ಮಂಗಳವಾರ, ನವೆಂಬರ್ 9, 2010

‘ಉದಯವಾಣಿ’ಯಲ್ಲಿ ಮಾರುಕಟ್ಟೆ ಮಿಂಚು

ಕಳೆದ ಕೆಲವಾರಗಳಿಂದ ‘ಉದಯವಾಣಿ’ಯಲ್ಲಿ ‘ಮಾರುಕಟ್ಟೆ ಮಿಂಚು’ ಎಂಬ ಅಂಕಣ ಬರೆಯುತ್ತಿರುವೆ. ಭಾರೀ ವಿಶೇಷವೇನಿಲ್ಲ. ನಿಮಗೂ ಅದರ ಒಂದು ಝಲಕ್ ತೋರಿಸುವ ಏಕೈಕ ಉದ್ದೇಶದಿಂದ ಈ ಕಂತನ್ನು ನಿಮ್ಮ ಮುಂದೆ ಇರಿಸುತ್ತಿದ್ದೇನೆ.

ಮಾರುಕಟ್ಟೆ ಮಿಂಚು-೪

ಬಣ್ಣದ ಕುಕ್ಕರ್‌ನಿಂದ ಬೆಚ್ಚನೆ ಅಡುಗೆ!
ಸುರಕ್ಷತೆಯೇ ಆದ್ಯತೆಯಾಗಿದ್ದ ಕುಕ್ಕರ್ ವಿಭಾಗ ಕೂಡ ಈಗ ಸೌಂದರ್ಯ ಪ್ರತಿಪಾದಕವಾಗಿದೆ! ನಿಜ, ಕುಕ್ಕರ್ ಎಂದರೆ ಪ್ರೆಸ್ಟೀಜ್ ಎಂಬ ಪ್ರತಿಷ್ಟೆಯ ಮಾತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅದರ ತಯಾರಕ ಟಿಟಿಕೆ ಈಗ ನಾಲ್ಕು ವರ್ಣಗಳ ಆಕರ್ಷಕ ಆಪಲ್ ಕುಕ್ಕರ್ ಸರಣಿಯನ್ನು ಮಾರುಕಟ್ಟೆಗೆ ಬಿಟ್ಟಿದೆ.
ಅಲ್ಯುಮಿನಿಯಂ, ಗ್ರೀನ್, ರೆಡ್ ಮತ್ತು ಹಾರ್ಡ್ ಅನೋಡೈಸ್ಡ್‌ಮಾದರಿಯ ಕುಕ್ಕರ್‌ಗಳು ಬರೀ ಕಣ್ಣಿಗೆ ತಂಪಲ್ಲ, ಇದರಲ್ಲಿ ಅತ್ಯುತ್ತಮ ದರ್ಜೆಯ ವೈಟ್ ವಾಲ್ವ್, ನೂತನ ಶೈಲಿಯ ಸ್ಟೈನ್‌ಲೆಸ್ ಸ್ಟೀಲ್ ಹಿಡಿಕೆ, ಸ್ವಯಂ ಚಾಲನೆಯ ವಿಷಲ್ ಸೌಲಭ್ಯವೂ ಅಡಕವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಮೂರು ಲೀಟರ್ ವರ್ಗದ ಈ ಕುಕ್ಕರ್‌ಗಳು ೮೮೨ರೂ.ನಿಂದ ೧೩೦೫ರೂ. ದರದಲ್ಲಿ ಮಾರಾಟಕ್ಕಿದೆ. ಹಬ್ಬದ ಈ ಕಾಲದಲ್ಲಿ ನೂರಾರು ರೂ.ಗಳ ಸೋಡಿಯೂ ಇದೆ.

ಮೊಡವೆಗಳ ಗೊಡವೆಗೆ ನೋಮಾರ್ಕ್ಸ್......
ಮುಖದ ಕಪ್ಪು, ಮೊಡವೆಗಳ ಆಕ್ರಮಣದಿಂದ ಬಸವಳಿದವರಿಗೆ ಓಝೋನ್ ಆಯುರ್ವೇದಿಕ್ಸ್‌ನ ನೋಮಾರ್ಕ್ಸ್‌ನ ಕ್ರೀಮ್ ಉಪಯೋಗಕಾರಿ ಎಂದು ಮೆಡಿಕಲ್ಸ್ ವಲಯದಲ್ಲಿ ಹೇಳಲಾಗುತ್ತದೆ.
ಪ್ರಸ್ತುತ ಈ ಕಂಪನಿ ಗ್ರಾಹಕರಿಗೆ ಭರ್ಜರಿ ಕೊಡುಗೆಗಳನ್ನು ಘೋಷಿಸಿದೆ. ಸಾಮಾನ್ಯವಾಗಿ ೨೦ ಗ್ರಾಂ ಪ್ಯಾಕ್‌ನಲ್ಲಿ ಲಭಿಸುವ ನೋಮಾರ್ಕ್ಸ್ ಫಾರ್ ಡ್ರೈ ಸ್ಕಿನ್ ಕ್ರೀಮ್‌ನಲ್ಲಿ ಈಗ ಇನ್ನೂ ಐದು ಗ್ರಾಂ ಕ್ರೀಂ ಮುಫತ್ತು. ಅಷ್ಟೇ ಆಲ್ಲ, ಜೊತೆಗೆ ಪ್ಯಾಕ್‌ನೊಳಗೆ ಕಂಪನಿಯ ಫೇಸ್ ವಾಶ್ ಲೋಷನ್ ನಿವ್ವಳ ಉಚಿತ. ೨೫ ಗ್ರಾಂ ಪ್ಯಾಕ್‌ಗೆ ೭೦ ರೂ.
ಮುಖದ ಜೊತೆಗೆ ಜೇಬಿಗೂ ತಣ್ಣನೆ ಅನುಭವ!

