ಶನಿವಾರ, ನವೆಂಬರ್ 15, 2008

ಆಲೂ ವರ್ಷ- ಆರಕ್ಕೇರದ ಇಳುವರಿ, ಹರ್ಷವಾಗದ ಆಚರಣೆ
 ಡಿಸೆಂಬರ್ -  ಕಳೆದುಹೋದರೆ ೨೦೦೮ರ ಕ್ಯಾಲೆಂಡರ್ ರದ್ದಿ. ಇಂತಹ ವರ್ಷಗಳನ್ನು ಒಂದು ವಿಷಯಕ್ಕೆ ಸಂಬಂಧ ಕಲ್ಪಿಸಿ ವರ್ಷಾಚರಣೆ ಮಾಡುವುದರ ಹಿಂದಿನ ಉದ್ದೇಶ ನೇರ. ಆ ನಿಟ್ಟಿನಲ್ಲಿ ಸದರಿ ವರ್ಷ ಹೆಚ್ಚು ಕೆಲಸ ಆಗಲಿ ಎಂದು. ಮತ್ತೊಮ್ಮೆ ನೆನಪಿಸಬೇಕಾಗುತ್ತದೆ, ೨೦೦೮ ಅಂತರ್ರಾಷ್ಟ್ರೀಯ ಆಲೂ ವರ್ಷ. ಆಲೂಗಡ್ಡೆ ಎಂಬ ವೈವಿಧ್ಯಮಯ ಆಹಾರ ಪದಾರ್ಥಕ್ಕೆ ಉತ್ತೇಜನ ಈ ಬಾರಿ ಸಿಕ್ಕೀತೇ? ವರ್ಷಾಚರಣೆಯ ಘೋಷಣೆ ನಿರಾಶೆ ತರಲಿಲ್ಲವಾದರೂ ಆಲೂ ಅವಗಣನೆ ಹತಾಶೆ ತರಲಿಕ್ಕೆ ಸಾಕು!
ಭಾರತೀಯರಾಗಿ ನಾವು ಆಲೂ ವರ್ಷವನ್ನು ಪರಾಮರ್ಶಿಸಬೇಕು. ನಮ್ಮ ದೇಶದ ವಾರ್ಷಿಕ ಆಲೂ ಉತ್ಪಾದನೆ ಸರಿಸುಮಾರು ೨೪ ಮಿಲಿಯನ್ ಟನ್. ಈ ಮೂಲಕ ವಿಶ್ವದಲ್ಲಿ ಭಾರತ ಆಲೂ ಉತ್ಪಾದನೆಯಲ್ಲಿ ಮೂರನೇ ಸ್ಥಾನ ಪಡೆದಿದೆ. ದೇಶದ, ರೈತರ ಆರ್ಥಿಕ ಸ್ಥಿತಿಗತಿಗೆ ಆಲೂವಿನದ್ದೂ ಪಾತ್ರವಿದೆ. ಭಾರತ ಹಾಗೂ ಚೀನಾದ ಒಟ್ಟು ಆಲೂ ಬೆಳೆ ಪ್ರಪಂಚದ ಬೇಡಿಕೆಯ ಮೂರನೇ ಒಂದು ಭಾಗವನ್ನು ಪೂರೈಸುತ್ತದೆ. 
ನಿಜ, ಆಲೂ ಆಹಾರ ಬೆಳೆಗಿಂತ ಕುರುಕಲು ತಿನಿಸಾಗಿಯೇ ಹೆಚ್ಚು ಪ್ರಸಿದ್ಧ. ಸ್ವಾರಸ್ಯವೆಂದರೆ, ಇಂದು ಏಷ್ಯಾ ಮತ್ತು ಅಭಿವೃದ್ಧಿಶೀಲ ದೇಶಗಳಲ್ಲಿಯೇ ಹೆಚ್ಚಿನ ಆಲೂ ಇಳುವರಿ ಬಳಕೆಯಾಗುತ್ತಿದೆ. ಇದು ಈವರೆಗೆ ನಂಬಿದ ಜಂಕ್‌ಫುಡ್ ಪ್ರೇಮಿ ವಿದೇಶಿಯರಿಗೆ ಆಘಾತ ನೀಡುವಂತದು. ಆದರೂ ಪ್ರತಿ ವರ್ಷ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಫ್ರೆಂಚ್‌ಫ್ರೈ ರೂಪದಲ್ಲಿ ೧೧ ಮಿಲಿಯನ್ ಟನ್ ಆಲೂ ‘ಕಾರ್ಖಾನೆ’ ತಿನಿಸನ್ನು ಮೆಲ್ಲಲಾಗುತ್ತಿದೆ!
ಒಂದರ್ಥದಲ್ಲಿ ಆಲೂ ವಿಶ್ವರೂಪಿ. ಇದರ ಕೊಬ್ಬಿನಂಶವನ್ನು ಔಷಧಗಳಲ್ಲಿ, ಬಟ್ಟೆ, ಮರ, ಪೇಪರ್ ಉದ್ಯಮದಲ್ಲಿ ಗೋಂದಾಗಿ, ಇನ್ನಿತರ ಸುರಕ್ಷಕ, ಟೆಕ್ಸ್‌ಚರ್ ಏಜೆಂಟ್ ಮಾದರಿಯಲ್ಲಿ ಬಳಸಲಾಗುತ್ತಿದೆ. ಅಷ್ಟೇಕೆ, ಎಣ್ಣೆ ಉತ್ಪಾದನಾ ಘಟಕಗಳ ‘ಬೋರ್ ಹೋಲ್’ಗಳನ್ನು ಸ್ವಚ್ಛಗೊಳಿಸಲೂ ಆಲೂ ಬೇಕು. 
