ಗುರುವಾರ, ಏಪ್ರಿಲ್ 12, 2012

ಸಾಗರದ ಜನಕ್ಕೆ ಹಳೆ ಸಮುದ್ರದ ನೆನಪು!ಬದಲಾದರೂ ಬದಲಾಗದ ಬದುಕು
ಬದಲಾವಣೆ ಜಗದ ನಿಯಮ. ಹಾಗಂತ ವಾದ ಮಂಡಿಸಿ, ಬಿಡಿ, ನಮ್ಮೂರು ಬದಲಾಗುವುದು ಖಚಿತ. ಏರುತ್ತಲೇ ಇರುವ ಜನಸಂಖ್ಯೆ ಮಾರ್ಪಾಡುಗಳನ್ನು ತೀರಾ ಅನಿವಾರ್ಯ ಎನ್ನುವಂತೆ ಮಾಡಿದೆ. ಆದರೆ ಸಾಗರದಂತ ಮಲೆನಾಡಿನ ಊರಲ್ಲಿ ಕೆಲವು ವಿಷಯಗಳು ಮೇಲ್ನೋಟಕ್ಕೆ ಬದಲಾಗಿವೆ. ಜನರ ಅಂತರ್ಯದಲ್ಲಿ ಚೂರೇ ಚೂರು ಬದಲಾಗಿಲ್ಲ. ಹೀಗಂದುಬಿಟ್ಟರೆ ಒಪ್ಪುವುದಿಲ್ಲ. ಮಾತಿಗೆ ತಕ್ಕ ಪುಷ್ಟಿ ಬೇಕು ಎನ್ನುತ್ತೀರೇನೋ.... ತಕಳ್ಳಿ, ಉದಾಹರಣೆಯನ್ನು.
ಈಗಿನ ಸಾಗರದ ಹೃದಯಭಾಗದಲ್ಲಿ ಮಾರಿಕಾಂಬಾ ದೇವಸ್ಥಾನವಿದೆ. ಇದಕ್ಕಿಂತ ಮಾರು ಮೇಲೆ ಇರುವುದು ಮಾರಿಕಾಂಬಾ ರಸ್ತೆ, ಅಶೋಕ ರಸ್ತೆ, ಜೆ.ಸಿ.ರಸ್ತೆಗಳು ಕೂಡುವ ಸ್ಥಳ,  ಸಾಗರ ಹೋಟೆಲ್ ವೃತ್ತ. ಇಲ್ಲಿಗೆ ಹೊಸಬರಾದವರು ಇಷ್ಟು ಪ್ರಸಿದ್ಧಿ ಪಡೆದ ಸಾಗರ ಹೋಟೆಲ್‌ನ್ನು ಹುಡುಕಿಕೊಂಡು ಹೋದರೆ ದಾರಿ ತಪ್ಪಿದಂತೆಯೇ! ಸಾಗರದಲ್ಲಿ ಸಾಗರ ಹೋಟೆಲ್ ಕಣ್ಣುಮುಚ್ಚಿ ಎರಡು ದಶಕಗಳೇ ಕಳೆದುಹೋಗಿದೆ. ಅವತ್ತು ಜನ ಈ ಹೋಟೆಲ್ ಮುಂದಿನ ನಾಲ್ಕು ರಸ್ತೆ ಕೂಡುವ ಜಾಗವನ್ನು ಹೋಟೆಲ್ ಹೆಸರಿನಿಂದಲೇ ಕರೆದರು. ವರ್ಷಗಳುರುಳಿದರೂ ಆ ವೃತ್ತಕ್ಕೆ ಬೇರೆ ಹೆಸರು ಕರೆಯಲು ಮಾತ್ರ ಸಾಧ್ಯವಾಗಿಲ್ಲ.
