ಸೋಮವಾರ, ಜನವರಿ 25, 2010

ಹರಾಜಾಯಿತೇ ಪಾಕ್ ಮಾನ?

ನಾಳೆ ಗಣರಾಜ್ಯೋತ್ಸವ. ಅತ್ತ ಪಾಕ್ ಬೆಂಬಲಿತ ಭಯೋತ್ಪಾದಕರು ವಿಧ್ವಂಸಕ ಕೃತ್ಯ ನಡೆಸಲು ಸನ್ನದ್ಧರಾಗುತ್ತಿರುವ ಸುದ್ದಿ ಕೇಳಿಬರುತ್ತಿದೆ. ಈ ಮಧ್ಯೆ ಮಾಜಿ ಪಾಕ್ ಆಟಗಾರರು ಎಳಸು ಮಕ್ಕಳಂತೆ ಹತ್ತೊಂಬತ್ತರೊಳಗಿನ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ತಮ್ಮ ತಂಡ ಸೋತುದಕ್ಕೆ ಸೇಡು ತೀರಿಸಿಕೊಂಡ ಖುಷಿಯಲ್ಲಿದ್ದಾರೆ. ಹಾಗಾದರೆ ನಿಜ ಎಲ್ಲಿದೆ? ಅಸಲಿ ಭಾರತೀಯನ ಅನಿಸಿಕೆಯೇನು? ಹಾಗೊಂದು ನೋಟವನ್ನು ಹರಿಸಿದ್ದೇನೆ. ಇದು ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ... ಓದಿ ನೀವು ಪ್ರತಿಕ್ರಿಯಿಸಲೇಬೇಕು....................................

ಐಪಿಎಲ್ ಹಂಗಾಮ

ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೂರನೇ ಆವೃತ್ತಿಗೆ ರಂಗ ಸಜ್ಜಾಗಿದೆ. ಈ ವರ್ಷ ಕೂಟ ಭಾರತದ ನೆಲದಲ್ಲೇ ನಡೆಯುವುದು ನಿಕ್ಕಿ. ಹೊಸ ಆಟಗಾರರನ್ನು ತಂಡದೊಳಗೆ ಸೇರಿಸಿಕೊಳ್ಳಲು ಮೊನ್ನೆ ೧೯ಕ್ಕೆ ಹರಾಜು ಪ್ರಕ್ರಿಯೆ ನಡೆಯಲಿಕ್ಕಿತ್ತು. ಹರಾಜಿಗೆ ೬೬ ಆಟಗಾರರು ಲಭ್ಯವಿದ್ದರು. ಮುಖ್ಯವಾಗಿ, ಶಾಹೀದ್ ಅಫ್ರಿಧಿ, ಮಿಸ್ಬಾ ಉಲ್ ಹಕ್, ಉಮರ್‌ಗುಲ್, ರಾಣಾ ನವೇದ್, ಅಬ್ದುಲ್ ರಜಾಕ್, ಕಮ್ರನ್ ಅಕ್ಮಲ್‌ರಂತ ಒಟ್ಟು ಜನಪ್ರಿಯ ೧೧ ಪಾಕಿಸ್ತಾನದ ಆಟಗಾರರೂ ಹರಾಜು ಪಟ್ಟಿಯಲ್ಲಿದ್ದರು. ಮಾಧ್ಯಮಗಳಲ್ಲಿ ಅಫ್ರಿಧಿ ದುಬಾರಿ ಬೆಲೆಗೆ ಮಾರಾಟವಾಗಬಹುದು ಎಂದು ತರ್ಕಗಳು ಪ್ರಕಟವಾಗಿದ್ದವು. ಬಹುಷಃ ಇಂತದೊಂದು ಸುದ್ದಿಯನ್ನು ಐಪಿಎಲ್ ಮೂಲಗಳೇ ಗಾಳಿಗೆ ಬಿಟ್ಟಿರಲಿಕ್ಕೂ ಸಾಕು.

ಆದರೆ ಆದದ್ದೇನು?

