ಮಂಗಳವಾರ, ಜೂನ್ 2, 2009

ಬುಕ್ಕಿಗಳು ಐಪಿಎಲ್ ಆಳಿದ್ದು ನಿಜವೇ?ಭಾರತೀಯ ಪ್ರೀಮಿಯರ್ ಲೀಗ್‌ನ ಎರಡನೇ ಸಂಚಿಕೆಯು ಯಶಸ್ವಿಯಾಗಿ ಮುಗಿದಿದೆ. ಭಯೋತ್ಪಾದಕರ ಕರಿನೆರಳಲ್ಲಿ ಟೂರ್ನಿ ಪಕ್ಷಾಂತರ ಮಾಡಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಿತು ಎಂಬುದೇ ಒಂದು ಲೆಕ್ಕದ ಸಫಲತೆ. ಯಶಸ್ಸಿನ ಮಾನದಂಡಗಳು ಹಲವು. ಆದಿಕ್ಕಿನಲ್ಲಿ ಗೊಂದಲಗಳಿವೆ. ಆದರೆ ಸಚ್ಛಾರಿತ್ರ್ಯದ ವಿಚಾರದಲ್ಲಿ ‘ನಡತೆ ಪ್ರಮಾಣಪತ್ರ’ವನ್ನು ಐಪಿಎಲ್‌ಗೆ ಕೊಡಲು ಹೆಚ್ಚು ತಕರಾರುಗಳಿವೆ!
ಐಪಿಎಲ್ ದ.ಆಫ್ರಿಕಾದಲ್ಲಿ ನಡೆದಿದ್ದೇ ಮ್ಯಾಚ್ ಫಿಕ್ಸಿಂಗ್ ನಿರೂಪಕರಿಗೆ ಆಟ ಆಡಲು ಅವಕಾಶ ಒದಗಿಸಿತು ಎನ್ನುವವರಿದ್ದಾರೆ. ಬೆಟ್ಟಿಂಗ್ ಮಾನ್ಯತೆ ಪಡೆದಿರುವ ಅಲ್ಲಿ ನಡೆದ ಬೆಳವಣಿಗೆಗಳು ಅಂತಹ ಅನುಮಾನಗಳನ್ನು ದಟ್ಟವಾಗಿಸಿದೆ. ಖುದ್ದು ಐಪಿಎಲ್ ಬೆಟ್ಟಿಂಗ್‌ನ್ನು ಪ್ರೋತ್ಸಾಹಿಸಿತು! ‘ಸಿಕ್ಸ್ ಅಪ್’ ಹೆಸರಿನ ಎಸ್‌ಎಂಎಸ್ ಸ್ಪರ್ಧೆಯ ಮೂಲಕ ಐಪಿಎಲ್‌ನ ಅಧಿಕೃತ ವೆಬ್‌ಸೈಟ್ ಆಟ ಆರಂಭಿಸಿತು. ಇದರಲ್ಲಿ ಮೊಬೈಲಿಗ ಮುಂದಿನ ಓವರ್‌ನ ಆರು ಎಸೆತಗಳಲ್ಲಿ ಬರುವ ರನ್‌ಗಳನ್ನು ಅಂದಾಜಿಸಿ ಎಸ್‌ಎಂಎಸ್‌ನ್ನು ಕಳುಹಿಸಬೇಕು. ಸರಿಹೊಂದಿದರೆ ಝಣ ಝಣ ದುಡ್ಡು. ಈ ದುಬಾರಿ ಎಸ್‌ಎಂಎಸ್‌ನಿಂದ ಬರುವ ಹಣದ ಅರ್ಧ ಮೊತ್ತ ಐಪಿಎಲ್‌ಗೆ. ಭಾರತದಲ್ಲಿ ಬೆಟ್ಟಿಂಗ್ ಕಾನೂನುಬಾಹಿರವಾದುದರಿಂದ ಐಪಿಎಲ್ ಚಾಣಾಕ್ಷತೆಯಿಂದ ಜೂಜುಕೋರರನ್ನು ಉತ್ತೇಜಿಸಿತು. ಕೇಂದ್ರದ ಅಂದಿನ ಕ್ರೀಡಾ ಸಚಿವ ಎಂ.ಎಸ್.ಗಿಲ್ ಈ ಕ್ರಮವನ್ನು ಖಂಡಿಸಿದ ಮೇಲೆ ಐಪಿಎಲ್ ಜೂಜು ನಿಂತಿತು. ಸದರಿ ಜೂಜಿನ ನಿರ್ವಾಹಕ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ. ಬುಕ್ಕಿಗಳ ಸಂಪರ್ಕವಿದ್ದುದು ರುಜುವಾತಾಗಿರುವ ಮಾರ್ಕ್‌ರ ಸಹೋದರ! ಇರಲಿ, ಜೂಜು ನಿಂತಿತು, ಮ್ಯಾಚ್ ಫಿಕ್ಸಿಂಗ್ ಅನುಮಾನಗಳು ಮುಂದುವರೆಯಿತು!
