ಸೋಮವಾರ, ಜೂನ್ 22, 2009

ಚಿತ್ತಾರದ ವಿಂಬಲ್ಡನ್ - ತಂತ್ರಜ್ಞಾನದಿಂದ ಸಂಸ್ಕೃತಿಗೆ ಚ್ಯುತಿ?ಚಿರಿಪಿರಿ ಮಳೆ. ವಿಂಬಲ್ಡನ್‌ನ ಸೆಂಟರ್‌ಕೋರ್ಟ್‌ನಲ್ಲಿ ಬಣ್ಣಬಣ್ಣದ ಕೊಡೆಗಳ ಹಾರಾಟ. ಹಲವರ ಮಳೆ ಕೋಟು ಕೂಡ ಫ್ಯಾಶನ್‌ನ ಒಂದು ಅಂಗ. ಘಂಟೆಗಟ್ಟಲೆ ಸಮಯ ನೀರಿನಲ್ಲಿ ಕೊಚ್ಚಿಹೋದದ್ದು ಬೇಜಾರಾಗದಿರಲು ಪಾಪ್, ರಾಕ್ ಸಂಗೀತಗಾರರ ಮೇಳ. ಇದನ್ನೆಲ್ಲ ಸಾಂಪ್ರದಾಯಿಕ ವಿಂಬಲ್ಡನ್‌ನ ಲಕ್ಷಣಗಳು ಎಂದುಕೊಂಡವರು ಇನ್ನು ಮುಂದೆ ಅದು ಕಣ್ಮರೆಯಾದ ದುಃಖವನ್ನು ಪರಿತಪಿಸಲೇಬೇಕು. ಈ ವರ್ಷ ಅಲ್ಲಿನ ಸೆಂಟರ್ ಕೋರ್ಟ್ ಹಾಗೂ ನಂಬರ್ ಒನ್ ಕೋರ್ಟ್‌ಗೆ ಕೃತಕ ಮೇಲ್ಚಾವಣಿ ಬಂದಿದೆ. ನೀಲಿ ಗಗನದಲ್ಲಿ ಮೋಡ ಮುಸುಕಿ ಮಳೆ ಬರುವಂತಾದರೆ ಈ ಚಾವಣಿ ತಂತ್ರಜ್ಞಾನದ ಸಹಾಯದಿಂದ ಚಲಿಸಿ ಇದೇ ಕೋರ್ಟ್ ಮೇಲೆಯೇ ಕೊಡೆ ಹಿಡಿಯುತ್ತದೆ. ನೆನೆಯುವವರು ಯಾರು?
ಇಂಗ್ಲೆಂಡ್‌ನ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಪ್ರತಿಯೊಂದು ಹೆಜ್ಜೆಗೆ ಸಂಪ್ರದಾಯದ ಮೆರುಗು. ಅದನ್ನು ನೆನಪಿಸಲೇಬೇಕು. ಇತ್ತೀಚೆಗೆ ಅಲ್ಲಿ ವಿಜೇತರೂ ಸಂಪ್ರದಾಯವಾಗಿಬಿಟ್ಟಿದ್ದಾರೆ. ಕಳೆದ ಬಾರಿ ರಫೆಲ್ ನಡಾಲ್ ಗೆದ್ದುದು ಬಿಟ್ಟರೆ ಉಳಿದಂತೆ ಐದು ಬಾರಿ ರೋಜರ್ ಫೆಡರರ್. ಕಳೆದ ಒಂಬತ್ತು ವರ್ಷಗಳಲ್ಲಿ ಮಹಿಳಾ ವಿಭಾಗದ ಪ್ರಶಸ್ತಿ ಏಳು ಬಾರಿ ವಿಲಿಯಮ್ಸ್ ಸಹೋದರಿಯರಲ್ಲೇ ಹಂಚಿಕೆಯಾಗಿದೆ. ಚಾಂಪಿಯನ್‌ಗಳ ವಿಚಾರದಲ್ಲೂ ಹೊಸಹೊಸಬರನ್ನು ಉತ್ತೇಜಿಸಲು ಹುಲ್ಲುಹಾಸಿಗೆ ಚೌಕಾಶಿ!
