ಸೋಮವಾರ, ಜುಲೈ 27, 2009

ದೇವರೇ, ಟ್ವೆಂಟಿ ೨೦ ಟೆಸ್ಟ್??




ನಿಮಗೇನು ಅನಿಸೀತೋ ಗೊತ್ತಿಲ್ಲ, ನಾನಂತೂ ಗಾಬರಿಗೆ ಬಿದ್ದೆ. ಆ ಪರಿಯಲ್ಲಿ ಖಾಸಗಿ ಟಿವಿ ವಾಹಿನಿಯಲ್ಲಿ ಸುದ್ದಿವಾಚಕಿ ಉಲಿಯುತ್ತಿದ್ದಳು, ‘ಐಸಿಸಿ ಟೆಸ್ಟ್ ಕ್ರಿಕೆಟ್‌ನಲ್ಲಿನ ಜನಪ್ರಿಯತೆಯನ್ನು ಉಳಿಸಿಕೊಳ್ಳಲು ಇನ್ನು ಮುಂದೆ ಅದಕ್ಕೆ ಟ್ವೆಂಟಿ ೨೦ಯ ಎರಡು ಇನ್ನಿಂಗ್ಸ್ ಮಾದರಿಯನ್ನು ಅಳವಡಿಸುತ್ತದೆ!’ ಕ್ರಿಕೆಟ್‌ನ ಭವಿಷ್ಯಕ್ಕೆ ಖುದ್ದು ಐಸಿಸಿಯೇ ಖಳನಾಯಕನಂತೆ ವರ್ತಿಸುತ್ತಿರುವುದು ನಿಜ, ಆದರೆ ಮೇಲಿನ ಕ್ರಮ ನೋಡಿದರಂತೂ ಐಸಿಸಿ ಕೊಲೆಗಾರ ಎನ್ನಿಸಿಬಿಡುತ್ತದೆ!
ಟಿ೨೦ ಟೆಸ್ಟ್ ಕಲ್ಪನೆಯ ಹಂದರ ಹೊರಬಿದ್ದಿರುವುದು ಭಾರತದಿಂದ. ಚಂದು ಬೋರ್ಡೆ, ಸಯ್ಯದ್ ಕಿರ್ಮಾನಿ ಈ ಸಲಹೆಯನ್ನು ತೂರಿದಂತಿದೆ. ಇವರ ಪ್ರಕಾರ, ಬರೀ ೮೦ ಓವರ್‌ಗಳಲ್ಲಿ ಒಂದು ಟೆಸ್ಟ್ ಅಂತ್ಯ ಕಾಣುತ್ತದೆ. ತಲಾ ಇಪ್ಪತ್ತು ಓವರ್‌ಗಳ ಎರಡು ಇನ್ನಿಂಗ್ಸ್‌ಗಳು ಇರುತ್ತವೆ. ಮತ್ತೆ ಗೆಲುವಿಗೆ ೨೦ ವಿಕೆಟ್ ಗಳಿಸುವ ಪ್ರಶ್ನೆಯಿಲ್ಲ. ಹೆಚ್ಚು ರನ್ ಸಂಪಾದಿಸಿದರೆ ಸಾಕು. ಕಿರ್ಮಾನಿಯವರಂತೂ ಇದಕ್ಕೆ ಒಗ್ಗರಣೆ ಹಾಕುತ್ತಾರೆ, ‘ಒಟ್ಟು ೧೩ ಜನರ ತಂಡಕ್ಕೆ ಅವಕಾಶ ನೀಡಬೇಕು. ಎರಡನೇ ಇನ್ನಿಂಗ್ಸ್‌ನಲ್ಲಿ ಈ ಇಬ್ಬರು ಆಟಗಾರರನ್ನು ಬೇಕಿದ್ದರೆ ಬದಲಿಯಾಗಿ ಬಳಸಿಕೊಳ್ಳುವಂತಿರಬೇಕು!"
ಹೊಡಿ ಬಡಿ ಕ್ರಿಕೆಟ್‌ನ ಬೌಂಡರಿ, ಸಿಕ್ಸ್‌ಗಳನ್ನು ಆನಂದಿಸುವವರಿಗೆ ಟೆಸ್ಟ್ ಕ್ರಿಕೆಟ್‌ನ ಅಸಲಿಯತ್ತು ಅರ್ಥವಾಗುವುದು ಕಷ್ಟ. ಏಕದಿನ ಕ್ರಿಕೆಟ್‌ನಲ್ಲಿ ಚೇತನ್ ಶರ್ಮ ಶತಕ ಬಾರಿಸುತ್ತಾರೆ. ಕೆ.ಶ್ರೀಕಾಂತ್ ಐದು ವಿಕೆಟ್‌ಗಳ ಸರದಾರರಾಗಿಬಿಡುತ್ತಾರೆ. ಟಿ೨೦ಯಲ್ಲಿ ಬೀಸುದಾಂಡಿನ ಬಾಲಂಗೋಚಿ ಅರ್ಧ ಶತಕ ಇಟ್ಟುಬಿಡಬಹುದು. ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್, ಬೌಲರ್‌ಗಳಿಬ್ಬರ ನಿಜವಾದ ಸಾಮರ್ಥ್ಯ ಪಣಕ್ಕಿಡಲ್ಪಡುತ್ತದೆ. ಕಿವಿ ಪಕ್ಕ ಹಾದು ಹೋಗುವ ಚೆಂಡುಗಳ ಸರಮಾಲೆ, ವಿಕೆಟ್‌ನ ಆಚೀಚೆ ಕೈಕುಲುಕುವ ದೂರದಲ್ಲಿ ಫೀಲ್ಡರ್‌ಗಳ ಸಂತೆ, ಹಾವಿನಂತೆ ನುಸುಳಿ ಬರುವ ಕೆಂಪು ಚೆಂಡು, ಮಳೆ ಬಾರದೆ ಬಿರುಕು ಬಿಟ್ಟ ಹೊಲದಂತಿರುವ ಪಿಚ್‌ಗಳೆಲ್ಲ ಬ್ಯಾಟ್ಸ್‌ಮನ್‌ನ ತಾಳ್ಮೆ, ತಾಂತ್ರಿಕತೆಯನ್ನು ಪರಿಶೀಲಿಸುತ್ತದೆ. ಬೌಲರ್‌ಗಳಿಗೂ ಅಗ್ನಿಪರೀಕ್ಷೆಯೇ, ಬ್ಯಾಟ್ಸ್‌ಮನ್ ಸುಮ್ಮಸುಮ್ಮನೆ ಹೊರಹೋಗುವ ಚೆಂಡು ಮುಟ್ಟುವ ಗೋಜಿಗೆ ಹೋಗುವುದಿಲ್ಲ. ಉತ್ತಮ ಚೆಂಡು ಹಾಕದಿದ್ದರೆ ವಿಕೆಟ್ ಕಬಳಿಕೆ ಸುಲಭವಲ್ಲ! ಮುಖ್ಯವಾಗಿ, ೨೦-೩೦ ಓವರ್‌ಗಳನ್ನು ಒಂದೇ ಇನ್ನಿಂಗ್ಸ್‌ನಲ್ಲಿ ಎಸೆಯುವ ದೈಹಿಕ ತಾಕತ್ತನ್ನು ಕಾಪಾಡಿಕೊಳ್ಳಬೇಕಾಗುವುದು. ಇನ್ನೊಂದು ಇನ್ನಿಂಗ್ಸ್ ಬೇರೆ ಆಡಲಿಕ್ಕಿದೆ!
ಟೆಸ್ಟ್ ಕ್ರಿಕೆಟ್‌ನಲ್ಲಿ ೮೦ ಓವರ್‌ಗಳ ಗಡಿಯಲ್ಲೊಂದು ಭಯ. ನಂತರ ನೋಡಿ, ‘ನ್ಯೂ ಬಾಲ್ ಡ್ಯೂ’ ಅಂದರೆ ಇನ್ನಿಂಗ್ಸ್‌ನಲ್ಲಿ ೮೦ ಓವರ್ ನಂತರ ಹೊಸ ಚೆಂಡನ್ನು ಫೀಲ್ಡಿಂಗ್ ನಾಯಕ ತೆಗೆದುಕೊಳ್ಳಬಹುದು. ಬಹುಪಾಲು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗೆ ಹೊಸ ಚೆಂಡು ಎದುರಿಸುವ ಅನುಭವ ಇರುವುದಿಲ್ಲ. ಇಂತಹ ವೇಳೆ ಕೆಂಡ ಹಾಯಬೇಕಾದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಬಹುಷಃ ಟೆಸ್ಟ್ ಕ್ರಿಕೆಟ್‌ನ ಅತ್ಯಂತ ಚೆಂದದ ನಿಯಮವೇ ಈ ನ್ಯೂ ಬಾಲ್ ಡ್ಯೂ!
