ಭಾನುವಾರ, ನವೆಂಬರ್ 29, 2009

ತಂಗಳು ಅಲ್ಲದ ‘ತಿಂಗಳು’

ವಾರಕ್ಕೊಮ್ಮೆ..........
ಒಂದು ಪ್ರಯೋಗ ಮಾಡುವ ಆಸೆ. ಕನ್ನಡ ಪತ್ರಿಕಾ ಕ್ಷೇತ್ರದ ಹಲಕೆಲವು ಪತ್ರಿಕೆಗಳ ಪರಿಚಯ ಮಾಡುವ ಯೋಚನೆಯ ಫಲಶ್ರುತಿ ಇದು. ಅದರ ಮೊದಲ ಕಂತು ಇಲ್ಲಿದೆ. ಪ್ರತಿ ಭಾನುವಾರ ಹೊಸ ಅಪ್‌ಲೋಡ್ ಮಾಡುವ ಲೆಕ್ಕಾಚಾರದಿಂದ ಆರಂಭಿಸಿರುವೆ. ಮುಖ್ಯವಾಗಿ, ಉತ್ತಮವಾಗಿದ್ದ್ದೂ ಕನ್ನಡದ ಬಹುಪಾಲು ಓದುಗರಿಗೆ ಪರಿಚಯವಿಲ್ಲದ ಪತ್ರಿಕೆಗಳಿಗೆ ಆದ್ಯತೆ ಕೊಟ್ಟು ಬರೆಯುವೆ. ನಮ್ಮೂರಿನ ‘ವೀಣಾ ಸ್ಮಾರಕ ಮಾವಿನಮನೆ ವಾಚನಾಲಯ’ಕ್ಕೆ ಹೆಚ್ಚಿನ ಪತ್ರಿಕೆಗಳು ಬರುತ್ತಿವೆ ಎಂಬುದು ಬರೆಯಲು ಧೈರ್ಯ ಕೊಟ್ಟಿದೆ. ನನ್ನ ಬ್ಲಾಗ್ ಓದುಗರೇ, ನಿಮ್ಮೆಲ್ಲ ಮಿತ್ರರಿಗೆ ಈ ಬರಹಗಳ ಲಿಂಕ್ ಕಳಿಸಿಕೊಡಲು ವಿನಂತಿಸುವೆ. ಈ ಮೂಲಕ ಆ ಪತ್ರಿಕಾ ಪ್ರಯತ್ನಗಳಿಗೆ ಬೆಂಬಲ ನೀಡೋಣ. ಆಗದೇ?
-ಮಾವೆಂಸ


