ಮಂಗಳವಾರ, ಏಪ್ರಿಲ್ 28, 2009

ದಕ್ಷಿಣ ಆಫ್ರಿಕಾ ನೀರಸ!


                                             ಐಪಿಎಲ್ ಮೊದಲ ವಾರ

ಟ್ವೆಂಟಿ  ೨೦ ಎಂದರೆ ರನ್, ರನ್, ರನ್ ಎಂದುಕೊಂಡವರಿಗೆ ಮೊದಲ ವಾರ ಕಂಡಿದ್ದು ಬೇರೆಯದೇ ದೃಶ್ಯ. ಬೌಂಡರಿ, ಸಿಕ್ಸ್‌ಗಳ ಘೋರ ಅಬ್ಬರ ನಿರೀಕ್ಷಿಸಿದವರಿಗೆ ಮಳೆಯ ಕಿರಿಕಿರಿ! ಅನಿಲ್ ಕುಂಬ್ಳೆ ನಾಲ್ಕು ಓವರ್ ಬೌಲ್ ಮಾಡಿ ಲೆಕ್ಕ ಹಾಕಿ ೫ ರನ್ ಕೊಟ್ಟು ೫ ವಿಕೆಟ್ ಪಡೆದಿದ್ದು ಐಪಿಎಲ್‌ನಲ್ಲಿ, ಅದೂ ಕಳೆದ ವರ್ಷದ ಚಾಂಪಿಯನ್ ವಿರುದ್ಧ. ಇಂತದೊಂದು ಬೌಲಿಂಗ್‌ನ್ನು ಏಕದಿನ ಕ್ರಿಕೆಟ್‌ನಲ್ಲೂ ನಿರೀಕ್ಷಿಸುವುದು ಕಷ್ಟ. ಹಿಂದೆಲ್ಲ ನಿಯಂತ್ರಿತ ಬೌಲಿಂಗ್ ಎಂದರೆ ರನ್, ವಿಕೆಟ್ ಮಾತಾಗುತ್ತಿರಲಿಲ್ಲ. ಬೌಲರ್ ನೋಬಾಲ್ ಮಾಡಿದಾಗಲೆಲ್ಲ ನಿಯಂತ್ರಣ ತಪ್ಪಿದ ದೂಷಣೆ!
ಈಗ ನೋಡಿ, ಬೌಲರ್‌ಗಳು ನೋಬಾಲ್ ಮಾಡುವುದನ್ನು ಕನಸಿನಲ್ಲಿಯೂ ಕಲ್ಪಿಸಿಕೊಳ್ಳಲಾಗುತ್ತಿಲ್ಲ. ಎಲ್ಲಾ ಫ್ರೀ ಹಿಟ್ ಬೆದರಿಕೆ! ಈ ವರ್ಷದ ಐಪಿಎಲ್‌ನ ಮೊದಲ ಆರು ದಿನಗಳಲ್ಲಿ ಬಂದಿದ್ದು ಕೇವಲ ಎರಡು ನೋಬಾಲ್. ಸ್ವಾರಸ್ಯವೆಂದರೆ, ಅದರಲ್ಲೊಂದು ನೋಬಾಲ್‌ಗೆ ಸೌರವ್ ಗಂಗೂಲಿ ಗಳಿಸಿದ್ದು ಬರೋಬ್ಬರಿ ೨ ಸಿಕ್ಸರ್. ಅಂದರೆ ಒಂದು ಎಸೆತಕ್ಕೆ ೧೩ ರನ್ ದುಡಿಮೆ. ಇದೇ ಗಂಗೂಲಿ ಪಂಜಾಬ್ ತಂಡದ ಎದುರು ೧೪ ಎಸೆತಕ್ಕೆ ಒಂದು ರನ್ ಗಳಿಸಲು ಪರದಾಡಿದ್ದರು. ಹೀಗೆಂದರೆ ಟ್ವೆಂಟಿ ೨೦ ಅಭಿಮಾನಿಗಳಿಗೆ ಅರ್ಥವಾಗುವುದಿಲ್ಲ. ಗಂಗೂಲಿ ಎರಡೂವರೆ ಓವರ್ ಆಡಿ ಒಂದು ರನ್ ಗಳಿಸಿದರು ಎಂದರೆ?
