ನಿನ್ನೆ ಮೊನ್ನೆ ಪತ್ರಿಕೆಯೊಂದರಲ್ಲಿ ಬಂದ ವ್ಯಂಗ್ಯ ಚಿತ್ರ. ಬಿಸಿಸಿಐ ಒಂದು ಪತ್ರಿಕಾಗೋಷ್ಠಿಯನ್ನು ಕರೆದಿದೆ. ಅದರಲ್ಲಿ ಮಂಡಳಿಯ ಕಾರ್ಯದರ್ಶಿ ಮಾತನಾಡುತ್ತಿದ್ದಾರೆ, "ನಾವು ಹೊಸದೊಂದು ಯೋಚನೆಯಲ್ಲಿದ್ದೇವೆ. ಸದ್ಯದಲ್ಲೇ ವಾಡಾ ಪರವಾದ ಭಾರತೀಯ ಇಲೆವೆನ್ ಹಾಗೂ ವಾಡಾ ವಿರುದ್ಧದ ಇಂಡಿಯನ್ ಹನ್ನೊಂದರ ನಡುವೆ ಟ್ವೆಂಟಿ ೨೦ ಪಂದ್ಯ ಏರ್ಪಡಿಸುವ ತಯಾರಿಯಲ್ಲಿದ್ದೇವೆ!" ಬಹುಷಃ ‘ದಿ ಹಿಂದೂ’ದಲ್ಲಿ ಪ್ರಕಟಗೊಂಡ ಈ ವ್ಯಂಗ್ಯ ಚಿತ್ರ ಭಾರತೀಯ ಕ್ರಿಕೆಟ್ ಆಡಳಿತ ನಡೆಸುವವರ ಮನಸ್ಥಿತಿಯನ್ನು ಅಚ್ಚುಕಟ್ಟಾಗಿ ಬಹಿರಂಗಪಡಿಸಿದೆ.
ನಿಮಗೂ ಗೊತ್ತಿರಬಹುದು, ಐಸಿಸಿ ನಡೆಸಿದ ಪ್ರಪ್ರಥಮ ಟಿ೨೦ ವಿಶ್ವಕಪ್‌ನಲ್ಲಿನ ಭಾರತೀಯರ ಗೆಲುವು ಹಾಗೂ ಜಿ ನೆಟ್‌ವರ್ಕ್ ಪ್ರತ್ಯೇಕ ಪಂದ್ಯಾವಳಿ ಆಯೋಜಿಸಿ ಭಾರತದ ಅಗ್ರಪಂಕ್ತಿಯ ಆಟಗಾರರನ್ನು ಸೆಳೆಯುವ ಪ್ರಯತ್ನಗಳ ಹಿನ್ನೆಲೆಯಲ್ಲಿ ಲಲಿತ್ ಮೋದಿಯವರ ಭಾರತೀಯ ಪ್ರೀಮಿಯರ್ ಲೀಗ್ ರೂಪ ತಳೆಯಿತು. ಮೋದಿಯವರ ಸಲಹೆ ಎರಡು ವರ್ಷಗಳಷ್ಟು ಹಳೆಯದಾಗಿತ್ತಾದರೂ ಬಿಸಿಸಿಐ ಅಸ್ಥಿತ್ವ ಉಳಿಸಿಕೊಳ್ಳಲು ಟಿ೨೦ ಲೀಗ್ ಐಪಿಎಲ್ ನಡೆಸಿತು. ಅದಕ್ಕೆ ಹಣದ ಅತಿವೃಷ್ಟಿಯಾಗಬೇಕೆ?
