ಶುಕ್ರವಾರ, ಫೆಬ್ರವರಿ 25, 2011

ಮಾಲ್‌ಗಳ ಪ್ರವಾಹಕ್ಕೆ ಕಿರಾಣಿ ಅಂಗಡಿ ಬಲಿ?
ಕ್ಷಣಕ್ಕೆ ಶೀರ್ಷಿಕೆಯ ಹೇಳಿಕೆ ತುಸು ಆತಿರಂಜಿತ ಎನ್ನಿಸಬಹುದು. ಇದು ಯಾರ ಕುರಿತಾದ ದೂರೂ ಅಲ್ಲ. ಆದರೆ ಬರಲಿರುವ ದಿನಗಳಲ್ಲಿ ಸಣ್ಣ ಪುಟ್ಟ ಅಂಗಡಿಗಳು ಮಾಲ್, ಫೋರಂಗಳ ಆರ್ಭಟಕ್ಕೆ ಸೋಲುವ ಲಕ್ಷಣಗಳನ್ನು ಕಣ್ಣಮುಂದಿರುವ ಅಂಕಿಅಂಶಗಳು ಸ್ಪಷ್ಟಪಡಿಸುತ್ತವೆ. ಹಾಗೆಂದು ಸುಮ್ಮನೆ ನಿಟ್ಟುಸಿರು ಬಿಡುವುದೂ ಕಷ್ಟ, ಏಕೆಂದರೆ ಇಂದು ಭಾರತದ ಚಿಲ್ಲರೆ ವ್ಯಾಪಾರ ಉದ್ಯಮದ ವಾರ್ಷಿಕ ವಹಿವಾಟು ೩೫೩ ಬಿಲಿಯನ್ ಅಮೆರಿಕನ್ ಡಾಲರ್‌ಗಳು!
ಈ ರೀಟೈಲ್ ಪ್ರಪಂಚದಲ್ಲಿ, ಅದೂ ಭಾರತದಲ್ಲಿ ಅದ್ಭುತ ಅವಕಾಶಗಳಿವೆ ಎಂದು ಎಟಿ ಕಿರ್ಲೆ ಎಂಬ ಸಂಸ್ಥೆಯೊಂದರ ಸಮೀಕ್ಷೆ ತಿಳಿಸಿದೆ. ಪ್ರಗತಿ ಪಥದಲ್ಲಿರುವ ೩೦ ದೇಶಗಳ ಪೈಕಿ, ಬಂಡವಾಳ ಹೂಡಲು ಸೂಕ್ತವಾದ ದೇಶಗಳಲ್ಲಿ ಭಾರತಕ್ಕೆ ಅಗ್ರಸ್ಥಾನ. ಅದೂ ಈ ಐದು ವರ್ಷಗಳಲ್ಲಿ ನಾಲ್ಕು ಬಾರಿ ಈ ಮಾತು ದಾಖಲಾಗಿದೆ. ಅವರ ವರದಿಯ ಅನ್ವಯ, ಭಾರತದ ಚಿಲ್ಲರೆ ವ್ಯಾಪಾರ ಕ್ಷೇತ್ರ ೨೦೧೦ರಲ್ಲಿ ೩೫೩ ಬಿಲಿಯನ್ ಡಾಲರ್ ಇದ್ದದ್ದು ೨೦೧೪ರಲ್ಲಿ ಶೇ.೧೧.೪ ಬೆಳವಣಿಗೆ ಕಂಡು ೫೪೩.೨ ಬಿಲಿಯನ್ ಅಮೆರಿಕನ್ ಡಾಲರ್‌ಗೆ ವೃದ್ಧಿಸುತ್ತದೆ ಎಂದು ಅಂದಾಜಿಸಲಾಗಿದೆ.
