ಶುಕ್ರವಾರ, ಫೆಬ್ರವರಿ 11, 2011

ಈ ಜೋಗದ ಜಗ ಸೋಜಿಗ!

ಫೋಟೋ ಕೃಪೆ- ರಾಘವೇಂದ್ರ ಶರ್ಮಾ ಕೆ ಎಲ್
ಕಡವಿನಮನೆ
ಅಂ: ತಲವಾಟ
ಸಾಗರ, ಶಿವಮೊಗ್ಗ
೫೭೭೪೨೧


ಈ ಜೋಗ ಹೊಸದಲ್ಲ. ಜೀವನದಲ್ಲೊಮ್ಮೆ ನೋಡಬೇಕು ಎಂಬ ಕೌತುಕದೊಂದಿಗೆ ಆಗಮಿಸುವವರಲ್ಲಿ ನಾನಾ ವಿಧ. ಜಲಪಾತದ ವೈಭವ ನೋಡಿ ಮೈಮರೆಯುವದಕ್ಕಿಂತ ಪ್ರೇಮಿಯ ತೆಕ್ಕೆಯಲ್ಲಿ ಪರಿಸರದ ಅರಿವೂ ಇಲ್ಲದೆ ಕಳೆಯುವ ವೀಕೆಂಡ್ ಲವರ್‌ಗಳು, ಇನ್ನಾವುದೋ ಮತ್ತಿನಲ್ಲಿ ತೇಲಾಡುವ ಹವ್ಯಾಸಿಗಳು, ಒಂದು ದಿನದ ಪ್ರವಾಸದಲ್ಲಿ ಇನ್ನಷ್ಟು ಸ್ಥಳಕ್ಕೆ ಭೇಟಿ ಕೊಟ್ಟು ಅಂಕಿಅಂಶ ಅಭಿವೃದ್ಧಿಪಡಿಸಿಕೊಳ್ಳುವ ಲೆಕ್ಕಾಚಾರದ ಗಡಿಬಿಡಿ ಯಜಮಾನರು, ತಿಂಡಿಪೋತರು...... ಇವರೆಲ್ಲರ ನಡುವೆ ಅಸಲಿ ಪ್ರವಾಸಿಗರು. ರಜಾ ದಿನಗಳಲ್ಲಿ ಜೋಗದ ಆಚೆ ಈಚೆ ವಾಹನಗಳ ಸಂತೆ. ಪ್ಲಾಸಿಕ್ ನಿಷೇಧ ಎಂದು ಘೋಷಿಸಿದ್ದನ್ನು ವ್ಯಂಗ್ಯವಾಡುವ ಪ್ಲಾಸ್ಟಿಕ್ ರಾಶಿಗಳು!!
ಜೋಗದ ಸುತ್ತಲಿನ ಕಾರು, ವಾಹನ, ಕಸ
ಈ ವಾರ ಹೋದಾಗ ಕಂಡ ದೃಶ್ಯವೇ ಬೇರೆ. ಉದ್ದನೆಯ ಕಾರು, ಬಸ್ಸುಗಳ ಸಾಲಂತೂ ಇತ್ತು. ಹೇಳಿ ಕೇಳಿ ಪ್ರವಾಸದ ವಸಂತವಾದ ಡಿಸೆಂಬರ್ - ಜನವರಿ ತಿಂಗಳಲ್ಲಿ ಜನರ ಕೊರತೆ ಕಾಣದು. ಜಲಪಾತದಲ್ಲಿ ಮಾತ್ರ ನೀರಿಗೆ ತತ್ವಾರ. ಕಾರಣವೂ ಈ ಬಾರಿ ನಿಚ್ಚಳ. ಮಲೆನಾಡಿನಲ್ಲಿ ಜಿಟಿಜಿಟಿ ಮಳೆ ಸುರಿದು ಭೂಮಿ ನೀರು ಹೀರಬೇಕು. ಇದರಿಂದ ಭೂಮಿಯೊಳಗಿಂದ ನೀರಿನ ಒರತೆ ಹುಟ್ಟಬೇಕು. ಹೀಗೆ ನೀರು ಹುಟ್ಟಿದರೆ ಫೆಬ್ರವರಿ - ಮಾರ್ಚ್ ಕಳೆದರೂ ಜೋಗದ ಕವಲುಗಳಿಗೆ ಅಷ್ಟಿಷ್ಟು ಜೀವ ಉಳಿದಿರುತ್ತದೆ.
