ಸೋಮವಾರ, ಜೂನ್ 15, 2009

ಮಳೆ ಕ್ರಿಕೆಟ್‌ಗೆ ಡಕ್‌ವರ್ತ್ - ಲೂಯಿಸ್ ಛತ್ರಿ!ಕಳೆದ ಫೆಬ್ರವರಿಯಲ್ಲಿ ಜರುಗಿದ ಭಾರತ - ನ್ಯೂಜಿಲ್ಯಾಂಡ್ ಏಕದಿನ ಸರಣಿಯ ಒಂದು ಸಂದರ್ಭ. ಭಾರತೀಯರು ಬ್ಯಾಟಿಂಗ್ ಮಾಡುತ್ತಿದ್ದಾಗ ಪದೇ ಪದೇ ಮಳೆ. ಪಂದ್ಯಕ್ಕೆ ಅಡಚಣೆಯಾಗುತ್ತಿತ್ತು. ಪ್ರತಿ ಬಾರಿ ಆಟಗಾರರು ಹತ್ತಿಪ್ಪತ್ತು ನಿಮಿಷ ಕಾಲ ಆಟ ನಿಲ್ಲಿಸಿ ಪೆವಿಲಿಯನ್‌ಗೆ ಓಡಬೇಕಾಯಿತು. ಇದೇ ವೇಳೆ ಪಂದ್ಯದ ಅವಧಿಯಲ್ಲಿ ಕಡಿತಗೊಂಡಿದ್ದರಿಂದ ಗೆಲುವಿನ ಗುರಿಯನ್ನು ಹಲವು ಬಾರಿ ಮಾರ್ಪಡಿಸಲಾಗುತ್ತಿತ್ತು. ಹೀಗೆ ಮಳೆ ಕೈ ಕೊಡುತ್ತಲಿದ್ದುದರಿಂದ ಎಲ್ಲರೂ ನಿರಾಶರಾಗುತ್ತಿದ್ದಾಗ ಓರ್ವ ಟಿವಿ ವೀಕ್ಷಕ ವಿವರಣೆಗಾರರು ಹಾಸ್ಯ ಚಟಾಕಿ ಹಾರಿಸಿದರು, ‘ಈ ಕ್ಷಣಗಳಲ್ಲಿ ಖುಷಿಯಾಗುವುದು ಡಕ್‌ವರ್ತ್ ಹಾಗೂ ಲೂಯಿಸ್ ಮಾತ್ರ!’
ಮಳೆಯಿಂದಾಗಿ ಅಡಚಣೆಗೊಳಗಾದ ಪಂದ್ಯದ ಫಲಿತಾಂಶ ನಿರ್ಧರಿಸಲು, ಪರಿಷ್ಕೃತ ಗುರಿಯನ್ನು ನಿಗದಿಪಡಿಸಲು ಬಳಸುವ ಆಧುನಿಕ ಪದ್ಧತಿಯೇ ಡಕ್‌ವರ್ತ್ - ಲೂಯಿಸ್ ಸೂತ್ರ. ಅತ್ಯಂತ ಸಂಕೀರ್ಣ ರೂಪದ ಕ್ರಿಕೆಟ್‌ನಲ್ಲಿ ಪಿಚ್, ಬ್ಯಾಟ್ಸ್‌ಮನ್, ಬೌಲಿಂಗ್ ಕೋಟಾ, ಪವರ್ ಪ್ಲೇ, ಹವಾಮಾನಗಳೆಲ್ಲವೂ ರನ್ ಗಳಿಕೆಯನ್ನು ಪ್ರಭಾವಿಸುತ್ತವೆ. ಈ ಸ್ಥಿತಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಡಿ ಎಂಡ್ ಎಲ್ ಪದ್ಧತಿ ಹೆಚ್ಚು ಸಮಚಿತ್ತದ್ದು. ಮಳೆ ಕಾಡಿ ಸೋತ ತಂಡಕ್ಕೆ ಮಾತ್ರ ಡಿ &ಎಲ್ ವಿಲನ್!
ಫುಟ್‌ಬಾಲ್‌ನ್ನು ಮಳೆ ಬರುತ್ತಿರುವಾಗಲೂ ಆಡಬಹುದು. ಟೆನಿಸ್ ಗ್ರಾನ್‌ಸ್ಲಾಂ ವೇಳೆ ಮೇಲ್ಛಾವಣಿಯನ್ನು ಮುಚ್ಚಿ ಆಡುವ ತಾಂತ್ರಿಕ ಸೌಲಭ್ಯಗಳಿವೆ. ಕ್ರಿಕೆಟ್ ಮಾತ್ರ ಮಳೆಯೆದುರು ಅನಾಥ. ಹಿಂದೆಲ್ಲ ಅಪಕ್ವ ಮಳೆ ನಿಯಮಗಳನ್ನು ಬಳಸಲಾಗುತ್ತಿತ್ತು. ಇತಿಹಾಸದತ್ತ ನಿರುಕಿಸಿದರೆ, ಮೊತ್ತ ಮೊದಲು ತುಂಬಾ ಸರಳವಾಗಿ ರನ್ ಸರಾಸರಿಯನ್ನು ಆಧರಿಸಿ ನಿರ್ಧರಿಸಲಾಗುತ್ತಿತ್ತು. ಉದಾಹರಣೆಗೆ, ಮೊದಲು ಆಡಿದ ತಂಡ ೫೦ ಓವರ್‌ನಲ್ಲಿ ೨೫೦ ರನ್ ಗಳಿಸಿದೆಯೆಂದುಕೊಳ್ಳಿ. ಎರಡನೇ ಇನ್ನಿಂಗ್ಸ್ ಆಡುವ ವೇಳೆ ಮಳೆ ಬಂದು ೩೦ ಓವರ್ ಮಾತ್ರ ಸಾಧ್ಯವಾದರೆ, ಆ ತಂಡ ಶೇಕಡಾ ಐದರ ಸರಾಸರಿಯಲ್ಲಿ ೧೫೧ ರನ್ ಗಳಿಸಿದರೆ ಜಯ! ೧೫ ಓವರ್‌ಗೆ ೭೫, ೨೦ ಓವರ್‌ಗೆ ೧೦೦ ರನ್ ಎಂಬ ಗುರಿ ಬೆನ್ನಟ್ಟುವ ತಂಡಕ್ಕೆ ಸುಲಭ ತುತ್ತು. ಅಂದರೆ ಈ ನಿಯಮ ಪಕ್ಷಪಾತಿ, ದೋಷಗಳ ಆಗರ.
