ಶುಕ್ರವಾರ, ಜನವರಿ 30, 2009

ಉಫ್ ! ಇಷ್ಟೊಂದು ಮಾಹಿತಿ!


 ಮೊಬೈಲ್ ಟಾಕ್‌ -3
-----------------------------------------------------------------------------------------------------------
ಸಾಗರದ ಬಳಕೆದಾರರ ವೇದಿಕೆಯು ಹೊಸದೊಂದು ಪುಸ್ತಕವನ್ನು ಪ್ರಕಟಿಸಿದೆ. ಅದನ್ನು ಓದಿದ ನೀವು ಇಷ್ಟೊಂದು ಮಾಹಿತಿ ಇದರಲ್ಲಿದೆಯಲ್ಲಾ ! ಎಂದು ಉದ್ಗರಿಸದಿದ್ದರೆ, ಕೇಳಿ. 

* ಗ್ರಾಹಕ ಕಾಯ್ದೆ, ಮಾಹಿತಿ ಹಕ್ಕಿನ ಕಾಯ್ದೆ, ಬ್ಯಾಂಕಿಂಗ್ ಒಂಬುಡ್ಸ್‌ಮನ್, ಸರ್ಕಾರಿ ಇಲಾಖೆಗಳು, ದೂರವಾಣಿ, ವಿದ್ಯುತ್ - ಹೀಗೆ ಕಾನೂನು-ನಿಯಮಗಳ ಲೆಕ್ಕದಲ್ಲಿ ಇದು ವಿವರಗಳ ಖಜಾನೆ.
* ಪುಸ್ತಕದಲ್ಲಿ ಮಾಹಿತಿ ಕೇಳಲು ಅರ್ಜಿ ಸಲ್ಲಿಸಬೇಕು, ಬಳಕೆದಾರರ ನ್ಯಾಯಾಲಯಕ್ಕೆ ದೂರು ನೀಡಬೇಕು, ಒಂಬುಡ್ಸ್‌ಮನ್ ವಿಳಾಸ, ದೂರವಾಣಿ ದೂರು ಸ್ವೀಕಾರಕ್ಕಿರುವ ಅಧಿಕಾರಗಳ ವಿಳಾಸ; ದೂರವಾಣಿ ಸಂಖ್ಯೆ ; ಅತ್ಯಗತ್ಯವಾಗಿ ಬೇಕಾದ ಅರ್ಜಿ ಫಾರಂಗಳ ನಕಲುಗಳ, ವಿಳಾಸಗಳು, ಫೋನ್ ನಂಬರುಗಳು ಇದರಲ್ಲಿ ಲಭ್ಯ. 

* ವಿಶೇಷ ಆಕಾರದ ೬೮ ಪುಟಗಳ ಹೆಸರೇ ಚೆಂದ ’ದೂರಿಗೊಂದು ದಾಟುಗೋಲು’ 

* ಈ ಪುಸ್ತಕ ಆಸಕ್ತರಿಗೂ ಖರೀದಿಗೆ ಸಿಗುತ್ತದೆ. ಪ್ರತಿಯೊಂದರ ಬೆಲೆ ಕೇವಲ ೪೦ ರೂಪಾಯಿ. ಆಸಕ್ತರು ಮನಿಯಾರ್ಡರ್, ಡಿಡಿ ಮೂಲಕ ಹಣ ಪಾವತಿಸಿದರೆ ಪುಸ್ತಕವನ್ನು ಕಳಿಸುವ ಜವಾಬ್ದಾರಿ ಸಾಗರದ ಬಳಕೆದಾರರ ವೇದಿಕೆಯದು. ಹಣವನ್ನು ಬಳಕೆದಾರರ ವೇದಿಕೆ(ರಿ), ಬ್ರಾಸಂ, ನೆಹರೂ ಮೈದಾನ, ಸಾಗg. ೫೭೭೪೦೧ ವಿಳಾಸಕ್ಕೆ ಕಳುಹಿಸಿ. 

ಅದರ ಒಂದು ಲೇಖನ ಇಲ್ಲಿ ನಿಮಗಾಗಿ. ಅದೂ ಈ ಬ್ಲಾಗ್‌ನ ಮೊಬೈಲ್ ಟಾಕ್‌ನ ಮೂರನೇ ಕಂತಾಗಿ.
---------------------------------------------------------------------------------------------

ದೂರವಾಣಿಗೆ ಸಂಬಂಧಿಸಿದ ನಿಯಮಗಳನ್ನು ರೂಪಿಸಿ ಜಾರಿಗೊಳಿಸುವುದು ೧೯೯೭ರಿಂದ ಭಾರತ ಸರ್ಕಾರದ ಕೆಲಸವಲ್ಲ. ಸ್ವತಂತ್ರ ಮತ್ತು ಸ್ವಾಯತ್ತ ಸ್ಥಾನಮಾನಗಳಿರುವ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ಈ ಕೆಲಸ ಮಾಡುತ್ತದೆ. ಅದು ಗ್ರಾಹಕರ ಬಹುದಿನದ ಬೇಡಿಕೆಯಾಗಿದ್ದ ದೂರು ಪರಿಹಾರ ನಿಯಮಾವಳಿಗಳನ್ನು ಜಾರಿಗೆ ತಂದು ಆದೇಶ ಹೊರಡಿಸಿದೆ. ಇದು ೨೦೦೮ರ ಮೇ ೪ರಿಂದ ಅನುಷ್ಠಾನಗೊಂಡಿದೆ. 
ಟೆಲಿಕಾಂ ಗ್ರಾಹಕರಿಗೆ ತಮಗೇನಾದರೂ ಸಮಸ್ಯೆಯಾದರೆ ಗ್ರಾಹಕ ನ್ಯಾಯಾಲಯವನ್ನು ಆಶ್ರಯಿಸುವುದನ್ನು ಬಿಟ್ಟು ಈವರೆಗೆ ಬೇರೆ ಮಾರ್ಗವಿರಲಿಲ್ಲ. ದೂರವಾಣಿ ವಲಯಕ್ಕೇ ಪ್ರತ್ಯೇಕವಾದ ದೂರು ಪರಿಹಾರ ವ್ಯವಸ್ಥೆಯಾಗಲಿ, ನ್ಯಾಯ ನೀಡುವ ವೇದಿಕೆಯಾಗಲಿ ಇರಲಿಲ್ಲ. ಈ ಗಂಭೀರ ಲೋಪದ ಬಗ್ಗೆ ದೇಶದ ಪ್ರಮುಖ ಗ್ರಾಹಕ ಸಂಘಟನೆಗಳು ಟ್ರಾಯ್ ಗಮನ ಸೆಳೆದಿದ್ದರು, ಅಂತಹ ಒಂದು ವ್ಯವಸ್ಥೆ ಸ್ಥಾಪಿಸುವಂತೆ ಒತ್ತಾಯಿಸಿದ್ದವು.  ಇದೀಗ ಅವುಗಳ ಒತ್ತಾಯ ಫಲ ನೀಡಿದೆ. ಅಂತಹ ಒಂದು ವ್ಯವಸ್ಥೆಯನ್ನು ಟ್ರಾಯ್ ತಡವಾಗಿಯಾದರೂ ಜಾರಿಗೆ ತಂದು ದೂರಿ ನಿಂದ ಸಂತ್ರಸ್ಥಗೊಂಡ ಗ್ರಾಹಕರ ನೆರವಿಗೆ ಬಂದಿದೆ.