ಇತ್ತೀಚಿನ ಕ್ರಿಕೆಟ್ ನಿಯಮಗಳಲ್ಲಿ ರಿವರ್ಸ್ ಸ್ವಿಂಗ್ ಎಂಬ ಬೌಲಿಂಗ್ ಮಾಂತ್ರಿಕ ತಂತ್ರ ಕಣ್ಮರೆಯಾಗಿಬಿಟ್ಟಿದೆ. ಟ್ವೆಂಟಿಯಲ್ಲಿ ಚೆಂಡು ಹಳೆಯದಾಗದ್ದು ಕಾರಣವಾದರೆ ಏಕದಿನ ಇನ್ನಿಂಗ್ಸ್‌ನ ೩೪ನೇ ಓವರ್‌ಗೆ ಮತ್ತೆ ಹೊಸ ಚೆಂಡು ಬಳಸುವ ಕಾನೂನಿನಿಂದ ರಿವಸ್ ಸ್ವಿಂಗ್‌ಗೆ ಚೆಂಡು ಪಕ್ವವಾಗುವುದೇ ಇಲ್ಲ. ಅಂದರೆ ಇಂತದೊಂದು ಜಾಣ್ಮೆಯನ್ನು ನೋಡಲು ಮತ್ತೆ ನಾವು ಟೆಸ್ಟ್ ಕ್ರಿಕೆಟ್‌ಗೇ ಬರಬೇಕು.
ಹಳೆಯದಾದ ಚೆಂಡಿನ ಒಂದು ಮೈಯ ಹೊಳಪನ್ನು ಹಾಗೆಯೇ ಉಳಿಸಿಕೊಂಡು ಇನ್ನೊಂದು ಮಗ್ಗುಲನ್ನು ತಿಕ್ಕಿ ಸವೆಸಿಬಿಟ್ಟರೆ ಚೆಂಡು ಬೌಲ್ ಮಾಡಿದಾಗ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳಬಲ್ಲದು. ಗಾಳಿಯಲ್ಲಿ ತಿರುವ ಪಡೆಯುವುದೇ ಅದ್ಭುತ. ಫುಲ್ ಲೆಂಗ್ತ್‌ಗೆ ಪಿಚ್ ಆಗುವ ಚೆಂಡನ್ನು ಬ್ಯಾಟ್ಸ್‌ಮನ್ ನಿರಾಯಾಸವಾಗಿ ಎಕ್ಟ್ರಾ ಕವರ್‌ಗೆ ಬಾರಿಸುವ ಪ್ರಶ್ನೆ ಇಲ್ಲ! ಸಾವಿರ ಕಣ್ಣು ಇಟ್ಟುಕೊಂಡು ರಿವರ್ಸ್ ಸ್ವಿಂಗ್‌ನ್ನು ಕಟ್ಟಿ ಹಾಕಬೇಕು. ಅಂತಹ ಪ್ರತಿಭಾಶಾಲಿಯನ್ನು ಮಾತ್ರ ನಾವು ‘ಟೆಸ್ಟ್ ದರ್ಜೆಯ ಬ್ಯಾಟ್ಸ್‌ಮನ್’ ಎನ್ನಬಹುದು. ಟೆಸ್ಟ್ ಕ್ರಿಕೆಟ್‌ನ ಹಳೆಯ ಮಾದರಿಯೇ ಇಲ್ಲ ಎಂತಾದರೆ ನಾವು ಫಾಸ್ಟ್ ಫುಡ್ ಉಣ್ಣುವವರಾಗುತ್ತೇವೆ. ನಿಜಕ್ಕೂ ರಾಗಿ ಮುದ್ದೆ, ಅನ್ನ ಸಾಂಬಾರಿನ ರುಚಿಯಿಂದ ನಾಲಿಗೆ ವಂಚಿತವಾಗುತ್ತದೆ!
ಪ್ರಸ್ತುತ ಟೆಸ್ಟ್ ಕ್ರಿಕೆಟ್‌ನ ಆಸಕ್ತಿಯನ್ನು ಆರಿಸುವುದರಲ್ಲಿ ಐಸಿಸಿಯದೇ ಪ್ರಮುಖ ಪಾತ್ರವಿದೆ. ೨೦, ಒನ್‌ಡೇಗಳಿಗೆ ಶುಷ್ಕ ಬ್ಯಾಟಿಂಗ್ ಪಿಚ್ ಮಾಡುವ ಪ್ರಕ್ರಿಯೆ ಈಗ ಟೆಸ್ಟ್‌ಗೂ ಲಂಬಿಸಿದೆ. ಇದು ಬೃಹತ್ ಮೊತ್ತಗಳ ನೀರಸ ಡ್ರಾಗೆ ಕಾರಣವಾಗುತ್ತದೆ. ಮೇಲೆ ಹೇಳಿದ ಯಾವುದೇ ತಾಕತ್ತು ಪರೀಕ್ಷೆ ಕಷ್ಟ ಕಷ್ಟ. ರನ್ ಸುರಿಮಳೆಯೊಂದೇ ಕ್ರಿಕೆಟ್ ಆಟದ ಸರಕಲ್ಲವಲ್ಲ, ಜನ ಮುಖ ತಿರುವಿ ಹೋಗದೆ ಇನ್ನೇನು ಮಾಡಿಯಾರು?
ಅದೃಷ್ಟಕ್ಕೆ, ಟ್ವೆಂಟಿ ೨೦ ಟೆಸ್ಟ್‌ಗೆ ಧಾರಾಳ ವಿರೋಧವಿದೆ. ಭಾರತದಲ್ಲಿಯೇ ಸಂದೀಪ್ ಪಾಟೀಲ್, ಪ್ರಸನ್ನ, ಅಜಿತ್ ವಾಡೇಕರ್ ಸ್ಪಷ್ಟವಾಗಿ ಹೊಸ ಯೋಚನೆಯನ್ನು ಅಪಕ್ವ ಎಂದಿದ್ದಾರೆ. ಈ ಕಲ್ಪನೆಯ ಕೂಸು ಭಾರತದಲ್ಲಿ ಹುಟ್ಟಿದ್ದರಿಂದ ಯಾಕೋ ಚರ್ಚೆ ವಿಶ್ವ ಮಟ್ಟಕ್ಕೆ, ಇತರ ದೇಶಗಳ ಆಟಗಾರರ ಅಭಿಪ್ರಾಯಕ್ಕೆ ಹೋಗಿಲ್ಲ.
ಐಸಿಸಿ ನಿಯಮಗಳ ಪ್ರಕಾರವೂ ಒಮ್ಮೆಗೇ ಚಾಲ್ತಿಗೆ ಬರಲಿಕ್ಕಿಲ್ಲ. ಮೊತ್ತಮೊದಲು ಸಲಹೆ ಐಸಿಸಿಯ ಕ್ರಿಕೆಟ್ ಕಮಿಟಿಯಲ್ಲಿ ಚರ್ಚೆಯಾಗಬೇಕು. ಅವರು ಶಿಫಾರಸು ಮಾಡಿದರೆ ಮಾತ್ರ ಚೀಫ್ ಎಕ್ಸಿಕ್ಯುಟಿವ್ ಕಮಿಟಿ ಮುಂದೆ ವಿಚಾರ ಮಂಡನೆಯಾಗುತ್ತದೆ. ಇಲ್ಲಿ ಒಪ್ಪಿಗೆ ಸಿಕ್ಕರೆ ಅಂತಿಮ ಪರಿಶೀಲನೆಗೆ ಎಕ್ಸಿಕ್ಯುಟಿವ್ ಬೋರ್ಡ್ ಕಾರ್ಯೊನ್ಮುಖವಾಗುತ್ತದೆ. ವಿಚಾರ ಪ್ರಕ್ರಿಯೆಯದಲ್ಲ, ಒಂದೊಮ್ಮೆ ಐಸಿಸಿಯ ಮುಖ್ಯ ಕಛೇರಿಗೆ ಒಂದು ನಿಯಮವನ್ನು ಜಾರಿಗೆ ತಕ್ಷಣ ತರಬೇಕು ಎಂತಾದರೆ ಮೊದಲಿನೆರಡು ಹಂತಗಳು ದಡಕ್ಕನೆ ಪೂರೈಸಿಬಿಡಲಾಗುತ್ತದೆ!
ಕ್ರಿಕೆಟ್‌ನ ದುರಂತವಿರುವುದೇ ಅದರ ಚಿಂತನೆಯಲ್ಲಿ. ಅದರ ನಿರ್ವಾಹಕರು ಅದನ್ನು ಒಂದು ಆಟವಾಗಿ ಪರಿಗಣಿಸದೆ ಮಾರಾಟದ ಸರಕಾಗಿ ಯೋಚಿಸುತ್ತಿರುವುದೇ ಅಧ್ವಾನಗಳಿಗೆ ಕಾರಣ. ಟಿ೨೦ಯ ಭ್ರಾಮಕ ಜಗತ್ತಿನಲ್ಲೇ ಬಾಳಲು ಐಸಿಸಿಯು ನಿರ್ಧರಿಸಿದ್ದರೆ ಅಪಾಯ ದೊಡ್ಡದು. ಅದೊಂದು ರೀತಿ, ಬೇಲಿಯೇ ಎದ್ದು ಹೊಲ ಮೆಂದು, ಉತ್ಕೃಷ್ಟ ಭೂಮಿಯನ್ನು ಹಾಳುಗೆಡವಿದಂತೆ.
ಇದೇ ಸತ್ಯವಾಗಿಬಿಡುತ್ತದೆಯೇ? ಓಹ್, ದೇವರೇ, ಆಗ ಟೆಸ್ಟ್ ಕ್ರಿಕೆಟ್‌ನ್ನು ಕಾಪಾಡಲು ನಿನ್ನಿಂದ ಮಾತ್ರ ಸಾಧ್ಯ!!
-ಮಾವೆಂಸ

