ಬುಧವಾರ, ಡಿಸೆಂಬರ್ 22, 2010

ಫ್ಲೋರೈಡ್ ಎಂಬ ಸೂಯಿಸೈಡ್ ವ್ಯವಹಾರ!






ಟೂತ್‌ಪೇಸ್ಟ್, ಟೂತ್‌ಪೇಸ್ಟ್....


"ಪುಟ್ಟಾ, ಹಲ್ಲು ಬ್ರಶ್ ಮಾಡಿದೆಯಾ?" ಆಗ ತಾನೇ ಎದ್ದ ಮಗನಿಗೆ ತಾಯಿ ವಿಚಾರಿಸುವ ಪರಿ. ಅಮ್ಮನ ಕಾಳಜಿ. ನಿಮ್ಮ ಕಣ್ಣಲ್ಲಿ ಮೆಚ್ಚುಗೆಯ ಸರ್ಟಿಫಿಕೇಟ್. ಇದೇ ಅಭಿಪ್ರಾಯ ಮುಂದಿನ ಒಂದು ಡಜನ್ ಪ್ಯಾರಗಳನ್ನು ಗಂಭೀರವಾಗಿ ನೀವು ಓದಿದ್ದೇ ಆದರೆ ಗಾಯಬ್!
ಅತ್ಯಂತ ಕಡಿಮೆ ವೆಚ್ಚಕ್ಕೆ ತಯಾರಾಗುವ ಟೂತ್‌ಪೇಸ್ಟ್‌ಗಳು ೧೦೦ ಗ್ರಾಂಗೆ ೧೫ರಿಂದ ೪೦ ರೂ.ವರೆಗೂ ಮಾರಾಟದ ಬೆಲೆ ಹೊಂದಿವೆ. ಬಹುಪಾಲು ಮೊತ್ತವನ್ನು ತಯಾರಕರು ಪ್ಯಾಕಿಂಗ್ ಶ್ರೀಮಂತಿಕೆಗೆ ಹಾಗೂ ಜಾಹೀರಾತು ವಿಜೃಂಭಣೆಗೆ ವಿನಿಯೋಗಿಸುವುದೇ ಟೂತ್‌ಪೇಸ್ಟ್ ಮಾರುಕಟ್ಟೆಯ ವಿಶೇಷ. ಹಾಗಿದ್ದೂ ಅವರು ನಮಗೆ ಉಣಿಸುತ್ತಿರುವುದು ವಿಷ!
ಮಾರುಕಟ್ಟೆಯಲ್ಲಿರುವ ಟೂತ್‌ಪೇಸ್ಟ್‌ಗಳಲ್ಲಿರುವುದು ಫ್ಲೋರೈಡ್ ಎಂಬ ವಿಲನ್. ವಿಪರ್ಯಾಸವೆಂದರೆ, ಈ ಫ್ಲೋರಿಡೇಷನ್ ಕಾರಣದಿಂದಾಗಿಯೇ ಟೂತ್‌ಪೇಸ್ಟ್ ಬೆಲೆ ಸಾಮಾನ್ಯಕ್ಕಿಂತ ಹತ್ತು ರೂಪಾಯಿ ಹೆಚ್ಚು. ಈ ಹಿಂದೆ ಅಯೋಡಿನ್‌ನ್ನು ಉಪ್ಪಿಗೆ ಬೆರೆಸುವ ವಿಚಾರದಲ್ಲಿ ಕಡ್ಡಾಯದ ಕಾನೂನು ತರಲು ಯಶಸ್ವಿಯಾದ ಉಪ್ಪು ತಯಾರಕ ಬೃಹತ್ ಕಂಪನಿಗಳ ಲಾಬಿ ಗೊತ್ತಿದ್ದವನಿಗೆ ಈ ಫ್ಲೋರೈಡ್ ಬೆರೆಸುವಿಕೆಯ ಹಿಂದಿನ ಅಂತಹ ಪುಟ್ಟ ಅನುಮಾನ ಕಾಡಬಹುದು.
೧೯೯೭ರಲ್ಲಿ ಅಮೆರಿಕದ ಡೆಂಟಲ್ ಅಸೋಸಿಯೇಷನ್ ಟೂತ್‌ಪೇಸ್ಟ್ ತಯಾರಕರ ಸಹಕಾರದಿಂದ ಒಂದು ಸಂಶೋಧನೆ ನಡೆಸುತ್ತದೆ. ಓರ್ವ ವ್ಯಕ್ತಿ ಒಂದು ದಿನಕ್ಕೆ ಶಿಫಾರಸು ಮಾಡಿದಂತೆ ಒಂದು ಗ್ರಾಂ ಟೂತ್‌ಪೇಸ್ಟ್‌ನಿಂದ ಹಲ್ಲು ತಿಕ್ಕಿದರೆ ವಸಡಿನ ಮೂಲಕ ದೇಹದೊಳಗೆ ೦.೩ರಿಂದ ೦.೪ ಗ್ರಾಂಗಳಷ್ಟು ಫ್ಲೋರೈಡ್ ಪೂರೈಕೆಯಾಗುತ್ತದೆ. ಅಂದರೆ ಒಂದು ದಿನಕ್ಕೆ ಮನುಷ್ಯನಿಗೆ ಅಗತ್ಯವಾದ ಫ್ಲೋರೈಡ್‌ನ ಅರ್ಧ ಭಾಗ ಸಿಕ್ಕಂತೆ. ಇದು ಪ್ರತಿ ದಿನ ಒಮ್ಮೆ ಮಾತ್ರ ಬ್ರಶ್ ಮಾಡಿರುವವರ ಲೆಕ್ಕ. ಊಹಿಸಿಕೊಳ್ಳಿ, ಊಟಕ್ಕೆ ಮುನ್ನ - ಮಲಗುವ ಮೊದಲು ಎಂದು ದಿನಕ್ಕೆ ೩-೪ ಬಾರಿ ಬ್ರಶ್ ಮಾಡುವವರ ಗತಿ?
ಅಷ್ಟಕ್ಕೂ ಫ್ಲೋರೈಡ್ ನಮ್ಮ ದೇಹಕ್ಕೆ ನಾನಾ ರೀತಿಯಲ್ಲಿ ಒದಗುತ್ತಿರುತ್ತದೆ. ದೊಡ್ಡ ಪ್ರಮಾಣದಲ್ಲಿ ಮನುಷ್ಯನಿಗೆ ಫ್ಲೋರೈಡ್ ಸೇರ್ಪಡೆಯಾಗುವುದು ಕುಡಿಯುವ ನೀರಿನಿಂದ. ಹಾಗೆಯೇ ಮೀನು, ಟೀಗಳಲ್ಲಿ ಫ್ಲೋರೈಡ್ ಪ್ರಮಾಣ ಶ್ರೀಮಂತ. ಆಹಾರ ಪದಾರ್ಥ, ಅದರಲ್ಲೂ ರಾಸಾಯನಿಕ ಹಾಗೂ ಕ್ರಿಮಿನಾಶಕಗಳನ್ನು ಬಳಸಿ ಬೆಳೆದ ಆಹಾರ ಧಾನ್ಯಗಳಲ್ಲಿ ಫ್ಲೋರೈಡ್ ಪ್ರಮಾಣ ವಿಪರೀತ. ಅಂದಮೇಲೆ ಮನುಷ್ಯನಿಗೆ ಬೇಕಾದ ದಿನಂಪ್ರತಿ ೦.೬ ಗ್ರಾಂ ಫ್ಲೋರೈಡ್ ತಾನೇತಾನಾಗಿ ಲಭ್ಯವಾಗಿರುತ್ತದೆ. ಇಷ್ಟರಮೇಲೆ ಟೂತ್‌ಪೇಸ್ಟ್‌ಗೆ ಫ್ಲೋರೈಡ್ ಬೆರೆಸುವುದೆಂದರೆ ವಿಷ ಉಣ್ಣಿಸಿದಂತೆಯೇ ಸರಿ.
ಭಾರತದಲ್ಲಿ, ೧೯೩೩ರಷ್ಟು ಹಿಂದೆಯೇ ಮದ್ರಾಸ್ ಆಡಳಿತವಿದ್ದಲ್ಲಿ ಫ್ಲೋರೈಡ್‌ನ ಹೆಚ್ಚು ಸೇವನೆಯ ಪ್ರಕರಣಗಳು ವರದಿಯಾಗಿದ್ದವು. ಫ್ಲೋರೋಸಿಸ್ ಸಮಸ್ಯೆಯನ್ನು ಆಗ ‘ಮೋಟೆಡ್ ಎನಾಮೆಲ್’ ಎಂದು ಕರೆಯಲಾಗುತ್ತಿತ್ತು. ಫ್ಲೋರೈಡ್‌ನ್ನು ಸೀಸಕ್ಕಿಂತ ಹೆಚ್ಚು ವಿಷಕಾರಿ ಎಂದು ಪರಿಗಣಿಸಲಾಗಿದೆ. ಅರ್ಸೆನಿಕ್‌ಗಿಂತ ಚೂರೇ ಚೂರು ಕಡಿಮೆ ವಿಷವಷ್ಟೇ. ಮಲೇಸಿಯಾದ ಉಡುಸಾನ್ ಕನ್ಸ್ಯೂಮರ್ ಎಂಬ ಪತ್ರಿಕೆ ಫ್ಲೋರೈಡ್‌ನ್ನು ಸಯನೇಡ್ ಎಂದೇ ೨೦೦೦ದಲ್ಲಿ ವಿವರಿಸಿತ್ತು.
೧೯೯೦ ಹಾಗೂ ೯೧ರಲ್ಲಿ ಅಮೆರಿಕದಲ್ಲಿ ನ್ಯಾಷನಲ್ ಟ್ಯಾಕ್ಸಿಕೋಲಜಿ ಪ್ರೋಗ್ರಾಂ (ಎಲ್‌ಟಿಸಿ) ನಡೆಸಿದ ಸಂಶೋಧನೆಗಳಿಂದ ಫ್ಲೋರೈಡ್ ಬಾಲ್ಯಾವಸ್ಥೆಯ ಕ್ಯಾನ್ಸರ್‌ಗಳಿಗೆ ಕಾರಣವಾಗುತ್ತದೆ ಎಂದೇ ಹೇಳಲಾಗಿತ್ತು. ಭಾರತದ ಮಟ್ಟಿಗೆ ಟೂತ್‌ಪೇಸ್ಟ್‌ಗಳಲ್ಲಿ ಫ್ಲೋರೈಡ್ ಸೇರಿಸುವುದನ್ನು ಅಕ್ಷರಶಃ ನಿಶೇಧಿಸಬೇಕಿತ್ತು. ೧೯೮೬ರ ದಿನಗಳಲ್ಲಿಯೇ ರಾಜೀವ್ ಗಾಂಧಿ ರಾಷ್ಟ್ರೀಯ ಕುಡಿಯುವ ನೀರು ಯೋಜನೆ ಜಾರಿಗೊಳಿಸುವಾಗ ಹಲವು ರಾಜ್ಯಗಳಲ್ಲಿ ನೀರಿನಲ್ಲಿರುವ ಫ್ಲೋರೈಡ್ ಅಂಶವನ್ನು ಲೆಕ್ಕಹಾಕಲಾಗಿತ್ತು. ಪಶ್ಚಿಮ ಬಂಗಾಳದಲ್ಲಿ ೧೨ ಪಿಪಿಎಂ, ಒರಿಸ್ಸಾದಲ್ಲಿ ೮.೨ರಿಂದ ೧೩.೨ ಪಿಪಿಎಂ, ಗುಜರಾತ್‌ನಲ್ಲಿ ಗರಿಷ್ಠ ೧೦.೭ ಪಿಪಿಎಂ, ಕರ್ನಾಟಕದಲ್ಲಿ ೦.೮ರಿಂದ ೭.೪ ಪಿಪಿಎಂವರೆಗೆ ಫ್ಲೋರೈಡ್ ಇರುವುದು ಪತ್ತೆಯಾಗಿತ್ತು. ವಾಸ್ತವವಾಗಿ, ನೀರಿನಲ್ಲಿರಬೇಕಾದ ಫ್ಲೋರೈಡ್ ಪ್ರಮಾಣ ೧.೫ ಪಿಪಿಎಂ ದಾಟುವಂತಿಲ್ಲ! ಮೇಲಿನ ರಾಜ್ಯಗಳಲ್ಲದೆ ತಮಿಳುನಾಡು, ಮಹಾರಾಷ್ಟ್ರ, ರಾಜಾಸ್ತಾನ, ಜಮ್ಮು ಮತ್ತು ಕಾಶ್ಮೀರ..... ಎಲ್ಲೆಂದರೆ ಅಲ್ಲಿ ಫ್ಲೋರೈಡ್ ಪಿಪಿಎಂ ನೀರಿನಲ್ಲಿ ಅತ್ಯಧಿಕ.
ಕುಡಿಯುವ ನೀರಿನಲ್ಲಿ ಅತ್ಯಧಿಕ ಫ್ಲೋರೈಡ್ ಹೊಂದಿರುವ ದೇಶಗಳು ವಿಶ್ವದಲ್ಲಿ ಒಟ್ಟು ೨೩. ಅದರಲ್ಲಿ ಭಾರತವೂ ಒಂದು. ಭಾರತದಂತ ದೇಶಗಳಲ್ಲಿ ಹೀಗಾಗಲು ಹಸಿರು ಕ್ರಾಂತಿಯ ಹುಚ್ಚು ಕಾರಣೀಭೂತ. ರಾಸಾಯನಿಕಗಳನ್ನು ಕೃಷಿಯಲ್ಲಿ ಸುರಿಯಲಾಗುತ್ತಿದೆ. ಇದರ ಬಹುಪಾಲು ಶೇಷ ಬಳಕೆಯಾಗದೆ ನೀರನ್ನು ಸೇರುತ್ತದೆ. ಪಾಸ್ಫೇಟ್ ರಾಸಾಯನಿಕ, ಕೊಳಚೆ, ಕ್ರಿಮಿನಾಶಕಗಳೇ ಹಿನ್ನಲೆಯಲ್ಲಿವೆ ಎಂದು ೧೯೯೭ರಲ್ಲಿ ಪರಿಸರ ಸಂರಕ್ಷಣಾ ಸಂಸ್ಥೆ ಹೇಳೀತ್ತು.
ಹೀಗಿದ್ದೂ ಮಕ್ಕಳ ಟೂತ್‌ಪೇಸ್ಟ್‌ನಲ್ಲಿಯೂ ಧಾರಾಳವಾಗಿ ಫ್ಲೋರೈಡ್ ಸೇರಿಸುವ ಭಯಾನಕ ಪ್ರವೃತ್ತಿ ಕಂಡುಬಂದಿದೆ. ಒಂದು ಲೆಕ್ಕದಲ್ಲಿ, ಎರಡು ವರ್ಷದ ಮಗು ಬ್ರಶ್‌ಗೆ ಹಾಕಿದ ಅರ್ಧದಷ್ಟು ಪೇಸ್ಟ್‌ನ್ನು ತಿಂದುಬಿಡುತ್ತದೆ! ಒಂದೊಮ್ಮೆ ಟೂತ್‌ಪೇಸ್ಟ್‌ನಲ್ಲಿ ಫ್ಲೋರೈಡ್ ಇತ್ತೆಂದಾದರೆ ಪೋಷಕರ ನಿರೀಕ್ಷೆಗೆ ವ್ಯತಿರಿಕ್ತವಾದ ಬೆಳವಣಿಗೆ ಹಲ್ಲಿನ ಬ್ರಶಿಂಗ್‌ನಿಂದ ಆದಂತೆ. ದಂತ ತಜ್ಞರು ಹಾಗೆಂದೇ ತಂದೆತಾಯಿಯರೇ ಬ್ರಶ್ ಮಾಡಿಸಬೇಕೆಂದು ಮತ್ತು ಮಕ್ಕಳ ಬಾಯಿಯನ್ನು ಸ್ವಚ್ಛವಾಗಿ ತೊಳೆಯಬೇಕೆಂದೂ ಬಯಸುತ್ತಾರೆ. ವಿಪರ್ಯಾಸವೆಂದರೆ, ನೀರಿನಲ್ಲಿಯೇ ಧಾರಾಳ ಫ್ಲೋರೈಡ್ ಬೆರೆತಿರುವಾಗ ಏನು ಮಾಡುವುದು?
ಬ್ರಾಂಡ್ ಟೂತ್‌ಪೇಸ್ಟ್‌ಗಳ ಫ್ಲೋರೈಡ್ ಮಟ್ಟವನ್ನು ನೆನಪಿನಲ್ಲಿಟ್ಟುಕೊಳ್ಳಿ. ಕೋಲ್ಗೇಟ್ ಕಿಡ್ಸ್‌ನಲ್ಲಿ ೪೯೨ ಪಿಪಿಎಂಇದೆ. ಈ ಕಂಪನಿಯ ವಯಸ್ಕರ ಐದು ಮಾದರಿಯಲ್ಲಿ ೫೨೭ರಿಂದ ೭೯೭ ಪಿಪಿಎಂವರೆಗೆ ಫ್ಲೋರೈಡ್ ಬೆರೆಸಲಾಗಿದೆ. ಪೆಪ್ಸೊಡೆಂಟ್ ಕಿಡ್ಸ್ ಟೂತ್‌ಪೇಸ್ಟ್‌ನ ಟಾಮ್ ಎಂಡ್ ಜರ್ರಿ, ಬಾರ್ಬಿ ಮಾದರಿಗಳಲ್ಲಿ ಅನುಕ್ರಮವಾಗಿ ೯೧೧ ಹಾಗೂ ೯೧೭ ಪಿಪಿಎಂ ಫ್ಲೋರೈಡ್ ಇದೆ. ಅದೇ ಪೆಪ್ಸೊಡೆಂಟ್‌ನ ನಾಲ್ಕು ಹಿರಿಯರ ಟೂತ್‌ಪೇಸ್ಟ್‌ಗಳಲ್ಲಿ ಮಕ್ಕಳದರಲ್ಲಿರುವುದಕ್ಕಿಂತ ಕಡಿಮೆ, ೬೦೩ರಿಂದ ೬೯೩ ಪಿಪಿಎಂ ಫ್ಲೋರೈಡ್ ಮಾತ್ರ ಇದೆ! ಮುಖ್ಯವಾಗಿ, ಟೂತ್‌ಪೇಸ್ಟ್ ತಯಾರಕರು ಮಕ್ಕಳಿಗೆ ಮತ್ತು ಹಿರಿಯರಿಗೆ ವಿಭಿನ್ನ ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿರುವ ವಿವೇಚನೆಯನ್ನೇ ಪ್ರಶ್ನಿಸಬೇಕಾಗಿದೆ.
ನಿಜ, ಸರಳ ವಾದದಲ್ಲಿ ಫ್ಲೋರೈಡ್ ಮನುಷ್ಯನಿಗೆ ಮಾಡುವ ಉಪಕಾರಗಳನ್ನು ಪಟ್ಟಿ ಮಾಡಬಹುದು. ಮೂಳೆ ಬೆಳವಣಿಗೆಗೆ, ಹಲ್ಲಿನ ಎನಾಮೆಲ್ ರಚನೆಗೆ ಫ್ಲೋರೈಡ್ ಬೇಕು. ಎನಾಮೆಲ್‌ಗೆ ದೃಢತೆ ಕೊಡುವ ಜೊತೆಗೆ ಬ್ಯಾಕ್ಟೀರಿಯಾಗಳಿಂದ ರಕ್ಷಣೆ ಒದಗಿಸುತ್ತದೆ. ಅಷ್ಟೇಕೆ, ಹಲ್ಲು ಹುಳುಕಾಗುವುದರಿಂದಲೂ ಫ್ಲೋರೈಡ್ ಸಂರಕ್ಷಿಸುವುದು ಖಚಿತ. ಆದರೆ ನಿಗದಿತ ಮಟ್ಟ ದಾಟಿ ಫ್ಲೋರೈಡ್ ದೇಹಕ್ಕೆ ಸೇರುವುದರಿಂದಾಗುವ ಅಡ್ಡ ಪರಿಣಾಮಗಳು ‘ಹಲ್ಲು ಮೀರಿದ’ ವಿಚಾರ.
ಅಹ್ಮದಾಬಾದ್‌ನ ಪ್ರತಿಷ್ಠಿತ ಗ್ರಾಹಕ ಪರ ಸಂಸ್ಥೆ ಇನ್‌ಸೈಟ್ ನೀಡುವ ಸಲಹೆಗಳು ಅನುಸರಿಸಲು ಯೋಗ್ಯ. ‘ಮಕ್ಕಳಿಗೆ ಫ್ಲೋರೈಡ್ ಬೆರೆತ ಹಿರಿಯರ ಟೂತ್‌ಪೇಸ್ಟ್ ಬೇಡ. ಮಕ್ಕಳು ಮತ್ತು ಹಿರಿಯರಿಬ್ಬರಿಗೂ ಮಾರುಕಟ್ಟೆಯಲ್ಲಿ ಲಭ್ಯವಿರುವ ಫ್ಲೋರೈಡ್ ಬೆರೆತ ಟೂತ್‌ಪೇಸ್ಟ್ ಬಳಸದಿರುವುದೇ ಕ್ಷೇಮ. ಕೇವಲ ವೈದ್ಯರು ಶಿಫಾರಸು ಮಾಡಿದ ಸಂದರ್ಭಗಳಲ್ಲಿ ಮಾತ್ರ ಫ್ಲೋರೈಡ್ ಪೇಸ್ಟ್ ಬಳಸಬೇಕು. ಮಕ್ಕಳು ಬ್ರಶ್ ಮಾಡುವಾಗಲಂತೂ ಹಿರಿಯರು ಅದನ್ನು ಅವು ತಿನ್ನದಂತೆ ಮೇಲ್ವಿಚಾರಣೆ ತೋರಲೇಬೇಕು.’
ಟೂತ್‌ಪೇಸ್ಟ್ ಕೊಳ್ಳುವಾಗ ಬರೀ ಫ್ಲೋರೈಡ್ ಮಾತಲ್ಲ. ಅತ್ಯಂತ ಸಣ್ಣ ನಾಜಲ್‌ನ ಟ್ಯೂಬ್‌ಗೆ ಆದ್ಯತೆ ನೀಡಬೇಕು. ದೊಡ್ಡ ನಾಜಲ್‌ನ ಟ್ಯೂಬ್‌ನಲ್ಲಿ ಒಮ್ಮೆಗೆ ಹೆಚ್ಚು ಪೇಸ್ಟ್ ಹೊರಬಿದ್ದು ವ್ಯರ್ಥವಾಗುತ್ತದೆ. ಡ್ರಗ್ಸ್-ಕಾಸ್ಮೆಟಿಕ್ ಕಾನೂನಿನ ಪ್ರಕಾರ ಟೂತ್‌ಪೇಸ್ಟ್‌ಗಳು ತಮ್ಮೊಳಗಿನ ಪದಾರ್ಥಗಳನ್ನು ಪ್ಯಾಕ್‌ನಲ್ಲಿ ಉಲ್ಲೇಖಿಸಲೇಬೇಕು. ಕಂಪನಿಗಳು ಚಾಪೆ ಕೆಳಗೆ ತೂರಿಬಿಡುತ್ತವೆ. ‘ಈ ಪೇಸ್ಟ್ ೧೦೦೦ ಪಿಪಿಎಂನವರೆಗೆ ಫ್ಲೋರೈಡ್ ಹೊಂದಿವೆ’ ಎಂದುಬಿಡುತ್ತವೆ. ಇದು ಕಾನೂನುಬಾಹಿರವಷ್ಟೇ ಅಲ್ಲ, ಬಳಕೆದಾರ ಅಸಲಿ ಫ್ಲೋರೈಡ್ ಇರುವ ಪ್ರಮಾಣ ಗೊತ್ತಾಗದೆ ಗೊಂದಲಕ್ಕೀಡಾಗುತ್ತಾನೆ.
ಯಾಕೋ ಗೊತ್ತಿಲ್ಲ, ಈವರೆಗೂ ವೈದ್ಯ ಪ್ರಪಂಚ ಫ್ಲೋರೈಡ್‌ಯುಕ್ತ ಟೂತ್‌ಪೇಸ್ಟ್ ಕುರಿತಂತೆ ಒಂದು ಜಾಗೃತಿಯ ಧ್ವನಿ ಎತ್ತಿಲ್ಲ. ತಯಾರಕರು ಸಾವಿರ ಹೇಳಲಿ,
ಯಾಕೋ ಗೊತ್ತಿಲ್ಲ, ಈವರೆಗೂ ವೈದ್ಯ ಪ್ರಪಂಚ ಫ್ಲೋರೈಡ್‌ಯುಕ್ತ ಟೂತ್‌ಪೇಸ್ಟ್ ಕುರಿತಂತೆ ಒಂದು ಜಾಗೃತಿಯ ಧ್ವನಿ ಎತ್ತಿಲ್ಲ. ತಯಾರಕರು ಸಾವಿರ ಹೇಳಲಿ, ಇಂದಿನ ಪರಿಸ್ಥಿತಿಯಲ್ಲಿ ಫ್ಲೋರೈಡ್‌ರಹಿತ ಟೂತ್‌ಪೇಸ್ಟ್ ಬಳಸುವುದು ಬುದ್ಧಿವಂತಿಕೆ. ಆದರೆ ಒಂದು ಪ್ರಶ್ನೆ ಕಾಡದಿರದು. ಫ್ಲೋರೈಡ್ ಇಲ್ಲದ ಟೂತ್‌ಪೇಸ್ಟ್‌ಗಳನ್ನು ಕಂಡುಹಿಡಿಯುವುದು ಹೇಗೆ? ನಿಜಕ್ಕಾದರೆ ಇದರ ಪರಿಹಾರ ತೀರಾ ಸುಲಭ. ಪ್ರತಿ ಟೂತ್‌ಪೇಸ್ಟ್ ಬ್ರಾಂಡ್‌ನ ಕವರ್‌ನ ಮೇಲೆ ತುಸು ಸಣ್ಣ ಅಕ್ಷರದಲ್ಲಿ ಅದರೊಳಗೆ ಬಳಸಿರುವ ಪದಾರ್ಥಗಳ ಪಟ್ಟಿ ಇರುತ್ತದೆ. ಆ ಪಟ್ಟಿಯಲ್ಲಿ ಫ್ಲೋರೈಡ್ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಸುಮ್ಮನೆ ಕೆಲವೇ ಕೆಲವು ಫ್ಲೋರೈಡ್‌ರಹಿತ ಟೂತ್‌ಪೇಸ್ಟ್ ಬ್ರಾಂಡ್‌ಗಳನ್ನು ಹೆಸರಿಸುವುದಾದರೆ, ಅಜಂತಾ ಹೆಲ್ತ್, ಸ್ಮೈಲೆ ಟೂತ್‌ಪೇಸ್ಟ್, ಶಕ್ತಿ........
ನೀವೇನಂತೀರೋ?



-ಮಾವೆಂಸ
-08183 236068, 9886407592, 9241178962
ಇ ಮೇಲ್- mavemsa@gmail.com

ಮಂಗಳವಾರ, ನವೆಂಬರ್ 9, 2010

‘ಉದಯವಾಣಿ’ಯಲ್ಲಿ ಮಾರುಕಟ್ಟೆ ಮಿಂಚು

ಕಳೆದ ಕೆಲವಾರಗಳಿಂದ ‘ಉದಯವಾಣಿ’ಯಲ್ಲಿ ‘ಮಾರುಕಟ್ಟೆ ಮಿಂಚು’ ಎಂಬ ಅಂಕಣ ಬರೆಯುತ್ತಿರುವೆ. ಭಾರೀ ವಿಶೇಷವೇನಿಲ್ಲ. ನಿಮಗೂ ಅದರ ಒಂದು ಝಲಕ್ ತೋರಿಸುವ ಏಕೈಕ ಉದ್ದೇಶದಿಂದ ಈ ಕಂತನ್ನು ನಿಮ್ಮ ಮುಂದೆ ಇರಿಸುತ್ತಿದ್ದೇನೆ.