ಈ ವರ್ಷದ ಸಂಚಿಕೆಯಲ್ಲಿ ಒಂದು ಹೊಸ ಪ್ರಯೋಗ. ಇನ್ನಿಂಗ್ಸ್‌ನ ಅರ್ಧಾಂಶ ಓವರ್ ಕೊನೆಗೊಂಡಾಗ ಈ ಏಳೂವರೆ ನಿಮಿಷಗಳ  ‘ತಂತ್ರಗಾರಿಕೆ ವಿರಾಮ’ವನ್ನು ನೀಡಲಾಗುತ್ತಿದೆ. ಯಾವುದೇ ತಂಡ ಈ ನಿಯಮವನ್ನು ವಿರೋಧಿಸಿರದಿದ್ದರೂ ತಜ್ಞರ ವಲಯಕ್ಕೆ ಇದು ಇಷ್ಟವಾಗಿಲ್ಲ. ಲಲಿತ್ ಮೋದಿ ‘ಇಲ್ಲದ’ ಮೀಸೆಯಡಿ ಮುಗುಳ್ನಗುತ್ತಿರಬಹುದು. ಏಳೂವರೆ ನಿಮಿಷ ತಂಡಗಳು ಬೇಕಾದ್ದು ಮಾಡಿಕೊಳ್ಳಲಿ, ಟಿವಿ ಹಕ್ಕು ಕೊಂಡವರಿಗೆ ಬರೋಬ್ಬರಿ ಜಾಹೀರಾತು ಸ್ಲಾಟ್‌ಗಳನ್ನು ಒದಗಿಸಿಕೊಟ್ಟಂತೆಯೂ ಆಯಿತು!
ತಮಾಷೆಗಳನ್ನು ಬದಿಗಿಟ್ಟು ನೋಡಿದರೂ, ಈ ತಂತ್ರ ವಿರಾಮ ಅಸಂಬದ್ಧವೇ ಸರಿ. ನಡೆಗಳನ್ನು ಕ್ಷಣ ಕ್ಷಣಕ್ಕೆ ಬದಲಿಸಬೇಕಿರುವ ಟ್ವೆಂಟಿ ಮಾದರಿಯಲ್ಲಿ ಅರ್ಧ ಇನ್ನಿಂಗ್ಸ್ ಮುಗಿಸಿದಾಗ ತಂತ್ರಗಾರಿಕೆಯನ್ನು ಅಭ್ಯಸಿಸುವುದೋ, ಬದಲಿಸುವುದೋ ಮುಗಿದುಬಿಡುವುದಿಲ್ಲ. ಅಂತದೊಂದು ಇರಲಿ ಎಂದರೂ ಏಳೂವರೆ ನಿಮಿಷಗಳ ಕಾಲಾವಧಿ ದೀರ್ಘವಾಯಿತು ಎಂಬುದು ನಿಸ್ಸಂಶಯ.
ಕ್ರೀಸ್‌ನಲ್ಲಿ ಗಂಭೀರವಾಗಿ ನಿಲ್ಲದೆ ಲೆಗ್‌ಸೈಡ್‌ನತ್ತ ಚಲಿಸುವ ಬ್ಯಾಟ್ಸ್‌ಮನ್‌ಗಳನ್ನು ಬೌಲರ್‌ಗಳೂ ಹಿಂಬಾಲಿಸುತ್ತಿರುವುದರಿಂದ ವೈಡ್‌ಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಐಪಿಎಲ್ ಮಹಿಮೆ. ಮತ್ತೆ ಈ ಲೆಕ್ಕವನ್ನು ಬೌಲರ್‌ಗಳ ತಲೆಗೇ ಕಟ್ಟಲಾಗುತ್ತಿರುವುದು ದುರಂತ. ಬಿಡುವ ಕ್ಯಾಚ್‌ಗಳ ಸಂಖ್ಯೆಯೂ ವೈಡ್‌ಗಳನ್ನು ಬೆನ್ನಟ್ಟಿದಂತಿದೆ!