ಮೂರು ತಿಂಗಳ ಹಿಂದಿನ ಮಾತು. ಬಹುಷಃ ಹೊನ್ನಾವರದಿಂದ ಪ್ರಕಟಗೊಳ್ಳುವ ‘ನಾಗರಿಕ’ ವಾರಪತ್ರಿಕೆಯಲ್ಲಿ ಓದಿದ ನೆನಪು ಎಂದು ಕಾಣುತ್ತದೆ. ಅದರಲ್ಲಿ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರರು ಮೈಸೂರಿನಿಂದ ಪ್ರಕಟಗೊಳ್ಳುವ ಪತ್ರಿಕೆಯೊಂದರ ಬಗ್ಗೆ ಸ್ತುತಿಸಿ ಬರೆದಿದ್ದರು. ಹೆಬ್ಬಾರರು ಮೆಚ್ಚಿರುವರೆಂದರೆ ಅದರಲ್ಲಿ ತಥ್ಯವಿರಲೇಬೇಕು ಎನಿಸಿತು. ಸುದ್ದಿಯ ಜೊತೆಗಿದ್ದ ಮೊಬೈಲ್ ನಂಬರ್‌ಗೆ ಫೋನ್ ಮಾಡಿದೆ. ವಾರವೊಪ್ಪತ್ತಿನಲ್ಲಿ ನನ್ನ ಕೈ ಸೇರಿತ್ತು ‘ತಿಂಗಳು’
ನಿಜ, ಪತ್ರಿಕೆಯ ಹೆಸರು ಶಾನೆ ವಿಚಿತ್ರ. ಮಾಸಪತ್ರಿಕೆಯ ಅನ್ವರ್ಥನಾಮವೇ ಅದರ ಹೆಸರೂ ಕೂಡ ಆಗಿದೆ ಇಲ್ಲಿ. ಪತ್ರಿಕೋದ್ಯಮದಲ್ಲಿ, ಪ್ರಮುಖವಾಗಿ ಪ್ರಜಾವಾಣಿಯಲ್ಲಿ ದುಡಿದ ಜಿ.ಪಿ.ಬಸವರಾಜು ‘ತಿಂಗಳು’ ಸಂಪಾದಕರು. ಅವರ ಸಂಪರ್ಕ ಅಗಾಧವಾಗಿದೆ ಎಂಬುದಕ್ಕೆ ಬರೀ ನಾಲ್ಕು ಸಂಚಿಕೆಗಳನ್ನಷ್ಟೇ ಕಂಡರೂ ಖ್ಯಾತ ಬರಹಗಾರರ ಬಳಗವೇ ಬರೆಯುತ್ತಿರುವುದನ್ನು ಸಾಕ್ಷಿಯಾಗಿ ಹೇಳಬಹುದು. ‘ಮಲ್ಲಿಗೆ’ ಮಾಸಪತ್ರಿಕೆಯ ಆಕಾರ, ವಿನ್ಯಾಸವನ್ನು ಇದು ತುಸು ಹೋಲುತ್ತದೆ. ತಿಂಗಳ ಹೂರಣ ಮಾತ್ರ ಅದಕ್ಕಿಂತ ಹೆಚ್ಚು ಗಟ್ಟಿ. ಅದರಲ್ಲಿ ಬರೆದಿರುವ ಕೆಲವು ಲೇಖಕರ ಹೆಸರನ್ನು ಮಾತ್ರ ಬರೆದು ಇತರರಿಗೆ ಅಗೌರವ ಮಾಡುವುದು ಬೇಡ. ಗಂಭೀರ ಸಾಹಿತ್ಯ ಓದುವ ಕನಸು ಕಾಣುವವರು ೧೬೪ ಪುಟಗಳ ಈ ಮಾಸಿಕವನ್ನು ಓದಲೇಬೇಕು. ಅಷ್ಟಕ್ಕೂ ಬಿಡಿ ಪ್ರತಿ ಬೆಲೆ ಕೇವಲ12 ರೂ.
ಈ ತರದ ಪತ್ರಿಕೆಗಳಲ್ಲಿ ‘ತುಷಾರ’ವನ್ನು ಹೊರತುಪಡಿಸಿ ‘ಮಯೂರ’ ಹೊಸ ಉತ್ಸಾಹದಿಂದ ಪ್ರಕಟಗೊಳ್ಳುತ್ತಿದೆ. ಅದರ ಪುಟ ವಿನ್ಯಾಸವಂತೂ ಭವ್ಯವಾಗಿದೆ. ಆ ಮಟ್ಟಿಗೆ ‘ತಿಂಗಳು’ ಪ್ರಯತ್ನವೂ ಸಣ್ಣದಲ್ಲ. ಆರಂಭವಾಗಿ ಅರ್ಧ ವರ್ಷವೂ ಕಳೆಯದಿರುವ ಕ್ಲುಪ್ತ ಅವಧಿಯಲ್ಲಿ ಅದರದು ಗಮನ ಸೆಳೆಯುವ ಪ್ರಯತ್ನ. ಎರಡೂವರೆ ಸಹಸ್ರ ಪ್ರಥಮ ಬಹುಮಾನದ ಕಥಾ ಸ್ಪರ್ಧೆಯನ್ನು ಪ್ರತಿ ತಿಂಗಳೂ ನಡೆಸುವಂತ ಸಾಹಸಕ್ಕೂ ತಿಂಗಳು ಅಡಿಯಿಟ್ಟಿದೆ.
ತಿಂಗಳು ಬೇಕೆನ್ನುವವರು ಮೊಬೈಲ್ ಸಂಖ್ಯೆ 9980560013ಕ್ಕೆ ಕರೆ ಮಾಡಿ. ವಾರ್ಷಿಕ ಚಂದಾ 150ರೂಪಾಯಿಯನ್ನು ಸಂಪಾದಕರು, ತಿಂಗಳು, ಅಭಿರುಚಿ ಪ್ರಕಾಶನ., 386,14ನೇ ಮುಖ್ಯ ರಸ್ತೆ, 3ನೇ ಕ್ರಾಸ್, ಸರಸ್ವತೀ ಪುರಂ, ಮೈಸೂರು-570009ಕ್ಕೆ ತಲುಪಿಸಬಹುದು.
ಕೊನೆಮಾತು - ಈ ವ್ಯಾವಹಾರಿಕ ದಿನಗಳಲ್ಲಿ ‘ತಿಂಗಳು’ವಿನ ಇನ್ನೊಂದು ಒಳ್ಳೆಯತನವನ್ನು ನೆನೆಯಲೇಬೇಕು. ಈ ಪತ್ರಿಕೆ ನಮ್ಮಲ್ಲಿನ ಸ್ಥಳೀಯ ಅಂಗಡಿಗಳಲ್ಲಿ ಲಭ್ಯವಾಗುತ್ತಿಲ್ಲ. ಇದನ್ನು ತಿಳಿಸಿದ ತಕ್ಷಣ ನನಗೆ ಅಂಚೆಯಲ್ಲಿ ಪತ್ರಿಕೆ ಬರಲಾರಂಭಿಸಿದೆ. ಅನಿವಾರ್ಯ ಕಾರಣಗಳಿಂದಾಗಿ ಇಂದಿಗೂ ಚಂದಾ ತಲುಪಿಸಲಾಗಿಲ್ಲ. ಊಹ್ಞೂ, ಪತ್ರಿಕೆ ಬರುವುದು ಮಾತ್ರ ನಿಂತಿಲ್ಲ. ಈ ವಿಶ್ವಾಸ ದೊಡ್ಡದು. ತಡವಾಗಿಯಾದರೂ ಚಂದಾ ಕಳುಹಿಸುವೆ. ಆದರೆ ನೀವು ಮಾತ್ರ ನನ್ನಂತೆ ಮಾಡದಿರಿ. ಚಂದಾವನ್ನು ಕಳಿಸಿ ಒಂದು ಒಳ್ಳೆಯ ಪತ್ರಿಕೆಯನ್ನು ಬೆಂಬಲಿಸಿ.
-ಮಾ.ವೆಂ.ಸ.ಪ್ರಸಾದ್
ಮಾವಿನಸರ
ಪೋಸ್ಟ್-ಎಡಜಿಗಳೇಮನೆ
ಸಾಗರ ತಾ. ಶಿವಮೊಗ್ಗ ಜಿ.
577401
ಫೋನ್-08183 236068, 296543
9886407592
ಇ ಮೇಲ್- mavemsa@gmail.com



