ಬುಧವಾರ, ಅಕ್ಟೋಬರ್ 21, 2009

ಹಳ್ಳಿ ಮೂಲೆಯ ಗಟ್ಟಿ ಪ್ರಯತ್ನ - ಮಾವಿನಮನೆ ವಾಚನಾಲಯ






‘ಉದಯವಾಣಿ’ಯ ಉಪಸಂಪಾದಕ ನಾಗರಾಜ ಮತ್ತೀಗಾರ ‘ತರಂಗ’ ಸಾಪ್ತಾಹಿಕದ ಅಕ್ಟೋಬರ್ ೨೯ರ ಸಂಚಿಕೆಯಲ್ಲಿ ಬರೆದ ಲೇಖನ ಕೆಳಗಿದೆ. ಓದಿ. ಅದನ್ನು ಇಲ್ಲಿ ಅಪ್‌ಲೋಡ್ ಮಾಡಲು ಕಾರಣ, ಅದರ ವಿಷಯ ನಾನು ನಿರ್ವಹಿಸುತ್ತಿರುವ ಒಂದು ಪುಟ್ಟ, ಸಾಹಿತ್ಯಿಕ ಪ್ರಯತ್ನ ಎಂಬುದು. ಇನ್ನೂ ಒಂದು ಆಸೆಯೆಂದರೆ, ಓದಿದ ನೀವೂ ನನ್ನೊಂದಿಗೆ ಈ ಪ್ರಯತ್ನದಲ್ಲಿ ಕೈಜೋಡಿಸುವ ಮನಸ್ಸು ಮಾಡಬಹುದು ಎಂಬುದು. ಅದು ದುರಾಸೆ ಅಲ್ಲ ಎಂದುಕೊಳ್ಳುವೆ!
ನಿಜಕ್ಕೂ ಸಹಾಯಕ್ಕೆ ವಿನಂತಿಸುತ್ತೇನೆ. ತುಸು ದೊಡ್ಡ ಮೊತ್ತದ ಧನ ಬೆಂಬಲ ಕೊಡುವವರಿಗೆ ಒಂದು ಮಾತು ಸ್ಪಷ್ಟೀಕರಿಸಲು ಬಯಸುತ್ತೇನೆ, ‘ಒಂದೊಮ್ಮೆ ಈ ವಾಚನಾಲಯ ಯಾವುದೇ ವರ್ಷ ಬಾಗಿಲು ಹಾಕಿದರೆ ನಿಮ್ಮ ಪಾವತಿಯನ್ನು ಪೂರ್ತಿ ನಿಮಗೆ ಮರಳಿಸುತ್ತೇವೆ"
ಆನ್‌ಲೈನ್‌ನಲ್ಲಿ ಸಹಾಯ ಮಾಡುವವರಿಗೆ ವಾಚನಾಲಯದ ಬ್ಯಾಕ್ ಖಾತೆ ವಿವರ
ಕರ್ನಾಟಕ ಬ್ಯಾಂಕ್, ಸಾಗರ ಶಾಖೆ ೫೭೭೪೦೧ ಶಿವಮೊಗ. ಕರ್ನಾಟಕ
ಖಾತೆ ನಂಬರ್ -7122500101304001 ಬ್ಯಾಂಕ್ ಕೋಡ್ - KARB0000712
ಸಹಾಯ ಮಾಡಿದವರ ವಿವರವನ್ನು ಬರುವ ದಿನದಲ್ಲಿ ಇದೇ ಬ್ಲಾಗ್‌ನಲ್ಲೂ ಒದಗಿಸುವೆ. ನಿಮ್ಮ ಯಾವುದೇ ಸಲಹೆ ಸೂಚನೆಗೂ ಸ್ವಾಗತ.
