ಭಾನುವಾರ, ಫೆಬ್ರವರಿ 13, 2011

ಇರಲಿ ಬಿಡಿ, ದೂರದ ಬೆಟ್ಟ ನುಣ್ಣಗೆ!


ನಾನು ಬರೆದದ್ದು ಲೆಕ್ಕ ಮಾಡಿ ಮೂರು ಮತ್ತೊಂದು ಕತೆ. ಮೊದಲ ಕತೆಯನ್ನು ತುಂಬಾ ಚೈಲ್ಡಿಷ್ ಆಗಿ ಬರೆದಿದ್ದರಿಂದ ಯಾರಿಗೂ ಓದಲು ಕೊಡಲು ಮನಸ್ಸಾಗುತ್ತಿಲ್ಲ. ಈಗ ತುಸು ಸುಧಾರಿಸಿದ್ದೇನೆ ಎಂದುಕೊಂಡಿದ್ದೆ. ಆದರೆ ಇತ್ತೀಚೆಗೆ ಬರೆದ ಈ ಕೆಳಗಿನ ಕತೆಯನ್ನು ಕನ್ನಡದ ಎರಡು ಸಾಪ್ತಾಹಿಕಗಳಿಗೆ ಕಳಿಸಿದರೆ ಮುಲಾಜಿಲ್ಲದೆ ವಾಪಾಸು ಕಳಿಸಿದವು!
ಊಹ್ಞೂ, ನಾನು ಹೆತ್ತ ಹೆಗ್ಗಣವಾದ್ದರಿಂದ ನನಗೆ ಇದು ಶ್ರೇಷ್ಟ! ಹಾಗೆಂದುಕೊಂಡೇ ಬೆಂಗಳೂರಿನ ‘ಚೈತ್ರರಶ್ಮಿ’ ಮಾಸಿಕದ ವಾರ್ಷಿಕ ಕಥಾಸ್ಪರ್ಧೆಗೆ ಕಳುಹಿಸಿದೆ. ಆಶ್ಚರ್ಯ, ಅವರ ಕಥಾಸಂಕಲನಕ್ಕೆ ಆಯ್ಕೆಯಾದ ಕತೆಗಳಲ್ಲಿ ನನ್ನದೂ ಒಂದು. ಈ ಕಥಾಸಂಕಲನದ ಬಿಡುಗಡೆ ಇಂದು ಸಂಜೆ ಬೆಂಗಳೂರಿನ ನಯನ ಸಭಾಂಗಣದಲ್ಲಿ. ಮನಸ್ಸು ಅಲ್ಲಿದ್ದರೂ ಇಲ್ಲಿ ಕುಳಿತು ಆ ಕತೆಯನ್ನು ಅಪ್‌ಲೋಡ್ ಮಾಡುತ್ತಿರುವೆ.......

-ಮಾವೆಂಸ


(ಇಲ್ಲಿನ ಎಲ್ಲ ಪಾತ್ರಗಳು ಸಂಪೂರ್ಣ ಕಾಲ್ಪನಿಕ)

