ಮಂಗಳವಾರ, ಜುಲೈ 6, 2010

ಎಸ್‌ಎಂಎಸ್ ಓದಿದ್ದಕ್ಕೆ ಸಂಭಾವನೆ !



ಜಗತ್ತಿನ ಪ್ರತಿಯೊಬ್ಬನೂ ಬಳಕೆದಾರ. ಈ ಜನರ ಗ್ರಾಹಕ ಶಕ್ತಿಯ ಅಗಾಧತೆಯ ಬಗ್ಗೆ ಯಾರಿಗೂ ಸಂಶಯ ಇರಲಿಕ್ಕಿಲ್ಲ. ಅದನ್ನು ಅರ್ಥ ಮಾಡಿಸುವಲ್ಲಿ ಬಳಕೆದಾರರ ಚಳುವಳಿಯ ಪಾತ್ರ ದೊಡ್ಡದು. ಯಾರೋ ಹೇಳಿದ್ದು ನೆನಪಾಗುತ್ತದೆ. ಜಾಹಿರಾತುಗಳನ್ನು ನೋಡುವ, ಓದುವ ಮಂದಿಗೇ ಶುಲ್ಕ ಪಾವತಿಸುವಂತಾಗಬೇಕು. ಅಂತಹ ಕಾಲ ಬಂದಿದೆ!

ಒಂದರ್ಥದಲ್ಲಿ, ಜಾಹಿರಾತುಗಳಿಂದ ಆದಾಯ ಗಳಿಸುವುದರಿಂದಲೇ ಕೈಗೆಟುಕುವ ಬೆಲೆಯಲ್ಲಿ ದೈನಿಕ ಪತ್ರಿಕೆಗಳನ್ನು ಮಾರಾಟ ಮಾಡಲಾಗುತ್ತಿದೆ. ಅಸಲಿ ಬೆಲೆಗೆ ಮಾರುವುದಾದರೆ ಪ್ರತಿ ದಿನ ಅವನ್ನು ೧೭-೧೮ ರೂ.ಗೆ ಮಾರಬೇಕು! ಖರೀದಿಸುವವರಿಗೆ ಸಿಗುವ ಈ ಸಬ್ಸಿಡಿಗೆ `ಗ್ರಾಹಕ ಶಕ್ತಿ' ಕಾರಣ ಎಂದರೆ ಅರ್ಧಸತ್ಯ ಹೇಳಿದಂತೆ. ನೀವೇ ನೋಡಿ, ಅತಿ ಹೆಚ್ಚಿನ ಜಾಹೀರಾತು ಆದಾಯ ಗಳಿಸುವ ಪತ್ರಿಕೆ ಈ ಲಾಭದ ಒಂದಂಶವನ್ನು ಬಳಕೆದಾರರಿಗೆ ವರ್ಗ ಮಾಡಿದ್ದಾದರೆ ಆ ಪತ್ರಿಕೆಗೆ ಉಳಿದ ಪತ್ರಿಕೆಗಳಿಗಿಂತ ಕಡಿಮೆ ಬೆಲೆ ಇರಬೇಕಿತ್ತು!

ಇದೇ ರೀತಿ ಬಳಕೆದಾರರಿಗೆ ಉಚಿತವಾಗಿ ಇ-ಮೇಲ್ ಸ್ಥಳಾವಕಾಶ ಕೊಡುವ ವೆಬ್‌ಸೈಟ್‌ಗಳನ್ನು ಅಥವಾ ಶುಲ್ಕವಿಲ್ಲದೆ ನಾನಾ ಮಾದರಿಯ ಎಸ್‌ಎಂಎಸ್ ಕಳಿಸುವ ಇತ್ತೀಚಿನ ಮೈ ಟುಡೇ ಡಾಟ್ ಕಾಂಗಳನ್ನು ಉದಾಹರಿಸಬಹುದು. ಇವೆಲ್ಲ ಬಳಕೆದಾರರಿಗೆ ನೇರವಾಗಿ ಶುಲ್ಕ ನೀಡದಿದ್ದರೂ ಅವರ ಶಕ್ತಿಯನ್ನು ಗೌರವಿಸುವ ಯತ್ನಗಳು. ಆದರೆ ಮೊಬೈಲ್‌ಗೆ ಓತಪ್ರೋತವಾಗಿ ಬರುವ ಕಮರ್ಷಿಯಲ್ ಎಸ್‌ಎಂಎಸ್ ಓದಲು ನಮಗೇ ಕಾಸು ಕೊಡುವ ಕಾಲ ಬರುತ್ತದೆಯೇ?