ದೂರು ನಿವಾರಣೆಗೆ ಕಾಲ್ ಸೆಂಟರ್
 ದೇಶದೊಳಗೆ ಕಾರ್ಯನಿರತವಾಗಿರುವ ಎಲ್ಲಾ ದೂರವಾಣಿ ಕಂಪೆನಿಗಳು  ಕಾಲ್ ಸೆಂಟರ್‌ನ್ನು ಸ್ಥಾಪಿಸಲೇಬೇಕು. ಅದು ಈಗ ಕಡ್ಡಾಯ.  ಹಾಗೆಂದು ಭಾರತೀಯ  ದೂರ ಸಂಪರ್ಕ ನಿಯಂತ್ರಣ  ಪ್ರಾಧಿಕಾರವು ನಿಯಮ ಮಾಡಿ ಜಾರಿಗೆ ತಂದಿದೆ. ಈ ಕಾಲ್‌ಸೆಂಟರುಗಳ ಕೆಲಸ ಗ್ರಾಹಕರ ದೂರು ಸ್ವೀಕರಿಸಿ, ನಿರ್ದಿಷ್ಟ ಕಾಲಮಿತಿಯಲ್ಲಿ ಬಗೆಹರಿಸುವುದು. ಈ ನಿಯಮದ ಪೂರ್ಣ ಮಾಹಿತಿ ಇಂತಿದೆ.
೧. ಪ್ರತಿ ಟೆಲಿಕಾಂ ಸೇವೆ ಪೂರೈಕೆದಾರನೂ ತನ್ನ ಗ್ರಾಹಕರ ದೂರು ನಿವಾರಣೆಗೆ ಕಾಲ್‌ಸೆಂಟರ್‌ನ್ನು ಸ್ಥಾಪಿಸಬೇಕು. ಈ ಕಾಲ್‌ಸೆಂಟರ್ ಗ್ರಾಹಕರಿಗೆ ೩೬೫ ದಿನದ ೨೪ ಗಂಟೆಯೂ ಲಭ್ಯವಾಗುವಂತಿರಬೇಕು.
೨. ಇಲ್ಲಿ ಟೆಲಿಕಾಂ ಸೇವೆ ಪೂರೈಕೆದಾರರೆಂದರೆ ಕೆಳಕಂಡ ಸೇವೆ ಕೊಡುವವರು ಬರುತ್ತಾರೆ;
ಎ) ಸ್ಥಿರ ದೂರವಾಣಿ ಕಂಪೆನಿಗಳು
ಬಿ) ಯುನಿಫೈಡ್ ಅಕ್ಸೆಸ್ ಸೇವಾದಾರರು
ಸಿ) ಮೊಬೈಲ್ ಕಂಪೆನಿಗಳು
ಡಿ) ಬ್ರಾಡ್‌ಬ್ಯಾಂಡ್ ಸೇವೆ ಒದಗಿಸುತ್ತಿರುವ ಕಂಪೆನಿಗಳು (ಆದರೆ ಕಂಪೆನಿಯೊಂದರ ಬ್ರಾಡ್ ಬ್ಯಾಂಡ್ ಕಂಪೆನಿಗಳ ಸಂಖ್ಯೆ೧೦ ಸಾವಿರದೊಳಗಿದ್ದರೆ ಈ ನಿಯಮ ಅನ್ವಯವಾಗದು.)
ಇ) ೫ ಕೋಟಿ ರೂ.ಗಳಿಗಿಂತ ಜಾಸ್ತಿ ಆರ್ಥಿಕ ವಹಿವಾಟಿರುವ ಇಂಟರ್‌ನೆಟ್ ಸೇವಾ ಪೂರೈಕೆ ಕಂಪೆನಿಗಳು.
೩. ಟೆಲಿಕಾಂ ಸೇವೆ ಕೊಡುತ್ತಿರುವ ಕಂಪೆನಿಗಳ ಪಟ್ಟಿಯಲ್ಲಿ ಖಾಸಗಿ ಕಂಪೆನಿಗಳ ಜೊತೆಗೆ ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್‌ಗಳು ಕೂಡಾ ಸೇರುತ್ತವೆ.
೪. ಒಂದೇ ಕಂಪೆನಿ ಬೇರೆ ಬೇರೆ ತರಹದ ಸೇವೆ - ಅಂದರೆ ಇಂಟರ್‌ನೆಟ್, ಮೊಬೈಲ್ ಇತ್ಯಾದಿ ಕೊಡುತ್ತಿದ್ದರೆ ಆಯಾಯ ಸೇವೆಗೆ  ಪ್ರತ್ಯೇಕವಾಗಿ  ಒಂದೊಂದು ಕಾಲ್‌ಸೆಂಟರ್ ಸ್ಥಾಪಿಸಬಹುದು.
೫. ಟೆಲಿಕಾಂ ಕಂಪೆನಿ ಹೀಗೆ ಸ್ಥಾಪಿಸುವ  ಕಾಲ್‌ಸೆಂಟರ್‌ನಲ್ಲಿ ಕೆಳಕಂಡ ಸವಲತ್ತುಗಳಿರಲೇಬೇಕು;
ಅ. ತಕ್ಕ ಸಿಬ್ಬಂದಿ  ಮತ್ತು ಮೂಲಸೌಕರ್ಯ.
ಆ. ಉಚಿತ ದೂರವಾಣಿ ಸೌಲಭ್ಯ- ಅಂದರೆ ಸಂತ್ರಸ್ಥ ಗ್ರಾಹಕರು ಕರೆ ಮಾಡಿದರೆ ಆ ಕರೆಯ ಶುಲ್ಕ ಅವನಿಗೆ ಬೀಳದಂತಿರುವ ದೂರವಾಣಿ ನಂಬರ್ ಕೊಡಬೇಕು.
ಇ. ಸೇವಾ ಗುಣಮಟ್ಟ ಕುರಿತು ಟ್ರಾಯ್ ಹೊರತಂದಿರುವ ನಿಯಮಕ್ಕೆ ಅನುಗುಣವಾಗಿ ದೂರು ತರುವ ಗ್ರಾಹಕನಿಗೆ ಸ್ಪಂದಿಸಬೇಕು.
ಈ. ಕಾಲ್ ಸೆಂಟರ್‌ಗೆ ಸಂಪರ್ಕಿಸುವ ಯಾವುದೇ ಕರೆ ಯಾ ಷಾರ್ಟ್‌ಮೆಸೇಜ್ ಸರ್ವಿಸ್ (ಎಸ್‌ಎಂಎಸ್)ಗಳಿಗೆ ಶುಲ್ಕ ಬೀಳದಂತೆ ನೋಡಿಕೊಳ್ಳಬೇಕು.
ಉ. ಪ್ರತಿಯೊಬ್ಬ ಸೇವಾ ಪೂರೈಕೆದಾರನು ಗ್ರಾಹಕರಿಗೆ ನೆರವೀಯುವ ಕಾಲ್‌ಸೆಂಟರ್ ಸ್ಥಾಪಿಸಿದ ನಂತರ  ಸದರಿ ಸುದ್ದಿಯನ್ನು   ಆತ ಸೇವೆ ಒದಗಿಸು ತ್ತಿರುವ  ಪ್ರದೇಶದಲ್ಲಿ ಪ್ರಕಟವಾಗುತ್ತಿರುವ  ಒಂದು ಇಂಗ್ಲಿಷ್ ಹಾಗೂ ಒಂದು ಕನ್ನಡ ಸುದ್ದಿ  ಪತ್ರಿಕೆಯಲ್ಲಿ ಜಾಹಿರಾತು ಕೊಡುವ ಮೂಲಕ ಜನರ ಗಮನಕ್ಕೆ ತರತಕ್ಕದ್ದು. ಆ ಜಾಹಿರಾತಿನಲ್ಲಿ ಉಚಿತ ದೂರವಾಣಿ ನಂಬರನ್ನು ಸಹ ಕೊಡಬೇಕು. ಕಾಲಕ್ರಮದಲ್ಲಿ ಈ ಸಂಖ್ಯೆ ಬದಲಾದರೆ ಅದನ್ನು ಸಹ ಸಾರ್ವಜನಿಕರ ಗಮನಕ್ಕೆ ತರತಕ್ಕದ್ದು.
ಸಾರ್ವಜನಿಕ ದೂರುಗಳನ್ನು ಕಾಲ್ ಸೆಂಟರ್ ನಿರ್ವಹಿಸುವ ಬಗೆ 
ಮೊದಲಲ್ಲಿ ಹೇಳಿದ ಸ್ಥಿರ, ಮೊಬೈಲ್ ದೂರವಾಣಿ, ಇಂಟರ್‌ನೆಟ್, ಬ್ರಾಡ್‌ಬ್ಯಾಂಡ್ ಸೇವಾಪೂರೈಕೆದಾರರು ಕೆಳಕಂಡ ರೀತಿಯಲ್ಲಿ ದೂರುಗಳನ್ನು ನಿರ್ವಹಿಸಬೇಕು,
೧. ಗ್ರಾಹಕರು ಕೊಟ್ಟ ದೂರನ್ನು ದಾಖಲಿಸಿಕೊಳ್ಳಬೇಕು. ಹಾಗೆ ದಾಖಲಿಸಿಕೊಳ್ಳುವಾಗ ಪ್ರತಿ ದೂರಿಗೆ ಡಾಕೆಟ್ ನಂಬರ್ ಕೊಡಬೇಕು. ದೂರು ಬರೆದುಕೊಳ್ಳುವಾಗ, ಈ ಡಾಕೆಟ್ ನಂಬರನ್ನು ತಾರೀಕು, ಸಮಯದ ಸಹಿತ ದೂರುದಾರ ಗ್ರಾಹಕನಿಗೆ ತಿಳಿಸಬೇಕು. ಆ ದೂರಿಗೆ ಸಂಬಂಧಿಸಿದ ದಾಖಲೆ ಕೇಳಬೇಕು.
  ಗ್ರಾಹಕನಿಗೆ ತಿಳಿಸಬೇಕಾದದ್ದು:
ಅ) ದೂರನ್ನು ನಿರ್ವಹಿಸುವ ನೋಡಲ್ ಆಫೀಸರ್‌ನ  ಹೆಸರು, ವಿಳಾಸ, ದೂರವಾಣಿ ನಂಬರ್
ಆ) ದೂರಿನ ಬಗ್ಗೆ ತೆಗೆದುಕೊಂಡ ತೀರ್ಮಾನ.
ಹಾಗೆ ತಿಳಿಸುವಾಗ :
ಎ) ದೂರವಾಣಿ/ ಇಂಟರ್‌ನೆಟ್ ಮುಖೇನ ದೂರುದಾರರನ್ನು ಸಂಪರ್ಕಿಸಬೇಕು.
ಬಿ) ದೂರು ನಿರ್ವಹಣೆಯ ಸಮಯ ಹೇಳಬೇಕು.
ಅವಧಿ ೨೦೦೫ ಜುಲೈ ೧ರಂದು ಟ್ರಾಯ್ ಹೊರಡಿಸಿದ ನಿಯಮದಲ್ಲಿ ಇಲ್ಲದ ಸೇವಾ ವೈಫಲ್ಯಗಳಿಗೆ  ಅನ್ವಯಿಸುತ್ತದೆ.
೨. ಯಾವುದೇ ನಿಯಮದಲ್ಲಿ ಕಾಣದ ಸೇವಾದೋಷಗಳಿಗೆ ಸಂಬಂಧಿಸಿದ ದೂರನ್ನು ೭ ದಿನಗಳಲ್ಲಿ ಇತ್ಯರ್ಥ ಪಡಿಸಬೇಕು.
೩. ಬೇರಾವುದೇ ಕಾನೂನು ಯಾ ನಿಯಮದಲ್ಲಿ ದೂರು ಪರಿಹಾರಕ್ಕೆ ಸಮಯ ಮಿತಿ ಇದ್ದಲ್ಲಿ ಆ ಅವಧಿಯಲ್ಲಿ ಅಂತಹ ದೂರನ್ನು ಬಗೆಹರಿಸ ಬೇಕು.

