ಮಂಗಳವಾರ, ಆಗಸ್ಟ್ 11, 2009

ಚೆಂಡು ವಿರೂಪಕ್ಕೂ ಐಸಿಸಿಯ ಮಾನ್ಯತೆ!?

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ, ಕಲಾತ್ಮಕ ವೇಗಿ ಅಲಾನ್ ಡೊನಾಲ್ಡ್ ಒಂದು ರಂಜನೀಯ ಸಲಹೆ ಕೊಟ್ಟಿದ್ದಾರೆ. ನಕ್ಕು ಹಗುರಾಗುವುದೋ, ಗಂಭೀರ ವಿಶ್ಲೇಷಣೆ ನಡೆಸಬೇಕೋ ಎಂಬ ತೀರ್ಮಾನವೂ ಸುಲಭವಲ್ಲ. ಅವರು ಹೇಳಿದ್ದಿಷ್ಟೇ, "ಅಂತರ್ರಾಷ್ಟೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಚೆಂಡನ್ನು ವಿರೂಪಗೊಳಿಸುವ ತಂತ್ರವನ್ನು ಕಾನೂನುಬದ್ಧವಾಗಿಸಬೇಕು!"
ಡೊನಾಲ್ಡ್ ಅಂತಿಂತವರಲ್ಲ. ತಮಗೆ ಸಿಕ್ಕ ಅಲ್ಪ ಕಾಲದ ವಿಶ್ವ ದರ್ಜೆ ಕ್ರಿಕೆಟ್ ಮೈದಾನದಲ್ಲಿ ವೇಗದ ಬೌಲಿಂಗ್‌ಗೆ ಹೊಸದಾದ ವ್ಯಾಖ್ಯೆ ಬರೆದವರು. ಆಸ್ಟ್ರೇಲಿಯಾದ ಗ್ಲೆನ್ ಮೆಗ್ರಾತ್‌ರಂತವರ ಸಮಕಾಲೀನರಾಗಿಯೂ ಪ್ರತಿಭೆಯಿಂದ ಅವರಷ್ಟೇ ಮಿಂಚಿದವರು. ಈಗಲೂ ಅವರು ಕ್ರಿಕೆಟ್‌ನಿಂದ ಹೊರಗುಳಿದಿಲ್ಲ. ಈಗವರು ಇಂಗ್ಲೆಂಡ್ ಕೌಂಟಿ ವಾರ್ವಿಕ್‌ಷೈರ ಕ್ಲಬ್‌ನ ಕೋಚ್.
ನಿಜ, ಪಾಕಿಸ್ತಾನದ ವೇಗಿಗಳು ಒಂದಲ್ಲ ಒಂದು ರೀತಿಯಲ್ಲಿ ಚೆಂಡನ್ನು ವಿರೂಪಗೊಳಿಸುವ ಮೂಲಕ ರಿವರ್ಸ್ ಸ್ವಿಂಗ್ ಪಡೆಯುತ್ತಾರೆ. ಇಂಗ್ಲೆಂಡಿನ ನಾಯಕ ಮೈಕೆಲ್ ಆಥರ್ಟನ್ ಚೆಂಡಿಗೆ ಉಜ್ಜಲು ಪ್ಯಾಂಟ್ ಜೇಬಿನಲ್ಲಿ ಮರಳುಮಣ್ಣು ಇಟ್ಟುಕೊಂಡು ಸಿಕ್ಕುಬಿದ್ದುದುಂಟು. ಬ್ಲೇಡ್, ವ್ಯಾಸಲೀನ್, ಚಮಚ, ಬಾಟಲಿ ಮುಚ್ಚಳ...ಕ್ರಿಕೆಟಿಗರು ಮೈದಾನದಲ್ಲಿ ಬ್ಯಾಟ್ ಹೊರತಾಗಿ ಬಳಸುತ್ತಿರುವ ಸಾಧನಗಳು! ಉದ್ದೇಶ, ಚೆಂಡಿನ ಒಂದು ಮೈಯ ಸ್ವರೂಪ ಬದಲಿಸುವುದು. ಈ ಎಲ್ಲ ಹಿನ್ನೆಲೆಯಲ್ಲಿ ಡೊನಾಲ್ಡ್ ಈ ಪ್ರಳಯಾಂತಕ ಸಲಹೆ ನೀಡಿದರೇ?