ಪೆಟ್ರೋಲಿಯಂ ಉತ್ಪನ್ನಗಳ ಸ್ವಚ್ಛತೆಗೆ ಬಳಸುವ ಆಲೂ ಒಂದೆಡೆಯಾದರೆ, ಇದೇ ಆಲೂವಿನಿಂದ ಸಂಗ್ರಹವಾಗುವ ೪೪ ಸಾವಿರ ಟನ್ ತ್ರಾಜ್ಯ ಪರಿಷ್ಕರಣೆ ಮೂಲಕ ನಾಲ್ಕರಿಂದ ಐದು ಟನ್ ಎಥೆನಾಲ್ ಇಂಧನ ತಯಾರಿಸಬಹುದಾದದ್ದು ಶುದ್ಧ ಚೋದ್ಯ!
ಆಲೂ ವಿಶ್ವ ಬೆಳೆ. ಎಂಟು ಸಾವಿರ ವರ್ಷಗಳಿಂದ ಆಲೂ ಬೆಳೆಯಲಾಗುತ್ತಿತ್ತೆಂದು ಇತಿಹಾಸ ಹೇಳುತ್ತದೆ. ೧೬ನೇ ಶತಮಾನದಲ್ಲಿ ಸ್ಪೇನ್‌ನಿಂದ ಯುರೋಪ್‌ಗೆ ಈ ಬೆಳೆ ಧಾಳಿಯಿಟ್ಟಿತು ಎನ್ನುವ ಮಾತಿದೆ. ಅದೇನೇ ಇರಲಿ, ಈಗ ಅಂದಾಜು ೭೪ ಸಾವಿರ ಚದರ ಮೈಲು ಪ್ರದೇಶದಲ್ಲಿ ಆಲೂ ಕೃಷಿ ನಡೆಯುತ್ತಿದೆ. ಕಿ.ಮೀ. ಲೆಕ್ಕದಲ್ಲಾದರೆ, ೧೯.೨ಲಕ್ಷ ಕಿ.ಮೀ. ವ್ಯಾಪ್ತಿಯಲ್ಲಿ ಆಲೂಗಡ್ಡೆ ನಾಟಿಯಾಗುತ್ತಿದೆ. ಇದು ಚೀನಾದಿಂದ ಆರಂಭಿಸಿ ಜಾವಾದ ಎತ್ತರ ಪ್ರದೇಶ, ಯುಕ್ರೇನ್‌ನ ಮೈದಾನಗಳವರೆಗೂ ಆಲೂ ಬೆಳೆಯಲಾಗುತ್ತಿದೆ. ಆಹಾರ ಧಾನ್ಯಗಳ ಹೊರತಾಗಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಖಾದ್ಯವಾಗುವ ಆಹಾರ ಪದಾರ್ಥವಿದು. ಅಂಕಿಅಂಶ ಪ್ರಿಯರಿಗಾಗಿ ಹೇಳುವುದಾದರೆ, ಕಳೆದ ವರ್ಷ ದಾಖಲೆಯ ೩೫೦ ಮಿಲಿಯನ್ ಟನ್ ಆಲೂಗಡ್ಡೆ ಉತ್ಪಾದನೆಯಾಗಿತ್ತು.
ಈ ಪರಿ ಜನಪ್ರಿಯತೆ ಪಡೆದ ನಂತರವೂ ವಿಶ್ವಸಂಸ್ಥೆ ೨೦೦೮ನ್ನು ಆಲೂ ವರ್ಷ ಎಂದು ಕರೆದಿದ್ದುದರಲ್ಲಿ ಅರ್ಥವಿದೆ. ಮತ್ತೊಮ್ಮೆ ವಿಶ್ವ ಆಹಾರ ಸಮಸ್ಯೆಯತ್ತ ವಾಲುತ್ತಿರುವ ದಿನಗಳಿವು. ಹಸಿರು ಕ್ರಾಂತಿಯ ಅಡ್ಡ ಪರಿಣಾಮಗಳನ್ನು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ಧಾನ್ಯ ಉತ್ಪಾದನೆಯಲ್ಲಿ ಕುಸಿತವಾಗಿದೆ. ಆಲೂ ಇದಕ್ಕೆ ಉತ್ತರವಾಗಬಲ್ಲದು. ಅಷ್ಟೇ ಅಲ್ಲ, ಆಲೂ ಉತ್ಪಾದನೆ ಆರ್ಥಿಕ ಸ್ಥಿರತೆಗೆ, ಕೈಗಾರಿಕೆಗಳ ಉತ್ತೇಜನಕ್ಕೂ ಕಾರಣವಾಗುವ ವೈಶಿಷ್ಟ್ಯವೇ ಅದರ ವರ್ಷಾಚರಣೆಯನ್ನು ಸಮರ್ಥಿಸುತ್ತದೆ.