ನೋಡಲ್ ಆಫೀಸರ್‌ಗಳು ದೂರು ಬಗೆಹರಿಸುವ ವಿಧಾನ

೧. ನೋಡಲ್ ಆಫೀಸರ್‌ಗಳ ನೇಮಕಾತಿ :
ಪ್ರತಿ  ಸೇವಾ ವಲಯದಲ್ಲಿ ಎಲ್ಲಾ ಸೇವಾ ಪೂರೈಕೆದಾರರು  ನೋಡಲ್  ಆಫೀಸರ್‌ಗಳನ್ನು ನೇಮಿಸಬೇಕು. ಸೇವೆ ಪೂರೈಸುವ ಕಂಪನಿಗಳು ತಮ್ಮ ಸೇವೆಯ ಸ್ವರೂಪಕ್ಕೆ (ಅಂದರೆ ಸ್ಥಿರ ದೂರವಾಣಿ ಯಾ  ಮೊಬೈಲ್ ದೂರವಾಣಿ ಯಾ  ಇಂಟರ್‌ನೆಟ್ ಇತ್ಯಾದಿ) ಅನುಗುಣವಾಗಿ ಪ್ರತ್ಯೇಕ ನೋಡಲ್ ಆಫೀಸರ್‌ರನ್ನು ನೇಮಿಸಬಹುದು ಅಥವಾ ಒಬ್ಬರನ್ನೇ ಎಲ್ಲದರ ದೂರು ವಿಚಾರಣೆಗೆ  ನೇಮಿಸಬಹುದು.
 ಹಾಗೆ ನೇಮಿಸಿಯಾದ ಮೇಲೆ ಪ್ರತಿ ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರೂ ಸುದ್ದಿಪತ್ರಿಕೆಗಳಲ್ಲಿ ಜಾಹಿರಾತು ಕೊಡುವ ಮೂಲಕ ತಮ್ಮ  ನೋಡಲ್ ಆಫೀಸರ್‌ನ ಹೆಸರು, ವಿಳಾಸ, ಸಂಪರ್ಕ, ದೂರವಾಣಿ ನಂಬರ್‌ಗಳನ್ನು ಸಾರ್ವಜನಿಕರಿಗೆ ತಿಳಿಸಬೇಕು. ಒಂದು ವೇಳೆ ನೋಡಲ್ ಆಫೀಸರ್ ಬದಲಾವಣೆಯಾದರೆ ಅದನ್ನೂ  ಪತ್ರಿಕೆಗಳ ಮೂಲಕ ಜನರಿಗೆ ತಿಳಿಸಬೇಕು. 
ಪ್ರತಿ ಸೇವಾ ಪೂರೈಕೆದಾರರು ತಮ್ಮ ಎಲ್ಲಾ ಕಛೇರಿಗಳಲ್ಲಿ ನೋಡಲ್ ಆಫೀಸರ್‌ನ ಮೇಲ್ಕಂಡ ವಿವರಗಳನ್ನು ಬೋರ್ಡ್ ಹಾಕಿ ಗ್ರಾಹಕರ ಗಮನಕ್ಕೆ ತರತಕ್ಕದ್ದು.
೨.  ಕಾಲ್‌ಸೆಂಟರಿನಲ್ಲಿ ಕೊಟ್ಟ ದೂರು ಇತ್ಯರ್ಥವಾಗದಿದ್ದಲ್ಲಿ ಸಂತ್ರಸ್ಥ ಗ್ರಾಹಕರು ದೂರವಾಣಿ, ಪತ್ರ, ಇ-ಮೇಲ್, ಎಸ್‌ಎಂಎಸ್ ಮುಂತಾದ ರೂಪದಲ್ಲಿ ನೋಡಲ್ ಆಫೀಸರ್ ಬಳಿ ದೂರಬಹುದು.
ತುರ್ತು ಸಂದರ್ಭದಲ್ಲಿ ಕಾಲ್ ಸೆಂಟರ್ ಬಿಟ್ಟು ನೇರವಾಗಿ ನೋಡಲ್ ಆಫೀಸರ್‌ರಲ್ಲಿ ದೂರಬಹುದು.
೩. ನೋಡಲ್ ಆಫೀಸರ್ ಕೆಳಗಿನಂತೆ ಕಡ್ಡಾಯವಾಗಿ ಮಾಡಲೇಬೇಕು:
ಅ. ಸಾರ್ವಜನಿಕರಿಗೆ ಮೇಲ್ಕಂಡಂತೆ  ತಿಳಿಸಿದ ವಿಳಾಸದಲ್ಲಿ ಲಭ್ಯವಿರಬೇಕು.
ಆ.ದೂರಿತ್ತವರ ವಿವರಗಳನ್ನು ನೋಂದಾಯಿಸಿಕೊಳ್ಳಬೇಕು.
ಇ. ದೂರುಕೊಟ್ಟ ೩ ದಿನಗಳೊಳಗೆ ದೂರು ನಂಬರನ್ನು ಗ್ರಾಹಕನಿಗೆ ತಿಳಿಸಬೇಕು.
ಈ. ನಿರ್ದಿಷ್ಟ ಸಮಯ ಮಿತಿಯಲ್ಲಿ ಅಂದರೆ ೩ ರಿಂದ ೧೦ ದಿನಗಳಲ್ಲಿ ದೂರು ಪರಿಹಾರಕ್ಕೆ ಕ್ರಮ ಕೈಗೊಂಡು ಅದನ್ನು ದೂರಿತ್ತ ಗ್ರಾಹಕನಿಗೆ ತಿಳಿಸಬೇಕು.