ಫೋನ್ ರಿಂಗಾಗುತ್ತಿತ್ತು, ಎತ್ತಿಕೊಂಡೆ.
"ನಮಸ್ಕಾರ, ಹೇಳಿ"
"ನಮಸ್ಕಾರ, ನಾನು ನರೇಂದ್ರ ಶೆಣೈ ಅಂತ. ಮಂಗಳೂರಿನವನು. ನೀವು ಈ ವಾರ ‘.........’ ದಿನಪತ್ರಿಕೆಯ ಕೃಷಿಪುಟದಲ್ಲಿ ಬರೆದ ‘ಶ್ರೀಗಂಧದ ಕೃಷಿಯಲ್ಲಿ ಲಾಭದ ಪರಿಮಳ’ ಲೇಖನ ಓದಿದೆ. ಆ ಬಗ್ಗೆ ಇನ್ನಷ್ಟು ಮಾಹಿತಿ ಬೇಕಿತ್ತು. ಹಾಗಾಗಿ ತೊಂದರೆ ಕೊಡುತ್ತಿರುವೆ. ನಾನೂ ಶ್ರೀಗಂಧ ಬೆಳೆಯಬೇಕೆಂದಿರುವೆ. ಅದರ ಗಿಡ ನಮ್ಮಲ್ಲಿ ಎಲ್ಲಿ ಸಿಕ್ಕೀತು...."
ಅತ್ತ ಶ್ರೀಮಾನ್ ಶೆಣೈಯವರ ಮಾತು ಮುಂದುವರಿಯುತ್ತಿದ್ದಂತೆ ನನ್ನ ನೆನಪು ಹಿಂದೋಡಿತು. ಕಳೆದ ಗುರುವಾರದ ಕೃಷಿ ಪುರವಣಿಯಲ್ಲಿ ಸಾಮಾನ್ಯ ಕೃಷಿಕರೂ ಬೆಳೆಯಬಹುದಾದ ಗಂಧದ ಗಿಡ ಕೃಷಿ ಬಗ್ಗೆ ಫೋಟೋ ಲೇಖನ ಬರೆದಿದ್ದೆ. ’ಇತ್ತೀಚಿನ ಸರ್ಕಾರಿ ಆದೇಶದ ಪ್ರಕಾರ ಶ್ರೀಗಂಧದ ಮರಗಳ ಒಡೆತನ ಜಮೀನು ಮಾಲಿಕನದ್ದು. ಇದರ ಬೆಳೆಯನ್ನು ಹಣದಲ್ಲಿ ಹೋಲಿಸುವುದಾದರೆ ಅದು ಅಡಿಕೆ, ಶುಂಠಿಯಂತವನ್ನು ಅನಾಯಾಸವಾಗಿ ಹಿಂದೆ ಹಾಕಿಬಿಡುತ್ತದೆ. ಒಂದು ಲೆಕ್ಕಾಚಾರದ ಪ್ರಕಾರ, ಒಂದು ಎಕರೆ ಭೂಮಿಯಲ್ಲಿ ಬೆಳೆದ ಶ್ರೀಗಂಧದಿಂದ ೧೫ ವರ್ಷಗಳ ಕೊಯ್ಲಿಗೆ ಬೆಳೆಗಾರನಿಗೆ ಒಂದು ಕೋಟಿ ಮೂವತ್ತೆರಡು ಲಕ್ಷ ರೂಪಾಯಿ ಪಡೆಯಬಹುದು! ಕಾವಲಿಗೆಂದು ಬರೋಬ್ಬರಿ ೩೨ ಲಕ್ಷ ಖರ್ಚು ಮಾಡಿದರೂ ಕೋಟಿ ಉಳಿದೀತು! ರೈತರು ಇತ್ತ ಯೋಚಿಸಬೇಕಿರುವ ಕಾಲವಿದು’ ಎಂದು ವಿಸ್ತಾರವಾಗಿ ಬರೆದಿದ್ದೆ.
ಆದರೆ ಈ ಮನುಷ್ಯನಿಗೆ ನನ್ನ ಫೋನ್ ನಂಬರ್ ಎಲ್ಲಿ ಸಿಕ್ಕಿತು? ಆ ಲೇಖನದ ಜೊತೆಯಲ್ಲಿಯೇನೂ ಕೊಟ್ಟಿರಲಿಲ್ಲ. ಅನುಮಾನ ಹೆಚ್ಚು ವೇಳೆ ಬದುಕಿರಬಾರದು, ಆತನನ್ನು ಕೇಳಿಯೇಬಿಟ್ಟೆ. "ಹ್ಞಾ. ನಾನು ಪತ್ರಿಕೆಯ ಕಛೇರಿಗೆ ಫೋನ್ ಮಾಡಿ ನಿಮ್ಮ ನಂಬರ್ ಪಡೆದೆ. ನಿಮ್ಮ ಲೇಖನ ಆ ಮಟ್ಟಿಗೆ ನನ್ನನ್ನು ಸೆಳೆದುಬಿಟ್ಟಿದೆ"
ಅಪರಿಚಿತ ವ್ಯಕ್ತಿಯಾದರೂ ನನ್ನ ಲೇಖನ ಓದಿ ಪ್ರತಿಕ್ರಿಯಿಸುತ್ತಿರುವುದರಿಂದ ನನ್ನ ಗರ್ವ ಹೆಚ್ಚಿತು. ಉಲ್ಲಾಸದಿಂದಲೇ ಆತನ ಪ್ರಶ್ನೆಗಳಿಗೆ ಉತ್ತರಿಸಿದೆ. ಕೆಲ ನಿಮಿಷ ಮಾತನಾಡಿದ ಆತ, "ಪ್ರಸಾದ್, ಇನ್ನಾವುದೇ ಅನುಮಾನವಿದ್ದರೆ, ಮಾಹಿತಿ ಬೇಕಿದ್ದರೆ ನಿಮ್ಮನ್ನು ಕಾಂಟ್ಯಾಕ್ಟ್ ಮಾಡುವೆ. ತೊಂದರೆಯಿಲ್ಲ ತಾನೇ?" ಎಂದ. ನಾನು "ಷ್ಯೂರ್.....ಷ್ಯೂರ್" ಎನ್ನುತ್ತ ಫೋನ್ ಇಟ್ಟೆ.
ವಾರ ಕಳೆದಿರಬೇಕು. ಒಂದು ದಿನ ಬೆಳಿಗ್ಗೆ ಒಂಭತ್ತರ ಆಸುಪಾಸಿನಲ್ಲಿ ಶೆಣೈಯವರಿಂದ ಮತ್ತೊಂದು ಫೋನ್. ಈಗ ನನಗೆ ಇವರು ಶ್ರೀಗಂಧದ ಮರ ಬೆಳೆಸಲು ಗಂಭೀರವಾಗಿ ಚಿಂತಿಸುತ್ತಿದ್ದಾರೆ ಎಂಬ ಸುಳಿವು ಸಿಕ್ಕಿತು. "ಪ್ರಸಾದ್, ಮಂಗಳೂರಿನ ಅರಣ್ಯ ಇಲಾಖೆಯಲ್ಲಿ ವಿಚಾರಿಸಿದೆ. ಇವರ ನರ್ಸರಿಯಲ್ಲಿ ಶ್ರೀಗಂಧದ ಗಿಡಗಳೆಲ್ಲ ಖರ್ಚಾಗಿವೆಯಂತೆ. ಇನ್ನು ಸಿಗುವುದು ಮುಂದಿನ ಸೀಸನ್‌ನಲ್ಲಿ. ನನಗೆ ನಿಮ್ಮ ಸಾಗರ, ಶಿವಮೊಗ್ಗಗಳ ಫಾರೆಸ್ಟ್ ಕಛೇರಿಗಳ ನಂಬರ್ ಕೊಡಲಾದೀತೆ?"