ಅಥವಾ ಐಸಿಸಿಗೆ ಚಾಟಿಯೇಟು ಬೀಸಬೇಕಿತ್ತೇ? ಖುದ್ದು ಡೊನಾಲ್ಡ್‌ರದ್ದು ಆಕರ್ಷಕ ಬೌಲಿಂಗ್ ಶೈಲಿ. ತಾಂತ್ರಿಕವಾಗಿಯೂ ಯಾವುದೇ ಐಬಿಲ್ಲ. ಇಂತಹ ಬೌಲರ್ ಕೈ ತಿರುಗಿಸದೆ ಬೌಲ್ ಮಾಡಿ ವಿಕೆಟ್ ತೆಗೆಯುವ ಆಸಾಮಿಗಳಿಗಾಗಿ ೧೫ ಡಿಗ್ರಿ ಬೇಕಾದರೂ ಕೈ ತಿರುಚಬಹುದು ಎಂದು ಐಸಿಸಿ ತಂದ ಹೊಸ ನಿಯಮ ಕಿರಿಕಿರಿ ಎನಿಸಿರಲೇಬೇಕು. ಇವತ್ತು ಲಸಿತಾ ಮಲಿಂಗಾ, ಶೋಯೆಬ್ ಅಕ್ತರ್ ತರದ ಬೌಲರ್‌ಗಳೇ ಎಲ್ಲೆಡೆ ಕಾಣಿಸಿದರೆ ಇದು ಬೌಲಿಂಗೋ, ಲಗೋರಿಯೋ ಅನುಮಾನ ಕಾಡದಿರದು. ಹೀಗೆ ೧೫ ಡಿಗ್ರಿ ಸೂತ್ರ ಬಳಸಿ ಐಸಿಸಿ ಬಗರ್‌ಹುಕುಂ ಸಕ್ರಮ ಎಂದೆನ್ನುತ್ತದೆಂದಾದರೆ ಚೆಂಡು ವಿರೂಪಗೊಳಿಸುವ ಪ್ರಕ್ರಿಯೆಯೂ ಹಿಂದಿನಿಂದ ಬಂದ ಚಾಳಿ. ಅದನ್ನು ಮಾನ್ಯ ಮಾಡಿದರೆ ತಪ್ಪೇನು?
ಹಾಗೆ ಡೊನಾಲ್ಡ್ ಪ್ರಶ್ನಿಸಿದರೆ? ದೃಢಪಡಿಸಲು ಸಾಕ್ಷಿಗಳಿಲ್ಲ. ಅಷ್ಟಕ್ಕೂ ಚೆಂಡಿಗೆ ರೂಪ ಕೊಡುವ ಸೊಟ್ಟ ಕಲೆ ಇಂಗ್ಲೆಂಡಿಗರಲ್ಲಿ ಸಮೃದ್ಧಿ ಆಗಿದ್ದುದನ್ನು ನಂಬಲಾಗಿದೆ. ಗ್ರೀಸ್ ಹಚ್ಚಿ ಸ್ವಿಂಗ್ ಆಗುವುದನ್ನು ಕಂಡು ಹಿಡಿದ ಮಹಾನುಭಾವರು ಇಲ್ಲಿದ್ದಾರೆ. ಅಲ್ಲಿನ ಕೌಂಟಿ ಕ್ರಿಕೆಟ್‌ನಲ್ಲಂತೂ ಇದು ಯಗ್ಗಿಲ್ಲದೆ ನಡೆಯುತ್ತಿದ್ದ ಕಾಲವೊಂದಿತ್ತು. ಆದರೆ ಇಂಗ್ಲೆಂಡಿನ ವಾತಾವರಣದಲ್ಲಿ ಮೊದಲೇ ಸ್ವಿಂಗ್ ಸಾಮಾನ್ಯ. ಅದಕ್ಕೆ ಈ ‘ಎಕ್ಟ್ರಾ’ಗಳು ಸೇರಿದರೆ ಚೆಂಡಿನ ಲೈನ್‌ನ ನಿಯಂತ್ರಣ ಕಷ್ಟ. ಹಾಗಾಗಿ ರಿವರ್ಸ್ ಸ್ವಿಂಗ್ ಅಸ್ತ್ರ ಬೂಮರ್‍ಯಾಂಗ್ ಆಗುವ ಸಂಭಾವ್ಯತೆಯೇ ಇದ್ದಿತ್ತು. ಆ ಲೆಕ್ಕದಲ್ಲಿ ಡೊನಾಲ್ಡ್‌ರ ಸಿಟ್ಟು ಇಂಗ್ಲೆಂಡಿಗರ ಮೇಲೂ ಅಲ್ಲ.
