ಗುರುವಾರ, ಡಿಸೆಂಬರ್ 10, 2009

ನಾನೀಗ ‘ದಟ್ಸ್ ಕನ್ನಡ’ ವೆಬ್ ಅಂಕಣಕಾರ!

ನಿಮಗೂ ಗೊತ್ತು, ಈ ಬ್ಲಾಗ್‌ಗಳನ್ನು ಪತ್ರಿಕೆಗಳೆಂದು ಭಾವಿಸಿದರೆ ಅವುಗಳನ್ನು ಅನಿಯತಕಾಲಿಕಗಳಿಗೆ ಸೇರಿಸಬೇಕು. ಯಾವ ಬ್ಲಾಗಿಗನೂ ಒಂದು ನಿಯಮಿತ ವೇಳೆಯನ್ನು ಅನುಸರಿಸಿ ಬ್ಲಾಗ್ ಅಪ್‌ಲೋಡ್ ಮಾಡುವುದಿಲ್ಲ. ಅದರಲ್ಲಿ ನಾನೂ ಒಬ್ಬ! ಕೊನೆಪಕ್ಷ ಶಿಸ್ತು ಬರಲಿ ಎಂಬ ಕಾರಣಕ್ಕೆ ನಿಯಮಿತವಾಗಿ ಬರೆಯಲು ವಿಷಯ ಹುಡುಕಿದಾಗ ಸಿಕ್ಕಿದ್ದು ‘ಪತ್ರಿಕೆಗಳು’. ಹೌದು, ಎಷ್ಟೋ ಬಾರಿ ನಾನು ಓದುವ ಹಲವು ಪತ್ರಿಕೆಗಳ ಬಗ್ಗೆ ಹೇಳಬೇಕೆನಿಸಿದರೂ ಕೇಳಲು ಕಿವಿಗಳೂ ಸಿಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ವಾರಕ್ಕೊಮ್ಮೆ ಬರೆಯುವ ಉದ್ಘೋಷದೊಂದಿಗೆ ಅದೇ ಹೆಸರಿನ ಅಂಕಣ ಬರಹ ರೂಪದಲ್ಲಿ ಇದೇ ಬ್ಲಾಗ್ ಅಪ್‌ಲೋಡ್ ಆರಂಭಿಸಿದೆ. ನನ್ನ ಕೆಲಸದಿಂದ ಕೆಲವು ಪತ್ರಿಕೆಗಳಿಗೆ ಲಾಭವಾದರೆ ಸಾರ್ಥಕ ಎಂಬ ಭಾವವೂ ಇತ್ತು. ವಿಶ್ವಾಸವಿರಿಸಿ ನಮ್ಮೂರ ವಾಚನಾಲಯಕ್ಕೆ ಉಚಿತ ಪತ್ರಿಕೆ ಕಳುಹಿಸಿದ ಸಂಪಾದಕರಿಗೆ ನಾನು ಸಲ್ಲಿಸುವ ಗೌರವ ಎನ್ನುವುದು ಇನ್ನೊಂದು ಸತ್ಯ.
ಯಾಕೋ ಗೊತ್ತಿಲ್ಲ. ನನ್ನ ಬ್ಲಾಗ್‌ನಲ್ಲಿಯೇ ಕಾಮೆಂಟ್ ಬರೆಯುವವರು ಕಡಿಮೆ. ನೀವೇ ನೋಡಿ, ವಾರಕ್ಕೊಮ್ಮೆ ಸರದಿಯ ಎರಡನೇ ಲೇಖನಕ್ಕೆ ಒಂದೇ ಒಂದು ಕಾಮೆಂಟ್ ಇಲ್ಲ. ಆದರೆ ನನ್ನ ಮೈಲ್ ಐಡಿಗೆ ಪ್ರತಿಕ್ರಿಯೆಗಳು ಸಾಕಷ್ಟು. ಯಾಕೆ ಹೀಗೆ... ಗೊತ್ತಾಗುತ್ತಿಲ್ಲ.
ಅಂತಹ ಒಂದು ಮೈಲ್ ಕಳೆದ ವಾರದ ವಾರಕ್ಕೊಮ್ಮೆ ಕಂತನ್ನು ಬರೆದಾಗಲೇ ಸಿಕ್ಕಿತ್ತು. ‘ದಟ್ಸ್ ಕನ್ನಡ’ ವೆಬ್ ಪತ್ರಿಕೆಯ ಸಂಪಾದಕರಾದ ಎಸ್.ಕೆ.ಶ್ಯಾಮಸುಂದರ್ ಬರೆದಿದ್ದರು...Wonderful Idea....Shall I too publish this feature ( ಕನ್ನಡ ಪತ್ರಿಕೆಗಳ ವಾರಪತ್ರಿಕೆ !! ) on a real time basis ( Monday) on thatskannada pages ( server) ...........thanks to mavemsa blog ?
Please let me know.