ಮಾರುಕಟ್ಟೆ ಮಿಂಚು-೪

ಬಣ್ಣದ ಕುಕ್ಕರ್‌ನಿಂದ ಬೆಚ್ಚನೆ ಅಡುಗೆ!
ಸುರಕ್ಷತೆಯೇ ಆದ್ಯತೆಯಾಗಿದ್ದ ಕುಕ್ಕರ್ ವಿಭಾಗ ಕೂಡ ಈಗ ಸೌಂದರ್ಯ ಪ್ರತಿಪಾದಕವಾಗಿದೆ! ನಿಜ, ಕುಕ್ಕರ್ ಎಂದರೆ ಪ್ರೆಸ್ಟೀಜ್ ಎಂಬ ಪ್ರತಿಷ್ಟೆಯ ಮಾತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅದರ ತಯಾರಕ ಟಿಟಿಕೆ ಈಗ ನಾಲ್ಕು ವರ್ಣಗಳ ಆಕರ್ಷಕ ಆಪಲ್ ಕುಕ್ಕರ್ ಸರಣಿಯನ್ನು ಮಾರುಕಟ್ಟೆಗೆ ಬಿಟ್ಟಿದೆ.
ಅಲ್ಯುಮಿನಿಯಂ, ಗ್ರೀನ್, ರೆಡ್ ಮತ್ತು ಹಾರ್ಡ್ ಅನೋಡೈಸ್ಡ್‌ಮಾದರಿಯ ಕುಕ್ಕರ್‌ಗಳು ಬರೀ ಕಣ್ಣಿಗೆ ತಂಪಲ್ಲ, ಇದರಲ್ಲಿ ಅತ್ಯುತ್ತಮ ದರ್ಜೆಯ ವೈಟ್ ವಾಲ್ವ್, ನೂತನ ಶೈಲಿಯ ಸ್ಟೈನ್‌ಲೆಸ್ ಸ್ಟೀಲ್ ಹಿಡಿಕೆ, ಸ್ವಯಂ ಚಾಲನೆಯ ವಿಷಲ್ ಸೌಲಭ್ಯವೂ ಅಡಕವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಮೂರು ಲೀಟರ್ ವರ್ಗದ ಈ ಕುಕ್ಕರ್‌ಗಳು ೮೮೨ರೂ.ನಿಂದ ೧೩೦೫ರೂ. ದರದಲ್ಲಿ ಮಾರಾಟಕ್ಕಿದೆ. ಹಬ್ಬದ ಈ ಕಾಲದಲ್ಲಿ ನೂರಾರು ರೂ.ಗಳ ಸೋಡಿಯೂ ಇದೆ.

ಮೊಡವೆಗಳ ಗೊಡವೆಗೆ ನೋಮಾರ್ಕ್ಸ್......
ಮುಖದ ಕಪ್ಪು, ಮೊಡವೆಗಳ ಆಕ್ರಮಣದಿಂದ ಬಸವಳಿದವರಿಗೆ ಓಝೋನ್ ಆಯುರ್ವೇದಿಕ್ಸ್‌ನ ನೋಮಾರ್ಕ್ಸ್‌ನ ಕ್ರೀಮ್ ಉಪಯೋಗಕಾರಿ ಎಂದು ಮೆಡಿಕಲ್ಸ್ ವಲಯದಲ್ಲಿ ಹೇಳಲಾಗುತ್ತದೆ.
ಪ್ರಸ್ತುತ ಈ ಕಂಪನಿ ಗ್ರಾಹಕರಿಗೆ ಭರ್ಜರಿ ಕೊಡುಗೆಗಳನ್ನು ಘೋಷಿಸಿದೆ. ಸಾಮಾನ್ಯವಾಗಿ ೨೦ ಗ್ರಾಂ ಪ್ಯಾಕ್‌ನಲ್ಲಿ ಲಭಿಸುವ ನೋಮಾರ್ಕ್ಸ್ ಫಾರ್ ಡ್ರೈ ಸ್ಕಿನ್ ಕ್ರೀಮ್‌ನಲ್ಲಿ ಈಗ ಇನ್ನೂ ಐದು ಗ್ರಾಂ ಕ್ರೀಂ ಮುಫತ್ತು. ಅಷ್ಟೇ ಆಲ್ಲ, ಜೊತೆಗೆ ಪ್ಯಾಕ್‌ನೊಳಗೆ ಕಂಪನಿಯ ಫೇಸ್ ವಾಶ್ ಲೋಷನ್ ನಿವ್ವಳ ಉಚಿತ. ೨೫ ಗ್ರಾಂ ಪ್ಯಾಕ್‌ಗೆ ೭೦ ರೂ.
ಮುಖದ ಜೊತೆಗೆ ಜೇಬಿಗೂ ತಣ್ಣನೆ ಅನುಭವ!

ಕಿತ್ತಲೆ ಬಣ್ಣದ ಪಲ್ಸರ್ ಬಂದಿದೆ...
ಬಜಾಜ್ ಆಟೋ ಲಿ. ಸ್ಪೋರ್ಟ್ಸ್ ಬೈಕ್‌ಗಳ ವಿಭಾಗದಲ್ಲಿ ಪಡೆದಿರುವ ಖ್ಯಾತಿಯಿಂದ ಸ್ಫೂರ್ತಿ ಪಡೆದು ಈಗ ಎರಡು ವಿಭಿನ್ನ ಕಿತ್ತಲೆ ಬಣ್ಣ ವೈವಿಧ್ಯದ ಪಲ್ಸರ್ ಬೈಕ್‌ನ್ನು ರಸ್ತೆಗೆ ಬಿಟ್ಟಿದೆ. ಪಲ್ಸರ್ ೧೮೦. ೨೨೦, ೨೨೦ಎಫ್ ವರ್ಗದ ಬೈಕ್‌ಗಳು ಈಗ ಆರೆಂಜ್ ಬಣ್ಣದಲ್ಲಿ ಲಭ್ಯ.
ಸೂರ್ಯ ರಶ್ಮಿಗೆ ಅರಿಸಿನ ಮಿಶ್ರಿತ ಕೇಸರಿಯಾಗಿ ಹೊಳೆಯುವ ಬೈಕ್, ನೆರಳಿನಲ್ಲಿ ಕೆಂಪುಕೆಂಪಾದ ಅರೆಂಜ್ ಬಣ್ಣವನ್ನು ಪ್ರತಿಫಲಿಸುತ್ತದಂತೆ. ಬೆಲೆಯಲ್ಲಿ ರಾಜಿಯಿಲ್ಲ, ೭೧,೪೩೦ ರೂ.ನಿಂದ ಆರಂಭ. ಪಲ್ಸರ್ ಸರಣಿಯ ಇಂಜಿನ್‌ನಲ್ಲಿ ಯಾವುದೆ ಬದಲಾವಣೆಯಿಲ್ಲ ಎಂದು ಸಾರಿರುವ ಕಂಪನಿಯ ಮೋಟಾರ್ ಸೈಕಲ್ ವ್ಯವಹಾರದ ಆಧ್ಯಕ್ಷ ಎಸ್.ಶ್ರೀಧರ್, ನಾವು ಭಾರತೀಯ ಮತ್ತು ಜಪಾನಿನ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಸ್ಪೋರ್ಟ್ಸ್ ವಿಭಾಗದ ಶೇ.೫೦ರಷ್ಟು ಮಾರುಕಟ್ಟೆಯನ್ನು ಹೊಂದಿದ್ದೇವೆ ಎಂದು ಘೋಷಿಸಿದ್ದಾರೆ.
ಹೊಸ ಬಣ್ಣ, ಗ್ರಾಹಕನ ಕನಸುಗಳಿಗೆ ದೀಪಾವಳಿಯ ಚಿತ್ತಾರ ಮೂಡಿಸಬಹುದು!

ಭವಿಷ್ಯದ ತಯಾರಿಕೆ:

ಬೆರಳಿಗೆ ಅಂಟದ ಬೆಣ್ಣೆ!
ಡಬ್ಬಿಯಲ್ಲಿ ಅತ್ಯುತ್ತಮ ದರ್ಜೆಯ ಬೆಣ್ಣೆಯನ್ನು ಖರೀದಿಸಿ ತಂದರೂ ಅದನ್ನು ಬಳಸುವಾಗ ಚಮಚಕ್ಕೆ ಅಥವಾ ಕೈಗೆ ಅಂಟಿ ವ್ಯರ್ಥವಾಗುವ ಪ್ರಮಾಣದ ಬಗ್ಗೆ ಆತಂಕಿತರಾಗುತ್ತಿರುವಿರೇ? ಹಾಗಲ್ಲ ಎಂದಾದರೆ, ಸುಲಭ ಮಾದರಿಯಲ್ಲಿ ಬ್ರೆಡ್ಡಿಗೆ ಬೆಣ್ಣೆಯನ್ನು ಹದವಾಗಿ ಹಚ್ಚುವ ತಂತ್ರಜ್ಞಾನದ ಕುರಿತು ಯೋಚಿಸಿದ್ದೀರೆ?
ಬರಲಿದೆ, ಸ್ಟಿಕ್ ಬೆಣ್ಣೆ! ಮಗುವೊಂದು ಸಲೀಸಾಗಿ ಫೆವಿಸ್ಟಿಕ್ ಗಮ್ ಬಳಸುವುದನ್ನು ನೋಡಿದವರಿಗೆ ನೂತನ ಪ್ಯಾಕಿಂಗ್‌ನ ಬೆಣ್ಣೆ ಇಷ್ಟವಾಗಬಹುದು. ಸದ್ಯ ಯಾವುದೇ ಕಂಪನಿ ಈ ತಂತ್ರ ಬಳಸಿಲ್ಲ ಮತ್ತು ಯಾರಿಗೂ ಪೇಟೆಂಟ್ ಹಕ್ಕು ಸಿಕ್ಕಿದಂತಿಲ್ಲ.
ಇದನ್ನು ಓದಿ ಜಾರಿಗೆ ತರುವ ಎಲ್ಲ ಸಾಧ್ಯತೆಗಳಿವೆ!

-ಮಾವೆಂಸ, ಈ ಮೇಲ್- mavemsa@gmail.com


ಫೋನ್-08183 236068, 9241178962, 9886407592


ಮಂಗಳವಾರ, ಆಗಸ್ಟ್ 24, 2010

ಭಾರತ - ಪಾಕ್ ಭಾಯಿ ಭಾಯಿ!


ದೃಶ್ಯ ಒಂದು
ಮೊನ್ನೆ ಜೂನ್‌ನಲ್ಲಿ ನಡೆದ ವಿಂಬಲ್ಡನ್ ಎರಡನೇ ಸುತ್ತಿನ ಡಬರ್ಲ್ಸ ಪಂದ್ಯ. ಭಾರತದ ರೋಹನ್ ಬೋಪಣ್ಣ ಹಾಗೂ ಪಾಕಿಸ್ತಾನದ ಆಸಿಮ್ ಉಲ್ ಹಕ್ ಖುರೇಷಿ ವಿಶ್ವಾಸಪೂವೃಕ ಗೆಲುವನ್ನು ಪಡೆದು ನೆಟ್ ಬಳಿ ಬರುತ್ತಿದ್ದ ಸಂದರ್ಭ. ಖುರೇಷಿ ಬೋಪಣ್ಣರ ಕಿವಿಯಲ್ಲಿ ಉಸುರಿದ್ದು ಒಂದೇ ಮಾತು, "ನೋಡಲ್ಲಿ, ಪ್ರಪ್ರಥಮ ಬಾರಿಗೆ ವಿಂಬಲ್ಡನ್‌ನಲ್ಲಿ ಭಾರತ ಪಾಕ್ ಪ್ರೇಕ್ಷಕರು ಆಕ್ಕ ಪಕ್ಕ ಕೂತು ಒಂದೇ ತಂಡಕ್ಕೆ ಪ್ರೋತ್ಸಾಹದ ಚಪ್ಪಾಳೆ ಕೊಡುತ್ತಿದ್ದಾರೆ!"
ದೃಶ್ಯ ಎರಡು
ಖುರೇಷಿಯ ಜನ್ಮಸ್ಥಳ ಲಾಹೋರ್. ತಾಯಿ ನೋಶೀನ್ ಇಥೆಶಾಮ್. ಬೋಪಣ್ಣರ ಊರು ನಮ್ಮ ಕಡೆ, ಕೊಡಗು! ತಂದೆ ಎಂ.ಜಿ.ಬೋಪಣ್ಣ, ತಾಯಿ ಮಲ್ಲಿಕಾ. ಆದರೆ ಟ್ವಿಟ್ಟರ್‌ನ ತಮ್ಮ ಪುಟದಲ್ಲಿ ಖುರೇಷಿ ಬರೆಯುತ್ತಾರೆ, ಬೋಪಣ್ಣ ಎಂದರೆ ನನ್ನ ಸಹೋದರ. ಭಾರತದ ಆ ತಾಯಿ ಹೊಟ್ಟೆಯಲ್ಲಿ ಹುಟ್ಟಿದ್ದಾನಷ್ಟೇ!
ಬರೀ ಭಾರತ ಪಾಕ್ ದ್ವೇಷದ ಕತೆ ಕೇಳುವವರಿಗೆ ಈ ವೃತ್ತಾಂತಗಳಲ್ಲಿ ನಾಟಕೀಯತೆಯೋ, ಸಿನಿಕ ಕಲ್ಪನೆಗಳೋ ಕಂಡರೆ ಅದು ಇತಿಹಾಸದ ಕಹಿ ನೆನಪುಗಳ ಪ್ರಭಾವ ಎಂತಲೇ ಅರ್ಥೈಸಬೇಕು. ಹಾಗೆಂದು ಟೆನಿಸ್‌ನ ಬೋಪಣ್ಣ - ಖುರೇಷಿ ಜೋಡಿ ಉಭಯ ದೇಶಗಳ ಬಾಂಧವ್ಯದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗುತ್ತದೆ ಎಂದೂ ಯೋಚಿಸಬೇಕಿಲ್ಲ. ಆದರೆ ನಮ್ಮ ಸಿಟ್ಟು, ದ್ವೇಷಗಳನ್ನು ವಿಷಯಾಧಾರಿತವನ್ನಾಗಿ ಮಾಡಲು, ವೈಮನಸ್ಯವನ್ನು ಕೇವಲ ರಾಜಕೀಯ ಅಂಕಣದಲ್ಲಿ ಮಾತ್ರ ಪ್ರದರ್ಶಿಸುವ ಪ್ರವೃತ್ತಿಯನ್ನು ತೋರುವಿಕೆಯಲ್ಲಿಯೇ ಈ ಮೂರು ದಿನದ ಬಾಳಿನ ಸಾರ್ಥಕತೆ ಇದೆ. ಅದಕ್ಕೆ ಶ್ರೀಕಾರವನ್ನು ಈ ಜೋಡಿ ಹಾಕಿಕೊಟ್ಟಿದ್ದಾರೆ.
ಬೋಪಣ್ಣ ಖುರೇಷಿಯರಿಬ್ಬರಿಗೂ ಅದಾಗಲೇ ಬರೋಬ್ಬರಿ ೩೦ ವರ್ಷ. ಬಹುಷಃ ಸಿಂಗಲ್ಸ್ ವಿಭಾಗದಲ್ಲಿ ಅವರ ಅವಕಾಶಗಳು ಕುಂಟುತ್ತಬಂದಿವೆ. ಬೋಪಣ್ಣ ಆ ಕ್ಷೇತ್ರದಲ್ಲಿ ೨೧೩(೨೦೦೭)ನೇ ರ್‍ಯಾಂಕಿಂಗ್ ಕಂಡುಕೊಳ್ಳಲೇ ಏದುಸಿರುಬಿಡಬೇಕಾಯಿತು. ಖುರೇಷಿಯದ್ದು ಬಹುಪಾಲು ಇದೇ ಸ್ಕ್ರಿಪ್ಟ್. ೧೦೩ಕ್ಕೆ ಬರುವಷ್ಟರಲ್ಲಿ ಉಸ್ಸಪ್ಪ. ಅವರಿಬ್ಬರ ಬಲ ಒಗ್ಗಟ್ಟಿನಲ್ಲಿದೆ. ಇದು ಡಬಲ್ಸ್‌ನಲ್ಲಿ ಕೆಲಸ ಮಾಡಲಾರಂಭಿಸಿದೆ. ಮೊನ್ನೆ ಲೆಗ್ ಮಾಸನ್ ಟೆನಿಸ್ ಕ್ಲಾಸಿಕ್‌ನ ಉಪಾಂತ್ಯದಲ್ಲಿ ಬಾಬ್-ಮೈಕ್ ಬ್ರಿಯಾನ್‌ರನ್ನು ಸೋಲಿಸಿದ್ದು ಇದನ್ನು ಸ್ಪಷ್ಟಪಡಿಸಿದೆ.
ಬೋಪಣ್ಣರದು ಭರ್ಜರಿ ಸರ್ವ್, ರಭಸದ ಹೊಡೆತ. ಖುರೇಷಿ ನೆಟ್‌ನ ಬಳಿ ಕಲಾತ್ಮಕತೆ ತೋರಬಲ್ಲರು. ಕೊರತೆ ಬಿದ್ದಿರುವುದು ಆತ್ಮವಿಶ್ವಾಸದಲ್ಲಿ. ಅದನ್ನು ತುಂಬಿಕೊಳ್ಳಿ ಎಂದು ಖುದ್ದು ಮಹೇಶ್ ಭೂಪತಿ ಹಿರಿಯಣ್ಣನಂತೆ ಹೇಳಿದ್ದಾರೆ. ಇನ್ನಷ್ಟು ಮತ್ತಷ್ಟು ಭಾವನಾತ್ಮಕ ವಿಚಾರಗಳು ಪ್ರಸ್ತಾಪವಾಗುವ ಮುನ್ನ ಕೆಲವು ಸ್ವಾರಸ್ಯಗಳನ್ನು ಸರಬರನೆ ಹೇಳಿಬಿಡುವುದೊಳ್ಳೆಯದು. ಈ ಇಬ್ಬರ ಜನ್ಮವರ್ಷ ಒಂದೇ, ಜನನ ಅಂತರ ಕೇವಲ ೧೩ ದಿನ! ಖುರೇಷಿ ಅಜ್ಜ ಕವಾಜಾ ಇಫ್ತಿಕಾರ್ ಆಲ್ ಇಂಡಿಯನ್ ಚಾಂಪಿಯನ್. ಭಾರತದಲ್ಲಿ ಆತ ಪ್ರಶಸ್ತಿ ಗೆದ್ದದ್ದು ೧೯೪೭ರಲ್ಲಿ! ಖುರೇಷಿ ಭಾರತದ ಲಿಯಾಂಡರ್ ಪೇಸ್, ಪ್ರಕಾಶ್ ಅಮೃತರಾಜ್ ಜೊತೆಗೆಲ್ಲ `ರ್‍ಯಾಕೆಟ್' ಕೈಜೋಡಿಸಿದ್ದಾರೆ. ಆದರೆ ಅವರ ಕೋಚ್ ಆಗಿದ್ದವರು ಮಾತ್ರ ಮಹೇಶ್‌ರ ತಂದೆ ಕೃಷ್ಣ ಭೂಪತಿ!
ಖುರೇಷಿ ಕ್ಯಾರಿಯರ್‌ಗೆ ರಾಜಕೀಯ, ದೇಶದ ಆಂತರಿಕ ಸ್ಥಿತಿ ಮತ್ತು ಅನುಮಾನದ ಕಣ್ಣುಗಳಿಂದಾಗಿ ಹಲವು ಬಾರಿ ಆಘಾತಕ್ಕೊಳಗಾಗುತ್ತಿರಬೇಕಾಗಿದೆ. ಇಂದು ಅವರ ಡಬಲ್ಸ್ ರ್‍ಯಾಂಕಿಂಗ್ ಬೋಪಣ್ಣರ ೩೩ನೇ ಕ್ರಮಾಂಕದಿಂದ ಕೇವಲ ಎರಡು ಕಡಿಮೆ. ಎಷ್ಟೋ ಬಾರಿ ಕೊನೆ ಘಳಿಗೆಯಲ್ಲಿ ವಿದೇಶಿ ಟೂರ್ನಿಗೆ ವೀಸಾ ಲಭ್ಯವಾಗದೆ ಕೈಚೆಲ್ಲಿದ್ದಿದೆ. ವಿಚಿತ್ರ, ಹಾಗೊಮ್ಮೆ ಖುರೇಷಿ ದಿಢೀರ್ ಹಿಂಸರಿದಾಗ ಎರಿಕ್ ಬ್ಯುಟೊರ್‍ಯಾಕ್ ಜೊತೆ ಆಡಿದ ಬೋಪಣ್ಣ ತಮ್ಮ ಮೊದಲ ಎಟಿಪಿ ಟೂರ್ ಪ್ರಶಸ್ತಿ ಪಡೆದಿದ್ದರು!
ಇನ್ನೂ ವಿಚಿತ್ರ, ಸಾನಿಯಾ ಮಿರ್ಜಾ ಪಾಕಿ ಶೋಯೇಬ್ ಮಲ್ಲಿಕ್‌ನ್ನು ಮದುವೆಯಾದ ದಿನದಿಂದ ಆಕೆ ಭಾರತೀಯಳಾಗಿದ್ದೂ ಆವಳ ಸಾಧನೆ ಬಗ್ಗೆ ನಮ್ಮಲ್ಲಿ ಕುತೂಹಲ ಉಳಿದಿಲ್ಲ. ತಾಂತ್ರಿಕವಾಗಿ ಆಕೆ ಇಲ್ಲಿಯವಳು ಇರಬಹುದಾದರೂ ಮನಸ್ಸಿನ ಪ್ರಕಾರ ಮಿರ್ಜಾ ವಿದೇಶಿ! ಅದೃಷ್ಟಕ್ಕೆ ಖುರೇಷಿ - ಬೋಪಣ್ಣರಿಗೆ ಅಂತಹ ಆಕ್ಷೇಪವಿಲ್ಲ. ಬೋಪಣ್ಣರನ್ನು ಪಾಕಿಗಳು ಹೇಗೆ ಸ್ವೀಕರಿಸುತ್ತಾರೆಎಂಬ ಕುತೂಹಲಕ್ಕೆ ಅಂತರ್ಜಾಲದಲ್ಲಿಯೂ ಉತ್ತರ ಸಿಗಲಿಲ್ಲ. ತಮ್ಮ ಅತ್ಯಂತ ಹೆಚ್ಚು ಸಮಯವನ್ನು ಖುರೇಷಿ ಕಳೆಯುವುದು ಭಾರತದಲ್ಲಿ. ಇಲ್ಲಿನ ಚಾಲೆಂಜರ್, ಡಬಲ್ಸ್‌ನಲ್ಲಿ ತೊಡಗಿಕೊಳ್ಳಲು ಅವರಿಗೆ ಬಾಧಕವಿಲ್ಲ. ಆ ಮಟ್ಟಿಗೆ ಇಂದು ಭಾರತದ ಹೊರಗಿನ ವಿಶ್ವವೇ ಪಾಕಿಗಳನ್ನು ಹೆಚ್ಚು ದ್ವೇಷ, ಅನುಮಾನಗಳಿಂದ ನೋಡುತ್ತದೆ!
ರ್‍ಯಾಂಕಿಂಗ್ ಸುಧಾರಿಸುತ್ತಿದೆ. ೧೫ ನೇ ಕ್ರಮಾಂಕವನ್ನು ಮುಟ್ಟಿಯಾಗಿದೆ. ಎಟಿಪಿ ಟೂರ್ ಮಟ್ಟದಿಂದ ಸ್ಲಾಂ, ಸೂಪರ್ ಸೀರೀಸ್ ಮಟ್ಟ ಮುಟ್ಟಿಯಾಗಿದೆ. ನವೆಂಬರ್‌ನಲ್ಲಿ ಲಂಡನ್‌ನಲ್ಲಿ ನಡೆಯುವ ಡಬಲ್ಸ್ ಟೂರ್ ಫೈನಲ್ ಸ್ಪರ್ಧೆ ವೇಳೆಗೆ ಅಗ್ರ ಎಂಟರ ತಂಡದಲ್ಲೊಂದಾಗುವ ತಹತಹ ಕಾಣಿಸಿದೆ. ಅದು ಆಗಲೇಬೇಕು. ನಾಳೆ ಆಗಸ್ಟ್ ೩೦ರಿಂದ ಆರಂಭವಾಗಲಿರುವ ಯುಎಸ್ ಓಪನ್‌ನಲ್ಲಿ ಅದ್ಭುತ ಪ್ರದರ್ಶನ ಕಂಡುಬಂದರೆ ಸ್ಥಾನ ನಿಕ್ಕಿ. ಅತಿಯಾಸೆ ಎನ್ನದಿರಿ, ಈ ಜೋಡಿಯ ಕೈಯಲ್ಲಿ ತೀರಾ ಹೆಚ್ಚು ಟೆನಿಸ್ ದಿನಗಳೂ ಉಳಿದಿಲ್ಲ.
ಒಂದು ಟಾನಿಕ್ ಅಂತೂ ಸಿಕ್ಕಿದೆ. ೨೦೧೦ರಲ್ಲಿ ಎಸ್‌ಎ ಟೆನಿಸ್ ಓಪನ್ ಡಬಲ್ಸ್ ಪ್ರಶಸ್ತಿಯನ್ನು ಗಳಿಸಿದ್ದು ದಾಖಲಾಗಿದೆ. ಇದಿವರ ಚೊಚ್ಚಲ ಜಂಟಿ ಪ್ರಶಸ್ತಿ. ಖುರೇಷಿಗೆ ವೈಯುಕ್ತಿಕವಾಗಿಯೂ ಮೊದಲನೆಯದು. ೨೦೦೭ರಲ್ಲಿ ಮೊತ್ತಮೊದಲು ಜೊತೆಯಾದಾಗ ಸತತ ನಾಲ್ಕು ಚಾಲೆಂಜರ್ ಗೆದ್ದದ್ದು ಈ ಕ್ಷಣದಲ್ಲಿ ನೆನಪಾಗುತ್ತದೆ. ಎಟಿಪಿ ಫೈನಲ್‌ನಲ್ಲಿ - ಅದೂ ನಾಲ್ಕು ಬಾರಿ - ಎಡವಲು ಕಾರಣವಾಗಿರುವುದು ಸಾಮರ್ಥ್ಯದ ಬಗ್ಗೆ ಇರುವ ಪುಟ್ಟ ಅಪನಂಬಿಕೆ. ಅದು ಬ್ರಿಯಾನ್ ಸಹೋದರರನ್ನು ಪರಾಭವಗೊಳಿಸಿದ ಮೇಲೆ ಹೋಗಿರಬೇಕು, ನಾವೂ ವಿಶ್ವದ ಟಾಪ್ ಜೋಡಿಗಳೊಂದಿಗೆ ಭುಜ ಕೊಟ್ಟು ಸೆಣೆಸಬಲ್ಲೆವು. ಹೀಗೆಂದು ಕೊಳ್ಳುವುದೂ ಕಷ್ಟ, ಲೆಗ್ ಮಾಸನ್‌ನಲ್ಲಿ ಬ್ರಿಯಾನ್‌ರನ್ನು ಸೋಲಿಸಿ ಫೈನಲ್ ಪ್ರವೇಶಿಸಿದರೆ ಅಲ್ಲೂ ಸೋಲು!
ಡಬಲ್ಸ್ ಎಂದರೆ ದಾಂಪತ್ಯವಿದ್ದಂತೆ. ಇಗೋ ಅಡ್ಡಬರಬಾರದು. ಪೇಸ್-ಭೂಪತಿಯರ ಇಗೋ ನಮ್ಮ ದೇಶದ ನೂರು ಆಸೆಗಳನ್ನು ಬಲಿ ತೆಗೆದುಕೊಂಡದ್ದನ್ನು ನೋಡಿ ನಿಟ್ಟುಸಿರುಬಿಟ್ಟಿದ್ದೇವೆ. ಈ ಜೋಡಿ ಹಾಗೆಲ್ಲ ಮಾಡಲಿಕ್ಕಿಲ್ಲ. ಇವರು ಪೀಸ್ ಎಂಡ್ ಸ್ಪೋರ್ಟ್ಸ್ ಫೌಂಡೇಶನ್‌ನ ರಾಯಭಾರಿಗಳು. ವಿಶ್ವಶಾಂತಿಯ ಪ್ರಚಾರಕರು. ಕೊನೆಪಕ್ಷ ತಮ್ಮಿಬ್ಬರ ನಡುವೆ ಶಾಂತಿ ಕದಡದಿರುವಂತೆ ನೋಡಿಕೊಳ್ಳುತ್ತಾರೆ ಎಂದು ಆಶಿಸೋಣ!!

-ಮಾವೆಂಸ

ಸೋಮವಾರ, ಆಗಸ್ಟ್ 2, 2010

ನಾವೂ `ಸೈಕಲ್ ' ಹೊಡೆಯುತ್ತಿದ್ದೇವೆ!