-ಮಾವೆಂಸ
================
ನಿಮಗೂ ಗೊತ್ತು, ಶಿವಮೊಗ್ಗ ಜಿಲ್ಲೆಯ ಸಾಗರದ ವರದಪುರ ಕ್ಷೇತ್ರಕ್ಕೆ ರಾಜ್ಯದ ನಕ್ಷೆಯಲ್ಲಿ ಒಂದು ಗುರುತರ ಸ್ಥಾನವಿದೆ. ಶ್ರೀಧರ ಸ್ವಾಮಿಗಳು ನೆಲೆಸಿದ ಈ ಸ್ಥಳ ಪ್ರೇಕ್ಷಣೀಯವಾಗಿಯೂ, ಧಾರ್ಮಿಕವಾಗಿಯೂ ಪ್ರವಾಸಿ ತಾಣ. ಹಾಗೆಂದು ಅಲ್ಲಿಗೆ ಹೋಗಲು ಸಾಗರದಲ್ಲಿ ಬಸ್ ಹತ್ತಿ ವರದಪುರದ ‘ದ್ವಾರಬಾಗಿಲು’ ಬಳಿ ಇಳಿದವರಿಗೆ ಮೊದಲು ಕಾಣಿಸುವುದು ಮಾತ್ರ ವಿಚಿತ್ರ ಹೆಸರಿನ ನಾಮಫಲಕ, ‘ವೀಣಾ ಸ್ಮಾರಕ ಮಾವಿನಮನೆ ವಾಚನಾಲಯ’. ಒಳಹೊಕ್ಕು ನೋಡಿದರೆ, ಇದರ ಬಗ್ಗೆ ಹೇಳಬೇಕಾದುದು ತುಂಬಾ ಇದೆ!
ಎಡಜಿಗಳೇಮನೆ ಮಾವಿನಸರ ಊರಿಗೆ ಸೇರಿದ್ದು ಉಮಾಮಹೇಶ್ವರ ದೇವಸ್ಥಾನ. ಇದರ ಬೆನ್ನಿಗೆ ಅರ್ಚಕರ ಮನೆ. ಮನೆಯ ಒಂದು ಭಾಗದಲ್ಲಿ ಮಾವಿನಮನೆ ವಾಚನಾಲಯ. ಈ ಎರಡೂ ಊರುಗಳ ಆದಿ - ಅಂತ್ಯಗಳ ಕಸಿಯೇ ಮಾವಿನಮನೆ! ಇಲ್ಲಿ ಬರೋಬ್ಬರಿ ೫೯ ನಿಯತಕಾಲಿಕಗಳು ಓದಲು ಸಿಗುತ್ತದೆ. ಎಲ್ಲವೂ ತಾಜಾ ತಾಜ! ಬಹುಷಃ ಎಂತಹ ಸರ್ಕಾರಿ ನಗರ ಗ್ರಂಥಾಲಯದಲ್ಲೂ ಇಷ್ಟು, ಕಷ್ಟ ಕಷ್ಟ.
ಮಾವಿನಮನೆ ವಾಚನಾಲಯ ಇಲ್ಲಿನ ಗ್ರಾಮಸ್ಥರ ಸಂಘಟನೆಯ ಫಲ. ಊರಿನ ಶ್ರೇಯೋಭಿಲಾಷೆಗೆಂದು ಅವರು ಗ್ರಾಮಾಭಿವೃದ್ಧಿ ಸಂಘವನ್ನು ಮಾಡಿಕೊಂಡಿದ್ದಾರೆ. ದೇವಸ್ಥಾನದ ನಿರ್ವಹಣೆಯ ಜೊತೆಗೆ ಗ್ರಾಮದ ಇನ್ನಿತರ ಚಟುವಟಿಕೆ ಇದರ ಗುರಿ. ಅದರ ಈಡೇರಿಕೆಗೆ ಪ್ರಪ್ರತ್ಯೇಕ ಸಮಿತಿಗಳಿವೆ. ಕೃಷಿ ವಿಚಾರಕ್ಕೊಂದು, ಮಹಿಳಾ ಚಿಂತನೆ ಚಟುವಟಿಕೆಗೊಂದು ಇದ್ದಂತೆ ಸ್ವತಂತ್ರ ವಾಚನಾಲಯ ಸಮಿತಿಯಿದೆ. ಮೂರು ಸದಸ್ಯರ ಸಮಿತಿಗೆ ಮಾ.ವೆಂ.ಸ.ಪ್ರಸಾದ್ ಸಂಚಾಲಕರು. ಗ್ರಾಮಾಭಿವೃದ್ಧಿ ಸಮಿತಿ ವಾರ್ಷಿಕ ಕೊಡುವ ೧,೪೦೦ ರೂ.ಗಳ ಜೊತೆಗೆ ಅಗತ್ಯಬೀಳುವ ಹೆಚ್ಚಿನ ಹಣಕಾಸು ಸಂಗ್ರಹಿಸುವ ಮೂಲಕ ಲೈಬ್ರರಿ ನಡೆಸುವ ಜವಾಬ್ದಾರಿ ಈ ವಾಚನಾಲಯ ಸಮಿತಿಯದ್ದು.
ಅಂಕಿಅಂಶಗಳತ್ತ ಗಮನಿಸಿದರೆ, ಪ್ರತಿ ತಿಂಗಳೂ ಸರಿಸುಮಾರು ೭೦೦ ರೂ.ಗಳನ್ನು ಪ್ರಯೋಜಕರು, ಚಂದಾದಾರರಿಂದ ಸಂಗ್ರಹಿಸಲಾಗುತ್ತದೆ. ಅದರಲ್ಲಿ ಎಂಟು ಸಾಪ್ತಾಹಿಕ, ಏಳು ಪಾಕ್ಷಿಕ, ೨೦ ಮಾಸಿಕಗಳನ್ನು ಖರೀದಿಸಿ ಓದುಗರಿಗೆ ಒದಗಿಸಲಾಗುತ್ತದೆ. ಇದರ ಜೊತೆಗೆ ೨೪ ಪತ್ರಿಕೆಗಳು ಖುದ್ದು ತಾವೇ ಉಚಿತವಾಗಿ ಸಂಚಿಕೆಗಳನ್ನು ಕಳಿಸಿಕೊಡುತ್ತವೆ. ಅದರಲ್ಲಿ ಸುಜಾತ ಸಂಚಿಕೆ, ಹವ್ಯಕ, ಆಯುರ್ವೇದ ಮತ್ತು ಯೋಗ...... ಹೆಸರಿಸ ಹೊರಟರೆ ಸಾಲು ದೀರ್ಘ. ಕನ್ನಡದ ಎಲ್ಲ ಪ್ರಮುಖ ಪತ್ರಿಕೆಗಳು ಇಲ್ಲಿ ಲಭ್ಯವಾಗುವುದು ಗಮನಾರ್ಹ. ಓದಲು ಬರುವವರಿಗೆ ಒಂದು ತಾಪತ್ರಯವಿದೆ! ಇದು ಪ್ರತಿ ದಿನ ಸಂಜೆ ನಾಲ್ಕರಿಂದ ಎರಡು ಘಂಟೆ ಕಾಲ ಮಾತ್ರ ತೆರೆದಿರುತ್ತದೆ. ಹಾಗೆಂದು ವರ್ಷದ ಯಾವುದೇ ದಿನ ರಜೆ ಇಲ್ಲ. ಊರಿನವರಲ್ಲೇ ಪ್ರತಿ ದಿನಕ್ಕೆ ಇಬ್ಬರಂತೆ ಕಾರ್ಯಕರ್ತರನ್ನು ಆಯ್ದುಕೊಳ್ಳಲಾಗಿದೆ. ಕಾರ್ಯ ನಿರ್ವಹಿಸುವ ದಿನ ನಿಗದಿಪಟ್ಟಿರುತ್ತದೆ. ಆ ಕಾರ್ಯಕರ್ತರಲ್ಲೊಬ್ಬರು ಬಾಗಿಲು ತೆರೆಯುತ್ತಾರೆ. ಊಹ್ಞೂ, ಯಾರಿಗೂ ಸಂಬಳ, ಗೌರವಧನದ ಮಾತಿಲ್ಲ.
೨೦೦೪ರ ಗಾಂಧಿ ಜಯಂತಿಯ ದಿನ ಆರಂಭವಾದ ಈ ವಾಚನಾಲಯಕ್ಕೆ ಈಗ ಐದನೇ ವರ್ಷ. ಹಿಂತಿರುಗಿ ನೋಡಿದರೆ ಸಮಾಧಾನ ಸಂಖ್ಯೆಯ ದೃಷ್ಟಿಯಿಂದ ಮಾತ್ರ ಸಿಕ್ಕಿದೆ ಎನ್ನುತ್ತಾರೆ ಸಂಚಾಲಕ ಮಾವೆಂಸ, "ಇವತ್ತು ಪತ್ರಿಕೆಗಳಲ್ಲದೆ ೧೩೬೦ ಸಾಹಿತ್ಯಿಕ, ಸಾಹಿತ್ಯೇತರ ಕೃತಿಗಳು ನಮ್ಮಲ್ಲಿ ಲಭ್ಯ. ಎಲ್ಲ ಪತ್ರಿಕೆಗಳ ಯುಗಾದಿ, ದೀಪಾವಳಿ ವಿಶೇಷಾಂಕಗಳೂ ಬರುತ್ತವೆ. ಓದುವವರಿಗೆ ಆಸನ ವ್ಯವಸ್ಥೆ, ಅಲ್ಮೆರಾ ಸೌಲಭ್ಯ ತಕ್ಕಮಟ್ಟಿಗಿದೆ. ಆದರೆ ನಮ್ಮ ಬಹುಪಾಲು ಗುರಿಗಳು ಇನ್ನೂ ಬಾಕಿ ಬಾಕಿ. ವಾಚನಾಲಯಕ್ಕೆ ಪೂರಕವಾದ ಒಳಾಂಗಣ ಇರುವ ಸ್ವತಂತ್ರ ಕಟ್ಟಡ ಆಗಬೇಕಿದೆ. ಪತ್ರಿಕೆಗಳ ಹಾಗೂ ಗ್ರಾಮದ ಕುರಿತ ಡಾಟಾ ಸಂಗ್ರಹ ಯೋಜನೆ ಇನ್ನೂ ಪ್ರಾಥಮಿಕ ಹಂತದಲ್ಲೇ ಇದೆ. ಕಂಪ್ಯೂಟರ್ ಅಳವಡಿಸಿ ಗ್ರಾಮಸ್ಥರನ್ನು ಇ ಸಾಕ್ಷರರನ್ನಾಗಿಸುವ ಆಕಾಂಕ್ಷೆಯೂ ಸಾಧನೆಯಾಗಿಲ್ಲ
.