ಸ್ವತಃ ಐಪಿಎಲ್ ವ್ಯವಸ್ಥಾಪಕ ಲಲಿತ್ ಮೋದಿಯವರಿಗೆ ಅಂತಹ ಶಂಕೆ ಕಾಡಿದೆ. ಕೊಲ್ಕತ್ತಾ ನೈಟ್ ರೈಡರ್‍ಸ್‌ನ ಯಶಸ್ವಿ ಬ್ಯಾಟ್ಸ್‌ಮನ್ ಬ್ರಾಡ್ ಹಾಡ್ಜ್‌ರನ್ನು ಇದ್ದಕ್ಕಿದ್ದಂತೆ ಬೆಂಗಳೂರು ಎದುರಿನ ಪಂದ್ಯದಿಂದ ಕೈಬಿಟ್ಟಾಗ ಮೋದಿಯವರಿಗೇ ಸಂಶಯ ಬಂದಿತ್ತು. ಅತ್ತ ಹಾಡ್ಜ್ ಪಂದ್ಯ ವೀಕ್ಷಿಸಲು ಅತಿಥಿಗಳ ಕ್ಯಾಬಿನ್‌ನಲ್ಲಿ ಕೂತಿದ್ದು ಏಕೆ? ರೈಡರ್‍ಸ್‌ನ ಸಿಇಓ ಜಾಯ್ ಭಟ್ಟಾಚಾರ್ಯರ ಸ್ಪಷ್ಟೀಕರಣದ ನಂತರವೂ ವಾತಾವರಣ ತಿಳಿಯಾಗಿಲ್ಲ.
ಪಂಜಾಬ್ ಕಿಂಗ್ಸ್ ಇಲೆವೆನ್ ಮತ್ತು ಡಕೆನ್ ಚಾರ್ಜರ್‍ಸ್ ಪಂದ್ಯದ ಸಮಯದಲ್ಲಿ ಹಮಿದ್ ಬಾಂಜೋ ಖಾಸಿಮ್ ಪ್ರತಿಷ್ಠಿತರಿಗೆಂದು ಮೀಸಲಾದ ಆವರಣದಲ್ಲಿ ಕುಳಿತಿದ್ದುದು ಹಲವರ ಹುಬ್ಬೇರುವಂತೆ ಮಾಡಿತ್ತು. ಈ ಬಾಂಜೋ ಹಿಂದೆ ದ.ಆಫ್ರಿಕಾದ ನಾಯಕರಾಗಿದ್ದ ಹ್ಯಾನ್ಸಿ ಕ್ರೋನಿಯೇರನ್ನು ಮ್ಯಾಚ್ ಫಿಕ್ಸಿಂಗ್ ಜಾಲಕ್ಕೆ ಎಳೆದೊಯ್ದವರು. ಇನ್ನೊಬ್ಬ ಆರೋಪಿ ಆಟಗಾರ ಹರ್ಷೆಲ್ ಗಿಬ್ಸ್ ಇದೇ ಐಪಿಎಲ್‌ನಲ್ಲಿ ಆಡುತ್ತಿದ್ದುದೂ ಗಮನಾರ್ಹ. ಇವತ್ತು ಜೋಹಾನ್ಸ್‌ಬರ್ಗ್‌ನಲ್ಲಿ ಒಂದು ಸಣ್ಣ ಅಂಗಡಿ ಮಾಡಿಕೊಂಡಿದ್ದಾರಷ್ಟೇ ಎಂಬ ಅಂಶ ಜಾಂಬೋ ಪರವಾಗಿ ನಿಲ್ಲುವುದಿಲ್ಲ. ಐಪಿಎಲ್ ಇಂತಹವರಿಗೆ ಪ್ರವೇಶವನ್ನೇ ನಿರಾಕರಿಸಬೇಕಿತ್ತು.
