ಭಾನುವಾರ, ನವೆಂಬರ್ 29, 2009

ತಂಗಳು ಅಲ್ಲದ ‘ತಿಂಗಳು’

ವಾರಕ್ಕೊಮ್ಮೆ..........
ಒಂದು ಪ್ರಯೋಗ ಮಾಡುವ ಆಸೆ. ಕನ್ನಡ ಪತ್ರಿಕಾ ಕ್ಷೇತ್ರದ ಹಲಕೆಲವು ಪತ್ರಿಕೆಗಳ ಪರಿಚಯ ಮಾಡುವ ಯೋಚನೆಯ ಫಲಶ್ರುತಿ ಇದು. ಅದರ ಮೊದಲ ಕಂತು ಇಲ್ಲಿದೆ. ಪ್ರತಿ ಭಾನುವಾರ ಹೊಸ ಅಪ್‌ಲೋಡ್ ಮಾಡುವ ಲೆಕ್ಕಾಚಾರದಿಂದ ಆರಂಭಿಸಿರುವೆ. ಮುಖ್ಯವಾಗಿ, ಉತ್ತಮವಾಗಿದ್ದ್ದೂ ಕನ್ನಡದ ಬಹುಪಾಲು ಓದುಗರಿಗೆ ಪರಿಚಯವಿಲ್ಲದ ಪತ್ರಿಕೆಗಳಿಗೆ ಆದ್ಯತೆ ಕೊಟ್ಟು ಬರೆಯುವೆ. ನಮ್ಮೂರಿನ ‘ವೀಣಾ ಸ್ಮಾರಕ ಮಾವಿನಮನೆ ವಾಚನಾಲಯ’ಕ್ಕೆ ಹೆಚ್ಚಿನ ಪತ್ರಿಕೆಗಳು ಬರುತ್ತಿವೆ ಎಂಬುದು ಬರೆಯಲು ಧೈರ್ಯ ಕೊಟ್ಟಿದೆ. ನನ್ನ ಬ್ಲಾಗ್ ಓದುಗರೇ, ನಿಮ್ಮೆಲ್ಲ ಮಿತ್ರರಿಗೆ ಈ ಬರಹಗಳ ಲಿಂಕ್ ಕಳಿಸಿಕೊಡಲು ವಿನಂತಿಸುವೆ. ಈ ಮೂಲಕ ಆ ಪತ್ರಿಕಾ ಪ್ರಯತ್ನಗಳಿಗೆ ಬೆಂಬಲ ನೀಡೋಣ. ಆಗದೇ?
-ಮಾವೆಂಸ


ಮೂರು ತಿಂಗಳ ಹಿಂದಿನ ಮಾತು. ಬಹುಷಃ ಹೊನ್ನಾವರದಿಂದ ಪ್ರಕಟಗೊಳ್ಳುವ ‘ನಾಗರಿಕ’ ವಾರಪತ್ರಿಕೆಯಲ್ಲಿ ಓದಿದ ನೆನಪು ಎಂದು ಕಾಣುತ್ತದೆ. ಅದರಲ್ಲಿ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರರು ಮೈಸೂರಿನಿಂದ ಪ್ರಕಟಗೊಳ್ಳುವ ಪತ್ರಿಕೆಯೊಂದರ ಬಗ್ಗೆ ಸ್ತುತಿಸಿ ಬರೆದಿದ್ದರು. ಹೆಬ್ಬಾರರು ಮೆಚ್ಚಿರುವರೆಂದರೆ ಅದರಲ್ಲಿ ತಥ್ಯವಿರಲೇಬೇಕು ಎನಿಸಿತು. ಸುದ್ದಿಯ ಜೊತೆಗಿದ್ದ ಮೊಬೈಲ್ ನಂಬರ್‌ಗೆ ಫೋನ್ ಮಾಡಿದೆ. ವಾರವೊಪ್ಪತ್ತಿನಲ್ಲಿ ನನ್ನ ಕೈ ಸೇರಿತ್ತು ‘ತಿಂಗಳು’
ನಿಜ, ಪತ್ರಿಕೆಯ ಹೆಸರು ಶಾನೆ ವಿಚಿತ್ರ. ಮಾಸಪತ್ರಿಕೆಯ ಅನ್ವರ್ಥನಾಮವೇ ಅದರ ಹೆಸರೂ ಕೂಡ ಆಗಿದೆ ಇಲ್ಲಿ. ಪತ್ರಿಕೋದ್ಯಮದಲ್ಲಿ, ಪ್ರಮುಖವಾಗಿ ಪ್ರಜಾವಾಣಿಯಲ್ಲಿ ದುಡಿದ ಜಿ.ಪಿ.ಬಸವರಾಜು ‘ತಿಂಗಳು’ ಸಂಪಾದಕರು. ಅವರ ಸಂಪರ್ಕ ಅಗಾಧವಾಗಿದೆ ಎಂಬುದಕ್ಕೆ ಬರೀ ನಾಲ್ಕು ಸಂಚಿಕೆಗಳನ್ನಷ್ಟೇ ಕಂಡರೂ ಖ್ಯಾತ ಬರಹಗಾರರ ಬಳಗವೇ ಬರೆಯುತ್ತಿರುವುದನ್ನು ಸಾಕ್ಷಿಯಾಗಿ ಹೇಳಬಹುದು. ‘ಮಲ್ಲಿಗೆ’ ಮಾಸಪತ್ರಿಕೆಯ ಆಕಾರ, ವಿನ್ಯಾಸವನ್ನು ಇದು ತುಸು ಹೋಲುತ್ತದೆ. ತಿಂಗಳ ಹೂರಣ ಮಾತ್ರ ಅದಕ್ಕಿಂತ ಹೆಚ್ಚು ಗಟ್ಟಿ. ಅದರಲ್ಲಿ ಬರೆದಿರುವ ಕೆಲವು ಲೇಖಕರ ಹೆಸರನ್ನು ಮಾತ್ರ ಬರೆದು ಇತರರಿಗೆ ಅಗೌರವ ಮಾಡುವುದು ಬೇಡ. ಗಂಭೀರ ಸಾಹಿತ್ಯ ಓದುವ ಕನಸು ಕಾಣುವವರು ೧೬೪ ಪುಟಗಳ ಈ ಮಾಸಿಕವನ್ನು ಓದಲೇಬೇಕು. ಅಷ್ಟಕ್ಕೂ ಬಿಡಿ ಪ್ರತಿ ಬೆಲೆ ಕೇವಲ12 ರೂ.
ಈ ತರದ ಪತ್ರಿಕೆಗಳಲ್ಲಿ ‘ತುಷಾರ’ವನ್ನು ಹೊರತುಪಡಿಸಿ ‘ಮಯೂರ’ ಹೊಸ ಉತ್ಸಾಹದಿಂದ ಪ್ರಕಟಗೊಳ್ಳುತ್ತಿದೆ. ಅದರ ಪುಟ ವಿನ್ಯಾಸವಂತೂ ಭವ್ಯವಾಗಿದೆ. ಆ ಮಟ್ಟಿಗೆ ‘ತಿಂಗಳು’ ಪ್ರಯತ್ನವೂ ಸಣ್ಣದಲ್ಲ. ಆರಂಭವಾಗಿ ಅರ್ಧ ವರ್ಷವೂ ಕಳೆಯದಿರುವ ಕ್ಲುಪ್ತ ಅವಧಿಯಲ್ಲಿ ಅದರದು ಗಮನ ಸೆಳೆಯುವ ಪ್ರಯತ್ನ. ಎರಡೂವರೆ ಸಹಸ್ರ ಪ್ರಥಮ ಬಹುಮಾನದ ಕಥಾ ಸ್ಪರ್ಧೆಯನ್ನು ಪ್ರತಿ ತಿಂಗಳೂ ನಡೆಸುವಂತ ಸಾಹಸಕ್ಕೂ ತಿಂಗಳು ಅಡಿಯಿಟ್ಟಿದೆ.
ತಿಂಗಳು ಬೇಕೆನ್ನುವವರು ಮೊಬೈಲ್ ಸಂಖ್ಯೆ 9980560013ಕ್ಕೆ ಕರೆ ಮಾಡಿ. ವಾರ್ಷಿಕ ಚಂದಾ 150ರೂಪಾಯಿಯನ್ನು ಸಂಪಾದಕರು, ತಿಂಗಳು, ಅಭಿರುಚಿ ಪ್ರಕಾಶನ., 386,14ನೇ ಮುಖ್ಯ ರಸ್ತೆ, 3ನೇ ಕ್ರಾಸ್, ಸರಸ್ವತೀ ಪುರಂ, ಮೈಸೂರು-570009ಕ್ಕೆ ತಲುಪಿಸಬಹುದು.
ಕೊನೆಮಾತು - ಈ ವ್ಯಾವಹಾರಿಕ ದಿನಗಳಲ್ಲಿ ‘ತಿಂಗಳು’ವಿನ ಇನ್ನೊಂದು ಒಳ್ಳೆಯತನವನ್ನು ನೆನೆಯಲೇಬೇಕು. ಈ ಪತ್ರಿಕೆ ನಮ್ಮಲ್ಲಿನ ಸ್ಥಳೀಯ ಅಂಗಡಿಗಳಲ್ಲಿ ಲಭ್ಯವಾಗುತ್ತಿಲ್ಲ. ಇದನ್ನು ತಿಳಿಸಿದ ತಕ್ಷಣ ನನಗೆ ಅಂಚೆಯಲ್ಲಿ ಪತ್ರಿಕೆ ಬರಲಾರಂಭಿಸಿದೆ. ಅನಿವಾರ್ಯ ಕಾರಣಗಳಿಂದಾಗಿ ಇಂದಿಗೂ ಚಂದಾ ತಲುಪಿಸಲಾಗಿಲ್ಲ. ಊಹ್ಞೂ, ಪತ್ರಿಕೆ ಬರುವುದು ಮಾತ್ರ ನಿಂತಿಲ್ಲ. ಈ ವಿಶ್ವಾಸ ದೊಡ್ಡದು. ತಡವಾಗಿಯಾದರೂ ಚಂದಾ ಕಳುಹಿಸುವೆ. ಆದರೆ ನೀವು ಮಾತ್ರ ನನ್ನಂತೆ ಮಾಡದಿರಿ. ಚಂದಾವನ್ನು ಕಳಿಸಿ ಒಂದು ಒಳ್ಳೆಯ ಪತ್ರಿಕೆಯನ್ನು ಬೆಂಬಲಿಸಿ.
-ಮಾ.ವೆಂ.ಸ.ಪ್ರಸಾದ್
ಮಾವಿನಸರ
ಪೋಸ್ಟ್-ಎಡಜಿಗಳೇಮನೆ
ಸಾಗರ ತಾ. ಶಿವಮೊಗ್ಗ ಜಿ.
577401
ಫೋನ್-08183 236068, 296543
9886407592
ಇ ಮೇಲ್- mavemsa@gmail.com



ಸೋಮವಾರ, ನವೆಂಬರ್ 23, 2009

ಸಚಿನ್- ಬಹುಪರಾಕ್, ಬಹುಪರಾಕ್!



