ಬುಧವಾರ, ಡಿಸೆಂಬರ್ 22, 2010

ಫ್ಲೋರೈಡ್ ಎಂಬ ಸೂಯಿಸೈಡ್ ವ್ಯವಹಾರ!






ಟೂತ್‌ಪೇಸ್ಟ್, ಟೂತ್‌ಪೇಸ್ಟ್....


"ಪುಟ್ಟಾ, ಹಲ್ಲು ಬ್ರಶ್ ಮಾಡಿದೆಯಾ?" ಆಗ ತಾನೇ ಎದ್ದ ಮಗನಿಗೆ ತಾಯಿ ವಿಚಾರಿಸುವ ಪರಿ. ಅಮ್ಮನ ಕಾಳಜಿ. ನಿಮ್ಮ ಕಣ್ಣಲ್ಲಿ ಮೆಚ್ಚುಗೆಯ ಸರ್ಟಿಫಿಕೇಟ್. ಇದೇ ಅಭಿಪ್ರಾಯ ಮುಂದಿನ ಒಂದು ಡಜನ್ ಪ್ಯಾರಗಳನ್ನು ಗಂಭೀರವಾಗಿ ನೀವು ಓದಿದ್ದೇ ಆದರೆ ಗಾಯಬ್!
ಅತ್ಯಂತ ಕಡಿಮೆ ವೆಚ್ಚಕ್ಕೆ ತಯಾರಾಗುವ ಟೂತ್‌ಪೇಸ್ಟ್‌ಗಳು ೧೦೦ ಗ್ರಾಂಗೆ ೧೫ರಿಂದ ೪೦ ರೂ.ವರೆಗೂ ಮಾರಾಟದ ಬೆಲೆ ಹೊಂದಿವೆ. ಬಹುಪಾಲು ಮೊತ್ತವನ್ನು ತಯಾರಕರು ಪ್ಯಾಕಿಂಗ್ ಶ್ರೀಮಂತಿಕೆಗೆ ಹಾಗೂ ಜಾಹೀರಾತು ವಿಜೃಂಭಣೆಗೆ ವಿನಿಯೋಗಿಸುವುದೇ ಟೂತ್‌ಪೇಸ್ಟ್ ಮಾರುಕಟ್ಟೆಯ ವಿಶೇಷ. ಹಾಗಿದ್ದೂ ಅವರು ನಮಗೆ ಉಣಿಸುತ್ತಿರುವುದು ವಿಷ!
ಮಾರುಕಟ್ಟೆಯಲ್ಲಿರುವ ಟೂತ್‌ಪೇಸ್ಟ್‌ಗಳಲ್ಲಿರುವುದು ಫ್ಲೋರೈಡ್ ಎಂಬ ವಿಲನ್. ವಿಪರ್ಯಾಸವೆಂದರೆ, ಈ ಫ್ಲೋರಿಡೇಷನ್ ಕಾರಣದಿಂದಾಗಿಯೇ ಟೂತ್‌ಪೇಸ್ಟ್ ಬೆಲೆ ಸಾಮಾನ್ಯಕ್ಕಿಂತ ಹತ್ತು ರೂಪಾಯಿ ಹೆಚ್ಚು. ಈ ಹಿಂದೆ ಅಯೋಡಿನ್‌ನ್ನು ಉಪ್ಪಿಗೆ ಬೆರೆಸುವ ವಿಚಾರದಲ್ಲಿ ಕಡ್ಡಾಯದ ಕಾನೂನು ತರಲು ಯಶಸ್ವಿಯಾದ ಉಪ್ಪು ತಯಾರಕ ಬೃಹತ್ ಕಂಪನಿಗಳ ಲಾಬಿ ಗೊತ್ತಿದ್ದವನಿಗೆ ಈ ಫ್ಲೋರೈಡ್ ಬೆರೆಸುವಿಕೆಯ ಹಿಂದಿನ ಅಂತಹ ಪುಟ್ಟ ಅನುಮಾನ ಕಾಡಬಹುದು.