ಮಾವಿನಮನೆ ವಾಚನಾಲಯದ ಹೆಸರಿನ ಜೊತೆಗಿರುವ ವೀಣಾ ನೆನಪಿಗೆ ವಿಶೇಷ ಅರ್ಥವಿದೆ. ಈ ಊರಿನ ಮಗಳಾದ ವೀಣಾ ಎಂಬ ಸಾಹಿತ್ಯಾಸಕ್ತೆ ಹಾವು ಕಚ್ಚಿ ಅಕಾಲಿಕ ಸಾವು ಕಂಡಿದ್ದಾರೆ. ಅವರನ್ನು ಸದಾ ಸ್ಮರಿಸಿಕೊಳ್ಳಲು ಊರವರು ಬಳಸಿಕೊಂಡ ಮಾರ್ಗವೇ ಈ ‘ವೀಣಾ ಸ್ಮಾರಕ....’ ವಾಚನಾಲಯ ಇಟ್ಟ ಪ್ರತಿ ಯಶಸ್ವಿ ಹೆಜ್ಜೆಯೂ ವೀಣಾ ನೆನಪಿಗೆ ಅರ್ಪಿತ. ಹಾಗಿರುವುದರಿಂದಲೇ ನಮಗೆ ಇದು ನಾವು ಮಾಡಿದ್ದು ಎಂಬ ಯಾವುದೇ ಅಹಂಕಾರ ತಾಕುವುದಿಲ್ಲ ಎನ್ನುತ್ತಾರೆ ವಾಚನಾಲಯ ಸಮಿತಿ ಸದಸ್ಯೆ ಲಲಿತಾ ಜಿ.ಭಟ್.
ಪ್ರಗತಿಯ ಹಿಂದಿರುವ ಪ್ರಾಯೋಜಕರ ಪಾತ್ರವನ್ನು ಇನ್ನೋರ್ವ ಸದಸ್ಯೆ ಮಮತಾ ದಿನೇಶ್ ಉಲ್ಲೇಖಿಸುತ್ತಾರೆ. ಇಂದು ಮಾಸಿಕ ಹತ್ತು ರೂಪಾಯಿಯಿಂದ ವಾರ್ಷಿಕ ೫೦೦ ರೂ.ವರೆಗೆ ದೇಣಿಗೆ ನೀಡುವ ಸಹೃದಯಿಗಳಿದ್ದಾರೆ. ರಾಜ್ಯದ ಎಲ್ಲ ಭಾಗಗಳ ಸಾಹಿತ್ಯ ಪ್ರೇಮಿಗಳು ಧನಸಹಾಯಕ್ಕೆ ನಿಂತಿದ್ದಾರೆ. ಬೆಳಗಾಂನ ಪಾರ್ಥ ಸಾನು, ಲಿಂಗಸಗೂರಿನ ಲಕ್ಷೀಕಾಂತ್ ಕೊಂಪಲ್, ಬೆಂಗಳೂರಿನ ಸುರಭಿ ಸೂರ್ಯ.... ಹೀಗೆ ಪ್ರಾಯೋಜಕರಾಗಿರುವವರ ಸಂಖ್ಯೆ ಒಟ್ಟು ೩೨. ಇದರಲ್ಲಿ ಗ್ರಾಮಸ್ಥರು, ಊರ ಹೆಣ್ಣು ಮಕ್ಕಳೂ ಸೇರಿದ್ದಾರೆ. ಊರವರಲ್ಲದೆ ಅಕ್ಕ ಪಕ್ಕದ ಹಳ್ಳಿಗರು ಚಂದಾದಾರರಾಗಿ ಮನೆಗೆ ಪುಸ್ತಕ ಒಯ್ದು ಓದುತ್ತಿದ್ದಾರೆ. ಆದರೆ ವಾಚನಾಲಯದಲ್ಲಿಯೇ ಓದುವಿಕೆ ಉಚಿತ!
ಏನಿದರ ವೈಶಿಷ್ಟ್ಯ?