ಸಚಿನ್ ರಮೇಶ್ ತೆಂಡೂಲ್ಕರ್ ತಮ್ಮ ಕ್ರಿಕೆಟ್ ಕ್ಯಾರಿಯರ್‌ನ ೨೦ ವಸಂತಗಳನ್ನು ಪೂರೈಸುತ್ತಿದ್ದಂತೆ ಪುಂಖಾನುಪುಂಖವಾಗಿ ಅವರನ್ನು ಶ್ಲಾಘನೆಗಳಿಂದ ಅಭಿಷೇಕಗೈಯುವ ಮಾಧ್ಯಮಪ್ರಚಾರ ಜಾರಿಯಲ್ಲಿದೆ. ಹತ್ತಿರಹತ್ತಿರ ಏಳೂವರೆ ಸಾವಿರ ದಿನಗಳಿಂದ ನಿರಂತರವಾಗಿ ಅಂತರ್ರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವವನ ದೇಹ, ಮನಸ್ಸು ಜರ್ಜರಿತಗೊಳ್ಳಬೇಕಿತ್ತು. ಆದರೆ ಸಚಿನ್ ಉಸಿರಾಡುತ್ತಿರುವುದೇ ಕ್ರಿಕೆಟ್‌ನ್ನು. ಉಸಿರಾಟದಿಂದಾಗಿ ಸುಸ್ತಾದ ಮನುಷ್ಯ ಯಾರೂ ಇಲ್ಲವಲ್ಲ! ಮೊನ್ನೆ ಮೊನ್ನೆ ಆಸ್ಟ್ರೇಲಿಯಾದೆದುರು ಏಕದಿನ ಪಂದ್ಯದಲ್ಲಿ ಗಳಿಸಿದ ೧೭೫ ರನ್, ನಿನ್ನೆ ಶ್ರೀಲಂಕಾದೆದುರು ಟೆಸ್ಟ್‌ನಲ್ಲಿ ಗಳಿಸಿದ ೪೩ನೇ ಶತಕ... ಬಿಡಿ, ಅಂಕಿಅಂಶಗಳಲ್ಲಿ ಸಚಿನ್ ಪರಾಕ್ರಮ ವಿವರಿಸಲು ‘ರಾಮಾಯಣ’ ಗ್ರಂಥದುದ್ದಕ್ಕೂ ಬರೆಯಬೇಕಾದೀತು!!
ಇಲ್ಲಿ ಅಂಕಿಅಂಶ, ದಾಖಲೆ, ಸಾಧನೆಗಳ ಗೋಜಿಗೆ ಹೋಗುತ್ತಿಲ್ಲ. ಸುಮ್ಮನೆ ಸಚಿನ್‌ರ ಕ್ರಿಕೆಟ್ ಬದುಕಿನಲ್ಲಿ ಓಡಾಡಿ ಹಲವು ಘಟನೆಗಳನ್ನು ಸಂಗ್ರಹಿಸಿದೆ. ಬರೀ ರನ್, ಧನ ಸಂಪಾದನೆಯಲ್ಲಿ ಅಲ್ಲದೆ ನಡೆನುಡಿಯಲ್ಲೂ ಸಚಿನ್ ಮಾದರಿಯಾಗುವಂತವರು. ಅವರಂತ ವ್ಯಕ್ತಿ ಇರುವುದರಿಂದಲೇ ನಮ್ಮ ದೇಶದ ಕಿಮ್ಮತ್ತು ನಿಸ್ಸಂಶಯವಾಗಿ ಜಾಸ್ತಯಾಗಿದೆ. ಇಲ್ಲಿ ಆಯ್ದ ವಿಶೇಷ ಪ್ರಸಂಗಗಳನ್ನು ನೀವೂ ಸವಿದು ಚಪ್ಪರಿಸಿ.
ರಾತ್ರಿ ಬ್ಯಾಟಿಂಗ್!
೧೯೮೯ರ ಪಾಕಿಸ್ತಾನದ ಪ್ರವಾಸ. ಸಚಿನ್ ತೆಂಡೂಲ್ಕರ್‌ಗೆ ಅದು ಚೊಚ್ಚಲ ಅಂತರ್ರಾಷ್ಟ್ರೀಯ ಅನುಭವ. ಸಿಯಾಲ್‌ಕೋಟ್ ಟೆಸ್ಟ್‌ನ ಹಿಂದಿನ ರಾತ್ರಿ. ಮರುದಿನ ಬೆಳಿಗ್ಗೆ ಸಚಿನ್‌ರಿಗೆ ತಂಡದ ಹಿರಿಯರಿಂದ ಎರಡು ಬ್ಯಾಟ್ ಸಿಗುವುದಿತ್ತು. ತಂಡಕ್ಕೆ ಆಯ್ಕೆ ಆದರೂ ಅಚ್ಚರಿಯಿರಲಿಲ್ಲ. ಹಾಗೊಂದು ಯೋಚನೆ ಹೊತ್ತೇ ಸಚಿನ್ ಹೋಟೆಲ್ ರೂಂನ ಹಾಸಿಗೆ ದಿಂಬಿಗೆ ತಲೆ ಕೊಟ್ಟರು. ಹೇಳಿ ಕೇಳಿ ಸಚಿನ್ ‘ಬೇಗ ಮಲಗಿ ಬೇಗ ಏಳು’ ಮಾಡೆಲ್! ಒಂದೆರಡು ತಾಸು ಕಳೆದಿರಬಹುದು. ತಂಡದ ಕೆಲವರು ಇನ್ನೂ ಕಾರಿಡಾರ್‌ನಲ್ಲಿ ಆರಾಮವಾಗಿ ಮಾತನಾಡಿಕೊಂಡಿದ್ದರು. ಇದ್ದಕ್ಕಿದ್ದಂತೆ ಸಚಿನ್ ಕೊಠಡಿಯಿಂದ ಹೊರಬಂದರು. ಅಲ್ಲಿದ್ದ ಸಹ ಆಟಗಾರರಲ್ಲಿ ಬ್ಯಾಟ್ ಬಗ್ಗೆ ವಿಚಾರಿಸಿದರು. ಬೆಳಗಾಯಿತು ಎಂದುಕೊಂಡರೇನೋ? ಛೆ, ಆಗಿನ್ನೂ ಮಟಮಟ ರಾತ್ರಿ ಹನ್ನೊಂದೂವರೆ. ‘ಬ್ಯಾಟ್ ಬರುತ್ತೆ. ಚಿಂತೆ ಬೇಡ. ಮಲಕ್ಕೋ ಹೋಗಪ್ಪ’ ಎಂದು ಹಿರಿಯ ಆಟಗಾರರು ಸಚಿನ್‌ರನ್ನು ಮರಳಿ ಕೊಠಡಿಗೆ ಕಳಿಸಿದರು. ಅಕ್ಷರಶಃ ದಬ್ಬಿದರು ಎಂದರೂ ಸರಿ.
ಇಲ್ಲ, ರಾತ್ರಿ ರಾತ್ರಿಯೇ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುವ ತರದೂದು ಇರಲಿಲ್ಲ. ಅಷ್ಟಕ್ಕೂ ಸಚಿನ್‌ರಿಗಾಗ ಕಾಡಿದ್ದು ಇನ್ಸೋಮ್ನಿಯಾ, ರಾತ್ರಿ ನಿದ್ರಾನಡಿಗೆ!
ಕೈ ಕೊಟ್ಟ ಫಾರಂ!
ಒಂದು ಪೂರ್ವಭಾವಿ ಶಿಬಿರ. ಚೆನ್ನೈನಲ್ಲಿ. ಇಂಗ್ಲೆಂಡ್ ವಿಶ್ವಕಪ್‌ಗೆ ಮುನ್ನ. ಆಸ್ಟ್ರೇಲಿಯಾದ ಖ್ಯಾತ ಆಟಗಾರ ಹಾಗೂ ಭಾರತದ ಅಂದಿನ ಕೋಚ್ ಬಾಬ್ ಸಿಂಪ್ಸನ್ ನೇತೃತ್ವ ವಹಿಸಿದ್ದರು. ಆ ಸಂದರ್ಭದಲ್ಲಿ ನೆಟ್ಸ್‌ನಲ್ಲಿ ಹರ್ಭಜನ್ ಸಿಂಗ್ ತುಂಬಾ ಹತ್ತಿರದಿಂದ ತೆಂಡೂಲ್ಕರ್‌ಗೆ ಬೌಲ್ ಮಾಡುತ್ತಿದ್ದರು. ಅದೂ ಟೆನಿಸ್ ಬಾಲ್‌ನಿಂದ. ಸಚಿನ್ ಎದುರಿಸಿದ ಐದು ಎಸೆತಗಳಲ್ಲಿ ಒಮ್ಮೆ ಬೀಟ್ ಆದರು. ಹೇ, ಸಚಿನ್‌ರ ಫಾರಂ ಕೈಕೊಟ್ಟಿದೆ ಬಿಡಿ, ಅದಕ್ಕೇ ‘ಮಿಸ್’ ಆಗಿದ್ದು ಅಂತ ಮಾತ್ರ ಅನ್ನುವಂತಿಲ್ಲ. ಅವತ್ತು ಸಚಿನ್ ಬ್ಯಾಟ್ ಆಗಿ ಬಳಸಿದ್ದು ಒಂದು ಸ್ಟಂಪ್‌ನ್ನು!
ಬದಲಿ ಕೀಪರ್ ಯಾರು?