೧೯೯೭ರಲ್ಲಿ ಅಮೆರಿಕದ ಡೆಂಟಲ್ ಅಸೋಸಿಯೇಷನ್ ಟೂತ್‌ಪೇಸ್ಟ್ ತಯಾರಕರ ಸಹಕಾರದಿಂದ ಒಂದು ಸಂಶೋಧನೆ ನಡೆಸುತ್ತದೆ. ಓರ್ವ ವ್ಯಕ್ತಿ ಒಂದು ದಿನಕ್ಕೆ ಶಿಫಾರಸು ಮಾಡಿದಂತೆ ಒಂದು ಗ್ರಾಂ ಟೂತ್‌ಪೇಸ್ಟ್‌ನಿಂದ ಹಲ್ಲು ತಿಕ್ಕಿದರೆ ವಸಡಿನ ಮೂಲಕ ದೇಹದೊಳಗೆ ೦.೩ರಿಂದ ೦.೪ ಗ್ರಾಂಗಳಷ್ಟು ಫ್ಲೋರೈಡ್ ಪೂರೈಕೆಯಾಗುತ್ತದೆ. ಅಂದರೆ ಒಂದು ದಿನಕ್ಕೆ ಮನುಷ್ಯನಿಗೆ ಅಗತ್ಯವಾದ ಫ್ಲೋರೈಡ್‌ನ ಅರ್ಧ ಭಾಗ ಸಿಕ್ಕಂತೆ. ಇದು ಪ್ರತಿ ದಿನ ಒಮ್ಮೆ ಮಾತ್ರ ಬ್ರಶ್ ಮಾಡಿರುವವರ ಲೆಕ್ಕ. ಊಹಿಸಿಕೊಳ್ಳಿ, ಊಟಕ್ಕೆ ಮುನ್ನ - ಮಲಗುವ ಮೊದಲು ಎಂದು ದಿನಕ್ಕೆ ೩-೪ ಬಾರಿ ಬ್ರಶ್ ಮಾಡುವವರ ಗತಿ?
ಅಷ್ಟಕ್ಕೂ ಫ್ಲೋರೈಡ್ ನಮ್ಮ ದೇಹಕ್ಕೆ ನಾನಾ ರೀತಿಯಲ್ಲಿ ಒದಗುತ್ತಿರುತ್ತದೆ. ದೊಡ್ಡ ಪ್ರಮಾಣದಲ್ಲಿ ಮನುಷ್ಯನಿಗೆ ಫ್ಲೋರೈಡ್ ಸೇರ್ಪಡೆಯಾಗುವುದು ಕುಡಿಯುವ ನೀರಿನಿಂದ. ಹಾಗೆಯೇ ಮೀನು, ಟೀಗಳಲ್ಲಿ ಫ್ಲೋರೈಡ್ ಪ್ರಮಾಣ ಶ್ರೀಮಂತ. ಆಹಾರ ಪದಾರ್ಥ, ಅದರಲ್ಲೂ ರಾಸಾಯನಿಕ ಹಾಗೂ ಕ್ರಿಮಿನಾಶಕಗಳನ್ನು ಬಳಸಿ ಬೆಳೆದ ಆಹಾರ ಧಾನ್ಯಗಳಲ್ಲಿ ಫ್ಲೋರೈಡ್ ಪ್ರಮಾಣ ವಿಪರೀತ. ಅಂದಮೇಲೆ ಮನುಷ್ಯನಿಗೆ ಬೇಕಾದ ದಿನಂಪ್ರತಿ ೦.೬ ಗ್ರಾಂ ಫ್ಲೋರೈಡ್ ತಾನೇತಾನಾಗಿ ಲಭ್ಯವಾಗಿರುತ್ತದೆ. ಇಷ್ಟರಮೇಲೆ ಟೂತ್‌ಪೇಸ್ಟ್‌ಗೆ ಫ್ಲೋರೈಡ್ ಬೆರೆಸುವುದೆಂದರೆ ವಿಷ ಉಣ್ಣಿಸಿದಂತೆಯೇ ಸರಿ.