ಹಳ್ಳಿಯ ಮೂಲೆಯೊಂದರಲ್ಲಿ , ಕೇವಲ ೧೫ ಮನೆಗಳಿರುವ ಗ್ರಾಮದಲ್ಲಿ ಈ ಪ್ರಮಾಣದ ವಾಚನಾಲಯ ಚಾಲನೆಯಲ್ಲಿರುವುದು ಅಪರೂಪ. ಇಲ್ಲಿ ಓದಲು ಸಿಗುವಷ್ಟು ಪತ್ರಿಕೆಗಳು ಸರ್ಕಾರಿ ಗ್ರಂಥಾಲಯದಲ್ಲೂ ಕೈಗೆಟುಕಲ್ಲ ಎಂಬುದು ಕಠೋರ ಸತ್ಯ. ಈ ಸಾಧನೆಯ ಹಿಂದಿರುವವರು ಕೇವಲ ಕೃಷಿಕರು ಎನ್ನುವುದು ಇನ್ನೊಂದು ವಿಶೇಷ. ಇವುಗಳಲ್ಲದೆ ವಾಚನಾಲಯ ನಡೆಸುತ್ತಿರುವ ಹಲವು ಜಾಗೃತಿ ಕಾರ್ಯಕ್ರಮಗಳಲ್ಲಿ ಬ್ಯಾಂಕ್ ಮ್ಯಾನೇಜರ್ ಜೊತೆ ಚರ್ಚೆ, ಡಾ.ವಸುಂಧರಾ ಭೂಪತಿಯವರ ಪುಸ್ತಕಗಳ ವಿಮರ್ಶೆಯನ್ನು ಇಲ್ಲಿನ ಮಹಿಳೆಯರು ಮಾಡಿದ ವಿನೂತನ ಪ್ರಯೋಗದಂತವು ನೆನಪಿಡುವಂತದು.
ಈ ನಡುವೆ ವಾಚನಾಲಯ ಇನ್ನೊಂದು ಮಗ್ಗುಲಿನತ್ತ ತೆರೆದುಕೊಳ್ಳುವ ಸಾಧ್ಯತೆಗಳಿವೆ. ಈ ವಾಚನಾಲಯಕ್ಕೆ ಸದಾ ಧನಸಹಾಯ ಒದಗಿಸುತ್ತ ಬಂದಿರುವ ಕೆನರಾ ಬ್ಯಾಂಕ್ ಜ್ಯುಬಿಲಿ ಎಜುಕೇಷನ್ ಫಂಡ್ ಬೆಂಗಳೂರಿನಲ್ಲಿ ಸ್ಟಡಿ ಸೆಂಟರ್‌ನ್ನು ನಡೆಸುತ್ತಿದೆ. ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕಗಳನ್ನು ಒದಗಿಸುವ ಕೆಲಸ ಅಲ್ಲಿ ನಡೆಯುತ್ತಿದೆ. ದುಬಾರಿ ಬೆಲೆಯ ಪಠ್ಯ ಪುಸ್ತಕ ಕೊಳ್ಳಲಾಗದವರಿಗೆ ಇದು ಸಂಜೀವಿನಿ. ಅಂತದ್ದೇ ಒಂದು ಸೌಲಭ್ಯವನ್ನು ಮಲೆನಾಡಿನಲ್ಲಿ ಸ್ಥಾಪಿಸಲು ಜ್ಯುಬಿಲಿ ಫಂಡ್ ಯೋಜಿಸಿದ್ದು ಇದೇ ಮಾವಿನಮನೆ ವಾಚನಾಲಯದಲ್ಲಿ ಜಾರಿಗೊಳಿಸಲು ಚಿಂತಿಸುತ್ತಿದೆ.