ಸೈಕಲ್ ಹೊಡೆಯುವುದು ನಮಗೆ ಗೊತ್ತು. ಸೈಕಲ್ ಹೊಡೆಯುತ್ತಿದ್ದಾನೆ ಎಂಬ ವ್ಯಂಗ್ಯದ ಅರ್ಥವೂ ನಮಗೆ ಅರಿವಿದೆ. ಆದರೆ ಇದೇ ಸೈಕಲ್ ಕಾರಣದಿಂದಾಗಿ ಫ್ರಾನ್ಸ್ ದೇಶದಲ್ಲಿ ಒಂದು ಪ್ರತಿಷ್ಟಿತ ಸ್ಪರ್ಧೆಯೇ ರೂಪಗೊಂಡು ಸಂಚಲನವನ್ನೇ ಉಂಟುಮಾಡುತ್ತದೆ ಎನ್ನುವುದು ಎಷ್ಟು ಜನ ಕ್ರೀಡಾಭಿಮಾನಿಗಳಿಗೆ ಗೊತ್ತು?
ಸೈಕ್ಲಿಂಗ್‌ನ ಗ್ರಾಸ್ಲಾಂ ಎನ್ನಿಸಿಕೊಂಡಿರುವ ಟೂರ್ ಡಿ ಪ್ರಾನ್ಸ್ ಸ್ಪರ್ಧೆಯ ಎರಡನೇ ಹಂತದಲ್ಲಿ ಮೊನ್ನೆ ಮೊನ್ನೆ ಒಂದು ವಿಚಿತ್ರ ಮಾರಾಮಾರಿ ನಡೆಯಿತು. ಆಸ್ಟ್ರೇಲಿಯಾದ ಮಾರ್ಕ್ ರೆನ್‌ಶಾ ಎಂಬಾತ ನ್ಯೂಜಿಲ್ಯಾಂಡ್‌ನ ಜೂಲಿಯನ್ ಡೀವ್‌ರನ್ನು ಸ್ಪರ್ಧೆಯಲ್ಲಿದ್ದಾಗ `ಢೀ' ಕೊಟ್ಟು ಕೆಡವಿದ. ರೆನ್‌ನನ್ನು ಸ್ಪರ್ಧೆಯಿಂದ ಹೊರಹಾಕಿದ್ದು ಪಕ್ಕದಲ್ಲಿಡೋಣ. ಇಷ್ಟಕ್ಕೂ ಆತ ಇಂತಹ ಅಪಾಯಕಾರಿ ಹೆಜ್ಜೆಗೆ ಕೈಹಾಕಲು ಕಾರಣ ತನ್ನ ಹೆಚ್‌ಸಿ ಕೊಲಂಬಿಯಾ ತಂಡದ ತಾರೆ ಮಾರ್ಕ್ ಕಾವೆಂಡಿಶ್‌ರಿಗೆ ಈ ಟೂರ್ ಡಿ ಫ್ರಾನ್ಸ್‌ನಲ್ಲಿ ಸುಗಮ ವಿಜಯ ದಕ್ಕಲು ಸಹಾಯ ಮಾಡುವುದು!
ಇವತ್ತಿಗೂ ಖಾಸಗಿ ಕ್ರೀಡಾ ಚಾನೆಲ್‌ಗಳಲ್ಲಿ ದಿನದ ಯಾವುದೋ ಒಂದು ವೇಳೆಯಲ್ಲಿ ಸೈಕ್ಲಿಂಗ್ ಸ್ಪರ್ಧೆಯ ಪ್ರಸಾರವಿರುತ್ತದೆ. ಉಹ್ಞೂ, ಯುರೋಪಿಯನ್‌ರು ಇದನ್ನು ಸೈಕಲ್ ಎಂದು ಕರೆಯುವುದೇ ಇಲ್ಲ. ಇದು ಆವರ ಪಾಲಿಗೆ ರೋಡ್ ಬೈಕ್! ದುರ್ಗಮ ಘಾಟಿ ಪ್ರದೇಶಗಳಲ್ಲಿ ನುಣ್ಣನೆಯ ರಸ್ತೆಯಲ್ಲಿ ರೋಡ್ ಬೈಕ್ ಪಯಣದ ಅಪಾಯ ಅಷ್ಟಿಷ್ಟಲ್ಲ. ಇಲ್ಲಿ ಸಾಮಾನ್ಯ ಚೈನ್ ಚಕ್ರ ಸಾಕಾಗಲ್ಲ, ಚಾಲ್ತಿಯಲ್ಲಿರುವ ಬ್ರೇಕ್ ಇದ್ದರೂ ಉಪಯೋಗವಿಲ್ಲ. ಇನ್ನೊಮ್ಮೆ ಟಿವಿ ಪ್ರಸಾರದಲ್ಲಿ ಗಂಭೀರ ದೃಷ್ಟಿಯಿಡಿ, ಚೈನ್ ತುಂಡಾದರೆ, ಬ್ರೇಕ್ ವಿಫಲವಾದರೆ.... ಎಂದು ಯೋಚಿಸಿ. ಈ ಆಟದಲ್ಲಿ ಅಡಗಿರುವ `ಸಾಹಸ' ಗೊತ್ತಾಗುತ್ತದೆ.
ಹಾಗಾಗಿಯೇ ಅತ್ಯುತ್ತಮ ರೋಡ್ ಬೈಕ್‌ಗೆ ಬೆಲೆ ೨೦ ಸಾವಿರ ಯುಎಸ್ ಡಾಲರ್ ದಾಟುತ್ತದೆ. ಕ್ರೀಡಾಂಗಣದ ಒಳಗಡೆಯೇ ಸೈಕಲ್ ರೇಸ್ ನಡೆಸುವುದು ಒಂದು ರೀತಿ. ಇದಕ್ಕೆ ವೆಲೆಡ್ರೋಮ್ ಎಂಬ ಸ್ಪರ್ಧಾ ಟ್ರಾಕ್ ಆಳವಡಿಸಬೇಕಾಗುತ್ತದೆ. ಗಿರಿಗಿಟ್ಲಿಯಂತೆ ಇಲ್ಲಿನ ೨೦೦-೪೦೦ ಮೀ. ವೃತ್ತದಲ್ಲೇ ಮತ್ತೆ ಮತ್ತೆ ಸುತ್ತುವ ಈ ಸ್ಪರ್ಧೆ ಈಗ ಒಲಂಪಿಕ್ಸ್‌ನ ಪದಕದ ಕ್ರೀಡೆಯೂ ಹೌದು. ಇಲ್ಲಿ ಅತ್ಯಾಧುನಿಕ ಮಾದರಿಯ ಲೋಹಗಳಿಂದ ತಯಾರಿಸಿದ ಸೈಕಲ್ ಬಳಸಲಾಗುತ್ತದೆ ಎಂಬುದರ ಹೊರತಾಗಿ ಶಕ್ತಿ ಪ್ರದರ್ಶನವೇ ಪ್ರಾಮುಖ್ಯ.
ಟೂರ್ ಡಿ ಫ್ರಾನ್ಸ್‌ನಂತ ಸ್ಫರ್ಧೆಗಳಲ್ಲಿ ಹಾಗಿಲ್ಲ. ೧೯೦೩ರಿಂದ ಆರಂಭವಾದ ಈ ಸ್ಪರ್ಧೆಯಲ್ಲಿ ಸಪಾಟಾದ ರಸ್ತೆಯಲ್ಲಿ ಪಯಣಿಸಬೇಕಾದರೂ ಇಲ್ಲಿ ೧೦೦ ಪ್ಲಸ್ ಕಿ.ಮೀ. ದೂರವನ್ನು ಕ್ರಮಿಸಲು ಸೈಕಲ್ ಹೊಡೆಯಬೇಕು. ವಿಶ್ವದ ಪ್ರತಿಷ್ಟಿತ ತಂಡಗಳು ಭಾಗವಹಿಸುತ್ತವೆ. ಆಯಾ ತಂಡದಲ್ಲಿ ಒಬ್ಬ ಆಟಗಾರನಿಗೆ ಸ್ಟಾರ್ ಪಟ್ಟ. ಆತ ಗೆಲ್ಲಲು ಉಳಿದವರು ಎರಡು ರೀತಿಯಲ್ಲಿ ಸಹಾಯ ಮಾಡುತ್ತಾರೆ. ಒಂದು - ಪಕ್ಕದಲ್ಲಿಯೇ ಪೆಡಲ್ ಮಾಡಿ ಗಾಳಿಯ ಪುಶ್ ಸಿಗುವಂತೆ ಮಾಡುತ್ತಾರೆ. ಮತ್ತೊಂದು - ರೆನ್‌ಶಾ ತಂತ್ರ! ರೇಸ್ ಮಾರ್ಗದಲ್ಲಿ ಅಪಘಾತಗಳಾಗಿ ಸೈಕಲ್ ಸಮೇತ ಪ್ರಪಾತಕ್ಕೆ ಉರುಳಿದರೆ ದೇವರೇ ಗತಿ. ಅದಕ್ಕೇ ಆಮೆರಿಕದ ಟೈಲರ್ ಫರಾರ್ ಹೇಳುತ್ತಾರೆ, ನಾನೂ ಗೆಲ್ಲಲು ಬಯಸುವೆ. ಆದರೆ ಅಪಘಾತಗಳಾಗದಿರುವುದನ್ನು ಹೆಚ್ಚು ಬಯಸುವೆ!
ಸೈಕ್ಲಿಂಗ್ ಇತಿಹಾಸವನ್ನು ನಿರುಕಿಸಿದರೆ, ೧೯ನೇ ಶತಮಾನದ ಆರಂಭದಿಂದಲೇ ಸ್ಪರ್ಧಾ ಜಗತ್ತು ಸೈಕಲ್‌ಗೆ ತೆರೆದುಕೊಂಡಿತ್ತು. ಆ ದಿನಗಳಲ್ಲಿ ಯುಎಸ್‌ನಲ್ಲಿ (೧೮೯೦) ಸೈಕ್ಲಿಂಗ್ ತುಂಬಾ ಜನಪ್ರಿಯವಾಗಿತ್ತು. ೧೮೯೯ರಲ್ಲಿಯೇ ಮರ್ಪಿ ಎಂಬಾತ ನ್ಯೂಯಾರ್ಕ್‌ನಲ್ಲಿ ಒಂದು ಮೈಲು ದೂರವನ್ನು ಒಂದು ನಿಮಿಷದಲ್ಲಿ ಪೂರೈಸಿದ್ದ! ಅದೇಕೋ ಏನೋ, ನಂತರದ ದಿನಗಳಲ್ಲಿ ಅಮೆರಿಕದಲ್ಲಿ ಆಟದ ಜನಪ್ರಿಯತೆ ಕುಸಿಯಿತು. ಇತ್ತ ಫ್ರಾನ್ಸ್, ಬೆಲ್ಜಿಯಂ, ಇಟಲಿ, ಸ್ಪೇನ್‌ನಲ್ಲಿ ಸೈಕಲ್ ಪಟು ಮಿಲಿಯನೇರ್‌ಗಳಾಗಿದ್ದಾರೆ ಎಂದರೆ ಉಳಿದುದನ್ನು ನೀವೇ ಅರ್ಥ ಮಾಡಿಕೊಳ್ಳಿ.
ಮೊನ್ನೆ ಖಾಸಗಿ ಚಾನೆಲ್‌ನಲ್ಲಿ ಪ್ಯಾಟೆ ಹುಡ್ಗೀರು ಹಳ್ಳಿಯಲ್ಲಿ ಕೆಸರು ಟ್ರಾಕ್‌ನಲ್ಲಿ ಸೈಕಲ್ ಹೊಡೆದರಲ್ಲ, ಅಂತದೊಂದು ಸ್ಪರ್ಧೆಯೂ ವಿಶ್ವದಲ್ಲಿ ಚಾಲ್ತಿಯಲ್ಲಿದೆ. ಕಲ್ಲು ಬಂಡೆಗಳ ಮಧ್ಯೆ ಸೈಕಲ್‌ನಲ್ಲಿ ನೆಲಕ್ಕೆ ಕಾಲು ತಾಕಿಸದೆ ದಾಟುವ ವಿಶಿಷ್ಟ ಸಾಹಸದ ಆಟವೂ ಇದೆ. ದುರಂತ, ಭಾರತದ ಕ್ರೀಡಾ ಕ್ಷೇತ್ರದಲ್ಲಿ ಮೆಲೋಡ್ರಾಮಗಳು ಇದೆಯೇ ವಿನಃ ಸೈಕ್ಲಿಂಗ್‌ಗೆ ಬೇಕಾದ ವೆಲೆಡ್ರೋಂ ಇಲ್ಲ. ರೋಡ್ ಬೈಕ್‌ಗೆ ಹಣ ಹೊಂಚಲು ಸಾಮಾನ್ಯರ ಕೈಯಲ್ಲಿ ಅಸಾಧ್ಯ. ಹಾಗಾಗಿ ನಾವು ಎಲ್ಲ ಸಾಧನೆಗೂ `ಸೈಕಲ್' ಹೊಡೆಯುತ್ತೇವೆ. ಅಸಲಿ ಸೈಕಲ್ ಗಿಟ್ಟುತ್ತಿಲ್ಲ!
ಉಫ್, ಸೈಕ್ಲಿಂಗ್ ಸ್ಪರ್ಧೆಯು ದುರ್ಬಲ ಹೃದಯದವರಿಗೆ ಅಲ್ಲವೇ ಅಲ್ಲ. ಟೂರ್ ಡಿ ಫ್ರಾನ್ಸ್‌ನ ೧೧೪.೬ ಕಿ.ಮೀ. ಎರಡನೇ ಹಂತದ ಸ್ಪರ್ಧೆಯಲ್ಲಿ ಪಾಲ್ಗೊಂಡವರು ಚಲಿಸುವ ಸರಾಸರಿ ವೇಗ ಘಂಟೆಗೆ ೭೦ ಕಿ.ಮೀ! ನೆನಪಿರಲಿ, ನಮ್ಮ ಪೆಟ್ರೋಲ್ ಬೈಕ್‌ನಲ್ಲಿ ೬೦ ಕಿ.ಮೀ./ಘಂಟೆ ವೇಗ ತಲುಪಿದಾಗಲೇ ಕೈ ನಡುಗಲಾರಂಭಿಸುತ್ತದೆ. ಇಲ್ಲಿ ಪೆಡಲ್ ಬೇರೆ ಮಾಡಬೇಕು. ಅಕ್ಕಪಕ್ಕದ ಕಂದಕದ ಬಗ್ಗೆ ಜಾಗೃತೆ ವಹಿಸಬೇಕಿರುವುದರಿಂದ ಮೈಯೆಲ್ಲ ಕಣ್ಣಾಗಿರಬೇಕು. ಜೊತೆಗೆ ಪಕ್ಕದವನ `ಢೀ' ತಂತ್ರಗಳಿಂದ ಬಚಾವಾಗಬೇಕು!
ಹೋಗಲಿ ಬಿಡಿ, ಭಾರತೀಯರು ಟೂರ್ ಡಿ ಫ್ರಾನ್ಸ್‌ನಲ್ಲಿ ಆಡಿಲ್ಲವೆಂದು ಹಳಹಳಿಸುವುದು ಅನಗತ್ಯ. ನಮ್ಮೂರ ಸಾಮಾನ್ಯ ಸೈಕಲ್‌ನಲ್ಲಿ ನಾವು ಶಾಲೆಯಲ್ಲಿದ್ದಾಗ `ಸ್ಲೋ ಸೈಕ್ಲಿಂಗ್' ಸ್ಪರ್ಧೆ ಇರುತ್ತಿತ್ತು. ೫೦ ಮೀ. ಅಂತರವನ್ನು ಸೈಕ್ಲಿಸ್ಟ್ ತನ್ನ ಕಾಲನ್ನು ಒಮ್ಮೆಯೂ ನೆಲಕ್ಕೆ ತಾಕಿಸದೆ ಪೆಡಲ್ ಮಾಡಿ ಗೆಲ್ಲಬೇಕಿತ್ತು. ಇಲ್ಲಿ ಮೊದಲು ೫೦ ಮೀ. ದಾಟಿದರೆ ಬಹುಮಾನವಿಲ್ಲ, ಕಟ್ಟಕಡೆಗೆ ಬಂದವರಿಗೆ ಚಿನ್ನದ ಪದಕ!
ಈಗ ಈ ಸ್ಪರ್ಧೆಯೂ ನಮ್ಮಲ್ಲಿ ಕಾಣುತ್ತಿಲ್ಲ. ಅಷ್ಟಕ್ಕೂ ಮಕ್ಕಳೆಲ್ಲಿ ಈಗ ಸೈಕಲ್ ಹೊಡೆಯುತ್ತವೆ? ಅವರದೇನಿದ್ದರೂ ತರಾವರಿ ಬೈಕ್‌ನಲ್ಲಿ ಜಾಲಿ ರೈಡ್..........

-ಮಾವೆಂಸ

ಶುಕ್ರವಾರ, ಜುಲೈ 16, 2010

ನನ್ನದೊಂದು ಪುಟ್ಟ ಕಥೆ

ಈ ವಾರದ `ತರಂಗ'ದಲ್ಲಿ ನನ್ನದೊಂದು ಪುಟ್ಟ ಮಿನಿ ಕಥೆ ಪ್ರಕಟವಾಗಿದೆ. ಅದನ್ನು ನಿಮಗೂ ರುಚಿ ನೋಡಿ ತಿಳಿಸಲು ಕೊಡುತಿರುವೆ. ಪ್ರತಿಕ್ರಿಯಿಸಿ.
ಉಲ್ಲಾಸ......ಸಂತೋಷ.....
ಸಣ್ಣಕತೆ

ರದ್ದಿ ಪೇಪರ್ ಅಂಗಡಿಯಲ್ಲಿ ಯುವ ಕಥೆಗಾರ ಯೋಗೀಶ್‌ನಿಗೆ ಒಬ್ಬ ಮಹಾನ್ ಲೇಖಕನ ಅಪ್ರಕಟಿತ ಆತ್ಮಕತೆ, ಅದೂ ಹಸ್ತಾಕ್ಷರ ರೂಪದಲ್ಲಿರುವುದು ಸಿಕ್ಕಿಬಿಟ್ಟಿತು. ಒಂದಕ್ಕಿಂತ ಒಂದು ಸ್ವಾರಸ್ಯಕರ ಅಧ್ಯಾಯಗಳು. ಅದರಲ್ಲಿ ಒಂದು ಭಾಗವನ್ನು ಯೋಗೀಶ್ ಸಂಪಾದಕರಿಗೆ ಒದಗಿಸಿದ್ದು, ಅದನ್ನು ಇನ್ನು ಮುಂದೆ ನೀವೂ ಓದಿ.
"..............ನನ್ನ ಅಪ್ಪ - ಅಮ್ಮರ ಬಗ್ಗೆ ಹೇಳಲೇಬೇಕು. ಸರಿಸುಮಾರು ೩೪ ವರ್ಷಗಳ ದಾಂಪತ್ಯ ಅವರದು. ನಾನಂತೂ ಹುಟ್ಟಿದ ಮೇಲೆ ಎಂದೂ ಅವರು ಹೊಡೆದಾಡಿದ್ದನ್ನು, ಬೈದಾಡಿದ್ದನ್ನು, ಹೀಗಳೆದುಕೊಂಡಿದ್ದನ್ನು ನೋಡಿಲ್ಲ. ಯಾರಿಗಾದರೂ ಅಚ್ಚರಿ ಹುಟ್ಟಿಸುವಷ್ಟು ಅವರ ದಾಂಪತ್ಯ ಮಾದರಿಯಾಗಿತ್ತು. ಅಪ್ಪನ ಚಲನವಲನಗಳನ್ನು ಗಮನಿಸಿಯೇ ಅಮ್ಮ ಆತನ ಬೇಕುಬೇಡಗಳನ್ನು ಪೂರೈಸಬಲ್ಲವಳಿದ್ದಳು. ಊಟಕ್ಕೆ ಕುಳಿತಾಗಲೂ ಅಷ್ಟೇ, ಅಮ್ಮನ ಒಂದು ಕಣ್ಣು ಅಪ್ಪನ ತಟ್ಟೆಯ ಮೇಲೆ. ಏನು ಬೇಕು ಅಂತ ಅಪ್ಪ ಹೇಳುವ ಮುನ್ನವೇ ಬಡಿಸಿಯಾಗಿರುತ್ತಿತ್ತು.
ಅಪ್ಪ ಕಮ್ಮಿಯಲ್ಲ. ಮನೆಗೆ ತರುವ ಸಾಮಾನುಗಳ ಪಟ್ಟಿಯನ್ನೇನೂ ಅಮ್ಮ ಕೊಡುತ್ತಿರಲಿಲ್ಲ. ಆದರೆ ಅಮ್ಮ ಅಡುಗೆ ಮನೆಯಲ್ಲಿ `ಓ, ಬೇಳೆ ಖಾಲಿಯಾಯ್ತು', `ಸೇಬು ಹಣ್ಣು ಬೇಕೇನೋ ಪುಟ್ಟಾ...' ಅಂತೆಲ್ಲ ಮಾತನಾಡುವುದನ್ನೇ ಕೇಳಿ ಅಪ್ಪ ಅವನ್ನೆಲ್ಲ ತಂದಿಟ್ಟುಬಿಡುತ್ತಿದ್ದರು.
ಊಟ ತಿಂಡಿಗೆ ಅಮ್ಮ ಅಪ್ಪನ್ನ ಕರೆಯುತ್ತಿದ್ದುದೇ ವಿಚಿತ್ರ. ನನ್ನ ಹತ್ತಿರ ದೊಡ್ಡದಾಗಿ "ಹೋಗು ಅಪ್ಪನನ್ನು ತಿಂಡಿಗೆ ಬಾ ಎಂದು ಕರೆ" ಎನ್ನುತ್ತಿದ್ದಳು. ನಿಜಕ್ಕಾದರೆ, ಆ ಮಾತು ಅಪ್ಪನಿಗೇ ಕೇಳಿಬಿಡುತ್ತಿದಾದ್ದರಿಂದ ಮತ್ತೆ ನಾನು ಕರೆಯಬೇಕಾದುದೇ ಇರುತ್ತಿರಲಿಲ್ಲ!
ಪ್ರೀತಿ, ಪ್ರೇಮದಲ್ಲಿ ಸಾಮಾನ್ಯವಾಗಿ ಮಾತನಾಡುವುದು ಕಣ್ಣು. ನನ್ನ ಅಪ್ಪ ಅಮ್ಮರ ವಿಚಾರದಲ್ಲಿ ಅದು ಇನ್ನಷ್ಟು ಸತ್ಯ. ಜಾತ್ರೆಗೆ ಹೋದರು ಎಂದಿಟ್ಟುಕೊಳ್ಳಿ. ಅಮ್ಮ ಅಂಗಡಿಯಾತನಲ್ಲಿ ಒಂದು ವಸ್ತುವಿನ ಬಗ್ಗೆ ವಿಚಾರಿಸಿ ಅಪ್ಪನ ಕಡೆ ನೋಡಿದರೂ ಎಂದಾದರೆ ಅಪ್ಪ ಅದನ್ನು ಖರೀದಿಸುತ್ತಿದ್ದರು. ಅದು ಅಪ್ಪನಿಗೆ ಇಷ್ಟವಿಲ್ಲವೆಂದರೆ ಅಮ್ಮ ವಿಚಾರಿಸುತ್ತಿದ್ದ ವೇಳೆಗಾಗಲೇ ಅಪ್ಪ ಪಕ್ಕದ ಅಂಗಡಿ ದಿಕ್ಕಿಗೆ ಸರಿದಿರುತ್ತಿದ್ದರು!
ಬಿಡಿ, ಇಂತಹ ನೂರು ಉದಾಹರಣೆ ಕೊಡಬಹುದು. ತಂದೆತಾಯಿಗೆ ಒಬ್ಬನೇ ಮಗನಾಗಿ ನಾನು ಮನೆಯಲ್ಲಿ ಶಾಂತ ವಾತಾವರಣವನ್ನೇ ಕಂಡೆ. ಬಹುಷಃ ಒಂದು ರೀತಿ ಏಕಾಂಗಿತನ ಕಾಡಿದ್ದರಿಂದಲೇ ನನ್ನ ಭಾವನೆಗಳನ್ನು ಅರುಹಿಕೊಳ್ಳಲು ಲೇಖನಿಯ ಮೊರೆ ಹೋದೆನೇ? ಹೇಳುವುದು ಕಷ್ಟ.
ಛೇ.... ಹೇಳಲು ಮರೆತಿದ್ದೆ. ನಾನು ಹುಟ್ಟಿದ ಸಮಯದಲ್ಲಿ ಅಪ್ಪ ಅಮ್ಮರಲ್ಲಿ ನನಗೆ ಹೆಸರು ಇಡುವ ವಿಚಾರದಲ್ಲಿ ಭಾರೀ ಜಿಜ್ಞಾಸೆ ಮೂಡಿತ್ತಂತೆ. ಅಮ್ಮ `ಉಲ್ಲಾಸ' ಎಂಬ ಹೆಸರನ್ನೂ, ಅಪ್ಪ `ಸಂತೋಷ' ಎನ್ನಬೇಕೆಂದೂ ವಾದಿಸಿದರಂತೆ. ಇಬ್ಬರಿಗೂ ತಾವು ಸೂಚಿಸಿದ ಹೆಸರು ಅಂತಿಮವಾಗಬೇಕೆಂಬ ಅಭಿಲಾಷೆ. ಅವರ ಜೀವಮಾನದ ಕೊನೆತನಕವೂ ಅಮ್ಮ ಉಲ್ಲಾಸ ಎಂದೂ, ಅಪ್ಪ ಸಂತೋಷ ಎಂತಲೂ ನನ್ನನ್ನು ಕೂಗಿ ಕರೆದರು. ಅವತ್ತಿನ ವಿವಾದದ ನಂತರ ಅವರಿಬ್ಬರ ನಡುವೆ ಮಾತುಕತೆ ನಡೆಯಲೇ ಇಲ್ಲ. ಇನ್ನೆಲ್ಲಿ ವಿವಾದ, ಗಲಾಟೆ!?

ಆ ಮನೆಯಲ್ಲಿ ನಾನು ಮಾತ್ರ `ಸಂತೋಷ - ಉಲ್ಲಾಸ' ಆಗಿದ್ದೆ!!

- ಮಾವೆಂಸ

ಭಾನುವಾರ, ಜುಲೈ 11, 2010

ಹಣ ಕಂಡರೆ ಮೊಬೈಲ್ ಬಾಯಿಬಿಡುವುದೇ?


