ಸೋಮವಾರ, ಡಿಸೆಂಬರ್ 28, 2009

ಲೇಔಟ್ ಹೀಗಿದ್ದರೆ ಚೆಂದ!



ವಾರಕ್ಕೊಮ್ಮೆ........5
ಕೆಲವರ್ಷಗಳ ಹಿಂದಿನ ಮಾತು. ನಾಗೇಶ್ ಹೆಗಡೆ ಪ್ರಜಾವಾಣಿಯ ಪುರವಣಿಗಳನ್ನು ನಿರ್ವಹಿಸುತ್ತಿದ್ದ ಕಾಲ. ನನಗಿದ್ದುದು ಫೋನ್ ಪರಿಚಯ ಮಾತ್ರ. ದೂರವಾಣಿಯಲ್ಲಿ, ಪುಟ್ಟ ಕಾರ್ಡ್‌ನಲ್ಲಿ ಅವರು ಒದಗಿಸುತ್ತಿದ್ದ ಪ್ರೋತ್ಸಾಹ ಅಪರಿಮಿತ. ಅವರ ನಿರ್ವಹಣೆಯ ‘ಕರ್ನಾಟಕ ದರ್ಶನ’ದಲ್ಲಿ ನಮ್ಮ ಒಂದು ಲೇಖನ ಬಂತೆಂದರೆ ಅದು ಎಲ್ಲ ಪರೀಕ್ಷೆ ಪಾಸಾದಂತೆ! ಇಂತಹ ವೇಳೆಯ ಮಾತುಕತೆಯಲ್ಲಿ ಹೆಗಡೆಯವರಲ್ಲಿ ನಾನು ಸಹಸಂಪಾದಕನಾಗಿದ್ದ ‘ಬಳಕೆ ತಿಳುವಳಿಕೆ’ಯ ಪ್ರಸ್ತಾಪ ಎಲ್ಲೋ ಬಂದಿರಬೇಕು. ಒಂದು ಪ್ರತಿ ಕಳಿಸಲು ಹೇಳಿದ್ದರು. ಅದರ ಕುರಿತಂತೆ ಅವರ ಎಂದಿನ ಚುಟುಕು ಪ್ರತಿಕ್ರಿಯೆಯೂ ಸಿಕ್ಕಿತ್ತು, "ಲೇಔಟ್ ಚೆನ್ನಾಗಿದೆ"
ಪುಟ ವಿನ್ಯಾಸ ನನಗೆ ಸದಾ ಆಸಕ್ತಿಯ ವಿಷಯ. ಸುಧಾ-ಮಯೂರಗಳ ಸಾಹಿತ್ಯಿಕ ಮೌಲ್ಯದ ಜೊತೆಗೆ ಅದರ ಇಂದಿನ ವಿನ್ಯಾಸ ಆಕರ್ಷಕ. ದುರಂತವೆಂದರೆ, ಸಾಮಾನ್ಯವಾಗಿ ಧಾರ್ಮಿಕ ಪತ್ರಿಕೆಗಳಲ್ಲಿ ಲೇಔಟ್‌ಗೆ ಕನಿಷ್ಟ ಆದ್ಯತೆ. ಅಲ್ಲೇನಿದ್ದರೂ ಉದ್ದುದ್ದದ ಲೇಖನಗಳು, ಪುಟ ತುಂಬುವ ಸರ್ಕಸ್. ಅಂತವು ಎಂದು ಒಂದೆರಡನ್ನು ಹೆಸರಿಸುವುದು ಬೇಡ. ಆದರೆ ‘ವಿವೇಕಪ್ರಭ’ ಮಾತ್ರ ಅಕ್ಷರಶಃ ವಿಭಿನ್ನ.
ಮೈಸೂರಿನ ಶ್ರೀರಾಮಕೃಷ್ಣ ಆಶ್ರಮ [ಯಾದವಗಿರಿ, ಮೈಸೂರು -570020]ದ ವಿವೇಕಪ್ರಭ ವಿಭಾಗ ಪ್ರಕಟಿಸುತ್ತಿರುವ ಈ ಮಾಸಿಕದಲ್ಲಿ ಮೊತ್ತಮೊದಲು ನನ್ನ ಗಮನ ಸೆಳೆದಿದ್ದು ಲೇಔಟ್. ಈಗ 10ವಸಂತಗಳನ್ನು ಪೂರೈಸಿದ ಹೆಮ್ಮೆ ಇದಕ್ಕೆ. ಅದಕ್ಕೋ ಏನೋ, ಕಳೆದ ಎರಡು ಸಂಚಿಕೆಗಳಿಂದ ಪತ್ರಿಕೆಯ ಪ್ರತಿ ಪುಟವೂ ಬಣ್ಣ ಬಣ್ಣದಲ್ಲಿ ಪ್ರಕಟವಾಗುತ್ತಿದೆ.
