ಸೋಮವಾರ, ಮಾರ್ಚ್ 30, 2009

ತಾವೇ ತೋಡಿದ ಹಳ್ಳದಲ್ಲಿ ಹಳ್ಳಿಗರು....




ಗೆಳೆಯ ಜಿತು ಇತ್ತೀಚೆಗೆ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದರು, ರಾಮನವಮಿಯ ೯ ದಿನಗಳು ದೇವರ ಪ್ರತಿಮೆಯನ್ನು ಪಲ್ಲಕ್ಕಿಯಲ್ಲಿ ಇರಿಸಿ ಊರಿನವರೆಲ್ಲ ಸೇರಿ ದೇವರ ಭಜನೆ ಮಾಡುತ್ತ, ಊರಿನ ಪ್ರತಿ ಮನೆ, ಮನೆಗೆ ಹೋಗಿ ಅಲ್ಲಿ ಪ್ರತಿ ಮನೆಯಲ್ಲಿ ಪೂಜೆ, ಮಂಗಳಾರತಿ ಮಾಡಿ, ಭಜನೆ ಮಾಡಿ ಪ್ರಸಾದ ಸೇವಿಸಿ ಹಿಂತಿರುಗುವುದು ವಾಡಿಕೆ ಆಗಿದೆ.
ಆದರೆ ಇತ್ತಿಚಿನ ವರುಷಗಳಲ್ಲಿ ಮನೆ ಮಕ್ಕಳೆಲ್ಲ ಙದು ಹಾಗು ಕೆಲಸ ಅರಸಿ ಹೊರಗಡೆ ಇರುವದರಿಂದಾಗಿ ಊರಲ್ಲಿರುವ ಕೆಲವೇ ಜನರು ಉತ್ಸವ ನೆಡೆಸುವುದು ತುಂಬಾ ದುಸ್ತರವಾಗುತ್ತಿದೆ..(ವಿವರಗಳಿಗೆ ನೋಡಿ.. http://hindumane.blogspot.com/) ಓದಿದ ತಕ್ಷಣ ಆ ಕ್ಷಣಕ್ಕೆ ತೋಚಿದಂತೆ ಪ್ರತಿಕ್ರಿಯಿಸಿದ್ದೆ.  "ಊರ ಬಿಟ್ಟರು ಕ್ರಿಯಾಶೀಲರು. ಇಲ್ಲಿ ಉಳಿದರು ಸತ್ತಂತೆ ಬದುಕಿರುವವರು! ಕಾಲ ಉತ್ತರಿಸದು. ಇಲ್ಲ್ಲಿರುವ ಕೆಲವೇ ಮಂದಿ ಮುನ್ನುಗ್ಗಬೇಕು. ರಜೆ ಹಾಕಿ ಆ ಜನರೂ ಬಂದರೆ ಜೈ! ಚೆಂಡು ನಮ್ಮ ಮನೆ ಅಂಗಳದಲ್ಲಿಯೇ ಇದೆ....."   ಯಾಕೋ ಗೊತ್ತಿಲ್ಲ, ಎರಡು ಮೂರು ದಿನದಿಂದ ಅದೇ ವಿಚಾರ ತಲೆಯಲ್ಲಿ ತಾಕಲಾಡುತ್ತಿದೆ. 
ವಿಚಾರ ಹಳತು ಮಾಡಿ ಹಾಗೆಯೇ ಮರೆತು ಬಿಡುತ್ತಿದ್ದೆನೇನೋ. ಆದರೆ ಆರ್ಕುಟ್ ಬಳಗದ ಸ್ನೇಹಿತರಾದ ಸಹನಾರ ಒಂದು ಅಭಿಪ್ರಾಯವೂ ಮನಸ್ಸಿನ ಮೂಲೆಯಲ್ಲಿ ತಿವಿಯುತ್ತಿತ್ತು. ಅದಕ್ಕೆ ಪುಟ್ಟ ಹಿನ್ನೆಲೆಯೂ ಇದೆ. ನಾನು ಆರ್ಕುಟ್‌ನಲ್ಲಿ ‘ಹಳ್ಳಿ ಹುಡುಗ್ರು’ ಎಂಬ ಕಮ್ಯುನಿಟಿಯನ್ನು ಆರಂಭಿಸಿದ್ದೆ. ಹಳ್ಳಿಯಲ್ಲಿರುವವರು ಹಾಗೂ ಹಳ್ಳಿಗಳನ್ನು ಪ್ರೀತಿಸುವವರನ್ನು ಒಗ್ಗೂಡಿಸುವ ಪ್ರಯತ್ನ ಅದಾಗಿದೆ. ಅದರಲ್ಲಿ ತಾವೂ ಪಾಲ್ಗೊಂಡ ಸಹನಾ ಒಂದು ಮಾತು ಹೇಳಿದ್ದರು, ಈ ಕಮ್ಯುನಿಟಿಯಲ್ಲಿ ಹಳ್ಳಿಗರ ವಿಚಾರಗಳ ಚರ್ಚೆಯಾಗಲಿ ಈಗ ಅದೂ ಆರಂಭವಾಗಿದೆ ಎಂದುಕೊಳ್ಳೋಣ.
