ಭಾನುವಾರ, ಡಿಸೆಂಬರ್ 28, 2008

ವಡಫೋನ್ - ತಾಳ ತಪ್ಪಿದ ಸಂಗೀತ !


ಮೊಬೈಲ್ ಟಾಕ್-
ಎಲ್ಲರಲ್ಲೂ ಮೊಬೈಲ್ ಇದೆ. ಸೆಟ್‌ನಲ್ಲಿರುವ ನಾನಾ ತರದ ಆಟ, ಸೌಲಭ್ಯಗಳ ಅರಿವೂ ನಮಗಿದೆ. ದುರಂತವೆಂದರೆ ಅಗತ್ಯವಾಗಿ ಗೊತ್ತಿರಬೇಕಿದ್ದ ಕೆಲವು ಮೊಬೈಲ್ ಕಾನೂನುಗಳೂ ನಮಗೆ ಗೊತ್ತಿಲ್ಲ. ಈ ಲೇಖನದಿಂದ ಆರಂಭಿಸಿ ನನಗೆ ಗೊತ್ತಿರುವ ಹಲವು ಗ್ರಾಹಕ ಸ್ನೇಹಿ ಮೊಬೈಲ್ ಕಾನೂನುಗಳ ಬಗ್ಗೆ ಇಲ್ಲಿ ಬರೆಯಲಿದ್ದೇನೆ. ನಿಜಕ್ಕೂ ನಿಮ್ಮ ಪ್ರತಿಕ್ರಿಯೆ ನನಗೆ ಟಾನಿಕ್!


* ಚಂದಾದಾರರ ಒಪ್ಪಿಗೆ ಅತ್ಯಗತ್ಯ
* ವಡಫೋನ್ ಕಾಲರ್‌ಟೋನ್ - 
ಸಂಗೀತಮಯ ಕತ್ತರಿ!
* ಡಿಯಾಕ್ಟಿವೇಷನ್ ಸಂದೇಶಕ್ಕೆ 
ಶುಲ್ಕ - ಆಕ್ಷೇಪ
* ಗ್ರಾಹಕರ ಪರ ಟ್ರಾಯ್ ಕಾಯ್ದೆ



ಮೊಬೈಲ್ ಬಳಕೆದಾರರು ಈ ಕ್ಷೇತ್ರದ ಕಾನೂನುಗಳ ಬಗ್ಗೆ ಮಾಹಿತಿ ಹೊಂದಿರುವುದರ ಅಗತ್ಯವನ್ನು ಈ ಘಟನೆ ಪ್ರತಿಪಾದಿಸುತ್ತದೆ. 
ನಾನು ವಡಫೋನ್ ಮೊಬೈಲ್ ಗ್ರಾಹಕ. ಈ ಅಂತರಾಷ್ಟ್ರೀಯ ಕಂಪನಿ ಗ್ರಾಹಕ ಸೇವೆಯಲ್ಲಿ ವಿಶ್ವಕ್ಕೇ ಮಾದರಿಯೆನಿಸುವಂತಿದೆ ಎಂಬುದನ್ನು ನನ್ನ ನಂಬಿಕೆಯಾಗಿತ್ತು. ಇದ್ದಕ್ಕಿದ್ದಂತೆ ಒಂದು ದಿನ ವಡಫೋನ್‌ನಿಂದ ನನಗೊಂದು ಎಸ್‌ಎಂಎಸ್ ಬಂದಿತ್ತು. ಅದರ ಪ್ರಕಾರ ಹಚ್ ಒಂದು ತಿಂಗಳ ಅವಧಿಗೆ ಉಚಿತ ಕಾಲರ್‌ಟೋನ್ ಸೇವೆಯನ್ನು ಕೊಡುವುದಾಗಿ ತಿಳಿಸಿತ್ತು. ಅದೇ ಸಂದೇಶದಲ್ಲಿ ನಂತರ ಪ್ರತಿ ತಿಂಗಳಿಗೆ ೩೦ ರೂ. ಚಂದಾದಾರ ಎಂಬುದನ್ನೂ ಹೇಳಿತ್ತು. ಉಚಿತವನ್ನು ಬಿಡುವುದುಂಟೇ ? ನಾನು ‘ಎಸ್’ ಎಂಬ ಎಸ್‌ಎಮ್‌ಎಸ್ ಒಪ್ಪಿಗೆ ಕೊಟ್ಟು ಉಚಿತ ಕಾಲರ್‌ಟೋನ್ ಪಡೆದೆ. ಎಲ್ಲವೂ ನನ್ನ ನಂಬರ್‌ಗೆ ಡಯಲ್ ಮಾಡುವವರಿಗಾಗಿ!
ಕಾಲರ್‌ಟೋನ್ ಅಕ್ಟಿವೇಟ್ ಆದದ್ದು ಜೂನ್ ೨೯ರಂದು. ಜುಲೈ ೨೮ರಂದು ವಡಫೋನ್‌ನಿಂದ ಇನ್ನೊಂದು ಎಸ್‌ಎಂಎಸ್ ಬಂತು ‘ನೀವು ಒಂದು ತಿಂಗಳ ಕಾಲರ್‌ಟೋನ್ ಟ್ರಯಲ್ ಸೇವೆ ಅನುಭವಿಸಿದ್ದೀರಿ. ನಿಮ್ಮ ಕರೆದಾತರು ಟ್ರಿನ್ ಟ್ರಿನ್‌ನಿಂದ ಬೇಸರಗೊಳ್ಳದಿರಲು ಕಾಲರ್‌ಟೋನ್ ಮುಂದುವರಿಸಬಹುದು. ಆಕ್ಟಿವೇಟ್ ಮಾಡಲು ‘ಎಸ್’ ಎಂದು ೯೯೭ಗೆ ಸಂದೇಶ ಕಳಿಸಿ, ಬಾಡಿಗೆ ಮಾಸಿಕ ೩೦ ರೂ.
ಅಗತ್ಯವಿದೆ ಎನಿಸಲಿಲ್ಲ. ಹಾಗಾಗಿ ಯಾವುದೇ ‘ಎಸ್’ ಎಸ್‌ಎಂಎಸ್ ಮಾಡದೆ ನಾನು ಸುಮ್ಮನುಳಿದೆ.. ಜುಲೈ ಮೊದಲವಾರ ನೋಡುತ್ತೇನೆ, ಕಾಲರ್ ಟೋನ್ ಮುಂದುವರೆದಿದೆ! ಖಾತೆಯಿಂದ ೩೦ ರೂ. ಕೂಡ ಕತ್ತರಿಸಿ ನುಂಗಲಾಗಿದೆ. ತಕ್ಷಣಕ್ಕೆ ವಡಫೋನ್‌ನ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಿದ್ದಾಯ್ತು. ಊಹ್ಞೂ, ಇಲ್ಲಿರುವ ಮಂದಿಗೆ ಸುತರಾಂ ಕಾನೂನು ಗೊತ್ತಿಲ್ಲ. ‘ನೀವು ಡಿಯಾಕ್ಟೀವ್ ಮಾಡಬೇಕಾಗುತ್ತೆ ಸರ್’ ಎಂಬುದಷ್ಟೇ ಅವರ ಉತ್ತರ.
ಕಸ್ಟಮರ್ ಕೇರ್‌ನಲ್ಲಿ ಮಾತನಾಡುವವರಿಗೆ ಹೆಚ್ಚೆಂದರೆ ಕಂಪನಿಯ ಪ್ಲಾನ್‌ಗಳು, ಟ್ಯಾರಿಫ್ ಗೊತ್ತಷ್ಟೇ. ಸಮಸ್ಯೆಗಳನ್ನು ಪರಿಹರಿಸಲು ಬೇಕಾದ ಜ್ಞಾನ, ಅಧಿಕಾರಗಳೆರಡೂ ಅವರಿಗೆ ಇದ್ದಂತಿಲ್ಲ. ಸಮಸ್ಯೆಗಳನ್ನು ತೇಲಿಸಿ ಗ್ರಾಹಕರ ದಿಕ್ಕು ತಪ್ಪಿಸುವಲ್ಲಿ ಅವರು ಚಾಣಾಕ್ಷರು, ಎಚ್ಚರವಿರಲಿ.
ನನ್ನ ವಾದ, ಟ್ರಾಯ್ ನಿರ್ದೇಶನದ ಉಲ್ಲೇಖ ಫಲ ನೀಡಲಿಲ್ಲ. ಅವರಿಂದಲೇ ದೂರಿನ ಡಾಕೆಟ್ ಸಂಖ್ಯೆ (ಮುಂದಿನ ಹಂತದ ದೂರುಗಳಿಗೆ ಈ ಡಾಕೆಟ್ ಸಂಖ್ಯೆ ಬೇಕೇ ಬೇಕು. ಇದು ಇಲ್ಲದಿದ್ದಲ್ಲಿ ನಿಸ್ಸಂಕೋಚವಾಗಿ ನಿರ್ಲಕ್ಷಿಸುತ್ತಾರೆ. ಆ ಮಟ್ಟಿಗೆ ಅವರದ್ದು ಕಾನೂನು ಪಾಲನೆ !) ಮತ್ತು ನೋಡಲ್ ಅಧಿಕಾರಿಯ ವಿವರ ಅಂತರ್ಜಾಲ ವಿಳಾಸ ಪಡೆದೆ. ಕೇಳಿದ ತಕ್ಷಣ ಈ ಮಾಹಿತಿಗಳನ್ನು ಕೊಡಬೇಕೆಂದಿದ್ದರೂ ಗ್ರಾಹಕ ಸೇವಾಕೇಂದ್ರಗಳವರೊಂದಿಗೆ ಗುದ್ದಾಡಿಯೇ ಪಡೆಯಬೇಕೆಂಬುದು ಹೀನಾಯ.
ಯಾವುದೇ ದೂರು ಕಸ್ಟಮರ್ ಕೇರ್‌ನಲ್ಲಿ ಇತ್ಯರ್ಥವಾಗದಿದ್ದರೆ ನೋಡಲ್ ಅಧಿಕಾರಿಗೆ ನಿಶ್ಚಿತ ಮಾದರಿಯ ಅರ್ಜಿ ಫಾರಂನಲ್ಲಿ ದೂರು ದಾಖಲಿಸಬಹುದು. ಅಂಚೆ ಯಾ ಇ-ಮೇಲ್ ಮೂಲಕ ದೂರು ಸಲ್ಲಿಸಬಹುದು. ದೂರವಾಣಿ ಮುಖಾಂತರವೂ ಸಂಪರ್ಕಿಸಲು ಸಾಧ್ಯ. ಈ ಬಗ್ಗೆ ಬೇಕಾದ ಎಲ್ಲ ಮಾಹಿತಿಗಳೂ ಮೊಬೈಲ್ ಕಂಪನಿಗಳ ವೆಬ್‌ಸೈಟ್‌ನಲ್ಲಿ ಲಭಿಸುತ್ತದೆ. ನೋಡಲ್ ಅಧಿಕಾರಿ ೨ ದಿನಗಳೊಳಗೆ ದೂರಿಗೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳಬೇಕು. ಇದು ಕಾನೂನು.
ಈಗ ಕಾಲರ್‌ಟೋನ್ ರೀತಿಯ ವ್ಯಾಲ್ಯೂ ಆಡೆಡ್ ಸೇವೆಗಳ ಕುರಿತಾದ ಟ್ರಾಯ್ ಕಾನೂನಿಗೆ ಬಗ್ಗೆ ಗಮನಿಸಿ. ಟ್ರಾಯ್ ಕಾಯ್ದೆ ೧೯೯೭ರ ಸೆಕ್ಷನ್ ೧೧(೧) (b) (i) ಹಾಗೂ (v), ಅಲ್ಲದೇ ೧೯೯೯ ರ ಟೆಲಿಕಮ್ಯುನಿಕೇಷನ್ ಟಾರಿಫ್ ಆರ್ಡ್‌ರ್‌ನ ೧೧ನೇ ಕಲಂ ಮೊಬೈಲ್ ಸೇವೆಗಳ ಕುರಿತು ಹೇಳುತ್ತದೆ. ಗ್ರಾಹಕರ ಪರವಾಗಿ ವಾದಿಸುತ್ತದೆ.
ಯಾವುದೇ ಸೇವೆ ನಿರ್ದಿಷ್ಟ ಅವಧಿಯ ಉಚಿತ ಟ್ರಯಲ್‌ನ ನಂತರ ಬಳಕೆದಾರ  'Unsubcribe' ಎಂದು ತಾನೇ ಸೇವೆಯ ಡಿಯಾಕ್ಟೀವ್ ಮಾಡಿಕೊಳ್ಳುವ ಅಗತ್ಯವಿಲ್ಲ. ಕಂಪನಿ ಮತ್ತೊಮ್ಮೆ ಸೇವೆ ನೊಂದಾಯಿಸಿಕೊಳ್ಳಲು ಬಳಕೆದಾರನಲ್ಲಿ ವಿನಂತಿಸಬೇಕು. ಆಗ ಆತ ‘ಎಸ್’ ಎಂದರೆ ಮಾತ್ರ ಸೇವೆ ಮುಂದುವರೆಸಿ, ಶುಲ್ಕ ವಿಧಿಸಬಹುದು. ಚಂದಾದಾರನ ಒಪ್ಪಿಗೆಯ ಅಗತ್ಯವನ್ನು ಟ್ರಾಯ್ ನಿರ್ದೇಶನ (ನಂ.೩೦೫-೮/೨೦೦೪ QOS ದಿನಾಂಕ ಮೇ ೩ ೨೦೦೫) ಒತ್ತಿ ಒತ್ತಿ ಹೇಳಿದೆ.
ಮೇಲಿನ ಪ್ರಕರಣಕ್ಕೆ ಅನ್ವಯಿಸಿ ಹೇಳುವುದಾದರೆ, ಜುಲೈ ೨೮ರಂದು ಹಚ್ ಕಳಿಸಿದ ಎಸ್‌ಎಂಎಸ್ ಟ್ರಾಯ್ ನಿರ್ದೇಶನಕ್ಕೆ ತಕ್ಕುದಾಗಿತ್ತು. ಆದರೆ ಇಲ್ಲಿಂದ ಮುಂದಿನ ಅದರ ಕ್ರಮಗಳು ಅಂತರಾಷ್ಟ್ರೀಯ ಕಂಪನಿಗಳು ಜಾಣ್ಮೆಯಿಂದ ಮಾಡುವ ಹಗಲುದರೋಡೆಯನ್ನು ಎತ್ತಿ ತೋರಿಸುತ್ತದೆ.
ನಿಗದಿತ ಅರ್ಜಿಫಾರಂನಲ್ಲಿ ಮೇಲಿನ ಕಾನೂನು, ವಡಫೋನ್ ವಂಚನೆಗಳೆಲ್ಲವನ್ನೂ ವಿವರಿಸಿ ವಡಫೋನ್ ನೋಡಲ್ ಅಧಿಕಾರಿಗೆ ಇ-ಮೇಲ್ ಮಾಡಲಾಯಿತು. ಬರೇ ೨೪ ಘಂಟೆಯಲ್ಲಿ ವಡಫೋನ್‌ನಿಂದ ವಿಷಾಧ ಪತ್ರ ಬಂದಿತು. ತಕ್ಷಣವೇ ತಾವು ಪಡೆದ ೩೦ ರೂ. ಮರಳಿಸುತ್ತಿದ್ದೇವೆನ್ನುವುದನ್ನು ಸೂಚಿಸಿದ್ದರು. ಅಂತೆಯೇ ನನ್ನ ಮೊಬೈಲ್ ನಂ.ಗೆ ೩೦ ರೂ. ಜಮೆಯಾಗಿತ್ತು. ನನಗೆ ತಿಳಿದುಬಂದಂತೆ, ಕಾಲರ್‌ಟೋನ್ ಉಚಿತ ಟ್ರಯಲ್ ಕೊಡುವುದು ಕೂಡ ಹಣ ಕಮಾಯಿಸುವ ಒಂದು ಟ್ರಿಕ್. ಈ ಆಫರ್ ಪಡೆದ ಜನರಲ್ಲಿ ಶೇ. ೨೫ ಮಂದಿಯಾದರೂ ‘ಕಂಪನಿ ಭಾಷೆಯಲಿ’ ತಿಂಗಳಿಗೆ ‘ಡಿಯಾಕ್ಟೀವ್’ ಮಾಡಲು ಮರೆಯುತ್ತಾರೆ. ೩೦ರೂನಂತೆ ಕಮಾಯಿ ಆಯಿತಲ್ಲ ? ಬಹುಸಂಖ್ಯಾತರು ಈ ವಂಚನೆ ಎದುರು ಕಾನೂನು ಹೋರಾಟ ನಡೆಸುವುದು ಅನುಮಾನ. ಅಷ್ಟಕ್ಕೂ ೩೦ ರೂ.ಗೆ ಹಿಂಜುವುದೇ ಛೀ!?
ಗ್ರಾಹಕರು ಒಂದು ತಿಂಗಳ ಉಚಿತ ಟ್ರಯಲ್‌ನ್ನು ಅನುಭವಿಸಿ ಸೇವೆ ಬೇಡ ಎಂದರೆ ಕಂಪನಿಗೆ ನಷ್ಟವಾಗುತ್ತದೆ ಎಂದುಕೊಳ್ಳುವುದು ತಪ್ಪು. ನಾವು, ‘ಮಂಕುತಿಮ್ಮರು’ ಫ್ರೀ ಟ್ರಯಲ್ ಮುಗಿವ ಮುನ್ನ ‘ಡಿಯಾಕ್ಟೀವ್ ಸಂದೇಶ ಕಳಿಸಿ ಲಾಭಗಳಿಸಿದ ನಗು ಚೆಲ್ಲುತ್ತೇ. ವಡಫೋನ್ ಈ ‘ಡಿಯಾಕ್ಟೀವ್ ಸಂದೇಶ’ಕ್ಕೆ ೩ರೂ. ಚಾರ್ಜ್ ಮಾಡುತ್ತದೆ! ವಾಸ್ತವವಾಗಿ, ಸೇವೆ ಚಾಲನೆ- ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಗೆ ಶುಲ್ಕ ವಿಧಿಸುವುದು ತಾತ್ವಿಕವಾಗಿ, ಕಾನೂನಿನನ್ವಯ ಸರಿಯಾದ ಕ್ರಮವಲ್ಲ.
-ಮಾವೆಂಸ, e mail-mavemsa@gmail.com 