ಈ ವಾಚನಾಲಯಕ್ಕೆ ಶಿವಮೊಗ್ಗದ ಅಡಿಕೆ ದಲ್ಲಾಳಿ ಸಹಕಾರ ಸಂಸ್ಥೆ ಮ್ಯಾಮ್ಕೋಸ್, ಸಾಗರದ ವೆನಿಲ್ಲಾ ಬೆಳೆಗಾರರ ಸಂಘ, ಧರ್ಮಸ್ಥಳ ಹೊರನಾಡು ಕ್ಷೇತ್ರ ಪ್ರಮುಖರು ಸೇರಿದಂತೆ ಹಲವರು ಧನಸಹಾಯ ನೀಡಿರುವುದು ಈ ಪರಿ ಬೆಳವಣಿಗೆ ತೋರಿಸಲು ಕಾರಣವಾಗಿದೆ ಎಂಬ ಅಭಿಪ್ರಾಯ ಊರಿನ ಹಿರಿಯ ಜೀವ ಎಂ.ಜಿ.ಚಂದ್ರಶೇಖರ್‌ರಾವ್‌ರದ್ದು. ಬಹುಷಃ ಅವರ ಗುರಿ ಈಡೇರಿಕೆಗೆ ರಾಜ್ಯದ ಎಲ್ಲೆಡೆಯಿಂದ ಇನ್ನಷ್ಟು ಸಹಾಯಹಸ್ತ ಒದಗಬೇಕು, ಪ್ರಾಯೋಜಕರು ಮುಂದೆಬರಬೇಕು. ಹಾಗಾದರೆ ಇದು ರಾಷ್ಟ್ರದಲ್ಲಿಯೇ ಗುರ್ತಿಸುವಂತ ಸಾಧನೆ ಆದೀತು. ರಾಜ್ಯದಲ್ಲಿ ಏಕೈಕ ಎಂತಾದರೆ, ಹೆಗ್ಗೋಡಿನ ನಿನಾಸಂ ಇದ್ದಂತೆ ಇನ್ನೊಂದು ವಿನೂತನ ಪ್ರಯತ್ನ ಇದಾಗಲಿ ಅಲ್ಲವೇ?
ಇಂದು ವರದಪುರಕ್ಕೆ ಸಾವಿರ ಸಂಖ್ಯೆಯಲ್ಲಿ ಜನ ಭೇಟಿ ನೀಡುತ್ತಿದ್ದಾರೆ. ಹಲವರು ೨-೩ ದಿನ ಕಾಲ ತಂಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಾಚನಾಲಯಕ್ಕೆ ಓದುಗರ ಕೊರತೆ ಬೀಳಲಿಕ್ಕಿಲ್ಲ. ಶ್ರೀಧರಾಶ್ರಮದತ್ತ ಬರುವವರಿಗೆ ವೀಣಾ ಸ್ಮಾರಕ ವಾಚನಾಲಯ ಒಂದು ಬೋನಸ್. ಸಹಾಯಹಸ್ತ ಚಾಚಲು ಬಯಸುವವರು ಸಂಚಾಲಕರನ್ನು, ಎಡಜಿಗಳೇಮನೆ, ಸಾಗರ - ೫೭೭೪೦೧ ಈ ವಿಳಾಸದಲ್ಲಿ ಅಥವಾ ೦೮೧೮೩-೨೩೬೦೬೮, ೯೮೮೬೪೦೭೫೯೨ ದೂರವಾಣಿಯಲ್ಲಿ ಸಂಪರ್ಕಿಸಬಹುದು.


