ಮಂಗಳವಾರ, ಡಿಸೆಂಬರ್ 29, 2009

ಹೊಸಬರಲ್ಲೂ ಗೆಲುವಿನ ರಭಸ!


ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತದ ಪ್ರದರ್ಶನವನ್ನು ಎರಡೇ ಪದಗಳ ವಾಕ್ಯದಲ್ಲಿ ವಿವರಿಸುವುದಾದರೆ, ‘ಅಧಿಕಾರಯುತ ಗೆಲುವು’ ಎನ್ನುವುದೇ ಸೂಕ್ತ. ಇನ್ನೂ ಒಂದು ಪಂದ್ಯ ಬಾಕಿಯಿದ್ದಾಗಲೇ ೩-೧ರ ಅಂತರದಲ್ಲಿ ಗೆದ್ದ ತಂಡ ಅಂತಹ ಪ್ರಶಂಸೆಗೆ ಅರ್ಹ. ಸ್ವಾರಸ್ಯವೆಂದರೆ, ಸರಣಿಯ ಪಂದ್ಯಗಳನ್ನು ಖುದ್ದು ನೋಡಿದವರಿಗೆ ಬೇರೆಯದೇ ಸತ್ಯ ಕಾಣುತ್ತದೆ. ಭಾರತಕ್ಕಿಂತ ಶ್ರೀಲಂಕಾ ಹೆಚ್ಚು ಕಳಪೆ ಆಟ ಆಡಿತು!
ಕ್ರಿಕೆಟ್‌ನಲ್ಲಿ ಥ್ರಿಲ್, ಖುಷಿ ಜೊತೆ ಕಾಮಿಡಿಯನ್ನು ಬೆರೆಸುವ ಪ್ರಯತ್ನ ಮಾಡಿದ್ದು ಭಾರತ. ಮೊತ್ತಮೊದಲ ರಾಜ್‌ಕೋಟ್ ಏಕದಿನ ಪಂದ್ಯದಲ್ಲಿ ೪೧೪ ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದರೂ ಧುಸುಗುಡುತ್ತಲೇ ಗೆದ್ದದ್ದು ಬದಿಗಿರಿಸಿ. ಅವತ್ತು ಭಾರತೀಯರು ಮಾಡಿದ ಫೀಲ್ಡಿಂಗ್, ಬಿಟ್ಟ ಕ್ಯಾಚ್ ನಗೆ ತರಿಸಿತ್ತು. ಪಂದ್ಯ ಗೆದ್ದುದರಿಂದ ಟೀಕೆ ದಟ್ಟವಾಗಿರಲಿಲ್ಲ. ಮುಂದಿನ ಪಂದ್ಯದಲ್ಲಿ ಇದೇ ಹೀನಾಯ ಫೀಲ್ಡಿಂಗ್ ಕಾರಣದಿಂದಾಗಿ ಪಂದ್ಯ ಕೈಬಿಟ್ಟಿತು. ಆದರೆ ಅಷ್ಟರೊಳಗೆ ಭಾರತೀಯರು ಈ ರೋಗದ ಕೀಟಾಣುವನ್ನು ಲಂಕನ್‌ರಿಗೂ ದಾಟಿಸಿದ್ದರು. ನಾಲ್ಕನೇ ಕೊಲ್ಕತ್ತಾ ಪಂದ್ಯದ ವೇಳೆಗೆ ಸಿಂಹಳೀಯರು ನಮ್ಮವರನ್ನೇ ನಾಚಿಸುವಂತೆ ಕ್ಯಾಚ್ ಬಿಟ್ಟರು, ಮಿಸ್‌ಫೀಲ್ಡ್ ಮಾಡಿದರು. ಫಲಿತಾಂಶ - ನಮ್ಮೂರಿನ ವೀಕ್ಷಕರಿಗೆ ತಮಾಷೆಯ ಜೊತೆಗೆ ಗೆಲುವಿನ ಬೋನಸ್ ಸಿಕ್ಕಿತು.
ಮಹೇಂದ್ರ ಸಿಂಗ್ ಧೋನಿ ಅದೃಷ್ಟವಂತರೇ? ಈವರೆಗೆ ಇವರ ನಾಯಕತ್ವದಲ್ಲಿ ಆಡಿದ ಎಂಟು ದ್ವಿಪಕ್ಷೀಯ ಸರಣಿಗಳಲ್ಲಿ ಏಳು ಬಾರಿ ಭಾರತ ಸರಣಿ ಗೆದ್ದಿರುವ ಅಂಕಿಅಂಶವನ್ನು ಕಂಡಾಗ ಹೌದೆನ್ನಿಸುತ್ತದೆ. ಆದರೆ ಮೊನ್ನೆ ನಾಗ್ಪುರದಲ್ಲಿ ಭಾರತ ನಿಧಾನಗತಿಯ ಬೌಲಿಂಗ್ ಮಾಡಿತು ಎಂದು ಧೋನಿಯ ಮೇಲೆ ಎರಡು ಪಂದ್ಯದ ನಿಷೇಧದ ಶಿಕ್ಷೆ ಅದೃಷ್ಟ ಕೈಕೊಟ್ಟಿದ್ದನ್ನು ವಿವರಿಸುವಂತಿದೆ. ವಾಸ್ತವವಾಗಿ, ಐಸಿಸಿಯು ‘ನಿಧಾನಗತಿ ಬೌಲಿಂಗ್‌ಗೆ ವಿಧಿಸುವ ಶಿಕ್ಷೆಯನ್ನು ಮಾರ್ಪಡಿಸಿದೆ. ಒಂದು ತಂಡ ನಿಗದಿತ ಸಮಯದಲ್ಲಿ ಎರಡು ಓವರ್ ಕಡಿಮೆ ಬೌಲ್ ಮಾಡಿದರೆ ಅದನ್ನು ‘ಲಘು ಅಪರಾಧ’ವೆಂತಲೂ, ಇದನ್ನು ಮೀರಿದ್ದನ್ನು ‘ಗಂಭೀರ’ ಅಂತಲೂ ಪರಿಗಣಿಸಲಾರಂಭಿಸಿದೆ. ಅವತ್ತು ಧೋನಿ ಪಡೆ ನಿಗದಿತ ಸಮಯ ಮೀರಿ ಗಂಭೀರ ತಪ್ಪು ಮಾಡಿತ್ತು!
ಅದಲ್ಲ ವಿಷಯ, ಮೂರೂವರೆ ಘಂಟೆಗಳ ಸಮಯಾವಕಾಶದ ಎರಡು ಇನ್ನಿಂಗ್ಸ್ ಲೆಕ್ಕಾಚಾರ ಸರಿಹೋದೀತೆ? ಎರಡನೇ ಪಾಳಿಯಲ್ಲಿ ಬೌಲಿಂಗ್ ಮಾಡುವ ತಂಡಕ್ಕೆ ಹಲವು ತಲೆಬಿಸಿ. ಉದಾಹರಣೆಗೆ ನಾಗ್ಪುರದಲ್ಲಿ ಭಾರತ ೪೨ನೇ ಓವರ್‌ವರೆಗೆ ಸಮಯ ನಿರ್ಬಂಧದ ಅನುಸೂಚಿ ಪ್ರಕಾರವೇ ನಡೆದಿತ್ತು. ಆದರೆ ಮುಂದಿನ ಎಂಟು ಓವರ್‌ಗೆ ಬರೋಬ್ಬರಿ ಒಂದು ಘಂಟೆಯನ್ನು ತೆಗೆದುಕೊಂಡಿತ್ತು. ಹಾಗಿದ್ದರೆ ತರಾತುರಿಯಲ್ಲಿ ಬೌಲಿಂಗ್ ಮಾಡಿ ಪಂದ್ಯದ ಸ್ಪರ್ಧಾತ್ಮಕತೆಯನ್ನು ಕಡಿಮೆ ಮಾಡಿದ್ದರೆ ಐಸಿಸಿ ರೆಫ್ರಿಯನ್ನು ಸಂತೃಪ್ತಗೊಳಿಸಬಹುದಿತ್ತು, ಆಟದ ಅಸಲಿ ಬಂಡವಾಳವಾದ ವೀಕ್ಷಕರಿಗೆ ನಷ್ಟ!
