ಭಾನುವಾರ, ಫೆಬ್ರವರಿ 21, 2010

ಹೆಸರಿಗೆ ‘ಅಡಿಕೆ ಪತ್ರಿಕೆ’ - ಓದೋಕೆ ಸಂಕೋಚ ಏಕೆ?


ಶ್ರೀಪಡ್ರೆ -----
ವಾರಕ್ಕೊಮ್ಮೆ........ 11

ಬರಹಗಾರರಿಗೆ ತಮ್ಮ ಲೇಖನ ಪ್ರಕಟಗೊಳ್ಳುವುದು ಖುಷಿ ವಿಚಾರ. ಜೊತೆಗೆ ಅಂಚೆಯಲ್ಲಿ ಗೌರವ ಪ್ರತಿ ಬಂದಾಗ ಸಿಕ್ಕುವ ಆನಂದ... ಆಹಾ! ದುರಂತ ನೋಡಿ, ಇಂದು ತರಂಗ ಬಳಗ ಹಾಗೂ ಕರ್ಮವೀರವನ್ನು ಹೊರತುಪಡಿಸಿದರೆ ಕನ್ನಡದ ಬಹುಪಾಲು ಪ್ರಮುಖ ಪತ್ರಿಕೆಗಳಾವುವೂ ಗೌರವ ಪ್ರತಿ ಕಳುಹಿಸುವ ಸಂಪ್ರದಾಯವನ್ನು ಇಟ್ಟುಕೊಂಡಿಲ್ಲ. ಆ ಮೂಲಕ ಅವು ತಮ್ಮ ಮುಖ್ಯ ಜವಾಬ್ದಾರಿಯನ್ನು ಕಳೆದುಕೊಂಡಿವೆ. ಸರಿಯೇ? ನೀವು ಹೇಳಬೇಕು.
ಆದರೆ ದೂರದ ಪುತ್ತೂರಿನಿಂದ ಪ್ರಕಟಗೊಳ್ಳುವ ‘ಅಡಿಕೆ ಪತ್ರಿಕೆ’ ಇವತ್ತಿಗೂ ಗೌರವ ಪ್ರತಿ ಕಳುಹಿಸುವ ಸಂಸ್ಕೃತಿಯನ್ನು ಬಿಟ್ಟಿಲ್ಲ. ಅಷ್ಟೇಕೆ, ಯಾರ ಕುರಿತು ಲೇಖನ ಪ್ರಕಟವಾಗಿದೆಯೋ ಆ ವ್ಯಕ್ತಿಗೂ ಒಂದು ಕಾಂಪ್ಲಮೆಂಟರಿ ಕಾಪಿ ಮುದ್ದಾಂ ಹೋಗುತ್ತದೆ! ಅಷ್ಟೇಕೆ, ವಿಜಯ ಕರ್ನಾಟಕವೂ ನಾಚಿಕೊಳ್ಳುವಂತೆ ಸಾಕಷ್ಟು ಗಟ್ಟಿ ಚೆಕ್ ಕೂಡ ಲೇಖಕರಿಗೆ ನಿಕ್ಕಿ!!

ಕೃಷಿ ನಿಯತಕಾಲಿಕಗಳಿಗೆ ಮಾದರಿ ಎನ್ನುವಂತಾದ್ದು ‘ಅಡಿಕೆ ಪತ್ರಿಕೆ’ ಮಾಸಿಕ. ನುಡಿಚಿತ್ರಕಾರ, ನೆಲ - ಜಲ ವಿಚಾರತಜ್ಞ ಶ್ರೀಪಡ್ರೆಯವರ ನೇತೃತ್ವದಲ್ಲಿ ರೂಪಗೊಂಡಿರುವ ‘ಅಪ’ಕ್ಕೆ ಈಗ ೨೨ರ ಪ್ರಾಯ. ಪ್ರಕಟಿಸುವ ಪ್ರತಿ ವಿಷಯವನ್ನು ಹಲವು ಕೋನಗಳಿಂದ ವಿಶ್ಲೇಷಿಸಿಯೇ ಪ್ರಕಟಿಸುವ ಇದರ ಧ್ಯೇಯ ರೈತಪರವಾದದ್ದು. ಇದ್ದಕ್ಕಿದ್ದಂತೆ ಲಾಭಕರ ಬೆಳೆ, ಭರ್ಜರಿ ಆದಾಯ ಎನ್ನುವಂತ ಸುಳ್ಳು ಸುಳ್ಳೇ ಲೇಖನಗಳು ಇದರಲ್ಲಿ ಪ್ರಕಟವಾಗುವುದಿಲ್ಲ. ಅನುಭವಿ ರೈತರ, ಕೃಷಿಲೋಕದ ಲೇಖಕರ ಬರಹಗಳು ಸುಲಭವಾಗಿ ಓದಿಸಿಕೊಂಡು ಹೋಗುತ್ತವೆ. ಹಾಗೆಯೇ ಎರೆಗೊಬ್ಬರ, ನೀರು ಇಂಗಿಸುವಿಕೆ, ಹಲಸು ಮುಂತಾದ ಬೆಳೆಗಳ ಮೌಲ್ಯವರ್ಧನೆ....... ಹೀಗೆ ಒಂದು ವಿಚಾರದಲ್ಲಿ ರೈತರಿಗೆ ಮನದಟ್ಟಾಗುವಂತೆ ಬರಹ ಆಂದೋಲನವನ್ನೇ ಹಮ್ಮಿಕೊಳ್ಳುವುದು ಅಡಿಕೆ ಪತ್ರಿಕೆಯ ಹೆಗ್ಗಳಿಕೆ. ಬಹುಷಃ ಕೃಷಿಕರ ಕೈಯಲ್ಲಿ ಮೊತ್ತಮೊದಲ ಬಾರಿಗೆ ಕತ್ತಿ, ಗುದ್ದಲಿಯ ಜಾಗದಲ್ಲಿ ಪೆನ್ನು ಹಿಡಿಸಿದ ಶ್ರೇಯಸ್ಸೂ ಅಪಕ್ಕೆ. ಶ್ರೀಪಡ್ರೆ ಹಿಂಸರಿದಿದ್ದ ಕೆಲಕಾಲ ಅಪ ಕಳೆಗುಂದಿತ್ತು. ಮತ್ತೆ ಈಗ ನಳನಳಿಸುತ್ತಿದೆ.