ನಂತರ ೧೯೯೨ರಲ್ಲಿ ಬಂದದ್ದು ಇನ್ನಷ್ಟು ವಿಚಿತ್ರ ಮಾದರಿ. ಈ ವ್ಯವಸ್ಥೆಯಲ್ಲಿ ೩೦ ಓವರ್‌ಗೆ ಗುರಿ ನಿಗದಿಪಡಿಸುವಾಗ ಮೊದಲು ಆಡಿದ ತಂಡ ಅತ್ಯಂತ ಕಡಿಮೆ ರನ್ ಗಳಿಸಿದ ೨೦ ಓವರ್‌ಗಳನ್ನು ಲೆಕ್ಕದಿಂದ ತೆಗೆದುಹಾಕಿಬಿಡುವುದು ಮೂಲ ನಿಯಮ! ಇದು ಹಲವು ಬಾರಿ ಎರಡನೇ ತಂಡಕ್ಕೆ ಆಘಾತಕಾರಿಯಾಗಿಬಿಡುತ್ತಿತ್ತು. ದೃಷ್ಟಾಂತ ಬೇಕೆ? ಬೌಲರ್‌ಗಳ ಸ್ವರ್ಗದಂತಿದ್ದ ಪಿಚ್‌ನಲ್ಲಿ ಮೊದಲ ತಂಡ ೫೦ ಓವರ್‌ನಲ್ಲಿ ೧೫೦ ರನ್ ಗಳಿಸಲಷ್ಟೇ ಸಾಧ್ಯವಾಯಿತು ಎಂದುಕೊಳ್ಳೋಣ. ೧೦ ಮೇಡನ್ ಹಾಗೂ ಇನ್ಹತ್ತು ಓವರ್‌ನಲ್ಲಿ ಬರೀ ಒಂದು ರನ್ ದಕ್ಕಿತ್ತು ಎಂದಾದರೆ ಎರಡನೇ ತಂಡ ೩೦ ಓವರ್‌ನಲ್ಲಿ ಗೆಲ್ಲಲು ೧೪೦ ರನ್ ದಾಟಬೇಕು!
ನೆನಪಿರಬಹುದು, ೯೨ರ ವಿಶ್ವಕಪ್‌ನ ಸೆಮಿಫೈನಲ್. ಇಂಗ್ಲೆಂಡ್‌ನ ಮೊತ್ತವನ್ನು ಹಿಂಬಾಲಿಸಿದ್ದ ದ.ಆಫ್ರಿಕಾಕ್ಕೆ ೧೩ ಎಸೆತದಲ್ಲಿ ೨೩ ರನ್ ಬೇಕಿದ್ದಾಗ ಜೋರು ಮಳೆ. ಅಂತೂ ಪಂದ್ಯ ಪುನರಾರಂಭವಾದಾಗ ಅಂದಿನ ನಿಯಮ ಪ್ರಕಾರ ಒಂದು ಎಸೆತಕ್ಕೆ ಗೆಲ್ಲಲು ೨೨ ರನ್ ಗಳಿಸಬೇಕಿತ್ತು! ೧೨ ಎಸೆತ ಕಡಿಮೆಯಾದರೂ ರನ್ ಗುರಿ ಒಂದು ರನ್ ಮಾತ್ರ ಕಡಿಮೆ. ಅದೇ ಆಗ ಡಿ ಎಲ್ ಸೂತ್ರ ಇದ್ದಿದ್ದರೆ ಆ ಒಂದು ಎಸೆತಕ್ಕೆ ಐದು ರನ್ ಬಾರಿಸಿದ್ದರೆ ಆಫ್ರಿಕಾ ಜಯಿಸುತ್ತಿತ್ತು. ಬಹುಷಃ ಇದು ಸೂಕ್ತವಾದುದಾಗುತಿತ್ತು.
ಈ ದೌರ್ಬಲ್ಯಗಳನ್ನು ಮೀರಲು ಸಮರ್ಥ ಪ್ರಯತ್ನವಾಗಿ ಬಂದಿದ್ದೇ ಡಕ್‌ವರ್ತ್ ಲೂಯಿಸ್ ಸೂತ್ರ. ಇಂಗ್ಲೆಂಡಿನ ಅಂಕಿಅಂಶ ತಜ್ಞರಾಗಿದ್ದ ಫ್ರಾಂಕ್ ಡಕ್‌ವರ್ತ್ - ಟೋನಿ ಲೂಯಿಸ್ ಜೋಡಿ ೧೯೯೬ರಲ್ಲಿ ಕಂಡುಹಿಡಿದ ಮೊದಲ ‘ಸೂತ್ರ’ ಸರಳವಾಗಿತ್ತು. ಆ ಸ್ಟಾಂಡರ್ಡ್ ಎಡಿಷನ್‌ನಲ್ಲಿ ಲೆಕ್ಕಾಚಾರಕ್ಕೆ ಒಂದು ಕ್ಯಾಲ್ಕುಲೇಟರ್ ಸಾಕಾಗಿತ್ತು. ಅವರು ತಮ್ಮ ಪಶ್ಚಿಮ ಇಂಗ್ಲೆಂಡ್ ವಿಶ್ವವಿದ್ಯಾಲಯದ ಅಂತಿಮ ವರ್ಷದ ಪ್ರಾಜೆಕ್ಟ್ ಆಗಿ ಸಲ್ಲಿಸಿದ ಈ ಪದ್ಧತಿಯಿದು! ಇದನ್ನು ೨೦೦೩ರವರೆಗೆ ಎಲ್ಲೆಡೆ ಅನುಸರಿಸಲಾಗಿತ್ತು. ಇಂದಿಗೂ ಇಂಗ್ಲೆಂಡ್‌ನ ಕ್ಲಬ್ ಲೀಗ್‌ನಲ್ಲಿ ಈ ಮಾದರಿಯನ್ನೇ ಪಾಲಿಸಲಾಗುತ್ತಿದೆ. ಇದೀಗ ಅಂತರ್ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದರ ‘ಫ್ರೊಫೆಷನಲ್ ಎಡಿಷನ್’ ಸೂತ್ರವನ್ನು ಒಪ್ಪಿಕೊಳ್ಳಲಾಗಿದೆ. ಹಾಗಾಗಿ ಕ್ರಿಕೆಟ್ ವೇಳೆ ಆಟಗಾರರಲ್ಲದೆ ಲ್ಯಾಪ್‌ಟಾಪ್, ಡಿ ಎಂಡ್ ಎಲ್ ಪ್ರೋಗ್ರಾಂ ಸಾಫ್ಟ್‌ವೇರ್‌ಗಳೂ ಬೇಕು! ಅದಕ್ಕೇ ಇರಬೇಕು, ಒಂದೊಮ್ಮೆ ಕಂಪ್ಯೂಟರ್ ಕೈಕೊಟ್ಟರೆ ಹಿಂದಿನ ೨೦೦೩ರ ಸ್ಟಾಂಡರ್ಡ್ ಪದ್ಧತಿಯನ್ನು ಬಳಸಬಹುದು ಎಂಬ ಷರಾವನ್ನು ಐಸಿಸಿ ಕಾನೂನಿನಲ್ಲಿ ಸೇರಿಸಲಾಗಿದೆ.
೨೦೦೩ರ ವ್ಯವಸ್ಥೆಯಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ೨೫೦ಕ್ಕಿಂತ ಹೆಚ್ಚು ಮೊತ್ತ ಗಳಿಸಿದಾಗ ಮಳೆ ತಾಪತ್ರಯ ಕಾಡಿದರೆ ಲೆಕ್ಕಾಚಾರ ಎಡವಟ್ಟಾಗಿಬಿಡುತ್ತಿತ್ತು. ಈ ನಿಟ್ಟಿನಲ್ಲಿ ಸರಿಪಡಿಸಲು ಬಂದಿದ್ದೇ ಫ್ರೊಫೆಷನಲ್ ಎಡಿಷನ್. ಇದಕ್ಕೆ ಸಿಓಡಿಎ ಎಂಬ ಇತ್ತೀಚಿನ ಸಾಫ್ಟ್‌ವೇರ್ ಅಗತ್ಯ. ಕಂಪ್ಯೂಟರ್ ಪ್ರೋಗ್ರಾಮಿಂಗ್ ಆಗಿರಲೇಬೇಕು. ಆದರೆ ಇಂದು ಶುಷ್ಕ ಪಿಚ್ ಕಾರಣ ಸಾಮಾನ್ಯ ಸ್ಕೋರು ೨೭೫ - ೩೫೦ ಎಂಬ ಹಂತಕ್ಕೆ ಬಂದಿರುವುದರಿಂದ ಮತ್ತು ಗರಿಷ್ಟ ಸ್ಕೋರು ದಾಖಲಾಗುವ ಟ್ವೆಂಟಿ ೨೦ಗೆ ಅಡಚಣೆಯ ನಂತರದ ಗುರಿ ನಿಗದಿಪಡಿಸಲು ಅತ್ಯಂತ ಅನುಕೂಲವಾಗಿದೆ.
