ಶನಿವಾರ, ಮಾರ್ಚ್ 28, 2009

ಯಶಸ್ಸಿನ ಅಭಿಯಾನ ಮತ್ತೆ ಆರಂಭ?


ಬಹಳ ವರ್ಷಗಳಿಂದ ಕ್ರಿಕೆಟ್‌ನ್ನು ಅನುಸರಿಸುತ್ತಾ ಬಂದಿರುವ ಅಭಿಮಾನಿಗಳಿಗೆ ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡದ ಕುರಿತು ವಿವರಿಸಲಾಗದ ಪ್ರೀತಿ. ಮೊದಲ ಎರಡು ವಿಶ್ವಕಪ್ ಗೆದ್ದ ಸಾಧನೆ, ಹಲವು ದ್ವೀಪಗಳ ವಿಭಿನ್ನ ಸಂಸ್ಕೃತಿಯ ಆಟಗಾರರ ಸಂಗಮವಾದ ತಂಡವಾಗಿರುವುದೋ ಅಥವಾ ಕ್ಲೈವ್ ಲಾಯ್ಡ್, ರಿಚರ್ಡ್ಸ್, ಅಂಬ್ರೋಸ್, ವಾಲ್ಶ್, ಲಾರಾರವರೆಗೆ ಅದ್ಭುತ ಆಟಗಾರರು ಈ ತಂಡದಲ್ಲಿದ್ದುದು ಈ ಅಭಿಮಾನಕ್ಕೆ ಕಾರಣ ಎನ್ನುವುದೇ ಸಿನಿಕತನ. ನಿಜಕ್ಕೂ ವಿಂಡೀಸ್ ಇತಿಹಾಸ ಬಲ್ಲವರಿಗೆ ಇಂತಹ ನೂರು ದೃಷ್ಟಾಂತ ನೆನಪಾಗಬಹುದು. ಇದೀಗ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಂಡಿರುವ ವಿಂಡೀಸ್ ಅಭಿಮಾನಿಗಳ 
ಗಮನ ಸೆಳೆದಿದೆ.
ವಿವಿಯನ್ ರಿಚರ್ಡ್ಸ್‌ರ ನಿವೃತ್ತಿಯ ನಂತರದ ದಿನಗಳಲ್ಲಿ ವಿಂಡೀಸ್ ಕಳಪೆಯಿಂದ ಕಳಪೆಯತ್ತಲೇ ಚಲಿಸಿತ್ತು. ಕೋಟ್ನಿ ವಾಲ್ಶ್‌ರ ನಾಯಕತ್ವದಲ್ಲಿಯೇ ಅದರ ಲಕ್ಷಣ ಕಾಣಿಸಿತ್ತು. ಒಂದು ಚಾಂಪಿಯನ್ಸ್  ಟ್ರೋಫಿಯ ಜಯಭೇರಿ ಮತ್ತು ಬ್ರಿಯಾನ್ ಲಾರಾರ ವೈಯುಕ್ತಿಕ ವಿಶ್ವದಾಖಲೆಗಳ ಹೊರತಾಗಿ ವಿಂಡೀಸ್ ಅಶಿಸ್ತಿನ ಆಟಗಾರರ ಬೇಜವಾಬ್ದಾರಿಯ ಪ್ರದರ್ಶನವಾಗಿತ್ತು. ಒಮ್ಮೆ ಇಂಗ್ಲೆಂಡ್ ಎದುರು ಟೆಸ್ಟ್‌ನ್ನು ಹೀನಾಯವಾಗಿ ಸೋತ ಅರ್ಧ ಘಂಟೆಯಲ್ಲಿ ಆಟಗಾರರು ಪಬ್‌ನಲ್ಲಿ ಮದಿರೆಯ ಮಬ್ಬಲ್ಲಿ ನರ್ತಿಸಿದ್ದುಂಟು!