ಬದಲಾಗಬೇಕು, ಎರಡನೇ ಅವಧಿಯ ಫೀಲ್ಡಿಂಗ್ ನಾಯಕನಿಗೆ ಅರ್ಧ ಘಂಟೆಯ ಹೆಚ್ಚಿನ ಕಾಲಾವಕಾಶ ಬೇಕು ಎಂಬ ತರ್ಕ ಇದೀಗ ಜನಜನಿತವಾಗಿದೆ. ಅದೊಂದು ಅರ್ಥಪೂರ್ಣ ಚರ್ಚೆಯಾಗಬೇಕು. ಈ ಮಧ್ಯೆ ತೂಗು ಕತ್ತಿ ಧೋನಿ ತಲೆ ಮೇಲೆ ಮುಂದಿನ ೧೨ ತಿಂಗಳ ಅವಧಿಯುದ್ದಕ್ಕೂ ತೂಗುತ್ತಿರುತ್ತದೆ. ಈ ವೇಳೆ ಧೋನಿಯ ಗಂಭೀರ ಅಪರಾಧ ಮರುಕಳಿಸಿದರೆ ಎರಡರಿಂದ ಎಂಟು ಏಕದಿನ ಅಥವಾ ಒಂದರಿಂದ ನಾಲ್ಕು ಟೆಸ್ಟ್ ನಿಷೇಧದ ಶಿಕ್ಷೆ ಕಾದಿದೆ. ಅತ್ಯುತ್ತಮ ಫಾರಂನಲ್ಲಿದ್ದ, ಸರಣಿಯಲ್ಲಿ ಅದಾಗಲೇ ಎರಡೆರಡು ಶತಕ ಬಾರಿಸಿದ್ದ ಧೋನಿ ಅನುಪಸ್ಥಿತಿ ಎದ್ದು ಕಾಣಲಿಲ್ಲ ಎಂಬುದು ಭಾರತದ ಪುಣ್ಯ.
ಶ್ರೀಲಂಕಾದ ಪಾಪ ವಿಮೋಚನೆ ಆದಂತಿಲ್ಲ. ಆ ದೇಶಕ್ಕೆ ಭಾರತದಲ್ಲಿ ಟೆಸ್ಟ್ ಸರಣಿಯಲ್ಲಾಗಲಿ, ದ್ವಿಪಕ್ಷೀಯ ಏಕದಿನ ಟೂರ್ನಿಯನ್ನಾಗಲಿ ಒಮ್ಮೆಯೂ ಗೆಲ್ಲಲಾಗಿಲ್ಲ. ನೆಪ ಹೇಳಬಹುದು, ಮುತ್ತಯ್ಯ ಮುರುಳೀಧರನ್, ಅಂಜೆಲೋ ಮ್ಯಾಥ್ಯೂಸ್, ತಿಲಾನ್ ತುಷಾರ, ಚನಕ ವೆಲ್ಲವೇಂದ್ರ ಮುಂತಾದ ಆಟಗಾರರ ಅಲಭ್ಯತೆ ಫಲಿತಾಂಶದಲ್ಲಿ ಪ್ರತಿಫಲಿಸಿದೆ ಎಂದು. ಆ ಲೆಕ್ಕದಲ್ಲಿ ಭಾರತದ್ದೂ ಅದೇ ಕತೆ. ಧೋನಿ ‘ಫಿಟ್’ ಆಗಿದ್ದೂ ಎರಡು ಪಂದ್ಯ ಕಳೆದುಕೊಂಡರೆ ಯುವರಾಜ್ ಸಿಂಗ್ ಇತ್ತೀಚೆಗೆ ಆಡಿದ್ದಕ್ಕಿಂತ ಪೆವಿಲಿಯನ್‌ನಲ್ಲಿ ಗಾಯಗೊಂಡ ಬೆರಳು ತೋರಿಸಿದ್ದೇ ಜಾಸ್ತಿ. ಈ ಪಟ್ಟಿಯಲ್ಲಿ ಶ್ರೀಶಾಂತ್‌ರನ್ನು ಸಹ ಸೇರಿಸಬಹುದು. ಪ್ರಬಲ ಬ್ಯಾಟಿಂಗ್ ಪಟುಗಳೊಂದಿಗೆ ಬಂದ ಶ್ರೀಲಂಕಾ ಬೌಲಿಂಗ್ ವಿಭಾಗದಲ್ಲಿ ಮುಗ್ಗರಿಸಿದ್ದು ನಿಜ.
ಸರಣಿಯುದ್ದಕ್ಕೂ ಬೌಲರ್‌ಗಳನ್ನು ಗೋಳು ಹೊಯ್ದುಕೊಳ್ಳುವ ಪಿಚ್‌ನಲ್ಲಿ ರವೀಂದ್ರ ಜಡೇಜಾ ಎಂಬ ಬೌಲರ್ ಮಿಂಚಿದ್ದು ಉಲ್ಲೇಖಾರ್ಹ. ಕಟಕ್ ಪಿಚ್ ಕೂಡ ಬ್ಯಾಟಿಂಗ್ ಪ್ರೇಮಿಯೇ. ಅಂತಲ್ಲಿ ಜಡೇಜಾ ೩೨ ರನ್‌ಗೆ ನಾಲ್ಕು ವಿಕೆಟ್ ಕಬಳಿಸಿದ್ದು ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಲು ಸಾಕಾಯಿತು. ಇಡೀ ಸರಣಿಯಲ್ಲಿ ಜಡೆಜಾ ಬಿಗಿ ಬೌಲಿಂಗ್‌ಗೆ ಹೆಸರು ಪಡೆದರು. ನಾಲ್ಕನೇ ಪಂದ್ಯದ ಅಂತ್ಯಕ್ಕೆ ಜಡೇಜಾ ಓವರ್ ಒಂದಕ್ಕೆ ನೀಡಿದ್ದು ೫.೪೭ ರನ್ ಮಾತ್ರ. ನೆನಪಿರಲಿ, ಇನ್ನುಳಿದಂತೆ ಎರಡು ದೇಶಗಳ ಪ್ರಮುಖ ಬೌಲರ್‌ಗಳು ಆರಕ್ಕಿಂತ ಹೆಚ್ಚಿನ ರನ್ ನೀಡಿದ್ದರು!
ಭಾರತದ ಮಟ್ಟಿಗೆ ಸರಣಿ ಗೆಲುವಿನ ಹೊರತಾಗಿ ಹಲವು ಗಳಿಕೆಗಳಿವೆ. ವಿರಾಟ್ ಕೊಹ್ಲಿ ಧೋನಿ - ಯುವಿ ಕೊರತೆಯನ್ನು ಮರೆಯುವಂತೆ ಬ್ಯಾಟ್ ಮಾಡಿದ್ದು, ಹರ್‌ಭಜನ್ ಕುಂಬ್ಳೆಯವರನ್ನು ನೆನಪಿಸುವಂತೆ ಬಿಗ್ಗಬಿಗಿ ಬೌಲಿಂಗ್ ಮಾಡುವುದನ್ನು ಮತ್ತೆ ಕಂಡುಕೊಂಡಿದ್ದು, ಇರಿಸುಮುರಿಸಾದವರಂತೆ ಕಂಡರೂ ಗೌತಮ್ ಗಂಭೀರ್ ಮೂರನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ನೆಲೆ ಕಂಡುಕೊಳ್ಳುತ್ತಿರುವುದು.... ಇವೆಲ್ಲವುದರ ಪರಿಣಾಮ ನಾಳೆ ಬಾಂಗ್ಲಾದಲ್ಲೂ ಕಂಡರೆ ಚೆನ್ನ. ಏತಕ್ಕಪ್ಪಾಂದ್ರೆ, ಈ ದಿನಗಳಲ್ಲಿ ತ್ರಿಕೋನ ಅಥವಾ ಬಹುತಂಡಗಳ ಟೂರ್ನಿಗಳಲ್ಲಿ ಭಾರತ ಎಡವುತ್ತಲೇ ಬಂದಿದೆ ಮತ್ತು ಬಾಂಗ್ಲಾದಲ್ಲಿ ನಡೆಯುವುದು ಶ್ರೀಲಂಕಾವನ್ನೂ ಒಳಗೊಂಡ ತ್ರಿಕೋನ ಸರಣಿ!
-ಮಾವೆಂಸ

