨೦೦೭ರಲ್ಲಿ ವರ್ಷವಿಡೀ ಜೀಕಾಡಿ ಬಿಸಿಸಿಐ ಗಳಿಸಿದ್ದು ೨೩೫ ಕೋಟಿ ಮಾತ್ರ. ಲಲಿತ್ ಮೋದಿ ವರ್ಷಕ್ಕೆರಡು ಐಪಿಎಲ್ ಎನ್ನುತ್ತಿರುವುದರ ಹಿಂದಿನ ಕಾರಣ ಅರ್ಥವಾಗುವಂತದು. ಸ್ವಾರಸ್ಯವಿರುವುದು ಮುಂದಿನ ಮಾಹಿತಿಯಲ್ಲಿ. ಬಿಸಿಸಿಐ ಕಾಂಚಾಣದ ರಾಶಿಯನ್ನು ಬಾಚಿಕೊಳ್ಳುತ್ತಿದೆಯಾದರೂ ಐಪಿಎಲ್ ಫ್ರಾಂಚೈಸಿಗಳು ನಲುಗುತ್ತಿವೆ. ಆರ್ಥಿಕ ಸಂಕಷ್ಟ ಅವರನ್ನು ಕಾಡುತ್ತಿರುವುದು ಸುಳ್ಳಲ್ಲ. ಶಾರುಖ್‌ಖಾನ್‌ರ ನೈಟ್‌ರೈಡರ‍್ಸ್, ಪ್ರೀತಿ ಜಿಂಟಾರ ಪಂಜಾಬ್ ತೊಡಗಿಸಿರುವ ಹಣಕ್ಕೆ ತಕ್ಕ ಪ್ರತಿಫಲ ನೀಡುತ್ತಿಲ್ಲ. ಅಂತರ್ರಾಷ್ಟ್ರೀಯ ಆಟಗಾರರು, ವಿಶ್ವ ಮಟ್ಟದಲ್ಲಿ ನೇರಪ್ರಸಾರಗಳಿದ್ದೂ ಐಪಿಎಲ್‌ನ ದ್ವಿತೀಯ ಸಂಚಿಕೆಗೆ ಜನಾಕರ್ಷಣೆ ಕುಸಿದಿತ್ತು. ಹಾಗಿದ್ದೂ ತಮಗಾಗುವ ನಷ್ಟವನ್ನು ಫ್ರಾಂಚೈಸಿಗಳು ಬಹಿರಂಗ ಪಡಿಸಲು ಅಂಜುತ್ತವೆ. ನಾಳೆ ತಂಡವನ್ನು ಮಾರುವುದಿದ್ದರೆ ಮಾರುಕಟ್ಟೆ ದರ ಕುಸಿಯಬಾರದಲ್ಲ?!
ಆ ಲೆಕ್ಕದಲ್ಲಿ ಕೆಪಿಎಲ್‌ನದು ಇನ್ನಷ್ಟು ಸಂಕೀರ್ಣ ಸ್ಥಿತಿ. ಬಹುಷಃ ನೇರಪ್ರಸಾರದ ಹಕ್ಕು ಕೋಟಿ ರೂ.ಯನ್ನು ಮುಟ್ಟಿಲ್ಲ ಎಂಬುದೇ ಒಂದು ಸಾಕ್ಷಿಯಾದೀತು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಾಧ್ಯಮಗಳನ್ನು ಬಳಸಿಕೊಂಡು ಕೆಪಿಎಲ್ ಅಲೆಯನ್ನು ಹೊಮ್ಮಿಸಲು ಯಶಸ್ವಿಯಾಗಿದೆ. ಅದರ ಆಕರ್ಷಣೆಗೆ ಬಿಡ್ಡರ್‌ಗಳು ಬಿದ್ದಿದ್ದಾರೆ ಎಂಬುದು ಸದ್ಯದ ವಿಶ್ಲೇಷಣೆ. ಕ್ರೀಡಾ ವಿಶ್ಲೇಷಕರಿಗೂ ಅರ್ಥವಾಗದ ಲಾಭ ವ್ಯವಹಾರ ಇದ್ದಿರುವುದು ಇನ್ನಷ್ಟೇ ಬಹಿರಂಗಗೊಳ್ಳಬೇಕು.
ಸಾಮಾನ್ಯವಾಗಿ ಟೂರ್ನಿಯೊಂದರ ಯಶಸ್ಸಿನಲ್ಲಿ ನೇರಪ್ರಸಾರದ ಪಾತ್ರ ದೊಡ್ಡದು. ಹೆಚ್ಚಿನ ಸಂಖ್ಯೆಯ ಕ್ಯಾಮರಾಗಳು, ನುರಿತ ವೀಕ್ಷಕ ವಿವರಣೆಗಾರರು, ತಂತ್ರಜ್ಞರು ಸೇರಿದಂತೆ ಸಮರ್ಪಕ ನೇರಪ್ರಸಾರವಿದ್ದರೆ ಮಾತ್ರ ವೀಕ್ಷಕರ ಸಂಖ್ಯೆ ವೃದ್ಧಿಸುತ್ತದೆ. ತನ್ನ ದೈನಂದಿನ ವಾರ್ತೆಗಳನ್ನು ನೇರಪ್ರಸಾರ ಮಾಡಲೇ ತಡವರಿಸುವ ಖಾಸಗಿ ವಾಹಿನಿ ಇಂತಹ ಚಮಕ್ ಛಮಕ್ ಟೂರ್ನಿಯ ನೇರ ಪ್ರಸಾರವನ್ನು ದಕ್ಷತೆಯಿಂದ ಮಾಡೀತೆ? ಅನುಮಾನ! ಪರಿಣಾಮ ಮತ್ತೊಮ್ಮೆ ಲಾಭದ ವ್ಯವಹಾರದ ನಿರೀಕ್ಷೆಯಲ್ಲಿರುವ ಫ್ರಾಂಚೈಸಿಗಳ ಮೇಲಾದೀತು.
ಟ್ವೆಂಟಿ ೨೦ ಮಾದರಿ ಕ್ರಿಕೆಟ್‌ನ ಜೀವರಕ್ಷಕ ಅಲ್ಲವೇ ಅಲ್ಲ. ಇದು ಒಟ್ಟಾರೆ ಕ್ರಿಕೆಟ್‌ನ್ನು ಕೊಲ್ಲುವುದೇ ಹೆಚ್ಚು ವಾಸ್ತವ. ಏಕದಿನ ಕ್ರಿಕೆಟ್‌ಗೂ ಅಂತಹ ಅಪವಾದ ಬಂದಿತ್ತಾದರೂ ಆ ಪಂದ್ಯಗಳ ಸಂಖ್ಯೆ ವರ್ಷಕ್ಕೆ ಸರಾಸರಿ ೨೫ಕ್ಕಿಂತ ಹೆಚ್ಚಾಗಿರಲಿಲ್ಲ. ಸಂಯಮ ತೋರಬೇಕಾದ ಐಸಿಸಿಯೇ ವರ್ಷಕ್ಕೊಂದು ಟಿ೨೦ ವಿಶ್ವಕಪ್‌ನ್ನು ಘೋಷಿಸಿದೆ. ಈ ಬಾರಿ ಐಪಿಎಲ್ ಬೆನ್ನ ಹಿಂದೆಯೇ ವಿಶ್ವಕಪ್ ನಡೆದಿದ್ದರಿಂದ ಟಿಆರ್‌ಪಿ ಕುಸಿದಿದ್ದು ಅದಕ್ಕೆ ಎಚ್ಚರಿಕೆಯ ಘಂಟೆಯಾಗಿಲ್ಲ.
ಬರುವ ವರ್ಷ ಐಪಿಎಲ್ ಮಾರ್ಚ್ 18ರಿಂದ ಏಪ್ರಿಲ್ 23ರವರೆಗೆ ನಡೆಯಲಿಕ್ಕಿದೆ. ಖಡಕ್ಕಾಗಿ ವಾರದ ಅಂತರದಲ್ಲಿ ಐಸಿಸಿ ವಿಶ್ವಕಪ್. ಜೊತೆಜೊತೆಗೆ ಕರ್ನಾಟಕದಂತೆ ಉಳಿದ ರಾಜ್ಯಗಳೂ ಟಿ೨೦ ಟೂರ್ನಿಗಳನ್ನು ಆರಂಭಿಸಿಬಿಟ್ಟರೆ ಆಟಗಾರರಿಗೆ ರಣಜಿ, ದುಲೀಪ್, ಸುಬ್ಬಯ್ಯ ಪಿಳ್ಳೆಯಂತ ಪ್ರಥಮ ದರ್ಜೆ ಕ್ರಿಕೆಟ್ ಆಡಲು ಸಮಯವಿರದು. ಇಷ್ಟಕ್ಕೂ ಕ್ರಿಕೆಟ್ ವೇಳಾಪಟ್ಟಿಯಲ್ಲಿ ಈ ಸ್ಪರ್ಧೆಗಳನ್ನು ಸೇರಿಸುವುದೇ ಕಷ್ಟವಾದೀತು. ಈಗಾಗಲೇ ಅದರ ಮೊದಲ ಸುಳಿವು ಕಂಡುಬಂದಿದೆ. ಈ ಋತುವಿನಲ್ಲಿ ದುಲೀಪ್ ಟ್ರೋಫಿ ಕೂಟ ನಡೆಯುತ್ತಿಲ್ಲ!
ಊಹ್ಞೂ, ಒಳ್ಳೆಯದಕ್ಕಂತೂ ಈ ಕ್ರಿಕೆಟ್ ಜ್ವರ ಬಂದಿಲ್ಲ. ಕೋಳಿ ಜ್ವರ, ಹಂದಿ ಜ್ವರಗಳು ಮನುಷ್ಯನ ಜೀವ ತೆಗೆದರೆ ಇದು....... ಯಾಕೋ ಚಿಯರ್ ಗರ್ಲ್ಸ್‌ರ ನೆನಪೂ ಖುಷಿ ನೀಡುತ್ತಿಲ್ಲ!
-ಮಾವೆಂಸ

ಮಂಗಳವಾರ, ಆಗಸ್ಟ್ 11, 2009

ಚೆಂಡು ವಿರೂಪಕ್ಕೂ ಐಸಿಸಿಯ ಮಾನ್ಯತೆ!?

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ, ಕಲಾತ್ಮಕ ವೇಗಿ ಅಲಾನ್ ಡೊನಾಲ್ಡ್ ಒಂದು ರಂಜನೀಯ ಸಲಹೆ ಕೊಟ್ಟಿದ್ದಾರೆ. ನಕ್ಕು ಹಗುರಾಗುವುದೋ, ಗಂಭೀರ ವಿಶ್ಲೇಷಣೆ ನಡೆಸಬೇಕೋ ಎಂಬ ತೀರ್ಮಾನವೂ ಸುಲಭವಲ್ಲ. ಅವರು ಹೇಳಿದ್ದಿಷ್ಟೇ, "ಅಂತರ್ರಾಷ್ಟೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಚೆಂಡನ್ನು ವಿರೂಪಗೊಳಿಸುವ ತಂತ್ರವನ್ನು ಕಾನೂನುಬದ್ಧವಾಗಿಸಬೇಕು!"
