ಭಾನುವಾರ, ಡಿಸೆಂಬರ್ 14, 2008

ಡಿಟಿಎಚ್ ಬಳಕೆದಾರರ ನೆರವಿಗೆ ಕಾನೂನು ಚೌಕಟ್ಟುಡೈರೆಕ್ಟ್ ಟು ಹೋಮ್ ಸರ್ವೀಸ್ ಎಂಬ ನೇರ ಉಪಗ್ರಹ ಸೇವೆಯ ಬಗ್ಗೆ ಸಾಕಷ್ಟು ಜನರಿಗೆ ಪರಿಚಯವಿದೆ. ಹೃಸ್ವವಾಗಿ ಡಿಟಿಎಚ್ ಎನ್ನುತ್ತೇವೆ ನಾವು. ಈ ಸೇವೆ ಸಹಾ ಭಾರತೀಯ ದೂರವಾಣಿ ನಿಯಂತ್ರಣ ಆಯೋಗ - ಟ್ರಾಯ್ ಮೇಲ್ವಿಚಾರಣೆಗೆ ಒಳಪಡುತ್ತದೆ. ಡಿಟಿಎಚ್ ಬಂದದ್ದು ಇತ್ತೀಚಿನ ವರ್ಷಗಳಲ್ಲಿ. ಅದಕ್ಕಾಗೋ ಏನೋ ನಿನ್ನೆ ಮೊನ್ನೆಯವರೆಗೂ ಟ್ರಾಯ್‌ಗೆ ಈ ಕ್ಷೇತ್ರದ ಬಳಕೆದಾರರ ಪರವಾಗಿ ನಿಯಮಗಳನ್ನು ರಚಿಸಲು ಆಗಿರಲಿಲ್ಲ. ಅಷ್ಟೇಕೆ, ಡಿಟಿಎಚ್ ಸೇವಾದಾತರಿಂದ ನಷ್ಟಕ್ಕೊಳಗಾದ ಗ್ರಾಹಕನಿಗೆ, ಗ್ರಾಹಕ ಕಾಯ್ದೆ ಅಥವಾ ಇತರ ನಾಗರಿಕ ಕಾನೂನುಗಳ ನೆರವು ಪಡೆಯಬಹುದಿತ್ತೇ ವಿನಃ ಅವರಿಗೇ ಅಂತಲೇ ಟ್ರಾಯ್ ವ್ಯವಸ್ಥೆ ಮಾಡಿರಲಿಲ್ಲ.
ಇವು ಹಿಂದಿನ ಕತೆ, ಇದೀಗ ಟ್ರಾಯ್ ಕೂಡ ನಿಯಮ ರೂಪಿಸಿದೆ. ಕೇಂದ್ರ ಸರ್ಕಾರ ಗೆಜೆಟ್‌ನಲ್ಲಿ ಪ್ರಕಟಿಸಿದ ದಿನದಿಂದ ಇವು ಜಾರಿಗೊಳ್ಳಲಿದೆ. ಈ ಕಾನೂನು ಬಹುಪಾಲು ಮೊಬೈಲ್ ಕ್ಷೇತ್ರದ ನಿಯಮಗಳನ್ನೇ ಹೋಲುವುದು ವಿಶೇಷ. 