ಈ ಪದ್ಧತಿಯನ್ನು ವಿವರಿಸಲು ಉದಾಹರಣೆಗಳೇ ಹೆಚ್ಚು ಸೂಕ್ತ. ಎಷ್ಟೋ ಬಾರಿ ಮೊದಲು ಆಡಿದ ತಂಡಕ್ಕಿಂತ ಕಡಿಮೆ ಓವರ್ ಆಡಬೇಕಾದರೂ ಮೊದಲಿದಕ್ಕಿಂತ ಹೆಚ್ಚಿನ ಮೊತ್ತ ಗಳಿಸುವ ಸವಾಲನ್ನು ಡಿ & ಎಲ್ ಪದ್ಧತಿ ಹೇಳುತ್ತದೆ. ಏಕೆ? ಮೊದಲ ತಂಡ ೫೦ ಓವರ್ ಆಡುವ ಮುನ್ನವೇ ಮಳೆ ಕಾಡಿ ೪೦ ಓವರ್ ಮಾತ್ರ ಆಡಿತು. ಉಳಿದ ಇನ್ನಿಂಗ್ಸ್ ತೊಳೆದುಹೋಯಿತು. ಎರಡನೇ ತಂಡಕ್ಕೆ ಖಡಕ್ಕಾಗಿ ೪೦ ಓವರ್ ಮಾತ್ರ ಆಡಲಿದೆ ಎಂಬುದು ಗೊತ್ತು. ಒಂದೊಮ್ಮೆ ಮೊದಲ ತಂಡಕ್ಕೆ ತಾವು ಆಡುವುದು ೪೦ ಓವರ್ ಮಾತ್ರ ಎಂಬುದು ಗೊತ್ತಿದ್ದಿದ್ದರೆ ಇನ್ನೂ ೬೦ -೭೦ ರನ್ ಹೆಚ್ಚು ಸೇರಿಸುವ ಬಿರುಸಿನ ಆಟ ಆಡುತ್ತಿತ್ತೇನೋ. ಇಂತಹ ಸಂದರ್ಭದಲ್ಲಿ ಮೇಲಿನ ಅಂಶವನ್ನು ಲೆಕ್ಕಿಸಿಯೇ ಡಿ ಎಂಡ್ ಎಲ್ ಸೂತ್ರ ಗೆಲ್ಲುವ ಗುರಿಯನ್ನು ನಿಗದಿಪಡಿಸುತ್ತದೆ. ಇದರಿಂದಾಗಿ ಮೊದಲ ತಂಡ ಗಳಿಸಿರುವುದಕ್ಕಿಂತ ಕನಿಷ್ಟ ೨೦ - ೨೫ ರನ್ ಹೆಚ್ಚು ಸೇರಿದ ಗುರಿ ಎದುರಿಸುವ ಸವಾಲು ಎರಡನೇ ತಂಡಕ್ಕೆ ಬಂದೀತು.
ಇನ್ನೊಂದು ಅಸಲಿ ಉದಾಹರಣೆ. ೨೦೦೬ರ ಏಕದಿನ ಸರಣಿ. ಭಾರತ ಮೊದಲು ಬ್ಯಾಟ್ ಮಾಡಿ ೪೯ನೇ ಓವರ್‌ನಲ್ಲಿ ೩೨೫ಕ್ಕೆ ಆಲ್‌ಔಟ್. ಪಾಕ್ ೪೭ ಓವರ್‌ನ ಮುಕ್ತಾಯಕ್ಕೆ ಮಂದಬೆಳಕಿನ ಕಾರಣ ಆಟ ನಿಲ್ಲಿಸಬೇಕಾಯಿತು. ಅವರ ಸ್ಕೋರು ೭ ವಿಕೆಟ್‌ಗೆ ೩೧೧. ಅಂದರೆ ಇನ್ನುಳಿದ ೧೮ ಎಸೆತದಲ್ಲಿ ೧೮ ರನ್ ಬಾರಿಸಬೇಕಾದ ಗುರಿ. ಸಾಮಾನ್ಯವಾಗಿ ಗೆಲ್ಲುವ ಸಾಧ್ಯತೆ ಹೆಚ್ಚು. ಡಿ ಎಲ್ ಪ್ರಕಾರ ೪೭ನೇ ಓವರ್‌ಗೆ ಪಾಕ್ ೩೦೪ ರನ್ ಗಳಿಸಿದ್ದರೆ ಸಾಕಿತ್ತು. ಅದಕ್ಕೆ ಸಿಕ್ಕ ಏಳು ರನ್ ಜಯ ಸಮರ್ಥನೀಯ.
೨೦೦೮. ಇಂಗ್ಲೆಂಡ್ ಭಾರತ ಪಂದ್ಯ. ಮೊದಲ ಇನ್ನಿಂಗ್ಸ್‌ಗೆ ಎರಡು ಬಾರಿ ತಡೆ. ಮೊದಲು ಆಡಿದ ಭಾರತ ೨೨ ಓವರ್‌ನಲ್ಲಿ ೪ ವಿಕೆಟ್‌ಗೆ ೧೬೬ ರನ್ ಗಳಿಸಲು ಸಾಧ್ಯವಾಯಿತು. ಡಕ್‌ವರ್ತ್ ಲೂಯಿಸ್ ಸೂತ್ರ ಇಂಗ್ಲೆಂಡ್ ಗುರಿಯನ್ನು ೨೨ ಓವರ್‌ಗೆ ೧೯೮ಕ್ಕೆ ನಿಗದಿಪಡಿಸಿತು. ತಾನು ಆಡುವ ಓವರ್‌ಗಳ ಬಗ್ಗೆ ಗೊಂದಲವಿದ್ದ ಭಾರತಕ್ಕೆ ನ್ಯಾಯ ಸಿಕ್ಕಿದ್ದು ಡಿಎಲ್‌ನಿಂದ! ಅದು ಪಂದ್ಯವನ್ನು ೧೯ ರನ್‌ನಿಂದ ಗೆದ್ದದ್ದು ಬೇರೆಯದೇ ಕತೆ.