ಉ. ಸಮಯ  ಮಿತಿ : ಸೇವಾ ವ್ಯತ್ಯಯ ಮತ್ತು ಸಂಪರ್ಕ ಕಡಿತ ಕುರಿತ ದೂರುಗಳನ್ನು ದೂರು ನೋಂದಾಯಿಸಿದ ೩ ದಿನಗಳಲ್ಲಿ ಬಗೆಹರಿಸಬೇಕು. ಇತರೆ ದೂರುಗಳನ್ನು ೧೦ ದಿನಗಳೊಳಗೆ ಪರಿಹರಿಸಬೇಕು.
ಮೇಲ್ಮನವಿ ಪ್ರಾಧಿಕಾರ 
ಸೇವಾ ಪೂರೈಕೆದಾರನಡಿ ಇರುವ ಮೇಲ್ಮನವಿ ಪ್ರಾಧಿಕಾರಕ್ಕೆ ಆಪೀಲು ಸಲ್ಲಿಸುವ ಬಗೆ :
 ದೂರವಾಣಿ, ಇಂಟರ್‌ನೆಟ್, ಬ್ರಾಡ್‌ಬ್ಯಾಂಡ್ ಮುಂತಾದ ಸೇವೆ ಒದಗಿಸುತ್ತಿರುವ ಸೇವಾ ಕಂಪನಿಗಳು ‘ಟೆಲಿಕಾಂ ಗ್ರಾಹಕರ ದೂರು ಪರಿಹಾರ ನಿಯಮ’ ಜಾರಿಗೆ ಬಂದ ೩ ತಿಂಗಳೊಳಗೆ ತಾವು ಕಾರ್‍ಯ ನಿರ್ವಹಿಸುತ್ತಿರುವ ಪ್ರತಿ ಸೇವಾ ವಲಯದಲ್ಲಿ (ಅಂದರೆ ರಾಜ್ಯಕ್ಕೊಂದರಂತೆ) ಕನಿಷ್ಠ ಪಕ್ಷ ಒಂದಾದರೂ ಮೇಲ್ಮನವಿ ಪ್ರಾಧಿಕಾರವನ್ನು  ಸ್ಥಾಪಿಸಬೇಕು. ಈ ಸಂಬಂಧ ಕೇಂದ್ರ ಟೆಲಿಕಾಂ ಇಲಾಖೆ ೨೦೦೫ ಸೆಪ್ಟೆಂಬರ್ ೨೨ರಂದು ಹೊರಡಿಸಿದ ಸುತ್ತೋಲೆಯಂತೆ ಸ್ಥಾಪಿತವಾದ ಮೇಲ್ಮನವಿ ಪ್ರಾಧಿಕಾರಗಳು ಈಗಾಗಲೇ ಅಸ್ತಿತ್ವದಲ್ಲಿದ್ದರೆ, ಮತ್ತೆ ಹೊಸ ಮೇಲ್ಮನವಿ ಪ್ರಾಧಿಕಾರ ನೇಮಿಸುವ ಅಗತ್ಯವಿಲ್ಲ. ಹೊಸದಾಗಿ ಶುರುವಾದ ಕಂಪನಿಗಳು ತಮ್ಮ ಇನ್ನಿತರ ಚಟುವಟಿಕೆಗಳ ಜೊತೆ ಇಂತಹ ಮೇಲ್ಮನವಿ ಪ್ರಾಧಿಕಾರಗಳನ್ನು ಚಾಲೂ ಮಾಡತಕ್ಕದ್ದು.
 ಒಂದು ವೇಳೆ ಒಂದೇ ಕಂಪನಿ ವಿವಿಧ ಸೇವೆ ಕೊಡುತ್ತಿದ್ದರೆ ಅವೆಲ್ಲದಕ್ಕೆ ಪ್ರತ್ಯೇಕ ಅಥವಾ ಎಲ್ಲದರಿಂದ ಒಂದೇ ಮೆಲ್ಮನವಿ ಪ್ರಾಧಿಕಾರ ಸ್ಥಾಪಿಸಬಹುದು.
 ಸೇವಾಪೂರೈಕೆದಾರರು ಮೇಲೆ ಹೇಳಿದ  ದೂರು ಇತ್ಯರ್ಥಪಡಿಸುವ ಮೇಲ್ಮನವಿ ಪ್ರಾಧಿಕಾರ ನೇಮಿಸಿದ ನಂತರ ಕೆಳಕಂಡ ಕ್ರಮ ಅನುಸರಿಸತಕ್ಕದ್ದು.
೧. ಒಂದು ಇಂಗ್ಲೀಷ್ ಅಥವಾ ಹಿಂದಿ ಮತ್ತು ಸ್ಥಳೀಯ ಭಾಷೆಯ ಪತ್ರಿಕೆಯಲ್ಲಿ ಜಾಹಿರಾತು ಕೊಡುವ ಮುಖೇನ ಹಾಗೂ ದೂರವಾಣಿ ಬಿಲ್‌ಗಳಲ್ಲಿ ಮುದ್ರಿಸುವ  ಮುಖೇನ ಮೇಲ್ಮನವಿ ಪ್ರಾಧಿಕಾರ ಸ್ಥಾಪಿಸಿದ ವಿಚಾರವನ್ನು ಗ್ರಾಹಕರಿಗೆ ತಿಳಿಸಬೇಕು. ಆ ಜಾಹಿರಾತಿನಲ್ಲಿ ಮೇಲ್ಮನವಿ ಪ್ರಾಧಿಕಾರದ ವಿಳಾಸ, ಫೋನ್ ನಂಬರ್, ಇ ಮೇಲ್ ಐಡಿ ಇತ್ಯಾದಿಗಳಲ್ಲದೆ ಪ್ರಾಧಿಕಾರಕ್ಕೆ ಅಪೀಲು ಸಲ್ಲಿಸುವ ವಿಧಾನವನ್ನು ತಿಳಿಸಬೇಕು. ಈ ತರಹದ ಜಾಹಿರಾತನ್ನು ವರ್ಷಕ್ಕೊಂದು ಸಾರಿ ಪುನರಾವರ್ತಿಸಬೇಕು.
೨. ಸೇವಾ ಪೂರೈಕೆದಾರನ ಕಛೇರಿ,  ಕಾಲ್‌ಸೆಂಟರ್,  ಸಹಾಯ ಕೇಂದ್ರ, ಮಾರಾಟ ಮಳಿಗೆ, ವೆಬ್‌ಸೈಟ್ ಮುಂತಾದ ಕಡೆ ಬೋರ್ಡ್ ಹಾಕಿ ಮೇಲ್ಮನವಿ ಪ್ರಾಧಿಕಾರದ ಹೆಸರು, ವಿಳಾಸ ಮತ್ತು ಇನ್ನಿತರ ವಿವರಗಳನ್ನು ಪ್ರಚುರಪಡಿಸಬೇಕು.