ಡೊನಾಲ್ಡ್ ಅಂತಿಂತವರಲ್ಲ. ತಮಗೆ ಸಿಕ್ಕ ಅಲ್ಪ ಕಾಲದ ವಿಶ್ವ ದರ್ಜೆ ಕ್ರಿಕೆಟ್ ಮೈದಾನದಲ್ಲಿ ವೇಗದ ಬೌಲಿಂಗ್‌ಗೆ ಹೊಸದಾದ ವ್ಯಾಖ್ಯೆ ಬರೆದವರು. ಆಸ್ಟ್ರೇಲಿಯಾದ ಗ್ಲೆನ್ ಮೆಗ್ರಾತ್‌ರಂತವರ ಸಮಕಾಲೀನರಾಗಿಯೂ ಪ್ರತಿಭೆಯಿಂದ ಅವರಷ್ಟೇ ಮಿಂಚಿದವರು. ಈಗಲೂ ಅವರು ಕ್ರಿಕೆಟ್‌ನಿಂದ ಹೊರಗುಳಿದಿಲ್ಲ. ಈಗವರು ಇಂಗ್ಲೆಂಡ್ ಕೌಂಟಿ ವಾರ್ವಿಕ್‌ಷೈರ ಕ್ಲಬ್‌ನ ಕೋಚ್.
ನಿಜ, ಪಾಕಿಸ್ತಾನದ ವೇಗಿಗಳು ಒಂದಲ್ಲ ಒಂದು ರೀತಿಯಲ್ಲಿ ಚೆಂಡನ್ನು ವಿರೂಪಗೊಳಿಸುವ ಮೂಲಕ ರಿವರ್ಸ್ ಸ್ವಿಂಗ್ ಪಡೆಯುತ್ತಾರೆ. ಇಂಗ್ಲೆಂಡಿನ ನಾಯಕ ಮೈಕೆಲ್ ಆಥರ್ಟನ್ ಚೆಂಡಿಗೆ ಉಜ್ಜಲು ಪ್ಯಾಂಟ್ ಜೇಬಿನಲ್ಲಿ ಮರಳುಮಣ್ಣು ಇಟ್ಟುಕೊಂಡು ಸಿಕ್ಕುಬಿದ್ದುದುಂಟು. ಬ್ಲೇಡ್, ವ್ಯಾಸಲೀನ್, ಚಮಚ, ಬಾಟಲಿ ಮುಚ್ಚಳ...ಕ್ರಿಕೆಟಿಗರು ಮೈದಾನದಲ್ಲಿ ಬ್ಯಾಟ್ ಹೊರತಾಗಿ ಬಳಸುತ್ತಿರುವ ಸಾಧನಗಳು! ಉದ್ದೇಶ, ಚೆಂಡಿನ ಒಂದು ಮೈಯ ಸ್ವರೂಪ ಬದಲಿಸುವುದು. ಈ ಎಲ್ಲ ಹಿನ್ನೆಲೆಯಲ್ಲಿ ಡೊನಾಲ್ಡ್ ಈ ಪ್ರಳಯಾಂತಕ ಸಲಹೆ ನೀಡಿದರೇ?
ಅಥವಾ ಐಸಿಸಿಗೆ ಚಾಟಿಯೇಟು ಬೀಸಬೇಕಿತ್ತೇ? ಖುದ್ದು ಡೊನಾಲ್ಡ್‌ರದ್ದು ಆಕರ್ಷಕ ಬೌಲಿಂಗ್ ಶೈಲಿ. ತಾಂತ್ರಿಕವಾಗಿಯೂ ಯಾವುದೇ ಐಬಿಲ್ಲ. ಇಂತಹ ಬೌಲರ್ ಕೈ ತಿರುಗಿಸದೆ ಬೌಲ್ ಮಾಡಿ ವಿಕೆಟ್ ತೆಗೆಯುವ ಆಸಾಮಿಗಳಿಗಾಗಿ ೧೫ ಡಿಗ್ರಿ ಬೇಕಾದರೂ ಕೈ ತಿರುಚಬಹುದು ಎಂದು ಐಸಿಸಿ ತಂದ ಹೊಸ ನಿಯಮ ಕಿರಿಕಿರಿ ಎನಿಸಿರಲೇಬೇಕು. ಇವತ್ತು ಲಸಿತಾ ಮಲಿಂಗಾ, ಶೋಯೆಬ್ ಅಕ್ತರ್ ತರದ ಬೌಲರ್‌ಗಳೇ ಎಲ್ಲೆಡೆ ಕಾಣಿಸಿದರೆ ಇದು ಬೌಲಿಂಗೋ, ಲಗೋರಿಯೋ ಅನುಮಾನ ಕಾಡದಿರದು. ಹೀಗೆ ೧೫ ಡಿಗ್ರಿ ಸೂತ್ರ ಬಳಸಿ ಐಸಿಸಿ ಬಗರ್‌ಹುಕುಂ ಸಕ್ರಮ ಎಂದೆನ್ನುತ್ತದೆಂದಾದರೆ ಚೆಂಡು ವಿರೂಪಗೊಳಿಸುವ ಪ್ರಕ್ರಿಯೆಯೂ ಹಿಂದಿನಿಂದ ಬಂದ ಚಾಳಿ. ಅದನ್ನು ಮಾನ್ಯ ಮಾಡಿದರೆ ತಪ್ಪೇನು?
