ಭಾನುವಾರ, ಮೇ 17, 2009

ಕೇರಳದ ವೈಶಿಷ್ಟ್ಯ:ಗ್ರಾಮಪಂಚಾಯ್ತಿಗೂ ಒಂಬುಡ್ಸ್‌ಮನ್......
ಭ್ರಷ್ಟಾಚಾರ ತಳಮಟ್ಟದವರೆಗೂ ಮುಟ್ಟಿದೆ. ಬಡ ನಿರ್ಗತಿಕರಿಗೆ ಮನೆ ಕಟ್ಟಲು ಕೊಡುವ ೨೦ ಸಾವಿರ ರೂ.ಗಳಲ್ಲೂ ೫೦೦, ಸಾವಿರ ರೂಪಾಯಿ ಕಿತ್ತುಕೊಳ್ಳುವ ಪಂಚಾಯ್ತಿ ಕಾರ್ಯದರ್ಶಿಗಳಿದ್ದಾರೆ, ಜನಪ್ರತಿನಿಧಿಗಳಿದ್ದಾರೆ. ಊರಲ್ಲಿ ಇಲ್ಲದ ಕೆರೆಯ ಹೂಳು ತೆಗೆಯುತ್ತಾರೆ. ಲೆಕ್ಕದಲ್ಲಿ ರಸ್ತೆ ರಿಪೇರಿ ಆಗಿರುತ್ತದೆ! ಹಾಗಾಗಿಯೇ ಒಂದು ಪಂಚಾಯ್ತಿ ಚುನಾವಣೆಯಲ್ಲಿ ಅಭ್ಯರ್ಥಿಗಳು ಹಲವು ಲಕ್ಷ ರೂಪಾಯಿ ಖರ್ಚು ಮಾಡುವುದು ಸಾಮಾನ್ಯವಾಗಿದೆ. ಒಂದೆಡೆ ಈ ಅವ್ಯವಹಾರಗಳನ್ನು ತಡೆಯಲು ಸರಳ ಕಾನೂನು ಅಸ್ತ್ರಗಳಿಲ್ಲ. ಲೋಕಾಯುಕ್ತಕ್ಕೆ ಅಥವಾ ಸಾಂಪ್ರದಾಯಿಕ ನ್ಯಾಯಾಲಯಗಳಿಗೇ ಹೋಗಬೇಕು. ಸಮಯ, ಖರ್ಚು ಲೆಕ್ಕದಲ್ಲಿ ದುಬಾರಿಯೇ ಸರಿ. ಇದು ಕರ್ನಾಟಕದ ವ್ಯಥೆ. ಪಕ್ಕದ ಕೇರಳದಲ್ಲಿ ಹಾಗಿಲ್ಲ. ಅಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ವಿರುದ್ಧದ ದೂರು ನಿವಾರಣೆಗೆ ಪಂಚಾಯತ್ ಒಂಬುಡ್ಸ್‌ಮನ್ ಇದೆ.
ಪ್ರಸ್ತುತ ಹಲವು ಕ್ಷೇತ್ರಗಳಲ್ಲಿ ಒಂಬುಡ್ಸ್‌ಮನ್ ಜನಪ್ರಿಯ. ಬ್ಯಾಂಕಿಂಗ್, ವಿಮೆ ಒಂಬುಡ್ಸ್‌ಮನ್‌ಗಳು ಪಡೆದಿರುವ ನ್ಯಾಯ ತೀರ್ಮಾನದ ‘ಪವರ್’ಗೆ ಬ್ಯಾಂಕ್, ಇನ್ಸೂರೆನ್ಸ್ ಕಂಪನಿಗಳು ಬೆಚ್ಚಿಬೀಳಲೇಬೇಕಿದೆ. ಒಂಬುಡ್ಸ್‌ಮನ್ ತೀರ್ಪಿಗೆ ಸದರಿ ಸಂಸ್ಥೆಗಳು ತಲೆಬಾಗಲೇಬೇಕು. ಮೇನ್ಮನವಿ ಸಲ್ಲಿಸುವುದಕ್ಕೂ ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಕೇರಳದ ಪಂಚಾಯತ್ ಒಂಬುಡ್ಸ್‌ಮನ್ ಸ್ವಾಗತಾರ್ಹ ವ್ಯವಸ್ಥೆ.