ಎಲ್ಲರಿಗೂ ಆಸೆ, ವಿಂಡೀಸ್ - ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಭಾರತಗಳ ಮಟ್ಟದಲ್ಲಿ ಸವಾಲಾಗಲಿ ಎಂದು. ಭಾರತೀಯರಿಗೆ ಒಂದು ತೊಲದ ಅಭಿಮಾನ ಹೆಚ್ಚು. ಎಷ್ಟೆಂದರೂ ಭಾರತದ ಪತ್ತೆಗೆ ಹೊರಟವರಿಗೆ ಸಿಕ್ಕಿದ್ದು ವೆಸ್ಟ್ ಇಂಡೀಸ್ ಆಗಿ, ಅದರ ಹೆಸರಲ್ಲಿ ಭಾರತದ ನೆನಪು ಸೇರಿದೆಯಲ್ಲವೇ? ಅಲ್ಲದೆ ವಿಂಡೀಸ್ ಆಟಗಾರರು ಜನ್ಮದತ್ತ ಪ್ರತಿಭೆಗಳು. ಆಟಕ್ಕೆ ಕುದುರಿಕೊಂಡರೆ ನೋಡಲು ಚೆಂದ ಚೆಂದ. ಅಂತವರು ಐದು ಟೆಸ್ಟ್‌ಗಳ ಸರಣಿಯಲ್ಲಿ ಗೆದ್ದಿರುವುದು ತಾಕತ್ತು. ಅಂದರೆ ವಿಂಡೀಸ್ ಮತ್ತೆ ಯಶಸ್ಸಿಗೆ!!
ಸಾಮಾನ್ಯವಾಗಿ, ಎರಡು - ಮೂರು ಟೆಸ್ಟ್‌ಗಳ ಸರಣಿಗಳಲ್ಲಿ ಇದ್ದಕ್ಕಿದ್ದಂತೆ ಪ್ರದರ್ಶನ ಮಟ್ಟ ಏರಿಸಿಕೊಂಡು ಸರಣಿ ಗೆದ್ದುಬಿಡಬಹುದು. ವಿಂಡೀಸ್ ಇಂಗ್ಲೆಂಡ್ ವಿರುದ್ಧ ಆಡಿದ್ದು ಬರೋಬ್ಬರಿ ಐದು ಟೆಸ್ಟ್‌ಗಳ ಸರಣಿ. ಅದರಲ್ಲೂ ಜಮೈಕಾದ ಮೊದಲ ಟೆಸ್ಟ್‌ನ ಎರಡನೇ ಸರದಿಯಲ್ಲಿ ವಿಂಡೀಸ್ ಬೌಲರ್‌ಗಳು ಇಂಗ್ಲೆಂಡಿಗರನ್ನು ಕೇವಲ ೫೧ ರನ್‌ಗೆ ಆಲ್‌ಔಟ್ ಮಾಡಿದ್ದು ಮೇಲುಗೈಯ ಸ್ಪಷ್ಟ ಸಾಕ್ಷ್ಯ.
ಹಾಗೆಂದುಕೊಳ್ಳುವವರು ತುಸು ಸೂಕ್ಷ್ಮವಾಗಿ ಇಡೀ ಸರಣಿಯನ್ನು ನಿರುಕಿಸಬೇಕಾಗುತ್ತದೆ. ಸರಣಿ ಐದು ಪಂದ್ಯಗಳದ್ದಾದರೂ ಆಟ ಸಾಧ್ಯವಾದ ಉಳಿದ ಮೂರು ಟೆಸ್ಟ್‌ಗಳದು ನೀರಸ ಡ್ರಾ. ಪಿಚ್ ಬೌಲರ್‌ಗಳ ಪಾಲಿಗೆ ರೌರವ ನರಕವಾಗಿತ್ತು. ಮೂರನೇ ಟೆಸ್ಟ್‌ನಿಂದ ಸರಣಿಯಲ್ಲಿ ದಾಖಲಾದ ಇನ್ನಿಂಗ್ಸ್ ಸ್ಕೋರ್‌ಗಳಲ್ಲಿ ಐದು ಬಾರಿ ೫೦೦ ಪ್ಲಸ್, ಕನಿಷ್ಟ ಮೊತ್ತ ೨೨೧ - ಡಿಕ್ಲೇರ್! ತೃತೀಯ ಟೆಸ್ಟ್‌ನಲ್ಲಿ ಸೋಲಿನಂಚಿನಿಂದ ವಿಂಡೀಸ್ ಪಾರಾಗಿದ್ದು ಹೌದಾದರೂ ಶುದ್ಧ ಬ್ಯಾಟಿಂಗ್ ಪಿಚ್‌ನಲ್ಲಿ ವಿಂಡೀಸ್ ಬಾಲಂಗೋಚಿಗಳೂ ಮಿಂಚಿದ್ದು ಅಸಹಜವೇನೂ ಆಗಿರಲಿಲ್ಲ.