ಅಂಕಿಅಂಶಗಳ ಹೊರತಾಗಿ, ಪರಿಸ್ಥಿತಿಯನ್ನು ವ್ಯಾಖ್ಯಾನಿಸಿದರೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗಬಹುದು. ವಿವಿಧ ಉತ್ಪನ್ನಗಳನ್ನು ಒಂದೇ ಕಡೆ ಮಾರಾಟಕ್ಕಿಡುವ ಮಾಲ್ ಸಂಸ್ಕೃತಿಯಲ್ಲಿ ಗ್ರಾಹಕರನ್ನು ಸುಲಭವಾಗಿ ಆಕರ್ಷಿಸಬಹುದು. ಅತ್ಯುತ್ತಮ ವಾತಾವರಣ, ಗರಿಷ್ಟ ಆಯ್ಕೆಗಳು ಮತ್ತು ಸಂದರ್ಭೋಚಿತ ಕೊಡುಗೆ, ರಿಯಾಯಿತಿಗಳು ಜನರನ್ನು ಸೆಳೆಯಬಲ್ಲವು. ಮೊದಲೆಲ್ಲ ತಿಂಗಳ ಸಾಮಾನುಗಳನ್ನು ಕಿರಾಣಿ ಅಂಗಡಿಗಳಲ್ಲಿ ಕಟ್ಟಿ ಇಡಲು ಹೇಳುತ್ತಿದ್ದ ಬಳಕೆದಾರ ಈಗ ನೇರವಾಗಿ ‘ಬಿಗ್‌ಬಜಾರ್’ಗಳಿಗೆ ಎಡತಾಕುತ್ತಾನೆ. ಖರೀದಿಯ ಮೇಲೆ ಹೆಚ್ಚುವರಿ ಲಾಭ ಗಳಿಸುತ್ತಾನೆ.
ಇನ್ನೊಂದೆಡೆ, ಚಿಲ್ಲರೆ ವ್ಯಾಪಾರಿಗಳು ಬಾಗಿಲು ಮುಚ್ಚುವ ಅನಿವಾರ್ಯ ಸ್ಥಿತಿ ಒದಗದಿರದು. ತಿಮಿಂಗಿಲಗಳ ಎದುರು ಮೀನು ಏನು ಮಾಡೀತು? ಇದರಿಂದ ದೇಶದ ಒಂದು ದೊಡ್ಡ ವರ್ಗ ನಿರುದ್ಯೋಗದತ್ತ ಚಲಿಸುವ ಅಪಾಯವೂ ಇದೆ. ಮುಂಬೈನ ರೀಟೈಲ್ಸ್ ಗ್ರೈನ್ ಡೀಲರ‍್ಸ್ ಸಹಕಾರ ಸಂಘದಲ್ಲಿಯೇ ೯೨೦೦ ಸದಸ್ಯರಿದ್ದಾರೆ ಎಂದರೆ ಚಿಲ್ಲರೆ ವ್ಯಾಪಾರಿಗಳ ಸಂಖ್ಯೆಯ ಅಗಾಧತೆ ಮನವರಿಕೆಯಾದೀತು.
ಪ್ರಸ್ತುತ ಮೆಟ್ರೋಗಳಲ್ಲಿ, ದೊಡ್ಡ ನಗರಗಳಲ್ಲಿ ಮಾತ್ರ ಮಾಲ್, ಫೋರಂಗಳಿವೆ ಎಂದು ಅಲಕ್ಷಿಸುವಂತಿಲ್ಲ. ತಾಲೂಕು ಮಟ್ಟಕ್ಕೂ ಈಗ ಯುನಿವರ್‌ಸೆಲ್, ಸಂಗೀತಾ, ಹರ್ಷಗಳಂತ ಎಲೆಕ್ಟ್ರಾನಿಕ್ ಉಪಕರಣಗಳ ಸಂಕೀರ್ಣಗಳು ಬಂದಿಳಿದಿವೆ. ಇದು ಆರಂಭ. ಉಳಿದ ಚಿಲ್ಲರೆ ವ್ಯಾಪಾರಕ್ಕೂ ಕಂಪನಿಗಳು ಇಳಿಯುವುದರೊಂದಿಗೆ ಚಿಲ್ಲರೆ ಅಂಗಡಿಗಳ ಅಸ್ಥಿತ್ವಕ್ಕೆ ಕೊಡಲಿ ಪೆಟ್ಟು ಮುಂದುವರಿಯಲಿದೆ.
ಮತ್ತೆ ಅಂಖಿಅಂಶಗಳಿಗೆ ಮರಳೋಣ. ನೈಟ್ ಫ್ರಾಂಕ್ ಇಂಡಿಯಾ ಸಂಸ್ಥೆಯ ಸಮೀಕ್ಷೆಯ ಪ್ರಕಾರ, ೨೦೧೦-೧೨ರೊಳಗೆ ಮುಂಬೈ, ಬೆಂಗಳೂರು, ಕೊಲ್ಕತ್ತಾ, ಚೆನ್ನೈ, ಹೈದರಾಬಾದ್, ಪುಣೆಗಳಲ್ಲಿ ೫೫ ಮಿಲಿಯನ್ ಚದರ ಅಡಿಯ ಜಾಗ ಮಾಲ್ ಮಾಲಿಕರಿಗೆ ಬೇಕಾಗಿದೆ. ಈಗಾಗಲೆ ಅವರಲ್ಲಿರುವ ಜಾಗದ ಸ್ವಾಧೀನ ೪೧ ಮಿಲಿಯನ್ ಚದರ ಅಡಿ. ಬರಲಿರುವ ದಿನಗಳಲ್ಲಿ ಅವರು ಇದನ್ನು ೯೫ ಮಿಲಿಯನ್‌ಗೆ ವಿಸ್ತರಿಸುವುದು ಖಚಿತ.
ಇಷ್ಟಕ್ಕೆಲ್ಲ ಕಾರಣ ಕ್ಷೇತ್ರದ ಅಗಾಧ ಅವಕಾಶ. ಇವತ್ತು ಮಾಲ್‌ಗಳು ಶೇ.೫ರ ಬೆಳವಣಿಗೆಯನ್ನಷ್ಟೇ ವಾರ್ಷಿಕವಾಗಿ ಕಾಣುತ್ತಿವೆ. ಇದನ್ನು ೩೦ಕ್ಕೇರಿಸುವ ಮಹತ್ವಾಕಾಂಕ್ಷೆ ಬೃಹತ್ ಸಂಸ್ಥೆಗಳದ್ದು. ವಾಲ್ ಮಾರ್ಟ್, ಕೇರ್ ಫಾರ್, ಮಾರ್ಕ್ಸ್ ಎಂಡ್ ಸ್ಟನ್ನರ್, ಆದಿತ್ಯ ಬಿರ್ಲಾ ಗ್ರೂಪ್‌ನ ಮೋರ್, ಕೆ.ರಹೆಜಾ ಗುಂಪಿನ ಶಾಪರ‍್ಸ್ ಸ್ಟಾಪ್, ಈಗಾಗಲೆ ೫೯ ಸ್ಟೋರ್‌ಗಳನ್ನು ಹೊಂದಿರುವ ಭಾರ್ತಿ ರೀಟೇಲ್, ರಿಲೆಯನ್ಸ್, ಬಿಗ್‌ಬಜಾರ್.... ಚಿಲ್ಲರೆ ವ್ಯಾಪಾರ ಕ್ಷೇತ್ರವನ್ನು ಯಾರೂ ‘ಚಿಲ್ಲರೆ’ಯಾಗಿ ನೋಡುತ್ತಲೇ ಇಲ್ಲ!