ವಿಂಬಲ್ಡನ್‌ನಲ್ಲಿ ಗಮನ ಸೆಳೆಯುವವರು ಬಾಲ್ ಬಾಯ್ಸ್-ಗರ್ಲ್ಸ್. ಸ್ವಾರಸ್ಯವೆಂದರೆ, ಈ ಪ್ರಕ್ರಿಯೆಗೂ ಸಂಪ್ರದಾಯದ ಹಿನ್ನೆಲೆಯಿದೆ. ಫೈನಲ್ ವೇಳೆ ಅಲ್ಲಿನ ಕೆಂಟ್ ರಾಣಿ - ರಾಜರು ಹಾಜರಿರುತ್ತಾರೆ. ಅವರು ಚಾಂಪಿಯನ್‌ರಿಗೆ ಟ್ರೋಫಿಗಳನ್ನು ಪ್ರಧಾನಿಸುವ ಮೊದಲು ಸಾಲಾಗಿ ಶಿಸ್ತಿನಲ್ಲಿ ನಿಂತ ಈ ಚೆಂಡು ಹುಡುಗ ಹುಡುಗಿಯರನ್ನು ವೈಯುಕ್ತಿಕವಾಗಿ ಹಸ್ತಲಾಘವ ಕೊಟ್ಟು ಮಾತನಾಡಿಸುತ್ತಾರೆ, ಬೆನ್ನು ತಟ್ಟುತ್ತಾರೆ, ಬೆಚ್ಚಗೆ ತಬ್ಬುತ್ತಾರೆ. ಅಂತದೊಂದು ಕ್ಷಣಕ್ಕಾಗಿ ಇಂಗ್ಲೆಂಡಿಗರೇನು, ನಾವೂ ಆಶಿಸುವಂತಾಗುತ್ತದೆ. ಸಂಪ್ರದಾಯಗಳೆಲ್ಲ ಗೊಡ್ಡಲ್ಲ, ಗ್ರೇಟ್!
೧೯೪೭ರ ಸಮಯದಲ್ಲಿ ಬಾರ್ಬಡೋಸ್ ಶಾಲೆಯ ಮಕ್ಕಳನ್ನು ಚೆಂಡು ಹೆಕ್ಕಲು ನೇಮಿಸಿಕೊಳ್ಳಲಾಗುತ್ತಿತ್ತು. ೨೦೦೮ರಿಂದ ನಿಯಮದಲ್ಲಿ ಬದಲಾವಣೆಯಾಗಿದೆ. ಈಗ ಲಂಡನ್‌ನ ಸ್ಥಳೀಯ ಶಾಲೆಗಳಿಂದ ಮಕ್ಕಳನ್ನು ಆಯ್ದುಕೊಳ್ಳಲಾಗುತ್ತದೆ. ಇವರಿಗೆ ಬಿಬಿಜಿ ಎನ್ನಲಾಗುತ್ತದೆ. ಇವರೆಲ್ಲರ ಸರಾಸರಿ ವಯಸ್ಸು ೧೫. ಒಂಬತ್ತು ಅಥವಾ ಹತ್ತನೇ ತರಗತಿಯ ಮಕ್ಕಳಿಗಷ್ಟೇ ಈ ಅವಕಾಶ.