ಸರಣಿಯಲ್ಲಿ ವಿಂಡೀಸ್ ರಾಮ್‌ನರೇಶ್ ಸರ್ವಾಣ್ ಸುತ್ತ ಬ್ಯಾಟಿಂಗ್ ಶಕ್ತಿ ಪ್ರದರ್ಶಿಸಿತು ಎನ್ನುವುದನ್ನು ಬಿಟ್ಟರೆ ಇಂಗ್ಲೆಂಡ್ ಕೂಡ ಸರಿಸಮಾನವಾಗಿಯೇ ಬ್ಯಾಟ್ ಬೀಸಿತ್ತು. ಒಂದು ಕಳಪೆ ಇನ್ನಿಂಗ್ಸ್ ಅದರ ಸರಣಿ ಪರಾಜಯಕ್ಕೆ ಕಾರಣೀಭೂತವಾದದ್ದು ಹೀನಾಯ. ವಾಸ್ತವವಾಗಿ, ಕ್ರ್ರಿಕೆಟ್ ಆಡಳಿತಗಳು ಗಂಭೀರವಾಗಿ ಯೋಚಿಸಬೇಕಾದ ಕಾಲವಿದು. ಏಕದಿನ, ಟ್ವೆಂಟಿ ೨೦ ಕ್ರ್ರಿಕೆಟ್ ಆವಿಷ್ಕಾರದ ನಂತರ ತೀರಾ ಬ್ಯಾಟಿಂಗ್ ಪಿಚ್‌ಗಳನ್ನು ರೂಪಿಸುತ್ತಿರುವುದು ಕಾಣುತ್ತಿದೆ. ಇದು ರಸಮಯ ಕ್ರಿಕೆಟ್‌ನ್ನು ಕೊಲ್ಲುತ್ತಿರುವುದು ಸ್ಪಷ್ಟ. ಇದೇ ವಿಂಡೀಸ್ - ಇಂಗ್ಲೆಂಡ್ ಶೃಂಖಲೆಯಲ್ಲಿ ನಾವು ರನ್ ಹೊಳೆ ಕಂಡೆವು. ರೋಚಕತೆಯ ಎಲಿಮೆಂಟ್ ಮಾಯವಾಗಿತ್ತು. ಟೆಸ್ಟ್ ಎಂದರೆ ಭಯಾನಕ, ಮನಮೋಹಕ ಬೌಲಿಂಗ್ ಕಾಣಬೇಕಿತ್ತು. ಅದೆಲ್ಲಿತ್ತು?
ವೆಸ್ಟ್ ಇಂಡೀಸ್ ಸರಣಿ ಗೆದ್ದಿದೆ. ಅಷ್ಟರಮಟ್ಟಿಗೆ ಇದು ಒಳ್ಳೆಯ ಫಲಿತಾಂಶವೇ. ಅಲ್ಲಿನ ಆಟಗಾರರಲ್ಲಿ ಸರಣಿಯುದ್ದಕ್ಕೂ ಶಿಸ್ತು ಕಾಣಿಸಿದೆ. ಗೆಲುವು ಟಾನಿಕ್‌ನಂತೆ ವರ್ತಿಸಬಲ್ಲದು. ಶಿವನಾರಾಯಣ್ ಚಂದ್ರಪೌಲ್‌ರಂತ ಅನುಭವಿಕರ ಮಾರ್ಗದರ್ಶನದಲ್ಲಿ ಕ್ರಿಸ್ ಗೇಲ್ ತಂಡ ವಿವ್ ರಿಚರ್ಡ್ಸರ ಜಮಾನಾವನ್ನು ಮರಳಿ ತರುತ್ತದೆಯೇ, ಗೊತ್ತಿಲ್ಲ. ಅಂತಹ ಸಾಧ್ಯತೆಗಳಂತೂ ಇವೆ. ವಿಂಡೀಸ್ ಟ್ವೆಂಟಿ ೨೦ ಪಂದ್ಯದಲ್ಲೂ ಇಂಗ್ಲೆಂಡ್ ಮೇಲೆ ಜಯ ಸಾಧಿಸಿದ್ದು ಕಾಣುತ್ತಿದೆ.