-ನಾಗರಾಜ ಮತ್ತೀಗಾರ
ಸ್ನೇಹಿತ ಮತ್ತೀಗಾರರಿಗೆ ಹೃತ್ಪೂರ್ವಕ ವಂದನೆಗಳು.....

9 comments:

Unknown ಹೇಳಿದರು...

ಶುಭವಾಗಲಿ

shamanth ಹೇಳಿದರು...

k i wl try

ಮಾವೆಂಸ ಹೇಳಿದರು...

*ಶ್ರೀಶುಂಮ್,
ವಂದನೆಗಳು........

*ಶಮಂತ್,
ಆ ಪ್ರಯತ್ನ ಯಶಸ್ವಿಯಾಗಲಿ!!

bpnmurthy ಹೇಳಿದರು...

I think you can approach Mrs.Sudha Murthy of M/s Infosys to get free computer sets for the library.

ಮಾವೆಂಸ ಹೇಳಿದರು...

*ಬಿಪಿಎನ್ ಮೂರ್ತಿ,
ನಿಮ್ಮ ಸಲಹೆಗೆ ಧನ್ಯವಾದ. ಹಿಂದೆಯೂ ಹಲವು ಬಾರಿ ಅವರಿಗೆ ಪತ್ರ ಬರೆದಿದ್ದರೂ ಯಾವ ಉತ್ತರವೂ ಧಕ್ಕಲಿಲ್ಲ. ಇಲ್ಲಿನ ಸ್ಥಳೀಯ ಸಂಚಾಲಕರ ಮೂಲಕ ಇನ್ಫೋಸಿಸ್‌ನ ಶಾಲಾ ಗ್ರಂಥಾಲಯದ ಮೂರು ಸಾವಿರ ರೂ. ಮಕ್ಕಳ ಪುಸ್ತಕವಂತೂ ಸಿಕ್ಕಿವೆ. ಅವರನ್ನು ಸಂಪರ್ಕಿಸಲು,ನೆರವು ಪಡೆಯಲು ಬೇರೆ ದಾರಿಗಳಿದ್ದರೆ ಅವಶ್ಯ ತಿಳಿಸಿ.......

ವಿನಾಯಕ ಹೆಗಡೆ ಹೇಳಿದರು...

ಪ್ರಾಮಾಣಿಕ ಪ್ರಯತ್ನ ಖ೦ಡಿತ ಮಾಡುತ್ತೇನೆ.....

Vinayak Hegde ಹೇಳಿದರು...

I will also try to inform more people...

mavemsa ಹೇಳಿದರು...

*ವಿನಾಯಕ ಹೆಗಡೆ,
nimma prayathna saphalavagali endu aashisuve. Dhanyavadagalu....

*Vinayak Hegde,
Nimma sahayavannu nanu mareyuvudilla. Vandanegalu....

ಮಾವೆಂಸ ಹೇಳಿದರು...

ಒಂದು ಧನ್ಯವಾದ....
ಈ ಲೇಖನಕ್ಕೆ ಸ್ಪಂದಿಸಿ ಬೆಂಗಳೂರಿನಲ್ಲಿರುವ ವಿಕಾಸ್ ಹೆಗಡೆ ಧನಸಹಾಯ ಮಾಡುವ ಸಹೃದಯತೆ ತೋರಿದ್ದಾರೆ. ಅವರಿಗೆ ನನ್ನ ವಿಶೇಷ ಧನ್ಯವಾದಗಳು ಈ ಮೂಲಕ. ವಿಕಾಸ್ ಹೇಳಿದ್ದು ಈ ಮಾತು.... "ಶ್ರೀ ಮಾವೆಂಸ ಪ್ರಸಾದರಿಗೆ ನಮಸ್ಕಾರ,

ನಾನು ವಿಕಾಸ್ ಹೆಗಡೆ. ಬೆಂಗಳೂರಿನಿಂದ ಇಮೇಲ್ ಮಾಡುತ್ತಿದ್ದೇನೆ.
ನಿಮ್ಮ ಬ್ಲಾಗ್ ಓದಿದಾಗ ನೀವು ವಾಚನಾಲಯವೊಂದನ್ನು ನೆಡೆಸುತ್ತಿದ್ದುದು ತಿಳಿಯಿತು.
ಅದಕ್ಕೆ ನನ್ನ ಸಣ್ಣ ಕಾಣಿಕೆಯಾಗಿ ೫೦೦ ರೂಪಾಯಿಗಳನ್ನು ನೀವು ಹೇಳಿರುವ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದೇನೆ.
ಇದನ್ನು ನಿಮಗೆ ತಿಳಿಸಬೇಕೆಂದು ಈ ಇಮೇಲ್ ಮಾಡುತ್ತಿದ್ದೇನೆ. ತಲುಪಿದ್ದನ್ನು ತಿಳಿಸಿದರೆ ಸಂತೋಷ.
ಒಳ್ಳೆಯ ಕೆಲಸದಲ್ಲಿ ತೊಡಗಿರುವ ತಮಗೆಲ್ಲರಿಗೂ ಈಮೂಲಕ ಧನ್ಯವಾದಗಳನ್ನು ಹೇಳುತ್ತಿದ್ದೇನೆ.

ವಂದನೆಗಳೊಂದಿಗೆ,
ವಿಕಾಸ್ ಹೆಗಡೆ
Phone: 9844320480
www.vikasavada.blogspot.com"

 
200812023996