ಇಲ್ಲಿಗೆ ಆಯ್ಕೆಯಾಗುವುದೂ ಸುಲಭವಲ್ಲ. ಶಾಲೆಯ ಮುಖ್ಯೋಪಾಧ್ಯಾಯರು ತಮ್ಮ ತಮ್ಮ ಶಾಲೆಯಿಂದ ಆಯ್ದ ಮಕ್ಕಳನ್ನು ನಾಮ ನಿರ್ದೇಶನ ಮಾಡುತ್ತಾರೆ. ೨೦೦೫ರಲ್ಲಿ ಹೀಗೆ ೬೦೦ ಮಂದಿಗೆ ತರಬೇತಿ ನೀಡಲಾಗಿತ್ತು. ಈ ತರಬೇತಿಯ ವೇಳೆ ಚುರುಕುತನ, ಜಾಗೃತಿಯ ಮಟ್ಟ, ಆತ್ಮವಿಶ್ವಾಸ ಮತ್ತು ಪರಿಸ್ಥಿತಿಗೆ ಹೊಂದಿಕೊಳ್ಳುವ ಮನಸ್ಥಿತಿಗಳ ಅವಲೋಕನ ಜರುಗುತ್ತದೆ. ಇಲ್ಲಿ ಗೆದ್ದಲ್ಲಿ ದೊಡ್ಡ ಯುದ್ಧ ಗೆದ್ದಂತೆ. ೨೦೦೫ರಲ್ಲಿ ೬೦೦ರ ಪೈಕಿ ಕೇವಲ ೨೫೦ ಮಕ್ಕಳು ಮಾತ್ರ ‘ಅಂತಿಮ ಶೋ’ಗೆ ಆಯ್ಕೆಯಾಗಿದ್ದರು!
ವಿಂಬಲ್ಡನ್ ಜರುಗುವುದು ಜೂನ್ ತಿಂಗಳ ಕೊನೆಯ ವಾರದಲ್ಲಿ. ಬಿಬಿಜಿಗಳ ತರಬೇತಿ ಆರಂಭವಾಗುವುದು ಫೆಬ್ರವರಿಯಲ್ಲೇ! ಚೆಂಡು ಹುಡುಗಿಯರನ್ನು ಆಲ್ ಇಂಗ್ಲೆಂಡ್ ಕ್ಲಬ್ ೧೯೭೭ರಿಂದಷ್ಟೇ ಮಾನ್ಯ ಮಾಡಿದೆ. ಮುಂದೆ ಎಂಟು ವರ್ಷ ಕಳೆದ ನಂತರ ಅವರಿಗೆ ಸೆಂಟರ್ ಕೋರ್ಟ್‌ನಲ್ಲಿ ಕೆಲಸ ಮಾಡಲು ಅವಕಾಶವಿತ್ತಿತು. ಹುಡುಗ ಹುಡುಗಿಯರವು ಸರಿಸಮಾನ ೫೦:೫೦ ಅನುಪಾತದಲ್ಲಿ ಸ್ಥಾನ ಭರ್ತಿ. ಅವರ ಕಾರ್ಯ ವೈಖರಿಯೂ ವಿಭಿನ್ನ. ಆಟದ ವೇಳೆ ಒಂದು ಕೋರ್ಟ್‌ಗೆ ಆರು ಬಿಬಿಜಿಯರು ಬೇಕು. ಇಬ್ಬರು ನೆಟ್ ಬಳಿ. ಉಳಿದ ನಾಲ್ವರು ಬೇಸ್‌ಲೈನ್ ಪರಿಚಾಲಕರು. ಒಂದು ಘಂಟೆ ಕೆಲಸ ಮಾಡಿದರೆ ಮುಂದಿನ ಒಂದು ಘಂಟೆ ವಿಶ್ರಾಂತಿ. ೨೦೦೬ರಿಂದ ಇವರು ನೀಲಿ ಉಡುಗೆ ತೊಟ್ಟು ಮಿಂಚುತ್ತಿದ್ದಾರೆ. ಈ ಮುನ್ನ ಇವರೂ ಹುಲ್ಲಿನಂತೆ ಹಸಿರಾಗಿದ್ದರು. ದಿನಕ್ಕೆ ಎರಡು ಅವಧಿ ದುಡಿಯುವ ಇವರಿಗೆ ನಯಾಪೈಸೆಯ ಸಂಬಳವಿಲ್ಲ!