ಮುಖ್ಯವಾಗಿ ನನಗಂತೂ ಸುತ್ತಮುತ್ತಲಿನ ಹಳ್ಳಿಹುಡುಗರನ್ನು ನೋಡಿದರೆ ರೇಜಿಗೆ ಹುಟ್ಟುತ್ತದೆ. ಅವರಲ್ಲಿ ನಕಾರಾತ್ಮಕ ಧೋರಣೆ ತುಂಬಿ ತುಳುಕುತ್ತಿದೆ. ಒಂದೆಡೆ ಹಳ್ಳಿಗಳಲ್ಲಿ ಅದೆಂತದೋ ಸೋಮಾರಿತನ. ಸ್ವಂತದ ಜಮೀನಿನತ್ತ ಕಾಲು ಹಾಕಲೂ ಹಿಂಜರಿಕೆ. ಕಟ್ಟೆ ಪಂಚಾಯ್ತಿ, ಊರ ರಾಜಕೀಯಗಳು ಅವರ ಸಮಯ ಕೊಲ್ಲುವ ಸಾಧನ. ನೆನಪಾಗುತ್ತದೆ ಒಂದು ಘಟನೆ. ಆಗ ಸಕ್ಕರೆ ಓಪನ್ ಮಾರ್ಕೆಟ್‌ನಲ್ಲಿ ಲಭ್ಯವಿರಲಿಲ್ಲ. ಒಂದು ರೇಷನ್ ಕಾರ್ಡ್‌ಗೆ ಬರೀ ೨ ಕೆ.ಜಿ. ಸಕ್ಕರೆ ಕೊಡುತ್ತಿದ್ದರು. ನಮ್ಮಲ್ಲಿಂದ ರೇಷನ್ ಕೊಡುವ ಸೊಸೈಟಿಗೆ ಮೂರು ಕಿ.ಮೀ. ಅಂತರ. ಅಲ್ಲಿಗೆ ಹೋಗಲು ನಿರಾಕರಿಸುವವರು ಹೇಳುತ್ತಿದ್ದರು, ‘ಎರಡು ಕೆ.ಜಿ.ಗೆಂದು ಅಷ್ಟು ದೂರ ಹೋಗುವುದೆಂದರೆ ಆಳುಲೆಕ್ಕ ವ್ಯರ್ಥ!’ ಆಗ ಆ ಸೊಸೈಟಿಯ ಮ್ಯಾನೇಜರ್ ಭೀಮಣ್ಣ ಕೇಳುತ್ತಿದ್ದರು,  ಅದೆಲ್ಲಾ ಸರಿ. ಒಂದು ಮಧ್ಯಾಹ್ನದ ಆಳು ಲೆಕ್ಕ ನಷ್ಟ ಎನ್ನುವವರು ಆ ಮಧ್ಯಾಹ್ನ ಮಾಡುವುದೇನು? ಒಂದೋ ಹರಟೆ, ಕಟ್ಟೆ ಪಂಚಾಯ್ತಿ ಇಲ್ಲವೇ ನಿದ್ದೆ ಅಷ್ಟೇ ತಾನೇ?!
ನಿಜ ಅದೇ. ಏನೋ ಮಾಡುತ್ತೀವೆನ್ನುವ ಇವರು ಶೂನ್ಯದಿಂದ ಮೇಲೆದ್ದೇ ಇರುವುದಿಲ್ಲ. ಬಹುಷಃ ಅದ್ಭುತ ತಾಕತ್ತು ಇದ್ದೂ ಹೀಗೆ ವ್ಯರ್ಥವಾಗುತ್ತಿರುವ ಬ್ರಾಹ್ಮಣ-ಹವ್ಯಕ ಹುಡುಗರ ಬಗ್ಗೆ ಜಾಸ್ತಿ ಅನುಕಂಪ ತೋರಬೇಕು! ಇಂದು ಸಮಾಜದಲ್ಲಿ ಸರಿಯಾದ ಸಮಯಕ್ಕೆ ಮದುವೆಯಾಗಲು ಹುಡುಗಿಯರು ಲಭ್ಯರಾಗದೇ ಇರುವುದು ಅವರ ಈ ನಕಾರಾತ್ಮಕ ವರ್ತನೆಗಳಿಗೆ ಕಾರಣವಿರಬಹುದೇ?
ಹಳ್ಳಿಯ ಹುಡುಗರು ಒಂದಲ್ಲಾ ಒಂದು ಚಟುವಟಿಕೆಯಲ್ಲಿ ತೊಡಗಿಕೊಂಡದ್ದೇ ಆದರೆ ಮನಸ್ಥಿತಿ ಬದಲಾಗಲೇಬೇಕು. ಕಿತಬಿ ರಾಜಕೀಯ ಮಾಡಲು ಸಮಯ ಸಿಕ್ಕುವುದಿಲ್ಲ. ಮುಖ್ಯವಾಗಿ, ಸಮಾಜಕ್ಕೆ ತೆರೆದುಕೊಳ್ಳುವುದರಿಂದ ಹೊಂದಾಣಿಕೆ ಮನೋಭಾವ ಬೆಳೆಯುತ್ತದೆ.
ಪುಟ್ಟ ಉದಾಹರಣೆ. ಜೋಗದ ಹತ್ತಿರದ ತಲವಾಟದಂತ ಊರುಗಳಲ್ಲಿ ಯುವ ಪಾಳ್ಯವೇ ಇದೆ. ಕ್ರಿಯಾಶೀಲರೇ ಇದ್ದಾರೆ. ಕೊನೆಪಕ್ಷ ಅವರ ಚಟುವಟಿಕೆಗಳ ಕುರಿತು ಅಸಮಾಧಾನ ಇರುವವರು ಸುಮ್ಮನಿದ್ದರೂ ಸಾಕಿತ್ತು. ಇವರ ಪಾಡಿಗೆ ಸಾಧನೆ ಮಾಡುತ್ತಿದ್ದರೇನೋ. ಈಗ ನೋಡಿದರೆ ಕಾಲೆಳೆಯುವುದನ್ನು ಬಿಟ್ಟಂತಿಲ್ಲ. ಹಾಗಾಗಿ ಅವರು ಹುಟ್ಟುಹಾಕಿದ್ದ ‘ಕಟ್ಟೆ’ ಎಂಬ ವಿನೂತನ ಪತ್ರಿಕಾ ಪ್ರಯತ್ನ ಕೊನೆ ಉಸಿರೆಳೆದಂತಿದೆ. ತಿಂಗಳಿಗೆ ಬರೀ ೧೦ ರೂ. ಕೊಟ್ಟು ಪ್ರೋತ್ಸಾಹಿಸಿದ್ದರೂ ಅದೊಂದು ಮೈಲುಗಲ್ಲಿನಂತ ಸಾಧನೆ ಆಗುತ್ತಿತ್ತೇನೋ. ಹಳ್ಳಿಗರು ತಾವು ಸೋತು ನೆರೆಹೊರೆಯವರ ಪ್ರಯತ್ನಗಳನ್ನು ಕೊಲ್ಲುವ ಸ್ಯಾಡಿಸ್ಟ್‌ಗಳಾಗುತ್ತಿರುವುದು ಏಕೆ? ಒಬ್ಬ ಸುಬ್ಬಣ್ಣ ನಿನಾಸಂನಂತ ವಿಶಿಷ್ಟ ಪ್ರಯೋಗ ಮಾಡಿ ಗೆದ್ದಿರುವುದು ಕಣ್ಣೆದುರಿಗಿದೆ. ಅಂತಹುದಕ್ಕೆ ಅವಕಾಶ ಕೊಡುವುದು ನಮ್ಮ ಹೆಮ್ಮೆ ಆಗಬೇಕಿತ್ತು.