ಈ ವರ್ಷದ ಕತೆಯೇ ಬೇರೆ. ಮಳೆ ಕಡಿಮೆ ಬಿದ್ದಿಲ್ಲ. ನವೆಂಬರ್ ಬಂದರೂ ಬಿಟ್ಟಿರಲಿಲ್ಲ. ಆದರೆ ಧುಮಧುಮನೆ ಧುಮ್ಮುಕ್ಕಿ ಆಕಾಶ ತೂತಾಗಿದೆಯೇನೋ ಎನ್ನಿಸಿತ್ತು. ಭೂಮಿಯ ಮೇಲ್ಮಣ್ಣು ತೊಳೆದಿದ್ದರ ಹೊರತಾಗಿ ಒರತೆ ನೆಗೆದಿಲ್ಲ. ಜನವರಿ ಆರಂಭಕ್ಕೆ ಜಲಪಾತ ‘ಝೀರೋ ಸೈಜ್’ ಪಡೆದಿದೆ! ಈ ಮಾದರಿಯ ಮಳೆ ಮುಂದುವರೆದರೆ ಒಂದು ದಿನ ಜಲಪಾತವೇ ಮಾಯವಾದರೆ ಅಚ್ಚರಿಯಿಲ್ಲ .
ಝೀರೋಸೈಜ್ ಜೋಗ
ಈ ಮಾತನ್ನು ಪಕ್ಕಕ್ಕಿಡಿ. ವಾಹನಗಳ ಸಾಲು ನೋಡಿ ಪ್ರವಾಸಿಗರನ್ನು ಎಣಿಸುವ ಹುನ್ನಾರ ನಡೆಸಿದರೆ ಜನರೇ ಕಾಣಲೊಲ್ಲರು. ಅರೆ, ಹೊಚ್ಚ ಹೊಸದಾಗಿ ನಿರ್ಮಿಸಿರುವ ವೀಕ್ಷಣಾ ಗೋಪುರಗಳು ಬಣ ಬಣ.
ಬಣಗುಡುವ ವೀಕ್ಷಣಾ ಗೋಪುರ
ಅಷ್ಟಕ್ಕೂ ಇಲ್ಲಿಂದ ನೋಡಲಾದರೂ ಎಂತಿದೆ? ಈಗ ಗೊತ್ತಾಯ್ತು, ಪ್ರವಾಸಿಗರು ನೇರವಾಗಿ ಜೋಗದ ಗುಂಡಿಯ ತಳದತ್ತ ಇಳಿದುಹೋಗುತ್ತಿದ್ದಾರೆ. ಅವರ ಅದೃಷ್ಟ, ಜೋಗ ಬದಲಾಗಿದೆ. ಮೊದಲಿನಂತೆ ಪಾಚಿ ಕಟ್ಟಿದ ಮೆಟ್ಟಿಲುಗಳಿಲ್ಲ, ಕವಿದ ಪೊದೆಗಳಿಲ್ಲ. ಈಗಲ್ಲಿ ಆಕರ್ಷಕ ಮೆಟ್ಟಿಲುಗಳಿವೆ. ಅಲ್ಲಿನ ತಡೆಗೋಡೆಯ ಕಂಬಗಳನ್ನೇ ನೋಡಿ, ಕಲಾತ್ಮಕವಾಗಿದೆ.
ಜೋಗದ ತಳಕ್ಕೆ ಸುಂದರ ಮೆಟ್ಟಿಲು
ಸುಸಜ್ಜಿತ ಮೆಟ್ಟಿಲುಗಳಿಂದ ಅನಾಯಾಸ ನಡುಗೆಗೆ ಪೂರಕವಾಗಿದೆ. ಸುಸ್ತಿಲ್ಲ, ಸುಖ!
ಈಗ ಜೋಗದ ‘ಗುಂಡಿ’ ನೋಡುವುದು ಸಲೀಸು. ಆದರೆ ಗುಂಡಿ ಅಕ್ಷರಶಃ ಕಸದ ತಿಪ್ಪೇ‘ಗುಂಡಿ’ಯಾದೀತಾ ಎಂಬ ಭಯವೂ ಕಾಡುತ್ತಿದೆ. ಪ್ರವಾಸಿಗರು ತಾವು ತಿನ್ನಲು ತಂದ ಹಾಳುಮೂಳುಗಳನ್ನು ಜಲಪಾತದ ಬುಡದ ಪ್ರದೇಶದಲ್ಲಿ ಹಾಕಲಾರಂಭಿಸಿದ್ದಾರೆ. ತಿಂದು ಎಗ್ಗಿಲ್ಲದೆ ಪ್ಲಾಸ್ಟಿಕ್ ಎಸೆಯುತ್ತಿದ್ದಾರೆ. ಅದ್ಭುತ ದೃಶ್ಯ ಕಾವ್ಯವಾಗಬೇಕಿದ್ದ ಸ್ಥಳ ಪ್ಲಾಸ್ಟಿಕ್ ಗಲೀಜಿನಿಂದ ತುಂಬುವುದು ಎಷ್ಟು ಸರಿ? ಇವೆಲ್ಲವನ್ನೂ ಹೊರಹಾಕಬೇಕೆಂದರೆ ಜಡಿ ಮಳೆ ಸುರಿಯಬೇಕು. ಅರೆ, ಈಗ ತಿಂಗಳಿಗೊಂದಾವರ್ತಿ ಮಳೆ ಸುರಿಯುತ್ತಿರುವುದು ಇದೇ ಕಾರಣಕ್ಕಾ?!