ಭಾರತದಲ್ಲಿ, ೧೯೩೩ರಷ್ಟು ಹಿಂದೆಯೇ ಮದ್ರಾಸ್ ಆಡಳಿತವಿದ್ದಲ್ಲಿ ಫ್ಲೋರೈಡ್‌ನ ಹೆಚ್ಚು ಸೇವನೆಯ ಪ್ರಕರಣಗಳು ವರದಿಯಾಗಿದ್ದವು. ಫ್ಲೋರೋಸಿಸ್ ಸಮಸ್ಯೆಯನ್ನು ಆಗ ‘ಮೋಟೆಡ್ ಎನಾಮೆಲ್’ ಎಂದು ಕರೆಯಲಾಗುತ್ತಿತ್ತು. ಫ್ಲೋರೈಡ್‌ನ್ನು ಸೀಸಕ್ಕಿಂತ ಹೆಚ್ಚು ವಿಷಕಾರಿ ಎಂದು ಪರಿಗಣಿಸಲಾಗಿದೆ. ಅರ್ಸೆನಿಕ್‌ಗಿಂತ ಚೂರೇ ಚೂರು ಕಡಿಮೆ ವಿಷವಷ್ಟೇ. ಮಲೇಸಿಯಾದ ಉಡುಸಾನ್ ಕನ್ಸ್ಯೂಮರ್ ಎಂಬ ಪತ್ರಿಕೆ ಫ್ಲೋರೈಡ್‌ನ್ನು ಸಯನೇಡ್ ಎಂದೇ ೨೦೦೦ದಲ್ಲಿ ವಿವರಿಸಿತ್ತು.
೧೯೯೦ ಹಾಗೂ ೯೧ರಲ್ಲಿ ಅಮೆರಿಕದಲ್ಲಿ ನ್ಯಾಷನಲ್ ಟ್ಯಾಕ್ಸಿಕೋಲಜಿ ಪ್ರೋಗ್ರಾಂ (ಎಲ್‌ಟಿಸಿ) ನಡೆಸಿದ ಸಂಶೋಧನೆಗಳಿಂದ ಫ್ಲೋರೈಡ್ ಬಾಲ್ಯಾವಸ್ಥೆಯ ಕ್ಯಾನ್ಸರ್‌ಗಳಿಗೆ ಕಾರಣವಾಗುತ್ತದೆ ಎಂದೇ ಹೇಳಲಾಗಿತ್ತು. ಭಾರತದ ಮಟ್ಟಿಗೆ ಟೂತ್‌ಪೇಸ್ಟ್‌ಗಳಲ್ಲಿ ಫ್ಲೋರೈಡ್ ಸೇರಿಸುವುದನ್ನು ಅಕ್ಷರಶಃ ನಿಶೇಧಿಸಬೇಕಿತ್ತು. ೧೯೮೬ರ ದಿನಗಳಲ್ಲಿಯೇ ರಾಜೀವ್ ಗಾಂಧಿ ರಾಷ್ಟ್ರೀಯ ಕುಡಿಯುವ ನೀರು ಯೋಜನೆ ಜಾರಿಗೊಳಿಸುವಾಗ ಹಲವು ರಾಜ್ಯಗಳಲ್ಲಿ ನೀರಿನಲ್ಲಿರುವ ಫ್ಲೋರೈಡ್ ಅಂಶವನ್ನು ಲೆಕ್ಕಹಾಕಲಾಗಿತ್ತು. ಪಶ್ಚಿಮ ಬಂಗಾಳದಲ್ಲಿ ೧೨ ಪಿಪಿಎಂ, ಒರಿಸ್ಸಾದಲ್ಲಿ ೮.೨ರಿಂದ ೧೩.೨ ಪಿಪಿಎಂ, ಗುಜರಾತ್‌ನಲ್ಲಿ ಗರಿಷ್ಠ ೧೦.೭ ಪಿಪಿಎಂ, ಕರ್ನಾಟಕದಲ್ಲಿ ೦.೮ರಿಂದ ೭.೪ ಪಿಪಿಎಂವರೆಗೆ ಫ್ಲೋರೈಡ್ ಇರುವುದು ಪತ್ತೆಯಾಗಿತ್ತು. ವಾಸ್ತವವಾಗಿ, ನೀರಿನಲ್ಲಿರಬೇಕಾದ ಫ್ಲೋರೈಡ್ ಪ್ರಮಾಣ ೧.೫ ಪಿಪಿಎಂ ದಾಟುವಂತಿಲ್ಲ! ಮೇಲಿನ ರಾಜ್ಯಗಳಲ್ಲದೆ ತಮಿಳುನಾಡು, ಮಹಾರಾಷ್ಟ್ರ, ರಾಜಾಸ್ತಾನ, ಜಮ್ಮು ಮತ್ತು ಕಾಶ್ಮೀರ..... ಎಲ್ಲೆಂದರೆ ಅಲ್ಲಿ ಫ್ಲೋರೈಡ್ ಪಿಪಿಎಂ ನೀರಿನಲ್ಲಿ ಅತ್ಯಧಿಕ.