ವಾಸ್ತವ ವಿಚಾರಕ್ಕೆ ಬರೋಣ. ಅಲಾನ್ ಡೊನಾಲ್ಡ್ ಇತ್ತೀಚೆಗೆ ಟ್ವೆಂಟಿ ೨೦ ಪಂದ್ಯಗಳನ್ನು ನೋಡುತ್ತಾ ಬಂದಿದ್ದಾರೆ. ಕೌಂಟಿ, ಏಕದಿನಗಳನ್ನು ವಾರ್ವಿಕ್‌ಷೈರ್ ಕೋಚ್ ಆಗಿ ಕಂಡಿದ್ದಾರೆ. ಟೆಸ್ಟ್‌ಗಳನ್ನು ನಿರುಕಿಸಿದ್ದಾರೆ. ಎಲ್ಲಿ ನೋಡಿದರೂ ನೂರಕ್ಕೆ ನೂರರಷ್ಟು ಬ್ಯಾಟಿಂಗ್‌ಗೆ ನೆರವಾಗುವ ಶುಷ್ಕ ಪಿಚ್‌ಗಳದ್ದೇ ಸಿಂಹಪಾಲು. ಏಕದಿನಕ್ಕೋ, ಟ್ವೆಂಟಿಗೋ ಬ್ಯಾಟಿಂಗ್ ಪಿಚ್ ನಿರ್ಮಿಸಿದರೆ ಕ್ಷಮಿಸಬಹುದು. ಆದರೆ ಮೊನ್ನೆ ಶ್ರೀಲಂಕಾದಲ್ಲಿ, ನಿನ್ನೆ ಇಂಗ್ಲೆಂಡಿನ ಹೆಡಿಂಗ್ಲೆಯಲ್ಲಿ.... ಎಲ್ಲಿ ನೋಡಿದರೂ ಟೆಸ್ಟ್‌ಗೂ ಒಣ ಪಿಚ್ ಎಂದರೆ? ಇಂತಹ ಸ್ಥಿತಿಯಲ್ಲಿ ಸಮತೋಲಿತ ಪಿಚ್ ನಿಮಿಸುವುದು ಇನ್ನು ಮುಂದೆ ಸಾಧ್ಯವಿಲ್ಲವೆಂದಾದರೆ ಬೌಲರ್‌ಗಳು ಆಕ್ಷೇಪವೆತ್ತುವುದಿಲ್ಲ. ನೀವು ಬಾಲ್ ಟ್ಯಾಂಪರಿಂಗ್‌ನ್ನು ಕಾನೂನುಬದ್ಧಗೊಳಿಸಿ ಎಂಬ ವಿಲಕ್ಷಣ, ಸಕಾರಣಾತ್ಮಕ ವಾದ ಮುಂದಿಟ್ಟಿದ್ದಾರೆ ಡೊನಾಲ್ಡ್!