ನನಗೆ ತುಸು ಪೀಕಲಾಟ. ಒಂದೇಟಿಗೆ ನನ್ನ ಕೈಯಲ್ಲಿ ಆ ನಂಬರ್‌ಗಳು ಇಲ್ಲ. ಫೈಲ್‌ಗಳಲ್ಲಿ ಹುಡುಕಬೇಕು. ತಕ್ಷಣಕ್ಕೆ ಸಾಧ್ಯವಾಗದ ಕೆಲಸವದು. ಕನಿಷ್ಠ ಅರ್ಧ ಘಂಟೆಯಾದರೂ ಬೇಕಾದೀತು. ಹಾಗೆಂದುಕೊಂಡವನು ಶೆಣೈಯವರಿಗೆ ಇನ್ನರ್ಧ ಘಂಟೆ ಬಿಟ್ಟು ಮಾಹಿತಿ ಒದಗಿಸುತ್ತೇನೆ. ನಿಮ್ಮ ಫೋನ್ ನಂಬರ್ ಕೊಡಿ, ತಿಳಿಸುತ್ತೇನೆ ಎಂದೆ. ಶೆಣೈ ಸುತರಾಂ ಒಪ್ಪಲಿಲ್ಲ. "ಬೇಡ, ಬೇಡ. ನನ್ನ ಅಗತ್ಯಕ್ಕೆಂದು ನೀವು ಫೋನ್ ಮಾಡುವುದು ಸರಿಯಲ್ಲ. ನಾನೇ ಇನ್ನೊಂದು ಮುಕ್ಕಾಲು ಘಂಟೆ ನಂತರ ಕರೆ ಮಾಡುತ್ತೇನೆ. ಈ ಪರಿ ತ್ರಾಸ ಕೊಡುತ್ತಿರುವುದಕ್ಕೆ ಕ್ಷಮೆಯಿರಲಿ"
ನನ್ನೊಳಗಿನ ಜುಗ್ಗನಿಗೆ ನಿಜಕ್ಕೂ ವಿಪರೀತ ಖುಷಿಯಾಗಿತ್ತು. ಅಲ್ವ ಮತ್ತೆ, ಮಾಹಿತಿ ಬೇಕಾಗಿರುವುದು ಅವರಿಗೆ. ಹಾಗಂತ ನೀವೇ ಫೋನ್ ಮಾಡಿ ಎನ್ನುವುದು ಧಾರ್ಷ್ಟ್ಯವಾಗುತ್ತಿತ್ತು. ಸೌಜನ್ಯಕ್ಕೆ ಕರೆ ಮಾಡಿ ತಿಳಿಸುವೆ ಎಂದಿದ್ದೆ ಅಷ್ಟೆ. ಈಗ ಆರಾಮ. ಮಾಹಿತಿ ಹುಡುಕಿ ಇಟ್ಟರೆ ಆಯಿತು. ಅವರು ಕರೆ ಮಾಡಿದಾಗ ಒದಗಿಸುವುದು. ಲೇಖನ ಓದಿ ವಿವರ ಕೇಳುವ ಅಪರಿಚಿತರಿಗೆಲ್ಲ ನಾನೇ ಫೋನ್ ಮಾಡಿ ಅವರ ಅಗತ್ಯತೆ ಪೂರೈಸುವುದೆಂದರೆ ಎಷ್ಟು ಖರ್ಚು? ಇಷ್ಟಕ್ಕೂ ಮುಂದೆಂದಾದರೂ ಬೇಕಾದೀತು ಎನಿಸಿದ್ದರಿಂದ ಮನೆ ಫೋನ್ ಕಾಲರ್ ಐಡಿಯಲ್ಲಿ ನಮೂದಾಗಿದ್ದ ಶೆಣೈ ನಂಬರ್‌ನ್ನು ಡೈರಿಯಲ್ಲಿ ಒಂದೆಡೆ ಬರೆದಿಟ್ಟೆ.
ಈ ನಡುವೆ ಶೆಣೈ ಹತ್ತಾರು ಬಾರಿ ಕರೆ ಮಾಡಿ ಚರ್ಚೆ ನಡೆಸಿದ್ದರು. ಅವರ ಬಗ್ಗೆ ಸಾಕಷ್ಟು ಸುದ್ದಿ ಸಂಗ್ರಹವಾಗಿತ್ತು. ೫೫-೬೦ರ ವಯಸ್ಸಿನ ಶೆಣೈರ ಧ್ವನಿ ಮಾತ್ರ ಚಿತ್ರನಟ ಅನಂತನಾಗ್‌ರ ಧ್ವನಿಯೇ. ಮಾತಿನ ಬುಡದಲ್ಲೊಮ್ಮೆ ಪ್ರಸಾದ್ ಎನ್ನದೆ ಇರುತ್ತಿರಲಿಲ್ಲ. ಅವರದ್ದು ಮಂಗಳೂರಿನಲ್ಲೇ ವಾಸ. ಬ್ಯಾಂಕ್ ಉದ್ಯೋಗದಿಂದ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ. ವಿಟ್ಲದ ಹತ್ತಿರದ ಪಾಂಡೇಲು ಎಂಬಲ್ಲಿ ಅವರ ಹದಿನಾರು ಎಕರೆ ಗದ್ದೆ, ಖುಷ್ಕಿ ಎಲ್ಲ ಇದೆ. ಈವರೆಗೆ ಅವರ ತಮ್ಮ ಗದ್ದೆ ಮಾಡುತ್ತಿದ್ದರು. ಇನ್ನು ತಾವು ಖುದ್ದು ಕೃಷಿ ಮಾಡುವುದು ಶೆಣೈ ಆಸೆ. ಅಲ್ಲೇ ಒಂದು ಮನೆ ಮಾಡಿಕೊಂಡು ಪ್ರಶಾಂತ ಜೀವನ ನಡೆಸುವ ಅವರ ಬಯಕೆ ನನ್ನಂತ ಕೃಷಿಕ ಕಂ ಲೇಖಕನಿಗೆ ಆಹ್ಲಾದಕರ ವಿಷಯ.
"ಪ್ರಸಾದ್, ಒಂದು ಸಣ್ಣ ಸಮಸ್ಯೆ ಹುಟ್ಟಿದೆ. ನಿನ್ನೆ ನಮ್ಮ ಜಮೀನಿನ ಸರ್ವೆಯನ್ನು ಮಾಡಿಸಿದೆ. ನಮ್ಮ ಜಮೀನಿನ ಒಂದು ಭಾಗ ನಮ್ಮ ದೊಡ್ಡಪ್ಪನ ಮಗನ ಸುಪರ್ದಿಗೆ ಸೇರಿಬಿಟ್ಟಿರುವುದು ಪತ್ತೆಯಾಗಿದೆ. ಅವರು ಆ ಭಾಗದಲ್ಲಿ ತೆಂಗು ಹಾಕಿದ್ದಾರೆ. ವಿನಂತಿಸಿಕೊಂಡರೆ ಬಿಡುವ ಲಕ್ಷಣ ಕಾಣುತ್ತಿಲ್ಲ. ಬಹುಷಃ ಕೋರ್ಟಿಗೇ ಹೋಗಬೇಕಾದೀತೇನೋ"
ನಾನೇನೂ ಕಾನೂನು ತಜ್ಞನಲ್ಲ. ಅಷ್ಟಿಷ್ಟು ಕೃಷಿ ಗೊತ್ತು ಎಂಬುದನ್ನು ಬಿಟ್ಟರೆ ಯಾವೊಂದು ಕಾನೂನುಗಳೂ ತಿಳಿದಿಲ್ಲ. ಇವತ್ತಿಗೂ ಮ್ಯುಟೇಷನ್, ಕಾನೇಷುಮಾರಿ ಅಂತ ಯಾರಾದರೂ ಕೃಷಿ ದಾಖಲೆಗಳ ಬಗ್ಗೆ ಮಾತನಾಡಿದರೂ ಗೊಂದಲಕ್ಕೀಡಾಗುತ್ತೇನೆ. ಇನ್ನು ಶೆಣೈರಿಗೆ ಸಲಹೆ ನೀಡುವ ಮಾತೆಲ್ಲಿಂದ ಬಂತು? ನನ್ನಿಂದ ಸಾಧ್ಯವಾದುದು ಸಾಂತ್ವನ, ಸ್ಫೂರ್ತಿ ತುಂಬುವ ಕೆಲಸ. ಅದನ್ನು ಪ್ರಾಂಜಲವಾಗಿ ಮಾಡಿದೆ.
