ಬುಧವಾರ, ಜುಲೈ 13, 2011

‘ಬಳಕೆ ತಿಳುವಳಿಕೆ’ ಸಂಪಾದಕನಾಗಿ....

ಸಾಗರದ ಬಳಕೆದಾರರ ವೇದಿಕೆ ಕಳೆದ ೨೦ ವರ್ಷಗಳಿಂದ ಪ್ರಕಟಿಸುತ್ತಿರುವ ‘ಬಳಕೆ ತಿಳುವಳಿಕೆ’ ಮಾಸಿಕದ ನೂತನ ಸಂಪಾದಕನನ್ನಾಗಿ ನನ್ನನ್ನು ನೇಮಿಸಲಾಗಿದೆ. ಈ ಹಿಂದೆ ಇದೇ ಪತ್ರಿಕೆಯ ಸಹಸಂಪಾದಕನಾಗಿ ಕೆಲಸ ಮಾಡಿದ್ದೆ.
ಪ್ರಥಮ ಸಂಚಿಕೆಯಿಂದ ಇದರ ಸಂಪಾದಕರಾಗಿ ಸೇವೆ ಸಲ್ಲಿಸಿದ್ದ ಕೆ.ಎನ್.ವೆಂಕಟಗಿರಿರಾವ್ ತೆರವುಗೊಳಿಸಿದ ಸ್ಥಾನಕ್ಕೆ ಇತ್ತೀಚೆಗೆ ಸೇರಿದ್ದ ವೇದಿಕೆಯ ಮಹಾಸಭೆಯಲ್ಲಿ ಉದಯವಾಣಿಯ ಸಾಗರ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿರುವ ನನ್ನನ್ನು ಆಯ್ಕೆ ಮಾಡಲು ನಿರ್ಧರಿಸಲಾಯಿತು.
ಇನ್ನು ಮುಂದೆ ಬಳಕೆ ತಿಳುವಳಿಕೆಯನ್ನು  ಓದುಗರು ನೇರವಾಗಿ ಅಂತರ್ಜಾಲ ಬಳಸಿಯೂ ಪ್ರತಿ ತಿಂಗಳು  ಓದಬಹುದು. ನೀವು http://balaketiluvalike.blogspot.com/ ವಿಳಾಸದಲ್ಲಿ  ಇಣುಕಿದರೆ ಸಾಕು.

ಪತ್ರಿಕೆಯ ಕುರಿತಂತೆ ನಿಮ್ಮ ಪ್ರತಿಕ್ರಿಯೆ, ಗ್ರಾಹಕ ಕ್ಷೇತ್ರದ ನಿಮ್ಮ ಅನುಭವ, ವಿಷಯಾಧಾರಿತ ಲೇಖನಗಳನ್ನು ನೀವೀಗ ಪತ್ರಿಕೆಯ ಇ-ಮೈಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಆ ವಿಳಾಸ balaketiluvalike@gmail.com

ಗುರುವಾರ, ಜುಲೈ 7, 2011

ಊರ ಹೆಗ್ಡೇರು ಗುಳೆ ಹೊರಟ್ರು, ಟಾಡ್ ಭಟ್ರು ಹಳ್ಳಿಗೆ ಬಂದ್ರು.........Add caption

ಹಳ್ಳಿ ಮೂಲೆ, ಜಿಟಿ ಜಿಟಿ ಮಳೆ. ಜಾರುವ ನೆಲ. ಸುತ್ತ ಮರಗಿಡ, ಉಂಬಳ ಸೊಳ್ಳೆ ಧಾರಾಳ. ಮುಖ್ಯ ರಸ್ತೆಗೆ ಅಜಮಾಸು ಒಂದು ಕಿ.ಮೀ. ನಡೆದರೆ ದರ್ಶನ. ಅಲ್ಲಿಯವರೆಗೆ ಮಾತ್ರ ಸಾರಿಗೆ ಬಸ್ಸಿನ ಓಡಾಟ. ಕೈ ಕೊಡುವ ವಿದ್ಯುತ್, ಆಗೀಗ ಸಿಗ್ನಲ್ ತಾಕದ ವಿಲ್ ಫೋನ್...... ಇಂತಹ ಸನ್ನಿವೇಶದಲ್ಲೂ ‘ಕೃಷಿ ಕುಟುಂಬ’ವೊಂದು ನೆಮ್ಮದಿಯಿಂದಿದೆ. ಅಮೆರಿಕನ್ ಯುವಕ, ಇಂಡಿಯನ್ ಹುಡುಗಿಯ ಈ ಸಂಸಾರ ಹಳ್ಳಿಗಳಿಂದ ಗುಳೆ ಎದ್ದು ಹೋಗುತ್ತಿರುವ ನಮ್ಮವರಿಗೆ ಶಾಕ್ ಕೊಡಬಲ್ಲದು.
ಉಹ್ಞೂ, ಅವರಿರುವ ಊರಿನ ಹೆಸರಿನ ಪ್ರಸ್ತಾಪವೇ ಬೇಡ. ಸಾಗರದ ಸಾಂಸ್ಕೃತಿಕ ರಾಜಧಾನಿ ಎನ್ನಬಹುದಾದ ಹೆಗ್ಗೋಡಿನ ಸಮೀಪ ಎಂದಷ್ಟೆ ದಾಖಲಿಸಿಕೊಳ್ಳೋಣ. ಇಲ್ಲಿ ಅಮೆರಿಕದ ಕ್ಲೇವ್‌ಲೆಂಡ್‌ನ ಟಾಡ್ ಲಾರಿಚ್ ಹಾಗೂ ಮಲೆನಾಡಿಗೆ ಸೇರಿದವರಾದ ಕೃತಿ ದಂಪತಿಗಳು ಕಳೆದ ನಾಲ್ಕು ವರ್ಷಗಳಿಂದ ಅಕ್ಷರಶಃ ಕೃಷಿಕ ಜೀವನವನ್ನು ಸಾಗಿಸುತ್ತಿದ್ದಾರೆ. ಹೊರಗಿನಿಂದ ಬಂದವರು ಮಲೆನಾಡಿನ ಒಂದು ಮಳೆಗಾಲವನ್ನು ಕಳೆಯುವುದೇ ಕಷ್ಟ ಎನ್ನುವ ಪರಿಸ್ಥಿತಿಯಿರುವಾಗ ಈ ದಂಪತಿಗಳು ಖುಷಿಖುಷಿಯಾಗಿದ್ದಾರೆ. ಅದೇ ಸಮಯಕ್ಕೆ ನಾವು ನೀವು ಒಪ್ಪಿತ ವಾದಕ್ಕೆ ಸವಾಲು ಹಾಕುತ್ತಿದ್ದಾರೆ.
ಹಳ್ಳಿಯ ಕೊರತೆಗಳು, ಕೃಷಿ ಬದುಕಿನ ಸಂಕಷ್ಟಗಳನ್ನು ಪ್ರಸ್ತಾಪಿಸಿದರೆ ಇಲ್ಲಿನ ಕೂಲಿಯಾಳುಗಳ ನೆಚ್ಚಿನ ಟಾಡ್ ಭಟ್ರು ಹೇಳುವುದೇ ಬೇರೆ, ಪಟ್ಟಣದ ಜಿಗಿಜಿಗಿ ಟ್ರಾಫಿಕ್, ಬೆಳಿಗ್ಗೆಯಿಂದ ರಾತ್ರಿ ೮-೧೦ರವರೆಗಿನ ದುಡಿತ, ಕಲುಷಿತ ವಾತಾವರಣಗಳ ನಗರಗಳಿಗಿಂತ ಹಳ್ಳಿಯ ವಾತಾವರಣ ಎಷ್ಟೋ ಮೇಲು ಎನ್ನುತ್ತಾರವರು.
ಮಾತು ಮುಂದುವರೆಸುವ ಮುನ್ನ ಕೆಲಕಾಲ ಫ್ಲಾಶ್‌ಬ್ಯಾಕ್‌ಗೆ ತೆರಳೋಣ. ವರ್ಷ ೧೯೯೬. ಟಾಡ್ ಹಾಗೂ ಕೃತಿ ದೆಹಲಿಯಲ್ಲಿ ವಿದ್ಯಾಭ್ಯಾಸ ನಿಮಿತ್ತ ಇದ್ದ ಸಂದರ್ಭದಲ್ಲಿ ಭೇಟಿಯಾದವರು ಪರಸ್ಪರ ಪ್ರೀತಿಸಿ ಹುಡುಗಿ ಮನೆಯ ಹವ್ಯಕ ಸಂಪ್ರದಾಯದಂತೆ ಮದುವೆಯಾದವರು. ೫-೬ ವರ್ಷ ಓದು, ಉದ್ಯೋಗಕ್ಕಾಗಿ ಸುತ್ತಾಕಿದ ಅಮೆರಿಕ, ದೆಹಲಿ, ಬೆಂಗಳೂರುಗಳೆಲ್ಲ ಅವರದೇ ಕಾರಣಗಳಿಗೆ ರೇಜಿಗೆ ಹುಟ್ಟಿಸಿತ್ತು. ಅಮೆರಿಕದ ಕೊಳ್ಳುಬಾಕ ಸಂಸ್ಕೃತಿ ಇಷ್ಟಪಡದ ಕೃತಿ ಹಾಗೂ ನಗರದ ಅಬ್ಬರ, ಜಂಜಡಗಳನ್ನು ಬಯಸದ ಟಾಡ್‌ರಿಗೆ ಪರಿಹಾರವಾಗಿ ‘ಹಳ್ಳಿ’ ಕಾಣಿಸಿತ್ತು. ಹಾಗಾಗಿ ಯುವ ದಂಪತಿಗಳು ‘ಹಳ್ಳಿ ಮೂಲೆ’ಯನ್ನು ಹುಡುಕಲಾರಂಭಿಸಿದ್ದರು.
ಸಾಂಸ್ಕೃತಿಕ ಚಟುವಟಿಕೆಗಳ ನೆಲವೀಡು ಹೆಗ್ಗೋಡಿನ ನಿನಾಸಂ ಆಜುಬಾಜಿನಲ್ಲಿಯೇ ಕೃಷಿ ಜಮೀನು ಅರಸಿದವರಿಗೆ ನಿರಾಶೆಯಾಗಲಿಲ್ಲ. ಅಂತೂ ಇಲ್ಲಿಂದ ನಾಲ್ಕು ಕಿ.ಮೀ. ದೂರದಲ್ಲಿ ಒಂದೆಕರೆಗಿಂತ ತುಸು ಹೆಚ್ಚಿರುವ ಅಡಿಕೆ ತೋಟ ಒಳಗೊಂಡ ಜಮೀನು ಸಿಕ್ಕಿಯೇಬಿಟ್ಟಿತು. ತಮ್ಮದೇ ಆದ ಪುಟ್ಟ ಮನೆ ಕಟ್ಟಿಸಿಯೇ ಟಾಡ್-ಶೃತಿ ಜೋಡಿ ತಮ್ಮ ಪುಟ್ಟ ಮಗು ‘ಹಮೀರ್ ಮುಗಿಲು’ ಸಮೇತರಾಗಿ ಇಲ್ಲಿ ಗೃಹಪ್ರವೇಶ ಮಾಡಿದ್ದು  ೨೦೦೯ರ ಜುಲೈನಲ್ಲಿ. ಅಲ್ಲಿಂದ ಬರೋಬ್ಬರಿ ೨೫ ತಿಂಗಳು ಕಳೆದಿವೆ. ಎರಡು ಮಳೆಗಾಲದಲ್ಲಿ ಮಳೆ ಹರಿದುಹೋಗಿದೆ. ಟಾಡ್ - ಕೃತಿ ಬೇಸರಗೊಂಡಿಲ್ಲ. ಮಲೆನಾಡಿನ ಸಮಸ್ಯೆಗಳಿಂದ ಕಿರಿಕಿರಿಗೊಂಡಿಲ್ಲ. ಅಲ್ರೀ, ಸಮಸ್ಯೆ ಇಲ್ಲದ ವಸತಿ ಎಲ್ಲಿದೆ? ಇಲ್ಲಿ ವಿದ್ಯುತ್ ಇಲ್ಲ ಎಂದಾದರೆ ಅಲ್ಲಿ ನಗರದಲ್ಲಿ ನೀರಿಗೆ ತತ್ವಾರ ಆಗುವುದನ್ನು ಯಾರೂ ಹೇಳುವುದಿಲ್ಲ ಯಾಕೆ?
ನಿಜಕ್ಕೂ ಮಲೆನಾಡು, ಹಳ್ಳಿ ಜೀವನ ವಾರವೊಪ್ಪತ್ತು ಇದ್ದು ಹೋಗಲು ತುಂಬಾ ಚೆನ್ನ. ಅಬ್ಬಬ್ಬಾ ಎಂದರೆ ಎರಡು ತಿಂಗಳು ಇದ್ದಿರಬಹುದು ಎನ್ನುವವರಿದ್ದಾರೆ. ನಮ್ಮ ಈ ಕಥೆಯ ಹೀರೋ ದಂಪತಿಗಳು ಇಲ್ಲಿ ಬಿಡಾರ ಹೂಡಿದ ಮೇಲೆ ಮತ್ತೊಮ್ಮೆ ಅಮೆರಿಕಾಕ್ಕೆ ತಲೆ ಹಾಕಿಲ್ಲ. ದೆಹಲಿ, ಬೆಂಗಳೂರು ಟೂರ್ ಕೂಡ ಹೋಗಿಲ್ಲ. ಬರಲಿರುವ ವರ್ಷ ಅಮೆರಿಕಕ್ಕೆ ಒಂದು ‘ವಿಸಿಟ್’ ಕೊಡುವ ಆಸೆಯಿದೆ. ಟಾಡ್‌ರ ೯೦ ವರ್ಷದ ಅಜ್ಜನನ್ನು ಒಮ್ಮೆ ನೋಡಿ ಬರುವ ಯೋಚನೆ. ಆದೀತಾ ಎಂಬ ಬಗ್ಗೆ ಗುಮಾನಿಯೂ ಇದೆ.
  ಮಗನನ್ನು ಕೂಡ ಇಲ್ಲಿನ ಅಆಇಈ ಕನ್ನಡ ಅಂಗನವಾಡಿಗೆ ಸೇರಿಸಿ ನಿರುಮ್ಮಳರಾಗಿದ್ದಾರೆ. ಹಾಗೆಂದು ಕೃತಿಯವರನ್ನು ಬಿಡಿ, ಅವರು ಹಳ್ಳಿಯಿಂದಲೇ ಬಂದವರು. ಅವರಿಗೆ ಇಲ್ಲಿನ ಬದುಕು ಹೊಸದಲ್ಲ ಎಂದು ಬಿಡಬಹುದು. ಕೃತಿಯವರಿಗೂ ‘ಟಿಪಿಕಲ್’ ಹಳ್ಳಿ ಜೀವನ ಹೊಸದೇ. ಅವರ ತವರೂರು ಮಂಕಳಲೆಯಿಂದ ಸಣ್ಣದಾಗಿ ಕೂಗಿದರೂ ತಾಲ್ಲೂಕು ಕೇಂದ್ರ ಸಾಗರ ಪಟ್ಟಣಕ್ಕೆ ಕೇಳಿಸುವಷ್ಟು ಸನಿಹ. ಇದೊಂದು ತರಹ ಪೇಟೆಯ ಇನ್ನೊಂದು ಬಡಾವಣೆ ಎನ್ನಬಹುದಷ್ಟೇ.
ಬದುಕು ವಿಚಿತ್ರ. ಈ ಜೋಡಿ ಖರೀದಿಸಿದ ಜಮೀನಿನ ಮೂಲ ಹಕ್ಕುದಾರರು ಈಗ ಪೇಟೆಯಲ್ಲಿ ನೆಲೆಸಿದ್ದಾರೆ. ಪಕ್ಕದ ಮನೆಯವರ ಮಗ ದುಡಿಮೆಯ ನಿಮಿತ್ತ ಅಮೆರಿಕಕ್ಕೆ ತೆರಳಿದ್ದಾನೆ. ಈ ಗೊಂದಲಕ್ಕೆ ಟಾಡ್ ತಮ್ಮ ನೆಲೆಯಲ್ಲಿ ಉತ್ತರಿಸುವುದು ಹೀಗೆ, "ಹಳ್ಳಿಯ ಜೀವನದಲ್ಲಿ ಯಾವುದೇ ಮಹತ್ವಾಕಾಂಕ್ಷೆಗಳಿಲ್ಲದೆ ಬದುಕಲು ಇಚ್ಛಿಸುವವರಿಗೆ ಇಲ್ಲಿ ಹುಟ್ಟುವ ಆದಾಯ ಸಾಕಾಗುತ್ತದೆ. ಆ ಮಟ್ಟಿಗೆ ನಾವು ಸುಖವಾಗಿದ್ದೇವೆ"
ಕೃಷಿ ಕುರಿತಂತೆ ಸಂಪೂರ್ಣ ತೊಡಗಿಸಿಕೊಂಡಿರುವ ಈ ದಂಪತಿಗಳು ಯಾವುದೋ ಸಾಧನೆ ಮಾಡುವ ಧಾವಂತದಲ್ಲಿಲ್ಲ. ನೈಸರ್ಗಿಕ ಕೃಷಿಯ ಬಗ್ಗೆ ಆಸ್ಥೆ, ಪಾಳೇಕರ್ ವಿಧಾನದ ಅನುಸರಣೆ ಮತ್ತು ಸ್ವಯಂ ಆಗಿ ತೋಟದಲ್ಲಿ ತೊಡಗಿಸಿಕೊಂಡಿರುವುದರಿಂದ ದಿನದ ಸಮಯದ ಬಹುಪಾಲು ವೆಚ್ಚವಾಗುತ್ತದೆ. ಅಳಿದುಳಿದ ಸಮಯದಲ್ಲಿ ಟಾಡ್ ತಮ್ಮ ಸಿತಾರ್ ಅಭ್ಯಾಸ ನಡೆಸುತ್ತಾರೆ. ಕೃತಿ ಊರು ಮನೆಯ ಮೈಯಾಳಿನ ಅಡಿಕೆ ಸುಲಿ ಕೆಲಸಕ್ಕೂ ಸೈ. ಇನ್ನು ಹಳ್ಳಿ ಬದುಕಿನ ಬೇಸರಕ್ಕೆ ಜಾಗವೆಲ್ಲಿ?
ರಾಜ್ಯದ ಮಟ್ಟಿಗೆ ವರ್ಷದ ಹನ್ನೆರಡು ತಿಂಗಳೂ ಮಲೆನಾಡಿನ ಹಳ್ಳಿಯಲ್ಲಿ ಶಾಶ್ವತ ವಾಸ್ತವ್ಯ ಹೂಡಿರುವ ವಿದೇಶಿ ದಂಪತಿಗಳು ಇನ್ನೆಲ್ಲೂ ಸಿಕ್ಕುವುದಿಲ್ಲ. ಸ್ವತಃ ಟಾಡ್, "ಇಂತಹ ದೃಷ್ಟಾಂತಗಳು ತಮ್ಮ ಗಮನಕ್ಕೆ ಬಂದಿಲ್ಲ. ಇದೀಗ ಕೆಲ ದಿನಗಳ ಹಿಂದೆ ಉತ್ತರ ಭಾರತೀಯ ಸಾಫ್ಟ್‌ವೇರ್ ಪತಿಯ ಸಮೇತ ಇನ್ನೊಬ್ಬ ಮಲೆನಾಡಿನ ಮಹಿಳೆ ಕೃಷಿಯಲ್ಲೇ ಬದುಕು ಕಂಡುಕೊಳ್ಳಲು ಜಮೀನು ಖರೀದಿಸಿರುವ ಮಾಹಿತಿಯಿದೆ" ಎಂದಿದ್ದಾರೆ. ಹಾಗಿದ್ದೂ ಪ್ರಚಾರ ಪಡೆಯಲು ಟಾಡ್ ಸುತರಾಂ ಒಪ್ಪುವುದಿಲ್ಲ. ಅವರ ಪೋನ್ ನಂಬರ್, ವಾಸಸ್ಥಳದ ವಿಳಾಸ ಕೊಡದಿರುವ ಕರಾರಿನ ಮೇಲೆಯೇ ಅವರು ಮಾತನಾಡಲು ಸಮ್ಮತಿಸಿದ್ದು. ಸರಿ ಬಿಡಿ, ಅವರ ನಿಲುವುಗಳನ್ನು ಗೌರವಿಸೋಣ. ಕುತೂಹಲಕ್ಕೆ ಅವರಲ್ಲಿಗೆ ಧಾವಿಸಿ ಪ್ರೈವೆಸಿಯನ್ನು ನಾಶ ಮಾಡುವುದು ಬೇಡ, ಪ್ಲೀಸ್....
ಆದರೆ ಇದೇ ವೇಳೆ ಹಳ್ಳಿಗಳ ಕುರಿತು ಟನ್‌ಗಟ್ಟಲೆ ದೂರು ಹೇಳಿ ನಗರಗಳತ್ತ ವಲಸೆ ಹೋಗುವ ಮಹನೀಯರು ವಾಸ್ತವ ಸತ್ಯ ತಿಳಿದುಕೊಳ್ಳಲು ಟಾಡ್ ಕೃತಿ ಉದಾಹರಣೆಯನ್ನು ಒಮ್ಮೆ ಗಮನಿಸಬೇಕು. ನೀವೇನಂತೀರಿ?