ಆದರೆ ಐಪಿಎಲ್ ಪ್ರವೇಶ ನಿರಾಕರಿಸಿದ್ದು ಐಸಿಸಿಯ ಆಂಟಿ ಕರಪ್ಶನ್ ಮತ್ತು ಸೆಕ್ಯುರಿಟಿ ಯೂನಿಟ್ ಎಸಿಎಸ್‌ಯುಗೆ! ಕಾನೂನಿನ ಅನ್ವಯ, ಖಾಸಗಿ ಟೂರ್ನಿಯೊಂದಕ್ಕೆ ಐಸಿಸಿ ನೇರವಾಗಿ ತನ್ನ ಭ್ರಷ್ಟಾಚಾರ ವಿರೋಧಿ ಪಡೆಯನ್ನು ನೇಮಿಸುವಂತಿಲ್ಲ. ಅಂತಹ ವೇಳೆ ಟೂರ್ನಿಯ ನಿಯೋಜಕರ ಒಪ್ಪಿಗೆ ಬೇಕು. ಲಲಿತ್ ಮೋದಿ ಸ್ಪಷ್ಟವಾಗಿ ಎಸಿಎಸ್‌ಯುವನ್ನು ವಿರೋಧಿಸಿದ್ದಾರೆ. ಸ್ವಾತಂತ್ರ್ಯದ ಹರಣದ ಕಾರಣವನ್ನು ಅವರು ನೀಡಿದ್ದಾರಾದರೂ ಅವರ ನಡೆ ಚರ್ಚಾಸ್ಪದ.
ಇದಕ್ಕೆ ಇನ್ನೊಂದು ವ್ಯಾಖ್ಯಾನವೂ ಐಪಿಎಲ್ ಕಡೆಯಿಂದ ಬಂದಿದೆ. ಎಸಿಎಸ್‌ಯು ಅಧ್ಯಕ್ಷ ಸರ್ ಪೌಲ್ ಕಾಂಡೋನ್‌ರ ಪಡೆ ನಿರೀಕ್ಷಣೆಗೆ ಪಡೆಯುವ ಮೊತ್ತ ೧.೨ ಮಿಲಿಯನ್ ಡಾಲರ್. ಇದು ತುಂಬಾ ದುಬಾರಿ ಎಂಬುದು ಬಿಸಿಸಿಐನ ಕಾರ್ಯಕಾರಿ ಸಮಿತಿಯ ಚಿಂತನೆ. ಹಾಗಾಗಿ ಅದು ಹತ್ತು ಮಂದಿ ನಿವೃತ್ತ ಪೋಲೀಸ್ ಹಾಗೂ ಸೈನ್ಯಾಧಿಕಾರಿಗಳ ನೆರವಿನಿಂದ ಭ್ರಷ್ಟಾಚಾರ ತಡೆ ಪಡೆಯನ್ನು ನಿಯೋಜಿಸಿತ್ತು. ಅಷ್ಟಕ್ಕೂ ಎಸಿಎಸ್‌ಯು ಕೇಳುವ ಮೊತ್ತ ದುಬಾರಿ ಎಂಬುದೇ ಮಿಥ್ಯೆ. ಅದು ತನ್ನದೆ ಕ್ಲೋಸ್ಡ್ ಸರ್ಕ್ಯೂಟ್ ಟಿವಿ ಕ್ಯಾಮರಾಗಳನ್ನು ಎಲ್ಲೆಡೆ ಅಳವಡಿಸುತ್ತದೆ. ತನ್ನ ಕಣ್ಣಂಚಿನಲ್ಲೇ ಆಟಗಾರರು, ಕೋಚ್ ಮತ್ತು ಫ್ರಂಚೈಸಿಗಳ ಇತರರು ಚಲನವಲನ ನಡೆಸುವಂತೆ ನೋಡಿಕೊಳ್ಳುತ್ತದೆ. ಆಟಗಾರರು ಅನಾಮಿಕರನ್ನು