ಗುರುವಾರ, ಜುಲೈ 7, 2011

ಊರ ಹೆಗ್ಡೇರು ಗುಳೆ ಹೊರಟ್ರು, ಟಾಡ್ ಭಟ್ರು ಹಳ್ಳಿಗೆ ಬಂದ್ರು.........Add caption

ಹಳ್ಳಿ ಮೂಲೆ, ಜಿಟಿ ಜಿಟಿ ಮಳೆ. ಜಾರುವ ನೆಲ. ಸುತ್ತ ಮರಗಿಡ, ಉಂಬಳ ಸೊಳ್ಳೆ ಧಾರಾಳ. ಮುಖ್ಯ ರಸ್ತೆಗೆ ಅಜಮಾಸು ಒಂದು ಕಿ.ಮೀ. ನಡೆದರೆ ದರ್ಶನ. ಅಲ್ಲಿಯವರೆಗೆ ಮಾತ್ರ ಸಾರಿಗೆ ಬಸ್ಸಿನ ಓಡಾಟ. ಕೈ ಕೊಡುವ ವಿದ್ಯುತ್, ಆಗೀಗ ಸಿಗ್ನಲ್ ತಾಕದ ವಿಲ್ ಫೋನ್...... ಇಂತಹ ಸನ್ನಿವೇಶದಲ್ಲೂ ‘ಕೃಷಿ ಕುಟುಂಬ’ವೊಂದು ನೆಮ್ಮದಿಯಿಂದಿದೆ. ಅಮೆರಿಕನ್ ಯುವಕ, ಇಂಡಿಯನ್ ಹುಡುಗಿಯ ಈ ಸಂಸಾರ ಹಳ್ಳಿಗಳಿಂದ ಗುಳೆ ಎದ್ದು ಹೋಗುತ್ತಿರುವ ನಮ್ಮವರಿಗೆ ಶಾಕ್ ಕೊಡಬಲ್ಲದು.
ಉಹ್ಞೂ, ಅವರಿರುವ ಊರಿನ ಹೆಸರಿನ ಪ್ರಸ್ತಾಪವೇ ಬೇಡ. ಸಾಗರದ ಸಾಂಸ್ಕೃತಿಕ ರಾಜಧಾನಿ ಎನ್ನಬಹುದಾದ ಹೆಗ್ಗೋಡಿನ ಸಮೀಪ ಎಂದಷ್ಟೆ ದಾಖಲಿಸಿಕೊಳ್ಳೋಣ. ಇಲ್ಲಿ ಅಮೆರಿಕದ ಕ್ಲೇವ್‌ಲೆಂಡ್‌ನ ಟಾಡ್ ಲಾರಿಚ್ ಹಾಗೂ ಮಲೆನಾಡಿಗೆ ಸೇರಿದವರಾದ ಕೃತಿ ದಂಪತಿಗಳು ಕಳೆದ ನಾಲ್ಕು ವರ್ಷಗಳಿಂದ ಅಕ್ಷರಶಃ ಕೃಷಿಕ ಜೀವನವನ್ನು ಸಾಗಿಸುತ್ತಿದ್ದಾರೆ. ಹೊರಗಿನಿಂದ ಬಂದವರು ಮಲೆನಾಡಿನ ಒಂದು ಮಳೆಗಾಲವನ್ನು ಕಳೆಯುವುದೇ ಕಷ್ಟ ಎನ್ನುವ ಪರಿಸ್ಥಿತಿಯಿರುವಾಗ ಈ ದಂಪತಿಗಳು ಖುಷಿಖುಷಿಯಾಗಿದ್ದಾರೆ. ಅದೇ ಸಮಯಕ್ಕೆ ನಾವು ನೀವು ಒಪ್ಪಿತ ವಾದಕ್ಕೆ ಸವಾಲು ಹಾಕುತ್ತಿದ್ದಾರೆ.
ಹಳ್ಳಿಯ ಕೊರತೆಗಳು, ಕೃಷಿ ಬದುಕಿನ ಸಂಕಷ್ಟಗಳನ್ನು ಪ್ರಸ್ತಾಪಿಸಿದರೆ ಇಲ್ಲಿನ ಕೂಲಿಯಾಳುಗಳ ನೆಚ್ಚಿನ ಟಾಡ್ ಭಟ್ರು ಹೇಳುವುದೇ ಬೇರೆ, ಪಟ್ಟಣದ ಜಿಗಿಜಿಗಿ ಟ್ರಾಫಿಕ್, ಬೆಳಿಗ್ಗೆಯಿಂದ ರಾತ್ರಿ ೮-೧೦ರವರೆಗಿನ ದುಡಿತ, ಕಲುಷಿತ ವಾತಾವರಣಗಳ ನಗರಗಳಿಗಿಂತ ಹಳ್ಳಿಯ ವಾತಾವರಣ ಎಷ್ಟೋ ಮೇಲು ಎನ್ನುತ್ತಾರವರು.