ಭಾನುವಾರ, ಜುಲೈ 26, 2009

ಚೆಕ್ ಸಂಗ್ರಹಣೆ ದರಗಳು

ಸ್ನೇಹಿತ ರಾಮಸ್ವಾಮಿ ಕಳಸವಳ್ಳಿ ಬ್ಯಾಂಕ್ ಒಂದರ ಉದ್ಯೋಗಿ. ಅವರು ಈ ಮಾಹಿತಿಯನ್ನು ಅವರದೇ ಶೈಲಿಯಲ್ಲಿ ತಿಳಿಸಿದ್ದಾರೆ. ನಿಮಗೆಲ್ಲ ಅನುಕೂಲವಾದೀತೆಂಬ ಕಾರಣಕ್ಕೆ ಇಲ್ಲಿ ಸ್ಥಳಾವಕಾಶ ನೀಡಿರುವೆ. ಮಾಹಿತಿ ಕೊಟ್ಟ ರಾಮ್ಸ್‌ರಿಗೆ ವಂದನೆಗಳು.....
-ಮಾವೆಂಸ


ಈಗ ಹೆಚ್ಚಿನ ಜನ ಬ್ಯಾಂಕಿನ ಮೂಲಕ ವ್ಯವಹಾರ ನಡೆಸುತ್ತಿದ್ದಾರೆ. ಈಗಿನ ಜಮಾನದಲ್ಲಿ ಇದು ಅನಿವಾರ್ಯವಾಗಿ ಬಿಟ್ಟಿದೆ. ಸರ್ಕಾರದ ಯಾವೊಂದು ಸವಲತ್ತುಗಳನ್ನು ಪಡೆಯಬೇಕಿದ್ದರೂ ಬ್ಯಾಂಕ್‌ನಲ್ಲಿ ಖಾತೆ ಹೊಂದಿರಬೇಕಾದ್ದು ಅನಿವಾರ್ಯ. ಸರ್ಕಾರ ನೀಡುವ ಎಲ್ಲಾ ಸಹಾಯಧನಗಳನ್ನು ಚೆಕ್ಕುಗಳ ಮೂಲಕ ವಿತರಿಸಲಾಗುತ್ತಿದೆ. ಇದು ಸಾಮಾನ್ಯ ಜನರ ಪಾಡಾದರೆ ಇನ್ನುಳಿದ ವ್ಯವಹಾರಸ್ಥರು, ನೌಕರರು ಸಹಾ ಇನ್ಯಾವುದೇ ಉದ್ದೇಶಗಳಿಗೆ ಪಡೆದ ಚೆಕ್ಕುಗಳನ್ನು ನಗದೀಕರಿಸಲು ಬ್ಯಾಂಕುಗಳಲ್ಲಿ ಸಂಗ್ರಹಣೆಗೆ(ಕಲೆಕ್ಷನ್) ಹಾಕುವುದು ಅನಿವಾರ್ಯ. ಈ ರೀತಿಯ ಚೆಕ್ಕುಗಳ ಸಂಗ್ರಹಣೆಗೆ ಒಂದೊಂದು ಬ್ಯಾಂಕುಗಳು ತರಹವಾರಿ ಸೇವಾಶುಲ್ಕ ವಿಧಿಸುತ್ತಿದ್ದರು. ಜೊತೆಗೆ ಚೆಕ್ಕಿನ ಮೊತ್ತಕ್ಕನುಗುಣವಾಗಿ ಅಂಚೆವೆಚ್ಚ ಬೇರೆ ಖಟಾವುಗೊಳ್ಳುತ್ತಿತ್ತು. ಇದು ಕೂಡಾ ಒಂದೇ ರೀತಿಯಾಗಿರಲಿಲ್ಲ. ಒಂದು ಬ್ಯಾಂಕು ಕೊರಿಯರ್ ವೆಚ್ಚ ವಸೂಲಿ ಮಾಡಿದರೆ ಕೆಲವು ಬ್ಯಾಂಕುಗಳು ಅಷ್ಟೇ ಮೊತ್ತದ ಚೆಕ್ಕಿಗೆ ರಿಜಿಸ್ಟರ್ ಅಂಚೆ ವೆಚ್ಚ ವಸೂಲಿ ಮಾಡುತ್ತ್ತಿದ್ದವು. ಇಂತಹ ವಿವಿಧ ಚೆಕ್ ಸಂಗ್ರಹಣಾ ವೆಚ್ಚವನ್ನು ವಸೂಲಿ ಮಾಡುತ್ತಿರುವ ಬ್ಯಾಂಕುಗಳ ನೀತಿಗೆ ಕಡಿವಾಣ ಹಾಕಿರುವ ರಿಸರ್ವ್ ಬ್ಯಾಂಕ್ ಒಂದೇ ರೀತಿ ಚೆಕ್ ಸಂಗ್ರಹಣ ಸೇವಾಶುಲ್ಕ ವಿಧಿಸಬೇಕೆಂದು ೨೦೦೮ ರ ಅಕ್ಟೋಬರ್ ತಿಂಗಳಿನಲ್ಲಿಯೇ ಆದೇಶವಿತ್ತಿದೆ. ಈ ಬಗ್ಗೆ ಬಳಕೆ ತಿಳುವಳಿಕೆಯಲ್ಲಿ ವಿವರವಾಗಿ ತಿಳಿಸಿದ್ದೇವೆ. ಆದರೆ ಕೆಲವು ಬ್ಯಾಂಕುಗಳು ರಿಸರ್ವ್ ಬ್ಯಾಂಕಿನ ಈ ಅದೇಶಕ್ಕೆ ಗೌರವ ತೋರಿಸದೇ ಗ್ರಾಹಕ ವಿರೋಧಿ ನೀತಿಯನ್ನು ಅನುಸರಿಸಿ ಕಾನೂನು ಮುರಿಯುತ್ತಿವೆ. ಮತ್ತೊಮ್ಮೆ ಓದುಗರ ನೆನಪಿಗಾಗಿ ಭಾರತೀಯ ರಿಸರ್ವ್ ಬ್ಯಾಂಕಿನ ಸುತ್ತೋಲೆ ಸಂ. RBI / 2008-09 / 207 DPSS.CO.No. 611 / 03.01.03(P) / 2008-09 ದಿನಾಂಕ ೦೮.೧೦.೨೦೦೮ ರ ಸಾರಾಂಶವನ್ನು ಮತ್ತೆ ಕೊಡುತ್ತಿದ್ದೇವೆ. ಅನ್ಯಾಯಕ್ಕೊಳಗಾದ ಗ್ರಾಹಕರು ತಮ್ಮ ವಹಿವಾಟು ನಡೆಸುತ್ತಿರುವ ಬ್ಯಾಂಕುಗಳಿಗೆ ತಪ್ಪನ್ನು ಸರಿಪಡಿಸಿಕೊಳ್ಳುವಂತೆ ಹಕ್ಕೊತ್ತಾಯ ಮಾಡಬೇಕಿದೆ.

ಹೊರ ಪ್ರದೇಶಗಳ ಚೆಕ್ ಸಂಗ್ರಹಣ ಸೇವಾಶುಲ್ಕ
ರೂ.೧೦,೦೦೦ ದ ವರಗೆ ರೂ.೫೦.೦೦
ರೂ.೧೦,೦೦೧ರಿಂದರೂ.೧ಲಕ್ಷದವರೆಗೆ ರೂ.೧೦೦.೦೦
ರೂ.೧,೦೦,೦೦೧ ರಿಂದ ಮೇಲ್ಪಟ್ಟು ರೂ.೧೫೦.೦೦
ಎಷ್ಟೇ ಮೊತ್ತವಿದ್ದರೂ

ಈ ರೀತಿಯ ಚೆಕ್ ಸಂಗ್ರಹಣ ಸೇವಾಶುಲ್ಕದಲ್ಲಿ ಅಂಚೆವೆಚ್ಚ/ಕೊರಿಯರ್ ವೆಚ್ಚ ಎಲ್ಲಾ ಸೇರಿದೆ. ಅದಕ್ಕೆ ಮತ್ತೆ ಪ್ರತ್ಯೇಕ ಶುಲ್ಕವಿಧಿಸುವಂತಿಲ್ಲ.

