ಸೋಮವಾರ, ಜನವರಿ 25, 2010

ಹರಾಜಾಯಿತೇ ಪಾಕ್ ಮಾನ?

ನಾಳೆ ಗಣರಾಜ್ಯೋತ್ಸವ. ಅತ್ತ ಪಾಕ್ ಬೆಂಬಲಿತ ಭಯೋತ್ಪಾದಕರು ವಿಧ್ವಂಸಕ ಕೃತ್ಯ ನಡೆಸಲು ಸನ್ನದ್ಧರಾಗುತ್ತಿರುವ ಸುದ್ದಿ ಕೇಳಿಬರುತ್ತಿದೆ. ಈ ಮಧ್ಯೆ ಮಾಜಿ ಪಾಕ್ ಆಟಗಾರರು ಎಳಸು ಮಕ್ಕಳಂತೆ ಹತ್ತೊಂಬತ್ತರೊಳಗಿನ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ತಮ್ಮ ತಂಡ ಸೋತುದಕ್ಕೆ ಸೇಡು ತೀರಿಸಿಕೊಂಡ ಖುಷಿಯಲ್ಲಿದ್ದಾರೆ. ಹಾಗಾದರೆ ನಿಜ ಎಲ್ಲಿದೆ? ಅಸಲಿ ಭಾರತೀಯನ ಅನಿಸಿಕೆಯೇನು? ಹಾಗೊಂದು ನೋಟವನ್ನು ಹರಿಸಿದ್ದೇನೆ. ಇದು ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ... ಓದಿ ನೀವು ಪ್ರತಿಕ್ರಿಯಿಸಲೇಬೇಕು....................................

ಐಪಿಎಲ್ ಹಂಗಾಮ

ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೂರನೇ ಆವೃತ್ತಿಗೆ ರಂಗ ಸಜ್ಜಾಗಿದೆ. ಈ ವರ್ಷ ಕೂಟ ಭಾರತದ ನೆಲದಲ್ಲೇ ನಡೆಯುವುದು ನಿಕ್ಕಿ. ಹೊಸ ಆಟಗಾರರನ್ನು ತಂಡದೊಳಗೆ ಸೇರಿಸಿಕೊಳ್ಳಲು ಮೊನ್ನೆ ೧೯ಕ್ಕೆ ಹರಾಜು ಪ್ರಕ್ರಿಯೆ ನಡೆಯಲಿಕ್ಕಿತ್ತು. ಹರಾಜಿಗೆ ೬೬ ಆಟಗಾರರು ಲಭ್ಯವಿದ್ದರು. ಮುಖ್ಯವಾಗಿ, ಶಾಹೀದ್ ಅಫ್ರಿಧಿ, ಮಿಸ್ಬಾ ಉಲ್ ಹಕ್, ಉಮರ್‌ಗುಲ್, ರಾಣಾ ನವೇದ್, ಅಬ್ದುಲ್ ರಜಾಕ್, ಕಮ್ರನ್ ಅಕ್ಮಲ್‌ರಂತ ಒಟ್ಟು ಜನಪ್ರಿಯ ೧೧ ಪಾಕಿಸ್ತಾನದ ಆಟಗಾರರೂ ಹರಾಜು ಪಟ್ಟಿಯಲ್ಲಿದ್ದರು. ಮಾಧ್ಯಮಗಳಲ್ಲಿ ಅಫ್ರಿಧಿ ದುಬಾರಿ ಬೆಲೆಗೆ ಮಾರಾಟವಾಗಬಹುದು ಎಂದು ತರ್ಕಗಳು ಪ್ರಕಟವಾಗಿದ್ದವು. ಬಹುಷಃ ಇಂತದೊಂದು ಸುದ್ದಿಯನ್ನು ಐಪಿಎಲ್ ಮೂಲಗಳೇ ಗಾಳಿಗೆ ಬಿಟ್ಟಿರಲಿಕ್ಕೂ ಸಾಕು.

ಆದರೆ ಆದದ್ದೇನು?

ಹರಾಜು ಪ್ರಕ್ರಿಯೆಯಲ್ಲಿ ಮೊತ್ತಮೊದಲು ಕೂಗಿದ್ದು ಶಾಹೀದ್ ಅಫ್ರಿಧಿಯ ಹೆಸರನ್ನು. ಆಗ ನಾಟಕೀಯ ಪ್ರಸಂಗವೊಂದು ಜರುಗಿಹೋಯಿತು. ಯಾವೊಬ್ಬ ಐಪಿಎಲ್ ತಂಡದ ಮಾಲಿಕನೂ ಕೊಳ್ಳುವ ಕನಿಷ್ಟ ಆಸಕ್ತಿಯನ್ನು ತೋರಲಿಲ್ಲ. ಬಿಡ್ ಮಾಡಲೇ ಮುಂದಾಗಲಿಲ್ಲ. ಅಫ್ರಿಧಿ ಹರಾಜಾಗಲಿಲ್ಲ! ಇದು ಪಾಕ್‌ನ ಉಳಿದ ಹತ್ತು ಆಟಗಾರರ ವಿಷಯದಲ್ಲೂ ಪುನರಾವರ್ತನೆಯಾಯಿತು. ಅಕ್ಷರಶಃ ಐಪಿಎಲ್‌ನ ಬಿಡ್ ಪ್ರಸಂಗದಲ್ಲಿ ಹರಾಜಾದದ್ದು ಪಾಕ್ ಮಾನ!
ಇಂದು ಸ್ಪಷ್ಟೀಕರಣಗಳ ಭರಾಟೆ ನಡೆದಿದೆ. ಐಪಿಎಲ್‌ನ ಸಂಯೋಜಕ ಲಲಿತ್ ಮೋದಿ ಅಕ್ಕಪಕ್ಕದಲ್ಲಿ ಬಾಲಿವುಡ್‌ನ ‘ಮಾಜಿ’ ಸುಂದರಿಯರನ್ನು ಕೂರಿಸಿಕೊಂಡು ಪಾಕ್ ಆಟಗಾರರ ವಿರುದ್ಧ ತಾವು ಷಡ್ಯಂತ್ರ ನಡೆಸಿರುವುದನ್ನು ಅಲ್ಲಗಳೆಯುತ್ತಾರೆ. ತಂಡಗಳಿಗೆ ಒಟ್ಟಾರೆ ೧೨ ಆಟಗಾರರನ್ನು ಆಯ್ದುಕೊಳ್ಳಲಷ್ಟೇ ಸಾಧ್ಯವಿತ್ತು. ಸ್ಪರ್ಧೆಯಲ್ಲಿದ್ದವರಲ್ಲಿ ೪೪ ಜನರಿಗೆ ನಿರಾಶೆ ಕಟ್ಟಿಟ್ಟ ಬುತ್ತಿಯಾಗಿತ್ತು. ಆದರೆ ತಂಡಗಳು ಆಯ್ದದ್ದು ೧೧ ಆಟಗಾರರನ್ನಷ್ಟೇ. ಪಾಕ್ ಆಟಗಾರರನ್ನೆಲ್ಲ ತಂಡಗಳು ಬಿಟ್ಟದ್ದು ಕಾಕತಾಳೀಯ! ಪ್ರೀತಿ ಜಿಂಟಾ, ಶಿಲ್ಪಾ ಶೆಟ್ಟಿ ಖಡಕ್ಕಾಗಿ ವ್ಯವಹಾರ ಮಾತನಾಡುತ್ತಾರೆ, ‘ಕೊಳ್ಳುವುದು ನಮ್ಮ ಹಕ್ಕು, ಬಿಡುವುದೂ ಕೂಡ!'

ಆದರೆ ಆದದ್ದೇನು?