ಅಕ್ಷರಶಃ ಒಂದು ವ್ಯಾಪಾರಿ ಸರಕಾಗಿ ಕ್ರಿಕೆಟ್ ಪರಿವರ್ತಿತವಾಗಿದ್ದು ಈ ಕಾಲದಲ್ಲಿ. ಈಗ ಆಟಗಾರರೂ ಹರಾಜಿನಿಂದ ಕೊಳ್ಳಲ್ಪಡುವ ವಸ್ತುಗಳು. ಹಣ ; ಅದೂ ದಿಢೀರ್ ಹಣದ ಹಿಂದೆ ಬಿದ್ದಿರುವ ಕ್ರಿಕೆಟ್ ಮಂಡಳಿಗಳಿಗೆ ಕಾಣುತ್ತಿರುವುದು ೨೦ ಓವರ್‌ಗಳ ಚುಟುಕು ಆಟವಷ್ಟೇ. ಬಹುಷಃ ನಿಮಗೂ ಗೊತ್ತು, ವೆನಿಲ್ಲಾ ಬೆಳೆಗೆ ಕೆಜಿಗೆ ನಾಲ್ಕು ಸಾವಿರದಂತ ಬಂಗಾರದ ಬೆಲೆ ಬಂದಾಗ ಜನ ಪೇಟೆಯಲ್ಲಿ ತಾರಸಿ ಮೇಲೂ ಕುಂಡವಿಟ್ಟು ಬೆಳೆ ತೆಗೆಯಲು ಹೊರಟರು. ಆಗಿದ್ದೇನು? ಬಳ್ಳಿಗೆ ಕೊಳೆ ರೋಗ, ವೆನಿಲ್ಲಾ ಕೋಡಿಗೆ ನಾಲ್ಕಾಣೆ ಬೆಲೆ. ಕ್ರಿಕೆಟ್‌ನ ಸ್ಥಿತಿ ಅತ್ತ ಮುಟ್ಟಿದರೆ ಅಚ್ಚರಿ ಪಡಬೇಡಿ.
ಕರ್ನಾಟಕದ ಕ್ರಿಕೆಟ್ ಆಡಳಿತಕ್ಕೂ ಈಗ ಟ್ವೆಂಟಿ ಜ್ವರ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್-ಕೆಎಸ್‌ಸಿಎಗೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅಧ್ಯಕ್ಷರು. ಬ್ರಿಜೇಶ್ ಪಟೇಲ್ ಕಾರ್ಯದರ್ಶಿ. ಒಂದರ್ಥದಲ್ಲಿ ಇಬ್ಬರಿಗೂ ಎಣ್ಣೆ ಸೀಗೇಕಾಯಿ ಸಂಬಂಧ. ಕೋಟಿ ಕೋಟಿ ಎಣಿಸುವ ಕರ್ನಾಟಕ ಪ್ರೀಮಿಯರ್ ಲೀಗ್ ಕೆಪಿಎಲ್ ಜಾರಿಗೊಳಿಸುವ ಹಿನ್ನೆಲೆಯಲ್ಲಿ ಈ ಇಬ್ಬರೂ ಭಾಯಿ ಭಾಯಿ!
ಕೆಪಿಎಲ್ ಐಪಿಎಲ್‌ನದೇ ನಕಲು ಪ್ರತಿ. ಇಲ್ಲೂ ಪಾಲ್ಗೊಳ್ಳುವುದು ಎಂಟು ತಂಡ. ೩೧ ಪಂದ್ಯ. ಮಧ್ಯಾಹ್ನಕ್ಕೊಂದು, ರಾತ್ರಿಗೊಂದು ಪಂದ್ಯ. ಹೊರರಾಜ್ಯದ ನಾಲ್ವರು ಆಡುವ ಹನ್ನೊಂದರಲ್ಲಿರಬಹುದು. ಆಯಾ ವಲಯದ ಯುವ ಪ್ರತಿಭೆಗಳಲ್ಲಿ ತಲಾ ನಾಲ್ವರ ಅವಕಾಶ ಕಡ್ಡಾಯ. ಪಂದ್ಯವೊಂದಕ್ಕೆ ಆಟಗಾರರಿಗೆ ಕನಿಷ್ಟ ೧೦ ಸಾವಿರ ರೂ. ಸಂಭಾವನೆ. ಕರ್ನಾಟಕದ ಕ್ರಿಕೆಟ್ ಆಟಗಾರರಿಗೆ ಅವಕಾಶ, ಹಣಕಾಸಿನ ರಸದೌತಣ. ಹಾಗಂದುಕೊಂಡು ಕಿವಿಗೆ ಹೂವು ಇಟ್ಟುಕೊಂಡರೆ ಏಪ್ರಿಲ್ ಒಂದರ ಶುಭಾಷಯ!