ಸ್ವಾರಸ್ಯವೆಂದರೆ, ಬಿಜೆಪಿಗಳನ್ನು ಅದಕ್ಕೆ ವಾಜಪೇಯಿಯವರ ಹೆಸರನ್ನು ಇರಿಸಿ ಅವರನ್ನು ಅಜರಾಮರರನ್ನಾಗಿಸಲು ಪ್ರಯತ್ನಿಸಿದರು. ದಲಿತ ಸಂಘರ್ಷ ಸಮಿತಿಯವರೇನು ಕಡಿಮೆ, ಅಕ್ಷರಶಃ ಅಂಬೇಡ್ಕರ್‌ರ ಹೆಸರಿನ ನಾಮಫಲಕವನ್ನೇ ತಂದು ಊರಿದರು. ಸಮಾಜವಾದಿಗಳ ಲೋಹಿಯಾ, ಶಾಂತವೇರಿ ಗೋಪಾಲಗೌಡರ ಹೆಸರುಗಳೂ ಈ ವೃತ್ತದ ಸುತ್ತ ಸುಳಿದಾಡಿದ್ದು ನಿಜ. ಜನ ಮಾತ್ರ ಸಾಗರ ಹೋಟೆಲ್‌ನ್ನು ಬಿಡಲಿಲ್ಲ. ಹಳೆ ತಲೆಗಳನ್ನು ಕೇಳಿ, ಈ ಹೋಟೆಲ್‌ನ ಬೆಂಚ್ ಮೇಲೆ ಕೂತು ಬೈಟು ಕಾಫಿ ಕುಡಿಯುತ್ತ ಹೊರಗಡೆ ಕಣ್ಣಿಟ್ಟರೆ ಪೇಟೆಗೆ ಬಂದ ಅಸಾಮಿಗಳೆಲ್ಲ ಅವತ್ತು ಸಿಕ್ಕಿಬಿಡುತ್ತಿದ್ದರು. ಸೆಂಟಿಮೆಂಟ್ ನೋಡಿ, ಇವತ್ತಿಗೂ ಸಾಗರದಲ್ಲಿ ಮತ್ತೊಂದು ‘ಸಾಗರ ಹೋಟೆಲ್’ ತಲೆಯೆತ್ತಿಲ್ಲ!
ಈ ದಿನಗಳಲ್ಲಿ ನೀವು ಸಾಗರಕ್ಕೆ ಬಂದರೆ ತಟಕ್ಕನೆ ಇದು ಮಲೆನಾಡು ಪ್ರದೇಶವೇ ಎಂದು ಅಚ್ಚರಿಪಡುತ್ತಿರಿ. ಆ ಪರಿ ಸೆಖೆ, ಬಿಸಿಲು. ಉಷ್ಣಾಂಶ ೪೦ ಪ್ಲಸ್ ಆಗಿರುವ ಜೊತೆಗೆ ಹೆಸರಿಗೆ ಸಾಗರವಾದರೂ ಸಾಗರದ ಜನತೆಗೆ ನೀರಿಗೆ ತತ್ವಾರ! ಪಕ್ಕದ ವರದಾ ನದಿಯಲ್ಲಿ ನೀರು ತಟ್ಟಮಟ್ಟ. ಇಂತಹ ಅಪಾಯಗಳಿಗೆ ಅಂಜದ, ಅಳುಕದ ಆಡಳಿತ ಊರಿನ ಬೃಹತ್ ಗಣಪತಿ ಕೆರೆಯನ್ನು ಮುಚ್ಚಿಹಾಕಲು ವಿಶೇಷ ಪ್ರಯತ್ನವನ್ನು ಮಾಡುತ್ತಲೇ ಇದೆ. ಜನ ಕೂಡ ತಮ್ಮ ಕಾಣಿಕೆ ಕೊಡಲು ಹಿಂಜರಿದಿಲ್ಲ. ಅವತ್ತು ಈ ಕೆರೆಯನ್ನು ಸೀಳಿ ರಾಷ್ಟ್ರೀಯ ಹೆದ್ದಾರಿ ೨೦೬ ಹೊನ್ನಾವರಕ್ಕೆ ಪಯಣಿಸಿತ್ತು. ಇವತ್ತು ರಸ್ತೆಯ  ಒಂದು ಪಕ್ಕದಲ್ಲಿ ಕೆರೆಯಿಲ್ಲ, ನೀರಿಲ್ಲ. ನಾವೀಗ ಆ ಜಾಗದಲ್ಲಿ ಮಣ್ಣು ತುಂಬಿ ಜಾತ್ರೆಯ ಅಮ್ಯೂಸ್ ಮೆಂಟ್ ಪಾರ್ಕ್ ಮಾಡಿದ್ದೇವೆ. ಜನರಿಗೆ ನಾಳಿನ ಸಮಸ್ಯೆಯ ಕುರಿತು ಮರೆತುಹೋಗುವಂತೆ ಮನರಂಜನೆಯ ವ್ಯವಸ್ಥೆ!