- ರಾಮಸ್ವಾಮಿ ಕಳಸವಳ್ಳಿ

ಬುಧವಾರ, ಜುಲೈ 22, 2009

ಫೆಡರರ್ - ಹದಿನಾಲ್ಕು ಮತ್ತೊಂದು!

ಸ್ವಲ್ಪ ತಡವಾಗಿ ರೋಜರ್ ಫೆಡರರ್ ಬಗ್ಗೆ ಬರೆಯುತ್ತಿದ್ದೇನೆಯೇ? ಗೊತ್ತಿಲ್ಲ, ರೈಲ್ವೆ ಕುರಿತ ಜೋಕ್ ಮಾದರಿಯಲ್ಲಿ ಹೇಳುವುದಾದರೆ, ಯು.ಎಸ್.ಓಪನ್‌ಗೆ ಶಾನೆ ಮೊದಲು ಬರೆದಂತಾಗಿದೆ!
ವಿಚಿತ್ರ ನೋಡಿ, ಸಾಂಪ್ರಾಸ್‌ರ ೧೪ ಸ್ಲಾಂ ಮುರಿದು ೧೫ ಗಳಿಸಿಯಾದ ಮೇಲೆ ಇನ್ನು ಮುಂದೆ ಬರುವ ೧೬, ೧೭, ೧೮......ಗಳೆಲ್ಲ ಬರೀ ಸಂಖ್ಯೆಗಳು!
ಇರಲಿ, ರೋಜರ್ ಕುರಿತ ನನ್ನ ಅಭಿಪ್ರಾಯಗಳು ಈ ಮೂಲಕ ನಿಮ್ಮ ಗಮನಕ್ಕೆ.......