ಈ ಹೊತ್ತು ಸರಳ ಎಕನಾಮಿಕ್ಸ್‌ನ್ನು ವಿವೇಚಿಸಬೇಕು. ಬೆಂಗಳೂರು ನಗರ ವಲಯವನ್ನು ಬ್ರಿಗೇಡ್ ಗ್ರೂಪ್ ಖರೀದಿಸಲು ಕೊಟ್ಟದ್ದು ೭.೨೦ ಕೋಟಿ. ಇವರು ಫೈನಲ್‌ವರೆಗೆ ಆಡುತ್ತಾರೆ, ಆಟಗಾರರಿಗೆ ಕನಿಷ್ಟ ಸಂಭಾವನೆ ಕೊಡುತ್ತಾರೆ ಎಂದರೆ ಆಡುವ ಒಂಭತ್ತು ಪಂದ್ಯದಿಂದ ಆಡುವ ಆಟಗಾರರಿಗೆ ಸಂದಾಯವಾಗಬೇಕಿರುವ ಮೊತ್ತ ಅಜಮಾಸು ೧೦ ಲಕ್ಷ. ಆಡುವ ಹನ್ನೊಂದಲ್ಲದೆ ಉಳಿದವರಿಗೂ ಸಂಬಳ ಕೊಡಬೇಕು ಎಂಬುದು ಬೇರೆ ಮಾತು. ಆಟಗಾರರನ್ನು ಬಿಡ್ಡಿಂಗ್‌ನಲ್ಲಿ ಖರೀದಿಸಬೇಕಿರುವುದರಿಂದ ಅವರ ಬೆಲೆ ೯೦ ಸಾವಿರವನ್ನು ಮೀರುವ ಸಾಧ್ಯತೆಯಿದೆ ಎಂಬುದು ಇನ್ನೊಂದು ವಿಚಾರ. ಇನ್ನು ತಂಡವನ್ನು ನಿರ್ವಹಿಸುವ ಖರ್ಚು, ಬೇಕೇಬೇಕಾಗುವ ತುಂಡುಡುಗೆಯ ಚಿಯರ್ ಗರ್ಲ್ಸ್ ಹಾಗೂ ಬಾಲಿವುಡ್ ಸ್ಯಾಂಡಲ್‌ವುಡ್ ಕಾಲಿವುಡ್ ಪ್ರಚಾರ ರಾಯಭಾರಿಗಳ ಪೆರೇಡ್, ಕೋಚ್ - ಫಿಜಿಯೋಗಳ ನೇಮಕದ ಖರ್ಚು ಇತ್ಯಾದಿ ಇತ್ಯಾದಿಗಳು ಸೇರಿ ಇನ್ನೊಂದು ಕೋಟಿ ದಾಟಿದರೆ ಹಣ ಹೊಂದಿಸದೆ ಬೇರೆ ದಾರಿಯಿಲ್ಲ.
ಅಷ್ಟಾಗಿ ಮರಳಿ ದಕ್ಕುವುದು ಏನು? ಪ್ರಶಸ್ತಿ ಗೆದ್ದರೆ ಬರುವುದು ೨೦ ಲಕ್ಷ ರೂ ಮಾತ್ರ! ತಂಡವೊಂದರ ಕನಿಷ್ಟ ಬಿಡ್ ಮೊತ್ತವನ್ನು ಕೆಪಿಎಲ್ ಮರಳಿಸಿರುತ್ತದೆ!! ಸ್ಟೇಡಿಯಂನ ಟಿಕೆಟ್ ಧನದಲ್ಲಿ ಒಂದಷ್ಟು ಭಾಗ ಫ್ರಾಂಚೈಸಿ ಮಾಲಿಕರಿಗೆ ಎಂದರೂ ಅದು ಗುಟುಕು ನೀರು. ಬ್ರಿಜೇಶ್ ಪಟೇಲ್‌ರ ಅನಿಸಿಕೆ ಪ್ರಕಾರವೇ ಪಂದ್ಯಕ್ಕೆ ೧೦ ಸಹಸ್ರ ಪ್ರೇಕ್ಷಕರು ಬಂದರೆ ಹೆಚ್ಚು. ಟಿವಿ ನೇರಪ್ರಸಾರದ ಮೊತ್ತದಲ್ಲಿ ಇವರಿಗೂ ಪಾಲಿದೆ ಎಂದರೂ ಅದು ಬರೀ ೭೫ ಲಕ್ಷಕ್ಕೆ ಮಾರಾಟವಾದ ಸುದ್ದಿಯಿದೆ. ಆಟಗಾರರ ಅಂಗಿ, ಪ್ಯಾಂಟ್ ಮೇಲೆ ನಾನಾ ಕಂಪನಿಗಳ ಲೋಗೋ ಹಾಕಿ ಹಣ ಮಾಡುವ ಮಾರ್ಗ ಇರುವುದೇನೋ ನಿಜ, ಅಲ್ಲೂ ಒಪ್ಪಂದ ಎರಡಂಕಿಯ ಲಕ್ಷಕ್ಕೆ ಹೋಗುವುದು ಅನುಮಾನ. ತಂಡಗಳಿಗೆ ಕೊಳ್ಳುವವರಲ್ಲಿಇದ್ದ ಬೇಡಿಕೆ, ಈ ಪರಿ ಬಿಡ್ ಅರ್ಥವಾಗುತ್ತಿಲ್ಲ.