ಬುಧವಾರ, ಡಿಸೆಂಬರ್ 17, 2008

ಟೆನಿಸ್ ಡ್ರಾಪ್‌ಶಾಟ್ಸ್!!!---ಇದು ಕಿರಿಕಿರಿ ಕ್ರಿಕೆಟ್ ಅಲ್ಲ!






ಏನು ಹೇಳುವುದು? 
ಸ್ವಲ್ಪ ಸ್ಪೆಷಲ್ ಇರಲಿ ಅಂತ ಟೆನಿಸ್ ಹಾಗೂ ಕ್ರಿಕೆಟ್ ರಂಗದಿಂದ ಆಯ್ದ ಕೆಲವು ಸ್ವ್ವಾರಸ್ಯಕರ ಘಟನೆಗಳನ್ನು ಪ್ರಸ್ತುತಪಡಿಸಿದ್ದೇನೆ. ಈ ಹಿಂದೆ ಕನ್ನಡ ಜನಾಂತರಂಗ ಹಾಗೂ ಉದಯವಾಣಿಯಲ್ಲಿ ಇಂತಹ ತುಣುಕುಗಳ ಅಂಕಣ ಬರೆದಿದ್ದೆ. ಉದಯವಾಣಿಯಲ್ಲಿ ಬರೋಬ್ಬರಿ ೧೮೦ ವಾರ ಇದು ನಿರಂತರವಾಗಿ ಪ್ರಕಟಗೊಂಡಿತ್ತು.
ಕೆಲವು ದಿನಗಳಲ್ಲಿ ತುಂಬಿ ತುಳುಕುವ ಕ್ರೀಡಾ ಸುದ್ದಿ ಸ್ವಾರಸ್ಯದ ನನ್ನ ಒಂದೆರಡು ಪುಸ್ತಕಗಳೂ ಪ್ರಕಟಗೊಳ್ಳಲಿವೆ. ಮೊದಲ ಪುಸ್ತಕದ ಹೆಸರು ಕಿರಿ ಕಿರಿ ಕಿರಿ‘ಕೆಟ್’ ಕಹಾನಿ! ಬಂದಾಗ ಇನ್ನೊಮ್ಮೆ ತಿಳಿಸುವೆ....



ಟೆನಿಸ್ ಡ್ರಾಪ್‌ಶಾಟ್ಸ್!!!

-----------------------------
ಮಾನ- ಮೂರಾ‘ಬಟ್ಟೆ’!

ಅಮೆರಿಕದ ವೀನಸ್ ವಿಲಿಯಮ್ಸ್
ಬರೀ ಟೆನಿಸ್ ಆಟಗಾರ್ತಿಯಲ್ಲ. ಆಕೆ ಅತ್ಯುತ್ತಮ ಡ್ರೆಸ್ ಡಿಸೈನರ್. ಗ್ರಾನ್‌ಸ್ಲಾಂ ವೇಳೆ ತನ್ನ ಉಡುಪುಗಳನ್ನು ವಿನ್ಯಾಸಗೊಳಿಸುವುದು ಅವರ ಶೋಕಿ. ಕಳೆದ ಯುಎಸ್ ಓಪನ್‌ನ ಸಂದರ್ಭದಲ್ಲಿ ವೀನಸ್ ೧೨೦ ವಿವಿಧ ಮಾದರಿಯ ಉಡುಗೆಗಳಿರುವ ‘ಎಲೆವೆನ್’ ಸಂಗ್ರಹವನ್ನು ಬಹಿರಂಗ ಪಡಿಸಿದರು.

ಈ ಎಲ್ಲ ಧಿರಿಸುಗಳು ಅಮೆರಿಕದ ಉದ್ದಕ್ಕೂ ಇರುವ ಸ್ಟೀವ್ ಎಂಡ್ ಬ್ಯಾರೀಸ್ ಸ್ಟೋರ್‌ನಲ್ಲಿ ಖರೀದಿಗೆ ಲಭ್ಯ. ಸ್ವಾರಸ್ಯವೆಂದರೆ, ಈ ಉಡುಗೆಗಳ ಬೆಲೆಯೂ ಅಗ್ಗ. ೧೯.೯೮ ಡಾಲರ್ ಅಥವಾ ಅದಕ್ಕಿಂತ ಕಡಿಮೆಗೇ ಗಿಟ್ಟುತ್ತದೆ. ಒಂದೊಮ್ಮೆ ಒಂದು ಚೂರು ಬೆಲೆ ಏರಿಸಿದರೆ ಯಾವ ಸುಧಾರಣೆ ಸಾಧ್ಯ? ಗುಣಮಟ್ಟ.......? ಊಹ್ಞೂ, ಈ ಟೆನಿಸ್ ಆಟಗಾರ್ತಿಯ ಮೈಕ್ರೋ ಶಾರ್ಟ್ ಮಿನಿಗೆ ಚೂರು ಬಟ್ಟೆ ಕೊಟ್ಟು ಹಿಗ್ಗಿಸಬಹುದು. ಆಗ ವೀನಸ್‌ರ ಕೆಳಭಾಗದ ಸ್ವಲ್ಪವನ್ನಾದರೂ ಅಭಿಮಾನಿಗಳ ಕಣ್ಣಿಂದ ರಕ್ಷಿಸಬಹುದು!!


ತಡೆಯಾಗದ ಗೋಡೆ!

ಟೆನಿಸ್‌ನಲ್ಲಿ ಸರ್ವೀಸ್ ಎಂದರೆ ಈಗಂತೂ ವೇಗ ವೇಗ. ಸರ್ವೀಸ್ ಎದುರಿಸುವಾಗ ಬೇಸ್‌ಲೈನ್‌ನಿಂದ ಮೂರ್‍ನಾಲ್ಕು ಅಡಿ ಹಿಂದೆಯೇ ನಿಲ್ಲುವುದು ಅನಿವಾರ್ಯ. ವಿಂಬಲ್ಡನ್‌ನ ಹುಲ್ಲಿನಂಕಣದಲ್ಲಂತೂ ಚೆಂಡಿಗೆ ಇನ್ನಷ್ಟು ವೇಗ. ಇಂತಹ ಅಂಕಣಗಳಲ್ಲಿ ಬೇಸ್‌ಲೈನ್‌ನ ಒಳಗೇ ನಿಂತು ಪುಟಿಯುತ್ತಿದ್ದ ಚೆಂಡನ್ನು ಸರಾಗವಾಗಿ ಹಿಂತಿರುಗಿಸುತ್ತಿರುವ ಮಾರಿಯಾನಾ ಬರ್ಟೋಗಿಯ ತಾಕತ್ತು ಎಲ್ಲರ ಕುತೂಹಲದ ವಸ್ತು.

೨೦೦೭ರ ವಿಂಬಲ್ಡನ್‌ನ ಅನಿರೀಕ್ಷಿತ ಫೈನಲಿಸ್ಟ್ ಬರ್ಟೋಗಿ ಬೇಸ್‌ಲೈನ್‌ನೊಳಗೆ ನಿಂತು ಸರ್ವ್ ಎದುರಿಸುವ ಹಿಂದಿನ ಗುಟ್ಟು ಏನೆಂದು ಕೇಳಿ ನೋಡಿ. ಬರ್ಟೋಗಿ ನಗುತ್ತಾ ಕತೆ ಹೇಳುತ್ತಾರೆ. ಅವರು ಬೆಳೆದ ನಗರದಲ್ಲಿ ಚಳಿ ಚಳಿ ಚಳಿ! ಹಾಗಾಗಿ ಚಳಿಗಾಲದಲ್ಲಂತೂ ಒಳಾಂಗಣ ಅಂಕಣದಲ್ಲಿಯೇ ಅಭ್ಯಾಸ ನಡೆಸಬೇಕು. ಅಲ್ಲಿನ ಏಕೈಕ ಒಳಾಂಗಣ ಸ್ಟೇಡಿಯಂ ಪುಟ್ಟದು. ಎಷ್ಟು ಸಣ್ಣದು ಎಂದರೆ ಬೇಸ್‌ಲೈನ್‌ನ ಪಕ್ಕದಲ್ಲಿಯೇ ಗೋಡೆ. ಹಾಗಾಗಿ ತನ್ನ ಅಭ್ಯಾಸದಲ್ಲಿ ಬರ್ಟೋಗಿ ಬೇಸ್‌ಲೈನ್ ಒಳಗೇ ನಿಲ್ಲಬೇಕಾದುದು ಅನಿವಾರ್ಯವಾಗಿತ್ತಂತೆ. ಅದೇ ಅಭ್ಯಾಸವಾಗಿತ್ತು. ವಿಚಿತ್ರವೆಂದರೆ, ಹೀಗೆ ವಿಂಬಲ್ಡನ್‌ನಲ್ಲಿ ಸರ್ವೀಸ್‌ನ್ನು ಎದುರಿಸಿ, ಮರಳಿಸುತ್ತಿದ್ದುದು ಎದುರಾಳಿಗೆ ಡಬಲ್ ವೇಗದಲ್ಲಿ ಸರ್ವ್ ಮರಳಿದಂತೆ ಅನಿಸುತ್ತಿತ್ತಂತೆ! ವಿಂಬಲ್ಡನ್ ಫೈನಲ್ ತಲುಪಿದ್ದೇಕೆ, ಗೊತ್ತಾಯಿತಲ್ಲ!?

ಸಂಕಷ್ಟದ ಬೆಂಕಿಯಲ್ಲಿ ಬೆಂದರೆ ಆಕರ್ಷಕ ಪ್ರತಿಫಲ ಇದೆ ಎಂಬ ಹಳೆ ನಾಣ್ಣುಡಿ ಈಗಲೂ ಸತ್ಯ ಬಿಡಿ!

ಇದು ಕಿರಿಕಿರಿ ಕ್ರಿಕೆಟ್ ಅಲ್ಲ!
---------------------------------------------------------------------------

ಬೆತ್ತಲೆ ಓಟಕ್ಕೆ ಬೆತ್ತದೇಟು ಬೇಡ!!

ಈ ದಿನಗಳಲ್ಲಿ ಕ್ರೀಡಾಭಿಮಾನಿಗಳಿಗೆ ಸೆಕೆ ಸೆಕೆ! ಇದ್ದಕ್ಕಿದ್ದಂತೆ ಕ್ರೀಡಾಂಗಣದೊಳಗೆ ಪೂರಾ ಬಟ್ಟೆ ಬಿಸಾಕಿ ಬಿಸಾಕಿ ಬೆತ್ತಲೆ ಓಡುವವರ ಕಾಟ ಜೋರು. ಪೂರ್ಣ ಬೆತ್ತಲೆ ಓಟ ಎಂದರೂ ನೋಡುವವರಿಗೆ ಛೀ,ಥೂ... ಇಂತವರು ಕ್ರಿಕೆಟ್, ಟೆನಿಸ್, ಫುಟಬಾಲ್ ಪಂದ್ಯ ಇರುವೆಡೆಯೆಲ್ಲ ಕಾಣುತ್ತಿರುತ್ತಾರೆ. ಶ್ರೀಲಂಕಾದ ಸಿಂಹಳೀಯ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲೂ ಒಬ್ಬ ಇಂಗ್ಲೀಷ್ ಮನುಷ್ಯ ಇಂಗ್ಲೆಂಡ್ ಎದುರಿನ ಟೆಸ್ಟ್ ವೇಳೆ ಬೆತ್ತಲೆಯಾಗಿ ಓಡಿಯೇ ಬಿಡಬೇಕೆ?

ಊಹ್ಞೂ.... ಶ್ರೀಲಂಕಾದ ಪೋಲೀಸರು ದೇಶವೇ ತಲೆ ಮೇಲೆ ಬಿದ್ದಂತೆಯೇನೂ ವರ್ತಿಸಲಿಲ್ಲ. ಆತನನ್ನು ಹಿಡಿದುಹಾಕಿದರು. ಒಂದು ದಿನ ರಾತ್ರಿ ಸೆಲ್‌ನಲ್ಲಿ ಕೂಡಿ ಇಟ್ಟರು. ಇಲ್ಲ, ಒಂದೇ ಒಂದು ಬೆತ್ತದ ಏಟನ್ನೂ ಹಾಕಲಿಲ್ಲ. ಆದರೂ ಇನ್ನು ಮುಂದೆ ಆ ಇಂಗ್ಲೆಂಡಿಗ ಬೆತ್ತಲೆ ಓಟ ಮಾಡದಿರಲು ತೀರ್ಮಾನಿಸಿದ್ದಾನೆ. ಅರೆರೆ, ಅಷ್ಟಕ್ಕೂ ಶ್ರೀಲಂಕಾ ಪೋಲೀಸರು ಮಾಡಿದ್ದೇನು?

"ಹಲೋ ಫ್ರೆಂಡ್, ನಿನಗೆ ಬೆತ್ತಲೆ ಇರುವುದೆಂದರೆ ಖುಷಿ ತಾನೇ? ಹಾಗಾಗಿ ಇವತ್ತು ಇಲ್ಲಿನ ಕಲ್ಲು ಚಪ್ಪಡಿಯ ಸೆಲ್‌ನಲ್ಲಿ ಆರಾಮವಾಗಿ ಬೆತ್ತಲೆಯಾಗಿಯೇ ರಾತ್ರಿ ಕಳೆ " ಎಂದು ಬಟ್ಟೆ ತೆಗೆದು ಕೂರಿಸಿದರು. ಕಲ್ಲು ಚಪ್ಪಡಿಯ ಥಂಡಿ, ಕುಳಿರ್ಗಾಳಿ, ಛಳಿ, ಸೊಳ್ಳೆಯ ಸಹವಾಸದ ಜೊತೆ ಬೆತ್ತಲೆ ರಾತ್ರಿ. ಇದಕ್ಕಿಂತ ಇನ್ನೆಂತ ಶಿಕ್ಷೆ ಬೇಕು!?

