ಸೋಮವಾರ, ಜೂನ್ 21, 2010

ಕೃಷಿಗೆ `ಹೋಮ್ ಸ್ಟೇ' ಪೂರಕವೇ?

ದಯವಿಟ್ಟು ಕ್ಷಮಿಸಿ. ನೀವು ನನ್ನ ಬ್ಲಾಗ್‌ನ ನಿರಂತರ ಓದುಗರೆಂದುಕೊಂಡಿರುವೆ ಮತ್ತು ಬಹಳ ದಿನಗಳಿಂದ ಯಾವುದೇ ಲೇಖನವನ್ನು ಅಪ್‌ಲೋಡ್ ಮಾಡದೆ ನಿಮಗೆ ನಿರಾಶೆ ಮಾಡಿರುವೆ! ಕೊನೆಪಕ್ಷ ನಾನು ಹಾಗೆಂದುಕೊಂಡರೆ ಅಲ್ಲಗಳೆಯದಿರಿ ಪ್ಲೀಸ್.........
ನಿಜಕ್ಕೂ ಪುರಸೊತ್ತಿಲ್ಲದ್ದು ಅರ್ಧ ನಿಜ. ಇನ್ನರ್ಧ ಕಾರಣ ಯಡಿಯೂರಪ್ಪನವರು! ಮೈಲ್‌ನ ಪತ್ರಗಳನ್ನು ಓದಲು ಬೇಕಾದಷ್ಟು ಕರೆಂಟ್ ಕೊಡದ ದಿನಗಳೂ ಇವೆ ಕಣ್ರೀ......
ಇನ್ನೊಂದು, ನಾನೀಗ `ಉದಯವಾಣಿ'ಯ ಸಾಗರ ವರದಿಗಾರನಾಗಿ ನಿಯುಕ್ತನಾದುದರಿಂದ ನಾನೇ ಸುದ್ದಿಯಾಗುವಂತಿಲ್ಲ! ಸುದ್ದಿ ಬರೆಯುವ ಕೆಲಸದಲ್ಲಿ ನಿರತನಾಗಬೇಕಾಯಿತು. ಕಂಗ್ರಾಟ್ಸ್ ಅಂದ್ರ, ಥ್ಯಾಂಕ್ಸ್!
ಇವತ್ತು ಒಂದು ಲೇಖನ ಹಾಕಿದ್ದೇನೆ, ಒಪ್ಪಿಸಿಕೊಳ್ಳಿ........`ರೈತನೇ ದೇಶದ ಬೆನ್ನೆಲುಬು' ಎಂದು ಬಾಯಿಪಾಠ ಮಾಡಿಕೊಳ್ಳುತ್ತಿದ್ದ ವಾಕ್ಯ ಇವತ್ತು ನಿಜವಾಗಿ ಉಳಿದಿಲ್ಲ. ವಿಜ್ಞಾನಿಗಳು, ಜನಪ್ರತಿನಿಧಿಗಳು ರೈತರಿಗೆ ಉಪಬೆಳೆ ಬೆಳೆಯಲು ಸೂಚಿಸುತ್ತಿದ್ದಾರೆ. ಪರ್ಯಾಯ ಉದ್ಯೋಗಗಳತ್ತ ಸಲಹೆ ಕೊಡುತ್ತಿದ್ದಾರೆ. ಅಂದರೆ ಕೃಷಿ ಬದುಕು ಅನಿಶ್ವಿತ ಎಂಬುದನ್ನು ಸಾರಿ ಹೇಳುತ್ತಲಿದ್ದಾರೆ. ಇದೇ ಹಿನ್ನೆಲೆಯಲ್ಲಿ ರೈತರು ಹೊಸ ಹೊಸ ಅವಕಾಶಗಳತ್ತ ತೆರೆದುಕೊಂಡಿರುವುದನ್ನು ಕಾಣುತ್ತಿದ್ದೇವೆ. ಹಪ್ಪಳ, ಸಂಡಿಗೆ ಮಾರಾಟ, ಹಾಳೆ ದೊನ್ನೆ, ಊಟ ಬಡಿಸುವ ಕೈಂಕರ್ಯ... ಹೀಗೆ ಕೈ ಖರ್ಚಿಗೆ ಹಣ ಸಂಪಾದಿಸಲು ಕೃಷಿಕ ಅನಿವಾರ್ಯವಾಗಿ ಹೊರಬಿದ್ದಿದ್ದಾನೆ.