ಮುಂದಿನ ಎರಡು ದಶಕಗಳಲ್ಲಿ, ವಿಶ್ವ ಜನಸಂಖ್ಯೆ ವರ್ಷಕ್ಕೆ ೧೦೦ ಮಿಲಿಯನ್ ಸರಾಸರಿಯಲ್ಲಿ ಏರಲಿದೆಯೆಂಬುದು ಒಂದು ಅಂದಾಜು. ಈ ಏರಿಕೆಯ ಬಹುಪಾಲು ಮಕ್ಕಳು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಜನ್ಮಿಸಲಿದ್ದಾರಂತೆ. ಈಗಾಗಲೇ ಭೂಮಿ, ನೀರಿನ ಕೊರತೆಯಲ್ಲಿರುವ ಈ ದೇಶಗಳಲ್ಲಿ ಆಹಾರ ಸುರಕ್ಷತೆ ಭವಿಷ್ಯದಲ್ಲಿ ಆತಂಕಕ್ಕೀಡಾಗುವುದು ನಿಸ್ಸಂಶಯ. ಆ ಲೆಕ್ಕದಲ್ಲೂ ಆಲೂಗಡ್ಡೆಯ ಒಟ್ಟು ಇಳುವರಿಯನ್ನು ಹೆಚ್ಚಿಸಿಕೊಳ್ಳಬೇಕಾದ ಅಗತ್ಯ ನಮ್ಮಂತ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕಿದೆ. ಎಲ್ಲ ವಾತಾವರಣಗಳಲ್ಲಿ ಬೆಳೆಯುವ ಆಲೂವಿನ ಶೇ.೮೫ ಭಾಗ ಆಹಾರವಾಗಿ ಬಳಸಬಹುದಾಗಿರುವುದು ಇನ್ನೊಂದು ಧನಾತ್ಮಕ ಅಂಶ. 
 ನಮ್ಮಲ್ಲಿ ಆಲೂವನ್ನು ಉತ್ತೇಜಿಸಬೇಕು ಎಂಬುದನ್ನು ಸ್ಪಷ್ಟಪಡಿಸಲು ಅಂಕಿಅಂಶವೊಂದು ನೆರವಾಗುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಆಲೂ ಉತ್ಪಾದನೆ ವಾರ್ಷಿಕ  ಶೇಕಡಾ ೪.೫ರ ವೇಗದಲ್ಲಿ ವೃದ್ಧಿಯಾಗುತ್ತಿದೆ. ಏಷ್ಯಾದಲ್ಲಿ, ೧೯೬೧-೬೩ರ ವೇಳೆಯಲ್ಲಿ ಪ್ರತಿ ತಲೆಗೆ ಬರೀ ೧೦ ಕೆ.ಜಿ. ಲೆಕ್ಕದಲ್ಲಿ ಬಳಕೆಯಾಗುತ್ತಿದ್ದರೆ, ೨೦೦೩ರಲ್ಲಿ ಅದು ೨೨ ಕೆ.ಜಿ.ಗೆ ಏರಿದೆ. ಸ್ವಾರಸ್ಯವೆಂದರೆ, ಈಗಲೂ ಇದು ಯುರೋಪ್‌ನ ಪ್ರತಿ ವ್ಯಕ್ತಿ ಸರಾಸರಿಗಿಂತ ಕಡಿಮೆ! ಅಭಿವೃದ್ಧಿಶೀಲ ದೇಶಗಳಲ್ಲಿ ಕಳೆದ ೧೫ ವರ್ಷಕ್ಕೆ ಹೋಲಿಸಿದರೆ ದುಪ್ಪಟ ಆಲುವಿನ ಬಳಕೆಯಾಗುತ್ತಿದ್ದರೂ ಅದು ಮುಂದುವರಿದ ದೇಶಗಳ ಬಳಕೆಗೆ ಇದೀಗ ಸರಿಸಮ(ಶೇ.೫೦)ವಾಗುತ್ತಿದೆ.
