ಗುರುವಾರ, ಮೇ 21, 2009

ಫ್ರೆಂಚ್ ಓಪನ್ 2009: ಶರಪೋವಾ ಬರುತ್ತಿದ್ದಾಳೆ!
ಇತ್ತೀಚೆಗೆ ಗ್ರಾನ್‌ಸ್ಲಾಂ ಟೆನಿಸ್ ಪೂರ್ವಸಮೀಕ್ಷೆಗಳು ಏಕತಾನತೆಯಿಂದ ಕೂಡಿರುತ್ತವೆ. ಅಕ್ಷರಶಃ ಇದು ಕನ್ನಡ ಚಿತ್ರಗಳ ಕಥೆ, ನಟನೆಗಳ ಬದಲು ಮಚ್ಚು ಲಾಂಗುಗಳ ಪಾತ್ರವಿದ್ದಂತೆ. ಒಬ್ಬ ಕ್ರೀಡಾ ಬರಹಗಾರ ಅದೇನೇ ಮಾಡಿದರೂ ರಫೆಲ್ ನಡಾಲ್ - ರೋಜರ್ ಫೆಡರರ್ ಎಂಬ ಪಾತ್ರಗಳನ್ನು ಅಲಕ್ಷಿಸಲು ಸಾಧ್ಯವೇ ಇಲ್ಲ. ಎಲ್ಲಾ ವಿಶ್ಲೇಷಣೆ ಇವರಿಬ್ಬರ ಸುತ್ತಲೇ ಗಿರಕಿ ಹೊಡೆಯುತ್ತದೆ!
ಆದರೆ ಫೆಡರರ್ ಈ ವರ್ಷದ ಫ್ರೆಂಚ್ ಓಪನ್ ಗೆಲ್ಲುವ ಫೇವರಿಟ್! ಈಗಾಗಲೇ ಒಂದು ವೆಬ್‌ಸೈಟ್ ಇಂತಹ ನಿರೀಕ್ಷೆಯನ್ನು ಮಾಡಿದೆಯಾದರೂ ಓದಿದವರು ನಕ್ಕು ಹಗುರಾಗುವ ಸಂಭವವೇ ಹೆಚ್ಚು. ಪೀಟ್ ಸಾಂಪ್ರಾಸ್‌ರ ಸಾರ್ವಕಾಲಿಕ ಸಿಂಗಲ್ಸ್ ಗ್ರಾನ್‌ಸ್ಲಾಂಗೆ ಒಂದೇ ಒಂದು ಮೆಟ್ಟಿಲು ಹತ್ತಬೇಕಿರುವ ಫೆಡ್ ಫ್ರೆಂಚ್ ಓಪನ್ ಗೆದ್ದರೆ ಹತ್ತು ಹಲವು ಪ್ರಶ್ನೆಗಳಿಗೆ ಒಮ್ಮೆಲೇ ಉತ್ತರ ಕೊಟ್ಟಂತೆ. ಅವರ ಫಾರಂ ಕೂಡ ತೀರ ಕಳಪೆಯಾಗಿಲ್ಲ. ೨೦೦೯ರಲ್ಲಿ ಅವರ ಸಾಧನೆ ನೆನಪಿರಲಿ, ಫೆಡ್ ನಡಾಲ್‌ರನ್ನು ಕ್ಲೇ ಕೋರ್ಟ್‌ನಲ್ಲಿಯೇ ಮಣಿಸಿದ ದೃಷ್ಟಾಂತವಿದೆ!
