ಬುಧವಾರ, ಏಪ್ರಿಲ್ 15, 2009

ಸಿಎಫ್‌ಎಲ್ ಬೆನ್ನ ಹಿಂದೆ ಅಪಾಯ!


ವಿಶ್ವದೆಲ್ಲೆಡೆ ಹೊಸ ಹೋರಾಟ ಶುರುವಾಗಿದೆ.  ಟಂಗ್‌ಸ್ಟನ್ ತಂತಿಯ ಬಲ್ಬ್‌ಗಳನ್ನು ನಿಷೇಧಿಸಬೇಕು. ಕಾಂಪ್ಯಾಕ್ಟ್ ಫ್ಲೋರೋಸೆಂಟ್ ಲ್ಯಾಂಪ್ - ಸಿಎಫ್‌ಎಲ್ ಗಳನ್ನೆ ಬಳಸಬೇಕು. ಬಲ್ಬ್‌ಗಿಂತ ಹೆಚ್ಚು ಬೆಳಕು ನೀಡುವ ಸಿಎಫ್‌ಎಲ್ ಬಲ್ಬ್‌ಗಿಂತ ಮೂರನೇ ಎರಡರಷ್ಟು ವಿದ್ಯುತ್‌ನ್ನು ಉಳಿಸುತ್ತದೆ. ಶೇ. ೭೦ ರಷ್ಟು ಕಡಿಮೆ ಶಾಖವನ್ನು  ಬಿಡುಗಡೆಗೊಳಿಸುತ್ತದೆ. ಅಷ್ಟೇಕೆ, ಬಲ್ಬಿಗಿಂತ ೧೦ ಪಟ್ಟು ಬಾಳಿಕೆ ಬರುತ್ತದೆ. ಅಮೇರಿಕದ ಪರಿಸರ ಸಂರಕ್ಷಣಾ ಏಜೆನ್ಸಿ ಇಪಿಎ ಹೇಳುತ್ತದೆ. ೬೦ ವ್ಯಾಟ್ ಬಲ್ಬ್‌ನ ಬದಲು ೧೩ ವ್ಯಾಟ್ ಸಿಎಫ್‌ಎಲ್ ಬಳಸಿದರೆ ಬಲ್ಬ್‌ನ ಆಯುಷ್ಯದ ಲೆಕ್ಕದಲ್ಲಿ ಬಳಕೆದಾರನಿಗೆ ೩೦ ಡಾಲರ್ ಉಳಿಯುತ್ತದೆ !  ಆದರೆ ಇದೀಗ ಎಚ್ಚರಿಕೆ ನೀಡುತ್ತಿರುವ ಮಾತು ಬೇರೆ, ಸಿಎಫ್‌ಎಲ್‌ನಲ್ಲಿ ಅಪಾಯಕಾರಿ ಪಾದರಸವಿದೆ !!
ಸಿಎಫ್‌ಎಲ್‌ನಲ್ಲಿ ೫ ಮಿಲಿಗ್ರಾಂ ಪಾದರಸವಿದೆ. ಬಹುಷಃ ಸ್ಥಳೀಯ ತಯಾರಿಕೆಗಳಲ್ಲಿ ಇದರ ಪ್ರಮಾಣ ಇನ್ನಷ್ಟು ಹೆಚ್ಚೇ ಇರಬಹುದು. ಥರ್ಮಾಮೀಟರಿನಲ್ಲಿ ಬಳಸುವ ೫೦೦ ಎಂಜಿ  ಲೆಕ್ಕದಲ್ಲಿ ಇವನ್ನು ನಗಣ್ಯ ಎನ್ನಬಹುದು.  ಆದರೆ ಒಡೆದು ಚೂರಾಗುವ ಸಿಎಫ್‌ಎಲ್‌ಗಳನ್ನು  ನಾವು ವ್ಯವಸ್ಥಿತವಾಗಿ ಶುಭ್ರಗೊಳಿಸುವ ಅಗತ್ಯವಿದೆ.
ಏನು ಮಾಡಬೇಕು? ಒಂದೊಮ್ಮೆ ಮನೆಯೊಳಗೆ ಸಿಎಫ್‌ಎಲ್ ಒಡೆದರೆ ಮೊತ್ತಮೊದಲು ಆ ಕೊಠಡಿಯ ಕಿಟಕಿ ಬಾಗಿಲುಗಳನ್ನು ತೆರೆದಿಡಬೇಕು.  ಅಲ್ಲಿಂದ ೧೫ ನಿಮಿಷ ಹೊರಗೆ ನಡೆಯಬೇಕು. ಅದರ ಎಲ್ಲ ತುಂಡು, ಬಿಳಿಪುಡಿ ಇತ್ಯಾದಿಗಳನ್ನು ನೇರವಾಗಿ ಕೈ ಬಳಸದೆ ಸಂಗ್ರಹಿಸಬೇಕು. ಮುಖ್ಯವಾಗಿ, ಈ ತ್ಯಾಜ್ಯಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಸೀಲ್ ಮಾಡಿ ವಿಲೇವಾರಿ ಮಾಡಬೇಕು.