ಒಂದಂತೂ ಸ್ಪಷ್ಟ. ಪಾಕ್ ಆಟಗಾರರನ್ನು ಯಾವ ಕಾರಣಕ್ಕೂ ಬಿಡ್ ಕೂಗಬಾರದೆಂದು ಎಂಟು ಮಂದಿ ಐಪಿಎಲ್ ಒಡೆಯರು ಪೂರ್ವ ನಿರ್ಧಾರ ಮಾಡಿಯೇ ಬಿಡ್ ಪ್ರಾಂಗಣಕ್ಕೆ ಕಾಲಿಟ್ಟದ್ದು ಎಂತಹ ದಡ್ಡನಿಗೂ ಅರ್ಥವಾಗುವಂತದು. ಈಗಾಗಲೇ ಆಸ್ಟ್ರೇಲಿಯಾದ ಆಟಗಾರರಿಗೆ ಇಲ್ಲಿ ಆಡಲು ಅವಕಾಶ ಕೊಡುವುದಿಲ್ಲವೆಂದು ಶಿವಸೇನಾ ಗುಟುರುಹಾಕಿದೆ. ಪಾಕ್ ಆಟಗಾರರ ವಿರುದ್ಧವೂ ಇಂತಹ ಧ್ವನಿ ಕೇಳಿಬರುವ ಎಲ್ಲ ಸಂಭವನೀಯತೆಯಿದೆ. ಅಷ್ಟಕ್ಕೂ ಇಂತಹ ಬೆದರಿಕೆ ತಂತ್ರ ಬೆದರಿಕೆದಾರರಿಗೆ ಕೊಡುವ ಪ್ರಚಾರವೇ ಅಂತವರಿಗೆ ದೊಡ್ಡ ಆಕರ್ಷಣೆ. ಈ ಮಧ್ಯೆ ಐಪಿಎಲ್ ಪಾಕ್ ಆಟಗಾರರು ಇಲ್ಲದಿದ್ದರೂ ಅದರ ಜನಪ್ರಿಯತೆಗೆ ಮುಕ್ಕಾಗುವುದಿಲ್ಲ. ಹಣ ಹರಿಯುವುದು ನಿರೀಕ್ಷಿತವಿರುವಾಗ ರಿಸ್ಕ್ ತೆಗೆದುಕೊಳ್ಳಲು ಶುದ್ಧ ವ್ಯಾಪಾರೀ ಉದ್ದೇಶದ ಫ್ರಾಂಚೈಸಿಗಳು ಯಾಕೆ ಮುಂದಾಗುತ್ತಾರೆ?
ಬಿಸಿಸಿಐಗೆ ಪಾಕ್ ಕ್ರಿಕೆಟ್ ಮಂಡಳಿ ಎಂದರೆ ಅಪಥ್ಯವಲ್ಲ. ಅವರ ಮಟ್ಟಿಗೆ ದೇಶಾಭಿಮಾನಕ್ಕೆ ಯಾವತ್ತೂ ಎರಡನೇ ಸ್ಥಾನ. ಹಾಗಾಗೇ ವಿಶ್ವಕಪ್ ಸಂಘಟನೆಯಲ್ಲಿ, ಐಸಿಸಿ ಸಭೆಗಳಲ್ಲಿ ಭಾರತ - ಪಾಕ್ ಭಾಯಿ ಭಾಯಿ. ದೇಶಗಳ ಮಧ್ಯೆ ಎಂತಹ ಬಿಗು ಪರಿಸ್ಥಿತಿಯಿದ್ದಾಗಲೂ ಬಿಸಿಸಿಐ ಮುಗುಂ ಆಗಿ ತನ್ನ ವ್ಯವಹಾರವನ್ನು ಪಾಕ್ ಜೊತೆ ಮಾಡಿದ್ದನ್ನು ಕಂಡಿದ್ದೇವೆ. ಅದಕ್ಕೆ ಐಪಿಎಲ್‌ನಲ್ಲಿ ಪಾಕ್ ಆಟಗಾರರು ಆಡುವುದಕ್ಕೆ ಯಾವ ತಕರಾರೂ ಇದ್ದಿರಲಿಕ್ಕಿಲ್ಲ. ಅದೇ ಕಾರಣದಿಂದಾಗಿ ಪಾಕ್ ಎಲ್ಲ ಅಡೆತಡೆಗಳನ್ನು ತೆಗೆದು ತನ್ನ ಕ್ರಿಕೆಟ್ ಆಟಗಾರರಿಗೆ ಅವಕಾಶ ಮಾಡಿಕೊಟ್ಟಿದ್ದು. ಈ ಲೆಕ್ಕದಲ್ಲಿ ನೋಡಿದರೆ, ಫ್ರಾಂಚೈಸಿಗಳು ತಮ್ಮದೇ ಆಟ ಆಡಿದಂತಿದೆ. ಮತ್ತು ಈ ಆಟದ ಸೂತ್ರಧಾರ ಭಾರತ ಸರ್ಕಾರ ಆಗಿದ್ದರೆ ಅಂತಹ ಅನಿರೀಕ್ಷಿತ ಅಲ್ಲ. ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣರ ನಿರಾಕರಣೆಯನ್ನು ನೀವೂ ನಂಬುತ್ತೀರೆಂದರೆ ಏನೂ ಮಾಡಲಾಗದು!

ಆದರೆ ಆದದ್ದೇನು?

ಯಾವ ದಿಕ್ಕಿನಿಂದ ನೋಡಿದರೂ ಪಾಕ್ ಕ್ರಿಕೆಟಿಗರಿಗೆ ನಷ್ಟವಾಗಿದೆ. ಬಿಡ್‌ನಲ್ಲಿ ಖರೀದಿಸದಿರುವುದಕ್ಕೆ ಪ್ರತಿಭೆ ಕಾರಣವಲ್ಲ ಎಂಬುದು ಜಗಜ್ಜಾಹೀರ ಆಗಿರುವುದರಿಂದ ಅವಮಾನದ ಹಿಂಸೆ ಎದುರಾಗುವುದಿಲ್ಲ. ಆದರೆ ಆಘಾತವಾಗಿದೆ. ಅತ್ತ ಪಾಕ್‌ಗೆ ಬಹುಪಾಲು ದೇಶಗಳು ಕ್ರಿಕೆಟ್ ಆಡಲು ಹೋಗುತ್ತಿಲ್ಲ. ವಿದೇಶಿ ಪ್ರವಾಸವಾದರೂ ಎಷ್ಟಿದ್ದೀತು? ಅಲ್ಲಿ ಕ್ರಿಕೆಟ್ ಮಂಡಳಿ ಬಡತನದಲ್ಲಿದೆ. ಈ ಹಿನ್ನೆಲೆಯಲ್ಲಿ ಕೆಲವು ಪ್ರಮುಖ ಆಟಗಾರರಾದರೂ ಐಪಿಎಲ್‌ನಲ್ಲಿ ಹಣದ ಸೂರೆ ಮಾಡಿಕೊಳ್ಳುವ ಅವಕಾಶಕ್ಕೆ ಇದೀಗ ವಂಚನೆಯಾಗಿದೆ. ಐಪಿಎಲ್ ತಂಡಗಳ ಮಾಲಿಕರು ಬಿಡ್ ಕೂಗದ ನಾಟಕವಾಡುವುದಕ್ಕಿಂತ ಪ್ರಬುದ್ಧವಾದ ನಿಲುವನ್ನು ಬಿಡ್ ಮುಂಚಿತವಾಗಿಯೇ ತೆಗೆದುಕೊಂಡಿದ್ದರೆ ಅಷ್ಟರಮಟ್ಟಿಗೆ ಪಾಕ್ ಪ್ರತಿಭೆಗಳಿಗೆ ಶಾಕ್ ಆಗುತ್ತಿರಲಿಲ್ಲ. ಪ್ರತಿಭೆಗಳಿಗೆ ಕಡೆಪಕ್ಷ ಆ ದರ್ಜೆಯ ಗೌರವವನ್ನು ಕೊಡಬೇಕಿತ್ತು.
ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ನಷ್ಟವಾಗಿರುವುದು ಸುಳ್ಳು. ಬೋರ್ಗರೆಯುವ ಶಾಹೀದ್ ಅಫ್ರಿಧಿ ಆಟವಿಲ್ಲದಿದ್ದರೂ ಮತ್ತಾರೋ ಅನಾಮಿಕ ವೇಯ್ನ್ ಪರ್ವೇರ್ ಸಿಡಿಯಬಹುದು. ಇನ್ನೊಂದು ನಿಟ್ಟಿನಲ್ಲಿ, ನಾವು - ಭಾರತೀಯರು ಐಪಿಎಲ್ ತಂಡಗಳ ಒಗ್ಗಟ್ಟಿಗೆ ಉಘೇ ಎನ್ನಬೇಕು. ಪ್ರತಿಯೊಬ್ಬ ಭಾರತೀಯನಲ್ಲೂ ಪಾಕ್ ಭಯೋತ್ಪಾದನೆಯ ಬಗ್ಗೆ ಸಿಟ್ಟು ಮಡುಗಟ್ಟಿದೆ. ಅದನ್ನು ಪಾಕ್ ಪ್ರಭುತ್ವಕ್ಕೆ ಪದೇ ಪದೇ ಅರ್ಥ ಮಾಡಿಸಬೇಕಾದ ಮತ್ತು ಜಗತ್ತಿಗೆ ಸಾರಬೇಕಾದ ಅವಶ್ಯಕತೆಯಿದೆ. ಅದಕ್ಕೆ ಸಿಕ್ಕ ಅತ್ಯದ್ಭುತ ಅವಕಾಶ ಇದಾಗಿತ್ತು. ಆ ಮಟ್ಟಿಗೆ ಐಪಿಎಲ್ ಹೊಡೆತ ಯುವರಾಜ್ ಸಿಂಗ್‌ರ ಸಿಕ್ಸರ್‌ಗಳಿಗಿಂತಲೂ ಬಲವಾದುದಾಗಿದೆ!
ಕೈಯಲ್ಲಾಗದವರು ಮೈ ಪರಚಿಕೊಂಡರಂತೆ. ಇದೇ ಮಾದರಿಯಲ್ಲಿ ಪಾಕ್‌ನಲ್ಲಿ ಗುಲ್ಲೆದ್ದಿದೆ. ಅಲ್ಲಿನ ಮಾಜಿ ಕ್ರಿಕೆಟಿಗರು ಕಿಡಿಕಾರಿದ್ದಾರೆ. ಭಾರತದಲ್ಲಿ ಸದ್ಯದಲ್ಲೇ ನಡೆಯಲಿರುವ ವಿಶ್ವಕಪ್ ಹಾಕಿಯಲ್ಲಿ ತಮ್ಮ ದೇಶದ ತಂಡ ಪಾಲ್ಗೊಳ್ಳಬಾರದು ಎಂದು ಧ್ವನಿಯೆತ್ತಿದ್ದಾರೆ. ನಿಜಕ್ಕೂ ಅದು ಮತ್ತೆ ಅವರಗೇ ಆಗುವ ಹಾನಿಯ ಬೂಮರ‍್ಯಾಂಗ್. ಎಷ್ಟೇ ಸಮಚಿತ್ತದಿಂದ ಯೊಚಿಸಿದರೂ, ಪಾಕ್ ಆಟಗಾರರನ್ನು ಬಿಡ್ ಮಾಡದ ಘಟನೆ ಭಾರತೀಯ ಮನಸ್ಸುಗಳಿಗೆ ಸಾಂತ್ವನ ನೀಡಿದೆ ಎಂತಲೇ ಅನ್ನಿಸುತ್ತದೆ. ಹಾಗಾಗೇ ಇರಬೇಕು, ಭಾರತೀಯ ಕ್ರಿಕೆಟಿಗರು ಘಟನೆಯ ಬಗ್ಗೆ ಕಮಕ್ ಕಿಮಕ್ ಎಂದಿಲ್ಲ!
-ಮಾ.ವೆಂ.ಸ

ಭಾನುವಾರ, ಜನವರಿ 24, 2010

ತಕಧಿಮಿತ ಕುಣಿಯಲಾಗದಿದ್ದರೇನು, ಕುಳಿತು ಓದಿ!