ನಡಾಲ್‌ರ ಗುಣಗಾನ ಇಂದಿನ ಅನಿವಾರ್ಯ. ಈಗಾಗಲೆ ನಾಲ್ಕು ಸತತ ಫ್ರೆಂಚ್ ಗೆದ್ದಿರುವ ನಡಾಲ್ ಅದಾಗಲೇ ೧೫ ಎಟಿಪಿ ಟೂರ್ ಮಾಸ್ಟರ್‍ಸ್ ಪ್ರಶಸ್ತಿ ಗೆದ್ದಿದ್ದಾರೆ. ಈ ಎಟಿಪಿ ಮಾಸ್ಟರ್‍ಸ್ ಹೆಚ್ಚು ಕಡಿಮೆ ಗ್ರಾನ್‌ಸ್ಲಾಂಗಳ ಎಲ್ಲ ಎದುರಾಳಿಗಳನ್ನೇ ಹೊಂದಿರುತ್ತದೆ. ಮೊನ್ನೆ ರೋಮ್‌ನಲ್ಲೂ ಕೈ ಮೇಲಾದದ್ದು ರಫಾದ್ದೇ. ಇದರ ಮಧ್ಯೆ ಫ್ರೆಂಚ್‌ನ ರೊಲ್ಯಾಂಡ್ ಗ್ಯಾರಸ್‌ನ ಕೆಂಪು ಮಣ್ಣು ನಡಾಲ್‌ರ ತವರುಮನೆ!
ಸುಮ್ಮನೆ ರಫೆಲ್‌ರ ಕ್ಯಾರಿಯರ್‌ನಲ್ಲಿ ಇಣುಕಿದರೆ ಕ್ಲೇ ಕೋರ್ಟ್‌ನಲ್ಲಿ ೧೭೩ ಸಿಂಗಲ್ಸ್ ಗೆದ್ದುದು ಕಾಣುತ್ತದೆ. ಸೋತದ್ದು ೧೪ ಬಾರಿ ಮಾತ್ರ. ಇದನ್ನೇ ೨೦೦೫ರ ನಂತರ ಎಂದು ವಿಂಗಡಿಸುವುದಾದರೆ, ರಫೆಲ್ ಆಡಿದ ೧೪೯ರಲ್ಲಿ ೧೪೫ ಕ್ಲೇ ಪಂದ್ಯ ಗೆದ್ದಿದ್ದಾರೆ. ಅಷ್ಟೇಕೆ, ಒಟ್ಟಾರೆ ಕ್ಲೇ ಕೋರ್ಟ್ ಫೈನಲ್‌ಗಳಲ್ಲಿ ರಫಾ ಪರಾಭವಗೊಂಡಿದ್ದು ಒಮ್ಮೆ, ವಿಜೇತರಾಗಿದ್ದು ೨೫ ಬಾರಿ!
ಪರಿಸ್ಥಿತಿ ಹೀಗಿರುವಾಗ ಉಳಿದ ಆಟಗಾರರು ರಫೆಲ್‌ರ ಅನಾರೋಗ್ಯವನ್ನು ಆಶಿಸಿ ತಪಸ್ಸು ಮಾಡಬೇಕಾದೀತು. ಸ್ವಾರಸ್ಯವೆಂದರೆ ಕೇವಲ ಒಂದು ವರ್ಷದ ಆಚೆಗೆ, ೨೦೦೭ರಲ್ಲಿ ರೋಜರ್ ಫೆಡರರ್ ಕುರಿತಂತೆ ಇದೇ ಮಾತುಗಳು ಅನುರಣಿಸುತ್ತಿದ್ದವು. ಅವರು ಫ್ರೆಂಚ್ ಗ್ರಾನ್‌ಸ್ಲಾಂ ಬಿಟ್ಟರೆ ಉಳಿದೆಡೆಗಳಲ್ಲಿ ಅಜೇಯರಾಗಿದ್ದರು. ಆಗ ಫೆಡ್ ಸೋಲಿಸುವ ಟಿಪ್ಸ್‌ಗಳು ಅವರನ್ನು ಸೋಲಿಸಲಾಗದ ಅಸಹಾಯಕತೆಯನ್ನು ಪ್ರತಿಬಿಂಬಿಸುವ ಹಾಸ್ಯಗಳಾಗಿದ್ದವು. ಇಂದು ಅವನ್ನೆಲ್ಲ ನಡಾಲ್‌ರಿಗೆ ಅನ್ವಯಿಸಬೇಕಿದೆ. ದುರಂತ ನೋಡಿ, ೨೦೦೮ರ ಆಸ್ಟ್ರೇಲಿಯನ್ ಓಪನ್ ವೇಳೆಗೆ ಪೂರ್ತಿ ಫಿಟ್‌ನೆಸ್ ಇಲ್ಲದ ಫೆಡರರ್ ಸೋತುಹೋದರು. ನಡಾಲ್‌ರಿಗೆ ಚಕ್ರಾಧಿಪತ್ಯ ಸ್ಥಾಪಿಸಲು ಕಾರಣವಾಯಿತು. ಇತಿಹಾಸ ಮರುಕಳಿಸುವುದೇ?
