ಸಿನೆಮಾ ರಂಗದ ಆಕರ್ಷಣೆ ಬಡಪೆಟ್ಟಿಗೆ ಕಡಿಮೆಯಾಗದು. ಹಾಗಾಗಿಯೇ ನಟೀಮಣಿಯರು ಮದುವೆಯಾಗಿ ವರ್ಷ ಒಪ್ಪತ್ತಿನಲ್ಲಿ ಮತ್ತೆ ಭ್ರಾಮಕ ಲೋಕದ ಕ್ಯಾಮರಾ ಮುಂದೆ ಹಾಜರಾಗಿಬಿಡುತ್ತಾರೆ. ಕೊನೆಗೆ ಗಂಡನಿಗೆ ಸೋಡಾಚೀಟಿ ಕೊಟ್ಟಾದರು ಸರಿ! ಯಥಾವತ್ ಪ್ರವೃತ್ತಿಯನ್ನು ನಾವು ಕ್ರೀಡಾಕ್ಷೇತ್ರದಲ್ಲೂ ನೋಡಬಹುದು. ಇತ್ತೀಚೆಗೆ ಟೆನಿಸ್‌ನ ಕಿಂ ಕ್ಲಿಸ್ಟರ್‍ಸ್ ಅಂಕಣಕ್ಕೆ ಮರಳಿದ್ದಾರೆ. ಸನತ್ ಜಯಸೂರ್ಯರ ಆದಿಯಾಗಿ ಕ್ರಿಕೆಟ್‌ನಲ್ಲಿ ಈ ನಿವೃತ್ತಿಯೇ ಕೆಲವೊಮ್ಮೆ ಆಟವಾಗಿದ್ದೂ ಇದೆ. ಹೀಗೆ ನಿವೃತ್ತಿಯಿಂದ ಹಿಂಸರಿದು ಅಂಕಣದೆಡೆಗೆ ಹೆಜ್ಜೆ ಇಟ್ಟವರಲ್ಲಿ ಈಗಿನ ಸೇರ್ಪಡೆ ಮೈಕೆಲ್ ಶೂಮಾಕರ್.
ಶೂಮಾಕರ್ ಓರ್ವ ಅದ್ಭುತ ಫಾರ್ಮುಲಾ ಚಾಲಕ. ೧೯೯೪, ೯೫, ೨೦೦೦ದಿಂದ ೨೦೦೪ರವರೆಗಿನ ಒಟ್ಟು ಏಳು ವಷ ಚಾಂಪಿಯನ್‌ಶಿಪ್ ಗೆದ್ದ ಸಾಹಸಿ. ೯೧ ವಿಜಯವೂ ಸೇರಿ ಪೋಡಿಯಂನಲ್ಲಿ ನಿಂತ ೧೫೪ ಸಂದರ್ಭಗಳನ್ನು ನೆನಪಿಸಿಕೊಂಡರೆ ಅವರ ತಾಕತ್ತು ಅರ್ಥವಾಗುತ್ತದೆ. ೨೦೦೬ ಎಫ್‌ಎಎ ಸರ್ವೆಯ ಪ್ರಕಾರ, ಫಾರ್ಮುಲಾ ರೇಸ್‌ನ ಅತಿ ಜನಪ್ರಿಯ ಚಾಲಕ ಎಂಬ ಗೌರವವನ್ನು ತಮ್ಮದಾಗಿಸಿಕೊಂಡವರು. ೨೦೦೬ರ ಬ್ರೆಜಿಲಿಯನ್ ಗ್ರಾಂಡ್‌ಫಿಕ್ಸ್ ನಂತರ ನಿವೃತ್ತಿ ಘೋಷಿಸಿದ್ದ ಮೈಕೆಲ್ ಈಗ ಮಾತ್ರ ಅಂಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