ನಮ್ಮೂರಿನಲ್ಲೂ ಅಂತದೊಂದು ಚಟುವಟಿಕೆಗೆ ನಾನೂ ಶ್ರೀಕಾರ ಹಾಕಿದ್ದುಂಟು. ರಾಜ್ಯದ ಬಹುಪಾಲು ಎಲ್ಲ ಅಂದರೆ ೬೦ ನಿಯತಕಾಲಿಕಗಳು ಓದಲು ಸಿಗುತ್ತಿರುವ ರಾಜ್ಯದ ಅಪರೂಪದ ಗ್ರಾಮೀಣ ವಾಚನಾಲಯವಿದು. ಊರಿನ ‘ಹಿತೈಷಿ’ಗಳು ತಟಸ್ಥರಾಗಿದ್ದರೂ ನನ್ನ ಕೆಲಸ ಅಷ್ಟರಮಟ್ಟಿಗೆ ಸಲೀಸಾಗಿ ಸಾಗುತ್ತಿತ್ತು. ಆದರೆ....? (ವಾಚನಾಲಯದ ಪರಿಚಯ ಇನ್ನೊಮ್ಮೆ)
ಸ್ವಾರಸ್ಯವೆಂದರೆ, ಹಳ್ಳಿಯಿಂದ ನಗರಕ್ಕೆ ವಲಸೆ ಹೋದವರಲ್ಲೂ ತೌರು ನೆಲದತ್ತ ದಿವ್ಯ ನಿರ್ಲಕ್ಷ್ಯ. ಇತ್ತೀಚೆಗೆ ನಮ್ಮೂರಿನಲ್ಲಿ ಬೆಂಗಳೂರಿನಲ್ಲಿರುವವನ ಮಗನ ಮದುವೆ ನಡೆಯಿತು. ಮದುವೆಗೆ ಮುಂಚಿನ ಕೆಲಸ, ಮದ್ವೆ ದಿನ ಊಟ ಹಾಕಿದ್ದು ಹೀಗೆ (ದೊನ್ನೆ ಬಾಳೆ, ನಾಂದಿ, ವಧೂಪ್ರವೇಶ....) ನಮ್ಮದು. ನಾವು ಗೇಯ್ದದ್ದೇ ಬಂತು. ಊರಿನ ಜನರ ಪರಿಚಯವನ್ನು ಮಾಡಿಕೊಳ್ಳುವ ಕನಿಷ್ಟ ತ್ರಾಸನ್ನು ಕೂಡ ಆ ಮಧುಮಗ ತೆಗೆದುಕೊಳ್ಳಲಿಲ್ಲ. ಎಜುಕೇಟೆಡ್!? ಆತನ ಮಟ್ಟಿಗೆ ಹಳ್ಳಿಯ ಹಿನ್ನೆಲೆ ಬಿಟ್ಟಿಯಾಗಿ ಅಥವಾ ಕಡಿಮೆ ಖರ್ಚಿನಲ್ಲಿ ಮದುವೆ ಕಾರ್ಯ ಮುಗಿಸಿಕೊಳ್ಳುವ ಅವಕಾಶವಾಗಿತ್ತಷ್ಟೇ. ಇಂತಹ ಮನೋಭಾವವೇ ಈ ಎಲ್ಲ ವಲಸಿಗರನ್ನು ತುಂಬುತ್ತಿದೆ. ಇಂದು ನಮ್ಮ ವಾಚನಾಲಯಕ್ಕೆ ಪರಸ್ಥಳದವರು, ಸ್ನೇಹಿತರು ಪ್ರಯೋಜಕರಾಗಿದ್ದಾರೆ. ಅದೇ ಊರಿನಿಂದ ಹೊರಗೆ ಹೋದ ಒಬ್ಬಾನೊಬ್ಬ ಸಾಫ್ಟ್‌ವೇರಿ ನಯಾ ಪೈಸೆ ಇತ್ತಿಲ್ಲ. ಅದೃಷ್ಟಕ್ಕೆ ಹಳ್ಳಿಯಿಂದ ನಗರಗಳಿಗೆ ಚಲಿಸಿದ ಹುಡುಗಿಯರಲ್ಲಿ ಈ ಸ್ವಭಾವ ಕಡಿಮೆಯೇನೋ.
ಊಹ್. ಹೇಳುವುದು ಇನ್ನಷ್ಟಿದೆ. ಅದನ್ನು ಮುಂದಿನ ಭಾಗವಾಗಿ ಬರೆಯುವೆ. ಅದಕ್ಕೂ ಮುನ್ನ ಒಂದಷ್ಟು ಚರ್ಚೆಯಾದರೆ ಚೆನ್ನ. ಪಾಲ್ಗೊಳ್ಳಿ. ನನ್ನ ಅಭಿಪ್ರಾಯವೇ ಅಂತಿಮವೇನಲ್ಲ. ಭಿನ್ನ ವಿಚಾರಧಾರೆ ಸ್ವಾಗತಾರ್ಹ.
ಆರ್ಕುಟ್‌ನ ‘ಹಳ್ಳಿ ಹುಡುಗ್ರು’ ಕಮ್ಯುನಿಟಿಯಲ್ಲಿ ಸೇರಲು ಆಶಿಸುವವರು ಇಲ್ಲಿ ಕ್ಲಿಕ್ಕಿಸಿ, http://www.orkut.co.in/Main#Community.aspx?cmm=50031568
-ಮಾವೆಂಸ 

9 comments:

mruthyu ಹೇಳಿದರು...

ಏನು ಕಾರಣಗಳಿರಬಹುದು? ಹಳ್ಳಿಗರಿಗೆ ಹಳ್ಳಿ ಬೇಡ. ಬೇರೇನೂ ಮಾಡಲು ತೋಚದೆ ಅವರಲ್ಲಿದ್ದಾರೆ. ಪೇಟೆಯವರಿಗೆ ಹಳ್ಳಿ ೨-೩ ದಿನಗಳ ಮಟ್ಟಿಗೆ ಬಂದು, ಉಳಿಯಬಹುದಾದ ಶಾಂತ ಪರಿಸರ. ಬಹುಶಃ ನಮ್ಮ ಸಂಸ್ಕೃತಿ ಪೂರ್ಣ ಪ್ರಮಾಣದಲ್ಲಿ ನಾಗರೀಕತೆಯಾಗಲು ಹವಣಿಸುತ್ತಿರುವುದೇ ಕಾರಣವೇ? ಅಥವಾ ನಮಗೆ ನಾವು ಸೃಷ್ಟಿಸಿದ ವಸ್ತುಗಳನ್ನು ಬಿಟ್ಟು, ಸಹಜವಾದ,ಪ್ರಕೃತಿ ಸೃಷ್ಟಿಸಿದ ವಸ್ತುಗಳ ಜೊತೆ ಸಂವಾದಿಸಲು ಸಾಧ್ಯವಾಗುವ ಸೂಕ್ಷ್ಮತೆ ಕಳೆದುಹೋಗಿದೆಯಾ?

Unknown ಹೇಳಿದರು...

ದೇವರ ಪ್ರಸಾದ ದಂತಹ ಬರಹ ಇದು.

ಬಾಲ್ಯದಿಂದ ಹಳ್ಳಿಯಲ್ಲಿ ಉಳಿದವರಿಗೆ ಹೊರಗಿನ ಪ್ರಪಂಚ ಗೊತ್ತಿಲ್ಲ ಅಂತ ಅರ್ಥೈಸಿದರೆ ಅದು ತಪ್ಪಾಗುತ್ತದೆ.ಹಾಗಂತ ಜ್ಞಾನಿಗಳು ಅಂತ ತಿಳಿದರೆ ಅದು ಮೌಢ್ಯವಾಗುತ್ತದೆ. ಬಾವಿ ಒಳಗಿನ ಕಪ್ಪೆಗಳು ಅಂತಂದರೆ ಅವರಿಗೆ ಸಿಟ್ಟು ಬರುತ್ತದೆ.
ಹಾಗಾಗಿ ಕಾಲಾಯ ತಸ್ಮೈ ನಮಃ. ಅನ್ನೋ ವೇದಾಂತದಂತಹ ಡೈಲಾಗ್ ಸೂಕ್ತ.