ಸೋಮವಾರ, ಡಿಸೆಂಬರ್ 28, 2009

ಲೇಔಟ್ ಹೀಗಿದ್ದರೆ ಚೆಂದ!ವಾರಕ್ಕೊಮ್ಮೆ........5
ಕೆಲವರ್ಷಗಳ ಹಿಂದಿನ ಮಾತು. ನಾಗೇಶ್ ಹೆಗಡೆ ಪ್ರಜಾವಾಣಿಯ ಪುರವಣಿಗಳನ್ನು ನಿರ್ವಹಿಸುತ್ತಿದ್ದ ಕಾಲ. ನನಗಿದ್ದುದು ಫೋನ್ ಪರಿಚಯ ಮಾತ್ರ. ದೂರವಾಣಿಯಲ್ಲಿ, ಪುಟ್ಟ ಕಾರ್ಡ್‌ನಲ್ಲಿ ಅವರು ಒದಗಿಸುತ್ತಿದ್ದ ಪ್ರೋತ್ಸಾಹ ಅಪರಿಮಿತ. ಅವರ ನಿರ್ವಹಣೆಯ ‘ಕರ್ನಾಟಕ ದರ್ಶನ’ದಲ್ಲಿ ನಮ್ಮ ಒಂದು ಲೇಖನ ಬಂತೆಂದರೆ ಅದು ಎಲ್ಲ ಪರೀಕ್ಷೆ ಪಾಸಾದಂತೆ! ಇಂತಹ ವೇಳೆಯ ಮಾತುಕತೆಯಲ್ಲಿ ಹೆಗಡೆಯವರಲ್ಲಿ ನಾನು ಸಹಸಂಪಾದಕನಾಗಿದ್ದ ‘ಬಳಕೆ ತಿಳುವಳಿಕೆ’ಯ ಪ್ರಸ್ತಾಪ ಎಲ್ಲೋ ಬಂದಿರಬೇಕು. ಒಂದು ಪ್ರತಿ ಕಳಿಸಲು ಹೇಳಿದ್ದರು. ಅದರ ಕುರಿತಂತೆ ಅವರ ಎಂದಿನ ಚುಟುಕು ಪ್ರತಿಕ್ರಿಯೆಯೂ ಸಿಕ್ಕಿತ್ತು, "ಲೇಔಟ್ ಚೆನ್ನಾಗಿದೆ"
ಪುಟ ವಿನ್ಯಾಸ ನನಗೆ ಸದಾ ಆಸಕ್ತಿಯ ವಿಷಯ. ಸುಧಾ-ಮಯೂರಗಳ ಸಾಹಿತ್ಯಿಕ ಮೌಲ್ಯದ ಜೊತೆಗೆ ಅದರ ಇಂದಿನ ವಿನ್ಯಾಸ ಆಕರ್ಷಕ. ದುರಂತವೆಂದರೆ, ಸಾಮಾನ್ಯವಾಗಿ ಧಾರ್ಮಿಕ ಪತ್ರಿಕೆಗಳಲ್ಲಿ ಲೇಔಟ್‌ಗೆ ಕನಿಷ್ಟ ಆದ್ಯತೆ. ಅಲ್ಲೇನಿದ್ದರೂ ಉದ್ದುದ್ದದ ಲೇಖನಗಳು, ಪುಟ ತುಂಬುವ ಸರ್ಕಸ್. ಅಂತವು ಎಂದು ಒಂದೆರಡನ್ನು ಹೆಸರಿಸುವುದು ಬೇಡ. ಆದರೆ ‘ವಿವೇಕಪ್ರಭ’ ಮಾತ್ರ ಅಕ್ಷರಶಃ ವಿಭಿನ್ನ.
ಮೈಸೂರಿನ ಶ್ರೀರಾಮಕೃಷ್ಣ ಆಶ್ರಮ [ಯಾದವಗಿರಿ, ಮೈಸೂರು -570020]ದ ವಿವೇಕಪ್ರಭ ವಿಭಾಗ ಪ್ರಕಟಿಸುತ್ತಿರುವ ಈ ಮಾಸಿಕದಲ್ಲಿ ಮೊತ್ತಮೊದಲು ನನ್ನ ಗಮನ ಸೆಳೆದಿದ್ದು ಲೇಔಟ್. ಈಗ 10ವಸಂತಗಳನ್ನು ಪೂರೈಸಿದ ಹೆಮ್ಮೆ ಇದಕ್ಕೆ. ಅದಕ್ಕೋ ಏನೋ, ಕಳೆದ ಎರಡು ಸಂಚಿಕೆಗಳಿಂದ ಪತ್ರಿಕೆಯ ಪ್ರತಿ ಪುಟವೂ ಬಣ್ಣ ಬಣ್ಣದಲ್ಲಿ ಪ್ರಕಟವಾಗುತ್ತಿದೆ.
ಇದೇ ಪತ್ರಿಕೆಯಲ್ಲಿ ಮೂಡಿದ ಮಾಹಿತಿಯಂತೆ, ಇದರ ವ್ಯವಸ್ಥಾಪಕ ಸಂಪಾದಕರು ಸ್ವಾಮಿ ನಿತ್ಯಸ್ಥಾನಂದರು. ರಾಮಕೃಷ್ಣ ಮಹಾಸಂಘದ ಏಕೈಕ ಮಾಸಪತ್ರಿಕೆ ಎಂಬ ಅಗ್ಗಳಿಕೆಯ ‘ವಿವೇಕಪ್ರಭ’ದ ಸಂಪಾದಕೀಯ ಸಲಹಾ ಮಂಡಳಿಯಲ್ಲಿ ಗುರುಗಳಾದ ಡಾ.ನಿರಂಜನ ವಾನಳ್ಳಿಯವರೂ ಇದ್ದಾರೆ. 42 ಪುಟಗಳ ಪತ್ರಿಕೆಯ ಬಿಡಿ ಪ್ರತಿ ಬೆಲೆ 10 ರೂಪಾಯಿ. ವಾರ್ಷಿಕ ಚಂದಾ 100 ರೂ. ಮೂರು ವರ್ಷಕ್ಕೆ250. 25 ವರ್ಷಕ್ಕೆ ಕೇವಲ ಒಂದೂವರೆ ಸಾವಿರ ರೂ. ಹೆಚ್ಚಿನ ಚಂದಾ ವಿವರಕ್ಕೆ 0821-2417444 ಅಥವಾ 2412424ನ್ನು ಸಂಪರ್ಕಿಸಬಹುದು.
ಇನ್ನೊಂದು ಹೇಳಲೇಬೇಕಾದ ಮಾಹಿತಿಯಿದೆ. ವಿವೇಕಪ್ರಭ ಉಳಿದ ಪತ್ರಿಕೆಗಳಂತೆ ಸಂಕೀರ್ಣ ವಾಕ್ಯಗಳ ಒಣ ಲೇಖನಗಳ ಮೂಲಕ ಧರ್ಮ, ವೇದಾಂತ, ಉಪನಿಷತ್ ಎನ್ನುತ್ತ ಬರೆಯುವುದಿಲ್ಲ. ತುಂಬಾ ಸರಳವಾಗಿ ಮತ್ತು ಅಷ್ಟೇ ಆಕರ್ಷಕ ನಿರೂಪಣೆಯಲ್ಲಿ ಲೇಖನಗಳಿರುತ್ತವೆ. ಮುಖ್ಯವಾಗಿ, ರಾಮಕೃಷ್ಣ, ವಿವೇಕಾನಂದ, ಶ್ರೀಮಾತೆ ಕುರಿತಂತೆ ಘಟನೆಗಳನ್ನಾಧರಿಸಿದ ಬರಹಗಳು ಇರುವುದು ಚೆನ್ನ. ದೊಡ್ಡವರೇಕೆ ಸಣ್ಣ ಮಕ್ಕಳೂ ಕೂಡ ಓದುವಂತಿರುತ್ತವೆ. ಕಥೋಪದೇಶ, ವಿದ್ಯಾರ್ಥಿ ಪ್ರಭ ಮತ್ತು ಸಣ್ಣ ಪುಟ್ಟ ತುಣುಕುಗಳ ಮಾಹಿತಿ ಅಲ್ಲಲ್ಲಿ ಇರುವುದು ನಿಜಕ್ಕೂ ಚೆಂದ ಚೆಂದ.
ಮಾದರಿ ಪ್ರತಿ ಕಳಿಸಿಕೊಡುವರೋ ಇಲ್ಲವೋ ಗೊತ್ತಿಲ್ಲ kannada.vivekaprabha@gmail.com ಮೂಲಕವೂ ತಾವು ವಿಚಾರಿಸಬಹುದು. ನಮ್ಮ ‘ವೀಣಾ ಸ್ಮಾರಕ ಮಾವಿನಮನೆ ವಾಚನಾಲಯ’ಕ್ಕೆ ಉಚಿತವಾಗಿ ಕಳಿಸಿಕೊಡುತ್ತಿರುವುದಕ್ಕೆ ನಾನು ವಿವೇಕಪ್ರಭ ಬಳಗಕ್ಕೆ ಸದಾ ಕೃತಜ್ಞ.