‘ದಿ ಡೈರೆಕ್ಟ್ ಟು ಹೋಮ್’ ಸೇವಾ ಕಾನೂನು (ಸೇವಾ ಗುಣಮಟ್ಟ ಹಾಗೂ ದೂರು ಪರಿಹಾರ) ನಿಬಂಧನೆ, ೨೦೦೭ ಎಂಬ ಶೀರ್ಷಿಕೆಯಡಿ ಟ್ರಾಯ್ ನೋಟಿಫಿಕೇಷನ್‌ನ್ನು ಜಾರಿ ಮಾಡಿರುವುದು ೨೦೦೭ರ ಆಗಸ್ಟ್ ೩೧ರಂದು.
ನಾವು ರಿಸೀವರ್ ಎಂದು ಕರೆಯುವುದನ್ನು ತಾಂತ್ರಿಕ ಭಾಷೆಯಲ್ಲಿ ಸೆಟ್‌ಟಾಪ್ ಬಾಕ್ಸ್ (ಎಸ್‌ಟಿಬಿ) ಎನ್ನಲಾಗುತ್ತದೆ. ಇದನ್ನು ಡಿಟಿಎಚ್ ಸೇವಾದಾತರು (ಉದಾಹರಣೆಗೆ ಜಿಯವರ ಡಿಷ್ ಟಿವಿ, ಟಾಟಾಸ್ಕೈ, ಸನ್ ಡಿಷ್) ಬಳಕೆದಾರರಿಗೆ ಬಾಡಿಗೆ ಲೆಕ್ಕದಲ್ಲಿ ಅಥವಾ ಖರೀದಿಯ ಮಾದರಿಯಲ್ಲಿ ಒದಗಿಸಬೇಕು. ಇವತ್ತಿಗೂ ಡಿಷ್ ಟಿ.ವಿ. ಯವರು ಕೇವಲ ೫ ವರ್ಷದ ಬಾಡಿಗೆಗೆ ಎಂಬರ್ಥದಲ್ಲಿಯೇ ಎಸ್‌ಟಿಬಿಯನ್ನು ಪೂರೈಸುತ್ತಿದ್ದಾರೆ.
ಸೇವಾದಾತರ ಷರತ್ತುಗಳನ್ನು ಮೀರಿ, ಡಿಟಿಎಚ್ ಬಳಕೆದಾರ ಯಾವುದೇ ರೀತಿಯಲ್ಲಿ ಎಸ್‌ಟಿಬಿಯನ್ನು ಸ್ವಯಂ ಹಾಳುಗೆಡವದಿದ್ದ ಪಕ್ಷದಲ್ಲಿ, ಬಾಡಿಗೆ ರೂಪದಲ್ಲಿ ಅಳವಡಿಸಿಕೊಂಡ ಎಸ್‌ಟಿಬಿಯ ದುರಸ್ತಿ ಜವಾಬ್ದಾರಿ ಡಿಟಿಎಚ್ ಸೇವಾದಾತರದ್ದು.
ಒಂದೊಮ್ಮೆ ಈ ಕಾನೂನು ಜಾರಿಗೆ ಬರುವ ಮುನ್ನವೇ ಗ್ರಾಹಕರಿಗೆ ಡಿಟಿಎಚ್ ಸೇವಾದಾತರು ಬಿಐಎಸ್ ಮಾನ್ಯತೆ ಪಡೆಯದ ಎಸ್‌ಟಿಬಿಯನ್ನು ಪೂರೈಸಿದ್ದರೆ ಏನು ಮಾಡಬೇಕು? ನಿಬಂಧನೆಗಳ ಅನ್ವಯ, ಹೊಸ ಕಾನೂನು ಜಾರಿ ಬಂದ ಏಳು ದಿನಗಳಲ್ಲಿ ಸ್ವತಃ ಸೇವಾದಾತರು ಯಾವುದೇ ವೆಚ್ಚ ಪಡೆಯದೆ ಗ್ರಾಹಕನಿಗೆ ಹಳೆ ಎಸ್‌ಟಿಬಿ ಬದಲು ಹೊಸದಾದ ಬಿಐಎಸ್ ಗುರುತಿನ ಎಸ್‌ಟಿಬಿ ಒದಗಿಸಬೇಕು.
ಹೊಸ ಕಾನೂನಿನ ಪ್ರಕಾರ, ಬಳಕೆದಾರ ತನ್ನ ಸಂಪರ್ಕವನ್ನು ರದ್ದುಗೊಳಿಸಲೂ ಅವಕಾಶವಿದೆ. ಅರ್ಜಿದಾರನ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆ, ಪಡೆದ ಪ್ಲಾನ್, ನೋಂದಣಿ ಸಂಖ್ಯೆ ಮುಂತಾದ ವಿವರಗಳನ್ನು ತುಂಬಲು ಅವಕಾಶವಿರುವ ಅರ್ಜಿಯನ್ನು ಸೇವಾದಾತರೇ ಗ್ರಾಹಕರಿಗೆ ಒದಗಿಸಬೇಕು. ಅಷ್ಟೇಕೆ, ಓರ್ವ ಗ್ರಾಹಕ ನಿಂದ ಇನ್ನೋರ್ವ ಗ್ರಾಹಕನಿಗೆ ಡಿಷ್ ಸಂಪರ್ಕವನ್ನು ವರ್ಗಾಯಿಸಲೂ ನಿಯಮ ರೂಪಿಸಲಾಗಿದೆ.
ಈ ಮಾದರಿಯ ವರ್ಗಾವಣೆ, ರದ್ದು, ಪುನರ್ ಸಂಪರ್ಕಗಳ ವಿನಂತಿಯನ್ನು ಸ್ವೀಕರಿಸಿದ ಐದು ದಿನಗಳಲ್ಲಿ ತಾಂತ್ರಿಕ ಅನುಕೂಲವಿದ್ದಲ್ಲಿ ಕೆಲಸ ಪೂರ್ಣಗೊಳಿಸಿಕೊಡಬೇಕು.

ಚಾನೆಲ್ ಮಾಯ!