ಕಳೆದ ೧೦ ವರ್ಷಗಳಲ್ಲಿ ಈ ವಲಯದಲ್ಲಿ ೧೯೪.೬೯ ಮಿಲಿಯನ್ ಡಾಲರ್‌ಗಳ ನೇರ ವಿದೇಶಿ ಬಂಡವಾಳವನ್ನು ಹೂಡಲಾಗಿದೆ. ಇದು ಭಾರತದ ಮಾರುಕಟ್ಟೆ ಲೆಕ್ಕದಲ್ಲಿ ಏನೇನೂ ಅಲ್ಲ. ೩೫೩ ಬಿಲಿಯನ್‌ನಲ್ಲಿ, ೨೦೧೦ರಲ್ಲಿ ಮಾಲ್‌ಗಳ ಪಾಲು ೧೫.೨೯ ಬಿಲಿಯನ್ ಮಾತ್ರ. ಇದನ್ನು ೨೦೧೪ರ ವೇಳೆಗೆ ಶೇ.೧೫೪ರಷ್ಟು ಬೆಳೆಸುವ ಗುರಿಯನ್ನು ಬೃಹತ್ ಕಂಪನಿಗಳು ಹೊಂದಿವೆ. ಸತ್ಯದ ಮಾತೆಂದರೆ, ೨೦೧೪ರ ದಿನಗಳಲ್ಲಿ ಈ ಸೀಮೆ ಮೀರಿ ಮಾಲ್‌ಗಳು ಮೇಲುಗೈ ಸಾಧಿಸಿದರೆ ಅಚ್ಚರಿಯಿಲ್ಲ.
ಅರೆ, ಏನೇ ಮಾಡಿದರೂ ಚಿಲ್ಲರೆ ವ್ಯಾಪಾರಿಗಳಿಗೆ ಧಕ್ಕೆಯಿಲ್ಲ. ತಕ್ಷಣಕ್ಕೆ ಬೇಕಾಗುವ ಯಾವುದೇ ಪದಾರ್ಥಕ್ಕೆ ಗ್ರಾಹಕ ಮನೆ ಪಕ್ಕದ ದಿನಸಿ ಅಂಗಡಿಯನ್ನೇ ನೆಚ್ಚಿಕೊಳ್ಳಬೇಕಲ್ಲ? ತಿಂಗಳ ಸಾಲ ಕೊಡುವ ಸೌಲಭ್ಯ, ಖರೀದಿಸಿದ ಮಾಲು ಬದಲಿಸಿಕೊಡುವ ವ್ಯವಸ್ಥೆ, ಮನೆಗೇ ಬೇಡಿಕೆಗಳನ್ನು ತಲುಪಿಸುವ ಸೇವೆಗಳಿಂದಾಗಿ ಕಿರಾಣಿ ಅಂಗಡಿಗಳನ್ನು ನಾಶಪಡಿಸುವ ಸಾಧ್ಯತೆ ಇಲ್ಲವೇ ಇಲ್ಲ ಎಂಬ ವಾದವೂ ಕೇಳಿಬರುತ್ತಿದೆ. ದೇಶ-ವಿದೇಶಗಳ ಮಾಲ್‌ಗಳು, ಮಾರ್ಟ್‌ಗಳ ಮೂಲಕ ದೊಡ್ಡ ಉದ್ಯಮಿಗಳು ವಹಿವಾಟನ್ನು ನಿಯಂತ್ರಿಸತೊಡಗಿದಾಗ ದೇಶದ ಸಾಮಾಜಿಕ ವ್ಯವಸ್ಥೆಗೆ ಧಕ್ಕೆ ಬರುವ ಅಪಾಯ ಇಂದಲ್ಲದಿದ್ದರೂ ನಾಳೆ ಎದುರಾಗಲಿದೆ.
ಮುಂಜಾಗ್ರತೆ ಬೇಡವೇ??

  • ಬರಲಿದೆ ಜಗಮಗಿಸುವ ಕಿರಾಣಿ ಅಂಗಡಿ!