ಕಿತ್ತಲೆ ಬಣ್ಣದ ಪಲ್ಸರ್ ಬಂದಿದೆ...
ಬಜಾಜ್ ಆಟೋ ಲಿ. ಸ್ಪೋರ್ಟ್ಸ್ ಬೈಕ್‌ಗಳ ವಿಭಾಗದಲ್ಲಿ ಪಡೆದಿರುವ ಖ್ಯಾತಿಯಿಂದ ಸ್ಫೂರ್ತಿ ಪಡೆದು ಈಗ ಎರಡು ವಿಭಿನ್ನ ಕಿತ್ತಲೆ ಬಣ್ಣ ವೈವಿಧ್ಯದ ಪಲ್ಸರ್ ಬೈಕ್‌ನ್ನು ರಸ್ತೆಗೆ ಬಿಟ್ಟಿದೆ. ಪಲ್ಸರ್ ೧೮೦. ೨೨೦, ೨೨೦ಎಫ್ ವರ್ಗದ ಬೈಕ್‌ಗಳು ಈಗ ಆರೆಂಜ್ ಬಣ್ಣದಲ್ಲಿ ಲಭ್ಯ.
ಸೂರ್ಯ ರಶ್ಮಿಗೆ ಅರಿಸಿನ ಮಿಶ್ರಿತ ಕೇಸರಿಯಾಗಿ ಹೊಳೆಯುವ ಬೈಕ್, ನೆರಳಿನಲ್ಲಿ ಕೆಂಪುಕೆಂಪಾದ ಅರೆಂಜ್ ಬಣ್ಣವನ್ನು ಪ್ರತಿಫಲಿಸುತ್ತದಂತೆ. ಬೆಲೆಯಲ್ಲಿ ರಾಜಿಯಿಲ್ಲ, ೭೧,೪೩೦ ರೂ.ನಿಂದ ಆರಂಭ. ಪಲ್ಸರ್ ಸರಣಿಯ ಇಂಜಿನ್‌ನಲ್ಲಿ ಯಾವುದೆ ಬದಲಾವಣೆಯಿಲ್ಲ ಎಂದು ಸಾರಿರುವ ಕಂಪನಿಯ ಮೋಟಾರ್ ಸೈಕಲ್ ವ್ಯವಹಾರದ ಆಧ್ಯಕ್ಷ ಎಸ್.ಶ್ರೀಧರ್, ನಾವು ಭಾರತೀಯ ಮತ್ತು ಜಪಾನಿನ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಸ್ಪೋರ್ಟ್ಸ್ ವಿಭಾಗದ ಶೇ.೫೦ರಷ್ಟು ಮಾರುಕಟ್ಟೆಯನ್ನು ಹೊಂದಿದ್ದೇವೆ ಎಂದು ಘೋಷಿಸಿದ್ದಾರೆ.
ಹೊಸ ಬಣ್ಣ, ಗ್ರಾಹಕನ ಕನಸುಗಳಿಗೆ ದೀಪಾವಳಿಯ ಚಿತ್ತಾರ ಮೂಡಿಸಬಹುದು!

ಭವಿಷ್ಯದ ತಯಾರಿಕೆ:

ಬೆರಳಿಗೆ ಅಂಟದ ಬೆಣ್ಣೆ!
ಡಬ್ಬಿಯಲ್ಲಿ ಅತ್ಯುತ್ತಮ ದರ್ಜೆಯ ಬೆಣ್ಣೆಯನ್ನು ಖರೀದಿಸಿ ತಂದರೂ ಅದನ್ನು ಬಳಸುವಾಗ ಚಮಚಕ್ಕೆ ಅಥವಾ ಕೈಗೆ ಅಂಟಿ ವ್ಯರ್ಥವಾಗುವ ಪ್ರಮಾಣದ ಬಗ್ಗೆ ಆತಂಕಿತರಾಗುತ್ತಿರುವಿರೇ? ಹಾಗಲ್ಲ ಎಂದಾದರೆ, ಸುಲಭ ಮಾದರಿಯಲ್ಲಿ ಬ್ರೆಡ್ಡಿಗೆ ಬೆಣ್ಣೆಯನ್ನು ಹದವಾಗಿ ಹಚ್ಚುವ ತಂತ್ರಜ್ಞಾನದ ಕುರಿತು ಯೋಚಿಸಿದ್ದೀರೆ?
ಬರಲಿದೆ, ಸ್ಟಿಕ್ ಬೆಣ್ಣೆ! ಮಗುವೊಂದು ಸಲೀಸಾಗಿ ಫೆವಿಸ್ಟಿಕ್ ಗಮ್ ಬಳಸುವುದನ್ನು ನೋಡಿದವರಿಗೆ ನೂತನ ಪ್ಯಾಕಿಂಗ್‌ನ ಬೆಣ್ಣೆ ಇಷ್ಟವಾಗಬಹುದು. ಸದ್ಯ ಯಾವುದೇ ಕಂಪನಿ ಈ ತಂತ್ರ ಬಳಸಿಲ್ಲ ಮತ್ತು ಯಾರಿಗೂ ಪೇಟೆಂಟ್ ಹಕ್ಕು ಸಿಕ್ಕಿದಂತಿಲ್ಲ.
ಇದನ್ನು ಓದಿ ಜಾರಿಗೆ ತರುವ ಎಲ್ಲ ಸಾಧ್ಯತೆಗಳಿವೆ!

-ಮಾವೆಂಸ, ಈ ಮೇಲ್- mavemsa@gmail.com


ಫೋನ್-08183 236068, 9241178962, 9886407592


 
200812023996