ಹಾಗಾಗಿ ಬೆತ್ತಲೆ ಓಟಕ್ಕೆ ಕೊನೆಪಕ್ಷ ಶ್ರೀಲಂಕಾದಲ್ಲಿಯಾದರೂ ಗುಡ್‌ಬೈ!!

ಗೇಟು ತೆರೆದಿರಲಿ ಬಿಡಿ!

ಇಂಗ್ಲೆಂಡಿನ ವೇಗಿ ಫ್ರೆಡ್ ಟ್ರೂಮನ್‌ರ ಬೆಂಕಿ ಚೆಂಡುಗಳೆಂದರೆ ಎದುರಾಳಿಗಳಿಗೆ ಎದೆ ಢವಢವ. ಅವತ್ತು ಟ್ರೂಮನ್ ದುರ್ಬಲ ತಂಡವೊಂದರ ಎದುರು ಬೌಲಿಂಗ್ ನಡೆಸಿದ್ದರು. ಕಣ್ಣಿವೆ ಮುಚ್ಚಿ ಬಿಡುವುದರಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ನ ವಿಕೆಟ್ ಚೆಲ್ಲಾಪಿಲ್ಲಿಯಾದದ್ದೂ ಆಯಿತು.

ಇಂಗ್ಲೆಂಡಿನ ಪೆವಿಲಿಯನ್‌ಗಳ ರಚನೆ ವಿಶಿಷ್ಟ. ಆಟಗಾರರ ಕೊಠಡಿಯಿಂದ ಸ್ವಲ್ಪ ದೂರ ನಡೆದ ಮೇಲೆ ಸಾಮಾನ್ಯವಾಗಿ ಒಂದು ಗೇಟು ಸಿಗುತ್ತದೆ. ಅದನ್ನು ದಾಟಿದರೆ ಮೈದಾನ. ಅಲ್ಲಿನ ಆಟಗಾರರಿಗೆ ತಾವು ಗೇಟು ದಾಟುವಾಗ ಅದನ್ನು ಹಾಕಿ ಬರುವ ಒಳ್ಳೆಯ ಅಭ್ಯಾಸವೂ ಇದೆ!

ಇಲ್ಲಿ ಬ್ಯಾಟ್ಸ್‌ಮನ್ ಔಟಾದುದರಿಂದ ಹೊಸ ಬ್ಯಾಟ್ಸ್‌ಮನ್ ಪೆವಿಲಿಯನ್‌ನಿಂದ ಹೊರಟ. ಇನ್ನೇನು ಗೇಟಿಗೆ ಲಾಕ್ ಮಾಡಿ ಬರಬೇಕು, ಆಗ ಟ್ರೂಮನ್ ಕೂಗಿ ಹೇಳಿದ, " ಬೇಡ, ಬೇಡ. ಗೇಟ್ ಹಾಕುವುದು ಬೇಡ. ಕೆಲವೇ ನಿಮಿಷಗಳಲ್ಲಿ ಮತ್ತೆ ನಿಮಗೇ ಅದನ್ನು ತೆಗೆಯಬೇಕಾಗುತ್ತದೆ. ವಿನಾ ತ್ರಾಸ!"

ಕೊನೆಗೆ ಆಗಿದ್ದೂ ಅದೇ!!

ಬುಚನನ್ ಸಲಹೆ!

ಆಸ್ಟ್ರೇಲಿಯಾ ಟೆಸ್ಟ್ ತಂಡವೇ ಒಂದು ಮಟ್ಟದಲ್ಲಿ ಆಡುತ್ತಿದ್ದರೆ, ವಿಶ್ವದ ಉಳಿದ ಟೆಸ್ಟ್‌ಮಾನ್ಯ ರಾಷ್ಟ್ರಗಳ ಆಟದ ಮಟ್ಟವೇ ಬೇರೆ, ಎಷ್ಟೋ ಕೆಳಗೆ. ಆಸ್ಟ್ರೇಲಿಯಾ ತಂಡ ಸತತ ೧೬ ಟೆಸ್ಟ್ ಗೆದ್ದಿರುವುದನ್ನೇ ಇದಕ್ಕೆ ಸಾಕ್ಷಿಯಾಗಿ ಬಳಸಬಹುದು.

ಐಸಿಸಿಯ ಮುಂದೆ ಒಂದು ಸಲಹೆಯಿದೆ. ಈ ಅಂತರವನ್ನು ಕಡಿಮೆ ಮಾಡಿದಷ್ಟೂ ಟೆಸ್ಟ್ ಕ್ರಿಕೆಟ್‌ನ ಭವಿಷ್ಯಕ್ಕೆ, ಒಟ್ಟಾರೆ ಕ್ರಿಕೆಟ್‌ಗೆ ಒಳ್ಳೆಯದು ತಾನೇ? ವಿದೇಶೀ ಆಟಗಾರರಿಗೆ ಟೆಸ್ಟ್ ತಂಡಗಳಲ್ಲಿ ಆಡುವ ಅವಕಾಶವಿತ್ತರೆ ಈ ಸಮಸ್ಯೆ ಬಗೆಹರಿದೀತು. ಮುರಳಿ ಕಾರ್ತೀಕ್ ಇಂಗ್ಲೆಂಡ್ ಪರ ಆಡಬಹುದು. ಯುವರಾಜ್ ಸಿಂಗ್ ಪಾಕ್ ಪರ ಬ್ಯಾಟ್ ಬೀಸಬಹುದು. ಈ ತರ.....

ಊಹ್ಞೂ, ಈ ಸಲಹೆಯಿತ್ತ ಆಸ್ಟ್ರೇಲಿಯಾದ ಮಾಜಿ ಕೋಚ್ ಜಾನ್ ಬುಚನನ್ ಹೇಳುವುದು ಹಾಗಲ್ಲ. "ನೋಡಿ, ಆಸ್ಟ್ರೇಲಿಯಾ ತಂಡದಲ್ಲಿ ಒಂದು ಋತುವಿನಲ್ಲಿ ಪರಮಾವಧಿ ೧೮ - ೨೦ ಆಟಗಾರರು ಟೆಸ್ಟ್ ಆಡಬಹುದು. ಇಷ್ಟೇ ಸಂಖ್ಯೆಯ ಆಟಗಾರರೂ ಟೆಸ್ಟ್ ಕ್ವಾಲಿಟಿ ಹೊಂದಿದ್ದೂ ಅವಕಾಶ ವಂಚಿತರಾಗುತ್ತಿದ್ದಾರೆ. ಹಾಗಾಗಿ ಇವರನ್ನು ಉಳಿದ ದೇಶಗಳು ಬಳಸಿದರೆ ಅವರಿಗೆ ಅವಕಾಶ ಸಿಕ್ಕಂತಲೂ ಆಗುತ್ತದೆ. ಉಳಿದ ತಂಡಗಳು ಆಸ್ಟ್ರೇಲಿಯಾದ ‘ಹತ್ತಿರ’ ಬಂದಂತಾಗುತ್ತದೆ. ನಾನು ‘ವಿದೇಶಿ’ ಆಟಗಾರರು ಎಂದದ್ದು ಆಸ್ಟ್ರೇಲಿಯನ್‌ರಿಗೆ ಮಾತ್ರ. ನೀವು ತಪ್ಪು ತಿಳಿಯಬೇಡಿ!!"


ದಾಖಲೆ ‘ಕಟ್’!

ಮಹೇಂದ್ರ ಸಿಂಗ್ ಧೋನಿ ಕೂದಲು ಕಟ್ ಮಾಡಿಸಿ ಕ್ರಾಪ್ ಮಾಡಿಸಿಕೊಂಡಿರುವುದು ತುಂಬಲಾರದ ನಷ್ಟ. ಯಾರಿಗೆ? ಸ್ವತಃ ಅವರಿಗೆ! ನೀವೇ ಪಾಕ್ ವಿರುದ್ಧದ ೨೦೦೭ರ ಏಕದಿನ ಸರಣಿಯಲ್ಲಿ ಅವರು ಕಳೆದುಕೊಂಡ ದಾಖಲೆಗಳನ್ನು ನೋಡಿ.

* ಪಾಕ್ ಎದುರು ಉದ್ದ ಕೂದಲಿನ ಪ್ರಪ್ರಥಮ ಭಾರತೀಯ ನಾಯಕ!
* ಭಾರತದಲ್ಲಿ ಪಾಕ್ ವಿರುದ್ಧ ಆಡಿದ ಉದ್ದ ಕೂದಲಿನ ಮೊದಲ ಭಾರತೀಯ ನಾಯಕ!!
* ಆಸ್ಟ್ರೇಲಿಯಾ ಅಲ್ಲದ ತಂಡದ ಜೊತೆ ಆಟವಾಡಿದ ಉದ್ದ ಕೂದಲಿನ ಪ್ರಪ್ರಥಮ ಭಾರತೀಯ ನಾಯಕ!!!

ಉಳಿದವುಗಳನ್ನು ಸೇರಿಸಲು ನೀವು ಸ್ವತಂತ್ರರು!

ಓವರ್ ರೇಟ್!

ಕ್ರಿಕೆಟ್ ಆಸ್ಟ್ರೇಲಿಯಾದ ಆಯ್ಕೆ ಸಮಿತಿ ಸದಸ್ಯ ಮೆರ್ವ್ ಹ್ಯೂಸ್ ಗಲ್ಲಿ ಮೀಸೆಯ ಆಜಾನುಬಾಹು. ಈ ವ್ಯಕ್ತಿಯನ್ನು ಈಗ ಪ್ರೇಕ್ಷಕರ ಸನ್ನಡತೆ ಕಾಪಾಡುವ ಅಧಿಕಾರಿಯಾಗಿ ನೇಮಿಸಲಾಗಿದೆ. ಆಸ್ಟ್ರೇಲಿಯಾದಲ್ಲಂತೂ ಬೀರ್ ಕುಡಿಯಲು ಸ್ಟೇಡಿಯಂನಲ್ಲಿ ಮುಕ್ತ ಅವಕಾಶ. ಯಾವುದೇ ಕ್ಷಣ ಗಲಾಟೆಗಳು ಘಟಿಸಬಹುದು. ಥ್ಯಾಂಕ್ಸ್ ಟು ‘ಡ್ರಿಂಕ್ಸ್’!

ಅವತ್ತು ಹ್ಯೂಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ ಮೊದಲ ದಿನ. ಸಿಡ್ನಿಯಲ್ಲಿ ಪ್ರೇಕ್ಷಕರ ಅಬ್ಬರ, ಕೋಲಾಹಲ. ಮೆರ್ವ್ ಪರಿಸ್ಥಿತಿಯನ್ನು ನಿರುಕಿಸಿ ಸಾರ್ವಜನಿಕ ಪ್ರಸಾರ ವ್ಯವಸ್ಥೆಯ ಮೈಕ್ ಹಿಡಿದರು. ‘ಫ್ರೆಂಡ್ಸ್, ಅಷ್ಟಿಷ್ಟು ಬೀರ್ ಹೀರುವುದರಲ್ಲಿ ಯಾವುದೇ ತಪ್ಪಿಲ್ಲ. ಖುಷಿ ಪಡಿ, ಮಜಾ ಮಾಡಿ. ಆದರೆ ನನ್ನ ಮಾತೊಂದನ್ನು ಕೇಳಿ. ನಿಮ್ಮ ಬೀರ್ ಹೀರುವ ವೇಗ ಆಸ್ಟ್ರೇಲಿಯಾದ ರನ್ ರೇಟ್‌ನ್ನು ಮಾತ್ರ ಮೀರದಿರಲಿ!!’

ವಿಶಿಷ್ಟ ಧ್ವನಿಯ ಹ್ಯೂಸ್‌ರ ಈ ಮಾತಿನ ನಂತರ ಪ್ರೇಕ್ಷಕರ ಅಮಲು ಇಳಿದಿರಲಿಕ್ಕಿಲ್ಲ. ಆದರೆ ಚಟುವಟಿಕೆ ಹತೋಟಿಗೆ ಬಂದಿದ್ದಂತೂ ನಿಜ. ಅಪ್ಪಟ ವೇಗಿಯ ಮಾತಿನ ಎಸೆತವದು - ಯಾರ್ಕರ್!


-ಮಾವೆಂಸ

ಇ ಮೇಲ್- mavemsa@gmail.com

ಸೋಮವಾರ, ಡಿಸೆಂಬರ್ 15, 2008

ಐದು ನೂರರ ಸಂಭ್ರಮ!!


ಬ್ಲಾಗ್ ಸ್ನೇಹಿತರೇ,

ಈಗೀಗ ಒಂದು ವಾರ ಪೂರೈಸಿದ ಚಲನಚಿತ್ರವೂ ಯಶಸ್ವಿ ಏಳು ದಿನಗಳ ಹಣೆಪಟ್ಟಿ ಹಾಕಿಕೊಂಡು ಮಿಂಚಬೇಕಾದ ಸ್ಥಿತಿ. ಅದನ್ನು ನಾವು ಈ ಕನ್ನಡ ಬ್ಲಾಗ್‌ಗಳಿಗೂ ಅನ್ವಯಿಸಬಹುದೇನೋ. ಮುಖ್ಯವಾಗಿ ನನಗೆ, ನನ್ನ ಈ ಬ್ಲಾಗ್‌ಗೆ ೫೦೦ ವೀಕ್ಷಕರು ಬಂದು ಹೋದ ಖುಷಿಯನ್ನು ಆಚರಿಸಿಕೊಳ್ಳಬೇಕಿತ್ತು. ಇವತ್ತು ಆ ದಿನ!

ಬ್ಲಾಗ್‌ಗೆ ಶ್ರೀಕಾರ ಹಾಕಿ ಕೆಲ ದಿನ ಆಗಿತ್ತಾದರೂ ನಿಜಕ್ಕೂ ಅಪ್‌ಲೋಡ್ ಮಾಡಲು ಶುರು ಮಾಡಿದ್ದು ನವೆಂಬರ್ ಎರಡರಂದು. ಅಂದರೆ ಈ ೪೩ ದಿನಗಳಲ್ಲಿ ೫೩೮* ವೀಕ್ಷಕರು ಬಂದಿದ್ದಾರೆ ಎನ್ನಬಹುದು. ಸರಾಸರಿ ದಿನಕ್ಕೆ ೧೩ ನೋಡುಗರ ಆಗಮನವೇ ದೊಡ್ಡ ಸುದ್ದಿ, ವಾರ ಓಡಿದ ಕನ್ನಡ ಸಿನೆಮಾದಂತೆ!