ಹರಾಜು ಪ್ರಕ್ರಿಯೆಯಲ್ಲಿ ಮೊತ್ತಮೊದಲು ಕೂಗಿದ್ದು ಶಾಹೀದ್ ಅಫ್ರಿಧಿಯ ಹೆಸರನ್ನು. ಆಗ ನಾಟಕೀಯ ಪ್ರಸಂಗವೊಂದು ಜರುಗಿಹೋಯಿತು. ಯಾವೊಬ್ಬ ಐಪಿಎಲ್ ತಂಡದ ಮಾಲಿಕನೂ ಕೊಳ್ಳುವ ಕನಿಷ್ಟ ಆಸಕ್ತಿಯನ್ನು ತೋರಲಿಲ್ಲ. ಬಿಡ್ ಮಾಡಲೇ ಮುಂದಾಗಲಿಲ್ಲ. ಅಫ್ರಿಧಿ ಹರಾಜಾಗಲಿಲ್ಲ! ಇದು ಪಾಕ್‌ನ ಉಳಿದ ಹತ್ತು ಆಟಗಾರರ ವಿಷಯದಲ್ಲೂ ಪುನರಾವರ್ತನೆಯಾಯಿತು. ಅಕ್ಷರಶಃ ಐಪಿಎಲ್‌ನ ಬಿಡ್ ಪ್ರಸಂಗದಲ್ಲಿ ಹರಾಜಾದದ್ದು ಪಾಕ್ ಮಾನ!
ಇಂದು ಸ್ಪಷ್ಟೀಕರಣಗಳ ಭರಾಟೆ ನಡೆದಿದೆ. ಐಪಿಎಲ್‌ನ ಸಂಯೋಜಕ ಲಲಿತ್ ಮೋದಿ ಅಕ್ಕಪಕ್ಕದಲ್ಲಿ ಬಾಲಿವುಡ್‌ನ ‘ಮಾಜಿ’ ಸುಂದರಿಯರನ್ನು ಕೂರಿಸಿಕೊಂಡು ಪಾಕ್ ಆಟಗಾರರ ವಿರುದ್ಧ ತಾವು ಷಡ್ಯಂತ್ರ ನಡೆಸಿರುವುದನ್ನು ಅಲ್ಲಗಳೆಯುತ್ತಾರೆ. ತಂಡಗಳಿಗೆ ಒಟ್ಟಾರೆ ೧೨ ಆಟಗಾರರನ್ನು ಆಯ್ದುಕೊಳ್ಳಲಷ್ಟೇ ಸಾಧ್ಯವಿತ್ತು. ಸ್ಪರ್ಧೆಯಲ್ಲಿದ್ದವರಲ್ಲಿ ೪೪ ಜನರಿಗೆ ನಿರಾಶೆ ಕಟ್ಟಿಟ್ಟ ಬುತ್ತಿಯಾಗಿತ್ತು. ಆದರೆ ತಂಡಗಳು ಆಯ್ದದ್ದು ೧೧ ಆಟಗಾರರನ್ನಷ್ಟೇ. ಪಾಕ್ ಆಟಗಾರರನ್ನೆಲ್ಲ ತಂಡಗಳು ಬಿಟ್ಟದ್ದು ಕಾಕತಾಳೀಯ! ಪ್ರೀತಿ ಜಿಂಟಾ, ಶಿಲ್ಪಾ ಶೆಟ್ಟಿ ಖಡಕ್ಕಾಗಿ ವ್ಯವಹಾರ ಮಾತನಾಡುತ್ತಾರೆ, ‘ಕೊಳ್ಳುವುದು ನಮ್ಮ ಹಕ್ಕು, ಬಿಡುವುದೂ ಕೂಡ!'

ಆದರೆ ಆದದ್ದೇನು?