ಈ ಹಿಂದಿನ ಡಕ್‌ವರ್ತ್ ಲೂಯಿಸ್ ಪದ್ಧತಿಗೆ ಜಿ೫೦ ಹಾಗೂ ಸಂಪನ್ಮೂಲ ಸಂಗ್ರಹಗಳು ಲೆಕ್ಕಕ್ಕೆ ಬರುತ್ತಿತ್ತು. ಜಿ೫೦ ಎಂದರೆ ಒಂದು ರಾಷ್ಟ್ರದಲ್ಲಿ ಸಾಮಾನ್ಯವಾಗಿ ದಾಖಲಾಗುವ ಮೊತ್ತವನ್ನು ಮೂಲಾಧಾರವಾಗಿ ಬಳಸಿಕೊಳ್ಳುವುದು. ಅದರ ಆಧಾರದಲ್ಲಿ ಉಳಿದ ಗಣಿತ ಮಾಡಲಾಗುತ್ತದೆ. ಅದರ ಪ್ರಕಾರ ೨೩೫ ರನ್ ಭಾರತದ ಜಿ೫೦ ಆಗಿದ್ದು ಮೊದಲ ತಂಡದ ಮೊತ್ತ ೨೫೦ ರನ್ ಆದರೂ ನಿಗದಿ ಪಡಿಸುವ ಗುರಿ ೨೩೫ ಹೊಡೆದಾಗಲೂ, ೨೫೦ ಚಚ್ಚಿದಾಗಲೂ ಸರಿಸುಮಾರು ಒಂದೇ. ನಿಖರವಾಗಿ ಹೇಳುವುದಾದರೆ, ಅದು ೨ - ೩ ರನ್‌ಗಿಂತ ಹೆಚ್ಚು ವ್ಯತ್ಯಾಸವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೊಸ ಪದ್ಧತಿಯಲ್ಲಿ ಜಿ೫೦ಯನ್ನು ಅಳವಡಿಸಲಾಗಿಲ್ಲ.
ಹೊಸ ಫ್ರೊಫೆಷನಲ್ ತಂತ್ರ ಕೆಲಸ ಮಾಡುವ ವಿಧಾನವನ್ನು ವಿಶ್ಲೇಷಿಸುವುದು ಕಷ್ಟ. ಆದರೆ ಒಂದು ಪಾರ್ಶ್ವ ನೋಟವಷ್ಟನ್ನು ಒದಗಿಸಬಹುದು. ಇದರಲ್ಲಿ ಎರಡು ಸಂಪನ್ಮೂಲಗಳಿಗೆ ಮಹತ್ವದ ಸ್ಥಾನ. ಆಡಲು ಉಳಿದಿರುವ ಓವರ್ ಸಂಖ್ಯೆ ಹಾಗೂ ಕೈಯಲ್ಲಿರುವ ವಿಕೆಟ್‌ಗಳೇ ಈ ಚಿಂತನೆಗೆ ಆಧಾರ.
ಕೆಲವೊಮ್ಮೆ ಎರಡನೇ ಬ್ಯಾಟಿಂಗ್ ನಡೆಸುವ ತಂಡವೂ ‘ರನ್’ ಆಧಾರದಲ್ಲಿ ಗೆಲ್ಲುವ ವೈಚಿತ್ರ್ಯ ಡಕ್‌ವರ್ತ್ ಲೂಯಿಸ್ ಸೂತ್ರದಲ್ಲಿದೆ. ಇಂತಹ ವೇಳೆ ನಿಶ್ಚಿತ ಓವರ್ ಆಡಿದ್ದರಷ್ಟೇ ಎರಡನೇ ತಂಡದೊಂದಿಗೆ ಮೊದಲ ತಂಡದ ಆ ಓವರ್‌ನ ಮೊತ್ತಕ್ಕೆ ಹೋಲಿಸಲಾಗುತ್ತದೆ. ಇಲ್ಲಿ ವಿಶೇಷವೆಂದರೆ, ಆ ಹಂತದಲ್ಲಿ ಮೊದಲ ತಂಡದ ಸ್ಕೋರನ್ನು ಡಿ ಎಂಡ್ ಎಲ್ ಸೂತ್ರದ ಪ್ರಕಾರ ಲೆಕ್ಕಿಸಬೇಕಾಗುತ್ತದೆ! ಆ ಮೊತ್ತವನ್ನು ಎರಡನೇ ತಂಡ ಆ ವೇಳೆಗೆ ದಾಟಿದ್ದರೆ ಅವರಿಗೆ ರನ್ ಲೆಕ್ಕದಲ್ಲಿ ವಿಜಯ ಲಭ್ಯವಾಗುತ್ತದೆ. ಇದಕ್ಕೆ ಏಕದಿನ ಕ್ರಿಕೆಟ್‌ನಲ್ಲಿ ಉಭಯ ತಂಡಗಳು ಕನಿಷ್ಟ ೧೫ ಓವರ್ ಆಡಿರಬೇಕು ಮತ್ತು ಟ್ವೆಂಟಿಯಲ್ಲಿ ೫ ಓವರ್ ಆಟವಾದರೂ ಆಗಿರಬೇಕು ಎಂಬ ಷರತ್ತಿದೆ. ಈ ತರದ ಪ್ರಕರಣದಲ್ಲಿ ಮೊದಲ ತಂಡ ಕಳೆದುಕೊಳ್ಳುವ ವಿಕೆಟ್ ಕೂಡ ಫಲಿತಾಂಶವನ್ನು ಪ್ರಭಾವಿಸುತ್ತದೆ.