ಯಾರೋ ಹೇಳುತ್ತಿದ್ರು, ಹಳ್ಳಿಗಳು ಮಾಯವಾಗುತ್ತಿವೆ. ಇದನ್ನು ಪ್ರತ್ಯಕ್ಷವಾಗಿ ನೋಡಬೇಕಾದರೆ ನೀವು ನಮ್ಮೂರಿಗೆ ಬರಲೇಬೇಕು. ಇಲ್ಲಿನ ಬಹುಸಂಖ್ಯಾತ ಹವ್ಯಕ ಸಮುದಾಯ ಮತ್ತು ಉಳಿದ ಜನಾಂಗದವರು ಓದಿ ಕೆಲಸದ ಕಾರಣಕ್ಕೆ ಬೆಂಗಳೂರು ಸೇರುತ್ತಿದ್ದಾರೆ. ಈಗೀಗ ಗ್ರಾಮಾಂತರ ಪ್ರದೇಶದಲ್ಲಿ ಮುದುಕರು, ಬಿಟ್ಟರೆ ಮಧ್ಯವಯಸ್ಕರು. ಅತ್ತ ಓದೂ ಹತ್ತದೆ ಮನೆ ಬಿಡಲಾಗದ ಸಂಕಟದ ಸ್ಕ್ರಾಪ್ ಯುವಕರು ಸ್ವಲ್ಪ ಮಂದಿ. ಆಳಿಲ್ಲ, ಕೈಯಲ್ಲಾಗದಿರುವುದರಿಂದ ಕೊಟ್ಟಿಗೆ ಜಾನುವಾರು ಇಲ್ಲ. ಹಾಗಿದ್ದೂ ಹುಲ್ಲಿನ ಬೆಲೆ ಮಾತ್ರ ಗಗನಕ್ಕೇರಿದ್ದೇಕೆ ಎಂದರೆ ಹುಲ್ಲಿನ ವ್ಯಾಪಾರಿ ನನಗೊತ್ತಿಲ್ಲಪ್ಪ ಎಂದ. ಈ ವರ್ಷ ಅಡಿಕೆ ಫಲ ಗುತ್ತಿಗೆ ಕೊಡೋಣವೆಂದರೆ ಗುತ್ತಿಗೆದಾರರೂ ಇಲ್ಲ. ಅವರಿಗೂ ಆಳು ಸಮಸ್ಯೆಯಂತೆ!
ಹಳ್ಳಿಗಳು ಇನ್ನೊಂದು ಅರ್ಥದಲ್ಲಿಯೂ ಛೂಮಂತರ್ ಆಗತೊಡಗಿದೆ. ಇಂದು ಹಳ್ಳಿಗರಿಗೂ ಟಾರಸಿ ಮನೆಯ ಶೋಕಿ, ಮನೆಗೊಂದು ಕಾರು, ಕಾಂಪೌಂಡ್. ಇದರಿಂದಾಗಿ ಯಾವುದೇ ಊರಿಗೆ ಹೋದರೂ ಅದು ಪೇಟೆಯ ಒಂದು ಮಿನಿಯೇಚರ್‌ನಂತೆ ಕಾಣಿಸುತ್ತಿದೆಯೇ ವಿನಃ ಆ ಹಿಂದಿನ ಹಂಚಿನ ಮನೆ, ಪಣತ, ಒಳಾಂಗಳ, ಕಡಿಮಾಡು, ಕೊಟ್ಟಿಗೆ ಮಂಗಮಾಯ. ಅಳಿದುಳಿದ ಹಿತ್ತಲುಗಳಲ್ಲಿಯೂ ಮಂಗದ ಕಾಟ. ಹಾಗಾಗಿ ನಮ್ಮ ಕಡೆ ಹಳ್ಳಿಯವ ತರಕಾರಿಯನ್ನು ಸೂಪರ್ ಮಾರ್ಕೆಟ್‌ನಿಂದ ತರುತ್ತಿದ್ದಾನೆ!