ಕೆಲವೊಮ್ಮೆ ಆಟವೆಂಬ ಆಟ ಕೂಡ ಕ್ರೂರಿ, ಪಕ್ಷಪಾತಿ ಎನ್ನಿಸಿಬಿಡುತ್ತದೆ. ಈ ವರ್ಷದ ಪುರುಷರ ವಿಂಬಲ್ಡನ್ ಫೈನಲ್ ನೋಡಿದವರಿಗೆ ಟೆನಿಸ್ ಆಟದ ನಡವಳಿಕೆ ಅನ್ಯಾಯ ಎನ್ನಿಸಬಹುದು! ಅಮೆರಿಕದ ಆಂಡಿ ರ್‍ಯಾಡಿಕ್‌ರ ಎದುರು ಐದು ಸೆಟ್‌ಗಳ ಸೆಣಸಾಟದಲ್ಲಿ ಸ್ವಿರ್ಜಲೆಂಡ್‌ನ ರೋಜರ್ ಫೆಡರರ್ ಗೆದ್ದುದೇನೋ ನಿಜ. ಆದರೆ ಇಡೀ ಪಂದ್ಯದಲ್ಲಿ ಮೇಲುಗೈ ಹೊಂದಿದ್ದುದು ರ್‍ಯಾಡಿಕ್. ರೋಜರ್‌ರ ಸರ್ವ್‌ನ್ನು ಎರಡೆರಡು ಬಾರಿ ಮುರಿದು ಎರಡು ಸೆಟ್ ಗೆದ್ದಿದ್ದರೆ ಫೆಡರರ್ ಪಂದ್ಯದ ಕೊಟ್ಟ ಕೊನೆಯ ಗೇಮ್‌ನಲ್ಲಿಯಷ್ಟೇ ರ್‍ಯಾಡಿಕ್‌ರ ಸರ್ವ್ ಮುರಿಯಲು ಸಾಧ್ಯವಾಗಿತ್ತು. ಅಷ್ಟಕ್ಕೇ ಫೆಡರರ್‌ಗೆ ೧೫ನೇ ಗ್ರಾನ್‌ಸ್ಲಾಂ ಪ್ರಶಸ್ತಿ, ಅಗ್ರಕ್ರಮಾಂಕದ ಬುತ್ತಿ, ಇತಿಹಾಸದಲ್ಲಿ ಅಜರಾಮರ ದಾಖಲೆ. ರ್‍ಯಾಡಿಕ್‌ರಿಗೆ ಬರೀ ಒಂದು ಪ್ಲೇಟ್!
ಅದೃಷ್ಟವೂ ಚಾಂಪಿಯನ್ ಪರ ಎನ್ನುತ್ತದೆ ಒಂದು ನಾಣ್ಣುಡಿ. ವಿಶ್ವದಲ್ಲೇ ಅತಿ ಹೆಚ್ಚು ಗ್ರಾನ್‌ಸ್ಲಾಂ ಗೆದ್ದವನನ್ನು ಸರ್ವ ಶ್ರೇಷ್ಠ ಎನ್ನುವುದು ತಪ್ಪೇ? ಅದೂ ಈ ಹಿಂದೆ ೧೪ ಸ್ಲಾಂ ಗೆದ್ದಿದ್ದ ಅಮೆರಿಕದ ಪೀಟ್ ಸಾಂಪ್ರಾಸ್ ೧೪ ವರ್ಷದಲ್ಲಿ ಈ ಸಾಧನೆ ಮಾಡಿದ್ದರೆ ಈ ಸ್ವಿಸ್ ಪ್ರತಿಭೆಗೆ ಅದಕ್ಕಿಂತ ಎಂಟು ವರ್ಷ ಕಡಿಮೆ ಸಾಕಾಯಿತು. ಕೈಯಲ್ಲಿ ಒಂದು ಸ್ಲಾಂ ಜಾಸ್ತಿ ಬೇರೆ. ಇದನ್ನು ಬದಿಗಿಟ್ಟರೂ , ಎಲ್ಲಾ ನಾಲ್ಕು ಗ್ರಾನ್‌ಸ್ಲಾಂ ಗೆದ್ದ ಗೌರವ ಪೀಟ್‌ರಿಗಿಲ್ಲ, ಫೆಡರರ್‌ಗಿದೆ.
ಕೇವಲ ಒಂದೂವರೆ ವರ್ಷದ ಕೆಳಗೆ ಎಟಿಪಿ ಟೂರ್‌ನಲ್ಲಿ ಫೆಡರರ್ ಕುರಿತಂತೆ ಚಾಲ್ತಿಯಲ್ಲಿದ್ದ ನೂರಾರು ಜೋಕ್‌ಗಳಲ್ಲಿ ಹೆಚ್ಚಿನವು ಅವರ ಅಪ್ರತಿಮ ಪ್ರತಿಭೆಗೆ ಬೋಪರಾಕ್ ಹೇಳುವಂತಿದ್ದವು. ಅವರಿನ್ನು ಬ್ಯಾಕ್ ಹ್ಯಾಂಡ್‌ನಲ್ಲಿ ಮಾತ್ರ ಆಡಬೇಕು, ಒಂದೇ ಸರ್ವ್ ಬಳಸಬೇಕು ಎಂಬ ಮಾತುಗಳ ಹಿಂದೆ ಇದ್ದುದು ಅಕ್ಷರಶಃ ಫೆಡ್ ಮೆಚ್ಚುಗೆ. ಶ್ರೇಷ್ಟತೆಯನ್ನು ತೂಕಕ್ಕೆ ಹಾಕಿ ಅಳೆಯುವುದೇ ಅಸಹ್ಯ. ಆದರೆ ಫೆಡರರ್ ಯಾವ ನಿಟ್ಟಿನಿಂದ ನೋಡಿದರೂ ಶ್ರೇಷ್ಠರಲ್ಲೂ ಅಗ್ರಕ್ರಮಾಂಕ ಪಡೆಯುತ್ತಾರೆ. ಕೊನೆಗೆ ಬೇರೆಲ್ಲ ಹಿರಿಮೆ ಬಿಟ್ಟು ಅವರ ಸದ್ವರ್ತನೆಯೊಂದನ್ನು ಲೆಕ್ಕಕ್ಕೆ ತೆಗೆದುಕೊಂಡರೂ ಸ್ಟೀಫನ್ ಎಡ್ಬರ್ಗ್, ಪೀಟ್ ಸಾಂಪ್ರಾಸ್‌ರ ಹೆಜ್ಜೆ ಗುರುತುಗಳಿಗೆ ಸವಾಲಾಗಿ ನಿಲ್ಲುತ್ತಾರೆ.
ಕುಹಕಿಗಳದ್ದೂ ವಾದ ಇದ್ದೇ ಇದೆ. ಫ್ರೆಂಚ್ ಓಪನ್‌ನಲ್ಲಿ ಈ ವರ್ಷ ಫೆಡ್ ಗೆಲ್ಲಲು ರಫೆಲ್ ನಡಾಲ್ ನಾಲ್ಕನೇ ಸುತ್ತಲ್ಲಿ ಸೋತದ್ದೇ ಕಾರಣ ಎನ್ನುತ್ತಾರೆ. ಬಹುಷಃ ವಿಂಬಲ್ಡನ್‌ನಲ್ಲಿ ರಫಾ ಆಡಿದ್ದರೆ ಕತೆಯೇ ಬೇರೆಯಿತ್ತು ಎಂಬ ಅಡ್ಡ ಕೊಂಕು ತೆಗೆಯುತ್ತಾರೆ. ಬಿಡಿ, ನಡಾಲ್‌ರ ಪ್ರತಿಭೆಗೆ ಪೂರ್ಣ ಗೌರವವನ್ನು ಕೊಟ್ಟು ಹೇಳಬೇಕಾದುದೆಂದರೆ ರೋಜರ್ ಫೆಡರರ್ ಎಲ್ಲ ಮಾದರಿಯ ಅಂಕಣದಲ್ಲಿ ತೋರಿದ ಕನ್ಸಿಸ್ಟೆನ್ಸಿ ರಫಾಗಿಲ್ಲ, ಸಾಂಪ್ರಾಸ್ - ಅಗ್ಗಾಸ್ಸಿಗೂ ಇಲ್ಲ ಎಂಬುದು ಖಚಿತ.
ದಾಖಲೆ ಬೇಕೆ? ಫೆಡ್ ಸತತ ೨೩೭ ವಾರ ಕಾಲ ಅಗ್ರ ಪಟ್ಟದಲ್ಲಿ ಬಾಳಿದ್ದಾರೆ. ಇದು ಅದ್ವಿತೀಯ ವಿಶ್ವದಾಖಲೆ. ಈಗ ಮತ್ತೆ ನಂ.೧ ಪದವಿ ಗಿಟ್ಟಿದೆ. ಅದಿರಲಿ, ಈ ಆರು ವರ್ಷದ ಕ್ಯಾರಿಯರ್‌ನಲ್ಲಿ ಕಳೆದ ೨೧ ಗ್ರಾನ್‌ಸ್ಲಾಂನಲ್ಲಿ ಕನಿಷ್ಟ ಪಕ್ಷ ಉಪಾಂತ್ಯ ಹಂತವನ್ನು ವ್ರತ ತಪ್ಪದು ಎನ್ನಿಸುವಂತೆ ಆಡಿದ್ದಾರೆ. ಈ ಮಧ್ಯೆ ಒಮ್ಮೆ ಸತತ ಹತ್ತು ಸ್ಲಾಂ ಫೈನಲ್ ಆಡಿದ್ದೂ ಉಂಟು. ೨೦ ಗ್ರಾನ್‌ಸ್ಲಾಂ ಫೈನಲ್‌ನಲ್ಲಿ ಆಡಿದ್ದು ಇವಾನ್‌ಲೆಂಡ್ಲ್‌ರ ೧೯ರ ಸಾಧನೆನೆಯನ್ನು ಹಿಂದೆ ಹಾಕಿದೆ. ಸಾಂಪ್ರಾಸ್‌ರ ೧೪ ಸ್ಲಾಂ ಮುಗಿದ ಮಾತು.