ರೈತ ವ್ಯಾಪಾರಸ್ಥನಾದುದನ್ನು ನೋಡಿ ಸಮಾಜಕ್ಕೆ ಸೈರಿಸಿಕೊಳ್ಳಲಾಗುತ್ತಿಲ್ಲ. ಟೀಕೆಗಳು ಹರಿದು ಬರುತ್ತಿವೆ. ಇವ ಇನ್ನು ಕೃಷಿಯನ್ನೇ ಮಾಡುವುದಿಲ್ಲ ಎಂಬ ಭರ್ತ್ಸನೆ ಕೇಳಿಬಂದಿವೆ. ಜೊತೆಗೆ `ಹೋ ಸ್ಟೇ' ಎಂಬ ಉದ್ಯಮದತ್ತ ಕಣ್ಣು ಹಾಕಿರುವ ರೈತ ಸಮುದಾಯಕ್ಕಂತೂ ವಿರೋಧದ ಬಿಸಿಗಾಳಿ. ಇದು ನಮ್ಮ ಸಂಸ್ಕೃತಿಯನ್ನೇ ನಾಶಪಡಿಸುತ್ತದೆ ಎಂಬ ಕೂಗು. ನಿಜವೇ?
ಹೋಂ ಸ್ಟೇ ವಿಧಾನ ಹೊಸದಲ್ಲ. ಮುಖ್ಯವಾಗಿ ಇದನ್ನು ಪ್ರವಾಸಿಗರಿಗೆ ಮನೆಯ ವಾತಾವರಣದಲ್ಲಿ ವೆಚ್ಚ ಪಡೆದು ಆತಿಥ್ಯ ನೀಡುವುದು ಎಂದು ಸರಳವಾಗಿ ವಿವರಿಸಬಹುದು. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಚಿಕ್ಕ ಮಂಗಳೂರಿನಲ್ಲಿ ಇದು ಹಲವು ವರ್ಷಗಳಿಂದ ಪ್ರಚಲಿತ. ಅಲ್ಲಿನ ಮಧ್ಯಮ ವರ್ಗದ ಕಾಫಿ ಬೆಳೆಗಾರರು ಬೆಳೆ ಬೆಲೆ ಕುಸಿತದ ಸಂದರ್ಭದಲ್ಲಿ ಆಯ್ದುಕೊಂಡ ಪರ್ಯಾಯವಿದು.
ಬೃಹತ್ ಬೆಳೆಗಾರರು ಇದಕ್ಕೆ `ರೆಸಾರ್ಟ್' ಸ್ಪರ್ಶ ಕೊಟ್ಟರೆ ಸಾಮಾನ್ಯರು ತಮ್ಮದೇ ಮನೆಯಲ್ಲಿ, ಪರಿಸರದಲ್ಲಿ ಆತಿಥ್ಯ ಕೊಟ್ಟು ಆದಾಯದ ಮೂಲವನ್ನು ಕಂಡುಕೊಂಡರು.
ವಿರೋಧ ಬಂದಿದ್ದೇ ಇಲ್ಲಿ. ಹೋಂ ಸ್ಟೇ ವಿಧಾನದಲ್ಲಿ ಕೃಷಿಕರ ಕುಟುಂಬ ಪ್ರವಾಸಿಗರೊಂದಿಗೆ ನೇರ ಸಂಪರ್ಕ ಹೊಂದುತ್ತದೆ. ಇದರಿಂದ ಕೃಷಿಕರ ಜೀವನ ಕ್ರಮ ಬದಲಾಗುತ್ತದೆ. ಅವರ ವಿಶಿಷ್ಟ ಸಂಸ್ಕೃತಿನಾಶವಾಗುತ್ತದೆ ಎಂಬಿತ್ಯಾದಿ ಅನುಮಾನ ವ್ಯಕ್ತವಾಗುತ್ತಿದೆ. ಮೋಜು ಮಸ್ತಿಗೆಂದೇ ಬರುವ ಪ್ರವಾಸಿಗರು ಸ್ಥಳೀಯ ಪರಿಸರವನ್ನು ಕೆಡಿಸುವರಲ್ಲದೆ ಯುವ ಪೀಳಿಗೆಯವರನ್ನು ಹಾದಿ ತಪ್ಪಿಸಬಹುದು ಎಂಬ ಆತಂಕ.
ವಾಸ್ತವ ಬೇರೆಯೇ ಇದೆ. ಕತೆ ಕಾದಂಬರಿಗಳಲ್ಲಿ ಬರುವಂತ ಟಿಪಿಕಲ್ ಹಳ್ಳಿಗಳು ಈಗಿಲ್ಲ ಅಥವಾ ತುಂಬಾ ಕಡಿಮೆ ಎನ್ನಬಹುದು. ಹಳ್ಳಿಗರು ನಗರಗಳೊಂದಿಗೆ, ನಗರ ಜೀವನದೊಂದಿಗೆ ನಿರಂತರವಾಗಿ ಎಡತಾಕುತ್ತಿದ್ದಾರೆ. ಪೇಟೆಯವರು ಅನುಭವಿಸುವ ಟಿವಿ ಛಾನೆಲ್, ಇಂಟರ್ನೆಟ್‌ನಂತವನ್ನು ಕೂಡ ಕಂಡವರಿಗೆ ಪ್ರವಾಸಿಗರು ಬಂದು ಉಳಿಯುತ್ತಾರೆಂಬ ಏಕೈಕ ಕಾರಣಕ್ಕೆ ಕೆಟ್ಟು ಹೋಗುವರೆಂಬುದು ಸುಳ್ಳು. ದಾರಿ ತಪ್ಪಲು ಇದು ಇನ್ನೊಂದು ಆಯ್ಕೆ ತೆರೆದುಕೊಂಡಂತೆ ಆಗಬಹುದೇನೋ. ಮಾನಸಿಕ ಸ್ಥಿರತೆ ಪಡೆದವರು ಆಮಿಷಗಳಿಗೆ ಬಲಿಯಾಗರು. ಹೋಟೆಲ್‌ನ ಯಾಂತ್ರಿಕ ವಾತಾವರಣ, ರೆಸಾರ್ಟ್‌ಗಳ ಅತಿ ದುಬಾರಿ ದರದಿಂದ ಬೇಸತ್ತ ಪ್ರವಾಸಿಗರಿಗೆ ಹಳ್ಳಿಗರ ಹೋಂ ಸ್ಟೇ ಮುದನೀಡುವಂತದು.
ಈಗ ಹೋಂ ಸ್ಟೇ ಉತ್ತರ ಕನ್ನಡದ ಹಳ್ಳಿಗಳೊಳಗೆ ಮತ್ತು ಮಲೆನಾಡಿನ ಗ್ರಾಮಗಳನ್ನು ಪ್ರವೇಶಿಸಿದೆ. ಸಾಗರ ತಾಲ್ಲೂಕಿನ ಜೋಗ ಸಮೀಪದ ತಲವಾಟದ ಒಂದು ಹೋಂ ಸ್ಟೇಯನ್ನು ಯಶಸ್ವಿ ದೃಷ್ಟಾಂತವಾಗಿ ಪ್ರಸ್ತಾಪಿಸಬಹುದು.
ಚಿತ್ರ ಕೃಪೆ - ಹಿಂಡೂಮನೆ ಜಿತೇಂದ್ರ
ತಲವಾಟದ `ನಮ್ಮನೆ' ಎಂಬ ಈ ಉಳಿಮನೆಯನ್ನು ಪ್ರವಾಸಿಗರಿಗೆ ಕಾಡಿನ ನಡುವೆ ಕಡಿಮೆ ವೆಚ್ಚದಲ್ಲಿ ತಂಪು ಸುಖ ಹಾಗೂ ಪ್ರಶಾಂತತೆ ನೀಡುವ ಪರಿಸರದಲ್ಲಿ ಆರಂಭಿಸಲಾಗಿದೆ. ಸ್ವಾರಸ್ಯವೆಂದರೆ ಇದರ ಹಿಂದೆ ಜಯಕೃಷ್ಣ ಎಂಬ ಯುವಕನ ಜೊತೆ ಊರಿನ ಸಮಾನ ಮನಸ್ಕ ಯುವಕರೂ ಸೇರಿದ್ದಾರೆ. ಒಬ್ಬ ವ್ಯಕ್ತಿಗೆ ದಿನವೊಂದಕ್ಕೆ ಊಟ ವಸತಿ ಸೇರಿ ೫೦೦ರೂಪಾಯಿ ವೆಚ್ಚ ಬೇಡುವ ಈ ಉಳಿಮನೆ ಲಾಭಾಂಶದಲ್ಲಿ ಊರಿನ ಶಾಲೆಯ ಬಿಸಿಯೂಟಕ್ಕೆ ಪಾಲು ನೀಡುವುದು ವಿಶೇಷ. ಅತಿಥಿಗಳಿಗೆ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳ, ಜಲಪಾತಗಳು ಮುಂತಾದವುಗಳಿಗೆ ಹೋಗಲು ಗೈಡ್ ಆಗುವ ಮೂಲಕ ಹಲವು ಯುವಕರಿಗೆ ಉದ್ಯೋಗವೂ ದೊರಕಿದಂತಾಗಿದೆ. ಇಂತಹ ಉಳಿಮನೆ ವೈಯುಕ್ತಿಕ ಆದಾಯದ ಜೊತೆಗೆ ಪಟ್ಟಣ ಹಾಗೂ ಹಳ್ಳಿಗಳ ಮನಸ್ಸುಗಳನ್ನು ಬೆಸೆಯುವ ಕಾರ್ಯವೂ ಆಗುತ್ತದೆ ಎಂಬುದು ತಲವಾಟದ ಯುವಕರ ಗಟ್ಟಿ ಅಭಿಪ್ರಾಯ. ಅಷ್ಟೇಕೆ, ಬಂದ ಪ್ರವಾಸಿಗರು ಹಳ್ಳಿಯ ಕೆಲವರಿಗಾದರೂ ನಗರದಲ್ಲಿನ ಉದ್ಯೋಗಾವಕಾಶಗಳ ಪರಿಚಯ ಮಾಡಿಕೊಡಬಹುದು.