-ಮಾವೆಂಸ

ಮಂಗಳವಾರ, ಜೂನ್ 7, 2011

ಭಾರತದಲ್ಲಿ ನೆಲೆಸಲು ಬಂದಿರುವ ‘ಹೋಮ್ ಸ್ಟೇ’
ಪ್ರವಾಸೋದ್ಯಮ ಗರಿಗೆದರುತ್ತಿರುವ ದಿನಗಳಿವು. ಖುದ್ದು ಭಾರತೀಯರು ನೆಮ್ಮದಿ, ವಿಶ್ರಾಂತಿ, ಮೋಜು ಅರಸಿ ಪ್ರವಾಸಿ ತಾಣಗಳಿಗೆ ಅಲೆಯುತ್ತಿದ್ದಾರೆ. ವಿದೇಶಿ ಪ್ರವಾಸಿಗರಿಂದಲೇ ಪ್ರವಾಸೋದ್ಯಮದ ವಹಿವಾಟು ಸುಧಾರಿಸಬೇಕು ಎಂಬ ದಿನಗಳಂತೂ ಈಗಿಲ್ಲ. ಪ್ರಕೃತಿ ಮಡಿಲಿನಲ್ಲಿ ನೆಲೆಸಿರುವ ಮೂಲನಿವಾಸಿಗಳಿಗೆಲ್ಲ ಹೊಸ ಅವಕಾಶ ತೆರೆದಿರುವುದಂತೂ ಸತ್ಯ. ಇದಕ್ಕೆ ನೂತನ ಪೋಷಾಕಿನೊಂದಿಗೆ ಬಂದಿರುವ ವ್ಯಾಪಾರವೇ  ಹೋಮ್ ಸ್ಟೇ!
ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ನೆಲೆಸಿರುವ ಜನರ ಮನೆಯಲ್ಲಿಯೇ ಪಾವತಿ ಅತಿಥಿಗಳನ್ನು ಆಹ್ವಾನಿಸುವ ಪ್ರವಾಸೋದ್ಯಮದ ಮಾದರಿಯನ್ನು ಹೋಮ್‌ಸ್ಟೇ ಎಂದು ಹೇಳಲಾಗುತ್ತದೆ. ಅಲ್ಲಿನ ಪರಿಸರದಲ್ಲಿ ಅಲ್ಲಿನದೇ ಅಹಾರವನ್ನು ಒದಗಿಸುವ ಈ ತಂತ್ರ ನಗರವಾಸಿಗಳಿಗೆ ಹೆಚ್ಚು ಇಷ್ಟವಾಗುತ್ತಿದೆ ಎನ್ನುವುದನ್ನು ಹಲವು ಅಧ್ಯಯನಗಳು ಸ್ಪಷ್ಟಪಡಿಸಿವೆ. ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿ ತರುಣ್ ತಮ್ಮಣ್ಣ ಈ ಕುರಿತು ಆಳವಾದ ಸಂಶೋಧನೆ ನಡೆಸಿದ್ದರು.

ಭವಿಷ್ಯಕ್ಕೆ ಭಾಷ್ಯ
ಕಾಮನ್‌ವೆಲ್ತ್ ಗೇಮ್ಸ್ ಸಂದರ್ಭದಲ್ಲಿ ದೆಹಲಿಯಲ್ಲಿ ಸಾಕಷ್ಟು ಕಟ್ಟಡಗಳ ನಿರ್ಮಾಣವಾದರೂ ಸರಿಸುಮಾರು ೩೦ ಸಾವಿರ ಕೊಠಡಿಗಳ ಕೊರತೆ ಬಿದ್ದಿತ್ತು. ಇಲ್ಲಿನ ಸುತ್ತಮುತ್ತಲಿನ ಹಾಗೂ ಜೈಪುರದ ೨೦೦ ಮನೆಯವರು ತಾವು ‘ಪಾವತಿ ಆತಿಥ್ಯ’ ನೀಡುವುದಾಗಿ ಮುಂದೆ ಬಂದರೂ ಮತ್ತು ಉಳಿದ ಪ್ರತಿ ಮನೆಯವರು ತಮ್ಮ ಒಂದು ಕೊಠಡಿಯನ್ನು ಬಿಟ್ಟು ಕೊಟ್ಟರೆ ಕೂಡ ಮತ್ತೆ ೪೦೦ ವಸತಿ ಲಭ್ಯವಾಯಿತೇ ವಿನಃ ಕೊರತೆಯ ಪ್ರಮಾಣ ಅಗಾಧವಾಗಿಯೇ ಉಳಿದಿತ್ತು. ಬಹುಷಃ ಇದು ಭಾರತದಲ್ಲಿ ಹೋಮ್ ಸ್ಟೇಗಳಿಗಿರುವ ಭವಿಷ್ಯಕ್ಕೂ ಭಾಷ್ಯ ಹೇಳಬಲ್ಲದು.
ಕರ್ನಾಟಕದ ಕೊಡಗು ಜಿಲ್ಲೆ, ಗೋವಾ ಪ್ರದೇಶದಲ್ಲಿ ಹೋಮ್ ಸ್ಟೇ ಉದ್ಯಮ ಬೇರೂರಿ ದಶಕ ಕಳೆದಿದೆ. ಆದರೆ ಕಳೆದ ಮೂರ‍್ನಾಲ್ಕು ವರ್ಷಗಳಲ್ಲಿ ತೀವ್ರ ಗತಿಯ ಬೆಳವಣಿಗೆಯನ್ನು ಈ ಕ್ಷೇತ್ರದಲ್ಲಿ ಕಾಣಲಾಗುತ್ತಿದೆಯಾದರೂ ಅಂಕಿಅಂಶಗಳ ಮೂಲಕ ಇದನ್ನು ಪ್ರಸ್ತುತಪಡಿಸುವುದು ಕಷ್ಟ. ಕಂಫರ್ಟ್ ಹೋಮ್‌ಸ್ಟೇ ನಿರ್ವಾಹಕರಾದ ಎಕ್ತಾ ಕಪೂರ್‌ರ ಪ್ರಕಾರ, ಶೇ. ೨೫ರಷ್ಟು ಹೋಮ್‌ಸ್ಟೇಗಳು ಮಾತ್ರ ನೊಂದಣಿಯಾಗಿ ಕೆಲಸಮಾಡುತ್ತಿವೆ.
ಕೇರಳ, ಹಿಮಾಚಲ ಪ್ರದೇಶ, ರಾಜಾಸ್ತಾನಗಳಲ್ಲಿ ಉದ್ಯಮ ಪ್ರಗತಿಯಲ್ಲಿದೆ. ಲಡಾಖ್‌ನಂತ ಪ್ರದೇಶದಲ್ಲಿ ಬದುಕು ಸಂಕಷ್ಟದಲ್ಲಿದೆ ಎನ್ನುವ ಮಾತು ಹಳೆಯದಾಗಿದೆ. ಈಗ ಅಲ್ಲಿ ಪ್ರತಿ ಮನೆಯೂ ಹೋಮ್ ಸ್ಟೇಗಳಾಗಿ ಬದಲಾಗುವ ಅದೃಷ್ಟ ಪಡೆದಿವೆ. ಅಂತೆಯೇ ರಾಜ್ಯದ ಮೈಸೂರು, ಕೊಡಗು, ಮಲೆನಾಡು ಭಾಗಗಳಲ್ಲಿ ಅಲ್ಲಿಯ ಸಂಸ್ಕೃತಿ, ಬಾಣಸಿಗತನವನ್ನು ಪ್ರದರ್ಶಿಸುವ ವಸತಿ ವ್ಯವಹಾರ ಚುರುಕುಗೊಳ್ಳುತ್ತಿದೆ. ಇಲ್ಲಿ ಬಹುಪಾಲು ಗ್ರಾಹಕರು ದೇಶದೊಳಗಿನವರೇ ವಿನಃ ವಿದೇಶಿಯರಲ್ಲ.


ಬಂಡವಾಳಶಾಹಿಗಳಿಗೆ ಆಕರ್ಷಣೆ 
ಈ ಉದ್ಯಮದೊಳಗಿನ ದುಡಿಯುವ ಶಕ್ತಿ ಈಗಾಗಲೇ ಬಂಡವಾಳಶಾಹಿಗಳನ್ನು ಸೆಳೆದಿದೆ. ಹಲವು ಆತಿಥೇಯರನ್ನು ಒಂದು ವ್ಯವಸ್ಥೆಯೊಳಗೆ ತಂದು ಅಂತರ್ಜಾಲ ತಂತ್ರಜ್ಞಾನದ ಮೂಲಕ ವಹಿವಾಟು ನಡೆಸುತ್ತಿವೆ. ವಿಲೇಜ್ ವೇಸ್, ಭಾರತ್ ಹೋಮ್ ಸ್ಟೇ ಪೋರ್ಟಲ್, ಕಂಫರ್ಟ್ ಮೊದಲಾದ ಸಂಸ್ಥೆಗಳು ದೇಶದ ಹಲವು ಭಾಗದ ಸಣ್ಣಪುಟ್ಟ ವಸತಿಗಳು, ಹೋಮ್‌ಸ್ಟೇ ವ್ಯವಸ್ಥೆಗಳನ್ನು ತಮ್ಮಲ್ಲಿ ನೊಂದಣಿ ಮಾಡಿಸಿಕೊಂಡು ವಹಿವಾಟು ನಡೆಸುತ್ತಿವೆ. 
ಇಂತಹ ಅಂಕಿಅಂಶಗಳನ್ನು ಸೈಬರ್ ಮೀಡಿಯಾ ಕ್ರೋಢೀಕರಣ ಮಾಡಿದೆ. ದೇಶದ ಒಂದು ಏಜೆನ್ಸಿಯಲ್ಲಿ ೧೫೦ ಕೊಠಡಿಗಳು ಲಭ್ಯವಿದ್ದು, ವಾರ್ಷಿಕ ಶೇ.೫೦ರಷ್ಟು ತುಂಬಿರುತ್ತದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ೭೫ ಕೊಠಡಿಗಳಲ್ಲಿ ವರ್ಷಪೂರ್ತಿ ವಸತಿಯಿರುತ್ತದೆ. ಇದರಿಂದ ಆತಿಥೇಯರಿಗೆ ೧೦.೧ ಕೋಟಿ ರೂ. ಆದಾಯ ಸಿಕ್ಕಿದ್ದರೆ ಏಜೆನ್ಸಿಗೆ ೨.೫ ಕೋಟಿ ರೂ. ಬಂದಿದೆ. ಇನ್ನೊಂದು ಸಂಸ್ಥೆಯ ಲಭ್ಯ ೪೫೦ ಕೊಠಡಿಗಳು ಕೂಡ ಶೇ.೫೦ರ ಬೇಡಿಕೆ ಪಡೆದಿದ್ದು ವಾರ್ಷಿಕ ೩೮ ಕೋಟಿ ವಹಿವಾಟು ನಡೆಸುತ್ತಿದೆ. ಪ್ರತಿ ವರ್ಷ ಶೇ.೫ರ ಬೆಳವಣಿಗೆ ಕಾಣುತ್ತಿರುವ ಈ ಉದ್ಯಮ ಅಗಾಧ ಸಾಧ್ಯತೆಗಳಿಗೆ ತೆರೆದುಕೊಂಡಿದೆ.
ರಾಜ್ಯದಲ್ಲಿ ೨೦೦೫ರ ವೇಳೆಯಲ್ಲಿ ೭೦೦ ಹೋಮ್‌ಸ್ಟೇಗಳಿದ್ದವು ಎಂಬುದು ಒಂದು ಅಂದಾಜು. ಗೋಕರ್ಣದಂತಲ್ಲಿ ಅಲ್ಲಿನ ಭಟ್ಟರ ಮನೆಯಲ್ಲಿ ಪಾವತಿ ಮಾಡಿ ತಂಗುತ್ತಿದ್ದ ಭಕ್ತಾದಿಗಳ ಪರಂಪರೆಯನ್ನು ಕೂಡ ಈ ಯಾದಿಗೆ ಸೇರಿಸಬಹುದು! ಭಾರತದಲ್ಲಿ ಆಂತರಿಕ ಪ್ರವಾಸಿಗರ ಸಂಖ್ಯೆ ಶೇ.೧೭ರಷ್ಟು ವೃದ್ಧಿಸಿರುವುದು ಹಿತಾಸಕ್ತರಿಗೆ ಖುಷಿ ಕೊಡುವ ವಿಚಾರ.


ಬಾಹ್ಯ ಬಂಡವಾಳ, ಸ್ಥಳೀಯ ಆತಿಥ್ಯ!
ವಿಲೇಜ್ ವೇಸ್ ಎಂಬ ಸಂಸ್ಥೆ ಗ್ರಾಮೀಣ ಭಾಗದಲ್ಲಿ ಹಣ ತೊಡಗಿಸಿ ಹೋಮ್ ಸ್ಟೇ ಉದ್ಯಮಕ್ಕೆ ಚಾಲನೆ ಕೊಡುವ ಮಾದರಿಯೊಂದನ್ನು ಅನುಸರಿಸುತ್ತಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಈ ಸಂಸ್ಥೆಯನ್ನು ಭಾರತ ಹಾಗೂ ಇಂಗ್ಲೆಂಡ್‌ನ ಪ್ರವಾಸಿ ತಜ್ಞರು ಸೇರಿ ಹಳ್ಳಿಗರ ಸಂಘಟನೆಗಳ ಸಹಕಾರದಿಂದ ಪ್ರವಾಸೋದ್ಯಮ ಅಭಿವೃದ್ಧಿಗೋಸ್ಕರ  ಹುಟ್ಟು ಹಾಕಿದ್ದಾರೆ. ಶಿರಸಿಯ ಹೂಳಗೋಳದಲ್ಲಿ ಸೌಹಾರ್ದ ಸಹಕಾರಿ ಎಂಬ ಸ್ಥಳೀಯ ವ್ಯವಸ್ಥೆಯಡಿ ೧೨ ಲಕ್ಷ ರೂ. ವೆಚ್ಚದಲ್ಲಿ ಹೋಮ್ ಸ್ಟೇ ಗೃಹ ನಿರ್ಮಿಸಿದೆ. ವಿದೇಶಿ ಪ್ರವಾಸಿಗರಿಂದ ದಿನವೊಂದಕ್ಕೆ ಲಭಿಸುವ ೮೦ ಡಾಲರ್‌ನಲ್ಲಿ ಸ್ಥಳೀಯ ನಿರ್ವಾಹಕರಿಗೆ ಕೂಡ ಶೇ.೨೫ಕ್ಕಿಂತ ಹೆಚ್ಚಿನ ಹಣ ಲಭಿಸುತ್ತದೆ ಮತ್ತು ನಿರ್ದಿಷ್ಟ ವರ್ಷಗಳ ನಂತರ ಆ ನಿರ್ಮಾಣ ಸ್ಥಳೀಯರ ಸುಪರ್ದಿಗೆ ಬರುವ ಯೋಜನೆಯಂತಹ ದೃಷ್ಟಾಂತ ಪ್ರವಾಸೋದ್ಯಮಕ್ಕೆ ಹೊಸ ನೆಲೆಗಟ್ಟನ್ನು ಒದಗಿಸಬಹುದು.
ಭಾರತ ಹಳ್ಳಿಗಳ ದೇಶ, ಪ್ರಕೃತಿ ಸಂಪತ್ತಿನ ನೆಲೆ ಎನ್ನುವುದನ್ನು ಪ್ರವಾಸೋದ್ಯಮದ ಮೂಲ ಆಧಾರವಾಗಿ ಬಳಸಬಹುದು ಎಂಬುದನ್ನು ಹೋಮ್ ಸ್ಟೇ ಮತ್ತೆ ಮತ್ತೆ ಹೇಳುತ್ತಿದೆ. ಕೃಷಿ ಬದುಕಿನ ಡೋಲಾಯಮಾನ ಆರ್ಥಿಕ ಸ್ಥಿತಿಗತಿಗೆ ಇದು ಸ್ವಲ್ಪಮಟ್ಟಿಗಾದರೂ ಉತ್ತರವಾಗಬಲ್ಲದು. ಸರ್ಕಾರ ಕೂಡ ಇದಕ್ಕೆ ಪೂರಕವಾದ ಕಾನೂನುಗಳನ್ನು ರಚಿಸುವ ಅಗತ್ಯವಿದೆ.
ಚೈನಾ, ಥೈಲ್ಯಾಂಡ್, ವಿಯೆಟ್ನಾಂ ಮೊದಲಾದ ದೇಶಗಳಲ್ಲಿ ಹೋಮ್ ಸ್ಟೇ ವ್ಯಾಪಾರ ಶೇ. ೧೪ರ ವೇಗದಲ್ಲಿ ಚಿಮ್ಮುತ್ತಿದೆ. ೨೦೧೫ರ ವೇಳೆಗೆ ಪ್ರತಿ ವರ್ಷ ಭಾರತೀಯರು ಇಂತಹ ಪ್ರವಾಸಗಳಿಗೆ ಇನ್ನೂ ೧.೨ ಮಿಲಿಯನ್ ಡಾಲರ್ ಹಣ ತೊಡಗಿಸುವ ಅಂದಾಜು ಮಾಡಲಾಗುತ್ತಿದೆಯೇ ವಿನಃ ಭಾರತೀಯ ಪ್ರವಾಸೋದ್ಯಮದ ವಿಸ್ತರಣೆಯ ಬಗ್ಗೆ ಗಂಭೀರ ಚಿಂತನೆ ನಡೆದಿಲ್ಲ, ದುರಂತ!!


-ಮಾವೆಂಸ

ಗುರುವಾರ, ಮಾರ್ಚ್ 17, 2011

ಸಾಗರದ ಸುದ್ದಿ ದಿನಂಪ್ರತಿ ಓದಿ, ಸುವರ್ಣಪ್ರಭ ವೆಬ್ ರೂಪದಲ್ಲಿ.....ಬದುಕಿನ ಸಾಧನೆಗೆಂದು ಹಾಗೂ ತುತ್ತು ಚೀಲದ ಸಂಪಾದನೆಗೆಂದು ಸಾಗರದ ಹಲವು ಸಾವಿರ ಮಂದಿ ಜಿಲ್ಲೆಯ ಹೊರಗೆ, ಬೆಂಗಳೂರಿನಲ್ಲಿ, ಅಷ್ಟೇಕೆ ವಿದೇಶಗಳಲ್ಲಿ ನೆಲಸಿದ್ದಾರೆ. ಇವರಿಗೆ ಸಾಗರ ತಾಲೂಕಿನ ದಿನದಿನದ ಸುದ್ದಿಗಳು ಲಭ್ಯವಾಗುವುದೇ ಇಲ್ಲ. ಉದಯವಾಣಿ ಪತ್ರಿಕೆ ತನ್ನ ಇ ಪತ್ರಿಕೆಯಲ್ಲಿ ಲೋಕಲ್ ಎಡಿಷನ್ ಪುಟಗಳನ್ನೂ ಅಪ್‌ಲೋಡ್ ಮಾಡುವುದರಿಂದ ಸ್ವಲ್ಪ ಮಾಹಿತಿ ಲಭ್ಯವಾಗುವ ಸಮಾಧಾನ. ಉಳಿದೆಲ್ಲ ಪತ್ರಿಕೆಗಳು ಸ್ಥಳೀಯ ಆವೃತ್ತಿಗಳನ್ನು ಅಂತರ್ಜಾಲಕ್ಕೆ ಏರಿಸದಿರುವುದರಿಂದ ಸಾಗರದ ಸರಿಸುಮಾರು ಪ್ರಮುಖ ಸುದ್ದಿಯೂ ಸಾಗರಿಕರಿಗೆ ತಿಳಿಯುವುದೇ ಇಲ್ಲ.
ಅಂತವರಿಗೆ ಒಂದು ಪರಿಹಾರ ಲಭಿಸಿದೆ. ಸಾಗರದ ಹಿತಕರ ಜೈನ್ ಸಂಪಾದಕತ್ವದ ಸುವರ್ಣಪ್ರಭ ದೈನಿಕ ಇದೀಗ ತನ್ನ ಪಿಡಿಎಫ್ ರೂಪವನ್ನು ಬ್ಲಾಗ್‌ಸ್ಪಾಟ್ ವೆಬ್‌ನಲ್ಲಿ ಪ್ರತಿ ದಿನ ಪ್ರಕಾಶಿಸುತ್ತಿರುವುದರಿಂದ ಸಾಗರದ ಅಷ್ಟೂ ಸುದ್ದಿಗಳನ್ನು ಓದಿ ಸಾಗರದ ಹೊರಗಿನ ಸಾಗರಿಕರು ಅಪ್‌ಡೇಟ್ ಆಗಬಹುದು. ಒನ್ ಮ್ಯಾನ್ ಆರ್ಮಿಯಾಗಿರುವ ಹಿತಕರ್‌ರ ಪ್ರಯತ್ನಕ್ಕೆ ನೀವು ಕೂಡ ಬೆಂಬಲ ನೀಡಿ.
ಸ್ವಾರಸ್ಯವೆಂದರೆ, ಸಾಗರದ ಜನರು ಓದುವ ಮುನ್ನವೇ ನೆಟ್ಟಿಗರು ಸುದ್ದಿ ಓದಿಬಿಡುವ ಸಾಧ್ಯತೆಯಿದೆ! ಅಂತರ್ಜಾಲವೆಂದರೆ ವೇಗ ತಾನೆ? ಹಿತಕರ್ ಜೈನ್‌ಗೆ ಅಭಿನಂದನೆಗಳು......