ಅದಿರಲಿ ಬಿಡಿ, ಈ ಬ್ಲಾಗ್‌ನಿಂದ ಆದ ಲಾಭ ಅಪಾರ. ಪ್ರಜಾವಾಣಿಯ ಗಾಣಧಾಳು, ಸುವರ್ಣದಲ್ಲಿ ಮಿನುಗುತ್ತಿರುವ ಚಾಮರಾಜ ಸವಡಿ, ಬೇಳೂರು ಸುದರ್ಶನ.... ಹೀಗೆ ಹಲವರ ಪರಿಚಯಕ್ಕೆ ಇದು ಕಾರಣೀಭೂತವಾಗಿದೆ. ಅಷ್ಟೇಕೆ, ಮಾಲ್ವೆ ವಿನಾಯಕರಂತ ಸ್ನೇಹಿತರು ಫೋನ್ ಮಾಡುವ ಸಂಬಂಧ ಬೆಳೆದದ್ದು ಈ ಬ್ಲಾಗ್‌ನಿಂದ. ಬಹುಷಃ ಈ ಬ್ಲಾಗ್‌ನಿಂದ ವಿಶೇಷ ಚರ್ಚೆಗಳು ನಡೆಯದಿದ್ದರೂ ಪರಿಚಯ ವಿಸ್ತಾರವಾಗಿದೆ. 
ಬ್ಲಾಗ್ ಹೇಗಿರಬೇಕು ಎಂಬ ಬಗ್ಗೆ ಈಗಲೂ ಸ್ಪಷ್ಟ ರೂಪರೇಷೆ ಮೂಡಿಲ್ಲ. ಸ್ವಲ್ಪ ತಿಳಿ ಹಾಸ್ಯ, ಖುಷಿ ಮಾಹಿತಿಗಳ ಜೊತೆಗೆ ಗಂಭೀರ ವಿಚಾರ ನೀಡಲೂ ಆಸಕ್ತಿ ವಹಿಸಲಿದ್ದೇನೆ. ಅದರ ಪುಟ್ಟ ಝಲಕ್ ಈವರೆಗಿನದು. ನಿಮ್ಮ ಟೀಕೆ ಟಿಪ್ಪಣಿ ಇದ್ದರೆ ಅನುಕೂಲ.

ಬ್ಲಾಗ್ ಬಗ್ಗೆ ನನಗೆ ಹೆಚ್ಚೇನು ಗೊತ್ತಿಲ್ಲದಿದ್ದಾಗ ಖುದ್ದು ತಾನೇ ಕೂತು ‘ಮಾವೆಂಸ’ ಬ್ಲಾಗ್ ರೂಪಿಸಿಕೊಟ್ಟ  ಬೇದೂರು ಆದಿತ್ಯನಿಗೆ ನೂರೊಂದು ನಮಸ್ಕಾರ. ತಾಳ್ಮೆಯಿಂದ ಬ್ಲಾಗ್‌ಗೆ  ಬಂದುಹೋದವರ ಲೆಕ್ಕ ಹಾಕುವ, ಈಗ ಇಣುಕಿದವರ ಸಂಖ್ಯೆ ಹೇಳುವ ಸಾಫ್ಟ್‌ವೇರ್ ಹಾಕಿ ಒಪ್ಪಮಾಡಿದ ಆದಿತ್ಯನ ತಾಳ್ಮೆ ಅಜರಾಮರವಾಗಲಿ. ಸಲಹೆ ಸೂಚನೆ ಇತ್ತ ಗಾಣಧಾಳು, ಶ್ರೀಪಾದ್ ಡಾಕ್ಟ್ರು ಮುಂತಾದ ಅನೇಕರಿಗೆ ಸಲಾಂ.

ಇಷ್ಟೆಲ್ಲ ಹೇಳಿ ಸುಮ್ಮನೆ ಒಮ್ಮೆ ಮಿತ್ರ ಶ್ರೀಶಂನ ಬ್ಲಾಗ್‌ನಲ್ಲಿ ಬಂದುಹೋದವರ ಲೆಕ್ಕ ನೋಡಿದರೆ ತಲೆ ಗಿರಕ್ ಅಂತು, ೫೮೮೫!!! ನಾನು ಇಲ್ಲಿ ೫೦೦ ದಾಟಿದ್ದಕ್ಕೆ ಹಾರಾಡುತ್ತಿರುವೆ, ಛೆ!
-ಮಾವೆಂಸ, mavemsa@gmail.com

ಭಾನುವಾರ, ಡಿಸೆಂಬರ್ 14, 2008

ಡಿಟಿಎಚ್ ಬಳಕೆದಾರರ ನೆರವಿಗೆ ಕಾನೂನು ಚೌಕಟ್ಟು



ಡೈರೆಕ್ಟ್ ಟು ಹೋಮ್ ಸರ್ವೀಸ್ ಎಂಬ ನೇರ ಉಪಗ್ರಹ ಸೇವೆಯ ಬಗ್ಗೆ ಸಾಕಷ್ಟು ಜನರಿಗೆ ಪರಿಚಯವಿದೆ. ಹೃಸ್ವವಾಗಿ ಡಿಟಿಎಚ್ ಎನ್ನುತ್ತೇವೆ ನಾವು. ಈ ಸೇವೆ ಸಹಾ ಭಾರತೀಯ ದೂರವಾಣಿ ನಿಯಂತ್ರಣ ಆಯೋಗ - ಟ್ರಾಯ್ ಮೇಲ್ವಿಚಾರಣೆಗೆ ಒಳಪಡುತ್ತದೆ. ಡಿಟಿಎಚ್ ಬಂದದ್ದು ಇತ್ತೀಚಿನ ವರ್ಷಗಳಲ್ಲಿ. ಅದಕ್ಕಾಗೋ ಏನೋ ನಿನ್ನೆ ಮೊನ್ನೆಯವರೆಗೂ ಟ್ರಾಯ್‌ಗೆ ಈ ಕ್ಷೇತ್ರದ ಬಳಕೆದಾರರ ಪರವಾಗಿ ನಿಯಮಗಳನ್ನು ರಚಿಸಲು ಆಗಿರಲಿಲ್ಲ. ಅಷ್ಟೇಕೆ, ಡಿಟಿಎಚ್ ಸೇವಾದಾತರಿಂದ ನಷ್ಟಕ್ಕೊಳಗಾದ ಗ್ರಾಹಕನಿಗೆ, ಗ್ರಾಹಕ ಕಾಯ್ದೆ ಅಥವಾ ಇತರ ನಾಗರಿಕ ಕಾನೂನುಗಳ ನೆರವು ಪಡೆಯಬಹುದಿತ್ತೇ ವಿನಃ ಅವರಿಗೇ ಅಂತಲೇ ಟ್ರಾಯ್ ವ್ಯವಸ್ಥೆ ಮಾಡಿರಲಿಲ್ಲ.
ಇವು ಹಿಂದಿನ ಕತೆ, ಇದೀಗ ಟ್ರಾಯ್ ಕೂಡ ನಿಯಮ ರೂಪಿಸಿದೆ. ಕೇಂದ್ರ ಸರ್ಕಾರ ಗೆಜೆಟ್‌ನಲ್ಲಿ ಪ್ರಕಟಿಸಿದ ದಿನದಿಂದ ಇವು ಜಾರಿಗೊಳ್ಳಲಿದೆ. ಈ ಕಾನೂನು ಬಹುಪಾಲು ಮೊಬೈಲ್ ಕ್ಷೇತ್ರದ ನಿಯಮಗಳನ್ನೇ ಹೋಲುವುದು ವಿಶೇಷ. 

‘ದಿ ಡೈರೆಕ್ಟ್ ಟು ಹೋಮ್’ ಸೇವಾ ಕಾನೂನು (ಸೇವಾ ಗುಣಮಟ್ಟ ಹಾಗೂ ದೂರು ಪರಿಹಾರ) ನಿಬಂಧನೆ, ೨೦೦೭ ಎಂಬ ಶೀರ್ಷಿಕೆಯಡಿ ಟ್ರಾಯ್ ನೋಟಿಫಿಕೇಷನ್‌ನ್ನು ಜಾರಿ ಮಾಡಿರುವುದು ೨೦೦೭ರ ಆಗಸ್ಟ್ ೩೧ರಂದು.
ನಾವು ರಿಸೀವರ್ ಎಂದು ಕರೆಯುವುದನ್ನು ತಾಂತ್ರಿಕ ಭಾಷೆಯಲ್ಲಿ ಸೆಟ್‌ಟಾಪ್ ಬಾಕ್ಸ್ (ಎಸ್‌ಟಿಬಿ) ಎನ್ನಲಾಗುತ್ತದೆ. ಇದನ್ನು ಡಿಟಿಎಚ್ ಸೇವಾದಾತರು (ಉದಾಹರಣೆಗೆ ಜಿಯವರ ಡಿಷ್ ಟಿವಿ, ಟಾಟಾಸ್ಕೈ, ಸನ್ ಡಿಷ್) ಬಳಕೆದಾರರಿಗೆ ಬಾಡಿಗೆ ಲೆಕ್ಕದಲ್ಲಿ ಅಥವಾ ಖರೀದಿಯ ಮಾದರಿಯಲ್ಲಿ ಒದಗಿಸಬೇಕು. ಇವತ್ತಿಗೂ ಡಿಷ್ ಟಿ.ವಿ. ಯವರು ಕೇವಲ ೫ ವರ್ಷದ ಬಾಡಿಗೆಗೆ ಎಂಬರ್ಥದಲ್ಲಿಯೇ ಎಸ್‌ಟಿಬಿಯನ್ನು ಪೂರೈಸುತ್ತಿದ್ದಾರೆ.
ಸೇವಾದಾತರ ಷರತ್ತುಗಳನ್ನು ಮೀರಿ, ಡಿಟಿಎಚ್ ಬಳಕೆದಾರ ಯಾವುದೇ ರೀತಿಯಲ್ಲಿ ಎಸ್‌ಟಿಬಿಯನ್ನು ಸ್ವಯಂ ಹಾಳುಗೆಡವದಿದ್ದ ಪಕ್ಷದಲ್ಲಿ, ಬಾಡಿಗೆ ರೂಪದಲ್ಲಿ ಅಳವಡಿಸಿಕೊಂಡ ಎಸ್‌ಟಿಬಿಯ ದುರಸ್ತಿ ಜವಾಬ್ದಾರಿ ಡಿಟಿಎಚ್ ಸೇವಾದಾತರದ್ದು.
ಒಂದೊಮ್ಮೆ ಈ ಕಾನೂನು ಜಾರಿಗೆ ಬರುವ ಮುನ್ನವೇ ಗ್ರಾಹಕರಿಗೆ ಡಿಟಿಎಚ್ ಸೇವಾದಾತರು ಬಿಐಎಸ್ ಮಾನ್ಯತೆ ಪಡೆಯದ ಎಸ್‌ಟಿಬಿಯನ್ನು ಪೂರೈಸಿದ್ದರೆ ಏನು ಮಾಡಬೇಕು? ನಿಬಂಧನೆಗಳ ಅನ್ವಯ, ಹೊಸ ಕಾನೂನು ಜಾರಿ ಬಂದ ಏಳು ದಿನಗಳಲ್ಲಿ ಸ್ವತಃ ಸೇವಾದಾತರು ಯಾವುದೇ ವೆಚ್ಚ ಪಡೆಯದೆ ಗ್ರಾಹಕನಿಗೆ ಹಳೆ ಎಸ್‌ಟಿಬಿ ಬದಲು ಹೊಸದಾದ ಬಿಐಎಸ್ ಗುರುತಿನ ಎಸ್‌ಟಿಬಿ ಒದಗಿಸಬೇಕು.
ಹೊಸ ಕಾನೂನಿನ ಪ್ರಕಾರ, ಬಳಕೆದಾರ ತನ್ನ ಸಂಪರ್ಕವನ್ನು ರದ್ದುಗೊಳಿಸಲೂ ಅವಕಾಶವಿದೆ. ಅರ್ಜಿದಾರನ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆ, ಪಡೆದ ಪ್ಲಾನ್, ನೋಂದಣಿ ಸಂಖ್ಯೆ ಮುಂತಾದ ವಿವರಗಳನ್ನು ತುಂಬಲು ಅವಕಾಶವಿರುವ ಅರ್ಜಿಯನ್ನು ಸೇವಾದಾತರೇ ಗ್ರಾಹಕರಿಗೆ ಒದಗಿಸಬೇಕು. ಅಷ್ಟೇಕೆ, ಓರ್ವ ಗ್ರಾಹಕ ನಿಂದ ಇನ್ನೋರ್ವ ಗ್ರಾಹಕನಿಗೆ ಡಿಷ್ ಸಂಪರ್ಕವನ್ನು ವರ್ಗಾಯಿಸಲೂ ನಿಯಮ ರೂಪಿಸಲಾಗಿದೆ.
ಈ ಮಾದರಿಯ ವರ್ಗಾವಣೆ, ರದ್ದು, ಪುನರ್ ಸಂಪರ್ಕಗಳ ವಿನಂತಿಯನ್ನು ಸ್ವೀಕರಿಸಿದ ಐದು ದಿನಗಳಲ್ಲಿ ತಾಂತ್ರಿಕ ಅನುಕೂಲವಿದ್ದಲ್ಲಿ ಕೆಲಸ ಪೂರ್ಣಗೊಳಿಸಿಕೊಡಬೇಕು.

ಚಾನೆಲ್ ಮಾಯ!

ಯಾವುದೇ ಪೂರ್ವ ಸೂಚನೆ ಇಲ್ಲದೆ ಬಳಕೆದಾರನ ಯೋಜನೆಯ ಚಾನೆಲ್‌ನ್ನು ಇದ್ದಕ್ಕಿದ್ದಂತೆ ಪ್ರಸಾರ ಮಾಡದೆ ನಿಲ್ಲಿಸು ವಂತಿಲ್ಲ. ಈ ಷರತ್ತು ಪ್ರಕೃತಿ ವಿಕೋಪ, ಇನ್ನಿತರ (ಸೇವಾದಾತರ ಕೈ ಮೀರಿದ) ಕಾರಣಗಳಿಂದ ಚಾನೆಲ್ ಪ್ರಸಾರ ನಿಂತರೆ ಅನ್ವಯಿಸುವುದಿಲ್ಲ.
ಇದ್ದಕ್ಕಿದ್ದಂತೆ ಚಂದಾದರನಿಗೆ ಸೇವೆ ನಿಲ್ಲಿಸಲೂ ಡಿಟಿಎಚ್ ಸೇವಾದಾತರಿಗೆ ಅವಕಾಶ ಇಲ್ಲ. ಅಂತಹ ಸಂದರ್ಭದಲ್ಲಿ ಪೂರ್ವ ಸೂಚನೆಯನ್ನು ಕಾರಣ ಸಮೇತ ಒದಗಿಸಬೇಕಾಗುತ್ತದೆ. ಒಂದೊಮ್ಮೆ ವ್ಯವಸ್ಥೆಯ ಸುರಕ್ಷತೆ ನಿರ್ವಹಣೆಗೆಂದು ಡಿಟಿಎಚ್ ಸೇವೆ ಕೆಲಕಾಲ ನಿಲ್ಲಿಸಬೇಕಾಗಿ ಬಂದರೂ ಪೂರ್ವಸೂಚನೆ ಕೊಡಬೇಕಾ ದುದು ಕಡ್ಡಾಯ, ಅಲ್ಲದೆ ಮತ್ತೆ ಸೇವೆ ಆರಂಭಗೊಳ್ಳುವ ದಿನವನ್ನೂ ಸೂಚಿಸ ಬೇಕಾಗುತ್ತದೆ. ಚಂದಾ ಹಣವನ್ನು ಪೂರ್ವ ಪಾವತಿ ಮಾಡುವ ವಿಧಾನ ಜಾರಿಯಲ್ಲಿರು ವುದರಿಂದ ಖಾತೆಯಲ್ಲಿ ಹಣವಿಲ್ಲದಿದ್ದಾಗ ಚಾನೆಲ್ ಪ್ರಸಾರ ನಿಲ್ಲಿಸುವುದಕ್ಕೆ ಸೇವಾದಾತರಿಗೆ ನಿರ್ಬಂಧವಿಲ್ಲ.
ಬಹುಷಃ ನಿಬಂಧನೆಯ ಗಮನಿಸಬೇಕಾದ ಅಂಶ ಈ ಮುಂದಿನದು. ಎಸ್‌ಟಿಬಿಗೆ ಸಂಬಂಧಿಸಿದಂತೆ ಯಾವುದೇ ಬಾಕಿಯನ್ನು ತುಂಬಬೇಕಾದ ಸನ್ನಿವೇಶ ಇಲ್ಲದಿದ್ದಲ್ಲಿ ಆ ಎಸ್‌ಟಿಬಿಯನ್ನು ಸೇವಾದಾತ ‘ಅನುಪಯುಕ್ತ’ ಗೊಳಿಸುವಂತಿಲ್ಲ. ಅಷ್ಟೇಕೆ, ಈ ಎಸ್‌ಟಿಬಿಯ ಮೂಲಕ ದೂರದರ್ಶನದ ಅಥವಾ ಇತರ ಡಿಟಿಎಚ್ ಸೇವಾದಾತರ ಸೇವೆ ಪಡೆಯಲು ನಿರ್ಬಂಧ ವಿಧಿಸುವಂತಿಲ್ಲ.
ಅಂದರೆ, ಐದು ವರ್ಷದ ಬಾಡಿಗೆ ಕೊಟ್ಟು ಪಡೆದ ಎಸ್‌ಟಿಬಿಯಲ್ಲಿ ಯಾವುದೇ ಪ್ಯಾಕೇಜ್‌ಗೆ ಹಣ ಪಾವತಿಸದಿದ್ದರೂ ದೂರದರ್ಶನದ ಉಚಿತ ಉಪಗ್ರಹ ಚಾನೆಲ್‌ಗಳನ್ನು ಪಡೆಯಬಹುದು.