ಫ್ಲಡ್‌ಲೈಟ್‌ನ ಸ್ತಂಬದ ಎತ್ತರ ಮೀರಲು ಆಕಾಶದೆಡೆಗೆ ಚಿಮ್ಮುವ ‘ಮಿಸ್ ಹಿಟ್’ಗಳನ್ನು ಹಿಡಿಯಲಾಗದೆ ನೆಲ ಚೆಲ್ಲುವ ದೃಶ್ಯ ಪದೇ ಪದೆ. ಬಹುಷಃ ಕೋಚ್‌ಗಳು ಇನ್ನು ಮುಂದೆ ಫ್ಲಡ್‌ಲೈಟ್ ರಾತ್ರಿ ಚೆಂಡನ್ನು ಮೇಲೆ ಎಸೆದು ಕ್ಯಾಚ್ ಪ್ರಾಕ್ಟೀಸ್ ಮಾಡಿಸಬಹುದು. ಹಿಂದೆಲ್ಲ ಕ್ಯಾಚ್ ಅಭ್ಯಾಸ ಎಂದರೆ ಬಾಬ್ ಸಿಂಪ್ಸನ್ ಬ್ಯಾಟ್ ಹಿಡಿದು ಸ್ಲಿಪ್ ಕ್ಯಾಚಿಂಗ್ ತರಬೇತಿ ಕೊಡುತ್ತಿದ್ದ ಮಾದರಿಯಲ್ಲಿರುತ್ತಿತ್ತು. ಇಷ್ಟಕ್ಕೂ ಗಗನಚುಂಬಿ ಕ್ಯಾಚ್‌ಗಳನ್ನು ಬಿಡಲು ಮಾಂಟಿ ಪಾನೇಸರ್ ಬೇಕಿಲ್ಲ, ಕಿಂಗ್ಸ್ ಇಲೆವೆನ್ ವಿರುದ್ಧ ಸುರಕ್ಷಿತ ರಾಹುಲ್ ದ್ರಾವಿಡ್ ಕೂಡ ಅವಮಾನ ಅನುಭವಿಸಬೇಕಾಯಿತು.
ಈವರೆಗಿನ ಚಟುವಟಿಕೆಯಲ್ಲಿ ಯಾವುದೇ ಹೊಸ ಹೊಡೆತವನ್ನು ಬ್ಯಾಟ್ಸ್‌ಮನ್‌ಗಳು ಪ್ರದರ್ಶಿಸಿಲ್ಲ. ಕೆವಿನ್ ಪೀಟರ್‌ಸನ್‌ರ ಸ್ವಿಚ್ ಶಾಟ್ ಈ ಬಾರಿ ಹೆಚ್ಚಿನ ಆಟಗಾರರಿಂದ ಪ್ರಯತ್ನಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಬೆನ್ನ ಹಿಂದೆ ಒಂದು ವಿವಾದವೂ ಏಳುತ್ತಿತ್ತೇನೋ. ಇಂಗ್ಲೆಂಡಿನ ಮಾಜಿ ವೇಗಿ ಆಂಗಸ್  ಫ್ರೇಸರ್ ಸ್ವಿಚ್ ಹಿಟ್ ನಿಷೇಧಿಸಬೇಕಾದ ಮಾತನ್ನಾಡುತ್ತಿದ್ದಾರೆ.
ಏನಿದು ಸ್ವಿಚ್ ಹಿಟ್? ಬಲಗೈ ಬ್ಯಾಟ್ಸ್‌ಮನ್ ಬೌಲರ್ ಚೆಂಡು ಎಸೆಯುವ ವೇಳೆಯಲ್ಲಿ ತಮ್ಮ ಬ್ಯಾಟ್‌ನ ಗ್ರಿಪ್‌ನ್ನೇ ಬದಲಿಸಿಕೊಂಡು ಎಡಗೈ ಬ್ಯಾಟ್ಸ್‌ಮನ್‌ನಂತೆ ಬ್ಯಾಟ್ ಬೀಸುತ್ತಾನೆ. ಇಂತಹ ಹೊಡೆತಕ್ಕೆ ಕ್ಷೇತ್ರ ರಕ್ಷಣೆ ಸಂಯೋಜಿಸುವುದು ಕಷ್ಟವಾಗುವುದರ ಜೊತೆಗೆ ಎಲ್‌ಬಿಡಬ್ಲ್ಯು ತೀರ್ಮಾನ ಗೊಂದಲಕರ. ಒಂದರ್ಥದಲ್ಲಿ ಬಲಗೈ ಬ್ಯಾಟ್ಸ್‌ಮನ್‌ಗೆ ಆಫ್ ಸ್ಟಂಪ್ ಆಚಿನ ಚೆಂಡು ಸ್ವಿಚ್ ಹಿಟ್ ಸಂದರ್ಭದಲ್ಲಿ ಲೆಗ್‌ಸ್ಟಂಪ್‌ನ ಹೊರಗೆ ಬಿದ್ದ ಚೆಂಡಾಗಿ ಪರಿವರ್ತನೆಯಾಗುತ್ತದೆ. ಎಲ್‌ಬಿಡಬ್ಲ್ಯು ತೀರ್ಮಾನ ಹೇಗೆ? ಇದು ಫ್ರೇಸರ್ ಪ್ರಶ್ನೆ. 