ಯಾವುದೇ ಪೂರ್ವ ಸೂಚನೆ ಇಲ್ಲದೆ ಬಳಕೆದಾರನ ಯೋಜನೆಯ ಚಾನೆಲ್‌ನ್ನು ಇದ್ದಕ್ಕಿದ್ದಂತೆ ಪ್ರಸಾರ ಮಾಡದೆ ನಿಲ್ಲಿಸು ವಂತಿಲ್ಲ. ಈ ಷರತ್ತು ಪ್ರಕೃತಿ ವಿಕೋಪ, ಇನ್ನಿತರ (ಸೇವಾದಾತರ ಕೈ ಮೀರಿದ) ಕಾರಣಗಳಿಂದ ಚಾನೆಲ್ ಪ್ರಸಾರ ನಿಂತರೆ ಅನ್ವಯಿಸುವುದಿಲ್ಲ.
ಇದ್ದಕ್ಕಿದ್ದಂತೆ ಚಂದಾದರನಿಗೆ ಸೇವೆ ನಿಲ್ಲಿಸಲೂ ಡಿಟಿಎಚ್ ಸೇವಾದಾತರಿಗೆ ಅವಕಾಶ ಇಲ್ಲ. ಅಂತಹ ಸಂದರ್ಭದಲ್ಲಿ ಪೂರ್ವ ಸೂಚನೆಯನ್ನು ಕಾರಣ ಸಮೇತ ಒದಗಿಸಬೇಕಾಗುತ್ತದೆ. ಒಂದೊಮ್ಮೆ ವ್ಯವಸ್ಥೆಯ ಸುರಕ್ಷತೆ ನಿರ್ವಹಣೆಗೆಂದು ಡಿಟಿಎಚ್ ಸೇವೆ ಕೆಲಕಾಲ ನಿಲ್ಲಿಸಬೇಕಾಗಿ ಬಂದರೂ ಪೂರ್ವಸೂಚನೆ ಕೊಡಬೇಕಾ ದುದು ಕಡ್ಡಾಯ, ಅಲ್ಲದೆ ಮತ್ತೆ ಸೇವೆ ಆರಂಭಗೊಳ್ಳುವ ದಿನವನ್ನೂ ಸೂಚಿಸ ಬೇಕಾಗುತ್ತದೆ. ಚಂದಾ ಹಣವನ್ನು ಪೂರ್ವ ಪಾವತಿ ಮಾಡುವ ವಿಧಾನ ಜಾರಿಯಲ್ಲಿರು ವುದರಿಂದ ಖಾತೆಯಲ್ಲಿ ಹಣವಿಲ್ಲದಿದ್ದಾಗ ಚಾನೆಲ್ ಪ್ರಸಾರ ನಿಲ್ಲಿಸುವುದಕ್ಕೆ ಸೇವಾದಾತರಿಗೆ ನಿರ್ಬಂಧವಿಲ್ಲ.
ಬಹುಷಃ ನಿಬಂಧನೆಯ ಗಮನಿಸಬೇಕಾದ ಅಂಶ ಈ ಮುಂದಿನದು. ಎಸ್‌ಟಿಬಿಗೆ ಸಂಬಂಧಿಸಿದಂತೆ ಯಾವುದೇ ಬಾಕಿಯನ್ನು ತುಂಬಬೇಕಾದ ಸನ್ನಿವೇಶ ಇಲ್ಲದಿದ್ದಲ್ಲಿ ಆ ಎಸ್‌ಟಿಬಿಯನ್ನು ಸೇವಾದಾತ ‘ಅನುಪಯುಕ್ತ’ ಗೊಳಿಸುವಂತಿಲ್ಲ. ಅಷ್ಟೇಕೆ, ಈ ಎಸ್‌ಟಿಬಿಯ ಮೂಲಕ ದೂರದರ್ಶನದ ಅಥವಾ ಇತರ ಡಿಟಿಎಚ್ ಸೇವಾದಾತರ ಸೇವೆ ಪಡೆಯಲು ನಿರ್ಬಂಧ ವಿಧಿಸುವಂತಿಲ್ಲ.
ಅಂದರೆ, ಐದು ವರ್ಷದ ಬಾಡಿಗೆ ಕೊಟ್ಟು ಪಡೆದ ಎಸ್‌ಟಿಬಿಯಲ್ಲಿ ಯಾವುದೇ ಪ್ಯಾಕೇಜ್‌ಗೆ ಹಣ ಪಾವತಿಸದಿದ್ದರೂ ದೂರದರ್ಶನದ ಉಚಿತ ಉಪಗ್ರಹ ಚಾನೆಲ್‌ಗಳನ್ನು ಪಡೆಯಬಹುದು.