ಇದೇ ಪತ್ರಿಕೆಯಲ್ಲಿ ಮೂಡಿದ ಮಾಹಿತಿಯಂತೆ, ಇದರ ವ್ಯವಸ್ಥಾಪಕ ಸಂಪಾದಕರು ಸ್ವಾಮಿ ನಿತ್ಯಸ್ಥಾನಂದರು. ರಾಮಕೃಷ್ಣ ಮಹಾಸಂಘದ ಏಕೈಕ ಮಾಸಪತ್ರಿಕೆ ಎಂಬ ಅಗ್ಗಳಿಕೆಯ ‘ವಿವೇಕಪ್ರಭ’ದ ಸಂಪಾದಕೀಯ ಸಲಹಾ ಮಂಡಳಿಯಲ್ಲಿ ಗುರುಗಳಾದ ಡಾ.ನಿರಂಜನ ವಾನಳ್ಳಿಯವರೂ ಇದ್ದಾರೆ. 42 ಪುಟಗಳ ಪತ್ರಿಕೆಯ ಬಿಡಿ ಪ್ರತಿ ಬೆಲೆ 10 ರೂಪಾಯಿ. ವಾರ್ಷಿಕ ಚಂದಾ 100 ರೂ. ಮೂರು ವರ್ಷಕ್ಕೆ250. 25 ವರ್ಷಕ್ಕೆ ಕೇವಲ ಒಂದೂವರೆ ಸಾವಿರ ರೂ. ಹೆಚ್ಚಿನ ಚಂದಾ ವಿವರಕ್ಕೆ 0821-2417444 ಅಥವಾ 2412424ನ್ನು ಸಂಪರ್ಕಿಸಬಹುದು.
ಇನ್ನೊಂದು ಹೇಳಲೇಬೇಕಾದ ಮಾಹಿತಿಯಿದೆ. ವಿವೇಕಪ್ರಭ ಉಳಿದ ಪತ್ರಿಕೆಗಳಂತೆ ಸಂಕೀರ್ಣ ವಾಕ್ಯಗಳ ಒಣ ಲೇಖನಗಳ ಮೂಲಕ ಧರ್ಮ, ವೇದಾಂತ, ಉಪನಿಷತ್ ಎನ್ನುತ್ತ ಬರೆಯುವುದಿಲ್ಲ. ತುಂಬಾ ಸರಳವಾಗಿ ಮತ್ತು ಅಷ್ಟೇ ಆಕರ್ಷಕ ನಿರೂಪಣೆಯಲ್ಲಿ ಲೇಖನಗಳಿರುತ್ತವೆ. ಮುಖ್ಯವಾಗಿ, ರಾಮಕೃಷ್ಣ, ವಿವೇಕಾನಂದ, ಶ್ರೀಮಾತೆ ಕುರಿತಂತೆ ಘಟನೆಗಳನ್ನಾಧರಿಸಿದ ಬರಹಗಳು ಇರುವುದು ಚೆನ್ನ. ದೊಡ್ಡವರೇಕೆ ಸಣ್ಣ ಮಕ್ಕಳೂ ಕೂಡ ಓದುವಂತಿರುತ್ತವೆ. ಕಥೋಪದೇಶ, ವಿದ್ಯಾರ್ಥಿ ಪ್ರಭ ಮತ್ತು ಸಣ್ಣ ಪುಟ್ಟ ತುಣುಕುಗಳ ಮಾಹಿತಿ ಅಲ್ಲಲ್ಲಿ ಇರುವುದು ನಿಜಕ್ಕೂ ಚೆಂದ ಚೆಂದ.
ಮಾದರಿ ಪ್ರತಿ ಕಳಿಸಿಕೊಡುವರೋ ಇಲ್ಲವೋ ಗೊತ್ತಿಲ್ಲ kannada.vivekaprabha@gmail.com ಮೂಲಕವೂ ತಾವು ವಿಚಾರಿಸಬಹುದು. ನಮ್ಮ ‘ವೀಣಾ ಸ್ಮಾರಕ ಮಾವಿನಮನೆ ವಾಚನಾಲಯ’ಕ್ಕೆ ಉಚಿತವಾಗಿ ಕಳಿಸಿಕೊಡುತ್ತಿರುವುದಕ್ಕೆ ನಾನು ವಿವೇಕಪ್ರಭ ಬಳಗಕ್ಕೆ ಸದಾ ಕೃತಜ್ಞ.


-ಮಾ.ವೆಂ.ಸ.ಪ್ರಸಾದ್
ಮಾವಿನಸರ
ಪೋಸ್ಟ್-ಎಡಜಿಗಳೇಮನೆ
ಸಾಗರ ತಾ. ಶಿವಮೊಗ್ಗ ಜಿ.
577401
ಫೋನ್-08183 236068, 296543
9886407592
ಇ ಮೇಲ್- mavemsa@gmail.com

 
200812023996