ಈ ಮರಳುವಿಕೆಯ ಹಿಂದೆ ಭಾವನಾತ್ಮಕ ಕಾರಣಗಳಿಗಿಂತ ತಾಂತ್ರಿಕ ವಿಚಾರಗಳೇ ಮೇಲುಗೈ ಪಡೆದಿದೆ. ಪ್ರಸ್ತುತ ಶೂಮಾಕರ್ ಫೆರಾರಿ ತಂಡಕ್ಕೆ ಸೇರಿದವರು. ನಿವೃತ್ತಿಯ ನಂತರವೂ ಅದೇ ತಂಡದ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೊನ್ನೆ ಹಂಗರಿಯನ್ ಗ್ರಾಂಡ್‌ಫಿಕ್ಸ್ ವೇಳೆ ಅರ್ಹತಾ ಸುತ್ತುಗಳಲ್ಲಿ ಭಾಗವಹಿಸಿದ್ದ ಫೆರಾರಿ ಚಾಲಕ ಫಿಲೆಪ್ಪೆ ಮಸ್ಸಾ ಕಾರಿನ ಸಸ್ಪೆನ್ಶನ್ ಸ್ಪ್ರಿಂಗ್‌ನಿಂದಾಗಿ ಗಂಭೀರವಾಗಿ ಗಾಯಗೊಂಡರು. ಇದೀಗ ಸ್ಪಷ್ಟವಾಗಿರುವ ಪ್ರಕಾರ, ಮತ್ತೆ ೨೦೦೯ರಲ್ಲಿ ಮಸ್ಸಾ ಸ್ಪರ್ಧಾತ್ಮಕ ಫಾರ್ಮುಲಾ ಒನ್‌ಗೆ ಮರಳುವುದು ಸಾಧ್ಯವಿಲ್ಲ. ಒಂದು ಅನಿರೀಕ್ಷಿತ ಬೆಳವಣಿಗೆಯಲ್ಲಿ, ೨೦೦೯ರ ಯುರೋಪಿಯನ್ ಗ್ರಾಂಡ್‌ಫಿಕ್ಸ್‌ನಲ್ಲಿ ಶೂಮಾಕರ್ ಪಾಲ್ಗೊಳ್ಳುವರೆಂದು ಫೆರಾರಿ ಪ್ರಕಟಿಸಿದೆ!
ಮಸ್ಸಾ ಪುನಃ ಫಿಟ್ ಎನ್ನಿಸಿಕೊಳ್ಳುವವರೆಗೆ, ಕೊನೆಪಕ್ಷ ಈ ವರ್ಷದ ಅಂತ್ಯದವರೆಗೆ ಶೂಮಾಕರ್ ಎಲ್ಲ ಉಳಿದ ಫಿಕ್ಸ್‌ಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ವಾರಸ್ಯವೆಂದರೆ, ಈ ಋತುವಿನ ಉಳಿದ ಎಲ್ಲ ಏಳು ರೇಸ್‌ನಲ್ಲಿ ಶೂಮಾಕರ್ ಆಡಿದರೆಇನ್ನೊಂದು ದಾಖಲೆ ಗಿಟ್ಟುತ್ತದೆ! ೨೫೬ ರೇಸ್‌ಗಳಲ್ಲಿ ಪಾಲ್ಗೊಂಡ ರಿಕಾರ್ಡೋ ಪ್ಯಾಟ್ರೀಸೆ ಸಾಧನೆಯನ್ನು ಸರಿಗಟ್ಟಿದಂತಾಗುತ್ತದೆ. ಕೇವಲ ರುಬೆನ್ಸ್ ಬ್ಯಾರಿಟೆಲ್ಲೋ ಮಾತ್ರ ಇವರಿಬ್ಬರಿಗಿಂತ ಮುಂದಿದ್ದಾರೆ. ಉಸಿರು ಬಿಗಿಹಿಡಿಯಬೇಕಾದೀತು, ಶೂಮಾಕರ್ ಪ್ರತಿ ರೇಸ್‌ಗೆ ಗಳಿಸಲಿರುವ ಹಣ ಅಂದಾಜು ೩.೨ ಮಿಲಿಯನ್ ಪೌಂಡ್‌ಗಳು!