ದರ ಏರಿಕೆ ಇಲ್ಲದ ಆರು ತಿಂಗಳು

ಡಿಟಿಎಚ್ ಬಳಕೆದಾರ ಯಾವುದೇ ಒಂದು ಪ್ಯಾಕೇಜ್‌ನ್ನು ಅಳವಡಿಸಿಕೊಂಡ ದಿನದಿಂದ ಕನಿಷ್ಟ ಆರು ತಿಂಗಳವರೆಗೆ ಆತನಿಗೆ ಈ ಪ್ಯಾಕೇಜ್ ಒದಗಿಸಲೇಬೇಕು. ಈ ಅವಧಿಯಲ್ಲಿ ಸೇವಾದಾತರಿಗೆ ಸದರಿ ಪ್ಯಾಕೇಜ್‌ನ ದರ ಇಳಿಸಲು ಅವಕಾಶವಿದೆಯೇ ವಿನಃ ಗ್ರಾಹಕನ ಹಿತಕ್ಕೆ ವಿರುದ್ಧವಾಗಿ ದರ ಏರಿಸಲಿಕ್ಕಲ್ಲ.
ಆದರೆ ಈ ಆರು ತಿಂಗಳ ಅವಧಿಯ ಮಧ್ಯೆಯೇ ಪ್ಯಾಕೇಜ್‌ನ್ನು ಬದಲಿಸಲು ಬಳಕೆದಾರನಿಗೆ ಯಾವುದೇ ಕಾನೂನು ತಡೆಯಿಲ್ಲ. ಈ ನಿಯಮ ಅಕ್ಷರಶಃ ಮೊಬೈಲ್ ಕ್ಷೇತ್ರದ ಕಾನೂನನ್ನೇ ಹೋಲುವಂತದು.
ಒಂದೊಮ್ಮೆ ಚಂದಾದಾರ ಅಥವಾ ಸ್ವತಃ ಸೇವಾದಾತಾರ ಡಿಟಿಎಚ್ ಸೇವೆಯನ್ನು ನಿರ್ದಿಷ್ಟ ಅವಧಿಯವರೆಗೆ ಪಡೆಯದಿದ್ದಲ್ಲಿ ಆ ವೇಳೆಗೆ ಯಾವುದೇ ಶುಲ್ಕ ವಿಧಿಸಲು ಸೇವಾದಾತರಿಗೆ ಅವಕಾಶವಿಲ್ಲ, ಅಲ್ಲದೆ ಮತ್ತೊಮ್ಮೆ ಚಂದಾ ನವೀಕರಿಸಿದಾಗಲೂ ಪುನರ್ಸಂಪರ್ಕ(ರಿ-ಆಕ್ಟಿವೇಷನ್) ಶುಲ್ಕ ಪಡೆಯುವುದು ಕಾನೂನುಬಾಹಿರ. ಸದರಿ ಸಮಯದಲ್ಲಿ ಎಸ್‌ಟಿಬಿಯ ಬಾಡಿಗೆಯನ್ನು ಮಾತ್ರವೇ ಸೇವಾದಾತರು ಪಡೆಯಲು ಹಕ್ಕುದಾರರು.
ಪೋಸ್ಟ್ ಪೇಯ್ಡ್ ಚಂದಾ ವ್ಯವಸ್ಥೆ ಇದ್ದಲ್ಲಿ, ಸೇವಾದಾತರು ಚಂದಾದಾರನಿಗೆ ಬಿಲ್‌ನಲ್ಲಿ (೧) ಪ್ಯಾಕೇಜ್ ವೆಚ್ಚ (೨) ಮೌಲ್ಯಾಧಾರಿತ ಸೇವಾ ಮೊತ್ತ (೩) ಎಸ್‌ಟಿಬಿ ಶುಲ್ಕ ಮತ್ತು (೪) ಅನ್ವಯಿಸುವ ತೆರಿಗೆಗಳ ಮಾಹಿತಿಯನ್ನು ನೀಡಲೇಬೇಕು.
ಈ ವರೆಗೆ ಡಿಟಿಎಚ್ ಚಂದಾದಾರರಿಗೆ ಅತಿ ಮುಖ್ಯ ಸಮಸ್ಯೆ ಕಾಡಿದ್ದು ದೂರು ಪರಿಹಾರದ ವಿಚಾರದಲ್ಲಿ. ಟ್ರಾಯ್ ಅತ್ತಲೂ ಗಮನ ಹರಿಸಿದ್ದು ದೂರು ನಿರ್ವಹಣೆಗೆ ಪಕ್ಕಾ ವ್ಯವಸ್ಥೆಯನ್ನೇ ಸೂಚಿಸಿದೆ.