ಇಂದಿನ ಪಿಂಚ್ ಹಿಟ್ಟರ್‌ಗಳ ಅಬ್ಬರದಲ್ಲಿ ಬ್ಯಾಟ್ಸ್‌ಮನ್‌ಗಳನ್ನು ‘ದರ್ಜೆ’ಯ ಮಾನದಂಡದಲ್ಲಿ, ಬ್ಯಾಟಿಂಗ್ ಕ್ರಮಾಂಕದ ಅನುಸಾರ ಅಳೆಯಲಾಗುವುದಿಲ್ಲ. ಒಂದಂತೂ ನಿಜ, ಯಾವುದೇ ಮಳೆ ಸೂತ್ರ ಎಲ್ಲರನ್ನು ಸಮಾಧಾನಪಡಿಸಲಾಗದ್ದು. ಡಕ್‌ವರ್ತ್ ಲೂಯಿಸ್ ವ್ಯವಸ್ಥೆಯಲ್ಲಿ ೨೫ - ೩೦ ಓವರ್ ಎರಡನೇ ಇನ್ನಿಂಗ್ಸ್ ನಡೆದಲ್ಲಿ ನ್ಯಾಯಯುತ ಎನ್ನಿಸುತ್ತದೆ. ಅದೇ ಇದ್ದಕ್ಕಿದ್ದಂತೆ ಮಳೆಯ ಕಾಟಕ್ಕೊಳಗಾಗಿ ನಂತರದಲ್ಲಿ ನಾಲ್ಕೆಂಟು ಓವರ್ ಮಾತ್ರ ಆಡಬೇಕಾದಲ್ಲಿ ನಗೆಪಾಟಲಿಗೊಳಗಾದದ್ದೂ ಇದೆ!
ಹಾಗೆಂದು ಕೆಲವು ಪ್ರಕರಣಗಳಲ್ಲಿ ತಾನು ಅಸಹಾಯಕನೆಂದು ಸ್ವತಃ ಡಿ & ಎಲ್ ಪದ್ಧತಿ ಹೇಳಿಕೊಂಡಿದೆ. ನೀವೇ ನೋಡಿ, ೫೦ ಓವರ್ ಪಂದ್ಯ. ಡಿ ಎಲ್ ಅಳವಡಿಕೆಗೆ ೧೦ ಓವರ್ ಸಾಕು ಎಂಬ ನಿಯಮವಿತ್ತು ಎಂದುಕೊಳ್ಳಿ. ಮೊದಲ ತಂಡ ಪಿಂಚ್ ಹಿಟ್ಟರ್‌ಗಳನ್ನೇ ಮೈದಾನಕ್ಕಿಳಿಸಿ ೧೦೦ ರನ್‌ನ್ನು ಯಾವುದೇ ವಿಕೆಟ್ ನಷ್ಟವಿಲ್ಲದೆ ಗಳಿಸಿದೆ. ನಂತರ ಬೇರಾವುದೇ ಆಟ ಸಾಧ್ಯವಾಗದೆ ಎರಡನೇ ತಂಡಕ್ಕೆ ೧೦ ಓವರ್ ಮಾತ್ರ ಆಡಲು ಅವಕಾಶವಾಗುತ್ತದೆ. ಆಗ ಡಿ ಎಲ್ ಸ್ಟಾಂಡರ್ಡ್ ಪದ್ಧತಿ ಅನ್ವಯ ಎರಡನೇ ತಂಡ ಇಷ್ಟೇ ಓವರ್‌ನಲ್ಲಿ ಗೆಲ್ಲಲು ೧೫೧ ರನ್ ಗಳಿಸಬೇಕು. ನ್ಯಾಯವೇ?
ಇನ್ನೊಂದು ಘಟನೆ. ಮೊದಲು ಬ್ಯಾಟಿಂಗ್ ಮಾಡಿದ ಪಂಗಡ ೫೦ ಓವರ್‌ನಲ್ಲಿ ೩೫೦ ರನ್ ಗಳಿಸಿದೆ. ರನ್ ಛೇಸ್ ಆರಂಭಿಸಿದ ಪಂಗಡ ೧೦ ಓವರ್‌ಗೆ ವಿಕೆಟ್ ನಷ್ಟವಿಲ್ಲದೆ ೪೦ ರನ್ ಗಳಿಸಿದೆ. ನಂತರದ ಆಟ ಹವಾಮಾನದ ವೈಪರೀತ್ಯಕ್ಕೆ ತುತ್ತಾಯಿತು ಎಂದಿಟ್ಟುಕೊಂಡರೆ ಫಲಿತಾಂಶ ಡಿ ಎಲ್ ಸೂತ್ರದ ಪ್ರಕಾರ ಎರಡನೇ ತಂಡ ಮೂರು ರನ್‌ನಿಂದ ಗೆದ್ದಿದೆ!
ಕ್ರಿಕೆಟ್‌ನಂತ ಕ್ಲೀಷೆಯ ಆಟದಲ್ಲಿ ಕೆಲವು ಅಸಹಜ ಗುರಿ ನಿಗದಿ ಆಗುವುದಿದೆ ಎಂದು ಡಕ್‌ವರ್ತ್ ಲೂಯಿಸ್ ಒಪ್ಪಿಕೊಳ್ಳುತ್ತಾರೆ. ೧೦ ಓವರ್ ಬಿಡಿ, ೨೦ ಓವರ್ ಆಟವಷ್ಟೇ ಆದಲ್ಲೂ ಇಂತಹ ಕೆಲವು ಘಟಿಸುತ್ತವೆ. ಆದರೆ ಈಗಿನ ಫ್ರೊಫೆಶನಲ್ ಸೂತ್ರ ಈ ಅಸಹಜತೆಗಳಿಗೆ ಸಾಕಷ್ಟು ಬ್ರೇಕ್ ಹಾಕಿದೆ.