-ಮಾ.ವೆಂ.ಸ.ಪ್ರಸಾದ್
ಮಾವಿನಸರ
ಪೋಸ್ಟ್-ಎಡಜಿಗಳೇಮನೆ
ಸಾಗರ ತಾ. ಶಿವಮೊಗ್ಗ ಜಿ.
577401
ಫೋನ್-08183 236068, 296543
9886407592
ಇ ಮೇಲ್- mavemsa@gmail.com

ಭಾನುವಾರ, ಡಿಸೆಂಬರ್ 20, 2009

‘ಇನ್‌ಸೈಟ್’ ಇದ್ದರೆ ಒಳ್ಳೆಯದು!


ವಾರಕ್ಕೊಮ್ಮೆ.........4

ಗೆಳೆಯ ಜಿತು ಜೊತೆ ಇತ್ತೀಚೆಗೆ ಜಿಮೈಲ್ ಚಾಟ್ ನಡೆಸುತ್ತಿದ್ದಾಗ ಇದ್ದಕ್ಕಿದ್ದಂತೆ ಆತ ಕೇಳಿದ್ದ, ನಿನ್ನ ಈ ಅಂಕಣದಲ್ಲಿ ಇಂಗ್ಲೀಷ್ ಪತ್ರಿಕೆಗಳ ಬಗ್ಗೆ ಬರೆಯುವುದಿಲ್ಲವೇ? ನನ್ನ ನಿಲುವು ಸರಳ, ಅಂತಹ ಯಾವುದೇ ಮಡಿ ಮುಚ್ಚಟ್ಟೆ ಈ ಅಂಕಣಕ್ಕಿಲ್ಲ. ಪತ್ರಿಕೆ ನನಗೆ ವಿಶಿಷ್ಟ ಅಂತ ಅನಿಸಿರಬೇಕು. ಹಾಗಾಗಿ ಈ ವಾರ ನಾನು ಬೇಕೆಂತಲೇ ಪರಿಚಯಿಸಬೇಕಿದ್ದ ಕನ್ನಡ ಮಾಸಪತ್ರಿಕೆಯ ಸರತಿ ತಪ್ಪಿಸಿ ಅಪರೂಪದ ಆಂಗ್ಲ ದ್ವೈಮಾಸಿಕವನ್ನು ನಿಮ್ಮೆದುರಿಗೆ ಇಟ್ಟಿದ್ದೇನೆ. ಒಪ್ಪಿಸಿಕೊಳ್ಳಿ.....


ಸ್ಲಿಮ್ ಟ್ಯೂಬ್‌ಲೈಟ್, ಅಡುಗೆ ಎಣ್ಣೆ, ಬ್ಯಾಟರಿ ಸೆಲ್, ಟೂತ್‌ಪೇಸ್ಟ್, ಟಿವಿ, ಗೋಧಿ ಹಿಟ್ಟು... ಹೀಗೆ ಹಲವು ವಿಚಾರಗಳಲ್ಲಿ ಖರೀದಿಗೆ ಹೊರಟಾಗ ನಮ್ಮ ತಲೆಯಲ್ಲಿ ಒಂದು ಅನುಮಾನ ಮೂಡಬಹುದು, ಯಾವ ಕಂಪನಿಯ ತಯಾರಿಕೆ ಖರೀದಿಗೆ ಯೋಗ್ಯ? ಕಾನೂನು ಮಾನದಂಡಗಳನ್ನು ಇವು ಸರಿಯಾಗಿ ಪಾಲಿಸಿತ್ತವೆಯೇ? ಬೆಲೆಗೆ ತಕ್ಕ ಮೌಲ್ಯ ದೊರಕುತ್ತದೆಯೇ? ಮಾರುಕಟ್ಟೆಯಲ್ಲಿ ಯಾವ ಯಾವ ಕಂಪನಿಯ ತಯಾರಿಕೆಗಳಿವೆ? ಗುಣಮಟ್ಟ ಹೇಗೆ? ಉಫ್, ಈ ಪ್ರಶ್ನೆಗಳಿಗೆಲ್ಲ ಉತ್ತರ ಎಲ್ಲಿ ಸಿಕ್ಕೀತು?
ಇಂಗ್ಲೀಷ್‌ನಲ್ಲೊಂದು ಗ್ರಾಹಕ ಪತ್ರಿಕೆಯಿದೆ. ಎರಡು ತಿಂಗಳಿಗೊಮ್ಮೆ ಪ್ರಕಟವಾಗುವ ಈ ಸುಂದರ ಪತ್ರಿಕೆಯ ಹೆಸರೇ ‘ಇನ್‌ಸೈಟ್’ ಅಹ್ಮದಾಬಾದ್‌ನ ಕನ್ಸ್ಯೂಮರ್ ಎಜುಕೇಷನ್ ಅಂಡ್ ರೀಸರ್ಚ್ ಸೊಸೈಟಿ (ಸಿಇಆರ್‌ಎಸ್) ರಾಷ್ಟ್ರದ ಪ್ರತಿಷ್ಟಿತ ಗ್ರಾಹಕ ಸಂಘಟನೆ. ಇದು ತನ್ನ ವ್ಯಾಪ್ತಿಯಲ್ಲಿ ಅತ್ಯಾಧುನಿಕ ಪರೀಕ್ಷಾ ಕೇಂದ್ರದ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿಯೇ ವಿವಿಧ ಕಂಪನಿಗಳ ತಯಾರಿಕೆಗಳನ್ನು ಪರೀಕ್ಷಿಸಿದೆ, ಪರೀಕ್ಷಿಸುತ್ತಿದೆ. ಅದರ ಆಮೂಲಾಗ್ರ ವರದಿಯನ್ನು ಪ್ರತಿ ಇನ್‌ಸೈಟ್‌ನಲ್ಲಿ ಪ್ರಮುಖವಾಗಿ ಪ್ರಕಟಿಸಲಾಗುತ್ತದೆ. ತುಂಬಾ ಪಾರದರ್ಶಕವಾಗಿ, ಪ್ರಜಾತಂತ್ರೀಯವಾಗಿ ಪರೀಕ್ಷೆ ನಡೆಯುವುದರಿಂದ ಅವು ನಂಬಲರ್ಹ. ಮುಖ್ಯವಾಗಿ, ತಾನು ಕಂಡುಹಿಡಿದ ಮಾಹಿತಿಗಳನ್ನು ಚಂದವಾಗಿ, ಮನಸ್ಸಿಗೆ ನಾಟುವಂತೆ ಲೇಖನವಾಗಿಸುವುದು ಇನ್‌ಸೈಟ್‌ಗೆ ಗೊತ್ತು.
ಇಷ್ಟೇ ಅಲ್ಲ, ಕಾನೂನು ಸಲಹೆ, ತೆರಿಗೆ ಮಾಹಿತಿ, ಅನಾರೋಗ್ಯಕರ ತಯಾರಿಕೆಗಳು, ಬಳಕೆದಾರರ ಸಂಬಂಧೀ ಕಾಯ್ದೆಗಳು.. ಮಾಹಿತಿ ಹೇರಳ. ಸ್ವಲ್ಪ ಪ್ರಮಾಣದ ಇಂಗ್ಲೀಷ್ ಗೊತ್ತಿದ್ದವನಿಗೂ ಪತ್ರಿಕೆ ಗಿಟ್ಟುತ್ತದೆ, ಈಗ ನಾನಿಲ್ಲವೇ?
ಅದರ ಬಿಡಿ ಪ್ರತಿ ಬೆಲೆ 40 ರೂ. ಮಾರಾಟದಲ್ಲಿ ಬಿಡಿ ಪ್ರತಿ ಸಿಕ್ಕದು. ವಾರ್ಷಿಕ ಚಂದಾ 180ರೂ. ಅದೇ ಮೂರು, ಐದು ವರ್ಷಗಳಿಗೆ ಆದರೆ ರಿಯಾಯಿತಿ ದರವಿದೆ. ಅನುಕ್ರಮವಾಗಿ ಅದು 450, 700ರೂ. ಚಂದಾ ಕಳಿಸುವುದಾದರೆ, CERS, `Suraksha Sankool' Thaltej-Gandinagar Highway, Ahmadabad - 380054, GUJARATH
ನೆನಪಿರಲಿ, ಪತ್ರಿಕೆಯ ಉದ್ದೇಶ ಗ್ರಾಹಕ ಜಾಗೃತಿಯೇ ವಿನಃ ವ್ಯಾವಹಾರಿಕ ಲಾಭವಲ್ಲ. ಆದರೂ ಪತ್ರಿಕೆ ಬೇಡ, ಮಾಹಿತಿಯಷ್ಟೇ ಬೇಕು ಎನ್ನುವವರು http://www.cercindia.org/ ವೆಬ್‌ಸೈಟ್‌ನಲ್ಲಿ ಇಣುಕಬಹುದು.