ಶುಕ್ರವಾರ, ಫೆಬ್ರವರಿ 25, 2011

ಮಾಲ್‌ಗಳ ಪ್ರವಾಹಕ್ಕೆ ಕಿರಾಣಿ ಅಂಗಡಿ ಬಲಿ?
ಕ್ಷಣಕ್ಕೆ ಶೀರ್ಷಿಕೆಯ ಹೇಳಿಕೆ ತುಸು ಆತಿರಂಜಿತ ಎನ್ನಿಸಬಹುದು. ಇದು ಯಾರ ಕುರಿತಾದ ದೂರೂ ಅಲ್ಲ. ಆದರೆ ಬರಲಿರುವ ದಿನಗಳಲ್ಲಿ ಸಣ್ಣ ಪುಟ್ಟ ಅಂಗಡಿಗಳು ಮಾಲ್, ಫೋರಂಗಳ ಆರ್ಭಟಕ್ಕೆ ಸೋಲುವ ಲಕ್ಷಣಗಳನ್ನು ಕಣ್ಣಮುಂದಿರುವ ಅಂಕಿಅಂಶಗಳು ಸ್ಪಷ್ಟಪಡಿಸುತ್ತವೆ. ಹಾಗೆಂದು ಸುಮ್ಮನೆ ನಿಟ್ಟುಸಿರು ಬಿಡುವುದೂ ಕಷ್ಟ, ಏಕೆಂದರೆ ಇಂದು ಭಾರತದ ಚಿಲ್ಲರೆ ವ್ಯಾಪಾರ ಉದ್ಯಮದ ವಾರ್ಷಿಕ ವಹಿವಾಟು ೩೫೩ ಬಿಲಿಯನ್ ಅಮೆರಿಕನ್ ಡಾಲರ್‌ಗಳು!
ಈ ರೀಟೈಲ್ ಪ್ರಪಂಚದಲ್ಲಿ, ಅದೂ ಭಾರತದಲ್ಲಿ ಅದ್ಭುತ ಅವಕಾಶಗಳಿವೆ ಎಂದು ಎಟಿ ಕಿರ್ಲೆ ಎಂಬ ಸಂಸ್ಥೆಯೊಂದರ ಸಮೀಕ್ಷೆ ತಿಳಿಸಿದೆ. ಪ್ರಗತಿ ಪಥದಲ್ಲಿರುವ ೩೦ ದೇಶಗಳ ಪೈಕಿ, ಬಂಡವಾಳ ಹೂಡಲು ಸೂಕ್ತವಾದ ದೇಶಗಳಲ್ಲಿ ಭಾರತಕ್ಕೆ ಅಗ್ರಸ್ಥಾನ. ಅದೂ ಈ ಐದು ವರ್ಷಗಳಲ್ಲಿ ನಾಲ್ಕು ಬಾರಿ ಈ ಮಾತು ದಾಖಲಾಗಿದೆ. ಅವರ ವರದಿಯ ಅನ್ವಯ, ಭಾರತದ ಚಿಲ್ಲರೆ ವ್ಯಾಪಾರ ಕ್ಷೇತ್ರ ೨೦೧೦ರಲ್ಲಿ ೩೫೩ ಬಿಲಿಯನ್ ಡಾಲರ್ ಇದ್ದದ್ದು ೨೦೧೪ರಲ್ಲಿ ಶೇ.೧೧.೪ ಬೆಳವಣಿಗೆ ಕಂಡು ೫೪೩.೨ ಬಿಲಿಯನ್ ಅಮೆರಿಕನ್ ಡಾಲರ್‌ಗೆ ವೃದ್ಧಿಸುತ್ತದೆ ಎಂದು ಅಂದಾಜಿಸಲಾಗಿದೆ.
ಅಂಕಿಅಂಶಗಳ ಹೊರತಾಗಿ, ಪರಿಸ್ಥಿತಿಯನ್ನು ವ್ಯಾಖ್ಯಾನಿಸಿದರೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗಬಹುದು. ವಿವಿಧ ಉತ್ಪನ್ನಗಳನ್ನು ಒಂದೇ ಕಡೆ ಮಾರಾಟಕ್ಕಿಡುವ ಮಾಲ್ ಸಂಸ್ಕೃತಿಯಲ್ಲಿ ಗ್ರಾಹಕರನ್ನು ಸುಲಭವಾಗಿ ಆಕರ್ಷಿಸಬಹುದು. ಅತ್ಯುತ್ತಮ ವಾತಾವರಣ, ಗರಿಷ್ಟ ಆಯ್ಕೆಗಳು ಮತ್ತು ಸಂದರ್ಭೋಚಿತ ಕೊಡುಗೆ, ರಿಯಾಯಿತಿಗಳು ಜನರನ್ನು ಸೆಳೆಯಬಲ್ಲವು. ಮೊದಲೆಲ್ಲ ತಿಂಗಳ ಸಾಮಾನುಗಳನ್ನು ಕಿರಾಣಿ ಅಂಗಡಿಗಳಲ್ಲಿ ಕಟ್ಟಿ ಇಡಲು ಹೇಳುತ್ತಿದ್ದ ಬಳಕೆದಾರ ಈಗ ನೇರವಾಗಿ ‘ಬಿಗ್‌ಬಜಾರ್’ಗಳಿಗೆ ಎಡತಾಕುತ್ತಾನೆ. ಖರೀದಿಯ ಮೇಲೆ ಹೆಚ್ಚುವರಿ ಲಾಭ ಗಳಿಸುತ್ತಾನೆ.
ಇನ್ನೊಂದೆಡೆ, ಚಿಲ್ಲರೆ ವ್ಯಾಪಾರಿಗಳು ಬಾಗಿಲು ಮುಚ್ಚುವ ಅನಿವಾರ್ಯ ಸ್ಥಿತಿ ಒದಗದಿರದು. ತಿಮಿಂಗಿಲಗಳ ಎದುರು ಮೀನು ಏನು ಮಾಡೀತು? ಇದರಿಂದ ದೇಶದ ಒಂದು ದೊಡ್ಡ ವರ್ಗ ನಿರುದ್ಯೋಗದತ್ತ ಚಲಿಸುವ ಅಪಾಯವೂ ಇದೆ. ಮುಂಬೈನ ರೀಟೈಲ್ಸ್ ಗ್ರೈನ್ ಡೀಲರ‍್ಸ್ ಸಹಕಾರ ಸಂಘದಲ್ಲಿಯೇ ೯೨೦೦ ಸದಸ್ಯರಿದ್ದಾರೆ ಎಂದರೆ ಚಿಲ್ಲರೆ ವ್ಯಾಪಾರಿಗಳ ಸಂಖ್ಯೆಯ ಅಗಾಧತೆ ಮನವರಿಕೆಯಾದೀತು.
ಪ್ರಸ್ತುತ ಮೆಟ್ರೋಗಳಲ್ಲಿ, ದೊಡ್ಡ ನಗರಗಳಲ್ಲಿ ಮಾತ್ರ ಮಾಲ್, ಫೋರಂಗಳಿವೆ ಎಂದು ಅಲಕ್ಷಿಸುವಂತಿಲ್ಲ. ತಾಲೂಕು ಮಟ್ಟಕ್ಕೂ ಈಗ ಯುನಿವರ್‌ಸೆಲ್, ಸಂಗೀತಾ, ಹರ್ಷಗಳಂತ ಎಲೆಕ್ಟ್ರಾನಿಕ್ ಉಪಕರಣಗಳ ಸಂಕೀರ್ಣಗಳು ಬಂದಿಳಿದಿವೆ. ಇದು ಆರಂಭ. ಉಳಿದ ಚಿಲ್ಲರೆ ವ್ಯಾಪಾರಕ್ಕೂ ಕಂಪನಿಗಳು ಇಳಿಯುವುದರೊಂದಿಗೆ ಚಿಲ್ಲರೆ ಅಂಗಡಿಗಳ ಅಸ್ಥಿತ್ವಕ್ಕೆ ಕೊಡಲಿ ಪೆಟ್ಟು ಮುಂದುವರಿಯಲಿದೆ.
ಮತ್ತೆ ಅಂಖಿಅಂಶಗಳಿಗೆ ಮರಳೋಣ. ನೈಟ್ ಫ್ರಾಂಕ್ ಇಂಡಿಯಾ ಸಂಸ್ಥೆಯ ಸಮೀಕ್ಷೆಯ ಪ್ರಕಾರ, ೨೦೧೦-೧೨ರೊಳಗೆ ಮುಂಬೈ, ಬೆಂಗಳೂರು, ಕೊಲ್ಕತ್ತಾ, ಚೆನ್ನೈ, ಹೈದರಾಬಾದ್, ಪುಣೆಗಳಲ್ಲಿ ೫೫ ಮಿಲಿಯನ್ ಚದರ ಅಡಿಯ ಜಾಗ ಮಾಲ್ ಮಾಲಿಕರಿಗೆ ಬೇಕಾಗಿದೆ. ಈಗಾಗಲೆ ಅವರಲ್ಲಿರುವ ಜಾಗದ ಸ್ವಾಧೀನ ೪೧ ಮಿಲಿಯನ್ ಚದರ ಅಡಿ. ಬರಲಿರುವ ದಿನಗಳಲ್ಲಿ ಅವರು ಇದನ್ನು ೯೫ ಮಿಲಿಯನ್‌ಗೆ ವಿಸ್ತರಿಸುವುದು ಖಚಿತ.
ಇಷ್ಟಕ್ಕೆಲ್ಲ ಕಾರಣ ಕ್ಷೇತ್ರದ ಅಗಾಧ ಅವಕಾಶ. ಇವತ್ತು ಮಾಲ್‌ಗಳು ಶೇ.೫ರ ಬೆಳವಣಿಗೆಯನ್ನಷ್ಟೇ ವಾರ್ಷಿಕವಾಗಿ ಕಾಣುತ್ತಿವೆ. ಇದನ್ನು ೩೦ಕ್ಕೇರಿಸುವ ಮಹತ್ವಾಕಾಂಕ್ಷೆ ಬೃಹತ್ ಸಂಸ್ಥೆಗಳದ್ದು. ವಾಲ್ ಮಾರ್ಟ್, ಕೇರ್ ಫಾರ್, ಮಾರ್ಕ್ಸ್ ಎಂಡ್ ಸ್ಟನ್ನರ್, ಆದಿತ್ಯ ಬಿರ್ಲಾ ಗ್ರೂಪ್‌ನ ಮೋರ್, ಕೆ.ರಹೆಜಾ ಗುಂಪಿನ ಶಾಪರ‍್ಸ್ ಸ್ಟಾಪ್, ಈಗಾಗಲೆ ೫೯ ಸ್ಟೋರ್‌ಗಳನ್ನು ಹೊಂದಿರುವ ಭಾರ್ತಿ ರೀಟೇಲ್, ರಿಲೆಯನ್ಸ್, ಬಿಗ್‌ಬಜಾರ್.... ಚಿಲ್ಲರೆ ವ್ಯಾಪಾರ ಕ್ಷೇತ್ರವನ್ನು ಯಾರೂ ‘ಚಿಲ್ಲರೆ’ಯಾಗಿ ನೋಡುತ್ತಲೇ ಇಲ್ಲ!
ಕಳೆದ ೧೦ ವರ್ಷಗಳಲ್ಲಿ ಈ ವಲಯದಲ್ಲಿ ೧೯೪.೬೯ ಮಿಲಿಯನ್ ಡಾಲರ್‌ಗಳ ನೇರ ವಿದೇಶಿ ಬಂಡವಾಳವನ್ನು ಹೂಡಲಾಗಿದೆ. ಇದು ಭಾರತದ ಮಾರುಕಟ್ಟೆ ಲೆಕ್ಕದಲ್ಲಿ ಏನೇನೂ ಅಲ್ಲ. ೩೫೩ ಬಿಲಿಯನ್‌ನಲ್ಲಿ, ೨೦೧೦ರಲ್ಲಿ ಮಾಲ್‌ಗಳ ಪಾಲು ೧೫.೨೯ ಬಿಲಿಯನ್ ಮಾತ್ರ. ಇದನ್ನು ೨೦೧೪ರ ವೇಳೆಗೆ ಶೇ.೧೫೪ರಷ್ಟು ಬೆಳೆಸುವ ಗುರಿಯನ್ನು ಬೃಹತ್ ಕಂಪನಿಗಳು ಹೊಂದಿವೆ. ಸತ್ಯದ ಮಾತೆಂದರೆ, ೨೦೧೪ರ ದಿನಗಳಲ್ಲಿ ಈ ಸೀಮೆ ಮೀರಿ ಮಾಲ್‌ಗಳು ಮೇಲುಗೈ ಸಾಧಿಸಿದರೆ ಅಚ್ಚರಿಯಿಲ್ಲ.
ಅರೆ, ಏನೇ ಮಾಡಿದರೂ ಚಿಲ್ಲರೆ ವ್ಯಾಪಾರಿಗಳಿಗೆ ಧಕ್ಕೆಯಿಲ್ಲ. ತಕ್ಷಣಕ್ಕೆ ಬೇಕಾಗುವ ಯಾವುದೇ ಪದಾರ್ಥಕ್ಕೆ ಗ್ರಾಹಕ ಮನೆ ಪಕ್ಕದ ದಿನಸಿ ಅಂಗಡಿಯನ್ನೇ ನೆಚ್ಚಿಕೊಳ್ಳಬೇಕಲ್ಲ? ತಿಂಗಳ ಸಾಲ ಕೊಡುವ ಸೌಲಭ್ಯ, ಖರೀದಿಸಿದ ಮಾಲು ಬದಲಿಸಿಕೊಡುವ ವ್ಯವಸ್ಥೆ, ಮನೆಗೇ ಬೇಡಿಕೆಗಳನ್ನು ತಲುಪಿಸುವ ಸೇವೆಗಳಿಂದಾಗಿ ಕಿರಾಣಿ ಅಂಗಡಿಗಳನ್ನು ನಾಶಪಡಿಸುವ ಸಾಧ್ಯತೆ ಇಲ್ಲವೇ ಇಲ್ಲ ಎಂಬ ವಾದವೂ ಕೇಳಿಬರುತ್ತಿದೆ. ದೇಶ-ವಿದೇಶಗಳ ಮಾಲ್‌ಗಳು, ಮಾರ್ಟ್‌ಗಳ ಮೂಲಕ ದೊಡ್ಡ ಉದ್ಯಮಿಗಳು ವಹಿವಾಟನ್ನು ನಿಯಂತ್ರಿಸತೊಡಗಿದಾಗ ದೇಶದ ಸಾಮಾಜಿಕ ವ್ಯವಸ್ಥೆಗೆ ಧಕ್ಕೆ ಬರುವ ಅಪಾಯ ಇಂದಲ್ಲದಿದ್ದರೂ ನಾಳೆ ಎದುರಾಗಲಿದೆ.
ಮುಂಜಾಗ್ರತೆ ಬೇಡವೇ??

  • ಬರಲಿದೆ ಜಗಮಗಿಸುವ ಕಿರಾಣಿ ಅಂಗಡಿ!
  • ಪ್ರಮುಖ ವಾಚ್ ತಯಾರಕರಾದ ಟೈಟಾನ್, ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ವಾಚ್ ಶೋರೂಂಗಳನ್ನು ತೆರೆಯಲೇ ೨೧.೮೩ ಮಿಲಿಯನ್ ಡಾಲರ್ ವ್ಯಯಿಸಲಿದೆ. ಸಂಭಾವ್ಯ ೫೦ ಸ್ಟೋರ್‌ಗಳಿಂದ ನಿರೀಕ್ಷಿತ ಗುರಿ ವಾರ್ಷಿಕ ೮೭.೩೧ ಮಿಲಿಯನ್ ಡಾಲರ್. ಮುಂಬೈ, ಡೆಲ್ಲಿ, ಹೈದರಾಬಾದ್, ಕೊಲ್ಲತ್ತಾ, ಚೆನ್ನೈ, ಪುಣೆ, ಅಹ್ಮದಾಬಾದ್ ಮೊದಲಾದೆಡೆ ಮುಂದಿನ ೧೨ ತಿಂಗಳಿನಲ್ಲಿಯೇ ಸ್ಟೋರ್‌ಗಳು ಕಾರ್ಯಾರಂಭ ಮಾಡುತ್ತವೆ ಎಂದು ಕಂಪನಿಯ ಮಾರಾಟ ಉಪಾಧ್ಯಕ್ಷ ಅಜೋಯ್ ಚಾವ್ಲಾ ಪ್ರಕಟಿಸಿದ್ದಾರೆ.
  • ಬ್ರಿಟನ್‌ನ ಎಂ & ಎಸ್ ಕಂಪನಿ ಮುಂದಿನ ಮೂರು ವರ್ಷಗಳಲ್ಲಿ ೫೦ ಹೊಸ ಸ್ಟೋರ್‌ಗಳನ್ನು ಆರಂಭಿಸಲಿದೆಯಂತೆ. ಈಗಾಗಲೆ ಅದು ರಿಲಯನ್ಸ್ ರೀಟೈಲ್ ಜೊತೆ ಸೇರಿ ೧೭ ಸ್ಟೋರ‍್ಸ್ ನಡೆಸುತ್ತಿದೆ.
  • ಚೈನಾದ ಯಿಶಿಯಾನ್ ೨೦೧೨ರ ಹೊತ್ತಿಗೆ ೧೨೫ ಕೇಂದ್ರಗಳನ್ನು ತೆರೆಯಲಿಕ್ಕಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಇದರ ಮೊದಲ ಕೇಂದ್ರ ನವದೆಹಲಿಯಲ್ಲಿ ಪ್ರಾರಂಭವಾಗಿದೆ.
  • ಯುರೋಪ್‌ನಲ್ಲಿಯೇ ಉಡುಪು ಚಿಲ್ಲರೆ ಮಾರಾಟದಲ್ಲಿ ದೊಡ್ಡ ಹೆಸರು ಮಾಡಿರುವ ಸ್ಪೈನ್‌ನ ಇಂಡಿಟೆಕ್ಸ್ ಕಳೆದ ಜೂನ್‌ನಲ್ಲಿ ತನ್ನ ಪ್ರಥಮ ಔಟ್‌ಲೆಟ್‌ನ್ನು ಭಾರತದಲ್ಲಿ ಆರಂಭಿಸಿದೆ. ಈ ವರ್ಷ ಇವರ ೫ ಜರಾ ಔಟ್‌ಲೆಟ್ ಕಣಕ್ಕಿಳಿಯಲಿವೆ.
  • ಭಾರ್ತಿ ರೀಟೈಲ್ ತನ್ನ ಈಸಿ ಡೇ ಸ್ಟೋರ‍್ಸ್ ಬೆಳೆಸಲು ೨.೫ ಬಿಲಿಯನ್‌ನನ್ನು ಮುಂದಿನ ೫ ವರ್ಷದಲ್ಲಿ ತೊಡಗಿಸಿ ೧೦ ಮಿಲಿಯನ್ ಚ.ಅಡಿ ವ್ಯಾಪಾರದ ಜಾಗವನ್ನು ವಶಪಡಿಸಿಕೊಳ್ಳಲಿದೆ.
  • ರೈಮಂಡ್ ವೈಲ್ ೨೦೧೦ರಲ್ಲಿ ಹೂಡಿರುವ ಬಂಡವಾಳ ೮೮೩,೬೬೫ ಅಮೆರಿಕನ್ ಡಾಲರ್.