ಪಂದ್ಯವೊಂದರಲ್ಲಿ ಹೀಗಾಗುತ್ತದೆಯೆಂದು ಊಹಿಸಿಕೊಳ್ಳಿ. ಹರ್ಭಜನ್‌ರ ಎಸೆತವೊಂದು ಪಿಚ್‌ನ ರಫ್‌ಗೆ ಬಿದ್ದು ಅಚಾನಕ್ ಎಗರುತ್ತದೆ. ಬ್ಯಾಟ್‌ನಿಂದ ತಪ್ಪಿಸಿಕೊಂಡ ಅದು ಅಷ್ಟೇ ಆಕಸ್ಮಿಕವಾಗಿ ವಿಕೆಟ್ ಕೀಪರ್ ಧೋನಿಯವರ ಮುಖಕ್ಕೆ ಅಪ್ಪಳಿಸುತ್ತದೆ. ಅವರು ಕೀಪಿಂಗ್ ಮುಂದುವರೆಸುವ ಸ್ಥಿತಿಯಲ್ಲಿಲ್ಲ. ಹಾಗಾದರೆ ಬದಲಿ ವಿಕೆಟ್ ಕೀಪರ್ ಯಾರಾದಾರು? ಯುವರಾಜ್ ಸಿಂಗ್, ರೈನಾ, ಗೌತಮ್ ಗಂಭೀರ್... ಹೇಳಿ, ಯಾರು?
ಖ್ಯಾತ ಕ್ರಿಕೆಟ್ ಅಂಕಣಕಾರ, ಭಾರತೀಯ ಕ್ರಿಕೆಟ್‌ನ ಸಂಪರ್ಕಾಧಿಕಾರಿಗಳೂ ಆಗಿದ್ದ ಅಮೃತ್ ಮಾಥುರ್‌ರ ಪ್ರಕಾರ, ಸಚಿನ್ ತೆಂಡೂಲ್ಕರ್! ಏಕೆಂದರೆ ಈವರೆಗೆ ಸಚಿನ್ ತಮ್ಮ ಜಾದೂವನ್ನು ಪ್ರದರ್ಶಿಸದೆ ಬಿಟ್ಟಿರುವುದು ಈ ಸ್ಥಾನದಲ್ಲಿ ಮಾತ್ರ. ಇಲ್ಲೂ ಒಂದು ಕೈ ನೋಡಲಿ ಅಲ್ಲವೇ?
ಬಿಟ್ಟದ್ದು ಬೈಕೋ, ರೈಲೋ?
ಎಳೆಯ ಸಚಿನ್‌ರ ಮೊತ್ತಮೊದಲ ಜಾಹೀರಾತು ಶೂಟಿಂಗ್ ಇದ್ದುದೇ ಬೈಕ್ ಮೇಲೆ, ೧೯೯೦ರಲ್ಲಿ. ಅದನ್ನು ಓಡಿಸುವ ಸನ್ನಿವೇಶವನ್ನು ಚಿತ್ರೀಕರಿಸಬೇಕಿತ್ತು. ರಸ್ತೆಯ ಮೇಲೆಯೇ ಶೂಟಿಂಗ್ ಮಾಡಬಹುದಾದುದನ್ನು ಇದ್ದಕ್ಕಿದ್ದಂತೆ ರದ್ದು ಮಾಡಿ ಹೈದರಾಬಾದ್‌ನ ಸ್ಟೇಡಿಯಂ ಒಳಗೆ ಚಿತ್ರೀಕರಿಸಲಾಯಿತು. ಅಲ್ಲೇ ರಸ್ತೆಯ ಮಾದರಿಯ ಸೃಷ್ಟಿ. ‘ಪಸಂದಾಗಿದೆ ಬೈಕು’ ಎಂದು ಸಚಿನ್ ನಮಗೆಲ್ಲ ಶಿಫಾರಸು ಮಾಡುವ ದೃಶ್ಯ. ಯಾಕಿಂಗಪ್ಪಾ ಎಂದರೆ ಸಚಿನ್‌ರಿಗಾಗ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ. ಕೊಡೋಣ ಎಂದರೂ ಅವರಿಗಿನ್ನೂ ೧೮ ವರ್ಷವಾಗಿರಲಿಲ್ಲ. ಅವತ್ತಿಗೆ ಬಿಡಲೂ ಬರುತ್ತಿರಲಿಲ್ಲ. ಅಂದರೆ ‘ನನಗಿದು ಇಷ್ಟದ ಬೈಕ್’ ಎಂದು ಸಚಿನ್ ಬಿಟ್ಟದ್ದು ರೈಲು!
ಸಚಿನ್ ಔಟ್!
ಮುಂಬೈಕರ್‌ನ ಬ್ಯಾಟಿಂಗ್ ಪ್ರತಿಭೆಯ ಬಗ್ಗೆ ಎರಡು ಮಾತಿರಲು ಸಾಧ್ಯವಿಲ್ಲ. ಕೆಲವರು ಹೇಳುವಂತೆ ಸಚಿನ್‌ರಿಗೆ ತಾವು ಎದುರಿಸುವ ಪ್ರತಿ ಚೆಂಡಿಗೆ ಎರಡು ವಿಧದ ಹೊಡೆತಗಳನ್ನು ಕ್ರಿಯೇಟ್ ಮಾಡುವ ಸಾಮರ್ಥ್ಯವಿದೆ. ಅದು ಸರಿ, ಹಾಗಿದ್ದರೂ ಸಚಿನ್ ಔಟಾಗುವುದಾದರೂ ಹೇಗೆ? ಹೀಗೆಂದು ಕುಹಕಿಗಳು ಪ್ರಶ್ನೆ ಕೇಳಿದರೆ ಆ ಕೆಲವರ ಉತ್ತರ ನೇರ ನೇರ - ಅಯ್ಯಾ, ಈ ಸಚಿನ್ ಆ ಎರಡೂ ಹೊಡೆತ ಬಿಟ್ಟು ಮೂರನೆಯ ಮಾದರಿಯನ್ನು ಪ್ರಯೋಗಿಸಲು ಪ್ರಯತ್ನಿಸುವುದರಿಂದ!!
ಮುಯ್ಯಿ!
ಹದಿನಾರು ವರ್ಷಗಳ ಹಿಂದಿನ ನೆನಪು. ಭರ್ಜರಿ ಬಿಸಿಲಿನ ಮಧ್ಯಾಹ್ನ. ವಾಂಖೆಡೆ ಸ್ಟೆಡಿಯಂನಲ್ಲಿ ನಡೆಯುತ್ತಿದ್ದದು ಇರಾನಿ ಕಪ್. ಹದಿನಾರೇ ವರ್ಷದ ಸಚಿನ್‌ಗೂ ಅದು ಚೊಚ್ಚಲ ಇರಾನಿ.
ತೆಂಡೂಲ್ಕರ್ ಬ್ಯಾಟ್ ಬೀಸುತ್ತಿದ್ದರು. ಆದರೇನು? ಅವರ ಶತಕಕ್ಕೆ ಕೇವಲ ಹನ್ನೊಂದು ರನ್ ಬೇಕು ಎನ್ನುವಾಗ ತಂಡದ ಒಂಭತ್ತನೇ ಬ್ಯಾಟ್ಸ್‌ಮನ್‌ನ್ನೂ ಔಟಾಗಿದ್ದ. ತಂಡ ಇನ್ನಿಂಗ್ಸ್ ಮುಗಿಸಲೇಬೇಕಾದ ಸ್ಥಿತಿ. ಇನ್ನೊಬ್ಬ ಆಟಗಾರ ಗುರುಶರಣ್ ಸಿಂಗ್ ಬ್ಯಾಟ್ ಮಾಡುವ ಸ್ಥಿತಿಯಲ್ಲಿರಲಿಲ್ಲ. ಅವರ ಬಲಗೈಯ ಪೂರ್ಣಭಾಗಕ್ಕೆ ಪ್ಲಾಸ್ಟರ್ ಹಾಕಲಾಗಿತ್ತು. ಮಧ್ಯದ ಬೆರಳು ಮುರಿದು ಹೋಗಿತ್ತು. ಅದೇನೆನಿಸಿತೋ ಏನೋ, ೯ನೇ ವಿಕೆಟ್ ಬಿದ್ದ ಕ್ಷಣಕ್ಕೆ ಯಾರ ಮಾತೂ ಕೇಳದೆ ಗುಶ್ ಬ್ಯಾಟ್ ಹಿಡಿದು ಅಂಕಣಕ್ಕೆ ಧಾವಿಸಿದರು. ಅಕ್ಷರಶಃ ಒಂದೇ ಕೈಯಲ್ಲಿ ಬ್ಯಾಟ್ ಹಿಡಿದು ಚೆಂಡು ಎದುರಿಸಿದರು. ೧೬ ಚೆಂಡುಗಳು, ಅಷ್ಟರಲ್ಲಿ ತೆಂಡೂಲ್ಕರ್ ಶತಕ ಬಾರಿಸಿದ್ದಾಗಿತ್ತು. ನೆನಪಿರಲಿ, ರಣಜಿ, ದುಲೀಪ್, ಇರಾನಿಗಳೆಲ್ಲದರ ಚೊಚ್ಚಲ ಪಂದ್ಯದಲ್ಲೇ ಸಚಿನ್ ಶತಕ ಬಾರಿಸಿದಂತಾಯಿತು.
ಶುದ್ಧ ದಶರಥನಂತೆ ಸಚಿನ್ ಅವತ್ತೇ ಉಸುರಿದ್ದರು, "ಈ ಅವಿಸ್ಮರಣೀಯ ಋಣವನ್ನು ನಾನೆಂದಾದರೂ ತೀರಿಸಿಯೇನು" ೧೬ ದೀರ್ಘ ವರ್ಷ. ಯಾರಿಗೆ ನೆನಪಿದ್ದೀತು? ಸಚಿನ್ ಕುಟುಂಬದೊಂದಿಗೆ ಅಮೆರಿಕದ ಪ್ರವಾಸಗೈಯುವ ತರಾತುರಿಯಲ್ಲಿದ್ದರು. ಆ ಕ್ಷಣಕ್ಕೆ ಗುಶ್ ಫೋನ್ ಬಂತು. ‘ಫಿರೋಜಾ ಕೋಟ್ಲಾದಲ್ಲಿ ನನ್ನ ಬೆನಿಫಿಟ್ ಪಂದ್ಯ ಇದೆ. ಪಾಲ್ಗೊಳ್ಳಲಾದೀತಾ?’ ಸಚಿನ್‌ರ ನೆನಪು ಹಸಿರು. ಆಹ್ವಾನಕ್ಕೆ ಎಸ್ ಎಂದರು. ಅಮೆರಿಕ ಪ್ರವಾಸ ರದ್ದು. ಸಚಿನ್‌ರಿಗೆ ಋಣ ಸಂದಾಯದ ತೃಪ್ತಿ!