ಬಹುಷಃ ಇದಕ್ಕೆ ‘ಅಡಿಕೆ ಪತ್ರಿಕೆ’ ಎಂಬ ಶೀರ್ಷಿಕೆಯಿರುವುದೇ ಒಂದು ಸಮಸ್ಯೆಯಾಗಿರಲಿಕ್ಕೆ ಸಾಕು. ಅಡಿಕೆ ಬೆಳೆಯ ಹೊರತಾದ ಕೃಷಿಕರು ಇದು ತನಗಲ್ಲ ಎಂದುಕೊಂಡುಬಿಡುತ್ತಾರೆ. ಅಡಿಕೆ ಪತ್ರಿಕೆ ಹಾಗೇನೂ ಇಲ್ಲ. ಇದು ಎಲ್ಲ ಬೆಳೆಗಳ ಉಳುಮೆದಾರರಿಗೂ ಅನುಕೂಲಕರ. ಅದು ಮಾತ್ರವಲ್ಲ, ಕೃಷಿ ಜಗತ್ತಿನ ಮಾಹಿತಿ ನಮ್ಮಲ್ಲಿರಬೇಕು ಎಂದು ಬಯಸುವವರೆಲ್ಲ ತರಿಸಿಕೊಳ್ಳಲೇಬೇಕು. ಮೊದಲು ‘ಅರೆಕಾ ನ್ಯೂಸ್’ ಎಂಬ ಹೆಸರಿನಲ್ಲೂ ಸ್ವಲ್ಪ ಕಾಲ ಪ್ರಕಟಗೊಳ್ಳುತ್ತಿತ್ತು ಎಂದು ಓದಿದಂತೆ ನೆನಪು.
ಯಾವುದೇ ಮುಖ್ಯವಾಹಿನಿಯ ಪತ್ರಿಕೆ ಅಚ್ಚರಿಪಡುವ ಮಟ್ಟಿಗೆ ಅಪ ಅಂತರ್ಜಾಲವನ್ನು ಬಳಸಿಕೊಳ್ಳುತ್ತಿದೆ. ಇಂದು ಅಪದ ನೆಟ್ ಆವೃತ್ತಿ ಲಭ್ಯ. ಬೇಕಿದ್ದರೆ ನೀವೇ ಹುಡುಕಿಕೊಳ್ಳಿ. ಬೇಕೆಂದೇ ಆ ಲಿಂಕ್‌ನ್ನು ತಿಳಿಸುತ್ತಿಲ್ಲ. ಹಾಗೆಯೇ ಅಅದರ ಚಂದಾದರದ ಬಗ್ಗೆಯೂ ಉಸುರುತ್ತಿಲ್ಲ. ಆಸಕ್ತರಿಗೆ ಇಷ್ಟು ಮಾಹಿತಿ ಸಾಕು. ಹುಡುಕಿಕೊಳ್ಳುತ್ತಾರೆ, ಅಲ್ಲವೇ?
ಅಡಿಕೆ ಪತ್ರಿಕೆಯ ವಿಳಾಸ -
ಅಂಚೆ ಪಟ್ಟಿಗೆ ಸಂಖ್ಯೆ ೨೯,
ಭಟ್ ಬಿಲ್ಡಿಂಗ್,
ಏಳ್ಮುಡಿ, ಪುತ್ತೂರು
-೫೭೪೨೦೧

-ಮಾ.ವೆಂ.ಸ.ಪ್ರಸಾದ್
ಮಾವಿನಸರ
ಪೋಸ್ಟ್-ಎಡಜಿಗಳೇಮನೆ
ಸಾಗರ ತಾ. ಶಿವಮೊಗ್ಗ ಜಿ.