ದರ ಏರಿಕೆ ಇಲ್ಲದ ಆರು ತಿಂಗಳು

ಡಿಟಿಎಚ್ ಬಳಕೆದಾರ ಯಾವುದೇ ಒಂದು ಪ್ಯಾಕೇಜ್‌ನ್ನು ಅಳವಡಿಸಿಕೊಂಡ ದಿನದಿಂದ ಕನಿಷ್ಟ ಆರು ತಿಂಗಳವರೆಗೆ ಆತನಿಗೆ ಈ ಪ್ಯಾಕೇಜ್ ಒದಗಿಸಲೇಬೇಕು. ಈ ಅವಧಿಯಲ್ಲಿ ಸೇವಾದಾತರಿಗೆ ಸದರಿ ಪ್ಯಾಕೇಜ್‌ನ ದರ ಇಳಿಸಲು ಅವಕಾಶವಿದೆಯೇ ವಿನಃ ಗ್ರಾಹಕನ ಹಿತಕ್ಕೆ ವಿರುದ್ಧವಾಗಿ ದರ ಏರಿಸಲಿಕ್ಕಲ್ಲ.
ಆದರೆ ಈ ಆರು ತಿಂಗಳ ಅವಧಿಯ ಮಧ್ಯೆಯೇ ಪ್ಯಾಕೇಜ್‌ನ್ನು ಬದಲಿಸಲು ಬಳಕೆದಾರನಿಗೆ ಯಾವುದೇ ಕಾನೂನು ತಡೆಯಿಲ್ಲ. ಈ ನಿಯಮ ಅಕ್ಷರಶಃ ಮೊಬೈಲ್ ಕ್ಷೇತ್ರದ ಕಾನೂನನ್ನೇ ಹೋಲುವಂತದು.
ಒಂದೊಮ್ಮೆ ಚಂದಾದಾರ ಅಥವಾ ಸ್ವತಃ ಸೇವಾದಾತಾರ ಡಿಟಿಎಚ್ ಸೇವೆಯನ್ನು ನಿರ್ದಿಷ್ಟ ಅವಧಿಯವರೆಗೆ ಪಡೆಯದಿದ್ದಲ್ಲಿ ಆ ವೇಳೆಗೆ ಯಾವುದೇ ಶುಲ್ಕ ವಿಧಿಸಲು ಸೇವಾದಾತರಿಗೆ ಅವಕಾಶವಿಲ್ಲ, ಅಲ್ಲದೆ ಮತ್ತೊಮ್ಮೆ ಚಂದಾ ನವೀಕರಿಸಿದಾಗಲೂ ಪುನರ್ಸಂಪರ್ಕ(ರಿ-ಆಕ್ಟಿವೇಷನ್) ಶುಲ್ಕ ಪಡೆಯುವುದು ಕಾನೂನುಬಾಹಿರ. ಸದರಿ ಸಮಯದಲ್ಲಿ ಎಸ್‌ಟಿಬಿಯ ಬಾಡಿಗೆಯನ್ನು ಮಾತ್ರವೇ ಸೇವಾದಾತರು ಪಡೆಯಲು ಹಕ್ಕುದಾರರು.
ಪೋಸ್ಟ್ ಪೇಯ್ಡ್ ಚಂದಾ ವ್ಯವಸ್ಥೆ ಇದ್ದಲ್ಲಿ, ಸೇವಾದಾತರು ಚಂದಾದಾರನಿಗೆ ಬಿಲ್‌ನಲ್ಲಿ (೧) ಪ್ಯಾಕೇಜ್ ವೆಚ್ಚ (೨) ಮೌಲ್ಯಾಧಾರಿತ ಸೇವಾ ಮೊತ್ತ (೩) ಎಸ್‌ಟಿಬಿ ಶುಲ್ಕ ಮತ್ತು (೪) ಅನ್ವಯಿಸುವ ತೆರಿಗೆಗಳ ಮಾಹಿತಿಯನ್ನು ನೀಡಲೇಬೇಕು.
ಈ ವರೆಗೆ ಡಿಟಿಎಚ್ ಚಂದಾದಾರರಿಗೆ ಅತಿ ಮುಖ್ಯ ಸಮಸ್ಯೆ ಕಾಡಿದ್ದು ದೂರು ಪರಿಹಾರದ ವಿಚಾರದಲ್ಲಿ. ಟ್ರಾಯ್ ಅತ್ತಲೂ ಗಮನ ಹರಿಸಿದ್ದು ದೂರು ನಿರ್ವಹಣೆಗೆ ಪಕ್ಕಾ ವ್ಯವಸ್ಥೆಯನ್ನೇ ಸೂಚಿಸಿದೆ.

ದೂರಿನ ಪರಿಹಾರ ಸಾಧ್ಯ

ಇನ್ನು ಮುಂದೆ ಎಲ್ಲ ಡಿಟಿಎಸ್ ಸೇವಾದಾತರು ಉಚಿತ ಕಾಲ್ ಸೆಂಟರ್‌ಗಳನ್ನು ಸ್ಥಾಪಿಸಬೇಕು. ಇವು ವಾರದ ಏಳೂ ದಿನ, ಸತತ ೨೪ ಘಂಟೆ ಕೆಲಸ ನಿರ್ವಹಿಸಬೇಕು. ಕರೆ ಮಾಡಿದ ಚಂದಾದಾರನಿಗೆ ಮಾಹಿತಿ ಒದಗಿಸುವುದು, ದೂರು ದಾಖಲಿಸಿ ಕೊಳ್ಳುವುದು ಮತ್ತು ದೂರು ಪರಿಹರಿಸು ವುದು ಇವುಗಳ ಜವಾಬ್ದಾರಿ. ಬಳಕೆದಾರನಿಗೆ ತಕ್ಷಣ ಸಂಪರ್ಕ ಲಭ್ಯವಾಗುಷ್ಟು ಲೈನ್‌ಗಳಿರಬೇಕು. ಇದಕ್ಕೆ ಟೋಲ್ ಫ್ರೀ ನಂಬರ್, ಕಸ್ಟಮರ್ ಕೇರ್ ನಂಬರ್, ಹೆಲ್ಪ್ ಲೈನ್ ನಂಬರ್, ಸ್ಪೆಶಲ್ ನಂಬರ್ ಎಂಬ ಮಾದರಿಗಳ ಹೆಸರು ಕೊಡಬಹುದು.
ಇವು ಉಚಿತವಾಗಿರಬೇಕು ಮತ್ತು ತಕ್ಕ ಪ್ರಚಾರವನ್ನು ಸೇವಾದಾತರು ಈ ಕುರಿತು ಒದಗಿಸಬೇಕು. ಯಾವುದೇ ದೂರು, ವಿಚಾರಣೆ, ವಿನಂತಿಗಳನ್ನು ಸ್ವೀಕರಿಸುವ ಕಾಲ್ ಸೆಂಟರ್ ಈ ಕರೆಗೆ ಸಂಬಂಧಿಸಿದಂತೆ ಒಂದು ವಿಶಿಷ್ಟ ಡಾಕೆಟ್ ಸಂಖ್ಯೆಯನ್ನು ಚಂದಾದಾರನಿಗೆ ಒದಗಿಸಬೇಕು. ಆದಷ್ಟು ಶೀಘ್ರ ಕಾಲ್‌ಸೆಂಟರ್‌ನಿಂದ ಪರಿಹಾರ ಲಭ್ಯವಾಗಬೇಕು. ಸಿಗ್ನಲ್ ಸಿಗದ ತಾಂತ್ರಿಕ ಸಮಸ್ಯೆಗೆ ೨೪ ಘಂಟೆಯಲ್ಲಿ ಪರಿಹಾರ ಒದಗಿಸಬೇಕು. ಉಳಿದ ಮಾದರಿಯ ದೂರುಗಳನ್ನು ೪೮ ಘಂಟೆಯಲ್ಲಿ ನಿರ್ವಹಿಸಬೇಕು. ಯಾವುದೇ ದೂರು ೫ ದಿನಗಳ ಗರಿಷ್ಟ ಅವಧಿಯನ್ನು ಮೀರಿ ಪರಿಹರಿಸದೆ ಉಳಿಯುವಂತಿಲ್ಲ.
ಯಾವುದೇ ಬಿಲ್ಲಿಂಗ್ ದೂರು ೭ ದಿನಗಳ ಅವಧಿಯಲ್ಲಿ ಇತ್ಯರ್ಥಗೊಳ್ಳ ಬೇಕು.ಚಂದಾದಾರನಿಗೆ ಯಾವುದೇ ಹಣ ಮರಳ ಬೇಕಿದ್ದಲ್ಲಿ ಅದಕ್ಕೆ ೩೦ ದಿನಗಳ ಕಾಲಮಿತಿಯಿರುತ್ತದೆ.

ಮುಂದಿನ ಹಂತ - ನೋಡಲ್ ಅಧಿಕಾರಿ
ಕಾಲ್ ಸೆಂಟರ್‌ನಲ್ಲಿ ಇತ್ಯರ್ಥವಾಗದ ಅಥವಾ ಸಮಾಧಾನ ದೊರಕದ ಸಂದರ್ಭಗಳಲ್ಲಿ ದೂರು ಪರಿಹಾರದ ಮುಂದಿನ ಹಂತವಾದ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬೇಕಾಗುತ್ತದೆ. ಕಾನೂನಿನನ್ವಯ, ಎಲ್ಲ ಡಿಟಿಎಚ್ ಸೇವಾದಾತರು ಪ್ರತಿ ರಾಜ್ಯದಲ್ಲಿ ನೋಡಲ್ ಅಧಿಕಾರಿ ಯನ್ನು ನೇಮಿಸಬೇಕಾ ಗುತ್ತದೆ. ಇವರ ಹೆಸರು, ಕಛೇರಿ ವಿಳಾಸ, ಸಂಪರ್ಕ ಫೋನ್ ಸಂಖ್ಯೆಗಳನ್ನು ಎಲ್ಲೆಡೆ ಜಾಹೀರು ಮಾಡಬೇಕು.
ಕೆಲವು ಅನಿವಾರ್‍ಯ ಸಂದರ್ಭಗಳಲ್ಲಿ ಡಿಟಿಎಚ್ ಬಳಕೆದಾರರು ಕಾಲ್ ಸೆಂಟರ್‌ಗಳನ್ನು ಸಂಪರ್ಕಿಸದೆ ದೂರು ಪರಿಹಾರಕ್ಕೆ ನೇರವಾಗಿ ನೋಡಲ್ ಅಧಿಕಾರಿಯನ್ನು ವಿನಂತಿಸಲೂ ಅವಕಾಶವಿದೆ. ಉಳಿದಂತೆ, ಕಾಲ್ ಸೆಂಟರ್‌ಗಳು ನೀಡುವ ವಿಶಿಷ್ಟ ಡಾಕೆಟ್ ಸಂಖ್ಯೆಯನ್ನು ನಮೂದಿಸಿ (ಉಲ್ಲೇಖಿಸಿ)ಯೇ ನೋಡಲ್ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ.
ಗಮನಿಸಬೇಕಾದುದೆಂದರೆ, ಈವರೆಗೆ ಯಾವುದೇ ಡಿಟಿಎಚ್ ಸೇವಾದಾತರು ರಾಜ್ಯಗಳಿಗೆ ಪ್ರತ್ಯೇಕವಾದ ಉಚಿತ ಸಂಪರ್ಕದ ಕಾಲ್ ಸೆಂಟರ್‌ಗಳನ್ನು ಸ್ಥಾಪಿಸಿಲ್ಲ. ಕೇಂದ್ರದಲ್ಲೊಂದು ಉಚಿತ ಗ್ರಾಹಕ ಸೇವಾ ಸಂಖ್ಯೆ ಇದ್ದರೂ ಅಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಸಂವಾದ ಅಸಾಧ್ಯ. ಈ ಹಿನ್ನೆಲೆಯಲ್ಲಿಯೂ ಹೊಸ ನಿಬಂಧನೆಗಳು ಬಳಕೆದಾರರಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಾವು.
ನೋಡಲ್ ಅಧಿಕಾರಿಯು ದೂರು ದಾಖಲಿಸಿಕೊಂಡ ೩ ದಿನಗಳೊಳಗೆ ಅರ್ಜಿ ಸ್ವೀಕೃತಿ ದಾಖಲೆ ನೀಡಬೇಕು. ಮುಂದಿನ ಹತ್ತು ದಿನಗಳ ಕಾಲ ಮಿತಿಯಲ್ಲಿ ಆತ ಗ್ರಾಹಕನ ದೂರು ಪರಿಹರಿಸಬೇಕು.
ಈ ನಡುವೆ ’ಟ್ರಾಯ್’ ಕೂಡ ತನ್ನ ಮುಂದಿರುವ ದೂರುಗಳನ್ನು ಡಿಟಿಎಚ್ ಸೇವಾದಾತರ ದೂರು ಪರಿಹಾರ ವ್ಯವಸ್ಥೆಯ ಮುಂದಿಡಲು ಕಾನೂನಿನಲ್ಲಿ ಅವಕಾಶ ಮಾಡಿಕೊಟ್ಟಿದೆ. ಸಾರ್ವಜನಿಕ ಹಿತಾಸಕ್ತಿ ಸ್ವರೂಪದ ಗ್ರಾಹಕ ದೂರುಗಳು, ಕಾಯ್ದೆ, ಕಾನೂನು, ನಿರ್ದೇಶನಗಳನ್ನು ಉಲ್ಲಂಘಿಸಿದ ಪ್ರಕರಣಗಳು, ಗ್ರಾಹಕ ಹಿತ ಕಾಪಾಡದ ಸೇವಾದಾತರ ಕ್ರಮಗಳ ಕುರಿತಂತೆ ಟ್ರಾಯ್ ಗ್ರಾಹಕ ದೂರುಗಳನ್ನು ಇಲ್ಲಿ ಪ್ರಸ್ತಾಪಿಸಬಬಹುದು. ಇವುಗಳನ್ನು ಸಂಬಂಧಿಸಿದವರು ೧೫ ದಿನಗಳ ಕಾಲಮಿತಿಯಲ್ಲಿ ಇತ್ಯರ್ಥಗೊಳಿಸಬೇಕಾಗುತ್ತದೆ.
ಇಂತಹ ಪ್ರಕರಣಗಳಲ್ಲಿ ಸ್ವಯಂ ಸೇವಾದಾತರು ಚಂದಾದಾರರಿಗೆ ದೂರು ವಿಚಾರದ ಫಲಿತಾಂಶವನ್ನು ದೂರು ಇತ್ಯರ್ಥಗೊಳಿಸಿದ ಒಂದು ತಿಂಗಳ ಅವಧಿಯಲ್ಲಿ ತಿಳಿಸಬೇಕಾಗುತ್ತದೆ.
ಟ್ರಾಯ್, ಡಿಟಿಎಚ್ ಕ್ಷೇತ್ರದ ನಿಯಮಗಳನ್ನು ರೂಪಿಸುವಾಗ ಕ್ಯಾಸ್ ವ್ಯವಸ್ಥೆ (ಕೇಬಲ್ ಬಳಕೆದಾರರಿಗೆ ಬೇಕಾದ ಚಾನೆಲ್‌ಗಳಿಗೆ ಚಂದಾದಾರರಾಗುವ ಎಸ್‌ಟಿಬಿ ತಾಂತ್ರಿಕತೆ) ಮತ್ತು ಮೊಬೈಲ್ ಕ್ಷೇತ್ರದ ಕಾನೂನುಗಳನ್ನು ಪರಿಗಣಿಸಿದೆ. ಈವರೆಗೆ ಡಿಟಿಎಚ್ ಬಳಕೆದಾರನ ಪರ ಯಾವುದೇ ನಿರ್ದಿಷ್ಟ ಕಾನೂನು, ದೂರು ಪರಿಹಾರ ವ್ಯವಸ್ಥೆ ಇದ್ದಿರಲಿಲ್ಲ ಎಂಬ ಹಿನ್ನೆಲೆಯಲ್ಲಿ ಈಗಿನ ಟ್ರಾಯ್ ನಿಯಮ ಸ್ವಾಗತಾರ್ಹ. ಬರುವ ದಿನಗಳಲ್ಲಿ ಇನ್ನಷ್ಟು ಕ್ರಮಗಳನ್ನು ಟ್ರಾಯ್‌ನಿಂದ ನಾವು ನಿರೀಕ್ಷಿಸಬಹುದು.