ವಾರಕ್ಕೊಮ್ಮೆ........ 9

ಪ್ರಾಥಮಿಕ ಶಾಲೆಯಲ್ಲಿದ್ದ ದಿನಗಳು. ಸಮೀಪದ ಊರಿನಲ್ಲಿ ರಾತ್ರಿ ‘ಭಸ್ಮಾಸುರ ಮೋಹಿನಿ’ ಯಕ್ಷಗಾನ. ನನ್ನ ಜೀವನದ ಪ್ರಪ್ರಥಮ ಯಕ್ಷಗಾನ ನೋಡಲು ನಾನೂ ಹೊಗಿದ್ದೆ. ಮರುದಿನ ಬೆಳಿಗ್ಗೆ ತಿಂಡಿ ತಿಂದು ಮಲಗಿದ್ದಷ್ಟೇ. ಏಳುವ ಹೊತ್ತಿಗೆ ಚುಮು ಚುಮು ಬೆಳಕು. ಬೆಳಿಗ್ಗೆಯೋ ಸಂಜೆಯೋ ಗೊತ್ತಾಗುವಂತಿರಲಿಲ್ಲ. ಮನೆಯಲ್ಲಿ ಅಕ್ಕ, ಅಮ್ಮ ಎಲ್ಲ ‘ಹೋಗು, ಅರಳೀಕಟ್ಟೆಗೆ ನಮಸ್ಕರಿಸಿ ಬಾ. ಬೆಳಿಗ್ಗಿನ ತಿಂಡಿಗೆ ಅಕ್ಕಿ ರೊಟ್ಟಿ ಮಾಡಿದ್ದಾರೆ. ತಿನ್ನುವೆಯಂತೆ’ ಸರಿ, ಬೆಳಗಿನ ಮೂಡ್‌ನಲ್ಲಿ ನಾನು ಕಟ್ಟೆ ಸುತ್ತಿ ಬಂದರೆ ಮನೆಮಂದಿಯೆಲ್ಲ ಗಹಗಹಿಸಿ ನಗುತ್ತಿದ್ದಾರೆ. ಆವಾಗ ಗೊತ್ತಾಯಿತು, ಮಧ್ಯಾಹ್ನ ನಿದ್ದೆಗಣ್ಣಲ್ಲಿಯೇ ಊಟ ಮಾಡಿ ಮತ್ತೆ ಮಲಗಿದ್ದ ನನ್ನನ್ನು ಏಪ್ರಿಲ್ ಫೂಲ್ ಮಾಡಿದ್ದರು! ಅವತ್ತೇ ಕೊನೆ, ಮತ್ತೆ ಯಕ್ಷಗಾನದ ಟೆಂಟ್ ಬಳಿ ನಾನು ಸುಳಿದಿಲ್ಲ. ಆದರೂ ಇತ್ತೀಚಿನ ದಿನಗಳಲ್ಲಿ ನನಗೆ ಹಲವು ಯಕ್ಷಗಾನದ ಸುದ್ದಿಗಳು ಗೊತ್ತಾಗುತ್ತಿವೆ. ಈ ವಿಚಾರದಲ್ಲಿ ಅಪ್‌ಡೇಟ್ ಆಗುತ್ತಿದ್ದೇನೆ. ಥ್ಯಾಂಕ್ಸ್ ಟು ‘ಯಕ್ಷರಂಗ’
ಕರ್ನಾಟಕದ ಯಕ್ಷಗಾನಕ್ಕೆ ಮೀಸಲಾದ ಮಾಸಪತ್ರಿಕೆಯಿದು. ಕಡತೋಕ ಮಂಜುನಾಥ ಭಾಗವತರ ಪುತ್ರ ಗೋಪಾಲಕೃಷ್ಣ ಭಾಗವತ ಈ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರು. ಯಕ್ಷಗಾನ ತಕಧಿಮಿತದ ವಾತಾವರಣದಲ್ಲಿಯೇ ಪತ್ರಿಕೆ ಹುಟ್ಟಿರುವುದರಿದ ಬಣ್ಣದ ವೇಷದ ‘ಟಚ್’ ಇಲ್ಲದವರಿಗೂ ಖುಷಿ ನೀಡುತ್ತದೆ, ಮಾಹಿತಿ ಒದಗಿಸುತ್ತದೆ. ಅದಾಗಲೇ ನಾಲ್ಕು ವರ್ಷ ಪೂರೈಸಿರುವ ಯಕ್ಷರಂಗಕ್ಕೆ ಈ ಕಲಾ ವಿಭಾಗದ ಪ್ರಮುಖ ಪಾತ್ರಧಾರಿಗಳು, ಬರಹಗಾರರು ಲೇಖನಿ ಝಳಪಿಸುತ್ತಾರೆ ಎಂಬುದೇ ಇದರ ಹೆಮ್ಮೆ. ಡಾ.ಎಂ.ಪ್ರಭಾಕರ ಜೋಶಿ, ಸೆಡಿಯಾಪು ಕೃಷ್ಣ ಭಟ್ಟ, ಪ್ರೊ.ಎಂ.ಎಲ್.ಸಾಮಗ, ನಾರಾಯಣ ಯಾಜಿ.... ಪಟ್ಟಿಯನ್ನು ಮುಂದುವರೆಸುತ್ತಲೇ ಹೋಗಬಹುದು!
ಯಕ್ಷಗಾನ ಅಕಾಡೆಮಿಯ ಕೇಂದ್ರ ಕಛೇರಿ ಎಲ್ಲಿರಬೇಕು, ಅರ್ಥಗಾರಿಕೆಯಲ್ಲಿ ಸಾಹಿತ್ಯ, ಮಹಿಳಾ ಯಕ್ಷಗಾನ ಸಮೀಕ್ಷೆ ಹೀಗೆ ಬಹುಸಂಖ್ಯಾತ ಲೇಖನಗಳು ಗಂಭೀರ ಚಿಂತನೆಗಳನ್ನು ಒಳಗೊಂಡಿರುವುದನ್ನು ಕಾಣುತ್ತೇವೆ. ನಾಲ್ಕು ರಕ್ಷಾಪುಟಗಳು ಬಣ್ಣದಲ್ಲಿ ಪ್ರಕಟವಾದರೆ ಒಳ ಹೂರಣದ 34 ಪುಟ ಕಪ್ಪು ಬಿಳುಪು. ಹೊನ್ನಾವರದ ಯಕ್ಷಲೋಕ ಸಂಸ್ಥೆ ಇದರ ಪ್ರಕಾಶಕರು. ಬಹುಷಃ ಇದು ಕಡತೋಕ ಭಾಗವತರ ಕುಟುಂಬ ಹುಟ್ಟು ಹಾಕಿರುವ ಸಂಸ್ಥೆಯಾಗಿರಲಿಕ್ಕೆ ಸಾಕು. ನನಗೆ ತಿಳಿದಂತೆ ಯಕ್ಷಗಾನಕ್ಕೆ ಸಂಬಂಧಿಸಿದಂತೆ ಅದಕ್ಕೇ ಮೀಸಲಾದ ಪತ್ರಿಕೆ ಕನ್ನಡದಲ್ಲಿ ಬೇರಾವುದೂ ಇಲ್ಲ. ಬೇರೆ ಭಾಷೆಯಲ್ಲಿ ಇರಲಿಕ್ಕೆ ಸಾಧ್ಯವಿಲ್ಲ, ಏಕೆಂದರೆ ಇದು ಕರ್ನಾಟಕದ ಕಲೆ! ಬೇರೆಡೆ ಇಲ್ಲ!!
ಪತ್ರಿಕೆ ಯಾವ ಮಡಿವಂತಿಕೆಯಿಲ್ಲದೆ ಎಲ್ಲ ವರ್ಗದ ಜನರ ಅಭಿಪ್ರಾಯ, ವಿರೋಧ, ಕಹಿಗಳನ್ನು ಪ್ರಕಟಿಸುವ ಮೂಲಕ ಚರ್ಚೆಗೆ ಒಂದು ಅತ್ಯುತ್ತಮ ವೇದಿಕೆಯನ್ನು ಸೃಷ್ಟಿಸಿಕೊಡುತ್ತದೆ. ಯಕ್ಷಗಾನ ಭಕ್ತರಂತೂ ಇದನ್ನು ಒಂದು ಪಂಚಾಂಗದಂತೆ ಮನೆಗೆ ತಂದಿಟ್ಟುಕೊಳ್ಳಲೇಬೇಕು. ‘ಯಕ್ಷರಂಗ’ದ ಬಿಡಿಪ್ರತಿಯ ಬೆಲೆ ೧೫ ರೂ. ವಾರ್ಷಿಕ ಚಂದಾ 150 ರೂ. ತ್ರೈ ವಾರ್ಷಿಕ ಚಂದಾವನ್ನು ಒಮ್ಮೆಗೇ ಕಟ್ಟುವುದಾದರೆ ನೀವು 500ರೂ. ಪಾವತಿಸಬೇಕು. ಅಂದರೆ ನಿಮಗೆ ಗ್ಯಾರಂಟಿ ಮೂರು ವರ್ಷದ ಮುಂಗಡ ಕಟ್ಟಿದ್ದಕ್ಕೆ 50 ರೂ ನಷ್ಟ! ಚೆಕ್ ಕಳುಹಿಸುವವರು ನಗದೀಕರಣ ವೆಚ್ಚವನ್ನು ಸೇರಿಸಿ ಕೊಡಿ ಎಂಬುದು ಪತ್ರಿಕೆಯ ವಿನಂತಿ. ವ್ಯವಸ್ಥಾಪಕ ಸಂಪಾದಕರು, ಯಕ್ಷರಂಗ ಮಾಸಪತ್ರಿಕೆ, ಹಳದೀಪುರ, ಹೊನ್ನಾವರ, ಉತ್ತರ ಕನ್ನಡ ಜಿಲ್ಲೆ... ಈ ವಿಳಾಸಕ್ಕೆ ನಿಮ್ಮ ಪಾವತಿಯಿರಲಿ. ಫೋನ್ ಮಾಡಿ ವಿಚಾರಿಸುವುದಾದರೆ ೯೯೮೬೨೯೪೭೫೬ಕ್ಕೆ ಕರೆ ಮಾಡಿ.
ಕೊನೆ ಮಾತು - ನಮ್ಮ ‘ವೀಣಾ ಸ್ಮಾರಕ ಮಾವಿನಮನೆ ವಾಚನಾಲಯ’ದ ಕುರಿತು ಮೊತ್ತಮೊದಲು ಪ್ರಜಾವಾಣಿಯಲ್ಲಿ ಲೇಖನ ಪ್ರಕಟಗೊಂಡಿತ್ತು. ಆಗ ಬೆಂಗಳೂರಿನಿಂದ ಒಂದು ಫೋನ್ ಕರೆ. ನನಗೋ ವಾಚನಾಲಯಕ್ಕೆ ದೇಣಿಗೆ ನೀಡುವರೇನೋ ಎಂಬ ಆಸೆ. ಪ್ರಾಥಮಿಕ ಮಾತುಕತೆಯ ನಂತರ ಅವರು ವಿಷಯಕ್ಕೆ ಬಂದರು, "ಯಕ್ಷಗಾನಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ಪತ್ರಿಕೆಯಿದ್ದರೆ ತಿಳಿಸಿ. ಅವರ ವಿಳಾಸ ಕೊಡಿ. ಚಂದಾ ಕಳಿಸುತ್ತೇನೆ!"
-ಮಾ.ವೆಂ.ಸ.ಪ್ರಸಾದ್
ಮಾವಿನಸರ
ಪೋಸ್ಟ್-ಎಡಜಿಗಳೇಮನೆ
ಸಾಗರ ತಾ. ಶಿವಮೊಗ್ಗ ಜಿ.
577401
ಫೋನ್-08183 236068, 296543
9886407592
ಇ ಮೇಲ್- mavemsa@gmail.com