 ಅಂತರ್ರಾಷ್ಟ್ರೀಯ ವರ್ಷ ಆಚರಣೆಯ ಹಿನ್ನೆಲೆಯಲ್ಲಿ, ಬೆಳೆ ಬೆಳೆಯಲು ತಾಂತ್ರಿಕ ಸಹಾಯ, ವೈಜ್ಞಾನಿಕ ಸಹಾಯ ನೀಡುವುದು ಮತ್ತು ಒಟ್ಟಾರೆ ಬೆಳೆ ಪ್ರಮಾಣವನ್ನು ಉತ್ತೇಜಿಸುವುದು ಮುಖ್ಯ ಅಂಶ. ಕೊಯ್ಲು ತಾಂತ್ರಿಕತೆಯೂ ಇದರಲ್ಲಿ ಸೇರಿತ್ತು. ಬಹುಷಃ ಪೆರು ರಾಷ್ಟ್ರ ಇದನ್ನು ಸಮರ್ಪಕವಾಗಿ ಬಳಸಿಕೊಂಡಿದೆ. ಅಲ್ಲಿನ ಆರು ಲಕ್ಷ ಕೃಷಿ ಕುಟುಂಬಗಳು ಆಲೂ ಬೆಳೆಯನ್ನೇ ನಂಬಿ ಜೀವನ ಸಾಗಿಸುತ್ತವೆ. ೩.೩ ಮಿಲಿಯನ್ ಟನ್ ಆಲೂ ಅಲ್ಲಿ ಉತ್ಪತ್ತಿಯಾಗುತ್ತಿದೆ. ಅಲ್ಲಿನ ಸರ್ಕಾರ ಇನ್ನೊಂದು ಆಹಾರ ಬೆಳೆಯಾದ ಗೋಧಿಯನ್ನು ಆಮದು ಮಾಡಿಕೊಂಡು ಸಬ್ಸಿಡಿ ದರದಲ್ಲಿ ಜನರಿಗೆ ಒದಗಿಸುತ್ತಿದೆ. ಹೀಗಾಗಿ ಅಲ್ಲಿ ಸಾರ್ಥಕವಾಗಿ ಆಲೂ ವರ್ಷ ಆಚರಿಸಿದಂತಾಗಿದೆ.
ಭಾರತದಲ್ಲಿ ಅಗಾಧ ಕೃಷಿ ಭೂಮಿ, ಕಾರ್ಮಿಕ ಶಕ್ತಿಯಿದ್ದೂ ಆಲೂ ವರ್ಷ ಅಕ್ಷರಶಃ ಜಾರಿಗೊಂಡೇ ಇಲ್ಲ. ಮೊನ್ನೆ ಮೊನ್ನೆ ಕರ್ನಾಟಕದಲ್ಲಿ ನಾಟಿ ಮಾಡಿದ ಆಲೂ ಬೀಜ ಕೊಳೆತು, ಕೃಷಿಕರ ಜೀವನ ಬಳಲಿದ್ದು ಮಾತ್ರ ಸುದ್ದಿಯಾಗಿತ್ತು. ಆ ಲೆಕ್ಕದಲ್ಲಿ, ೨೦೦೮ಕ್ಕೆ ಮಾತ್ರ ಸೀಮಿತವಾಗಿ ಆಲೂ ಬೆಳೆಯನ್ನು ಉತ್ತೇಜಿಸಬೇಕು ಎಂದೇನಿಲ್ಲ. ಇದು ‘ಕೃಷಿಕರ ಪರ’ ಘೋಷಣೆಯ ಸರ್ಕಾರಗಳಿಗೆ ಅರ್ಥವಾದರೆ ಚೆನ್ನ.

-ಮಾವೆಂಸ
3 comments:

ರಮೇಶ್ ಹಿರೇಜಂಬೂರು ಹೇಳಿದರು...

lekhana channagide... idu ella bele beleyuva raithara golu adanu keluvavaru yaaru...?

ರಮೇಶ್ ಹಿರೇಜಂಬೂರು ಹೇಳಿದರು...

usheudaya.blogspot.com nodi...please...

ಅನಾಮಧೇಯ ಹೇಳಿದರು...

Hello Mr.Mavemsa...
This is my first visit to ur blog. I could just glance over the articles (since thursday is the busy day for me) still I must say Im impressed. Surely I'l go through the articles in my future visits.

With regards and New year wishes,
Prathibha Kudthadka (prathibha.kudthadka@gmail.com)
THARANGA

 
200812023996