ನಿಜ, ವಿಂಬಲ್ಡನ್‌ನಲ್ಲಿ ಬಿಬಿಜಿಯಾಗಿ ಕೆಲಸ ಮಾಡುವುದನ್ನು ಗೌರವದ ಪ್ರತೀಕ ಎಂದೇ ಪರಿಗಣಿಸಲಾಗುತ್ತಿದೆ. ಅಲ್ಲಿನ ಮಕ್ಕಳು ಶಾಲೆಯನ್ನು ತೊರೆಯುವಾಗ ‘ನಡತೆ ಪತ್ರ’ ಜೊತೆಗಿರಲೇಬೇಕು. ಅದರಲ್ಲಿ ಒಳ್ಳೆಯ ಮಾತು ಬರೆಯದಿದ್ದಲ್ಲಿ ಮುಂದಿನ ಶಿಕ್ಷಣಕ್ಕೆ ಯಾವುದೇ ವಿದ್ಯಾಲಯ ಸೇರಿಸಿಕೊಳ್ಳುವುದಿಲ್ಲ. ಇಂತಹ ವೇಳೆ ವಿದ್ಯಾರ್ಥಿ ವಿಂಬಲ್ಡನ್‌ನಲ್ಲಿ ಬಿಬಿಜಿಯಾಗಿ ಕೆಲಸ ಮಾಡಿದ ಪುಟ್ಟ ಉಲ್ಲೇಖ ಇದ್ದರೆ ಸಾಕು, ಆತ ಎಲ್ಲಿ ಬೇಕಾದರೂ ಸೇರ್ಪಡೆಗೆ ಅರ್ಹ. ಹಾಗೆಂದು ಓರ್ವ ವಿದ್ಯಾರ್ಥಿಗೆ ಇಲ್ಲಿ ಹೆಚ್ಚೆಂದರೆ ಎರಡು ವರ್ಷ ಮಾತ್ರ ಪ್ರವೇಶ ಸೌಕರ್ಯ.
ಇದರಲ್ಲೂ ದಾಖಲೆಗಳನ್ನು ಹುಡುಕುವವರಿಗಾಗಿ ಕಿರು ಮಾಹಿತಿ. ಕ್ರಿಸ್ಟೋಫರ್ ರಾಬೆ ಎಂಬ ಓವರ್ಟನ್ ಶಾಲೆಯ ವಿದ್ಯಾರ್ಥಿ ಸತತ ಎರಡು ಪುರುಷರ ಫೈನಲ್‌ನಲ್ಲಿ ಬ್ಯಾಗ್ ಬಾಯ್ ಆದ ಹೆಗ್ಗಳಿಕೆ. ೨೦೦೫ರಲ್ಲಿ ಫೆಡರರರ್‌ರ ಬ್ಯಾಗ್ ಹೊತ್ತೊಯ್ದರೆ ಮರು ವರ್ಷ ನಡಾಲ್‌ರ ಲಗೇಜ್ ಹೊತ್ತಿದ್ದರು. ಇದೂ ದಾಖಲೆ!
ವಿಶ್ವದ ನಾಲ್ಕು ಗ್ರಾನ್‌ಸ್ಲಾಂಗಳಲ್ಲಿ ಫ್ರೆಂಚ್ ಹೊರತುಪಡಿಸಿ ಉಳಿದೆಲ್ಲಡೆ ಹುಲ್ಲಿನಂಕಣದಲ್ಲಿಯೇ ಸ್ಪರ್ಧೆ ನಡೆಯುತ್ತಿದ್ದ ಕಾಲವಿತ್ತು. ಈಗ ಹುಲ್ಲು ಉಳಿದಿರುವುದು ಲಂಡನ್‌ನಲ್ಲಿ ಮಾತ್ರ. ಇಲ್ಲಿ ಒಟ್ಟು ೧೩ ಪ್ರಮುಖ ಸ್ಪರ್ಧೆಗಳು ೧೪ ದಿನಗಳಲ್ಲಿ ಜರುಗುತ್ತವೆ. ಐದು ಮೇಜರ್, ತಲಾ ನಾಲ್ಕು ಜೂನಿಯರ್ ಹಾಗೂ ಆಹ್ವಾನಿತರ ಸ್ಪರ್ಧೆ ಇಲ್ಲಿ ಏರ್ಪಾಡಾಗುತ್ತದೆ. ಅದರಲ್ಲೂ ಸಿಂಗಲ್ಸ್ ವಿಭಾಗಕ್ಕೆ ಪ್ರಮುಖ ಆಕರ್ಷಣೆ.