೩.ಮೇಲ್ಮನವಿ ಪ್ರಾಧಿಕಾರಕ್ಕೆ ಆಪೀಲು ಸಲ್ಲಿಸುವಿಕೆ
೧. ದೂರವಾಣಿ, ಇಂಟರ್‌ನೆಟ್ ಮತ್ತು ಬ್ರಾಡ್‌ಬ್ಯಾಂಡ್ ಸೇವೆಯ ಕುರಿತು  ನೋಡಲ್ ಆಫೀಸರ್‌ಗೆ ಕೊಟ್ಟ ದೂರು ಇತ್ಯರ್ಥವಾಗದಿದ್ದರೆ, ಉತ್ತರ ಬರದಿದ್ದರೆ ಅಥವಾ ಅವರು ಕೊಟ್ಟ ತೀರ್‍ಮಾನ ದೂರಿತ್ತ ಗ್ರಾಹಕನಿಗೆ ಸಮಾಧಾನ ತರದಿದ್ದರೆ ಅಂತಹ ಗ್ರಾಹಕರು ಮೇಲ್ಮನವಿ ಪ್ರಾಧಿಕಾರಕ್ಕೆ ಲಿಖಿತ ದೂರು ಕೊಡಬಹುದು.
೨. ಮೇಲ್ಮನವಿಯಲ್ಲಿ ಪ್ರಾಧಿಕಾರಕ್ಕೆ ಸಲ್ಲಿಸುವ ಆಪೀಲು ದ್ವಿಪ್ರತಿಯಲ್ಲಿರಬೇಕು ಮತ್ತು ನಿಗದಿತ ಅರ್ಜಿ ನಮೂನೆಯಲ್ಲಿರಬೇಕು. (ಅರ್ಜಿ ನಮೂನೆಯನ್ನು ಪ್ರತ್ಯೇಕವಾಗಿ ಕೊಡಲಾಗಿದೆ)
೩. ನೋಡಲ್ ಆಫೀಸರ್‌ಗೆ ದೂರಿಕೊಂಡು ೧೦ ದಿನಗಳಾದರೂ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಆ ೧೦ ದಿನಗಳ ನಂತರ ಮೂರು ತಿಂಗಳೊಳಗೆ ಮೇಲ್ಮನವಿ ಪ್ರಾಧಿಕಾರಕ್ಕೆ ಆಪೀಲು ಸಲ್ಲಿಸಬೇಕು.
೪. ಎಲ್ಲಾ ಸೇವಾ ಪೂರೈಕೆದಾರರು ಸಂತ್ರಸ್ಥ ಗ್ರಾಹಕರಿಗೆ ಆಪೀಲು ಸಲ್ಲಿಸಲು ಅಗತ್ಯವಿರುವ ಅರ್ಜಿ ನಮೂನೆಯನ್ನು ಉಚಿತವಾಗಿ ಕೊಡಬೇಕು. ಸದರಿ ಅರ್ಜಿ ನಮೂನೆಗಳು ಸೇವಾ ಪೂರೈಕೆದಾರರ ಎಲ್ಲಾ ಕಛೇರಿ, ಮಾರಾಟ ಮಳಿಗೆ, ನೋಡಲ್ ಆಫೀಸರ್ ಕಛೇರಿಗಳಲ್ಲಿ ಲಭ್ಯವಿರಬೇಕು. ಅಲ್ಲದೇ ವೆಬ್‌ಸೈಟ್‌ನಲ್ಲೂ ಸಿಗುವಂತಿದ್ದು ಡೌನ್‌ಲೋಡ್ ಮಾಡಲು ಬರುವಂತಿರಬೇಕು.
ಅಪೀಲು ನಿರ್ವಹಿಸುವ ವಿಧಾನ
# ಮೇಲ್ಮನವಿ ಪ್ರಾಧಿಕಾರವು ತನಗೆ ಬರುವ ದೂರನ್ನು ದಾಖಲಿಸಿಕೊಂಡು, ಮೂರು ದಿನಗಳಲ್ಲಿ ಹಾಗೆ ದಾಖಲಿಸಿಕೊಂಡ ದೂರು ನಂಬರ್ ಸಹಿತ ಗ್ರಾಹಕನಿಗೆ ರಶೀದಿ ಕಳಿಸಬೇಕು.
# ಅಪೀಲು ದಾಖಲಿಸಿಕೊಂಡಾದ ಆರು ದಿನಗಳಲ್ಲಿ ದೂರು ಬರಲು ಕಾರಣವಾದ ಟೆಲಿಕಾಂ ಕಂಪನಿಗೆ ಅಪೀಲಿನ ಪ್ರತಿ ಕಳಿಸಿ ಪ್ರತಿಕ್ರಿಯೆ ಕೊಡಲು ಹೇಳಬೇಕು.
# ಸೇವಾ ಪೂರೈಕೆದಾರನು ಅಪೀಲಿನ ಪ್ರತಿ ಸ್ವೀಕೃತವಾದ ೧೫ ದಿನಗಳಲ್ಲಿ ತನ್ನ ಉತ್ತರ ಕೊಡಬೇಕು. ಇಲ್ಲಿ ಉತ್ತರ ಕೊಡುವುದೆಂದರೆ ಸಮಸ್ಯೆ ಪರಿಹರಿಸುವುದೂ ಸೇರುತ್ತದೆ.
# ಒಂದು ಪಕ್ಷ ಸೇವಾ ಪೂರೈಕೆದಾರನು ೧೫ ದಿನಗಳಲ್ಲಿ ಉತ್ತರಿಸದಿದ್ದಲ್ಲಿ, ಮೇಲ್ಮನವಿ ಪ್ರಾಧಿಕಾರವು ಆ ಪ್ರಕರಣಕ್ಕೆ ಸಂಬಂಧಿಸಿ ತನ್ನ ಬಳಿಯಿರುವ ದಾಖಲೆಗಳ ಆಧಾರದ ಮೇಲೆ ಪ್ರಕರಣವನ್ನು ಇತ್ಯರ್ಥಗೊಳಿಸಬೇಕು.
# ಪ್ರಕರಣವನ್ನು ಇತ್ಯರ್ಥಗೊಳಿಸಲು ಅಗತ್ಯವಿರುವ ಯಾವುದೇ  ಮಾಹಿತಿ, ದಾಖಲೆಗಳನ್ನು ಮೇಲ್ಮನವಿ ಪ್ರಾಧಿಕಾರವು ಸೇವಾ ಕಂಪನಿಯಿಂದ ಯಾ ಗ್ರಾಹಕನಿಂದ ಕೇಳಿ ಪಡೆಯಲು ಅಧಿಕಾರ ಹೊಂದಿದೆ.
# ಒಂದು ವೇಳೆ ಸೇವಾ ಕಂಪನಿಯು ಪ್ರಾಧಿಕಾರ ಕೇಳಿದ ಮಾಹಿತಿ, ದಾಖಲೆ ಒದಗಿಸದಿದ್ದರೆ ಪ್ರಕರಣದ ಯೋಗ್ಯತೆ ಅನುಸರಿಸಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಬಹುದು.
# ಸೇವಾಲೋಪ ಎಸಗಿದ ಕಂಪನಿಯಿಂದ ಉತ್ತರ ಬಂದ ನಂತರ ಹಾಗೂ ಪ್ರಾಧಿಕಾರ ಕೇಳಿದ ಮಾಹಿತಿ, ದಾಖಲೆ ಬಂದ ನಂತರ ಪ್ರಾಧಿಕಾರವು  ಸೂಕ್ತಕಂಡ ತನಿಖೆ ನಡೆಸಬಹುದು. ವಿಚಾರಣೆ ನಡೆಸುವಾಗ ಟೆಲಿಕಾಂ ಕಂಪನಿ  ಮತ್ತು ಗ್ರಾಹಕನಿಗೆ ತಮ್ಮ ವಾದ ಮಂಡಿಸಲು ಅವಕಾಶ  ನೀಡಬೇಕು. ತದನಂತರ ಪ್ರಕರಣದ ಅರ್ಹತೆ ಮೇಲೆ ನ್ಯಾಯ  ತೀರ್‍ಮಾನ ಕೊಡಬೇಕು. ತೀರ್‍ಮಾನವನ್ನು ಬರವಣಿಗೆಯಲ್ಲಿ  ಕಾರಣಸಹಿತವಾಗಿ ನೀಡಬೇಕು.
# ದೂರುದಾರ ಗ್ರಾಹಕನು ವಿಚಾರಣೆಗೆ ಖುದ್ದು ಹಾಜರಾಗಬಹುದು ಅಥವಾ ತನ್ನ ಪ್ರತಿನಿಧಿಯನ್ನು ಕಳಿಸಬಹುದು ಅಥವಾ ತನ್ನ ವಾದ ದಾಖಲಿಸಿ, ಲಿಖಿತ ಹೇಳಿಕೆ ಕಳಿಸಿ ಹಾಜರಾತಿಗೆ ವಿನಾಯ್ತಿ ಕೇಳಬಹುದು.
# ಟೆಲಿಕಾಂ ಕಂಪನಿಯು ತನ್ನ ಪ್ರತಿನಿಧಿಯನ್ನು  ವಿಚಾರಣೆಗೆ ಹಾಜರಾಗಲು ಕಳಿಸಬಹುದು. ಕಳಿಸದಿದ್ದರೆ ಮೇಲ್ಮನವಿ ಪ್ರಾಧಿಕಾರವು ಏಕಪಕ್ಷೀಯವಾಗಿ ವಿವಾದವನ್ನು ಇತ್ಯರ್ಥಪಡಿಸಬಹುದು.
# ಅಪೀಲು ದಾಖಲಿಸಿದ  ಮೂರು ತಿಂಗಳೊಳಗೆ ಮೇಲ್ಮನವಿ ಪ್ರಾಧಿಕಾರವು ಪ್ರಕರಣವನ್ನು ಇತ್ಯರ್ಥಗೊಳಿಸಬೇಕು.
# ಅಪೀಲು ಇತ್ಯರ್ಥವಾದ ಏಳು ದಿನಗಳಲ್ಲಿ ಉಭಯ ಪಕ್ಷಗಳಿಗೆ ತೀರ್‍ಮಾನವನ್ನು ತಿಳಿಸಬೇಕು.
# ದೂರಿಗೆ ಎಡೆಮಾಡಿಕೊಟ್ಟ ಟೆಲಿಕಾಂ ಕಂಪನಿಯು,  ಮೇಲ್ಮನವಿ ಪ್ರಾಧಿಕಾರವು ಕೊಟ್ಟ ತೀರ್ಪನ್ನು ೧೫ ದಿನಗಳಲ್ಲಿ ಜಾರಿಗೆ ತರಬೇಕು.
# ಒಂದು ಅಪೀಲನ್ನು ನಿರ್ವಹಿಸುವಾಗ ಮೇಲ್ಮನವಿ ಪ್ರಾಧಿಕಾರವು ಉಭಯತ್ರರನ್ನು ಕೂರಿಸಿ ಸಂಧಾನ ನಡೆಸಿ ಸಮಸ್ಯೆ ಬಗೆಹರಿಸಲು ಅವಕಾಶವಿದೆ.
ಮೇಲ್ಮನವಿ ಪ್ರಾಧಿಕಾರಕ್ಕೆ  ಅಪೀಲು ಸಲ್ಲಿಸುವ ಅರ್ಜಿ ನಮೂನೆ
ಟೆಲಿಕಾಂ ಗ್ರಾಹಕರ ಹಿತರಕ್ಷಣೆ ಮತ್ತು ದೂರು ಪರಿಹಾರ ನಿಯಮ, ೨೦೦೭ರಂತೆ....... (ಇಲ್ಲಿ ದೂರು ಹುಟ್ಟಲು ಕಾರಣವಾದ ಟೆಲಿಕಾಂ ಕಂಪೆನಿಯ ಹೆಸರು ಮತ್ತು ವಿಳಾಸ ಬರೆಯಬೇಕು) ಕಂಪನಿ ನೇಮಿಸಿರುವ ಮೇಲ್ಮನವಿ ಪ್ರಾಧಿಕಾರಕ್ಕೆ ಸಲ್ಲಿಸುತ್ತಿರುವ ದೂರು
ಅ. ಅಪೀಲುದಾರರ ಹೆಸರು, ವಿಳಾಸ, ಫೋನ್ ನಂಬರ್, ಇ ಮೇಲ್ ವಿವರ
ಆ. ಅಪೀಲು ಹಾಕಲು ಕಾರಣವಾದ ಸ್ಥಿರ ದೂರವಾಣಿ ನಂಬರ್ ಅಥವಾ ಮೊಬೈಲ್ ನಂಬರ್, ಬ್ರಾಡ್‌ಬ್ಯಾಂಡ್ ಸಂಪರ್ಕದ ಗುರುತು
ಇ. ದೂರು ಇರುವ ಪ್ರದೇಶದ ವಿವರ
ಈ. ದೂರು ಹುಟ್ಟಿರುವ ರಾಜ್ಯ ಅಥವಾ ಸೇವಾ ವಲಯದ ಹೆಸರು
ಉ. ದೂರಿನ ವಿವರವಾದ ಸ್ವರೂಪ (ದೂರು ಯಾವುದಕ್ಕೆ ಸಂಬಂಧಿಸಿದ್ದು ಬರೆಯಿರಿ. ಅಂದರೆ ಸಂಪರ್ಕ/ಆಕ್ಟಿವೇಶನ್ / ಬಿಲ್ಲಿಂಗ್ / ಕೆಟ್ಟಿರುವ ಫೋನ್ ರಿಪೇರಿ/ಸೇವಾಲೋಪ/ ಸಂಪರ್ಕ ಕಡಿತ/ಮೌಲ್ಯ ವರ್ಧಿತ ಸೇವೆ/ ದೂರವಾಣಿ ಸಂಪರ್ಕ ಸ್ಥಗಿತ-ಇತ್ಯಾದಿಗಳಲ್ಲಿ ಯಾವುದೆಂದು ಹೇಳಿ)
ಊ. ದೂರನ್ನು ಮೊದಲಬಾರಿ ಕಾಲ್ ಸೆಂಟರ್‌ನಲ್ಲಿ ದಾಖಲಿಸಿದಾಗ ಅಲ್ಲಿ ಕೊಟ್ಟ  ನಂಬರ್, ದಿನಾಂಕ ಸಹಿತ 
ಎ. ಎರಡನೇ ಹಂತದಲ್ಲಿ  ದೂರನ್ನು ನೋಡಲ್ ಆಫೀಸರ್‌ಗೆ ಕೊಟ್ಟಾಗ ಅವರು ಕೊಟ್ಟಿರುವ ದೂರು ಸಂಖ್ಯೆ, ದಿನಾಂಕದೊಂದಿಗೆ ಏ. ನೋಡಲ್ ಆಫೀಸರ್ ತೀರ್‍ಮಾನ ಕೊಟ್ಟಿದ್ದರೆ ಅದರ ವಿವರ ಮತ್ತು ಆದೇಶದ ಪ್ರತಿ. ಕೊಟ್ಟಿಲ್ಲದಿದ್ದಲ್ಲಿ ಅದನ್ನೂ ಕಾಣಿಸಬೇಕು 
ಐ. ದೂರಿನ ಅಥವಾ ಅಪೀಲಿಗೆ ಕಾರಣವಾಗುವ ವಿಷಯಗಳು.
ಒ. ಅಪೀಲಿಗೇನು ಕಾರಣ-ವಿಷಯದ ಪೂರ್ತಿ ವಿವರ, ದಾಖಲೆಗಳ ಪೊಟೊ ಪ್ರತಿ ಸಹಿತ 
ಓ. ಕೇಳುವ ಪರಿಹಾರವೇನು?(ಅಗತ್ಯಬಿದ್ದರೆ ಪ್ರತ್ಯೇಕ ಹಾಳೆಯಲ್ಲಿಯೂ ಬರೆಯ ಬಹುದು)
ಔ. ಸದರಿ ದೂರು ಯಾ ಆಪೀಲು ಬೇರಾವುದೇ  ನ್ಯಾಯಾಲಯದಲ್ಲಿ ದಾಖಲಾಗಿಲ್ಲವೆಂಬ ಬಗ್ಗೆ ಹೇಳಿಕೆ
ಅಂ. ಇನ್ನಿತರ ಮಾಹಿತಿ ಯಾ ದಾಖಲೆಗಳು
ಅಃ. ಖುದ್ದು ಹಾಜರಾತಿಗೆ ವಿನಾಯ್ತಿ ಕೋರಿದರೆ ಅದನ್ನು ಬರೆಯಬೇಕು.