ಕೊನೆಮಾತು - ಮಿತ್ರ ಜಿತು ಈಗ ‘ತನಗೆ ಬರುತ್ತಿರುವ ಕೆಲವು ವಿಶಿಷ್ಠ ಪತ್ರಿಕೆಗಳನ್ನು ನನಗೆ ಕೊಡುವುದಾಗಿ ತಿಳಿಸಿದ್ದಾನೆ. ನಿಮ್ಮಂತ ಇತರ ಸ್ನೇಹಿತರಲ್ಲೂ ನಾನು ಕೇಳುವುದಿಷ್ಟೇ, ನಿಮಗೆ ಉತ್ತಮ ಎನ್ನಿಸಿದ ಪತ್ರಿಕೆಯ ಸ್ಯಾಂಪಲ್ ಪ್ರತಿಯನ್ನು ನನ್ನ ವಿಳಾಸಕ್ಕೆ ಕಳಿಸಿಕೊಡಿ. ನನಗೂ ಮೆಚ್ಚುಗೆಯಾದರೆ ಈ ಅಂಕಣದಲ್ಲಿ ಬಳಸಿಕೊಳ್ಳುವೆ. ಅಷ್ಟಕ್ಕೂ ನನಗೆ ಲಭ್ಯವಿರುವ ಅಪರೂಪದ ಪತ್ರಿಕೆಗಳು ಕೆಲವೊಂದು ಮಾತ್ರ. ಉಳಿದವಕ್ಕೆ ಸಲ್ಲಬೇಕಾದ ಸಮ್ಮಾನ ತಪ್ಪಿಹೋದೀತು. ಕಳಿಸಿಕೊಡುವಿರಾ?-ಮಾ.ವೆಂ.ಸ.ಪ್ರಸಾದ್
ಮಾವಿನಸರ
ಪೋಸ್ಟ್-ಎಡಜಿಗಳೇಮನೆ
ಸಾಗರ ತಾ. ಶಿವಮೊಗ್ಗ ಜಿ.
577401
ಫೋನ್-08183 236068, 296543
9886407592
ಇ ಮೇಲ್- mavemsa@gmail.com

ಭಾನುವಾರ, ಡಿಸೆಂಬರ್ 13, 2009

ಕಾಫಿ ಬೆಲೆಗೆ ‘ಸುಮ್ನೆ’ ಓದಿ!


ವಾರಕ್ಕೊಮ್ಮೆ......... 3

ನಿಮ್ಮೂರಿನ ಹೋಟೆಲ್‌ನಲ್ಲಿ ಈಗ ಒಂದು ಕಾಫಿಯ ಬೆಲೆ ಎಷ್ಟು? ನಮ್ಮೂರಿನಂತ ನಮ್ಮೂರಿನಲ್ಲೇ ಅದಕ್ಕೆ ಐದು ರೂಪಾಯಿ. ಎರಡು ಗುಟುಕಿಗೆ ಆ ಪ್ಲಾಸ್ಟಿಕ್ ಕಪ್ ಖಾಲಿ ಬೇರೆ! 10, 20 ರೂ. ಆಯಾ ನಗರದ, ಆಯಾ ದರ್ಜೆಯ ಹೋಟೆಲ್‌ಗಳನ್ನು ಅನುಸರಿಸಿ ದರವಿದ್ದೀತು. ಅವತ್ತೊಂದು ದಿನ ಬೆಂಗಳೂರಿನ ಏರ್‌ಪೋರ್ಟ್ ಒಳಗೆ ಕಾಫಿ ಕುಡಿದರೆ ಬಿಲ್ ಕೈ ಸುಟ್ಟಿತ್ತು, 70 ರೂಪಾಯಿ! ಇಂತಹ ದಿನಗಳಲ್ಲಿ ಕೇವಲ ಮೂರು ರೂ.ಗೆ ಒಂದು ಮಾಸಪತ್ರಿಕೆ ಪ್ರಕಟಗೊಳ್ಳುತ್ತಿರುವುದು ನಿಮಗೆ ಗೊತ್ತೆ?
ಗಂಭೀರವಾಗಿಯೇ ಹೇಳುತ್ತಿದ್ದೇನೆ, ಪತ್ರಿಕೆಯ ಹೆಸರೇ ‘ಸುಮ್ ಸುಮ್ನೆ’ ನನಗೆ ನೆನಪಿರುವಂತೆ ಈ ಪತ್ರಿಕೆ ಆರಂಭವಾದದ್ದು ಎಂಟೂ ಹತ್ತೋ ರೂ. ದರದಲ್ಲಿ. ಆಗ ಅದರ ಪುಟ ಸಂಖ್ಯೆ, ಬಹುಷಃ ನೀತಿ ಬೇರೆಯೇ ಇತ್ತು. ಆದರೆ ಮಾರುಕಟ್ಟೆಯಲ್ಲಿ ತನ್ನದೇ ಒಂದು ಅಸ್ತಿತ್ವ ಪ್ರದರ್ಶಿಸಲು ಮೂರು ರೂ.ಗಳ ದರವಿಟ್ಟು ಪತ್ರಿಕೆಯನ್ನು ಪುನರ್ರ‍ೂಪಿಸಿದ್ದು ಸುಮಖ ಪ್ರಕಾಶನದ ರೂವಾರಿ ನಾರಾಯಣ ಮಾಳ್ಕೋಡ್.