ಕೆಲ ವರ್ಷಗಳ ಹಿಂದೆ ಮೊಬೈಲ್‌ನಲ್ಲಿ ಎಸ್‌ಎಂಎಸ್ ಸ್ವೀಕರಿಸುವದಕ್ಕೆ ನಮಗೇ ದುಡ್ಡು ಕೊಡುವ ಕಂಪನಿಗಳ ಬಗ್ಗೆ ಬರೆದಿದ್ದೆ. ಯು ಮಿಂಟ್, ಎಂ ಜಿಂಜರ್ ಮೊದಲಾದ ಕಂಪನಿಗಳು ನಾವು ಸ್ವೀಕರಿಸುವ ಪ್ರತಿ ಎಸ್‌ಎಂಎಸ್‌ಗೆ ೧೦, ೨೫ ಪೈಸೆ ಕೊಡುವುದನ್ನು ಅಲ್ಲಿ ಬರೆಯಲಾಗಿತ್ತು. ಅಷ್ಟೇ ಅಲ್ಲ, ಈ ಅಂತರ್ಜಾಲ ಎಸ್‌ಎಂಎಸ್ ಕಂಪನಿಗಳು ೩೦೦ ಚಂದಾದಾರರನ್ನು ಒದಗಿಸಿಕೊಟ್ಟರೆ ಬೋನಸ್ ಆಗಿ ೩೦೦ರೂ. ಚೆಕ್ ಕಳಿಸಿಕೊಡುವುದನ್ನು ತಿಳಿಸಿದಂತೆ ನೆನಪು. ಆಸೆಯಿಂದ ನಾನೂ ನನ್ನ ಮಿತ್ರರಿಗೆ ಈ ಮೈಲ್ ಮಾಡಿದ್ದೆ. ೩೦೦ರೂ. ಬರಲಿ!
ಊಹ್ಞೂ, ಬರಲಿಲ್ಲ, ಬಂದಿದ್ದು ನನ್ನ ಸ್ನೇಹಿತರೊಬ್ಬರ ಫೋನ್ ಕರೆ, `ಥ್ಯಾಂಕ್ಸ್ ಕಣೋ, ನಿನ್ನ ಮೈಲ್‌ನ ನನ್ನ ದೋಸ್ತ್‌ಗಳಿಗೆ ಫಾರ್‌ವರ್ಡ್ ಮಾಡಿದೆ. ನಿನ್ನೆ ೩೦೦ರೂ. ಚೆಕ್‌ನ್ನೇ ಕಳಿಸಿದ್ದಾರೆ. ಮಜಬೂತಾಗಿದೆ ಕಣೋ ಈ ಆಫರ್!'
ಬಿಡಿ, ಕೊನೆಗೆ ನಾನು ಈ ಕುರಿತು ವಿಜಯ ಕರ್ನಾಟಕಕ್ಕೆ ಲೇಖನ ಬರೆದು ೩೦೦ರೂ. ಗಳಿಸುವ ಪ್ಲಾನ್ ಮಾಡಿದೆ. ಲೇಖನವೂ ಬಂತು, ಅವರ ಆಗಿನ ಒಪೆಡ್ ಪುಟದಲ್ಲಿ. ೨೦೦ ಅಥವಾ ೩೦೦ ಗಿಟ್ಟುತ್ತದೆಂದುಕೊಂಡೆ. ಪಾಪಿಗಳು, ಇವತ್ತಿನ ತನಕ ಗೌರವಧನ ಕಳಿಸಿಲ್ಲ!!
ಇಷ್ಟೆಲ್ಲ ದೀರ್ಘವಾಗಿ ಪೀಠಿಕೆ ಬೆಳೆಸಲು ಏಕೈಕ ಕಾರಣವಿದೆ. ಇಂದಿನ ಕಾಲಮಾನದಲ್ಲಿ ಮೊಬೈಲ್ ಹಾಗೂ ಅಂತರ್ಜಾಲಗಳನ್ನು ಬಳಸಿ ನಾವು ಜಾಹೀರಾತು ಗ್ರಾಹಕರಾಗಬಹುದು ಮತ್ತು ಅದಕ್ಕೆ ಶುಲ್ಕ ವಸೂಲಿ ಮಾಡಿಕೊಳ್ಳಬಹುದು. ಹಣ ಗಳಿಸಿಕೊಡುವ ಅವಕಾಶವೊಂದನ್ನು `ಹಾಗೆ ಸುಮ್ಮನೆ' ಬಿಡಬೇಡಿ. ವಾಸ್ತವವಾಗಿ, ಡು ನಾಟ್ ಕಾಲ್ ದಿನಗಳಲ್ಲಿ ನಾವು, ಚಂದಾದಾರರು ಜಾಹೀರಾತು ಓದುವುದಕ್ಕೆ ಶುಲ್ಕ ಪಡೆಯಲೇಬೇಕು!
ಇನ್ನೊಂದು ಹೊಸ ತಂತ್ರವೆಂದರೆ, ವೆಬ್ ಜಾಹೀರಾತು ಓದಲೂ ನಾವು ಹಣ ಪಡೆಯಬಹುದು! ಈ ಅನುಭವ ನನಗೆ ಖುಷಿ ಕೊಟ್ಟಿದೆ. ಮೈಲ್ ಸ್ನೇಹಿತರಾಗಲಿ ಅಥವಾ ವಿಕ ತರದ ಪತ್ರಿಕೆಯಾಗಲಿ ನನಗೆ ಕೈಕೊಟ್ಟಿಲ್ಲ. ನಿಮ್ಮ ಮೊಬೈಲ್‌ನ್ನು ಉಚಿತವಾಗಿ ರೀಚಾರ್ಜ್ ಮಾಡಿಸುವ ಅವಕಾಶವಿರುವುದು ಖಚಿತ. ಅದೇ Invitation to join Amulyam-Free Prepaid Mobile Recharge and Movie Tickets
">ಅಮೂಲ್ಯಂ
ವೆಬ್‌ಸೈಟ್. ಇಲ್ಲಿ ನೊಂದಣಿ ಮಾಡಿಸಿಕೊಂಡ ನಂತರ ಮೈಲ್‌ಗೆ ಬರುವ ಸೈಟ್ ಪ್ರವೇಶಿಸಿದರೆ ಮತ್ತು ಸರ್ವೆಗಳಿಗೆ ಉತ್ತರಿಸಿದರೆ ಹಾಗೂ ಈ ನೊಂದಣಿಗಳ ಮೂಲಕ ವ್ಯವಹರಿಸಿದರೆ ಕಮಿಷನ್ ಸಿಕ್ಕೀತು!
ವಿವರಗಳಿಗೆ Invitation to join Amulyam-Free Prepaid Mobile Recharge and Movie Tickets
">ಅಮೂಲ್ಯಂ
ವೆಬ್‌ಸೈಟ್ ಪ್ರವೇಶಿಸಿ. ನಾನು ನೀಡಿರುವ ಈ ಲಿಂಕ್ ಮೂಲಕವೇ ಪ್ರವೇಶಿಸಿ ಎನ್ನುವುದು ನನ್ನ ವಿನಂತಿಯಷ್ಟೇ. ಯು ಮಿಂಟ್, ಅಮೂಲ್ಯಂ ತರದವನ್ನು ನಾನು ಹೆಸರಿಸಿರುವುದು ಕೇವಲ ಪ್ರಾತಿನಿಧಿಕವಷ್ಟೇ. ನಿಮಗೆ ಇನ್ನಷ್ಟು ಇದೇ ಮಾದರಿಯ ವೆಬ್ ಗೊತ್ತಿದ್ದೀತು. ನಾನು ಹೇಳುವುದು, ಇವನ್ನು ನಿಮ್ಮ ಉಪಯೋಗಕ್ಕೆ ಬಳಸಿಕೊಳ್ಳಿ ಎಂದು ಮಾತ್ರ. ನಾನು ಅಮೂಲ್ಯಂ ಕಾರಣದಿಂದ ಹಲವು ಬಾರಿ ಮೊಬೈಲ್ ರೀಚಾರ್ಜ ಮಾಡಿಸಿಕೊಂಡಿರುವುದರಿಂದ ಅತ್ತ ವಿಶ್ವಾಸ ಬೆಳೆದಿದೆಯಷ್ಟೇ.
ಏನು ಮಾಡುವಿರಿ?
- ಮಾವೆಂಸ


ಮಂಗಳವಾರ, ಜುಲೈ 6, 2010

ಎಸ್‌ಎಂಎಸ್ ಓದಿದ್ದಕ್ಕೆ ಸಂಭಾವನೆ !



ಜಗತ್ತಿನ ಪ್ರತಿಯೊಬ್ಬನೂ ಬಳಕೆದಾರ. ಈ ಜನರ ಗ್ರಾಹಕ ಶಕ್ತಿಯ ಅಗಾಧತೆಯ ಬಗ್ಗೆ ಯಾರಿಗೂ ಸಂಶಯ ಇರಲಿಕ್ಕಿಲ್ಲ. ಅದನ್ನು ಅರ್ಥ ಮಾಡಿಸುವಲ್ಲಿ ಬಳಕೆದಾರರ ಚಳುವಳಿಯ ಪಾತ್ರ ದೊಡ್ಡದು. ಯಾರೋ ಹೇಳಿದ್ದು ನೆನಪಾಗುತ್ತದೆ. ಜಾಹಿರಾತುಗಳನ್ನು ನೋಡುವ, ಓದುವ ಮಂದಿಗೇ ಶುಲ್ಕ ಪಾವತಿಸುವಂತಾಗಬೇಕು. ಅಂತಹ ಕಾಲ ಬಂದಿದೆ!

ಒಂದರ್ಥದಲ್ಲಿ, ಜಾಹಿರಾತುಗಳಿಂದ ಆದಾಯ ಗಳಿಸುವುದರಿಂದಲೇ ಕೈಗೆಟುಕುವ ಬೆಲೆಯಲ್ಲಿ ದೈನಿಕ ಪತ್ರಿಕೆಗಳನ್ನು ಮಾರಾಟ ಮಾಡಲಾಗುತ್ತಿದೆ. ಅಸಲಿ ಬೆಲೆಗೆ ಮಾರುವುದಾದರೆ ಪ್ರತಿ ದಿನ ಅವನ್ನು ೧೭-೧೮ ರೂ.ಗೆ ಮಾರಬೇಕು! ಖರೀದಿಸುವವರಿಗೆ ಸಿಗುವ ಈ ಸಬ್ಸಿಡಿಗೆ `ಗ್ರಾಹಕ ಶಕ್ತಿ' ಕಾರಣ ಎಂದರೆ ಅರ್ಧಸತ್ಯ ಹೇಳಿದಂತೆ. ನೀವೇ ನೋಡಿ, ಅತಿ ಹೆಚ್ಚಿನ ಜಾಹೀರಾತು ಆದಾಯ ಗಳಿಸುವ ಪತ್ರಿಕೆ ಈ ಲಾಭದ ಒಂದಂಶವನ್ನು ಬಳಕೆದಾರರಿಗೆ ವರ್ಗ ಮಾಡಿದ್ದಾದರೆ ಆ ಪತ್ರಿಕೆಗೆ ಉಳಿದ ಪತ್ರಿಕೆಗಳಿಗಿಂತ ಕಡಿಮೆ ಬೆಲೆ ಇರಬೇಕಿತ್ತು!

ಇದೇ ರೀತಿ ಬಳಕೆದಾರರಿಗೆ ಉಚಿತವಾಗಿ ಇ-ಮೇಲ್ ಸ್ಥಳಾವಕಾಶ ಕೊಡುವ ವೆಬ್‌ಸೈಟ್‌ಗಳನ್ನು ಅಥವಾ ಶುಲ್ಕವಿಲ್ಲದೆ ನಾನಾ ಮಾದರಿಯ ಎಸ್‌ಎಂಎಸ್ ಕಳಿಸುವ ಇತ್ತೀಚಿನ ಮೈ ಟುಡೇ ಡಾಟ್ ಕಾಂಗಳನ್ನು ಉದಾಹರಿಸಬಹುದು. ಇವೆಲ್ಲ ಬಳಕೆದಾರರಿಗೆ ನೇರವಾಗಿ ಶುಲ್ಕ ನೀಡದಿದ್ದರೂ ಅವರ ಶಕ್ತಿಯನ್ನು ಗೌರವಿಸುವ ಯತ್ನಗಳು. ಆದರೆ ಮೊಬೈಲ್‌ಗೆ ಓತಪ್ರೋತವಾಗಿ ಬರುವ ಕಮರ್ಷಿಯಲ್ ಎಸ್‌ಎಂಎಸ್ ಓದಲು ನಮಗೇ ಕಾಸು ಕೊಡುವ ಕಾಲ ಬರುತ್ತದೆಯೇ?

ಆಗಲೇ ಆ ದಿನ ಬಂದಿದೆ! ಮೂರ್‍ನಾಲ್ಕು ಅಂತಹ ಹೊಸ ವ್ಯವಸ್ಥೆಗಳು ಜಾರಿಗೆ ಬಂದಿದೆ. ಇವುಗಳ ಕಾರ್ಯ ಮಾದರಿ ಬಹುಪಾಲು ಒಂದೇ ತರ. ಇವು ವೆಬ್‌ಸೈಟ್‌ಗಳು. ಎಂ-ಅರ್ನ್, ಎಂ-ಜಿಂಜರ್. ಯು ಮಿಂಟ್‌ಗಳನ್ನು ಉದಾಹರಿಸಬಹುದು.
(ಕೆಳಗಿನ ವೆಬ್‌ಸೈಟ್‌ಗಳ ಲಿಂಕ್‌ಗೆ ಕ್ಲಿಕ್ ಮಾಡಿ - ದುಡಿಮೆ ಆರಂಭಿಸಿ!)
mginger.com ಅಥವಾ you mint.com ಹೆಸರಿನ ವೆಬ್‌ಸೈಟ್‌ನೊಳಗೆ ಪ್ರವೇಶಿಸಬೇಕು. ಅಲ್ಲಿ ನಮ್ಮನ್ನು ನೋಂದಾಯಿಸಿಕೊಳ್ಳಲು ಅವಕಾಶವಿದೆ. ನಮ್ಮ ವಿವರಗಳ ಜೊತೆಗೆ ನಮ್ಮ ಮೊಬೈಲ್ ನಂಬರ್‌ನ್ನು ದಾಖಲಿಸಬೇಕು. ಹತ್ತಾರು ವಿಷಯಗಳ ಆಯ್ಕೆಗಳಿವೆ. ಬೇಕಾದ ವಿಷಯದ ಎಸ್‌ಎಂಎಸ್, ಸ್ವೀಕರಿಸಲು ಬಯಸುವ ನಿರ್ದಿಷ್ಟ ಸಮಯವನ್ನೂ ಆಯ್ದುಕೊಳ್ಳಬಹುದು. ಇನ್ನು ಮುಂದೆ ಇವುಗಳಿಂದ ಬರುವ ಪ್ರತಿ ಎಸ್‌ಎಂಎಸ್ ಜೊತೆಗೆ ನಿಮ್ಮ ಖಾತೆಗೆ ೨೦ ಪೈಸೆ ಜಮಾ !
ಹಿನ್ನೆಲೆ ಸಾಕಷ್ಟು ಸರಳ, ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಅನಪೇಕ್ಷಿತ ಕರೆ, ಎಸ್‌ಎಂಎಸ್‌ನ್ನು ನಿಷೇಧಿಸುವ ಎನ್‌ಡಿಎನ್‌ಸಿ ಎಂಬ ವ್ಯವಸ್ಥೆಯನ್ನು `ಟೆಲಿಕಾಂ ಅನ್‌ಸಾಲಿಸಿಟೆಡ್ ಕಮರ್ಷಿಯಲ್ ಕಮ್ಯುನಿಕೇಷನ್, ೨೦೦೭'ನ ಹೆಸರಿನಲ್ಲಿ ಜಾರಿಗೆ ತಂದಿದೆ. ಟ್ರಾಯ್ ಗಮನಿಸಿದಂತೆ, ಮೊಬೈಲ್ ಬಳಕೆದಾರರನ್ನು ಅನಪೇಕ್ಷಿತ ಟೆಲಿ ಮಾರ್ಕೆಟಿಂಗ್ ಕರೆಗಳು, ಸಂದೇಶಗಳು ಅಯಾಚಿತ ವೇಳೆಗಳಲ್ಲಿ ಕಿರಿಕಿರಿಗೆ ಒಳಪಡಿಸುವುದು ಕಂಡುಬಂದಿತ್ತು. ಮೊಬೈಲ್ ಕಂಪನಿಯ ಚಂದಾದಾರರು ಈ ಪ್ರಚಾರ ತಂತ್ರಗಳಿಂದ ತೊಂದರೆಗೊಳಗಾಗುವುದು ನ್ಯಾಯಸಮ್ಮತವಲ್ಲ ಎಂದು ಅಭಿಪ್ರಾಯಪಟ್ಟ ಟ್ರಾಯ್ ಆ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆ.

ಅದರ ನಿಯಮದ ಪ್ರಕಾರ, ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಎಂಬ ಸರ್ಕಾರಿ ಏಜೆನ್ಸಿ ಸ್ಥಾಪನೆಯಾಗಿದೆ. ಇದರಲ್ಲಿ `ನ್ಯಾಷನಲ್ ಡು ನಾಟ್ ಕಾಲ್' ಎಂಬ ನೊಂದಣಿ ಸೌಲಭ್ಯವಿರುತ್ತದೆ. ಈ ಅನಪೇಕ್ಷಿತ ಕರೆ, ಎಸ್‌ಎಮ್‌ಎಸ್ ಬೇಡ ಎನ್ನುವವರು ಈ ಎನ್‌ಡಿಎನ್‌ಸಿಯಲ್ಲಿ ನೊಂದಾಯಿಸಬಹುದು. ಅದಕ್ಕೆ ಅಗತ್ಯ ವ್ಯವಸ್ಥೆಗಳನ್ನು ಸಂಬಂಧಿತ ಸೇವಾದಾತರು ಒದಗಿಸಬೇಕು. ಸ್ವಾರಸ್ಯವೆಂದರೆ, ಈ ಸೌಲಭ್ಯ ಮೊಬೈಲ್ ಚಂದಾದಾರರಲ್ಲದೆ ಸ್ಥಿರ ದೂರವಾಣಿ ಬಳಕೆದಾರರಿಗೂ ಲಭ್ಯ.

ಒಮ್ಮೆ ನೊಂದಾಯಿಸಿಕೊಂಡರೆ, ಮತ್ತೆ ಆ ಚಂದಾದಾರರಿಗೆ ಟೆಲಿ ಮಾರ್ಕೆಟಿಂಗ್ ಕಂಪನಿಗಳು ಕರೆ - ಸಂದೇಶಗಳನ್ನು ಕಳಿಸುವಂತಿಲ್ಲ. ಒಂದೊಮ್ಮೆ ಈ ನಿಯಮ ಉಲ್ಲಂಘಿಸಿದರೆ, ಪ್ರತಿ ಅನಪೇಕ್ಷಿತ ಕರೆ - ಸಂದೇಶಕ್ಕೆ ೫೦೦ ರೂ.ಗಳ ದಂಡವನ್ನು ವಿಧಿಸಲಾಗುತ್ತದೆ. ಅಷ್ಟೇಕೆ, ಟೆಲಿ ಮಾರ್ಕೆಟಿಂಗ್ ಕಂಪನಿಯ ಸೇವಾ ಪರವಾನಗಿಯನ್ನೇ ರದ್ದುಗೊಳಿಸುವುದು ಸಾಧ್ಯ.

ಎಲ್ಲ ಅಥವಾ ಬಹುಪಾಲು ಚಂದಾದಾರರು ಎನ್‌ಡಿಎನ್‌ಸಿಯಲ್ಲಿ ನೊದಾಯಿಸಿಬಿಟ್ಟರೆ ಕೋಟಿಗಟ್ಟಲೆ ಬಂಡವಾಳ ತೊಡಗಿಸಿರುವ ಕಂಪನಿಗಳು ತಮ್ಮ ಪ್ರಚಾರಕ್ಕೆ ಪರದಾಡಬೇಕು. ರಿಂಗ್ ಟೋನ್, ವಾಲ್ ಪೇಪರ್ ಒದಗಿಸುವ ಕಂಪನಿಗಳು, ಇನ್ಸೂರೆನ್ಸ್ ಕ್ಷೇತ್ರದ ಪ್ರಚಾರ ಸರಕುಗಳು, ಎಸ್‌ಎಮ್‌ಎಸ್ ಜಾಹೀರಾತುಗಳನ್ನು ನೆಚ್ಚಿಕೊಳ್ಳುವ ಬ್ಯಾಂಕ್‌ಗಳು.... ಎಲ್ಲವೂ ಜಾಗೃತರಾಗಲೇಬೇಕಾದ ಸಂದರ್ಭವಿದು. ತಪ್ಪಾಗಿ ಎನ್‌ಡಿಎನ್‌ಸಿ ನೊಂದಾಯಿತ ಗ್ರಾಹಕನನ್ನು ಸಂಪರ್ಕಿಸಿದರೆ ಅದಕ್ಕೆ ದಂಡವನ್ನು ತೆರಬೇಕಾಗಿರುವುದರಿಂದ ಪರಿಸ್ಥಿತಿ ಗಂಭೀರವೇ.

ಈ ಕಾಲಘಟ್ಟದಲ್ಲಿ ಜನ್ಮ ತಾಳಿದ್ದೇ ಎಂ ಜಿಂಜರ್, ಎಂ ಅರ್ನ್‌ನಂತ ಕಂಪನಿಗಳು. ಇವು ಎಸ್‌ಎಮ್‌ಎಸ್ ಓದಿದ್ದಕ್ಕೆ ಸಂಭಾವನೆ ಎಂಬ ಸೂತ್ರದಡಿ ಕೆಲಸ ಮಾಡುತ್ತವೆ. ತಮ್ಮ ವೆಬ್‌ಸೈಟ್‌ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಮೊಬೈಲ್ ಚಂದಾದಾರರನ್ನು ನೊಂದಾಯಿಸಿಕೊಳ್ಳುತ್ತವೆ. ಮುಂದೆ ಜಾಹೀರಾತು ಕಂಪನಿಗಳು ಸಂಪರ್ಕಿಸಿದರೆ ಇವರಲ್ಲಿ ನೊಂದಾಯಿತ ಮೊಬೈಲ್ ಸಂಖ್ಯೆಗಳನ್ನು ಪಡೆಯಬಹುದು. ಈ ಚಂದಾದಾರರಿಗೆ ಎಸ್‌ಎಮ್‌ಎಸ್ ಕಳಿಸಿದರೆ ತಲೆಬಿಸಿಯಿಲ್ಲ.`ದಂಡ' ತೆರುವ ಮಾತಿಲ್ಲ. ಈ ವ್ಯವಸ್ಥೆಗೆ ವೆಬ್‌ಸೈಟ್ ಕಂಪನಿಗಳು ಶುಲ್ಕ ಪಡೆಯುತ್ತವೆ. ಅದರಲ್ಲೊಂದು ಭಾಗವನ್ನು ಮೊಬೈಲ್ ಗ್ರಾಹಕನಿಗೂ ವರ್ಗಾಯಿಸುತ್ತವೆ.

ಈ ಸಂಭಾವನೆಯನ್ನು ಸದಸ್ಯ ಪಡೆಯಲು ಹಲವು ಮಾರ್ಗಗಳಿವೆ. ನೇರವಾಗಿ ಒಂದು ನಿರ್ದಿಷ್ಟ ಮೊತ್ತ ತಲುಪಿದಾಕ್ಷಣ ಚೆಕ್ ಪಡೆಯಬಹುದು, ನಮ್ಮ ಬ್ಯಾಂಕ್ ಖಾತೆಗೇ ಹಣ ಬಂದು ಬೀಳುವಂತೆ ನಿರ್ದೇಶಿಸಬಹುದು. ಇದೀಗ ಮಾಡಿರುವ ಇನ್ನೊಂದು ಚಿಂತನೆಯೆಂದರೆ, ಈ ದುಡಿಮೆಯನ್ನು ಚಂದಾದಾರ ತನ್ನ ಮೊಬೈಲ್‌ಗೆ `ಟಾಕ್ ಟೈಮ್' ಆಗಿಯೂ ಬದಲಿಸಿಕೊಳ್ಳಬಹುದು! ಅಂದರೆ ಒಂದು ಎಸ್‌ಎಮ್‌ಎಸ್ ನಿಮ್ಮ ಮೊಬೈಲ್‌ಗೆ ಬಂತು ಎಂದಾದರೆ ನಿಮ್ಮ ಟಾಕ್‌ಟೈಮ್‌ಗೆ ೨೦ ಪೈಸೆ ಸೇರುತ್ತದೆ!

ಸದ್ಯಕ್ಕೆ ಇವೆಲ್ಲ ಹೊಸ ವ್ಯವಸ್ಥೆಗಳು, ಇನ್ನೂ ಎನ್‌ಡಿಎನ್‌ಸಿಯಲ್ಲಿ ನೊಂದಾಯಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿಲ್ಲ. ಟೆಲಿ ಮಾಕೆಟಿಂಗ್ ಕಂಪನಿಗಳು ಯೋಚಿಸುವ ಸ್ಥಿತಿ ಬಂದಿಲ್ಲ. ಮುಖ್ಯವಾಗಿ, ಅವಿನ್ನೂ ದಂಡ ಕಟ್ಟುತ್ತಿಲ್ಲ! ಆದರೂ ಎಂ ಅರ್ನ್, ಎಂ ಜಿಂಜರ್‌ನಂತವು ಕಾರ್‍ಯಾರಂಭಗೊಂಡಿದ್ದು ಚಂದಾದಾರರು ಸಂಭಾವನೆ ಪಡೆಯುತ್ತಿದ್ದಾರೆ. ದೊಡ್ಡ ಪ್ರಮಾಣದ ಯಶಸ್ಸಿಗೆ ನಾವು ಇನ್ನೂ ಸ್ವಲ್ಪ ಕಾಲ ಕಾಯಬೇಕು.
ಎರಡು ವರ್ಷಗಳ ಹಿಂದಿನ ಲೇಖನವಿದು. ಆದರೂ ನಾವು ಈ ನಿಟ್ಟಿನಲ್ಲಿ ಹೆಚ್ಚು ದೂರ ಹೋಗಿಲ್ಲ. ಇವತ್ತಲ್ಲ ನಾಳೆ, ಈ ವೆಬ್‌ಗಳ ಕಾಲ ಬರುತ್ತದೆ. ಅಷ್ಟರೊಳಗೆ ನಾವು ಮೊದಲ ಸದಸ್ಯರಾಗಿ ಲಾಭ ಗಿಟ್ಟಿಸಲೇಬೇಕು. ಅಷ್ಟಕ್ಕೂ ಹೋದರೊಂದು ಕಲ್ಲು. ಬೀಸಲೇನು ಸಮಸ್ಯೆ?
ಬರುವ ದಿನಗಳಲ್ಲಿ ಇನ್ನು ಕೆಲವು ವೆಬ್ ಮಾಹಿತಿ ನೀಡುವ ಆಸೆಯಿದೆ. ತುಸು ನಿರೀಕ್ಷಿಸಿ.....


- ಮಾವೆಂಸ

ಸೋಮವಾರ, ಜೂನ್ 21, 2010

ಕೃಷಿಗೆ `ಹೋಮ್ ಸ್ಟೇ' ಪೂರಕವೇ?

ದಯವಿಟ್ಟು ಕ್ಷಮಿಸಿ. ನೀವು ನನ್ನ ಬ್ಲಾಗ್‌ನ ನಿರಂತರ ಓದುಗರೆಂದುಕೊಂಡಿರುವೆ ಮತ್ತು ಬಹಳ ದಿನಗಳಿಂದ ಯಾವುದೇ ಲೇಖನವನ್ನು ಅಪ್‌ಲೋಡ್ ಮಾಡದೆ ನಿಮಗೆ ನಿರಾಶೆ ಮಾಡಿರುವೆ! ಕೊನೆಪಕ್ಷ ನಾನು ಹಾಗೆಂದುಕೊಂಡರೆ ಅಲ್ಲಗಳೆಯದಿರಿ ಪ್ಲೀಸ್.........
ನಿಜಕ್ಕೂ ಪುರಸೊತ್ತಿಲ್ಲದ್ದು ಅರ್ಧ ನಿಜ. ಇನ್ನರ್ಧ ಕಾರಣ ಯಡಿಯೂರಪ್ಪನವರು! ಮೈಲ್‌ನ ಪತ್ರಗಳನ್ನು ಓದಲು ಬೇಕಾದಷ್ಟು ಕರೆಂಟ್ ಕೊಡದ ದಿನಗಳೂ ಇವೆ ಕಣ್ರೀ......
ಇನ್ನೊಂದು, ನಾನೀಗ `ಉದಯವಾಣಿ'ಯ ಸಾಗರ ವರದಿಗಾರನಾಗಿ ನಿಯುಕ್ತನಾದುದರಿಂದ ನಾನೇ ಸುದ್ದಿಯಾಗುವಂತಿಲ್ಲ! ಸುದ್ದಿ ಬರೆಯುವ ಕೆಲಸದಲ್ಲಿ ನಿರತನಾಗಬೇಕಾಯಿತು. ಕಂಗ್ರಾಟ್ಸ್ ಅಂದ್ರ, ಥ್ಯಾಂಕ್ಸ್!
ಇವತ್ತು ಒಂದು ಲೇಖನ ಹಾಕಿದ್ದೇನೆ, ಒಪ್ಪಿಸಿಕೊಳ್ಳಿ........