ಅಲ್ಲಿನ ಸರ್ಕಾರ ಒಂಬುಡ್ಸ್‌ಮನ್ ನಿಯಮಗಳನ್ನು ರಚಿಸಿದ್ದು ೨೦೦೦ದ ಜನವರಿಯಲ್ಲಿ. ಮುಂದಿನ ಐದೇ ತಿಂಗಳಲ್ಲಿ ಏಕ ನ್ಯಾಯಾಧೀಶರ ನೇತೃತ್ವದ ಒಂಬುಡ್ಸ್‌ಮನ್ ವ್ಯವಸ್ಥೆ ಜಾರಿಗೆ ಬಂದಾಗಿತ್ತು. ಸ್ಥಳೀಯ ಪಂಚಾಯತ್ ವ್ಯವಸ್ಥೆಗಳು ಮತ್ತು ಅಲ್ಲಿನ ಅಧಿಕಾರಿಗಳು, ಉದ್ಯೋಗಿಗಳು ನಡೆಸುವ ಭ್ರಷ್ಟಾಚಾರ, ಅಧಿಕಾರ ದುರುಪಯೋಗಗಳ ಕುರಿತಂತೆ ವಿಚಾರಣೆ ನಡೆಸಿ ತೀರ್ಪು ನೀಡುವುದು ಈ ಒಂಬುಡ್ಸ್‌ಮನ್ ಜವಾಬ್ದಾರಿ. ಇದರ ವ್ಯಾಪ್ತಿಗೆ ಪಂಚಾಯತ್ ರಾಜ್ ಪ್ರತಿನಿಧಿಗಳು, ಅಧ್ಯಕ್ಷರು ಕೂಡ ಒಳಪಡುತ್ತಾರೆ. ಇಂತಹ ಅದ್ಭುತ ಅವಕಾಶವನ್ನು ೧೯೯೪ರ ಕೇರಳ ಪಂಚಾಯತ್ ರಾಜ್ ಕಾಯ್ದೆಯ ಕಲಂ ೧೩ರಲ್ಲಿಯೇ ನೀಡಲಾಗಿದೆ. ಅಷ್ಟೇ ಅಲ್ಲ, ಅಲ್ಲಿನ ಪುರಸಭೆಗಳೂ ಈ ಒಂಬುಡ್ಸ್‌ಮನ್‌ನ ಕಣ್ಗಾವಲಿಗೆ ಒಳಪಡುತ್ತವೆ.
ಒಂದು ಅಂದಾಜಿನ ಪ್ರಕಾರ, ರಾಷ್ಟ್ರದ ಇನ್ನಾವುದೇ ರಾಜ್ಯದಲ್ಲಿ ಇಂತಹ ಪಂಚಾಯತ್ ರಾಜ್ ಒಂಬುಡ್ಸ್‌ಮನ್ ಇಲ್ಲ. ಒಂಬುಡ್ಸ್‌ಮನ್ ಮುಖ್ಯ ಕಛೇರಿ ರಾಜ್ಯದ ರಾಜಧಾನಿಯಲ್ಲಿ ಇದೆಯಾದರೂ ಒಂಬುಡ್ಸ್‌ಮನ್ ಯಾವುದೇ ಸ್ಥಳಕ್ಕೆ ಭೇಟಿ ಕೊಟ್ಟು ವಿಚಾರಣೆ ನಡೆಸುವ ಪ್ರಾವಿಧಾನವಿದೆ. ೨೦೦೧ರಲ್ಲಿ ರಾಜ್ಯದ ೪೯ ಕಡೆ ಕ್ಯಾಂಪ್ ಮಾಡಿ ೨೨೫೪ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಿದೆ. ಪ್ರಸ್ತುತ ಕೇರಳದ ಈ ಒಂಬುಡ್ಸ್‌ಮನ್ ಕಲಾಪ ತಿರುವನಂತಪುರಂ, ಎರ್ನಾಕುಲಂ, ಕೊಚಿಕೋಡಿಯಲ್ಲಿ ನಿರಂತರವಾಗಿ ಜರುಗುತ್ತಿದೆ. ಅಲ್ಲದೆ ಕನ್ನೂರು, ಪಾಲಕ್ಕಾಡ್ ಮುಂತಾದೆಡೆಯೂ ಅಪರೂಪಕ್ಕೊಮ್ಮೆಯೆಂಬಂತೆ ವಿಚಾರಣೆ ನಡೆಯುತ್ತಿದೆ.