ಸ್ವಲ್ಪ ಪತ್ರಿಕೋದ್ಯಮದ ಪರಿಚಯವಿದ್ದವರಿಗೆ ಮಾಳ್ಕೋಡ್‌ರ ಹೆಸರು ಕಿವಿಗೆ ಬಿದ್ದೇಬಿದ್ದಿರುತ್ತದೆ. ಬದುಕಿನ ಮಜಲುಗಳಲ್ಲಿ ವರದಿಗಾರರಾಗಿ, ಉಪಸಂಪಾದಕರಾಗಿ ದುಡಿದು ಈಗ ತಮ್ಮದೇ ಒಂದು ಬೃಹತ್ ಪುಸ್ತಕ ಪ್ರಕಾಶನವನ್ನು ನಡೆಸುತ್ತಿರುವ ಸಾಹಸಿ ಮಾಳ್ಕೋಡ್. ವೈಯುಕ್ತಿಕವಾಗಿ ಯಾವುದೇ ಪರಿಚಯ ನನಗಿಲ್ಲ. ಆದರೆ ಮೂಲತಃ ಹೊನ್ನಾವರದವರು ಎಂಬ ಮಾಹಿತಿ ಕೇಳಿ ಗೊತ್ತು. ಪ್ರತಿ ತಿಂಗಳು ಮುದ್ದಾಂ ಪುಸ್ತಕ ಪ್ರಕಟನೆ ಮಾಡುವುದು, ಸಂಗೀತ ಸಂಜೆ ಕಾರ್ಯಕ್ರಮ ನಡೆಸುವುದು, ಸಾಹಿತ್ಯಿಕ ಗೋಷ್ಠಿ... ನಡೆಸುವ ಸುಮುಖ ಇವತ್ತು ಈ ಹಿಂದಿನ ಸಂಗಮ ಪ್ರಕಾಶನದ ರಾಗಸಂಗಮ, ಚುಟುಕು ಪತ್ರಿಕೆಗಳ ಜವಾಬ್ದಾರಿಯ ಜೊತೆಗೆ ತನ್ನದೇ ನಾಲ್ಕು ಮಾಸಿಕಗಳನ್ನು ಹೊರತರುತ್ತಿದೆ. ಅದರಲ್ಲೊಂದು ಸುಮ್ ಸುಮ್ನೆ.
ನಿಜ, ಸುಮ್ನೆಯದು ಗಟ್ಟಿ ಸಾಹಿತ್ಯಿಕ ಚಿಂತನೆ ಹಚ್ಚುವಂತದಲ್ಲ. ಹಾಗೆಂದು ಅದು ತನ್ನನ್ನು ಕರೆದುಕೊಂಡೂ ಇಲ್ಲ. ಟೈಂಪಾಸ್‌ಗೆ ಕಡ್ಲೆ ಕಾಯಿ ತಿಂದು ಆರೋಗ್ಯ ಹಾಳುಮಾಡಿಕೊಳ್ಳುವುದಕ್ಕಿಂತ ಅದೇ ದರಕ್ಕೆ ಒಂದು ಸುಮ್ನೆ ಕೊಂಡು ಬಸ್‌ನಲ್ಲಿ ಓದುತ್ತ ಕೂರಬಹುದು. 26 ಪುಟಗಳಲ್ಲಿ ಪುಟ್ಟ ಸಣ್ಣ ಮಾಹಿತಿಗಳ ಸಂಗ್ರಹ. ಚಿತ್ರ ಸಮೇತ. ಇತ್ತೀಚೆಗಂತೂ ನಾಲ್ಕು - ಎಂಟು ಪುಟಗಳನ್ನು ಬಹುವರ್ಣಗಳಲ್ಲಿ ಮುದ್ರಿಸುವ ಸಾಹಸವನ್ನು ಮಾಡುತ್ತಿದ್ದಾರೆ. ‘ಮಕ್ಕಳ ಜ್ಞಾನ ವಿಕಾಸಕ್ಕಾಗಿ’ ಎಂಬ ಉಲ್ಲೇಖ ಪತ್ರಿಕೆಯಲ್ಲಿದ್ದರೂ ಇದು ಎಲ್ಲ ವರ್ಗದ ಓದುಗರಿಗೆ ಸಲ್ಲುತ್ತದೆ. ತುಸು ಖುಷಿ, ಚುಟುಕು ಮಾಹಿತಿಯ ಪತ್ರಿಕೆಯ ತಂತ್ರ ಗಮನ ಸೆಳೆಯುತ್ತದೆ.
ಪತ್ರಿಕೆಗೆ ಇನ್ನೂ ಎರಡು ವರ್ಷಗಳ ಪ್ರಾಯ. ನನ್ನ ಆಪ್ತ ಮಾಹಿತಿದಾರರ ಪ್ರಕಾರ, ಸುಮ್ನೆಯ ಪ್ರಸಾರ ಸಂಖ್ಯೆ ಉತ್ತೇಜನಕಾರಿಯಾಗಿಲ್ಲ. ಬುಕ್‌ಸ್ಟಾಲ್‌ಗಳ ಕೌಂಟರ್ ಸೇಲ್ ಕೂಡ ಚೆನ್ನಾಗಿಲ್ಲ. ಖಂಡಿತವಾಗಿಯೂ ಇದು ಅಸಹನೀಯ ಅಂಶ. ಕೇವಲ ಮೂರು ರೂಪಾಯಿಯ ಈ ಪತ್ರಿಕೆ ಅಷ್ಟು ದುಡ್ಡಿಗೆ ಮೋಸ ಮಾಡುವುದಿಲ್ಲವೆಂದು ನಾನು ‘ಯಾವುದೇ ದೇವರ ಮೇಲೆ’ ಆಣೆ ಮಾಡಿ ಹೇಳಬಲ್ಲೆ! ಬೇಕೆನ್ನುವವರಿಗೆ ಬುಕ್‌ಸ್ಟಾಲ್‌ಗಳಲ್ಲಿ ಲಭ್ಯ. ಅಥವಾ ವರ್ಷಕ್ಕೆ ಬರೇ 36 ರೂ. ಚಂದಾವನ್ನು ಸುಮುಖ ಡಿಸ್ಟಿಬ್ಯೂಟರ‍್ಸ್, ನಂ.174ಇ/28,2ನೇ ಮಹಡಿ, ಒಂದನೇ ಮುಖ್ಯರಸ್ತೆ, ವಿದ್ಯಾರಣ್ಯ ನಗರ, ಮಾಗಡಿ ರಸ್ತೆ, ಟೋಲ್‌ಗೇಟ್, ಬೆಂಗಳೂರು -560023 ಗೆ ಕಳುಹಿಸಿಕೊಡಬಹುದು.
ಫೋನ್ - 080 23146060
ಪ್ಲೀಸ್, ಓದಿ ಸುಮ್ನಾಗದಿರಿ!