`ರೈತನೇ ದೇಶದ ಬೆನ್ನೆಲುಬು' ಎಂದು ಬಾಯಿಪಾಠ ಮಾಡಿಕೊಳ್ಳುತ್ತಿದ್ದ ವಾಕ್ಯ ಇವತ್ತು ನಿಜವಾಗಿ ಉಳಿದಿಲ್ಲ. ವಿಜ್ಞಾನಿಗಳು, ಜನಪ್ರತಿನಿಧಿಗಳು ರೈತರಿಗೆ ಉಪಬೆಳೆ ಬೆಳೆಯಲು ಸೂಚಿಸುತ್ತಿದ್ದಾರೆ. ಪರ್ಯಾಯ ಉದ್ಯೋಗಗಳತ್ತ ಸಲಹೆ ಕೊಡುತ್ತಿದ್ದಾರೆ. ಅಂದರೆ ಕೃಷಿ ಬದುಕು ಅನಿಶ್ವಿತ ಎಂಬುದನ್ನು ಸಾರಿ ಹೇಳುತ್ತಲಿದ್ದಾರೆ. ಇದೇ ಹಿನ್ನೆಲೆಯಲ್ಲಿ ರೈತರು ಹೊಸ ಹೊಸ ಅವಕಾಶಗಳತ್ತ ತೆರೆದುಕೊಂಡಿರುವುದನ್ನು ಕಾಣುತ್ತಿದ್ದೇವೆ. ಹಪ್ಪಳ, ಸಂಡಿಗೆ ಮಾರಾಟ, ಹಾಳೆ ದೊನ್ನೆ, ಊಟ ಬಡಿಸುವ ಕೈಂಕರ್ಯ... ಹೀಗೆ ಕೈ ಖರ್ಚಿಗೆ ಹಣ ಸಂಪಾದಿಸಲು ಕೃಷಿಕ ಅನಿವಾರ್ಯವಾಗಿ ಹೊರಬಿದ್ದಿದ್ದಾನೆ.
ರೈತ ವ್ಯಾಪಾರಸ್ಥನಾದುದನ್ನು ನೋಡಿ ಸಮಾಜಕ್ಕೆ ಸೈರಿಸಿಕೊಳ್ಳಲಾಗುತ್ತಿಲ್ಲ. ಟೀಕೆಗಳು ಹರಿದು ಬರುತ್ತಿವೆ. ಇವ ಇನ್ನು ಕೃಷಿಯನ್ನೇ ಮಾಡುವುದಿಲ್ಲ ಎಂಬ ಭರ್ತ್ಸನೆ ಕೇಳಿಬಂದಿವೆ. ಜೊತೆಗೆ `ಹೋ ಸ್ಟೇ' ಎಂಬ ಉದ್ಯಮದತ್ತ ಕಣ್ಣು ಹಾಕಿರುವ ರೈತ ಸಮುದಾಯಕ್ಕಂತೂ ವಿರೋಧದ ಬಿಸಿಗಾಳಿ. ಇದು ನಮ್ಮ ಸಂಸ್ಕೃತಿಯನ್ನೇ ನಾಶಪಡಿಸುತ್ತದೆ ಎಂಬ ಕೂಗು. ನಿಜವೇ?
ಹೋಂ ಸ್ಟೇ ವಿಧಾನ ಹೊಸದಲ್ಲ. ಮುಖ್ಯವಾಗಿ ಇದನ್ನು ಪ್ರವಾಸಿಗರಿಗೆ ಮನೆಯ ವಾತಾವರಣದಲ್ಲಿ ವೆಚ್ಚ ಪಡೆದು ಆತಿಥ್ಯ ನೀಡುವುದು ಎಂದು ಸರಳವಾಗಿ ವಿವರಿಸಬಹುದು. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಚಿಕ್ಕ ಮಂಗಳೂರಿನಲ್ಲಿ ಇದು ಹಲವು ವರ್ಷಗಳಿಂದ ಪ್ರಚಲಿತ. ಅಲ್ಲಿನ ಮಧ್ಯಮ ವರ್ಗದ ಕಾಫಿ ಬೆಳೆಗಾರರು ಬೆಳೆ ಬೆಲೆ ಕುಸಿತದ ಸಂದರ್ಭದಲ್ಲಿ ಆಯ್ದುಕೊಂಡ ಪರ್ಯಾಯವಿದು.
ಬೃಹತ್ ಬೆಳೆಗಾರರು ಇದಕ್ಕೆ `ರೆಸಾರ್ಟ್' ಸ್ಪರ್ಶ ಕೊಟ್ಟರೆ ಸಾಮಾನ್ಯರು ತಮ್ಮದೇ ಮನೆಯಲ್ಲಿ, ಪರಿಸರದಲ್ಲಿ ಆತಿಥ್ಯ ಕೊಟ್ಟು ಆದಾಯದ ಮೂಲವನ್ನು ಕಂಡುಕೊಂಡರು.
ವಿರೋಧ ಬಂದಿದ್ದೇ ಇಲ್ಲಿ. ಹೋಂ ಸ್ಟೇ ವಿಧಾನದಲ್ಲಿ ಕೃಷಿಕರ ಕುಟುಂಬ ಪ್ರವಾಸಿಗರೊಂದಿಗೆ ನೇರ ಸಂಪರ್ಕ ಹೊಂದುತ್ತದೆ. ಇದರಿಂದ ಕೃಷಿಕರ ಜೀವನ ಕ್ರಮ ಬದಲಾಗುತ್ತದೆ. ಅವರ ವಿಶಿಷ್ಟ ಸಂಸ್ಕೃತಿನಾಶವಾಗುತ್ತದೆ ಎಂಬಿತ್ಯಾದಿ ಅನುಮಾನ ವ್ಯಕ್ತವಾಗುತ್ತಿದೆ. ಮೋಜು ಮಸ್ತಿಗೆಂದೇ ಬರುವ ಪ್ರವಾಸಿಗರು ಸ್ಥಳೀಯ ಪರಿಸರವನ್ನು ಕೆಡಿಸುವರಲ್ಲದೆ ಯುವ ಪೀಳಿಗೆಯವರನ್ನು ಹಾದಿ ತಪ್ಪಿಸಬಹುದು ಎಂಬ ಆತಂಕ.
ವಾಸ್ತವ ಬೇರೆಯೇ ಇದೆ. ಕತೆ ಕಾದಂಬರಿಗಳಲ್ಲಿ ಬರುವಂತ ಟಿಪಿಕಲ್ ಹಳ್ಳಿಗಳು ಈಗಿಲ್ಲ ಅಥವಾ ತುಂಬಾ ಕಡಿಮೆ ಎನ್ನಬಹುದು. ಹಳ್ಳಿಗರು ನಗರಗಳೊಂದಿಗೆ, ನಗರ ಜೀವನದೊಂದಿಗೆ ನಿರಂತರವಾಗಿ ಎಡತಾಕುತ್ತಿದ್ದಾರೆ. ಪೇಟೆಯವರು ಅನುಭವಿಸುವ ಟಿವಿ ಛಾನೆಲ್, ಇಂಟರ್ನೆಟ್‌ನಂತವನ್ನು ಕೂಡ ಕಂಡವರಿಗೆ ಪ್ರವಾಸಿಗರು ಬಂದು ಉಳಿಯುತ್ತಾರೆಂಬ ಏಕೈಕ ಕಾರಣಕ್ಕೆ ಕೆಟ್ಟು ಹೋಗುವರೆಂಬುದು ಸುಳ್ಳು. ದಾರಿ ತಪ್ಪಲು ಇದು ಇನ್ನೊಂದು ಆಯ್ಕೆ ತೆರೆದುಕೊಂಡಂತೆ ಆಗಬಹುದೇನೋ. ಮಾನಸಿಕ ಸ್ಥಿರತೆ ಪಡೆದವರು ಆಮಿಷಗಳಿಗೆ ಬಲಿಯಾಗರು. ಹೋಟೆಲ್‌ನ ಯಾಂತ್ರಿಕ ವಾತಾವರಣ, ರೆಸಾರ್ಟ್‌ಗಳ ಅತಿ ದುಬಾರಿ ದರದಿಂದ ಬೇಸತ್ತ ಪ್ರವಾಸಿಗರಿಗೆ ಹಳ್ಳಿಗರ ಹೋಂ ಸ್ಟೇ ಮುದನೀಡುವಂತದು.
ಈಗ ಹೋಂ ಸ್ಟೇ ಉತ್ತರ ಕನ್ನಡದ ಹಳ್ಳಿಗಳೊಳಗೆ ಮತ್ತು ಮಲೆನಾಡಿನ ಗ್ರಾಮಗಳನ್ನು ಪ್ರವೇಶಿಸಿದೆ. ಸಾಗರ ತಾಲ್ಲೂಕಿನ ಜೋಗ ಸಮೀಪದ ತಲವಾಟದ ಒಂದು ಹೋಂ ಸ್ಟೇಯನ್ನು ಯಶಸ್ವಿ ದೃಷ್ಟಾಂತವಾಗಿ ಪ್ರಸ್ತಾಪಿಸಬಹುದು.
ಚಿತ್ರ ಕೃಪೆ - ಹಿಂಡೂಮನೆ ಜಿತೇಂದ್ರ
ತಲವಾಟದ `ನಮ್ಮನೆ' ಎಂಬ ಈ ಉಳಿಮನೆಯನ್ನು ಪ್ರವಾಸಿಗರಿಗೆ ಕಾಡಿನ ನಡುವೆ ಕಡಿಮೆ ವೆಚ್ಚದಲ್ಲಿ ತಂಪು ಸುಖ ಹಾಗೂ ಪ್ರಶಾಂತತೆ ನೀಡುವ ಪರಿಸರದಲ್ಲಿ ಆರಂಭಿಸಲಾಗಿದೆ. ಸ್ವಾರಸ್ಯವೆಂದರೆ ಇದರ ಹಿಂದೆ ಜಯಕೃಷ್ಣ ಎಂಬ ಯುವಕನ ಜೊತೆ ಊರಿನ ಸಮಾನ ಮನಸ್ಕ ಯುವಕರೂ ಸೇರಿದ್ದಾರೆ. ಒಬ್ಬ ವ್ಯಕ್ತಿಗೆ ದಿನವೊಂದಕ್ಕೆ ಊಟ ವಸತಿ ಸೇರಿ ೫೦೦ರೂಪಾಯಿ ವೆಚ್ಚ ಬೇಡುವ ಈ ಉಳಿಮನೆ ಲಾಭಾಂಶದಲ್ಲಿ ಊರಿನ ಶಾಲೆಯ ಬಿಸಿಯೂಟಕ್ಕೆ ಪಾಲು ನೀಡುವುದು ವಿಶೇಷ. ಅತಿಥಿಗಳಿಗೆ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳ, ಜಲಪಾತಗಳು ಮುಂತಾದವುಗಳಿಗೆ ಹೋಗಲು ಗೈಡ್ ಆಗುವ ಮೂಲಕ ಹಲವು ಯುವಕರಿಗೆ ಉದ್ಯೋಗವೂ ದೊರಕಿದಂತಾಗಿದೆ. ಇಂತಹ ಉಳಿಮನೆ ವೈಯುಕ್ತಿಕ ಆದಾಯದ ಜೊತೆಗೆ ಪಟ್ಟಣ ಹಾಗೂ ಹಳ್ಳಿಗಳ ಮನಸ್ಸುಗಳನ್ನು ಬೆಸೆಯುವ ಕಾರ್ಯವೂ ಆಗುತ್ತದೆ ಎಂಬುದು ತಲವಾಟದ ಯುವಕರ ಗಟ್ಟಿ ಅಭಿಪ್ರಾಯ. ಅಷ್ಟೇಕೆ, ಬಂದ ಪ್ರವಾಸಿಗರು ಹಳ್ಳಿಯ ಕೆಲವರಿಗಾದರೂ ನಗರದಲ್ಲಿನ ಉದ್ಯೋಗಾವಕಾಶಗಳ ಪರಿಚಯ ಮಾಡಿಕೊಡಬಹುದು.
ರೈತನಿಗೆ ಹೋಂ ಸ್ಟೇ ಮಾಡಲು ಪ್ರತ್ಯೇಕ ಬಂಡವಾಳ ಹಾಕಬೇಕಾಗಿಲ್ಲ. ತನ್ನ ಮನೆ ಪರಿಸರವನ್ನು ಚೂರು ಪಾರು ಮಾರ್ಪಡಿಸಿದರೆ ಸಾಕು. ರೈತನ ಕೃಷಿ ಕೆಲಸ ವರ್ಷದುದ್ದಕ್ಕೂ ಇರದಿರುವ ಹಿನ್ನೆಲೆಯಲ್ಲಿ ಹೋಂ ಸ್ಟೇ ನಿಭಾಯಿಸುವುದು ತ್ರಾಸದ ಮಾತಲ್ಲ. ಅತಿಥಿಗಳ ಆಯ್ಕೆ, ಬುಕ್ಕಿಂಗ್ ನಿರಾಕರಣೆ ರೈತನ ಹಕ್ಕಾಗಿರುವುದರಿಂದ ಕಟ್ಟುನಿಟ್ಟಿನ ನಿಭಾವಣೆ ಸಾಧ್ಯ. ರೈತ ಬೆಳೆಯ ಮೌಲ್ಯ ವರ್ಧೀಕರಣವನ್ನು ಹೋಂ ಸ್ಟೇನಿಂದ ಸಲೀಸಾಗಿ ಜಾರಿಗೆ ತರಬಹುದು. ಹೋಂ ಸ್ಟೇಗೆ ಬಂದವರಿಗೆ ಹಲಸಿನ ಹಪ್ಪಳದ ರುಚಿ ತೋರಿಸಿ ತನ್ನ ಆ ತಯಾರಿಕೆಯನ್ನು ಮಾರಾಟ ಮಾಡಬಹುದು! ಮಾತಿನ ಜಾಹೀರಾತಿಗಿಂತ ಪ್ರಭಾವಶಾಲಿ ಮಾಧ್ಯಮವಿಲ್ಲ ಎನ್ನುತ್ತಾರೆ. ಆ ನಿಟ್ಟಿನಲ್ಲೂ ಹೋಂ ಸ್ಟೇ ಪರಿಚಯಿಸಿಕೊಳ್ಳಲು ವಿಪರೀತ ಕಷ್ಟ ಪಡಬೇಕಿಲ್ಲ.
ಸುಗ್ಗಿಯ ಹಂಗಾಮ ಹಾಗೂ ಹೋಂ ಸ್ಟೇಗಳ ನಡುವೆ ಸಮತೋಲನ ಮಾಡಿಕೊಳ್ಳುವುದು ರೈತನ ಜಾಣ್ಮೆ. ಅಂತರ್ಜಾಲ ಕೂಡ ಹಳ್ಳಿಗಳನ್ನು ಪ್ರವೇಶಿಸಿರುವುದರಿಂದ ಮುಂಗಡ ನೊಂದಾವಣಿ, ಹಣ ಪಾವತಿಗಳೆಲ್ಲ ಸುಲಭ ಸುಲಭ. ಇದನ್ನು ರೈತರು ಬಳಸಿಕೊಳ್ಳಬೇಕು. ನಗರ ಜೀವನದಲ್ಲಿ ಸುಸ್ತಾಗಿರುವ ಪ್ರವಾಸಿಗರಿಗೆ ವೀಕೆಂಡ್ ಪ್ರವಾಸಕ್ಕೆ ರೈತರ ಹೋಂ ಸ್ಟೇ ಒದಗಿಸುವ ಆಹ್ಲಾದ ಅನುಭವ ಸ್ವಾಗತಾರ್ಹ.
ಪಾವತಿ ಅತಿಥಿಗಳಿಗೆ ಭವಿಷ್ಯವಿದೆ. ರೈತರ ವಲಯದಲ್ಲಿ ಹೋಂ ಸ್ಟೇ ತಂಗಲಿದೆ! ನೀವೇನಂತೀರಿ???

-ಮಾವೆಂಸ

ಬುಧವಾರ, ಮಾರ್ಚ್ 31, 2010

ಮಾಂಗೂಸ್ .........!

ಐಪಿಎಲ್ ಎರಡನೇ ವಾರ
ಮಾಂಗೂಸ್ ಬ್ಯಾಟ್, ಟೈಮ್ ಔಟ್,,,,ಇತ್ಯಾದಿ!

See full size imageಇಂಡಿಯನ್ ಪ್ರೀಮಿಯರ್ ಲೀಗ್‌ನ ಜ್ವರದ ಕಾವು ಹೆಚ್ಚಿದೆ. ಈಗಾಗಲೇ ಮೂರು ಪಂದ್ಯಗಳಲ್ಲಿ ಪಂದ್ಯ ವ್ಯಕ್ತಿಯಾಗಿ ಮೆರೆದ ಸಚಿನ್ ತೆಂಡೂಲ್ಕರ್ ಎಂಬ ಚಿರಯುವಕನಿಗೆ ಅಂತರ್ರಾಷ್ಟ್ರೀಯ ಟಿ೨೦ ಆಡಲು ಮನಸ್ಸು ಮಾಡುವಂತೆ ತೀವ್ರ ಒತ್ತಡ ಹುಟ್ಟಿಕೊಂಡಿರುವುದೂ ಇದೇ ವಾರ.
ವಾಸ್ತವವಾಗಿ, ಟ್ವೆಂಟಿ ೨೦ ಯುವಕರ ಆಟ ಎಂತಲೇ ಬಿಂಬಿಸಲಾಗಿತ್ತು. ಸತ್ಯ ಬೇರೆ, ತಾಂತ್ರಿಕವಾಗಿ ಶಸ್ತ್ರ ಸಜ್ಜಿತರಾದ ಟೆಸ್ಟ್ ಪರಿಣತರಿಗೆ ೨೦ ಸಲೀಸು ಪಂದ್ಯ. ಇಲ್ಲಿ ಪಿಚ್‌ನಲ್ಲಿ ಸವಾಲು ಎನಿಸುವಂತ ‘ಅಂಶ’ ಇರುವುದಿಲ್ಲ. ಮೈದಾನದಲ್ಲಿ ಚೆಂಡು ರಭಸದಿಂದ ಧಾವಿಸುವ ಬೋನಸ್ ಇರುವುದರಿಂದ ಶಕ್ತಿ ವಿಪರೀತ ಬೇಡ. ಬೌಂಡರಿ ಗೆರೆ ಇಲ್ಲಿ ಸಾಕಷ್ಟು ಹತ್ತಿರ. ಅಂದರೆ ಫೀಲ್ಡರ್‌ಗಳ ನಡುವೆ, ಅಪರೂಪಕ್ಕೊಮ್ಮೆ ಆತನ ತಲೆ ಮೇಲೆ ಚೆಂಡು ಬಾರಿಸುವ ತಾಕತ್ತು, ಧೈರ್ಯ ಇದ್ದರೆ ಆಯಿತು. ಇವತ್ತು ಸಚಿನ್‌ರ ಯಶಸ್ಸಿನ ಹಿಂದೆ ಇರುವುದೂ ಇದೇ ಸೂತ್ರ.
See full size imageಮಾಂಗೂಸ್ ಬ್ಯಾಟ್! ಈ ಸರ್ತಿಯ ಐಪಿಎಲ್ ಮೂರರ ಹೊಚ್ಚ ಹೊಸ ಪರಿಶೋಧವಿದು. ಏನಪ್ಪಾ ಇದರ ವಿಶೇಷ ಎಂದರೆ, ಮಾಮೂಲಿ ಬ್ಯಾಟ್‌ಗಿಂತ ಹಿಡಿಕೆ ಶೇ.೪೩ರಷ್ಟು ಉದ್ದ. ಬ್ಯಾಟ್‌ನ ಮುಖ ಭಾಗ ಶೇ.೩೩ರಷ್ಟು ಕಡಿಮೆ. ಆದರೆ ಬ್ಯಾಟ್‌ನ ಬುಡ ಐದು ಸೆಂ.ಮೀ. ದಪ್ಪ. ಕ್ರಿಕೆಟ್ ನಿಧಾನಕ್ಕೆ ಬೇಸ್‌ಬಾಲ್ ಆಗುತ್ತಿರುವುದರ ಸೂಚನೆಯನ್ನು ಮಾಂಗೂಸ್ ನೀಡುತ್ತದೆ. ಮುಖ್ಯವಾಗಿ, ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್, ಆಂಡ್ರ್ಯೂ ಸೈಮಂಡ್ಸ್ ಬಳಸಿ ಸಂಚಲನವನ್ನು ಉಂಟುಮಾಡಿದ್ದಾರೆ.
ಮೊನ್ನೆ ಮೊನ್ನೆ ಸಾಂಪ್ರದಾಯಿಕ ಬ್ಯಾಟ್‌ನ್ನು ಪೆವಿಲಿಯನ್‌ಗೆ ವಾಪಾಸು ಕಳುಹಿಸಿ ಮಾಂಗೂಸ್ ಹಿಡಿದ ಹೇಡನ್ ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ‍್ಸ್ ವಿರುದ್ಧ ಪಟಪಟನೆ ಮೂರು ಬೌಂಡರಿ ಬಾರಿಸಿದ್ದನ್ನು ನೊಡಿಬಿಟ್ಟಿದ್ದೇವೆ. ಇದು ಐಪಿಎಲ್‌ನಲ್ಲಿ ಮಾಂಗೂಸ್ ಬಳಕೆಯಾದ ಪ್ರಪ್ರಥಮ ನಿದರ್ಶನ. ಇದು ನಮ್ಮ ಭ್ರಮೆಗಳನ್ನು ಹೆಚ್ಚಿಸಿಬಿಟ್ಟಿದೆ!
See full size imageಬ್ಯಾಟ್ ಕುರಿತಂತೆ ಕ್ರಿಕೆಟ್ ನಿಯಮ ರೂಪಿಸುವ ಎಂಸಿಸಿ ಆರು ನಿಬಂಧನೆಗಳನ್ನು ಸೂಚಿಸಿದೆ. ಮಾಂಗೂಸ್ ಈ ಆರು ನಿಯಮಗಳನ್ನು ಶಿರಸಾವಹಿಸಿ ಪಾಲಿಸಿದೆ! ಅಷ್ಟಕ್ಕೂ ೨೦೦೯ರ ಮೇನಲ್ಲಿಯೇ ಆಸ್ಟ್ರೇಲಿಯಾದ ಸ್ಪರ್ಧಾತ್ಮಕ ಟೂರ್ನಿಯೊಂದರಲ್ಲಿ ಅಲ್ಲಿನ ಸ್ಟುವರ್ಟ್ ಲಾ ಇದನ್ನು ಬಳಸಿದ ಪ್ರಥಮ ಬ್ಯಾಟ್ಸ್‌ಮನ್ ಎಂಬ ಹಿರಿಮೆ ಹೊತ್ತಿದ್ದಾರೆ. ಭಾರತದ ದಿನೇಶ್ ಕಾರ್ತೀಕ್ ‘ಇದು ನಮಗಲ್ಲ’ ಎಂದು ತಿರಸ್ಕರಿಸಿದ್ದಾರೆ. ನಿಜಕ್ಕಾದರೆ, ಹೊಡೆತಗಳಿಗೆ ತುಸು ಲಾಭ ಒದಗಿಸುವ ಈ ಬ್ಯಾಟ್ ಶಾರ್ಟ್ ಪಿಚ್ ಎಸೆತ ಬ್ಯಾಟ್ಸ್‌ಮನ್‌ನ ದೇಹದ ಕಡೆ ಬಂದರೆ ವಿಪರೀತ ಕಷ್ಟದ ಮಾತು ಆದೀತು ಎಂಬ ಅನುಮಾನವಿದೆ. ಒಂದೆಂದರೆ, ಬ್ಯಾಟ್‌ನ ಸ್ವೀಟ್ ಪಾರ್ಟ್ ಶೇ.೧೨೦ರ ಅಗಾಧ ಪ್ರಮಾಣದಲ್ಲಿರುವುದು ಗಮನೀಯ.
See full size imageಖ್ಯಾತ ವೀಕ್ಷಕ ವಿವರಣೆಕಾರ ಹರ್ಷ ಬೋಗ್ಲೆ ಹೇಳುವುದೇ ಬೇರೆ, "ಓರ್ವ ಬ್ಯಾಟ್ಸ್‌ಮನ್‌ಗಿಂತ ಮಾಂಗೂಸ್ ಬ್ಯಾಟ್ ಉತ್ತಮವಾಗಿರಲು ಸಾಧ್ಯವಿಲ್ಲ. ಬ್ಯಾಟಿಂಗ್‌ನಲ್ಲಿ ಟೈಮಿಂಗ್, ಗ್ಯಾಪ್ ಹುಡುಕುವ ಜಾಣ್ಮೆಗಳನ್ನು ಬ್ಯಾಟ್ ಹೇಳಿಕೊಡುವುದಿಲ್ಲ. ಅದನ್ನು ಬ್ಯಾಟ್ಸ್‌ಮನ್ ಖುದ್ದು ಮಾಡಬೇಕು! ತಾಕತ್ತಿರುವ ಬ್ಯಾಟ್ಸ್‌ಮನ್ ಯಾವುದೇ ಬ್ಯಾಟ್‌ನಲ್ಲಿ ಮಿಂಚಬಲ್ಲ. ಜಾಕ್ ಕಾಲಿಸ್, ಸಚಿನ್ ಬಳಸುತ್ತಿರುವುದು ಸಾಂಪ್ರದಾಯಿಕ ಬ್ಯಾಟನ್ನೇ. ಒಂದಂತೂ ನಿಜ, ಮಾಂಗೂಸ್‌ನಲ್ಲಿ ಕೆಲವು ಅನುಕೂಲಗಳಿವೆ. ಹಲವು ದೌರ್ಬಲ್ಯಗಳಿವೆ. ನಾವು, ಮಾಧ್ಯಮದವರು ಮಾಂಗೂಸ್‌ಗೆ ಅನಗತ್ಯವಾದ ಪ್ರಚಾರವನ್ನು ಕೊಟ್ಟಿದ್ದೇವೆ ಅಷ್ಟೇ!!"
ಕಳೆದ ಆವೃತ್ತಿಯಲ್ಲಿಯೇ ಜಾರಿಗೆ ಬಂದಿದ್ದ ‘ಸ್ಟ್ರಾಟೆಜಿಕ್ ಟೈಂ ಔಟ್’ ಅತೀವ ಟೀಕೆಗೊಳಗಾದ ಐಪಿಎಲ್ ತಂತ್ರ. ಇದು ಐಪಿಎಲ್‌ನ ಸಂಚಾಲಕ ಲಲಿತ್ ಮೋದಿಯವರ ಮೆದುಳಿನ ಕೂಸು. ಕಳೆದ ಬಾರಿ ಹತ್ತನೇ ಓವರ್ ನಂತರ ತೆಗೆದುಕೊಳ್ಳುತ್ತಿದ್ದ ಕಡ್ಡಾಯ ಐದು ನಿಮಿಷಗಳ ಟೈಂ ಔಟ್ ನಿಯಮವನ್ನು ಈಗ ಬದಲಿಸಲಾಗಿದೆ.
ಆರನೇ ಓವರ್‌ನಿಂದ ಎಂಟನೇ ಓವರ್‌ನ ಕೊನೆವರೆಗೆ ಬ್ಯಾಟಿಂಗ್ ತಂಡ ಹಾಗೂ ೧೧ರಿಂದ ೧೬ನೇ ಓವರ್ ನಡುವೆ ಫೀಲ್ಡಿಂಗ್ ಪಡೆ ಟೈಂ ಔಟ್ ತೆಗೆದುಕೊಳ್ಳುವ ಅವಕಾಶ. ಬಾಕಿಯಾದಲ್ಲಿ ಎಂಟು ಮತ್ತು ಹದಿನಾರನೇ ಓವರ್ ಅಂತ್ಯಕ್ಕೆ ಕಡ್ಡಾಯವಾಗಿ ಅಂಪೈರ್‌ಗಳು ಎರಡೂವರೆ ನಿಮಿಷಗಳ ಟೈಂ ಔಟ್ ಘೋಷಿಸುತ್ತಾರೆ.
ಉಹ್ಞೂ, ಯಾವುದೇ ತಂಡ ಹಾರ್ದಿಕವಾಗಿ ಟೈಂ ಔಟ್‌ನ್ನು ಬಯಸುವುದನ್ನು ಕಾಣುತ್ತಿಲ್ಲ. ಇದು ಅಕ್ಷರಶಃ ಟಿವಿ ರೈಟ್ಸ್ ಕೊಂಡವರ ಹಿತಾಸಕ್ತಿ ಕಾಯುವ ಕಾಯಕ. ೧೦ ಸೆಕೆಂಡ್‌ಗಳ ಕಾಲಾವಧಿಗೆ ಸರಿಸುಮಾರು ಎರಡು ಲಕ್ಷದ ಸ್ಲಾಟ್ ಬೆಲೆ ಇರುವಾಗ ಬರೀ ಹತ್ತು ನಿಮಿಷದ ಟೈಂ ಔಟ್‌ನಿಂದಲೇ ಪಂದ್ಯವೊಂದರಲ್ಲಿ ಸೆಟ್‌ಮ್ಯಾಕ್ಸ್‌ಗೆ ಆದಾಯ ಕನಿಷ್ಟ ಒಂದೂಕಾಲು ಕೋಟಿ! ಈಗಂತೂ ಓವರ್‌ಗಳ ಮಧ್ಯೆಯೇ ಜಾಹೀರಾತು ತೂರಬಲ್ಲ ಚಾಣಾಕ್ಷತೆ ಮೆರೆಯುವ ಟಿವಿ ಮಾಧ್ಯಮದ ಗಳಿಕೆಯ ಸೂತ್ರಕ್ಕೆ ಲಲಿತ್ ಮೋದಿ ತಾಳ ಹಾಕಲೇಬೇಕಾದ ಒತ್ತಡವಿದೆ.
ಕೊನೆಮಾತು - ಐಪಿಎಲ್ ತಂಡಗಳ ಆಟಗಾರರು ಒಂದು ರೀತಿಯಲ್ಲಿ ಜಾಹೀರಾತು ಹೋರ್ಡಿಂಗ್‌ಗಳಂತೆ ಕಾಣುತ್ತಾರಲ್ಲವೇ? ನೀವೇ ನೋಡಿ, ಅವರ ಅಂಗಿಯ ತೋಳು, ಬೆನ್ನು, ಎದೆ ಭಾಗಗಳಲ್ಲಿ ವಿವಿಧ ಪ್ರಾಯೋಜಕರ ಸ್ಟಿಕ್ಕರ್‌ಗಳು. ಹೆಲ್ಮೆಟ್ ನೋಡಿದರೆ ಅಲ್ಲಿಯೂ ಅವೇ. ಪ್ಯಾಂಟ್ ನೋಡಿದರೆ ಅಲ್ಲೂ. ಬ್ಯಾಟ್ ಮುಖದಲ್ಲಂತೂ ಕೇಳುವುದೇ ಬೇಡ. ಅಂದರೆ ಆಟಗಾರರಿಗೆ ಅವರ ಒಳಚೆಡ್ಡಿ ಮಾತ್ರ ಸ್ವಂತ! ಈ ಮಾತನ್ನು ತುಸು ವಿಷಾಧದಿಂದಲೇ ಹೇಳಬೇಕಾಗಿದೆ.
ಹೇಳಲು ಮರೆತಿದ್ದು, ಐಪಿಎಲ್ ಮುಖ್ಯಸ್ಥ ಲಲಿತ್ ಇನ್ನಷ್ಟು ಜಾಹೀರಾತು ಪ್ರಚಾರ ಮಾರ್ಗಗಳನ್ನು ಹುಡುಕಲು ಖುದ್ದು ತಮ್ಮ ನೇತೃತ್ವದಲ್ಲಿ ಉಪಸಮಿತಿಯನ್ನು ರಚಿಸಿದ್ದಾರೆ ಎನ್ನುವುದು ಮಾತ್ರ ನಿಜಕ್ಕೂ ಸುಳ್ಳು ಸುದ್ದಿ!!

-ಮಾವೆಂಸ

ಭಾನುವಾರ, ಫೆಬ್ರವರಿ 21, 2010

ಹೆಸರಿಗೆ ‘ಅಡಿಕೆ ಪತ್ರಿಕೆ’ - ಓದೋಕೆ ಸಂಕೋಚ ಏಕೆ?