ಕುಡಿಯುವ ನೀರಿನಲ್ಲಿ ಅತ್ಯಧಿಕ ಫ್ಲೋರೈಡ್ ಹೊಂದಿರುವ ದೇಶಗಳು ವಿಶ್ವದಲ್ಲಿ ಒಟ್ಟು ೨೩. ಅದರಲ್ಲಿ ಭಾರತವೂ ಒಂದು. ಭಾರತದಂತ ದೇಶಗಳಲ್ಲಿ ಹೀಗಾಗಲು ಹಸಿರು ಕ್ರಾಂತಿಯ ಹುಚ್ಚು ಕಾರಣೀಭೂತ. ರಾಸಾಯನಿಕಗಳನ್ನು ಕೃಷಿಯಲ್ಲಿ ಸುರಿಯಲಾಗುತ್ತಿದೆ. ಇದರ ಬಹುಪಾಲು ಶೇಷ ಬಳಕೆಯಾಗದೆ ನೀರನ್ನು ಸೇರುತ್ತದೆ. ಪಾಸ್ಫೇಟ್ ರಾಸಾಯನಿಕ, ಕೊಳಚೆ, ಕ್ರಿಮಿನಾಶಕಗಳೇ ಹಿನ್ನಲೆಯಲ್ಲಿವೆ ಎಂದು ೧೯೯೭ರಲ್ಲಿ ಪರಿಸರ ಸಂರಕ್ಷಣಾ ಸಂಸ್ಥೆ ಹೇಳೀತ್ತು.
ಹೀಗಿದ್ದೂ ಮಕ್ಕಳ ಟೂತ್‌ಪೇಸ್ಟ್‌ನಲ್ಲಿಯೂ ಧಾರಾಳವಾಗಿ ಫ್ಲೋರೈಡ್ ಸೇರಿಸುವ ಭಯಾನಕ ಪ್ರವೃತ್ತಿ ಕಂಡುಬಂದಿದೆ. ಒಂದು ಲೆಕ್ಕದಲ್ಲಿ, ಎರಡು ವರ್ಷದ ಮಗು ಬ್ರಶ್‌ಗೆ ಹಾಕಿದ ಅರ್ಧದಷ್ಟು ಪೇಸ್ಟ್‌ನ್ನು ತಿಂದುಬಿಡುತ್ತದೆ! ಒಂದೊಮ್ಮೆ ಟೂತ್‌ಪೇಸ್ಟ್‌ನಲ್ಲಿ ಫ್ಲೋರೈಡ್ ಇತ್ತೆಂದಾದರೆ ಪೋಷಕರ ನಿರೀಕ್ಷೆಗೆ ವ್ಯತಿರಿಕ್ತವಾದ ಬೆಳವಣಿಗೆ ಹಲ್ಲಿನ ಬ್ರಶಿಂಗ್‌ನಿಂದ ಆದಂತೆ. ದಂತ ತಜ್ಞರು ಹಾಗೆಂದೇ ತಂದೆತಾಯಿಯರೇ ಬ್ರಶ್ ಮಾಡಿಸಬೇಕೆಂದು ಮತ್ತು ಮಕ್ಕಳ ಬಾಯಿಯನ್ನು ಸ್ವಚ್ಛವಾಗಿ ತೊಳೆಯಬೇಕೆಂದೂ ಬಯಸುತ್ತಾರೆ. ವಿಪರ್ಯಾಸವೆಂದರೆ, ನೀರಿನಲ್ಲಿಯೇ ಧಾರಾಳ ಫ್ಲೋರೈಡ್ ಬೆರೆತಿರುವಾಗ ಏನು ಮಾಡುವುದು?