ಈಗ ಹೇಳಿ, ಸಚಿನ್ ತೆಂಡೂಲ್ಕರ್‌ಗೆ ನಾವು ಪ್ರತಿದಿನ ಬೆಳಿಗ್ಗೆ ಒಂದು ನಮಸ್ಕಾರ ಸಲ್ಲಿಸಿದರೆ ತಪ್ಪಿದೆಯೇ?

-ಮಾವೆಂಸ


ಭಾನುವಾರ, ನವೆಂಬರ್ 15, 2009

ತಾಯಿತನ-ಮಗುವಿನ ಜೊತೆಗೆ ಪ್ರಶಸ್ತಿ ಬೋನಸ್!



ಪಡ್ಡೆ ಹೈಕಳಿಗೆ ರೋಮಾಂಚನ ಹುಟ್ಟಿಸುವ ಸುದ್ದಿಯೊಂದು ದಕ್ಷಿಣ ಆಫ್ರಿಕಾದಿಂದ ಬಂದಿತ್ತು. ಭಾರತೀಯ ಕ್ರಿಕೆಟ್ ತಂಡದ ಕೋಚ್ ಗ್ಯಾರಿ ಕರ್ಸೈನ್ ತಂಡದ ಆಟಗಾರರಿಗೆ ಸಕ್ರಿಯ ಸೆಕ್ಸ್ ನಡೆಸಲು ಆದೇಶಿಸಿದರೆಂಬ ವಿಚಾರ ಗುಲ್ಲಾಗಿತ್ತು. ಪಂದ್ಯಗಳ ಮುನ್ನಾದಿನ ಸಕ್ರಿಯ ಸೆಕ್ಸ್ ನಡೆಸುವುದರಿಂದ ಸಾಮರ್ಥ್ಯ ಹೆಚ್ಚುತ್ತದೆ ಎಂದು ಗ್ಯಾರಿ ಕೋಚಿಂಗ್ ಕೊಟ್ಟಿದ್ದರಂತೆ! ಯಥಾಪ್ರಕಾರ ಅಲ್ಲಗಳೆಯುವ ವಿಧಿವಿಧಾನವೂ ಜರುಗಿತು. ಸ್ವದೇಶದಲ್ಲಿ ಗ್ಯಾರಿಗೆ ಕಸಿವಿಸಿಯಾಯಿತು. ಕ್ರಿಕೆಟ್‌ನೊಂದಿಗೆ ನೇರ ಸಂಬಂಧವಿಲ್ಲದ ಆದರೆ ಕ್ರೀಡಾಕ್ಷೇತ್ರದಲ್ಲಿ ಚರ್ಚೆಗೆ ಅಸ್ತ್ರವಾಗಬಲ್ಲ, ಸಕ್ರಿಯ ಸೆಕ್ಸ್‌ನ ಇನ್ನೊಂದು ಮಗ್ಗುಲಿನಂತಿರುವ ಸಂಗತಿಯೊಂದು ನಡೆದಿರುವುದಂತೂ ಖರೆ.
ಕಳೆದ ಯುಎಸ್ ಓಪನ್ ಟೆನಿಸ್ ಗ್ರಾನ್‌ಸ್ಲಾಂನಲ್ಲಿ ಆಗಷ್ಟೇ ಮರಳಿ ಬಂದ ಕಿಂ ಕ್ಲಿಸ್ಟರ‍್ಸ್ ಎಂಬಾಕೆ ದಡದಡನೆ ವಿಲಿಯಮ್ಸ್ ಸಹೋದರಿಯರನ್ನೂ ಪರಾಭವಗೊಳಿಸಿ ಸಿಂಗಲ್ಸ್ ಪ್ರಶಸ್ತಿ ಗೆದ್ದುಬಿಟ್ಟುದು ಟೆನಿಸ್ ತಜ್ಞರಲ್ಲೂ ಅಚ್ಚರಿ ಮೂಡಿತ್ತು. ೨೦೦೮ರಲ್ಲಿ ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸಿದ್ದ ಈ ಬೆಲ್ಜಿಯನ್ ತಾರೆ ಮತ್ತೆ ಮರಳಿದ್ದು ಮದುವೆಯಾಗಿ ಒಂದು ಹೆಣ್ಣು ಮಗುವಿನ ತಾಯಿಯಾದ ನಂತರ. ಈ ವಿದ್ಯಮಾನ ಈ ಹಿಂದೆಯೇ ಚರ್ಚೆಯಲ್ಲಿದ್ದ ವಿಷಯಕ್ಕೆ ಸಾಕ್ಷಿಯ ಒತ್ತು ನೀಡಿದೆ. ವಿಷಯವಿಷ್ಟೇ, ಕ್ರೀಡಾರಂಗದಲ್ಲಿ ಇರುವ ಮಹಿಳೆಯರಿಗೆ ಪ್ರೆಗ್ನೆನ್ಸಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ!
ವೈದ್ಯ ವಿಜ್ಞಾನದ ಸಮರ್ಥನೆ
ಇಂತದೊಂದು ವಾದ ಅಂತೆಕಂತೆಗಳ ಸರಕಲ್ಲ. ಮಿಚೆಗನ್ ಯೂನಿವರ್ಸಿಟಿಯ ಡಾ. ಜೇಮ್ಸ್ ಪಿವಾರ‍್ನಿಕ್ ಗರ್ಭಿಣಿ ಅಥ್ಲೇಟ್‌ಗಳ ಕುರಿತಂತೆ ಆಳ ಅಧ್ಯಯನವನ್ನು ನಡೆಸಿದ್ದಾರೆ. ಅಂತಿಮವಾಗಿ ಅವರು ಹೇಳುವುದೂ ಇದನ್ನೇ, ತಾಯಿಯಾಗುವ ಪ್ರಕ್ರಿಯೆ ಕ್ರೀಡಾಪಟುವಿಗೆ ಹಲವು ಕೋನಗಳಿಂದ ಅನುಕೂಲ ಒದಗಿಸುವುದಂತೂ ಸತ್ಯ.
ಹೇಗೆ? ಬಹುಷಃ ಎಲ್ಲರಿಗೂ ತಿಳಿದಿರುವಂತೆ, ಪ್ರಸವದವರೆಗಿನ ಗರ್ಭಿಣಿ ಅವಸ್ಥೆಯೇ ಮಹಿಳೆಯರ ಗರಿಷ್ಠ ದೈಹಿಕ ಸಾಮರ್ಥ್ಯವನ್ನು ಬಯಸುತ್ತದೆ. ಈ ವೇಳೆಯಲ್ಲಿ ತಾಯಿಯ ಪ್ರತಿಯೊಂದು ಅಂಗವೂ ಹೆಚ್ಚುವರಿ ಕೆಲಸದ ಭಾರವನ್ನು ನಿರ್ವಹಿಸಲು ಸರ್ವ ಸನ್ನದ್ಧವಾಗುತ್ತವೆ, ಗಟ್ಟಿತನ ಬೆಳೆಸಿಕೊಳ್ಳುತ್ತವೆ. ಬೆಳೆಯುತ್ತಿರುವ ಮಗುವಿನ ಪೋಷಣೆಗಾಗಿ ಮಹಿಳೆಯ ರಕ್ತದ ಪ್ರಮಾಣ ಅಚ್ಚರಿಯಾಗುವಂತೆ ಏರುತ್ತದೆ ಎಂಬುದು ವೈದ್ಯವಿಜ್ಞಾನದ ಗಮನಕ್ಕೆ ಬಂದಿವೆ. ಈ ಕಾರಣದಿಂದಾಗಿಯೇ ಆಮ್ಲಜನಕ ತಾಯಿಯ ಗರ್ಭಕ್ಕೆ ಸರಬರಾಜಾಗುವುದು ಸಾಧ್ಯವಾಗುತ್ತದೆ. ಈ ಎಲ್ಲ ಸಿದ್ಧತೆಗಳು ಒಮ್ಮೆ ಮಹಿಳೆ ಮಗುವಿಗೆ ಜನ್ಮ ಕೊಟ್ಟ ಮರುಕ್ಷಣವೇ ಯಥಾಸ್ಥಿತಿಗೆ ಬರುವುದಿಲ್ಲ. ಹಲವು ತಿಂಗಳವರೆಗೆ ಹಿಮೋಗ್ಲೋಬಿನ್‌ನಿಂದ ಸಮೃದ್ಧವಾದ ಕೆಂಪು ರಕ್ತ ಕಣಗಳು ತಾಯಿಯಲ್ಲೇ ಪವಡಿಸಿರುತ್ತವೆ. ಅಂದರೆ ಆಕೆಯ ದೇಹದಲ್ಲಿ ಮಾಂಸಖಂಡಗಳಿಗೆ ನಿರಾಯಾಸವಾಗಿ ಆಮ್ಲಜನಕ ಸರಬರಾಜಾಗುವ ಸ್ಥಿತಿ ನಿರ್ಮಾಣವಾಗಿರುತ್ತದೆ. ಫಲಿತಾಂಶವೆಂದರೆ, ಅಂತಹ ಕ್ರೀಡಾಳುವಿನ ದೈಹಿಕ ದೃಢತೆ (ಫಿಟ್‌ನೆಸ್) ಹೆಚ್ಚು ಕಾಲ ಬಾಳುತ್ತದೆ ಮತ್ತು ಆಕೆ ಹೆಚ್ಚಿನ ಅವಧಿಯ ತರಬೇತಿ ಪಡೆಯಲು ಸಾಧ್ಯವಾಗುತ್ತದೆ. ಅಂದಮೇಲೆ ತಂತ್ರಕ್ಕಿಂತ ಸಾಮರ್ಥ್ಯಕ್ಕೆ ಒಲವಿರುವ ಕ್ರೀಡೆಗಳಲ್ಲಿ ‘ತಾಯಿ’ಯರದು ಒಂದು ಕೈ ಮೇಲೆ ಎನ್ನುವಂತಾಗದೆ?