ಸೋಮವಾರ, ಜನವರಿ 18, 2010

ನಮ್ಮನೆ ಕಂದನಿಗೆ ಚೆಂದದ ಕೊಡುಗೆ.....


ವಾರಕ್ಕೊಮ್ಮೆ........8

ಇದು ನಿಜ, ನನಗೊತ್ತಿದ್ದಂತೆ ಪ್ರಜಾವಾಣಿ ಬಳಗ ಮಕ್ಕಳ ಪತ್ರಿಕೆಯನ್ನು ಆರಂಭಿಸುವ ಸಾಹಸ ಮಾಡಿಲ್ಲ. ಸಖಿಯಂತ ಮಹಿಳಾ ಪತ್ರಿಕೆಯನ್ನು ಮೊನ್ನೆ ಮೊನ್ನೆಯಿಂದ ಪ್ರಕಟಿಸುತ್ತಿರುವ ಕನ್ನಡಪ್ರಭ ಪುಟಾಣಿಗಳಿಗೆ ಒಂದು ಪತ್ರಿಕೆಯನ್ನು ಹುಟ್ಟುಹಾಕಿಲ್ಲ. ಸಂಯುಕ್ತ ಕನಾಟಕದಂತ ಅತಿ ಹಳೆಯ ಸಂಸ್ಥೆಯದ್ದೂ ಇದೇ ಬಾಲವಿರೋಧಿ ನಿಲುವು! ಈ ಕನ್ನಡನಾಡಿನಲ್ಲಿ ಮಕ್ಕಳ ಚಲನಚಿತ್ರಗಳು ಬರಕತ್ತಾಗುವುದಿಲ್ಲ, ಅಲ್ಲದೆ ಈ ಹಿಂದೆ ಆರಂಭಿಸಿದ ಬಾಲಮಿತ್ರ, ಬೊಂಬೆಮನೆ, ಪುಟಾಣಿ ಮುಂತಾದ ಎಳೆಯರ ನಿಯತಕಾಲಿಕಗಳು ಉಸಿರುಕಳೆದುಕೊಂಡ ಉದಾಹರಣೆಗಳೂ ನಮ್ಮ ಮುಂದಿವೆ. ಆದರೆ ಕನ್ನಡದವರಲ್ಲದ ಪ್ರಕಟನ ಸಂಸ್ಥೆ ಮಾತ್ರ ಕರ್ನಾಟಕದಲ್ಲಿ ಒಂದಲ್ಲ ಮೂರು ಮಕ್ಕಳ ಪತ್ರಿಕೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ!!
ಇದು ನಿಜ, ಮೂಲ ಕೇರಳದ ‘ಮಂಗಳಂ ಪಬ್ಲಿಕೇಷನ್ಸ್’ ಕನ್ನಡದಲ್ಲಿ ಬಾಲಮಂಗಳ ಮತ್ತು ಬಾಲಮಂಗಳ ಚಿತ್ರಕಥಾ ಎಂಬ ಎರಡು ಪಾಕ್ಷಿಕವನ್ನು ಮಕ್ಕಳಿಗಾಗಿ ಹತ್ತಾರು ವರ್ಷಗಳಿಂದ ನಡೆಸಿಕೊಂಡುಬರುತ್ತಿದ್ದಾರೆ. ಇದೀಗ ಅವರು ಕೆ.ಜಿ. ಮಕ್ಕಳಿಗಾಗಿ ಶುರುಹಚ್ಚಿರುವ ‘ಗಿಳಿವಿಂಡು’ ಮಾಸಿಕ ವ್ಯಾಪಾರೀ ಉದ್ದೇಶಗಳನ್ನು ಮೀರಿ ನಿಲ್ಲುವ ಒಂದು ಸುಮಧುರ ಪ್ರಯತ್ನ.
ಇದು ನಿಜ, ಮೊನ್ನೆ ಓರ್ವ ಒಂಭತ್ತನೇ ತರಗತಿಯ ಹುಡುಗಿ ನಮ್ಮ ವಾಚನಾಲಯದಲ್ಲಿ ಗಿಳಿವಿಂಡುವನ್ನು ಓದುತ್ತಿದ್ದಾಗ ಹೇಳುತ್ತಿದ್ದಳು, ನನಗಿದು ತುಂಬಾ ಇಷ್ಟ! ಹಾಗಾದರೆ ಏನಿದೆ ಅದರಲ್ಲಿ? ನಾನೂ ಕಣ್ಣಾಡಿಸಿದೆ. ಪುಟ್ಟ ಮಕ್ಕಳಿಗೆ ಏನು ಬೇಕೋ ಅದೆಲ್ಲವೂ ಪ್ರತಿ ಪುಟದಲ್ಲಿ ಅಡಗಿಕುಳಿತಿದೆ. ಚಿತ್ರ ನೋಡಿ ಪ್ರಾಣಿ ಗುರ್ತಿಸಿ, ದಾರಿ ಯಾವುದು, ವ್ಯತ್ಯಾಸ ಹುಡುಕಿ, ಇಂಗ್ಲೀಷ್ ಶಬ್ಧಬಂಧ, ಚಿತ್ರಕ್ಕೆ ಬಣ್ಣ ಹಾಕಿ, ಪುಟ್ಟ ಪುಟ್ಟ ಲೆಕ್ಕ...... ಇನ್ನು ಇವೆಲ್ಲ ಬೇಡ ಎನ್ನುವವರಿಗೆ ಚಿಕ್ಕದಾದ ನೀತಿ ಕತೆಗಳೂ ಇವೆ. ಮೂರರಿಂದ ಆರರವರೆಗಿನ ಮಕ್ಕಳಿಗೆ ಏನಾದರು ಅಮೂಲ್ಯವಾದುದನ್ನು ಕೊಡಿಸಬೇಕೆಂದಿದ್ದರೆ ಮುದ್ದಾಂ ಗಿಳಿವಿಂಡು ಕೊಡಿಸಿ. ಈ ಮಾತಿನಲ್ಲಿ ಲವಲೇಷದ ಉತ್ಪ್ರೇಕ್ಷೆಯೂ ಇಲ್ಲ, ನನ್ನಾಣೆ!!
ಇದುನೂ ನಿಜ, 34 ಪುಟಗಳ ಬಣ್ಣಬಣ್ಣದ ಗಿಳಿವಿಂಡುವಿಗೆ ಬರೀ ಏಳು ರೂಪಾಯಿ. ಪುಟ್ಟ ಮಕ್ಕಳಿಗೆ ಜ್ಞಾನ ಸರ್ಕಸ್ ಮಾಡಿಸುವ ಪುಸ್ತಕಗಳನ್ನು ಮಾರುಕಟ್ಟೆಯಲ್ಲಿ ಕೇಳಿ ನೋಡಿ, ಅವು 20 - 30ರೂ.ಗಿಂತ ಕಡಿಮೆ ಬೆಲೆಗೆ ಸಿಗುವುದು ಸಾಧ್ಯವೇ ಇಲ್ಲ. ಪತ್ರಿಕೆಯ ನಿರ್ವಾಹಕ ಸಂಪಾದಕರು ಮನುಪ್ರತಾಪ್. ಪತ್ರಿಕೆ ಬಹುಷಃ ಎಲ್ಲ ಬುಕ್‌ಸ್ಟಾಲ್ ಅಂಗಡಿಯಲ್ಲಿ ಸಿಕ್ಕುತ್ತದೆ. ಹಾಗಾಗಿ ವಿಳಾಸ ಹೇಳುತ್ತಿಲ್ಲ. ಸಿಕ್ಕದಿದ್ದರೆ ಮಂಗಳ ವಿಳಾಸದಲ್ಲಿ ವಿಚಾರಿಸಿ.
-ಮಾ.ವೆಂ.ಸ.ಪ್ರಸಾದ್
ಮಾವಿನಸರ
ಪೋಸ್ಟ್-ಎಡಜಿಗಳೇಮನೆ
ಸಾಗರ ತಾ. ಶಿವಮೊಗ್ಗ ಜಿ.
577401
ಫೋನ್-08183 236068, 296543
9886407592
ಇ ಮೇಲ್- mavemsa@gmail.com