ಮಾತು ಮುಂದುವರೆಸುವ ಮುನ್ನ ಕೆಲಕಾಲ ಫ್ಲಾಶ್‌ಬ್ಯಾಕ್‌ಗೆ ತೆರಳೋಣ. ವರ್ಷ ೧೯೯೬. ಟಾಡ್ ಹಾಗೂ ಕೃತಿ ದೆಹಲಿಯಲ್ಲಿ ವಿದ್ಯಾಭ್ಯಾಸ ನಿಮಿತ್ತ ಇದ್ದ ಸಂದರ್ಭದಲ್ಲಿ ಭೇಟಿಯಾದವರು ಪರಸ್ಪರ ಪ್ರೀತಿಸಿ ಹುಡುಗಿ ಮನೆಯ ಹವ್ಯಕ ಸಂಪ್ರದಾಯದಂತೆ ಮದುವೆಯಾದವರು. ೫-೬ ವರ್ಷ ಓದು, ಉದ್ಯೋಗಕ್ಕಾಗಿ ಸುತ್ತಾಕಿದ ಅಮೆರಿಕ, ದೆಹಲಿ, ಬೆಂಗಳೂರುಗಳೆಲ್ಲ ಅವರದೇ ಕಾರಣಗಳಿಗೆ ರೇಜಿಗೆ ಹುಟ್ಟಿಸಿತ್ತು. ಅಮೆರಿಕದ ಕೊಳ್ಳುಬಾಕ ಸಂಸ್ಕೃತಿ ಇಷ್ಟಪಡದ ಕೃತಿ ಹಾಗೂ ನಗರದ ಅಬ್ಬರ, ಜಂಜಡಗಳನ್ನು ಬಯಸದ ಟಾಡ್‌ರಿಗೆ ಪರಿಹಾರವಾಗಿ ‘ಹಳ್ಳಿ’ ಕಾಣಿಸಿತ್ತು. ಹಾಗಾಗಿ ಯುವ ದಂಪತಿಗಳು ‘ಹಳ್ಳಿ ಮೂಲೆ’ಯನ್ನು ಹುಡುಕಲಾರಂಭಿಸಿದ್ದರು.
ಸಾಂಸ್ಕೃತಿಕ ಚಟುವಟಿಕೆಗಳ ನೆಲವೀಡು ಹೆಗ್ಗೋಡಿನ ನಿನಾಸಂ ಆಜುಬಾಜಿನಲ್ಲಿಯೇ ಕೃಷಿ ಜಮೀನು ಅರಸಿದವರಿಗೆ ನಿರಾಶೆಯಾಗಲಿಲ್ಲ. ಅಂತೂ ಇಲ್ಲಿಂದ ನಾಲ್ಕು ಕಿ.ಮೀ. ದೂರದಲ್ಲಿ ಒಂದೆಕರೆಗಿಂತ ತುಸು ಹೆಚ್ಚಿರುವ ಅಡಿಕೆ ತೋಟ ಒಳಗೊಂಡ ಜಮೀನು ಸಿಕ್ಕಿಯೇಬಿಟ್ಟಿತು. ತಮ್ಮದೇ ಆದ ಪುಟ್ಟ ಮನೆ ಕಟ್ಟಿಸಿಯೇ ಟಾಡ್-ಶೃತಿ ಜೋಡಿ ತಮ್ಮ ಪುಟ್ಟ ಮಗು ‘ಹಮೀರ್ ಮುಗಿಲು’ ಸಮೇತರಾಗಿ ಇಲ್ಲಿ ಗೃಹಪ್ರವೇಶ ಮಾಡಿದ್ದು  ೨೦೦೯ರ ಜುಲೈನಲ್ಲಿ. ಅಲ್ಲಿಂದ ಬರೋಬ್ಬರಿ ೨೫ ತಿಂಗಳು ಕಳೆದಿವೆ. ಎರಡು ಮಳೆಗಾಲದಲ್ಲಿ ಮಳೆ ಹರಿದುಹೋಗಿದೆ. ಟಾಡ್ - ಕೃತಿ ಬೇಸರಗೊಂಡಿಲ್ಲ. ಮಲೆನಾಡಿನ ಸಮಸ್ಯೆಗಳಿಂದ ಕಿರಿಕಿರಿಗೊಂಡಿಲ್ಲ. ಅಲ್ರೀ, ಸಮಸ್ಯೆ ಇಲ್ಲದ ವಸತಿ ಎಲ್ಲಿದೆ? ಇಲ್ಲಿ ವಿದ್ಯುತ್ ಇಲ್ಲ ಎಂದಾದರೆ ಅಲ್ಲಿ ನಗರದಲ್ಲಿ ನೀರಿಗೆ ತತ್ವಾರ ಆಗುವುದನ್ನು ಯಾರೂ ಹೇಳುವುದಿಲ್ಲ ಯಾಕೆ?