೨೦೦೦ದಲ್ಲಿ ಈ ವ್ಯವಸ್ಥೆ ಆರಂಭವಾದಾಗ ಏಳು ಜನರ ಸಮಿತಿಯನ್ನು ಓರ್ವ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನಿರ್ವಹಿಸುವ ನಿಯಮವಿತ್ತು. ಆದರೆ ನಂತರದ ರಾಜ್ಯಸರ್ಕಾರ ೨೦೦೧ರಲ್ಲಿ ತಿದ್ದುಪಡಿ ಮಾಡಿ ಏಕವ್ಯಕ್ತಿಯ ಒಂಬುಡ್ಸ್‌ಮನ್ ಪದ್ಧತಿಯನ್ನು ಜಾರಿಗೊಳಿಸಿತು. ಆ ವರ್ಷಗಳಲ್ಲಿ ಜಸ್ಟೀಸ್ ಟಿ.ಕೆ.ಚಂದ್ರಶೇಖರ್ ದಾಸ್, ಜಸ್ಟೀಸ್ ಕೆ.ಪಿ.ರಾಧಾಕೃಷ್ಣ ಮೆನನ್, ಜಸ್ಟೀಸ್ ಸಿ.ಎ.ಮಹ್ಮದ್ ಒಂಬುಡ್ಸ್‌ಮನ್ ಆಗಿ ಕೆಲಸ ಮಾಡಿದರು. ೨೦೦೮ರಿಂದ ಜವಾಬ್ದಾರಿ ವಹಿಸಿಕೊಂಡಿರುವ ಜಸ್ಟೀಸ್ ಎಂ.ಆರ್.ಹರಿಹರನ್ ನಾಯರ್ ಮೂರು ವರ್ಷದ ಅವಧಿಗೆ ಅಂದರೆ ೨೦೧೧ರವರೆಗೆ ಕಾರ್ಯ ನಿರ್ವಹಿಸಲಿದ್ದಾರೆ.
ಒಂಬುಡ್ಸ್‌ಮನ್‌ಗೆ ದೂರು ಸಲ್ಲಿಸುವವರು ಲಿಖಿತ ದೂರು ದಾಖಲಿಸಬೇಕು. ಕೇವಲ ೧೦ ರುಪಾಯಿಗಳ ಕೋರ್ಟ್ ಶುಲ್ಕ ಕಟ್ಟಿದರೆ ಆಯಿತು. ವಿಶೇಷ ಸಂದರ್ಭಗಳಲ್ಲಿ ಮಾತ್ರ, ಅದೂ ನ್ಯಾಯಾಧೀಶರ ಒಪ್ಪಿಗೆ ಪಡೆದರಷ್ಟೇ ವಕೀಲರ ನೆರವು ಪಡೆದುಕೊಳ್ಳಬಹುದು. ಹೀಗೆ ನೇರವಾಗಿ ದೂರುದಾರರೇ ವಿಚಾರಣೆಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಪ್ರಕರಣಗಳು ಶೀಘ್ರವಾಗಿ ಇತ್ಯರ್ಥವಾಗುತ್ತಿದೆ. ಪ್ರತಿ ಲಿಖಿತ ದೂರಿನ ಜೊತೆಗೆ ದೂರುದಾರ ಫಾರಂ ಎ ಯನ್ನು ಸಲ್ಲಿಸಬೇಕು. ಹೆಸರಿಸಲಾದ ಆರೋಪಿಗಳ ಸಂಖ್ಯೆಯಷ್ಟೇ ದೂರಿನ ಫಾರಂ ಎ ಪ್ರತಿಯನ್ನು ಇಡಬೇಕಾಗುತ್ತದೆ. ನಾಗರಿಕರು ಖುದ್ದಾಗಿ ಅಥವಾ ಅಂಚೆ, ಫ್ಯಾಕ್ಸ್ ಮೂಲಕವೂ ತಮ್ಮ ದೂರು ಪ್ರಕರಣವನ್ನು ದಾಖಲಿಸಬಹುದು.