ಗುರುವಾರ, ಜನವರಿ 14, 2010

ಕಪ್ಪು ಬಿಳುಪು ಸುಂದರಿ!ವಾರಕ್ಕೊಮ್ಮೆ........7

ಮೊದಲ ಮಾತು- ನಮ್ಮೂರಿನ ‘ವೀಣಾ ಸ್ಮಾರಕ ಮಾವಿನಮನೆ ವಾಚನಾಲಯ’ಕ್ಕೆ 22 ಪತ್ರಿಕೆಗಳು ಆಯಾ ಪತ್ರಿಕೆಗಳ ಸಂಪಾದಕರ/ಪ್ರಕಾಶಕರ ಉದಾರ ಕೊಡುಗೆಯಾಗಿ ಸಿಗುತ್ತಿವೆ. ಕೆಲವು ಪತ್ರಿಕೆಗಳಂತೂ ನಾವು ಮನವಿ ಸಲ್ಲಿಸುವ ಮುನ್ನವೇ ಪ್ರತಿಯನ್ನು ಕಳಿಸಿಕೊಡುತ್ತಿವೆ. ಈ ಉಚಿತ ಪತ್ರಿಕೆಗಳಲ್ಲಿ ಪರಿಚಯಿಸಲೇಬೇಕಾದ ಒಂದು ಪತ್ರಿಕೆ ‘ನಮ್ಮ ಮಾನಸ’

ಇವತ್ತು ಮಾರುಕಟ್ಟೆಯಲ್ಲಿ ಸಿಗುವ ಮಹಿಳಾ ಪತ್ರಿಕೆಗಳು ಹೇರಳ. ನಿಮ್ಮ ಗಂಡನನ್ನು ಒಲಿಸಿಕೊಳ್ಳುವುದು ಹೇಗೆ, ಅನಗತ್ಯ ರೋಮ ನಿವಾರಣೋಪಾಯ ಮುಂತಾದ ಎಳಸು - ಜೊಳ್ಳು ಲೇಖನಗಳ ಒಣ ಉಪದೇಶಗಳ ಮಹಿಳಾ ಪತ್ರಿಕೆಗಳಿಗೆ ಓದುಗರೂ ಹೆಚ್ಚು! ಬಹುಷಃ ಚೆಂದದ, ಅರೆನಗ್ನ ಚೆಲುವೆಯರ ವರ್ಣದ ಫೋಟೋಗಳಿಂದ ಮಿಂಚುವ ಗೃಹಶೋಭಾ, ಪ್ರಿಯಾಂಕಗಳನ್ನಂತೂ ಮಹಿಳೆಯರಿಗಿಂತ ಪುರುಷರೇ ಹೆಚ್ಚು ನೋಡುತ್ತಾರೇನೋ?!
ಸಂಪೂರ್ಣವಾಗಿ ಮಹಿಳೆಯರ ಸಂಪಾದಕೀಯ ಬಳಗವಿರುವ ಮತ್ತು ಸ್ತ್ರೀ ವಿಚಾರದಲ್ಲಿ ಗಂಭೀರ, ಚಿಂತನೀಯ ಲೇಖನಗಳನ್ನು ಪ್ರಕಟಿಸುವ ಕಪ್ಪು ಬಿಳುಪು ಸುಂದರಿಯೇ ‘ನಮ್ಮ ಮಾನಸ’ ಮಾಸಿಕ. ಆರಂಭದ ೧೯೮೫ರ ದಿನಗಳಲ್ಲಿ ‘ಮಾನುಷಿ’ಯಾಗಿ, ತದನಂತರ ‘ಮಾನಸ’ಳಾಗಿ ಈಗ ನಮ್ಮ ಮಾನಸವಾಗಿರುವ ಪತ್ರಿಕೆಗೆ ಮೂರೂಮುಕ್ಕಾಲು ವರ್ಷ ಪ್ರಾಯ. ರಾಜೇಶ್ವರಿ ಹೆಚ್.ಎಸ್. ಪತ್ರಿಕೆಯ ಸಂಪಾದಕರು, ಮುದ್ರಕರು ಮತ್ತು ಪ್ರಕಾಶಕರು.
22ರಿಂದ 30 ಪುಟ ಹೊಂದಿರುವ ನಮ್ಮ ಮಾನಸದ ಲೇಖನಗಳೆಲ್ಲ ಅರ್ಥಪೂರ್ಣ. ಸ್ತ್ರೀ ಹಕ್ಕು, ಮಹಿಳಾ ದೃಷ್ಟಿಕೋನದಲ್ಲಿ ಸಾಮಾಜಿಕ, ರಾಜಕೀಯ ಪಲ್ಲಟಗಳು, ಸ್ತ್ರೀ ಸಬಲತೆ... ಹೀಗೆ ಹತ್ತಾರು ಉದ್ದೇಶಗಳೊಂದಿಗೆ ಪ್ರಕಟವಾಗುತ್ತಿದೆ. ಕವನಗಳು, ಅನುಭವ ಕಥಾನಕಗಳು ಕೂಡ ಇಲ್ಲಿವೆ. ಸಾಧಕ ಮಹಿಳೆಯರ, ಮಹಿಳಾ ಬರಹಗಾರರ ಪುಸ್ತಕಗಳ ಪ್ರಾಮಾಣಿಕ ಪರಿಚಯಗಳನ್ನು ಕಾಣುತ್ತೇವೆ. ಪ್ರಸಿದ್ಧರ ಬರಹಗಳ ಕನ್ನಡ ಅನುವಾದವೂ ಇಲ್ಲಿರುವುದರಿಂದ ಮಹಿಳೆಯರ ಬುದ್ಧಿ ಮೊಳಕಾಲು ಕೆಳಗೆ ಎಂಬ ತುಚ್ಛ ಮಾತಿಗೆ ಸಡ್ಡು ಹೊಡೆಯುವ ಪ್ರಯತ್ನವಿದು.
ಲೇಖನಗಳತ್ತ ಕಣ್ಣು ಹಾಯಿಸಿದರೆ ಅಚ್ಚರಿಯೇ ಎದುರಾಗುತ್ತದೆ. ಧನಸಹಾಯ ಅತ್ಯಾಚಾರಕ್ಕೆ ಪರಿಹಾರವೇ?, ಅನೈತಿಕ ಸರ್ಕಾರದ ವಿರುದ್ಧ ನೈತಿಕ ಹೋರಾಟ, ನಾನು ಅವನಲ್ಲ... ಅವಳು...! ಇತ್ಯಾದಿ ಮೆದುಳಿಗೆ ಆಹಾರ ಪೂರೈಸಬಲ್ಲ ಲೇಖನಗಳು ಇದರಲ್ಲಿದೆ. ಸಾರಿ, ಬಣ್ಣದ ನಗ್ನ ಚಿತ್ರಗಳಾಗಲಿ, ಮೊದಲ ರಾತ್ರಿ ಸೆಕ್ಸ್ ಎಂಬ ಅಸಡ್ಡಾಳ ಲೇಖನಗಳಾಗಲಿ ಇದರಲ್ಲಿಲ್ಲ. ಮಹಿಳೆ ಎಂದಾಕ್ಷಣ ಲಿಪ್‌ಸ್ಟಿಕ್, ಅಡುಗೆ, ಧಾರಾವಾಹಿ ಎಂಬ ಅನಿಸಿಕೆಯನ್ನು ಸುಳ್ಳು ಮಾಡುವ ಮಾನಸಕ್ಕೆ ಸಲಾಂ.
ಪತ್ರಿಕೆಯ ಬಿಡಿ ಪ್ರತಿ ಬೆಲೆ 8ರೂ. ವಾರ್ಷಿಕ ಚಂದಾ 100 ರೂ.ನಲ್ಲಿ ವಿಶೇಷ ಸಂಚಿಕೆಯೂ ಸೇರಿದೆ. ನಮ್ಮ ಮಾನಸ, 114/5, 9ನೇತಿರುವು, ಎರಡನೇ ಮುಖ್ಯರಸ್ತೆ, ಚಾಮರಾಜ ಪೇಟೆ, ಬೆಂಗಳೂರು - 560018 ವಿಳಾಸಕ್ಕೆ ಚಂದಾ ಹಣ ಕಳುಹಿಸಬೇಕು. ರಾಜೇಶ್ವರಿಯವರು 9449345698 ಮೊಬೈಲ್ ನಂ.ನಲ್ಲಿ ಸಂಪರ್ಕಕ್ಕೆ ಲಭ್ಯ. ಸಂಪಾದಕೀಯ ಬಳಗದಲ್ಲಿ ಇರುವ ಮಹಿಳೆಯರನ್ನು ಸುಮ್ಮನೆ ಎಣಿಸಿದರೆ ಸಿಕ್ಕ ಸಂಖ್ಯೆ ಒಂದು ಡಜನ್!