ಈ ಅರ್ಜಿ ನಮೂನೆ ಜೊತೆಗೆ ಸತ್ಯ ಮಾಪನಾ ಹೇಳಿಕೆಯನ್ನೂ ಲಗತ್ತಿಸಬೇಕು.
೧. ಗ್ರಾಹಕ ಖುದ್ದು ಹಾಜರಾಗಬಹುದು ಅಥವಾ ತನ್ನ ಪ್ರತಿನಿಧಿಯನ್ನು ಕಳಿಸಬಹುದು ಅಥವಾ ತನ್ನ ವಾದ ದಾಖಲಿಸಿ, ಲಿಖಿತ ಹೇಳಿಕೆ ಕಳಿಸಿ ಹಾಜರಾತಿಗೆ ವಿನಾಯ್ತಿ ಕೇಳಬಹುದು.
೨. ಟೆಲಿಕಾಂ ಕಂಪನಿಯು ತನ್ನ ಪ್ರತಿನಿಧಿಯನ್ನು  ವಿಚಾರಣೆಗೆ ಹಾಜರಾಗಲು ಕಳಿಸಬಹುದು. ಕಳಿಸದಿದ್ದರೆ ಮೇಲ್ಮನವಿ ಪ್ರಾಧಿಕಾರವು ಏಕಪಕ್ಷೀಯವಾಗಿ ವಿವಾದವನ್ನು ಇತ್ಯರ್ಥ ಪಡಿಸಬಹುದು.
೩. ಅಪೀಲು ದಾಖಲಿಸಿದ  ೩ ತಿಂಗಳೊಳಗೆ ಮೇಲ್ಮನವಿ ಪ್ರಾಧಿಕಾರವು ಪ್ರಕರಣವನ್ನು ಇತ್ಯರ್ಥಗೊಳಿಸಬೇಕು.
೪. ಅಪೀಲು ಇತ್ಯರ್ಥವಾದ ೭ ದಿನಗಳಲ್ಲಿ ಉಭಯ ಪಕ್ಷಗಳಿಗೆ ತೀರ್‍ಮಾನವನ್ನು ತಿಳಿಸಬೇಕು.
೫. ದೂರಿಗೆ ಎಡೆಮಾಡಿಕೊಟ್ಟ ಟೆಲಿಕಾಂ ಕಂಪನಿಯು,  ಮೇಲ್ಮನವಿ ಪ್ರಾಧಿಕಾರವು ಕೊಟ್ಟ ತೀರ್ಪನ್ನು ೧೫ ದಿನಗಳಲ್ಲಿ ಜಾರಿಗೆ ತರಬೇಕು.
೬. ಒಂದು ಅಪೀಲನ್ನು ನಿರ್ವಹಿಸುವಾಗ ಮೇಲ್ಮನವಿ ಪ್ರಾಧಿಕಾರವು ಉಭಯತ್ರರನ್ನು ಕೂರಿಸಿ ಸಂಧಾನ ನಡೆಸಿ ಸಮಸ್ಯೆ ಬಗೆಹರಿಸಲು ಅವಕಾಶವಿದೆ.
ಅಪೀಲಿನ ಬಗ್ಗೆ ಮಾಹಿತಿ
ಟೆಲಿಕಾಂ ಕಂಪನಿಗಳು ತಮ್ಮ ವ್ಯಾಪ್ತಿಯ ಮೇಲ್ಮನವಿ ಪ್ರಾಧಿಕಾರದಡಿ ಇರುವ ಅಪೀಲುಗಳ ಸಂಖ್ಯೆ, ಇತ್ಯರ್ಥವಾದವು, ಇನ್ನೂ ವಿಚಾರಣೆ ನಡೆಯುತ್ತಿರುವುದು, ಅಪೀಲು ನಿರ್ವಹಣೆಯಲ್ಲಿ ಕಾಲಮಿತಿ ಅನುಸರಿಸಿದ ವಿವರ- ಇತ್ಯಾದಿಗಳನ್ನು ತಮ್ಮ ವೆಬ್‌ಸೈಟ್‌ನಲ್ಲಿ ಹಾಕಿ ಸಾರ್ವಜನಿಕರ ಗಮನಕ್ಕೆ ತರಬೇಕು.