577401
ಫೋನ್-08183 236068, 296543
9886407592
ಇ ಮೇಲ್- mavemsa@gmail.com

ಮಂಗಳವಾರ, ಫೆಬ್ರವರಿ 16, 2010

ಥರ್ಡ್ ಅಂಪೈರ್‌ಗೆ ಕೊಕ್!


ಈಗಂತೂ ಅಂಕಣದಲ್ಲಿರುವ ಅಂಪೈರ್‌ಗಳು ಯಾವುದೇ ರನ್‌ಔಟ್, ಸ್ಟಂಪಿಂಗ್ ಸಂದರ್ಭದಲ್ಲಿ ಗುಲಗುಂಜಿ ತೂಕದಲ್ಲಿಯೂ ಯೋಚಿಸುವುದಿಲ್ಲ. ಫೀಲ್ಡರ್‌ಗಳು ಮನವಿ ಸಲ್ಲಿಸುತ್ತಿದ್ದಂತೆ ಅವರ ಕೆಲಸವೆಂದರೆ, ತಮ್ಮ ಎರಡೂ ಕೈ ಬಳಸಿ ಟಿವಿ ಅಂಪೈರ್‌ಗೆ ‘ದಾರಿ ತೋರಿಸಿ’ ಎಂದು ಸಂಜ್ಞೆ ಮಾಡಿ ಸೂಚಿಸುವುದಷ್ಟೇ. ಅಂತವರಿಗೆಲ್ಲ ಶಾಕಿಂಗ್ ಸುದ್ದಿ ಬಂದಿದೆ. ಐಸಿಸಿ ಇನ್ನು ಮುಂದೆ ಮೂರನೇ ಅಂಪೈರ್ ವ್ಯವಸ್ಥೆಯನ್ನೇ ಹಿಂದಕ್ಕೆ ಪಡೆಯುತ್ತದೆ!
ಐಸಿಸಿಯ ಜನರಲ್ ಮ್ಯಾನೇಜರ್ ಡೇವ್ ರಿಚರ್ಡ್‌ಸನ್ ಈ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಬಹುಷಃ ಐಸಿಸಿಯ ಮುಂದಿನ ಕ್ರಿಕೆಟ್ ಕಮಿಟಿ ಸಭೆ ಮೇ ೧೦ರಂದು ಜರುಗಲಿದೆ. ಆ ದಿನ ಥರ್ಡ್ ಅಂಪೈರ್ ವ್ಯವಸ್ಥೆ ಉಳಿವಿನ ಬಗ್ಗೆ ವಿಸ್ತೃತ ಚರ್ಚೆ ನಡೆಯಬಹುದು. ಈಗಿನ ವಾತಾವರಣವನ್ನು ನೋಡಿದರೆ ಬರುವ ದಿನಗಳಲ್ಲಿ ರೆಫ್ರಿ ಪಕ್ಕದಲ್ಲಿ ಕುಳಿತುಕೊಳ್ಳಲು ಮೂರನೇ ಅಂಪೈರ್‌ಗೆ ಸ್ಥಳವಿಲ್ಲ!
ಇನ್ನಷ್ಟು ಗೊಂದಲಗಳಾಗುವ ಮುನ್ನ ವಾಸ್ತವವನ್ನು ಹೇಳುವುದೊಳ್ಳೆಯದು. ನಿಜ, ಭವಿಷ್ಯದಲ್ಲಿ ಥರ್ಡ್ ಅಂಪೈರ್ ಇರಲಿಕ್ಕಿಲ್ಲ. ಆದರೆ ರೆಫ್ರಿ ಪಕ್ಕದಲ್ಲಿ ಒಬ್ಬ ಅಧಿಕೃತ ಕ್ರಿಕೆಟ್ ತಜ್ಞನಂತೂ ಕುಳಿತಿರಲೇಬೇಕು. ಅವರು ಕ್ರಿಕೆಟ್ ಸ್ಲೋ ಮೋಷನ್, ಹ್ವಾಕ್ ಐಗಳಲ್ಲದೆ ಇನ್ನಷ್ಟು ದುಬಾರಿ ತಂತ್ರಜ್ಞಾನದ ಉಪಕರಣಗಳನ್ನು ಬಳಸಿ ತೆಗೆದ ಚಿತ್ರಗಳನ್ನು ನೋಡಿ ಆಟಗಾರರ ಔಟ್-ನಾಟೌಟ್ ತೀರ್ಮಾನವೀಯುತ್ತಾರೆ. ಇದೇ ಡಿಆರ್‌ಎಸ್.