ಶ್ರೀಪಡ್ರೆ -----
ವಾರಕ್ಕೊಮ್ಮೆ........ 11

ಬರಹಗಾರರಿಗೆ ತಮ್ಮ ಲೇಖನ ಪ್ರಕಟಗೊಳ್ಳುವುದು ಖುಷಿ ವಿಚಾರ. ಜೊತೆಗೆ ಅಂಚೆಯಲ್ಲಿ ಗೌರವ ಪ್ರತಿ ಬಂದಾಗ ಸಿಕ್ಕುವ ಆನಂದ... ಆಹಾ! ದುರಂತ ನೋಡಿ, ಇಂದು ತರಂಗ ಬಳಗ ಹಾಗೂ ಕರ್ಮವೀರವನ್ನು ಹೊರತುಪಡಿಸಿದರೆ ಕನ್ನಡದ ಬಹುಪಾಲು ಪ್ರಮುಖ ಪತ್ರಿಕೆಗಳಾವುವೂ ಗೌರವ ಪ್ರತಿ ಕಳುಹಿಸುವ ಸಂಪ್ರದಾಯವನ್ನು ಇಟ್ಟುಕೊಂಡಿಲ್ಲ. ಆ ಮೂಲಕ ಅವು ತಮ್ಮ ಮುಖ್ಯ ಜವಾಬ್ದಾರಿಯನ್ನು ಕಳೆದುಕೊಂಡಿವೆ. ಸರಿಯೇ? ನೀವು ಹೇಳಬೇಕು.
ಆದರೆ ದೂರದ ಪುತ್ತೂರಿನಿಂದ ಪ್ರಕಟಗೊಳ್ಳುವ ‘ಅಡಿಕೆ ಪತ್ರಿಕೆ’ ಇವತ್ತಿಗೂ ಗೌರವ ಪ್ರತಿ ಕಳುಹಿಸುವ ಸಂಸ್ಕೃತಿಯನ್ನು ಬಿಟ್ಟಿಲ್ಲ. ಅಷ್ಟೇಕೆ, ಯಾರ ಕುರಿತು ಲೇಖನ ಪ್ರಕಟವಾಗಿದೆಯೋ ಆ ವ್ಯಕ್ತಿಗೂ ಒಂದು ಕಾಂಪ್ಲಮೆಂಟರಿ ಕಾಪಿ ಮುದ್ದಾಂ ಹೋಗುತ್ತದೆ! ಅಷ್ಟೇಕೆ, ವಿಜಯ ಕರ್ನಾಟಕವೂ ನಾಚಿಕೊಳ್ಳುವಂತೆ ಸಾಕಷ್ಟು ಗಟ್ಟಿ ಚೆಕ್ ಕೂಡ ಲೇಖಕರಿಗೆ ನಿಕ್ಕಿ!!

ಕೃಷಿ ನಿಯತಕಾಲಿಕಗಳಿಗೆ ಮಾದರಿ ಎನ್ನುವಂತಾದ್ದು ‘ಅಡಿಕೆ ಪತ್ರಿಕೆ’ ಮಾಸಿಕ. ನುಡಿಚಿತ್ರಕಾರ, ನೆಲ - ಜಲ ವಿಚಾರತಜ್ಞ ಶ್ರೀಪಡ್ರೆಯವರ ನೇತೃತ್ವದಲ್ಲಿ ರೂಪಗೊಂಡಿರುವ ‘ಅಪ’ಕ್ಕೆ ಈಗ ೨೨ರ ಪ್ರಾಯ. ಪ್ರಕಟಿಸುವ ಪ್ರತಿ ವಿಷಯವನ್ನು ಹಲವು ಕೋನಗಳಿಂದ ವಿಶ್ಲೇಷಿಸಿಯೇ ಪ್ರಕಟಿಸುವ ಇದರ ಧ್ಯೇಯ ರೈತಪರವಾದದ್ದು. ಇದ್ದಕ್ಕಿದ್ದಂತೆ ಲಾಭಕರ ಬೆಳೆ, ಭರ್ಜರಿ ಆದಾಯ ಎನ್ನುವಂತ ಸುಳ್ಳು ಸುಳ್ಳೇ ಲೇಖನಗಳು ಇದರಲ್ಲಿ ಪ್ರಕಟವಾಗುವುದಿಲ್ಲ. ಅನುಭವಿ ರೈತರ, ಕೃಷಿಲೋಕದ ಲೇಖಕರ ಬರಹಗಳು ಸುಲಭವಾಗಿ ಓದಿಸಿಕೊಂಡು ಹೋಗುತ್ತವೆ. ಹಾಗೆಯೇ ಎರೆಗೊಬ್ಬರ, ನೀರು ಇಂಗಿಸುವಿಕೆ, ಹಲಸು ಮುಂತಾದ ಬೆಳೆಗಳ ಮೌಲ್ಯವರ್ಧನೆ....... ಹೀಗೆ ಒಂದು ವಿಚಾರದಲ್ಲಿ ರೈತರಿಗೆ ಮನದಟ್ಟಾಗುವಂತೆ ಬರಹ ಆಂದೋಲನವನ್ನೇ ಹಮ್ಮಿಕೊಳ್ಳುವುದು ಅಡಿಕೆ ಪತ್ರಿಕೆಯ ಹೆಗ್ಗಳಿಕೆ. ಬಹುಷಃ ಕೃಷಿಕರ ಕೈಯಲ್ಲಿ ಮೊತ್ತಮೊದಲ ಬಾರಿಗೆ ಕತ್ತಿ, ಗುದ್ದಲಿಯ ಜಾಗದಲ್ಲಿ ಪೆನ್ನು ಹಿಡಿಸಿದ ಶ್ರೇಯಸ್ಸೂ ಅಪಕ್ಕೆ. ಶ್ರೀಪಡ್ರೆ ಹಿಂಸರಿದಿದ್ದ ಕೆಲಕಾಲ ಅಪ ಕಳೆಗುಂದಿತ್ತು. ಮತ್ತೆ ಈಗ ನಳನಳಿಸುತ್ತಿದೆ.
ಬಹುಷಃ ಇದಕ್ಕೆ ‘ಅಡಿಕೆ ಪತ್ರಿಕೆ’ ಎಂಬ ಶೀರ್ಷಿಕೆಯಿರುವುದೇ ಒಂದು ಸಮಸ್ಯೆಯಾಗಿರಲಿಕ್ಕೆ ಸಾಕು. ಅಡಿಕೆ ಬೆಳೆಯ ಹೊರತಾದ ಕೃಷಿಕರು ಇದು ತನಗಲ್ಲ ಎಂದುಕೊಂಡುಬಿಡುತ್ತಾರೆ. ಅಡಿಕೆ ಪತ್ರಿಕೆ ಹಾಗೇನೂ ಇಲ್ಲ. ಇದು ಎಲ್ಲ ಬೆಳೆಗಳ ಉಳುಮೆದಾರರಿಗೂ ಅನುಕೂಲಕರ. ಅದು ಮಾತ್ರವಲ್ಲ, ಕೃಷಿ ಜಗತ್ತಿನ ಮಾಹಿತಿ ನಮ್ಮಲ್ಲಿರಬೇಕು ಎಂದು ಬಯಸುವವರೆಲ್ಲ ತರಿಸಿಕೊಳ್ಳಲೇಬೇಕು. ಮೊದಲು ‘ಅರೆಕಾ ನ್ಯೂಸ್’ ಎಂಬ ಹೆಸರಿನಲ್ಲೂ ಸ್ವಲ್ಪ ಕಾಲ ಪ್ರಕಟಗೊಳ್ಳುತ್ತಿತ್ತು ಎಂದು ಓದಿದಂತೆ ನೆನಪು.
ಯಾವುದೇ ಮುಖ್ಯವಾಹಿನಿಯ ಪತ್ರಿಕೆ ಅಚ್ಚರಿಪಡುವ ಮಟ್ಟಿಗೆ ಅಪ ಅಂತರ್ಜಾಲವನ್ನು ಬಳಸಿಕೊಳ್ಳುತ್ತಿದೆ. ಇಂದು ಅಪದ ನೆಟ್ ಆವೃತ್ತಿ ಲಭ್ಯ. ಬೇಕಿದ್ದರೆ ನೀವೇ ಹುಡುಕಿಕೊಳ್ಳಿ. ಬೇಕೆಂದೇ ಆ ಲಿಂಕ್‌ನ್ನು ತಿಳಿಸುತ್ತಿಲ್ಲ. ಹಾಗೆಯೇ ಅಅದರ ಚಂದಾದರದ ಬಗ್ಗೆಯೂ ಉಸುರುತ್ತಿಲ್ಲ. ಆಸಕ್ತರಿಗೆ ಇಷ್ಟು ಮಾಹಿತಿ ಸಾಕು. ಹುಡುಕಿಕೊಳ್ಳುತ್ತಾರೆ, ಅಲ್ಲವೇ?
ಅಡಿಕೆ ಪತ್ರಿಕೆಯ ವಿಳಾಸ -
ಅಂಚೆ ಪಟ್ಟಿಗೆ ಸಂಖ್ಯೆ ೨೯,
ಭಟ್ ಬಿಲ್ಡಿಂಗ್,
ಏಳ್ಮುಡಿ, ಪುತ್ತೂರು
-೫೭೪೨೦೧

-ಮಾ.ವೆಂ.ಸ.ಪ್ರಸಾದ್
ಮಾವಿನಸರ
ಪೋಸ್ಟ್-ಎಡಜಿಗಳೇಮನೆ
ಸಾಗರ ತಾ. ಶಿವಮೊಗ್ಗ ಜಿ.
577401
ಫೋನ್-08183 236068, 296543
9886407592
ಇ ಮೇಲ್- mavemsa@gmail.com

ಮಂಗಳವಾರ, ಫೆಬ್ರವರಿ 16, 2010

ಥರ್ಡ್ ಅಂಪೈರ್‌ಗೆ ಕೊಕ್!


ಈಗಂತೂ ಅಂಕಣದಲ್ಲಿರುವ ಅಂಪೈರ್‌ಗಳು ಯಾವುದೇ ರನ್‌ಔಟ್, ಸ್ಟಂಪಿಂಗ್ ಸಂದರ್ಭದಲ್ಲಿ ಗುಲಗುಂಜಿ ತೂಕದಲ್ಲಿಯೂ ಯೋಚಿಸುವುದಿಲ್ಲ. ಫೀಲ್ಡರ್‌ಗಳು ಮನವಿ ಸಲ್ಲಿಸುತ್ತಿದ್ದಂತೆ ಅವರ ಕೆಲಸವೆಂದರೆ, ತಮ್ಮ ಎರಡೂ ಕೈ ಬಳಸಿ ಟಿವಿ ಅಂಪೈರ್‌ಗೆ ‘ದಾರಿ ತೋರಿಸಿ’ ಎಂದು ಸಂಜ್ಞೆ ಮಾಡಿ ಸೂಚಿಸುವುದಷ್ಟೇ. ಅಂತವರಿಗೆಲ್ಲ ಶಾಕಿಂಗ್ ಸುದ್ದಿ ಬಂದಿದೆ. ಐಸಿಸಿ ಇನ್ನು ಮುಂದೆ ಮೂರನೇ ಅಂಪೈರ್ ವ್ಯವಸ್ಥೆಯನ್ನೇ ಹಿಂದಕ್ಕೆ ಪಡೆಯುತ್ತದೆ!
ಐಸಿಸಿಯ ಜನರಲ್ ಮ್ಯಾನೇಜರ್ ಡೇವ್ ರಿಚರ್ಡ್‌ಸನ್ ಈ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಬಹುಷಃ ಐಸಿಸಿಯ ಮುಂದಿನ ಕ್ರಿಕೆಟ್ ಕಮಿಟಿ ಸಭೆ ಮೇ ೧೦ರಂದು ಜರುಗಲಿದೆ. ಆ ದಿನ ಥರ್ಡ್ ಅಂಪೈರ್ ವ್ಯವಸ್ಥೆ ಉಳಿವಿನ ಬಗ್ಗೆ ವಿಸ್ತೃತ ಚರ್ಚೆ ನಡೆಯಬಹುದು. ಈಗಿನ ವಾತಾವರಣವನ್ನು ನೋಡಿದರೆ ಬರುವ ದಿನಗಳಲ್ಲಿ ರೆಫ್ರಿ ಪಕ್ಕದಲ್ಲಿ ಕುಳಿತುಕೊಳ್ಳಲು ಮೂರನೇ ಅಂಪೈರ್‌ಗೆ ಸ್ಥಳವಿಲ್ಲ!
ಇನ್ನಷ್ಟು ಗೊಂದಲಗಳಾಗುವ ಮುನ್ನ ವಾಸ್ತವವನ್ನು ಹೇಳುವುದೊಳ್ಳೆಯದು. ನಿಜ, ಭವಿಷ್ಯದಲ್ಲಿ ಥರ್ಡ್ ಅಂಪೈರ್ ಇರಲಿಕ್ಕಿಲ್ಲ. ಆದರೆ ರೆಫ್ರಿ ಪಕ್ಕದಲ್ಲಿ ಒಬ್ಬ ಅಧಿಕೃತ ಕ್ರಿಕೆಟ್ ತಜ್ಞನಂತೂ ಕುಳಿತಿರಲೇಬೇಕು. ಅವರು ಕ್ರಿಕೆಟ್ ಸ್ಲೋ ಮೋಷನ್, ಹ್ವಾಕ್ ಐಗಳಲ್ಲದೆ ಇನ್ನಷ್ಟು ದುಬಾರಿ ತಂತ್ರಜ್ಞಾನದ ಉಪಕರಣಗಳನ್ನು ಬಳಸಿ ತೆಗೆದ ಚಿತ್ರಗಳನ್ನು ನೋಡಿ ಆಟಗಾರರ ಔಟ್-ನಾಟೌಟ್ ತೀರ್ಮಾನವೀಯುತ್ತಾರೆ. ಇದೇ ಡಿಆರ್‌ಎಸ್.
ಡಿಸಿಷನ್ ರಿವ್ಯೂ ಸಿಸ್ಟಮ್‌ನ ಹೃಸ್ವ ರೂಪ ಈ ಡಿಆರ್‌ಎಸ್. ಅಂದರೆ ಪಂದ್ಯವಾಡುವ ಎರಡು ತಂಡಕ್ಕೆ ಇನ್ನಿಂಗ್ಸ್ ಒಂದರಲ್ಲಿ ತಲಾ ಮೂರು ಬಾರಿ ಅಂಕಣದ ಅಂಪೈರ್ ತೀರ್ಮಾನದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿರುತ್ತದೆ. ಒಂದೊಮ್ಮೆ ಮೇಲ್ಮನವಿಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕರೆ ಈ ಮೂರೂ ಚಾಲೆಂಜ್ ಅವಕಾಶ ಊರ್ಜಿತವಾಗುತ್ತದೆ. ಅಂಪೈರ್‌ಗಳ ತೀರ್ಮಾನವೇ ಸರಿ ಎಂದಾದರೆ ಚಾಲೆಂಜ್‌ಗಳಲ್ಲಿ ಒಂದು ನಷ್ಟ. ಇತ್ತೀಚಿನ ದಿನಗಳಲ್ಲಿ ಗ್ರಾನ್‌ಸ್ಲಾಂ ಟೆನಿಸ್‌ನ್ನು ನೋಡುವವರಿಗೆಲ್ಲ ಈ ‘ಪ್ಲೇಯರ್ ಚಾಲೆಂಜ್’ ವ್ಯವಸ್ಥೆ ಅರ್ಥವಾಗುತ್ತದೆ.
ಮೊನ್ನೆ ಮೊನ್ನೆ ಮುಕ್ತಾಯ ಕಂಡ ಇಂಗ್ಲೆಂಡ್ - ದಕ್ಷಿಣ ಆಫ್ರಿಕಾದ ಟೆಸ್ಟ್ ಸರಣಿಯಲ್ಲಿ ಈ ಡಿಆರ್‌ಎಸ್ ಸೌಲಭ್ಯ ಇತ್ತು. ಎರಡನೇ ಟೆಸ್ಟ್‌ನ ಅಂತಿಮ ಘಟ್ಟದಲ್ಲಿ ಇಂಗ್ಲೆಂಡ್‌ನ ಕೊನೆಯ ಎರಡು ವಿಕೆಟ್ ಪಡೆಯಲು ಸರ್ಕಸ್ ನಡೆಸಿದ್ದ ದ.ಆಫ್ರಿಕಾ ಈ ಡಿಆರ್‌ಎಸ್‌ನ್ನು ಹಲವು ಬಾರಿ ಬಳಸಿಕೊಂಡದ್ದು ಕ್ಲೈಮ್ಯಾಕ್ಸ್‌ಗೆ ರಂಗುರಂಗಿನ ಆಯಾಮ ನೀಡಿತ್ತು. ಹಿಂದೊಮ್ಮೆ ಅನಿಲ್ ಕುಂಬ್ಳೆ ನಾಯಕತ್ವದ ಭಾರತ ಶ್ರೀಲಂಕಾಕ್ಕೆ ಟೆಸ್ಟ್ ಪ್ರವಾಸಗೈದಾಗ ಈ ‘ಮೇಲ್ಮನವಿ ವ್ಯವಸ್ಥೆ’ ಇತ್ತು. ಅದರ ಲಾಭ ಮಾತ್ರ ಶ್ರೀಲಂಕಾಕ್ಕಾಗಿತ್ತು!
ಪ್ರಸ್ತುತ ಮೈದಾನದ ಅಂಪೈರ್‌ಗಳ ತೀರ್ಮಾನ ಶೇ.೯೨.೨ರಷ್ಟು ಸರಿಯಾಗಿರುತ್ತದಂತೆ. ಬರಿಗಣ್ಣಿನ, ವಾಸ್ತವ ವೇಗದಲ್ಲಿ ದೃಶ್ಯ ನೋಡುವ ಮಾನವ ತೀರ್ಮಾನಗಳ ಈ ಪ್ರಮಾಣ ಭೇಷ್ ಎನ್ನುವಂತದ್ದೇ. ಆದರೆ ಡಿಆರ್‌ಎಸ್ ಬಳಸಿಕೊಂಡದ್ದೇ ಆದರೆ ಈ ಸರಿ ಪ್ರಮಾಣ ಶೇ.೯೭ಕ್ಕೆ ಏರಬಲ್ಲದು. ಇಂತಹ ಸನ್ನಿವೇಶದಲ್ಲಿ, ಆಟಗಾರರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿರುವಾಗ ಮತ್ತು ಥರ್ಡ್ ಅಂಪೈರ್ ವ್ಯವಸ್ಥೆ ಡಿಆರ್‌ಎಸ್ ಒಂದೇ ಉದ್ದೇಶದ ಎರಡು ಮಾದರಿ ಎಂದು ಐಸಿಸಿಗೆ ಅನ್ನಿಸಿದೆ. ಹಾಗಾಗಿ ಡಿಆರ್‌ಎಸ್‌ನ್ನು ಉಳಿಸಿಕೊಂಡು ಟಿವಿ ಅಂಪೈರ್‌ಗೆ ತಿಲಾಂಜಲಿ ನೀಡಲು ಯೋಚಿಸಲಾಗುತ್ತಿದೆ.
ಇವತ್ತು ಡಿಆರ್‌ಎಸ್ ಪ್ರತಿ ಸರಣಿಯ ಷರತ್ತಲ್ಲ. ಅದು ಒಂದು ಸರಣಿಯಲ್ಲಿ ಅಳವಡಿಸಿಕೊಳ್ಳಲು ಬೇಕಾದ ಪರವಾನಗಿ ಪಡೆದಿದೆ. ಐಸಿಸಿ ಮಾನ್ಯತೆ ಇದೆ. ಕ್ರಿಕೆಟ್ ಭಾಷೆಯಲ್ಲಿ ಹೇಳುವುದಾದರೆ, ‘ಪಾರ್ಟ್ ಆಫ್ ಸ್ಟಾಂಡರ್ಡ್ ಟೆಸ್ಟ್ ಪ್ಲೇಯಿಂಗ್ ಕಂಡೀಷನ್’ನ ಒಂದು ಭಾಗ. ಆದರೆ ಸರಣಿಯಲ್ಲಿ ಪಾಲ್ಗೊಳ್ಳುವ ಎರಡೂ ದೇಶಗಳಿಗೆ ಇಷ್ಟವಿಲ್ಲದಿದ್ದರೆ ಇದನ್ನು ಅಳವಡಿಸಿಕೊಳ್ಳದೇ ಬಿಡಬಹುದು. ಭಾರತ-ಶ್ರೀಲಂಕಾ, ಭಾರತ-ಬಾಂಗ್ಲಾ, ಭಾರತ-ದ.ಆಫ್ರಿಕಾ... ಹೀಗೆ ಇತ್ತೀಚಿನ ಹಲವು ಸರಣಿಗಳಲ್ಲಿ ಈ ಡಿಆರ್‌ಎಸ್ ಅಳವಡಿಸಿರಲಿಲ್ಲ. ಥರ್ಡ್ ಅಂಪೈರ್ ವ್ಯವಸ್ಥೆಯನ್ನು ಕಡಿತಗೊಳಿಸಿದರೆ ಮಾತ್ರ ಡಿಆರ್‌ಎಸ್‌ನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಆಗದು ಕಡ್ಡಾಯ.
ಒಪ್ಪಿಕೊಳ್ಳುವ ಮಾತು ಪಕ್ಕದಲ್ಲಿಡಿ. ಅಳವಡಿಕೆಯೇ ಅಷ್ಟು ಸುಲಭದ ಮಾತಲ್ಲ. ಸೂಪರ್ ಸ್ಲೋ ಮೋ, ಬ್ಲಾಕ್ -ವೈಟ್ ಶಾಡೋ ಮಾದರಿಯ ಎಕ್ಸ್‌ರೇ ಇಕ್ವಿಪ್‌ಮೆಂಟ್‌ಗಳೆಲ್ಲ ಸೇರಿದಂತೆ ಒಂದು ಸರಣಿಗೆ ಬರೋಬ್ಬರಿ ೭೦ರಿಂದ ೮೦ ಸಾವಿರ ಡಾಲರ್‌ಗಳು ಡಿಆರ್‌ಎಸ್‌ಗೆ ಅಗತ್ಯ. ಹಾಗಾಗಿಯೇ ಮೊತ್ತ ಮೊದಲಾಗಿ ಕೇಳಿ ಬರುವ ಪ್ರಶ್ನೆ, ಕೇವಲ ನಾಲ್ಕರಿಂದ ಐದು ಶೇಕಡಾ ಹೆಚ್ಚಿನ ಸರಿ ತೀರ್ಪಿಗೆ ಈ ಪರಿಯ ಖರ್ಚು ಅಗತ್ಯವೇ?
ಲೆಕ್ಕಾಚಾರ ಇಷ್ಟಕ್ಕೆ ನಿಲ್ಲದು. ಐಸಿಸಿಯೇನೋ ಈ ಮೊತ್ತದ ಉಪಕರಣಗಳನ್ನು ನೇರಪ್ರಸಾರದ ಹಕ್ಕು ಪಡೆದ ಟಿವಿ ಚಾನೆಲ್ ಜೊತೆ ಹಂಚಿಕೊಳ್ಳಲು ಹೊಂಚುಹಾಕಿದೆ. ಪರಿಸ್ಥಿತಿ ಹಾಗಿಲ್ಲ, ಭಾರತ-ಶ್ರೀಲಂಕಾದಂತ ತಂಡಗಳ ಹಣಾಹಣಿ ಟೆಸ್ಟ್ ಸರಣಿಯಲ್ಲಿಯೇ ಈ ದುಬಾರಿ ಬಂಡವಾಳ ತೊಡಗಿಸಿರುವ ನಿಂಬಸ್ ಇಷ್ಟಪಡಲಿಲ್ಲ. ಇನ್ನು ಬಾಂಗ್ಲಾ-ಜಿಂಬಾಬ್ವೆ, ವೆಸ್ಟ್‌ಇಂಡೀಸ್ ತಂಡಗಳ ಟೆಸ್ಟ್ ಸರಣಿಯಲ್ಲಿ ಬಳಸಲು ಮತ್ತು ಖರ್ಚು ಹಂಚಿಕೊಳ್ಳಲು ಟಿವಿ ಚಾನೆಲ್ ಒಪ್ಪುತ್ತದೆಯೇ?
ಹಣಕಾಸಿನ ಹೊರತಾಗಿ ಇನ್ನೊಂದು ತತ್ವದ ವಿಚಾರವೂ ಇದರಲ್ಲಿದೆ. ಡಿಆರ್‌ಎಸ್ ಜಾರಿಯಲ್ಲಿರುವಾಗ ಒಂದು ತಂಡ ಬಲು ಬೇಗನೆ ತನ್ನ ಮೂರೂ ಚಾಲೆಂಜ್ ಕಳೆದುಕೊಂಡಿತು ಎಂದುಕೊಳ್ಳೋಣ. ಆ ನಂತರ ಅವರು ತಪ್ಪು ತೀರ್ಮಾನಗಳಾವುವನ್ನೂ ಪ್ರಶ್ನಿಸುವ ಅಧಿಕಾರವನ್ನೇ ಕಳೆದುಕೊಂಡುಬಿಡುತ್ತಾರೆ. ಥರ್ಡ್ ಅಂಪೈರ್ ಪದ್ಧತಿಯಲ್ಲಿ ಈ ಅಪಾಯವಿರಲಿಲ್ಲ. ಸರಿ ತೀರ್ಪುಗಳೇ ಐಸಿಸಿ ಆದ್ಯತೆಯಾಗಿದ್ದರೆ ಮೂರು ಚಾಲೆಂಜ್ ಎಂಬ ಕಡಿವಾಣ ಅಪಕ್ವವೆನಿಸುತ್ತದೆ.
ಇನ್ನೊಂದು ಅಸಲು ಸಮಸ್ಯೆಯೇ ಇದೆ. ಕ್ರಿಕೆಟ್ ಟೆನಿಸ್‌ನ ಹಾಗಲ್ಲ, ಅಲ್ಲಾದರೆ ಬರೀ ಲೈನ್‌ಕಾಲ್‌ಗಳ ವಿರುದ್ಧ ತಂತ್ರಜ್ಞಾನದ ಬೆಳಕು. ಹ್ವಾಕ್ ಐ ಅದಕ್ಕೆ ಸಾಕೇ ಸಾಕು. ಕ್ರಿಕೆಟ್ ಕಥೆ ಬೇರೆ, ಇದು ಸಂಕೀರ್ಣ ಆಟ, ಪಿಚ್‌ನ ಪುಟಿತ, ಗಾಳಿಯ ಆಯಾಮ, ಚೆಂಡಿನ ವೇಗ ಮುಂತಾದ ಅಂಶಗಳು ಒಂದು ಎಲ್‌ಬಿಡಬ್ಲ್ಯು ಮನವಿಯಲ್ಲಿರುತ್ತದೆ. ಅಲ್ಲದೆ, ಎಷ್ಟೋ ರನ್‌ಔಟ್, ಸ್ಟಂಪಿಂಗ್ ಪ್ರಕರಣಗಳಲ್ಲಿ ಚಿತ್ರದ ಫ್ರೇಮ್ ಸಾಕಾಗುವುದಿಲ್ಲ. ಅನಿಶ್ಚಿತತೆ ಮುಂದುವರಿಯುವಂತಾಗುತ್ತದೆ. ಆಗ ಬೆನಿಫಿಟ್ ಆಫ್ ಡೌಟ್ ಎಂಬ ತರ್ಕ ಬರುತ್ತದೆ. ಇಂತಿರುವಾಗ ಡಿಆರ್‌ಎಸ್‌ನಲ್ಲಿ ಅನುಮಾನದ ಲಾಭ ಕೊಡುವುದರಿಂದ ಮಗದೊಂದು ತಂಡಕ್ಕೆ ಚಾಲೆಂಜ್ ಅವಕಾಶದಲ್ಲೂ ಹೊಡೆತ ಕೊಟ್ಟಂತಾಗುವುದು ನ್ಯಾಯವೇ?
ಈ ಗೊಂದಲಗಳ ಬಗ್ಗೆ ಚರ್ಚೆ ಆರಂಭವಾಗಿದೆ. ಒಂದಂತೂ ಸತ್ಯ, ಫೀಲ್ಡ್ ಅಂಪೈರ್‌ಗಳು ಇನ್ನು ತೀರ್ಪು ಕೊಡಲೇಬೇಕು!!
-ಮಾ.ವೆಂ.ಸ

ಮಂಗಳವಾರ, ಫೆಬ್ರವರಿ 2, 2010

ಕಚಗುಳಿಯಿಟ್ಟರೆ ನಗದವರಿದ್ದಾರೆಯೇ?