ಆಗಲೇ ಆ ದಿನ ಬಂದಿದೆ! ಮೂರ್‍ನಾಲ್ಕು ಅಂತಹ ಹೊಸ ವ್ಯವಸ್ಥೆಗಳು ಜಾರಿಗೆ ಬಂದಿದೆ. ಇವುಗಳ ಕಾರ್ಯ ಮಾದರಿ ಬಹುಪಾಲು ಒಂದೇ ತರ. ಇವು ವೆಬ್‌ಸೈಟ್‌ಗಳು. ಎಂ-ಅರ್ನ್, ಎಂ-ಜಿಂಜರ್. ಯು ಮಿಂಟ್‌ಗಳನ್ನು ಉದಾಹರಿಸಬಹುದು.
(ಕೆಳಗಿನ ವೆಬ್‌ಸೈಟ್‌ಗಳ ಲಿಂಕ್‌ಗೆ ಕ್ಲಿಕ್ ಮಾಡಿ - ದುಡಿಮೆ ಆರಂಭಿಸಿ!)
mginger.com ಅಥವಾ you mint.com ಹೆಸರಿನ ವೆಬ್‌ಸೈಟ್‌ನೊಳಗೆ ಪ್ರವೇಶಿಸಬೇಕು. ಅಲ್ಲಿ ನಮ್ಮನ್ನು ನೋಂದಾಯಿಸಿಕೊಳ್ಳಲು ಅವಕಾಶವಿದೆ. ನಮ್ಮ ವಿವರಗಳ ಜೊತೆಗೆ ನಮ್ಮ ಮೊಬೈಲ್ ನಂಬರ್‌ನ್ನು ದಾಖಲಿಸಬೇಕು. ಹತ್ತಾರು ವಿಷಯಗಳ ಆಯ್ಕೆಗಳಿವೆ. ಬೇಕಾದ ವಿಷಯದ ಎಸ್‌ಎಂಎಸ್, ಸ್ವೀಕರಿಸಲು ಬಯಸುವ ನಿರ್ದಿಷ್ಟ ಸಮಯವನ್ನೂ ಆಯ್ದುಕೊಳ್ಳಬಹುದು. ಇನ್ನು ಮುಂದೆ ಇವುಗಳಿಂದ ಬರುವ ಪ್ರತಿ ಎಸ್‌ಎಂಎಸ್ ಜೊತೆಗೆ ನಿಮ್ಮ ಖಾತೆಗೆ ೨೦ ಪೈಸೆ ಜಮಾ !
ಹಿನ್ನೆಲೆ ಸಾಕಷ್ಟು ಸರಳ, ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಅನಪೇಕ್ಷಿತ ಕರೆ, ಎಸ್‌ಎಂಎಸ್‌ನ್ನು ನಿಷೇಧಿಸುವ ಎನ್‌ಡಿಎನ್‌ಸಿ ಎಂಬ ವ್ಯವಸ್ಥೆಯನ್ನು `ಟೆಲಿಕಾಂ ಅನ್‌ಸಾಲಿಸಿಟೆಡ್ ಕಮರ್ಷಿಯಲ್ ಕಮ್ಯುನಿಕೇಷನ್, ೨೦೦೭'ನ ಹೆಸರಿನಲ್ಲಿ ಜಾರಿಗೆ ತಂದಿದೆ. ಟ್ರಾಯ್ ಗಮನಿಸಿದಂತೆ, ಮೊಬೈಲ್ ಬಳಕೆದಾರರನ್ನು ಅನಪೇಕ್ಷಿತ ಟೆಲಿ ಮಾರ್ಕೆಟಿಂಗ್ ಕರೆಗಳು, ಸಂದೇಶಗಳು ಅಯಾಚಿತ ವೇಳೆಗಳಲ್ಲಿ ಕಿರಿಕಿರಿಗೆ ಒಳಪಡಿಸುವುದು ಕಂಡುಬಂದಿತ್ತು. ಮೊಬೈಲ್ ಕಂಪನಿಯ ಚಂದಾದಾರರು ಈ ಪ್ರಚಾರ ತಂತ್ರಗಳಿಂದ ತೊಂದರೆಗೊಳಗಾಗುವುದು ನ್ಯಾಯಸಮ್ಮತವಲ್ಲ ಎಂದು ಅಭಿಪ್ರಾಯಪಟ್ಟ ಟ್ರಾಯ್ ಆ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆ.