ಕೊನೆ ಮಾತು - ಮಾರುಕಟ್ಟೆಯಲ್ಲಿ ಈ ಪತ್ರಿಕೆ ಬಹುಷಃ ಲಭ್ಯವಿಲ್ಲ. ಗೊಂದಲ ಬೇಡ, ಪುಸ್ತಕಗಳ ಅಂಗಡಿಯಲ್ಲಿ ಸಿಗುವುದು ಕೆ.ಗಣೇಶ್ ಕೋಡೂರು ಸಂಪಾದಕೀಯದ ‘ನಿಮ್ಮೆಲ್ಲರ ಮಾನಸ’ ಎಂಬ ಬೇರೆಯದೇ ಪತ್ರಿಕೆ. ಅದರ ಬಗ್ಗೆ ಇನ್ನೊಮ್ಮೆ........
-ಮಾ.ವೆಂ.ಸ.ಪ್ರಸಾದ್
ಮಾವಿನಸರ
ಪೋಸ್ಟ್-ಎಡಜಿಗಳೇಮನೆ
ಸಾಗರ ತಾ. ಶಿವಮೊಗ್ಗ ಜಿ.
577401
ಫೋನ್-08183 236068, 296543
9886407592
ಇ ಮೇಲ್- mavemsa@gmail.com

ಬುಧವಾರ, ಜನವರಿ 6, 2010

ಮತ್ತೆ ಬಂತು ........

Somdev Devvarman


.......ಚೆನ್ನೈ ಓಪನ್!