ಒಂದಂತೂ ಸ್ಪಷ್ಟ. ಪಾಕ್ ಆಟಗಾರರನ್ನು ಯಾವ ಕಾರಣಕ್ಕೂ ಬಿಡ್ ಕೂಗಬಾರದೆಂದು ಎಂಟು ಮಂದಿ ಐಪಿಎಲ್ ಒಡೆಯರು ಪೂರ್ವ ನಿರ್ಧಾರ ಮಾಡಿಯೇ ಬಿಡ್ ಪ್ರಾಂಗಣಕ್ಕೆ ಕಾಲಿಟ್ಟದ್ದು ಎಂತಹ ದಡ್ಡನಿಗೂ ಅರ್ಥವಾಗುವಂತದು. ಈಗಾಗಲೇ ಆಸ್ಟ್ರೇಲಿಯಾದ ಆಟಗಾರರಿಗೆ ಇಲ್ಲಿ ಆಡಲು ಅವಕಾಶ ಕೊಡುವುದಿಲ್ಲವೆಂದು ಶಿವಸೇನಾ ಗುಟುರುಹಾಕಿದೆ. ಪಾಕ್ ಆಟಗಾರರ ವಿರುದ್ಧವೂ ಇಂತಹ ಧ್ವನಿ ಕೇಳಿಬರುವ ಎಲ್ಲ ಸಂಭವನೀಯತೆಯಿದೆ. ಅಷ್ಟಕ್ಕೂ ಇಂತಹ ಬೆದರಿಕೆ ತಂತ್ರ ಬೆದರಿಕೆದಾರರಿಗೆ ಕೊಡುವ ಪ್ರಚಾರವೇ ಅಂತವರಿಗೆ ದೊಡ್ಡ ಆಕರ್ಷಣೆ. ಈ ಮಧ್ಯೆ ಐಪಿಎಲ್ ಪಾಕ್ ಆಟಗಾರರು ಇಲ್ಲದಿದ್ದರೂ ಅದರ ಜನಪ್ರಿಯತೆಗೆ ಮುಕ್ಕಾಗುವುದಿಲ್ಲ. ಹಣ ಹರಿಯುವುದು ನಿರೀಕ್ಷಿತವಿರುವಾಗ ರಿಸ್ಕ್ ತೆಗೆದುಕೊಳ್ಳಲು ಶುದ್ಧ ವ್ಯಾಪಾರೀ ಉದ್ದೇಶದ ಫ್ರಾಂಚೈಸಿಗಳು ಯಾಕೆ ಮುಂದಾಗುತ್ತಾರೆ?
ಬಿಸಿಸಿಐಗೆ ಪಾಕ್ ಕ್ರಿಕೆಟ್ ಮಂಡಳಿ ಎಂದರೆ ಅಪಥ್ಯವಲ್ಲ. ಅವರ ಮಟ್ಟಿಗೆ ದೇಶಾಭಿಮಾನಕ್ಕೆ ಯಾವತ್ತೂ ಎರಡನೇ ಸ್ಥಾನ. ಹಾಗಾಗೇ ವಿಶ್ವಕಪ್ ಸಂಘಟನೆಯಲ್ಲಿ, ಐಸಿಸಿ ಸಭೆಗಳಲ್ಲಿ ಭಾರತ - ಪಾಕ್ ಭಾಯಿ ಭಾಯಿ. ದೇಶಗಳ ಮಧ್ಯೆ ಎಂತಹ ಬಿಗು ಪರಿಸ್ಥಿತಿಯಿದ್ದಾಗಲೂ ಬಿಸಿಸಿಐ ಮುಗುಂ ಆಗಿ ತನ್ನ ವ್ಯವಹಾರವನ್ನು ಪಾಕ್ ಜೊತೆ ಮಾಡಿದ್ದನ್ನು ಕಂಡಿದ್ದೇವೆ. ಅದಕ್ಕೆ ಐಪಿಎಲ್‌ನಲ್ಲಿ ಪಾಕ್ ಆಟಗಾರರು ಆಡುವುದಕ್ಕೆ ಯಾವ ತಕರಾರೂ ಇದ್ದಿರಲಿಕ್ಕಿಲ್ಲ. ಅದೇ ಕಾರಣದಿಂದಾಗಿ ಪಾಕ್ ಎಲ್ಲ ಅಡೆತಡೆಗಳನ್ನು ತೆಗೆದು ತನ್ನ ಕ್ರಿಕೆಟ್ ಆಟಗಾರರಿಗೆ ಅವಕಾಶ ಮಾಡಿಕೊಟ್ಟಿದ್ದು. ಈ ಲೆಕ್ಕದಲ್ಲಿ ನೋಡಿದರೆ, ಫ್ರಾಂಚೈಸಿಗಳು ತಮ್ಮದೇ ಆಟ ಆಡಿದಂತಿದೆ. ಮತ್ತು ಈ ಆಟದ ಸೂತ್ರಧಾರ ಭಾರತ ಸರ್ಕಾರ ಆಗಿದ್ದರೆ ಅಂತಹ ಅನಿರೀಕ್ಷಿತ ಅಲ್ಲ. ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣರ ನಿರಾಕರಣೆಯನ್ನು ನೀವೂ ನಂಬುತ್ತೀರೆಂದರೆ ಏನೂ ಮಾಡಲಾಗದು!