ದೂರಿನ ಪರಿಹಾರ ಸಾಧ್ಯ

ಇನ್ನು ಮುಂದೆ ಎಲ್ಲ ಡಿಟಿಎಸ್ ಸೇವಾದಾತರು ಉಚಿತ ಕಾಲ್ ಸೆಂಟರ್‌ಗಳನ್ನು ಸ್ಥಾಪಿಸಬೇಕು. ಇವು ವಾರದ ಏಳೂ ದಿನ, ಸತತ ೨೪ ಘಂಟೆ ಕೆಲಸ ನಿರ್ವಹಿಸಬೇಕು. ಕರೆ ಮಾಡಿದ ಚಂದಾದಾರನಿಗೆ ಮಾಹಿತಿ ಒದಗಿಸುವುದು, ದೂರು ದಾಖಲಿಸಿ ಕೊಳ್ಳುವುದು ಮತ್ತು ದೂರು ಪರಿಹರಿಸು ವುದು ಇವುಗಳ ಜವಾಬ್ದಾರಿ. ಬಳಕೆದಾರನಿಗೆ ತಕ್ಷಣ ಸಂಪರ್ಕ ಲಭ್ಯವಾಗುಷ್ಟು ಲೈನ್‌ಗಳಿರಬೇಕು. ಇದಕ್ಕೆ ಟೋಲ್ ಫ್ರೀ ನಂಬರ್, ಕಸ್ಟಮರ್ ಕೇರ್ ನಂಬರ್, ಹೆಲ್ಪ್ ಲೈನ್ ನಂಬರ್, ಸ್ಪೆಶಲ್ ನಂಬರ್ ಎಂಬ ಮಾದರಿಗಳ ಹೆಸರು ಕೊಡಬಹುದು.
ಇವು ಉಚಿತವಾಗಿರಬೇಕು ಮತ್ತು ತಕ್ಕ ಪ್ರಚಾರವನ್ನು ಸೇವಾದಾತರು ಈ ಕುರಿತು ಒದಗಿಸಬೇಕು. ಯಾವುದೇ ದೂರು, ವಿಚಾರಣೆ, ವಿನಂತಿಗಳನ್ನು ಸ್ವೀಕರಿಸುವ ಕಾಲ್ ಸೆಂಟರ್ ಈ ಕರೆಗೆ ಸಂಬಂಧಿಸಿದಂತೆ ಒಂದು ವಿಶಿಷ್ಟ ಡಾಕೆಟ್ ಸಂಖ್ಯೆಯನ್ನು ಚಂದಾದಾರನಿಗೆ ಒದಗಿಸಬೇಕು. ಆದಷ್ಟು ಶೀಘ್ರ ಕಾಲ್‌ಸೆಂಟರ್‌ನಿಂದ ಪರಿಹಾರ ಲಭ್ಯವಾಗಬೇಕು. ಸಿಗ್ನಲ್ ಸಿಗದ ತಾಂತ್ರಿಕ ಸಮಸ್ಯೆಗೆ ೨೪ ಘಂಟೆಯಲ್ಲಿ ಪರಿಹಾರ ಒದಗಿಸಬೇಕು. ಉಳಿದ ಮಾದರಿಯ ದೂರುಗಳನ್ನು ೪೮ ಘಂಟೆಯಲ್ಲಿ ನಿರ್ವಹಿಸಬೇಕು. ಯಾವುದೇ ದೂರು ೫ ದಿನಗಳ ಗರಿಷ್ಟ ಅವಧಿಯನ್ನು ಮೀರಿ ಪರಿಹರಿಸದೆ ಉಳಿಯುವಂತಿಲ್ಲ.
ಯಾವುದೇ ಬಿಲ್ಲಿಂಗ್ ದೂರು ೭ ದಿನಗಳ ಅವಧಿಯಲ್ಲಿ ಇತ್ಯರ್ಥಗೊಳ್ಳ ಬೇಕು.ಚಂದಾದಾರನಿಗೆ ಯಾವುದೇ ಹಣ ಮರಳ ಬೇಕಿದ್ದಲ್ಲಿ ಅದಕ್ಕೆ ೩೦ ದಿನಗಳ ಕಾಲಮಿತಿಯಿರುತ್ತದೆ.