5 comments:

ಜಗದೀಶಶರ್ಮಾ ಹೇಳಿದರು...

ತುಂಬಾ ಒಳ್ಳೆಯ ಪ್ರಯತ್ನ.ಚೆನ್ನಾಗಿದೆ. ಪ್ರಶಂಸಾರ್ಹ.

Prathibha Kudthadka ಹೇಳಿದರು...

Nija 'thingalu' ondu olleya prayathna. Adare agale ondu sanchike 'miss' agide.

kannadigarige pathrikeyannu parichayisuva nimma pryathna pathrikeya narantharathege neerereyali.

ಮಾವೆಂಸ ಹೇಳಿದರು...

@ ಜಗದೀಶ ಶರ್ಮಾರಿಗೆ,
ಧನ್ಯವಾದಗಳನ್ನೆಲ್ಲದೆ ಬೇರೆ ಏನನ್ನು ಹೇಳಲು ಸಾಧ್ಯ? ಹೀಗೆ ಬ್ಲಾಗ್‌ಗೆ ಭೇಟಿ ಕೊಡುತ್ತಿರಿ.

@ಪ್ರತಿಭಾ ಕುಡ್ತಡ್ಕರಿಗೆ,
‘ತಿಂಗಳು’ ನಿರಂತರವಾಗಿ ಬರುವಂತಾಗಲಿ. ಪ್ರಸಾರ ಸಂಖ್ಯೆ ಹೆಚ್ಚಿದರೆ ‘ಮಿಸ್’ ಇಲ್ಲವಾದೀತು ಎಂಬ ನಿರೀಕ್ಷೆಯಿದೆ. ಉಳಿದಂತೆ ನಿಮ್ಮ ಶುಭ ಕಾಮನೆಗೆ ಸಲಾಂ......

ಅನಾಮಧೇಯ ಹೇಳಿದರು...

'tingalu' saamaanyvaagide. mundina sanchikegalalli sariyaadiitu.

Chethu ಹೇಳಿದರು...

tendulakar na parama abimaniyada nanage nimma likhana tumba kushi nidide.

 
200812023996