ಡಿಸಿಷನ್ ರಿವ್ಯೂ ಸಿಸ್ಟಮ್‌ನ ಹೃಸ್ವ ರೂಪ ಈ ಡಿಆರ್‌ಎಸ್. ಅಂದರೆ ಪಂದ್ಯವಾಡುವ ಎರಡು ತಂಡಕ್ಕೆ ಇನ್ನಿಂಗ್ಸ್ ಒಂದರಲ್ಲಿ ತಲಾ ಮೂರು ಬಾರಿ ಅಂಕಣದ ಅಂಪೈರ್ ತೀರ್ಮಾನದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿರುತ್ತದೆ. ಒಂದೊಮ್ಮೆ ಮೇಲ್ಮನವಿಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕರೆ ಈ ಮೂರೂ ಚಾಲೆಂಜ್ ಅವಕಾಶ ಊರ್ಜಿತವಾಗುತ್ತದೆ. ಅಂಪೈರ್‌ಗಳ ತೀರ್ಮಾನವೇ ಸರಿ ಎಂದಾದರೆ ಚಾಲೆಂಜ್‌ಗಳಲ್ಲಿ ಒಂದು ನಷ್ಟ. ಇತ್ತೀಚಿನ ದಿನಗಳಲ್ಲಿ ಗ್ರಾನ್‌ಸ್ಲಾಂ ಟೆನಿಸ್‌ನ್ನು ನೋಡುವವರಿಗೆಲ್ಲ ಈ ‘ಪ್ಲೇಯರ್ ಚಾಲೆಂಜ್’ ವ್ಯವಸ್ಥೆ ಅರ್ಥವಾಗುತ್ತದೆ.
ಮೊನ್ನೆ ಮೊನ್ನೆ ಮುಕ್ತಾಯ ಕಂಡ ಇಂಗ್ಲೆಂಡ್ - ದಕ್ಷಿಣ ಆಫ್ರಿಕಾದ ಟೆಸ್ಟ್ ಸರಣಿಯಲ್ಲಿ ಈ ಡಿಆರ್‌ಎಸ್ ಸೌಲಭ್ಯ ಇತ್ತು. ಎರಡನೇ ಟೆಸ್ಟ್‌ನ ಅಂತಿಮ ಘಟ್ಟದಲ್ಲಿ ಇಂಗ್ಲೆಂಡ್‌ನ ಕೊನೆಯ ಎರಡು ವಿಕೆಟ್ ಪಡೆಯಲು ಸರ್ಕಸ್ ನಡೆಸಿದ್ದ ದ.ಆಫ್ರಿಕಾ ಈ ಡಿಆರ್‌ಎಸ್‌ನ್ನು ಹಲವು ಬಾರಿ ಬಳಸಿಕೊಂಡದ್ದು ಕ್ಲೈಮ್ಯಾಕ್ಸ್‌ಗೆ ರಂಗುರಂಗಿನ ಆಯಾಮ ನೀಡಿತ್ತು. ಹಿಂದೊಮ್ಮೆ ಅನಿಲ್ ಕುಂಬ್ಳೆ ನಾಯಕತ್ವದ ಭಾರತ ಶ್ರೀಲಂಕಾಕ್ಕೆ ಟೆಸ್ಟ್ ಪ್ರವಾಸಗೈದಾಗ ಈ ‘ಮೇಲ್ಮನವಿ ವ್ಯವಸ್ಥೆ’ ಇತ್ತು. ಅದರ ಲಾಭ ಮಾತ್ರ ಶ್ರೀಲಂಕಾಕ್ಕಾಗಿತ್ತು!
ಪ್ರಸ್ತುತ ಮೈದಾನದ ಅಂಪೈರ್‌ಗಳ ತೀರ್ಮಾನ ಶೇ.೯೨.೨ರಷ್ಟು ಸರಿಯಾಗಿರುತ್ತದಂತೆ. ಬರಿಗಣ್ಣಿನ, ವಾಸ್ತವ ವೇಗದಲ್ಲಿ ದೃಶ್ಯ ನೋಡುವ ಮಾನವ ತೀರ್ಮಾನಗಳ ಈ ಪ್ರಮಾಣ ಭೇಷ್ ಎನ್ನುವಂತದ್ದೇ. ಆದರೆ ಡಿಆರ್‌ಎಸ್ ಬಳಸಿಕೊಂಡದ್ದೇ ಆದರೆ ಈ ಸರಿ ಪ್ರಮಾಣ ಶೇ.೯೭ಕ್ಕೆ ಏರಬಲ್ಲದು. ಇಂತಹ ಸನ್ನಿವೇಶದಲ್ಲಿ, ಆಟಗಾರರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿರುವಾಗ ಮತ್ತು ಥರ್ಡ್ ಅಂಪೈರ್ ವ್ಯವಸ್ಥೆ ಡಿಆರ್‌ಎಸ್ ಒಂದೇ ಉದ್ದೇಶದ ಎರಡು ಮಾದರಿ ಎಂದು ಐಸಿಸಿಗೆ ಅನ್ನಿಸಿದೆ. ಹಾಗಾಗಿ ಡಿಆರ್‌ಎಸ್‌ನ್ನು ಉಳಿಸಿಕೊಂಡು ಟಿವಿ ಅಂಪೈರ್‌ಗೆ ತಿಲಾಂಜಲಿ ನೀಡಲು ಯೋಚಿಸಲಾಗುತ್ತಿದೆ.
