ಮಂಗಳವಾರ, ಆಗಸ್ಟ್ 24, 2010

ಭಾರತ - ಪಾಕ್ ಭಾಯಿ ಭಾಯಿ!


ದೃಶ್ಯ ಒಂದು
ಮೊನ್ನೆ ಜೂನ್‌ನಲ್ಲಿ ನಡೆದ ವಿಂಬಲ್ಡನ್ ಎರಡನೇ ಸುತ್ತಿನ ಡಬರ್ಲ್ಸ ಪಂದ್ಯ. ಭಾರತದ ರೋಹನ್ ಬೋಪಣ್ಣ ಹಾಗೂ ಪಾಕಿಸ್ತಾನದ ಆಸಿಮ್ ಉಲ್ ಹಕ್ ಖುರೇಷಿ ವಿಶ್ವಾಸಪೂವೃಕ ಗೆಲುವನ್ನು ಪಡೆದು ನೆಟ್ ಬಳಿ ಬರುತ್ತಿದ್ದ ಸಂದರ್ಭ. ಖುರೇಷಿ ಬೋಪಣ್ಣರ ಕಿವಿಯಲ್ಲಿ ಉಸುರಿದ್ದು ಒಂದೇ ಮಾತು, "ನೋಡಲ್ಲಿ, ಪ್ರಪ್ರಥಮ ಬಾರಿಗೆ ವಿಂಬಲ್ಡನ್‌ನಲ್ಲಿ ಭಾರತ ಪಾಕ್ ಪ್ರೇಕ್ಷಕರು ಆಕ್ಕ ಪಕ್ಕ ಕೂತು ಒಂದೇ ತಂಡಕ್ಕೆ ಪ್ರೋತ್ಸಾಹದ ಚಪ್ಪಾಳೆ ಕೊಡುತ್ತಿದ್ದಾರೆ!"
ದೃಶ್ಯ ಎರಡು
ಖುರೇಷಿಯ ಜನ್ಮಸ್ಥಳ ಲಾಹೋರ್. ತಾಯಿ ನೋಶೀನ್ ಇಥೆಶಾಮ್. ಬೋಪಣ್ಣರ ಊರು ನಮ್ಮ ಕಡೆ, ಕೊಡಗು! ತಂದೆ ಎಂ.ಜಿ.ಬೋಪಣ್ಣ, ತಾಯಿ ಮಲ್ಲಿಕಾ. ಆದರೆ ಟ್ವಿಟ್ಟರ್‌ನ ತಮ್ಮ ಪುಟದಲ್ಲಿ ಖುರೇಷಿ ಬರೆಯುತ್ತಾರೆ, ಬೋಪಣ್ಣ ಎಂದರೆ ನನ್ನ ಸಹೋದರ. ಭಾರತದ ಆ ತಾಯಿ ಹೊಟ್ಟೆಯಲ್ಲಿ ಹುಟ್ಟಿದ್ದಾನಷ್ಟೇ!
ಬರೀ ಭಾರತ ಪಾಕ್ ದ್ವೇಷದ ಕತೆ ಕೇಳುವವರಿಗೆ ಈ ವೃತ್ತಾಂತಗಳಲ್ಲಿ ನಾಟಕೀಯತೆಯೋ, ಸಿನಿಕ ಕಲ್ಪನೆಗಳೋ ಕಂಡರೆ ಅದು ಇತಿಹಾಸದ ಕಹಿ ನೆನಪುಗಳ ಪ್ರಭಾವ ಎಂತಲೇ ಅರ್ಥೈಸಬೇಕು. ಹಾಗೆಂದು ಟೆನಿಸ್‌ನ ಬೋಪಣ್ಣ - ಖುರೇಷಿ ಜೋಡಿ ಉಭಯ ದೇಶಗಳ ಬಾಂಧವ್ಯದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗುತ್ತದೆ ಎಂದೂ ಯೋಚಿಸಬೇಕಿಲ್ಲ. ಆದರೆ ನಮ್ಮ ಸಿಟ್ಟು, ದ್ವೇಷಗಳನ್ನು ವಿಷಯಾಧಾರಿತವನ್ನಾಗಿ ಮಾಡಲು, ವೈಮನಸ್ಯವನ್ನು ಕೇವಲ ರಾಜಕೀಯ ಅಂಕಣದಲ್ಲಿ ಮಾತ್ರ ಪ್ರದರ್ಶಿಸುವ ಪ್ರವೃತ್ತಿಯನ್ನು ತೋರುವಿಕೆಯಲ್ಲಿಯೇ ಈ ಮೂರು ದಿನದ ಬಾಳಿನ ಸಾರ್ಥಕತೆ ಇದೆ. ಅದಕ್ಕೆ ಶ್ರೀಕಾರವನ್ನು ಈ ಜೋಡಿ ಹಾಕಿಕೊಟ್ಟಿದ್ದಾರೆ.
ಬೋಪಣ್ಣ ಖುರೇಷಿಯರಿಬ್ಬರಿಗೂ ಅದಾಗಲೇ ಬರೋಬ್ಬರಿ ೩೦ ವರ್ಷ. ಬಹುಷಃ ಸಿಂಗಲ್ಸ್ ವಿಭಾಗದಲ್ಲಿ ಅವರ ಅವಕಾಶಗಳು ಕುಂಟುತ್ತಬಂದಿವೆ. ಬೋಪಣ್ಣ ಆ ಕ್ಷೇತ್ರದಲ್ಲಿ ೨೧೩(೨೦೦೭)ನೇ ರ್‍ಯಾಂಕಿಂಗ್ ಕಂಡುಕೊಳ್ಳಲೇ ಏದುಸಿರುಬಿಡಬೇಕಾಯಿತು. ಖುರೇಷಿಯದ್ದು ಬಹುಪಾಲು ಇದೇ ಸ್ಕ್ರಿಪ್ಟ್. ೧೦೩ಕ್ಕೆ ಬರುವಷ್ಟರಲ್ಲಿ ಉಸ್ಸಪ್ಪ. ಅವರಿಬ್ಬರ ಬಲ ಒಗ್ಗಟ್ಟಿನಲ್ಲಿದೆ. ಇದು ಡಬಲ್ಸ್‌ನಲ್ಲಿ ಕೆಲಸ ಮಾಡಲಾರಂಭಿಸಿದೆ. ಮೊನ್ನೆ ಲೆಗ್ ಮಾಸನ್ ಟೆನಿಸ್ ಕ್ಲಾಸಿಕ್‌ನ ಉಪಾಂತ್ಯದಲ್ಲಿ ಬಾಬ್-ಮೈಕ್ ಬ್ರಿಯಾನ್‌ರನ್ನು ಸೋಲಿಸಿದ್ದು ಇದನ್ನು ಸ್ಪಷ್ಟಪಡಿಸಿದೆ.
ಬೋಪಣ್ಣರದು ಭರ್ಜರಿ ಸರ್ವ್, ರಭಸದ ಹೊಡೆತ. ಖುರೇಷಿ ನೆಟ್‌ನ ಬಳಿ ಕಲಾತ್ಮಕತೆ ತೋರಬಲ್ಲರು. ಕೊರತೆ ಬಿದ್ದಿರುವುದು ಆತ್ಮವಿಶ್ವಾಸದಲ್ಲಿ. ಅದನ್ನು ತುಂಬಿಕೊಳ್ಳಿ ಎಂದು ಖುದ್ದು ಮಹೇಶ್ ಭೂಪತಿ ಹಿರಿಯಣ್ಣನಂತೆ ಹೇಳಿದ್ದಾರೆ. ಇನ್ನಷ್ಟು ಮತ್ತಷ್ಟು ಭಾವನಾತ್ಮಕ ವಿಚಾರಗಳು ಪ್ರಸ್ತಾಪವಾಗುವ ಮುನ್ನ ಕೆಲವು ಸ್ವಾರಸ್ಯಗಳನ್ನು ಸರಬರನೆ ಹೇಳಿಬಿಡುವುದೊಳ್ಳೆಯದು. ಈ ಇಬ್ಬರ ಜನ್ಮವರ್ಷ ಒಂದೇ, ಜನನ ಅಂತರ ಕೇವಲ ೧೩ ದಿನ! ಖುರೇಷಿ ಅಜ್ಜ ಕವಾಜಾ ಇಫ್ತಿಕಾರ್ ಆಲ್ ಇಂಡಿಯನ್ ಚಾಂಪಿಯನ್. ಭಾರತದಲ್ಲಿ ಆತ ಪ್ರಶಸ್ತಿ ಗೆದ್ದದ್ದು ೧೯೪೭ರಲ್ಲಿ! ಖುರೇಷಿ ಭಾರತದ ಲಿಯಾಂಡರ್ ಪೇಸ್, ಪ್ರಕಾಶ್ ಅಮೃತರಾಜ್ ಜೊತೆಗೆಲ್ಲ `ರ್‍ಯಾಕೆಟ್' ಕೈಜೋಡಿಸಿದ್ದಾರೆ. ಆದರೆ ಅವರ ಕೋಚ್ ಆಗಿದ್ದವರು ಮಾತ್ರ ಮಹೇಶ್‌ರ ತಂದೆ ಕೃಷ್ಣ ಭೂಪತಿ!
ಖುರೇಷಿ ಕ್ಯಾರಿಯರ್‌ಗೆ ರಾಜಕೀಯ, ದೇಶದ ಆಂತರಿಕ ಸ್ಥಿತಿ ಮತ್ತು ಅನುಮಾನದ ಕಣ್ಣುಗಳಿಂದಾಗಿ ಹಲವು ಬಾರಿ ಆಘಾತಕ್ಕೊಳಗಾಗುತ್ತಿರಬೇಕಾಗಿದೆ. ಇಂದು ಅವರ ಡಬಲ್ಸ್ ರ್‍ಯಾಂಕಿಂಗ್ ಬೋಪಣ್ಣರ ೩೩ನೇ ಕ್ರಮಾಂಕದಿಂದ ಕೇವಲ ಎರಡು ಕಡಿಮೆ. ಎಷ್ಟೋ ಬಾರಿ ಕೊನೆ ಘಳಿಗೆಯಲ್ಲಿ ವಿದೇಶಿ ಟೂರ್ನಿಗೆ ವೀಸಾ ಲಭ್ಯವಾಗದೆ ಕೈಚೆಲ್ಲಿದ್ದಿದೆ. ವಿಚಿತ್ರ, ಹಾಗೊಮ್ಮೆ ಖುರೇಷಿ ದಿಢೀರ್ ಹಿಂಸರಿದಾಗ ಎರಿಕ್ ಬ್ಯುಟೊರ್‍ಯಾಕ್ ಜೊತೆ ಆಡಿದ ಬೋಪಣ್ಣ ತಮ್ಮ ಮೊದಲ ಎಟಿಪಿ ಟೂರ್ ಪ್ರಶಸ್ತಿ ಪಡೆದಿದ್ದರು!
ಇನ್ನೂ ವಿಚಿತ್ರ, ಸಾನಿಯಾ ಮಿರ್ಜಾ ಪಾಕಿ ಶೋಯೇಬ್ ಮಲ್ಲಿಕ್‌ನ್ನು ಮದುವೆಯಾದ ದಿನದಿಂದ ಆಕೆ ಭಾರತೀಯಳಾಗಿದ್ದೂ ಆವಳ ಸಾಧನೆ ಬಗ್ಗೆ ನಮ್ಮಲ್ಲಿ ಕುತೂಹಲ ಉಳಿದಿಲ್ಲ. ತಾಂತ್ರಿಕವಾಗಿ ಆಕೆ ಇಲ್ಲಿಯವಳು ಇರಬಹುದಾದರೂ ಮನಸ್ಸಿನ ಪ್ರಕಾರ ಮಿರ್ಜಾ ವಿದೇಶಿ! ಅದೃಷ್ಟಕ್ಕೆ ಖುರೇಷಿ - ಬೋಪಣ್ಣರಿಗೆ ಅಂತಹ ಆಕ್ಷೇಪವಿಲ್ಲ. ಬೋಪಣ್ಣರನ್ನು ಪಾಕಿಗಳು