ಹೊರರಾಜ್ಯದ ಯಾವ ಆಟಗಾರರು ಇಲ್ಲಿ ಆಡಲಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಈ ಟೂರ್ನಿಯ ಮುಕ್ತಾಯಕ್ಕೆ ಮುನ್ನವೇ ದಕ್ಷಿಣ ಆಫ್ರಿಕಾದಲ್ಲಿ ಚಾಂಪಿಯನ್ಸ್ ಟ್ರೋಫಿ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ತಂಡದ ಸದಸ್ಯರ ಲಭ್ಯತೆ ಕಷ್ಟ. ಅಷ್ಟೇಕೆ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆಯಂತವರೇ ಆಡುತ್ತಿಲ್ಲ. ಟ್ವೆಂಟಿ ೨೦ ಪಂದ್ಯಾವಳಿ ಎಂದ ಮಾತ್ರಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಲ್ಲುತ್ತಾರೆ ಎಂಬುದು ಭ್ರಮೆಯಾದೀತು. ಹಾಗಾದರೆ ಎಂಟತ್ತು ಕೋಟಿ ಸುರಿಯುವ ಫ್ರಾಂಚೈಸಿ ಮಾಲಿಕರ ಖರೀದಿ ಹಿಂದಿನ ಲೆಕ್ಕಾಚಾರವೇನು?
ತಂಡಗಳ ಖರೀದಿಯಲ್ಲಿ ರಾಜಕಾರಣಿಗಳ ಸಂಸ್ಥೆಗಳದೇ ದೊಡ್ಡ ಹೆಸರು, ಪಟ್ಟಿ. ನೇರವಾಗಿಯೇ ನಾಲ್ಕು ತಂಡಗಳು ಇಂತವರ ಪಾಲಾಗಿದೆ. ಅಪ್ಪಟ ಉದ್ಯಮಿಗಳಿಗಿಂತ ರಾಜಕಾರಣಿಗಳು ಹೆಚ್ಚು ಲೆಕ್ಕಾಚಾರ ನಿಪುಣರು ಎನ್ನುವುದು ಇಂದಿನ ಸತ್ಯ. ಹಾಗೆಯೇ ಅವರಿಗೆ ಸೋಲುಗಳು ಹೊಸದಲ್ಲ. ಚುನಾವಣಾ ಸೋಲಿಗೆ ಅವರು ಅಂಜುವುದೂ ಇಲ್ಲ. ಪರಾಜಯದ ಕಾರಣ ಹುಡುಕಿ ಪರಿಹರಿಸಿಕೊಳ್ಳುವ ಜಾಣರು. ನೇರ ದಾರಿಯೇ ಆಗಬೇಕೆಂಬ ಹಟವಿಲ್ಲ. ಹಿಂದಿನ ಬಾರಿ ತಮಗೆ ಏನೇನೂ ಮತ ತಾರದ ಬೂತ್‌ಗಳ ಮತದಾರರ ಹೆಸರು ಮತದಾರಪಟ್ಟಿಯಲ್ಲಿ ಇಲ್ಲದಂತೆ ಮಾಡಿಬಿಟ್ಟರಾಯಿತಲ್ಲ?!