ಹಾಗೆ ಡೊನಾಲ್ಡ್ ಪ್ರಶ್ನಿಸಿದರೆ? ದೃಢಪಡಿಸಲು ಸಾಕ್ಷಿಗಳಿಲ್ಲ. ಅಷ್ಟಕ್ಕೂ ಚೆಂಡಿಗೆ ರೂಪ ಕೊಡುವ ಸೊಟ್ಟ ಕಲೆ ಇಂಗ್ಲೆಂಡಿಗರಲ್ಲಿ ಸಮೃದ್ಧಿ ಆಗಿದ್ದುದನ್ನು ನಂಬಲಾಗಿದೆ. ಗ್ರೀಸ್ ಹಚ್ಚಿ ಸ್ವಿಂಗ್ ಆಗುವುದನ್ನು ಕಂಡು ಹಿಡಿದ ಮಹಾನುಭಾವರು ಇಲ್ಲಿದ್ದಾರೆ. ಅಲ್ಲಿನ ಕೌಂಟಿ ಕ್ರಿಕೆಟ್‌ನಲ್ಲಂತೂ ಇದು ಯಗ್ಗಿಲ್ಲದೆ ನಡೆಯುತ್ತಿದ್ದ ಕಾಲವೊಂದಿತ್ತು. ಆದರೆ ಇಂಗ್ಲೆಂಡಿನ ವಾತಾವರಣದಲ್ಲಿ ಮೊದಲೇ ಸ್ವಿಂಗ್ ಸಾಮಾನ್ಯ. ಅದಕ್ಕೆ ಈ ‘ಎಕ್ಟ್ರಾ’ಗಳು ಸೇರಿದರೆ ಚೆಂಡಿನ ಲೈನ್‌ನ ನಿಯಂತ್ರಣ ಕಷ್ಟ. ಹಾಗಾಗಿ ರಿವರ್ಸ್ ಸ್ವಿಂಗ್ ಅಸ್ತ್ರ ಬೂಮರ್‍ಯಾಂಗ್ ಆಗುವ ಸಂಭಾವ್ಯತೆಯೇ ಇದ್ದಿತ್ತು. ಆ ಲೆಕ್ಕದಲ್ಲಿ ಡೊನಾಲ್ಡ್‌ರ ಸಿಟ್ಟು ಇಂಗ್ಲೆಂಡಿಗರ ಮೇಲೂ ಅಲ್ಲ.
ವಾಸ್ತವ ವಿಚಾರಕ್ಕೆ ಬರೋಣ. ಅಲಾನ್ ಡೊನಾಲ್ಡ್ ಇತ್ತೀಚೆಗೆ ಟ್ವೆಂಟಿ ೨೦ ಪಂದ್ಯಗಳನ್ನು ನೋಡುತ್ತಾ ಬಂದಿದ್ದಾರೆ. ಕೌಂಟಿ, ಏಕದಿನಗಳನ್ನು ವಾರ್ವಿಕ್‌ಷೈರ್ ಕೋಚ್ ಆಗಿ ಕಂಡಿದ್ದಾರೆ. ಟೆಸ್ಟ್‌ಗಳನ್ನು ನಿರುಕಿಸಿದ್ದಾರೆ. ಎಲ್ಲಿ ನೋಡಿದರೂ ನೂರಕ್ಕೆ ನೂರರಷ್ಟು ಬ್ಯಾಟಿಂಗ್‌ಗೆ ನೆರವಾಗುವ ಶುಷ್ಕ ಪಿಚ್‌ಗಳದ್ದೇ ಸಿಂಹಪಾಲು. ಏಕದಿನಕ್ಕೋ, ಟ್ವೆಂಟಿಗೋ ಬ್ಯಾಟಿಂಗ್ ಪಿಚ್ ನಿರ್ಮಿಸಿದರೆ ಕ್ಷಮಿಸಬಹುದು. ಆದರೆ ಮೊನ್ನೆ ಶ್ರೀಲಂಕಾದಲ್ಲಿ, ನಿನ್ನೆ ಇಂಗ್ಲೆಂಡಿನ ಹೆಡಿಂಗ್ಲೆಯಲ್ಲಿ.... ಎಲ್ಲಿ ನೋಡಿದರೂ ಟೆಸ್ಟ್‌ಗೂ ಒಣ ಪಿಚ್ ಎಂದರೆ? ಇಂತಹ ಸ್ಥಿತಿಯಲ್ಲಿ ಸಮತೋಲಿತ ಪಿಚ್ ನಿಮಿಸುವುದು ಇನ್ನು ಮುಂದೆ ಸಾಧ್ಯವಿಲ್ಲವೆಂದಾದರೆ ಬೌಲರ್‌ಗಳು ಆಕ್ಷೇಪವೆತ್ತುವುದಿಲ್ಲ. ನೀವು ಬಾಲ್ ಟ್ಯಾಂಪರಿಂಗ್‌ನ್ನು ಕಾನೂನುಬದ್ಧಗೊಳಿಸಿ ಎಂಬ ವಿಲಕ್ಷಣ, ಸಕಾರಣಾತ್ಮಕ ವಾದ ಮುಂದಿಟ್ಟಿದ್ದಾರೆ ಡೊನಾಲ್ಡ್!
ಪಿಚ್‌ಗಳನ್ನು ‘ಅಗತ್ಯಕ್ಕೆ ’ ತಕ್ಕಂತೆ ನಿರ್ಮಿಸುವುದಾದರೆ ಚೆಂಡನ್ನು ‘ಅಗತ್ಯಕ್ಕೆ ’ ಅನುಗುಣವಾಗಿ ಬದಲಾಯಿಸಿಕೊಲ್ಳಬಾರದೇಕೆ? ಇಲ್ಲದಿದ್ದರೆ ವೇಗಿಗಳ ಭವಿಷ್ಯದ ಕೊಲೆ ಪಿಚ್‌ಗಳಲ್ಲಾಗುತ್ತದೆ. ಹಿಂದೆ ಕಟ್ನಿ ವಾಲ್ಶ್, ಆಂಬ್ರೋಸ್, ಮೆಗ್ರಾತ್, ವಾಸೀಂ ಅಕ್ರಂ ಎಂದರೆ ಭಯ ಬೀಳುತ್ತಿದ್ದ ಬ್ಯಾಟ್ಸ್‌ಮನ್‌ಗಳು ಈಗ ಒಂದಿನಿತೂ ಬೆಚ್ಚುತ್ತಿಲ್ಲ. ಟಿ೨೦ಯಲ್ಲಂತೂ ಇಂತವರಿಗೂ ಆಫ್ ಸ್ಟಂಪ್ ಆಚೆ ಚಲಿಸಿ ವಿಕೆಟ್ ಕೀಪರ್ ಹಿಂದೆ ಚೆಂಡು ಎತ್ತಿಬಿಡುತ್ತಾರೆ. ಪಿಚ್ ಮೇಲೆ ಬಿದ್ದ ಚೆಂಡು ಆರಾಮವಾಗಿ ಬ್ಯಾಟಿಗೆ ಬರುವಾಗ ನಂ.೧೧ ಕೂಡ ಬಿರುಸಿನ ಬ್ಯಾಟ್ಸ್‌ಮನ್!