ವಿಂಬಲ್ಡನ್‌ನಲ್ಲಿನ ಫೆಡರರ್ ಸಾಧನೆಯೂ ಅದ್ಭುತ. ಕಳೆದ ಆರು ವರ್ಷಗಳಿಂದ ಸತತವಾಗಿ ಫೈನಲ್‌ನಲ್ಲಿ ಆಡುತ್ತಿದ್ದಾರೆ. ಎಡವಟ್ಟಾಗಿದ್ದು ಕಳೆದ ವರ್ಷ ರಫೆಲ್ ನಡಾಲ್‌ರ ವಿರುದ್ಧ ಮಾತ್ರ. ಅದೂ ಐದು ಘಂಟೆ ದಾಟಿದ ಮ್ಯಾರಥಾನ್ ಹೋರಾಟದಲ್ಲಿ ಸೋಲು. ೨೦೦೩ರಿಂದ ಆರು ಗೆಲುವು, ಒಂದು ಫೈನಲ್ ಸಾಧನೆ ಪೀಟ್ ಸಾಂಪ್ರಾಸ್‌ರ ಏಳು ವಿಂಬಲ್ಡನ್ ಪ್ರಶಸ್ತಿಗಿಂತ ಒಂದು ಹೆಜ್ಜೆಯಷ್ಟೇ ಹಿಂದೆ. ಗಮನಿಸಬೇಕಾದುದೆಂದರೆ ಇದಕ್ಕೂ ಮುನ್ನ ಆಡಿದ ನಾಲ್ಕು ವಿಂಬಲ್ಡನ್‌ನಲ್ಲಿ ರೋಜರ್ ಮೂರು ಬಾರಿ ಪ್ರಥಮ ಸುತ್ತಿನಿಂದಲೇ ಹೊರಬಿದ್ದಿದ್ದರು!
ಊಹ್ಞೂ, ಆದರೂ ಫೆಡರರ್‌ರನ್ನು ವಿಂಬಲ್ಡನ್ ಜೊತೆ ಸಮೀಕರಿಸುವುದು ಕಷ್ಟ. ಅದೇನಿದ್ದರೂ ಪೀಟ್ ಆಟವೇ ಸೂಕ್ತ. ಲೀಲಾಜಾಲವಾಗಿ ಸರ್ವ್ ಮಾಡಿ ನೆಟ್ ಬಲಿ ಬಂದು ನಿಲ್ಲುತ್ತಿದ್ದ ಪೀಟ್‌ಗೂ ಎಲ್ಲೋ ಅಪರೂಪಕ್ಕೊಮ್ಮೆ ನೆಟ್‌ನತ್ತ ಧಾವಿಸುವ ಫೆಡ್‌ಗೂ ಬಹಳ ಅಂತರ. ವಿಂಬಲ್ಡನ್ ಮಟ್ಟಿಗೆ ಸರ್ವ್ ಮತ್ತು ವಾಲಿಯ ಪೀಟ್‌ಗೆ ಹೆಚ್ಚು ಅಂಕ.
ಬಹುಷಃ ಫೆಡರರ್‌ರ ಅಷ್ಟೂ ದಾಖಲೆಗಳು ರಪೆಲ್‌ರೆದುರು ಮಾತ್ರ ಸುಸ್ತು ಹೊಡೆಯುತ್ತವೆ. ಅವರು ನಡಾಲ್ ಎದುರು ಮಾತ್ರ ಕಳಪೆ ಎನ್ನಬಹುದಾದ ಏಳು ಗೆಲುವು, ೧೩ ಸೋಲಿನ ಅನುಪಾತ ಹೊಂದಿದ್ದಾರೆ. ಈವರೆಗೆ ಅವರು ಗ್ರಾನ್‌ಸ್ಲಾಂ ಫೈನಲ್‌ನಲ್ಲಿ ಸೋತದ್ದು ಐದು ಬಾರಿ, ಅಷ್ಟೂ ಬಾರಿ ಅದು ನಡಾಲ್ ಎದುರು! ಕ್ಲೇನಲ್ಲಿ ೯-೨ರ ಅನುಪಾತ ನಡಾಲ್ ಪರ. ಹುಲ್ಲು ಮತ್ತು ಹಾರ್ಡ್ ಕೋರ್ಟ್‌ನಲ್ಲಿ ಮಾತ್ರ ಫೆಡ್ ೫-೪ರಿಂದ ಮುಂದೆ. ನಿಜಕ್ಕಾದರೆ, ನಡಾಲ್‌ರನ್ನು ಕ್ಲೇ ಅಧಿಪತಿಯೆಂದು ಒಪ್ಪಿಕೊಂಡು ಆ ಮುಖಾಮುಖಿಯನ್ನು ಬದಿಗಿಟ್ಟು ನೋಡಿದರೆ ಫೆಡ್ ಇಂದಿಗೂ ಮೇಲುಗೈ ಸಾಧಿಸಿದವರೇ. ಆದರೆ ಗ್ರಾನ್‌ಸ್ಲಾಂಗಳ ಫೈನಲ್‌ಗಳಲ್ಲಿ ಫೆಡ್ ನಡಾಲ್ ಎದುರು ಅತಿ ಹೆಚ್ಚು ಪರಾಭವ ಕಂಡಿರುವುದು ನಡಾಲ್‌ರನ್ನು ಫೆಡ್ ಕ್ಯಾರಿಯರ್‌ನ ಕಪ್ಪು ಚುಕ್ಕೆ ಎನ್ನುವಂತಾಗಿದೆ ಅಷ್ಟೇ.
ಬರುವ ಆಗಸ್ಟ್ ೮ಕ್ಕೆ ೨೮ ಪೂರೈಸಲಿರುವ ರೋಜರ್ ಫೆಡರರ್ ಜರ್ಮನ್, ಫ್ರೆಂಚ್, ಇಂಗ್ಲೀಷ್ ಭಾಷೆಯಲ್ಲಿ ಪತ್ರಿಕಾ ಗೋಷ್ಠಿ ನಡೆಸಬಲ್ಲ ತಾಕತ್ತುಗಾರ. ಟೆನಿಸ್, ಇಲ್ಲದಿದ್ದರೆ ಫುಟಬಾಲ್‌ನಲ್ಲಿ ತನ್ನ ಕ್ರೀಡೆಯಾಗಿ ಫೆಡ್ ಆರಿಸಿಕೊಳ್ಳುತ್ತಿದ್ದರಂತೆ. ಅವರಿಗೆ ಇನ್ನೊಂದು ಆಟದ ಮೇಲೆಯೂ ವಿಶೇಷ ಪ್ರೀತಿ. ಅದು ಕ್ರಿಕೆಟ್! ಅಷ್ಟೇಕೆ, ಅವರು ಭಾರತಕ್ಕೆ ೨೦೦೬ರಲ್ಲಿ ಬಂದಿದ್ದರು. ಆಗ ತಮಿಳುನಾಡಿನಲ್ಲಿ ಜರುಗಿದ ‘ಸುನಾಮಿ ಸಂತ್ರಸ್ತರ ನೆರವಿನ ಪಂದ್ಯ’ದಲ್ಲಿ ಬ್ಯಾಟ್ ಬೀಸಿದ್ದರು!!
ಸದ್ಯಕ್ಕೆ ಈ ಅಪ್ರತಿಮ ಟೆನಿಸ್ ಪ್ರತಿಭೆಗೆ ಆತನ ಈವರೆಗೆನ ಸಾಧನೆಗೆ ಸಲಾಂ ಹೇಳೋಣ. ಈ ಪುಟದಲ್ಲಿ ಇನ್ನಷ್ಟು ಮತ್ತಷ್ಟು ಅವರ ಬಗ್ಗೆಬರೆಯುವ ಸಂದರ್ಭ ಮರುಕಳಿಸುತ್ತಿರುತ್ತದೆ. ಸೆಪ್ಟೆಂಬರ್‌ನಲ್ಲಿ ಯು.ಎಸ್. ಓಪನ್ ಬರಬೇಕಷ್ಟೇ. ಹೇಳಲು ಮರೆತಿದ್ದು - ನ್ಯೂಯಾರ್ಕ್‌ನ ಡೆಕೋ ಟರ್ಫ್ ಫೆಡರರ್‌ರ ಅಚ್ಚುಮೆಚ್ಚಿನ ಅಂಕಣ!
-ಮಾವೆಂಸ