ಮೇ ೨೪ರಿಂದ ಜೂನ್ ೭ರವರೆಗೆ ಈ ಬಾರಿಯ ಕ್ಲೇ ಚಾಂಪಿಯನ್‌ಶಿಪ್ ಜರುಗಲಿದೆ. ಇದು ಅದರ ೭೯ನೇ ಸಂಚಿಕೆ. ಕಳೆದ ದಶಕದಲ್ಲಿ ಫ್ರೆಂಚ್ ಓಪನ್ ಮಾತ್ರ ಹೊಸ ಟೆನಿಸ್ ಪ್ರತಿಭೆಗಳಿಗೆ ಚೊಚ್ಚಲ ಗ್ರಾನ್‌ಸ್ಲಾಂ ಗಳಿಸಿಕೊಟ್ಟದ್ದು ನೆನಪಾದರೆ ಡೇವಿಡ್ ಫೆರರ್, ಫರ್ನಾಂಡೋ ವೆರ್ಡಾಸ್ಕೋ, ನಿಕೊಲಾಯ್ ಡೆವಿಡೆಂಕೋ, ಡೇವಿಡ್ ನೆಲಬಾಂಡಿಯನ್‌ರಂತವರಿಗೆ ರಫೆಲ್ ನಡಾಲ್‌ರನ್ನು ಮಣಿಸುವ ಚಿಕ್ಕ ಆತ್ಮವಿಶ್ವಾಸ ಮೂಡಬಹುದು. ಕಳೆದ ಎಂಟು ವರ್ಷಗಳಲ್ಲಿ ಆರು ಮಂದಿಗೆ ಚೊಚ್ಚಲ ಗ್ರಾನ್‌ಸ್ಲಾಂ ದಕ್ಕಿದ್ದು ಇಲ್ಲೇ. ನಡಾಲ್‌ರನ್ನೂ ಈ ಪಟ್ಟಿಗೆ ಸೇರಿಸಲಾಗಿದೆ! ವರ್ಷದಲ್ಲಾಗಲೇ ಐದು ಪ್ರಶಸ್ತಿ ಪಡೆದಾತನ ಬಗ್ಗೆ ಇತರರಿಗೆ ಪುಟ್ಟ ಹೆದರಿಕೆ ಇಲ್ಲದಿರುತ್ತದೆಯೇ?
ಇಲ್ಲಿ ಪುರುಷ ಹಾಗೂ ಮಹಿಳಾ ಚಾಂಪಿಯನ್‌ಗಳಿಗೆ ಸಮಾನ ಬಹುಮಾನದ ಮೊತ್ತ. ೧೦ ಲಕ್ಷ ಪೌಂಡ್‌ಗಳ ಭರ್ಜರಿ ಚೆಕ್. ಇಡೀ ವಿಶ್ವ ಆರ್ಥಿಕ ಹಿಂಜರಿತದ ಕಬಂಧ ಬಾಹುಗಳಲ್ಲಿದ್ದರೂ ಅದು ಫ್ರೆಂಚ್ ಓಪನ್‌ಗೆ ತಟ್ಟಿದಂತಿಲ್ಲ. ನಿಜಕ್ಕಾದರೆ ಬಹುಮಾನದ ಮೊತ್ತ ಶೇ.೩.೬೯ರಷ್ಟು ಹೆಚ್ಚಾಗಿದೆ!