ನಾವು ಹೊಸದನ್ನು ಸವಿಯುತ್ತಲೇ ಕಣ್ಮರೆಯಾದುದರ ಬಗ್ಗೆ ಮೆಲುಕುಹಾಕುತ್ತೇವೆ. ಆ ಮಟ್ಟಿಗೆ ಕಳೆದುದೇ ಗ್ರೇಟ್. ಇಂತಿಪ್ಪ ಸಾಗರದಲ್ಲಿ ಇದ್ದದ್ದೇ ಮೂರು ಸಿನೆಮಾ ಟಾಕೀಸ್. ಸಾಗರ್, ಶ್ರೀ ಹಾಗೂ ಕೃಷ್ಣಾ. ಡಿಜಿಟಲ್ ಮಣ್ಣು ಮಸಿ ತಂತ್ರಜ್ಞಾನಗಳೆಲ್ಲ ಸಾಗರಕ್ಕೂ ಬಂದಿದೆ. ಇಂದು ಆ ಕೃಷ್ಣಾ ಟಾಕೀಸ್‌ನಲ್ಲಿ ಜೇಡರ ಬಲೆ, ಮುಚ್ಚಿದ ಬಾಗಿಲು ತರದ ಸಿನೆಮಾ ಮಾತ್ರ ಪ್ರದರ್ಶನಗೊಳ್ಳುತ್ತಿದೆ. ಏಪ್ರಿಲ್ ಫೂಲ್ ಮಾಡುತ್ತಿರುವುದಕ್ಕೆ ಕ್ಷಮೆ ಇರಲಿ, ಈ ಚಲನಚಿತ್ರ ಮಂದಿರ ನಿಲುಗಡೆಯಾಗಿ ೨೫ ವಸಂತಗಳೇ ಸಂದಿರಬೇಕು. ಹಾಗಾಗಿ ಜನ ಈ ಟಾಕೀಸ್‌ನಲ್ಲಿ ಈಗಲೂ ಮೇಲಿನ ಅನ್ವರ್ಥದ ಸಿನೆಮಾಗಳು ನಡೆಯುತ್ತಿದೆಯೆಂದು ಕುಶಾಲು ಮಾಡುತ್ತಿರುತ್ತಾರೆ.
ಎಷ್ಟೇ ಟಿವಿ, ಕಂಪ್ಯೂಟರ್‌ನಲ್ಲಿ ಸಿನೆಮಾ ನೋಡುತ್ತೇನೆಂದರೂ ಸಿನೆಮಾ ಟಾಕೀಸ್‌ನ ಅನುಭವದ ಮುಂದೆ ಉಳಿದುದೆಲ್ಲವೂ ಶೂನ್ಯ. ಇದೇ ವಾಸ್ತವವಾದರೂ ಸಾಗರದಲ್ಲಿ ಇಂದು ಇರುವುದು ಮೊದಲಿನೆರಡೇ ಟಾಕೀಸು. ಕೃಷ್ಣಾ ಇಲ್ಲದ ಜಾಗವನ್ನು ತುಂಬಲು ಮತ್ತೊಂದು ಬಂದಿಲ್ಲ. ಇವತ್ತಿಗೂ ಇಲ್ಲಿನ ಜನ ಕೃಷ್ಣಾ ಟಾಕೀಸನ್ನು ನೋಡುತ್ತಲೇ ಪೇಟೆಯಲ್ಲಿ ಸಾಗುತ್ತಾರೆ. ಏಕೆಂದರೆ ಬೇರೆಡೆಗಳಲ್ಲಿ ಸಿನೆಮಾ ಮಂದಿರವನ್ನು ಕೆಡವಿ ಸಂಕೀರ್ಣ ಕಟ್ಟುವುದು ಬರೋಬ್ಬರಿ ವೇಗದಲ್ಲಿ ನಡೆದಿದ್ದರೆ ಸಾಗರದಲ್ಲಿ ಆ ಟಾಕೀಸ್‌ನ ಕಟ್ಟಡ ಹಾಗೆಯೇ ಇದೆ. ತನ್ನ ಬೋರ್ಡ್‌ನ್ನು ಈಗಲೂ ಮಸುಕುಮಸುಕಾಗಿ ಪ್ರದರ್ಶಿಸುತ್ತ ಅದು ಗತವೈಭವದ ಪಳೆಯುಳಿಕೆಯಾಗಿದೆ.