ಕೇರಳದಲ್ಲಿ ದೊಡ್ಡ ಸಂಖ್ಯೆಯಲ್ಲಿಯೇ ಒಂಬುಡ್ಸ್‌ಮನ್‌ಗೆ ದೂರುಗಳು ಬರುತ್ತಿವೆ. ೨೦೦೩-೦೪ರ ಒಂದು ಅಂಕಿಅಂಶದ ಪ್ರಕಾರ, ೨೩೨ ಪ್ರಕರಣಗಳನ್ನು ಸ್ವೀಕರಿಸಿದ ದಿನವೇ ತೀರ್ಮಾನಿಸಲಾಗಿದೆ! ಜೊತೆಗೆ ಉಳಿದ ೯೨೧ ದೂರುಗಳು ಇತ್ಯರ್ಥಗೊಂಡ ಪಟ್ಟಿಯಲ್ಲಿವೆ. ಈ ೧೧೫೩ ಪರಿಹಾರ ಕಂಡ ಪ್ರಕರಣಗಳಲ್ಲಿ ೮೬೦ ದೂರು ಅದೇ ವರ್ಷ ದಾಖಲಾದವು. ಖುದ್ದು ಒಂಬುಡ್ಸ್‌ಮನ್ ೨೩ ಪ್ರಕರಣಗಳನ್ನು ಹೆಚ್ಚಿನ ತನಿಖೆಗೆ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ವಿರೋಧಿ ಬ್ಯೂರೋಗೆ ಸೂಚಿಸಿತು. ಕಾನೂನಿನ ಅನ್ವಯವೇ ಪಂಚಾಯತ್ ಒಂಬುಡ್ಸ್‌ಮನ್ ಸಾಕ್ಷಿ, ದಾಖಲೆಗಳ ಸಾಮಾನ್ಯ ನ್ಯಾಯಾಲಯದ ವಿಧಿವಿಧಾನಗಳಿಗೆ ವ್ಯತಿರಿಕ್ತವಾಗಿ ಒಂಬುಡ್ಸ್‌ಮನ್‌ರಿಗೆ ಮನವರಿಕೆ ಆಗಬೇಕಾದ ತತ್ವವನ್ನು ಆಧರಿಸಿರುತ್ತದೆ. ಹಾಗಾಗಿಯೇ ಇಂದು ಅಲ್ಲಿನ ಒಂಬುಡ್ಸ್‌ಮನ್ ದಿನವೊಂದಕ್ಕೆ ಇತ್ಯರ್ಥಪಡಿಸುವ ಸರಾಸರಿ ಕೇಸ್‌ಗಳ ಸಂಖ್ಯೆ ಮೂರಕ್ಕೂ ಹೆಚ್ಚು!