  • ಪ್ರಮುಖ ವಾಚ್ ತಯಾರಕರಾದ ಟೈಟಾನ್, ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ವಾಚ್ ಶೋರೂಂಗಳನ್ನು ತೆರೆಯಲೇ ೨೧.೮೩ ಮಿಲಿಯನ್ ಡಾಲರ್ ವ್ಯಯಿಸಲಿದೆ. ಸಂಭಾವ್ಯ ೫೦ ಸ್ಟೋರ್‌ಗಳಿಂದ ನಿರೀಕ್ಷಿತ ಗುರಿ ವಾರ್ಷಿಕ ೮೭.೩೧ ಮಿಲಿಯನ್ ಡಾಲರ್. ಮುಂಬೈ, ಡೆಲ್ಲಿ, ಹೈದರಾಬಾದ್, ಕೊಲ್ಲತ್ತಾ, ಚೆನ್ನೈ, ಪುಣೆ, ಅಹ್ಮದಾಬಾದ್ ಮೊದಲಾದೆಡೆ ಮುಂದಿನ ೧೨ ತಿಂಗಳಿನಲ್ಲಿಯೇ ಸ್ಟೋರ್‌ಗಳು ಕಾರ್ಯಾರಂಭ ಮಾಡುತ್ತವೆ ಎಂದು ಕಂಪನಿಯ ಮಾರಾಟ ಉಪಾಧ್ಯಕ್ಷ ಅಜೋಯ್ ಚಾವ್ಲಾ ಪ್ರಕಟಿಸಿದ್ದಾರೆ.
  • ಬ್ರಿಟನ್‌ನ ಎಂ & ಎಸ್ ಕಂಪನಿ ಮುಂದಿನ ಮೂರು ವರ್ಷಗಳಲ್ಲಿ ೫೦ ಹೊಸ ಸ್ಟೋರ್‌ಗಳನ್ನು ಆರಂಭಿಸಲಿದೆಯಂತೆ. ಈಗಾಗಲೆ ಅದು ರಿಲಯನ್ಸ್ ರೀಟೈಲ್ ಜೊತೆ ಸೇರಿ ೧೭ ಸ್ಟೋರ‍್ಸ್ ನಡೆಸುತ್ತಿದೆ.
  • ಚೈನಾದ ಯಿಶಿಯಾನ್ ೨೦೧೨ರ ಹೊತ್ತಿಗೆ ೧೨೫ ಕೇಂದ್ರಗಳನ್ನು ತೆರೆಯಲಿಕ್ಕಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಇದರ ಮೊದಲ ಕೇಂದ್ರ ನವದೆಹಲಿಯಲ್ಲಿ ಪ್ರಾರಂಭವಾಗಿದೆ.
  • ಯುರೋಪ್‌ನಲ್ಲಿಯೇ ಉಡುಪು ಚಿಲ್ಲರೆ ಮಾರಾಟದಲ್ಲಿ ದೊಡ್ಡ ಹೆಸರು ಮಾಡಿರುವ ಸ್ಪೈನ್‌ನ ಇಂಡಿಟೆಕ್ಸ್ ಕಳೆದ ಜೂನ್‌ನಲ್ಲಿ ತನ್ನ ಪ್ರಥಮ ಔಟ್‌ಲೆಟ್‌ನ್ನು ಭಾರತದಲ್ಲಿ ಆರಂಭಿಸಿದೆ. ಈ ವರ್ಷ ಇವರ ೫ ಜರಾ ಔಟ್‌ಲೆಟ್ ಕಣಕ್ಕಿಳಿಯಲಿವೆ.
  • ಭಾರ್ತಿ ರೀಟೈಲ್ ತನ್ನ ಈಸಿ ಡೇ ಸ್ಟೋರ‍್ಸ್ ಬೆಳೆಸಲು ೨.೫ ಬಿಲಿಯನ್‌ನನ್ನು ಮುಂದಿನ ೫ ವರ್ಷದಲ್ಲಿ ತೊಡಗಿಸಿ ೧೦ ಮಿಲಿಯನ್ ಚ.ಅಡಿ ವ್ಯಾಪಾರದ ಜಾಗವನ್ನು ವಶಪಡಿಸಿಕೊಳ್ಳಲಿದೆ.