ವಾರಕ್ಕೊಮ್ಮೆ........ 10


ಈ ವಾರ ಈ ಅಂಕಣದಲ್ಲಿ ಪತ್ರಿಕೆಯೊಂದನ್ನು ಪರಿಚಯಿಸುವ ಮುನ್ನ ಗಂಭೀರವೋ ಲಘುವೋ ನನಗೆ ಅರ್ಥೈಸಿಕೊಳ್ಳಲಾಗದ ಒಂದು ವಿಚಾರವನ್ನು ನಿಮ್ಮೊಂದಿಗೆ ಚರ್ಚಿಸಬೇಕಿದೆ.
ನನಗೆ ನೆನಪಿರುವಂತೆ, ಹಿಂದೆಲ್ಲ ದೈನಿಕಗಳಲ್ಲಿ ಶುಕ್ರವಾರ ಸಿನೆಮಾ ಪುರವಣಿ ಪ್ರತ್ಯೇಕವಾಗಿರಲಿಲ್ಲ. ಬೇರೆ ದಿನ ಕೇವಲ ಎಂಟು ಪುಟ ಹೊಂದಿರುತ್ತಿದ್ದ ಪ್ರಜಾವಾಣಿಯಂತವು ಆ ದಿನ ಮಾತ್ರ 10 ಪುಟ ಹೊಂದಿರುತ್ತಿತ್ತು. ಅದರಲ್ಲೂ ಬಹುಷಃ ಒಂದು ಪುಟ ಮಾತ್ರ ಸಿನೆಮಾ ಸುದ್ದಿ. ಹೀಗೆ ಹೆಚ್ಚು ಪುಟ ಕೊಡುತ್ತಿದ್ದ ಭಾನುವಾರ ಹಾಗೂ ಶುಕ್ರವಾರ ಪತ್ರಿಕೆಯ ಬೆಲೆಯಲ್ಲಿ ಕೆಲ ಪೈಸೆ ಹೆಚ್ಚು. ಇತ್ತೀಚಿನ ದಿನಗಳಲ್ಲಿ ದೈನಿಕ ಪತ್ರಿಕೋದ್ಯಮ ಪುಟ ಸಂಖ್ಯೆಯ ಮೇಲೆ ನಿಂತಿಲ್ಲ. ಬಣ್ಣದ ಮುದ್ರಣ ಸರ್ವೇ ಸಾಮಾನ್ಯ. ಆದರೆ ದೈನಿಕಗಳು ಇವತ್ತಿಗೂ ಈ ಎರಡು ದಿನ ಹೆಚ್ಚು ಬೆಲೆ ನಿಗದಿ ಪಡಿಸುವ ಹಳೆಯ ಸಂಪ್ರದಾಯವನ್ನು ಮಾತ್ರ ಮುಂದುವರೆಸಿದ್ದು ಸೂಕ್ತವೇ?
ದಿ ಹಿಂದೂ ಪತ್ರಿಕೆ ಭಾನುವಾರ ನಿಜಕ್ಕೂ ಅರ್ಥವತ್ತಾದ ಸ್ಪೆಷಲ್ ಪುಟಗಳನ್ನು ಕೊಡುವುದರಿಂದ ಹೆಚ್ಚಿನ ಬೆಲೆಯನ್ನು ಸಮರ್ಥಿಸಿಕೊಳ್ಳಬಹುದೇನೋ. ಕನ್ನಡದ ಪತ್ರಿಕೆಗಳು ಸಾಪ್ತಾಹಿಕ ಪುರವಣಿಯಲ್ಲಿ ಕೊಡುತ್ತಿದ್ದ ಎಂಟು ಪುಟಗಳನ್ನು ಆರಕ್ಕೆ ಇಳಿಸಿದ್ದೊಂದೇ ಸಾಧನೆ! ನನ್ನ ವಾದ ಇಷ್ಟೇ, ಹೆಚ್ಚಿನ ಏನೂ ಇಲ್ಲದ ಈ ಎರಡು ದಿನಗಳ ಸಂಚಿಕೆಗಳ ಬೆಲೆಯೂ ಉಳಿದ ಐದು ದಿನಗಳಷ್ಟೇ ಇರಬೇಕು. ತಿಂಗಳ ವೆಚ್ಚ ಲೆಕ್ಕ ಹಾಕುವುದೂ ಆಗ ಸುಲಭ! ನೀವೇನಂತೀರಿ?


ಕನ್ನಡದಲ್ಲಿ ಹಾಸ್ಯಕ್ಕೆ ಮೀಸಲಾದ ಪತ್ರಿಕೆಗಳು ಕಡಿಮೆ. ಹೆಸರಿಸಹೊರಟರೆ ಬಾಗಿಲು ಮುಚ್ಚಿದ ‘ಕೊರವಂಜಿ’ಯಂತ ಪತ್ರಿಕೆಗಳನ್ನೇ ಹೇಳಬೇಕಾಗುವುದು ದುರಂತ. ಆದರೂ ಇವತ್ತಿಗೂ ‘ವಿನೋದ’ ಚಾಲ್ತಿಯಲ್ಲಿದೆ. ಹಾಗೆಯೇ ಕಾರ್ಟೂನ್, ಜೋಕ್ಸ್, ನಗೆಬರಹಗಳಿಗೆ ಮೀಸಲಿರುವ ಪತ್ರಿಕೆಯೊಂದು ಪುಸ್ತಕದ ಅಂಗಡಿಗಳಲ್ಲಿ ಲಭ್ಯ, ಅದುವೇ ‘ಕಚಗುಳಿ’. ಮನರಂಜನೆಯೊಂದೇ ಅದರ ಧ್ಯೇಯ!
ಶುಷ್ಕವಾಗಿ ಕೆಲವು ಮಾಹಿತಿಗಳನ್ನು ಒದರಿಬಿಡುತ್ತೇನೆ. 60 ಪುಟಗಳ ಈ ಮಾಸಪತ್ರಿಕೆಗೆ ತುಸು ದುಬಾರಿ ಬೆಲೆ, 20 ರೂಪಾಯಿ. ಈಗಾಗಲೇ 85 ಸಂಚಿಕೆಗಳನ್ನು ಈ ಪತ್ರಿಕೆ ಪೂರೈಸಿದೆ. ಅರ್ಥಾತ್ ಏಳು ವರ್ಷಗಳು!
ಕೆಲವರಿಗಾದರೂ ಬೆಂಗಳೂರಿನ ಅನುರಾಗ್ ಕ್ರಿಯೇಷನ್ಸ್ ಗೊತ್ತಿರಬೇಕು. ಅದು ಸ್ಪರ್ಧಾ ಜಗತ್ತು, ಆರೋಗ್ಯ ಮತ್ತು ಸೈಕಾಲಜಿ & ಪರ್ಸನಾಲಿಟಿ ಡೆವಲೆಪ್‌ಮೆಂಟ್ ಎಂಬ ದೀರ್ಘ ಹೆಸರಿನ ಪತ್ರಿಕೆಯೂ ಸೇರಿದಂತೆ ಒಂದು ಡಜನ್ ನಿಯತಕಾಲಿಕಗಳನ್ನು ಪ್ರಕಟಿಸುತ್ತಿದೆ. ಆ ಪ್ರಕಾಶನದ ಮಾಲಿಕ ಆರ್.ಬಾಲಕೃಷ್ಣರೇ ಈ ‘ಕಚಗುಳಿ’ಯ ಸಂಪಾದಕರು.
ನಿಜ, ಇಲ್ಲಿನ ಎಲ್ಲ ಜೋಕ್ಸ್, ಕಾರ್ಟೂನ್‌ಗಳು ಗುಣಮಟ್ಟವನ್ನು ನೀಡುವುದಿಲ್ಲ ಎನ್ನಿಸಬಹುದು. ಆದರೆ ನಗುವವರ ಮನಸ್ಥಿತಿಯ ಮೇಲೆ ಅವು ಮಾಡುವ ಪರಿಣಾಮನಿರ್ಧಾರಿತವಾಗಿರುವುದರಿಂದ ಇದಮಿತ್ಥಂ ಹೇಳುವುದು ಕಷ್ಟ. ನೀವೇ ನೋಡಿ, ಟೆನಿಸ್ ಕೃಷ್ಣನ ಹಾಸ್ಯಕ್ಕೆ ನೀವು ನಗಬಹುದು, ಮತ್ತೊಬ್ಬಾತ, ಛೆ, ಅಸಹ್ಯ ಎಂದುಬಿಡಬಹುದು. ಬಸ್‌ನಲ್ಲಿ, ಸುಮ್ಮನೆ ರಿಫ್ರೆಶ್‌ಗೆ ಎಂದು ಕುಳಿತುಕೊಳ್ಳುವವರಿಗೆ ಇದು ಆಪ್ತ! ಒಮ್ಮೆ ಓದಿ ನೋಡಿ....
ವಿಳಾಸ : ಕಚಗುಳಿ ಮಾಸಪತ್ರಿಕೆ
737, ಡಾ.ರಾಜ್‌ಕುಮಾರ್ ರಸ್ತೆ,
ಧಮಧಸ್ಥಳ ಶ್ರೀ ಮಂಜುನಾಥ ಕಲಾಭವನದ ಎದುರು, 6ನೇ ಬ್ಲಾಕ್, ರಾಜಾಜಿ ನಗರ, ಬೆಂಗಳೂರು - 560010
ಫೋನ್ - 080-23401654, 23203282

ಸೋಮವಾರ, ಜನವರಿ 25, 2010

ಹರಾಜಾಯಿತೇ ಪಾಕ್ ಮಾನ?

ನಾಳೆ ಗಣರಾಜ್ಯೋತ್ಸವ. ಅತ್ತ ಪಾಕ್ ಬೆಂಬಲಿತ ಭಯೋತ್ಪಾದಕರು ವಿಧ್ವಂಸಕ ಕೃತ್ಯ ನಡೆಸಲು ಸನ್ನದ್ಧರಾಗುತ್ತಿರುವ ಸುದ್ದಿ ಕೇಳಿಬರುತ್ತಿದೆ. ಈ ಮಧ್ಯೆ ಮಾಜಿ ಪಾಕ್ ಆಟಗಾರರು ಎಳಸು ಮಕ್ಕಳಂತೆ ಹತ್ತೊಂಬತ್ತರೊಳಗಿನ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ತಮ್ಮ ತಂಡ ಸೋತುದಕ್ಕೆ ಸೇಡು ತೀರಿಸಿಕೊಂಡ ಖುಷಿಯಲ್ಲಿದ್ದಾರೆ. ಹಾಗಾದರೆ ನಿಜ ಎಲ್ಲಿದೆ? ಅಸಲಿ ಭಾರತೀಯನ ಅನಿಸಿಕೆಯೇನು? ಹಾಗೊಂದು ನೋಟವನ್ನು ಹರಿಸಿದ್ದೇನೆ. ಇದು ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ... ಓದಿ ನೀವು ಪ್ರತಿಕ್ರಿಯಿಸಲೇಬೇಕು....................................

ಐಪಿಎಲ್ ಹಂಗಾಮ

ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೂರನೇ ಆವೃತ್ತಿಗೆ ರಂಗ ಸಜ್ಜಾಗಿದೆ. ಈ ವರ್ಷ ಕೂಟ ಭಾರತದ ನೆಲದಲ್ಲೇ ನಡೆಯುವುದು ನಿಕ್ಕಿ. ಹೊಸ ಆಟಗಾರರನ್ನು ತಂಡದೊಳಗೆ ಸೇರಿಸಿಕೊಳ್ಳಲು ಮೊನ್ನೆ ೧೯ಕ್ಕೆ ಹರಾಜು ಪ್ರಕ್ರಿಯೆ ನಡೆಯಲಿಕ್ಕಿತ್ತು. ಹರಾಜಿಗೆ ೬೬ ಆಟಗಾರರು ಲಭ್ಯವಿದ್ದರು. ಮುಖ್ಯವಾಗಿ, ಶಾಹೀದ್ ಅಫ್ರಿಧಿ, ಮಿಸ್ಬಾ ಉಲ್ ಹಕ್, ಉಮರ್‌ಗುಲ್, ರಾಣಾ ನವೇದ್, ಅಬ್ದುಲ್ ರಜಾಕ್, ಕಮ್ರನ್ ಅಕ್ಮಲ್‌ರಂತ ಒಟ್ಟು ಜನಪ್ರಿಯ ೧೧ ಪಾಕಿಸ್ತಾನದ ಆಟಗಾರರೂ ಹರಾಜು ಪಟ್ಟಿಯಲ್ಲಿದ್ದರು. ಮಾಧ್ಯಮಗಳಲ್ಲಿ ಅಫ್ರಿಧಿ ದುಬಾರಿ ಬೆಲೆಗೆ ಮಾರಾಟವಾಗಬಹುದು ಎಂದು ತರ್ಕಗಳು ಪ್ರಕಟವಾಗಿದ್ದವು. ಬಹುಷಃ ಇಂತದೊಂದು ಸುದ್ದಿಯನ್ನು ಐಪಿಎಲ್ ಮೂಲಗಳೇ ಗಾಳಿಗೆ ಬಿಟ್ಟಿರಲಿಕ್ಕೂ ಸಾಕು.

ಆದರೆ ಆದದ್ದೇನು?

ಹರಾಜು ಪ್ರಕ್ರಿಯೆಯಲ್ಲಿ ಮೊತ್ತಮೊದಲು ಕೂಗಿದ್ದು ಶಾಹೀದ್ ಅಫ್ರಿಧಿಯ ಹೆಸರನ್ನು. ಆಗ ನಾಟಕೀಯ ಪ್ರಸಂಗವೊಂದು ಜರುಗಿಹೋಯಿತು. ಯಾವೊಬ್ಬ ಐಪಿಎಲ್ ತಂಡದ ಮಾಲಿಕನೂ ಕೊಳ್ಳುವ ಕನಿಷ್ಟ ಆಸಕ್ತಿಯನ್ನು ತೋರಲಿಲ್ಲ. ಬಿಡ್ ಮಾಡಲೇ ಮುಂದಾಗಲಿಲ್ಲ. ಅಫ್ರಿಧಿ ಹರಾಜಾಗಲಿಲ್ಲ! ಇದು ಪಾಕ್‌ನ ಉಳಿದ ಹತ್ತು ಆಟಗಾರರ ವಿಷಯದಲ್ಲೂ ಪುನರಾವರ್ತನೆಯಾಯಿತು. ಅಕ್ಷರಶಃ ಐಪಿಎಲ್‌ನ ಬಿಡ್ ಪ್ರಸಂಗದಲ್ಲಿ ಹರಾಜಾದದ್ದು ಪಾಕ್ ಮಾನ!
ಇಂದು ಸ್ಪಷ್ಟೀಕರಣಗಳ ಭರಾಟೆ ನಡೆದಿದೆ. ಐಪಿಎಲ್‌ನ ಸಂಯೋಜಕ ಲಲಿತ್ ಮೋದಿ ಅಕ್ಕಪಕ್ಕದಲ್ಲಿ ಬಾಲಿವುಡ್‌ನ ‘ಮಾಜಿ’ ಸುಂದರಿಯರನ್ನು ಕೂರಿಸಿಕೊಂಡು ಪಾಕ್ ಆಟಗಾರರ ವಿರುದ್ಧ ತಾವು ಷಡ್ಯಂತ್ರ ನಡೆಸಿರುವುದನ್ನು ಅಲ್ಲಗಳೆಯುತ್ತಾರೆ. ತಂಡಗಳಿಗೆ ಒಟ್ಟಾರೆ ೧೨ ಆಟಗಾರರನ್ನು ಆಯ್ದುಕೊಳ್ಳಲಷ್ಟೇ ಸಾಧ್ಯವಿತ್ತು. ಸ್ಪರ್ಧೆಯಲ್ಲಿದ್ದವರಲ್ಲಿ ೪೪ ಜನರಿಗೆ ನಿರಾಶೆ ಕಟ್ಟಿಟ್ಟ ಬುತ್ತಿಯಾಗಿತ್ತು. ಆದರೆ ತಂಡಗಳು ಆಯ್ದದ್ದು ೧೧ ಆಟಗಾರರನ್ನಷ್ಟೇ. ಪಾಕ್ ಆಟಗಾರರನ್ನೆಲ್ಲ ತಂಡಗಳು ಬಿಟ್ಟದ್ದು ಕಾಕತಾಳೀಯ! ಪ್ರೀತಿ ಜಿಂಟಾ, ಶಿಲ್ಪಾ ಶೆಟ್ಟಿ ಖಡಕ್ಕಾಗಿ ವ್ಯವಹಾರ ಮಾತನಾಡುತ್ತಾರೆ, ‘ಕೊಳ್ಳುವುದು ನಮ್ಮ ಹಕ್ಕು, ಬಿಡುವುದೂ ಕೂಡ!'

ಆದರೆ ಆದದ್ದೇನು?

ಒಂದಂತೂ ಸ್ಪಷ್ಟ. ಪಾಕ್ ಆಟಗಾರರನ್ನು ಯಾವ ಕಾರಣಕ್ಕೂ ಬಿಡ್ ಕೂಗಬಾರದೆಂದು ಎಂಟು ಮಂದಿ ಐಪಿಎಲ್ ಒಡೆಯರು ಪೂರ್ವ ನಿರ್ಧಾರ ಮಾಡಿಯೇ ಬಿಡ್ ಪ್ರಾಂಗಣಕ್ಕೆ ಕಾಲಿಟ್ಟದ್ದು ಎಂತಹ ದಡ್ಡನಿಗೂ ಅರ್ಥವಾಗುವಂತದು. ಈಗಾಗಲೇ ಆಸ್ಟ್ರೇಲಿಯಾದ ಆಟಗಾರರಿಗೆ ಇಲ್ಲಿ ಆಡಲು ಅವಕಾಶ ಕೊಡುವುದಿಲ್ಲವೆಂದು ಶಿವಸೇನಾ ಗುಟುರುಹಾಕಿದೆ. ಪಾಕ್ ಆಟಗಾರರ ವಿರುದ್ಧವೂ ಇಂತಹ ಧ್ವನಿ ಕೇಳಿಬರುವ ಎಲ್ಲ ಸಂಭವನೀಯತೆಯಿದೆ. ಅಷ್ಟಕ್ಕೂ ಇಂತಹ ಬೆದರಿಕೆ ತಂತ್ರ ಬೆದರಿಕೆದಾರರಿಗೆ ಕೊಡುವ ಪ್ರಚಾರವೇ ಅಂತವರಿಗೆ ದೊಡ್ಡ ಆಕರ್ಷಣೆ. ಈ ಮಧ್ಯೆ ಐಪಿಎಲ್ ಪಾಕ್ ಆಟಗಾರರು ಇಲ್ಲದಿದ್ದರೂ ಅದರ ಜನಪ್ರಿಯತೆಗೆ ಮುಕ್ಕಾಗುವುದಿಲ್ಲ. ಹಣ ಹರಿಯುವುದು ನಿರೀಕ್ಷಿತವಿರುವಾಗ ರಿಸ್ಕ್ ತೆಗೆದುಕೊಳ್ಳಲು ಶುದ್ಧ ವ್ಯಾಪಾರೀ ಉದ್ದೇಶದ ಫ್ರಾಂಚೈಸಿಗಳು ಯಾಕೆ ಮುಂದಾಗುತ್ತಾರೆ?
ಬಿಸಿಸಿಐಗೆ ಪಾಕ್ ಕ್ರಿಕೆಟ್ ಮಂಡಳಿ ಎಂದರೆ ಅಪಥ್ಯವಲ್ಲ. ಅವರ ಮಟ್ಟಿಗೆ ದೇಶಾಭಿಮಾನಕ್ಕೆ ಯಾವತ್ತೂ ಎರಡನೇ ಸ್ಥಾನ. ಹಾಗಾಗೇ ವಿಶ್ವಕಪ್ ಸಂಘಟನೆಯಲ್ಲಿ, ಐಸಿಸಿ ಸಭೆಗಳಲ್ಲಿ ಭಾರತ - ಪಾಕ್ ಭಾಯಿ ಭಾಯಿ. ದೇಶಗಳ ಮಧ್ಯೆ ಎಂತಹ ಬಿಗು ಪರಿಸ್ಥಿತಿಯಿದ್ದಾಗಲೂ ಬಿಸಿಸಿಐ ಮುಗುಂ ಆಗಿ ತನ್ನ ವ್ಯವಹಾರವನ್ನು ಪಾಕ್ ಜೊತೆ ಮಾಡಿದ್ದನ್ನು ಕಂಡಿದ್ದೇವೆ. ಅದಕ್ಕೆ ಐಪಿಎಲ್‌ನಲ್ಲಿ ಪಾಕ್ ಆಟಗಾರರು ಆಡುವುದಕ್ಕೆ ಯಾವ ತಕರಾರೂ ಇದ್ದಿರಲಿಕ್ಕಿಲ್ಲ. ಅದೇ ಕಾರಣದಿಂದಾಗಿ ಪಾಕ್ ಎಲ್ಲ ಅಡೆತಡೆಗಳನ್ನು ತೆಗೆದು ತನ್ನ ಕ್ರಿಕೆಟ್ ಆಟಗಾರರಿಗೆ ಅವಕಾಶ ಮಾಡಿಕೊಟ್ಟಿದ್ದು. ಈ ಲೆಕ್ಕದಲ್ಲಿ ನೋಡಿದರೆ, ಫ್ರಾಂಚೈಸಿಗಳು ತಮ್ಮದೇ ಆಟ ಆಡಿದಂತಿದೆ. ಮತ್ತು ಈ ಆಟದ ಸೂತ್ರಧಾರ ಭಾರತ ಸರ್ಕಾರ ಆಗಿದ್ದರೆ ಅಂತಹ ಅನಿರೀಕ್ಷಿತ ಅಲ್ಲ. ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣರ ನಿರಾಕರಣೆಯನ್ನು ನೀವೂ ನಂಬುತ್ತೀರೆಂದರೆ ಏನೂ ಮಾಡಲಾಗದು!

ಆದರೆ ಆದದ್ದೇನು?

ಯಾವ ದಿಕ್ಕಿನಿಂದ ನೋಡಿದರೂ ಪಾಕ್ ಕ್ರಿಕೆಟಿಗರಿಗೆ ನಷ್ಟವಾಗಿದೆ. ಬಿಡ್‌ನಲ್ಲಿ ಖರೀದಿಸದಿರುವುದಕ್ಕೆ ಪ್ರತಿಭೆ ಕಾರಣವಲ್ಲ ಎಂಬುದು ಜಗಜ್ಜಾಹೀರ ಆಗಿರುವುದರಿಂದ ಅವಮಾನದ ಹಿಂಸೆ ಎದುರಾಗುವುದಿಲ್ಲ. ಆದರೆ ಆಘಾತವಾಗಿದೆ. ಅತ್ತ ಪಾಕ್‌ಗೆ ಬಹುಪಾಲು ದೇಶಗಳು ಕ್ರಿಕೆಟ್ ಆಡಲು ಹೋಗುತ್ತಿಲ್ಲ. ವಿದೇಶಿ ಪ್ರವಾಸವಾದರೂ ಎಷ್ಟಿದ್ದೀತು? ಅಲ್ಲಿ ಕ್ರಿಕೆಟ್ ಮಂಡಳಿ ಬಡತನದಲ್ಲಿದೆ. ಈ ಹಿನ್ನೆಲೆಯಲ್ಲಿ ಕೆಲವು ಪ್ರಮುಖ ಆಟಗಾರರಾದರೂ ಐಪಿಎಲ್‌ನಲ್ಲಿ ಹಣದ ಸೂರೆ ಮಾಡಿಕೊಳ್ಳುವ ಅವಕಾಶಕ್ಕೆ ಇದೀಗ ವಂಚನೆಯಾಗಿದೆ. ಐಪಿಎಲ್ ತಂಡಗಳ ಮಾಲಿಕರು ಬಿಡ್ ಕೂಗದ ನಾಟಕವಾಡುವುದಕ್ಕಿಂತ ಪ್ರಬುದ್ಧವಾದ ನಿಲುವನ್ನು ಬಿಡ್ ಮುಂಚಿತವಾಗಿಯೇ ತೆಗೆದುಕೊಂಡಿದ್ದರೆ ಅಷ್ಟರಮಟ್ಟಿಗೆ ಪಾಕ್ ಪ್ರತಿಭೆಗಳಿಗೆ ಶಾಕ್ ಆಗುತ್ತಿರಲಿಲ್ಲ. ಪ್ರತಿಭೆಗಳಿಗೆ ಕಡೆಪಕ್ಷ ಆ ದರ್ಜೆಯ ಗೌರವವನ್ನು ಕೊಡಬೇಕಿತ್ತು.
ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ನಷ್ಟವಾಗಿರುವುದು ಸುಳ್ಳು. ಬೋರ್ಗರೆಯುವ ಶಾಹೀದ್ ಅಫ್ರಿಧಿ ಆಟವಿಲ್ಲದಿದ್ದರೂ ಮತ್ತಾರೋ ಅನಾಮಿಕ ವೇಯ್ನ್ ಪರ್ವೇರ್ ಸಿಡಿಯಬಹುದು. ಇನ್ನೊಂದು ನಿಟ್ಟಿನಲ್ಲಿ, ನಾವು - ಭಾರತೀಯರು ಐಪಿಎಲ್ ತಂಡಗಳ ಒಗ್ಗಟ್ಟಿಗೆ ಉಘೇ ಎನ್ನಬೇಕು. ಪ್ರತಿಯೊಬ್ಬ ಭಾರತೀಯನಲ್ಲೂ ಪಾಕ್ ಭಯೋತ್ಪಾದನೆಯ ಬಗ್ಗೆ ಸಿಟ್ಟು ಮಡುಗಟ್ಟಿದೆ. ಅದನ್ನು ಪಾಕ್ ಪ್ರಭುತ್ವಕ್ಕೆ ಪದೇ ಪದೇ ಅರ್ಥ ಮಾಡಿಸಬೇಕಾದ ಮತ್ತು ಜಗತ್ತಿಗೆ ಸಾರಬೇಕಾದ ಅವಶ್ಯಕತೆಯಿದೆ. ಅದಕ್ಕೆ ಸಿಕ್ಕ ಅತ್ಯದ್ಭುತ ಅವಕಾಶ ಇದಾಗಿತ್ತು. ಆ ಮಟ್ಟಿಗೆ ಐಪಿಎಲ್ ಹೊಡೆತ ಯುವರಾಜ್ ಸಿಂಗ್‌ರ ಸಿಕ್ಸರ್‌ಗಳಿಗಿಂತಲೂ ಬಲವಾದುದಾಗಿದೆ!
ಕೈಯಲ್ಲಾಗದವರು ಮೈ ಪರಚಿಕೊಂಡರಂತೆ. ಇದೇ ಮಾದರಿಯಲ್ಲಿ ಪಾಕ್‌ನಲ್ಲಿ ಗುಲ್ಲೆದ್ದಿದೆ. ಅಲ್ಲಿನ ಮಾಜಿ ಕ್ರಿಕೆಟಿಗರು ಕಿಡಿಕಾರಿದ್ದಾರೆ. ಭಾರತದಲ್ಲಿ ಸದ್ಯದಲ್ಲೇ ನಡೆಯಲಿರುವ ವಿಶ್ವಕಪ್ ಹಾಕಿಯಲ್ಲಿ ತಮ್ಮ ದೇಶದ ತಂಡ ಪಾಲ್ಗೊಳ್ಳಬಾರದು ಎಂದು ಧ್ವನಿಯೆತ್ತಿದ್ದಾರೆ. ನಿಜಕ್ಕೂ ಅದು ಮತ್ತೆ ಅವರಗೇ ಆಗುವ ಹಾನಿಯ ಬೂಮರ‍್ಯಾಂಗ್. ಎಷ್ಟೇ ಸಮಚಿತ್ತದಿಂದ ಯೊಚಿಸಿದರೂ, ಪಾಕ್ ಆಟಗಾರರನ್ನು ಬಿಡ್ ಮಾಡದ ಘಟನೆ ಭಾರತೀಯ ಮನಸ್ಸುಗಳಿಗೆ ಸಾಂತ್ವನ ನೀಡಿದೆ ಎಂತಲೇ ಅನ್ನಿಸುತ್ತದೆ. ಹಾಗಾಗೇ ಇರಬೇಕು, ಭಾರತೀಯ ಕ್ರಿಕೆಟಿಗರು ಘಟನೆಯ ಬಗ್ಗೆ ಕಮಕ್ ಕಿಮಕ್ ಎಂದಿಲ್ಲ!
-ಮಾ.ವೆಂ.ಸ

ಭಾನುವಾರ, ಜನವರಿ 24, 2010

ತಕಧಿಮಿತ ಕುಣಿಯಲಾಗದಿದ್ದರೇನು, ಕುಳಿತು ಓದಿ!