ಸಾರ್ವಜನಿಕ ಹಿತಾಸಕ್ತಿಗಳನ್ನು ಕಾಪಾಡುವುದರಲ್ಲೂ ಒಂಬುಡ್ಸ್‌ಮನ್ ಪ್ರಜ್ಞಾವಂತಿಕೆ ಮೆರೆದಿದೆ. ಇತ್ತೀಚಿನ ಒಂದು ಪ್ರಕರಣದ ವಿಚಾರಣೆ ನಡೆಸಿದ ಹರಿಹರನ್ ನಾಯರ್ ಪ್ಲಾಸ್ಟಿಕ್ ತ್ರಾಜ್ಯಗಳ ವಿಲೇವಾರಿ ಕುರಿತಂತೆ ದೊಡ್ಡ ಆಂದೋಲನದ ಆದೇಶವಿತ್ತಿದ್ದಾರೆ. ಅಲ್ಲಿನ ಕೊಚ್ಚಿಯಲ್ಲಿ ತ್ರಾಜ್ಯ ನಿರ್ವಹಣೆ ಕೆಟ್ಟದಾಗಿದೆ. ಅದಕ್ಕಾಗಿ ಭೂಮಿಯ ಅಗತ್ಯವಿದ್ದು ಒಂಬುಡ್ಸ್‌ಮನ್ ಸಮೀಪದ ಬ್ರಹ್ಮಪುರಂನಲ್ಲಿ ತ್ರಾಜ್ಯ ಘಟಕವನ್ನು ರೂಪಿಸಲು ಆದೇಶಿಸಿದೆ. ಕೇರಳದಲ್ಲಿ ಕಚ್ಚಾ ಪ್ಲಾಸ್ಟಿಕ್ ಕೊರತೆಯ ಕಾರಣ ನೆರೆ ರಾಜ್ಯಗಳಿಂದ ಕಚ್ಚಾ ಪದಾರ್ಥ ಮತ್ತು ಪ್ಲಾಸ್ಟಿಕ್ ತ್ರಾಜ್ಯವನ್ನು ಕೈಗಾರಿಕೆಗಳು ದುಬಾರಿ ಬೆಲೆ ಕೊಟ್ಟು ಖರೀದಿಸುವುದನ್ನು ಜಸ್ಟೀಸ್ ನಾಯರ್ ಗಮನಿಸಿದ್ದಾರೆ. ಅಲ್ಲಿನ ಗೃಹಿಣಿಯರು ಹಾಗೂ ನಾಗರಿಕರು ಜಾಗೃತರಾದರೆ ಸ್ವಯಂ ಕಚ್ಚಾ ಪ್ಲಾಸ್ಟಿಕ್ ಒದಗಿಸಬಹುದು ಮತ್ತು ಪ್ಲಾಸ್ಟಿಕ್ ತ್ರಾಜ್ಯ ಸಮಸ್ಯೆಯನ್ನು ಒಂದು ಮಟ್ಟಿಗೆ ಬಗೆಹರಿಸಬಹುದು ಎಂಬುದು ನಾಯರ್ ಅನಿಸಿಕೆ. ಈ ಹಿನ್ನೆಲೆಯಲ್ಲಿ ಅವರು ಎಲ್ಲ ಸ್ಥಳೀಯ ಆಡಳಿತಗಳು ಪ್ಲಾಸ್ಟಿಕ್ ತ್ರಾಜ್ಯ ಸಂಗ್ರಹ ಹಾಗೂ ವಿಲೇವಾರಿಯನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಕುರಿತು ವಿವರವಾದ ಆದೇಶವನ್ನು ೨೦೦೮ರಲ್ಲಿ ಹೊರಡಿಸಿದರು.
ಅಕ್ಷರತೆಯ ಸಾಧನೆಯನ್ನು ಬೆನ್ನಿಗಿಟ್ಟುಕೊಂಡ ಕೇರಳದಲ್ಲೂ ಈ ಆದೇಶವನ್ನು ಸರ್ಕಾರ ಮೊದಲು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ನಾಯರ್ ಸ್ಥಳೀಯ ಸರ್ಕಾರ (ಎಲ್‌ಎಸ್‌ಜಿ) ವಿಭಾಗದ ಮುಖ್ಯ ಕಾರ್ಯದರ್ಶಿಗಳಿಗೆ ಸ್ಪಷ್ಟ ನಿರ್ದೇಶನವಿತ್ತಿದ್ದಾರೆ. ಈ ಘಟನೆ ಪಂಚಾಯತ್ ಒಂಬುಡ್ಸ್‌ಮನ್ ವ್ಯವಸ್ಥೆ ಕೇವಲ ವೈಯುಕ್ತಿಕ ಪ್ರಕರಣಗಳಲ್ಲದೆ ಸಮುದಾಯದ ಹಿತಕ್ಕೆ ಬೇಕಾದ ತೀರ್ಮಾನಗಳನ್ನೂ ಕೈಗೊಳ್ಳಬಹುದು ಎಂಬುದಕ್ಕೆ ಸಾಕ್ಷಿ. ಅಷ್ಟೇಕೆ, ಪತ್ರಿಕಾ ವರದಿ ಟಿವಿ ಸುದ್ದಿಗಳನ್ನು ಆಧರಿಸಿ ಸ್ವಯಂ ವಿವೇಚನೆಯಿಂದ ಪ್ರಕರಣಗಳನ್ನು ಕೈಗೆತ್ತಿಕೊಳ್ಳಬಹುದಾದ ಅಧಿಕಾರ ಒಂಬುಡ್ಸ್‌ಮನ್‌ರಿಗಿದೆ.