ಬೌಲರ್‌ಗಳು ಚೆಂಡಿನೊಂದಿಗೆ ಅದೂ ಇದೂ ಆಟವಾಡುವುದು ನಡೆದೇ ಇದೆ. ಅವರಿಗೆ ಆಸೆ, ಇಂತಹ ಪಿಚ್ ಕಿಂಚಿತ್ ಸ್ವಿಂಗ್ ಆದರೆ ತಮ್ಮ ಬೌಲಿಂಗ್ ವಿವರ ತುಂಬಾ ಕೆಟ್ಟದಾಗಲಿಕ್ಕಿಲ್ಲವೆಂದು. ಇಂದಿಗೂ ಟೆಸ್ಟ್, ಏಕದಿನ ಪಂದ್ಯಗಳಲ್ಲಿ ಚೆಂಡಿನ ಒಂದು ಮೈಯ ಹೊಳಪು ಉಳಿಸಿ ಇನ್ನೊಂದು ಮೈಯನ್ನು ಉಜ್ಜಿ ಉಜ್ಜಿ ಒರಟುಗೊಳಿಸಿ ರಿವರ್ಸ್ ಸ್ವಿಂಗ್ ಪಡೆಯುವ ಪ್ರಯತ್ನ ನಡೆಯುತ್ತಿರುತ್ತದೆ. ಐಸಿಸಿ ಬ್ಯಾಟ್ಸ್‌ಮನ್ ಪರ ನಿಂತುಬಿಡುತ್ತದೆ. ಪಂದ್ಯಗಳ ಆಕರ್ಷಣೆ ಹೆಚ್ಚಿಸಲು ಪವರ್ ಪ್ಲೇ ತರುತ್ತದೆ. ಸ್ವಿಂಗ್‌ನಿಂದಾಗಿ ಬ್ಯಾಟ್ಸ್‌ಮನ್‌ಗೆ ಪವರ್ ಪ್ಲೇ ಇದ್ದೂ ರನ್ ಗಳಿಸಲಾಗುವುದಿಲ್ಲ ಎನ್ನಿಸಿದ ತಕ್ಷಣ ಏಕದಿನದ ೩೪ನೇ ಓವರ್‌ಗೆ ಹೊಸ ಚೆಂಡು ಬಳಕೆ ಎಂದುಬಿಡುತ್ತದೆ. ಚೆಂಡನ್ನು ಉಜ್ಜಿ ಇನ್ನೇನು ಸ್ವಿಂಗ್, ರಿವರ್ಸ್ ಸ್ವಿಂಗ್ ಮಾಡಬಹುದು ಎನ್ನುವ ಬೌಲರ್‌ನ ಆಸೆಗೆ ಕಲ್ಲು ಬಿದ್ದಂತೆ! ಇತ್ತೀಚೆಗೆ ಬೌಲರ್‌ಗಳು ಬ್ಯಾಟ್ಸ್‌ಮನ್ ಎಂಬ ರನ್ ಬಕಾಸುರರ ಆಹಾರದಂತೆ ಕಾಣುತ್ತಿದ್ದಾರೆ. ಕೆಲ ದಿನಗಳಲ್ಲಿ ‘ಮೇಡನ್’ ಎಂಬ ಸಾಧನೆ ಇಲ್ಲವಾಗಿ ಆ ಅಂಶವೇ ಕ್ರಿಕೆಟ್‌ನಿಂದ ಮಾಯವಾಗಿಬಿಡಬಹುದು!!
ಸ್ವಲ್ಪ ಅತಿರಂಜಿತವಾಗಿ ಒಂದು ಗಂಭೀರ ಸಮಸ್ಯೆಯನ್ನು ಪ್ರಸ್ತಾಪಿಸಲಾಗಿದೆ. ವಿಷಯ ಮುಖ್ಯ. ಶೈಲಿ ನಂತರದ ವಿಚಾರ. ಅಲಾನ್ ಡೊನಾಲ್ಡ್‌ರಿಗೂ ಒಂದೇ ಆಸೆ, ಐಸಿಸಿ ಕೊನೆ ಪಕ್ಷ ಏಕದಿನ, ಟೆಸ್ಟ್‌ನಲ್ಲಿ ಕೆಲ ಮಟ್ಟಿಗಾದರೂ ಬೌಲರ್‌ಗಳಿಗೆ ನೆರವೀಯುವ ಪಿಚ್ ನಿರ್ಮಿಸದಿದ್ದರೆ ಕ್ರಿಕೆಟ್‌ನ ರುಚಿ ಕೆಡುತ್ತದೆ. ಹಾಗಾಗದಿರಲಿ!
ನೀವೇ ಹೇಳಿ, ಬ್ಯಾಟ್ಸ್‌ಮನ್ ಒಂದರ ಹಿಂದೆ ಒಂದು ಬೌಂಡರಿ, ಸಿಕ್ಸ್ ಬಾರಿಸುವಾಗ ಆಗುವ ಕೌತುಕವೇ ಮನೋಜ್ ಪ್ರಭಾಕರ್, ವೆಂಕಿ ಪ್ರಸಾದ್, ಮೈಕೆಲ್ ಜಾನ್ಸನ್, ಇಮ್ರಾನ್‌ಖಾನ್‌ರಂತವರ ಆಫ್ ಸ್ವಿಂಗ್, ಇನ್‌ಕಟರ್‌ಗಳನ್ನು ನೋಡಿದಾಗ, ಅವು ವಿಕೆಟ್‌ಗಳನ್ನು ಚದುರಿಸಿದಾಗ ಆಗುವುದಿಲ್ಲವೇ?