  • ರೈಮಂಡ್ ವೈಲ್ ೨೦೧೦ರಲ್ಲಿ ಹೂಡಿರುವ ಬಂಡವಾಳ ೮೮೩,೬೬೫ ಅಮೆರಿಕನ್ ಡಾಲರ್.

-ಮಾವೆಂಸ

3 comments:

sunaath ಹೇಳಿದರು...

ಮನಮೋಹನ ಸಿಂಗರಿಂದ ಬೇರೆ ಏನನ್ನು ನಿರೀಕ್ಷಿಸಬಹುದು?
ಸದ್ಯಕ್ಕೆ ರೈತರಷ್ಟೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಮುಂದಿನ ಸರದಿ ಚಿಲ್ಲರೆ ವರ್ತಕರದು. ಆದರೆ ಭಾರತದ ಅಭಿವೃದ್ಧಿಯ ದರ ಏರುತ್ತಿದೆ ಎಂದು ಮಮೋ ಸಿಂಗರು ಖುಶಿಪಡಬಹುದು!

Muttu chikkaiah ಹೇಳಿದರು...

ಪ್ರಸಾದಣ್ಣ.. ಅರ್ಥಿಕ ಉದಾರೀಕರಣ, ಗ್ಲೋಬಲೈಸಿಂಗ್,
ಗ್ಲೋಬಲ್ ವಿಲೇಜೆ ಹೀಗೆ ಎನೇನೋ, 'ಗಂಜಿ ಇಳಿಯದ
ಗಂಟಲಲ್ಲಿ ಗಂಟು ತುರುಕುವ ಹುನ್ನಾರ. ದೊಡ್ಡ
ಚಿಂತನೆಗಳು ನಂಗೆ ದುಬಾರಿ, ಅದೆಲ್ಲ ಬಿಡು...
ಸರಳವಾಗಿ ಶೆಟ್ರ ಅಂಗಡಿ ಕಥೆ ತಗಾ. ಇಲ್ಲಿ ವ್ಯಾಪಾರದ
ಎಳೆಗಿಂತ ಗಟ್ಟಿಯಾದುದು ವಿಶ್ವಾಸದ್ದು. ಶೆಟ್ರಿಗೆ ನಮ್ಮ
ಮನೆಯ ಕಷ್ಟ-ಸುಖ, ನೋವು-ನಲಿವು ಎಲ್ಲ ಗೊತ್ತು.
ಮನೆಯ ಸದಸ್ಯರೆಲ್ಲ ಪರಿಚಿತರು. ನಾನು ಹಿಂದೆ
ಅಪ್ಪನೊಟ್ಟಿಗೆ ಶೆಟ್ರ ಅಂಗಡಿಗೆ ಹೋದಾಗ ಅವರ
ಮಾತು ಹೀಗಿತ್ತು. ಹೆಗಡೇರೆ.. ತೋಟಕ್ಕೆ ಕೊಳೆ
ಬಂದಿದೆಯಾ, ಎಷ್ಟು ಅಡಿಕೆ ಉದುರಿತು. ಮಗಳಿಗೆ
ಗಂಡು ಹುಡುಕುವ ವಿಚಾರ ಎಲ್ಲಿಗೆ ಬಂತು. ದೊಡ್ಡ
ಮಾಣಿ ಓದು ಹೇಗಿದೆ. ಮನೆಯವರ ಅರೋಗ್ಯ..