ಇವತ್ತು ಡಿಆರ್‌ಎಸ್ ಪ್ರತಿ ಸರಣಿಯ ಷರತ್ತಲ್ಲ. ಅದು ಒಂದು ಸರಣಿಯಲ್ಲಿ ಅಳವಡಿಸಿಕೊಳ್ಳಲು ಬೇಕಾದ ಪರವಾನಗಿ ಪಡೆದಿದೆ. ಐಸಿಸಿ ಮಾನ್ಯತೆ ಇದೆ. ಕ್ರಿಕೆಟ್ ಭಾಷೆಯಲ್ಲಿ ಹೇಳುವುದಾದರೆ, ‘ಪಾರ್ಟ್ ಆಫ್ ಸ್ಟಾಂಡರ್ಡ್ ಟೆಸ್ಟ್ ಪ್ಲೇಯಿಂಗ್ ಕಂಡೀಷನ್’ನ ಒಂದು ಭಾಗ. ಆದರೆ ಸರಣಿಯಲ್ಲಿ ಪಾಲ್ಗೊಳ್ಳುವ ಎರಡೂ ದೇಶಗಳಿಗೆ ಇಷ್ಟವಿಲ್ಲದಿದ್ದರೆ ಇದನ್ನು ಅಳವಡಿಸಿಕೊಳ್ಳದೇ ಬಿಡಬಹುದು. ಭಾರತ-ಶ್ರೀಲಂಕಾ, ಭಾರತ-ಬಾಂಗ್ಲಾ, ಭಾರತ-ದ.ಆಫ್ರಿಕಾ... ಹೀಗೆ ಇತ್ತೀಚಿನ ಹಲವು ಸರಣಿಗಳಲ್ಲಿ ಈ ಡಿಆರ್‌ಎಸ್ ಅಳವಡಿಸಿರಲಿಲ್ಲ. ಥರ್ಡ್ ಅಂಪೈರ್ ವ್ಯವಸ್ಥೆಯನ್ನು ಕಡಿತಗೊಳಿಸಿದರೆ ಮಾತ್ರ ಡಿಆರ್‌ಎಸ್‌ನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಆಗದು ಕಡ್ಡಾಯ.
ಒಪ್ಪಿಕೊಳ್ಳುವ ಮಾತು ಪಕ್ಕದಲ್ಲಿಡಿ. ಅಳವಡಿಕೆಯೇ ಅಷ್ಟು ಸುಲಭದ ಮಾತಲ್ಲ. ಸೂಪರ್ ಸ್ಲೋ ಮೋ, ಬ್ಲಾಕ್ -ವೈಟ್ ಶಾಡೋ ಮಾದರಿಯ ಎಕ್ಸ್‌ರೇ ಇಕ್ವಿಪ್‌ಮೆಂಟ್‌ಗಳೆಲ್ಲ ಸೇರಿದಂತೆ ಒಂದು ಸರಣಿಗೆ ಬರೋಬ್ಬರಿ ೭೦ರಿಂದ ೮೦ ಸಾವಿರ ಡಾಲರ್‌ಗಳು ಡಿಆರ್‌ಎಸ್‌ಗೆ ಅಗತ್ಯ. ಹಾಗಾಗಿಯೇ ಮೊತ್ತ ಮೊದಲಾಗಿ ಕೇಳಿ ಬರುವ ಪ್ರಶ್ನೆ, ಕೇವಲ ನಾಲ್ಕರಿಂದ ಐದು ಶೇಕಡಾ ಹೆಚ್ಚಿನ ಸರಿ ತೀರ್ಪಿಗೆ ಈ ಪರಿಯ ಖರ್ಚು ಅಗತ್ಯವೇ?
ಲೆಕ್ಕಾಚಾರ ಇಷ್ಟಕ್ಕೆ ನಿಲ್ಲದು. ಐಸಿಸಿಯೇನೋ ಈ ಮೊತ್ತದ ಉಪಕರಣಗಳನ್ನು ನೇರಪ್ರಸಾರದ ಹಕ್ಕು ಪಡೆದ ಟಿವಿ ಚಾನೆಲ್ ಜೊತೆ ಹಂಚಿಕೊಳ್ಳಲು ಹೊಂಚುಹಾಕಿದೆ. ಪರಿಸ್ಥಿತಿ ಹಾಗಿಲ್ಲ, ಭಾರತ-ಶ್ರೀಲಂಕಾದಂತ ತಂಡಗಳ ಹಣಾಹಣಿ ಟೆಸ್ಟ್ ಸರಣಿಯಲ್ಲಿಯೇ ಈ ದುಬಾರಿ ಬಂಡವಾಳ ತೊಡಗಿಸಿರುವ ನಿಂಬಸ್ ಇಷ್ಟಪಡಲಿಲ್ಲ. ಇನ್ನು ಬಾಂಗ್ಲಾ-ಜಿಂಬಾಬ್ವೆ, ವೆಸ್ಟ್‌ಇಂಡೀಸ್ ತಂಡಗಳ ಟೆಸ್ಟ್ ಸರಣಿಯಲ್ಲಿ ಬಳಸಲು ಮತ್ತು ಖರ್ಚು ಹಂಚಿಕೊಳ್ಳಲು ಟಿವಿ ಚಾನೆಲ್ ಒಪ್ಪುತ್ತದೆಯೇ?