ಅಷ್ಟಕ್ಕೂ ಈ ಸತ್ಯಗಳು ಇದೀಗ ಕಂಡುಕೊಂಡಿದ್ದಲ್ಲ. ೮೮ರ ಉದಾಹರಣೆ ಮುಂದಿದೆ. ಗರ್ಭಿಣಿಯರಲ್ಲಿ ನಡೆಯುವ ದೈಹಿಕ ಪ್ರಕ್ರಿಯೆಗಳ ಬಗ್ಗೆ ಸ್ಪಷ್ಟತೆ ಮೂಡತೊಡಗಿದ್ದು ಮಾತ್ರ ಇತ್ತೀಚೆಗೆ. ಡಾ.ಜೇಮ್ಸ್ ಹೇಳುತ್ತಾರೆ, "ಮಗುವಿನ ಜನ್ಮ ಕೊಡುವ ಸಂದರ್ಭದಲ್ಲಿ ಉತ್ಪಾದನೆಯಾಗುವ ಹಾರ್ಮೋನ್ ರಿಲ್ಯಾಕ್ಸಿನ್ ಸೊಂಟದ ಮೂಳೆಗಳನ್ನು ಸಡಿಲಗೊಳಿಸುತ್ತದೆ. ಇದು ನಂತರ ಒದಗಬಹುದಾದ ಅಥ್ಲೆಟಿಕ್ ಸ್ಪಧೆಗಳ ಸಮಯದಲ್ಲಿ ಚಲನೆಯನ್ನು ಸುಧಾರಿಸುವುದು ಖಚಿತ. ಕ್ಲಿಸ್ಟರ‍್ಸ್ ಈ ಮುನ್ನ ಅಂಕಣದಲ್ಲಿ ಚಲನೆಯಲ್ಲಿ ತುಸು ಮಂದವಾಗಿದ್ದವರು ಈಗ ಚುರುಕಾಗಿರುವುದನ್ನು ನಾವೇ ಕಾಣುತ್ತಿದ್ದೇವೆ!
ಗ್ರಾಮೀಣ ಭಾಗದಲ್ಲೂ ಹೆರಿಗೆಯನ್ನು ಹೆಣ್ಣಿನ ಮರುಜನ್ಮವೆಂದು ಪರಿಗಣಿಸುವುದು ವಾಡಿಕೆ. ಬಹುಷಃ ಈ ಲೆಕ್ಕದಲ್ಲಿಯೇ ಇರಬೇಕು, ಹೆರಿಗೆ ನೋವು ತಿಂದ ಮಹಿಳೆ ಮುಂದಿನ ದಿನಗಳಲ್ಲಿ ನೋವನ್ನು ನುಂಗಿಕೊಳ್ಳುವ ಗಟ್ಟಿತನ ಬೆಳೆಸಿಕೊಳ್ಳುತ್ತಾಳೆ. ನೋವು - ನುಂಗುವ ಮಾತು ಮನಸ್ಸಿಗೆ ಸಂಬಂಧಪಟ್ಟಿದ್ದು. ಒಮ್ಮೆ ಕ್ರೀಡಾಪಟು ನೋವು ನುಂಗಿ ಆಡುವ ಪರಿಣತಿ ಪಡೆದರೆಂದರೆ ಫಿಟ್‌ನೆಸ್ ಎಂಬ ದೊಡ್ಡ ಎದುರಾಳಿಯನ್ನು ಪರಾಭವಗೊಳಿಸಿದಂತೆ ತಾನೇ?
ತಾಕತ್ತಿಗಾಗಿ ಗರ್ಭಪಾತ!
ಇಂಗ್ಲೆಂಡ್‌ನ ಕ್ರೀಡಾ ಸಚಿವಾಲಯ ಎಥಿಕ್ಸ್ ಎಂಡ್ ಆಂಟಿ ಡೋಪಿಂಗ್ ವಿಭಾಗ ಹಲವು ಬಾರಿ ಗರ್ಭಿಣಿ-ತಾಯಿ ಕ್ರೀಡಾಪಟುಗಳ ವಿಚಾರವನ್ನು ಎತ್ತಿದೆ. ಒಂದರ್ಥದಲ್ಲಿ, ‘ಪ್ರಗ್ನೆನ್ಸಿ’ ಎಂದರೆ ಕಾನೂನಿನ ಚೌಕಟ್ಟಿನಲ್ಲಿಯೇ ಪ್ರದರ್ಶನದ ಮಟ್ಟವನ್ನು ಉತ್ತೇಜಿಸುವ ಹಾರ್ಮೋನ್ ತೆಗೆದುಕೊಂಡಂತೆ. ಸಚಿವಾಲಯದ ಈ ವಾದಕ್ಕೆ ಪ್ರಸ್ತುತ ಹೆಚ್ಚಿನ ಬೆಂಬಲ ಸಿಕ್ಕಿಲ್ಲ. ಸತ್ಯ ಈ ವಾದದ ಆಚೀಚೆಯೇ ಇದೆ! ಸ್ವಾರಸ್ಯವೆಂದರೆ, ೧೯೮೮ರಷ್ಟು ಹಿಂದೆಯೇ ಈ ಕುರಿತು ಗಂಭೀರ ಚರ್ಚೆ ನಡೆದಿತ್ತು. ಆಗ ನಡೆದಿದ್ದ ಸೋರ್ಟ್ಸ್ ಆಂಟಿ ಡೋಪಿಂಗ್ ವಿಶ್ವ ಸಮಿತಿ ಪ್ರಥಮ ಸಭೆಯಲ್ಲಿಯೇ ‘ಅಬಾರ್ಷನ್ ಡೋಪಿಂಗ್’ನ್ನು ವಿಷಯಸೂಚಿಯಲ್ಲಿ ಸೇರಿಸಲಾಗಿತ್ತು. ಅದಕ್ಕೆ ಕಾರಣವೂ ಇತ್ತು. ಪೂರ್ವ ಯುರೋಪಿಯನ್ ಕ್ರೀಡಾಳುಗಳು ಪ್ರಮುಖ ಕ್ರೀಡಾಕೂಟಗಳಿಗೆ ಮುನ್ನ ಐಚ್ಛಿಕವಾಗಿ ಗರ್ಭಿಣಿಯರಾಗಿ ಗರ್ಭಪಾತ ಮಾಡಿಸಿಕೊಳ್ಳುತ್ತಿದ್ದರು ಮತ್ತು ಆ ಮೂಲಕ ತಮ್ಮ ಕ್ರೀಡಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ತಂತ್ರ ರೂಪಿಸುತ್ತಿದ್ದರು ಎಂಬ ಆರೋಪಗಳಿದ್ದವು. ಯಾಕೋ ಗೊತ್ತಿಲ್ಲ, ಈ ಸುದ್ದಿಯ ಹಿಂದೆ ಯಾವುದೇ ಸಂಶೋಧನೆಗಳು ಆಗ ನಡೆಯಲೇ ಇಲ್ಲ.
ದಡೂತಿ, ಸುಸ್ತುಗಳ ಫಲಿತಾಂಶ?
ಕ್ರೀಡಾಳುವಿಗೆ ತಾಯಿತನ ತಂದುಕೊಡುವ ತಾಕತ್ತು ನಾಣ್ಯದ ಒಂದು ಮುಖ. ಕನ್ನಡದ ಪ್ರಖ್ಯಾತ ಚಿತ್ರನಟಿ ರಕ್ಷಿತಾ ಪ್ರೇಮ್ ಗಂಡುಮಗುವಿನ ತಾಯಿಯಾದ ನಂತರ ಊದಿದ ಪರಿಯನ್ನು ಗಮನಿಸಿದವರಿಗೆ ‘ತಾಕತ್ತು ಹೆಚ್ಚುವ ಸೂತ್ರ’ ಸುಳ್ಳಿನ ಕಂತೆ ಎನ್ನಿಸಿದರೆ ಅಚ್ಚರಿಯಿಲ್ಲ. ವಾಸ್ತವವಾಗಿ ಕ್ರೀಡಾಳುವಿನ ಜೀವನದಲ್ಲಿ ತಾಯ್ತನದ ನಂತರದ ಕ್ಯಾರಿಯರ್ ದೊಡ್ಡ ಸವಾಲೂ ಆದೀತು. ಮಹಿಳೆಯರ ಸ್ಪೋರ್ಟ್ಸ್ ಎಂಡ್ ಪಿಟ್‌ನೆಸ್ ಫೌಂಡೇಷನ್ ಈ ಮಗ್ಗುಲಿನತ್ತ ಬೆಳಕು ಚೆಲ್ಲುತ್ತದೆ. ಅದರ ಸಂಶೋಧನೆಗಳ ಪ್ರಕಾರ, ತಾಯಿಯಾದಾಕೆಗೆ ಸಮಯದ ಒತ್ತಡ ಹೆಚ್ಚು. "ಮಗುವಿನ ಲಾಲನೆ ಪಾಲನೆಯ ಹಿನ್ನೆಲೆಯಲ್ಲಿ ಮೊತ್ತಮೊದಲ ಕತ್ತರಿ ಬೀಳುವುದು ಅಭ್ಯಾಸಕ್ಕೆ, ವ್ಯಾಯಾಮಕ್ಕೆ. ಮಗುವಿನ ಜೊತೆಜೊತೆಗೆ ವ್ಯಾಯಾಮ ನಡೆಸುವಂತ ಮಾದರಿಯನ್ನು ರೂಪಿಸಿದರಷ್ಟೇ ಕ್ಯಾರಿಯರ್ ಉಳಿದೀತು. ಉದಾಹರಣೆಗೆ ಮಗುವಿನ ಸಂಗಡ ಈಜು ಅಭ್ಯಾಸ ಒಳ್ಳೆಯ ತಂತ್ರ. ಪ್ರಾಕ್ಟೀಸ್ ಸೌಲಭ್ಯದ ಜೊತೆಗೆ ಚೈಲ್ಡ್ ಕೇರ್ ಇದ್ದರಂತೂ ಸ್ವಾಗತಾರ್ಹ. ಕಿಂ ಕ್ಲಿಸ್ಟರ‍್ಸ್ ಅಂಗಳದಲ್ಲಿ ಮಗಳ ಜೊತೆಗೆ ಅತ್ತಿತ್ತ ಅಡ್ಡಾಡುವುದು ಕೂಡ ಅಂತಹ ಧನಾತ್ಮಕ ಚಟುವಟಿಕೆಯ ಒಂದು ದೃಶ್ಯ" ಹೀಗೆನ್ನುತ್ತಾರೆ ಫಿಟ್‌ನೆಸ್ ಫೌಂಡೇಷನ್‌ನ ಹೌರಿಯಟ್ ಫಾಕ್ಸ್‌ವೆಲ್.