ಶೆಣೈರ ಸಮಸ್ಯೆ ಗಂಭೀರವಾಗಿತ್ತು. ಜಮೀನು ಈಗ ವಿವಾದದಲ್ಲಿದೆ. ಇದೇ ಕಾರಣವೊಡ್ಡಿ ಬ್ಯಾಂಕ್ ಸಾಲ ಒದಗಿಸಲು ಹಿಂಜರಿಯುತ್ತಿದೆ. ಶ್ರೀಗಂಧದಂತ ಬೆಳೆಗೆ ಕಾವಲು ಒದಗಿಸಲೇ ಲಕ್ಷಾಂತರ ರೂಪಾಯಿಗಳ ಖರ್ಚಿದೆ. ಬಹುಷಃ ಈ ಎಲ್ಲ ಘಟನೆಗಳು ಶೆಣೈರನ್ನು ವಿಚಲಿತಗೊಳಿಸಿರಬೇಕು. ಅದು ಅವರೊಂದಿಗಿನ ದೂರವಾಣಿ ಸಂಭಾಷಣೆಗಳಲ್ಲಿಯೇ ವ್ಯಕ್ತವಾಗುತ್ತಿತ್ತು. ಶ್ರೀಗಂಧ ಬೇಡ, ಗ್ಲಾಡಿಯೋಲಸ್ ಬೆಳೆದರೆ ಹೇಗೆ, ದಕ್ಷಿಣ ಕನ್ನಡದಲ್ಲಿ ರಬ್ಬರ್ ಆದೀತಾ ಎಂಬಿತ್ಯಾದಿ ವಿಚಾರಗಳನ್ನು ಶೆಣೈ ಚರ್ಚಿಸಲಾರಂಭಿಸಿದ್ದರು. ಹೊಸ ಹೊಸ ವಿಷಯ, ಸಂಬಂಧಿತ ವ್ಯಕ್ತಿಗಳ ಫೋನ್ ನಂಬರ್ ಕೇಳುತ್ತಿದ್ದರು. ನಾನು ಹುಡುಕಿ ತೆಗೆದಿಡುತ್ತಿದ್ದೆ. ಅವರು ಫೋನ್ ಮಾಡಿ ಅವನ್ನು ಪಡೆದುಕೊಳ್ಳುತ್ತಿದ್ದರು.
ಒಬ್ಬ ಮನುಷ್ಯನನ್ನು ದೀರ್ಘಕಾಲದಿಂದ ಮುಖತಃ ಭೇಟಿಯಾಗದೇ ಸಂಪರ್ಕದಲ್ಲಿದ್ದಾಗ ನೋಡಬೇಕೆಂಬ ಕುತೂಹಲ ಹೆಚ್ಚಾಗುತ್ತದೆ. ನನಗೂ ಶೆಣೈರನ್ನು ಭೆಟ್ಟಿಯಾಗಬೇಕೆಂಬ ಬಯಕೆ ದಟ್ಟವಾಗತೊಡಗಿತ್ತು. ಆದರೆ ತಿರುಗಾಟಗಳ ಅಲರ್ಜಿಯಿಂದ ಹಿಂಜರಿಯುವಂತಾಗಿತ್ತು. ಇದೇ ವೇಳೆ ಶೆಣೈರ ಕರೆ ಶಬ್ಧ , ಟ್ರಿಂಗ್..........ಟ್ರಿಂಗ್...............
"ಪ್ರಸಾದ್, ನಿಮ್ಮೂರಿನ ಹತ್ತಿರ ಹೆಗಡೆ ಫಾರ್ಮ್‌ಎಂಬುದೊಂದಿದೆಯಂತಲ್ಲ. ಅಲ್ಲಿ ಅದ್ಭುತವಾದ ತೋಟ ಮಾಡಿದ್ದಾರೆಂದು ಕೇಳಿಪಟ್ಟೆ. ನಿಮ್ಮಲ್ಲಿಂದ ಅಲ್ಲಿಗೆ ಎಷ್ಟು ದೂರ, ಒಮ್ಮೆ ಹೋಗಿ ಬರಬಹುದಾ?" ನನ್ನ ಸಕಾರಾತ್ಮಕ ಉತ್ತರದಿಂದ ಶೆಣೈ ನಮ್ಮಲ್ಲಿಗೆ ಬರುವ ದಿನ ನಿಕ್ಕಿಯಾಯಿತು.
ಹೊಚ್ಚ ಹೊಸ ಕ್ವಾಲಿಸ್ ಕಾರು. ಶೆಣೈಯವರಲ್ಲದೆ ಅವರ ಸ್ನೇಹಿತರಾದ ರಾಮ್‌ಗೋಪಾಲ್ ಉಪಾಧ್ಯ, ನರಸಿಂಹ ಶಾಸ್ತ್ರಿ, ತಮ್ಮ ಸುರೇಂದ್ರ ಶೆಣೈ ನೇರವಾಗಿ ನಮ್ಮಲ್ಲಿಗೇ ಬಂದರು. ಬಿಳಿ ಬಿಳಿ ತಲೆಗೂದಲಿನ ಶೆಣೈ ‘ಆಸ್ಟ್ರೇಲಿಯಾದಿಂದ ಮಗಳು ಕಳಿಸಿಕೊಟ್ಟ ಬಾದಾಮಿ ಬೀಜ’ದ ದೊಡ್ಡ ಕವರ್ ಕೊಟ್ಟದ್ದು ಖುಷಿ ಕೊಟ್ಟದ್ದು ಖರೆ. ಘಂಟೆಗೊಂದು ಸಿಗರೇಟು ಹೊಡೆಯುತ್ತಿದ್ದ ಶೆಣೈ ಮಧ್ಯೆ ಮಧ್ಯೆ ಅನನುಭವಿಗಳಂತೆ ಗಂಟಲಿಗೆ ಹೊಗೆ ಸಿಕ್ಕಿಸಿಕೊಂಡು ಕೆಮ್ಮುತ್ತಿದ್ದುದು ಮಾತ್ರ ನನಗರ್ಥವಾಗಲಿಲ್ಲ!
ಕೃಷಿಕ ಎಂಬ ಹಣೆಪಟ್ಟಿ ಇದ್ದೂ ನಾನು ಹೆಗಡೆ ಫಾರ್ಮ್‌ನ್ನು ನೋಡಿರಲಿಲ್ಲ. ಇವರನ್ನೆಲ್ಲ ಕರೆದುಕೊಂಡು ಹೋಗಿದ್ದು ನನಗೆ ಡಬಲ್ ಲಾಭದ ವಿಷಯವಾಗಿತ್ತು. ಫಾರ್ಮ್‌ನಲ್ಲಿ ಫೋಟೋ ತೆಗೆದು, ಮಾಹಿತಿ ಪಡೆದು ಇನ್ನೊಂದು ಲೇಖನ ತಯಾರಿಸಬಹುದಲ್ಲ!? ಶೆಣೈ ಪುಟ್ಟ ಹುಡುಗನಂತೆ ಉತ್ಸಾಹದ ಚಿಲುಮೆ. ಫಾರ್ಮ್ ನೋಡಿದರು, ಅದರ ಮಾಲಿಕ ಹೆಗಡೆಯವರಲ್ಲಿ ಕೃಷಿ, ಡಿಕಾಕ್ಷನ್ ಟ್ಯಾಂಕ್, ಡ್ರಿಪ್, ಮೈಕ್ರೋ ಸ್ಪ್ರಿಂಕ್ಲರ್ ಬಗ್ಗೆ ಘಂಟೆಗಟ್ಟಲೆ ಚರ್ಚೆ ನಡೆಸಿದರು. ಅವರ ಕೃಷಿ ಉತ್ಸಾಹ ಅದಮ್ಯ. ಆ ಕ್ಷಣಗಳಲ್ಲಿ ಗೈಡ್ ಪ್ರಸಾದ್ ಮರೆತುಹೋಗಿದ್ದ!