-ಮಾವೆಂಸ

ಭಾನುವಾರ, ಫೆಬ್ರವರಿ 20, 2011

ವಿಶ್ವಕಪ್ ೨೦೧೧; ಝಣಝಣ ಕಾಂಚಾಣ!!

ಸ್ವಾರಸ್ಯವೆಂದರೆ, ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಲು ವೈಯುಕ್ತಿಕವಾಗಿಯೇ ವಿಶ್ವಕಪ್‌ನ ಪ್ರಶಸ್ತಿ ವಿಜೇತ ತಂಡಕ್ಕಿಂತ ಹೆಚ್ಚು ಗಳಿಸುವ ಆಟಗಾರರಿದ್ದಾರೆ! ವಿಜೇತರ ೧೩.೫ ಕೋಟಿ ಚೆಕ್ ಐಪಿಎಲ್‌ನಲ್ಲಿ ಯಾವ ಲೆಕ್ಕ? ವಿಶ್ವಕಪ್‌ನಲ್ಲಿ ಪ್ರಥಮ ಬರುವ ತಂಡಕ್ಕೆ ಸಿಗುವುದು ಮೂರು ಮಿಲಿಯನ್ ಡಾಲರ್. ಅದೇ ಐಪಿಎಲ್‌ನಲ್ಲಿ ದೆಹಲಿಯ ಗೌತಮ್ ಗಂಭೀರ್ ಹರಾಜಾಗಿರುವುದು ೨.೪ ಮಿಲಿಯನ್ ಡಾಲರ್‌ಗೆ! ಯೂಸುಫ್ ಪಠಾಣ್‌ಗೆ ಹಾಗೂ ರಾಬಿನ್ ಉತ್ತಪ್ಪರಿಗೆ ಸಿಗುವುದು ೨.೧ ಮಿಲಿಯನ್ ಡಾಲರ್. ಯುವರಾಜ್ ಸಿಂಗ್‌ಗೆ ೧.೮ ಮಿ.ಡಾಲರ್. ಇನ್ನು ಐಪಿಎಲ್ ತಂಡಗಳ ಐಕಾನ್ ಆಟಗಾರರಿಗೆ ಬರೋಬ್ಬರಿ ಎರಡು ಮಿಲಿಯನ್ ಡಾಲರ್ ಖಚಿತ. ಈ ಹಂತದಲ್ಲಿ ಇಡೀ ಒಂದು ತಂಡ ವಿಶ್ವಕಪ್‌ನ ಫೈನಲ್‌ವರೆಗೆ ಸೆಣಸಿ ಬಂದರೆ ಸಿಗುವುದು ಕೇವಲ ೧.೫ ಮಿಲಿಯನ್ ಡಾಲರ್! ಇದಲ್ಲವೇ ವ್ಯಂಗ್ಯ?ಕ್ರಿಕೆಟ್ ನೇರಪ್ರಸಾರ, ಮೈದಾನದಲ್ಲಿ ಇದ್ದಕ್ಕಿದ್ದಂತೆ ಬಾಂಬ್ ಸಿಡಿದು ಭೂಮಿ ಬಿರಿದ ದೃಶ್ಯ. ಹಿಂದಿನಿಂದ ಮೂಡುವುದು ಯಾವುದೋ ಒಂದು ಜಾಹೀರಾತು. ಈ ಪುಟ್ಟ ಜಾಣ್ಮೆಗೆ ಲಕ್ಷಗಳ ಬೆಲೆ. ನಾಳೆ ಬೆಳಗಾದರೆ ಆರಂಭವಾಗಲಿರುವ (ಫೆ.೧೯ರಿಂದ) ವಿಶ್ವಕಪ್ ಏಕದಿನ ಕ್ರಿಕೆಟ್‌ನ ಕ್ರಿಕೆಟ್ ಪ್ರಸಾರದ ಟೈಮ್‌ಸ್ಪಾಟ್ ೧೦ ಸೆಕೆಂಡ್‌ಗೆ ೨೫ ಲಕ್ಷ ರೂ.ವರೆಗೆ ಬಿಕರಿಯಾಗಲಿದೆ ಎನ್ನಲಾಗಿದೆ. ಅದು ಬಿಡಿ, ಮೊನ್ನೆ ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಿಂದ ಭಾರತ ಇಂಗ್ಲೆಂಡ್ ನಡುವಣ ಪಂದ್ಯ ಬೆಂಗಳೂರಿಗೆ ಸ್ಥಳಾಂತರಗೊಂಡಿತಲ್ಲ, ಆಗ ಅಲ್ಲಿನ ಕ್ರಿಕೆಟ್ ಸಂಸ್ಥೆ ಹುಯಿಲೆಬ್ಬಿಸಿದ್ದು ಕೇವಲ ಆತ್ಮಗೌರವಕ್ಕೆ ಮುಕ್ಕಾಯಿತೆಂದಲ್ಲ. ಈ ಪಂದ್ಯ ಕಳೆದುಕೊಂಡಿದ್ದಕ್ಕೆ ಕೊಲ್ಕತ್ತಾ ಕ್ರಿಕೆಟ್ ಮಂಡಳಿ ಏಮಾರುವಂತಾದದ್ದು ನಿಕ್ಕಿ ೯೦ ಕೋಟಿಯ ಇಡಿಗಂಟನ್ನು!
ಇಂದು ಕ್ರಿಕೆಟ್ ಏಕದಿನ ವಿಶ್ವಕಪ್ ಸಮರ ಕೇವಲ ಬ್ಯಾಟು ಬಾಲುಗಳ ಆಟವಾಗಿ ಉಳಿದಿಲ್ಲ. ಆದರೆ ಕ್ರಿಕೆಟ್ ಅಭಿಮಾನಿಗಳಿಗೆ ಈಗಲೂ ಭಾರತದ ಪಂದ್ಯದ ಹೊರತಾದ ವಿವರಗಳತ್ತ ಆಸಕ್ತಿ ಕಡಿಮೆ. ಫೆ. ೧೯ರ ಬಾಂಗ್ಲಾ ವಿರುದ್ಧದ ಪಂದ್ಯ, ೨೭ರ ಇಂಗ್ಲೆಂಡ್ ಎದುರಿನ ಪೈಪೋಟಿ, ಹಾಗೆಯೇ ಮಾರ್ಚ್ ೬, ೯, ೧೨, ೨೦ರಂದು ಅನುಕ್ರಮವಾಗಿ ನಡೆಯಲಿರುವ ಐರ್ಲೆಂಡ್, ನೆದರ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಎದುರಿನ ಹಣಾಹಣಿಗಳಷ್ಟೇ ಅವರಿಗೆ ಲೆಕ್ಕ. ಇದೇ ನಾಣ್ಯದ ಇನ್ನೊಂದು ಮುಖವಾದ ರೊಕ್ಕದ ಆಟಕ್ಕೆ ಅವರ ಈ ಆಸಕ್ತಿಯೇ ಟಾನಿಕ್. ಇದನ್ನು ವ್ಯಾಪಾರಿ ಪ್ರಪಂಚ ನಗದೀಕರಿಸಿಕೊಳ್ಳುತ್ತಿದೆ.
ಈಗಿನ ನಿರೀಕ್ಷೆಗಳಂತೆ ವಿಶ್ವಕಪ್ ಬ್ರಾಂಡಿನಿಂದ ಐಸಿಸಿ ಗಳಿಸಲಿರುವ ಮೊತ್ತ ೧,೨೦೦ ಕೋಟಿ ರೂ. ಇನ್ನೊಂದು ಮಾದರಿಯಲ್ಲಿ ಹೇಳುವುದಾದರೆ ದಿನಕ್ಕೆ ಸರಿಸುಮಾರು ೩೦ ಕೋಟಿ ಗಳಿಸಿದಂತೆ. ನಿಜ, ೨ಜಿ ಸ್ಪೆಕ್ಟ್ರಂ, ಇಸ್ರೋ ಹಗರಣಗಳ ‘ಲಕ್ಷ’ ಕೋಟಿಗಳ ಮೊತ್ತ ನೋಡಿದವರಿಗೆ ಈ ಐಸಿಸಿ ಆದಾಯ ನಗಣ್ಯ ಎನ್ನಿಸಿಬಿಡಬಹುದು. ನೆನಪಿಡಬೇಕಾದುದೆಂದರೆ, ಈ ನಿರೀಕ್ಷಿತ ಮೊತ್ತ ಐಸಿಸಿ ಗಳಿಸಲಿರುವ ಅಂದಾಜಿನ ಕನಿಷ್ಟ ಮೊತ್ತ.
೧,೨೦೦ ಕೋಟಿ ರೂ. ಆದಾಯದ ಹಂಚಿಕೆಯ ಒಂದು ಝಲಕ್ ನಿಮಗಾಗಿ. ೭೦೦ ಕೋಟಿ ರೂ. ಪ್ರಾಯೋಜಕರು ಹಾಗೂ ಟಿವಿ ನೇರಪ್ರಸಾರದ ಹಕ್ಕಿನಿಂದಲೇ ಲಭ್ಯ. ಮೈದಾನದಲ್ಲಿ ಹಾಕಲಾಗುವ ಹೋರ್ಡಿಂಗ್‌ಗಳಿಂದ ೩೦೦ ಕೋಟಿ. ಉಳಿದ ೨೦೦ ಕೋಟಿಯನ್ನು ವಿಶ್ವಕಪ್ ಬ್ರಾಂಡ್ ಬಳಸಿ ಮಾಡುವ ಪ್ರಚಾರ, ವ್ಯಾಪಾರಗಳಿಂದ ಗಿಟ್ಟುತ್ತದೆ.
ಐವಿಎನ್ ಗ್ರೂಪ್ ಈ ಹಕ್ಕು ಖರೀದಿಸಿದೆ. ಇದು ವಿಶ್ವಕಪ್ ನೆನಪಿಗೆ ಕ್ಯಾಪ್, ಶರ್ಟ್, ಕೀ ರಿಂಗ್ ಮೊದಲಾದ ಹತ್ತು ಹಲವು ನೆನಪಿನ ವಸ್ತುಗಳನ್ನು ಮಾರುಕಟ್ಟೆಗೆ ಬಿಡಲಿದೆ. ಇದನ್ನು ಪಂದ್ಯ ನಡೆಯುವ ಸ್ಥಳ, ವಿಮಾನ ನಿಲ್ದಾಣ ಮೊದಲಾದೆಡೆ ಮಾರಲಿದೆ. ಚಿಕ್ಕ ಕೀ ಚೈನ್‌ಗೆ ಕೇವಲ ೫ ಡಾಲರ್ ಬೆಲೆ! ಆನ್‌ಲೈನ್ ಖರೀದಿಗೂ ಲಭ್ಯ. ಜೊತೆಗೆ ಪ್ಲಾನೆಟ್ ಸ್ಪೋರ್ಟ್ಸ್, ಬಿಗ್ ಬಜಾರ್ ತಮ್ಮ ಮಳಿಗೆಗಳಲ್ಲಿ ಈ ವಸ್ತುಗಳನ್ನು ಮಾರುವ ಡೀಲ್ ಕುದುರಿಸಿವೆ. ಬೋನಸ್ ಆಗಿ ಸಚಿನ್ ತೆಂಡೂಲ್ಕರ್‌ರ ಬ್ರಾಂಡ್ ನೇಮ್ ಬಳಸಿಕೊಂಡು ‘ದಿ ಸಚ್’ ಎಂಬ ಹೆಸರಿನಲ್ಲಿ ಟೂತ್‌ಪೇಸ್ಟ್ ಹಾಗೂ ಸಾಬೂನನ್ನು ಈ ವಿಶ್ವಕಪ್ ಅವಧಿಯಲ್ಲಿ ಮಾತ್ರ ಮಾರಾಟ ಮಾಡಲಾಗುವುದು. ಇಂತಹ ಸುವರ್ಣಾವಕಾಶ ಕಳೆದುಕೊಳ್ಳದೆ ಗ್ರಾಹಕ ಮಾಲು ಖರೀದಿಸಿದರೆ ದುಡ್ಡು ಮಾರುಕಟ್ಟೆಯಲ್ಲಿ ಪ್ರವಾಹವಾಗುತ್ತದೆ! ಬಹುಷಃ ವೂವುಜೆಲಾ ವಾದ್ಯ ಅಧಿಕೃತ ಬ್ರಾಂಡ್ ಆಗಿ ಹಾಗೂ ಪ್ರೇಕ್ಷಕರ ಆಯ್ಕೆಯಾಗಿ ವಿಶೇಷವಾಗಿ ಮಾರಾಟವಾಗಬಹುದು.
ಈ ಟೂರ್ನಿಯನ್ನು ಆಯೋಜಿಸುವ ಆತಿಥೇಯರಿಗೆ ಕೇವಲ ಖರ್ಚು ವೆಚ್ಚಗಳು ಸಿಗುತ್ತದೆಯೇ ವಿನಃ ಲಾಭದ ಮೊತ್ತ ಪೂರ್ಣವಾಗಿ ಐಸಿಸಿ ಖಜಾನೆಗೆ ಹರಿದುಹೋಗುತ್ತದೆ. ಟಿವಿ ನೇರಪ್ರಸಾರದ ಹಕ್ಕು ಮಾರಾಟದಿಂದಲೇ ಆದಾಯದ ದೊಡ್ಡ ಮೊತ್ತ ಬಂದಿರುವುದು. ಈ ಬಾರಿ ಹಕ್ಕು ಪಡೆದಿರುವ ಸ್ಟಾರ್‌ಸ್ಪೋರ್ಟ್ಸ್ ಇಎಸ್‌ಪಿಎನ್ ಸಮೂಹದ ದುಡಿಮೆಯಂತೂ ನಾನಾ ದಿಕ್ಕುಗಳಿಂದ ಪ್ರವಹಿಸಲಿದೆ. ಪ್ರಸಾರದ ಮುಖ್ಯ ಪ್ರಾಯೋಜಕರಾದ ಸೋನಿ ಇಂಡಿಯಾ, ಹೀರೋ ಹೊಂಡಾ, ವಡಾಫೋನ್ ತಲಾ ೫೫ ಕೋಟಿ ರೂ.ನ್ನು ಪಾವತಿಸಬೇಕು. ಏರ್‌ಟೆಲ್ ಡಿಜಿಟಲ್ ಟೆಲಿವಿಷನ್, ನೋಕಿಯಾ, ಮಾರುತಿ ಸುಜುಕಿ, ಫಿಲಿಪ್ಸ್, ಪೆಪ್ಸಿಕೋ ಸೇರಿದಂತೆ ಏಳು ಕಂಪನಿಗಳು ತಲಾ ೩೫ ಕೋಟಿ ತೆರಬೇಕು. ಇಷ್ಟು ಪಾವತಿಸಿದರೂ ಅವರಿಗೆ ಭರ್ಜರಿ ಜಾಹಿರಾತು ಸ್ಥಳವೇನೂ ಲಭ್ಯವಾಗುವುದಿಲ್ಲ. ಪ್ರತಿ ಪ್ರಸಾರದ ಬುಡ, ಕೊನೆಗಳಲ್ಲಿ ಕೆಲ ಸೆಕೆಂಡ್‌ಗಳಲ್ಲಿ ಅವರ ಬ್ರಾಂಡ್ ಹೆಸರುಗಳನ್ನು ಉಲಿಯಲಾಗುತ್ತದೆಯಷ್ಟೇ!
ಟಿವಿಯ ಜಾಹಿರಾತು ದರ ೧೦ ಸೆಕೆಂಡ್‌ಗೆ ೫.೫ ಲಕ್ಷ. ಶೇ.೭೭ ಬೈಟ್ಸ್‌ನ್ನು ಪಂದ್ಯಾವಳಿಗೆ ಮುನ್ನವೇ ಈ ದರದಲ್ಲಿ ಮಾರಾಟ ಮಾಡಲಾಗಿದೆ. ಕೆಲ ಭಾಗ ಅಧಿಕೃತ ಪ್ರಾಯೋಜಕರ ಲೆಕ್ಕಕ್ಕೆ ಹೋದರೆ ಉಳಿದ ಶೇ.೧೫ ಸ್ಥಳಾವಕಾಶವನ್ನು ಪ್ರಸಾರದ ಹಕ್ಕುದಾರರು ಪ್ರೀಮಿಯಂ ಬೆಲೆಗೆ ಮಾರಲಿದ್ದಾರೆ. ಭಾರತ ಉಪಾಂತ್ಯ ಪ್ರವೇಶಿಸಿದರೆ ಹಾಗೂ ಪಂದ್ಯಗಳ ಮಹತ್ವದ ಘಟ್ಟಗಳ ೧೦ ಸೆಕೆಂಡ್‌ಗಳ ಬೆಲೆ ಈ ಸಮಯದಲ್ಲಿ ೨೫ ಲಕ್ಷಕ್ಕೆ ಏರಲಿದೆ!
ಇಲ್ಲಿ ಒಂದು ಪುಟ್ಟ ಲೆಕ್ಕಾಚಾರ ಮಾಡಿ. ೧೦೦ ಓವರ್‌ಗಳ ಒಂದು ಪಂದ್ಯದಲ್ಲಿ ಕನಿಷ್ಟ ೬೦೦ ಟೈಮ್‌ಸ್ಲಾಟ್‌ಗಳಂತೂ ಲಭ್ಯ. ಪಂದ್ಯದ ಮಧ್ಯದ ೪೦ ನಿಮಿಷಗಳ ಬ್ರೇಕ್, ಮೊದಲ ಅರ್ಧ ಘಂಟೆಯ ಅವಧಿ, ಆಟಗಾರರ ಗಾಯ, ಪಾನೀಯ ವಿರಾಮದ ಲೆಕ್ಕಗಳನ್ನು ಇಲ್ಲಿ ಪರಿಗಣಿಸಿದರೆ ಈ ಅವಧಿ ಸರಿಸುಮಾರು ೧೦ ಸೆಕೆಂಡ್‌ಗಳ ೯೦೦ ಸ್ಲಾಟ್ ಲಭಿಸಬಲ್ಲದು. ಸುಮ್ಮನೆ ಸರಾಸರಿ ೧೦ ಲಕ್ಷ ರೂ.ಗಳ ವ್ಯವಹಾರವನ್ನು ಮಾಡಿದರೂ ೯೦ ಕೋಟಿಯ ಆದಾಯ ಒಂದು ಪಂದ್ಯದಿಂದ ಪ್ರಸಾರಕರಿಗೆ ಲಭ್ಯ. ಇದು ಒಂದು ಭಾರತದಿಂದ ಎಂತಾದರೆ ಬೇರೆ ಬೇರೆ ದೇಶಗಳ ಪ್ರಸಾರಕ್ಕೆ ಮತ್ತೆ ಇದೇ ಲೆಕ್ಕ!
ಕ್ರಿಕೆಟ್ ಮೈದಾನದ ಇಂಚಿಂಚು ಜಾಗಕ್ಕೂ ಈ ವ್ಯಾಪಾರೀಕರಣದ ದಿನಗಳಲ್ಲಿ ಚಿನ್ನದ ಬೆಲೆ. ಮೈದಾನದ ಸುತ್ತಮುತ್ತ ಹಾಕಲಾಗುವ ಪ್ರದರ್ಶಕ ಫಲಕಗಳೆಲ್ಲ ಐಸಿಸಿಯ ಮುಖ್ಯ ಪ್ರಾಯೋಜಕರ ಸ್ವತ್ತು. ಸ್ಕೋರ್‌ಬೋರ್ಡ್, ಥರ್ಡ್ ಅಂಪೈರ್ ಫಲಕ, ರಿಪ್ಲೇ ಸ್ಕ್ರೀನ್‌ಗಳು, ಪಂದ್ಯಾನಂತರದ ಸಮಾರಂಭದ ಸ್ಕ್ರೀನ್, ಡ್ರಿಂಗ್ಸ್ ಟ್ರಾಲಿಗಳಲೆಲ್ಲ ಇವರದ್ದೇ ಜಾಹಿರಾತು. ಹಿಂದೆ ಮೈದಾನದ ಸುತ್ತ ಬೌಂಡರಿ ಗೆರೆಯನ್ನು ನಿರ್ಧರಿಸಲು ಬಿಳಿಯದಾದ ಹಗ್ಗವನ್ನು ಹಾಕಲಾಗಿರುತ್ತಿತ್ತು. ಭಾರತದ ಕ್ರಿಕೆಟಿಗ ಅಜಯ್ ಜಡೇಜಾ ಮೊತ್ತಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಹಗ್ಗದ ಬದಲು ತ್ರಿಕೋನಾಕೃತಿಯ ಗಡಿಗೆರೆ ತೋರಿಸುವ ತಂತ್ರ ಬಳಸಿದರು. ಆ ಆಕೃತಿಯ ಮೇಲೆ ಜಾಹಿರಾತುಗಳನ್ನು ಪ್ರದರ್ಶಿಸಬಹುದು ಎನ್ನುವುದನ್ನು ತೋರಿಸಿಕೊಟ್ಟರು. ಅವರು ಅದಕ್ಕೆ ಪೇಟೆಂಟ್ ಪಡೆದುಕೊಂಡಿದ್ದರೆ ಇಂದು ಅವರೂ ಕೋಟಿ ಕೋಟಿ ಗಳಿಸಬಹುದಿತ್ತು. ಇದೇ ಕಾಂಚಾಣದ ಮಹಿಮೆ....
ಈ ಬಾರಿ ಪೆಪ್ಸಿ ಕೋ, ಎಲ್‌ಜಿ ಎಲೆಕ್ಟ್ರಾನಿಕ್ಸ್, ಹೀರೋ ಹೊಂಡಾ ಮೋಟಾರ‍್ಸ್, ರಿಲಯನ್ಸ್ ಕಮ್ಯುನಿಕೇಷನ್ ಮೆರೆಯಲಿವೆ. ಪ್ರತಿ ಕಂಪನಿ ೭೦ರಿಂದ ೮೫ ಕೋಟಿ ರೂ.ಗಳನ್ನು ಈ ಸೌಲಭ್ಯಗಳಿಗಾಗಿ ತೆರಲಿದೆ. ಬಿಲ್ ಬೋರ್ಡ್ಸ್, ಬೌಲರ್ ರನ್‌ಅಪ್‌ನ ಹಿಂಭಾಗದಲ್ಲಿ ಕಾಣುವ ಜಾಹಿರಾತುಗಳನ್ನು ಈ ನಾಲ್ವರು ಪ್ರಾಯೋಜಕರು ಹಂಚಿಕೊಳ್ಳಲಿದ್ದಾರೆ.
ಪ್ರವಾಸೋದ್ಯಮಕ್ಕೆ ಸ್ವಲ್ಪ ಮಟ್ಟಿನ ಲಾಭವಾಗಲಿದೆ. ಉದಾಹರಣೆಗೆ, ಮುಂಬೈನಲ್ಲಿ ಏಪ್ರಿಲ್ ಎರಡರಂದು ನಡೆಯಲಿರುವ ಫೈನಲ್‌ನಲ್ಲಿ ಒಂದು ದಿನದ ವಸತಿ, ವಿಮಾನ ನಿಲ್ದಾಣಕ್ಕೆ ವಾಹನ ಸೌಲಭ್ಯ, ಊಟ ತಿಂಡಿ, ಟಿಕೆಟ್‌ಗಳು ೨೭,೮೦೦ರಿಂದ ೪೧,೯೦೦ರೂ.ಗಳ ಪ್ಯಾಕೇಜ್‌ನಲ್ಲಿ ಸಿಗಲಿದೆ. ನೆನಪಿಡಿ, ಇದರ ಗುತ್ತಿಗೆಗೂ ಕಟಿಂಗ್ ಎಡ್ಜ್ ಇವೆಂಟ್ಸ್, ಬಿಯುಐ ಇಂಡಿಗೋ ಹಕ್ಕುದಾರರು. ಇವರು ಐಸಿಸಿಗೆ ನೀಡಿದ ಮೊತ್ತ ಬಹಿರಂಗವಾಗಿಲ್ಲ. ಆದರೆ ಭಾರತದ ಹೋಟೆಲ್, ವಿಮಾನ ಯಾನ ಸಂಸ್ಥೆಗಳಿಗೆ ಒಟ್ಟು ೧೦೦ ಕೋಟಿ ವ್ಯವಹಾರವಾಗಲಿದೆ ಎಂದು ಅಂದಾಜಿಸಲಾಗಿದೆ.
೪೩ ದಿನಗಳ ವಿಶ್ವಕಪ್ ೨೦೧೧ರಲ್ಲಿ ತೀವ್ರ ನಷ್ಟಕ್ಕೊಳಗಾಗುವುದು ಮಾತ್ರ ಈ ಶೋ ನಡೆಸಿಕೊಡುವ ಮುಖ್ಯ ಪಾತ್ರಧಾರಿಗಳಾದ ಆಟಗಾರರು ಎಂಬುದು ಶುದ್ಧ ವ್ಯಂಗ್ಯ. ಹೊಸ ಕಾನೂನಿನಂತೆ ಕಪ್ ಆರಂಬದ ಏಳು ದಿನಗಳ ಮೊದಲಿನಿಂದ ಆಟಗಾರರ ವೈಯುಕ್ತಿಕ ಪ್ರಾಯೋಜಕರ ಜಾಹಿರಾತುಗಳು ಪ್ರಸಾರವಾಗುವಂತಿಲ್ಲ. ಭಾರತವಲ್ಲದೆ ಶ್ರೀಲಂಕಾ, ಬಾಂಗ್ಲಾಗಳ ಜಾಹಿರಾತು ಕಾನೂನುಗಳೂ ಆಟಗಾರರಿಗೆ ಅನ್ವಯವಾಗಿಬಿಡುತ್ತದೆ.
ಈಗಿನ ತರ್ಕದಂತೆ, ಸಚಿನ್, ಹರ್‌ಭಜನ್ ಹಾಗೂ ಆಶೀಶ್ ನೆಹ್ರಾ ಈ ನಿಯಮಗಳಿಂದ ತುಸು ದೊಡ್ಡ ಮೊತ್ತದ ನಷ್ಟಕ್ಕೊಳಗಾಗುತ್ತಾರೆ. ಉಳಿದವರಿಗೂ ಹಾನಿ ಖಚಿತ. ಪೆಪ್ಸಿ ಹಾಗೂ ರಿಲಯನ್ಸ್ ಮುಖ್ಯ ಪ್ರಾಯೋಜಕರಾಗಿರುವುದರಿಂದ ಸಚಿನ್‌ರ ಕೋಕಾ ಕೋಲಾ ಜಾಹಿರಾತನ್ನು ನಾವು ನೋಡಲಾಗದು. ಹೆಚ್ಚೆಂದರೆ ಸಚಿನ್ ಇಲ್ಲದ ಕೋಲಾ ಪ್ರಾಡಕ್ಟ್ ಕಾಣಿಸಬಹುದು. ಅತ್ತ ಧೋನಿಯ ಏರ್‌ಸೆಲ್‌ಗೂ ಇದೇ ಕತೆ, ಇಲ್ಲಿ ರಿಲಯನ್ಸ್ ತಡೆ! ದುರಂತವೆಂದರೆ, ಬರುವ ದಿನಗಳಲ್ಲಿ ಯಾವುದಾದರೊಂದು ನೆಪ ಒಡ್ಡಿ ವಿಶ್ವಕಪ್‌ನಿಂದ ಹಿಂಸರಿದು ಆಟಗಾರ ತಾನು ಮಾಡೆಲ್ ಆದ ತಯಾರಿಕೆಯ ಜಾಹಿರಾತು ಪ್ರಸಾರಕ್ಕೆ ಅವಕಾಶ ಇತ್ತರೆ ಅಚ್ಚರಿಯಿಲ್ಲ.
ಒಟ್ಟೂ ಟೂರ್ನಿಯ ಬಹುಮಾನದ ಮೊತ್ತ ಬರೀ ೪೫ ಕೋಟಿ! ಗೆದ್ದವರಿಗೆ ಮೂರು ಮಿಲಿಯನ್, ರನ್ನರ್‌ಅಪ್‌ಗೆ ಅದರ ಅರ್ಧ. ಸ್ವಾರಸ್ಯವೆಂದರೆ, ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಲು ವೈಯುಕ್ತಿಕವಾಗಿಯೇ ವಿಶ್ವಕಪ್‌ನ ಪ್ರಶಸ್ತಿ ವಿಜೇತ ತಂಡಕ್ಕಿಂತ ಹೆಚ್ಚು ಗಳಿಸುವ ಆಟಗಾರರಿದ್ದಾರೆ! ವಿಜೇತರ ೧೩.೫ ಕೋಟಿ ಚೆಕ್ ಐಪಿಎಲ್‌ನಲ್ಲಿ ಯಾವ ಲೆಕ್ಕ? ವಿಶ್ವಕಪ್‌ನಲ್ಲಿ ಪ್ರಥಮ ಬರುವ ತಂಡಕ್ಕೆ ಸಿಗುವುದು ಮೂರು ಮಿಲಿಯನ್ ಡಾಲರ್. ಅದೇ ಐಪಿಎಲ್‌ನಲ್ಲಿ ದೆಹಲಿಯ ಗೌತಮ್ ಗಂಭೀರ್ ಹರಾಜಾಗಿರುವುದು ೨.೪ ಮಿಲಿಯನ್ ಡಾಲರ್‌ಗೆ! ಯೂಸುಫ್ ಪಠಾಣ್‌ಗೆ ಹಾಗೂ ರಾಬಿನ್ ಉತ್ತಪ್ಪರಿಗೆ ಸಿಗುವುದು ೨.೧ ಮಿಲಿಯನ್ ಡಾಲರ್. ಯುವರಾಜ್ ಸಿಂಗ್‌ಗೆ ೧.೮ ಮಿ.ಡಾಲರ್. ಇನ್ನು ಐಪಿಎಲ್ ತಂಡಗಳ ಐಕಾನ್ ಆಟಗಾರರಿಗೆ ಬರೋಬ್ಬರಿ ಎರಡು ಮಿಲಿಯನ್ ಡಾಲರ್ ಖಚಿತ. ಈ ಹಂತದಲ್ಲಿ ಇಡೀ ಒಂದು ತಂಡ ವಿಶ್ವಕಪ್‌ನ ಫೈನಲ್‌ವರೆಗೆ ಸೆಣಸಿ ಬಂದರೆ ಸಿಗುವುದು ಕೇವಲ ೧.೫ ಮಿಲಿಯನ್ ಡಾಲರ್! ಇದಲ್ಲವೇ ವ್ಯಂಗ್ಯ?
-ಮಾವೆಂಸ