ಇಲ್ಲೂ ಅದು ಅನ್ವಯವಾಗದಿದ್ದರೆ ಸಾಕು! ಒಂದು ಟೂರ್ನಿ ಯಶಸ್ವಿಯಾಗಲು ಕ್ರೀಡಾಂಗಣದಲ್ಲಿ ಪ್ರೇಕ್ಷಕರ ನೂಕುನುಗ್ಗಲು ಬೇಕೆ ಬೇಕು. ಬಡ ಪ್ರೇಕ್ಷಕನಿಗೆ ಸಿಕ್ಸ್, ಫೋರ್‌ಗಳ ಜೊತೆಗೆ ಕೊನೆಯ ಓವರ್, ಅಂತಿಮ ಚೆಂಡಿನ ತುದಿಗಾಲಿನ ಕ್ಲೈಮ್ಯಾಕ್ಸ್ ಇದ್ದಿರಬೇಕು. ನಷ್ಟದ ಬಾಬತ್ತಿಗೆ ಹೆದರಿ ಈ ಫ್ರಾಂಚೈಸಿ ಮಾಲಿಕರು ತಾವೇ ಫಲಿತಾಂಶಗಳನ್ನು ‘ಮ್ಯಾನುಫ್ಯಾಕ್ಚರ್’ ಮಾಡುವ ಸಾಧ್ಯತೆಗಳ ಬಗ್ಗೆ ಹಲವು ಕ್ರಿಕೆಟ್ ತಜ್ಞರ ದೃಢವಾದ ಶಂಕೆಗಳಿವೆ.
ಈಗ ಕೆಎಸ್‌ಸಿಎಗೆ ರಣಜಿ ಕ್ರಿಕೆಟ್ ಒಂಥರ ಹೆಣ್ಣು ಮಗುವಿದ್ದಂತೆ. ಕೆಪಿಎಲ್ ವಂಶೋದ್ಧಾರಕ! ಕಳೆದ ಐದು ವರ್ಷಗಳಿಂದ ಕರ್ನಾಟಕದ ರಣಜಿ ಪ್ರದರ್ಶನ ಕಳಪೆಯಿಂದ ಹೀನಾಯಕ್ಕೆ ಸಾಗುತ್ತಿರುವ ದಾರಿಯಲ್ಲಿ ಬದಲಾವಣೆ ಮೂಡುವ ಸಂಭವನೀಯತೆ ಕಾಣುತ್ತಿಲ್ಲ. ಕೆಪಿಎಲ್ ರೊಕ್ಕ ತಂದೀತು. ಕ್ವಾಲಿಟಿ ಆಟಗಾರರನ್ನಲ್ಲ.
ಮತ್ತೊಮ್ಮೆ ಲೆಕ್ಕಕ್ಕೇ ಹೋಗೋಣ. ಕಳೆದ ವರ್ಷದ ಐಪಿಎಲ್ ಸಂಗ್ರಹಿಸಿದ್ದು ೧,೨೦೦ ಕೋಟಿ ರೂಪಾಯಿ. ಧಾರಾಳವಾಗಿ ಮಣ್ಣು ಮಸಿ ಎಂದು ಖರ್ಚು ತೋರಿಸಿಯೂ ಉಳಿದದ್ದು ೩೫೦ ಕೋಟಿ. ಅದರ ಹಿಂದಿನ ವರ್ಷ ಅಂದರೆ ೨೦೦೭ರಲ್ಲಿ ವರ್ಷವಿಡೀ ಜೀಕಾಡಿ ಬಿಸಿಸಿಐ ಗಳಿಸಿದ್ದು ೨೩೫ ಕೋಟಿ ಮಾತ್ರ. ಲಲಿತ್ ಮೋದಿ ವರ್ಷಕ್ಕೆರಡು ಐಪಿಎಲ್ ಎನ್ನುತ್ತಿರುವುದರ ಹಿಂದಿನ ಕಾರಣ ಅರ್ಥವಾಗುವಂತದು. ಸ್ವಾರಸ್ಯವಿರುವುದು ಮುಂದಿನ ಮಾಹಿತಿಯಲ್ಲಿ. ಬಿಸಿಸಿಐ ಕಾಂಚಾಣದ ರಾಶಿಯನ್ನು ಬಾಚಿಕೊಳ್ಳುತ್ತಿದೆಯಾದರೂ ಐಪಿಎಲ್ ಫ್ರಾಂಚೈಸಿಗಳು ನಲುಗುತ್ತಿವೆ. ಆರ್ಥಿಕ ಸಂಕಷ್ಟ ಅವರನ್ನು ಕಾಡುತ್ತಿರುವುದು ಸುಳ್ಳಲ್ಲ. ಶಾರುಖ್‌ಖಾನ್‌ರ ನೈಟ್‌ರೈಡರ‍್ಸ್, ಪ್ರೀತಿ ಜಿಂಟಾರ ಪಂಜಾಬ್ ತೊಡಗಿಸಿರುವ ಹಣಕ್ಕೆ ತಕ್ಕ ಪ್ರತಿಫಲ ನೀಡುತ್ತಿಲ್ಲ. ಅಂತರ್ರಾಷ್ಟ್ರೀಯ ಆಟಗಾರರು, ವಿಶ್ವ ಮಟ್ಟದಲ್ಲಿ ನೇರಪ್ರಸಾರಗಳಿದ್ದೂ ಐಪಿಎಲ್‌ನ ದ್ವಿತೀಯ ಸಂಚಿಕೆಗೆ ಜನಾಕರ್ಷಣೆ ಕುಸಿದಿತ್ತು. ಹಾಗಿದ್ದೂ ತಮಗಾಗುವ ನಷ್ಟವನ್ನು ಫ್ರಾಂಚೈಸಿಗಳು ಬಹಿರಂಗ ಪಡಿಸಲು ಅಂಜುತ್ತವೆ. ನಾಳೆ ತಂಡವನ್ನು ಮಾರುವುದಿದ್ದರೆ ಮಾರುಕಟ್ಟೆ ದರ ಕುಸಿಯಬಾರದಲ್ಲ?!