ಬ್ರಾಂಡ್ ಟೂತ್‌ಪೇಸ್ಟ್‌ಗಳ ಫ್ಲೋರೈಡ್ ಮಟ್ಟವನ್ನು ನೆನಪಿನಲ್ಲಿಟ್ಟುಕೊಳ್ಳಿ. ಕೋಲ್ಗೇಟ್ ಕಿಡ್ಸ್‌ನಲ್ಲಿ ೪೯೨ ಪಿಪಿಎಂಇದೆ. ಈ ಕಂಪನಿಯ ವಯಸ್ಕರ ಐದು ಮಾದರಿಯಲ್ಲಿ ೫೨೭ರಿಂದ ೭೯೭ ಪಿಪಿಎಂವರೆಗೆ ಫ್ಲೋರೈಡ್ ಬೆರೆಸಲಾಗಿದೆ. ಪೆಪ್ಸೊಡೆಂಟ್ ಕಿಡ್ಸ್ ಟೂತ್‌ಪೇಸ್ಟ್‌ನ ಟಾಮ್ ಎಂಡ್ ಜರ್ರಿ, ಬಾರ್ಬಿ ಮಾದರಿಗಳಲ್ಲಿ ಅನುಕ್ರಮವಾಗಿ ೯೧೧ ಹಾಗೂ ೯೧೭ ಪಿಪಿಎಂ ಫ್ಲೋರೈಡ್ ಇದೆ. ಅದೇ ಪೆಪ್ಸೊಡೆಂಟ್‌ನ ನಾಲ್ಕು ಹಿರಿಯರ ಟೂತ್‌ಪೇಸ್ಟ್‌ಗಳಲ್ಲಿ ಮಕ್ಕಳದರಲ್ಲಿರುವುದಕ್ಕಿಂತ ಕಡಿಮೆ, ೬೦೩ರಿಂದ ೬೯೩ ಪಿಪಿಎಂ ಫ್ಲೋರೈಡ್ ಮಾತ್ರ ಇದೆ! ಮುಖ್ಯವಾಗಿ, ಟೂತ್‌ಪೇಸ್ಟ್ ತಯಾರಕರು ಮಕ್ಕಳಿಗೆ ಮತ್ತು ಹಿರಿಯರಿಗೆ ವಿಭಿನ್ನ ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿರುವ ವಿವೇಚನೆಯನ್ನೇ ಪ್ರಶ್ನಿಸಬೇಕಾಗಿದೆ.