ಸಂಪರ್ಕಿಸದಂತೆ, ಅನುಮಾನಾಸ್ಪದ ವ್ಯಕ್ತಿ, ನಡೆಗಳನ್ನು ೨೪ ಘಂಟೆ ಪರಿಶೀಲಿಸುತ್ತದೆ. ಆಟಗಾರರ ಮೇಲಂತೂ ಹದ್ದಿನ ಕಣ್ಣಿನ ಕಾವಲು ಎಂದರೂ ಸರಿಯೇ. ಇವೆಲ್ಲ ಬಾರೀ ವೆಚ್ಚವನ್ನೇ ನಿರೀಕ್ಷಿಸುತ್ತದೆ. ಪರಿಶೀಲಿಸಬೇಕಾದುದೆಂದರೆ, ಬಿಸಿಸಿಐನ ಕಳೆದ ವರ್ಷದ ಲಾಭ ೨೦೦ ಮಿಲಿಯನ್ ಡಾಲರ್. ಐಪಿಎಲ್ ಚೊಚ್ಚಲ ಆವೃತ್ತಿಯಿಂದಲೇ ಬಂದ ನಿಶ್ಚಿತ ಲಾಭ ೧೦ ಮಿಲಿಯನ್. ೧.೨ ಮಿ. ಡಾಲರ್ ಖರ್ಚು ಮಾಡಿದ್ದರೂ ನಷ್ಟದ ಮಾತೆಲ್ಲಿ?
ಭ್ರಷ್ಟತೆಯ ಸೋಂಕು ತಗುಲಿದರೆ ಮತ್ತೆ ಬಚಾಯಿಸುವುದು ಬಿಸಿಸಿಐಗೇನೇ ಕಷ್ಟ. ಈ ಅರಿವು ತಡವಾಗಿ ಆದಂತಿದೆ. ಟೂರ್ನಿ ಆರಂಭಕ್ಕೆ ಎರಡು ದಿನ ಮೊದಲು ಬಿಸಿಸಿಐ ಎಸಿಎಸ್‌ಯುನ ನೆರವು ಕೇಳಿದೆ. ಕೇವಲ ೪೮ ಘಂಟೆಗಳ ಸಮಯಾವಕಾಶದಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಪೌಲ್ ಕಾಂಡೋನ್ ಬೇಡಿಕೆಯನ್ನು ತಳ್ಳಿಹಾಕಿದ್ದಾರೆ. ಹಾಗಾಗಿ ಎಸಿಎಸ್‌ಯುನ ಸ್ಥಳೀಯ ಅಧಿಕಾರಿ ಅರ್ರಿ ಡೆ ಬೀರ್ ತಮ್ಮ ದಕ್ಷಿಣ ಆಫ್ರಿಕಾ ಘಟಕದಿಂದ ಮೇಲ್ವಿಚಾರಣೆ ನಡೆಸಿದ್ದು ವರದಿಯನ್ನು ದುಬೈನ ಐಸಿಸಿ ಕೇಂದ್ರಕ್ಕೆ, ಲಂಡನ್‌ನ ಎಸಿಎಸ್‌ಯು ಮುಖ್ಯ ಕಛೇರಿಗೆ ಕಳಿಸಿದ್ದಾರಂತೆ. ಗಟ್ಟಿ ಕೇಳಿದರೆ, ತಮ್ಮ ವ್ಯಾಪಾರಕ್ಕೆ ಧಕ್ಕೆಯಾದೀತೆಂದು ಬರಬಹುದಾದ ಮ್ಯಾಚ್ ಫಿಕ್ಸಿಂಗ್ ಆರೋಪಗಳನ್ನೆಲ್ಲ ಮೋದಿ ಬಳಗ ಸಾರಾಸಗಟಾಗಿ ತಳ್ಳಿಹಾಕದೇ ಇರದು.