ಆ ಲೆಕ್ಕದಲ್ಲಿ ಕೆಪಿಎಲ್‌ನದು ಇನ್ನಷ್ಟು ಸಂಕೀರ್ಣ ಸ್ಥಿತಿ. ಬಹುಷಃ ನೇರಪ್ರಸಾರದ ಹಕ್ಕು ಕೋಟಿ ರೂ.ಯನ್ನು ಮುಟ್ಟಿಲ್ಲ ಎಂಬುದೇ ಒಂದು ಸಾಕ್ಷಿಯಾದೀತು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಾಧ್ಯಮಗಳನ್ನು ಬಳಸಿಕೊಂಡು ಕೆಪಿಎಲ್ ಅಲೆಯನ್ನು ಹೊಮ್ಮಿಸಲು ಯಶಸ್ವಿಯಾಗಿದೆ. ಅದರ ಆಕರ್ಷಣೆಗೆ ಬಿಡ್ಡರ್‌ಗಳು ಬಿದ್ದಿದ್ದಾರೆ ಎಂಬುದು ಸದ್ಯದ ವಿಶ್ಲೇಷಣೆ. ಕ್ರೀಡಾ ವಿಶ್ಲೇಷಕರಿಗೂ ಅರ್ಥವಾಗದ ಲಾಭ ವ್ಯವಹಾರ ಇದ್ದಿರುವುದು ಇನ್ನಷ್ಟೇ ಬಹಿರಂಗಗೊಳ್ಳಬೇಕು.
ಸಾಮಾನ್ಯವಾಗಿ ಟೂರ್ನಿಯೊಂದರ ಯಶಸ್ಸಿನಲ್ಲಿ ನೇರಪ್ರಸಾರದ ಪಾತ್ರ ದೊಡ್ಡದು. ಹೆಚ್ಚಿನ ಸಂಖ್ಯೆಯ ಕ್ಯಾಮರಾಗಳು, ನುರಿತ ವೀಕ್ಷಕ ವಿವರಣೆಗಾರರು, ತಂತ್ರಜ್ಞರು ಸೇರಿದಂತೆ ಸಮರ್ಪಕ ನೇರಪ್ರಸಾರವಿದ್ದರೆ ಮಾತ್ರ ವೀಕ್ಷಕರ ಸಂಖ್ಯೆ ವೃದ್ಧಿಸುತ್ತದೆ. ತನ್ನ ದೈನಂದಿನ ವಾರ್ತೆಗಳನ್ನು ನೇರಪ್ರಸಾರ ಮಾಡಲೇ ತಡವರಿಸುವ ಖಾಸಗಿ ವಾಹಿನಿ ಇಂತಹ ಚಮಕ್ ಛಮಕ್ ಟೂರ್ನಿಯ ನೇರ ಪ್ರಸಾರವನ್ನು ದಕ್ಷತೆಯಿಂದ ಮಾಡೀತೆ? ಅನುಮಾನ! ಪರಿಣಾಮ ಮತ್ತೊಮ್ಮೆ ಲಾಭದ ವ್ಯವಹಾರದ ನಿರೀಕ್ಷೆಯಲ್ಲಿರುವ ಫ್ರಾಂಚೈಸಿಗಳ ಮೇಲಾದೀತು.