ಮುಂದಿನ ಹಂತ - ನೋಡಲ್ ಅಧಿಕಾರಿ
ಕಾಲ್ ಸೆಂಟರ್‌ನಲ್ಲಿ ಇತ್ಯರ್ಥವಾಗದ ಅಥವಾ ಸಮಾಧಾನ ದೊರಕದ ಸಂದರ್ಭಗಳಲ್ಲಿ ದೂರು ಪರಿಹಾರದ ಮುಂದಿನ ಹಂತವಾದ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬೇಕಾಗುತ್ತದೆ. ಕಾನೂನಿನನ್ವಯ, ಎಲ್ಲ ಡಿಟಿಎಚ್ ಸೇವಾದಾತರು ಪ್ರತಿ ರಾಜ್ಯದಲ್ಲಿ ನೋಡಲ್ ಅಧಿಕಾರಿ ಯನ್ನು ನೇಮಿಸಬೇಕಾ ಗುತ್ತದೆ. ಇವರ ಹೆಸರು, ಕಛೇರಿ ವಿಳಾಸ, ಸಂಪರ್ಕ ಫೋನ್ ಸಂಖ್ಯೆಗಳನ್ನು ಎಲ್ಲೆಡೆ ಜಾಹೀರು ಮಾಡಬೇಕು.
ಕೆಲವು ಅನಿವಾರ್‍ಯ ಸಂದರ್ಭಗಳಲ್ಲಿ ಡಿಟಿಎಚ್ ಬಳಕೆದಾರರು ಕಾಲ್ ಸೆಂಟರ್‌ಗಳನ್ನು ಸಂಪರ್ಕಿಸದೆ ದೂರು ಪರಿಹಾರಕ್ಕೆ ನೇರವಾಗಿ ನೋಡಲ್ ಅಧಿಕಾರಿಯನ್ನು ವಿನಂತಿಸಲೂ ಅವಕಾಶವಿದೆ. ಉಳಿದಂತೆ, ಕಾಲ್ ಸೆಂಟರ್‌ಗಳು ನೀಡುವ ವಿಶಿಷ್ಟ ಡಾಕೆಟ್ ಸಂಖ್ಯೆಯನ್ನು ನಮೂದಿಸಿ (ಉಲ್ಲೇಖಿಸಿ)ಯೇ ನೋಡಲ್ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ.
ಗಮನಿಸಬೇಕಾದುದೆಂದರೆ, ಈವರೆಗೆ ಯಾವುದೇ ಡಿಟಿಎಚ್ ಸೇವಾದಾತರು ರಾಜ್ಯಗಳಿಗೆ ಪ್ರತ್ಯೇಕವಾದ ಉಚಿತ ಸಂಪರ್ಕದ ಕಾಲ್ ಸೆಂಟರ್‌ಗಳನ್ನು ಸ್ಥಾಪಿಸಿಲ್ಲ. ಕೇಂದ್ರದಲ್ಲೊಂದು ಉಚಿತ ಗ್ರಾಹಕ ಸೇವಾ ಸಂಖ್ಯೆ ಇದ್ದರೂ ಅಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಸಂವಾದ ಅಸಾಧ್ಯ. ಈ ಹಿನ್ನೆಲೆಯಲ್ಲಿಯೂ ಹೊಸ ನಿಬಂಧನೆಗಳು ಬಳಕೆದಾರರಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಾವು.
ನೋಡಲ್ ಅಧಿಕಾರಿಯು ದೂರು ದಾಖಲಿಸಿಕೊಂಡ ೩ ದಿನಗಳೊಳಗೆ ಅರ್ಜಿ ಸ್ವೀಕೃತಿ ದಾಖಲೆ ನೀಡಬೇಕು. ಮುಂದಿನ ಹತ್ತು ದಿನಗಳ ಕಾಲ ಮಿತಿಯಲ್ಲಿ ಆತ ಗ್ರಾಹಕನ ದೂರು ಪರಿಹರಿಸಬೇಕು.
ಈ ನಡುವೆ ’ಟ್ರಾಯ್’ ಕೂಡ ತನ್ನ ಮುಂದಿರುವ ದೂರುಗಳನ್ನು ಡಿಟಿಎಚ್ ಸೇವಾದಾತರ ದೂರು ಪರಿಹಾರ ವ್ಯವಸ್ಥೆಯ ಮುಂದಿಡಲು ಕಾನೂನಿನಲ್ಲಿ ಅವಕಾಶ ಮಾಡಿಕೊಟ್ಟಿದೆ. ಸಾರ್ವಜನಿಕ ಹಿತಾಸಕ್ತಿ ಸ್ವರೂಪದ ಗ್ರಾಹಕ ದೂರುಗಳು, ಕಾಯ್ದೆ, ಕಾನೂನು, ನಿರ್ದೇಶನಗಳನ್ನು ಉಲ್ಲಂಘಿಸಿದ ಪ್ರಕರಣಗಳು, ಗ್ರಾಹಕ ಹಿತ ಕಾಪಾಡದ ಸೇವಾದಾತರ ಕ್ರಮಗಳ ಕುರಿತಂತೆ ಟ್ರಾಯ್ ಗ್ರಾಹಕ ದೂರುಗಳನ್ನು ಇಲ್ಲಿ ಪ್ರಸ್ತಾಪಿಸಬಬಹುದು. ಇವುಗಳನ್ನು ಸಂಬಂಧಿಸಿದವರು ೧೫ ದಿನಗಳ ಕಾಲಮಿತಿಯಲ್ಲಿ ಇತ್ಯರ್ಥಗೊಳಿಸಬೇಕಾಗುತ್ತದೆ.
ಇಂತಹ ಪ್ರಕರಣಗಳಲ್ಲಿ ಸ್ವಯಂ ಸೇವಾದಾತರು ಚಂದಾದಾರರಿಗೆ ದೂರು ವಿಚಾರದ ಫಲಿತಾಂಶವನ್ನು ದೂರು ಇತ್ಯರ್ಥಗೊಳಿಸಿದ ಒಂದು ತಿಂಗಳ ಅವಧಿಯಲ್ಲಿ ತಿಳಿಸಬೇಕಾಗುತ್ತದೆ.
ಟ್ರಾಯ್, ಡಿಟಿಎಚ್ ಕ್ಷೇತ್ರದ ನಿಯಮಗಳನ್ನು ರೂಪಿಸುವಾಗ ಕ್ಯಾಸ್ ವ್ಯವಸ್ಥೆ (ಕೇಬಲ್ ಬಳಕೆದಾರರಿಗೆ ಬೇಕಾದ ಚಾನೆಲ್‌ಗಳಿಗೆ ಚಂದಾದಾರರಾಗುವ ಎಸ್‌ಟಿಬಿ ತಾಂತ್ರಿಕತೆ) ಮತ್ತು ಮೊಬೈಲ್ ಕ್ಷೇತ್ರದ ಕಾನೂನುಗಳನ್ನು ಪರಿಗಣಿಸಿದೆ. ಈವರೆಗೆ ಡಿಟಿಎಚ್ ಬಳಕೆದಾರನ ಪರ ಯಾವುದೇ ನಿರ್ದಿಷ್ಟ ಕಾನೂನು, ದೂರು ಪರಿಹಾರ ವ್ಯವಸ್ಥೆ ಇದ್ದಿರಲಿಲ್ಲ ಎಂಬ ಹಿನ್ನೆಲೆಯಲ್ಲಿ ಈಗಿನ ಟ್ರಾಯ್ ನಿಯಮ ಸ್ವಾಗತಾರ್ಹ. ಬರುವ ದಿನಗಳಲ್ಲಿ ಇನ್ನಷ್ಟು ಕ್ರಮಗಳನ್ನು ಟ್ರಾಯ್‌ನಿಂದ ನಾವು ನಿರೀಕ್ಷಿಸಬಹುದು.