ನಿಜ, ಸರಳ ವಾದದಲ್ಲಿ ಫ್ಲೋರೈಡ್ ಮನುಷ್ಯನಿಗೆ ಮಾಡುವ ಉಪಕಾರಗಳನ್ನು ಪಟ್ಟಿ ಮಾಡಬಹುದು. ಮೂಳೆ ಬೆಳವಣಿಗೆಗೆ, ಹಲ್ಲಿನ ಎನಾಮೆಲ್ ರಚನೆಗೆ ಫ್ಲೋರೈಡ್ ಬೇಕು. ಎನಾಮೆಲ್‌ಗೆ ದೃಢತೆ ಕೊಡುವ ಜೊತೆಗೆ ಬ್ಯಾಕ್ಟೀರಿಯಾಗಳಿಂದ ರಕ್ಷಣೆ ಒದಗಿಸುತ್ತದೆ. ಅಷ್ಟೇಕೆ, ಹಲ್ಲು ಹುಳುಕಾಗುವುದರಿಂದಲೂ ಫ್ಲೋರೈಡ್ ಸಂರಕ್ಷಿಸುವುದು ಖಚಿತ. ಆದರೆ ನಿಗದಿತ ಮಟ್ಟ ದಾಟಿ ಫ್ಲೋರೈಡ್ ದೇಹಕ್ಕೆ ಸೇರುವುದರಿಂದಾಗುವ ಅಡ್ಡ ಪರಿಣಾಮಗಳು ‘ಹಲ್ಲು ಮೀರಿದ’ ವಿಚಾರ.
ಅಹ್ಮದಾಬಾದ್‌ನ ಪ್ರತಿಷ್ಠಿತ ಗ್ರಾಹಕ ಪರ ಸಂಸ್ಥೆ ಇನ್‌ಸೈಟ್ ನೀಡುವ ಸಲಹೆಗಳು ಅನುಸರಿಸಲು ಯೋಗ್ಯ. ‘ಮಕ್ಕಳಿಗೆ ಫ್ಲೋರೈಡ್ ಬೆರೆತ ಹಿರಿಯರ ಟೂತ್‌ಪೇಸ್ಟ್ ಬೇಡ. ಮಕ್ಕಳು ಮತ್ತು ಹಿರಿಯರಿಬ್ಬರಿಗೂ ಮಾರುಕಟ್ಟೆಯಲ್ಲಿ ಲಭ್ಯವಿರುವ ಫ್ಲೋರೈಡ್ ಬೆರೆತ ಟೂತ್‌ಪೇಸ್ಟ್ ಬಳಸದಿರುವುದೇ ಕ್ಷೇಮ. ಕೇವಲ ವೈದ್ಯರು ಶಿಫಾರಸು ಮಾಡಿದ ಸಂದರ್ಭಗಳಲ್ಲಿ ಮಾತ್ರ ಫ್ಲೋರೈಡ್ ಪೇಸ್ಟ್ ಬಳಸಬೇಕು. ಮಕ್ಕಳು ಬ್ರಶ್ ಮಾಡುವಾಗಲಂತೂ ಹಿರಿಯರು ಅದನ್ನು ಅವು ತಿನ್ನದಂತೆ ಮೇಲ್ವಿಚಾರಣೆ ತೋರಲೇಬೇಕು.’
ಟೂತ್‌ಪೇಸ್ಟ್ ಕೊಳ್ಳುವಾಗ ಬರೀ ಫ್ಲೋರೈಡ್ ಮಾತಲ್ಲ. ಅತ್ಯಂತ ಸಣ್ಣ ನಾಜಲ್‌ನ ಟ್ಯೂಬ್‌ಗೆ ಆದ್ಯತೆ ನೀಡಬೇಕು. ದೊಡ್ಡ ನಾಜಲ್‌ನ ಟ್ಯೂಬ್‌ನಲ್ಲಿ ಒಮ್ಮೆಗೆ ಹೆಚ್ಚು ಪೇಸ್ಟ್ ಹೊರಬಿದ್ದು ವ್ಯರ್ಥವಾಗುತ್ತದೆ. ಡ್ರಗ್ಸ್-ಕಾಸ್ಮೆಟಿಕ್ ಕಾನೂನಿನ ಪ್ರಕಾರ ಟೂತ್‌ಪೇಸ್ಟ್‌ಗಳು ತಮ್ಮೊಳಗಿನ ಪದಾರ್ಥಗಳನ್ನು ಪ್ಯಾಕ್‌ನಲ್ಲಿ ಉಲ್ಲೇಖಿಸಲೇಬೇಕು. ಕಂಪನಿಗಳು ಚಾಪೆ ಕೆಳಗೆ ತೂರಿಬಿಡುತ್ತವೆ. ‘ಈ ಪೇಸ್ಟ್ ೧೦೦೦ ಪಿಪಿಎಂನವರೆಗೆ ಫ್ಲೋರೈಡ್ ಹೊಂದಿವೆ’ ಎಂದುಬಿಡುತ್ತವೆ. ಇದು ಕಾನೂನುಬಾಹಿರವಷ್ಟೇ ಅಲ್ಲ, ಬಳಕೆದಾರ ಅಸಲಿ ಫ್ಲೋರೈಡ್ ಇರುವ ಪ್ರಮಾಣ ಗೊತ್ತಾಗದೆ ಗೊಂದಲಕ್ಕೀಡಾಗುತ್ತಾನೆ.