ಟ್ವೆಂಟಿ ೨೦ ಮಾದರಿ ಕ್ರಿಕೆಟ್‌ನ ಜೀವರಕ್ಷಕ ಅಲ್ಲವೇ ಅಲ್ಲ. ಇದು ಒಟ್ಟಾರೆ ಕ್ರಿಕೆಟ್‌ನ್ನು ಕೊಲ್ಲುವುದೇ ಹೆಚ್ಚು ವಾಸ್ತವ. ಏಕದಿನ ಕ್ರಿಕೆಟ್‌ಗೂ ಅಂತಹ ಅಪವಾದ ಬಂದಿತ್ತಾದರೂ ಆ ಪಂದ್ಯಗಳ ಸಂಖ್ಯೆ ವರ್ಷಕ್ಕೆ ಸರಾಸರಿ ೨೫ಕ್ಕಿಂತ ಹೆಚ್ಚಾಗಿರಲಿಲ್ಲ. ಸಂಯಮ ತೋರಬೇಕಾದ ಐಸಿಸಿಯೇ ವರ್ಷಕ್ಕೊಂದು ಟಿ೨೦ ವಿಶ್ವಕಪ್‌ನ್ನು ಘೋಷಿಸಿದೆ. ಈ ಬಾರಿ ಐಪಿಎಲ್ ಬೆನ್ನ ಹಿಂದೆಯೇ ವಿಶ್ವಕಪ್ ನಡೆದಿದ್ದರಿಂದ ಟಿಆರ್‌ಪಿ ಕುಸಿದಿದ್ದು ಅದಕ್ಕೆ ಎಚ್ಚರಿಕೆಯ ಘಂಟೆಯಾಗಿಲ್ಲ.
ಬರುವ ವರ್ಷ ಐಪಿಎಲ್ ಮಾರ್ಚ್ 18ರಿಂದ ಏಪ್ರಿಲ್ 23ರವರೆಗೆ ನಡೆಯಲಿಕ್ಕಿದೆ. ಖಡಕ್ಕಾಗಿ ವಾರದ ಅಂತರದಲ್ಲಿ ಐಸಿಸಿ ವಿಶ್ವಕಪ್. ಜೊತೆಜೊತೆಗೆ ಕರ್ನಾಟಕದಂತೆ ಉಳಿದ ರಾಜ್ಯಗಳೂ ಟಿ೨೦ ಟೂರ್ನಿಗಳನ್ನು ಆರಂಭಿಸಿಬಿಟ್ಟರೆ ಆಟಗಾರರಿಗೆ ರಣಜಿ, ದುಲೀಪ್, ಸುಬ್ಬಯ್ಯ ಪಿಳ್ಳೆಯಂತ ಪ್ರಥಮ ದರ್ಜೆ ಕ್ರಿಕೆಟ್ ಆಡಲು ಸಮಯವಿರದು. ಇಷ್ಟಕ್ಕೂ ಕ್ರಿಕೆಟ್ ವೇಳಾಪಟ್ಟಿಯಲ್ಲಿ ಈ ಸ್ಪರ್ಧೆಗಳನ್ನು ಸೇರಿಸುವುದೇ ಕಷ್ಟವಾದೀತು. ಈಗಾಗಲೇ ಅದರ ಮೊದಲ ಸುಳಿವು ಕಂಡುಬಂದಿದೆ. ಈ ಋತುವಿನಲ್ಲಿ ದುಲೀಪ್ ಟ್ರೋಫಿ ಕೂಟ ನಡೆಯುತ್ತಿಲ್ಲ!
ಊಹ್ಞೂ, ಒಳ್ಳೆಯದಕ್ಕಂತೂ ಈ ಕ್ರಿಕೆಟ್ ಜ್ವರ ಬಂದಿಲ್ಲ. ಕೋಳಿ ಜ್ವರ, ಹಂದಿ ಜ್ವರಗಳು ಮನುಷ್ಯನ ಜೀವ ತೆಗೆದರೆ ಇದು....... ಯಾಕೋ ಚಿಯರ್ ಗರ್ಲ್ಸ್‌ರ ನೆನಪೂ ಖುಷಿ ನೀಡುತ್ತಿಲ್ಲ!
-ಮಾವೆಂಸ