ಅದರ ನಿಯಮದ ಪ್ರಕಾರ, ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಎಂಬ ಸರ್ಕಾರಿ ಏಜೆನ್ಸಿ ಸ್ಥಾಪನೆಯಾಗಿದೆ. ಇದರಲ್ಲಿ `ನ್ಯಾಷನಲ್ ಡು ನಾಟ್ ಕಾಲ್' ಎಂಬ ನೊಂದಣಿ ಸೌಲಭ್ಯವಿರುತ್ತದೆ. ಈ ಅನಪೇಕ್ಷಿತ ಕರೆ, ಎಸ್‌ಎಮ್‌ಎಸ್ ಬೇಡ ಎನ್ನುವವರು ಈ ಎನ್‌ಡಿಎನ್‌ಸಿಯಲ್ಲಿ ನೊಂದಾಯಿಸಬಹುದು. ಅದಕ್ಕೆ ಅಗತ್ಯ ವ್ಯವಸ್ಥೆಗಳನ್ನು ಸಂಬಂಧಿತ ಸೇವಾದಾತರು ಒದಗಿಸಬೇಕು. ಸ್ವಾರಸ್ಯವೆಂದರೆ, ಈ ಸೌಲಭ್ಯ ಮೊಬೈಲ್ ಚಂದಾದಾರರಲ್ಲದೆ ಸ್ಥಿರ ದೂರವಾಣಿ ಬಳಕೆದಾರರಿಗೂ ಲಭ್ಯ.

ಒಮ್ಮೆ ನೊಂದಾಯಿಸಿಕೊಂಡರೆ, ಮತ್ತೆ ಆ ಚಂದಾದಾರರಿಗೆ ಟೆಲಿ ಮಾರ್ಕೆಟಿಂಗ್ ಕಂಪನಿಗಳು ಕರೆ - ಸಂದೇಶಗಳನ್ನು ಕಳಿಸುವಂತಿಲ್ಲ. ಒಂದೊಮ್ಮೆ ಈ ನಿಯಮ ಉಲ್ಲಂಘಿಸಿದರೆ, ಪ್ರತಿ ಅನಪೇಕ್ಷಿತ ಕರೆ - ಸಂದೇಶಕ್ಕೆ ೫೦೦ ರೂ.ಗಳ ದಂಡವನ್ನು ವಿಧಿಸಲಾಗುತ್ತದೆ. ಅಷ್ಟೇಕೆ, ಟೆಲಿ ಮಾರ್ಕೆಟಿಂಗ್ ಕಂಪನಿಯ ಸೇವಾ ಪರವಾನಗಿಯನ್ನೇ ರದ್ದುಗೊಳಿಸುವುದು ಸಾಧ್ಯ.