ಇದೇ ಲಲಿತ್‌ರ ಮೆದುಳಿನ ಕೂಸು ಏಳೂವರೆ ನಿಮಿಷಗಳ ‘ತಂತ್ರಗಾರಿಕೆ ವಿರಾಮ’. ಮ್ಯಾಚ್ ಫಿಕ್ಸಿಂಗ್ ನಡವಳಿಕೆಗೆ ರಾಜಭೋಜನವಿದ್ದಂತೆ. ಈ ವೇಳೆ ಆಟಗಾರರು ತಂಡದ ವ್ಯವಸ್ಥಾಪಕರು, ಐಪಿಎಲ್ ನಿರ್ವಾಹಕರು, ಟಿವಿ ತಂತ್ರಜ್ಞರು, ಇನ್ನಿತರ ಎಲ್ಲ ವರ್ಗದ ಜನರಿಗೆ ತೆರೆದುಕೊಳ್ಳುವುದರಿಂದ ಏನು ಅನಾಹುತವಾಗುತ್ತದೆಂದು ಊಹಿಸುವುದೇ ಕಷ್ಟ ಎಂಬ ಅಭಿಪ್ರಾಯವಿದೆ. ಎಸಿಎಸ್‌ಯುನ ಕಾಂಡೋನ್ ಕೂಡ ಈ ತಂತ್ರವನ್ನು ವಿರೋಧಿಸಿದ್ದಾರೆ. ಅಷ್ಟೇಕೆ, ಪಂದ್ಯಾವಳಿ ಆರಂಭಕ್ಕೆ ಮುನ್ನವೇ ಓರ್ವ ಬುಕ್ಕಿ ಹೇಳುತ್ತಿದ್ದ ಮಾತು ನೆನಪಾಗುತ್ತದೆ, "ತಂಡವೊಂದು ಸಲೀಸಾಗಿ ಸಾಗುತ್ತಿರುವಾಗ ಪ್ರಮುಖ ಬ್ಯಾಟ್ಸ್‌ಮನ್ ಔಟಾದ ತಕ್ಷಣ ೧೭ ರನ್‌ಗಳ ಆಚೀಚೆಗೆ ಏಳು ವಿಕೆಟ್ ಬಿದ್ದೀತೆಂದರೆ ಆ ಪಂದ್ಯವನ್ನು ಖರೀದಿಸಲಾಗಿತ್ತು ಎಂಬುದು ಖಚಿತ" ಡೆಕ್ಕನ್ ಚಾರ್ಜರ್‍ಸ್‌ನ ವಿರುದ್ಧ ಮೊದಲ ೧೦ ಓವರ್‌ಗಳಲ್ಲಿ ವಿಕೆಟ್ ನಷ್ಟಕ್ಕೆ ೮೪ ರನ್ ಗಳಿಸಿದ್ದ ಸಚಿನ್ ಮುಂಬೈ ಮುಂದಿನ ೫೦ ರನ್ ಗಳಿಸುವಷ್ಟರಲ್ಲಿ ಆರು ವಿಕೆಟ್ ಕಳೆದುಕೊಂಡು ೧೨ ರನ್‌ನಿಂದ ಸೋತರೆ ಅನುಮಾನ, ಅನುಮಾನ!
ವಾಸ್ತವವಾಗಿ, ಟ್ವೆಂಟಿ೨೦ ಕ್ರಿಕೆಟ್ ಪಂದ್ಯ, ಆಟಗಾರರನ್ನು ಖರೀದಿಸುವ ಬುಕ್ಕಿಗಳ ಫೇವರಿಟ್. ಇಲ್ಲಿ ಒಬ್ಬ ಬೌಲರ್‌ನ ಒಂದು ಓವರ್‌ನ್ನು ೨೦-೨೫ ರನ್ ನೀಡುವಂತೆ ನಿರ್ದೇಶೀಸಿದರೆ ಫಲಿತಾಂಶ ಬದಲಾಗುತ್ತದೆ. ಬಾಂಗ್ಲಾದ ಮುರ್ತಫಾ ಮುರ್ತಜೆ ೧೯ನೇ ಓವರ್‌ನಲ್ಲಿ ೨೬ ರನ್ ಕೊಟ್ಟರೆ ಸಾಕು! ಅವತ್ತು ಹೈದರಾಬಾದ್‌ನ ಡೆಕ್ಕನ್ ಚಾರ್ಜರ್‍ಸ್ ಈ ರೀತಿ ಗೆದ್ದರೆ ಪತ್ತೆದಾರರು ಎಚ್ಚರಗೊಳ್ಳಲೇಬೇಕು. ಒಂದೊಮ್ಮೆ ಬ್ಯಾಟ್ಸ್‌ಮನ್ ಆರು ಎಸೆತಗಳಲ್ಲಿ ತಡಕಾಡಿದರೂ ಪಂದ್ಯದ ದಿಕ್ಕು ಬದಲಾದಂತೆ ಅಲ್ಲವೇ?