ಶೆಣೈಯವರಿಗೆ ನಮ್ಮ ತೋಟವೂ ಇಷ್ಟವಾಗಿತ್ತು. ನಾವು ದೊಡ್ಡ ಪ್ರಮಾಣದಲ್ಲಿ ನಡೆಸುವ ಎರೆಗೊಬ್ಬರ ತಯಾರಿ ಗಮನ ಸೆಳೆದಿತ್ತು. ಆ ಬಗ್ಗೆ ದೀರ್ಘವಾಗಿ ವಿಚಾರಿಸಿದವರು ಖಚಿತವಾಗಿ ಹೇಳಿಬಿಟ್ಟರು, "ಪ್ರಸಾದ್, ಮೊದಲ ವರ್ಷ ನಿಮ್ಮಿಂದಲೇ ನಾನು ಎರೆಗೊಬ್ಬರ ಖರೀದಿಸುತ್ತೇನೆ. ಘಟ್ಟದ ಕೆಳಗಿನಿಂದ ತೆಂಗಿನಕಾಯಿ ಲೋಡ್ ಕಳಿಸಿ ವಾಪಾಸು ಬರುವಾಗ ಎರೆಗೊಬ್ಬರ ತುಂಬಿದರೆ ಖರ್ಚು ಗಿಟ್ಟೀತು. ಆದರೆ ಮುಂದಿನ ಸೀಸನ್‌ನಲ್ಲಿ ನಮ್ಮಲ್ಲೇ ಎರೆಪ್ಲಾಂಟ್ ಮಾಡುತ್ತೇನೆ. ಹುಳ ನೀವು ಕೊಡಬೇಕು. ಪ್ಲಾಂಟ್ ನಿರ್ಮಿಸುವ ವೇಳೆ ನೀವೇ ಬಂದು ನಾಲ್ಕು ದಿನ ನಮ್ಮಲ್ಲಿದ್ದು ಮೇಲ್ವಿಚಾರಣೆ ನಡೆಸಬೇಕು" ಹೆ.....ಹ್ಹೆ........... ಗೊಬ್ಬರ ಮಾರಾಟವಾಗುವ ಆಮಿಷ ಇದ್ದಾಗ ನಾನು ತಲೆಯಾಡಿಸದೇ ಇದ್ದೀನೇ?
ನನಗ್ಗೊತ್ತು, ನಾನೊಂದು ತರ ವಿಚಿತ್ರ. ನಾನು ಒಳ್ಳೆಯ ಕಿವಿಯೇ ವಿನಃ ಪ್ರಶ್ನಕನಲ್ಲ. ನನ್ನೊಂದಿಗೆ ಮಾತನಾಡುವವರು ಹೇಳಿದ್ದನ್ನು ಕೇಳಿಸಿಕೊಳ್ಳುತ್ತೇನೆಯೇ ವಿನಃ ನಾನಾಗಿ ಪ್ರಶ್ನೆ ಕೇಳುವುದಿಲ್ಲ. ಅದೂ ಇದೂ ವಿಚಾರಿಸುವುದಿಲ್ಲ. ಅದಕ್ಕೇ ಏನೋ ನನಗೆ ತಮ್ಮ ಕತೆ ಹೇಳಿಕೊಳ್ಳುವ ಸ್ನೇಹಿತರೇ ಜಾಸ್ತಿ! ತಮ್ಮ ಕೃಷಿ, ಜಮೀನಿನ ರಗಳೆಗಳನ್ನು ವರದಿ ಮಾಡುತ್ತಿದ್ದ ಶೆಣೈ ಯಾಕೋ ಏನೋ ತಮ್ಮ ಸಂಸಾರದ ಕತೆ ಹೇಳಿಕೊಂಡವರಲ್ಲ. ಯಾವತ್ತೋ ಒಮ್ಮೆ ಮಾತಿನ ಮಧ್ಯೆ ತಾವು ಮಂಗಳೂರಿನಲ್ಲಿರುವ ಬಂಗಲೆಯ ಪ್ರಸ್ತಾಪ ಮಾಡಿದ್ದು ಬಿಟ್ಟರೆ ಅವರ ವಿಳಾಸ ಕೇಳುವುದಕ್ಕೂ ನಾನು ಹೋಗಿರಲಿಲ್ಲ. ಸುಮ್ಮನೆ ಅವರ ವಾಸಸ್ಥಳವನ್ನು ಒಂದೆಡೆ ನಮೂದಿಸಿಟ್ಟು, ಮರೆತಿದ್ದೆ.
ನಿಜಕ್ಕೂ ಕೃಷಿಗೆ ಇಳಿಯುವ ಹಂತದಲ್ಲಿ ಶೆಣೈಯವರಿಗೆ ವ್ಯವಸಾಯದ ಕಷ್ಟ ಅರ್ಥವಾಗಿತ್ತು. "ಪ್ರಸಾದ್, ಇಲ್ಲಿ ಕೃಷಿಕಾರ್ಮಿಕರೇ ಸಿಗುತ್ತಿಲ್ಲ. ಕೊನೆಪಕ್ಷ ಈಗಿರುವ ಜಮೀನಿಗೆ ಬೇಲಿ ಹಾಕೋಣ ಎಂದರೂ ಆಳು ಸಿಗುತ್ತಿಲ್ಲ. ನಮ್ಮಲ್ಲಿಯೇ ಬಂದು ಬಿಡಾರ ಹೂಡುವ ಕಾರ್ಮಿಕ ಕುಟುಂಬ ನಿಮ್ಮಲ್ಲಿ ಸಿಕ್ಕೀತೆ, ವಿಚಾರಿಸಿ"
ನಾನು ತಕ್ಷಣವೇ ವಿವರಿಸಿದ್ದೆ, "ಇಲ್ಲ ಸಾರ್, ಮಲೆನಾಡಿನಲ್ಲಿ ಅಂತಹ ಕುಟುಂಬಗಳು ಸಿಕ್ಕುವುದಿಲ್ಲ. ಅದಕ್ಕೇನಿದ್ದರೂ ನೀವು ಬಯಲುಸೀಮೆಯಲ್ಲಿ ವಿಚಾರಿಸಬೇಕು. ಅಷ್ಟಕ್ಕೂ ಅಲ್ಲಿ- ನಿಮ್ಮಲ್ಲಿ ಸೆಖೆ ಒಂದೇ ರೀತಿ ಇರುವುದರಿಂದ ಅವರೇ ನಿಮಗೆ ಲಗತ್ತಾದಾರು"
"ಸರಿ, ಸರಿ. ನನಗೆ ಬೀದರ್‌ನಲ್ಲಿ ಒಬ್ಬ ಹಳೆಯ ಸ್ನೇಹಿತನಿದ್ದಾನೆ. ಇಂದೇ ವಿಚಾರಿಸುತ್ತೇನೆ" ಎಂದು ಫೋನಿಟ್ಟರು. ಏನು ಮಾಡಿದರು ಅಂತ ಆಮೇಲೆ ನಾನು ಕೇಳಲಿಲ್ಲ! ಅದು ನನ್ನ ಜಾಯಮಾನವಲ್ಲ.
ಮುಂದಿನ ಮೂರ‍್ನಾಲ್ಕು ತಿಂಗಳು ಬೇಸಿಗೆ. ಯಾವುದೇ ಕೃಷಿ ಆರಂಭಿಸುವುದಕ್ಕೂ ತಕ್ಕ ಕಾಲವಲ್ಲ. ಆದರೆ ಆಗಾಗ್ಗೆ ಶೆಣೈ ಅದೂ ಇದೂ ವಿಚಾರಿಸುತ್ತಲೇ ಇದ್ದರು. ನನ್ನಲ್ಲಿರುವ ಸಂಗ್ರಹದಿಂದ ಹುಡುಕಿ ಮಾಹಿತಿಯನ್ನು ಅವರಿಗೆ ಕೊಡುತ್ತಿದ್ದೆ.
ಅವತ್ತು ಫೋನ್ ಮಾಡಿದ ಶೆಣೈ ನಿರುಮ್ಮಳಗೊಂಡಂತಿದ್ದರು. "ಪ್ರಸಾದ್, ಅಂತೂ ಕೋರ್ಟ್ ಕೇಸ್ ನಮ್ಮ ಪರ ಆಗುವಂತಿದೆ. ಬ್ಯಾಂಕ್‌ನವರೂ ಕೂಡ ನಮ್ಮ ದಾಖಲೆಗಳನ್ನು ಒಪ್ಪಿಕೊಂಡಿದ್ದಾರೆ. ಇನ್ನು ೧೫ ದಿನದಲ್ಲಿ ಲೋನ್ ಮಂಜೂರು ಆಗಬಹುದು. ಏನೇ ಆಗಲಿ ನಿಮಗೆ ನಾನು ತಿಳಿಸುತ್ತೇನೆ" ಶುಭಾಷಯ ಹೇಳಿ ಸುಮ್ಮನಾದ ನಾನು ನನ್ನ ಅಡಿಕೆ ತೋಟ, ಲೇಖನ ಕೃಷಿಯಲ್ಲಿ ಮುಳುಗಿಬಿಟ್ಟೆ.