-ಮಾ.ವೆಂ.ಸ.ಪ್ರಸಾದ್
ಮಾವಿನಸರ
ಪೋಸ್ಟ್-ಎಡಜಿಗಳೇಮನೆ
ಸಾಗರ ತಾ. ಶಿವಮೊಗ್ಗ ಜಿ.
577401
ಫೋನ್-08183 236068, 296543
9886407592
ಇ ಮೇಲ್- mavemsa@gmail.com

ಗುರುವಾರ, ಡಿಸೆಂಬರ್ 10, 2009

ನಾನೀಗ ‘ದಟ್ಸ್ ಕನ್ನಡ’ ವೆಬ್ ಅಂಕಣಕಾರ!

ನಿಮಗೂ ಗೊತ್ತು, ಈ ಬ್ಲಾಗ್‌ಗಳನ್ನು ಪತ್ರಿಕೆಗಳೆಂದು ಭಾವಿಸಿದರೆ ಅವುಗಳನ್ನು ಅನಿಯತಕಾಲಿಕಗಳಿಗೆ ಸೇರಿಸಬೇಕು. ಯಾವ ಬ್ಲಾಗಿಗನೂ ಒಂದು ನಿಯಮಿತ ವೇಳೆಯನ್ನು ಅನುಸರಿಸಿ ಬ್ಲಾಗ್ ಅಪ್‌ಲೋಡ್ ಮಾಡುವುದಿಲ್ಲ. ಅದರಲ್ಲಿ ನಾನೂ ಒಬ್ಬ! ಕೊನೆಪಕ್ಷ ಶಿಸ್ತು ಬರಲಿ ಎಂಬ ಕಾರಣಕ್ಕೆ ನಿಯಮಿತವಾಗಿ ಬರೆಯಲು ವಿಷಯ ಹುಡುಕಿದಾಗ ಸಿಕ್ಕಿದ್ದು ‘ಪತ್ರಿಕೆಗಳು’. ಹೌದು, ಎಷ್ಟೋ ಬಾರಿ ನಾನು ಓದುವ ಹಲವು ಪತ್ರಿಕೆಗಳ ಬಗ್ಗೆ ಹೇಳಬೇಕೆನಿಸಿದರೂ ಕೇಳಲು ಕಿವಿಗಳೂ ಸಿಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ವಾರಕ್ಕೊಮ್ಮೆ ಬರೆಯುವ ಉದ್ಘೋಷದೊಂದಿಗೆ ಅದೇ ಹೆಸರಿನ ಅಂಕಣ ಬರಹ ರೂಪದಲ್ಲಿ ಇದೇ ಬ್ಲಾಗ್ ಅಪ್‌ಲೋಡ್ ಆರಂಭಿಸಿದೆ. ನನ್ನ ಕೆಲಸದಿಂದ ಕೆಲವು ಪತ್ರಿಕೆಗಳಿಗೆ ಲಾಭವಾದರೆ ಸಾರ್ಥಕ ಎಂಬ ಭಾವವೂ ಇತ್ತು. ವಿಶ್ವಾಸವಿರಿಸಿ ನಮ್ಮೂರ ವಾಚನಾಲಯಕ್ಕೆ ಉಚಿತ ಪತ್ರಿಕೆ ಕಳುಹಿಸಿದ ಸಂಪಾದಕರಿಗೆ ನಾನು ಸಲ್ಲಿಸುವ ಗೌರವ ಎನ್ನುವುದು ಇನ್ನೊಂದು ಸತ್ಯ.
ಯಾಕೋ ಗೊತ್ತಿಲ್ಲ. ನನ್ನ ಬ್ಲಾಗ್‌ನಲ್ಲಿಯೇ ಕಾಮೆಂಟ್ ಬರೆಯುವವರು ಕಡಿಮೆ. ನೀವೇ ನೋಡಿ, ವಾರಕ್ಕೊಮ್ಮೆ ಸರದಿಯ ಎರಡನೇ ಲೇಖನಕ್ಕೆ ಒಂದೇ ಒಂದು ಕಾಮೆಂಟ್ ಇಲ್ಲ. ಆದರೆ ನನ್ನ ಮೈಲ್ ಐಡಿಗೆ ಪ್ರತಿಕ್ರಿಯೆಗಳು ಸಾಕಷ್ಟು. ಯಾಕೆ ಹೀಗೆ... ಗೊತ್ತಾಗುತ್ತಿಲ್ಲ.
ಅಂತಹ ಒಂದು ಮೈಲ್ ಕಳೆದ ವಾರದ ವಾರಕ್ಕೊಮ್ಮೆ ಕಂತನ್ನು ಬರೆದಾಗಲೇ ಸಿಕ್ಕಿತ್ತು. ‘ದಟ್ಸ್ ಕನ್ನಡ’ ವೆಬ್ ಪತ್ರಿಕೆಯ ಸಂಪಾದಕರಾದ ಎಸ್.ಕೆ.ಶ್ಯಾಮಸುಂದರ್ ಬರೆದಿದ್ದರು...Wonderful Idea....Shall I too publish this feature ( ಕನ್ನಡ ಪತ್ರಿಕೆಗಳ ವಾರಪತ್ರಿಕೆ !! ) on a real time basis ( Monday) on thatskannada pages ( server) ...........thanks to mavemsa blog ?
Please let me know.
ನಾನು ಒಪ್ಪಿದೆ. ಸಮಸ್ಯೆಯೇನಿಲ್ಲವಲ್ಲ.? ಆದರೆ ಈಗ ಅನಿಸುತ್ತಿದೆ. ನನ್ನದೇ ಬ್ಲಾಗ್ ಆಗಿದ್ದರೆ ಒಂದು ವಾರ ಮಿಸ್ ಆದರೂ ನಡೆದೀತು. ಆದರೆ ಅಲ್ಲಿ ಒಪ್ಪಿಕೊಂಡ ನಂತರ ಕಷ್ಟ, ಪ್ರತಿ ವಾರ ಬರೆಯಲೇ ಬೇಕು. ಎಲ್ಲಿಯವರೆ ಸಾಧ್ಯವಾದೀತೋ ಅಲ್ಲಿಯವರೆಗೆ ಬರೆದರೆ ಆಯ್ತು ಎಂದು ಮನಸ್ಸನ್ನು ಸಮಾಧಾನ ಪಡಿಸಿರುವೆ. ಶ್ಯಾಮ್ ವಿವರವಾಗಿ ಬರೆದರು.... "ನಿಮ್ಮ ಕಲ್ಪನೆ ಮತ್ತು ಪ್ರಯೋಗ ಎರಡೂ ಪ್ರಶಂಸಾರ್ಹ. ನಮ್ಮ ನಾಡಿನಲ್ಲಿನ ಗ್ರಾಮಾಂತರ ಪತ್ರಿಕೆಗಳ ಬಗೆಗೆ ನಮಗೆ ಏನೂ ಗೊತ್ತಿಲ್ಲ. ಸುಧಾ, ಮಯೂರ, ತುಷಾರ, ತರಂಗ ಪತ್ರಿಕೆಗಳೇ ಎಲ್ಲವೂ ಅಲ್ಲ. ಪ್ರತೀ ಸೋಮವಾರ ಎಂದು ಹೇಳಿದ್ದೀರಿ. ಸರಿ. ಮೊದಲ ವಾರದ ಕಂತನ್ನು ಕೈಬಿಡಬಾರದು ಎಂಬ ದೃಷ್ಟಿಯಿಂದ ಈ ಬಾರಿ " ತಿಂಗಳು" ಪತ್ರಿಕೆ ಪರಿಚಯವನ್ನು ಶುಕ್ರವಾರವೇ ಮಾಡಿಬಿಡುತ್ತೇನೆ. ನಂತರ ಪ್ರತೀ ಸೋಮವಾರ. ತಾವು ಭಾನುವಾರ ಬರೆದ ನಂತರವೇ ನನಗೆ ರವಾನಿಸಿದರೆ, ಸೋಮವಾರ ಬೆಳಗ್ಗೆ ಪ್ರಕಟಿಸುತ್ತೇವೆ. ಪತ್ರಿಕೆ ಪರಿಚಯದ ಹಾದಿಯಲ್ಲಿ ಬಗೆಬಗೆಯ ವಿಷಯಾಧಾರಿತ ಪತ್ರಿಕೆಗಳು, ವಿವಿಧ ಜಿಲ್ಲೆ, ತಾಲೂಕುಗಳು "ನಿಯತಕಾಲಿಕೆಗಳ ವಾರಪತ್ರಿಕೆ " ಬುಟ್ಟಿಯಲ್ಲಿ ಕಾಣಸಿಗಲಿ " ಅಂದಿನಿಂದಲೇ ದಟ್ಸ್ ಕನ್ನಡದಲ್ಲಿ ಅಂಕಣ ಪ್ರಕಟಗೊಳ್ಳುತ್ತಿದೆ. ಸುಮ್ಮನೆ ನೋಡಿ, http://thatskannada.oneindia.in/column/periodicals/2009/1207-kannada-periodical-sahaja-agri-bimonthly.html. ಮೆಚ್ಚುಗೆಯಿಂದ ಭೂಮಿ ಮೇಲಿನ ಹೆಜ್ಜೆ ನೆಲ ಬಿಡಬಾರದು. ಎಷ್ಟೋ ಬಾರಿ, ಪ್ರಶಂಸೆಯ, ಮನ್ನಣೆಯ ಮಾತು ಹೊಸ ಉತ್ಸಾಹವನ್ನು ತರುವುದು ಖಚಿತ. ಹಾಗಾಗಿದೆ ಎಂದು ವಿನಮ್ರನಾಗಿ ಭಿನ್ನವಿಸುತ್ತೇನೆ. ಹಲವು ಹಿರಿಯರ ಪತ್ರಗಳಲ್ಲಿ ನನ್ನ ಗಮನವನ್ನು ವಿಶೇಷವಾಗಿ ಸೆಳೆದಿದ್ದು ಎಸ್.ಎಂ.ಪೇಜತ್ತಾಯರು ಬರೆದ ಮಿಂಚಂಚೆ, ತಿಂಗಳು ಪತ್ರಿಕೆಗೆ ಚಂದಾದಾರ ಆಗುವೆ." ಇನ್ನೂ ಇಪ್ಪತ್ತ ಮೂರು ಮೈಲ್ ಸ್ನೇಹಿತರು ಬೆಂಬಲಕ್ಕೆ ನಿಂತಿದ್ದಾರೆ. ನೀವೂ ಇರುವಿರಿ ತಾನೇ?
ಇನ್ನೆಂತ ಹೇಳಲಿ, ನಮಸ್ಕಾರ.
-ಮಾ.ವೆಂ.ಸ.ಪ್ರಸಾದ್
ಮಾವಿನಸರ
ಪೋಸ್ಟ್-ಎಡಜಿಗಳೇಮನೆ
ಸಾಗರ ತಾ. ಶಿವಮೊಗ್ಗ ಜಿ.
577401
ಫೋನ್-08183 236068, 296543
9886407592
ಇ ಮೇಲ್- mavemsa@gmail.comಭಾನುವಾರ, ಡಿಸೆಂಬರ್ 6, 2009

ಕೃಷಿ ಪತ್ರಿಕೆ - ಕೃಷಿಕರಲ್ಲದವರಿಗೂ ಸೈ!