ಸ್ವಿಚ್ ಹಿಟ್‌ನಲ್ಲಿ ಬೌಂಡರಿ ಬಿಡಿ, ಸಿಕ್ಸರ್‌ನ್ನೇ ಬಾರಿಸುವ ಕೆವಿನ್ ಪೀಟರ್‌ಸನ್‌ರ ಜಾದೂ ಕೊನೆಪಕ್ಷ ಈ ಐಪಿಎಲ್‌ನಲ್ಲಿನ್ನೂ ಕಾಣಿಸಿಲ್ಲ. ಅಷ್ಟಕ್ಕೂ ಖುದ್ದು ಪೀಟರ್‌ಸನ್ ಈ ಹೊಡೆತ ಬಾರಿಸಲು ಯೋಚಿಸುವ ಮುನ್ನವೇ ಪೆವಿಲಿಯನ್‌ಗೆ ಧಾವಿಸುತ್ತಿದ್ದಾರೆ!
ಟ್ವೆಂಟಿ ೨೦ ನೇರಪ್ರಸಾರದ ವೀಕ್ಷಕ ವಿವರಣೆಕಾರರು ನೀರಸ ನೀರಸ. ಆಟದ ತಂತ್ರ, ಬೌಲಿಂಗ್ - ಬ್ಯಾಟಿಂಗ್ ತಾತ್ರಿಕತೆಯ ಬಗ್ಗೆ ತಜ್ಞ ಮಾಹಿತಿ ನೀಡಲು  ಸಮಯವಿಲ್ಲದಿರುವುದರಿಂದ ಸುನಿಲ್ ಗವಾಸ್ಕರ್, ರವಿಶಾಸ್ತ್ರಿ, ಹರ್ಷ ಬೋಗ್ಲೆಯವರಂತ ಘಟಾನುಘಟಿಗಳಿದ್ದೂ ವ್ಯಥ. ಬ್ಯಾಟ್ಸ್‌ಮನ್ ಸಿಡಿಸುವ ಬೌಂಡರಿ, ಸಿಕ್ಸರ್‌ಗಳಿಗೆ ಉದ್ಘಾರಗಳ ಹಿಮ್ಮೇಳ ಒದಗಿಸುವ ‘ಚಿಯರ್ ಬಾಯ್ಸ್’ಗಳ ಪಾತ್ರ ಇವರದು! ಹ್ವಾಕ್ ಐ, ಸ್ನಿಕೋ ಮೀಟರ್, ಸೂಪರ್ ಸ್ಲೋ ಮೋನಂತಹ ಆಧುನಿಕ ವ್ಯವಸ್ಥೆಗಳನ್ನು ಬಳಸಿಕೊಳ್ಳಲೇ ಸಮಯ ಇಲ್ಲ ಎನ್ನುವುದು ಟ್ವೆಂಟಿ ೨೦ಯಲ್ಲಿ ಈ ವಾರ ಎದ್ದು ಕಂಡ ಕೊರತೆ.


ಕೊನೆ ಮಾತು - ಮಂದಿರಾ ಬೇಡಿಯ ಮುಖದಲ್ಲಿ ಪ್ರಾಯ ಕಳೆದುಹೋದ ರೇಖೆಗಳು ಎದ್ದು ಕಾಣುತ್ತದೆ. ಹಿಂದಿನ ‘ರೋಮಾಂಚನ’ ಇಲ್ಲ. ರಸಿಕರ ಒಕ್ಕೊರಲಿನ ಕೂಗು, ಇನ್ನೂ ಆಕೆಯ ಉಪಸ್ಥಿತಿ ಬೇಡಿ! ಯಾಕೋ ಗೊತ್ತಿಲ್ಲ, ಚಿಯರ್ ಗಲ್ಸ್ ಕೂಡ ಎದೆ ಝಲ್ಲೆನಿಸುತ್ತಿಲ್ಲ. ವಿಜಯ್ ಮಲ್ಯ ತಮ್ಮ ತಂಡದ ಸಾಲು ಸಾಲು ಸೋಲಿನ ಬೆನ್ನಲ್ಲಿ ಇತ್ತಲೂ ಗಂಭೀರವಾಗಿ ಚಿಂತಿಸಬೇಕಾಗಿದೆ!
-ಮಾವೆಂಸ

 
200812023996