*********************************

ದೊಡ್ಡ ಎರೆಗೊಬ್ಬರದ ಆರ್ಡರ್ ಅಚಾನಕ್ ನನಗೆ ಸಿಕ್ಕಿತು. ಒಂದು ಸಾವಯವ ಗೊಬ್ಬರ ಕಂಪನಿ ಬಲ್ಕ್ ಆಗಿ ಖರೀದಿಸುವ ಸೂಚನೆ ನೀಡಿ ಒಪ್ಪಂದಕ್ಕೆ ಬರುವ ಮಾತನಾಡಿತು. ಆದರೆ ಅವರ ಸತ್ಯಾಸತ್ಯತೆ ಅರಿಯದೆ ನಾನು ಮುಂದುವರಿಯುವಂತಿರಲಿಲ್ಲ. ಅದರ ಕೇಂದ್ರ ಕಛೇರಿ ಇದ್ದುದು ಮಂಗಳೂರಿನಲ್ಲಿ. ತಟ್ಟನೆ ನೆನಪಾದದ್ದು ಶೆಣೈ. ನಾನಲ್ಲಿಯವರೆಗೆ ಹೋಗಬೇಕು ಎಂಬುದು ಹಿಂಸೆ. ಅದರ ಬದಲು ಶೆಣೈರಿಗೆ ಹೇಳಿ ವಿಚಾರಿಸಿ ತಿಳಿಸಿ ಎಂದರೆ?
ನಾನು ಈವರೆಗೆ ಮಾಡಿದ ಉಪಕಾರಕ್ಕೆ ಅವರು ಅಷ್ಟೂ ಮಾಡದಿರುವುದಿಲ್ಲ. ಅಷ್ಟು ಖಾತ್ರಿ ನನಗಿತ್ತು. ಆದರೂ ಹತ್ತು ದಿನ ಕಾಯ್ದೆ. ಅವರೇ ಫೋನ್ ಮಾಡುತ್ತಾರೇನೋ, ಆಗಲೇ ವಿಚಾರಿಸಿದರಾಯ್ತು ಅಂತ! ಊಹ್ಞೂ, ಪ್ರಾಣಿ ಫೋನ್ ಮಾಡಲೇ ಇಲ್ಲ. ಜಮೀನು ಇವರ ಪರ ಆದ ಸುದ್ದಿಯನ್ನು ಹೇಳಲಿಲ್ಲವಲ್ಲ. ವಿಚಿತ್ರ ಜನ. ಬೇಗ ಮರೆತುಬಿಡುತ್ತಾರೆ! ಇನ್ನೆಂತ ಮಾಡುವುದು? ಹಿಂದೆಂದೋ ಬರೆದಿಟ್ಟ ಅವರ ಫೋನ್ ನಂಬರ್‌ನ್ನು ಕಷ್ಟಪಟ್ಟು ಹುಡುಕಿದೆ. ತಡ ಮಾಡದೆ ಡಯಲ್ ಮಾಡಿದೆ.
"ಹಲೋ....."
"ಹಲೋ....ನಮಸ್ಕಾರ. ಶೆಣೈಯವರು ಇದ್ದಾರಾ, ನರೇಂದ್ರ ಶೆಣೈ ?"
"ಹ್ಞಾ, ಹೇಳಿ.......ತಾವ್ಯಾರು, ಏನಾಗಬೇಕಿತ್ತು?"
"ಸಾರ್, ನಾನು ಸಾರ್.... ಪ್ರಸಾದ್. ಸಾಗರ. ಹೇಗಿದೆ ಸಾರ್ ಕೃಷಿ?"
ನಾನು ಮಾತು ಮುಂದುವರಿಸುವ ಮುನ್ನವೇ ಅತ್ತಲಿಂದ "ಸಾರಿ ಸಾರ್, ನನಗಾರೂ ಸಾಗರದವರು ಗೊತ್ತಿಲ್ಲ. ಈಗ ಟೈಮೂ ಇಲ್ಲ. ಬೇಕಿದ್ದರೆ ರಾತ್ರಿ ಕರೆ ಮಾಡಿ" ಎಂದವರೇ ಫೋನ್ ಕುಕ್ಕಿಬಿಟ್ಟರು.
ಮನಸ್ಸಿಡೀ ಗೊಂದಲ. ಕರೆ ಸ್ವೀಕರಿಸಿದ ಮನುಷ್ಯ ಯಾರು? ಶೆಣೈ ಬಗ್ಗೆ ಆತ ಏನೂ ಹೇಳಲೇ ಇಲ್ಲವಲ್ಲ. ಈ ಶೆಣೈ ಮಂಗಳೂರಿನ ಬಂಗಲೆ ಮಾರಿ ಅದಾಗಲೇ ಜಮೀನಿನ ಪಕ್ಕ ಮನೆ ಕಟ್ಟಿಸಿಕೊಂಡು ಹೋಗಿರಬಹುದೇ? ಯಾಕೋ ನನಗೇನೂ ಹೇಳದೆ ಶೆಣೈ ಇದನ್ನೆಲ್ಲ ಮಾಡಿದ್ದಾರೆ ಎಂಬುದೇ ನನ್ನ ಇಗೋಗೆ ಪೆಟ್ಟಾಗಿತ್ತು. ದೂರದಲ್ಲೆಲ್ಲೋ ಅನುಮಾನದ ಕರಿ ಮೋಡ.
ಮಂಗಳೂರಿನಲ್ಲೇ ನನಗೆ ಇನ್ನೊಬ್ಬ ಸ್ನೇಹಿತ ಇರುವ, ಸ್ನೇಹಾನಂದ ಕಾಮತ್. ಅದ್ಯಾವುದೋ ಕಾರ್ಖಾನೆಯ ಮ್ಯಾನೇಜರ್. ಆತನ ಅಂತಸ್ತು ನನ್ನ ಮಟ್ಟಕ್ಕಿಂತ ಮೇಲೇರಿಬಿಟ್ಟಿದ್ದರಿಂದ ಆತನನ್ನು ಮಾತನಾಡಿಸುವ ಗೋಜಿಗೆ ಹೋಗಿರಲಿಲ್ಲ. ಅಪರೂಪಕ್ಕೊಂದು ಫೋನ್. ಊರಿಗೆ ಬಂದ ಕೆಲವೊಮ್ಮೆ ಭೇಟಿ, ಇಷ್ಟೇ. ಈಗ ಅನಿವಾರ್ಯ. ಸಂಪರ್ಕಿಸಿದೆ. ನನಗೆ ಆ ಗೊಬ್ಬರ ಕಂಪನಿಯ ನಿಜಾಯಿತಿ ಅರ್ಜೆಂಟಾಗಿ ಬೇಕಾಗಿತ್ತು. ಮಧ್ಯೆ ಈ ಶೆಣೈ ಮಹಾತ್ಮನ ಕುರಿತು ಮಾಹಿತಿ ಸಿಕ್ಕರೆ ಒಂಥರ ನಿರುಮ್ಮಳ.
ಪಾಪ, ಕಾಮತ್ ನನ್ನ ಫೋನ್ ಕರೆಗೆ ಇನ್ನಿಲ್ಲದ ಮಹತ್ವ ಕೊಟ್ಟ. ಆತನಿಗೆ ನನ್ನ ಧ್ವನಿ ಕೇಳಿ ಆದ ಹರ್ಷ ನನಗೆ ಗೊತ್ತಾಗುವಷ್ಟು ಸ್ಪಷ್ಟವಿತ್ತು. ಆ ದಿನ ಸಂಜೆಯೇ ಎಲ್ಲ ಕಡೆ ಓಡಾಡಿ ಮಾಹಿತಿ ಸಂಗ್ರಹಿಸಿ ಕೊಡುವುದಾಗಿ ಹೇಳಿದ.
ಸಂಜೆ ಆತ ಮಾಡಿದ ಫೋನ್ ಕರೆಯಲ್ಲಿ ಮಾಹಿತಿ ಇರಲಿಲ್ಲ. "ನೋಡು, ಈಗ ನೀನು ಟೂರ್ ಅಂದರೆ ಬೋರ್, ಅಲರ್ಜಿ...ಹಾಗೆ ಹೀಗೆ ಅಂತೆಲ್ಲ ಹೇಳಬೇಡ. ಮುದ್ದಾಂ ಬರಲೇಬೇಕು. ನಿನ್ನ ಬಿಸಿನೆಸ್ ನೆಲೆಗೊಳ್ಳಬೇಕು ಎಂದರೆ ನಾಳೆ ಬೆಳಿಗ್ಗೆ ನಮ್ಮಲ್ಲಿಗೆ ಬಂದಿರಬೇಕು. " ಈ ಕಾಮತ್ ಬರುತ್ತೀಯಾ, ಇಲ್ಲವೇ ಎಂಬ ವಿಚಾರಣೆ ನಡೆಸದೆ ನೇರವಾಗಿ ಬರಲು ಆದೇಶವಿತ್ತಿದ್ದ. ಇನ್ನು ಗತ್ಯಂತರವಿಲ್ಲ!