ಪಿಚ್‌ಗಳನ್ನು ‘ಅಗತ್ಯಕ್ಕೆ ’ ತಕ್ಕಂತೆ ನಿರ್ಮಿಸುವುದಾದರೆ ಚೆಂಡನ್ನು ‘ಅಗತ್ಯಕ್ಕೆ ’ ಅನುಗುಣವಾಗಿ ಬದಲಾಯಿಸಿಕೊಲ್ಳಬಾರದೇಕೆ? ಇಲ್ಲದಿದ್ದರೆ ವೇಗಿಗಳ ಭವಿಷ್ಯದ ಕೊಲೆ ಪಿಚ್‌ಗಳಲ್ಲಾಗುತ್ತದೆ. ಹಿಂದೆ ಕಟ್ನಿ ವಾಲ್ಶ್, ಆಂಬ್ರೋಸ್, ಮೆಗ್ರಾತ್, ವಾಸೀಂ ಅಕ್ರಂ ಎಂದರೆ ಭಯ ಬೀಳುತ್ತಿದ್ದ ಬ್ಯಾಟ್ಸ್‌ಮನ್‌ಗಳು ಈಗ ಒಂದಿನಿತೂ ಬೆಚ್ಚುತ್ತಿಲ್ಲ. ಟಿ೨೦ಯಲ್ಲಂತೂ ಇಂತವರಿಗೂ ಆಫ್ ಸ್ಟಂಪ್ ಆಚೆ ಚಲಿಸಿ ವಿಕೆಟ್ ಕೀಪರ್ ಹಿಂದೆ ಚೆಂಡು ಎತ್ತಿಬಿಡುತ್ತಾರೆ. ಪಿಚ್ ಮೇಲೆ ಬಿದ್ದ ಚೆಂಡು ಆರಾಮವಾಗಿ ಬ್ಯಾಟಿಗೆ ಬರುವಾಗ ನಂ.೧೧ ಕೂಡ ಬಿರುಸಿನ ಬ್ಯಾಟ್ಸ್‌ಮನ್!
ಬೌಲರ್‌ಗಳು ಚೆಂಡಿನೊಂದಿಗೆ ಅದೂ ಇದೂ ಆಟವಾಡುವುದು ನಡೆದೇ ಇದೆ. ಅವರಿಗೆ ಆಸೆ, ಇಂತಹ ಪಿಚ್ ಕಿಂಚಿತ್ ಸ್ವಿಂಗ್ ಆದರೆ ತಮ್ಮ ಬೌಲಿಂಗ್ ವಿವರ ತುಂಬಾ ಕೆಟ್ಟದಾಗಲಿಕ್ಕಿಲ್ಲವೆಂದು. ಇಂದಿಗೂ ಟೆಸ್ಟ್, ಏಕದಿನ ಪಂದ್ಯಗಳಲ್ಲಿ ಚೆಂಡಿನ ಒಂದು ಮೈಯ ಹೊಳಪು ಉಳಿಸಿ ಇನ್ನೊಂದು ಮೈಯನ್ನು ಉಜ್ಜಿ ಉಜ್ಜಿ ಒರಟುಗೊಳಿಸಿ ರಿವರ್ಸ್ ಸ್ವಿಂಗ್ ಪಡೆಯುವ ಪ್ರಯತ್ನ ನಡೆಯುತ್ತಿರುತ್ತದೆ. ಐಸಿಸಿ ಬ್ಯಾಟ್ಸ್‌ಮನ್ ಪರ ನಿಂತುಬಿಡುತ್ತದೆ. ಪಂದ್ಯಗಳ ಆಕರ್ಷಣೆ ಹೆಚ್ಚಿಸಲು ಪವರ್ ಪ್ಲೇ ತರುತ್ತದೆ. ಸ್ವಿಂಗ್‌ನಿಂದಾಗಿ ಬ್ಯಾಟ್ಸ್‌ಮನ್‌ಗೆ ಪವರ್ ಪ್ಲೇ ಇದ್ದೂ ರನ್ ಗಳಿಸಲಾಗುವುದಿಲ್ಲ ಎನ್ನಿಸಿದ ತಕ್ಷಣ ಏಕದಿನದ ೩೪ನೇ ಓವರ್‌ಗೆ ಹೊಸ ಚೆಂಡು ಬಳಕೆ ಎಂದುಬಿಡುತ್ತದೆ. ಚೆಂಡನ್ನು ಉಜ್ಜಿ ಇನ್ನೇನು ಸ್ವಿಂಗ್, ರಿವರ್ಸ್ ಸ್ವಿಂಗ್ ಮಾಡಬಹುದು ಎನ್ನುವ ಬೌಲರ್‌ನ ಆಸೆಗೆ ಕಲ್ಲು ಬಿದ್ದಂತೆ! ಇತ್ತೀಚೆಗೆ ಬೌಲರ್‌ಗಳು ಬ್ಯಾಟ್ಸ್‌ಮನ್ ಎಂಬ ರನ್ ಬಕಾಸುರರ ಆಹಾರದಂತೆ ಕಾಣುತ್ತಿದ್ದಾರೆ. ಕೆಲ ದಿನಗಳಲ್ಲಿ ‘ಮೇಡನ್’ ಎಂಬ ಸಾಧನೆ ಇಲ್ಲವಾಗಿ ಆ ಅಂಶವೇ ಕ್ರಿಕೆಟ್‌ನಿಂದ ಮಾಯವಾಗಿಬಿಡಬಹುದು!!