ಆದರೆ ಆದದ್ದೇನು?

ಯಾವ ದಿಕ್ಕಿನಿಂದ ನೋಡಿದರೂ ಪಾಕ್ ಕ್ರಿಕೆಟಿಗರಿಗೆ ನಷ್ಟವಾಗಿದೆ. ಬಿಡ್‌ನಲ್ಲಿ ಖರೀದಿಸದಿರುವುದಕ್ಕೆ ಪ್ರತಿಭೆ ಕಾರಣವಲ್ಲ ಎಂಬುದು ಜಗಜ್ಜಾಹೀರ ಆಗಿರುವುದರಿಂದ ಅವಮಾನದ ಹಿಂಸೆ ಎದುರಾಗುವುದಿಲ್ಲ. ಆದರೆ ಆಘಾತವಾಗಿದೆ. ಅತ್ತ ಪಾಕ್‌ಗೆ ಬಹುಪಾಲು ದೇಶಗಳು ಕ್ರಿಕೆಟ್ ಆಡಲು ಹೋಗುತ್ತಿಲ್ಲ. ವಿದೇಶಿ ಪ್ರವಾಸವಾದರೂ ಎಷ್ಟಿದ್ದೀತು? ಅಲ್ಲಿ ಕ್ರಿಕೆಟ್ ಮಂಡಳಿ ಬಡತನದಲ್ಲಿದೆ. ಈ ಹಿನ್ನೆಲೆಯಲ್ಲಿ ಕೆಲವು ಪ್ರಮುಖ ಆಟಗಾರರಾದರೂ ಐಪಿಎಲ್‌ನಲ್ಲಿ ಹಣದ ಸೂರೆ ಮಾಡಿಕೊಳ್ಳುವ ಅವಕಾಶಕ್ಕೆ ಇದೀಗ ವಂಚನೆಯಾಗಿದೆ. ಐಪಿಎಲ್ ತಂಡಗಳ ಮಾಲಿಕರು ಬಿಡ್ ಕೂಗದ ನಾಟಕವಾಡುವುದಕ್ಕಿಂತ ಪ್ರಬುದ್ಧವಾದ ನಿಲುವನ್ನು ಬಿಡ್ ಮುಂಚಿತವಾಗಿಯೇ ತೆಗೆದುಕೊಂಡಿದ್ದರೆ ಅಷ್ಟರಮಟ್ಟಿಗೆ ಪಾಕ್ ಪ್ರತಿಭೆಗಳಿಗೆ ಶಾಕ್ ಆಗುತ್ತಿರಲಿಲ್ಲ. ಪ್ರತಿಭೆಗಳಿಗೆ ಕಡೆಪಕ್ಷ ಆ ದರ್ಜೆಯ ಗೌರವವನ್ನು ಕೊಡಬೇಕಿತ್ತು.
ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ನಷ್ಟವಾಗಿರುವುದು ಸುಳ್ಳು. ಬೋರ್ಗರೆಯುವ ಶಾಹೀದ್ ಅಫ್ರಿಧಿ ಆಟವಿಲ್ಲದಿದ್ದರೂ ಮತ್ತಾರೋ ಅನಾಮಿಕ ವೇಯ್ನ್ ಪರ್ವೇರ್ ಸಿಡಿಯಬಹುದು. ಇನ್ನೊಂದು