***********************************************

ಮಂಗಳೂರಿಗೆ ಹೋದ ಕ್ಷಣವೇ ಸಿಹಿ ಸುದ್ದಿ ಸಿಕ್ಕಿತ್ತು. ಸಾವಯವ ಗೊಬ್ಬರದ ಕಂಪನಿಯ ವ್ಯವಹಾರ ಧೋಕಾ ಆಗಿರಲಿಲ್ಲ. ಕಾಮತ್‌ನ ಪತ್ನಿ ಸತ್ಕರಿಸಿದ ರೀತಿ ಅಂತಸ್ತುಗಳ ಅಂತರವನ್ನು ಮರೆಸಿತ್ತು. ಆದರೆ ಶೆಣೈ ವಿಚಾರದಲ್ಲಿ ಕಾಮತ್ ಮುಗುಂ ಆಗಿರುವುದು ನನ್ನನ್ನು ಅಸಹನೆಗೆ ಈಡುಮಾಡಿತ್ತು. ನೋಡಿದರೆ ಕಾಮತ್ ಶೆಣೈರ ಬಗ್ಗೆ ಪತ್ತೆದಾರಿಕೆ ಮಾಡಿದಂತೆ ಕಾಣುತ್ತಿಲ್ಲ. ಇರಲಿ, ನಾನೇ ಒಂದು ಸುತ್ತು ಹುಡುಕಿದರಾಯ್ತು.
ಮಧ್ಯಾಹ್ನದ ಪುಷ್ಕಳ ಊಟದ ನಂತರ ಬಾಲ್ಕನಿಯಲ್ಲಿ ಕುರ್ಚಿ ಹಾಕಿ ಕುಳಿತೆವು. ಆ ಶಾಲಾ ದಿನ, ಸಹಪಾಠಿಗಳು, ಅವರಿಗಿಟ್ಟಿದ್ದ ಅಡ್ಡಹೆಸರು, ಮೊಳಕೆ ಒಡೆದಿದ್ದ ಲವ್ ಅಫೇರ್‌ಗಳು..... ನೆನಪಿಸಿ ನಗೆಯಾಡುತ್ತಿದ್ದರೂ ಕಾಮತ್‌ನ ಕಣ್ಣು ಎದುರುಗಡೆ ಏನನ್ನೋ ನಿರೀಕ್ಷಿಸುತ್ತಿತ್ತು. ಏನಾಗಿದೆ ಇವನಿಗೆ?
ಆತ ಗಂಭೀರವಾದ, "ಪ್ರಸಾದಿ, ನೀನು ಶೆಣೈ ನಿಮ್ಮಲ್ಲಿಗೆ ಬಂದಾಗ ತೆಗೆದ ಫೋಟೋವನ್ನು ಮೇಲ್ ಮಾಡಿದ್ದು ಅನುಕೂಲವಾಯಿತು....." ಆತ ಇನ್ನೇನೋ ಹೇಳಬೇಕೆಂದು ಹೊರಡುವಷ್ಟರಲ್ಲಿ ನನಗೆ ಎದುರಿನ ಬಂಗಲೆಯಿಂದ ಕ್ವಾಲಿಸ್ ಕಾರು ಹೊರಹೊರಟಿದ್ದು ಕಾಣಿಸಿತು. "ಹೇ, ಅದು ಶೆಣೈಯವರ ಕ್ವಾಲಿಸ್" ಹೆಚ್ಚುಕಡಿಮೆ ನಾನು ಕೂಗಿಯೇ ಬಿಟ್ಟಿದ್ದೆ.
"ನಿಜ. ಅದು ನರೇಂದ್ರ ಶೆಣೈಯವರ ಕಾರು. ಬಂಗಲೆಯೂ ಅವರದ್ದೇ. ನಮ್ಮ ಪ್ಲಾಟ್ ಅವರ ಬಂಗಲೆ ಎದುರು ಬದುರು ಇರುವುದು ಕಾಕತಾಳೀಯ ಇರಲಿಕ್ಕಿಲ್ಲ....." ಕಾಮತ್ ಏನೋ ಹೇಳುತ್ತಿದ್ದರೂ ಅವು ನನ್ನ ಗಮನದಲ್ಲಿರಲಿಲ್ಲ. ಕಣ್ಣು ಎದುರಿನ ಬಂಗಲೆಯಲ್ಲಿತ್ತು.
ಕಾರು ಹೊರಹೋಗುತ್ತಿದ್ದಂತೆ ಒಬ್ಬ ವ್ಯಕ್ತಿ ಗೇಟು ಹಾಕಿದ. ಅಲ್ಲೇ ಪಕ್ಕದಲ್ಲಿದ್ದ ಸ್ಟೂಲ್‌ನಲ್ಲಿ ಕುಳಿತುಕೊಂಡ. ಬೀಡಿ ಹಚ್ಚಿದನೇ? ಊಹ್ಞೂ, ಅಷ್ಟು ದೂರದಿಂದ ಸ್ಪಷ್ಟವಾಗಿ ಕಾಣುತ್ತಿಲ್ಲ. ಕಾಮತ್ ಬೈನಾನುಕುಲರ್ ಕೊಟ್ಟು "ಈಗ ನೋಡು" ಎಂದ. ಫೋಕಸ್ ಮಾಡುತ್ತಿದ್ದ ನಾನು ಅಕ್ಷರಶಃ ಬೆಚ್ಚಿಬಿದ್ದೆ. "ಅದು....ಅದು.... ನರೇಂದ್ರ ಶೆಣೈ!"
"ಅಲ್ಲ, ಆತ ಶೆಣೈ ಮನೆಯ ವಾಚ್‌ಮನ್ ಸಿದ್ದಪ್ಪ. ಶೆಣೈರದು ಮಾರುತಿ ಕಾರ್ ಶೋರೂಂ ಇದೆ. ಮಂಗಳೂರಿಗೇ ನಂಬರ್ ಒನ್. ಮನೆಯಲ್ಲಿ ಬೇರೆ ಯಾರೂ ಇಲ್ಲ. ಈ ಸಿದ್ದಪ್ಪ ಪ್ರಾಮಾಣಿಕ. ಹಾಗಾಗಿ ಶೆಣೈ ಅವನಿಗೆ ಸಾಕಷ್ಟು ಸ್ವಾತಂತ್ರ್ಯ ನೀಡಿದ್ದಾರೆ. ಅದನ್ನು ಉಪಯೋಗಿಸಿಕೊಂಡು ಸಿದ್ದಪ್ಪ ನಿನ್ನನ್ನು ಪಿಗ್ಗಿ ಬೀಳಿಸಿದ್ದಾನೆ. ಆತನಿಗೆ ಪಾಂಡೇಲು ಬಿಡು, ಎಲ್ಲೂ ಒಂದಿನಿತು ಜಾಗ ಇಲ್ಲ. ಮನೆ ಇಲ್ಲ. ಈಗಲೇ ಹೋಗಿ ಆತನನ್ನು ಕಾಲರ್ ಪಟ್ಟಿ ಹಿಡಿದು ವಿಚಾರಿಸೋಣ ನಡಿ"
ಶಾಕ್‌ನಿಂದ ಹೊರಬಂದಿದ್ದೆ. ನನಗೆ ವಿಷಯ ಅರ್ಥವಾಗಿತ್ತು. ಈ ಶೆಣೈ ಅಲಿಯಾಸ್ ಸಿದ್ದಪ್ಪನ ಸುಪ್ತ ಮನಸ್ಸಿನಲ್ಲಿ ಕೃಷಿಕನಾಗುವ ಹೆಬ್ಬಯಕೆ ಇದೆ. ಅದು ಈಡೇರುವುದಿಲ್ಲ ಎಂಬುದೂ ಆತನಿಗೆ ನಿಚ್ಚಳವಿದೆ. ಆದರೆ ಕೆಲವರ ಎದುರಾದರೂ ತಾನೊಬ್ಬ ರೈತ ಎನ್ನಿಸಿಕೊಳ್ಳುವ ಆಕಾಂಕ್ಷೆ. ವೈದ್ಯಕೀಯ ಭಾಷೆಯಲ್ಲಿ ಇದಕ್ಕೇನು ಹೇಳುತ್ತಾರೋ. ತನ್ನ ಆಸೆ ಪೂರೈಕೆಗೆ ಆತ ದೂರದ ಊರಿನ ನನ್ನನ್ನು ಆಯ್ದುಕೊಂಡಿದ್ದಾನೆ. ಈಗ ಫೋನ್‌ನ ವಿಚಾರದಲ್ಲಾದ ಗೊಂದಲಕ್ಕೂ ಕಾರಣ ಸಿಕ್ಕಿತ್ತು.
ಸ್ಪಷ್ಟವಾಗಿ ಕಾಮತ್‌ಗೆ ಹೇಳಿದೆ, " ಬೇಡ ಮಿತ್ರ, ಆತನನ್ನು ಬಯಲುಗೊಳಿಸುವುದು ಬೇಡ. ನನ್ನ ಕೆಲ ನಿಮಿಷಗಳು ಆತನ ಫೋನ್ ಕರೆಗೆ ಖರ್ಚಾದೀತು. ಆದರೆ ಅದು ಅವನಿಗೆ ಕೊಡುವ ಖುಷಿ ಅಗಣಿತ. ಇರಲಿ ಬಿಡು ಶೆಣೈ ಹಾಗೆಯೇ!!" ಬೀಡಿ ಕಚ್ಚಿದ ಸಿದ್ದಪ್ಪನನ್ನು ನೋಡುತ್ತ ಹೇಳುತ್ತಿರುವಾಗಲೇ ಆತ ಬೀಡಿ ಮುಂಡು ಎಸೆದು ಮನೆಯೊಳಗೆ ದಾಟಿಹೋದ.
ಇತ್ತ ನನ್ನ ಮೊಬೈಲ್ ರಿಂಗುಣಿಸಿತು.
"ನಮಸ್ಕಾರ"
"ನಮಸ್ಕಾರ ಪ್ರಸಾದ್..... ಯಾಕೋ ನನಗೆ ನಿರಾಶೆಯೇ ಹೆಚ್ಚಾಗುತ್ತಿದೆ. ನಮ್ಮ ದೊಡ್ಡಪ್ಪನ ಮಗ ಹೈಕೋರ್ಟ್‌ಗೆ ಅಪೀಲು ಹೋಗಿದ್ದಾರೆ. ಶ್ರೀಗಂಧದ ಸಸಿಗಳಿಗೆ ಆರ್ಡರ್ ಕೊಡುವುದೇ ಬೇಡವೇ ಎಂಬ ಗೊಂದಲದಲ್ಲಿದ್ದೇನೆ. ಬಹುಷಃ ಮತ್ತೆ ಬ್ಯಾಂಕ್ ಸಾಲ ಕೊಡಲು ತಡ ಮಾಡಬಹುದು. ಇರಲಿ, ಈ ವರ್ಷ ಶುಂಠಿಗೆ ಒಳ್ಳೆ ರೇಟು ಬಂದಿದೆಯಂತಲ್ಲ. ನನ್ನ ಆರು ಎಕರೆ ಗದ್ದೆಗೆ ಹಾಕಿಬಿಡಬಹುದೇನೋ ಅಲ್ಲವೇ? ನಿಮ್ಮಲ್ಲಿ ಎಲ್ಲಿ ಬೀಜದ ಶುಂಠಿ ಸಿಗುತ್ತದೆ, ವಿಚಾರಿಸುತ್ತೀರಾ.....?
ಶೆಣೈ ಫೋನ್, ನಾನು ಹಿಂದಿನಂತೆಯೇ ಉತ್ತರಿಸಲು ಪ್ರಯತ್ನಿಸಿ ಯಶಸ್ವಿಯಾದೆ. ಇನ್ನು ಯಾರಲ್ಲಿ ಶುಂಠಿ ಸಿಗುತ್ತದೆ ಎಂಬ ಮಾಹಿತಿ ಸಂಗ್ರಹಿಸಬೇಕು. ಮಾತನಾಡುತ್ತ ಕೂರಲು ಸಮಯವಿಲ್ಲ. ಊರಿಗೆ ಹೊರಡುವುದೇ. ಬರಲಾ ಕಾಮತ್?
*******
-ಮಾವೆಂಸ