ಹೇಗೆ?....ಕೊನೆಗೆ ಅಪ್ಪಯ್ಯ; ಶೆಟ್ರೆ ಇವತ್ತು ಮಂಕಾಳೆ
ಮಂಡಿ ಭಟ್ರು ದುಡ್ಡು ಎಷ್ಟು ಕೊಡ್ತಾರೋ.... ಎಂದು
ಕುರುಗೋಡು ಪಂಚೆಯ ಮುಂಡಾಸ ಸರಿಮಾಡುತ್ತಾ
ರಾಗ ತೆಗೆದ್ರೆ,.... ಶೆಟ್ರೋ.. ಹೆಗಡೇರೆ ನಾನು ಈಗ
ನಿಮ್ಮ ಹತ್ರ ದುಡ್ಡು ಕೇಳಿದ್ನೇ.. ದುಡ್ಡಿನ ಕಥೆ ಹೇಗೂ
ಆಗುತ್ತೆ. ಮೊದಲು ಸಾಮಾನು ಹೇಳಿ ಎಂದು
ಅಷ್ಟು ಕಿರಾಣಿ ಸಾಮಾನು ಕಟ್ಟಿ ಕೊಡುತ್ತಿದ್ದರು.
ಈ ವಿಚಾರ ಇರಲಿ, ಒಮ್ಮೆ ನಾನು ಸ್ಕೂಲಿಂದ
ಮನೆಗೆ ಹೋಗುವಾಗ ಮಾಣಿ.. ಅಪ್ಪ ಈಸಲ
ಸೋಪು ಮರೆತ್ರು ಕಾಣುತ್ತೆ, ತಗಂಡು ಹೋಗು
ಅಂತ ಕಳುಹಿಸಿದ್ದು ಚೆನ್ನಾಗಿ ನೆನಪಿದೆ. ಇದೆಲ್ಲ
"ಹರಿಕಥೆ" ಯಾಕೆಂದ್ರೆ. ಅಂದು ಕೊಳ್ಳುವ, ಮಾರುವ
ಸಂಬಂಧ ಹೀಗಿತ್ತು. ದುಡ್ಡು ಕಾಸಿನ ವಿಚಾರ
ಹಿಂದುಮುಂದಾದರು, ಬದುಕಿನ ಬಂಡಿ ಹಳಿ
ತಪ್ಪದಂತೆ ಸಾಗುತ್ತಿತ್ತು. ಇಂದು ಪ್ರಾಪಂಚಿಕ
ಭೋಗದ ಹಣವೇ ಪ್ರದಾನವಾಗಿ, ಬದುಕಿನ
ಸೂಕ್ಷ್ಮಾರ್ಥಗಳೆಲ್ಲ ನೆಲೆಕಳೆದುಕೊಳ್ಳುತ್ತಿವೆ.
ಸಂಭಂದದ ಸುವಾಸನೆ ಹಿಂದಿಕ್ಕಿ ದುಡ್ಡಿನ
ನಾತ ಮೂಗಿಗೆ ಅಡರುತ್ತದೆ. ಮುಂದೆ ಮಾನವ
ಕೇವಲ, ಕೊಳ್ಳುವ-ಮಾರುವ ಯಂತ್ರವಾಗುತ್ತಾನೆ

ಮಾವೆಂಸ ಹೇಳಿದರು...

ಮುತ್ತು ಚಿಕ್ಕಯ್ಯ,
ನಿಜ, ಆದರೆ ಆಫರ್ ಗಳ ಮುಂದೆ ನಾವು ಸಂಬಂಧ ಗಮನಿಸುವುದಿಲ್ಲ. ಇದು ಲೇಖನದ ಅನಿಸಿಕೆಯೂ ಹೌದು. ಜಾಗತೀಕರಣದ ಎದುರು ಸೋಲು ಕಾಣುತಿದ್ದೇವೆ. ಅದ್ದೆಲ್ಲ ಇರಲಿ, ಅದ್ಯಾಕೋ ಪ್ರಸಾದಣ್ಣ ಅಂದಿದ್ದು ಮಾತ್ರ ಬಲೇ ದುಬಾರಿ!

 
200812023996