ಅಮೇರಿಕದಲ್ಲಿ  ಸಿಎಫ್‌ಎಲ್ ಬಲ್ಬ್ ನ ಬೆಲೆಯಲ್ಲಿ ತ್ಯಾಜ್ಯ ನಿರ್ವಹಣಾ ಶುಲ್ಕ - ವೇಸ್ಟ್ ಮ್ಯಾನೇಜ್ ಮೆಂಟ್ ಫೀ  ಸೇರಿಸುತ್ತಾರೆ. ಈ ಕೆಲಸವನ್ನು ಒಂದು ಏಜೆನ್ಸಿಗೆ ಗುತ್ತಿಗೆ ನೀಡಿರಲಾಗುತ್ತದೆ.  ಆದರೆ ಗ್ರಾಹಕ ‘ಬರ್ನ್’ ಆದ ಸಿಎಫ್‌ಎಲ್‌ನ್ನು ಮರಳಿಸಿದರೆ  ಆ ವಿಎಂಎಫ್‌ನ್ನು  ಮರಳಿಸಲಾಗುತ್ತದೆ. ಸದ್ಯ ಭಾರತದಲ್ಲಿ  ಇಂತದ್ದಿಲ್ಲ ಎನ್ನುವುದರ ಜೊತೆಗೆ ಇ- ವೇಸ್ಟ್ ಕಾನೂನು ಇನ್ನಷ್ಟೇ ಜಾರಿಗೆ ಬರಬೇಕಾಗಿದೆ ಎಂಬುದನ್ನು ನೆನಪಿಸಿಕೊಳ್ಳಬೇಕು.
 ಸಮಸ್ಯೆ  ಇರುವುದು ಬೇರೆ ನಿಟ್ಟಿನಲ್ಲಿ, ಹಾಳಾದ ಸಿಎಫ್‌ಎಲ್‌ಗಳನ್ನು ನಾವು ಯಾವುದೋ  ಖಾಲಿ ಜಾಗದಲ್ಲಿ ಚೆಲ್ಲುತ್ತೇವೆ. ಇದರಿಂದ ಪಾದರಸ ಭೂಮಿ ಸೇರಿ ಅಂತರ್ಜಲ ಮಲಿನಗೊಳ್ಳುತ್ತದೆ. ನಾಳೆ   ಅದೇ ನೀರನ್ನು ನಾವು ಕುಡಿಯುತ್ತೇವೆ !
ಸಿಎಫ್‌ಎಲ್ ಬಗ್ಗೆ ಈ ತರದ ವಿಚಾರಕ್ಕೆ ಅಬ್ಬರದ ಪ್ರಚಾರ ನೀಡುತ್ತಿರುವುದರ ಹಿಂದೆ ಬಲ್ಬ್ ಲಾಬಿ ಇದ್ದರೂ ಇರಬಹುದು. ತ್ಯಾಜ್ಯ ನಿರ್ವಹಣೆ  ಹೊರತಾಗಿ ಸಿಎಫ್‌ಎಲ್ ಕ್ಷೇಮ. ಸಿಎಫ್‌ಎಲ್ ಒಟ್ಟಾರೆ ೨.೪ ಮಿಲಿಗ್ರಾಂ  ಪಾದರಸವನ್ನು ತನ್ನ ಜೀವಿತಾವಧಿಯಲ್ಲಿ  ವಾತಾವರಣಕ್ಕೆ ಬಿಡುಗಡೆ ಮಾಡಿದರೆ ಈ ಇನ್‌ಕ್ಯಾಡೆಸೆಂಟ್ ಬಲ್ಬ್ ತನ್ನ ಚುಟುಕು ಬದುಕಿನಲ್ಲಿ ಹೊರ ಚೆಲ್ಲುತ್ತದೆ.!
                                       ಸಧ್ಯಕ್ಕಂತೂ ಸಿಎಫ್‌ಎಲ್ ಎಲ್ಲ ದೃಷ್ಟಿಯಿಂದ  ಮೇಲುಗೈ ಪಡೆಯುತ್ತದೆ.  ನಾವು ಬಲ್ಬ್  ಬಿಟ್ಟಾಕಿ ಸಿಎಫ್‌ಎಲ್‌ಗೆ ಹೋಗಲೇಬೇಕಾದ ದಿನಗಳು ಇವು. ಸ್ವಾರಸ್ಯವೆಂದರೆ ಸಿಎಫ್‌ಎಲ್  ತಳವೂರುವ ಮುನ್ನವೇ ಸ್ಫರ್ಧಿಯಂತೆ ಎಲ್‌ಇಡಿ ಬಲ್ಬ್‌ಗಳು ಬಂದಿವೆ. ಎಲ್ ಇಡಿಗಳ ಬೆಲೆ  ಕಡಿಮೆಯಾದಲ್ಲಿ  ಸಿಎಫ್‌ಎಲ್  ಮಾರುಕಟ್ಟೆಯಲ್ಲಿ  ನಿಲ್ಲುವುದು        ಕಷ್ಟ, ಕಷ್ಟ !!
-ಮಾವೆಂಸ