ನಿಜಕ್ಕೂ ಮಲೆನಾಡು, ಹಳ್ಳಿ ಜೀವನ ವಾರವೊಪ್ಪತ್ತು ಇದ್ದು ಹೋಗಲು ತುಂಬಾ ಚೆನ್ನ. ಅಬ್ಬಬ್ಬಾ ಎಂದರೆ ಎರಡು ತಿಂಗಳು ಇದ್ದಿರಬಹುದು ಎನ್ನುವವರಿದ್ದಾರೆ. ನಮ್ಮ ಈ ಕಥೆಯ ಹೀರೋ ದಂಪತಿಗಳು ಇಲ್ಲಿ ಬಿಡಾರ ಹೂಡಿದ ಮೇಲೆ ಮತ್ತೊಮ್ಮೆ ಅಮೆರಿಕಾಕ್ಕೆ ತಲೆ ಹಾಕಿಲ್ಲ. ದೆಹಲಿ, ಬೆಂಗಳೂರು ಟೂರ್ ಕೂಡ ಹೋಗಿಲ್ಲ. ಬರಲಿರುವ ವರ್ಷ ಅಮೆರಿಕಕ್ಕೆ ಒಂದು ‘ವಿಸಿಟ್’ ಕೊಡುವ ಆಸೆಯಿದೆ. ಟಾಡ್‌ರ ೯೦ ವರ್ಷದ ಅಜ್ಜನನ್ನು ಒಮ್ಮೆ ನೋಡಿ ಬರುವ ಯೋಚನೆ. ಆದೀತಾ ಎಂಬ ಬಗ್ಗೆ ಗುಮಾನಿಯೂ ಇದೆ.
  ಮಗನನ್ನು ಕೂಡ ಇಲ್ಲಿನ ಅಆಇಈ ಕನ್ನಡ ಅಂಗನವಾಡಿಗೆ ಸೇರಿಸಿ ನಿರುಮ್ಮಳರಾಗಿದ್ದಾರೆ. ಹಾಗೆಂದು ಕೃತಿಯವರನ್ನು ಬಿಡಿ, ಅವರು ಹಳ್ಳಿಯಿಂದಲೇ ಬಂದವರು. ಅವರಿಗೆ ಇಲ್ಲಿನ ಬದುಕು ಹೊಸದಲ್ಲ ಎಂದು ಬಿಡಬಹುದು. ಕೃತಿಯವರಿಗೂ ‘ಟಿಪಿಕಲ್’ ಹಳ್ಳಿ ಜೀವನ ಹೊಸದೇ. ಅವರ ತವರೂರು ಮಂಕಳಲೆಯಿಂದ ಸಣ್ಣದಾಗಿ ಕೂಗಿದರೂ ತಾಲ್ಲೂಕು ಕೇಂದ್ರ ಸಾಗರ ಪಟ್ಟಣಕ್ಕೆ ಕೇಳಿಸುವಷ್ಟು ಸನಿಹ. ಇದೊಂದು ತರಹ ಪೇಟೆಯ ಇನ್ನೊಂದು ಬಡಾವಣೆ ಎನ್ನಬಹುದಷ್ಟೇ.
ಬದುಕು ವಿಚಿತ್ರ. ಈ ಜೋಡಿ ಖರೀದಿಸಿದ ಜಮೀನಿನ ಮೂಲ ಹಕ್ಕುದಾರರು ಈಗ ಪೇಟೆಯಲ್ಲಿ ನೆಲೆಸಿದ್ದಾರೆ. ಪಕ್ಕದ ಮನೆಯವರ ಮಗ ದುಡಿಮೆಯ ನಿಮಿತ್ತ ಅಮೆರಿಕಕ್ಕೆ ತೆರಳಿದ್ದಾನೆ. ಈ ಗೊಂದಲಕ್ಕೆ ಟಾಡ್ ತಮ್ಮ ನೆಲೆಯಲ್ಲಿ ಉತ್ತರಿಸುವುದು ಹೀಗೆ, "ಹಳ್ಳಿಯ ಜೀವನದಲ್ಲಿ ಯಾವುದೇ ಮಹತ್ವಾಕಾಂಕ್ಷೆಗಳಿಲ್ಲದೆ ಬದುಕಲು ಇಚ್ಛಿಸುವವರಿಗೆ ಇಲ್ಲಿ ಹುಟ್ಟುವ ಆದಾಯ ಸಾಕಾಗುತ್ತದೆ. ಆ ಮಟ್ಟಿಗೆ ನಾವು ಸುಖವಾಗಿದ್ದೇವೆ"