ಸೋಮವಾರ, ಜುಲೈ 13, 2009

ಚಿಲ್ಲರೆ ಲೆಕ್ಕ !


ಬೈಕ್‌ಗೆ ಪೆಟ್ರೋಲ್ ಹಾಕಿಸುವವರು ಬಂಕ್‌ನಲ್ಲಿ ಹೇಳುವುದು "100ರೂ.ನದು ಹಾಕಿ" ಎಂದು. ಮೀಟರ್ ಜಂಪಿಂಗ್ ಕಿತಾಪತಿಗಳನ್ನೆಲ್ಲ ಬಿಟ್ಟರೂ ಆತ ನೂರು ರೂಪಾಯಿಗೆ ಹಾಕುವುದು 1.97ಲೀ. ಪೆಟ್ರೋಲ್. ಖಡಕ್ಕಾಗಿ ಲೆಕ್ಕ ಹಾಕಿದರೆ ಇಷ್ಟು ಪೆಟ್ರೋಲ್‌ಗೆ ತಗಲುವುದು99.54ರೂ. ಮಾತ್ರ! [ಸಾಗರದ ಬೆಲೆ ಲೀ.ಗೆ ರೂ.50.53ಅನ್ವಯಿಸಲಾಗಿದೆ] ಅಂದರೆ ನೂರು ರೂ. ಪೆಟ್ರೋಲ್ ಹಾಕಿಸಿದಾಗ ಬಂಕ್‌ನವರಿಗೆ ಅನಾಮತ್ತು 46ಪೈಸೆ ಲಾಭ! ಕಮಿಷನ್ ವಗೈರೆಗಳದು ಬೇರೆ ಲೆಕ್ಕ. ಬಂಕ್‌ನಲ್ಲಿ ದಿನವೊಂದಕ್ಕೆ300-600 ಜನ ಹೀಗೆ ‘ಚಿಲ್ಲರೆ’ ಬಿಟ್ಟರೂ 150-200ರೂ. ಉಳಿಯುತ್ತದೆ. ಬಂಕ್ ಮಾಲಿಕ ಪೆಟ್ರೋಲ್ ಬಿಡುವವನಿಗೆ ಸಂಬಳ ಕೊಡದಿದ್ದರೂ ನಡೆಯುತ್ತದೆ!
ಸಾಗರದ ಬಳಕೆದಾರರ ವೇದಿಕೆ ಪೆಟ್ರೋಲಿಯಂ ಸಚಿವಾಲಯಕ್ಕೆ ಪತ್ರ ಬರೆದಿದೆ. ಲೀಟರ್‌ಗೆ ತಗಲುವ ಬೆಲೆಯನ್ನು ‘ರೌಂಡ್ ಅಪ್’ ಮಾಡಿ ಈ ಹೆಚ್ಚುವರಿ ಪೈಸೆಗಳ ಮೊತ್ತವನ್ನು ಗ್ರಾಹಕ ಹಿತರಕ್ಷಣಾ ನಿಧಿಗೆ ಹೋಗುವಂತೆ ನಿರ್ದೇಶಿಸಿ’ ಎಂದು. ಈವರೆಗೆ ಆ ಕ್ರಮ ಜಾರಿಗೊಂಡಿಲ್ಲ. ನಾಗರಿಕ ಹಣ ವ್ಯರ್ಥ ವ್ಯಯವಾಗುತ್ತಿದೆ.
ಒಂದು ಚಿಲ್ಲರೆ ಬುದ್ಧಿವಂತಿಕೆಗೆ ಅವಕಾಶವಿದೆ! ನೂರು ರೂ. ಬದಲು 142ರೂ.ನ ಪೆಟ್ರೋಲ್ ಹಾಕಿಸಿ. 2.81ಲೀ. ಬೆಲೆ ಖಡಕ್ಕಾಗಿ 142ರೂ. ಬಂಕ್‌ನವನಿಗೆ ಅನಾಮತ್ತು ಕೊಡುವ ಪೈಸೆ ಉಳಿಯುತ್ತದೆ. ಬಂಕ್‌ನವನಿಗೆ ಉಳಿಯುವ ಪೆಟ್ರೋಲ್ 0.0002118 ಪ್ರಮಾಣದಲ್ಲಿ!!
ಈ ರೀತಿ ಯಾವ ಮೊತ್ತಕ್ಕೆ ಪರಮಾವಧಿ ಪೆಟ್ರೋಲ್ ಬರುತ್ತದೆಂಬ ಅಂಕಿ ಅಂಶ ಕೈಯಲ್ಲಿಟ್ಟುಕೊಂಡರೆ ಗ್ರಾಹಕರಿಗೆ ಲಾಭ. ಬೆಲೆಯಲ್ಲಿ ಮುಂದೆ ವ್ಯತ್ಯಯಯವಾದರೂ ಈ ಸೂತ್ರ ಗಿಟ್ಟೀತು!
-ಮಾವೆಂಸ

ಭಾನುವಾರ, ಜುಲೈ 12, 2009

ನಮ್ಮ ಈ ಪತ್ರಿಕೆಯನ್ನು ನೋಡಿರುವಿರಾ....?






ಸಾಗರದ ಬಳಕೆದಾರರ ವೇದಿಕೆಯ ನೇತೃತ್ವದಲ್ಲಿ ನಾವು ಸಂಪಾದಿಸುತ್ತಿರುವ ಮಾಸ ಪತ್ರಿಕೆಯಿದು. ಜನರನ್ನು ಜಾಗೃತಗೊಳಿಸುವ ಪುಟ್ಟ ಪ್ರಯತ್ನ. ಒಂದು ಬಾರಿ ಓದಿ. ನಿಮ್ಮ ಪ್ರತಿಕ್ರಿಯೆಯನ್ನು ಕಾತರದಿಂದ ಕಾಯುತ್ತಿರುವೆ.....

ಸೋಮವಾರ, ಜುಲೈ 6, 2009

ವಿಲಿಯಮ್ಸ್.. ವಿಲಿಯಮ್ಸ್... ವಿಲಿಯಮ್ಸ್....