ಫ್ರೆಂಚ್ ಮಹಿಳಾ ಪ್ರಶಸ್ತಿಯನ್ನು ಗೆಲ್ಲುವವರ ಮಾತು ಅತ್ಲಾಗಿರಲಿ, ಗ್ಲಾಮರಸ್ ಮಾರಿಯಾ ಶರಪೋವಾ ಸ್ಪರ್ಧಾತ್ಮಕ ಟೆನಿಸ್‌ಗೆ ಮರಳುತ್ತಿರುವುದು ಹೆಚ್ಚು ಪ್ರಚಾರದಲ್ಲಿರುವ ಸುದ್ದಿ. ಮಾರಿಯಾ ಪ್ರಶಸ್ತಿಯ ಫೇವರಿಟ್ ಮಾತ್ರ ಅಲ್ಲ! ಒಂಬತ್ತು ತಿಂಗಳಿನಿಂದ ರ್‍ಯಾಕೆಟ್ ಹಿಡಿಯದಿರುವ ಶರಪೋವಾರ ಈಗಿನ ರ್‍ಯಾಂಕಿಂಗ್ ೬೫. ಈ ಹಿಂದೆ ಆಗೊಮ್ಮೆ ಈಗೊಮ್ಮೆಯೆಂದು ೧೭ ವಾರ ಅಗ್ರಕ್ರಮಾಂಕದಲ್ಲಿ ಮೆರೆದಿದ್ದ ಪೋವಾ ವಾರ್ಸವಾ ಓಪನ್‌ನಿಂದ ಪುನರಾಗಮಿಸಿದ್ದಾರೆ. ಖುಷಿಪಡಬೇಕು, ಮಹಿಳಾ ಟೆನಿಸ್‌ನಲ್ಲಿ ತುಸು ಪೈಪೋಟಿ ಉಂಟಾಗಬಹುದು.
ರಷ್ಯಾದ ಮರಾತ್ ಸಫಿನ್ ಪ್ರತಿಭೆಯ ಕಣಜ ಎಂಬುದೇನೋ ನಿಜ. ಆದರೆ ಮಾನಸಿಕ ಸ್ಥಿರತೆ ಕಾಯ್ದುಕೊಳ್ಳದೆ ರ್‍ಯಾಕೆಟ್ ಮುರಿದುಹಾಕುತ್ತ ತನ್ನ ಟೆನಿಸ್ ಫಲಿತಾಂಶಗಳನ್ನು ಹಾಳು ಮಾಡಿಕೊಂಡಾತ. ಫೆಡರರ್‌ರ ಉತ್ಕರ್ಷದ ಕಾಲದಲ್ಲಿ ಅವರನ್ನು ಫೈನಲ್‌ನಲ್ಲಿ ಸೋಲಿಸಿದ ಪ್ರಪ್ರಥಮ ಸಾಹಸಿ. ಅಂತಹವನ ತಂಗಿ ದಿನಾರಾ ಸಫಿನಾ ಕೂಡ ಮೂಡಿಯೇ. ಅವಳದೀಗ ನಂ.೧ ಪಟ್ಟದ ಆಳ್ವಿಕೆ. ಅಗ್ರಕ್ರಮಾಂಕಕ್ಕೆ ಅನುಸಾರವಾಗಿಯೇ ಫಾರಂ ಇದೆ. ಮೊನ್ನೆ ರೋಮ್‌ನಲ್ಲಿ ಪ್ರಶಸ್ತಿ ಸಿಕ್ಕಿದೆ. ಗ್ರಾನ್‌ಸ್ಲಾಂ? ಸುಲಭವಲ್ಲ. ಈವರೆಗೆ ಒಂದೂ ಸಿಕ್ಕಿಲ್ಲ. ಇದೇ ಸಫಿನಾ ಆಸ್ಟ್ರೇಲಿಯನ್ ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್ ಎದುರು ಬಾಲಂಗೋಚಿಯಂತಾದದ್ದು ಕಣ್ಣ ಮುಂದೆ ಹಾಯುತ್ತದೆ.