ಎಲ್ಲ ಅಥವಾ ಬಹುಪಾಲು ಚಂದಾದಾರರು ಎನ್‌ಡಿಎನ್‌ಸಿಯಲ್ಲಿ ನೊದಾಯಿಸಿಬಿಟ್ಟರೆ ಕೋಟಿಗಟ್ಟಲೆ ಬಂಡವಾಳ ತೊಡಗಿಸಿರುವ ಕಂಪನಿಗಳು ತಮ್ಮ ಪ್ರಚಾರಕ್ಕೆ ಪರದಾಡಬೇಕು. ರಿಂಗ್ ಟೋನ್, ವಾಲ್ ಪೇಪರ್ ಒದಗಿಸುವ ಕಂಪನಿಗಳು, ಇನ್ಸೂರೆನ್ಸ್ ಕ್ಷೇತ್ರದ ಪ್ರಚಾರ ಸರಕುಗಳು, ಎಸ್‌ಎಮ್‌ಎಸ್ ಜಾಹೀರಾತುಗಳನ್ನು ನೆಚ್ಚಿಕೊಳ್ಳುವ ಬ್ಯಾಂಕ್‌ಗಳು.... ಎಲ್ಲವೂ ಜಾಗೃತರಾಗಲೇಬೇಕಾದ ಸಂದರ್ಭವಿದು. ತಪ್ಪಾಗಿ ಎನ್‌ಡಿಎನ್‌ಸಿ ನೊಂದಾಯಿತ ಗ್ರಾಹಕನನ್ನು ಸಂಪರ್ಕಿಸಿದರೆ ಅದಕ್ಕೆ ದಂಡವನ್ನು ತೆರಬೇಕಾಗಿರುವುದರಿಂದ ಪರಿಸ್ಥಿತಿ ಗಂಭೀರವೇ.

ಈ ಕಾಲಘಟ್ಟದಲ್ಲಿ ಜನ್ಮ ತಾಳಿದ್ದೇ ಎಂ ಜಿಂಜರ್, ಎಂ ಅರ್ನ್‌ನಂತ ಕಂಪನಿಗಳು. ಇವು ಎಸ್‌ಎಮ್‌ಎಸ್ ಓದಿದ್ದಕ್ಕೆ ಸಂಭಾವನೆ ಎಂಬ ಸೂತ್ರದಡಿ ಕೆಲಸ ಮಾಡುತ್ತವೆ. ತಮ್ಮ ವೆಬ್‌ಸೈಟ್‌ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಮೊಬೈಲ್ ಚಂದಾದಾರರನ್ನು ನೊಂದಾಯಿಸಿಕೊಳ್ಳುತ್ತವೆ. ಮುಂದೆ ಜಾಹೀರಾತು ಕಂಪನಿಗಳು ಸಂಪರ್ಕಿಸಿದರೆ ಇವರಲ್ಲಿ ನೊಂದಾಯಿತ ಮೊಬೈಲ್ ಸಂಖ್ಯೆಗಳನ್ನು ಪಡೆಯಬಹುದು. ಈ ಚಂದಾದಾರರಿಗೆ ಎಸ್‌ಎಮ್‌ಎಸ್ ಕಳಿಸಿದರೆ ತಲೆಬಿಸಿಯಿಲ್ಲ.`ದಂಡ' ತೆರುವ ಮಾತಿಲ್ಲ. ಈ ವ್ಯವಸ್ಥೆಗೆ ವೆಬ್‌ಸೈಟ್ ಕಂಪನಿಗಳು ಶುಲ್ಕ ಪಡೆಯುತ್ತವೆ. ಅದರಲ್ಲೊಂದು ಭಾಗವನ್ನು ಮೊಬೈಲ್ ಗ್ರಾಹಕನಿಗೂ ವರ್ಗಾಯಿಸುತ್ತವೆ.