ಇನ್ನೇನು ಬೇಕು?

ಟ್ರಾಯ್ ಕಾಯ್ದೆಯಡಿ ಟ್ರಾಯ್ ಸ್ವತಂತ್ರ ಪ್ರಾಧಿಕಾರ ಜಾರಿಗೆ ಬಂದು ದಶಕವೊಂದು ಉರುಳಿದ್ದರೂ ಇದರ ವ್ಯಾಪ್ತಿಗೆ ಡಿಟಿಎಚ್ ಸೇವೆಯನ್ನು ಒಳಪಡಿಸಿದ್ದು ೨೦೦೪ರಷ್ಟು ಇತ್ತೀಚೆಗೆ, ಆ ವೇಳೆಗೆ ಮೊಬೈಲ್ ಕ್ಷೇತ್ರವನ್ನು ನೇರ್ಪುಗೊಳಿಸುವ ಧಾವಂತದಲ್ಲಿದ್ದ ಟ್ರಾಯ್ ಡಿಟಿಎಚ್ ಬಗ್ಗೆ ಕಾನೂನು ರೂಪಿಸಲು ವಿಳಂಬ ಮಾಡಿತು ಎಂತಲೇ ಹೇಳಬೇಕು. ಇದೀಗ ತಂದಿರುವ ನಿಬಂಧನೆಗಳೂ ‘ಏನೂ ಇಲ್ಲದುದಕ್ಕಿಂತ ಉತ್ತಮ’ ಎನ್ನುವಂತೆ!
ಡಿಟಿಎಚ್ ಸೇವಾದಾತರು ಚಾನೆಲ್‌ಗಳ ಪ್ಯಾಕೇಜ್‌ಗಳನ್ನು ರೂಪಿಸಿದ್ದಾರೆ. ಚಂದಾದಾರನಿಗೆ ಬಿಡಿ ಚಾನೆಲ್‌ಗಳನ್ನು ಆಯ್ದುಕೊಳ್ಳಲು ಅವಕಾಶ ನೀಡಿಲ್ಲ. ಕೆಲ ನಿರ್ದಿಷ್ಟ ಚಾನೆಲ್ ಅಗತ್ಯಕ್ಕೆ ಬಳಕೆದಾರ ಅನಾವಶ್ಯಕವಾಗಿ ಇಡೀ ಪ್ಯಾಕೇಜ್‌ನ್ನೇ ಆಯ್ದುಕೊಳ್ಳಬೇಕಾದ ವ್ಯವಸ್ಥೆ ಗ್ರಾಹಕ ಹಿತಕ್ಕೆ, ಟ್ರಾಯ್ ಹೇಳುವ ವ್ಯಾಪಾರೀ ನೀತಿಗೆ ವಿರುದ್ಧ.
ಟ್ರಾಯ್ ‘ಕ್ಯಾಸ್’ ವ್ಯವಸ್ಥೆಗೆ ಸ್ವಾಗತಾರ್ಹ ಚೌಕಟ್ಟು ರೂಪಿಸಿದೆ, ಅದರ ಪ್ರಕಾರ, ತಿಂಗಳ ಬಾಡಿಗೆಗೆ ಸೇವಾದಾತಾರ ಕನಿಷ್ಟ ೩೦ ಉಚಿತ ಚಾನೆಲ್ ಒದಗಿಸಬೇಕು. ಉಳಿದಂತೆ ಪ್ರತಿ ಚಾನೆಲ್‌ಗೆ ತಲಾ ೫ ರೂ.ನಂತೆ ಎಷ್ಟು ಚಾನೆಲ್‌ಗೂ ಗ್ರಾಹಕ ಚಂದಾದಾರನಾಗಲು ಅವಕಾಶವಿದೆ. ಈ ಸೂತ್ರವನ್ನು ಡಿಟಿಎಚ್ ಕ್ಷೇತ್ರಕ್ಕೂ ಅಳವಡಿಸಬೇಕಿತ್ತು. ಈವರೆಗೆ ಅಂತಹ ಪ್ರಯತ್ನ ಕಂಡುಬಂದಿಲ್ಲ.
ಇಲ್ಲೋರ್ವ ಗ್ರಾಹಕರಿಗೆ ಪ್ಯಾಕೇಜ್ ಪಡೆದಂದಿನಿಂದ ನೀಡಬೇಕಾದ ಒಂದು ಕನ್ನಡ ಚಾನೆಲ್ ಬರುತ್ತಲೇ ಇಲ್ಲ. ಹಲವು ಪ್ರಯತ್ನ ನಡೆಸಿದ್ದೂ ವಿಫಲವಾಗಿದೆ. ಹಲವು ತಿಂಗಳ ಹೋರಾಟದ ನಂತರ ಅದೂ ವೀಕ್ಷಣೆಗೆ ಸಿಕ್ಕೀತು ಎಂದುಕೊಳ್ಳೋಣ, ಆದರೆ ಕಳೆದ ಸಮಯಕ್ಕೆ ಪರಿಹಾರ, ಸೇವಾ ವ್ಯತ್ಯಯಕ್ಕೆ ದಂಡ? ಸಧ್ಯದ ಟ್ರಾಯ್ ನಿಬಂಧನೆಗಳಲ್ಲಿ ಈ ಪ್ರಾವಿಧಾನವನ್ನು ಕಲ್ಪಿಸಿಲ್ಲ. ಇದೊಂದು ದೊಡ್ಡ ದೋಷವೇ ಸರಿ.
ಬಹುಪಾಲು ಸೇವಾದಾತರು ಮೌಲ್ಯ ಭರಿತ ಸೇವೆಗಳನ್ನು ಒದಗಿಸುತ್ತಿರುವುದು ಖರೆ, ಆದರೆ ಇವನ್ನೆಲ್ಲ ಶುಲ್ಕ ಸಹಿತದ ಎಸ್‌ಎಂಎಸ್ ಮೂಲಕ ಪಡೆಯಬೇಕಾಗುತ್ತದೆ. ಇದೂ ಕೂಡ ಸಾಮಾನ್ಯ ವ್ಯಾಪಾರಕ್ಕೆ ಅಪವಾದ, ಶುಲ್ಕ ಭರಿತ ಸೇವೆ ಪಡೆಯುವ ಬೇಡಿಕೆಗೂ ಶುಲ್ಕ ತೆರುವಂತಾಗುವುದು ಸಮ್ಮತವಲ್ಲ. ಈ ಸಂಬಂಧವಾಗಿಯೂ ಟ್ರಾಯ್ ನಿರ್ದಿಷ್ಟ ನಿಯಮ ರೂಪಿಸಬೇಕಿತ್ತು.

ಬಳಸದೆ ಬಳಲುವ ಕಾನೂನು !

ಜಾರಿಗೊಳಿಸುವಲ್ಲಿ ತಕ್ಕ ಕ್ರಮ, ಪ್ರಚಾರ ಕೈಗೊಂಡಿಲ್ಲವೆಂದು ನಾವು ಟ್ರಾಯ್‌ನ್ನು ಹಿಗ್ಗಾಮುಗ್ಗ ಆಕ್ಷೇಪಿಸಬಹುದಾದರೂ, ಅದು ಗ್ರಾಹಕ ಪರವಾಗಿಯೇ ನಿಂತಿದೆ ಎಂಬುದು ಪರಮ ಸತ್ಯ. ಮೊಬೈಲ್ ಕ್ಷೇತ್ರದಲ್ಲಂತೂ ಅದು ತಂದ ಜನಪರ ಕಾನೂನುಗಳು, ನಿರ್ದೇಶನಗಳು ಖುದ್ದು ಗ್ರಾಹಕ ಆಂದೋಲನದ ಕಾರ್‍ಯಕರ್ತರನ್ನು ಅಚ್ಚರಿಗೆ ಈಡುಮಾಡುವಂತವು. ಅವು ಜಾರಿಯಾಗಿಲ್ಲ ಎಂದರೆ ಅದು ಬರೀ ಟ್ರಾಯ್ ಸೋಲಲ್ಲ, ಪ್ರಜ್ಞಾವಂತರಾದ ನಮ್ಮದೂ ಕೂಡ.
ಸಾಗರದ ಬಳಕೆದಾರರ ವೇದಿಕೆ ಗಮನಿಸಿದಂತೆ ಹತ್ತು ಹಲವರು ಘೋಷಿತ ಫುಲ್‌ಟಾಕ್‌ಟೈಮ್ ನೀಡಿದ ಮೋಸ, ಎಸ್‌ಎಂಎಸ್ ಅನ್ಯಾಯದ ಬಗ್ಗೆ ಅಲವತ್ತುಗೊಂಡದ್ದುಂಟು, ಆದರೆ ಕಾಲ್‌ಸೆಂಟರ್, ಡಾಕೆಟ್ ಸಂಖ್ಯೆ, ನೋಡಲ್ ಆಫೀಸರ್........ ಈ ವಿವರಗಳನ್ನೆಲ್ಲ ಕೇಳಿ ಮುಂದುವರಿಯದಿದ್ದವರೇ ಹೆಚ್ಚು. ನಾವೇ ಗೆಲ್ಲುವ ಪ್ರಕರಣಗಳಲ್ಲಿ ನಿರುತ್ಸಾಹಗೊಂಡರೆ ಟ್ರಾಯ್ ಏನು ಮಾಡೀತು? ಇತ್ತ ಮೊಬೈಲ್ ಕಂಪನಿಗಳು ತಮ್ಮ ಅನೈತಿಕ ಲಾಭ ಭಕ್ಷಣೆಯನ್ನು ಮುಂದುವರಿಸುತ್ತದೆ.
ಮೊಬೈಲ್ ಕ್ಷೇತ್ರದಲ್ಲಾದ ಪ್ರಜ್ಞಾವಂತರ ದುರಂತ, ಬಹುಪಾಲು ಮಧ್ಯಮ ವರ್ಗ, ಗ್ರಾಮೀಣರ ಸ್ವತ್ರಾಗಿರುವ ಡೈರೆಕ್ಟ್ ಟು ಹೋಮ್ ಕ್ಷೇತ್ರದಲ್ಲಾಗದಿದ್ದರೆ ಮಾತ್ರ ಟ್ರಾಯ್‌ಗೆ ಸಾರ್ಥಕತೆ.

ಡಿಟಿಎಚ್ ಕುರಿತ ಟ್ರಾಯ್ ಕಾನೂನಿನ ಪೂರ್ಣಪಾಠ ಬೇಕಾದವರು www. trai. gov.in ವೆಬ್‌ಸೈಟ್‌ನಿಂದ ಪಡೆಯಲು ಸಾಧ್ಯ.


- ಮಾವೆಂಸ


ಇ ಮೇಲ್- mavemsa@rediffmail.com

ಗುರುವಾರ, ಡಿಸೆಂಬರ್ 4, 2008

ಚಾಕಲೇಟ್ ತಿಂದೀರಿ, ಜೋಕೆ!