ರುಚಿಕಟ್ಟಾದ ಕ್ರಿಕೆಟ್‌ಗೆ ಹುಳಿ ಹಿಂಡುತ್ತಿರುವ ಐಸಿಸಿ ಕ್ರಮಗಳ ಕುರಿತು ಗಂಭೀರ ಚರ್ಚೆ ಆಗಬೇಕಾದ ಕಾಲ ಬಂದಿದೆ.

-ಮಾವೆಂಸ
ಇ ಮೇಲ್- mavemsa@gmail.com

ಮಂಗಳವಾರ, ಆಗಸ್ಟ್ 4, 2009

ಶೂಮಾಕರ್ ಕಾರು ಬಂತು, ದಾರಿ ಬಿಡಿ!
ಸಿನೆಮಾ ರಂಗದ ಆಕರ್ಷಣೆ ಬಡಪೆಟ್ಟಿಗೆ ಕಡಿಮೆಯಾಗದು. ಹಾಗಾಗಿಯೇ ನಟೀಮಣಿಯರು ಮದುವೆಯಾಗಿ ವರ್ಷ ಒಪ್ಪತ್ತಿನಲ್ಲಿ ಮತ್ತೆ ಭ್ರಾಮಕ ಲೋಕದ ಕ್ಯಾಮರಾ ಮುಂದೆ ಹಾಜರಾಗಿಬಿಡುತ್ತಾರೆ. ಕೊನೆಗೆ ಗಂಡನಿಗೆ ಸೋಡಾಚೀಟಿ ಕೊಟ್ಟಾದರು ಸರಿ! ಯಥಾವತ್ ಪ್ರವೃತ್ತಿಯನ್ನು ನಾವು ಕ್ರೀಡಾಕ್ಷೇತ್ರದಲ್ಲೂ ನೋಡಬಹುದು. ಇತ್ತೀಚೆಗೆ ಟೆನಿಸ್‌ನ ಕಿಂ ಕ್ಲಿಸ್ಟರ್‍ಸ್ ಅಂಕಣಕ್ಕೆ ಮರಳಿದ್ದಾರೆ. ಸನತ್ ಜಯಸೂರ್ಯರ ಆದಿಯಾಗಿ ಕ್ರಿಕೆಟ್‌ನಲ್ಲಿ ಈ ನಿವೃತ್ತಿಯೇ ಕೆಲವೊಮ್ಮೆ ಆಟವಾಗಿದ್ದೂ ಇದೆ. ಹೀಗೆ ನಿವೃತ್ತಿಯಿಂದ ಹಿಂಸರಿದು ಅಂಕಣದೆಡೆಗೆ ಹೆಜ್ಜೆ ಇಟ್ಟವರಲ್ಲಿ ಈಗಿನ ಸೇರ್ಪಡೆ ಮೈಕೆಲ್ ಶೂಮಾಕರ್.
ಶೂಮಾಕರ್ ಓರ್ವ ಅದ್ಭುತ ಫಾರ್ಮುಲಾ ಚಾಲಕ. ೧೯೯೪, ೯೫, ೨೦೦೦ದಿಂದ ೨೦೦೪ರವರೆಗಿನ ಒಟ್ಟು ಏಳು ವಷ ಚಾಂಪಿಯನ್‌ಶಿಪ್ ಗೆದ್ದ ಸಾಹಸಿ. ೯೧ ವಿಜಯವೂ ಸೇರಿ ಪೋಡಿಯಂನಲ್ಲಿ ನಿಂತ ೧೫೪ ಸಂದರ್ಭಗಳನ್ನು ನೆನಪಿಸಿಕೊಂಡರೆ ಅವರ ತಾಕತ್ತು ಅರ್ಥವಾಗುತ್ತದೆ. ೨೦೦೬ ಎಫ್‌ಎಎ ಸರ್ವೆಯ ಪ್ರಕಾರ, ಫಾರ್ಮುಲಾ ರೇಸ್‌ನ ಅತಿ ಜನಪ್ರಿಯ ಚಾಲಕ ಎಂಬ ಗೌರವವನ್ನು ತಮ್ಮದಾಗಿಸಿಕೊಂಡವರು. ೨೦೦೬ರ ಬ್ರೆಜಿಲಿಯನ್ ಗ್ರಾಂಡ್‌ಫಿಕ್ಸ್ ನಂತರ ನಿವೃತ್ತಿ ಘೋಷಿಸಿದ್ದ ಮೈಕೆಲ್ ಈಗ ಮಾತ್ರ ಅಂಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
ಈ ಮರಳುವಿಕೆಯ ಹಿಂದೆ ಭಾವನಾತ್ಮಕ ಕಾರಣಗಳಿಗಿಂತ ತಾಂತ್ರಿಕ ವಿಚಾರಗಳೇ ಮೇಲುಗೈ ಪಡೆದಿದೆ. ಪ್ರಸ್ತುತ ಶೂಮಾಕರ್ ಫೆರಾರಿ ತಂಡಕ್ಕೆ ಸೇರಿದವರು. ನಿವೃತ್ತಿಯ ನಂತರವೂ ಅದೇ ತಂಡದ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೊನ್ನೆ ಹಂಗರಿಯನ್ ಗ್ರಾಂಡ್‌ಫಿಕ್ಸ್ ವೇಳೆ ಅರ್ಹತಾ ಸುತ್ತುಗಳಲ್ಲಿ ಭಾಗವಹಿಸಿದ್ದ ಫೆರಾರಿ ಚಾಲಕ ಫಿಲೆಪ್ಪೆ ಮಸ್ಸಾ ಕಾರಿನ ಸಸ್ಪೆನ್ಶನ್ ಸ್ಪ್ರಿಂಗ್‌ನಿಂದಾಗಿ ಗಂಭೀರವಾಗಿ ಗಾಯಗೊಂಡರು. ಇದೀಗ ಸ್ಪಷ್ಟವಾಗಿರುವ ಪ್ರಕಾರ, ಮತ್ತೆ ೨೦೦೯ರಲ್ಲಿ ಮಸ್ಸಾ ಸ್ಪರ್ಧಾತ್ಮಕ ಫಾರ್ಮುಲಾ ಒನ್‌ಗೆ ಮರಳುವುದು ಸಾಧ್ಯವಿಲ್ಲ. ಒಂದು ಅನಿರೀಕ್ಷಿತ ಬೆಳವಣಿಗೆಯಲ್ಲಿ, ೨೦೦೯ರ ಯುರೋಪಿಯನ್ ಗ್ರಾಂಡ್‌ಫಿಕ್ಸ್‌ನಲ್ಲಿ ಶೂಮಾಕರ್ ಪಾಲ್ಗೊಳ್ಳುವರೆಂದು ಫೆರಾರಿ ಪ್ರಕಟಿಸಿದೆ!