ಒಂದರ್ಥದಲ್ಲಿ, ವಿಂಡೀಸ್ ಆಡಳಿತ ಸೋತಿದೆ! ಸದರಿ ಪ್ರವಾಸದ ಎರಡನೇ ಟೆಸ್ಟ್ ಆಯೋಜಿತವಾದದ್ದು ಆಂಟಿಗುವಾದಲ್ಲಿ. ಕೇವಲ ೧.೪ ಓವರ್‌ಗಳ ಬೌಲಿಂಗ್ ನಂತರ ಪಂದ್ಯ ರದ್ದಾಯಿತು. ಪಿಚ್ ಸರಿಯಿತ್ತು. ಆದರೆ ಇಡೀ ಕ್ರೀಡಾಂಗಣದ ಔಟ್‌ಫೀಲ್ಡ್ ಗುಣಮಟ್ಟ ತೀರಾ ತೀರಾ ಕಳಪೆಯಾಗಿತ್ತು. ಮರಳುಮಯವಾಗಿತ್ತು. ಜರ್ಮಿ ಟೈಲರ್ ಹಾಗೂ ಜೆರೋಮಿ ಎಡ್ವರ್ಡ್‌ರಿಗೆ ಬೌಲಿಂಗ್ ರನ್‌ಅಪ್‌ನಲ್ಲಿ ಓಡಿಬರುವುದೇ ತ್ರಾಸವಾಗಿತ್ತು. ಹತ್ತು ನಿಮಿಷದೊಳಗೆ ಟೆಸ್ಟ್ ರದ್ದು! ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಬದಲಾಗಿಲ್ಲ. ೧೯೯೮ರಲ್ಲಿ ಇದೇ ವಿಂಡೀಸ್‌ನ ಜಮೈಕಾದಲ್ಲಿ ೧೦.೧ ಓವರ ನಂತರ ಅಪಾಯಕಾರಿ ಪಿಚ್ - ಬ್ಯಾಟ್ಸ್‌ಮನ್‌ರ ಜೀವ ತೆಗೆಯುವಂತದ್ದು - ಕಾರಣದಿಂದ ಟೆಸ್ಟ್ ರದ್ದಾಗಿತ್ತು. ಅದೂ ಇಂಗ್ಲೆಂಡ್ ವಿರುದ್ಧ!
ಬೇಜಾರಾಗುವುದು ಇಷ್ಟೇ ವಿಚಾರಕ್ಕಲ್ಲ. ವಿಂಡೀಸ್ ಕ್ರಿಕೆಟ್ ಬೋರ್ಡ್ ಆಂಟಿಗುವಾದ ಸ್ಟೇಡಿಯಂಗೆ ಸರ್ ವಿವಿಯನ್ ರಿಚರ್ಡ್ಸ್‌ರ ಹೆಸರನ್ನು ನಾಮಕರಣ ಮಾಡಿ ತನ್ನನ್ನು ಗೌರವಿಸಿಕೊಂಡಿದೆ. ಇಲ್ಲಿಯ ಟೆಸ್ಟ್ ಅಂತರ್ರಾಷ್ಟ್ರೀಯ ಮಟ್ಟದ ಮೈದಾನ ಒದಗಿಸದ ಹಿನ್ನೆಲೆಯಲ್ಲಿ ರದ್ದಾಗಿರುವುದು ವಿವ್‌ರ ಮುಖಕ್ಕೆ ಮಸಿಯೇ ಸರಿ. ಸ್ವತಃ ವಿವ್ ‘ಇದು ಎದೆಗೆ ತಾಕಿದ ಬಾಣ’ ಎಂದಿದ್ದಾರೆ. ಇದೀಗ ಐಸಿಸಿ ಈ ಕ್ರೀಡಾಂಗಣದಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟ್‌ಗೆ ನಿಷೇಧ ಹೇರಿದೆ. ಅಕ್ಷರಶಃ ಇದು ಸೋಲು!
ವೆಸ್ಟ್ ಇಂಡೀಸ್‌ರ ಟೆಸ್ಟ್ ಸರಣಿ ಜಯದಲ್ಲಿ ನಾವು ವಿಶೇಷ ಅರ್ಥ ಹುಡುಕಬೇಕಾದುದಿಲ್ಲ. ಆದರೆ ವಿಂಡೀಸ್ ಕ್ರಿಕೆಟ್‌ನ ಪುನರುತ್ಥಾನದ ಶಕೆಯ ಆರಂಭಕ್ಕೆ ಇದೇ ಮುನ್ನುಡಿಯಾದರೆ ಚೆನ್ನ! 
-ಮಾವೆಂಸ
 
 
200812023996