ಗ್ರಾಹಕ ದೂರುಗಳನ್ನು  ಟ್ರಾಯ್  ಸಹಾ ನಿರ್ವಹಿಸುತ್ತದೆ
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ವು ಗ್ರಾಹಕರ ದೂರುಗಳನ್ನು, ಸೇವೆ ಪೂರೈಸುವ ಟೆಲಿಕಾಂ ಕಂಪನಿಗಳಿಗೆ ಇತ್ಯರ್ಥಕ್ಕಾಗಿ ಕಳುಹಿಸಬಹುದು. ಅವುಗಳ ವಿವರ ಹೀಗಿದೆ.
೧. ಟ್ರಾಯ್ ಕಾಯ್ದೆ ಅಥವಾ ಟ್ರಾಯ್ ಕೊಟ್ಟಿರುವ ಆದೇಶ, ನಿಯಮ ಅಥವಾ ನಿರ್ದೇಶನದ ಉಲ್ಲಂಘನೆ ಕುರಿತ ದೂರುಗಳನ್ನು ಕಳಿಸಬಹುದು.
೨. ಗ್ರಾಹಕರ ಸಾಮೂಹಿಕ ದೂರುಗಳು.
೩. ಸೇವೆ ಪೂರೈಸುವ ಟೆಲಿಕಾಂ ಕಂಪನಿಗಳು ಅನುಸರಿಸುತ್ತಿರುವ ಕಾರ್ಯ ವಿಧಾನ ಅಥವಾ ಪದ್ದತಿಗಳು ಗ್ರಾಹಕರ ಹಿತಾಸಕ್ತಿಗೆ ಧಕ್ಕೆ ತರುವಂತಿದ್ದರೆ ಅಂತಹ ದೂರುಗಳು.
೪. ಮೇಲಿನ ದೂರುಗಳನ್ನು ಟ್ರಾಯ್‌ನಿಂದ ಪಡೆದ ಒಂದು ತಿಂಗಳಲ್ಲಿ ಟೆಲಿಕಾಂ ಕಂಪನಿಗಳು ದೂರಿನ ಬಗ್ಗೆ ತನಿಖೆ ನಡೆಸಿ ಅವನ್ನು ಬಗೆಹರಿಸಬೇಕು.
೫. ಹಾಗೆ ಬಗೆಹರಿಸಿದ್ದನ್ನು ಗ್ರಾಹಕರಿಗೆ ಮತ್ತು ಟ್ರಾಯ್‌ಗೆ ಒಂದು ತಿಂಗಳೊಳಗೆ ತಿಳಿಸಬೇಕು.
೬. ಟ್ರಾಯ್‌ನಿಂದ ಕಳಿಸಲ್ಪಟ್ಟ ದೂರುಗಳು ಟೆಲಿಕಾಂ ಕಂಪನಿಯ ಅಧಕ್ಷತೆ, ಕಾರ್ಯವಿಧಾನದ ಲೋಪದೋಷ, ವ್ಯವಸ್ಥೆಯ ವೈಫಲ್ಯ ಮುಂತಾವುದನ್ನು ಸೂಚಿಸುವಂತಿದ್ದರೆ ಅಂತಹ ಎಲ್ಲಾ ಸಮಸ್ಯೆಗಳನ್ನು ಎರಡು ತಿಂಗಳಲ್ಲಿ ಬಗೆಹರಿಸಿಕೊಂಡು ಟ್ರಾಯ್‌ಗೆ ಮತ್ತು ದೂರಿತ್ತ ಗ್ರಾಹಕರಿಗೆ ತಿಳಿಸಬೇಕು.
ಶೆಡ್ಯೂಲ್ 
(ನಿಯಮ ೫ ನೋಡಿ)
ಕಾಲ್ ಸೆಂಟರ್‌ಗಳು ಟೆಲಿಕಾಂ ಗ್ರಾಹಕರ ದೂರು ನಿವಾರಿಸುವಾಗ ಅನುಸರಿಸಬೇಕಾದ  ಸೇವಾ ಮಾನದಂಡಗಳು ಮತ್ತು ಸಮಯ ಮಿತಿ

ಅ. ಸ್ಥಿರ ದೂರವಾಣಿ ಸೇವೆ
  ಸೇವಾ ಮಾನದಂಡ                 ಸಮಯ ಮಿತಿ
 ೧. ದೂರವಾಣಿ ಸಂಪರ್ಕ ಒದಗಿಸುವುದು  ೭ ದಿನಗಳಲ್ಲಿ (ತಾಂತ್ರಿಕ ಸಂಭವನೀಯತೆಗೆ ಒಳಪಟ್ಟು)
 ೨. ಕೆಟ್ಟಿರುವ ಫೋನ್ ರಿಪೇರಿ ೩ ದಿನಗಳಲ್ಲಿ
 ೩. ಟೆಲಿಫೋನ್ ವರ್ಗಾವಣೆ ೩ ದಿನಗಳಲ್ಲಿ
 ೪. ಟೆಲಿಫೋನ್ ಸಂಪರ್ಕ ತೆಗೆಸುವುದು ೨೪ ಗಂಟೆಗಳೊಳಗೆ
 ೫. ೪ ವಾರಗಳೊಳಗೆ ಇತ್ಯರ್ಥಗೊಳ್ಳುವ ಎಲ್ಲ ಬಿಲ್ಲಿಂಗ್ ದೂರುಗಳು
ಬಿಲ್ಲಿಂಗ್ ದೂರುಗಳ ಶೇಕಡಾವಾರು ೪ ವಾರಗಳಲ್ಲಿ ಬಗೆಹರಿಯಬೇಕು
 ೬. ದೂರವಾಣಿ ಸಂಪರ್ಕ ಕಡಿತಗೊಳಿಸಿದ ಎಲ್ಲಾ ಠೇವಣಿಗಳನ್ನು ೬೦ 
ನಂತರ ಠೇವಣಿ ವಾಪಸ್ಸಾತಿ ದಿನಗಳೊಳಗೆ ಮರಳಿಸಬೇಕು.