ವಾರಕ್ಕೊಮ್ಮೆ........ 9

ಪ್ರಾಥಮಿಕ ಶಾಲೆಯಲ್ಲಿದ್ದ ದಿನಗಳು. ಸಮೀಪದ ಊರಿನಲ್ಲಿ ರಾತ್ರಿ ‘ಭಸ್ಮಾಸುರ ಮೋಹಿನಿ’ ಯಕ್ಷಗಾನ. ನನ್ನ ಜೀವನದ ಪ್ರಪ್ರಥಮ ಯಕ್ಷಗಾನ ನೋಡಲು ನಾನೂ ಹೊಗಿದ್ದೆ. ಮರುದಿನ ಬೆಳಿಗ್ಗೆ ತಿಂಡಿ ತಿಂದು ಮಲಗಿದ್ದಷ್ಟೇ. ಏಳುವ ಹೊತ್ತಿಗೆ ಚುಮು ಚುಮು ಬೆಳಕು. ಬೆಳಿಗ್ಗೆಯೋ ಸಂಜೆಯೋ ಗೊತ್ತಾಗುವಂತಿರಲಿಲ್ಲ. ಮನೆಯಲ್ಲಿ ಅಕ್ಕ, ಅಮ್ಮ ಎಲ್ಲ ‘ಹೋಗು, ಅರಳೀಕಟ್ಟೆಗೆ ನಮಸ್ಕರಿಸಿ ಬಾ. ಬೆಳಿಗ್ಗಿನ ತಿಂಡಿಗೆ ಅಕ್ಕಿ ರೊಟ್ಟಿ ಮಾಡಿದ್ದಾರೆ. ತಿನ್ನುವೆಯಂತೆ’ ಸರಿ, ಬೆಳಗಿನ ಮೂಡ್‌ನಲ್ಲಿ ನಾನು ಕಟ್ಟೆ ಸುತ್ತಿ ಬಂದರೆ ಮನೆಮಂದಿಯೆಲ್ಲ ಗಹಗಹಿಸಿ ನಗುತ್ತಿದ್ದಾರೆ. ಆವಾಗ ಗೊತ್ತಾಯಿತು, ಮಧ್ಯಾಹ್ನ ನಿದ್ದೆಗಣ್ಣಲ್ಲಿಯೇ ಊಟ ಮಾಡಿ ಮತ್ತೆ ಮಲಗಿದ್ದ ನನ್ನನ್ನು ಏಪ್ರಿಲ್ ಫೂಲ್ ಮಾಡಿದ್ದರು! ಅವತ್ತೇ ಕೊನೆ, ಮತ್ತೆ ಯಕ್ಷಗಾನದ ಟೆಂಟ್ ಬಳಿ ನಾನು ಸುಳಿದಿಲ್ಲ. ಆದರೂ ಇತ್ತೀಚಿನ ದಿನಗಳಲ್ಲಿ ನನಗೆ ಹಲವು ಯಕ್ಷಗಾನದ ಸುದ್ದಿಗಳು ಗೊತ್ತಾಗುತ್ತಿವೆ. ಈ ವಿಚಾರದಲ್ಲಿ ಅಪ್‌ಡೇಟ್ ಆಗುತ್ತಿದ್ದೇನೆ. ಥ್ಯಾಂಕ್ಸ್ ಟು ‘ಯಕ್ಷರಂಗ’
ಕರ್ನಾಟಕದ ಯಕ್ಷಗಾನಕ್ಕೆ ಮೀಸಲಾದ ಮಾಸಪತ್ರಿಕೆಯಿದು. ಕಡತೋಕ ಮಂಜುನಾಥ ಭಾಗವತರ ಪುತ್ರ ಗೋಪಾಲಕೃಷ್ಣ ಭಾಗವತ ಈ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರು. ಯಕ್ಷಗಾನ ತಕಧಿಮಿತದ ವಾತಾವರಣದಲ್ಲಿಯೇ ಪತ್ರಿಕೆ ಹುಟ್ಟಿರುವುದರಿದ ಬಣ್ಣದ ವೇಷದ ‘ಟಚ್’ ಇಲ್ಲದವರಿಗೂ ಖುಷಿ ನೀಡುತ್ತದೆ, ಮಾಹಿತಿ ಒದಗಿಸುತ್ತದೆ. ಅದಾಗಲೇ ನಾಲ್ಕು ವರ್ಷ ಪೂರೈಸಿರುವ ಯಕ್ಷರಂಗಕ್ಕೆ ಈ ಕಲಾ ವಿಭಾಗದ ಪ್ರಮುಖ ಪಾತ್ರಧಾರಿಗಳು, ಬರಹಗಾರರು ಲೇಖನಿ ಝಳಪಿಸುತ್ತಾರೆ ಎಂಬುದೇ ಇದರ ಹೆಮ್ಮೆ. ಡಾ.ಎಂ.ಪ್ರಭಾಕರ ಜೋಶಿ, ಸೆಡಿಯಾಪು ಕೃಷ್ಣ ಭಟ್ಟ, ಪ್ರೊ.ಎಂ.ಎಲ್.ಸಾಮಗ, ನಾರಾಯಣ ಯಾಜಿ.... ಪಟ್ಟಿಯನ್ನು ಮುಂದುವರೆಸುತ್ತಲೇ ಹೋಗಬಹುದು!
ಯಕ್ಷಗಾನ ಅಕಾಡೆಮಿಯ ಕೇಂದ್ರ ಕಛೇರಿ ಎಲ್ಲಿರಬೇಕು, ಅರ್ಥಗಾರಿಕೆಯಲ್ಲಿ ಸಾಹಿತ್ಯ, ಮಹಿಳಾ ಯಕ್ಷಗಾನ ಸಮೀಕ್ಷೆ ಹೀಗೆ ಬಹುಸಂಖ್ಯಾತ ಲೇಖನಗಳು ಗಂಭೀರ ಚಿಂತನೆಗಳನ್ನು ಒಳಗೊಂಡಿರುವುದನ್ನು ಕಾಣುತ್ತೇವೆ. ನಾಲ್ಕು ರಕ್ಷಾಪುಟಗಳು ಬಣ್ಣದಲ್ಲಿ ಪ್ರಕಟವಾದರೆ ಒಳ ಹೂರಣದ 34 ಪುಟ ಕಪ್ಪು ಬಿಳುಪು. ಹೊನ್ನಾವರದ ಯಕ್ಷಲೋಕ ಸಂಸ್ಥೆ ಇದರ ಪ್ರಕಾಶಕರು. ಬಹುಷಃ ಇದು ಕಡತೋಕ ಭಾಗವತರ ಕುಟುಂಬ ಹುಟ್ಟು ಹಾಕಿರುವ ಸಂಸ್ಥೆಯಾಗಿರಲಿಕ್ಕೆ ಸಾಕು. ನನಗೆ ತಿಳಿದಂತೆ ಯಕ್ಷಗಾನಕ್ಕೆ ಸಂಬಂಧಿಸಿದಂತೆ ಅದಕ್ಕೇ ಮೀಸಲಾದ ಪತ್ರಿಕೆ ಕನ್ನಡದಲ್ಲಿ ಬೇರಾವುದೂ ಇಲ್ಲ. ಬೇರೆ ಭಾಷೆಯಲ್ಲಿ ಇರಲಿಕ್ಕೆ ಸಾಧ್ಯವಿಲ್ಲ, ಏಕೆಂದರೆ ಇದು ಕರ್ನಾಟಕದ ಕಲೆ! ಬೇರೆಡೆ ಇಲ್ಲ!!
ಪತ್ರಿಕೆ ಯಾವ ಮಡಿವಂತಿಕೆಯಿಲ್ಲದೆ ಎಲ್ಲ ವರ್ಗದ ಜನರ ಅಭಿಪ್ರಾಯ, ವಿರೋಧ, ಕಹಿಗಳನ್ನು ಪ್ರಕಟಿಸುವ ಮೂಲಕ ಚರ್ಚೆಗೆ ಒಂದು ಅತ್ಯುತ್ತಮ ವೇದಿಕೆಯನ್ನು ಸೃಷ್ಟಿಸಿಕೊಡುತ್ತದೆ. ಯಕ್ಷಗಾನ ಭಕ್ತರಂತೂ ಇದನ್ನು ಒಂದು ಪಂಚಾಂಗದಂತೆ ಮನೆಗೆ ತಂದಿಟ್ಟುಕೊಳ್ಳಲೇಬೇಕು. ‘ಯಕ್ಷರಂಗ’ದ ಬಿಡಿಪ್ರತಿಯ ಬೆಲೆ ೧೫ ರೂ. ವಾರ್ಷಿಕ ಚಂದಾ 150 ರೂ. ತ್ರೈ ವಾರ್ಷಿಕ ಚಂದಾವನ್ನು ಒಮ್ಮೆಗೇ ಕಟ್ಟುವುದಾದರೆ ನೀವು 500ರೂ. ಪಾವತಿಸಬೇಕು. ಅಂದರೆ ನಿಮಗೆ ಗ್ಯಾರಂಟಿ ಮೂರು ವರ್ಷದ ಮುಂಗಡ ಕಟ್ಟಿದ್ದಕ್ಕೆ 50 ರೂ ನಷ್ಟ! ಚೆಕ್ ಕಳುಹಿಸುವವರು ನಗದೀಕರಣ ವೆಚ್ಚವನ್ನು ಸೇರಿಸಿ ಕೊಡಿ ಎಂಬುದು ಪತ್ರಿಕೆಯ ವಿನಂತಿ. ವ್ಯವಸ್ಥಾಪಕ ಸಂಪಾದಕರು, ಯಕ್ಷರಂಗ ಮಾಸಪತ್ರಿಕೆ, ಹಳದೀಪುರ, ಹೊನ್ನಾವರ, ಉತ್ತರ ಕನ್ನಡ ಜಿಲ್ಲೆ... ಈ ವಿಳಾಸಕ್ಕೆ ನಿಮ್ಮ ಪಾವತಿಯಿರಲಿ. ಫೋನ್ ಮಾಡಿ ವಿಚಾರಿಸುವುದಾದರೆ ೯೯೮೬೨೯೪೭೫೬ಕ್ಕೆ ಕರೆ ಮಾಡಿ.
ಕೊನೆ ಮಾತು - ನಮ್ಮ ‘ವೀಣಾ ಸ್ಮಾರಕ ಮಾವಿನಮನೆ ವಾಚನಾಲಯ’ದ ಕುರಿತು ಮೊತ್ತಮೊದಲು ಪ್ರಜಾವಾಣಿಯಲ್ಲಿ ಲೇಖನ ಪ್ರಕಟಗೊಂಡಿತ್ತು. ಆಗ ಬೆಂಗಳೂರಿನಿಂದ ಒಂದು ಫೋನ್ ಕರೆ. ನನಗೋ ವಾಚನಾಲಯಕ್ಕೆ ದೇಣಿಗೆ ನೀಡುವರೇನೋ ಎಂಬ ಆಸೆ. ಪ್ರಾಥಮಿಕ ಮಾತುಕತೆಯ ನಂತರ ಅವರು ವಿಷಯಕ್ಕೆ ಬಂದರು, "ಯಕ್ಷಗಾನಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ಪತ್ರಿಕೆಯಿದ್ದರೆ ತಿಳಿಸಿ. ಅವರ ವಿಳಾಸ ಕೊಡಿ. ಚಂದಾ ಕಳಿಸುತ್ತೇನೆ!"
-ಮಾ.ವೆಂ.ಸ.ಪ್ರಸಾದ್
ಮಾವಿನಸರ
ಪೋಸ್ಟ್-ಎಡಜಿಗಳೇಮನೆ
ಸಾಗರ ತಾ. ಶಿವಮೊಗ್ಗ ಜಿ.
577401
ಫೋನ್-08183 236068, 296543
9886407592
ಇ ಮೇಲ್- mavemsa@gmail.com

ಸೋಮವಾರ, ಜನವರಿ 18, 2010

ನಮ್ಮನೆ ಕಂದನಿಗೆ ಚೆಂದದ ಕೊಡುಗೆ.....


ವಾರಕ್ಕೊಮ್ಮೆ........8

ಇದು ನಿಜ, ನನಗೊತ್ತಿದ್ದಂತೆ ಪ್ರಜಾವಾಣಿ ಬಳಗ ಮಕ್ಕಳ ಪತ್ರಿಕೆಯನ್ನು ಆರಂಭಿಸುವ ಸಾಹಸ ಮಾಡಿಲ್ಲ. ಸಖಿಯಂತ ಮಹಿಳಾ ಪತ್ರಿಕೆಯನ್ನು ಮೊನ್ನೆ ಮೊನ್ನೆಯಿಂದ ಪ್ರಕಟಿಸುತ್ತಿರುವ ಕನ್ನಡಪ್ರಭ ಪುಟಾಣಿಗಳಿಗೆ ಒಂದು ಪತ್ರಿಕೆಯನ್ನು ಹುಟ್ಟುಹಾಕಿಲ್ಲ. ಸಂಯುಕ್ತ ಕನಾಟಕದಂತ ಅತಿ ಹಳೆಯ ಸಂಸ್ಥೆಯದ್ದೂ ಇದೇ ಬಾಲವಿರೋಧಿ ನಿಲುವು! ಈ ಕನ್ನಡನಾಡಿನಲ್ಲಿ ಮಕ್ಕಳ ಚಲನಚಿತ್ರಗಳು ಬರಕತ್ತಾಗುವುದಿಲ್ಲ, ಅಲ್ಲದೆ ಈ ಹಿಂದೆ ಆರಂಭಿಸಿದ ಬಾಲಮಿತ್ರ, ಬೊಂಬೆಮನೆ, ಪುಟಾಣಿ ಮುಂತಾದ ಎಳೆಯರ ನಿಯತಕಾಲಿಕಗಳು ಉಸಿರುಕಳೆದುಕೊಂಡ ಉದಾಹರಣೆಗಳೂ ನಮ್ಮ ಮುಂದಿವೆ. ಆದರೆ ಕನ್ನಡದವರಲ್ಲದ ಪ್ರಕಟನ ಸಂಸ್ಥೆ ಮಾತ್ರ ಕರ್ನಾಟಕದಲ್ಲಿ ಒಂದಲ್ಲ ಮೂರು ಮಕ್ಕಳ ಪತ್ರಿಕೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ!!
ಇದು ನಿಜ, ಮೂಲ ಕೇರಳದ ‘ಮಂಗಳಂ ಪಬ್ಲಿಕೇಷನ್ಸ್’ ಕನ್ನಡದಲ್ಲಿ ಬಾಲಮಂಗಳ ಮತ್ತು ಬಾಲಮಂಗಳ ಚಿತ್ರಕಥಾ ಎಂಬ ಎರಡು ಪಾಕ್ಷಿಕವನ್ನು ಮಕ್ಕಳಿಗಾಗಿ ಹತ್ತಾರು ವರ್ಷಗಳಿಂದ ನಡೆಸಿಕೊಂಡುಬರುತ್ತಿದ್ದಾರೆ. ಇದೀಗ ಅವರು ಕೆ.ಜಿ. ಮಕ್ಕಳಿಗಾಗಿ ಶುರುಹಚ್ಚಿರುವ ‘ಗಿಳಿವಿಂಡು’ ಮಾಸಿಕ ವ್ಯಾಪಾರೀ ಉದ್ದೇಶಗಳನ್ನು ಮೀರಿ ನಿಲ್ಲುವ ಒಂದು ಸುಮಧುರ ಪ್ರಯತ್ನ.
ಇದು ನಿಜ, ಮೊನ್ನೆ ಓರ್ವ ಒಂಭತ್ತನೇ ತರಗತಿಯ ಹುಡುಗಿ ನಮ್ಮ ವಾಚನಾಲಯದಲ್ಲಿ ಗಿಳಿವಿಂಡುವನ್ನು ಓದುತ್ತಿದ್ದಾಗ ಹೇಳುತ್ತಿದ್ದಳು, ನನಗಿದು ತುಂಬಾ ಇಷ್ಟ! ಹಾಗಾದರೆ ಏನಿದೆ ಅದರಲ್ಲಿ? ನಾನೂ ಕಣ್ಣಾಡಿಸಿದೆ. ಪುಟ್ಟ ಮಕ್ಕಳಿಗೆ ಏನು ಬೇಕೋ ಅದೆಲ್ಲವೂ ಪ್ರತಿ ಪುಟದಲ್ಲಿ ಅಡಗಿಕುಳಿತಿದೆ. ಚಿತ್ರ ನೋಡಿ ಪ್ರಾಣಿ ಗುರ್ತಿಸಿ, ದಾರಿ ಯಾವುದು, ವ್ಯತ್ಯಾಸ ಹುಡುಕಿ, ಇಂಗ್ಲೀಷ್ ಶಬ್ಧಬಂಧ, ಚಿತ್ರಕ್ಕೆ ಬಣ್ಣ ಹಾಕಿ, ಪುಟ್ಟ ಪುಟ್ಟ ಲೆಕ್ಕ...... ಇನ್ನು ಇವೆಲ್ಲ ಬೇಡ ಎನ್ನುವವರಿಗೆ ಚಿಕ್ಕದಾದ ನೀತಿ ಕತೆಗಳೂ ಇವೆ. ಮೂರರಿಂದ ಆರರವರೆಗಿನ ಮಕ್ಕಳಿಗೆ ಏನಾದರು ಅಮೂಲ್ಯವಾದುದನ್ನು ಕೊಡಿಸಬೇಕೆಂದಿದ್ದರೆ ಮುದ್ದಾಂ ಗಿಳಿವಿಂಡು ಕೊಡಿಸಿ. ಈ ಮಾತಿನಲ್ಲಿ ಲವಲೇಷದ ಉತ್ಪ್ರೇಕ್ಷೆಯೂ ಇಲ್ಲ, ನನ್ನಾಣೆ!!
ಇದುನೂ ನಿಜ, 34 ಪುಟಗಳ ಬಣ್ಣಬಣ್ಣದ ಗಿಳಿವಿಂಡುವಿಗೆ ಬರೀ ಏಳು ರೂಪಾಯಿ. ಪುಟ್ಟ ಮಕ್ಕಳಿಗೆ ಜ್ಞಾನ ಸರ್ಕಸ್ ಮಾಡಿಸುವ ಪುಸ್ತಕಗಳನ್ನು ಮಾರುಕಟ್ಟೆಯಲ್ಲಿ ಕೇಳಿ ನೋಡಿ, ಅವು 20 - 30ರೂ.ಗಿಂತ ಕಡಿಮೆ ಬೆಲೆಗೆ ಸಿಗುವುದು ಸಾಧ್ಯವೇ ಇಲ್ಲ. ಪತ್ರಿಕೆಯ ನಿರ್ವಾಹಕ ಸಂಪಾದಕರು ಮನುಪ್ರತಾಪ್. ಪತ್ರಿಕೆ ಬಹುಷಃ ಎಲ್ಲ ಬುಕ್‌ಸ್ಟಾಲ್ ಅಂಗಡಿಯಲ್ಲಿ ಸಿಕ್ಕುತ್ತದೆ. ಹಾಗಾಗಿ ವಿಳಾಸ ಹೇಳುತ್ತಿಲ್ಲ. ಸಿಕ್ಕದಿದ್ದರೆ ಮಂಗಳ ವಿಳಾಸದಲ್ಲಿ ವಿಚಾರಿಸಿ.
-ಮಾ.ವೆಂ.ಸ.ಪ್ರಸಾದ್
ಮಾವಿನಸರ
ಪೋಸ್ಟ್-ಎಡಜಿಗಳೇಮನೆ
ಸಾಗರ ತಾ. ಶಿವಮೊಗ್ಗ ಜಿ.
577401
ಫೋನ್-08183 236068, 296543
9886407592
ಇ ಮೇಲ್- mavemsa@gmail.com

ಗುರುವಾರ, ಜನವರಿ 14, 2010

ಕಪ್ಪು ಬಿಳುಪು ಸುಂದರಿ!



ವಾರಕ್ಕೊಮ್ಮೆ........7

ಮೊದಲ ಮಾತು- ನಮ್ಮೂರಿನ ‘ವೀಣಾ ಸ್ಮಾರಕ ಮಾವಿನಮನೆ ವಾಚನಾಲಯ’ಕ್ಕೆ 22 ಪತ್ರಿಕೆಗಳು ಆಯಾ ಪತ್ರಿಕೆಗಳ ಸಂಪಾದಕರ/ಪ್ರಕಾಶಕರ ಉದಾರ ಕೊಡುಗೆಯಾಗಿ ಸಿಗುತ್ತಿವೆ. ಕೆಲವು ಪತ್ರಿಕೆಗಳಂತೂ ನಾವು ಮನವಿ ಸಲ್ಲಿಸುವ ಮುನ್ನವೇ ಪ್ರತಿಯನ್ನು ಕಳಿಸಿಕೊಡುತ್ತಿವೆ. ಈ ಉಚಿತ ಪತ್ರಿಕೆಗಳಲ್ಲಿ ಪರಿಚಯಿಸಲೇಬೇಕಾದ ಒಂದು ಪತ್ರಿಕೆ ‘ನಮ್ಮ ಮಾನಸ’

ಇವತ್ತು ಮಾರುಕಟ್ಟೆಯಲ್ಲಿ ಸಿಗುವ ಮಹಿಳಾ ಪತ್ರಿಕೆಗಳು ಹೇರಳ. ನಿಮ್ಮ ಗಂಡನನ್ನು ಒಲಿಸಿಕೊಳ್ಳುವುದು ಹೇಗೆ, ಅನಗತ್ಯ ರೋಮ ನಿವಾರಣೋಪಾಯ ಮುಂತಾದ ಎಳಸು - ಜೊಳ್ಳು ಲೇಖನಗಳ ಒಣ ಉಪದೇಶಗಳ ಮಹಿಳಾ ಪತ್ರಿಕೆಗಳಿಗೆ ಓದುಗರೂ ಹೆಚ್ಚು! ಬಹುಷಃ ಚೆಂದದ, ಅರೆನಗ್ನ ಚೆಲುವೆಯರ ವರ್ಣದ ಫೋಟೋಗಳಿಂದ ಮಿಂಚುವ ಗೃಹಶೋಭಾ, ಪ್ರಿಯಾಂಕಗಳನ್ನಂತೂ ಮಹಿಳೆಯರಿಗಿಂತ ಪುರುಷರೇ ಹೆಚ್ಚು ನೋಡುತ್ತಾರೇನೋ?!
ಸಂಪೂರ್ಣವಾಗಿ ಮಹಿಳೆಯರ ಸಂಪಾದಕೀಯ ಬಳಗವಿರುವ ಮತ್ತು ಸ್ತ್ರೀ ವಿಚಾರದಲ್ಲಿ ಗಂಭೀರ, ಚಿಂತನೀಯ ಲೇಖನಗಳನ್ನು ಪ್ರಕಟಿಸುವ ಕಪ್ಪು ಬಿಳುಪು ಸುಂದರಿಯೇ ‘ನಮ್ಮ ಮಾನಸ’ ಮಾಸಿಕ. ಆರಂಭದ ೧೯೮೫ರ ದಿನಗಳಲ್ಲಿ ‘ಮಾನುಷಿ’ಯಾಗಿ, ತದನಂತರ ‘ಮಾನಸ’ಳಾಗಿ ಈಗ ನಮ್ಮ ಮಾನಸವಾಗಿರುವ ಪತ್ರಿಕೆಗೆ ಮೂರೂಮುಕ್ಕಾಲು ವರ್ಷ ಪ್ರಾಯ. ರಾಜೇಶ್ವರಿ ಹೆಚ್.ಎಸ್. ಪತ್ರಿಕೆಯ ಸಂಪಾದಕರು, ಮುದ್ರಕರು ಮತ್ತು ಪ್ರಕಾಶಕರು.
22ರಿಂದ 30 ಪುಟ ಹೊಂದಿರುವ ನಮ್ಮ ಮಾನಸದ ಲೇಖನಗಳೆಲ್ಲ ಅರ್ಥಪೂರ್ಣ. ಸ್ತ್ರೀ ಹಕ್ಕು, ಮಹಿಳಾ ದೃಷ್ಟಿಕೋನದಲ್ಲಿ ಸಾಮಾಜಿಕ, ರಾಜಕೀಯ ಪಲ್ಲಟಗಳು, ಸ್ತ್ರೀ ಸಬಲತೆ... ಹೀಗೆ ಹತ್ತಾರು ಉದ್ದೇಶಗಳೊಂದಿಗೆ ಪ್ರಕಟವಾಗುತ್ತಿದೆ. ಕವನಗಳು, ಅನುಭವ ಕಥಾನಕಗಳು ಕೂಡ ಇಲ್ಲಿವೆ. ಸಾಧಕ ಮಹಿಳೆಯರ, ಮಹಿಳಾ ಬರಹಗಾರರ ಪುಸ್ತಕಗಳ ಪ್ರಾಮಾಣಿಕ ಪರಿಚಯಗಳನ್ನು ಕಾಣುತ್ತೇವೆ. ಪ್ರಸಿದ್ಧರ ಬರಹಗಳ ಕನ್ನಡ ಅನುವಾದವೂ ಇಲ್ಲಿರುವುದರಿಂದ ಮಹಿಳೆಯರ ಬುದ್ಧಿ ಮೊಳಕಾಲು ಕೆಳಗೆ ಎಂಬ ತುಚ್ಛ ಮಾತಿಗೆ ಸಡ್ಡು ಹೊಡೆಯುವ ಪ್ರಯತ್ನವಿದು.
ಲೇಖನಗಳತ್ತ ಕಣ್ಣು ಹಾಯಿಸಿದರೆ ಅಚ್ಚರಿಯೇ ಎದುರಾಗುತ್ತದೆ. ಧನಸಹಾಯ ಅತ್ಯಾಚಾರಕ್ಕೆ ಪರಿಹಾರವೇ?, ಅನೈತಿಕ ಸರ್ಕಾರದ ವಿರುದ್ಧ ನೈತಿಕ ಹೋರಾಟ, ನಾನು ಅವನಲ್ಲ... ಅವಳು...! ಇತ್ಯಾದಿ ಮೆದುಳಿಗೆ ಆಹಾರ ಪೂರೈಸಬಲ್ಲ ಲೇಖನಗಳು ಇದರಲ್ಲಿದೆ. ಸಾರಿ, ಬಣ್ಣದ ನಗ್ನ ಚಿತ್ರಗಳಾಗಲಿ, ಮೊದಲ ರಾತ್ರಿ ಸೆಕ್ಸ್ ಎಂಬ ಅಸಡ್ಡಾಳ ಲೇಖನಗಳಾಗಲಿ ಇದರಲ್ಲಿಲ್ಲ. ಮಹಿಳೆ ಎಂದಾಕ್ಷಣ ಲಿಪ್‌ಸ್ಟಿಕ್, ಅಡುಗೆ, ಧಾರಾವಾಹಿ ಎಂಬ ಅನಿಸಿಕೆಯನ್ನು ಸುಳ್ಳು ಮಾಡುವ ಮಾನಸಕ್ಕೆ ಸಲಾಂ.
ಪತ್ರಿಕೆಯ ಬಿಡಿ ಪ್ರತಿ ಬೆಲೆ 8ರೂ. ವಾರ್ಷಿಕ ಚಂದಾ 100 ರೂ.ನಲ್ಲಿ ವಿಶೇಷ ಸಂಚಿಕೆಯೂ ಸೇರಿದೆ. ನಮ್ಮ ಮಾನಸ, 114/5, 9ನೇತಿರುವು, ಎರಡನೇ ಮುಖ್ಯರಸ್ತೆ, ಚಾಮರಾಜ ಪೇಟೆ, ಬೆಂಗಳೂರು - 560018 ವಿಳಾಸಕ್ಕೆ ಚಂದಾ ಹಣ ಕಳುಹಿಸಬೇಕು. ರಾಜೇಶ್ವರಿಯವರು 9449345698 ಮೊಬೈಲ್ ನಂ.ನಲ್ಲಿ ಸಂಪರ್ಕಕ್ಕೆ ಲಭ್ಯ. ಸಂಪಾದಕೀಯ ಬಳಗದಲ್ಲಿ ಇರುವ ಮಹಿಳೆಯರನ್ನು ಸುಮ್ಮನೆ ಎಣಿಸಿದರೆ ಸಿಕ್ಕ ಸಂಖ್ಯೆ ಒಂದು ಡಜನ್!

ಕೊನೆ ಮಾತು - ಮಾರುಕಟ್ಟೆಯಲ್ಲಿ ಈ ಪತ್ರಿಕೆ ಬಹುಷಃ ಲಭ್ಯವಿಲ್ಲ. ಗೊಂದಲ ಬೇಡ, ಪುಸ್ತಕಗಳ ಅಂಗಡಿಯಲ್ಲಿ ಸಿಗುವುದು ಕೆ.ಗಣೇಶ್ ಕೋಡೂರು ಸಂಪಾದಕೀಯದ ‘ನಿಮ್ಮೆಲ್ಲರ ಮಾನಸ’ ಎಂಬ ಬೇರೆಯದೇ ಪತ್ರಿಕೆ. ಅದರ ಬಗ್ಗೆ ಇನ್ನೊಮ್ಮೆ........
-ಮಾ.ವೆಂ.ಸ.ಪ್ರಸಾದ್
ಮಾವಿನಸರ
ಪೋಸ್ಟ್-ಎಡಜಿಗಳೇಮನೆ
ಸಾಗರ ತಾ. ಶಿವಮೊಗ್ಗ ಜಿ.
577401
ಫೋನ್-08183 236068, 296543
9886407592
ಇ ಮೇಲ್- mavemsa@gmail.com
 
200812023996