ವಾರಕ್ಕೊಮ್ಮೆ......... 2
ನಮ್ಮೂರಿನ ‘ವೀಣಾ ಸ್ಮಾರಕ ಮಾವಿನಮನೆ ವಾಷನಾಲಯ’ದ ಮೂರನೇ ವಾರ್ಷಿಕೋತ್ಸವ ಸಂದರ್ಭ. ಬರಹಗಾರ್ತಿ ಶ್ರೀಮತಿ ರೋಹಿಣಿ ಶರ್ಮ ಅಜ್ಜಂಪುರ ನಮ್ಮ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದರು. ಅವರ ಕೈಯಲ್ಲಿ ಹತ್ತೆಂಟು ಪತ್ರಿಕೆಗಳ ಪ್ರತಿಗಳಿತ್ತು. ಈ ರೋಹಿಣಕ್ಕ ಮನೆಗೆ ಪ್ರತಿತಿಂಗಳು ಸರಿಸುಮಾರು ೩೦ ಪತ್ರಿಕೆಗಳನ್ನು ಅಂಚೆಯಲ್ಲಿ ತರಿಸುತ್ತಾರಂತೆ. ಅವತ್ತು ತಂದ ಆ ಪತ್ರಿಕೆಗಳಲ್ಲಿ ನನಗೆ ಎದ್ದು ಕಂಡದ್ದು ‘ಸಹಜ ಸಾಗುವಳಿ’ ಮುಖಪುಟದ ಹೊರತಾಗಿ ಉಳಿದೆಲ್ಲ ಪುಟಗಳಲ್ಲಿ ಸುದ್ದಿ, ಲೇಖನಗಳಿಂದ ಶೃಂಗರಿಸಿಕೊಂಡ ‘ಸಹಜ’ ಸಹಜವಾಗಿಯೇ ನನ್ನ ಗಮನ ಸೆಳೆಯಿತು.
ದ್ವೈಮಾಸಿಕ ಪತ್ರಿಕೆಯಿದು. 28ರಿಂದ 32ರವರೆಗೆ ಪುಟಗಳು. ಆರಂಭಿಕ ದಿನಗಳ ‘ಅಡಿಕೆ ಪತ್ರಿಕೆ’ಯ ಆಕಾರ. ಕಾರ್ಪೊರೇಟ್ ದುರಾಕ್ರಮಣವನ್ನು ವಿರೋಧಿಸುವ ಖಡಕ್ ನೀತಿ. ಹಾಗಾಗಿ ರಾಸಾಯನಿಕ ಗೊಬ್ಬರ, ಕೆಮಿಕಲ್ ಔಷಧಿ, ಬಿಟಿ ಜ್ಞಾನಗಳನ್ನು ಆಮೂಲಾಗ್ರವಾಗಿ ಸಹಜ ಸಾಗುವಳಿ ವಿರೋಧಿಸುತ್ತದೆ. ಇವುಗಳ ಮೂಲವಾದ ಬಹುರಾಷ್ಟ್ರೀಯ ಕಂಪನಿಗಳನ್ನು, ಉತ್ಪಾದಕರನ್ನು ಟೀಕಿಸುತ್ತಲೇ ಇರುವುದರಿಂದ ಜಾಹೀರಾತುಗಳ ಕಾಟ ಈ ಪತ್ರಿಕೆ ಓದುಗನಿಗಿಲ್ಲ. ಅಷ್ಟೇಕೆ, ಹಿಂದೊಮ್ಮೆ ನನ್ನ ‘ಇಲಿಗಳ ನಾಶ’ ತಂತ್ರದ ಲೇಖನವನ್ನು ಪ್ರಕಟಿಸಿದ್ದರೂ ಅದರಲ್ಲಿದ್ದ ‘ಹಿಟ್ಟಿಗೆ ರಾಸಾಯನಿಕ ಥಿಮೆಟ್ ಹಾಕಿ ಇಟ್ಟರೆ ತಿನ್ನುವ ಹೆಗ್ಗಣ ಸಾಯುತ್ತದೆ’ ಎಂಬ ವಾಕ್ಯವನ್ನು ನಿರ್ದಾಕ್ಷಿಣ್ಯವಾಗಿ ಸಂಪಾದಕಿ ವಿ.ಗಾಯತ್ರಿಯವರು ಕತ್ತರಿಸಿ ಎಸೆದಿದ್ದರು!
ಸಹಜ ಸಾಗುವಳಿಯನ್ನು ಸರ್ಕಾರೇತರ ಸಂಸ್ಥೆ ಇಕ್ರಾ ಹೊರತರುತ್ತಿದೆ. ಇತ್ತೀಚೆಗೆ ನಡೆದ ‘ರೈತಶಕ್ತಿ’ ಎಂಬ ದೊಡ್ಡ ಕಾರ್ಯಕ್ರಮ ಸಂಯೋಜನೆಯಲ್ಲಿಯೂ ಇಕ್ರಾ ಪಾಲ್ಗೊಂಡಿತ್ತು. ಹಲವು ಪುಸ್ತಕ ಪ್ರಕಟನೆಗಳನ್ನು ಮಾಡಿದೆ ಕೂಡ. ಖುದ್ದು ಸಸಾ ತನ್ನನ್ನು ಸುಸ್ಥಿರ ಸಾವಯವ-ಸಹಜ ಕೃಷಿಗೆ ಮೀಸಲಾದ ಪತ್ರಿಕೆ ಎಂದು ಹೇಳಿಕೊಂಡಿದೆ. ಸಸಾ ಉತ್ತಮ ಗುಣಮಟ್ಟದ ಕಾಗದದಲ್ಲಿ ಮುದ್ರಣಗೊಳ್ಳುತ್ತಿದೆ. ಹಲವು ಲೇಖನಗಳನ್ನು ರೈತರ ಆಡುಭಾಷೆಯಲ್ಲಿಯೇ ಇಡುವುದು ವೈಶಿಷ್ಟ್ಯತೆ. ವಿಷಯ ವೈವಿಧ್ಯಕ್ಕೂ ಕೊರತೆಯಿಲ್ಲ. ಮುಖ್ಯವಾಗಿ, ರೈತರಲ್ಲದ ಓದುಗರು ಕೂಡ ಸಹಜ ಸಾಗುವಳಿಯನ್ನು ಖುಷಿಯಿಂದ ಓದಬಹುದು. ಜಿಎಂ ತಂತ್ರಜ್ಞಾನ, ಪರ್ಮಾಕಲ್ಚರ್‌ಗಳಂತ ಹತ್ತಾರು ವಿಚಾರಗಳ ಬಗ್ಗೆ ಮತ್ತು ಅದೇ ವೇಳೆ ಸಾಂಪ್ರದಾಯಿಕ ಕೃಷಿ ಪದ್ಧತಿಗಳ ಕುರಿತು ಮಾಹಿತಿ ಪಡೆಯಬಹುದು. ತಜ್ಞರ ಬರಹಗಳ ಭಾಷಾಂತರವೂ ಇಲ್ಲಿ ಲಭ್ಯ.
ಬಿಡಿ ಪ್ರತಿಗೆ 12ರೂ. ವಾರ್ಷಿಕ ಚಂದಾ 60 ರೂ. ಸಸಾ ವಿಳಾಸ -ಸಂಪಾದಕರು, ಸಹಜ ಸಾಗುವಳಿ, ನಂ22, 5ನೇ ಕ್ರಾಸ್, ಮೈಖೇಲ್ ಪಾಳ್ಯ, 2ನೇ ಹಂತ, ಹೊಸ ತಿಪ್ಪಸಂದ್ರ ಅಂಚೆ, ಬೆಂಗಳೂರು - 560075
ದೂರವಾಣಿ - 080-25283370/25213104
ಕೊನೆಮಾತು - ಪತ್ರಿಕೆಗಳ ಕೊರತೆಗಳ ಬಗ್ಗೆ ಪ್ರಜ್ಞಾಪೂರ್ವಕವಾಗಿಯೇ ನಾನು ಬರೆಯುತ್ತಿಲ್ಲ. ವಿಮರ್ಶೆಯ ಗುರಿ ಸದ್ಯಕ್ಕೆ ನನ್ನದಲ್ಲ. ಪತ್ರಿಕೆಗಳ ಪರಿಚಯ ಈಗಿನ ಜರೂರಿ. ಹಾಗಾಗಿ ತುಸು ಹೊಗಳಿಕೆ ಹೆಚ್ಚಿದೆ ಎನ್ನಿಸಿದರೆ ಅದನ್ನು ರುಚಿಗೆ ಹಾಕಿದ ಒಗ್ಗರಣೆ ಎಂದುಕೊಳ್ಳಿ!
ಇನ್ನೂ ಒಂದು ಮಾತು - ಸಹಜ ಸಾಗುವಳಿಯಲ್ಲಿ ಇದು ಬೇಕು, ಇದಿರಬೇಕಿತ್ತು ಎಂಬ ಸಲಹೆಗಳ ಪಟ್ಟಿಯನ್ನು ನಿರ್ವಾಹಕ ಸಂಪಾದಕಿ ಗಾಯತ್ರಿಯವರಿಗೆ ಕಳಿಸಿಕೊಟ್ಟಿದ್ದೆ. ಅಂತಹ ಒಂದು ಸಲಹೆ ಜಾರಿಗೊಂಡಿದ್ದರ ಪರಿಣಾಮವಾಗಿ ಇವತ್ತು ನಾನು ಆ ಪತ್ರಿಕೆಯಲ್ಲಿ ‘ಅಂಕಣಕಾರ!’
-ಮಾ.ವೆಂ.ಸ.ಪ್ರಸಾದ್
ಮಾವಿನಸರ
ಪೋಸ್ಟ್-ಎಡಜಿಗಳೇಮನೆ
ಸಾಗರ ತಾ. ಶಿವಮೊಗ್ಗ ಜಿ.
577401
ಫೋನ್-08183 236068, 296543
9886407592
ಇ ಮೇಲ್- mavemsa@gmail.com


 
200812023996