ರೈತನಿಗೆ ಹೋಂ ಸ್ಟೇ ಮಾಡಲು ಪ್ರತ್ಯೇಕ ಬಂಡವಾಳ ಹಾಕಬೇಕಾಗಿಲ್ಲ. ತನ್ನ ಮನೆ ಪರಿಸರವನ್ನು ಚೂರು ಪಾರು ಮಾರ್ಪಡಿಸಿದರೆ ಸಾಕು. ರೈತನ ಕೃಷಿ ಕೆಲಸ ವರ್ಷದುದ್ದಕ್ಕೂ ಇರದಿರುವ ಹಿನ್ನೆಲೆಯಲ್ಲಿ ಹೋಂ ಸ್ಟೇ ನಿಭಾಯಿಸುವುದು ತ್ರಾಸದ ಮಾತಲ್ಲ. ಅತಿಥಿಗಳ ಆಯ್ಕೆ, ಬುಕ್ಕಿಂಗ್ ನಿರಾಕರಣೆ ರೈತನ ಹಕ್ಕಾಗಿರುವುದರಿಂದ ಕಟ್ಟುನಿಟ್ಟಿನ ನಿಭಾವಣೆ ಸಾಧ್ಯ. ರೈತ ಬೆಳೆಯ ಮೌಲ್ಯ ವರ್ಧೀಕರಣವನ್ನು ಹೋಂ ಸ್ಟೇನಿಂದ ಸಲೀಸಾಗಿ ಜಾರಿಗೆ ತರಬಹುದು. ಹೋಂ ಸ್ಟೇಗೆ ಬಂದವರಿಗೆ ಹಲಸಿನ ಹಪ್ಪಳದ ರುಚಿ ತೋರಿಸಿ ತನ್ನ ಆ ತಯಾರಿಕೆಯನ್ನು ಮಾರಾಟ ಮಾಡಬಹುದು! ಮಾತಿನ ಜಾಹೀರಾತಿಗಿಂತ ಪ್ರಭಾವಶಾಲಿ ಮಾಧ್ಯಮವಿಲ್ಲ ಎನ್ನುತ್ತಾರೆ. ಆ ನಿಟ್ಟಿನಲ್ಲೂ ಹೋಂ ಸ್ಟೇ ಪರಿಚಯಿಸಿಕೊಳ್ಳಲು ವಿಪರೀತ ಕಷ್ಟ ಪಡಬೇಕಿಲ್ಲ.
ಸುಗ್ಗಿಯ ಹಂಗಾಮ ಹಾಗೂ ಹೋಂ ಸ್ಟೇಗಳ ನಡುವೆ ಸಮತೋಲನ ಮಾಡಿಕೊಳ್ಳುವುದು ರೈತನ ಜಾಣ್ಮೆ. ಅಂತರ್ಜಾಲ ಕೂಡ ಹಳ್ಳಿಗಳನ್ನು ಪ್ರವೇಶಿಸಿರುವುದರಿಂದ ಮುಂಗಡ ನೊಂದಾವಣಿ, ಹಣ ಪಾವತಿಗಳೆಲ್ಲ ಸುಲಭ ಸುಲಭ. ಇದನ್ನು ರೈತರು ಬಳಸಿಕೊಳ್ಳಬೇಕು. ನಗರ ಜೀವನದಲ್ಲಿ ಸುಸ್ತಾಗಿರುವ ಪ್ರವಾಸಿಗರಿಗೆ ವೀಕೆಂಡ್ ಪ್ರವಾಸಕ್ಕೆ ರೈತರ ಹೋಂ ಸ್ಟೇ ಒದಗಿಸುವ ಆಹ್ಲಾದ ಅನುಭವ ಸ್ವಾಗತಾರ್ಹ.
ಪಾವತಿ ಅತಿಥಿಗಳಿಗೆ ಭವಿಷ್ಯವಿದೆ. ರೈತರ ವಲಯದಲ್ಲಿ ಹೋಂ ಸ್ಟೇ ತಂಗಲಿದೆ! ನೀವೇನಂತೀರಿ???

-ಮಾವೆಂಸ

 
200812023996