ಹಣಕಾಸಿನ ಹೊರತಾಗಿ ಇನ್ನೊಂದು ತತ್ವದ ವಿಚಾರವೂ ಇದರಲ್ಲಿದೆ. ಡಿಆರ್‌ಎಸ್ ಜಾರಿಯಲ್ಲಿರುವಾಗ ಒಂದು ತಂಡ ಬಲು ಬೇಗನೆ ತನ್ನ ಮೂರೂ ಚಾಲೆಂಜ್ ಕಳೆದುಕೊಂಡಿತು ಎಂದುಕೊಳ್ಳೋಣ. ಆ ನಂತರ ಅವರು ತಪ್ಪು ತೀರ್ಮಾನಗಳಾವುವನ್ನೂ ಪ್ರಶ್ನಿಸುವ ಅಧಿಕಾರವನ್ನೇ ಕಳೆದುಕೊಂಡುಬಿಡುತ್ತಾರೆ. ಥರ್ಡ್ ಅಂಪೈರ್ ಪದ್ಧತಿಯಲ್ಲಿ ಈ ಅಪಾಯವಿರಲಿಲ್ಲ. ಸರಿ ತೀರ್ಪುಗಳೇ ಐಸಿಸಿ ಆದ್ಯತೆಯಾಗಿದ್ದರೆ ಮೂರು ಚಾಲೆಂಜ್ ಎಂಬ ಕಡಿವಾಣ ಅಪಕ್ವವೆನಿಸುತ್ತದೆ.
ಇನ್ನೊಂದು ಅಸಲು ಸಮಸ್ಯೆಯೇ ಇದೆ. ಕ್ರಿಕೆಟ್ ಟೆನಿಸ್‌ನ ಹಾಗಲ್ಲ, ಅಲ್ಲಾದರೆ ಬರೀ ಲೈನ್‌ಕಾಲ್‌ಗಳ ವಿರುದ್ಧ ತಂತ್ರಜ್ಞಾನದ ಬೆಳಕು. ಹ್ವಾಕ್ ಐ ಅದಕ್ಕೆ ಸಾಕೇ ಸಾಕು. ಕ್ರಿಕೆಟ್ ಕಥೆ ಬೇರೆ, ಇದು ಸಂಕೀರ್ಣ ಆಟ, ಪಿಚ್‌ನ ಪುಟಿತ, ಗಾಳಿಯ ಆಯಾಮ, ಚೆಂಡಿನ ವೇಗ ಮುಂತಾದ ಅಂಶಗಳು ಒಂದು ಎಲ್‌ಬಿಡಬ್ಲ್ಯು ಮನವಿಯಲ್ಲಿರುತ್ತದೆ. ಅಲ್ಲದೆ, ಎಷ್ಟೋ ರನ್‌ಔಟ್, ಸ್ಟಂಪಿಂಗ್ ಪ್ರಕರಣಗಳಲ್ಲಿ ಚಿತ್ರದ ಫ್ರೇಮ್ ಸಾಕಾಗುವುದಿಲ್ಲ. ಅನಿಶ್ಚಿತತೆ ಮುಂದುವರಿಯುವಂತಾಗುತ್ತದೆ. ಆಗ ಬೆನಿಫಿಟ್ ಆಫ್ ಡೌಟ್ ಎಂಬ ತರ್ಕ ಬರುತ್ತದೆ. ಇಂತಿರುವಾಗ ಡಿಆರ್‌ಎಸ್‌ನಲ್ಲಿ ಅನುಮಾನದ ಲಾಭ ಕೊಡುವುದರಿಂದ ಮಗದೊಂದು ತಂಡಕ್ಕೆ ಚಾಲೆಂಜ್ ಅವಕಾಶದಲ್ಲೂ ಹೊಡೆತ ಕೊಟ್ಟಂತಾಗುವುದು ನ್ಯಾಯವೇ?
ಈ ಗೊಂದಲಗಳ ಬಗ್ಗೆ ಚರ್ಚೆ ಆರಂಭವಾಗಿದೆ. ಒಂದಂತೂ ಸತ್ಯ, ಫೀಲ್ಡ್ ಅಂಪೈರ್‌ಗಳು ಇನ್ನು ತೀರ್ಪು ಕೊಡಲೇಬೇಕು!!