ತಣ್ಣನೆಯ ಸ್ವಭಾವದ ಶೂಮಾಕರ್ ವಿವಾದಗಳಿಂದ ಕೂಡ ಹೊರಗಿರಲಿಲ್ಲ. ಹಲವು ಬಾರಿ ಫೆರಾರಿ ತಂಡದ ಸಹ ಸ್ಪರ್ಧಿಗಳು ಶೂಮಾಕರ್‌ರ ಗೆಲುವಿಗೆ ಸಹಕರಿಸಿದ ಆಪಾದನೆಗೆ ಒಳಗಾಗಿದ್ದುಂಟು. ಸ್ವತಃ ಶೂಮಾಕರ್ ಗೆಲ್ಲಲು ನ್ಯಾಯದ ಎಲ್ಲೆ ದಾಟಿದ ಅನುಮಾನಗಳಿದ್ದವು. ಇದಕ್ಕೆ ೧೯೯೪ರ ಆಸ್ಟ್ರೇಲಿಯನ್ ಗ್ರಾಂಡ್‌ಫಿಕ್ಸ್ ಉತ್ತಮ ಉದಾಹರಣೆ. ಸ್ಪರ್ಧೆಗೆ ಮುನ್ನ ಇನ್ನೋರ್ವ ಡಮಾನ್ ಹಿಲ್‌ಗಿಂತ ಏಕೈಕ ಅಂಕದಿಂದ ಶೂಮಾಕರ್ ಮುಂದಿದ್ದರು. ೩೫ನೇ ಲ್ಯಾಪ್‌ನ ವೇಳೆಯಲ್ಲೆ ಶೂಮ್ ಹಿಲ್‌ಗಿಂತ ಮುನ್ನಡೆಯಲ್ಲಿದ್ದರು ಖರೆ. ಆದರೆ ಕಾರು ಕೈಕೊಡುವ ಸೂಚನೆ ಕಂಡುಬಂದಿತ್ತು. ಅದಾಗಲೇ ಕಾರು ಪಕ್ಕದ ರಕ್ಷಣಾ ಗೋಡೆಗೆ ಹೊಡೆದು ಬಿಟ್ಟು ಕಾರಿನ ವೇಗ್ ಕಡಿಮೆಯಾಗಿತ್ತು. ತುಸು ಮುಂದಿದ್ದುದು ನಿಜ. ಹಿಲ್ ಬೆನ್ನ ಹಿಂದೆಯೇ ಇದ್ದರು. ಮುಂದಿನ ಲ್ಯಾಪ್ ತಿರುವಿನಲ್ಲಿ ಹಿಲ್ ಶೂಮಾಕರ್‌ರನ್ನು ಹಿಂದಿಕ್ಕುವ ಪ್ರಯತ್ನದಲ್ಲಿದ್ದಾಗ ಶೂಮ್ ಕಾರು ಅಡ್ಡ ಬಂದು ಭರ್ಜರಿ ಡಿಕ್ಕಿ ಸಂಭವಿಸಿತು. ಹಿಲ್ - ಶೂಮಾಕರ್ ಇಬ್ಬರೂ ದುರಸ್ತಿ ಪಡಿಸಲಾಗದ ವಾಹನದ ಜೊತೆ ನಿವೃತ್ತರಾಗಬೇಕಾಯಿತು. ಇಬ್ಬರಿಗೂ ಸ್ಪರ್ಧೆಯಿಂದ ಒಂದೇ ಒಂದು ಅಂಕ ಗಿಟ್ಟಲಿಲ್ಲ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಶೂಮಾಕರ್ ಆ ವರ್ಷದ ಚಾಂಪಿಯನ್ ಆಗಿದ್ದರು!
ಸದರಿ ಪ್ರಕರಣದಲ್ಲಿ ಬಚಾವಾದ ಶೂಮ್ ೧೯೯೭ರಲ್ಲಿ ವಿಲಿಯಮ್ಸ್ ಚೌಕಸ್ ವಿಲ್ಲೆನ್ಯೂವೆ ಕಾರಿಗೆ ‘ಢೀ’ ಕೊಟ್ಟುದುದಕ್ಕೆ ವಿಶ್ವ ಚಾಂಪಿಯನ್‌ಶಿಪ್‌ಗೆ ಸ್ಪರ್ಧಿಸುವ ಅರ್ಹತೆಯನ್ನೇ ಕಳೆದುಕೊಂಡಿದ್ದರು. ರೇಸಿಂಗ್ ಇತಿಹಾಸದಲ್ಲೂ ಈ ಅನರ್ಹತೆ ಪ್ರಕರಣ ಪ್ರಪ್ರಥಮ! ಬೆನ್ನೆಟಾನ್ ತಂಡವನ್ನೂ ಪ್ರತಿನಿಧಿಸಿದ್ದ ಶೂಮ್‌ರ ಗೆಲುವುಗಳಷ್ಟೇ ವಿವಾದಗಳೂ ಪ್ರಚಾರದಲ್ಲಿರುವುದು ವಿಪರ್ಯಾಸ. ಗ್ರಾಂಡ್‌ಫಿಕ್ಸ್‌ಗಳಲ್ಲಿ ತಂಡದ ಚಾಲಕನೊಬ್ಬನಿಗೆ ಅವರ ಉಳಿದ ಸ್ಪರ್ಧಿಗಳು ನೆರವಾಗುವುದು ಸಾಮಾನ್ಯ. ಇಂತಹ ಲಾಭ ಶೂಮಾಕರ್‌ರಿಗೇ ಹೆಚ್ಚು ಸಿಕ್ಕಿತ್ತು ಎಂಬುದು ಉಲ್ಲೇಖಾರ್ಹ.