ನಿಟ್ಟಿನಲ್ಲಿ, ನಾವು - ಭಾರತೀಯರು ಐಪಿಎಲ್ ತಂಡಗಳ ಒಗ್ಗಟ್ಟಿಗೆ ಉಘೇ ಎನ್ನಬೇಕು. ಪ್ರತಿಯೊಬ್ಬ ಭಾರತೀಯನಲ್ಲೂ ಪಾಕ್ ಭಯೋತ್ಪಾದನೆಯ ಬಗ್ಗೆ ಸಿಟ್ಟು ಮಡುಗಟ್ಟಿದೆ. ಅದನ್ನು ಪಾಕ್ ಪ್ರಭುತ್ವಕ್ಕೆ ಪದೇ ಪದೇ ಅರ್ಥ ಮಾಡಿಸಬೇಕಾದ ಮತ್ತು ಜಗತ್ತಿಗೆ ಸಾರಬೇಕಾದ ಅವಶ್ಯಕತೆಯಿದೆ. ಅದಕ್ಕೆ ಸಿಕ್ಕ ಅತ್ಯದ್ಭುತ ಅವಕಾಶ ಇದಾಗಿತ್ತು. ಆ ಮಟ್ಟಿಗೆ ಐಪಿಎಲ್ ಹೊಡೆತ ಯುವರಾಜ್ ಸಿಂಗ್‌ರ ಸಿಕ್ಸರ್‌ಗಳಿಗಿಂತಲೂ ಬಲವಾದುದಾಗಿದೆ!
ಕೈಯಲ್ಲಾಗದವರು ಮೈ ಪರಚಿಕೊಂಡರಂತೆ. ಇದೇ ಮಾದರಿಯಲ್ಲಿ ಪಾಕ್‌ನಲ್ಲಿ ಗುಲ್ಲೆದ್ದಿದೆ. ಅಲ್ಲಿನ ಮಾಜಿ ಕ್ರಿಕೆಟಿಗರು ಕಿಡಿಕಾರಿದ್ದಾರೆ. ಭಾರತದಲ್ಲಿ ಸದ್ಯದಲ್ಲೇ ನಡೆಯಲಿರುವ ವಿಶ್ವಕಪ್ ಹಾಕಿಯಲ್ಲಿ ತಮ್ಮ ದೇಶದ ತಂಡ ಪಾಲ್ಗೊಳ್ಳಬಾರದು ಎಂದು ಧ್ವನಿಯೆತ್ತಿದ್ದಾರೆ. ನಿಜಕ್ಕೂ ಅದು ಮತ್ತೆ ಅವರಗೇ ಆಗುವ ಹಾನಿಯ ಬೂಮರ‍್ಯಾಂಗ್. ಎಷ್ಟೇ ಸಮಚಿತ್ತದಿಂದ ಯೊಚಿಸಿದರೂ, ಪಾಕ್ ಆಟಗಾರರನ್ನು ಬಿಡ್ ಮಾಡದ ಘಟನೆ ಭಾರತೀಯ ಮನಸ್ಸುಗಳಿಗೆ ಸಾಂತ್ವನ ನೀಡಿದೆ ಎಂತಲೇ ಅನ್ನಿಸುತ್ತದೆ. ಹಾಗಾಗೇ ಇರಬೇಕು, ಭಾರತೀಯ ಕ್ರಿಕೆಟಿಗರು ಘಟನೆಯ ಬಗ್ಗೆ ಕಮಕ್ ಕಿಮಕ್ ಎಂದಿಲ್ಲ!
-ಮಾ.ವೆಂ.ಸ
 
200812023996