ಟೆನಿಸ್ ಅಂದರೇನೇ ಹಾಗೆ. ಇಲ್ಲಿ ಚಾಂಪಿಯನ್ ಗುಣ ಇರಬೇಕು. ಮಹತ್ವದ ಘಟ್ಟದಲ್ಲಿ ಶಸ್ತ್ರ ಮರೆಯುವ ಕರ್ಣರಾಗುವಂತಿಲ್ಲ. ಆ ತಾಕತ್ತು ಇಗಿರುವುದು ಸೆರೆನಾಗೆ ಮಾತ್ರ. ಗಾಯದ ಸಮಸ್ಯೆಗೆ ಸಿಲುಕಿರುವ ಸೆರೆನಾ ಪೂರ್ಣ ಫಿಟ್ ಎನ್ನಿಸಿದಲ್ಲಿ ಅವರಿಂದ ಯಾರಿಗೂ ಪ್ರಶಸ್ತಿ ತಪ್ಪಿಸಲು ಸಾಧ್ಯವಿಲ್ಲ. ಈ ಮಾತನ್ನು ಫ್ರೆಂಚ್ ಕ್ಲೇ ಆಕೆಯ ಕನಿಷ್ಟ ಆದ್ಯತೆಯ ಅಂಕಣ ಎಂಬುದರ ಹೊರತಾಗಿಯೂ ಹೇಳುವ ಧೈರ್ಯ ಮಾಡಬಹುದು. ಆ ಮಟ್ಟಿಗೆ ಮಹಿಳಾ ಟೆನಿಸ್ ಗುಣಮಟ್ಟ ಕುಸಿದಿದೆ.
ಬೇರೆ ಬಿಡಿ, ಕಳೆದ ವರ್ಷದ ವಿಜೇತೆ ಅನಾ ಇವಾನೋವಿಕ್ ಸದರಿ ಸಂಚಿಕೆಯಲ್ಲಿ ಎರಡನೆ ವಾರಕ್ಕೆ ಬಾಳುವುದು ಸಂಶಯ. ಆಕೆ ಎಲ್ಲಿದ್ದಾಳೆಂಬ ಕುರಿತು ಹುಡುಕಾಡಲು ರ್‍ಯಾಂಕಿಂಗ್ ಪತ್ತೆದಾರರು ಬೇಕಾದಾರು. ಖುದ್ದು ಡಬ್ಲ್ಯುಟಿಎಗೆ ಈ ‘ಒನ್ ಟೈಮ್ ವಂಡರ್’ಗಳ ಬಗ್ಗೆ ಅವಜ್ಞೆಯಿದೆ.
ಕೊನೆ ಮಾತು - ಈ ರೊಲ್ಯಾಂಡ್ ಗ್ಯಾರಸ್ ಪ್ರಶಸ್ತಿಗೆ ಒಂದು ಆರೋಪವೂ ಇದೆ. ಇಲ್ಲಿ ತಮ್ಮ ಚೊಚ್ಚಲ ಗ್ರಾನ್‌ಸ್ಲಾಂ ಗೆದ್ದವರು ಇನ್ನೆಲ್ಲೂ, ಇನ್ನೆಂದೂ ಸ್ಲಾಂ ಗೆಲ್ಲದೇ ಹೋಗುವ ಸಂಪ್ರದಾಯ! ೧೭ ವರ್ಷಕ್ಕೆ ಇಲ್ಲಿ ಚೊಚ್ಚಲ ಸ್ಲಾಂ ಗೆದ್ದು ದಾಖಲೆ ಮಾಡಿದ ಮೈಕೆಲ್ ಚಾಂಗ್ ನಿವೃತ್ತಿ ಹೇಳುವಾಗ ಚೀಲದಲ್ಲಿದ್ದುದೂ ಅದೊಂದೇ!


-ಮಾವೆಂಸ

1 comments:

shivu.k ಹೇಳಿದರು...

ಗ್ಲಾಮರ್ ಬೆರೆತ ಆವಳ ಆಟ ನೋಡಲು ಬಲು ಚೆನ್ನ...

 
200812023996