ನನಗೆ ವೆನಿಲಾ ದುಡ್ಡು ಹರಿದು ಬಂತು ಬಹಳ ಪ್ರಯತ್ನ ಸಾಗಿತು. ಅದು ನಿಂತಿತು ಇದೂ(ಕಟ್ಟೆ) ನಿಂತಿತು. ಸುಬಣ್ಣ ನಿಗೆ ವೈಯಕ್ತಿಕ ೧೦ ಎಕರೆ ಅಡಿಕೆ ತೋಟ ಇರದಿದ್ದರೆ ಅವರೂ ಟುಸ್ ಆಗುತ್ತಿದ್ದರೇನೋ ಅಂತ ನನ್ನ ಅನಿಸಿಕೆ.ಅವರು ವೈಯಕ್ತಿಕ ಆದಾಯದ ಬಹುಪಾಲನ್ನು ಆರಂಭದಲ್ಲಿ ಸುರಿದರು.

ಪ್ರಸಾದನಿಗೆ ಹತ್ತೆಕರೆ ಇದ್ದಿದ್ದರೂ ಹಾಗೆಯೇ ...

ಸರ್ವೇ ಗುಣಾ: ಕಾಂಚನಂ ಆಶ್ರಯಂತಿ

jithendra hindumane ಹೇಳಿದರು...

ಧನ್ಯವಾದ ಪ್ರಸಾದ್.
ನಮ್ಮ ಹವ್ಯಕ ಹುಡುಗರು ಹಳ್ಳಿಗಳಲ್ಲಿ ಕುಳಿತು ಕೊಳೆತು ಹೋದ ಹಾಗೆ ನಮಗೆ ಅನಿಸುತ್ತಿದೆ. ಸ್ವಲ್ಪ ಅತಿಶಯೋಕ್ತಿ ಅನಿಸಿದರೆ ಕ್ಷಮಿಸಿ...!
ಇಪ್ಪತ್ತು ವರುಷಗಳ ಹಿಂದೆ ಒಂದೋ ಬೆಂಗಳೂರು ಇಲ್ಲ ಮನೆ ಎರಡೇ ಆಯ್ಕೆಗಳಿದ್ದವು.. ಆದರೆ ಈಗ ನನಗನಿಸುವ ಹಾಗೆ ಪ್ರಯತ್ನ ಪಟ್ಟರೆ ಅವಕಾಶಗಳು ಇವೆ.

ಮಾವೆಂಸ ಹೇಳಿದರು...

@ಮೃತ್ಯು,
ನಾಗರೀಕತೆ ಎಂದರೆ ಪೇಟೆಗಳಾಗುವುದು ಎಂದೇ? ಅದಕ್ಕಿಂತ ಹಳ್ಳಿಯಲ್ಲಿರುವ ನಾವು ಅದನ್ನು ಪ್ರೀತಿಸಲು, ಗೌರವಿಸಲು ಸಾಧ್ಯವೇ ಇಲ್ಲವೇ... ಇಲ್ಲಿಯೇ ಪೇಟೆಯವರು ಸಾಧಿಸಲಾಗದ್ದನ್ನು ಮಾಡಲೂ ಸಾಧ್ಯವಿದೆ ಗೆಳೆಯರೇ. ಬೇಕಿರುವುದು ಪ್ರೋತ್ಸಾಹ ಮಾತ್ರ. ಆಗ ನೋಡಿ.....

@ಶ್ರೀಶುಂ,
ನಿನ್ನ ಮಾತು ನೂರಕ್ಕೆ ನೂರು ನಿಜ. ಇನ್ನಂತೂ ಸುಬ್ಬಣ್ಣನಂತೆ ಹತ್ತೆಕರೆ ತೋಟದ ಒಡೆಯರಾಗುವುದು ಕನಸಿನ ಮಾತು. ಆದರೆ ಒಬ್ಬ ರಾಘಣ್ಣನಿಗೆ ಊರಿನ ಉಳಿದ ಒಂಭತ್ತು ಎಕರೆಯ ಮಂದಿ ಮೌನ ಬೆಂಬಲ ಕೊಟ್ಟರೂ ಅದ್ಭುತವಾದ ಇನ್ನೊಂದು ‘ನಿನಾಸಂ’ ತರದ ಕನಸಿಗೆ ‘ಕಟ್ಟೆ’ ಕಟ್ಟಬಹುದು. ಗೊತ್ತು, ಈ ಆಸೆ ದುಬಾರಿ ಎಂದು. ಬಿಡು, ರಾಘಣ್ಣ. ಕೊನೆಪಕ್ಷ ಸಾಯುವ ತನಕ ಈ ಹಳ್ಳಿಗಳಲ್ಲಿ ಕನಸು ಕಾಣಲಾದರೂ ಬಿಡು!

@ಜಿತು,
ನಿನ್ನ ಮಾತು ಕೆಪ್ಪ ನನ್ ಮಕ್ಕಳಿಗೆ ಕೇಳಿಸದಿರುವುದೇ ದುರಂತ!

ಅನಾಮಧೇಯ ಹೇಳಿದರು...