ಬಿಡಿ, ಮನುಷ್ಯನಿಗೆ ಯಾವತ್ತೂ ಎರಡು ಮುಖಗಳು. ಹಣಕಾಸಿನ ವಿಚಾರದಲ್ಲಿ ಶೂಮಾಕರ್ ಸದಾ ಶ್ರೀಮಂತ. ೨೦೦೫ರ ಯುರೋಬ್ಯುಸಿನೆಸ್ ಪತ್ರಿಕೆಯ ಪ್ರಕಾರ, ಈತ ವಿಶ್ವದ ಮೊತ್ತಮೊದಲ ಬಿಲಿಯನೇರ್ ಶ್ರೀಮಂತರು. ಬರೀ ೧೦ ಥ ೮ರ ಜಾಹೀರಾತು ಪಟ್ಟಿಯನ್ನು, ಅದೂ ರೇಸ್ ನಂತರ ಧರಿಸುವ ಕ್ಯಾಪ್‌ನಲ್ಲಿ ಲಗತ್ತಿಸುವುದಕ್ಕೆ ಮೈಕೆಲ್ ಮೂರು ವರ್ಷ ಅವಧಿಗೆ ಪಡೆದ ಮೊತ್ತ ಎಂಟು ಮಿಲಿಯನ್ ಡಾಲರ್!
ಶೂಮಾಕರ್ ಹೃದಯದಲ್ಲೂ ಶ್ರೀಮಂತ. ಭಾರತದ ಭೂಕಂಪ ದುರಂತಕ್ಕೆ ನೀಡಿದ ಸಹಾಯಧನ ಬರೋಬ್ಬರಿ ೧೦ ಮಿಲಿಯನ್ ಡಾಲರ್. ವೈಪರೀತ್ಯವೆಂದರೆ, ಮೈಕೆಲ್‌ರ ಬಾಡಿಗಾರ್ಡ್ ತನ್ನ ಮಕ್ಕಳಿಬ್ಬರ ಜೊತೆ ಇದೇ ಭಾರತದ ಸುನಾಮಿಗೆ ಬಲಿಯಾಗಿಬಿಟ್ಟುದು. ಮೈಕೆಲ್ ತನ್ನ ವೃತ್ತಿ ಜೀವನದ ಕೊನೆಯ ನಾಲ್ಕು ವರ್ಷಗಳಲ್ಲಿ ನೀಡಿದ ದೇಣಿಗೆ ಕೇವಲ ೫೦ ಮಿಲಿಯನ್ ಡಾಲರ್! ಇಂತಹ ಮೈಕೆಲ್ ಶೂಮಾಕರ್ ಆಗಸ್ಟ್ ೨೩ರಂದು ವೆಲೆನ್ಸಿಯಾದಲ್ಲಿ ನಡೆಯುವ ಯುರೋಪಿಯನ್ ಗ್ರಾಂಡ್ ಫಿಕ್ಸ್‌ನಲ್ಲಿ ಮತ್ತೆ ರೇಸ್ ಕಾರಿನಲ್ಲಿ ಪವಡಿಸಲಿದ್ದಾರೆ. ಏನಾದೀತೋ?
-ಮಾವೆಂಸ
0 comments:
200812023996 ಕಾಮೆಂಟ್ ಪೋಸ್ಟ್ ಮಾಡಿ