ಮಸ್ಸಾ ಪುನಃ ಫಿಟ್ ಎನ್ನಿಸಿಕೊಳ್ಳುವವರೆಗೆ, ಕೊನೆಪಕ್ಷ ಈ ವರ್ಷದ ಅಂತ್ಯದವರೆಗೆ ಶೂಮಾಕರ್ ಎಲ್ಲ ಉಳಿದ ಫಿಕ್ಸ್‌ಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ವಾರಸ್ಯವೆಂದರೆ, ಈ ಋತುವಿನ ಉಳಿದ ಎಲ್ಲ ಏಳು ರೇಸ್‌ನಲ್ಲಿ ಶೂಮಾಕರ್ ಆಡಿದರೆಇನ್ನೊಂದು ದಾಖಲೆ ಗಿಟ್ಟುತ್ತದೆ! ೨೫೬ ರೇಸ್‌ಗಳಲ್ಲಿ ಪಾಲ್ಗೊಂಡ ರಿಕಾರ್ಡೋ ಪ್ಯಾಟ್ರೀಸೆ ಸಾಧನೆಯನ್ನು ಸರಿಗಟ್ಟಿದಂತಾಗುತ್ತದೆ. ಕೇವಲ ರುಬೆನ್ಸ್ ಬ್ಯಾರಿಟೆಲ್ಲೋ ಮಾತ್ರ ಇವರಿಬ್ಬರಿಗಿಂತ ಮುಂದಿದ್ದಾರೆ. ಉಸಿರು ಬಿಗಿಹಿಡಿಯಬೇಕಾದೀತು, ಶೂಮಾಕರ್ ಪ್ರತಿ ರೇಸ್‌ಗೆ ಗಳಿಸಲಿರುವ ಹಣ ಅಂದಾಜು ೩.೨ ಮಿಲಿಯನ್ ಪೌಂಡ್‌ಗಳು!
ತಣ್ಣನೆಯ ಸ್ವಭಾವದ ಶೂಮಾಕರ್ ವಿವಾದಗಳಿಂದ ಕೂಡ ಹೊರಗಿರಲಿಲ್ಲ. ಹಲವು ಬಾರಿ ಫೆರಾರಿ ತಂಡದ ಸಹ ಸ್ಪರ್ಧಿಗಳು ಶೂಮಾಕರ್‌ರ ಗೆಲುವಿಗೆ ಸಹಕರಿಸಿದ ಆಪಾದನೆಗೆ ಒಳಗಾಗಿದ್ದುಂಟು. ಸ್ವತಃ ಶೂಮಾಕರ್ ಗೆಲ್ಲಲು ನ್ಯಾಯದ ಎಲ್ಲೆ ದಾಟಿದ ಅನುಮಾನಗಳಿದ್ದವು. ಇದಕ್ಕೆ ೧೯೯೪ರ ಆಸ್ಟ್ರೇಲಿಯನ್ ಗ್ರಾಂಡ್‌ಫಿಕ್ಸ್ ಉತ್ತಮ ಉದಾಹರಣೆ. ಸ್ಪರ್ಧೆಗೆ ಮುನ್ನ ಇನ್ನೋರ್ವ ಡಮಾನ್ ಹಿಲ್‌ಗಿಂತ ಏಕೈಕ ಅಂಕದಿಂದ ಶೂಮಾಕರ್ ಮುಂದಿದ್ದರು. ೩೫ನೇ ಲ್ಯಾಪ್‌ನ ವೇಳೆಯಲ್ಲೆ ಶೂಮ್ ಹಿಲ್‌ಗಿಂತ ಮುನ್ನಡೆಯಲ್ಲಿದ್ದರು ಖರೆ. ಆದರೆ ಕಾರು ಕೈಕೊಡುವ ಸೂಚನೆ ಕಂಡುಬಂದಿತ್ತು. ಅದಾಗಲೇ ಕಾರು ಪಕ್ಕದ ರಕ್ಷಣಾ ಗೋಡೆಗೆ ಹೊಡೆದು ಬಿಟ್ಟು ಕಾರಿನ ವೇಗ್ ಕಡಿಮೆಯಾಗಿತ್ತು. ತುಸು ಮುಂದಿದ್ದುದು ನಿಜ. ಹಿಲ್ ಬೆನ್ನ ಹಿಂದೆಯೇ ಇದ್ದರು. ಮುಂದಿನ ಲ್ಯಾಪ್ ತಿರುವಿನಲ್ಲಿ ಹಿಲ್ ಶೂಮಾಕರ್‌ರನ್ನು ಹಿಂದಿಕ್ಕುವ ಪ್ರಯತ್ನದಲ್ಲಿದ್ದಾಗ ಶೂಮ್ ಕಾರು ಅಡ್ಡ ಬಂದು ಭರ್ಜರಿ ಡಿಕ್ಕಿ ಸಂಭವಿಸಿತು. ಹಿಲ್ - ಶೂಮಾಕರ್ ಇಬ್ಬರೂ ದುರಸ್ತಿ ಪಡಿಸಲಾಗದ ವಾಹನದ ಜೊತೆ ನಿವೃತ್ತರಾಗಬೇಕಾಯಿತು. ಇಬ್ಬರಿಗೂ ಸ್ಪರ್ಧೆಯಿಂದ ಒಂದೇ ಒಂದು ಅಂಕ ಗಿಟ್ಟಲಿಲ್ಲ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಶೂಮಾಕರ್ ಆ ವರ್ಷದ ಚಾಂಪಿಯನ್ ಆಗಿದ್ದರು!