ಭಾನುವಾರ, ಫೆಬ್ರವರಿ 13, 2011

ಇರಲಿ ಬಿಡಿ, ದೂರದ ಬೆಟ್ಟ ನುಣ್ಣಗೆ!


ನಾನು ಬರೆದದ್ದು ಲೆಕ್ಕ ಮಾಡಿ ಮೂರು ಮತ್ತೊಂದು ಕತೆ. ಮೊದಲ ಕತೆಯನ್ನು ತುಂಬಾ ಚೈಲ್ಡಿಷ್ ಆಗಿ ಬರೆದಿದ್ದರಿಂದ ಯಾರಿಗೂ ಓದಲು ಕೊಡಲು ಮನಸ್ಸಾಗುತ್ತಿಲ್ಲ. ಈಗ ತುಸು ಸುಧಾರಿಸಿದ್ದೇನೆ ಎಂದುಕೊಂಡಿದ್ದೆ. ಆದರೆ ಇತ್ತೀಚೆಗೆ ಬರೆದ ಈ ಕೆಳಗಿನ ಕತೆಯನ್ನು ಕನ್ನಡದ ಎರಡು ಸಾಪ್ತಾಹಿಕಗಳಿಗೆ ಕಳಿಸಿದರೆ ಮುಲಾಜಿಲ್ಲದೆ ವಾಪಾಸು ಕಳಿಸಿದವು!
ಊಹ್ಞೂ, ನಾನು ಹೆತ್ತ ಹೆಗ್ಗಣವಾದ್ದರಿಂದ ನನಗೆ ಇದು ಶ್ರೇಷ್ಟ! ಹಾಗೆಂದುಕೊಂಡೇ ಬೆಂಗಳೂರಿನ ‘ಚೈತ್ರರಶ್ಮಿ’ ಮಾಸಿಕದ ವಾರ್ಷಿಕ ಕಥಾಸ್ಪರ್ಧೆಗೆ ಕಳುಹಿಸಿದೆ. ಆಶ್ಚರ್ಯ, ಅವರ ಕಥಾಸಂಕಲನಕ್ಕೆ ಆಯ್ಕೆಯಾದ ಕತೆಗಳಲ್ಲಿ ನನ್ನದೂ ಒಂದು. ಈ ಕಥಾಸಂಕಲನದ ಬಿಡುಗಡೆ ಇಂದು ಸಂಜೆ ಬೆಂಗಳೂರಿನ ನಯನ ಸಭಾಂಗಣದಲ್ಲಿ. ಮನಸ್ಸು ಅಲ್ಲಿದ್ದರೂ ಇಲ್ಲಿ ಕುಳಿತು ಆ ಕತೆಯನ್ನು ಅಪ್‌ಲೋಡ್ ಮಾಡುತ್ತಿರುವೆ.......

-ಮಾವೆಂಸ


(ಇಲ್ಲಿನ ಎಲ್ಲ ಪಾತ್ರಗಳು ಸಂಪೂರ್ಣ ಕಾಲ್ಪನಿಕ)

