ಭಾನುವಾರ, ಡಿಸೆಂಬರ್ 6, 2009

ಕೃಷಿ ಪತ್ರಿಕೆ - ಕೃಷಿಕರಲ್ಲದವರಿಗೂ ಸೈ!


ವಾರಕ್ಕೊಮ್ಮೆ......... 2
ನಮ್ಮೂರಿನ ‘ವೀಣಾ ಸ್ಮಾರಕ ಮಾವಿನಮನೆ ವಾಷನಾಲಯ’ದ ಮೂರನೇ ವಾರ್ಷಿಕೋತ್ಸವ ಸಂದರ್ಭ. ಬರಹಗಾರ್ತಿ ಶ್ರೀಮತಿ ರೋಹಿಣಿ ಶರ್ಮ ಅಜ್ಜಂಪುರ ನಮ್ಮ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದರು. ಅವರ ಕೈಯಲ್ಲಿ ಹತ್ತೆಂಟು ಪತ್ರಿಕೆಗಳ ಪ್ರತಿಗಳಿತ್ತು. ಈ ರೋಹಿಣಕ್ಕ ಮನೆಗೆ ಪ್ರತಿತಿಂಗಳು ಸರಿಸುಮಾರು ೩೦ ಪತ್ರಿಕೆಗಳನ್ನು ಅಂಚೆಯಲ್ಲಿ ತರಿಸುತ್ತಾರಂತೆ. ಅವತ್ತು ತಂದ ಆ ಪತ್ರಿಕೆಗಳಲ್ಲಿ ನನಗೆ ಎದ್ದು ಕಂಡದ್ದು ‘ಸಹಜ ಸಾಗುವಳಿ’ ಮುಖಪುಟದ ಹೊರತಾಗಿ ಉಳಿದೆಲ್ಲ ಪುಟಗಳಲ್ಲಿ ಸುದ್ದಿ, ಲೇಖನಗಳಿಂದ ಶೃಂಗರಿಸಿಕೊಂಡ ‘ಸಹಜ’ ಸಹಜವಾಗಿಯೇ ನನ್ನ ಗಮನ ಸೆಳೆಯಿತು.
ದ್ವೈಮಾಸಿಕ ಪತ್ರಿಕೆಯಿದು. 28ರಿಂದ 32ರವರೆಗೆ ಪುಟಗಳು. ಆರಂಭಿಕ ದಿನಗಳ ‘ಅಡಿಕೆ ಪತ್ರಿಕೆ’ಯ ಆಕಾರ. ಕಾರ್ಪೊರೇಟ್ ದುರಾಕ್ರಮಣವನ್ನು ವಿರೋಧಿಸುವ ಖಡಕ್ ನೀತಿ. ಹಾಗಾಗಿ ರಾಸಾಯನಿಕ ಗೊಬ್ಬರ, ಕೆಮಿಕಲ್ ಔಷಧಿ, ಬಿಟಿ ಜ್ಞಾನಗಳನ್ನು ಆಮೂಲಾಗ್ರವಾಗಿ ಸಹಜ ಸಾಗುವಳಿ ವಿರೋಧಿಸುತ್ತದೆ. ಇವುಗಳ ಮೂಲವಾದ ಬಹುರಾಷ್ಟ್ರೀಯ ಕಂಪನಿಗಳನ್ನು, ಉತ್ಪಾದಕರನ್ನು ಟೀಕಿಸುತ್ತಲೇ ಇರುವುದರಿಂದ ಜಾಹೀರಾತುಗಳ ಕಾಟ ಈ ಪತ್ರಿಕೆ ಓದುಗನಿಗಿಲ್ಲ. ಅಷ್ಟೇಕೆ, ಹಿಂದೊಮ್ಮೆ ನನ್ನ ‘ಇಲಿಗಳ ನಾಶ’ ತಂತ್ರದ ಲೇಖನವನ್ನು ಪ್ರಕಟಿಸಿದ್ದರೂ ಅದರಲ್ಲಿದ್ದ ‘ಹಿಟ್ಟಿಗೆ ರಾಸಾಯನಿಕ ಥಿಮೆಟ್ ಹಾಕಿ ಇಟ್ಟರೆ ತಿನ್ನುವ ಹೆಗ್ಗಣ ಸಾಯುತ್ತದೆ’ ಎಂಬ ವಾಕ್ಯವನ್ನು ನಿರ್ದಾಕ್ಷಿಣ್ಯವಾಗಿ ಸಂಪಾದಕಿ ವಿ.ಗಾಯತ್ರಿಯವರು ಕತ್ತರಿಸಿ ಎಸೆದಿದ್ದರು!
ಸಹಜ ಸಾಗುವಳಿಯನ್ನು ಸರ್ಕಾರೇತರ ಸಂಸ್ಥೆ ಇಕ್ರಾ ಹೊರತರುತ್ತಿದೆ. ಇತ್ತೀಚೆಗೆ ನಡೆದ ‘ರೈತಶಕ್ತಿ’ ಎಂಬ ದೊಡ್ಡ ಕಾರ್ಯಕ್ರಮ ಸಂಯೋಜನೆಯಲ್ಲಿಯೂ ಇಕ್ರಾ ಪಾಲ್ಗೊಂಡಿತ್ತು. ಹಲವು ಪುಸ್ತಕ ಪ್ರಕಟನೆಗಳನ್ನು ಮಾಡಿದೆ ಕೂಡ. ಖುದ್ದು ಸಸಾ ತನ್ನನ್ನು ಸುಸ್ಥಿರ ಸಾವಯವ-ಸಹಜ ಕೃಷಿಗೆ ಮೀಸಲಾದ ಪತ್ರಿಕೆ ಎಂದು ಹೇಳಿಕೊಂಡಿದೆ. ಸಸಾ ಉತ್ತಮ ಗುಣಮಟ್ಟದ ಕಾಗದದಲ್ಲಿ ಮುದ್ರಣಗೊಳ್ಳುತ್ತಿದೆ. ಹಲವು ಲೇಖನಗಳನ್ನು ರೈತರ ಆಡುಭಾಷೆಯಲ್ಲಿಯೇ ಇಡುವುದು ವೈಶಿಷ್ಟ್ಯತೆ. ವಿಷಯ ವೈವಿಧ್ಯಕ್ಕೂ ಕೊರತೆಯಿಲ್ಲ. ಮುಖ್ಯವಾಗಿ, ರೈತರಲ್ಲದ ಓದುಗರು ಕೂಡ ಸಹಜ ಸಾಗುವಳಿಯನ್ನು ಖುಷಿಯಿಂದ ಓದಬಹುದು. ಜಿಎಂ ತಂತ್ರಜ್ಞಾನ, ಪರ್ಮಾಕಲ್ಚರ್‌ಗಳಂತ ಹತ್ತಾರು ವಿಚಾರಗಳ ಬಗ್ಗೆ ಮತ್ತು ಅದೇ ವೇಳೆ ಸಾಂಪ್ರದಾಯಿಕ ಕೃಷಿ ಪದ್ಧತಿಗಳ ಕುರಿತು ಮಾಹಿತಿ ಪಡೆಯಬಹುದು. ತಜ್ಞರ ಬರಹಗಳ ಭಾಷಾಂತರವೂ ಇಲ್ಲಿ ಲಭ್ಯ.
ಬಿಡಿ ಪ್ರತಿಗೆ 12ರೂ. ವಾರ್ಷಿಕ ಚಂದಾ 60 ರೂ. ಸಸಾ ವಿಳಾಸ -ಸಂಪಾದಕರು, ಸಹಜ ಸಾಗುವಳಿ, ನಂ22, 5ನೇ ಕ್ರಾಸ್, ಮೈಖೇಲ್ ಪಾಳ್ಯ, 2ನೇ ಹಂತ, ಹೊಸ ತಿಪ್ಪಸಂದ್ರ ಅಂಚೆ, ಬೆಂಗಳೂರು - 560075
ದೂರವಾಣಿ - 080-25283370/25213104
ಕೊನೆಮಾತು - ಪತ್ರಿಕೆಗಳ ಕೊರತೆಗಳ ಬಗ್ಗೆ ಪ್ರಜ್ಞಾಪೂರ್ವಕವಾಗಿಯೇ ನಾನು ಬರೆಯುತ್ತಿಲ್ಲ. ವಿಮರ್ಶೆಯ ಗುರಿ ಸದ್ಯಕ್ಕೆ ನನ್ನದಲ್ಲ. ಪತ್ರಿಕೆಗಳ ಪರಿಚಯ ಈಗಿನ ಜರೂರಿ. ಹಾಗಾಗಿ ತುಸು ಹೊಗಳಿಕೆ ಹೆಚ್ಚಿದೆ ಎನ್ನಿಸಿದರೆ ಅದನ್ನು ರುಚಿಗೆ ಹಾಕಿದ ಒಗ್ಗರಣೆ ಎಂದುಕೊಳ್ಳಿ!
ಇನ್ನೂ ಒಂದು ಮಾತು - ಸಹಜ ಸಾಗುವಳಿಯಲ್ಲಿ ಇದು ಬೇಕು, ಇದಿರಬೇಕಿತ್ತು ಎಂಬ ಸಲಹೆಗಳ ಪಟ್ಟಿಯನ್ನು ನಿರ್ವಾಹಕ ಸಂಪಾದಕಿ ಗಾಯತ್ರಿಯವರಿಗೆ ಕಳಿಸಿಕೊಟ್ಟಿದ್ದೆ. ಅಂತಹ ಒಂದು ಸಲಹೆ ಜಾರಿಗೊಂಡಿದ್ದರ ಪರಿಣಾಮವಾಗಿ ಇವತ್ತು ನಾನು ಆ ಪತ್ರಿಕೆಯಲ್ಲಿ ‘ಅಂಕಣಕಾರ!’
-ಮಾ.ವೆಂ.ಸ.ಪ್ರಸಾದ್
ಮಾವಿನಸರ
ಪೋಸ್ಟ್-ಎಡಜಿಗಳೇಮನೆ
ಸಾಗರ ತಾ. ಶಿವಮೊಗ್ಗ ಜಿ.
577401
ಫೋನ್-08183 236068, 296543
9886407592
ಇ ಮೇಲ್- mavemsa@gmail.com


1 comments:

L.R.SIDDESH ಹೇಳಿದರು...

sahaja saguvali tumba channagi baruttade, dayavittu nimmalli jenu krushi bagge mahiti tilisuvira

nannadu ballari jilleya hagari bommanahalli tallukina sangameswara enba chikka grama. nannahesara siddesh sangameswara
mobile 9008793937
re mail Siddeshlr1982@gmail.com

 
200812023996