ಹೇಗೆ ಸ್ವೀಕರಿಸುತ್ತಾರೆಎಂಬ ಕುತೂಹಲಕ್ಕೆ ಅಂತರ್ಜಾಲದಲ್ಲಿಯೂ ಉತ್ತರ ಸಿಗಲಿಲ್ಲ. ತಮ್ಮ ಅತ್ಯಂತ ಹೆಚ್ಚು ಸಮಯವನ್ನು ಖುರೇಷಿ ಕಳೆಯುವುದು ಭಾರತದಲ್ಲಿ. ಇಲ್ಲಿನ ಚಾಲೆಂಜರ್, ಡಬಲ್ಸ್‌ನಲ್ಲಿ ತೊಡಗಿಕೊಳ್ಳಲು ಅವರಿಗೆ ಬಾಧಕವಿಲ್ಲ. ಆ ಮಟ್ಟಿಗೆ ಇಂದು ಭಾರತದ ಹೊರಗಿನ ವಿಶ್ವವೇ ಪಾಕಿಗಳನ್ನು ಹೆಚ್ಚು ದ್ವೇಷ, ಅನುಮಾನಗಳಿಂದ ನೋಡುತ್ತದೆ!
ರ್‍ಯಾಂಕಿಂಗ್ ಸುಧಾರಿಸುತ್ತಿದೆ. ೧೫ ನೇ ಕ್ರಮಾಂಕವನ್ನು ಮುಟ್ಟಿಯಾಗಿದೆ. ಎಟಿಪಿ ಟೂರ್ ಮಟ್ಟದಿಂದ ಸ್ಲಾಂ, ಸೂಪರ್ ಸೀರೀಸ್ ಮಟ್ಟ ಮುಟ್ಟಿಯಾಗಿದೆ. ನವೆಂಬರ್‌ನಲ್ಲಿ ಲಂಡನ್‌ನಲ್ಲಿ ನಡೆಯುವ ಡಬಲ್ಸ್ ಟೂರ್ ಫೈನಲ್ ಸ್ಪರ್ಧೆ ವೇಳೆಗೆ ಅಗ್ರ ಎಂಟರ ತಂಡದಲ್ಲೊಂದಾಗುವ ತಹತಹ ಕಾಣಿಸಿದೆ. ಅದು ಆಗಲೇಬೇಕು. ನಾಳೆ ಆಗಸ್ಟ್ ೩೦ರಿಂದ ಆರಂಭವಾಗಲಿರುವ ಯುಎಸ್ ಓಪನ್‌ನಲ್ಲಿ ಅದ್ಭುತ ಪ್ರದರ್ಶನ ಕಂಡುಬಂದರೆ ಸ್ಥಾನ ನಿಕ್ಕಿ. ಅತಿಯಾಸೆ ಎನ್ನದಿರಿ, ಈ ಜೋಡಿಯ ಕೈಯಲ್ಲಿ ತೀರಾ ಹೆಚ್ಚು ಟೆನಿಸ್ ದಿನಗಳೂ ಉಳಿದಿಲ್ಲ.
ಒಂದು ಟಾನಿಕ್ ಅಂತೂ ಸಿಕ್ಕಿದೆ. ೨೦೧೦ರಲ್ಲಿ ಎಸ್‌ಎ ಟೆನಿಸ್ ಓಪನ್ ಡಬಲ್ಸ್ ಪ್ರಶಸ್ತಿಯನ್ನು ಗಳಿಸಿದ್ದು ದಾಖಲಾಗಿದೆ. ಇದಿವರ ಚೊಚ್ಚಲ ಜಂಟಿ ಪ್ರಶಸ್ತಿ. ಖುರೇಷಿಗೆ ವೈಯುಕ್ತಿಕವಾಗಿಯೂ ಮೊದಲನೆಯದು. ೨೦೦೭ರಲ್ಲಿ ಮೊತ್ತಮೊದಲು ಜೊತೆಯಾದಾಗ ಸತತ ನಾಲ್ಕು ಚಾಲೆಂಜರ್ ಗೆದ್ದದ್ದು ಈ ಕ್ಷಣದಲ್ಲಿ ನೆನಪಾಗುತ್ತದೆ. ಎಟಿಪಿ ಫೈನಲ್‌ನಲ್ಲಿ - ಅದೂ ನಾಲ್ಕು ಬಾರಿ - ಎಡವಲು ಕಾರಣವಾಗಿರುವುದು ಸಾಮರ್ಥ್ಯದ ಬಗ್ಗೆ ಇರುವ ಪುಟ್ಟ ಅಪನಂಬಿಕೆ. ಅದು ಬ್ರಿಯಾನ್ ಸಹೋದರರನ್ನು ಪರಾಭವಗೊಳಿಸಿದ ಮೇಲೆ ಹೋಗಿರಬೇಕು, ನಾವೂ ವಿಶ್ವದ ಟಾಪ್ ಜೋಡಿಗಳೊಂದಿಗೆ ಭುಜ ಕೊಟ್ಟು ಸೆಣೆಸಬಲ್ಲೆವು. ಹೀಗೆಂದು ಕೊಳ್ಳುವುದೂ ಕಷ್ಟ, ಲೆಗ್ ಮಾಸನ್‌ನಲ್ಲಿ ಬ್ರಿಯಾನ್‌ರನ್ನು ಸೋಲಿಸಿ ಫೈನಲ್ ಪ್ರವೇಶಿಸಿದರೆ ಅಲ್ಲೂ ಸೋಲು!
ಡಬಲ್ಸ್ ಎಂದರೆ ದಾಂಪತ್ಯವಿದ್ದಂತೆ. ಇಗೋ ಅಡ್ಡಬರಬಾರದು. ಪೇಸ್-ಭೂಪತಿಯರ ಇಗೋ ನಮ್ಮ ದೇಶದ ನೂರು ಆಸೆಗಳನ್ನು ಬಲಿ ತೆಗೆದುಕೊಂಡದ್ದನ್ನು ನೋಡಿ ನಿಟ್ಟುಸಿರುಬಿಟ್ಟಿದ್ದೇವೆ. ಈ ಜೋಡಿ ಹಾಗೆಲ್ಲ ಮಾಡಲಿಕ್ಕಿಲ್ಲ. ಇವರು ಪೀಸ್ ಎಂಡ್ ಸ್ಪೋರ್ಟ್ಸ್ ಫೌಂಡೇಶನ್‌ನ ರಾಯಭಾರಿಗಳು. ವಿಶ್ವಶಾಂತಿಯ ಪ್ರಚಾರಕರು. ಕೊನೆಪಕ್ಷ ತಮ್ಮಿಬ್ಬರ ನಡುವೆ ಶಾಂತಿ ಕದಡದಿರುವಂತೆ ನೋಡಿಕೊಳ್ಳುತ್ತಾರೆ ಎಂದು ಆಶಿಸೋಣ!!

-ಮಾವೆಂಸ

1 comments:

ಧರಿತ್ರಿ ಹೇಳಿದರು...

ಮಾವೆಂಸ ಸರ್..
ನಾನು ಚಿತ್ರಾ ಕರ್ಕೇರಾ ಅಂತ. ಹೊಸದಿಗಂತ ಪತ್ರಿಕೆಯ ಪುರವಣಿ ವಿಭಾಗ ನೋಡಿಕೊಳ್ಳುತ್ತಿದ್ದೇನೆ. ನಿಮ್ಮ ಬಳಕೆ ಬಳುವಳಿ ಪತ್ರಿಕೆಯನ್ನು ನೋಡಬೇಕು. ಕಳುಹಿಸಿಕೊಡಲು ಸಾಧ್ಯವೇ? ಅಥವಾ ಬೆಂಗಳೂರಿನಲ್ಲಿ ಎಲ್ಲಿ ವಿಚಾರಿಸಬೇಕು?
ನಿಮ್ಮ ಪ್ರತಿಕ್ರಿಯೆಗೆ

hosasuppliment@gmail.com

-ಇಂತೀ
ಚಿತ್ರಾ ಕರ್ಕೇರಾ

 
200812023996