4 comments:

jithendra hindumane ಹೇಳಿದರು...

ಕಥೆ ಚೆನ್ನಾಗಿದೆ... ಧನ್ಯವಾದಗಳು. ನಮ್ಮ ಸುತ್ತ-ಮುತ್ತಲಿ ತುಂಬಾ ಶೆಣೈಗಳಿದ್ದಾರೆ...!

Dileep Hegde ಹೇಳಿದರು...

ಚೈತ್ರ ರಶ್ಮಿಯವರು ಪ್ರಕಟಿಸಿರುವ ಕಥಾ ಸಂಕಲನ ತಂದು ನಿಮ್ಮ ಕಥೆಯನ್ನ ಓದಿದೆ.. ಚೆನ್ನಾಗಿದೆ ಕಥೆ...

umesh desai ಹೇಳಿದರು...

sir, nice story. in the same "sankalana" my story "shridhar damle" appeared. and i am also a blogger..
usdesai.blogspot.com
plz visit whenever u r free....

KanthiBasu ಹೇಳಿದರು...

ನಮಸ್ಕಾರ,
I am Basavaraj Kanthi. I have a ebook publishing website where you can publish your writings. With online publishing you can reach more number of readers. Also you can decide price of books yourself. Contact me for more details.
email: kanthibasu@gmail.com

Thanks,
Basavaraj

 
200812023996