ಬಾತ್ ವಿಶ್ವವಿದ್ಯಾಲಯದ ಅಧ್ಯಯನದಿಂದ ಮಹಿಳೆಯರು ಪುರುಷರಿಗಿಂತ ಶೀಘ್ರವಾಗಿ ನೋವಿನ ಅನುಭವ ಪಡೆಯುತ್ತಾರೆ ಎಂಬುದು ಗೊತ್ತಾಗಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಪುರುಷರಿಗಿಂತ ಬೇಗ ಮಹಿಳೆಯರು ದೈಹಿಕ ಹಿನ್ನಡೆ ಅನುಭವಿಸುವ ಕಾರಣವಿದು. ನೋವಿನ ಹೆರಿಗೆಯ ಅನುಭವ ಪಡೆದ ಮಹಿಳೆಯರು ಮಾನಸಿಕ ದೃಢತೆ, ಜಾಗೃತ ಮನೋಭಾವ ಮತ್ತು ಚುರುಕುತನವನ್ನು ಪಡೆಯುತ್ತಾರೆ ಎಂದು ಮೇಲಿನ ಉಸುರಿನಲ್ಲಿಯೇ ಅಧ್ಯಯನ ಅಭಿಪ್ರಾಯಪಡುತ್ತದೆ. ಕ್ರೀಡಾ ಅಂಕಣದಲ್ಲಿ ಈ ಸ್ವಭಾವಗಳೇ ಅತೀವ ಅಗತ್ಯ ಎಂಬುದು ಗಮನಾರ್ಹ ಅಂಶ. ಕಳೆದ ಬೇಸಿಗೆಯಲ್ಲಿ ಬಾಣಂತನದ ಆಹಾರ - ವ್ಯಾಯಾಮಗಳ ಕುರಿತು ವಿಶೇಷ ಸಂಶೋಧನೆಗಳು ಬೆಳಕು ಕಂಡಿವೆ. ಪೂರಕವಾಗಿ ನಡೆದಿರುವ ‘ತೂಕ ಇಳಿಸುವ ತಂತ್ರಜ್ಞಾನ’ ಪ್ರಬಂಧದ ಸಲಹೆಗಳಲ್ಲಿ ತೂಕ ಇಳಿಸುವ ವ್ಯಾಯಾಮದ ಷರತ್ತಿಗಿಂತ ವಿವೇಚನಾಶೀಳ ಆಹಾರ ಪದ್ಧತಿ ಕ್ಷೇಮ ಎನ್ನಲಾಗಿದೆ. ಕ್ರೀಡಾಳುಗಳು ತಮ್ಮ ಬಾಣಂತನದ ವೇಳೆ ಇದನ್ನು ಅನುಸರಿಸುತ್ತಿದ್ದಾರೆ ಎಂಬುದಂತೂ ಸ್ಪಷ್ಟ.
ವಾಸ್ತವವಾಗಿ ಗೊಂದಲ ಮುಂದುವರೆದಿದೆ. ಇತ್ತೀಚಿನ ದಿನಗಳಲ್ಲಿ ಸಂಶೋಧನೆಗೆ ವಿಷಯಗಳೇ ಬಾಕಿ ಉಳಿದಿಲ್ಲ. ಬಹುಪಾಲು ಎಲ್ಲವನ್ನು ಅರ್ಥೈಸಿ ಪರಿಹಾರ ಸೂಚಿಸಲಾಗಿದೆ ಎಂಬ ಭಾವ ಮೂಡಿದೆ. ಆದರೆ ಬಾಣಂತನದ ತಾಕತ್ತಿನ ಬಗ್ಗೆ ವಿಶ್ಲೇಷಣೆಗಳಾಗಿಲ್ಲ. ಒಂದು ತಾರ್ಕಿಕ ಅಂತ್ಯ ಕಾಣಲಾಗಿಲ್ಲ. ವೈದ್ಯ ವಿಜ್ಞಾನದ ವಿದ್ಯಾರ್ಥಿಗಳಿಗೆ ಇದೊಂದು ಸವಾಲು. ಡೋಪಿಂಗ್ ಪರೀಕ್ಷೆಗೆ ದಕ್ಕದ ಸಾಮರ್ಥ್ಯವರ್ಧಕ ಕಂಡುಹಿಡಿಯಲು ಚೀನಾ, ಅಮೆರಿಕನ್ ದೇಶಗಳಲ್ಲಿ ಪ್ರತ್ಯೇಕ, ಗುಪ್ತ ಸಂಶೋಧನಾಲಯಗಳನ್ನೇ ಹೊಂದಲಾಗಿರುತ್ತದೆ. ಪ್ರಗ್ನೆನ್ಸಿ ವಿಚಾರ ಗಿಟ್ಟುತ್ತದೆಂದಾದರೆ ಒಲಂಪಿಕ್ಸ್ ಪದಕಕ್ಕಾಗಿ ಬೇಕೆಂದೇ ಗರ್ಭ ಧರಿಸಿ ಅಬಾರ್ಷನ್ ಮಾಡಿಸಿಕೊಳ್ಳುವ ಕಾಲ ಬರಬಹುದು. ಡೋಪಿಂಗ್ ಪರೀಕ್ಷೆಯ ವಿಧಿ ವಿಧಾನಗಳು ಬದಲಾಗಲೇ ಬೇಕಾಗುತ್ತದೆ. ಅನಾಹುತವೇ ಭವಿಷ್ಯವಾದೀತು.
ಧನಾತ್ಮಕವಾಗಿ ನೋಡುವವರು ಕಿಂ ಕ್ಲಿಸ್ಟರ‍್ಸ್‌ರ ಗ್ರಾನ್‌ಸ್ಲಾಂ ಪ್ರಶಸ್ತಿಯನ್ನು ನೋಡಬೇಕು. ಅವರ ಛಲ, ಅಭ್ಯಾಸ, ಆಸಕ್ತಿಗಳೇ ಸ್ಫೂರ್ತಿಯಾಗಬೇಕು. ಈಗಾಗಲೇ ಅದೇ ಬೆಲ್ಜಿಯಂನ ಇನ್ನೋರ್ವ ನಿವೃತ್ತ ಟೆನಿಸ್ ತಾರೆ, ಏಳು ಸ್ಲಾಂ ವಿಜೇತೆ, ಅಲ್ಲದೆ ಮಗುವೊಂದರ ತಾಯಿಯಾಗಿರುವ ಜಸ್ಟಿನ್ ಹೆನಿನ್ ಮರಳಿ ಸರ್ಕ್ಯೂಟ್‌ಗೆ ಬರುವ ಮಾತನಾಡಿದ್ದಾರೆ. ಇನ್ನು ಮುಂದೆ ಮದುವೆ, ತಾಯ್ತನ ಚಿತ್ರರಂಗದ ಹಿರೋಯಿನ್‌ಗಳಿಗೆ ತೊಡಕಾಗಬಹುದು. ಕ್ರೀಡಾಕಣದ ಮಹಿಳೆಯರಿಗಲ್ಲ!!
ಕೊನೆ ಕೊಸರು
ಬಾಣಂತನದ ಅವಧಿಯಲ್ಲಿರುವ ಮಹಿಳೆಯರನ್ನು ಮಾತನಾಡಿಸಿ ನೋಡಿ. ಮಗುವಿನ ಆರೈಕೆ, ಮನೆಗೆಲಸದಿಂದ ಹೈರಾಣಾಗಿ ಎಲ್ಲವೂ ಮರೆತು ಹೋಗುತ್ತದೆ. ಫೋನ್ ನಂಬರ್, ಹೆಸರು..... ಎಲ್ಲವನ್ನೂ ನೆನಪಿಸಿಕೊಳ್ಳುವುದು ಈಗ ಕಷ್ಟ ಎಂದು ಆ ಬಾಣಂತಿಯರು ಗೊಣಗುತ್ತಾರೆ. ನಾವು ಗೋಣಾಡಿಸುತ್ತೇವೆ. ಇದೀಗ ವ್ಯಕ್ತವಾಗಿರುವ ವೈದ್ಯ ವಿಜ್ಞಾನ ಅಧ್ಯಯನದ ಪ್ರಕಾರ, ಹೆರುವ ಪ್ರಕ್ರಿಯೆ ಹಾಗೂ ಎದೆ ಹಾಲು ಕುಡಿಸುವ ಕ್ರಿಯೆ ನಡೆಯುವ ಕಾಲದಲ್ಲಿ ಹಾರ್ಮೋನ್ ಚಂಚಲತೆಯ ಕಾರಣದಿಂದಾಗಿ ಅವರ ಮೆದುಳಿನ ಕೆಲ ಭಾಗದ ಕೋಶಗಳ ಗಾತ್ರ ಹೆಚ್ಚಾಗುತ್ತದಂತೆ. ಅರೆರೆ, ಹಾಗಾದರೆ ಅವರಿಗಾಗ ನೆನಪಿನ ಶಕ್ತಿ ಜಾಸ್ತಿಯಾಗಬೇಕಿತ್ತಲ್ಲವೇ?!