ಸದರಿ ಪ್ರಕರಣದಲ್ಲಿ ಬಚಾವಾದ ಶೂಮ್ ೧೯೯೭ರಲ್ಲಿ ವಿಲಿಯಮ್ಸ್ ಚೌಕಸ್ ವಿಲ್ಲೆನ್ಯೂವೆ ಕಾರಿಗೆ ‘ಢೀ’ ಕೊಟ್ಟುದುದಕ್ಕೆ ವಿಶ್ವ ಚಾಂಪಿಯನ್‌ಶಿಪ್‌ಗೆ ಸ್ಪರ್ಧಿಸುವ ಅರ್ಹತೆಯನ್ನೇ ಕಳೆದುಕೊಂಡಿದ್ದರು. ರೇಸಿಂಗ್ ಇತಿಹಾಸದಲ್ಲೂ ಈ ಅನರ್ಹತೆ ಪ್ರಕರಣ ಪ್ರಪ್ರಥಮ! ಬೆನ್ನೆಟಾನ್ ತಂಡವನ್ನೂ ಪ್ರತಿನಿಧಿಸಿದ್ದ ಶೂಮ್‌ರ ಗೆಲುವುಗಳಷ್ಟೇ ವಿವಾದಗಳೂ ಪ್ರಚಾರದಲ್ಲಿರುವುದು ವಿಪರ್ಯಾಸ. ಗ್ರಾಂಡ್‌ಫಿಕ್ಸ್‌ಗಳಲ್ಲಿ ತಂಡದ ಚಾಲಕನೊಬ್ಬನಿಗೆ ಅವರ ಉಳಿದ ಸ್ಪರ್ಧಿಗಳು ನೆರವಾಗುವುದು ಸಾಮಾನ್ಯ. ಇಂತಹ ಲಾಭ ಶೂಮಾಕರ್‌ರಿಗೇ ಹೆಚ್ಚು ಸಿಕ್ಕಿತ್ತು ಎಂಬುದು ಉಲ್ಲೇಖಾರ್ಹ.
ಬಿಡಿ, ಮನುಷ್ಯನಿಗೆ ಯಾವತ್ತೂ ಎರಡು ಮುಖಗಳು. ಹಣಕಾಸಿನ ವಿಚಾರದಲ್ಲಿ ಶೂಮಾಕರ್ ಸದಾ ಶ್ರೀಮಂತ. ೨೦೦೫ರ ಯುರೋಬ್ಯುಸಿನೆಸ್ ಪತ್ರಿಕೆಯ ಪ್ರಕಾರ, ಈತ ವಿಶ್ವದ ಮೊತ್ತಮೊದಲ ಬಿಲಿಯನೇರ್ ಶ್ರೀಮಂತರು. ಬರೀ ೧೦ ಥ ೮ರ ಜಾಹೀರಾತು ಪಟ್ಟಿಯನ್ನು, ಅದೂ ರೇಸ್ ನಂತರ ಧರಿಸುವ ಕ್ಯಾಪ್‌ನಲ್ಲಿ ಲಗತ್ತಿಸುವುದಕ್ಕೆ ಮೈಕೆಲ್ ಮೂರು ವರ್ಷ ಅವಧಿಗೆ ಪಡೆದ ಮೊತ್ತ ಎಂಟು ಮಿಲಿಯನ್ ಡಾಲರ್!
ಶೂಮಾಕರ್ ಹೃದಯದಲ್ಲೂ ಶ್ರೀಮಂತ. ಭಾರತದ ಭೂಕಂಪ ದುರಂತಕ್ಕೆ ನೀಡಿದ ಸಹಾಯಧನ ಬರೋಬ್ಬರಿ ೧೦ ಮಿಲಿಯನ್ ಡಾಲರ್. ವೈಪರೀತ್ಯವೆಂದರೆ, ಮೈಕೆಲ್‌ರ ಬಾಡಿಗಾರ್ಡ್ ತನ್ನ ಮಕ್ಕಳಿಬ್ಬರ ಜೊತೆ ಇದೇ ಭಾರತದ ಸುನಾಮಿಗೆ ಬಲಿಯಾಗಿಬಿಟ್ಟುದು. ಮೈಕೆಲ್ ತನ್ನ ವೃತ್ತಿ ಜೀವನದ ಕೊನೆಯ ನಾಲ್ಕು ವರ್ಷಗಳಲ್ಲಿ ನೀಡಿದ ದೇಣಿಗೆ ಕೇವಲ ೫೦ ಮಿಲಿಯನ್ ಡಾಲರ್! ಇಂತಹ ಮೈಕೆಲ್ ಶೂಮಾಕರ್ ಆಗಸ್ಟ್ ೨೩ರಂದು ವೆಲೆನ್ಸಿಯಾದಲ್ಲಿ ನಡೆಯುವ ಯುರೋಪಿಯನ್ ಗ್ರಾಂಡ್ ಫಿಕ್ಸ್‌ನಲ್ಲಿ ಮತ್ತೆ ರೇಸ್ ಕಾರಿನಲ್ಲಿ ಪವಡಿಸಲಿದ್ದಾರೆ. ಏನಾದೀತೋ?
-ಮಾವೆಂಸ

 
200812023996