                   ವಾಸ್ತವವಾಗಿ ಇದು ನಿಮ್ಮ ಆರೋಗ್ಯದ ಬಗ್ಗೆ ಮುಂಜಾಗ್ರತೆ ಕ್ರಮಗಳನ್ನು ಸೂಚಿಸಲು ತಯಾರಿಸಿದ ಲೇಖನವಲ್ಲ, ಆದರೆ ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಮಾದರಿಯ ಚಾಕಲೇಟ್‌ಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದ ನವದೆಹಲಿಯ ಕನ್ಸ್ಯೂಮರ್ ವಾಯ್ಸ್‌ನ ವರದಿಯ ಮಾಹಿತಿ ಓದಿದವರು ಹೇಳಲೇಬೇಕಾಗುತ್ತದೆ, ಚಾಕಲೇಟ್ ತಿಂದೀರಿ, ಜೋಕೆ!
ಭಾರತದಲ್ಲಿ ಚಾಕಲೇಟ್ ಬಳಕೆ ರುಚಿಗೆ, ಮಜಕ್ಕೆ. ಅದೇ ಅಮೇರಿಕದಲ್ಲಿ, ಒಂದರ್ಥದಲ್ಲಿ ಇದು ಆಹಾರ ಪದಾರ್ಥ. ಅಲ್ಲಿನ ಎಫ್‌ಡಿಎ ಕಾನೂನು ಶೇ. ೧೦೦ರಷ್ಟು ಪ್ರಮಾಣದಲ್ಲಿ ಕೊಕೋ ಬೆಣ್ಣೆಯನ್ನು ಬಳಸುವುದನ್ನು ಕಡ್ಡಾಯಗೊಳಿಸಿದೆ. ಉಳಿದಂತೆ ಹಾಲಿನ ಕೆನೆ ಬಳಸಬಹುದಷ್ಟೆ. ಖಾದ್ಯ ತೈಲ ಬಳಸುವಂತಿಲ್ಲ. ಕಡಿಮೆ ಸಕ್ಕರೆ, ಬರೀ ಕೊಕೋ ಬೆಣ್ಣೆಯ ಮೃದು ತಯಾರಿಗಳು ಅಲ್ಲಿ ಆಹಾರ ಪದಾರ್ಥವಾಗಿ ಪರಿಗಣನೆಯಾದುದರಲ್ಲಿ ಅಚ್ಚರಿಯಿಲ್ಲ. ಅಲ್ಲೂ ಖಾದ್ಯ ತೈಲ ಬಳಸಿ ಸೃಷ್ಟಿಸಿದವುಗಳಿವೆ. ಅವುಗಳನ್ನು ಚಾಕಲೇಟ್ ಎನ್ನುವಂತಿಲ್ಲ! ಚಾಕಲೇಟ್‌ಗೆ ಪೂರಕ ಎನ್ನುತ್ತಾರಷ್ಟೆ. ಈ ಮಾಹಿತಿಗಳು ಲೇಬಲ್‌ನಲ್ಲಿ ಸ್ಪಷ್ಟವಾಗಿರುವುದರಿಂದ ಗ್ರಾಹಕ ಪಿಗ್ಗಿ ಬೀಳುವುದಿಲ್ಲ.
ಅತ್ತ ಬೆಲ್ಜಿಯಂನಲ್ಲಿ ವರ್ಷಕ್ಕೆ ೧೭೨ ಮಿಲಿಯನ್ ಟನ್ ಚಾಕಲೇಟ್ ತಯಾರಾಗುತ್ತದೆ! ವರ್ಷವೊಂದಕ್ಕೆ ಅಲ್ಲಿನ ವ್ಯಕ್ತಿ ಸರಾಸರಿ ೯ ಕೆ.ಜಿ. ಚಾಕಲೇಟ್ ತಿನ್ನುತ್ತಾನೆ. ಅಲ್ಲಿ ಚಾಕಲೇಟ್‌ಗೇ ಮೀಸಲಾದ ಮ್ಯೂಸಿಯಂಗಳಿವೆ. ಅಷ್ಟಕ್ಕೂ ಬೆಲ್ಜಿಯಂ ಚಾಕಲೇಟ್‌ಗಳು ವಿಶ್ವದಲ್ಲಿಯೇ ಶ್ರೇಷ್ಟವೆಂಬ ಖ್ಯಾತಿ ಪಡೆದಿವೆ. ಈಗಲೂ ಅಲ್ಲಿ ಚಾಕಲೇಟ್‌ಗಳು ಹಳೆಯ ತಾಂತ್ರಿಕತೆಯಲ್ಲಿ ತಯಾರಾಗುತ್ತಿವೆ. ಅವೆಲ್ಲ ನುರಿತ ಕೈಗಳಿಂದಲೇ ಸೃಷ್ಟಿಯಾಗುತ್ತಿವೆ!
೨೦೦೦ದಲ್ಲಿ ಯುರೋಪಿಯನ್ ಒಕ್ಕೂಟ ಚಾಕಲೇಟ್‌ಗಳಲ್ಲಿ ಶೇ.೫ರ ಖಾದ್ಯತೈಲ ಬಳಕೆಯನ್ನು ಒಪ್ಪಿ ನಿಯಮ ರೂಪಿಸಿತು. ಬೆಲ್ಜಿಯಂನಲ್ಲಿ ಸಮಾಜ ತೀಕ್ಷ ವಾಗಿ ಪ್ರತಿಕ್ರಿಯಿಸಿತು. ಜನಾಂದೋಲನವಾಯಿತು. ಅಲ್ಲಿನ ಸಚಿವಾಲಯ ಪೂರ್ಣ ಕೊಕೋ ಬಳಕೆಯ ಚಾಕಲೇಟ್‌ನ್ನೇ ಸಮರ್ಥಿಸಿ ವಿಶೇಷ ನಿಯಮ, ಎಎಂಬಿಎಓವನ್ನು ಜಾರಿಗೊಳಿಸಬೇಕಾಯಿತು. 
ಇಂತಹ ರಾಷ್ಟ್ರಗಳ ಉದಾಹರಣೆಗಳ ಹಿನ್ನೆಲೆಯಲ್ಲಿ ಭಾರತದೆಡೆಗೆ ನೋಡಿದರೆ ನಿರಾಶೆಯಾಗುತ್ತದೆ. ಜನಪ್ರಿಯ ೧೩ ಬ್ರಾಂಡ್‌ಗಳ ಪೈಕಿ ಏಳರಲ್ಲಿ ಖಾದ್ಯ ತೈಲ ಬಳಕೆಯಾಗಿದೆ. ಆರೋಗ್ಯ ಸಚಿವಾಲಯದ ಆಹಾರ ಕಲಬೆರಕೆ ತಡೆ ಕಾಯ್ದೆ  ಪಿಎಫ್‌ಎ ಪ್ರಕಾರ ಚಾಕಲೇಟ್‌ಗಳಲ್ಲಿ ಖಾದ್ಯ ತೈಲ ಉಪಯೋಗ ಸಂಪೂರ್ಣ ನಿಷಿದ್ಧ. ಕೆಲವು ಚಾಕಲೇಟ್‌ಗಳಲ್ಲಂತೂ ಅತ್ಯಂತ ಕೆಟ್ಟ ಪರಿಣಾಮದ ಹೈಡ್ರೋಜನರೇಟೆಡ್ ಖಾದ್ಯತೈಲ ಕಂಡುಬಂದಿವೆ.
ತಾವು ಖಾದ್ಯ ತೈಲ ಬಳಸಿರುವುದನ್ನಾಗಲೀ, ಯಾವ ಪ್ರಮಾಣದಲ್ಲಿ ಕೊಕೋ ಸೇರಿಸಿದ್ದೇವೆನ್ನುವುದನ್ನಾಗಲೀ ಭಾರತೀಯ ತಯಾರಿಕೆಗಳು ಲೇಬಲ್‌ನಲ್ಲಿ ನಮೂದಿಸಿರುವುದು ಕಡಿಮೆ. ಇಲ್ಲಿ ಲಭ್ಯವಾಗುವ ಟೋಬ್ಲರ್ ಕೊಕೋ ಬಳಸಿದ ಪ್ರಮಾಣವನ್ನು ನಮೂದಿಸಿವೆ. ಸ್ವಾರಸ್ಯವೆಂದರೆ, ಇವೆರಡೂ ಆಮದು ಚಾಕಲೇಟ್‌ಗಳು!
ಭಾರತೀಯ ಚಾಕಲೇಟ್ ತಯಾರಿಕೆಗಳಿಗೆ ಹಿಂಬಾಗಿಲ ಹಾದಿಗೆ ರಾಜಮಾರ್ಗವೇ ತೆರೆದಿದೆ. ಚಾಕಲೇಟ್‌ಗಳಲ್ಲಿನ ಕೊಕೋ ಪರಿಮಾಣವನ್ನು ಪತ್ತೆ ಹಚ್ಚಲು ತಾಂತ್ರಿಕತೆಯ ಕೊರತೆಯಿದೆ. ಕನ್ಸ್ಯೂಮರ್ ವಾಯ್ಸ್ ಸಂಸ್ಥೆಯು ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್), ಮೈಸೂರಿನ ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್‌ಟಿಆರ್‌ಐ) ಹಾಗೂ ಚೆನ್ನೈನ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ನ್ಯೂಟ್ರಿಷನ್‌ನ್ನು ಸಂಪರ್ಕಿಸಿದರೂ ಅದಕ್ಕೆ ಅಗತ್ಯ ತಾಂತ್ರಿಕತೆ ಪಡೆಯಲು ಸಾಧ್ಯವಾಗದ್ದು ಇದಕ್ಕೆ ಸಾಕ್ಷಿ.
ಇದು ಬಿಐಎಸ್‌ಗೂ ಗೊತ್ತಿದೆ, ಹಾಗಾಗಿ ನಿಯಮ ಐಎಸ್ ೧೧೬೩:೧೯೯೨ ಮೂಲಕ ತಯಾರಿಕೆ ವೇಳೆಯಲ್ಲಿ ಬೆರೆಸುವ ಕೊಕೋ ದ್ರವ್ಯ ಪ್ರಮಾಣವನ್ನು ದಾಖಲಿಸಬೇಕೆಂಬ ಸಲಹೆ ನೀಡುತ್ತದೆ. ಇದೊಂದು ತರಹ ಹಾವು ಸಾಯದ, ಕೋಲೂ ಮುರಿಯದ ಸ್ಥಿತಿ. ಚಾಕ್‌ಲೇಟ್‌ನಲ್ಲಿರಬೇಕಾದ ಕನಿಷ್ಟ ಕೊಕೋ ಬಗ್ಗೆ ಯಾವುದೇ ಮಾನದಂಡ ಇಲ್ಲದಿರುವಾಗ ಲೇಬಲ್‌ನಲ್ಲಿ ಆ ಮಾಹಿತಿ ಕೊಡಬೇಕಾದ ಅಗತ್ಯವೇನು ಎಂದೇ ವಿಶ್ವ ಮಾರುಕಟ್ಟೆ ಹೊಂದಿರುವ ಕ್ಯಾಡ್‌ಬರಿ ‘ಭಾರತದಲ್ಲಿ’ ವಾದಿಸುತ್ತದೆ!
ಚಾಕಲೇಟ್‌ಗಳಲ್ಲಿ ಬಳಸುವ ಕೊಕೋ ಬೆಣ್ಣೆ ಸಸ್ಯಜನ್ಯವಾದುದು. ನಮ್ಮಲ್ಲಿನ ತೋಟ, ಗುಡ್ಡಗಳಲ್ಲಿ ಬೆಳೆಸುವ ಕೊಕೋ ಗಿಡಗಳ ಕಾಯಿಯೊಳಗೆ ಕೊಕೋ ಬೀಜಗಳಿರುತ್ತವೆ. ಕಾಯಿ ಹಣ್ಣಾದಂತೆ ಈ ಬೀಜಗಳನ್ನು ಬೇರ್ಪಡಿಸಿ, ನಿರ್ದಿಷ್ಟ ಉಷ್ಣತೆಯಲ್ಲಿ ಒಣಗಿಸಲಾಗುತ್ತದೆ. ಕರ್ನಾಟಕದಲ್ಲಿ ಕ್ಯಾಂಪ್ಕೋದಂತ ಸಹಕಾರಿ ಸಂಸ್ಥೆ ಕೊಕೋ ಬೀಜಗಳನ್ನು ಖರೀದಿಸಿ, ಸಂಸ್ಕರಿಸುತ್ತದೆ. ಆಫ್ರಿಕನ್ ದೇಶಗಳಲ್ಲಿ ರೈತರೇ ಸ್ವತಃ ಬೀಜ ಒಣಗಿಸುವ ಸಂಪ್ರದಾಯವಿದೆ. 
ಆದರೆ ಕೊಕೋ ಬೀಜದೊಳಗಿನಿಂದ ಬೆಣ್ಣೆಯನ್ನು ಯಾಂತ್ರಿಕ ಸಹಾಯದಿಂದ ತೆಗೆಯಲಾಗುತ್ತದೆ. ಇದೇ ಚಾಕಲೇಟ್‌ನ ಮುಖ್ಯ ಕಚ್ಚಾ ಪದಾರ್ಥ. ಈ ಕೊಕೋ ಬೆಣ್ಣೆಯ ಕೊಬ್ಬಿನ ಅಂಶ ಆರೋಗ್ಯಕ್ಕೆ ಏನೇನೂ ಹಾನಿಕರವಲ್ಲ ಎಂಬುದು ಯುನೈಟೆಡ್ ಸ್ಟೇಟ್ಸ್ ಫುಡ್ ಎಂಡ್ ಡ್ರಗ್ಸ್ ಅಡ್ಮಿನಿಸ್ಟೇಷನ್‌ನ ಸಂಶೋಧನೆಯಿಂದ ಖಚಿತವಾಗಿದೆ.  ಹಾಗಾಗಿಯೇ ಅದು ಅಮೆರಿಕದಲ್ಲಿ ಶೇ. ೧೦೦ರ ಕೊಕೋ ಬೆಣ್ಣೆಯನ್ನೇ ಬಳಸಬೇಕೆಂಬ ಕಟ್ಟುನಿಟ್ಟಿನ ಮಾನದಂಡವನ್ನು ನಿಗದಿಪಡಿಸಿದೆ.
ಚಾಕಲೇಟ್‌ನಲ್ಲಿ ಬಾಯಲ್ಲಿ ಕರಗುವ ಬೆಣ್ಣೆಯ ಅಂಶವಂತೂ ಬೇಕು. ಕೊಕೋ ಬೆಣ್ಣೆಯಲ್ಲವಾದರೆ ಇನ್ನಾವುದೇ ಖಾದ್ಯ ತೈಲವನ್ನಾದರೂ ಬಳಸಲೇಬೇಕು. ತಾಳೆ, ಶೇಂಗಾ, ಸೂರ್ಯಕಾಂತಿ ಎಣ್ಣೆಗಳನ್ನು ಮತ್ತು ಅವುಗಳ ಪರಿಷ್ಕರಿಸಿದ ರೂಪದಲ್ಲಿ ಬಳಸಬಹುದು. ಇವುಗಳ ಕೊಬ್ಬಿನ ಅಂಶ ನಮ್ಮ ಜೀರ್ಣಾಂಗದಲ್ಲಿ ಸುಲಭದಲ್ಲಿ ಕರಗುವಂತದಲ್ಲ. ಅದರಲ್ಲೂ ಚಿಕ್ಕ ಮಕ್ಕಳೇ ಚಾಕಲೇಟ್‌ಗಳನ್ನು ಹೆಚ್ಚಾಗಿ ತಿನ್ನುವ ಭಾರತೀಯ ಸನ್ನಿವೇಶದಲ್ಲಿ ಖಾದ್ಯ ತೈಲದ ವಿಪರೀತ ಉಪಯೋಗದ ಅಪಾಯ ಅರ್ಥವಾಗುವಂತದು. 
ಭಾರತೀಯ ಚಾಕಲೇಟ್ ತಯಾರಕರು ಖಾದ್ಯ ತೈಲ ಸೇರಿಸಿಯೂ ಮುಗುಂ ಆಗಿದ್ದಕ್ಕೆ ಇಟಲಿಯಲ್ಲಿ ಉತ್ಪಾದಿಸಲ್ಪಡುವ, ಇಲ್ಲಿ ಖರೀದಿಗೆ ಲಭಿಸುವ ಫೆರೆರೋ ರೋಚರ್ ತಾನು ತಾಳೆ ಎಣ್ಣೆ ಬೆರೆಸಿರುವುದನ್ನು ರ್‍ಯಾಪರ್‌ನಲ್ಲಿಯೇ ಒಪ್ಪಿಕೊಳ್ಳುತ್ತದೆ! 
ಭಾರತೀಯ ಮಾರುಕಟ್ಟೆಯಲ್ಲಿ ಅನಧಿಕೃತ, ಬೇನಾಮಿ ಚಾಕಲೇಟ್‌ಗಳು ಹೇರಳ. ತಿನ್ನುವ ನಾವೂ ಅಧಿಕೃತತೆಯ ಪರೀಕ್ಷೆಗೆ ಹೋಗುವುದಿಲ್ಲ. ‘ಮಂಚ್’ ಇಲ್ಲದಿದ್ದರೆ, ಅದೇ ರೂಪದ ನಕಲಿ ‘ಪಂಚ್’ ಆದರೂ ಆದೀತು. ನಮ್ಮ ಅಜ್ಞಾನ, ಅಲಕ್ಷ್ಯ ಚಾಕ್‌ಲೇಟ್ ತಯಾರಕರಿಗಂತೂ ವರದಾನವಾಗಿದೆ.
ನಾವು ನಿರೀಕ್ಷಿಸುವುದು ಸಿಹಿ. ಬಿಐಎಸ್ ಚಾಕಲೇಟ್‌ಗಳಲ್ಲಿ ಗರಿಷ್ಟ ಶೇ.೫೫ ಸಕ್ಕರೆ ಅಂಶ ಇರಬಹುದು ಎಂದಿದೆ. ವಾಸ್ತವದಲ್ಲಿ, ಕಡಿಮೆ ಸಕ್ಕರೆ ಇದ್ದಲ್ಲಿ ಹೆಚ್ಚಿನ ಕೊಕೋ ಪ್ರಮಾಣಕ್ಕೆ ಅವಕಾಶ. ಕ್ಯಾಡ್‌ಬರಿ ಕ್ರಾಕ್ಲ್‌ನಲ್ಲಿ                 ಶೇ.೫೪.೨೩ಯಷ್ಟು ಸಕ್ಕರೆ ಇದೆ. ನೆಸ್ಲೆ ಬಾರ್ ಒನ್, ಕ್ಯಾಡ್‌ಬರಿ ೫ ಸ್ಟಾರ್, ಅಮುಲ್ ಚಾಕೋಜೂಗಳಲ್ಲಿ ಹೈಡ್ರೋಜನರೇಟೆಡ್ ಖಾದ್ಯತೈಲವಿದೆ. ಇದಕ್ಕಿಂತ ಸಕ್ಕರೆ ಹೆಚ್ಚಿರುವ ಕ್ರಾಕ್ಲ್‌ನಂತವು ಕ್ಷೇಮ!
ಭಾರತೀಯರು ಮಿಲ್ಕೀಬಾರ್ ಚಾಕಲೇಟ್‌ಗಳಿಗೆ ಮುಗಿಬೀಳುವುದು ಕಂಡುಬರುತ್ತದೆ. ಹಾಲಿನಿಂದ ತಯಾರಿಸಲ್ಪಡುವ ಚಾಕಲೇಟ್ ಇದ್ದುದರಲ್ಲಿ ಒಳ್ಳೆಯದು ಎಂಬ ಕಲ್ಪನೆಯಿದೆ. ನಿಜ, ಹಾಲಿನ ಪ್ರಮಾಣ ಹೆಚ್ಚಿದ್ದರೆ ಒಳ್ಳೆಯದೇ. ಅಸಲಿಗೆ ಅವು ಚಾಕಲೇಟ್‌ನಲ್ಲಿ ಎಷ್ಟು ಇದೆ ಎಂಬುದು ಸಂಶಯ!
ನವದೆಹಲಿಯ ‘ವಾಯ್ಸ್’ ಸಂಸ್ಥೆ ಎನ್‌ಎಬಿಎಲ್ ಪ್ರಯೋಗಾಲಯದಲ್ಲಿ ೬ ತಿಂಗಳ ಕಾಲ ಚಾಕಲೇಟ್‌ಗಳ ನಾನಾತರದ ಪರೀಕ್ಷೆ ಮಾಡುತ್ತದೆ. ನೆಸ್ಲೆ ಬಾರ್ ಒನ್ ಹಾಗೂ ಅಮುಲ್ ಚಾಕೋಜೂನಂತ ಬ್ರಾಂಡ್‌ನಲ್ಲಿ ಇರುವ ಹಾಲಿನ ಪ್ರಮಾಣ ಎಷ್ಟು ಕಡಿಮೆ ಎಂದರೆ ಲ್ಯಾಬ್ ಟೆಸ್ಟ್‌ನಲ್ಲಿ ಪತ್ತೆಯಾಗುವುದೇ ಇಲ್ಲ!
ಮಾರ್‍ಸ್ ಬ್ರಾಂಡ್‌ನಲ್ಲಿ ಶೇ.೧೪.೫೮ರ ಹಾಲು ಪ್ರಮಾಣವಿರುವುದು ಉಲ್ಲೇಖಾರ್ಹ. ಉಳಿದವುಗಳಲ್ಲಿ ಶೇ. ೫ರ ಆಚೀಚೆಯಲ್ಲಿಯೇ ಹಾಲಿನ ಪ್ರಮಾಣವಿರುವುದು ವ್ಯಕ್ತ. 
ಯೋಚಿಸಬೇಕಾದವರು ನಾವು. ಶೇ.೫೦ ಸಕ್ಕರೆ, ಶೇ.೫ ಹಾಲು ಎಂದರೆ ಉಳಿದ ಶೇ.೪೫ ಭಾಗದಲ್ಲಿ ಪ್ರಿಜರ್‌ವೇಟಿವ್, ಬಣ್ಣ, ಸ್ವಾದದ ರಾಸಾಯನಿಕಗಳು. ಮಕ್ಕಳನ್ನೇ ಹೆಚ್ಚಾಗಿ ಆಕರ್ಷಿಸುವ ಚಾಕಲೇಟ್‌ಗಳನ್ನು ಹಟಕ್ಕೆ ಬಿದ್ದವರಂತೆ ತಿನ್ನಿಸುವ ನಾವು ಅಕ್ಷರಶಃ ಮಾಡುತ್ತಿರುವುದೇನು? 
ಮಕ್ಕಳಿಗೆ ಖುದ್ದು ವಿಷ ಇಕ್ಕುತ್ತಿದ್ದೇವೆ!
ಎರಡು ವಿಷಯ ಪ್ರಸ್ತಾಪಾರ್ಹ. ಇನ್ನು ಮುಂದೆ ಚಾಕಲೇಟ್ ಖರೀದಿಸುವವರು, ಅದರೊಳಗೆ ಅಳವಡಿಸಿರುವ ಅಂಶಗಳನ್ನು ಲೇಬಲ್‌ನಲ್ಲಿ ಓದಿ ನಂತರವೇ ಕೊಳ್ಳುವುದು ಕ್ಷೇಮ. ಆದರೆ ಲೇಬಲ್‌ನಲ್ಲಿ ಮಾಹಿತಿ ಇರುವುದಿಲ್ಲ, ಮುದ್ರಿಸಿರುವುದಿಲ್ಲ ಎಂಬುದೇ ದೊಡ್ಡ ದೂರು. ಆಗಲೂ ಒಳ್ಳೆಯ ಚಾಕಲೇಟ್‌ನ ಪರೀಕ್ಷೆಗೆ ಒಂದು ಸರಳ ಕ್ರಮವಿದೆ. ಆ ಚಾಕಲೇಟ್‌ನಲ್ಲಿ ಕೆಲಕಾಲ ಕೈಯಲ್ಲಿ ಭದ್ರವಾಗಿ ಹಿಡಿದುಕೊಳ್ಳಬೇಕು. ಅದೆಷ್ಟು ಬೇಗ ಮೆದುವಾಗುತ್ತದೋ ಅಷ್ಟು ಯೋಗ್ಯ. ಕೊಕೋ ಪ್ರಮಾಣ ಹೆಚ್ಚಿದೆ ಎಂದುಕೊಳ್ಳಬಹುದು.
ಲೇಬಲ್‌ನಲ್ಲಿ ಅದನ್ನು ಚಾಕೋಲೇಟ್ ಎಂದು ನಮೂದಿಸಿರುವುದನ್ನು ಖಚಿತಪಡಿಸಿಕೊಳ್ಳಿ. ಅಮುಲ್ ಚಾಕೋಜೂ ಬ್ರಾಂಡ್ ಚಾಕಲೇಟ್ ಅಲ್ಲವೇ ಅಲ್ಲ. ಅದು ಚಾಕೋಬೈಟ್! !