ಕೃಷಿ ಕುರಿತಂತೆ ಸಂಪೂರ್ಣ ತೊಡಗಿಸಿಕೊಂಡಿರುವ ಈ ದಂಪತಿಗಳು ಯಾವುದೋ ಸಾಧನೆ ಮಾಡುವ ಧಾವಂತದಲ್ಲಿಲ್ಲ. ನೈಸರ್ಗಿಕ ಕೃಷಿಯ ಬಗ್ಗೆ ಆಸ್ಥೆ, ಪಾಳೇಕರ್ ವಿಧಾನದ ಅನುಸರಣೆ ಮತ್ತು ಸ್ವಯಂ ಆಗಿ ತೋಟದಲ್ಲಿ ತೊಡಗಿಸಿಕೊಂಡಿರುವುದರಿಂದ ದಿನದ ಸಮಯದ ಬಹುಪಾಲು ವೆಚ್ಚವಾಗುತ್ತದೆ. ಅಳಿದುಳಿದ ಸಮಯದಲ್ಲಿ ಟಾಡ್ ತಮ್ಮ ಸಿತಾರ್ ಅಭ್ಯಾಸ ನಡೆಸುತ್ತಾರೆ. ಕೃತಿ ಊರು ಮನೆಯ ಮೈಯಾಳಿನ ಅಡಿಕೆ ಸುಲಿ ಕೆಲಸಕ್ಕೂ ಸೈ. ಇನ್ನು ಹಳ್ಳಿ ಬದುಕಿನ ಬೇಸರಕ್ಕೆ ಜಾಗವೆಲ್ಲಿ?
ರಾಜ್ಯದ ಮಟ್ಟಿಗೆ ವರ್ಷದ ಹನ್ನೆರಡು ತಿಂಗಳೂ ಮಲೆನಾಡಿನ ಹಳ್ಳಿಯಲ್ಲಿ ಶಾಶ್ವತ ವಾಸ್ತವ್ಯ ಹೂಡಿರುವ ವಿದೇಶಿ ದಂಪತಿಗಳು ಇನ್ನೆಲ್ಲೂ ಸಿಕ್ಕುವುದಿಲ್ಲ. ಸ್ವತಃ ಟಾಡ್, "ಇಂತಹ ದೃಷ್ಟಾಂತಗಳು ತಮ್ಮ ಗಮನಕ್ಕೆ ಬಂದಿಲ್ಲ. ಇದೀಗ ಕೆಲ ದಿನಗಳ ಹಿಂದೆ ಉತ್ತರ ಭಾರತೀಯ ಸಾಫ್ಟ್‌ವೇರ್ ಪತಿಯ ಸಮೇತ ಇನ್ನೊಬ್ಬ ಮಲೆನಾಡಿನ ಮಹಿಳೆ ಕೃಷಿಯಲ್ಲೇ ಬದುಕು ಕಂಡುಕೊಳ್ಳಲು ಜಮೀನು ಖರೀದಿಸಿರುವ ಮಾಹಿತಿಯಿದೆ" ಎಂದಿದ್ದಾರೆ. ಹಾಗಿದ್ದೂ ಪ್ರಚಾರ ಪಡೆಯಲು ಟಾಡ್ ಸುತರಾಂ ಒಪ್ಪುವುದಿಲ್ಲ. ಅವರ ಪೋನ್ ನಂಬರ್, ವಾಸಸ್ಥಳದ ವಿಳಾಸ ಕೊಡದಿರುವ ಕರಾರಿನ ಮೇಲೆಯೇ ಅವರು ಮಾತನಾಡಲು ಸಮ್ಮತಿಸಿದ್ದು. ಸರಿ ಬಿಡಿ, ಅವರ ನಿಲುವುಗಳನ್ನು ಗೌರವಿಸೋಣ. ಕುತೂಹಲಕ್ಕೆ ಅವರಲ್ಲಿಗೆ ಧಾವಿಸಿ ಪ್ರೈವೆಸಿಯನ್ನು ನಾಶ ಮಾಡುವುದು ಬೇಡ, ಪ್ಲೀಸ್....
ಆದರೆ ಇದೇ ವೇಳೆ ಹಳ್ಳಿಗಳ ಕುರಿತು ಟನ್‌ಗಟ್ಟಲೆ ದೂರು ಹೇಳಿ ನಗರಗಳತ್ತ ವಲಸೆ ಹೋಗುವ ಮಹನೀಯರು ವಾಸ್ತವ ಸತ್ಯ ತಿಳಿದುಕೊಳ್ಳಲು ಟಾಡ್ ಕೃತಿ ಉದಾಹರಣೆಯನ್ನು ಒಮ್ಮೆ ಗಮನಿಸಬೇಕು. ನೀವೇನಂತೀರಿ?