ಸ್ವಲ್ಪ ಅತಿರಂಜಿತವಾಗಿ ಒಂದು ಗಂಭೀರ ಸಮಸ್ಯೆಯನ್ನು ಪ್ರಸ್ತಾಪಿಸಲಾಗಿದೆ. ವಿಷಯ ಮುಖ್ಯ. ಶೈಲಿ ನಂತರದ ವಿಚಾರ. ಅಲಾನ್ ಡೊನಾಲ್ಡ್‌ರಿಗೂ ಒಂದೇ ಆಸೆ, ಐಸಿಸಿ ಕೊನೆ ಪಕ್ಷ ಏಕದಿನ, ಟೆಸ್ಟ್‌ನಲ್ಲಿ ಕೆಲ ಮಟ್ಟಿಗಾದರೂ ಬೌಲರ್‌ಗಳಿಗೆ ನೆರವೀಯುವ ಪಿಚ್ ನಿರ್ಮಿಸದಿದ್ದರೆ ಕ್ರಿಕೆಟ್‌ನ ರುಚಿ ಕೆಡುತ್ತದೆ. ಹಾಗಾಗದಿರಲಿ!
ನೀವೇ ಹೇಳಿ, ಬ್ಯಾಟ್ಸ್‌ಮನ್ ಒಂದರ ಹಿಂದೆ ಒಂದು ಬೌಂಡರಿ, ಸಿಕ್ಸ್ ಬಾರಿಸುವಾಗ ಆಗುವ ಕೌತುಕವೇ ಮನೋಜ್ ಪ್ರಭಾಕರ್, ವೆಂಕಿ ಪ್ರಸಾದ್, ಮೈಕೆಲ್ ಜಾನ್ಸನ್, ಇಮ್ರಾನ್‌ಖಾನ್‌ರಂತವರ ಆಫ್ ಸ್ವಿಂಗ್, ಇನ್‌ಕಟರ್‌ಗಳನ್ನು ನೋಡಿದಾಗ, ಅವು ವಿಕೆಟ್‌ಗಳನ್ನು ಚದುರಿಸಿದಾಗ ಆಗುವುದಿಲ್ಲವೇ?
ರುಚಿಕಟ್ಟಾದ ಕ್ರಿಕೆಟ್‌ಗೆ ಹುಳಿ ಹಿಂಡುತ್ತಿರುವ ಐಸಿಸಿ ಕ್ರಮಗಳ ಕುರಿತು ಗಂಭೀರ ಚರ್ಚೆ ಆಗಬೇಕಾದ ಕಾಲ ಬಂದಿದೆ.

-ಮಾವೆಂಸ
ಇ ಮೇಲ್- mavemsa@gmail.com

1 comments:

Arun ಹೇಳಿದರು...

Install Add-Kannada button with ur blog. Then u can easily submit ur page to all top Kannada social bookmarking sites & u will get more traffic and visitors.
Install widget from www.findindia.net

 
200812023996