ನನ್ನ ಅನಿಸಿಕೆಯ ಪ್ರಕಾರ...ಹವ್ಯಕ ಹುಡುಗರು ಪೇಟೆ ಸೇರಲು ಕಾರಣಗಳು...
1) ಕೃಷಿಯ ಅನಿಶ್ಚಿತತೆ ಇಂದಾಗಿ ಸಣ್ಣ ಹಿಡುವಳಿದಾರರು ತಮ್ಮ ಮಕ್ಕಳು ಚೆನ್ನಾಗಿ ಓದಿ,ತಮ್ಮ ತರಹ ಕೃಷಿಕನಾಗದೇ ಒಳ್ಳೆಯ ಸಂಬಳ ಸಿಗುವ ಕೆಲಸ ಸೇರಲಿ ಎಂದು ಆಸೆಪಟ್ಟು ಪೇಟೆಗೆ ಕಳುಹಿಸುತ್ತ ಇರೋದು.
2) Ambition...ಚೆನ್ನಾಗಿ ಓದಿ ಡಾಕ್ಟರ್, ಇಂಜಿನಿಯರ್ ಆಗಿ ಹೆಸರು ಮಾಡಲು or some people might wanted to invent new things or technologies in certain fields.
3) ಸಾಲ ಮಾಡಿ ಸಾವಿರಾರು ಹಣ ಕೊಟ್ಟು ಓದಿದ ಮೇಲೆ, ತಾವು ಕಲಿತ stream ಲೇ ಕೆಲಸ ಬಯಸುವುದು.

ಈಗಿನ ಹಾಗೆ ಹಿಂದೆಯೂ ಸಹ ಹವ್ಯಕರು ಪೇಟೆಗೆ ಹೋದ ನಿದರ್ಶನಗಳು ಇವೆ ಆದರೆ ಆಗ ಒಂದು ಮನೆಯಲ್ಲಿ 4-5 ಮಕ್ಕಳು ಇರುತ್ತಿದ್ದರು, ಒಂದಿಬ್ಬರು ಪೇಟೆಗೆ ಹೋದರೂ ಸಹ ಉಳಿದವರು ಹಳ್ಳಿಯಲ್ಲೇ ಉಳಿಯುತ್ತಿದ್ದರಿಂದ ಈಗಿನ ಪರಿಸ್ಥಿತಿ ಆಗ ಉಧ್ಭವಿಸಿರಲಿಲ್ಲ...

ಇನ್ನು ಹಳ್ಳಿ ಬಿಟ್ಟು ಪೇಟೆ ಸೇರಿದ ಎಲ್ಲಾ ಹುಡುಗರಿಗೂ ಹಳ್ಳಿಯ ಬಗ್ಗೆ ನಿರ್ಲಕ್ಸ್ಯವೇನಿಲ್ಲ...even they wanted to come and celebrate...there may be some reasons, so they may not able to attend functions such as Rama Navami.

ಇದು ಬರೀ ಹವ್ಯಕ ಸಮಾಜದಲ್ಲಿ ಮಾತ್ರವಲ್ಲ ಎಲ್ಲಾ ಜನಾಂಗದಲ್ಲೂ ಇರುವ ಪರಿಸ್ಥಿತಿ...ಪೇಟೆಗೆ ಸೇರಿದ ಕೆಲವು ಹಳ್ಳಿ ಹುಡುಗರಿಗೆ ಇದರ ಬಗ್ಗೆ ಯೋಚನೆ ಮಾಡಿಯೂ ಸಹ ಏನೂ ಮಾಡಲಾರದ ಸ್ಥಿತಿ...ಈ ಪರಿಸ್ಥಿತಿಯ ಬಗ್ಗೆ ಯಾರನ್ನೂ ದೂಷಿಸಲು ಸಾಧ್ಯವಿಲ್ಲ....ಕಾಲಾಯ ತಸ್ಮೈ ನಮಃ

ಅನಾಮಧೇಯ ಹೇಳಿದರು...

For the above topic,i don't know how much relevant was my previous comment...
but I just wanted to say, it is misconception that every person who left village is not concerned about the situation or they won't encourage or praise the youngsters who are living in village...

Regards,
Aditya Mavinasara

ಮಾವೆಂಸ ಹೇಳಿದರು...