ಆ. ಸ್ಥಿರ, ಡಬ್ಲುಎಲ್‌ಎಲ್ ಮತ್ತು ಸೆಲ್ಯುಲಾರ್ ಮೊಬೈಲ್ ದೂರವಾಣಿ ಸೇವೆ
    ಸೇವಾ ಮಾನದಂಡ                                                   ಸಮಯ ಮಿತಿ
ಬಿಲ್ಲಿಂಗ್ ದಕ್ಷತೆ
ಅ. ೪ ವಾರಗಳೊಳಗೆ ಇತ್ಯರ್ಥಗೊಳ್ಳಬೇಕಾದ ಎಲ್ಲಾ ದೂರುಗಳು
      ಬಿಲ್ಲಿಂಗ್ ದೂರುಗಳ ಶೇಕಡಾವಾರು ೪  ವಾರಗಳಲ್ಲಿ ಬಗೆಹರಿಯಬೇಕು.
ಆ. ದೂರು ಬಗೆಹರಿದ ದಿನದಿಂದ ಗ್ರಾಹಕರಿಗೆ ಎಲ್ಲಾ ಹಣ ಪಾವತಿ ಮತ್ತು ಠೇವಣಿ ಮರುಪಾವತಿಗಳು 
    ಪಾವ್ತಿಯಾಗಬೇಕಾದ ಹಣ ಮತ್ತು ಇನ್ನಿತರ ೪ ವಾರಗಳಲ್ಲಿ ಪರಿಹಾರವಾಗಬೇಕು.
ಠೇವಣಿಗಳ ವಾಪಸ್ಸಾತಿ

ಇ. ಬ್ರಾಡ್‌ಬ್ಯಾಂಡ್ ಸೇವೆ
ಸೇವಾ ಮಾನದಂಡ                                ಸಮಯ ಮಿತಿ
೧.   ಸೇವೆ ಒದಗಿಸುವುದು ಮತ್ತು ಆಕ್ಟಿವೇಶನ್ ಸಮಯ         ೧೫ ದಿನಗಳೊಳಗೆ (ತಾಂತ್ರಿಕ ಸಂಭ್ಯಾವತೆಗೆ ಒಳಪಟ್ಟು)
೨. ರಿಪೇರಿ ಹಾಗೂ ಪುನರ್ ಸಂಪರ್ಕ                    ೩ ದಿನಗಳೊಳಗೆ
೩. ಬಿಲ್ಲಿಂಗ್ ದೂರುಗಳು  ಅ. ಬಿಲ್ಲಿಂಗ್ ತಕರಾರು ೪ ವಾರಗಳಲ್ಲಿ
                  ಆ. ಠೇವಣಿ ವಾಪಸ್ಸಾತಿ ೬೦ ದಿನಗಳೊಳಗೆ


ಬಿಎಸ್‌ಎನ್‌ಎಲ್ - ಕರ್ನಾಟಕ ಟೆಲಿಕಾಂ ಸರ್ಕಲ್
ಮೊದಲ ಹಂತ :    ಕಾಲ್‌ಸೆಂಟರ್‌ಗಳು 
ಸ್ಥಿರ ದೂರವಾಣಿ/ಬ್ರಾಡ್‌ಬ್ಯಾಂಡ್ - ೧೫೦೦ 
ಜಿಎಸ್‌ಎಂ ಮೊಬೈಲ್ - ೯೪೦೦೦೨೪೩೬೫ 
ಬ್ರಾಡ್‌ಬ್ಯಾಂಡ್/ ಇಂಟರ್‌ನೆಟ್ ಸೇವೆ - ೧೮೦೦೪೨೪೧೬೦೦ 
MPLS  ಮತ್ತಿತರ ಡಾಟಾ ಸೇವೆಗಳು - ೧೮೦೦ ೪೨೫ ೧೯೫೭ 
(ಈ ಎಲ್ಲಾ ದೂರವಾಣಿಗಳು ಉಚಿತ ಸೇವೆ) 

ಎರಡನೇ ಹಂತ :    ನೋಡಲ್ ಆಫೀಸರ್
ಸರ್ವೀಸ್ - ಏರಿಯಾ ನೋಡಲ್ ಆಫೀಸರ್ ವಿವರ      
ಕರ್ನಾಟಕ ಟೆಲಿಕಾಂ ಎ.ಪಿ.ಭಟ್ ಡಿಜಿಎಂ (ಆ)

ಸರ್ಕಲ್‌ನ ಮುಖ್ಯ ಕಛೇರಿ ಸಿಜಿಎಂಟಿ ಕಚೇರಿ ಬೆಂಗಳೂರು ೦೮೦ - ೨೫೫೯೫೫೯೯
ಫ್ಯಾಕ್ಸ -೦೮೦-೨೫೫೧೧೨೭೭
ಮೊಬೈಲ್ ಸರ್ವೀಸ್ (ಒ) ಬಿ.ಎಸ್.ಕೃಷ್ಣಮೂರ್ತಿ ಡಿಇ(ಟಿಟಿ)
ಜಿಎರಿ ಕಚೇರಿ-ಮೊಬೈಲ್ ಸೇವೆ ಬೆಂಗಳೂರು
ಫೋನ್ - ೦೮೦-೨೨೩೫೬೨೨೨
ಮೊಬೈಲ್ ಸರ್ವೀಸ್ (ಡಿ) ರವಿಕುಮಾರ್ ಡಿಜಿಎಂ(ಇನ್ಸ್‌ಟಲೇಶನ್)
ಜಿಎಂ ಕಛೇರಿ - ಮೊಬೈಲ್ ಸೇವೆ ಬೆಂಗಳೂರು
ಪೋನ್ -೦೮೦-೨೫೫೫೨೮೧೬, ಫ್ಯಾಕ್ಸ್ - ೦೮೦-೨೫೫೫೨೮೧೭

ಮೂರನೇ ಹಂತ :    ಮೇಲ್ಮನವಿ ಪ್ರಾಧಿಕಾರ  

ಎ. ಸುಬ್ರಹ್ಮಣ್ಯನ್ ಜಿಎಂ (ಆ) 
ಸಿಜಿಎಂಟಿ ಕಚೇರಿ, 
ದೂರ ಸಂಪರ್ಕ ಭವನ, ಹಲ್ಸೂರು, 
ಬೆಂಗಳೂರು - ೫೬೦೦೦೮ 
ಪೋನ್ -೦೮೦-೨೫೫೭೬೫೭೭ 
ಫ್ಯಾಕ್ಸ್  -೦೮೦-೨೫೫೬೨೬೦೨  


1 comments:

NiTiN Muttige ಹೇಳಿದರು...

ಅಬ್ಬಾ!! ಅನೇಕ ಮಾಹಿತಿ ಸಿಕ್ಕಿತು. ಇದೆಲ್ಲಾ ಗ್ರಾಹಕರಿಗೆ ತಿಳಿದಿರಲೇ ಬೇಕಾಗಿದೆ. ಬಿ.ಎಸ್.ಎನ್.ಎಲ್ ಬ್ರಾಡಬ್ಯಾಂಡ್ ಸೇವೆಯಲ್ಲಿ ನನಗೆ ಸಿಕ್ಕ ಅನುಭವೆನೆಂದರೆ ಕಾಲ್ ಸೆಂಟರ್ ಇರುವುದು ನೆಪಥ್ಯಕ್ಕೆ ಎನ್ನಬಹುದು. ಏಕೆಂದರೆ ಅಲ್ಲಿ ದೂರನ್ನು ದಾಖಲಿಸಿಕೊಂಡು ಆಯಾ ಎಕ್ಸಚೆಂಜ್ ಗೆ ಕಳಿಸುತ್ತಾರೆ.ಆದರೆ ಆ ಎಕ್ಸಚೆಂಜ್ ನವರು ನಾವು ಅಲ್ಲಿ ಹೋಗದಂತು ರಿಪೇರಿ ಮಾಡಲು ಕಣ್ಣು ಹಾಕರು...ನನ್ನ ಬ್ರಾಡಬ್ಯಾಂಡ್ ಹಾಳಾಗಿ ೧೦ ದಿನ ಆದರೂ ಸರಿ ಆಗದ ನಂತರ ಗ್ರಾಹಕರ ಸೇವಾ ಕೆಂದ್ರಕ್ಕೆ ಕರೆ ಮಾಡಿ ಮೂವತ್ತು ನಿಮಿಷ ಜಗಳ ಆಡಿ ಪಾಪ ಆ ಹುಡುಗಿ [ಗ್ರಾಹಕರ ಸೇವಾ ಕೆಂದ್ರದವಳು] ಸುಸ್ತಾಗಿದ್ದಳು!! ನಂತರ ಸ್ಥಳೀಯ ಎಕ್ಸಚೆಂಜ್ ಗೆ ನನ್ನ ಹೆಸರರಿನ ಗುಡ್ ವಿಲ್ ಉಪಯೋಗಿಸಿಕೊಂಡ ಮೇಲೆ ಅವರು ಸರಿ ಮಾಡಿದ್ದು!!!

ಖಂಡಿತಾ ನಾನು ಬುಕ್ ಅನ್ನು ತರಿಸಿಕೊಳ್ಳುವೆ. ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು.ಹೀಗೆ ಮಾಹಿತಿಗಳು ನಮ್ಮ ಕಣ್ಣನ್ನು ತೆರೆಸುತ್ತಿರಲಿ.

 
200812023996