ವಿಪರ್ಯಾಸವಾದರೂ ನಿಜ, ಭಾರತದ ಏಕೈಕ ಎಟಿಪಿ ಟೂರ್ನಿ ಎಂಬ ಖ್ಯಾತಿಯ ಚೆನ್ನೈ ಓಪನ್ ಟೆನಿಸ್ ಟೂರ್ನಿಗೆ ಅಂತೂ ಈ ವರ್ಷ ಪ್ರಶಸ್ತಿ ಪ್ರಾಯೋಜಕರು ಸಿಕ್ಕಿದ್ದಾರೆ. ತಮಿಳುನಾಡಿನ ಟೆನಿಸ್ ಅಸೋಸಿಯೇಷನ್ ಹಾಗೂ ಸ್ಪೋರ್ಟ್ಸ್ ಡೆವಲೆಪ್‌ಮೆಂಟ್ ಅಥಾರಿಟಿ ಎನ್‌ಡಿಎಟಿಯ ಸಂಯುಕ್ತ ನೇತೃತ್ವದ ಚೆನ್ನೈ ಓಪನ್‌ಗೆ ಶುಭಾರಂಭ. ಅದೀಗ ಏರ್‌ಸೆಲ್ ಚೆನ್ನೈ ಓಪನ್. ಥ್ಯಾಂಕ್ಸು ಟು ಸೋಮ್‌ದೇವ್ ದೇವ್‌ವರ್ಮನ್!
ಪ್ರಾಯೋಜನೆ ಲಭ್ಯವಾಗಲು ಸೋಮ್‌ದೇವ್ ನೇರಕಾರಣ ಅಲ್ಲ ಎಂಬುವವರು ಕಳೆದ ವರ್ಷದ ಓಪನ್‌ನ್ನು ನೆನಪಿಸಿಕೊಳ್ಳಬೇಕು. ಜಾದೂ ಎಂಬಂತೆ ದೇವ್ ಓಪನ್‌ನ ಫೈನಲ್ ತಲುಪಿದ್ದರು. ಅಲ್ಲಿಯೂ ಕೂಡ ಹಣಾಹಣಿಯ ಹೋರಾಟದಲ್ಲಿ ೪-೬, ೬-೭(೭-೩)ರಿಂದ ಅಭಿಮನ್ಯು ಸೋಲು ಕಂಡಿದ್ದರು. ಅವತ್ತಿನ ಆ ಯಶೋ ಓಟ ಅತಿ ಹೆಚ್ಚಿನ ಸಂಖ್ಯೆಯ ಭಾರತೀಯರನ್ನು ಚೆನ್ನೈ ಓಪನ್‌ನೆಡೆಗೆ ಆಕರ್ಷಿಸಿತ್ತು. ಫಲಿತಾಂಶ, ಏರ್‌ಸೆಲ್ ಪ್ರಾಯೋಜನೆ!
ಕಳೆದ ೧೫ ವರ್ಷಗಳಿಂದ ಚೆನ್ನೈ ಓಪನ್ ಭಾರತದಲ್ಲಿ ಆಡಲಾಗುತ್ತಿದೆ. ಅದರಲ್ಲಿ ೧೩ ವರ್ಷಗಳಿಂದಂತೂ ಇದು ಎನ್‌ಡಿಎಟಿಯ ನುಂಗಬಾಕಂ ಸ್ಟೇಡಿಯಂನಲ್ಲಿಯೇ ಜರಗುತ್ತಿದೆ. ಇಲ್ಲಿನ ವಾತಾವರಣ ಜನವರಿ ವೇಳೆಯಲ್ಲಿ ಅದ್ಭುತವಾಗಿರುವುದು ಧನಾತ್ಮಕ ಅಂಶ. ಮೊದಲಿನ ವರ್ಷಗಳಲ್ಲಿ ಈ ಟೂರ್ನಿ ದೆಹಲಿಯಲ್ಲಿ ನಡೆದಾಗ ಜನವರಿಯ ಮಂಜು ಟೂರ್ನಿಯ ಭವಿಷ್ಯವನ್ನೇ ಅಂಧಕಾರದೆಡೆಗೆ ಒಯ್ದಿದ್ದಿತು. ಈಗ ಮತ್ತೂ ಎರಡು ವರ್ಷಗಳ ಕಾಲಕ್ಕೆ ಒಪ್ಪಂದ ನವೀಕರಣಗೊಂಡಿದೆ. ಕೊನೆಪಕ್ಷ ೨೦೧೧ರವರೆಗೆ ಇದು ಚೆನ್ನೈ ಓಪನ್ ಆಗಿಯೇ ಉಳಿಯುತ್ತದೆ.
೨೦೧೦ರ ಟೆನಿಸ್ ಋತು ಆರಂಭವಾಗಿದೆ. ಅಂತಹ ನಾಂದಿ ಹಾಡುವ ಅವಕಾಶ ಚೆನ್ನೈ ಓಪನ್ ಮೂಲಕ ಭಾರತಕ್ಕೂ ಲಭಿಸಿದೆ. ಜನವರಿ ಕೊನೆಯವಾರ ಶುರುವಾಗಲಿರುವ ಆಸ್ಟ್ರೇಲಿಯನ್ ಗ್ರಾನ್‌ಸ್ಲಾಂಗೆ ಇದು ಪೂರ್ವಭಾವಿ ಸ್ಪರ್ಧೆ. ಅಲ್ಲಿನಂತೆಯೇ ಇಲ್ಲೂ ಹಾರ್ಡ್‌ಕೋರ್ಟ್ ಬಳಕೆಯಾಗುತ್ತದೆ. ಕಾಂಗರೂ ನಾಡಿನಿಂದ ಭಾರತ ವಿಪರೀತ ದೂರದಲ್ಲಿರುವುದರಿಂದ ಖ್ಯಾತ ಆಟಗಾರರು ಚೆನ್ನೈಗೆ ಬಾರರು. ಆಸ್ಟ್ರೇಲಿಯಾದಲ್ಲಿಯೇ ಬ್ರಿಸ್ಬೇನ್, ಸಿಡ್ನಿ, ಮೆಲ್ಬೋರ್ನ್ ಮತ್ತು ಆಕ್‌ಲೆಂಡ್ ಟೂರ್ನಿಗಳಿಗೆ ಧಾವಿಸುತ್ತಾರೆ.
ಅಂತಹ ನಷ್ಟವೇನಿಲ್ಲ, ಭಾರತದ ಟೆನಿಸಿಗರು ಧಾರಾಳವಾಗಿ ಭಾಗವಹಿಸುವುದರಿಂದ ಇಲ್ಲಿನ ಟೆನಿಸ್ ಪ್ರೇಮಿಗಳು ಖುಷಿಯಿಂದ ಆಗಮಿಸುತ್ತಾರೆ. ನೇರ ಪ್ರವೇಶಗಳು ಕಷ್ಟಕರವಾದುದು. ವೈಲ್ಡ್‌ಕಾರ್ಡ್ ಸೌಲಭ್ಯ ನಮ್ಮವರಿಗೆ ಲಭಿಸುತ್ತದೆ. ಹಾಗಾಗಿ ವಿಶ್ವದ ಘಟಾನುಘಟಿಗಳೊಂದಿಗೆ ಸೆಣಸುವ ಅನುಭವ ಸಿಗುತ್ತದೆ. ಇದು ಒಲಂಪಿಕ್ಸ್, ಡೇವಿಸ್‌ಕಪ್‌ಗಳಲ್ಲಿ ಪಾಲ್ಗೊಳ್ಳಲು ಶಕ್ತಿ ನೀಡುತ್ತದೆ. ಪ್ರತಿವರ್ಷ ಇಬ್ಬರು ಭಾರತೀಯರಿಗೆ ವೈಲ್ಡ್‌ಕಾರ್ಡ್ ಲಭ್ಯವಾಗುತ್ತದೆ. ಪ್ರಸಕ್ತ ಟೂರ್ನಿಗೂ ೧೨೬ನೇ ಶ್ರೇಯಾಂಕನೇ ಶ್ರೇಯಾಂಕದ ದೇವ್, ೩೯೮ನೇ ಕ್ರಮಾಂಕದ ರೋಹನ್ ಬೋಪಣ್ಣಗೆ ವೈಲ್ಡ್‌ಕಾರ್ಡ್ ಪ್ರವೇಶ ಗಿಟ್ಟಿದೆ. ಡಬಲ್ಸ್‌ನಲ್ಲಿ ಸನಂ ಸಿಂಗ್ ಎಂಬ ಭಾರತದ ಪ್ರತಿಭೆ ದೇವ್ ಜೊತೆಗೂಡುತ್ತಾರೆ.
ಚೆನ್ನೈ ಓಪನ್ ವಿಚಾರ ಬಂದಾಗ ಸ್ಪೇನ್‌ನ ಕಾರ್ಲೋಸ್ ಮೋಯಾರನ್ನು ಉಲ್ಲೇಖಿಸದಿದ್ದರೆ ತಪ್ಪಾಗುತ್ತದೆ. ಮೋಯಾ ಟೆನಿಸ್ ಪ್ರೇಮಿಗಳಿಗೆಲ್ಲ ಪರಿಚಿತರು. ಮಾಜಿ ಫ್ರೆಂಚ್ ಓಪನ್ ಚಾಂಪಿಯನ್, ಅಗ್ರಕ್ರಮಾಂಕದ ಸವಿಯನ್ನು ಕಂಡವರು. ಮೋಯಾ ಎರಡೆರಡು ವರ್ಷ ಸಿಂಗಲ್ಸ್ ಟ್ರೋಫಿ ಗೆದ್ದವರು. ಮುಖ್ಯವಾಗಿ, ಚೆನ್ನೈ ಓಪನ್‌ಗೆ ತಾರಾತಾಕತ್ತು ಇಲ್ಲದಿದ್ದಾಗ ಬಂದು ಆಡಿ ಸ್ಪರ್ಧಾ ಮಟ್ಟವನ್ನು ಏರಿಸಿದವರು. ಹನ್ನೊಂದು ಎಟಿಪಿ ಪ್ರಶಸ್ತಿಯೂ ಇವರ ಜೋಳಿಗೆಯಲ್ಲಿದೆ. ಇತ್ತೀಚಿನ ದಿನಗಳಲ್ಲಿ ಅವರ ಸಾಮರ್ಥ್ಯ ಸಾಕಷ್ಟು ಕುಸಿದಿದೆ. ವಯಸ್ಸು ಅವರ ಆಟದಲ್ಲಿ ಪ್ರತಿಫಲಿಸಿದೆ. ಆದರೆ ಚೆನ್ನೈ ಓಪನ್ ಆಡಳಿತ ಹಿರಿಯ ಆಟಗಾರನಿಗೆ ಸಮ್ಮಾನ ನೀಡುವ ಪರಿಯಲ್ಲಿ ಸಿಂಗಲ್ಸ್ - ಡಬಲ್ಸ್‌ಗೆ ವೈಲ್ಡ್‌ಕಾರ್ಡ್ ನೀಡಿ ಆಹ್ವಾನಿಸಿದೆ. ಮೋಯಾ ಬರುತ್ತಾರೆ. ಜೊತೆಗೆ ಡಬಲ್ಸ್‌ನಲ್ಲಿ ಭಾರತದ ಪ್ರತಿಭಾನ್ವಿತ ಯೂಕಿ ಬಾಂಬ್ರಿ ಜತೆಯಾಗಿ ಸೆಣಸುತ್ತಾರೆ, ವಾರದ ನಂತರ ಹೇಳಲು ಬಾಂಬ್ರಿಗೆ ಹತ್ತಾರು ಸಿಹಿಕತೆಗಳು ಸಿಕ್ಕಾವು!
ಕಳೆದ ವರ್ಷ ಇಲ್ಲಿ ದೇವ್‌ರನ್ನು ಮಣಿಸಿ ಪ್ರಶಸ್ತಿ ಗಳಿಸಿದ್ದು ಕ್ರೊಯೇಷಿಯಾದ ಮಾರಿನ್ ಸಿಲಿಕ್. ವಿಶ್ವದ ೧೩ನೇ ಕ್ರಮಾಂಕದ ಆಟಗಾರ. ಪ್ರಶಸ್ತಿ ಉಳಿಸಿಕೊಳ್ಳಲು ಸಿಲಿಕ್ ಮತ್ತೆ ಇಲ್ಲಿ ಆಡಲಿದ್ದಾರೆ. ಸ್ವಿರ್ಜರ್‌ಲೆಂಡ್‌ನ ಇನ್ನೋರ್ವ ಆಶಾಕಿರಣ ಸ್ಟಾನಿಸ್ಲಾಸ್ ವವ್ರಿಂಕಾ ಈ ಬಾರಿ ಬರಲಿದ್ದಾರೆ. ವಿಶ್ವದ ೨೧ನೇ ರ‍್ಯಾಂಕಿಂಗ್ ಪಡೆದಿರುವ ವವ್ರಿಂಕಾ ಹಿಂದೊಮ್ಮೆ ಟಾಪ್ ಟೆನ್(೯)ನೊಳಗೆ ಇದ್ದವರು. ಅಷ್ಟೇಕೆ, ಒಲಂಪಿಕ್ಸ್‌ನ ಪುರುಷರ ಡಬಲ್ಸ್ ಚಿನ್ನ ಗೆದ್ದವರು. ಅವತ್ತು ಜೊತೆಗಿದ್ದುದು ರೋಜರ್ ಫೆಡರರ್!
ಭಾರತದ ಯುವ ಆಟಗಾರರಿಗೆ ತಾಲೀಮು ಸಿಗುವುದಂತೂ ಖಚಿತ. ಒಂದೊಮ್ಮೆ ಅರ್ಹತಾ ಸುತ್ತುಗಳಲ್ಲಿ ಪರಾಭವಗೊಂಡರೂ ಖ್ಯಾತ ಆಟಗಾರರಿಗೆ ಅಭ್ಯಾಸ ನಡೆಸಲು ಪಾರ್ಟನರ್ ಆಗಬಹುದು. ಅವು ಆಟಗಾರರು ಹೊಡೆತ, ತಾಳ್ಮೆ, ಚಾಕಚಕ್ಯತೆಗಳ ಅರಿವು ಮನಸ್ಸಿಗೆ ತಟ್ಟುತ್ತದೆ. ಸರ್ಕ್ಯೂಟ್ ಟೆನಿಸ್‌ಗೂ ಎಟಿಪಿ ಸ್ಪರ್ಧೆಗೂ ಇರುವ ಅಂತರ ಅರ್ಥವಾಗುತ್ತದೆ. ಇಂತಹ ಗಳಿಕೆಗಳನ್ನು ಹಣಕಾಸಿನಿಂದ ತೂಗಿನೋಡಲು ಸಾಧ್ಯವಿಲ್ಲ. ಅದಕ್ಕೆಂದೇ ಇಲ್ಲಿ ಏರ್‌ಸೆಲ್ ಚೆನ್ನೈ ಓಪನ್‌ನ ಬಹುಮಾನದ ಮೊತ್ತದ ವಿವರಗಳಂತ ಶುಷ್ಕ ಮಾಹಿತಿಯನ್ನು ಇಲ್ಲಿ ಎಲ್ಲಿಯೂ ಪ್ರಸ್ತಾಪಿಸಿಲ್ಲ!

-ಮಾವೆಂಸ

ಭಾನುವಾರ, ಜನವರಿ 3, 2010

ಮಾದರಿ ಪತ್ರಿಕೆಯಿದು, ಖಾಯಂ ಖರೀದಿಸದಿರಿ ನೀವು!