ನಾನು ಒಪ್ಪಿದೆ. ಸಮಸ್ಯೆಯೇನಿಲ್ಲವಲ್ಲ.? ಆದರೆ ಈಗ ಅನಿಸುತ್ತಿದೆ. ನನ್ನದೇ ಬ್ಲಾಗ್ ಆಗಿದ್ದರೆ ಒಂದು ವಾರ ಮಿಸ್ ಆದರೂ ನಡೆದೀತು. ಆದರೆ ಅಲ್ಲಿ ಒಪ್ಪಿಕೊಂಡ ನಂತರ ಕಷ್ಟ, ಪ್ರತಿ ವಾರ ಬರೆಯಲೇ ಬೇಕು. ಎಲ್ಲಿಯವರೆ ಸಾಧ್ಯವಾದೀತೋ ಅಲ್ಲಿಯವರೆಗೆ ಬರೆದರೆ ಆಯ್ತು ಎಂದು ಮನಸ್ಸನ್ನು ಸಮಾಧಾನ ಪಡಿಸಿರುವೆ. ಶ್ಯಾಮ್ ವಿವರವಾಗಿ ಬರೆದರು.... "ನಿಮ್ಮ ಕಲ್ಪನೆ ಮತ್ತು ಪ್ರಯೋಗ ಎರಡೂ ಪ್ರಶಂಸಾರ್ಹ. ನಮ್ಮ ನಾಡಿನಲ್ಲಿನ ಗ್ರಾಮಾಂತರ ಪತ್ರಿಕೆಗಳ ಬಗೆಗೆ ನಮಗೆ ಏನೂ ಗೊತ್ತಿಲ್ಲ. ಸುಧಾ, ಮಯೂರ, ತುಷಾರ, ತರಂಗ ಪತ್ರಿಕೆಗಳೇ ಎಲ್ಲವೂ ಅಲ್ಲ. ಪ್ರತೀ ಸೋಮವಾರ ಎಂದು ಹೇಳಿದ್ದೀರಿ. ಸರಿ. ಮೊದಲ ವಾರದ ಕಂತನ್ನು ಕೈಬಿಡಬಾರದು ಎಂಬ ದೃಷ್ಟಿಯಿಂದ ಈ ಬಾರಿ " ತಿಂಗಳು" ಪತ್ರಿಕೆ ಪರಿಚಯವನ್ನು ಶುಕ್ರವಾರವೇ ಮಾಡಿಬಿಡುತ್ತೇನೆ. ನಂತರ ಪ್ರತೀ ಸೋಮವಾರ. ತಾವು ಭಾನುವಾರ ಬರೆದ ನಂತರವೇ ನನಗೆ ರವಾನಿಸಿದರೆ, ಸೋಮವಾರ ಬೆಳಗ್ಗೆ ಪ್ರಕಟಿಸುತ್ತೇವೆ. ಪತ್ರಿಕೆ ಪರಿಚಯದ ಹಾದಿಯಲ್ಲಿ ಬಗೆಬಗೆಯ ವಿಷಯಾಧಾರಿತ ಪತ್ರಿಕೆಗಳು, ವಿವಿಧ ಜಿಲ್ಲೆ, ತಾಲೂಕುಗಳು "ನಿಯತಕಾಲಿಕೆಗಳ ವಾರಪತ್ರಿಕೆ " ಬುಟ್ಟಿಯಲ್ಲಿ ಕಾಣಸಿಗಲಿ " ಅಂದಿನಿಂದಲೇ ದಟ್ಸ್ ಕನ್ನಡದಲ್ಲಿ ಅಂಕಣ ಪ್ರಕಟಗೊಳ್ಳುತ್ತಿದೆ. ಸುಮ್ಮನೆ ನೋಡಿ, http://thatskannada.oneindia.in/column/periodicals/2009/1207-kannada-periodical-sahaja-agri-bimonthly.html. ಮೆಚ್ಚುಗೆಯಿಂದ ಭೂಮಿ ಮೇಲಿನ ಹೆಜ್ಜೆ ನೆಲ ಬಿಡಬಾರದು. ಎಷ್ಟೋ ಬಾರಿ, ಪ್ರಶಂಸೆಯ, ಮನ್ನಣೆಯ ಮಾತು ಹೊಸ ಉತ್ಸಾಹವನ್ನು ತರುವುದು ಖಚಿತ. ಹಾಗಾಗಿದೆ ಎಂದು ವಿನಮ್ರನಾಗಿ ಭಿನ್ನವಿಸುತ್ತೇನೆ. ಹಲವು ಹಿರಿಯರ ಪತ್ರಗಳಲ್ಲಿ ನನ್ನ ಗಮನವನ್ನು ವಿಶೇಷವಾಗಿ ಸೆಳೆದಿದ್ದು ಎಸ್.ಎಂ.ಪೇಜತ್ತಾಯರು ಬರೆದ ಮಿಂಚಂಚೆ, ತಿಂಗಳು ಪತ್ರಿಕೆಗೆ ಚಂದಾದಾರ ಆಗುವೆ." ಇನ್ನೂ ಇಪ್ಪತ್ತ ಮೂರು ಮೈಲ್ ಸ್ನೇಹಿತರು ಬೆಂಬಲಕ್ಕೆ ನಿಂತಿದ್ದಾರೆ. ನೀವೂ ಇರುವಿರಿ ತಾನೇ?
ಇನ್ನೆಂತ ಹೇಳಲಿ, ನಮಸ್ಕಾರ.
-ಮಾ.ವೆಂ.ಸ.ಪ್ರಸಾದ್
ಮಾವಿನಸರ
ಪೋಸ್ಟ್-ಎಡಜಿಗಳೇಮನೆ
ಸಾಗರ ತಾ. ಶಿವಮೊಗ್ಗ ಜಿ.
577401
ಫೋನ್-08183 236068, 296543
9886407592
ಇ ಮೇಲ್- mavemsa@gmail.com



 
200812023996