ಚಾಕಲೇಟ್ - ಸಿಹಿ ಸ್ಥಾನ

ನವದೆಹಲಿಯ ಕನ್ಸ್ಯೂಮರ್ ವಾಯ್ಸ್ ಖ್ಯಾತಿವೆತ್ತ ೧೩ ಚಾಕಲೇಟ್ ಬ್ರಾಂಡ್‌ಗಳನ್ನು ಪರೀಕ್ಷೆಗೊಳಪಡಿಸಿದೆ. ತೂಕ, ಪ್ಯಾಕಿಂಗ್‌ಗಳೂ ಸೇರಿದಂತೆ ಆಹಾರ ದ್ರವ್ಯ ಪರೀಕ್ಷೆ ನಡೆಸಿ ರ್‍ಯಾಂಕಿಂಗ್ ನೀಡಿದೆ. ಆ ಪಟ್ಟಿ ಕೆಳಗಿದೆ. ಖರೀದಿಗೆ ಮುನ್ನ ಈ ಮಾಹಿತಿಯನ್ನು ನೀವು ಅಳವಡಿಸಿಕೊಂಡರೆ .... ಬಿಡಿ, ಅದು ನಿಮ್ಮದೇ ಆರೋಗ್ಯದ ವಿಷಯ. ನಮಗ್ಯಾಕೆ!? 
ಮಿಲ್ಕೀ ಚಾಕಲೇಟ್ ವರ್ಗದಲ್ಲಿ,
೧. ಕ್ಯಾಡ್‌ಬರಿ ಡೈರಿ ಮಿಲ್ಕ್
೨. ನೆಸ್ಲೆ ಮಿಲ್ಕ್
೩. ಟೋಬ್ಲೆರಾನ್
೪. ಮಾರ್‍ಸ್
೫. ವ್ಯಾನ್ ಹೌಟೆನ್
೬. ಕ್ಯಾಡ್ ಬರಿ ಫೈವ್ ಸ್ಟಾರ್
೭. ನೆಸ್ಲೆ ಬಾರ್ ಒನ್
೮. ಅಮುಲ್ ಚಾಕೋಜೂ
ಮಿಶ್ರ ಮಾದರಿ ವರ್ಗದಲ್ಲಿಲ,
೧. ಕ್ಯಾಡ್‌ಬರಿ ಟೆಂಪ್ಟೇಷನ್ ಆಲ್ಮಂಡ್ ಟ್ರೀಟ್
೨. ಕ್ಯಾಡ್‌ಬರಿ ಫ್ರೂಟ್ ಎಂಡ್ ನಟ್ 
೩. ಫೆರೆರೋ ರೋಚೆರ್
೪. ಮಿಸ್ಬಿಸ್ ಸ್ಲೋಬಾರ್‍ಸ್ 
೫. ಕ್ಯಾಡ್‌ಬರಿ ಕ್ರಾಕ್ಲ್

ಇನ್ನೊಂದು ಮುಖ

ಚಾಕಲೇಟ್‌ನ ಸವಿಯನ್ನು ಮೆಂದು ಮೈ ಮರೆತಿರುವವರಿಗೆ ಹಿಂದಿನ ಕರಾಳ ವ್ಯವಸ್ಥೆಯೊಂದರ ಅರಿವು ಇರಲಿಕ್ಕೆ ಸಾಧ್ಯವಿಲ್ಲ. ಚಾಕಲೇಟ್‌ನ ಮುಖ್ಯ ಪದಾರ್ಥ ಕೊಕೋನ ಬಹುಪಾಲು ಆಮದುಗೊಳ್ಳುವುದು ಬಡ ಆಫ್ರಿಕನ್ ದೇಶಗಳಿಂದ. ಘಾನಾ ದೇಶ ತನ್ನ ರಫ್ತಿನಿಂದ ಗಳಿಸುವ ಆದಾಯದಲ್ಲಿ ಶೇ. ೪೬ ಕೊಕೋ ಬಾಬತ್ತಿನದು-ಅದೇ ಐವರಿ ಕೋಸ್ಟಾ ವಿಶ್ವ ಮಾರುಕಟ್ಟೆಯ ಶೇ. ೪೩ ಭಾಗವನ್ನು ತಾನೇ ಪೂರೈಸುತ್ತದೆ.
ಅತ್ಯಂತ ಕಡಿಮೆ ಬೆಲೆಗೆ ಕೊಕೋವನ್ನು ರಫ್ತು ಮಾಡಲು ಪಶ್ಚಿಮ ಆಫ್ರಿಕಾ ದೇಶಗಳಿಗೆ ಸಾಧ್ಯವಾಗುವುದು ಬಾಲ ಕಾರ್ಮಿಕರಿಂದ! ಒಂದು ಅಂದಾಜಿನ ಪ್ರಕಾರ, ೨ ಲಕ್ಷದ ೮೪ ಸಾವಿರ ಮಕ್ಕಳು ಅಹರ್ನಿಶಿ ಜುಜುಬಿ ಸಂಬಳಕ್ಕೆ ದುಡಿಯುತ್ತಿದ್ದಾರೆ. ೨೦೦೦ದಲ್ಲೊಮ್ಮೆ ಅಮೆರಿಕದ ಕಾರ್ಮಿಕ ಇಲಾಖೆ ತನಿಖೆ ನಡೆಸಿ ಕಂಡುಹಿಡಿದಿತ್ತು. ಆ ವರ್ಷ ಘಾನಾದಲ್ಲಿ ೯ ರಿಂದ ೧೨ರ ಮಧ್ಯದ ೧೫ ಸಾವಿರ ಮಕ್ಕಳು ಹತ್ತಿ, ಕಾಫಿ, ಕೊಕೋ ಪ್ಲಾಂಟೇಷನ್‌ಗೆ ಮಾರಲ್ಪಟ್ಟಿದ್ದರು. ಇವರೆಲ್ಲ ಕಳ್ಳ ಸಾಗಾಣಿಕೆಯಾದ ಮಕ್ಕಳು! ಅಲ್ಲಿನ ಕಾರ್ಮಿಕರ, ಅವರ ಕುಟುಂಬಗಳ ಸ್ಥಿತಿ ಹೀನಾಯ.
ಚಾಕಲೇಟ್ ಕಂಪನಿಗಳು ಮಾತ್ರ ಅದಕ್ಕೂ ತಮಗೂ ಸಂಬಂಧವಿಲ್ಲ ಎಂತಲೇ ವಾದಿಸುತ್ತವೆ. ತಾವು ಕೊಕೋವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆಯೇ ವಿನಃ ಕಾರ್ಮಿಕ ಶೋಷಣೆಯನ್ನು ಬೆಂಬಲಿಸುವುದಿಲ್ಲ. ಆದರೆ ಸದರಿ ವಿಚಾರದಲ್ಲಿ ತಾವು ಅಸಹಾಯಕರು ಎನ್ನುತ್ತಾರೆ.
ಕೊನೆ ಪಕ್ಷ ಅಮೆರಿಕನ್ ಕಂಪನಿಗಳ ವಿಚಾರದಲ್ಲಿ ಇದು ಸುಳ್ಳು. ಅಲ್ಲಿನ ಹೆರ್ಷೆಯ್ ಹಾಗೂ ಮಾರ್‍ಸ್ ಚಾಕಲೇಟ್ ಕಂಪನಿಗಳು ಬೃಹತ್ ಮಾರುಕಟ್ಟೆಯ ಭಾಗವಾಗಿದ್ದು, ಅವು ಅನಾಯಾಸವಾಗಿ ಕೊಕೋ ಕಾರ್ಮಿಕರ ಕಲ್ಯಾಣದ ಷರತ್ತು ಒಡ್ಡಿ ಕಚ್ಚಾ ಕೊಕೋ ಖರೀದಿಸಬಹುದು. ಈ ಕಂಪನಿಗಳ ಒತ್ತಡವನ್ನು ಭರಿಸಲು ಪ್ಲಾಂಟೇಶನ್ ಮಾಲಿಕರಿಗೆ ಸಾಧ್ಯವಿಲ್ಲ.
ಒಂದು ಪೌಂಡ್ ಚಾಕಲೇಟ್‌ಗೆ ೪೦೦ ಕೊಕೋ ಬೀಜ ಹೆಕ್ಕುವ ಆಫ್ರಿಕನ್ ಬಾಲಕ ಮಾತ್ರ ತನ್ನ ಜೀವಮಾನದಲ್ಲಿ ಹೊಳೆಯುವ ಪ್ಯಾಕ್‌ನಲ್ಲಿರುವ ಚಾಕಲೇಟ್ ರುಚಿ ನೋಡುವುದೇ ಇಲ್ಲ!

ಕೊನೆ ಮಾತು - ಚಾಕಲೇಟ್‌ಗಳಲ್ಲೂ ಕೆಲವು ಮೊಟ್ಟೆಯ ಬಿಳಿ ಅಂಶ ಬಳಸಿಕೊಂಡಿರುತ್ತವೆ. ಉದಾಹರಣೆಗೆ, ಮಾರ್‍ಸ್ ಹಾಗೂ ಟೋಬ್ಲೆರಾನ್ ಚಾಕಲೇಟ್‌ಗಳು ಸಸ್ಯಹಾರಿ ಅಲ್ಲ! ಹಾಗೆಂದು ಇವ್ಯಾವುದೇ ಚಾಕಲೇಟ್ ರ್‍ಯಾಪರ್‌ನಲ್ಲಿ ಕೆಂಪು ಚುಕ್ಕೆ, ಹಸಿರು ಚುಕ್ಕೆ ಇಲ್ಲ!
ಇನ್ನುಳಿದಂತೆ, ಚಾಕಲೇಟ್ ಬಗ್ಗೆ ತೀರ್ಮಾನ ನಿಮ್ಮದು.
-ಮಾವೆಂಸ

 
200812023996