ಕ್ರಿಕೆಟ್ ಆಸಕ್ತರು ಈ ವರ್ಷದ ಐಪಿಎಲ್‌ನಿಂದ ಇಂತಹ ಪಂದ್ಯಗಳ ಪಟ್ಟಿ ತೆರೆದು ವಿಶ್ಲೇಷಿಸಿದರೆ ಅನಾಹುತಕಾರಿ ಚಿತ್ರಣ ಕಂಡೀತು, ಬೆಚ್ಚದಿರಿ. ಈ ಕ್ರಿಕೆಟ್ ಯಾವತ್ತೋ ಹಳಿ ತಪ್ಪಿದೆ!-ಮಾವೆಂಸ

2 comments:

ರಾಘವೇಂದ್ರ ಗಣಪತಿ ಹೇಳಿದರು...

ಮಾವೆಂಸ ಅವರೇ,
ಐಪಿಎಲ್ನಲ್ಲಿ ಮೋಸದಾಟದ ಬಗ್ಗೆ ವಿಶ್ಲೇಷಣಾತ್ಮಕವಾಗಿ ಬರೆದಿರುವುದು ಚೆನ್ನಾಗಿದೆ. ಆದರೂ, ಸಚಿನ್ ವೈಯಕ್ತಿಕವಾಗಿ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಇಂಥ ಕಳಂಕ ಹತ್ತಿರ ಸುಳಿಯಲು ಬಿಡುವವರಲ್ಲ. ಮುಂಬೈ ಇಂಡಿಯನ್ಸ್ ತಂಡ ಯಾವುದಾದರೂ ಪಂದ್ಯದಲ್ಲಿ ಅನುಮಾನಾಸ್ಪದವಾಗಿ ಸೋತಿದ್ದರೆ, ಅದು ಆಕಸ್ಮಿಕವಿರಲೇ ಬೇಕು!

ಮಾವೆಂಸ ಹೇಳಿದರು...

ನಿಜ, ದುರಂತವೇ ಅದು. ಈ ಮ್ಯಾಚ್‌ಫಿಕ್ಸಿಂಗ್ ದಿನಮಾನದಲ್ಲಿ ಪ್ರತಿ ಪಂದ್ಯ, ಒಂದೊಂದು ಅನಿರೀಕ್ಷಿತ ಘಟನೆ....... ಶಂಕೆಯಿಂದಲೇ ನೋಡುವಂತಾಗಿದೆ. ಬಹುಷಃ ಹ್ಯಾನ್ಸಿ ಕ್ರೋನಿಯೆಯಿಂದ ನಮಗಾದ ನಷ್ಟವಿದು.
ಸಚಿನ್‌ರ ಬಗ್ಗೆಯಾಗಲಿ, ಅವರ ಮುಂಬೈ ತಂಡದ ಕುರಿತಾಗಲಿ ನನ್ನದು ಯಾವುದೇ ಆರೋಪವಿಲ್ಲ. ಬುಕ್ಕಿಯೊಬ್ಬನ ಅನುಮಾನ ಹಲವರದೂ ಆಗಿರಬಹುದು ಎಂದಿದ್ದೇನಷ್ಟೇ.
ಇದೇನೆ ಇರಲಿ, ನೀವು ಮತ್ತೆ ಹೀಗಾದರೂ ನನಗೆ ಸಿಕ್ಕಿದ್ದು ಸಂತೋಷ. ಎಲ್ಲಿರುವಿರಿ?

 
200812023996