ಯಾಕೋ ಗೊತ್ತಿಲ್ಲ, ಈವರೆಗೂ ವೈದ್ಯ ಪ್ರಪಂಚ ಫ್ಲೋರೈಡ್‌ಯುಕ್ತ ಟೂತ್‌ಪೇಸ್ಟ್ ಕುರಿತಂತೆ ಒಂದು ಜಾಗೃತಿಯ ಧ್ವನಿ ಎತ್ತಿಲ್ಲ. ತಯಾರಕರು ಸಾವಿರ ಹೇಳಲಿ,
ಯಾಕೋ ಗೊತ್ತಿಲ್ಲ, ಈವರೆಗೂ ವೈದ್ಯ ಪ್ರಪಂಚ ಫ್ಲೋರೈಡ್‌ಯುಕ್ತ ಟೂತ್‌ಪೇಸ್ಟ್ ಕುರಿತಂತೆ ಒಂದು ಜಾಗೃತಿಯ ಧ್ವನಿ ಎತ್ತಿಲ್ಲ. ತಯಾರಕರು ಸಾವಿರ ಹೇಳಲಿ, ಇಂದಿನ ಪರಿಸ್ಥಿತಿಯಲ್ಲಿ ಫ್ಲೋರೈಡ್‌ರಹಿತ ಟೂತ್‌ಪೇಸ್ಟ್ ಬಳಸುವುದು ಬುದ್ಧಿವಂತಿಕೆ. ಆದರೆ ಒಂದು ಪ್ರಶ್ನೆ ಕಾಡದಿರದು. ಫ್ಲೋರೈಡ್ ಇಲ್ಲದ ಟೂತ್‌ಪೇಸ್ಟ್‌ಗಳನ್ನು ಕಂಡುಹಿಡಿಯುವುದು ಹೇಗೆ? ನಿಜಕ್ಕಾದರೆ ಇದರ ಪರಿಹಾರ ತೀರಾ ಸುಲಭ. ಪ್ರತಿ ಟೂತ್‌ಪೇಸ್ಟ್ ಬ್ರಾಂಡ್‌ನ ಕವರ್‌ನ ಮೇಲೆ ತುಸು ಸಣ್ಣ ಅಕ್ಷರದಲ್ಲಿ ಅದರೊಳಗೆ ಬಳಸಿರುವ ಪದಾರ್ಥಗಳ ಪಟ್ಟಿ ಇರುತ್ತದೆ. ಆ ಪಟ್ಟಿಯಲ್ಲಿ ಫ್ಲೋರೈಡ್ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಸುಮ್ಮನೆ ಕೆಲವೇ ಕೆಲವು ಫ್ಲೋರೈಡ್‌ರಹಿತ ಟೂತ್‌ಪೇಸ್ಟ್ ಬ್ರಾಂಡ್‌ಗಳನ್ನು ಹೆಸರಿಸುವುದಾದರೆ, ಅಜಂತಾ ಹೆಲ್ತ್, ಸ್ಮೈಲೆ ಟೂತ್‌ಪೇಸ್ಟ್, ಶಕ್ತಿ........
ನೀವೇನಂತೀರೋ?



-ಮಾವೆಂಸ
-08183 236068, 9886407592, 9241178962
ಇ ಮೇಲ್- mavemsa@gmail.com

 
200812023996