ಈ ಸಂಭಾವನೆಯನ್ನು ಸದಸ್ಯ ಪಡೆಯಲು ಹಲವು ಮಾರ್ಗಗಳಿವೆ. ನೇರವಾಗಿ ಒಂದು ನಿರ್ದಿಷ್ಟ ಮೊತ್ತ ತಲುಪಿದಾಕ್ಷಣ ಚೆಕ್ ಪಡೆಯಬಹುದು, ನಮ್ಮ ಬ್ಯಾಂಕ್ ಖಾತೆಗೇ ಹಣ ಬಂದು ಬೀಳುವಂತೆ ನಿರ್ದೇಶಿಸಬಹುದು. ಇದೀಗ ಮಾಡಿರುವ ಇನ್ನೊಂದು ಚಿಂತನೆಯೆಂದರೆ, ಈ ದುಡಿಮೆಯನ್ನು ಚಂದಾದಾರ ತನ್ನ ಮೊಬೈಲ್‌ಗೆ `ಟಾಕ್ ಟೈಮ್' ಆಗಿಯೂ ಬದಲಿಸಿಕೊಳ್ಳಬಹುದು! ಅಂದರೆ ಒಂದು ಎಸ್‌ಎಮ್‌ಎಸ್ ನಿಮ್ಮ ಮೊಬೈಲ್‌ಗೆ ಬಂತು ಎಂದಾದರೆ ನಿಮ್ಮ ಟಾಕ್‌ಟೈಮ್‌ಗೆ ೨೦ ಪೈಸೆ ಸೇರುತ್ತದೆ!

ಸದ್ಯಕ್ಕೆ ಇವೆಲ್ಲ ಹೊಸ ವ್ಯವಸ್ಥೆಗಳು, ಇನ್ನೂ ಎನ್‌ಡಿಎನ್‌ಸಿಯಲ್ಲಿ ನೊಂದಾಯಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿಲ್ಲ. ಟೆಲಿ ಮಾಕೆಟಿಂಗ್ ಕಂಪನಿಗಳು ಯೋಚಿಸುವ ಸ್ಥಿತಿ ಬಂದಿಲ್ಲ. ಮುಖ್ಯವಾಗಿ, ಅವಿನ್ನೂ ದಂಡ ಕಟ್ಟುತ್ತಿಲ್ಲ! ಆದರೂ ಎಂ ಅರ್ನ್, ಎಂ ಜಿಂಜರ್‌ನಂತವು ಕಾರ್‍ಯಾರಂಭಗೊಂಡಿದ್ದು ಚಂದಾದಾರರು ಸಂಭಾವನೆ ಪಡೆಯುತ್ತಿದ್ದಾರೆ. ದೊಡ್ಡ ಪ್ರಮಾಣದ ಯಶಸ್ಸಿಗೆ ನಾವು ಇನ್ನೂ ಸ್ವಲ್ಪ ಕಾಲ ಕಾಯಬೇಕು.
ಎರಡು ವರ್ಷಗಳ ಹಿಂದಿನ ಲೇಖನವಿದು. ಆದರೂ ನಾವು ಈ ನಿಟ್ಟಿನಲ್ಲಿ ಹೆಚ್ಚು ದೂರ ಹೋಗಿಲ್ಲ. ಇವತ್ತಲ್ಲ ನಾಳೆ, ಈ ವೆಬ್‌ಗಳ ಕಾಲ ಬರುತ್ತದೆ. ಅಷ್ಟರೊಳಗೆ ನಾವು ಮೊದಲ ಸದಸ್ಯರಾಗಿ ಲಾಭ ಗಿಟ್ಟಿಸಲೇಬೇಕು. ಅಷ್ಟಕ್ಕೂ ಹೋದರೊಂದು ಕಲ್ಲು. ಬೀಸಲೇನು ಸಮಸ್ಯೆ?
ಬರುವ ದಿನಗಳಲ್ಲಿ ಇನ್ನು ಕೆಲವು ವೆಬ್ ಮಾಹಿತಿ ನೀಡುವ ಆಸೆಯಿದೆ. ತುಸು ನಿರೀಕ್ಷಿಸಿ.....


- ಮಾವೆಂಸ

 
200812023996