ಅಲ್ಲಿನ ಪಂಚಾಯತ್ ಒಂಬುಡ್ಸ್‌ಮನ್‌ನ ಹಲವು ತೀರ್ಪುಗಳಿಗೆ ಚರಿತ್ರಾರ್ಹ ಮಹತ್ವವಿದೆ. ಗ್ರಾಮಸಭೆಗಳು ತಮ್ಮ ಹಿಂದಿನ ತೀರ್ಮಾನಗಳನ್ನು ಕಾನೂನುಬಾಹಿರ ಅಥವಾ ಅಸಮರ್ಪಕ ಎಂದು ಪರಿಗಣಿಸಿ ಬದಲಿಸುವ ಅವಕಾಶ ನೀಡುವ ಆದೇಶವನ್ನು ಒಂಬುಡ್ಸ್‌ಮನ್ ೨೦೦೦ದಲ್ಲಿ ಒದಗಿಸಿಕೊಟ್ಟಿತು. ಕೇರಳದ ಮುನ್ಸಿಪಾಲಿಟೀಸ್ ಆಕ್ಟ್ ಆಂಡ್ ರೂಲ್ಸ್ ಅನ್ವಯ, ಕಟ್ಟಡ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದ ೩೦ ದಿನಗಳೊಳಗೆ ಯಾವುದೇ ನಿರ್ಧಾರವನ್ನು ಅರ್ಜಿದಾರನಿಗೆ ತಿಳಿಸದಿದ್ದಲ್ಲಿ ಅದನ್ನು ಕಲ್ಪಿತ ಒಪ್ಪಿಗೆ ಎಂದೇ ಪರಿಗಣಿಸಬಹುದು ಎಂಬ ಅಂಶವನ್ನು ಎತ್ತಿಹಿಡಿದದ್ದು ಇದೇ ಒಂಬುಡ್ಸ್‌ಮನ್.
ಬಡಜನರಿಗಾಗಿ ಕೇರಳ ಸರ್ಕಾರ ಮನೆ ಕಟ್ಟಲು ಯೋಜಿಸಿದ್ದು ಥನಲ್ ಕಾರ್ಯಕ್ರಮ. ಇದರ ಫಲಾನುಭವಿಗಳು ಸೂಚಿತ ಅಳತೆ ಮೀರಿ ಮತ್ತು ಹೆಚ್ಚುವರಿ ಸೌಲಭ್ಯವಿಟ್ಟು ಕಟ್ಟಿದ್ದು ಪಂಚಾಯತ್ ಒಂಬುಡ್ಸ್‌ಮನ್ ಎದುರು ದೂರು ದಾಖಲಾಗಿತ್ತು. ಧೀಶರು ಇಂತಹ ಮಂದಿಯನ್ನು ಬಡವರು ಎಂದು ಪರಿಗಣಿಸುವುದು ಸರಿಯಲ್ಲ ಎಂದೇ ತೀರ್ಮಾನಿಸಿ ಅವರಿಗೆ ಮಂಜೂರಾದ ಮೊತ್ತವನ್ನು ಮರಳಿ ಪಡೆಯಲು ಆದೇಶಿಸಿದ್ದು ಗಮನಿಸಬೇಕಾದದ್ದು.