@ಆದಿತ್ಯ ಮಾವಿನಸರ
ಹಂಗಲ್ಲ ಆದಿತ್ಯಾ, ಹಳ್ಳಿ ಬಿಟ್ಟು ಹೋದವರ ಬಗ್ಗೆ ಆಕ್ಷೇಪಿಸುತ್ತಿಲ್ಲ. ಓದಿದ್ದಕ್ಕೆ ತಕ್ಕ ಉದ್ಯೋಗ ಹಿಡಿಯುವುದು ತಪ್ಪಲ್ಲ. ಆದರೆ ಕೊನೆಗೆ ತಮ್ಮ ಮದುವೆ ಮುಂಜಿಯನ್ನು ಮಾಡಲು ಮಾತ್ರ ಹಳ್ಳಿಯ ತಮ್ಮನೆ ನೆನಪಾಗಬೇಕೆ? ಊರಿಗೆ ಬಂದಾಗ ಬಿಡು, ತನ್ನ ಮದುವೆ ಸಂದರ್ಭದಲ್ಲಿ ಕೂಡ ಊರವರನ್ನು ಪರಿಚಯಿಸಿಕೊಳ್ಳದ ಮಧುಮಗನನ್ನು ನೋಡಿ ನಾನಂತೂ ಬೇಸತ್ತಿದ್ದೇನೆ.
ಅದಲ್ಲದೆ, ಹಳ್ಳಿ ಪ್ರೀತಿ ಯಾವುದಾದರೊಂದು ರೀತಿ ವ್ಯಕ್ತವಾಗಬೇಕು. ಇಲ್ಲದಿದ್ದರೆ ಸಾಕ್ಷೀಕರಿಸುವುದು ಕಷ್ಟ. ಇವತ್ತು ನಮ್ಮೂರಿನಿಂದ ಹತ್ತಾರು ಹುಡುಗರು ಹೊರ ಊರುಗಳಲ್ಲಿ ಉದ್ಯೋಗ ಮಾಡುತ್ತಿರುವರಾದರೂ ನಮ್ಮ ಲೈಬ್ರರಿಗೆ ಅಂತಹವರ ಸಹಾಯ ಹಸ್ತ ಸಿಕ್ಕಿದ್ದು ಒಂದೆರಡು ಜನರಿಂದ ಮಾತ್ರ. ಅದೇ ಹೆಣ್ಣು ಮಕ್ಕಳು ಕರೆದು ಪ್ರಾಯೋಜನೆ ಕೊಟ್ಟದ್ದು ಇಲ್ಲಿ ನೆನಪಾಗುತ್ತದೆ. ವರ್ಷದಲ್ಲೊಮ್ಮೆ ಊರಿನ ಹಬ್ಬ ಇದೆಯೆಂದಾದರೆ ಮೊದಲೇ ಯೋಚಿಸಿ ಆವೇಳೆಗೆ ರಜೆ ಹೊಂದಿಸಿ ಊರಿಗೆ ಬರುವುದು ಸಾಧ್ಯವಿದೆ. ‘ರಾಮ’ನ ಮನಸ್ಸು ಇರಬೇಕಷ್ಟೇ.
ಇಷ್ಟಕ್ಕೂ ನನ್ನ ಅಳಲು ಊರಲ್ಲಿರುವ ಉಂಡಾಡಿ ಹಳ್ಳಿಗರಿಗೆ ಹೆಚ್ಚು ಅನ್ವಯ. ಅವರು ಕಾಲೆಳೆಯುವುದರ ಹೊರತು ಇನ್ನೇನನ್ನೂ ಮಾಡುತ್ತಿಲ್ಲ. ಇವರಿಗೆ ಬುದ್ಧಿ ಹೇಳುವವರಾರು?

ಅನಾಮಧೇಯ ಹೇಳಿದರು...