-ಮಾ.ವೆಂ.ಸ

ಮಂಗಳವಾರ, ಫೆಬ್ರವರಿ 2, 2010

ಕಚಗುಳಿಯಿಟ್ಟರೆ ನಗದವರಿದ್ದಾರೆಯೇ?

ವಾರಕ್ಕೊಮ್ಮೆ........ 10


ಈ ವಾರ ಈ ಅಂಕಣದಲ್ಲಿ ಪತ್ರಿಕೆಯೊಂದನ್ನು ಪರಿಚಯಿಸುವ ಮುನ್ನ ಗಂಭೀರವೋ ಲಘುವೋ ನನಗೆ ಅರ್ಥೈಸಿಕೊಳ್ಳಲಾಗದ ಒಂದು ವಿಚಾರವನ್ನು ನಿಮ್ಮೊಂದಿಗೆ ಚರ್ಚಿಸಬೇಕಿದೆ.
ನನಗೆ ನೆನಪಿರುವಂತೆ, ಹಿಂದೆಲ್ಲ ದೈನಿಕಗಳಲ್ಲಿ ಶುಕ್ರವಾರ ಸಿನೆಮಾ ಪುರವಣಿ ಪ್ರತ್ಯೇಕವಾಗಿರಲಿಲ್ಲ. ಬೇರೆ ದಿನ ಕೇವಲ ಎಂಟು ಪುಟ ಹೊಂದಿರುತ್ತಿದ್ದ ಪ್ರಜಾವಾಣಿಯಂತವು ಆ ದಿನ ಮಾತ್ರ 10 ಪುಟ ಹೊಂದಿರುತ್ತಿತ್ತು. ಅದರಲ್ಲೂ ಬಹುಷಃ ಒಂದು ಪುಟ ಮಾತ್ರ ಸಿನೆಮಾ ಸುದ್ದಿ. ಹೀಗೆ ಹೆಚ್ಚು ಪುಟ ಕೊಡುತ್ತಿದ್ದ ಭಾನುವಾರ ಹಾಗೂ ಶುಕ್ರವಾರ ಪತ್ರಿಕೆಯ ಬೆಲೆಯಲ್ಲಿ ಕೆಲ ಪೈಸೆ ಹೆಚ್ಚು. ಇತ್ತೀಚಿನ ದಿನಗಳಲ್ಲಿ ದೈನಿಕ ಪತ್ರಿಕೋದ್ಯಮ ಪುಟ ಸಂಖ್ಯೆಯ ಮೇಲೆ ನಿಂತಿಲ್ಲ. ಬಣ್ಣದ ಮುದ್ರಣ ಸರ್ವೇ ಸಾಮಾನ್ಯ. ಆದರೆ ದೈನಿಕಗಳು ಇವತ್ತಿಗೂ ಈ ಎರಡು ದಿನ ಹೆಚ್ಚು ಬೆಲೆ ನಿಗದಿ ಪಡಿಸುವ ಹಳೆಯ ಸಂಪ್ರದಾಯವನ್ನು ಮಾತ್ರ ಮುಂದುವರೆಸಿದ್ದು ಸೂಕ್ತವೇ?
ದಿ ಹಿಂದೂ ಪತ್ರಿಕೆ ಭಾನುವಾರ ನಿಜಕ್ಕೂ ಅರ್ಥವತ್ತಾದ ಸ್ಪೆಷಲ್ ಪುಟಗಳನ್ನು ಕೊಡುವುದರಿಂದ ಹೆಚ್ಚಿನ ಬೆಲೆಯನ್ನು ಸಮರ್ಥಿಸಿಕೊಳ್ಳಬಹುದೇನೋ. ಕನ್ನಡದ ಪತ್ರಿಕೆಗಳು ಸಾಪ್ತಾಹಿಕ ಪುರವಣಿಯಲ್ಲಿ ಕೊಡುತ್ತಿದ್ದ ಎಂಟು ಪುಟಗಳನ್ನು ಆರಕ್ಕೆ ಇಳಿಸಿದ್ದೊಂದೇ ಸಾಧನೆ! ನನ್ನ ವಾದ ಇಷ್ಟೇ, ಹೆಚ್ಚಿನ ಏನೂ ಇಲ್ಲದ ಈ ಎರಡು ದಿನಗಳ ಸಂಚಿಕೆಗಳ ಬೆಲೆಯೂ ಉಳಿದ ಐದು ದಿನಗಳಷ್ಟೇ ಇರಬೇಕು. ತಿಂಗಳ ವೆಚ್ಚ ಲೆಕ್ಕ ಹಾಕುವುದೂ ಆಗ ಸುಲಭ! ನೀವೇನಂತೀರಿ?