ಫೋನ್ ರಿಂಗಾಗುತ್ತಿತ್ತು, ಎತ್ತಿಕೊಂಡೆ.
"ನಮಸ್ಕಾರ, ಹೇಳಿ"
"ನಮಸ್ಕಾರ, ನಾನು ನರೇಂದ್ರ ಶೆಣೈ ಅಂತ. ಮಂಗಳೂರಿನವನು. ನೀವು ಈ ವಾರ ‘.........’ ದಿನಪತ್ರಿಕೆಯ ಕೃಷಿಪುಟದಲ್ಲಿ ಬರೆದ ‘ಶ್ರೀಗಂಧದ ಕೃಷಿಯಲ್ಲಿ ಲಾಭದ ಪರಿಮಳ’ ಲೇಖನ ಓದಿದೆ. ಆ ಬಗ್ಗೆ ಇನ್ನಷ್ಟು ಮಾಹಿತಿ ಬೇಕಿತ್ತು. ಹಾಗಾಗಿ ತೊಂದರೆ ಕೊಡುತ್ತಿರುವೆ. ನಾನೂ ಶ್ರೀಗಂಧ ಬೆಳೆಯಬೇಕೆಂದಿರುವೆ. ಅದರ ಗಿಡ ನಮ್ಮಲ್ಲಿ ಎಲ್ಲಿ ಸಿಕ್ಕೀತು...."
ಅತ್ತ ಶ್ರೀಮಾನ್ ಶೆಣೈಯವರ ಮಾತು ಮುಂದುವರಿಯುತ್ತಿದ್ದಂತೆ ನನ್ನ ನೆನಪು ಹಿಂದೋಡಿತು. ಕಳೆದ ಗುರುವಾರದ ಕೃಷಿ ಪುರವಣಿಯಲ್ಲಿ ಸಾಮಾನ್ಯ ಕೃಷಿಕರೂ ಬೆಳೆಯಬಹುದಾದ ಗಂಧದ ಗಿಡ ಕೃಷಿ ಬಗ್ಗೆ ಫೋಟೋ ಲೇಖನ ಬರೆದಿದ್ದೆ. ’ಇತ್ತೀಚಿನ ಸರ್ಕಾರಿ ಆದೇಶದ ಪ್ರಕಾರ ಶ್ರೀಗಂಧದ ಮರಗಳ ಒಡೆತನ ಜಮೀನು ಮಾಲಿಕನದ್ದು. ಇದರ ಬೆಳೆಯನ್ನು ಹಣದಲ್ಲಿ ಹೋಲಿಸುವುದಾದರೆ ಅದು ಅಡಿಕೆ, ಶುಂಠಿಯಂತವನ್ನು ಅನಾಯಾಸವಾಗಿ ಹಿಂದೆ ಹಾಕಿಬಿಡುತ್ತದೆ. ಒಂದು ಲೆಕ್ಕಾಚಾರದ ಪ್ರಕಾರ, ಒಂದು ಎಕರೆ ಭೂಮಿಯಲ್ಲಿ ಬೆಳೆದ ಶ್ರೀಗಂಧದಿಂದ ೧೫ ವರ್ಷಗಳ ಕೊಯ್ಲಿಗೆ ಬೆಳೆಗಾರನಿಗೆ ಒಂದು ಕೋಟಿ ಮೂವತ್ತೆರಡು ಲಕ್ಷ ರೂಪಾಯಿ ಪಡೆಯಬಹುದು! ಕಾವಲಿಗೆಂದು ಬರೋಬ್ಬರಿ ೩೨ ಲಕ್ಷ ಖರ್ಚು ಮಾಡಿದರೂ ಕೋಟಿ ಉಳಿದೀತು! ರೈತರು ಇತ್ತ ಯೋಚಿಸಬೇಕಿರುವ ಕಾಲವಿದು’ ಎಂದು ವಿಸ್ತಾರವಾಗಿ ಬರೆದಿದ್ದೆ.
ಆದರೆ ಈ ಮನುಷ್ಯನಿಗೆ ನನ್ನ ಫೋನ್ ನಂಬರ್ ಎಲ್ಲಿ ಸಿಕ್ಕಿತು? ಆ ಲೇಖನದ ಜೊತೆಯಲ್ಲಿಯೇನೂ ಕೊಟ್ಟಿರಲಿಲ್ಲ. ಅನುಮಾನ ಹೆಚ್ಚು ವೇಳೆ ಬದುಕಿರಬಾರದು, ಆತನನ್ನು ಕೇಳಿಯೇಬಿಟ್ಟೆ. "ಹ್ಞಾ. ನಾನು ಪತ್ರಿಕೆಯ ಕಛೇರಿಗೆ ಫೋನ್ ಮಾಡಿ ನಿಮ್ಮ ನಂಬರ್ ಪಡೆದೆ. ನಿಮ್ಮ ಲೇಖನ ಆ ಮಟ್ಟಿಗೆ ನನ್ನನ್ನು ಸೆಳೆದುಬಿಟ್ಟಿದೆ"
ಅಪರಿಚಿತ ವ್ಯಕ್ತಿಯಾದರೂ ನನ್ನ ಲೇಖನ ಓದಿ ಪ್ರತಿಕ್ರಿಯಿಸುತ್ತಿರುವುದರಿಂದ ನನ್ನ ಗರ್ವ ಹೆಚ್ಚಿತು. ಉಲ್ಲಾಸದಿಂದಲೇ ಆತನ ಪ್ರಶ್ನೆಗಳಿಗೆ ಉತ್ತರಿಸಿದೆ. ಕೆಲ ನಿಮಿಷ ಮಾತನಾಡಿದ ಆತ, "ಪ್ರಸಾದ್, ಇನ್ನಾವುದೇ ಅನುಮಾನವಿದ್ದರೆ, ಮಾಹಿತಿ ಬೇಕಿದ್ದರೆ ನಿಮ್ಮನ್ನು ಕಾಂಟ್ಯಾಕ್ಟ್ ಮಾಡುವೆ. ತೊಂದರೆಯಿಲ್ಲ ತಾನೇ?" ಎಂದ. ನಾನು "ಷ್ಯೂರ್.....ಷ್ಯೂರ್" ಎನ್ನುತ್ತ ಫೋನ್ ಇಟ್ಟೆ.
ವಾರ ಕಳೆದಿರಬೇಕು. ಒಂದು ದಿನ ಬೆಳಿಗ್ಗೆ ಒಂಭತ್ತರ ಆಸುಪಾಸಿನಲ್ಲಿ ಶೆಣೈಯವರಿಂದ ಮತ್ತೊಂದು ಫೋನ್. ಈಗ ನನಗೆ ಇವರು ಶ್ರೀಗಂಧದ ಮರ ಬೆಳೆಸಲು ಗಂಭೀರವಾಗಿ ಚಿಂತಿಸುತ್ತಿದ್ದಾರೆ ಎಂಬ ಸುಳಿವು ಸಿಕ್ಕಿತು. "ಪ್ರಸಾದ್, ಮಂಗಳೂರಿನ ಅರಣ್ಯ ಇಲಾಖೆಯಲ್ಲಿ ವಿಚಾರಿಸಿದೆ. ಇವರ ನರ್ಸರಿಯಲ್ಲಿ ಶ್ರೀಗಂಧದ ಗಿಡಗಳೆಲ್ಲ ಖರ್ಚಾಗಿವೆಯಂತೆ. ಇನ್ನು ಸಿಗುವುದು ಮುಂದಿನ ಸೀಸನ್‌ನಲ್ಲಿ. ನನಗೆ ನಿಮ್ಮ ಸಾಗರ, ಶಿವಮೊಗ್ಗಗಳ ಫಾರೆಸ್ಟ್ ಕಛೇರಿಗಳ ನಂಬರ್ ಕೊಡಲಾದೀತೆ?"
ನನಗೆ ತುಸು ಪೀಕಲಾಟ. ಒಂದೇಟಿಗೆ ನನ್ನ ಕೈಯಲ್ಲಿ ಆ ನಂಬರ್‌ಗಳು ಇಲ್ಲ. ಫೈಲ್‌ಗಳಲ್ಲಿ ಹುಡುಕಬೇಕು. ತಕ್ಷಣಕ್ಕೆ ಸಾಧ್ಯವಾಗದ ಕೆಲಸವದು. ಕನಿಷ್ಠ ಅರ್ಧ ಘಂಟೆಯಾದರೂ ಬೇಕಾದೀತು. ಹಾಗೆಂದುಕೊಂಡವನು ಶೆಣೈಯವರಿಗೆ ಇನ್ನರ್ಧ ಘಂಟೆ ಬಿಟ್ಟು ಮಾಹಿತಿ ಒದಗಿಸುತ್ತೇನೆ. ನಿಮ್ಮ ಫೋನ್ ನಂಬರ್ ಕೊಡಿ, ತಿಳಿಸುತ್ತೇನೆ ಎಂದೆ. ಶೆಣೈ ಸುತರಾಂ ಒಪ್ಪಲಿಲ್ಲ. "ಬೇಡ, ಬೇಡ. ನನ್ನ ಅಗತ್ಯಕ್ಕೆಂದು ನೀವು ಫೋನ್ ಮಾಡುವುದು ಸರಿಯಲ್ಲ. ನಾನೇ ಇನ್ನೊಂದು ಮುಕ್ಕಾಲು ಘಂಟೆ ನಂತರ ಕರೆ ಮಾಡುತ್ತೇನೆ. ಈ ಪರಿ ತ್ರಾಸ ಕೊಡುತ್ತಿರುವುದಕ್ಕೆ ಕ್ಷಮೆಯಿರಲಿ"
ನನ್ನೊಳಗಿನ ಜುಗ್ಗನಿಗೆ ನಿಜಕ್ಕೂ ವಿಪರೀತ ಖುಷಿಯಾಗಿತ್ತು. ಅಲ್ವ ಮತ್ತೆ, ಮಾಹಿತಿ ಬೇಕಾಗಿರುವುದು ಅವರಿಗೆ. ಹಾಗಂತ ನೀವೇ ಫೋನ್ ಮಾಡಿ ಎನ್ನುವುದು ಧಾರ್ಷ್ಟ್ಯವಾಗುತ್ತಿತ್ತು. ಸೌಜನ್ಯಕ್ಕೆ ಕರೆ ಮಾಡಿ ತಿಳಿಸುವೆ ಎಂದಿದ್ದೆ ಅಷ್ಟೆ. ಈಗ ಆರಾಮ. ಮಾಹಿತಿ ಹುಡುಕಿ ಇಟ್ಟರೆ ಆಯಿತು. ಅವರು ಕರೆ ಮಾಡಿದಾಗ ಒದಗಿಸುವುದು. ಲೇಖನ ಓದಿ ವಿವರ ಕೇಳುವ ಅಪರಿಚಿತರಿಗೆಲ್ಲ ನಾನೇ ಫೋನ್ ಮಾಡಿ ಅವರ ಅಗತ್ಯತೆ ಪೂರೈಸುವುದೆಂದರೆ ಎಷ್ಟು ಖರ್ಚು? ಇಷ್ಟಕ್ಕೂ ಮುಂದೆಂದಾದರೂ ಬೇಕಾದೀತು ಎನಿಸಿದ್ದರಿಂದ ಮನೆ ಫೋನ್ ಕಾಲರ್ ಐಡಿಯಲ್ಲಿ ನಮೂದಾಗಿದ್ದ ಶೆಣೈ ನಂಬರ್‌ನ್ನು ಡೈರಿಯಲ್ಲಿ ಒಂದೆಡೆ ಬರೆದಿಟ್ಟೆ.
ಈ ನಡುವೆ ಶೆಣೈ ಹತ್ತಾರು ಬಾರಿ ಕರೆ ಮಾಡಿ ಚರ್ಚೆ ನಡೆಸಿದ್ದರು. ಅವರ ಬಗ್ಗೆ ಸಾಕಷ್ಟು ಸುದ್ದಿ ಸಂಗ್ರಹವಾಗಿತ್ತು. ೫೫-೬೦ರ ವಯಸ್ಸಿನ ಶೆಣೈರ ಧ್ವನಿ ಮಾತ್ರ ಚಿತ್ರನಟ ಅನಂತನಾಗ್‌ರ ಧ್ವನಿಯೇ. ಮಾತಿನ ಬುಡದಲ್ಲೊಮ್ಮೆ ಪ್ರಸಾದ್ ಎನ್ನದೆ ಇರುತ್ತಿರಲಿಲ್ಲ. ಅವರದ್ದು ಮಂಗಳೂರಿನಲ್ಲೇ ವಾಸ. ಬ್ಯಾಂಕ್ ಉದ್ಯೋಗದಿಂದ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ. ವಿಟ್ಲದ ಹತ್ತಿರದ ಪಾಂಡೇಲು ಎಂಬಲ್ಲಿ ಅವರ ಹದಿನಾರು ಎಕರೆ ಗದ್ದೆ, ಖುಷ್ಕಿ ಎಲ್ಲ ಇದೆ. ಈವರೆಗೆ ಅವರ ತಮ್ಮ ಗದ್ದೆ ಮಾಡುತ್ತಿದ್ದರು. ಇನ್ನು ತಾವು ಖುದ್ದು ಕೃಷಿ ಮಾಡುವುದು ಶೆಣೈ ಆಸೆ. ಅಲ್ಲೇ ಒಂದು ಮನೆ ಮಾಡಿಕೊಂಡು ಪ್ರಶಾಂತ ಜೀವನ ನಡೆಸುವ ಅವರ ಬಯಕೆ ನನ್ನಂತ ಕೃಷಿಕ ಕಂ ಲೇಖಕನಿಗೆ ಆಹ್ಲಾದಕರ ವಿಷಯ.
"ಪ್ರಸಾದ್, ಒಂದು ಸಣ್ಣ ಸಮಸ್ಯೆ ಹುಟ್ಟಿದೆ. ನಿನ್ನೆ ನಮ್ಮ ಜಮೀನಿನ ಸರ್ವೆಯನ್ನು ಮಾಡಿಸಿದೆ. ನಮ್ಮ ಜಮೀನಿನ ಒಂದು ಭಾಗ ನಮ್ಮ ದೊಡ್ಡಪ್ಪನ ಮಗನ ಸುಪರ್ದಿಗೆ ಸೇರಿಬಿಟ್ಟಿರುವುದು ಪತ್ತೆಯಾಗಿದೆ. ಅವರು ಆ ಭಾಗದಲ್ಲಿ ತೆಂಗು ಹಾಕಿದ್ದಾರೆ. ವಿನಂತಿಸಿಕೊಂಡರೆ ಬಿಡುವ ಲಕ್ಷಣ ಕಾಣುತ್ತಿಲ್ಲ. ಬಹುಷಃ ಕೋರ್ಟಿಗೇ ಹೋಗಬೇಕಾದೀತೇನೋ"
ನಾನೇನೂ ಕಾನೂನು ತಜ್ಞನಲ್ಲ. ಅಷ್ಟಿಷ್ಟು ಕೃಷಿ ಗೊತ್ತು ಎಂಬುದನ್ನು ಬಿಟ್ಟರೆ ಯಾವೊಂದು ಕಾನೂನುಗಳೂ ತಿಳಿದಿಲ್ಲ. ಇವತ್ತಿಗೂ ಮ್ಯುಟೇಷನ್, ಕಾನೇಷುಮಾರಿ ಅಂತ ಯಾರಾದರೂ ಕೃಷಿ ದಾಖಲೆಗಳ ಬಗ್ಗೆ ಮಾತನಾಡಿದರೂ ಗೊಂದಲಕ್ಕೀಡಾಗುತ್ತೇನೆ. ಇನ್ನು ಶೆಣೈರಿಗೆ ಸಲಹೆ ನೀಡುವ ಮಾತೆಲ್ಲಿಂದ ಬಂತು? ನನ್ನಿಂದ ಸಾಧ್ಯವಾದುದು ಸಾಂತ್ವನ, ಸ್ಫೂರ್ತಿ ತುಂಬುವ ಕೆಲಸ. ಅದನ್ನು ಪ್ರಾಂಜಲವಾಗಿ ಮಾಡಿದೆ.
ಶೆಣೈರ ಸಮಸ್ಯೆ ಗಂಭೀರವಾಗಿತ್ತು. ಜಮೀನು ಈಗ ವಿವಾದದಲ್ಲಿದೆ. ಇದೇ ಕಾರಣವೊಡ್ಡಿ ಬ್ಯಾಂಕ್ ಸಾಲ ಒದಗಿಸಲು ಹಿಂಜರಿಯುತ್ತಿದೆ. ಶ್ರೀಗಂಧದಂತ ಬೆಳೆಗೆ ಕಾವಲು ಒದಗಿಸಲೇ ಲಕ್ಷಾಂತರ ರೂಪಾಯಿಗಳ ಖರ್ಚಿದೆ. ಬಹುಷಃ ಈ ಎಲ್ಲ ಘಟನೆಗಳು ಶೆಣೈರನ್ನು ವಿಚಲಿತಗೊಳಿಸಿರಬೇಕು. ಅದು ಅವರೊಂದಿಗಿನ ದೂರವಾಣಿ ಸಂಭಾಷಣೆಗಳಲ್ಲಿಯೇ ವ್ಯಕ್ತವಾಗುತ್ತಿತ್ತು. ಶ್ರೀಗಂಧ ಬೇಡ, ಗ್ಲಾಡಿಯೋಲಸ್ ಬೆಳೆದರೆ ಹೇಗೆ, ದಕ್ಷಿಣ ಕನ್ನಡದಲ್ಲಿ ರಬ್ಬರ್ ಆದೀತಾ ಎಂಬಿತ್ಯಾದಿ ವಿಚಾರಗಳನ್ನು ಶೆಣೈ ಚರ್ಚಿಸಲಾರಂಭಿಸಿದ್ದರು. ಹೊಸ ಹೊಸ ವಿಷಯ, ಸಂಬಂಧಿತ ವ್ಯಕ್ತಿಗಳ ಫೋನ್ ನಂಬರ್ ಕೇಳುತ್ತಿದ್ದರು. ನಾನು ಹುಡುಕಿ ತೆಗೆದಿಡುತ್ತಿದ್ದೆ. ಅವರು ಫೋನ್ ಮಾಡಿ ಅವನ್ನು ಪಡೆದುಕೊಳ್ಳುತ್ತಿದ್ದರು.
ಒಬ್ಬ ಮನುಷ್ಯನನ್ನು ದೀರ್ಘಕಾಲದಿಂದ ಮುಖತಃ ಭೇಟಿಯಾಗದೇ ಸಂಪರ್ಕದಲ್ಲಿದ್ದಾಗ ನೋಡಬೇಕೆಂಬ ಕುತೂಹಲ ಹೆಚ್ಚಾಗುತ್ತದೆ. ನನಗೂ ಶೆಣೈರನ್ನು ಭೆಟ್ಟಿಯಾಗಬೇಕೆಂಬ ಬಯಕೆ ದಟ್ಟವಾಗತೊಡಗಿತ್ತು. ಆದರೆ ತಿರುಗಾಟಗಳ ಅಲರ್ಜಿಯಿಂದ ಹಿಂಜರಿಯುವಂತಾಗಿತ್ತು. ಇದೇ ವೇಳೆ ಶೆಣೈರ ಕರೆ ಶಬ್ಧ , ಟ್ರಿಂಗ್..........ಟ್ರಿಂಗ್...............
"ಪ್ರಸಾದ್, ನಿಮ್ಮೂರಿನ ಹತ್ತಿರ ಹೆಗಡೆ ಫಾರ್ಮ್‌ಎಂಬುದೊಂದಿದೆಯಂತಲ್ಲ. ಅಲ್ಲಿ ಅದ್ಭುತವಾದ ತೋಟ ಮಾಡಿದ್ದಾರೆಂದು ಕೇಳಿಪಟ್ಟೆ. ನಿಮ್ಮಲ್ಲಿಂದ ಅಲ್ಲಿಗೆ ಎಷ್ಟು ದೂರ, ಒಮ್ಮೆ ಹೋಗಿ ಬರಬಹುದಾ?" ನನ್ನ ಸಕಾರಾತ್ಮಕ ಉತ್ತರದಿಂದ ಶೆಣೈ ನಮ್ಮಲ್ಲಿಗೆ ಬರುವ ದಿನ ನಿಕ್ಕಿಯಾಯಿತು.
ಹೊಚ್ಚ ಹೊಸ ಕ್ವಾಲಿಸ್ ಕಾರು. ಶೆಣೈಯವರಲ್ಲದೆ ಅವರ ಸ್ನೇಹಿತರಾದ ರಾಮ್‌ಗೋಪಾಲ್ ಉಪಾಧ್ಯ, ನರಸಿಂಹ ಶಾಸ್ತ್ರಿ, ತಮ್ಮ ಸುರೇಂದ್ರ ಶೆಣೈ ನೇರವಾಗಿ ನಮ್ಮಲ್ಲಿಗೇ ಬಂದರು. ಬಿಳಿ ಬಿಳಿ ತಲೆಗೂದಲಿನ ಶೆಣೈ ‘ಆಸ್ಟ್ರೇಲಿಯಾದಿಂದ ಮಗಳು ಕಳಿಸಿಕೊಟ್ಟ ಬಾದಾಮಿ ಬೀಜ’ದ ದೊಡ್ಡ ಕವರ್ ಕೊಟ್ಟದ್ದು ಖುಷಿ ಕೊಟ್ಟದ್ದು ಖರೆ. ಘಂಟೆಗೊಂದು ಸಿಗರೇಟು ಹೊಡೆಯುತ್ತಿದ್ದ ಶೆಣೈ ಮಧ್ಯೆ ಮಧ್ಯೆ ಅನನುಭವಿಗಳಂತೆ ಗಂಟಲಿಗೆ ಹೊಗೆ ಸಿಕ್ಕಿಸಿಕೊಂಡು ಕೆಮ್ಮುತ್ತಿದ್ದುದು ಮಾತ್ರ ನನಗರ್ಥವಾಗಲಿಲ್ಲ!
ಕೃಷಿಕ ಎಂಬ ಹಣೆಪಟ್ಟಿ ಇದ್ದೂ ನಾನು ಹೆಗಡೆ ಫಾರ್ಮ್‌ನ್ನು ನೋಡಿರಲಿಲ್ಲ. ಇವರನ್ನೆಲ್ಲ ಕರೆದುಕೊಂಡು ಹೋಗಿದ್ದು ನನಗೆ ಡಬಲ್ ಲಾಭದ ವಿಷಯವಾಗಿತ್ತು. ಫಾರ್ಮ್‌ನಲ್ಲಿ ಫೋಟೋ ತೆಗೆದು, ಮಾಹಿತಿ ಪಡೆದು ಇನ್ನೊಂದು ಲೇಖನ ತಯಾರಿಸಬಹುದಲ್ಲ!? ಶೆಣೈ ಪುಟ್ಟ ಹುಡುಗನಂತೆ ಉತ್ಸಾಹದ ಚಿಲುಮೆ. ಫಾರ್ಮ್ ನೋಡಿದರು, ಅದರ ಮಾಲಿಕ ಹೆಗಡೆಯವರಲ್ಲಿ ಕೃಷಿ, ಡಿಕಾಕ್ಷನ್ ಟ್ಯಾಂಕ್, ಡ್ರಿಪ್, ಮೈಕ್ರೋ ಸ್ಪ್ರಿಂಕ್ಲರ್ ಬಗ್ಗೆ ಘಂಟೆಗಟ್ಟಲೆ ಚರ್ಚೆ ನಡೆಸಿದರು. ಅವರ ಕೃಷಿ ಉತ್ಸಾಹ ಅದಮ್ಯ. ಆ ಕ್ಷಣಗಳಲ್ಲಿ ಗೈಡ್ ಪ್ರಸಾದ್ ಮರೆತುಹೋಗಿದ್ದ!
ಶೆಣೈಯವರಿಗೆ ನಮ್ಮ ತೋಟವೂ ಇಷ್ಟವಾಗಿತ್ತು. ನಾವು ದೊಡ್ಡ ಪ್ರಮಾಣದಲ್ಲಿ ನಡೆಸುವ ಎರೆಗೊಬ್ಬರ ತಯಾರಿ ಗಮನ ಸೆಳೆದಿತ್ತು. ಆ ಬಗ್ಗೆ ದೀರ್ಘವಾಗಿ ವಿಚಾರಿಸಿದವರು ಖಚಿತವಾಗಿ ಹೇಳಿಬಿಟ್ಟರು, "ಪ್ರಸಾದ್, ಮೊದಲ ವರ್ಷ ನಿಮ್ಮಿಂದಲೇ ನಾನು ಎರೆಗೊಬ್ಬರ ಖರೀದಿಸುತ್ತೇನೆ. ಘಟ್ಟದ ಕೆಳಗಿನಿಂದ ತೆಂಗಿನಕಾಯಿ ಲೋಡ್ ಕಳಿಸಿ ವಾಪಾಸು ಬರುವಾಗ ಎರೆಗೊಬ್ಬರ ತುಂಬಿದರೆ ಖರ್ಚು ಗಿಟ್ಟೀತು. ಆದರೆ ಮುಂದಿನ ಸೀಸನ್‌ನಲ್ಲಿ ನಮ್ಮಲ್ಲೇ ಎರೆಪ್ಲಾಂಟ್ ಮಾಡುತ್ತೇನೆ. ಹುಳ ನೀವು ಕೊಡಬೇಕು. ಪ್ಲಾಂಟ್ ನಿರ್ಮಿಸುವ ವೇಳೆ ನೀವೇ ಬಂದು ನಾಲ್ಕು ದಿನ ನಮ್ಮಲ್ಲಿದ್ದು ಮೇಲ್ವಿಚಾರಣೆ ನಡೆಸಬೇಕು" ಹೆ.....ಹ್ಹೆ........... ಗೊಬ್ಬರ ಮಾರಾಟವಾಗುವ ಆಮಿಷ ಇದ್ದಾಗ ನಾನು ತಲೆಯಾಡಿಸದೇ ಇದ್ದೀನೇ?
ನನಗ್ಗೊತ್ತು, ನಾನೊಂದು ತರ ವಿಚಿತ್ರ. ನಾನು ಒಳ್ಳೆಯ ಕಿವಿಯೇ ವಿನಃ ಪ್ರಶ್ನಕನಲ್ಲ. ನನ್ನೊಂದಿಗೆ ಮಾತನಾಡುವವರು ಹೇಳಿದ್ದನ್ನು ಕೇಳಿಸಿಕೊಳ್ಳುತ್ತೇನೆಯೇ ವಿನಃ ನಾನಾಗಿ ಪ್ರಶ್ನೆ ಕೇಳುವುದಿಲ್ಲ. ಅದೂ ಇದೂ ವಿಚಾರಿಸುವುದಿಲ್ಲ. ಅದಕ್ಕೇ ಏನೋ ನನಗೆ ತಮ್ಮ ಕತೆ ಹೇಳಿಕೊಳ್ಳುವ ಸ್ನೇಹಿತರೇ ಜಾಸ್ತಿ! ತಮ್ಮ ಕೃಷಿ, ಜಮೀನಿನ ರಗಳೆಗಳನ್ನು ವರದಿ ಮಾಡುತ್ತಿದ್ದ ಶೆಣೈ ಯಾಕೋ ಏನೋ ತಮ್ಮ ಸಂಸಾರದ ಕತೆ ಹೇಳಿಕೊಂಡವರಲ್ಲ. ಯಾವತ್ತೋ ಒಮ್ಮೆ ಮಾತಿನ ಮಧ್ಯೆ ತಾವು ಮಂಗಳೂರಿನಲ್ಲಿರುವ ಬಂಗಲೆಯ ಪ್ರಸ್ತಾಪ ಮಾಡಿದ್ದು ಬಿಟ್ಟರೆ ಅವರ ವಿಳಾಸ ಕೇಳುವುದಕ್ಕೂ ನಾನು ಹೋಗಿರಲಿಲ್ಲ. ಸುಮ್ಮನೆ ಅವರ ವಾಸಸ್ಥಳವನ್ನು ಒಂದೆಡೆ ನಮೂದಿಸಿಟ್ಟು, ಮರೆತಿದ್ದೆ.
ನಿಜಕ್ಕೂ ಕೃಷಿಗೆ ಇಳಿಯುವ ಹಂತದಲ್ಲಿ ಶೆಣೈಯವರಿಗೆ ವ್ಯವಸಾಯದ ಕಷ್ಟ ಅರ್ಥವಾಗಿತ್ತು. "ಪ್ರಸಾದ್, ಇಲ್ಲಿ ಕೃಷಿಕಾರ್ಮಿಕರೇ ಸಿಗುತ್ತಿಲ್ಲ. ಕೊನೆಪಕ್ಷ ಈಗಿರುವ ಜಮೀನಿಗೆ ಬೇಲಿ ಹಾಕೋಣ ಎಂದರೂ ಆಳು ಸಿಗುತ್ತಿಲ್ಲ. ನಮ್ಮಲ್ಲಿಯೇ ಬಂದು ಬಿಡಾರ ಹೂಡುವ ಕಾರ್ಮಿಕ ಕುಟುಂಬ ನಿಮ್ಮಲ್ಲಿ ಸಿಕ್ಕೀತೆ, ವಿಚಾರಿಸಿ"
ನಾನು ತಕ್ಷಣವೇ ವಿವರಿಸಿದ್ದೆ, "ಇಲ್ಲ ಸಾರ್, ಮಲೆನಾಡಿನಲ್ಲಿ ಅಂತಹ ಕುಟುಂಬಗಳು ಸಿಕ್ಕುವುದಿಲ್ಲ. ಅದಕ್ಕೇನಿದ್ದರೂ ನೀವು ಬಯಲುಸೀಮೆಯಲ್ಲಿ ವಿಚಾರಿಸಬೇಕು. ಅಷ್ಟಕ್ಕೂ ಅಲ್ಲಿ- ನಿಮ್ಮಲ್ಲಿ ಸೆಖೆ ಒಂದೇ ರೀತಿ ಇರುವುದರಿಂದ ಅವರೇ ನಿಮಗೆ ಲಗತ್ತಾದಾರು"
"ಸರಿ, ಸರಿ. ನನಗೆ ಬೀದರ್‌ನಲ್ಲಿ ಒಬ್ಬ ಹಳೆಯ ಸ್ನೇಹಿತನಿದ್ದಾನೆ. ಇಂದೇ ವಿಚಾರಿಸುತ್ತೇನೆ" ಎಂದು ಫೋನಿಟ್ಟರು. ಏನು ಮಾಡಿದರು ಅಂತ ಆಮೇಲೆ ನಾನು ಕೇಳಲಿಲ್ಲ! ಅದು ನನ್ನ ಜಾಯಮಾನವಲ್ಲ.
ಮುಂದಿನ ಮೂರ‍್ನಾಲ್ಕು ತಿಂಗಳು ಬೇಸಿಗೆ. ಯಾವುದೇ ಕೃಷಿ ಆರಂಭಿಸುವುದಕ್ಕೂ ತಕ್ಕ ಕಾಲವಲ್ಲ. ಆದರೆ ಆಗಾಗ್ಗೆ ಶೆಣೈ ಅದೂ ಇದೂ ವಿಚಾರಿಸುತ್ತಲೇ ಇದ್ದರು. ನನ್ನಲ್ಲಿರುವ ಸಂಗ್ರಹದಿಂದ ಹುಡುಕಿ ಮಾಹಿತಿಯನ್ನು ಅವರಿಗೆ ಕೊಡುತ್ತಿದ್ದೆ.
ಅವತ್ತು ಫೋನ್ ಮಾಡಿದ ಶೆಣೈ ನಿರುಮ್ಮಳಗೊಂಡಂತಿದ್ದರು. "ಪ್ರಸಾದ್, ಅಂತೂ ಕೋರ್ಟ್ ಕೇಸ್ ನಮ್ಮ ಪರ ಆಗುವಂತಿದೆ. ಬ್ಯಾಂಕ್‌ನವರೂ ಕೂಡ ನಮ್ಮ ದಾಖಲೆಗಳನ್ನು ಒಪ್ಪಿಕೊಂಡಿದ್ದಾರೆ. ಇನ್ನು ೧೫ ದಿನದಲ್ಲಿ ಲೋನ್ ಮಂಜೂರು ಆಗಬಹುದು. ಏನೇ ಆಗಲಿ ನಿಮಗೆ ನಾನು ತಿಳಿಸುತ್ತೇನೆ" ಶುಭಾಷಯ ಹೇಳಿ ಸುಮ್ಮನಾದ ನಾನು ನನ್ನ ಅಡಿಕೆ ತೋಟ, ಲೇಖನ ಕೃಷಿಯಲ್ಲಿ ಮುಳುಗಿಬಿಟ್ಟೆ.