2 comments:

ಮೃತ್ಯುಂಜಯ ಹೊಸಮನೆ ಹೇಳಿದರು...

ಗೊತ್ತೇ ಇರ್ಲಿಲ್ವಲ್ರೀ! ಒಟ್ಟಲ್ಲಿ ಒಂದು ಅನುಕೂಲತೆ ಜತೆ ಒಂದಾದ್ರೂ ಅನಾನುಕೂಲತೆ ಇರುತ್ತೆ. ಪ್ರಾಣಿ ಪಕ್ಷಿಗಳ ಹಾಗೆ ಸೂರ್ಯ,ಚಂದ್ರರ ಬೆಳಕಲ್ಲಿರೋದೇ ಒಳ್ಳೇದೇನೊ....

ಮನಸ್ವಿ ಹೇಳಿದರು...

ಟ್ಯೂಬ್ ಲೈಟ್ ಹೋಯ್ತು ಸಿ ಎಪ್ ಎಲ್ ಬಂತು ಕರೆಂಟ್ ಉಳಿಯಿತು ಎನ್ನುತ್ತಿದ್ದವರಿಗೆ ಇದೊಂದು ಶಾಖ್... ಓದಿ ಹೆದರಿಕೆಯಾಯಿತು ಮಾರಾಯಾ........... ಇನ್ನೆಲ್ಲಾ ಎಲ್ ಇ ಡಿ ಬಳಸುವುದು ಒಳ್ಳೆಯದಾ??..

 
200812023996