ಕೇರಳದ ಪಂಚಾಯತ್ ಒಂಬುಡ್ಸ್‌ಮನ್ ಕೂಡ ರಾಜಕಾರಣಿಗಳ ಅವಕೃಪೆಗೆ ಒಳಗಾದಂತಿದೆ. ಹಾಗಾಗಿಯೇ ಹಲವು ತಿದ್ದುಪಡಿಗಳು ನಿರಂತರವಾಗಿ ತರಲಾಗುತ್ತಿದೆ. ಜಾರಿಗೆ ಬಂದ ಒಂದೇ ವರ್ಷದಲ್ಲಿ ೩೬ಕ್ಕೂ ಹೆಚ್ಚು ತಿದ್ದುಪಡಿಗಳು ಎಂದರೆ? ವಾಸ್ತವವಾಗಿ ಈ ಪಂಚಾಯತ್ ಒಂಬುಡ್ಸ್‌ಮನ್ ಮಾದರಿಯ ಮೂಲ ಇಂಗ್ಲೆಂಡ್‌ನ ಸ್ಥಳೀಯ ಸಂಸ್ಥೆ ಒಂಬುಡ್ಸ್‌ಮನ್ ಆಧರಿಸಿದ್ದು. ಅಲ್ಲಿಲ್ಲದ ಶಿಕ್ಷೆ, ದಂಡದ ಪ್ರಾವಿಧಾನಗಳನ್ನು ಸೇರಿಸಿದ್ದು ಕೇರಳದ ಹೆಗ್ಗಳಿಕೆ. ನಿಜಕ್ಕೂ ಈ ಮಾದರಿಯನ್ನು ಕೇಂದ್ರ ಸರ್ಕಾರ ಗಮನಿಸಬೇಕು ಮತ್ತು ಎಲ್ಲ ರಾಜ್ಯಗಳು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಬೇಕು. ಆಗಲಾದರೂ ಭ್ರಷ್ಟಾಚಾರ, ಅನೈತಿಕತೆಯಲ್ಲಿ ಮುಳುಗಿಹೋಗಿರುವ ಸ್ಥಳೀಯ ವ್ಯವಸ್ಥೆಗಳು ಹೊಸ ಚೈತನ್ಯ ಪಡೆದಾವು.

-ಮಾವೆಂಸ

3 comments:

PARAANJAPE K.N. ಹೇಳಿದರು...

ವಿ.ಕ.ದಲ್ಲಿ ಓದಿದ್ದೆ. ಮಾಹಿತಿಯುಕ್ತವಾಗಿದೆ. ಇದು ಕರ್ನಾಟಕದಲ್ಲೂ ಅನುಷ್ಟಾನಗೊ೦ಡರೆ ಚೆನ್ನಿತ್ತು

shivu.k ಹೇಳಿದರು...

ಸರ್,

ಇದು ತುಂಬಾ ಉಪಯುಕ್ತ ಬರಹ....ನಮ್ಮಲ್ಲೂ ಇದು ಜಾರಿಗೆ ಬಂದರೆ ತುಂಬಾ ಚೆನ್ನಾಗಿರುತ್ತದೆ....

ಮಾವೆಂಸ ಹೇಳಿದರು...

*ಪರಾಂಜಪೆ ಹಾಗೂ ಶಿವು,
ಪ್ರತಿಕ್ರಿಯಿಸಿದ್ದಕ್ಕೆ ಹಾಗೂ ಮೆಚ್ಚಿದ್ದಕ್ಕೆ ಸಲಾಂ. ನಿಜ, ನಮ್ಮಲ್ಲೂ ಜಾರಿಗೆ ಬರಬೇಕು. ನಾವು ನೀವೆಲ್ಲ ಆ ಕುರಿತು ಧ್ವನಿ ಎತ್ತಬೇಕು. ಇವತ್ತಲ್ಲ ನಾಳೆ ಜಾರಿಗೆ ಬಂದೀತು.......

 
200812023996