ಅಗ್ರಕ್ರಮಾಂಕ, ಹಾಲಿ ಚಾಂಪಿಯನ್ ಪಟ್ಟ ನಡಾಲ್‌ರದಾದರೂ ರೋಜರ್ ಫೆಡರರ್ ಹಾಟ್ ಫೇವರಿಟ್. ನಡಾಲ್ ಮೊಣಕಾಲು ನೋವಿಗೊಳಗಾಗಿದ್ದು ಆಡುವುದು ಅನುಮಾನ. ಆಡಿದರೂ.... ಮೊನ್ನೆ ಒಂದು ಪ್ರದರ್ಶನ ಟೂರ್ನಿಯಲ್ಲಿ ಸೋತದ್ದಾಗಿದೆ. ೨೦೦೮ರ ಯುಎಸ್ ಓಪನ್ ಫೈನಲಿಸ್ಟ್ ಆಂಡಿ ಮರ್ರೆ ಇಂಗ್ಲೆಂಡಿಗರನ್ನು ಕುತೂಹಲಿಗಳನ್ನಾಗಿಸಿದ್ದಾರೆ. ಜೋ ವಿಲ್ಫ್ರೆಡ್ ತ್ಸೋಂಗಾ, ಜಾನ್ ಮಾರ್ಟಿನ್ ಡೆಲ್ ಪೋಬ್ರೋ ಕೂಡ ಜಾಂಕೋವಿಕ್‌ರ ಸಮೇತ ಉಪಾಂತ್ಯ ತಲುಪಬಹುದು.
ಮಹಿಳಾ ವಿಭಾಗದಲ್ಲಿ ರೋಸ್ ವಾಟರ್ ಡಿಶ್ ಪ್ರಶಸ್ತಿಗೆ ಬುಕ್ ಮೇಕರ್ ಪ್ರಕಾರ ಸೆರೆನಾ ವಿಲಿಯಮ್ಸ್ ಗೆದ್ದಾರು. ಹಾಲಿ ಚಾಂಪಿಯನ್ ವೀನಸ್‌ಗೆ ಫೇವರಿಟ್ ಕ್ರಮಾಂಕದಲ್ಲಿ ಎರಡನೇ ಸ್ಥಾನ. ಮಾರಿಯಾ ಶರಪೋವಾ ಹುಲ್ಲಿನಂಕಣದಲ್ಲಿ ಮಿಂಚುವ ಹೆಚ್ಚು ಸಾಧ್ಯತೆ. ಅಗ್ರಕ್ರಮಾಂಕದ ದಿನಾರಾ ಸಫಿನಾ, ದ್ವಿತೀಯ ಕ್ರಮಾಂಕದ ಸ್ವೆಟ್ಲಾನಾ ಕುಜ್ನೆತ್ಸೋವಾರಿಗೆ ಹುಲ್ಲು ತುಸು ಕಷ್ಟದ ಬಾಬತ್ತು. ವಿಕ್ಟೋರಿಯಾ ಅಜರೆಂಕಾ ಈ ವಿಭಾಗದ ಕಪ್ಪುಕುದುರೆ.
೧೮೭೭ರಲ್ಲಿ ಆರಂಭವಾದ ಅತ್ಯಂತ ಹಿರಿಯ ಗ್ರಾನ್‌ಸ್ಲಾಂನಲ್ಲಿ ಈ ವರ್ಷ ಮಳೆಯ ಕಾಟ ಇಲ್ಲ. ಗೊತ್ತಾಗದಿರುವುದೆಂದರೆ, ಬೆಳೆ ಹೇಗೋ?
-ಮಾವೆಂಸ

 
200812023996