ಕೆಲವರಲ್ಲಿ ಇನ್ನಷ್ಟು ಸಂಶಯಗಳಿರಬಹುದು. ಪವರ್ ಪ್ಲೇಗಳು, ಅದರಲ್ಲೂ ಈಗಿನ ಬ್ಯಾಟ್ಸ್‌ಮನ್ ಪವರ್ ಪ್ಲೇ ಆಯ್ಕೆಯಿರುವಾಗ ಈ ಪದ್ಧತಿ ಬೇಸ್ತು ಬೀಳುವುದಿಲ್ಲವೇ? ಹಿಂದಿನ ಪಂದ್ಯಗಳ ಸುದೀರ್ಘ ಅಧ್ಯಯನವು ಬ್ಯಾಟ್ಸ್‌ಮನ್ ಪವರ್ ಪ್ಲೇಯಿಂದ ರನ್ ಸರಾಸರಿಯಲ್ಲಿ ಅಗಾಧ ವ್ಯತ್ಯಾಸವೇನೂ ಕಾಣದ್ದನ್ನು ದೃಢಪಡಿಸಿದೆ. ಆದ್ದರಿಂದ ಡಿ ಎಲ್‌ನಲ್ಲಿ ಅದನ್ನು ಪ್ರಭಾವಿಸುವ ಅಂಶವಾಗಿ ಪರಿಗಣಿಸಿಲ್ಲ. ಆ ಲೆಕ್ಕದಲ್ಲಿ, ಈಗಿನ ೩೪ ಓವರ್ ನಂತರದ ಹೊಸ ಚೆಂಡು ತೆಗೆದುಕೊಳ್ಳುವ ನಿಯಮವೂ ಗಮನಿಸಬೇಕಾದುದಂತದೇ.
ಒಂದು ಮಾತನ್ನು ಒಪ್ಪಿಕೊಳ್ಳಲೇಬೇಕು. ಮಳೆ ಆಡುವ ವಾತಾವರಣಕ್ಕೆ ಅಸಹಜ. ಹಾಗೆಂದೇ ಪ್ರಕೃತಿಯ ಕೃತ್ಯಗಳನ್ನು ನುಂಗಲೇಬೇಕೆಂಬ ಅನಿವಾರ್ಯ. ಈ ತರ್ಕ ಡಕ್‌ವರ್ತ್ ಲೂಯಿಸ್ ಪದ್ಧತಿಗೂ ಲಾಗೂವಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಅಡಚಣೆಗೊಳಗಾದ ಪಂದ್ಯದಲ್ಲಿ ಗುರಿಯನ್ನು, ಫಲಿತಾಂಶವನ್ನು ನಿರ್ಧರಿಸಲು ಇದು ಕೈಯಲ್ಲಿರುವ ಒಳ್ಳೆಯ ಆಯ್ಕೆ. ಇದೂ ಒಂತರ ಅಂಪೈರ್‌ರ ತೋರುಬೆರಳಿದ್ದಂತೆ. ಒಪ್ಪಿಕೊಂಡು ಸಮಾಧಾನ ಪಟ್ಟುಕೊಳ್ಳಲೇಬೇಕು!
ಈ ಸೂತ್ರವನ್ನು ಅರ್ಥೈಸಿಕೊಳ್ಳಲು ಕ್ರಿಕೆಟ್‌ನ ಉನ್ನತ ಸ್ಥಾನದವರೇ ಎಡವುತ್ತಿರುವುದು ಕಂಡುಬರುತ್ತದೆ. ಒಮ್ಮೆ ವಿಶ್ವಕಪ್‌ನಲ್ಲೇ ದಕ್ಷಿಣ ಆಫ್ರಿಕಾ ನಾಯಕ ಶಾನ್ ಪೊಲಾಕ್ ತಪ್ಪು ಮಾಹಿತಿ ಕೊಟ್ಟು ಪರಾಭವದ ಕಹಿ ಉಂಡಿದ್ದರು. ಅಷ್ಟೇಕೆ, ಮೊನ್ನೆ ಮೊನ್ನೆ ಮಾರ್ಚ್ ೨೦ರಂದು ಇಂಗ್ಲೆಂಡ್ ವೆಸ್ಟ್ ಇಂಡೀಸ್ ಪಂದ್ಯದಲ್ಲಿ ವಿಂಡೀಸ್ ಛೇಸ್ ಮಾಡುತ್ತಿರುವಾಗ ಅದರ ಕೋಚ್ ಜಾನ್ ಡೈಸನ್ ಪಿಗ್ಗಿ ಬಿದ್ದರು. ಆ ವೇಳೆಗೆ ಕವಿಯುತ್ತಿದ್ದ ಕತ್ತಲನ್ನು ನೋಡಿ, ಆ ವೇಳೆಗೆ ತಮ್ಮ ತಂಡವೇ ಡಿಎಲ್ ಸೂತ್ರದ ಪ್ರಕಾರ ಒಂದು ರನ್‌ನಿಂದ ಜಯಿಸಿದೆಯೆಂದು ಲೆಕ್ಕಿಸಿ ಬ್ಯಾಡ್‌ಲೈಟ್‌ಗೆ ಅಪೀಲು ಮಾಡಲು ತಿಳಿಸಿದರು. ಆ ಓವರ್‌ನ ಅಂತ್ಯಕ್ಕೆ ಆ ಮನವಿಗೆ ಮನ್ನಣೆಯೂ ಸಿಕ್ಕಿತು. ಪಂದ್ಯದ ರೆಫ್ರಿ ಜಾವಗಲ್ ಶ್ರೀನಾಥ್ ಇಂಗ್ಲೆಂಡ್ ವಿಜಯಿಯೆಂದು ಘೋಷಿಸಬೇಕೆ? ಆಗಿದ್ದಿಷ್ಟೇ, ವಿಂಡೀಸ್‌ರು ಕೊನೆಯ ಎಸೆತದಲ್ಲಿ ಒಂದು ವಿಕೆಟ್ ಕಳೆದುಕೊಂಡಿದ್ದರು. ಹಾಗಾಗಿ ಇಂಗ್ಲೆಂಡ್ ಎರಡು ರನ್‌ನಿಂದ ಗೆದ್ದಿತ್ತು!