ಈ ಗುಂಡಿಯ ತಳವನ್ನು ಸುಲಭವಾಗಿ ತಲುಪಲು ಸಾಧ್ಯವಾಗಿರುವುದು ಅಪಾಯದ ಇನ್ನೊಂದು ಮಗ್ಗುಲನ್ನು ತೆರೆದಿದೆ. ತಳದ ನೀರಿನ ತಿಳಿ ಕೊಳ ಉತ್ಸಾಹಿಗಳಲ್ಲಿ ಈಜಿನ ಹುಕಿ ತರಿಸುತ್ತದೆ. ಅದರಲ್ಲಿರುವ ಸುಳಿ ಬಲಿಗಾಗಿ ಕಾದಿರುತ್ತದೆ. ಮುಂದಿನ ಮಾತು ಬೇಡ. ಛೆ....ಛೇ...!!
ಈ ಮೊಬೈಲ್ ಮಾತಿಗಿಂತ ಇನ್ನಿತರ ಚಟುವಟಿಕೆಗಳಿಗೆ ಹೆಚ್ಚು ಬಳಕೆಯಾಗುತ್ತಿದೆಯಂತೆ, ನಿನಾಸಂನ ಕೆ.ವಿ.ಅಕ್ಷರ ಹೇಳುತ್ತಿರುತ್ತಾರೆ. ನಾಳೆ ಜೋಗಕ್ಕೂ ಈ ಮಾತು ಅನ್ವಯವಾಗುತ್ತದೆಯೇ? ಇತ್ತೀಚಿನ ಹಲವು ಪ್ರವಾಸಿಗರಿಗೆ ನೀರು ಆಕರ್ಷಣೆಯಲ್ಲ. ಈ ೮೦೦ ಅಡಿ ಎತ್ತರದ ಶಿಲಾ ಶಿಖರವನ್ನು ಚಾರಣ ಮಾಡುವ ತುಡಿತ. ಜನ ಕೋತಿ ರಾಮನ ಹೆಜ್ಜೆಗಳನ್ನು ಅನುಸರಿಸಲಾರಂಭಿಸಿದ್ದರಿಂದ ಕಲ್ಲುಗಳು ಬ್ಯುಸಿ!
ಈ ಎಲ್ಲ ಬದಲಾವಣೆಗಳಿಂದ ನಾವು ನೋಡುತ್ತಿದ್ದ ಹಳೆ ಜೋಗ ಮಾಯವಾಗಿ, ಬೇರೆಯದೇ ಲೋಕಕ್ಕೆ ಬಂದಂತೆನಿಸಿ ನಮ್ಮೂರಲ್ಲೇ ಅಪರಿಚಿತರಾಗಿಬಿಡುತ್ತೇವೆಯೇ ಎನ್ನಿಸಿ ಗಾಬರಿಯಿಂದ ಅತ್ತಿತ್ತ ನೋಡಿದರೆ ಕೆಲವು ಸಮಾಧಾನಗಳು ಕಾಣಿಸಿದವು. ವೀಕ್ಷಣಾ ಗೋಪುರಗಳ ಪಕ್ಕದಲ್ಲಿ ಜನ ತಳಕ್ಕೆ ಮುಗ್ಗರಿಸದಂತೆ ಹಾಕಲಾಗಿರುವ ಕಬ್ಬಿಣದ ಅಡ್ಡಪಟ್ಟಿಗಳು ಅಲ್ಲಲ್ಲಿ ತುಕ್ಕು ಹಿಡಿದು ಮಾಯವಾಗಿ ನಮ್ಮನ್ನು ಪ್ರಾಯೋಗಿಕವಾಗಿ ಜೋಗದ ‘ಗುಂಡಿ’ಗೆ ಆಹ್ವಾನಿಸುತ್ತಿವೆ.
ಜೋಗದ ಗುಂಡಿಗೆ ನೇರ ಆಹ್ವಾನ
ವಾಹನ ತೆಗೆಯುವ ಗಡಿಬಿಡಿಯಲ್ಲಿ ಕಾರಿನಾತ ಮತ್ತೊಬ್ಬನ ಸ್ವಿಫ್ಟ್‌ಗೆ ತಾಕಿಸಿ ದೊಡ್ಡ ಗಲಾಟೆಯೆದ್ದಿದೆ. ರಸ್ತೆ ಆಚೆಯ ಗುಡ್ಡದ ಬುಡದಲ್ಲಿ ನಾಲ್ವರು ಯುವಕರ ಗುಂಪು ಮದಿರೆಯ ಬಾಟಲಿಯ ಸದ್ದನ್ನು ಆನಂದಿಸುತ್ತಿದೆ. ಊಹ್ಞೂ, ಇದು ವಾಸ್ತವ. ಜೋಗ ಜಲಪಾತದ ಸುತ್ತಮುತ್ತಲ ಸಾಂಪ್ರದಾಯಿಕ ದೃಶ್ಯ.
ಈ ಬಾರಿಯಾದರೂ ನೀವು ಬನ್ನಿ...... 
200812023996