*********************************

ದೊಡ್ಡ ಎರೆಗೊಬ್ಬರದ ಆರ್ಡರ್ ಅಚಾನಕ್ ನನಗೆ ಸಿಕ್ಕಿತು. ಒಂದು ಸಾವಯವ ಗೊಬ್ಬರ ಕಂಪನಿ ಬಲ್ಕ್ ಆಗಿ ಖರೀದಿಸುವ ಸೂಚನೆ ನೀಡಿ ಒಪ್ಪಂದಕ್ಕೆ ಬರುವ ಮಾತನಾಡಿತು. ಆದರೆ ಅವರ ಸತ್ಯಾಸತ್ಯತೆ ಅರಿಯದೆ ನಾನು ಮುಂದುವರಿಯುವಂತಿರಲಿಲ್ಲ. ಅದರ ಕೇಂದ್ರ ಕಛೇರಿ ಇದ್ದುದು ಮಂಗಳೂರಿನಲ್ಲಿ. ತಟ್ಟನೆ ನೆನಪಾದದ್ದು ಶೆಣೈ. ನಾನಲ್ಲಿಯವರೆಗೆ ಹೋಗಬೇಕು ಎಂಬುದು ಹಿಂಸೆ. ಅದರ ಬದಲು ಶೆಣೈರಿಗೆ ಹೇಳಿ ವಿಚಾರಿಸಿ ತಿಳಿಸಿ ಎಂದರೆ?
ನಾನು ಈವರೆಗೆ ಮಾಡಿದ ಉಪಕಾರಕ್ಕೆ ಅವರು ಅಷ್ಟೂ ಮಾಡದಿರುವುದಿಲ್ಲ. ಅಷ್ಟು ಖಾತ್ರಿ ನನಗಿತ್ತು. ಆದರೂ ಹತ್ತು ದಿನ ಕಾಯ್ದೆ. ಅವರೇ ಫೋನ್ ಮಾಡುತ್ತಾರೇನೋ, ಆಗಲೇ ವಿಚಾರಿಸಿದರಾಯ್ತು ಅಂತ! ಊಹ್ಞೂ, ಪ್ರಾಣಿ ಫೋನ್ ಮಾಡಲೇ ಇಲ್ಲ. ಜಮೀನು ಇವರ ಪರ ಆದ ಸುದ್ದಿಯನ್ನು ಹೇಳಲಿಲ್ಲವಲ್ಲ. ವಿಚಿತ್ರ ಜನ. ಬೇಗ ಮರೆತುಬಿಡುತ್ತಾರೆ! ಇನ್ನೆಂತ ಮಾಡುವುದು? ಹಿಂದೆಂದೋ ಬರೆದಿಟ್ಟ ಅವರ ಫೋನ್ ನಂಬರ್‌ನ್ನು ಕಷ್ಟಪಟ್ಟು ಹುಡುಕಿದೆ. ತಡ ಮಾಡದೆ ಡಯಲ್ ಮಾಡಿದೆ.
"ಹಲೋ....."
"ಹಲೋ....ನಮಸ್ಕಾರ. ಶೆಣೈಯವರು ಇದ್ದಾರಾ, ನರೇಂದ್ರ ಶೆಣೈ ?"
"ಹ್ಞಾ, ಹೇಳಿ.......ತಾವ್ಯಾರು, ಏನಾಗಬೇಕಿತ್ತು?"
"ಸಾರ್, ನಾನು ಸಾರ್.... ಪ್ರಸಾದ್. ಸಾಗರ. ಹೇಗಿದೆ ಸಾರ್ ಕೃಷಿ?"
ನಾನು ಮಾತು ಮುಂದುವರಿಸುವ ಮುನ್ನವೇ ಅತ್ತಲಿಂದ "ಸಾರಿ ಸಾರ್, ನನಗಾರೂ ಸಾಗರದವರು ಗೊತ್ತಿಲ್ಲ. ಈಗ ಟೈಮೂ ಇಲ್ಲ. ಬೇಕಿದ್ದರೆ ರಾತ್ರಿ ಕರೆ ಮಾಡಿ" ಎಂದವರೇ ಫೋನ್ ಕುಕ್ಕಿಬಿಟ್ಟರು.
ಮನಸ್ಸಿಡೀ ಗೊಂದಲ. ಕರೆ ಸ್ವೀಕರಿಸಿದ ಮನುಷ್ಯ ಯಾರು? ಶೆಣೈ ಬಗ್ಗೆ ಆತ ಏನೂ ಹೇಳಲೇ ಇಲ್ಲವಲ್ಲ. ಈ ಶೆಣೈ ಮಂಗಳೂರಿನ ಬಂಗಲೆ ಮಾರಿ ಅದಾಗಲೇ ಜಮೀನಿನ ಪಕ್ಕ ಮನೆ ಕಟ್ಟಿಸಿಕೊಂಡು ಹೋಗಿರಬಹುದೇ? ಯಾಕೋ ನನಗೇನೂ ಹೇಳದೆ ಶೆಣೈ ಇದನ್ನೆಲ್ಲ ಮಾಡಿದ್ದಾರೆ ಎಂಬುದೇ ನನ್ನ ಇಗೋಗೆ ಪೆಟ್ಟಾಗಿತ್ತು. ದೂರದಲ್ಲೆಲ್ಲೋ ಅನುಮಾನದ ಕರಿ ಮೋಡ.
ಮಂಗಳೂರಿನಲ್ಲೇ ನನಗೆ ಇನ್ನೊಬ್ಬ ಸ್ನೇಹಿತ ಇರುವ, ಸ್ನೇಹಾನಂದ ಕಾಮತ್. ಅದ್ಯಾವುದೋ ಕಾರ್ಖಾನೆಯ ಮ್ಯಾನೇಜರ್. ಆತನ ಅಂತಸ್ತು ನನ್ನ ಮಟ್ಟಕ್ಕಿಂತ ಮೇಲೇರಿಬಿಟ್ಟಿದ್ದರಿಂದ ಆತನನ್ನು ಮಾತನಾಡಿಸುವ ಗೋಜಿಗೆ ಹೋಗಿರಲಿಲ್ಲ. ಅಪರೂಪಕ್ಕೊಂದು ಫೋನ್. ಊರಿಗೆ ಬಂದ ಕೆಲವೊಮ್ಮೆ ಭೇಟಿ, ಇಷ್ಟೇ. ಈಗ ಅನಿವಾರ್ಯ. ಸಂಪರ್ಕಿಸಿದೆ. ನನಗೆ ಆ ಗೊಬ್ಬರ ಕಂಪನಿಯ ನಿಜಾಯಿತಿ ಅರ್ಜೆಂಟಾಗಿ ಬೇಕಾಗಿತ್ತು. ಮಧ್ಯೆ ಈ ಶೆಣೈ ಮಹಾತ್ಮನ ಕುರಿತು ಮಾಹಿತಿ ಸಿಕ್ಕರೆ ಒಂಥರ ನಿರುಮ್ಮಳ.
ಪಾಪ, ಕಾಮತ್ ನನ್ನ ಫೋನ್ ಕರೆಗೆ ಇನ್ನಿಲ್ಲದ ಮಹತ್ವ ಕೊಟ್ಟ. ಆತನಿಗೆ ನನ್ನ ಧ್ವನಿ ಕೇಳಿ ಆದ ಹರ್ಷ ನನಗೆ ಗೊತ್ತಾಗುವಷ್ಟು ಸ್ಪಷ್ಟವಿತ್ತು. ಆ ದಿನ ಸಂಜೆಯೇ ಎಲ್ಲ ಕಡೆ ಓಡಾಡಿ ಮಾಹಿತಿ ಸಂಗ್ರಹಿಸಿ ಕೊಡುವುದಾಗಿ ಹೇಳಿದ.
ಸಂಜೆ ಆತ ಮಾಡಿದ ಫೋನ್ ಕರೆಯಲ್ಲಿ ಮಾಹಿತಿ ಇರಲಿಲ್ಲ. "ನೋಡು, ಈಗ ನೀನು ಟೂರ್ ಅಂದರೆ ಬೋರ್, ಅಲರ್ಜಿ...ಹಾಗೆ ಹೀಗೆ ಅಂತೆಲ್ಲ ಹೇಳಬೇಡ. ಮುದ್ದಾಂ ಬರಲೇಬೇಕು. ನಿನ್ನ ಬಿಸಿನೆಸ್ ನೆಲೆಗೊಳ್ಳಬೇಕು ಎಂದರೆ ನಾಳೆ ಬೆಳಿಗ್ಗೆ ನಮ್ಮಲ್ಲಿಗೆ ಬಂದಿರಬೇಕು. " ಈ ಕಾಮತ್ ಬರುತ್ತೀಯಾ, ಇಲ್ಲವೇ ಎಂಬ ವಿಚಾರಣೆ ನಡೆಸದೆ ನೇರವಾಗಿ ಬರಲು ಆದೇಶವಿತ್ತಿದ್ದ. ಇನ್ನು ಗತ್ಯಂತರವಿಲ್ಲ!

***********************************************

ಮಂಗಳೂರಿಗೆ ಹೋದ ಕ್ಷಣವೇ ಸಿಹಿ ಸುದ್ದಿ ಸಿಕ್ಕಿತ್ತು. ಸಾವಯವ ಗೊಬ್ಬರದ ಕಂಪನಿಯ ವ್ಯವಹಾರ ಧೋಕಾ ಆಗಿರಲಿಲ್ಲ. ಕಾಮತ್‌ನ ಪತ್ನಿ ಸತ್ಕರಿಸಿದ ರೀತಿ ಅಂತಸ್ತುಗಳ ಅಂತರವನ್ನು ಮರೆಸಿತ್ತು. ಆದರೆ ಶೆಣೈ ವಿಚಾರದಲ್ಲಿ ಕಾಮತ್ ಮುಗುಂ ಆಗಿರುವುದು ನನ್ನನ್ನು ಅಸಹನೆಗೆ ಈಡುಮಾಡಿತ್ತು. ನೋಡಿದರೆ ಕಾಮತ್ ಶೆಣೈರ ಬಗ್ಗೆ ಪತ್ತೆದಾರಿಕೆ ಮಾಡಿದಂತೆ ಕಾಣುತ್ತಿಲ್ಲ. ಇರಲಿ, ನಾನೇ ಒಂದು ಸುತ್ತು ಹುಡುಕಿದರಾಯ್ತು.
ಮಧ್ಯಾಹ್ನದ ಪುಷ್ಕಳ ಊಟದ ನಂತರ ಬಾಲ್ಕನಿಯಲ್ಲಿ ಕುರ್ಚಿ ಹಾಕಿ ಕುಳಿತೆವು. ಆ ಶಾಲಾ ದಿನ, ಸಹಪಾಠಿಗಳು, ಅವರಿಗಿಟ್ಟಿದ್ದ ಅಡ್ಡಹೆಸರು, ಮೊಳಕೆ ಒಡೆದಿದ್ದ ಲವ್ ಅಫೇರ್‌ಗಳು..... ನೆನಪಿಸಿ ನಗೆಯಾಡುತ್ತಿದ್ದರೂ ಕಾಮತ್‌ನ ಕಣ್ಣು ಎದುರುಗಡೆ ಏನನ್ನೋ ನಿರೀಕ್ಷಿಸುತ್ತಿತ್ತು. ಏನಾಗಿದೆ ಇವನಿಗೆ?
ಆತ ಗಂಭೀರವಾದ, "ಪ್ರಸಾದಿ, ನೀನು ಶೆಣೈ ನಿಮ್ಮಲ್ಲಿಗೆ ಬಂದಾಗ ತೆಗೆದ ಫೋಟೋವನ್ನು ಮೇಲ್ ಮಾಡಿದ್ದು ಅನುಕೂಲವಾಯಿತು....." ಆತ ಇನ್ನೇನೋ ಹೇಳಬೇಕೆಂದು ಹೊರಡುವಷ್ಟರಲ್ಲಿ ನನಗೆ ಎದುರಿನ ಬಂಗಲೆಯಿಂದ ಕ್ವಾಲಿಸ್ ಕಾರು ಹೊರಹೊರಟಿದ್ದು ಕಾಣಿಸಿತು. "ಹೇ, ಅದು ಶೆಣೈಯವರ ಕ್ವಾಲಿಸ್" ಹೆಚ್ಚುಕಡಿಮೆ ನಾನು ಕೂಗಿಯೇ ಬಿಟ್ಟಿದ್ದೆ.
"ನಿಜ. ಅದು ನರೇಂದ್ರ ಶೆಣೈಯವರ ಕಾರು. ಬಂಗಲೆಯೂ ಅವರದ್ದೇ. ನಮ್ಮ ಪ್ಲಾಟ್ ಅವರ ಬಂಗಲೆ ಎದುರು ಬದುರು ಇರುವುದು ಕಾಕತಾಳೀಯ ಇರಲಿಕ್ಕಿಲ್ಲ....." ಕಾಮತ್ ಏನೋ ಹೇಳುತ್ತಿದ್ದರೂ ಅವು ನನ್ನ ಗಮನದಲ್ಲಿರಲಿಲ್ಲ. ಕಣ್ಣು ಎದುರಿನ ಬಂಗಲೆಯಲ್ಲಿತ್ತು.
ಕಾರು ಹೊರಹೋಗುತ್ತಿದ್ದಂತೆ ಒಬ್ಬ ವ್ಯಕ್ತಿ ಗೇಟು ಹಾಕಿದ. ಅಲ್ಲೇ ಪಕ್ಕದಲ್ಲಿದ್ದ ಸ್ಟೂಲ್‌ನಲ್ಲಿ ಕುಳಿತುಕೊಂಡ. ಬೀಡಿ ಹಚ್ಚಿದನೇ? ಊಹ್ಞೂ, ಅಷ್ಟು ದೂರದಿಂದ ಸ್ಪಷ್ಟವಾಗಿ ಕಾಣುತ್ತಿಲ್ಲ. ಕಾಮತ್ ಬೈನಾನುಕುಲರ್ ಕೊಟ್ಟು "ಈಗ ನೋಡು" ಎಂದ. ಫೋಕಸ್ ಮಾಡುತ್ತಿದ್ದ ನಾನು ಅಕ್ಷರಶಃ ಬೆಚ್ಚಿಬಿದ್ದೆ. "ಅದು....ಅದು.... ನರೇಂದ್ರ ಶೆಣೈ!"
"ಅಲ್ಲ, ಆತ ಶೆಣೈ ಮನೆಯ ವಾಚ್‌ಮನ್ ಸಿದ್ದಪ್ಪ. ಶೆಣೈರದು ಮಾರುತಿ ಕಾರ್ ಶೋರೂಂ ಇದೆ. ಮಂಗಳೂರಿಗೇ ನಂಬರ್ ಒನ್. ಮನೆಯಲ್ಲಿ ಬೇರೆ ಯಾರೂ ಇಲ್ಲ. ಈ ಸಿದ್ದಪ್ಪ ಪ್ರಾಮಾಣಿಕ. ಹಾಗಾಗಿ ಶೆಣೈ ಅವನಿಗೆ ಸಾಕಷ್ಟು ಸ್ವಾತಂತ್ರ್ಯ ನೀಡಿದ್ದಾರೆ. ಅದನ್ನು ಉಪಯೋಗಿಸಿಕೊಂಡು ಸಿದ್ದಪ್ಪ ನಿನ್ನನ್ನು ಪಿಗ್ಗಿ ಬೀಳಿಸಿದ್ದಾನೆ. ಆತನಿಗೆ ಪಾಂಡೇಲು ಬಿಡು, ಎಲ್ಲೂ ಒಂದಿನಿತು ಜಾಗ ಇಲ್ಲ. ಮನೆ ಇಲ್ಲ. ಈಗಲೇ ಹೋಗಿ ಆತನನ್ನು ಕಾಲರ್ ಪಟ್ಟಿ ಹಿಡಿದು ವಿಚಾರಿಸೋಣ ನಡಿ"
ಶಾಕ್‌ನಿಂದ ಹೊರಬಂದಿದ್ದೆ. ನನಗೆ ವಿಷಯ ಅರ್ಥವಾಗಿತ್ತು. ಈ ಶೆಣೈ ಅಲಿಯಾಸ್ ಸಿದ್ದಪ್ಪನ ಸುಪ್ತ ಮನಸ್ಸಿನಲ್ಲಿ ಕೃಷಿಕನಾಗುವ ಹೆಬ್ಬಯಕೆ ಇದೆ. ಅದು ಈಡೇರುವುದಿಲ್ಲ ಎಂಬುದೂ ಆತನಿಗೆ ನಿಚ್ಚಳವಿದೆ. ಆದರೆ ಕೆಲವರ ಎದುರಾದರೂ ತಾನೊಬ್ಬ ರೈತ ಎನ್ನಿಸಿಕೊಳ್ಳುವ ಆಕಾಂಕ್ಷೆ. ವೈದ್ಯಕೀಯ ಭಾಷೆಯಲ್ಲಿ ಇದಕ್ಕೇನು ಹೇಳುತ್ತಾರೋ. ತನ್ನ ಆಸೆ ಪೂರೈಕೆಗೆ ಆತ ದೂರದ ಊರಿನ ನನ್ನನ್ನು ಆಯ್ದುಕೊಂಡಿದ್ದಾನೆ. ಈಗ ಫೋನ್‌ನ ವಿಚಾರದಲ್ಲಾದ ಗೊಂದಲಕ್ಕೂ ಕಾರಣ ಸಿಕ್ಕಿತ್ತು.
ಸ್ಪಷ್ಟವಾಗಿ ಕಾಮತ್‌ಗೆ ಹೇಳಿದೆ, " ಬೇಡ ಮಿತ್ರ, ಆತನನ್ನು ಬಯಲುಗೊಳಿಸುವುದು ಬೇಡ. ನನ್ನ ಕೆಲ ನಿಮಿಷಗಳು ಆತನ ಫೋನ್ ಕರೆಗೆ ಖರ್ಚಾದೀತು. ಆದರೆ ಅದು ಅವನಿಗೆ ಕೊಡುವ ಖುಷಿ ಅಗಣಿತ. ಇರಲಿ ಬಿಡು ಶೆಣೈ ಹಾಗೆಯೇ!!" ಬೀಡಿ ಕಚ್ಚಿದ ಸಿದ್ದಪ್ಪನನ್ನು ನೋಡುತ್ತ ಹೇಳುತ್ತಿರುವಾಗಲೇ ಆತ ಬೀಡಿ ಮುಂಡು ಎಸೆದು ಮನೆಯೊಳಗೆ ದಾಟಿಹೋದ.
ಇತ್ತ ನನ್ನ ಮೊಬೈಲ್ ರಿಂಗುಣಿಸಿತು.
"ನಮಸ್ಕಾರ"
"ನಮಸ್ಕಾರ ಪ್ರಸಾದ್..... ಯಾಕೋ ನನಗೆ ನಿರಾಶೆಯೇ ಹೆಚ್ಚಾಗುತ್ತಿದೆ. ನಮ್ಮ ದೊಡ್ಡಪ್ಪನ ಮಗ ಹೈಕೋರ್ಟ್‌ಗೆ ಅಪೀಲು ಹೋಗಿದ್ದಾರೆ. ಶ್ರೀಗಂಧದ ಸಸಿಗಳಿಗೆ ಆರ್ಡರ್ ಕೊಡುವುದೇ ಬೇಡವೇ ಎಂಬ ಗೊಂದಲದಲ್ಲಿದ್ದೇನೆ. ಬಹುಷಃ ಮತ್ತೆ ಬ್ಯಾಂಕ್ ಸಾಲ ಕೊಡಲು ತಡ ಮಾಡಬಹುದು. ಇರಲಿ, ಈ ವರ್ಷ ಶುಂಠಿಗೆ ಒಳ್ಳೆ ರೇಟು ಬಂದಿದೆಯಂತಲ್ಲ. ನನ್ನ ಆರು ಎಕರೆ ಗದ್ದೆಗೆ ಹಾಕಿಬಿಡಬಹುದೇನೋ ಅಲ್ಲವೇ? ನಿಮ್ಮಲ್ಲಿ ಎಲ್ಲಿ ಬೀಜದ ಶುಂಠಿ ಸಿಗುತ್ತದೆ, ವಿಚಾರಿಸುತ್ತೀರಾ.....?
ಶೆಣೈ ಫೋನ್, ನಾನು ಹಿಂದಿನಂತೆಯೇ ಉತ್ತರಿಸಲು ಪ್ರಯತ್ನಿಸಿ ಯಶಸ್ವಿಯಾದೆ. ಇನ್ನು ಯಾರಲ್ಲಿ ಶುಂಠಿ ಸಿಗುತ್ತದೆ ಎಂಬ ಮಾಹಿತಿ ಸಂಗ್ರಹಿಸಬೇಕು. ಮಾತನಾಡುತ್ತ ಕೂರಲು ಸಮಯವಿಲ್ಲ. ಊರಿಗೆ ಹೊರಡುವುದೇ. ಬರಲಾ ಕಾಮತ್?
*******
-ಮಾವೆಂಸ