ಪ್ರಸಾದಣ್ಣ, ಕ್ಷಮೆ ಇರಲಿ ತಪ್ಪಾಗಿ ಅರ್ಥೈಸಿಕೊಂಡಿದ್ದಕ್ಕೆ...
ಓದೋದಿಕ್ಕೆ ಅಥವಾ ಕೆಲಸದಲ್ಲಿರುವವರೇ ಪೇಟೆಯಲ್ಲಿರುವುದರಿಂದ, ಒಂದೋ ಎರಡೋ ದಿನಕ್ಕೋಸ್ಕರ ಹಳ್ಳಿಯಲ್ಲಿರುವ ಮನೆಗೆ ಬರ್ತಾರೆ ಆದ್ದರಿಂದ ಪ್ರತಿ ಸಲ ಬಂದಾಗ ಎಲ್ಲರನ್ನು ಮಾತಾಡಿಸೋದು ಕಷ್ಟ...ನಾನೂ ಒಪ್ಕೋತೀನಿ ಕೆಲವು ಪೇಟೆ ಹುಡುಗರು ಮದುವೆ ಮುಂಜಿಗೆ ಬಂದಾಗ ಕೂಡ ಊರಿನವರನ್ನು ಪರಿಚಯ ಮಾಡ್ಕೊಳ್ಳೋಕೆ ಹೋಗೋಲ್ಲ...ಕೆಲವರಿಗೆ ಒಣ ಜಂಭ ಇರುತ್ತೆ ನಾವೇ ಹೋಗಿ ಯಾಕೆ ಮಾತಾಡಿಸ್ಬೇಕೂಂತ, ಮತ್ತೆ ಕೆಲವರಿಗೆ ಯಾರೂ ಪರಿಚಯ ಇಲ್ಲ ನಾನೇ ಹೋಗಿ ಹೇಗೆ ಮಾತಡಿಸಲಿ ಎಂದೂ ಇರಬಹುದು...ಅದೇ ರೀತಿ ಹಳ್ಳಿಯಲ್ಲಿ ಇರುವ ಕೆಲವರಿರ್ತಾರೆ, ಅಪರೂಪಕ್ಕೆ ನಾವು ಹಳ್ಳಿಗೆ ಬಂದಾಗ ಒಂದ್ smile ಕೊಟ್ರೆ ಮುಖ ತಿರುಸ್ಕೊಂಡು ಹೋಗ್ತಾರೆ...ಎರಡೂ ಕಡೆಯಲ್ಲೂ ಈ ರೀತಿಯವರಿದ್ದಾರೆ ಅಂತಹವರಿಗೆ ಏನು ಹೇಳಬೇಕೋ ನಾ ಕಾಣೆ...!!!
ನಮ್ಮೂರಲ್ಲಿ ಲೈಬ್ರರಿ ಶುರು ಆಗಿದೆ ಅಂತ ಗೊತ್ತಾದಾಗ ನಾನೂ ಖುಷಿಪಟ್ಟಿದ್ದೆ ಹಾಗೇ ಕೆಲವೊಮ್ಮೆ ಊರಿಗೆ ಬಂದಾಗ utilize ಮಾಡ್ಕೊಂಡಿದ್ದೀನಿ ಕೂಡ...ಪೇಟೆಯಲ್ಲಿರುವ ಉದ್ಯೋಗಿಗಳಲ್ಲಿ ಕೆಲವರಿಗೆ ಹಳ್ಳಿಯಲ್ಲಿ ನಡೆಯುವ ಕೆಲವು ಚಟುವಟಿಕೆಗಳು ಗೊತ್ತಾಗದೆ ಇರಬಹುದು...ಕೆಲವೊಮ್ಮೆ ಗೊತ್ತಿದ್ದೂ ಅವರಾಗಿಯೇ ಸಹಾಯ ಮಾಡಲು ಹಿಂದೇಟು ಹಾಕ್ತಾ ಇರಬಹುದು ಬೇಕಾಗಿದ್ದರೆ ಕೇಳಲಿ ಎಂದು...ಹೌದು ಈ ಒಣ ರಾಜಕೀಯದಿಂದ ಕೆಲವು "ಕಟ್ಟೆ" ಅಥವಾ "ಮಾವಿನಮನೆ" ಅಂತ ಪ್ರಯತ್ನಗಳು ಸೋಲುತ್ತವೆ...
success has many fathers, failure is an orphan...ಎಲ್ಲರಿಗೂ ಬೇಕಾಗಿರುವುದು "ಹೆಸರು"...ಒಂದೊಮ್ಮೆ "ಕಟ್ಟೆ" ಅಥವಾ "ಮಾವಿನಮನೆ" ಪ್ರಸಿದ್ಧಿಯಾಗಿದ್ದೆ ಆದಲ್ಲಿ, ನಾನು ಇಷ್ಟು ಸಹಾಯ ಮಾಡಿದ್ದೆ ಅಂತ ಹೊಗಳಿಕೊಳ್ಳಲು ತುಂಬಾ ಜನ ಬರ್ತಾರೆ...
ತೆರೆಮರೆಯಲ್ಲಿ ಕೆಲಸ ಮಾಡುವವರಿಗೆ ಏನೂ ಹೇಳಲು ಆಗೋದಿಲ್ಲ...
ಇನ್ನು ಕ್ರಿಯಾಶೀಲ ಮನೋಭಾವ ಇಲ್ಲದೆ ಇರುವ ಹಳ್ಳಿ ಹುಡುಗರು, ತಮಗೆ ಆ ತರಹದ ಕೆಲಸದಿಂದ ಏನ್ ಲಾಭ ಅನ್ನೋ ಮನಸ್ಸಿರಬಹುದು...
ಅವರನ್ನ convince ಮಾಡಿ ಕರ್ಕೊಂಡು ಬರುವುದು ತುಂಬಾ ಕಷ್ಟದ ಕೆಲಸ...ಆದರೆ ಪ್ರಯತ್ನ ಮಾತ್ರ ಬಿಡಬಾರದು...ಹಾಗೇನೇ ಪೇಟೆಯಲ್ಲಿರುವವರಿಗೆ ಈ ತರಹದ ಚಟುವಟಿಕೆ ಮಾಡುತ್ತ ಇದ್ದೀವಿ ಅಂತ ಸೂಚನೆ ಕೊಟ್ಟರೆ, ನಮ್ಮ ಹಳ್ಳಿ ನಾವೂ ಏನಾದರು ಮಾಡಬೇಕೆಂದು ಮನಸ್ಸುಳ್ಳವರು ಮುಂದೆ ಬಂದರೂ ಬರಬಹುದು...ಎಲ್ಲದಕ್ಕೂ "ನಮ್ಮ ಹಳ್ಳಿ" ಎಂಬ ಮಮಕಾರ ಇದ್ದರೆ ಮಾತ್ರ ಸಾಧ್ಯ...

ಮಾವೆಂಸ ಹೇಳಿದರು...

@ಆದಿತ್ಯ ಮಾವಿನಸರ
ನಿಜ, ನಿನ್ನ ಅಭಿಪ್ರಾಯಕ್ಕೆ ನನ್ನ ಪೂರ್ಣ ಸಹಮತವಿದೆ.
ಮಾವಿನಮನೆ ವಾಚನಾಲಯಕ್ಕೂ ಸಾಯುವ ಆಸೆಯಿಲ್ಲ. ನಿಮ್ಮಂತವರೂ ಅದಕ್ಕೆ ಆಕ್ಸಿಜನ್ ಆಗಿ, ಇತರರನ್ನು ಕೂಡ ಮಣ್ಣು, ನೀರು ಒದಗಿಸುವಂತೆ ಮಾಡಿ. ನನಗಂತೂ ಸಾಮಾಜಿಕ ಕೆಲಸಕ್ಕೆ ಕೈಯೊಡ್ಡಲು ಹಿಂಜರಿಕೆಯಿಲ್ಲ.
ಒಟ್ಟಾರೆ ನೀನು ಇಡೀ ಚರ್ಚೆಯಲ್ಲಿ ಗಂಭೀರವಾಗಿ, ಮೌಲ್ಯಯುತವಾಗಿ ಭಾಗವಹಿಸಿದ್ದಕ್ಕೆ ನನಗೆ ಹೆಮ್ಮೆಯಿದೆ. ತಮ್ಮನಲ್ಲಿ ಸಾಕಷ್ಟು ತಾಕತ್ತಿದೆ ಎಂದರೆ ಯಾವ ಅಣ್ಣನಿಗೆ ಖುಷಿಯಾಗದು?

 
200812023996