ಇನ್ನೇನು ಬೇಕು?

ಟ್ರಾಯ್ ಕಾಯ್ದೆಯಡಿ ಟ್ರಾಯ್ ಸ್ವತಂತ್ರ ಪ್ರಾಧಿಕಾರ ಜಾರಿಗೆ ಬಂದು ದಶಕವೊಂದು ಉರುಳಿದ್ದರೂ ಇದರ ವ್ಯಾಪ್ತಿಗೆ ಡಿಟಿಎಚ್ ಸೇವೆಯನ್ನು ಒಳಪಡಿಸಿದ್ದು ೨೦೦೪ರಷ್ಟು ಇತ್ತೀಚೆಗೆ, ಆ ವೇಳೆಗೆ ಮೊಬೈಲ್ ಕ್ಷೇತ್ರವನ್ನು ನೇರ್ಪುಗೊಳಿಸುವ ಧಾವಂತದಲ್ಲಿದ್ದ ಟ್ರಾಯ್ ಡಿಟಿಎಚ್ ಬಗ್ಗೆ ಕಾನೂನು ರೂಪಿಸಲು ವಿಳಂಬ ಮಾಡಿತು ಎಂತಲೇ ಹೇಳಬೇಕು. ಇದೀಗ ತಂದಿರುವ ನಿಬಂಧನೆಗಳೂ ‘ಏನೂ ಇಲ್ಲದುದಕ್ಕಿಂತ ಉತ್ತಮ’ ಎನ್ನುವಂತೆ!
ಡಿಟಿಎಚ್ ಸೇವಾದಾತರು ಚಾನೆಲ್‌ಗಳ ಪ್ಯಾಕೇಜ್‌ಗಳನ್ನು ರೂಪಿಸಿದ್ದಾರೆ. ಚಂದಾದಾರನಿಗೆ ಬಿಡಿ ಚಾನೆಲ್‌ಗಳನ್ನು ಆಯ್ದುಕೊಳ್ಳಲು ಅವಕಾಶ ನೀಡಿಲ್ಲ. ಕೆಲ ನಿರ್ದಿಷ್ಟ ಚಾನೆಲ್ ಅಗತ್ಯಕ್ಕೆ ಬಳಕೆದಾರ ಅನಾವಶ್ಯಕವಾಗಿ ಇಡೀ ಪ್ಯಾಕೇಜ್‌ನ್ನೇ ಆಯ್ದುಕೊಳ್ಳಬೇಕಾದ ವ್ಯವಸ್ಥೆ ಗ್ರಾಹಕ ಹಿತಕ್ಕೆ, ಟ್ರಾಯ್ ಹೇಳುವ ವ್ಯಾಪಾರೀ ನೀತಿಗೆ ವಿರುದ್ಧ.
ಟ್ರಾಯ್ ‘ಕ್ಯಾಸ್’ ವ್ಯವಸ್ಥೆಗೆ ಸ್ವಾಗತಾರ್ಹ ಚೌಕಟ್ಟು ರೂಪಿಸಿದೆ, ಅದರ ಪ್ರಕಾರ, ತಿಂಗಳ ಬಾಡಿಗೆಗೆ ಸೇವಾದಾತಾರ ಕನಿಷ್ಟ ೩೦ ಉಚಿತ ಚಾನೆಲ್ ಒದಗಿಸಬೇಕು. ಉಳಿದಂತೆ ಪ್ರತಿ ಚಾನೆಲ್‌ಗೆ ತಲಾ ೫ ರೂ.ನಂತೆ ಎಷ್ಟು ಚಾನೆಲ್‌ಗೂ ಗ್ರಾಹಕ ಚಂದಾದಾರನಾಗಲು ಅವಕಾಶವಿದೆ. ಈ ಸೂತ್ರವನ್ನು ಡಿಟಿಎಚ್ ಕ್ಷೇತ್ರಕ್ಕೂ ಅಳವಡಿಸಬೇಕಿತ್ತು. ಈವರೆಗೆ ಅಂತಹ ಪ್ರಯತ್ನ ಕಂಡುಬಂದಿಲ್ಲ.
ಇಲ್ಲೋರ್ವ ಗ್ರಾಹಕರಿಗೆ ಪ್ಯಾಕೇಜ್ ಪಡೆದಂದಿನಿಂದ ನೀಡಬೇಕಾದ ಒಂದು ಕನ್ನಡ ಚಾನೆಲ್ ಬರುತ್ತಲೇ ಇಲ್ಲ. ಹಲವು ಪ್ರಯತ್ನ ನಡೆಸಿದ್ದೂ ವಿಫಲವಾಗಿದೆ. ಹಲವು ತಿಂಗಳ ಹೋರಾಟದ ನಂತರ ಅದೂ ವೀಕ್ಷಣೆಗೆ ಸಿಕ್ಕೀತು ಎಂದುಕೊಳ್ಳೋಣ, ಆದರೆ ಕಳೆದ ಸಮಯಕ್ಕೆ ಪರಿಹಾರ, ಸೇವಾ ವ್ಯತ್ಯಯಕ್ಕೆ ದಂಡ? ಸಧ್ಯದ ಟ್ರಾಯ್ ನಿಬಂಧನೆಗಳಲ್ಲಿ ಈ ಪ್ರಾವಿಧಾನವನ್ನು ಕಲ್ಪಿಸಿಲ್ಲ. ಇದೊಂದು ದೊಡ್ಡ ದೋಷವೇ ಸರಿ.
ಬಹುಪಾಲು ಸೇವಾದಾತರು ಮೌಲ್ಯ ಭರಿತ ಸೇವೆಗಳನ್ನು ಒದಗಿಸುತ್ತಿರುವುದು ಖರೆ, ಆದರೆ ಇವನ್ನೆಲ್ಲ ಶುಲ್ಕ ಸಹಿತದ ಎಸ್‌ಎಂಎಸ್ ಮೂಲಕ ಪಡೆಯಬೇಕಾಗುತ್ತದೆ. ಇದೂ ಕೂಡ ಸಾಮಾನ್ಯ ವ್ಯಾಪಾರಕ್ಕೆ ಅಪವಾದ, ಶುಲ್ಕ ಭರಿತ ಸೇವೆ ಪಡೆಯುವ ಬೇಡಿಕೆಗೂ ಶುಲ್ಕ ತೆರುವಂತಾಗುವುದು ಸಮ್ಮತವಲ್ಲ. ಈ ಸಂಬಂಧವಾಗಿಯೂ ಟ್ರಾಯ್ ನಿರ್ದಿಷ್ಟ ನಿಯಮ ರೂಪಿಸಬೇಕಿತ್ತು.

ಬಳಸದೆ ಬಳಲುವ ಕಾನೂನು !