-ಮಾವೆಂಸ

5 comments:

umesh desai ಹೇಳಿದರು...

an informative article. u r right no need to disturb their privacy

ಸಿಂಧು sindhu ಹೇಳಿದರು...

ಅಭಿನಂದನೆಗಳು ಕೃತಿ-ಟಾಡ್-ಮುಗಿಲು ಕುಟುಂಬಕ್ಕೆ.
ಹಿಂದೊಮ್ಮೆ ರಾಘಣ್ಣನೂ ಅವರ ಬಗ್ಗೆ ಬರೆದಿದ್ದ. ಓದಿ ಖುಶಿಯಾಗಿತ್ತು. ಅವರನ್ನು ನೆನಪಿಸಿ ಮನಮುಟ್ಟುವಂತೆ ನೀವು ಚಿತ್ರಣ ಕೊಟ್ಟಿರುವುದಕ್ಕೆ ಥ್ಯಾಂಕ್ಸ್.

ಇವತ್ತಿನ ಪರಿಸ್ಥಿತಿಯಲ್ಲಿ ಟಾಡ್-ಕೃತಿ ಬರಿಯ ಉದಾಹರಣೆಯಲ್ಲ. ಮಾದರಿಗಳು.

ಪ್ರೀತಿಯಿಂದ,ಸಿಂಧು

ಸಿಂಧು sindhu ಹೇಳಿದರು...

ರಾಘಣ್ಣನ ಬರಹದ ಲಿಂಕ್ ಇಲ್ಲಿದೆ. ನಿಮ್ಮ ಹೆಚ್ಚಿನ ಓದಿಗ ಅನುಕೂಲವಾಗಲೆಂದು. : http://shreeshum.blogspot.com/2010/09/blog-post_20.html

ಪ್ರೀತಿಯಿಂದ,ಸಿಂಧು

ಅಜಯ ಹೇಳಿದರು...

ಇವತ್ತಿಗೂ ಮಲೆನಾಡಿನ ಮತ್ತು ಇನ್ನಿತರ ಕಡೆಯ ಬಹಳಷ್ಟು ಹುಡುಗರಿಗೆ ಕೃಷಿ ಮಾಡುತ್ತಾ ಹಳ್ಳಿಗಳಲ್ಲೇ ಇರಲು ಮನಸ್ಸಿದೆ. ಯಾವ ತೊಂದರೆಯಿಲ್ಲ. ಆದರೆ ಹುಡುಗಿಯರು ಮಾತ್ರ ತಯಾರಿಲ್ಲ. ಅವರಿಗೆ ನಗರವೇ ಬೇಕು. ಇದರಿಂದಲೇ ಸಮಸ್ಯೆ !

ಈ ದಂಪತಿಗಳು ನಿಜಕ್ಕೂ ಮಾದರಿ. ಅವರಿಗೆ ಮತ್ತು ಪರಿಚಯಿಸಿದ ನಿಮಗೂ ಧನ್ಯವಾದಗಳು.

ಮುತ್ತು ಚಿಕ್ಕಯ್ಯ ಹೇಳಿದರು...

ಮಣ್ಣಿನತ್ತ ಮುಖ ಮಾಡಬೇಕೆಂಬ ತಲುಬಿಗೆ ತಂಬಾಕು ತುಂಬುವ ಬರಹ.
ನಮಸ್ಕಾರ ಒಪ್ಸ್ಕ್ಯಳೋ ಪ್ರಸಾದಣ್ಣ.

 
200812023996