ಕನ್ನಡದಲ್ಲಿ ಹಾಸ್ಯಕ್ಕೆ ಮೀಸಲಾದ ಪತ್ರಿಕೆಗಳು ಕಡಿಮೆ. ಹೆಸರಿಸಹೊರಟರೆ ಬಾಗಿಲು ಮುಚ್ಚಿದ ‘ಕೊರವಂಜಿ’ಯಂತ ಪತ್ರಿಕೆಗಳನ್ನೇ ಹೇಳಬೇಕಾಗುವುದು ದುರಂತ. ಆದರೂ ಇವತ್ತಿಗೂ ‘ವಿನೋದ’ ಚಾಲ್ತಿಯಲ್ಲಿದೆ. ಹಾಗೆಯೇ ಕಾರ್ಟೂನ್, ಜೋಕ್ಸ್, ನಗೆಬರಹಗಳಿಗೆ ಮೀಸಲಿರುವ ಪತ್ರಿಕೆಯೊಂದು ಪುಸ್ತಕದ ಅಂಗಡಿಗಳಲ್ಲಿ ಲಭ್ಯ, ಅದುವೇ ‘ಕಚಗುಳಿ’. ಮನರಂಜನೆಯೊಂದೇ ಅದರ ಧ್ಯೇಯ!
ಶುಷ್ಕವಾಗಿ ಕೆಲವು ಮಾಹಿತಿಗಳನ್ನು ಒದರಿಬಿಡುತ್ತೇನೆ. 60 ಪುಟಗಳ ಈ ಮಾಸಪತ್ರಿಕೆಗೆ ತುಸು ದುಬಾರಿ ಬೆಲೆ, 20 ರೂಪಾಯಿ. ಈಗಾಗಲೇ 85 ಸಂಚಿಕೆಗಳನ್ನು ಈ ಪತ್ರಿಕೆ ಪೂರೈಸಿದೆ. ಅರ್ಥಾತ್ ಏಳು ವರ್ಷಗಳು!
ಕೆಲವರಿಗಾದರೂ ಬೆಂಗಳೂರಿನ ಅನುರಾಗ್ ಕ್ರಿಯೇಷನ್ಸ್ ಗೊತ್ತಿರಬೇಕು. ಅದು ಸ್ಪರ್ಧಾ ಜಗತ್ತು, ಆರೋಗ್ಯ ಮತ್ತು ಸೈಕಾಲಜಿ & ಪರ್ಸನಾಲಿಟಿ ಡೆವಲೆಪ್‌ಮೆಂಟ್ ಎಂಬ ದೀರ್ಘ ಹೆಸರಿನ ಪತ್ರಿಕೆಯೂ ಸೇರಿದಂತೆ ಒಂದು ಡಜನ್ ನಿಯತಕಾಲಿಕಗಳನ್ನು ಪ್ರಕಟಿಸುತ್ತಿದೆ. ಆ ಪ್ರಕಾಶನದ ಮಾಲಿಕ ಆರ್.ಬಾಲಕೃಷ್ಣರೇ ಈ ‘ಕಚಗುಳಿ’ಯ ಸಂಪಾದಕರು.
ನಿಜ, ಇಲ್ಲಿನ ಎಲ್ಲ ಜೋಕ್ಸ್, ಕಾರ್ಟೂನ್‌ಗಳು ಗುಣಮಟ್ಟವನ್ನು ನೀಡುವುದಿಲ್ಲ ಎನ್ನಿಸಬಹುದು. ಆದರೆ ನಗುವವರ ಮನಸ್ಥಿತಿಯ ಮೇಲೆ ಅವು ಮಾಡುವ ಪರಿಣಾಮನಿರ್ಧಾರಿತವಾಗಿರುವುದರಿಂದ ಇದಮಿತ್ಥಂ ಹೇಳುವುದು ಕಷ್ಟ. ನೀವೇ ನೋಡಿ, ಟೆನಿಸ್ ಕೃಷ್ಣನ ಹಾಸ್ಯಕ್ಕೆ ನೀವು ನಗಬಹುದು, ಮತ್ತೊಬ್ಬಾತ, ಛೆ, ಅಸಹ್ಯ ಎಂದುಬಿಡಬಹುದು. ಬಸ್‌ನಲ್ಲಿ, ಸುಮ್ಮನೆ ರಿಫ್ರೆಶ್‌ಗೆ ಎಂದು ಕುಳಿತುಕೊಳ್ಳುವವರಿಗೆ ಇದು ಆಪ್ತ! ಒಮ್ಮೆ ಓದಿ ನೋಡಿ....
ವಿಳಾಸ : ಕಚಗುಳಿ ಮಾಸಪತ್ರಿಕೆ
737, ಡಾ.ರಾಜ್‌ಕುಮಾರ್ ರಸ್ತೆ,
ಧಮಧಸ್ಥಳ ಶ್ರೀ ಮಂಜುನಾಥ ಕಲಾಭವನದ ಎದುರು, 6ನೇ ಬ್ಲಾಕ್, ರಾಜಾಜಿ ನಗರ, ಬೆಂಗಳೂರು - 560010
ಫೋನ್ - 080-23401654, 23203282

 
200812023996