ಜಾರಿಗೊಳಿಸುವಲ್ಲಿ ತಕ್ಕ ಕ್ರಮ, ಪ್ರಚಾರ ಕೈಗೊಂಡಿಲ್ಲವೆಂದು ನಾವು ಟ್ರಾಯ್‌ನ್ನು ಹಿಗ್ಗಾಮುಗ್ಗ ಆಕ್ಷೇಪಿಸಬಹುದಾದರೂ, ಅದು ಗ್ರಾಹಕ ಪರವಾಗಿಯೇ ನಿಂತಿದೆ ಎಂಬುದು ಪರಮ ಸತ್ಯ. ಮೊಬೈಲ್ ಕ್ಷೇತ್ರದಲ್ಲಂತೂ ಅದು ತಂದ ಜನಪರ ಕಾನೂನುಗಳು, ನಿರ್ದೇಶನಗಳು ಖುದ್ದು ಗ್ರಾಹಕ ಆಂದೋಲನದ ಕಾರ್‍ಯಕರ್ತರನ್ನು ಅಚ್ಚರಿಗೆ ಈಡುಮಾಡುವಂತವು. ಅವು ಜಾರಿಯಾಗಿಲ್ಲ ಎಂದರೆ ಅದು ಬರೀ ಟ್ರಾಯ್ ಸೋಲಲ್ಲ, ಪ್ರಜ್ಞಾವಂತರಾದ ನಮ್ಮದೂ ಕೂಡ.
ಸಾಗರದ ಬಳಕೆದಾರರ ವೇದಿಕೆ ಗಮನಿಸಿದಂತೆ ಹತ್ತು ಹಲವರು ಘೋಷಿತ ಫುಲ್‌ಟಾಕ್‌ಟೈಮ್ ನೀಡಿದ ಮೋಸ, ಎಸ್‌ಎಂಎಸ್ ಅನ್ಯಾಯದ ಬಗ್ಗೆ ಅಲವತ್ತುಗೊಂಡದ್ದುಂಟು, ಆದರೆ ಕಾಲ್‌ಸೆಂಟರ್, ಡಾಕೆಟ್ ಸಂಖ್ಯೆ, ನೋಡಲ್ ಆಫೀಸರ್........ ಈ ವಿವರಗಳನ್ನೆಲ್ಲ ಕೇಳಿ ಮುಂದುವರಿಯದಿದ್ದವರೇ ಹೆಚ್ಚು. ನಾವೇ ಗೆಲ್ಲುವ ಪ್ರಕರಣಗಳಲ್ಲಿ ನಿರುತ್ಸಾಹಗೊಂಡರೆ ಟ್ರಾಯ್ ಏನು ಮಾಡೀತು? ಇತ್ತ ಮೊಬೈಲ್ ಕಂಪನಿಗಳು ತಮ್ಮ ಅನೈತಿಕ ಲಾಭ ಭಕ್ಷಣೆಯನ್ನು ಮುಂದುವರಿಸುತ್ತದೆ.
ಮೊಬೈಲ್ ಕ್ಷೇತ್ರದಲ್ಲಾದ ಪ್ರಜ್ಞಾವಂತರ ದುರಂತ, ಬಹುಪಾಲು ಮಧ್ಯಮ ವರ್ಗ, ಗ್ರಾಮೀಣರ ಸ್ವತ್ರಾಗಿರುವ ಡೈರೆಕ್ಟ್ ಟು ಹೋಮ್ ಕ್ಷೇತ್ರದಲ್ಲಾಗದಿದ್ದರೆ ಮಾತ್ರ ಟ್ರಾಯ್‌ಗೆ ಸಾರ್ಥಕತೆ.

ಡಿಟಿಎಚ್ ಕುರಿತ ಟ್ರಾಯ್ ಕಾನೂನಿನ ಪೂರ್ಣಪಾಠ ಬೇಕಾದವರು www. trai. gov.in ವೆಬ್‌ಸೈಟ್‌ನಿಂದ ಪಡೆಯಲು ಸಾಧ್ಯ.


- ಮಾವೆಂಸ


ಇ ಮೇಲ್- mavemsa@rediffmail.com

4 comments:

Harisha - ಹರೀಶ ಹೇಳಿದರು...

ಟ್ರಾಯ್ ಈಗಲಾದರೂ ಸೂಕ್ತ ಕ್ರಮಗಳನ್ನು ಕೈಗೊಂಡಿರುವುದು ಸಮಾಧಾನಕರ ಅಂಶ. ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು.

ಸಂದೀಪ್ ಕಾಮತ್ ಹೇಳಿದರು...

ಟ್ರಾಯ್ ಇದ್ದೇ ಇಷ್ಟೊಂದು ತಲೆ ಒಡೆಯುತ್ತಾರೆ .ಇಲ್ಲ ಅಂದಿದ್ರೆ ಏನಾಗ್ತಿತ್ತೋ!!

ಮಾವೆಂಸ ಹೇಳಿದರು...

ಟ್ರಾಯ್ ತುಂಬಾ ಗ್ರಾಹಕಸ್ನೇಹಿ ನಿಯಮಗಳನ್ನು ಮಾಡುತ್ತಿರುವುದೇನೋ ನಿಜ. ಅವಾವುವನ್ನೂ ಜನ ಬಳಸದೆ ವ್ಯರ್ಥವಾಗುತ್ತಿದೆ. ಉದಾ.ಗೆ ಇವತ್ತಿಗೂ ಜಿಯವರ ಡಿಷ್ ಟಿವಿ ಚಂದಾದಾರರಿಗೆ ಉಚಿತ ಕಾಲ್ ಸೆಂಟರ್ ನಂಬರ್ ಕೊಟ್ಟಿಲ್ಲ. ನಾವು ಆರಾಮವಾಗಿದ್ದೇವೆ.ಸರೀನಾ?
ಪ್ರತಿಕ್ರಿಯಿಸಿದ ಹರೀಶ್, ಸಂದೀಪ್ ಕಾಮತ್‌ರಿಗೆ ಸಲಾಂ.....
-ಮಾವೆಂಸ

ನಾವಡ ಹೇಳಿದರು...

ನಮಸ್ಕಾರ,
ಒಳ್ಳೆ ಮಾಹಿತಿ. ಕೊಟ್ಟಿದ್ದಕ್ಕೆ ಧನ್ಯವಾದಗಳು.
ನಾವಡ

 
200812023996