-ಮಾವೆಂಸ

ಬುಧವಾರ, ನವೆಂಬರ್ 11, 2009

ಜೈಪುರ ತೈಲ ಬೆಂಕಿ - ಕೋಟಿ ನಷ್ಟ, ಭವಿಷ್ಯ ಕಷ್ಟ



ಇಂಡಿಯನ್ ಆಯಿಲ್ ಕಾರ್ಪೊರೇಷನ್ ದೇಶದ ಅತಿ ದೊಡ್ಡ ತೈಲ ಪೂರೈಕೆ ಉದ್ಯಮ. ಕೇಂದ್ರ ಸರ್ಕಾರದ ಆಧಿಪತ್ಯಕ್ಕೆ ಒಳಪಟ್ಟ ಸಂಸ್ಥೆಯಿದು. ಅದಕ್ಕೊಂದು ಅಧಿಕೃತ ವೆಬ್‌ಸೈಟ್ ಕೂಡ ಇದೆ. ಈ ದಿನಗಳಲ್ಲಿ ನೀವು ಆ ಸೈಟ್‌ನಲ್ಲಿ ಇಣುಕಿದರೆ ನಾನಾ ಮಾದರಿಯ ಪೋರ್ಟಲ್‌ಗಳು ಕಾಣಸಿಗುತ್ತವೆ. ತೀರಾ ಇತ್ತೀಚಿನ ಸುದ್ದಿಯತ್ತ ಕ್ಲಿಕ್ಕಿಸಿದರೆ ಕಾಣುತ್ತದೆ, ಐಓಸಿ ೨೮೪ ಕೋಟಿ ರೂ. ಲಾಭ ಗಳಿಸಿದ ಮಾಹಿತಿ. ಬುಡದಿಂದ ತಲೆತನಕ ಕಣ್ಣು ಹಾಯಿಸಿದರೂ ಮೊನ್ನೆ ಮೊನ್ನೆ ಜೈಪುರದಲ್ಲಿ ನಡೆದ ಪರಿಷ್ಕರಣ ಕೇಂದ್ರದ ಟ್ಯಾಂಕ್‌ಗಳು ಬೆಂಕಿಗೆ ಆಹುತಿಯಾದ, ಕನಿಷ್ಟ ೧೩ ಮಂದಿ ಜೀವ ತೆತ್ತ ಸುದ್ದಿಯ ತುಣುಕೂ ಕಾಣುವುದಿಲ್ಲ!
ಐಓಸಿ ಬೇಜವಾಬ್ದಾರಿತನಕ್ಕೆ ಇದು ಪುಟ್ಟ ಉದಾಹರಣೆ ಮಾತ್ರ. ಅಕ್ಟೋಬರ್ ೩೦ರಂದು ಜೈಪುರ ಸಮೀಪದ ಸೀತಾಪುರ ಇಂಡಸ್ಟ್ರಿಯಲ್ ಏರಿಯಾದ ಐಓಸಿ ಸಂಸ್ಕರಣ ಕೇಂದ್ರದ ೧೧ ಸಂಗ್ರಾಹಕ ಟ್ಯಾಂಕ್‌ಗಳ ಪೈಕಿ ಐದರಲ್ಲಿ ಬೆಂಕಿ ಕಾಣಿಸಿದೆ. ಪೆಟ್ರೋಲ್ ಹಾಗೂ ಸೀಮೆಎಣ್ಣೆಗಳನ್ನು ಆ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಲಾಗಿತ್ತು. ಸತತ ಏಳು ದಿನ ಈ ಬೆಂಕಿ ಉರಿದು ತೈಲ ಖಾಲಿಯಾದ ನಂತರವೇ ಬೆಂಕಿ ಆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಗಮನಿಸಬೇಕಾದುದೆಂದರೆ, ಈ ಬೆಂಕಿ ದುರಂತ ನಡೆದ ದಿನವೇ ಅತ್ತ ಐಓಸಿ ವೆಬ್‌ಸೈಟ್‌ನಲ್ಲಿ ಈ ತ್ರೈಮಾಸಿಕ ಋತುವಿನಲ್ಲಿ ಸಂಪಾದಿಸಿದ ಲಾಭದ ಸುದ್ದಿಯನ್ನು ದೊಡ್ಡದಾಗಿ ಪ್ರಕಟಿಸಲಾಗಿತ್ತು!
ಜೈಪುರ ತೈಲ ದುರಂತದಿಂದ ಆದ ನಷ್ಟದ ಬಗ್ಗೆ ಮಾಡುತ್ತಿರುವ ಲೆಕ್ಕಾಚಾರ ಗೊಂದಲಮಯವಾಗಿದೆ. ಮಾಧ್ಯಮಗಳು ೫೦೦ ಕೋಟಿ ನಷ್ಟದ ಚಿತ್ರಣವನ್ನು ನೀಡುತ್ತಿವೆ. ಆದರೆ ಐಓಸಿಯ ಯೋಜನೆ ಮತ್ತು ವ್ಯಾಪಾರ ವಿಭಾಗದ ನಿರ್ದೇಶಕ ಬಿ.ಎಮ್.ಬಸ್ಸಾಲ್ ಹೇಳುವುದೇ ಬೇರೆ, ‘ಆ ಕೇಂದ್ರದ ತೈಲ ಸಂಗ್ರಹ ಸಾಮರ್ಥ್ಯ ಒಂದು ಲಕ್ಷ ಕಿಲೋ ಲೀಟರ್‌ಗಳು. ನಮ್ಮ ಅಂದಾಜಿನ ಪ್ರಕಾರ, ಅಗ್ನಿ ಅನಾಹುತದ ವೇಳೆ ೫೦ ಸಾವಿರ ಕಿಲೋ ಲೀಟರ್ ಕಚ್ಚಾ ತೈಲ ಸಂಗ್ರಹದಲ್ಲಿತ್ತು. ಸುಮಾರು ೧೪೦ರಿಂದ ೧೫೦ ಕೋಟಿ ರೂ. ಮೌಲ್ಯದ ಸಂಗ್ರಹ ಬೆಂಕಿಗೆ ಆಹುತಿಯಾದಂತಾಗಿದೆ. ಅಷ್ಟಕ್ಕೂ ಈ ಸಂಸ್ಕರಣ ಕೇಂದ್ರಕ್ಕೆ ಐಸಿಐಸಿಐನ ವಿಮಾ ಯೋಜನೆ ಅನ್ವಯವಾಗುತ್ತವೆ. ಹಾಗಾಗಿ ಐಓಸಿಯ ಅರ್ಥವ್ಯವಸ್ಥೆ ಧಕ್ಕೆಯಾಗುವುದಿಲ್ಲ.’
ಐಓಸಿಯ ಇತಿಹಾಸವನ್ನು ಗಮನಿಸಿದರೆ, ಈ ತೆರನ ನಿರ್ಲಕ್ಷ್ಯ ಎದ್ದುಕಾಣುತ್ತದೆ. ಅವರ ಅಗ್ನಿ ದುರಂತಗಳ ಸಾಲಿಗೆ ಇದು ಇನ್ನೊಂದು ಸೇರ್ಪಡೆಯಷ್ಟೇ. ೨೦೦೪ರ ಜೂನ್ ೦೩ರಂದು ಕೊಲ್ಕತ್ತಾದ ರಾಜಬಂಧು ತೈಲ ಕೇಂದ್ರದಲ್ಲಿ ೪,೧೮೯ ಕಿಲೋ ಲೀಟರ್ ತೈಲ ಬೆಂಕಿಗೆ ಭಸ್ಮವಾಗಿತ್ತು. ೨೦೦೧ರಲ್ಲಿ ಕಾನ್ಪುರದಲ್ಲಿ ಪೈಪ್‌ಲೈನ್‌ಗೆ ಹೊತ್ತಿಕೊಂಡ ಬೆಂಕಿಗೆ ಅಪಾರ ಪ್ರಮಾಣದ ಪೆಟ್ರೋಲಿಯಂ ನಷ್ಟವಾಗಿತ್ತು. ಹೀಗೆ.... ನೀಡಬಹುದಾದ ದೃಷ್ಟಾಂತಗಳಲ್ಲೆಲ್ಲ ಕಾಣುವುದು ಐಓಸಿಯ ಅಸಡ್ಡಾಳತನ. ಜೈಪುರದ ಪ್ರಕರಣದಲ್ಲೂ ನಿರ್ಲಕ್ಷ್ಯದ ಆರೋಪವೇ ಎದ್ದು ಕಾಣುತ್ತದೆ. ತನಿಖೆಯ ಶಾಸ್ತ್ರಕ್ಕೆ ಈಗಾಗಲೇ ಆದೇಶವಾಗಿದೆ. ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳುವವರಾರು?