ಬರುವ ವರ್ಷವಾದರೂ ಇಂಗ್ಲೆಂಡಿಗರು ಸಂಪ್ರದಾಯಗಳನ್ನು ಧಿಕ್ಕರಿಸಿ ವಿಂಬಲ್ದನ್‌ನ್ನು ರೂಪಿಸಬೇಕು. ಇಲ್ಲದಿದ್ದರೆ ಅವರಿಗೆ ಟೆಡ್ ಪೆರ್ರಿ ನಂತರ ಮತ್ತೆಂದೂ ಸ್ವದೇಶಿ ವಿಂಬಲ್ಡನ್ ಚಾಂಪಿಯನ್ ಸಿಗಲಾರರು. ಅದೇಕೋ ಏನೋ, ಉಪಾಂತ್ಯದ ಗಡಿಯನ್ನು ಅಲ್ಲಿನ ಗ್ರೆಗ್ ರುಸೆಡೆಸ್ಕಿ ದಾಟಿದ್ದಿಲ್ಲ. ಆಸೆಯ ಅಬ್ಬರವನ್ನೇ ಮೂಡಿಸಿದ್ದ ಟಿಂ ಹೆನ್ಮನ್ ಸ್ಪರ್ಧೆಯ ಕೊನೆಯ ಘಟ್ಟಕ್ಕೆ ಕಾಲಿಡಲೇ ಇಲ್ಲ. ಆ ಸಾಲಿನಲ್ಲಿ ಆಂಡಿ ಮರ್ರೆ ಸಂಪ್ರದಾಯವನ್ನು ಈ ಬಾರಿ ಮುಂದುವರಿಸಬೇಕೆ?
ಮರ್ರೆ ಬಗ್ಗೆ ಭರವಸೆಗಳಿರಲು ಕಾರಣಗಳಿತ್ತು. ೭೧ ವರ್ಷಗಳ ನಂತರ ವಿಂಬಲ್ಡನ್ ಮುನ್ನಿನ ಕ್ವೀನ್ಸ್ ಕ್ಲಬ್ ಗೆದ್ದಿದ್ದು ಈ ಇಂಗ್ಲೆಂಡಿಗ. ಹುಲ್ಲಿನಂಕಣ ಆತನಿಗೆ ಇಷ್ಟ. ಬಹುಷಃ ಆಲ್ ಇಂಗ್ಲೆಂಡ್ ಕ್ಲಬ್ ಅಧಿಕಾರಿಗಳು ಡ್ರಾ ನಿಗದಿಪಡಿಸುವಾಗ ಫೈನಲ್‌ವರೆಗೆ ಮರ್ರೆಗೆ ರೋಜರ್ ಫೆಡರರ್ ಎದುರಾಗದಂತೆ ನೋಡಿಕೊಂಡಿದ್ದರು. ಇವೆಲ್ಲ ತಂತ್ರಗಳೂ ಸಂಪ್ರದಾಯದ ಮುಂದೆ ಮಣಿದುಬಿಟ್ಟಿತು. ಉಪಾಂತ್ಯದವರೆಗೆ ಸಲೀಸಾಗಿ ಮುನ್ನುಗ್ಗಿದ ಮರ್ರೆ ಅಲ್ಲಿ ಆಂಡಿ ರ್‍ಯಾಡಿಕ್‌ರ ಎದುರು ನಾಲ್ಕು ಸೆಟ್‌ಗಳ ಹೋರಾಟದಲ್ಲಿ ಪರಾಭವಗೊಂಡರು. ವಿಂಬಲ್ಡನ್‌ಗೆ ಅಂಟಿಕೊಂಡಂತೆ ಹೆನ್ಮನ್ ಗುಡ್ಡವಿದೆ. ಅಲ್ಲಿ ಬಡಾ ಸ್ಕೃನ್ ಅಳವಡಿಸಿ ಹೆನ್ಮನ್ ಆಡುವ ಪಂದ್ಯಗಳ ನೇರಪ್ರಸಾರ ಮಾಡಲಾಗುತ್ತಿತ್ತು. ಇನ್ನು ಮುಂದೆ ಹೆಚ್ಚೆಂದರೆ ಇಂಗ್ಲೆಂಡಿಗರು ಆ ಗುಡ್ಡದ ಹೆಸರನ್ನು ಮರ್ರೆಗೆ ವರ್ಗಾಯಿಸಬೇಕು ಮತ್ತು ಮರ್ರೆ ಉಪಾಂತ್ಯದವರೆಗೆ ಸಾಗುವುದನ್ನು ನೇರಪ್ರಸಾರ ಮಾಡಿ ಖುಷಿಪಡಬಹುದು!
ಪಂದ್ಯ ಎಂದರೆ ಏನು? ಜಿದ್ದಾಜಿದ್ದಿಯ ಹೋರಾಟ, ಹೊಸ ಹೊಸ ಕೋನಗಳಲ್ಲಿ ಆಟಗಾರರು ಬಾರಿಸುವ ಮನಮೋಹಕ ಹೊಡೆತ ಮತ್ತು ಜೊತೆಜೊತೆಗೆ ಆಟಗಾರರ ಕೋಪ, ನಿಟ್ಟುಸಿರು, ಅಂಕ ಗೆದ್ದ ಠೇಂಕಾರ... ಅವಿಲ್ಲದಿದ್ದರೆ ಪಂದ್ಯ ನೀರಸ. ಬಹುಷಃ ಎರಡು ರೋಬಾಟ್‌ಗಳು ಮನುಷ್ಯನ ತೊಗಲು ಹಚ್ಚಿಕೊಂಡು ಆಡಿದಂತಿರುತ್ತದೆ. ಅಂತಹ ಅನುಭವ ಬೇಕೆನ್ನುವವರು ವಿಲಿಯಮ್ಸ್ ಸಹೋದರಿಯರ ಈ ವರ್ಷದ ವಿಂಬಲ್ಡನ್ ಫೈನಲ್ ನೋಡಬೇಕಿತ್ತು!
ಹಿಂದೆ ತಂದೆ ರಿಚರ್ಡ್ಸ್‌ಗೆ ಇವರಿಬ್ಬರು ಮುಖಾಮುಖಿ ಆಗುವುದನ್ನು ತಪ್ಪಿಸುತ್ತಿದ್ದರು, ಒಂದೊಮ್ಮೆ ಫೈನಲ್‌ನಲ್ಲಿ ಎದುರಾದರೆ ಫಲಿತಾಂಶವನ್ನು ನಿರ್ದೇಶಿಸುತ್ತಿದ್ದರು ಎಂಬ ಆರೋಪವಿತ್ತು. ಇಂದು ಈ ವೀನಸ್ - ಸೆರೆನಾ ಬಾಳಲ್ಲಿ ರಿಚರ್ಡ್ಸ್‌ರ ಪಾತ್ರ ಕಡಿಮೆ. ಆತ ಪತ್ನಿಗೆ ಡೈವೋರ್ಸ್ ನೀಡಿ ಬೇರೆ ಮದುವೆಯಾಗಿದ್ದಾನೆ. ಅಕ್ಕ ತಂಗಿಯರು ಅಮ್ಮ ಓರಾಸಿನೇ ಪ್ರೈಸ್‌ರಿಗೆ ಅಂಟಿಕೊಂಡಿದ್ದಾರೆ. ಆದಾಗ್ಯೂ ಮೊನ್ನಿನ ಫೈನಲ್ ನೋಡಿದಾಗ ಅನಿಸಿದ್ದು, ಸೆರೆನಾರ ಗೆಲುವನ್ನು ಮೊದಲೇ ವಿಲಿಯಮ್ಸ್ ಕುಟುಂಬ ನಿರ್ಧರಿಸಿದಂತಿತ್ತು!
ಸಕಾರಣಗಳಿವೆ. ಸೆರೆನಾ ಸೆಮಿಫೈನಲ್‌ನಲ್ಲಿ ಎಲೆನಾ ಡೆಮೆಂಟಿವಾ ಎದುರು ಸರಿಸುಮಾರು ಮೂರು ತಾಸು ಕಾದಾಡಿ ಗೆದ್ದಿದ್ದರು. ಅದರ ಸುಸ್ತು ಫೈನಲ್‌ನಲ್ಲಿ ಪ್ರತಿಫಲಿಸಬೇಕಿತ್ತು. ಅತ್ತ ಅಕ್ಕ ವೀನಸ್ ನಿರಾಯಾಸವಾಗಿ ಅಗ್ರಕ್ರಮಾಂಕಿತೆ ದಿನಾರಾ ಸಫಿನಾರನ್ನು ಬಗ್ಗುಬಡಿದಿದ್ದರು. ಮುಖ್ಯವಾಗಿ, ಅಲ್ಲಿ ಅವರು ತೋರಿದ ಆಟ ಅತ್ಯದ್ಭುತ. ಅದರ ಅರ್ಧ ಭಾಗವನ್ನು ಫೈನಲ್‌ಗೆ ಎತ್ತಿಟ್ಟಿದ್ದರೂ ಅವರೇ ಗೆಲ್ಲುತ್ತಿದ್ದರು. ಸದರಿ ಪಂದ್ಯದುದ್ದಕ್ಕೂ ಸಹೋದರಿಯರು ತೋರಿದ ಶುಷ್ಕ ಭಾವ, ‘ಎಕ್ಸ್ಟ್ರಾ’ ಶ್ರಮ ಹಾಕದ ವರ್ತನೆ ಅನುಮಾನಗಳನ್ನು ಹೆಚ್ಚಿಸುತ್ತದೆ.
ವಿಂಬಲ್ಡನ್‌ನಲ್ಲಿ ವೀನಸ್‌ರಿಗೆ ಐದು ಪ್ರಶಸ್ತಿಗಳಿವೆ. ಸೆರೆನಾ ಬಳಿಯಿದ್ದುದು ಬರೀ ಎರಡು. ಅಲ್ಲೊಂದು ಖಾಜಿ ನ್ಯಾಯ ಮಾಡಲು ವಿಲಿಯಮ್ಸ್ ಕುಟುಂಬ ಪ್ರಯತ್ನಿಸಿವೆಯೇ? ಅಂತಹ ಅನುಮಾನಗಳಿಗೆ ಅವಕಾಶವಿದೆ. ಈ ಹಿಂದೆ ಕ್ರಿಕೆಟ್‌ನಲ್ಲಿ ಮ್ಯಾಚ್‌ಫಿಕ್ಸಿಂಗ್ ಆರೋಪಗಳು ಬಂದಾಗಲೂ ಅದನ್ನು ಸಿನಿಕತನ ಎಂದು ತಳ್ಳಿಹಾಕಿದವರಿದ್ದರು. ಕೊನೆಗೆ ಅವಘಡ ಬಯಲಾಗಿತ್ತು. ಇಲ್ಲೂ ಹಾಗಾಗುತ್ತಿದೆಯೇ?
ಹಾಗೆಂದ ಮಾತ್ರಕ್ಕೆ ಸೆರೆನಾ ವಿಲಿಯಮ್ಸ್‌ರ ಪ್ರತಿಭೆಯ, ಸಾಮರ್ಥ್ಯದ ಬಗ್ಗೆ ಎರಡು ಮಾತಿಲ್ಲ. ಅಕ್ಕ ವೀನಸ್‌ರಿಗಿಂತ ಹೆಚ್ಚು ಪ್ರಖರ ತಾಕತ್ತು ಸೆರೆನಾಗಿದೆ ಎಂಬುದನ್ನು ಖುದ್ದು ರಿಚರ್ಡ್ಸ್ ಹೇಳಿದ್ದಿದೆ. ಆಕೆ ಇದೂ ಸೇರಿ ಹನ್ನೊಂದು ಗ್ರಾನ್‌ಸ್ಲಾಂ ಸಿಂಗಲ್ಸ್ ಗೆದ್ದಿರುವುದೂ ಸಾಕ್ಷಿಯಾದೀತು. ಅಕ್ಕನೆದುರು ಆಡಿದ ೨೧ ಪಂದ್ಯಗಳಲ್ಲಿ ೧೧ ಪಂದ್ಯ ಗೆದ್ದದ್ದು ಒಂದೆಡೆಯಾದರೆ, ಗ್ರಾನ್‌ಸ್ಲಾಂ ಫೈನಲ್‌ನ ಆರು ಮುಖಾಮುಖಿಯಲ್ಲಿ ನಾಲ್ಕು ಬಾರಿ ವಿಜೇತೆಯಾಗಿದ್ದಾರೆ. ಸ್ವಾರಸ್ಯವೆಂದರೆ, ೧೨೩ನೇ ವಿಂಬಲ್ಡನ್ ಸಂಚಿಕೆಯಲ್ಲಿ ಹಾಲಿ ಚಾಂಪಿಯನ್ ವೀನಸ್ ತಮ್ಮದೇ ಹೆಸರಿನ ‘ವೀನಸ್ ರೋಸ್ ವಾಟರ್ ಡಿಶ್’ ಟ್ರೋಫಿ ಗೆಲ್ಲಲು ವಿಫಲರಾದರು!
ಸಿಂಗಲ್ಸ್ ಅನುಮಾನಗಳೇನೇ ಇರಲಿ, ಇವರಿಬ್ಬರು ಒಟ್ಟಾಗಿ ಡಬಲ್ಸ್ ಆಡಿದರೆ ಎದುರಾಳಿಗಳು ಅಕ್ಷರಶಃ ತತ್ತರ. ಶೇ. ೮೭ರ ಗೆಲುವಿನ ಸಾಧನೆ ಸಾಮಾನ್ಯವೇ? ಒಟ್ಟು ಒಂಬತ್ತು ಡಬಲ್ಸ್ ಹಾಗು ಎರಡು ಮಿಕ್ಸೆಡ್ ಡಬಲ್ಸ್ ಸ್ಲಾಂ ಗೆದ್ದಿದ್ದಾರೆ. ಅದು ಈ ಬಾರಿಯ ವಿಂಬಲ್ಡನ್‌ನ ಚಿತ್ರಕಥೆ ಕೂಡ. ಇವರಿಗೆ ಮೂರನೇ ಶ್ರೇಯಾಂಕ ಕೊಟ್ಟಿದ್ದು ಅದಾವುದೋ ವಾರ್ಷಿಕ ಅಂಕಿಅಂಶದ ಮೇಲೆ. ಅಲ್ಲೂ ಇವರದ್ದು ಅದ್ವಿತೀಯ ಗೆಲುವು. ಅದಕ್ಕೇ ಶೀರ್ಷಿಕೆಯಲ್ಲಿ ಹೇಳಿದ್ದು, ವಿಲಿಯಮ್ಸ್.. ವಿಲಿಯಮ್ಸ್... ವಿಲಿಯಮ್ಸ್....!
ಜಸ್ಟಿನ್ ಹೆನಿನ್‌ರ ನಿವೃತ್ತಿಯಿಂದ ಮಹಿಳಾ ಟೆನಿಸ್‌ಗೆ ತೀವ್ರ ಧಕ್ಕೆಯಾಗಿದೆ. ಹೆನಿನ್ ವಿಲಿಯಮ್ಸ್ ಸಹೋದರಿಯರ ಸವಾಲಿಗೆ ತಕ್ಕ ಉತ್ತರ ನೀಡುತ್ತಿದ್ದರು. ಅವರ ಫಲಿತಾಂಶಗಳಿಂದ ಪ್ರೇರಿತರಾದ ಉಳಿದ ಆಟಗಾರ್ತಿಯರು ಸೆರೆನಾ ವೀನಸ್‌ರನ್ನು ಆತ್ಮವಿಶ್ವಾಸದಿಂದ ಎದುರಿಸುತ್ತಿದ್ದರು. ಬಹುಷಃ ಅಗ್ರಕ್ರಮಾಂಕಿತೆಯಾಗಿ ದಿನಾರಾ ಉಪಾಂತ್ಯದಲ್ಲಿ ವೀನಸ್ ಎದುರು ಪರಾಭವಗೊಂಡ ರೀತಿ, ಮಾರಿಯಾ ಶರಪೋವಾ, ಜೆಲೆನಾ ಜಾಂಕೋವಿಕ್‌ರ ಮುಗ್ಗರಿಸುವಿಕೆ ಒಳ್ಳೆಯ ಸಂದೇಶ ನೀಡುತ್ತಿಲ್ಲ. ಅಚಾನಕ್ ಆಗಿ ನಿವೃತ್ತಿ ಘೋಷಿಸಿದ್ದ ಕಿಂ ಕ್ಲಿಸ್ಟರ್‍ಸ್ ಮತ್ತೆ ರ್‍ಯಾಕೆಟ್ ಝಳಪಿಸಲಾರಂಭಿಸಿದ್ದಾರೆ. ಅವರ ಸಮಕಾಲೀನೆಯಾಗಿ ಜಸ್ಟಿನ್ ಹೆನಿನ್ ಕೂಡ ಉತ್ತೇಜಿತರಾಗಿ ವೃತ್ತಿಪರ ಟೆನಿಸ್‌ಗೆ ಮರಳಿ ಬಂದರೆ ಚೆನ್ನ. ಆದೀತೆ? ಅಷ್ಟಕ್ಕೂ ಹೆನಿನ್‌ಗಿನ್ನೂ ೨೭ ವರ್ಷ. ವೀನಸ್‌ಗಾಗಲೆ ೨೯!
ಗೊತ್ತಿಲ್ಲ. ಅಲ್ಲಿಯತನಕ ವಿಲಿಯಮ್ಸ್ ಸಹೋದರಿಯರ ಪ್ರಾಬಲ್ಯಕ್ಕೆ ಸಾಕ್ಷಿಯಾಗಬೇಕು.

-ಮಾವೆಂಸ

 
200812023996