ಶುಕ್ರವಾರ, ಫೆಬ್ರವರಿ 11, 2011

ಈ ಜೋಗದ ಜಗ ಸೋಜಿಗ!

ಫೋಟೋ ಕೃಪೆ- ರಾಘವೇಂದ್ರ ಶರ್ಮಾ ಕೆ ಎಲ್
ಕಡವಿನಮನೆ
ಅಂ: ತಲವಾಟ
ಸಾಗರ, ಶಿವಮೊಗ್ಗ
೫೭೭೪೨೧


ಈ ಜೋಗ ಹೊಸದಲ್ಲ. ಜೀವನದಲ್ಲೊಮ್ಮೆ ನೋಡಬೇಕು ಎಂಬ ಕೌತುಕದೊಂದಿಗೆ ಆಗಮಿಸುವವರಲ್ಲಿ ನಾನಾ ವಿಧ. ಜಲಪಾತದ ವೈಭವ ನೋಡಿ ಮೈಮರೆಯುವದಕ್ಕಿಂತ ಪ್ರೇಮಿಯ ತೆಕ್ಕೆಯಲ್ಲಿ ಪರಿಸರದ ಅರಿವೂ ಇಲ್ಲದೆ ಕಳೆಯುವ ವೀಕೆಂಡ್ ಲವರ್‌ಗಳು, ಇನ್ನಾವುದೋ ಮತ್ತಿನಲ್ಲಿ ತೇಲಾಡುವ ಹವ್ಯಾಸಿಗಳು, ಒಂದು ದಿನದ ಪ್ರವಾಸದಲ್ಲಿ ಇನ್ನಷ್ಟು ಸ್ಥಳಕ್ಕೆ ಭೇಟಿ ಕೊಟ್ಟು ಅಂಕಿಅಂಶ ಅಭಿವೃದ್ಧಿಪಡಿಸಿಕೊಳ್ಳುವ ಲೆಕ್ಕಾಚಾರದ ಗಡಿಬಿಡಿ ಯಜಮಾನರು, ತಿಂಡಿಪೋತರು...... ಇವರೆಲ್ಲರ ನಡುವೆ ಅಸಲಿ ಪ್ರವಾಸಿಗರು. ರಜಾ ದಿನಗಳಲ್ಲಿ ಜೋಗದ ಆಚೆ ಈಚೆ ವಾಹನಗಳ ಸಂತೆ. ಪ್ಲಾಸಿಕ್ ನಿಷೇಧ ಎಂದು ಘೋಷಿಸಿದ್ದನ್ನು ವ್ಯಂಗ್ಯವಾಡುವ ಪ್ಲಾಸ್ಟಿಕ್ ರಾಶಿಗಳು!!
ಜೋಗದ ಸುತ್ತಲಿನ ಕಾರು, ವಾಹನ, ಕಸ
ಈ ವಾರ ಹೋದಾಗ ಕಂಡ ದೃಶ್ಯವೇ ಬೇರೆ. ಉದ್ದನೆಯ ಕಾರು, ಬಸ್ಸುಗಳ ಸಾಲಂತೂ ಇತ್ತು. ಹೇಳಿ ಕೇಳಿ ಪ್ರವಾಸದ ವಸಂತವಾದ ಡಿಸೆಂಬರ್ - ಜನವರಿ ತಿಂಗಳಲ್ಲಿ ಜನರ ಕೊರತೆ ಕಾಣದು. ಜಲಪಾತದಲ್ಲಿ ಮಾತ್ರ ನೀರಿಗೆ ತತ್ವಾರ. ಕಾರಣವೂ ಈ ಬಾರಿ ನಿಚ್ಚಳ. ಮಲೆನಾಡಿನಲ್ಲಿ ಜಿಟಿಜಿಟಿ ಮಳೆ ಸುರಿದು ಭೂಮಿ ನೀರು ಹೀರಬೇಕು. ಇದರಿಂದ ಭೂಮಿಯೊಳಗಿಂದ ನೀರಿನ ಒರತೆ ಹುಟ್ಟಬೇಕು. ಹೀಗೆ ನೀರು ಹುಟ್ಟಿದರೆ ಫೆಬ್ರವರಿ - ಮಾರ್ಚ್ ಕಳೆದರೂ ಜೋಗದ ಕವಲುಗಳಿಗೆ ಅಷ್ಟಿಷ್ಟು ಜೀವ ಉಳಿದಿರುತ್ತದೆ.
ಈ ವರ್ಷದ ಕತೆಯೇ ಬೇರೆ. ಮಳೆ ಕಡಿಮೆ ಬಿದ್ದಿಲ್ಲ. ನವೆಂಬರ್ ಬಂದರೂ ಬಿಟ್ಟಿರಲಿಲ್ಲ. ಆದರೆ ಧುಮಧುಮನೆ ಧುಮ್ಮುಕ್ಕಿ ಆಕಾಶ ತೂತಾಗಿದೆಯೇನೋ ಎನ್ನಿಸಿತ್ತು. ಭೂಮಿಯ ಮೇಲ್ಮಣ್ಣು ತೊಳೆದಿದ್ದರ ಹೊರತಾಗಿ ಒರತೆ ನೆಗೆದಿಲ್ಲ. ಜನವರಿ ಆರಂಭಕ್ಕೆ ಜಲಪಾತ ‘ಝೀರೋ ಸೈಜ್’ ಪಡೆದಿದೆ! ಈ ಮಾದರಿಯ ಮಳೆ ಮುಂದುವರೆದರೆ ಒಂದು ದಿನ ಜಲಪಾತವೇ ಮಾಯವಾದರೆ ಅಚ್ಚರಿಯಿಲ್ಲ .
ಝೀರೋಸೈಜ್ ಜೋಗ
ಈ ಮಾತನ್ನು ಪಕ್ಕಕ್ಕಿಡಿ. ವಾಹನಗಳ ಸಾಲು ನೋಡಿ ಪ್ರವಾಸಿಗರನ್ನು ಎಣಿಸುವ ಹುನ್ನಾರ ನಡೆಸಿದರೆ ಜನರೇ ಕಾಣಲೊಲ್ಲರು. ಅರೆ, ಹೊಚ್ಚ ಹೊಸದಾಗಿ ನಿರ್ಮಿಸಿರುವ ವೀಕ್ಷಣಾ ಗೋಪುರಗಳು ಬಣ ಬಣ.
ಬಣಗುಡುವ ವೀಕ್ಷಣಾ ಗೋಪುರ
ಅಷ್ಟಕ್ಕೂ ಇಲ್ಲಿಂದ ನೋಡಲಾದರೂ ಎಂತಿದೆ? ಈಗ ಗೊತ್ತಾಯ್ತು, ಪ್ರವಾಸಿಗರು ನೇರವಾಗಿ ಜೋಗದ ಗುಂಡಿಯ ತಳದತ್ತ ಇಳಿದುಹೋಗುತ್ತಿದ್ದಾರೆ. ಅವರ ಅದೃಷ್ಟ, ಜೋಗ ಬದಲಾಗಿದೆ. ಮೊದಲಿನಂತೆ ಪಾಚಿ ಕಟ್ಟಿದ ಮೆಟ್ಟಿಲುಗಳಿಲ್ಲ, ಕವಿದ ಪೊದೆಗಳಿಲ್ಲ. ಈಗಲ್ಲಿ ಆಕರ್ಷಕ ಮೆಟ್ಟಿಲುಗಳಿವೆ. ಅಲ್ಲಿನ ತಡೆಗೋಡೆಯ ಕಂಬಗಳನ್ನೇ ನೋಡಿ, ಕಲಾತ್ಮಕವಾಗಿದೆ.
ಜೋಗದ ತಳಕ್ಕೆ ಸುಂದರ ಮೆಟ್ಟಿಲು
ಸುಸಜ್ಜಿತ ಮೆಟ್ಟಿಲುಗಳಿಂದ ಅನಾಯಾಸ ನಡುಗೆಗೆ ಪೂರಕವಾಗಿದೆ. ಸುಸ್ತಿಲ್ಲ, ಸುಖ!
ಈಗ ಜೋಗದ ‘ಗುಂಡಿ’ ನೋಡುವುದು ಸಲೀಸು. ಆದರೆ ಗುಂಡಿ ಅಕ್ಷರಶಃ ಕಸದ ತಿಪ್ಪೇ‘ಗುಂಡಿ’ಯಾದೀತಾ ಎಂಬ ಭಯವೂ ಕಾಡುತ್ತಿದೆ. ಪ್ರವಾಸಿಗರು ತಾವು ತಿನ್ನಲು ತಂದ ಹಾಳುಮೂಳುಗಳನ್ನು ಜಲಪಾತದ ಬುಡದ ಪ್ರದೇಶದಲ್ಲಿ ಹಾಕಲಾರಂಭಿಸಿದ್ದಾರೆ. ತಿಂದು ಎಗ್ಗಿಲ್ಲದೆ ಪ್ಲಾಸ್ಟಿಕ್ ಎಸೆಯುತ್ತಿದ್ದಾರೆ. ಅದ್ಭುತ ದೃಶ್ಯ ಕಾವ್ಯವಾಗಬೇಕಿದ್ದ ಸ್ಥಳ ಪ್ಲಾಸ್ಟಿಕ್ ಗಲೀಜಿನಿಂದ ತುಂಬುವುದು ಎಷ್ಟು ಸರಿ? ಇವೆಲ್ಲವನ್ನೂ ಹೊರಹಾಕಬೇಕೆಂದರೆ ಜಡಿ ಮಳೆ ಸುರಿಯಬೇಕು. ಅರೆ, ಈಗ ತಿಂಗಳಿಗೊಂದಾವರ್ತಿ ಮಳೆ ಸುರಿಯುತ್ತಿರುವುದು ಇದೇ ಕಾರಣಕ್ಕಾ?!
ಈ ಗುಂಡಿಯ ತಳವನ್ನು ಸುಲಭವಾಗಿ ತಲುಪಲು ಸಾಧ್ಯವಾಗಿರುವುದು ಅಪಾಯದ ಇನ್ನೊಂದು ಮಗ್ಗುಲನ್ನು ತೆರೆದಿದೆ. ತಳದ ನೀರಿನ ತಿಳಿ ಕೊಳ ಉತ್ಸಾಹಿಗಳಲ್ಲಿ ಈಜಿನ ಹುಕಿ ತರಿಸುತ್ತದೆ. ಅದರಲ್ಲಿರುವ ಸುಳಿ ಬಲಿಗಾಗಿ ಕಾದಿರುತ್ತದೆ. ಮುಂದಿನ ಮಾತು ಬೇಡ. ಛೆ....ಛೇ...!!
ಈ ಮೊಬೈಲ್ ಮಾತಿಗಿಂತ ಇನ್ನಿತರ ಚಟುವಟಿಕೆಗಳಿಗೆ ಹೆಚ್ಚು ಬಳಕೆಯಾಗುತ್ತಿದೆಯಂತೆ, ನಿನಾಸಂನ ಕೆ.ವಿ.ಅಕ್ಷರ ಹೇಳುತ್ತಿರುತ್ತಾರೆ. ನಾಳೆ ಜೋಗಕ್ಕೂ ಈ ಮಾತು ಅನ್ವಯವಾಗುತ್ತದೆಯೇ? ಇತ್ತೀಚಿನ ಹಲವು ಪ್ರವಾಸಿಗರಿಗೆ ನೀರು ಆಕರ್ಷಣೆಯಲ್ಲ. ಈ ೮೦೦ ಅಡಿ ಎತ್ತರದ ಶಿಲಾ ಶಿಖರವನ್ನು ಚಾರಣ ಮಾಡುವ ತುಡಿತ. ಜನ ಕೋತಿ ರಾಮನ ಹೆಜ್ಜೆಗಳನ್ನು ಅನುಸರಿಸಲಾರಂಭಿಸಿದ್ದರಿಂದ ಕಲ್ಲುಗಳು ಬ್ಯುಸಿ!
ಈ ಎಲ್ಲ ಬದಲಾವಣೆಗಳಿಂದ ನಾವು ನೋಡುತ್ತಿದ್ದ ಹಳೆ ಜೋಗ ಮಾಯವಾಗಿ, ಬೇರೆಯದೇ ಲೋಕಕ್ಕೆ ಬಂದಂತೆನಿಸಿ ನಮ್ಮೂರಲ್ಲೇ ಅಪರಿಚಿತರಾಗಿಬಿಡುತ್ತೇವೆಯೇ ಎನ್ನಿಸಿ ಗಾಬರಿಯಿಂದ ಅತ್ತಿತ್ತ ನೋಡಿದರೆ ಕೆಲವು ಸಮಾಧಾನಗಳು ಕಾಣಿಸಿದವು. ವೀಕ್ಷಣಾ ಗೋಪುರಗಳ ಪಕ್ಕದಲ್ಲಿ ಜನ ತಳಕ್ಕೆ ಮುಗ್ಗರಿಸದಂತೆ ಹಾಕಲಾಗಿರುವ ಕಬ್ಬಿಣದ ಅಡ್ಡಪಟ್ಟಿಗಳು ಅಲ್ಲಲ್ಲಿ ತುಕ್ಕು ಹಿಡಿದು ಮಾಯವಾಗಿ ನಮ್ಮನ್ನು ಪ್ರಾಯೋಗಿಕವಾಗಿ ಜೋಗದ ‘ಗುಂಡಿ’ಗೆ ಆಹ್ವಾನಿಸುತ್ತಿವೆ.
ಜೋಗದ ಗುಂಡಿಗೆ ನೇರ ಆಹ್ವಾನ
ವಾಹನ ತೆಗೆಯುವ ಗಡಿಬಿಡಿಯಲ್ಲಿ ಕಾರಿನಾತ ಮತ್ತೊಬ್ಬನ ಸ್ವಿಫ್ಟ್‌ಗೆ ತಾಕಿಸಿ ದೊಡ್ಡ ಗಲಾಟೆಯೆದ್ದಿದೆ. ರಸ್ತೆ ಆಚೆಯ ಗುಡ್ಡದ ಬುಡದಲ್ಲಿ ನಾಲ್ವರು ಯುವಕರ ಗುಂಪು ಮದಿರೆಯ ಬಾಟಲಿಯ ಸದ್ದನ್ನು ಆನಂದಿಸುತ್ತಿದೆ. ಊಹ್ಞೂ, ಇದು ವಾಸ್ತವ. ಜೋಗ ಜಲಪಾತದ ಸುತ್ತಮುತ್ತಲ ಸಾಂಪ್ರದಾಯಿಕ ದೃಶ್ಯ.
ಈ ಬಾರಿಯಾದರೂ ನೀವು ಬನ್ನಿ...... 
200812023996