ಸೆಪ್ಟೆಂಬರ್ ೩೦ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಲೆಕ್ಕಾಚಾರದಲ್ಲಿ ಐಓಸಿ ತೆರಿಗೆಯನ್ನು ಕಳೆದು ನಿವ್ವಳ ೨೮೪ ಕೋಟಿ ರೂ. ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೭೦೪೭ ಕೋಟಿ ರೂ. ನಷ್ಟ ಉಂಟಾಗಿತ್ತು. ಜಾಗತಿಕ ತೈಲ ಉದ್ಯಮಗಳ ಏರಿಳಿತ ಈ ಲಾಭನಷ್ಟದಲ್ಲಿ ಪ್ರತಿಫಲಿಸಿದೆ. ಐಓಸಿ ಒಟ್ಟು ಎಂಟು ರಿಫೈನರಿಗಳನ್ನು ಹೊಂದಿದ್ದು ವರದಿ ಸಾಲಿನಲ್ಲಿ ೧೨,೪೧೨ ಮೆಟ್ರಿಕ್ ಟನ್ ತೈಲವನ್ನು ಮಾರಾಟಮಾಡಿದೆ. ವಾಸ್ತವವಾಗಿ ಇದು ಅವರ ಸಾಮರ್ಥ್ಯದ ಶೇ.೯೯.೯ರ ಬಳಕೆಯಾದಂತೆ ಎನ್ನಲಾಗಿದೆ. ಪೈಪ್‌ಲೈನ್‌ಗಳ ತಾಕತ್ತನ್ನು ಶೇ.೮೩ರಷ್ಟು ಉಪಯೋಗಿಸಿಕೊಳ್ಳಲಾಗಿದೆ ಎಂದು ಅದು ಹೇಳಿಕೊಳ್ಳುತ್ತದೆ. ಜಾಗತಿಕ ತೈಲ ಬೆಲೆ ಕಡಿಮೆಯಾದುದರಿಂದ ಈ ಸರ್ತಿ ಲಾಭ ಸಿಕ್ಕಿದೆ. ಕಳೆದ ವರ್ಷ ೧೫,೫೩೬ ಮೆಟ್ರಿಕ್ ಟನ್ ತೈಲ ಮಾರಾಟ ಮಾಡಿದ್ದರೂ ನಷ್ಟವೇ ಆಗಿತ್ತು.
ಲಾಭ, ನಷ್ಟದ ಬಾಬತ್ತನ್ನು ತೈಲ ಬೆಲೆಯೊಂದಿಗೆ ಸಮೀಕರಿಸುವುದೇ ಅರ್ಥಹೀನ. ಇಂದು ಜೈಪುರ ತೈಲಕ್ಕೆ ಬಿದ್ದ ಬೆಂಕಿಯ ಹೊಗೆಯ ಕಪ್ಪು ಕಣಗಳು ಎಂಟರಿಂದ ೧೦ ಕಿ.ಮೀ. ಸುತ್ತಳತೆಯ ಪ್ರದೇಶವನ್ನು ಆವರಿಸಿದೆ. ಪಿಂಕ್ ಸಿಟಿ ಎಂಬ ಖ್ಯಾತಿಯ ಜೈಪುರವನ್ನು ಇನ್ನು ಬ್ಲಾಕ್ ಸಿಟಿ ಎನ್ನಬೇಕಾದೀತು ಎಂಬ ವಿಶ್ಲೇಷಣೆಯೂ ವ್ಯಕ್ತವಾಗಿದೆ. ಡಹ್ಲಾಸ್, ಕೋಸೂರ್, ಚಿತ್ರವಾಲಾ, ವಿಡಾನಿ, ರಾಮಚಂದ್ರಪುರ, ಟಿಬಾ.... ದಂತ ಹಳ್ಳಿಗಳ ಭೂಮಿಯ ಮೇಲೆ ಕಪ್ಪು ಬೂದಿ ಕಣಗಳು ಸಂಗ್ರಹವಾಗಿವೆ. ಇಲ್ಲಿನ ಭೂಮಿಯ ಫಲವತ್ತತೆ ಕಡಿಮೆಯಾಗುತ್ತದೆ ಎಂಬುದನ್ನು ತಜ್ಞರೇ ಖಚಿತಪಡಿಸಿದ್ದಾರೆ. ಜೈಪುರದ ಕೃಷಿ ಭೂಮಿ ತರಕಾರಿ ಹಾಗೂ ಆಹಾರಧಾನ್ಯ ಉತ್ಪಾದನೆಗೆ ಖ್ಯಾತ. ಆದರೆ ಈ ಋತುವಿನ ಬೆಳೆಯೇ ಹಾನಿಗೊಳಗಾಗಿದೆ. ಈ ನಷ್ಟಗಳ ಅಂದಾಜನ್ನು ಈವರೆಗೆ ಸರ್ಕಾರ ಪ್ರಕಟಿಸಿಲ್ಲ.
ಒಂದು ಕೋಟಿ ಲೀಟರ್ ಪೆಟ್ರೋಲ್ ಸುಟ್ಟಿರುವುದರಿಂದ ವಾತಾವರಣ ಕಲುಷಿತಗೊಳ್ಳುವುದು ನಿಸ್ಸಂಶಯ. ಅಲ್ಲಿ ಆಮ್ಲಜನಕದ ಕೊರತೆಯೂ ಕಾಣಿಸಿರುವುದರಿಂದ ವಿಷಕಾರಿ ಅನಿಲಗಳು ಹೈಡ್ರೋಕಾರ್ಬನ್ ಆಗಲಾರದೆ ನೇರವಾಗಿ ಕಾರ್ಬನ್ ಹೈಡ್ರಾಕ್ಸೈಡ್ ಆಗಿ ಮಾರ್ಪಡುತ್ತದೆ. ಹೀಗಾಗಿ ನಿಷೇಧಿತ ಪದಾರ್ಥಗಳ ಮಟ್ಟ (ಆರ್‌ಎಸ್‌ಪಿಎಂ) ಸಾಮಾನ್ಯಕ್ಕಿಂತ ಒಂದೂವರೆ ಪಟ್ಟು ವೃದ್ಧಿಸುತ್ತದೆ. ಮಾನವನ ಆರೋಗ್ಯಕ್ಕೆ ಇದು ತೀರ್ವ ಹಾನಿಕಾರಕ. ಶುಷ್ಕ ಚರ್ಮ, ಅಸ್ತಮಾ ಮುಂತಾದ ಸಮಸ್ಯೆಗೆ ನಾಂದಿಯಾಗುತ್ತದೆ. ಸಲ್ಫರ್ ಹಾಗೂ ನೈಟ್ರಿಕ್ ಆಸಿಡ್ ವಾತಾವರಣವನ್ನು ಸೇರಿರುವುದರಿಂದ ಆಸಿಡ್ ಮಳೆ ಧಾಳಿಯಿಡುತ್ತದೆ. ಈಗಲೇ ರೈತರು ಬೆಳಗಿನ ಮಂಜಿನಲ್ಲಿ ಆಮ್ಲೀಯ ಅಂಶವನ್ನು ಗುರ್ತಿಸುತ್ತಿದ್ದಾರೆ. ಇಳುವರಿ ಕುಸಿತದ ಸಂಭಾವ್ಯತೆ ಹೆಚ್ಚಿದೆ.
ಈ ಹಿನ್ನೆಲೆಯಲ್ಲಿಯೇ ನಷ್ಟದ ಅಂದಾಜು ಸಂಕೀರ್ಣ ಎನ್ನಬೇಕು. ಜನರ ಆರೋಗ್ಯದ ಖರ್ಚನ್ನು ಐಓಸಿ ಭರಿಸುವುದಿಲ್ಲ. ರೈತನ ಬೆಳೆ ನಷ್ಟಕ್ಕೆ ಅದು ಜವಾಬ್ದಾರನಾಗುವುದಿಲ್ಲ. ತನ್ನ ಪೆಟ್ರೋಲ್ ಸುಟ್ಟಿದ್ದಕ್ಕೆ ವಿಮಾ ರಕ್ಷಣೆ ಪಡೆದು ಆರ್ಥಿಕವಾಗಿ ತನಗೇನಾಗಿಲ್ಲ ಎಂದು ಘೋಷಿಸುತ್ತದೆ. ಇಲ್ಲಿಯೇ ಅಡಗಿದೆ ತೈಲ ದುರಂತದ ವ್ಯಂಗ್ಯ!
-ಮಾವೆಂಸ



ಮಂಗಳವಾರ, ನವೆಂಬರ್ 3, 2009

ಇದು ಭಾರತ...!


ಫೋಟೋನೇ ಎಲ್ಲವನ್ನು ಹೇಳುವಾಗ ನಾನೇನು ಹೇಳುವುದು? ಇಷ್ಟನ್ನು ಹೇಳಬಹುದು, ಇದು ಸಾಗರದ ಕೆಎಸ್‌ಆರ್‌ಟಿಸಿ ಬಸ್ ಡಿಪೋದಲ್ಲಿ ಕಂಡ ದೃಶ್ಯ. ಇಲ್ಲಿಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ!

 
200812023996