ಸ್ವಾತಂತ್ರ್ಯ ಪೂರ್ವದಲ್ಲಿಯೇ ರೈಲನ್ನು ಕಂಡ ವಿಶಿಷ್ಟ ಊರಿದು. ಲಿಂಗನಮಕ್ಕಿ ಆಣೆಕಟ್ಟೆಗೆ ಸಿಮೆಂಟ್, ಕಬ್ಬಿಣವನ್ನು  ಹೊತ್ತು ತಂದಿದ್ದು ನ್ಯಾರೋಗೇಜ್‌ನ ಉಗಿಬಂಡಿ. ಇದರಿಂದ ಭಡ್ತಿ ಪಡೆಯಬೇಕಾಗಿದ್ದ ಊರು ಇದ್ದಕ್ಕಿದ್ದಂತೆ ಸಂಪರ್ಕ ಮಾಧ್ಯಮಗಳಲ್ಲಿ ರೈಲಿನ ನಕ್ಷೆಯಿಂದಲೇ ಮಾಯವಾಗುವ ಸನ್ನಿವೇಶ ನಿರ್ಮಾಣವಾಯಿತು. ಒಂದು ಕಾಲದಲ್ಲಿ ಮುಂಬೈ ಜೊತೆಗೆಲ್ಲ ಸಂಪರ್ಕ ಕಂಡಿದ್ದ ಸಾಗರದ ರೈಲು ಪ್ರಯಾಣಿಕರು ಅಕ್ಷರಶಃ ರೈಲು ಸೇವೆಯಿಂದ ವಂಚಿತರಾದರು. ಮೀಟರ್‌ಗೇಜ್‌ಗೆ ಪರಿವರ್ತನೆ ಆಗದೆ ರೈಲು ಬರದು ಎಂಬ ಸರ್ಕಾರದ ನೀತಿಯಿಂದಾಗಿ ಬರುತ್ತಿದ್ದ ರೈಲು ನಿಲ್ಲಿಸಲ್ಪಟ್ಟಿತು. ಸಾಗರದ ಜಂಬಗಾರು ರೈಲ್ವೆ ಸ್ಟೇಷನ್ ಆರ್.ಕೆ.ನಾರಾಯಣ್‌ರ ಮಾಲ್ಗುಡಿ ದಿನಗಳ ಅನಾವರಣವಾಯಿತು. ಜನ ಮತ್ತೆ ಇನ್ನೊಂದು ಸ್ವಾತಂತ್ರ್ಯ ಹೋರಾಟವನ್ನೇ ಮಾಡಿ ಬ್ರಾಡ್‌ಗೇಜ್ ಹಳಿ ತಂದರು. ಕಳೆದ ವರ್ಷ ಮೈಸೂರು ಇಂಟರ್‌ಸಿಟಿ ರೈಲು ಬಂದಾಗ ಜನ ತೋರಿದ ಸಂಭ್ರಮ ನಮಗೆ ಬ್ರಿಟಿಷರು ಭಾರತ ಬಿಟ್ಟಾಗ ಜನ ಖುಷಿ ಪಟ್ಟಿರುವ ದೃಶ್ಯವನ್ನು ಕಟ್ಟಿಕೊಟ್ಟಿತು.
ಹಳಿ ಬಂತು, ರೈಲ್ವೆ ಸ್ಟೇಷನ್‌ಗೆ ಸುಣ್ಣ ಬಣ್ಣ ಆಯಿತು. ಜನರಿಗೆ ಹೋರಾಟ ಮಾಡುವುದು ನಿತ್ಯವಿಧಿಯಾಗಿದೆ. ಇವತ್ತಿಗೂ ಇಲ್ಲಿಗೆ ಬರುತ್ತಿರುವುದು ಒಂದೇ ರೈಲು. ಬೆಂಗಳೂರಿಗೆ ಹೋಗಲು ಹಿಂದಿದ್ದ ರೈಲು ವಾಪಾಸು ಕೊಡಿ ಎಂದು ಜನ ಆಗ್ರಹಿಸುತ್ತಿದ್ದರೆ ಕೇಂದ್ರ ಸರ್ಕಾರ ಮೊನ್ನೆ ರೈಲ್ವೆ ಬಜೆಟ್‌ನಲ್ಲಿ ಬೆಂಗಳೂರು ತಾಳಗುಪ್ಪ ಹೊಸ ರೈಲನ್ನು ಘೋಷಿಸಿ ಸಂಭ್ರಮಿಸುತ್ತಿದೆ. ಜನಕ್ಕಿನ್ನೂ ನಂಬಿಕೆ ಬಂದಿಲ್ಲ, ಹಾಗಾಗಿ ಸಂಭ್ರಮಾಚರಣೆಯನ್ನು ಪೋಸ್ಟ್‌ಪೋನ್ ಮಾಡಿದ್ದಾರೆ!-ಮಾವೆಂಸ
 
200812023996