ವಾರಕ್ಕೊಮ್ಮೆ........6

ಇದೊಂದು ವಿಚಿತ್ರ ಸನ್ನಿವೇಶ. ಈ ಅಂಕಣವಿರುವುದು ಪತ್ರಿಕೆಗಳನ್ನು ಪರಿಚಯಿಸಲು ಮತ್ತು ಅವುಗಳ ಪ್ರಸಾರ ಸಂಖ್ಯೆ ಹೆಚ್ಚಿಸಲು ಕಿಂಚಿತ್ ಪ್ರಯತ್ನಿಸಲು. ಆದರೆ ಈ ವಾರ ಪರಿಚಯಿಸುತ್ತಿರುವ ಪತ್ರಿಕೆಯನ್ನು ನೀವು ಚಿಂತಾಮಣಿ ತಾಲ್ಲೂಕಿನವರಲ್ಲದಿದ್ದರೆ ಓದುವುದು ವ್ಯರ್ಥ. ಹಾಗೆಂದು ನೀವೊಮ್ಮೆ ಪತ್ರಿಕೆಯನ್ನು ಗಮನಿಸದಿದ್ದರೂ ನಷ್ಟ ನಷ್ಟ!
ಬೆಂಗಳೂರು ಸಮೀಪದ ಚಿಂತಾಮಣಿಯ ಮಂಜುನಾಥ ರೆಡ್ಡಿ ಮಾಹಿತಿ ಹಕ್ಕು ಕಾಯ್ದೆ ಬಳಸಿಕೊಂಡು ಭ್ರಷ್ಟಾಚಾರದ ಎದುರು ಹೋರಾಟ ನಡೆಸಿದಾಗಲೊಮ್ಮೆ ಗೂಂಡಾಗಳಿಂದ ದೈಹಿಕ ಹಲ್ಲೆಗೆ ತುತ್ತಾದವರು. ನನಗೆ ಪರಿಚಿತರು. ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲ್ಲೂಕಿನಲ್ಲಿ ‘ಜನಜಾಗೃತಿ ವೇದಿಕೆ’ ಎಂಬ ಜನಪರ ಸಂಸ್ಥೆಯ ಮುಂಚೂಣಿಯಲ್ಲಿದ್ದಾರೆ. ಅವರದೇ ಸಂಪಾದಕೀಯದಲ್ಲಿ ಪ್ರಕಟವಾಗುತ್ತಿರುವ ದ್ವೈಮಾಸಿಕ ಅಂಚೆ ಪತ್ರಿಕೆ ‘ಅರಿವು’
ಪತ್ರಿಕೆಯ ಓದುಗರಸಂಖ್ಯೆ ಹೆಚ್ಚಲು ಅದರಲ್ಲಿ ಲೇಖನ ಕಸುಬು ಚೆಂದವಿರಬೇಕು ಎಂಬ ಮಾತಿದೆ. ಈ ಮಾತನ್ನು ಸುಳ್ಳಾಗಿಸುವ ಪತ್ರಿಕೆ ಈ ಅರಿವು. ಇದು ಮಾಹಿತಿ ಹಕ್ಕಿನ ಅಸ್ತ್ರದ ಬಳಕೆಯ ಮೂಲಕ ಚಿಂತಾಮಣಿಯ ನಗರಸಭೆ, ಗ್ರಾಮಪಂಚಾಯ್ತಿ ಹಾಗೂ ಸರ್ಕಾರಿ ಇಲಾಖೆಗಳಿಂದ ಮಾಹಿತಿ ಸಂಗ್ರಹಿಸಿ ಅದನ್ನು ಯಥಾವತ್ ಆಗಿ ಪ್ರಕಟಿಸುತ್ತದೆ. ಉದಾ.ಗೆ ರೇಷ್ಮೆ ಕೃಷಿಗೆ ಈ ವರ್ಷ ಯಾರ‍್ಯಾರಿಗೆ ನೀರಾವರಿ ಸಬ್ಸಿಡಿ ಸಿಕ್ಕಿದೆ ಎಂಬ ಪಟ್ಟಿಯನ್ನು ಪಡೆದು ಪ್ರಕಟಿಸುತ್ತದೆ. ಖುದ್ದು ಹೆಸರಿಸಲಾದ ರೈತನಿಗೆ ಗಾಬರಿಯಾಗಬಹುದು. ಏಕೆಂದರೆ ಆತ ಅದನ್ನು ಪಡೆಯದೇ ಇರುವ ಸಾಧ್ಯತೆಯಿದೆ. ಅಥವಾ ಏನೂ ಕೆಲಸ ಮಾಡಿರದ ಖದೀಮ ಸಬ್ಸಿಡಿ ಹೊಡೆದಿರಬಹುದು. ಈ ಎರಡೂ ಪ್ರಕರಣದಲ್ಲಿ ಹೋರಾಡಲು ಈ ಮಾಹಿತಿ ನೆರವು ನೀಡುತ್ತದೆ. ಈ ರೀತಿ ಕಾಮಗಾರಿ ಪಟ್ಟಿ, ಯಶಸ್ವಿನಿಯಡಿ ಆಸ್ಪತ್ರೆಗಳು ಪಡೆದಿರುವ ಮೊತ್ತ, ತೋಟಗಾರಿಕೆ ಇಲಾಖೆಯ ಹನಿ ನೀರಾವರಿ ಸಬ್ಸಿಡಿ, ಗ್ರಾಮಪಂಚಾಯ್ತಿಗಳ ಖರ್ಚು ವಿವರ... ಹೀಗೆ ನೇರನೇರವಾಗಿ ಅಂಕಿಅಂಶಗಳು ಪ್ರಕಟಗೊಳ್ಳುವುದರಿಂದ ಹೊಣೆಗಾರರಾದ ಅಧಿಕಾರಿಗಳು ಮುಜುಗರಕ್ಕೊಳಗಾಗುವ ಸಾಧ್ಯತೆಗಳಿವೆ. ಹೀಗೆ ಹೇಳಬಹುದು, ಲೆಕ್ಕದಲ್ಲಿ ಯಾವುದೋ ಕೆರೆಯ ಹೂಳು ತೆಗೆದಿದ್ದಾರೆಂದರೆ ಅದು ಚಿಂತಾಮಣಿಯಲ್ಲಿ ‘ಅರಿವು’ ಮೂಲಕ ಜಗಜ್ಜಾಹೀರವಾಗುತ್ತದೆ. ಸಾಕಲ್ಲ? ಪ್ರಜ್ಞಾವಂತ ನಾಗರಿಕ ಮುಂದಿನ ಹೆಜ್ಜೆ ಇಟ್ಟಾನು!
ಇಂತಹ ಪತ್ರಿಕೆ ಪ್ರತಿ ತಾಲ್ಲೂಕಿಗೊಂದರಂತೆ ಶುರುವಾಗಬೇಕು. ಅದಕ್ಕೂ ಮುನ್ನ ಒಮ್ಮೆ ‘ಅರಿವು’ ನೋಡಬೇಕು. ಇವತ್ತು ಚಿಂತಾಮಣಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯರು ಮೂತ್ರ ವಿಸರ್ಜಿಸಿದರೆ ಶುಲ್ಕ ಕೊಡಬೇಕಾದುದಿಲ್ಲ, ಅಲ್ಲಿನ ಬಿಪಿಎಲ್ ಕಾರ್ಡ್‌ದಾರರಿಗೆ ಸಕ್ಕರೆ, ಗೋಧಿ, ಅಕ್ಕಿ ಎಲ್ಲವೂ ಸಿಗುತ್ತಿದೆ. ಇದಕ್ಕೆಲ್ಲ ಕಾರಣ ‘ಅರಿವು’ ದ್ವೈಮಾಸಿಕ. ಜೊತೆಜೊತೆಗೆ ಎಲ್ಲರಿಗೂ ಅನುಕೂಲವಾಗಬಲ್ಲ ಕಾನೂನು ಮಾಹಿತಿಗಳೂ ಈ ಪತ್ರಿಕೆಯಲ್ಲಿದೆ. ಇದನ್ನು ನೋಡಿದಾಗ ನನಗೆ ಮಂಡ್ಯದ ‘ಗ್ರಾಮಸರ್ಕಾರ’ ಎಂಬ ಪತ್ರಿಕೆಯ ನೆನಪಾಗುತ್ತದೆ. ಅದರ ಬಗ್ಗೆ ಮುಂದೆ ಬರೆಯುವೆ. ಮುಖ್ಯವಾಗಿ ಬೇರೆಡೆಯಲ್ಲೂ ಸಂಘಟನೆಗಳು ಈ ಅರಿವು ಪತ್ರಿಕೆಯ ಮಾದರಿಯನ್ನು ಮುದ್ದಾಂ ಆರಂಭಿಸಬೇಕು. ಈ ಬರಹ ಕೆಲವರಲ್ಲಾದರೂ ಆ ಕೆಲಸ ಮಾಡಿಸಿದರೆ ಸಾರ್ಥಕ.
‘ಅರಿವು’ ವಿಳಾಸ - ಜಿ.ವಿ.ಮಂಜುನಾಥ್ ರೆಡ್ಡಿ, ಸಂಪಾದಕರು, ‘ಅರಿವು’, ಎನ್.ಆರ್.ಬಡಾವಣೆ, ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆ -563125
ದೂರವಾಣಿ - 08123 254030, ಮೊಬೈಲ್ - 9945312314

-ಮಾ.ವೆಂ.ಸ.ಪ್ರಸಾದ್
ಮಾವಿನಸರ
ಪೋಸ್ಟ್-ಎಡಜಿಗಳೇಮನೆ
ಸಾಗರ ತಾ. ಶಿವಮೊಗ್ಗ ಜಿ.
577401
ಫೋನ್-08183 236068, 296543
9886407592
ಇ ಮೇಲ್- mavemsa@gmail.com
 
200812023996