ಕೊನೆ ಮಾತು - ಇದೀಗ ಇಂಗ್ಲೆಂಡ್‌ನಲ್ಲಿ ಟ್ವೆಂಟಿ ೨೦ ವಿಶ್ವಕಪ್ ನಡೆಯುತ್ತಿದೆ. ಅಲ್ಲಿನ ಬ್ಯಾಟ್ಸ್‌ಮನ್‌ಗಳಂತೆ ಹವಾಮಾನವೂ ಚಂಚಲ. ಈಗಾಗಲೇ ಮಳೆ ಹೊಂಚುಹಾಕಿದೆ. ಅಲ್ಲಿನ ಡಕ್‌ವರ್ತ್ ಹಾಗೂ ಲೂಯಿಸ್ ಜೋಡಿ ಕ್ರೀಡಾಂಗಣಕ್ಕೇ ಬಂದು ತಮ್ಮ ನಿಯಮ ಜಾರಿಯಾಗುವುದನ್ನು ಖುಷಿಯಿಂದ ನಿರೀಕ್ಷಿಸುತ್ತಿರಬಹುದೇ?!

-ಮಾವೆಂಸ

4 comments:

ರಾಘವೇಂದ್ರ ಗಣಪತಿ ಹೇಳಿದರು...

ಮಾವೆಂಸ ಅವರೇ
ಮೊನ್ನೆ ವಿಜಯ ಕನರ್ಾಟಕದಲ್ಲಿ ನಿಮ್ಮ ಡಕ್ವಥರ್್-ಲೂಯಿಸ್ ಲೇಖನ ಓದಿದ್ದೆ. ಸೋಮವಾರ ರಾತ್ರಿ ವೆಸ್ಟ್ ಇಂಡೀಸ್ 8.2 ಓವರ್ಗಳಲ್ಲಿ 82 ರನ್ ಬಾರಿಸಿ ಗೆದ್ದಾಗ ನಿಮ್ಮ ಲೇಖನ ನೆನಪಾಯಿತು. ಇಂದು ಬ್ಲಾಗ್ನಲ್ಲಿ ಮತ್ತೆ ಆ ಲೇಖನ ನೋಡಿ ಖುಷಿಯಾಯಿತು. ಈ ಕ್ಲಿಷ್ಟ ನಿಯಮದ ರಹಸ್ಯ, ಸ್ವಾರಸ್ಯಗಳನ್ನು ವಿವರವಾಗಿ, ಸರಳವಾಗಿ ವಿವರಿಸಿದ್ದೀರಿ.

ಮಾವೆಂಸ ಹೇಳಿದರು...

* ‘ರಾಗ’ರವರಿಗೆ,
ನಿಜಕ್ಕೂ ಓರ್ವ ಕ್ರೀಡಾ ವಿಭಾಗದ ತಜ್ಞ, ಬರಹಗಾರ, ಸಂಪಾದಕ ಈ ರೀತಿ ಪ್ರತಿಕ್ರಿಯಿಸಿದಾಗ ಖುಷಿಯಾಗುತ್ತದೆ. ಅಂತಹ ಅಮೂಲ್ಯ ಕ್ಷಣ ಒದಗಿಸಿದ ನಿಮಗೆ ಹೃತ್ಪೂರ್ವಕ ಧನ್ಯವಾದ. ಸ್ವೀಕರಿಸಿ....

ಜಿ.ಎಸ್.ಬಿ. ಅಗ್ನಿಹೋತ್ರಿ ಹೇಳಿದರು...

ದಕ್ವರ್ಥ್ ಪದ್ಧತಿಗೆ ಪರ-ವಿರೋಧ ಎರಡೂ ರೀತಿಯ ಅಭಿಪ್ರಾಯವಿದೆ. ನನ್ನ ಪ್ರಕಾರ ದಕ್ವರ್ಥ್ ಕ್ರಿಕೆಟ್ ಗೆ ವರದಾನ.

ಮಾವೆಂಸ ಹೇಳಿದರು...

* ಜಿ.ಎಸ್.ಬಿ.ಅಗ್ನಿಹೋತ್ರಿ
ನಿಜ, ನಾನೂ ಕೂಡ ಈ ಪದ್ಧತಿಯನ್ನೇ ಬೆಂಬಲಿಸುತ್ತೇನೆ. ಆ ಅಭಿಪ್ರಾಯ ನನ್ನ ಲೇಖನದಲ್ಲೂ ವ್ಯಕ್ತವಾಗುತ್ತದೆ.
ಪ್ರತಿಕ್ರಿಯಿಸಿದ್ದಕ್ಕೆ ವಂದನೆ.

 
200812023996